Tuesday, January 3, 2012

||ಇಪ್ಪತ್ತೊಂಭತ್ತನೆಯ ಅಧ್ಯಾಯ||


||ಶ್ರೀ ಸಾಯಿ ಸಚ್ಚರಿತ್ರೆ||
||ಇಪ್ಪತ್ತೊಂಭತ್ತನೆಯ ಅಧ್ಯಾಯ||
||ಸ್ವಪ್ನದರ್ಶನ ಲೀಲೆಗಳು||
ಶ್ರೀ ಗಣೇಶಾಯ ನಮಃ ಶ್ರೀ ಸರಸ್ವತಯೇ ನಮಃ
ಶ್ರೀ ವೆಂಕಟೇಶಾಯ ನಮಃ ಶ್ರೀ ಸಾಯಿನಾಥಾಯ ನಮಃ
ಶ್ರೀ ಸದ್ಗುರುಭ್ಯೋನ್ನಮಃ

ಅಧ್ಯಾಯದಲ್ಲಿ ಹೇಮಾಡ್ ಪಂತ್, ಮದ್ರಾಸಿ ಭಜನ ಮೇಳ, ತೆಂಡೂಲ್ಕರ್, ಕ್ಯಾ. ಹಾಟೆ, ವಾಮನ ನಾರ್ವೇಕರ್ ಮತ್ತು ಇತರ ವಿಷಯಗಳನ್ನು ಹೇಳುತ್ತಾರೆ.

ಬಾಬಾರ ಔದಾರ್ಯ

ಭಕ್ತರಿಂದ ಬಾಬಾ ದಕ್ಷಿಣೆ ಕೇಳಿ ತೆಗೆದುಕೊಳ್ಳುತ್ತಿದ್ದರು ಎಂಬುದನ್ನು ನಾವು ಈಗಾಗಲೇ ನೋಡಿದ್ದೇವೆ. ಅವರು ಹಾಗೆ ತೆಗೆದುಕೊಂಡ ದಕ್ಷಿಣೆಯನ್ನು ಮತ್ತೆ ಭಕ್ತರಲ್ಲೇ ಹಂಚಿ ಬಿಡುತ್ತಿದ್ದರು. ಸಾಮಾನ್ಯವಾಗಿ ಬಾಬಾ ಬೆಳಗ್ಗೆ ಸ್ವಲ್ಪ ಆಹಾರವನ್ನು ತೆಗೆದು ಕೊಂಡು ಧುನಿಯ ಹತ್ತಿರ ಕಂಭಕ್ಕೆ ಒರಗಿ ಕುಳಿತುಕೊಳ್ಳುತ್ತಿದ್ದರು. ವೇಳೆಗೆ ಒಬ್ಬಳು ಸಣ್ಣ ಹುಡುಗಿ, ಮೂರು ವರ್ಷದವಳಿರಬಹುದು, ಬಂದು ಅವರ ತೊಡೆಯನ್ನೇರಿ ಕುಳಿತುಕೊಳ್ಳುತ್ತಿದ್ದಳು. ಅವಳ ಹೆಸರು ಆಮನಿ, ಬಡ ಭಕ್ತಳೊಬ್ಬಳ ಮಗಳು. ಅಮಾನಿ ಸಣ್ಣ ತಗಡಿನ ಡಬ್ಬ ಹಿಡಿದು, ಅದರಲ್ಲಿ ದುಡ್ಡು ಹಾಕಲು ಬಾಬಾರನ್ನು ಪೀಡಿಸುತ್ತಿದ್ದಳು. ಅವಳೊಡನೆ ಬಾಬಾ ಸ್ವಲ್ಪ ಹೊತ್ತು ಆಟವಾಡಿ, ಅವಳ ಡಬ್ಬದಲ್ಲಿ ಒಂದು ರೂಪಾಯಿ ನಾಣ್ಯವನ್ನು ಹಾಕಿದಕೂಡಲೇ, ಹುಡುಗಿ ಎದ್ದು ಓಡಿಹೋಗುತ್ತಿತ್ತು. ಲೆಂಡಿಗೆ ಹೋಗುವಾಗಲೂ, ಬಾಬಾ ಅವಳಿಗೆ ಮತ್ತೆ ಒಂದು ರೂಪಾಯಿ ಕೊಡುತ್ತಿದ್ದರು. ಹೀಗೆ ಬಾಬಾ ಮಗುವಿಗೆ ದಿನವೂ ಎರಡು ರೂಪಾಯಿ ಕೊಡುತ್ತಿದ್ದರು. ಅವಳ ಜೊತೆಗೆ ಅವಳ ತಾಯಿ ಜಮಾಲಿಗೂ ಆರು ರೂಪಾಯಿ ಕೊಡುತ್ತಿದ್ದರು. ಹೀಗೆ ಬಾಬಾ ಅನೇಕರಿಗೆ ಎರಡು ರೂಪಾಯಿಯಿಂದ ಹಿಡಿದು ಐದು, ಹತ್ತು, ಇಪ್ಪತ್ತು, ಐವತ್ತು ರೂಪಾಯಿಯವರೆಗೂ ದಿನವೂ ಕೊಡುತ್ತಿದ್ದರು. ದಿನದ ಕೊನೆಯಲ್ಲಿ ಅವರು ತಮಗಾಗಿ ಏನನ್ನೂ ಉಳಿಸಿಕೊಳ್ಳುತ್ತಿರಲಿಲ್ಲ.

ಬಾಬಾ ಕಲಾವಿದರಿಗೂ ಪ್ರೋತ್ಸಾಹ ಕೊಡುತ್ತಿದ್ದರು. ಸಂಗೀತ, ನೃತ್ಯ, ನಾಟಕ ಮುಂತಾದ ಕಲೆಗಳಲ್ಲಿ ನಿರತರಾದವರು ಬಂದು, ಬಾಬಾರ ಮುಂದೆ ಅವರ ಕಲೆಯನ್ನು ಪ್ರದರ್ಶಿಸಿದರೆ, ಅವರನ್ನು ಪ್ರೋತ್ಸಾಹಿಸಲು ಬಾಬಾ ಅವರಿಗೆ ಬಹುಮಾನವಾಗಿ ಹಣ ಕೊಡುತ್ತಿದ್ದರು. ಬರುಬರುತ್ತಾ, ಬಾಬಾರ ಔದಾರ್ಯ ಪ್ರಚಾರಿತವಾಗಿ ಅನೇಕ ಕಲಾವಿದರು ಶಿರಡಿಗೆ ಬರಲು ಪ್ರಾರಂಭಿಸಿದರು. ಅಂತಹವರಲ್ಲಿ ಮದ್ರಾಸಿನ ಭಜನಮೇಳ ಒಂದು. ಅವರು ಹೇಗೆ ಬಾಬಾರ ಅವಿಚ್ಛಿನ್ನ ಭಕ್ತರಾದರು ಎಂಬ ಲೀಲೆಯನ್ನು ಲೀಲಾ ಸ್ವರೂಪಿ ಬಾಬಾರ ಪಾದಗಳಿಗೆ ನಮಸ್ಕರಿಸಿ ಕೇಳೋಣ.

ಮದ್ರಾಸಿ ಭಜನ ಮೇಳ

ಸುಮಾರು ೧೯೧೫ರಲ್ಲಿ ಸಮರ್ಥ ರಾಮದಾಸರ ಭಕ್ತರು ದೇಶದ ಮೂಲೆಮೂಲೆಗಳಲ್ಲೂ ಹರಡಿದ್ದರು. ದಕ್ಷಿಣಾವರ್ತದಲ್ಲೂ ಅವರ ಶಿಷ್ಯರಿದ್ದರು. ಅವರೆಲ್ಲ ಶಿರಡಿಯಲ್ಲಿ ಸಾಯಿಬಾಬಾ ಎಂಬ ದೊಡ್ಡ ಸಂತರಿದ್ದಾರೆಂದೂ, ಸಂತ, ಶಾಂತ ಮೂರ್ತಿ, ಬಹಳ ಉದಾರಿ, ತನ್ನ ಭಕ್ತರಿಗೆ ಮಾತ್ರವಲ್ಲದೆ, ತನ್ನ ಮುಂದೆ ಕಲಾಪ್ರವೀಣತೆಯನ್ನು ಪ್ರದರ್ಶಿಸಿದ ಕಲಾವಿದರಿಗೂ, ಉದಾರವಾಗಿ ಹಣ ಕೊಡುತ್ತಾರೆ ಎಂದು ಕೇಳಿದ್ದರು. ಹಾಗೆ ಕೇಳಿದ್ದ ಗಂಡ, ಹೆಂಡತಿ, ಮಗಳು ಮತ್ತು ಅವನ ನಾದಿನಿ ಸೇರಿ, ನಾಲ್ಕುಜನ ಕಲಾವಿದರ ಗುಂಪೊಂದು ಕಾಶಿಗೆ ಹೋಗಲು ನಿರ್ಧರಿಸಿ, ದಾರಿಯಲ್ಲಿ ಶಿರಡಿಗೆ ಬಂದರು. ಅವರನ್ನು ಮದ್ರಾಸಿ ಭಜನ ಮೇಳವೆಂದು ಕರೆಯುತ್ತಿದ್ದರು. ಅವರ ವೈಶಿಷ್ಟ್ಯ, ಕೇಳಿದ ಜನರಿಗೆ ಅನಂದವನ್ನುಂಟು ಮಾಡುವಂತೆ ಭಜನೆಗಳನ್ನು ಬಹಳ ಚೆನ್ನಾಗಿ ಹಾಡುತ್ತಿದ್ದುದು. ಆದರೆ ಮೇಳದಲ್ಲಿ ಹೆಂಡತಿಯನ್ನು ಬಿಟ್ಟರೆ ಮಿಕ್ಕ ಮೂವರಿಗೂ ಕೀರ್ತಿ, ಪ್ರತಿಷ್ಠೆ, ಹಣ, ಭಜನೆಗಿಂತ ಮುಖ್ಯವಾಗಿತ್ತು. ಆಕೆಗೆ ಬಾಬಾರಲ್ಲಿ ಬಹಳ ಭಕ್ತಿಯಿದ್ದರೂ ಮಿಕ್ಕವರು ಬಹಳ ದುರಾಸೆಯಿಂದಿದ್ದವರು.

ಒಂದು ದಿನ ಮಧ್ಯಾಹ್ನ ಆರತಿ ಸಮಯದಲ್ಲಿ ಎಲ್ಲರೂ ಆರತಿಯ ಹಾಡುಗಳನ್ನು ಹಾಡುತ್ತಿದ್ದರೆ, ಆಕೆ ಮಾತ್ರ ಧಾರಾಕಾರವಾಗಿ ಕಣ್ಣೀರು ಸುರಿಸುತ್ತಾ, ರಾಮ ನಾಮವನ್ನು ಜೋರಾಗಿ ಹೇಳುತ್ತಿದ್ದಳು. ಅಲ್ಲಿದ್ದವರಿಗೆಲ್ಲಾ ಆಕೆ ಏಕೆ ಹಾಗೆ ರಾಮ ನಾಮವನ್ನು ಹೇಳುತ್ತಿದ್ದಾಳೆ ಎಂಬುದು ಅರ್ಥವಾಗಲಿಲ್ಲ. ಆಕೆ ತೋರುತ್ತಿದ್ದ ಅತೀವ ಸಂತೋಷವೂ ಅರ್ಥವಾಗಲಿಲ್ಲ. ಆರತಿಯೆಲ್ಲಾ ಮುಗಿದು ಎಲ್ಲರೂ ಹೊರಡಬೇಕು ಎನ್ನುವುದರಲ್ಲಿದ್ದಾಗ ಆಕೆ, "ನೀವೆಲ್ಲರೂ ಆರತಿಯಹಾಡುಗಳನ್ನು ಹೇಳುತ್ತಿದ್ದಾಗ, ಬಾಬಾ ನನಗೆ ಶ್ರೀ ರಾಮಚಂದ್ರನಂತೆ ದರ್ಶನ ಕೊಟ್ಟರು" ಎಂದು ಹೇಳಿದಳು ಶ್ರೀ ರಾಮಚಂದ್ರ ಆಕೆಯ ಪ್ರೀತಿಯ ದೈವ. ತನ್ನ ಆರಾಧ್ಯ ದೈವವನ್ನು ಕಂಡ ಆಕೆ ಸಂತೋಷಭರಿತಳಾಗಿ, ಆನಂದ ಬಾಷ್ಪಗಳನ್ನು ಸುರಿಸುತ್ತಾ, ರಾಮನಾಮ ಭಜನೆ ಮಾಡುತ್ತಿದ್ದಳು. ಆಕೆ ತನಗಾದ ಅನುಭವವನ್ನು ತನ್ನ ಗಂಡನಿಗೂ ಹೇಳಿದಳು. ಹಣ ಮತ್ತು ಪ್ರಾಪಂಚಿಕ ವಿಷಯಗಳಲ್ಲೇ ಮುಳುಗಿದ ಅವನು, ಆಕೆಯ ಮಾತನ್ನು ನಂಬಲಿಲ್ಲ. ಅಷ್ಟೇ ಅಲ್ಲ. ಅವನು, "ಹೆಂಗಸರು ಸ್ವಾಭಾವಿಕವಾಗಿಯೇ ಬಹಳ ಭಾವನಾ ಪರವಶರು. ಎಲ್ಲರಿಗೂ ಅಲ್ಲಿ ಬಾಬಾ ಕಾಣುತ್ತಿದ್ದರೆ ನಿನಗೆ ಮಾತ್ರ ರಾಮನಂತೆ ಕಾಣಿಸಿದ, ಎಂಬ ಮಾತನ್ನು ನಾನು ನಂಬುವುದಿಲ್ಲ" ಎಂದು ಆಕೆಯನ್ನು ನಗೆಯಾಡಿದ. ಆಕೆ ಅವನ ಮಾತುಗಳಿಗೆ ಅಷ್ಟು ಪ್ರಾಧಾನ್ಯ ಕೊಡದೆ, ಬಾಬಾ ತನಗೆ ತನ್ನ ಆರಾಧ್ಯದೈವದಂತೆಯೇ ದರ್ಶನ ಕೊಟ್ಟರು ಎಂದು ನಂಬಿ, ಬಾಬಾರಲ್ಲಿ ಇನ್ನೂ ಹೆಚ್ಚಿನ ಭಕ್ತಿಯುಳ್ಳವಳಾದಳು.

ದರ್ಶನ

ಭಜನೆಯ ಮೇಳದವರು ಶಿರಡಿಯಲ್ಲಿ ಇನ್ನೂ ಕೆಲವು ದಿನಗಳಿದ್ದರು. ಒಂದು ದಿನ, ಮನುಷ್ಯ ಮಲಗಿದ್ದಾಗ, ಮರೆಯಲಾರದ ಅನುಭವವನ್ನು ಕೊಟ್ಟ ಕನಸೊಂದನ್ನು ಕಂಡ. ಕನಸಿನಲ್ಲಿ, ಅವನು ಒಂದು ದೊಡ್ಡ ಪಟ್ಟಣದಲ್ಲಿದ್ದಾನೆ. ಅಲ್ಲಿ ಅವನನ್ನು ಪೋಲೀಸರು ಸೆರೆ ಹಿಡಿದು, ಕೈತೋಳ ಹಾಕಿ ಜೈಲಿನಲ್ಲಿಟ್ಟಿದ್ದಾರೆ. ಅವನಿಗೆ ಶಿಕ್ಷೆಯಾಗಬೇಕು. ಆಗ ಅವನು ಜೈಲಿನ ಹೊರಗೆ ಕರುಣಾ ದೃಷ್ಟಿಯಿಂದ ನೋಡುತ್ತಾ ನಿಂತಿದ್ದ ಬಾಬಾರನ್ನು ಕಂಡು ಆಶ್ಚರ್ಯಚಕಿತನಾದ.

"ನಿಮ್ಮ ಕೀರ್ತಿಯನ್ನು ಕೇಳಿ, ನಾವು ನಿಮ್ಮ ದರ್ಶನಕ್ಕೆಂದು ಬಂದೆವು. ನೀವು ನಮಗೆ ಹತ್ತಿರದಲ್ಲೇ ಇರುವಾಗಲೂ, ನಮಗೇಕೆ ಇಂತಹ ಆಪತ್ತು ಬರಬೇಕು?" ಎಂದು ಅವರನ್ನು ಕೇಳಿದ.

ಅದಕ್ಕೆ ಬಾಬಾ, "ನಿನ್ನ ಕರ್ಮಫಲಗಳನ್ನು ಅನುಭವಿಸಲೇ ಬೇಕು" ಎಂದರು. ಅವನು, "ಇಂತಹ ಫಲಗಳನ್ನು ಕೊಡುವಂತಹ ಪಾಪಕಾರ್ಯಗಳನ್ನು ನಾನು ಏನೂ ಮಾಡಿಲ್ಲ. ಆದರೂ ಏತಕ್ಕೆ ಹೀಗೆ?" ಎಂದು ಕೇಳಿದ.

ನಗುತ್ತಾ ಬಾಬಾ ಹೇಳಿದರು, " ಜನ್ಮದಲ್ಲಲ್ಲದಿದ್ದರೆ ಹಿಂದಿನ ಜನ್ಮಗಳಲ್ಲಿ ಅಂತಹ ಪಾಪಗಳನ್ನು ಮಾಡಿದ್ದಿರಬೇಕು".

ಅದಕ್ಕೆ ಅವನು ಬಹಳ ನಿರಾಶನಾಗಿ ಹೇಳಿದ, "ನನಗೆ ಹಿಂದಿನ ಜನ್ಮಗಳ ವಿಷಯ ತಿಳಿಯದು. ಹಾಗೇನಾದರೂ ಮಾಡಿದ್ದರೂ, ನೀವೇಕೆ ನನ್ನ ಕರ್ಮಫಲಗಳನ್ನು, ಬೆಂಕಿ ಹುಲ್ಲುಕಡ್ಡಿಯನ್ನು ಸುಟ್ಟುಹಾಕಿದಂತೆ ಸುಟ್ಟುಬಿಡಬಾರದು?"

ಆಗ ಬಾಬಾ ಜೋರಾಗಿ ನಗುತ್ತಾ, "ನನ್ನಲ್ಲಿ ನಿನಗೆ ಅಷ್ಟೊಂದು ನಂಬಿಕೆ ಇದೆಯೇ?" ಎಂದು ಕೇಳಿದರು. ಅವನು "ಹೂಂ" ಎಂದ.

ಬಾಬಾ ಅವನನ್ನು, "ಕಣ್ಣು ಮುಚ್ಚಿಕೊಂಡು ನನ್ನನ್ನು ನೆನಸಿಕೋ" ಎಂದರು.

ಅವನು ಕಣ್ಣು ಮುಚ್ಚಿಕೊಂಡ ಕೂಡಲೇ, ಏನೋ ಒಂದು ಭಾರವಾದ ವಸ್ತು ಮೇಲಿಂದ ಬಿದ್ದಂತೆ, ದೊಡ್ಡ ಶಬ್ದವಾಯಿತು. ಕಣ್ಣು ಬಿಟ್ಟು ನೋಡಿದರೆ, ಅವನು ಜೈಲಿನಿಂದ ಈಚೆ ಬಂದಿದ್ದ. ಅವನನ್ನು ಬಂಧಿಸಿದ್ದ ಪೋಲೀಸಿನವನು ರಕ್ತ ಕಾರುತ್ತಾ ಕೆಳಗೆ ಬಿದ್ದಿದ್ದ. ಅದನ್ನು ನೋಡಿದ ಮನುಷ್ಯ ಭಯದಿಂದ ಬಾಬಾ ಕಡೆ ನೋಡಿದ.

ಬಾಬಾ
ಇನ್ನೂ ಜೋರಾಗಿ ನಗುತ್ತಾ, "ಈಗ ಇನ್ನೂ ಚೆನ್ನಾಯಿತು. ಅಧಿಕಾರಿಗಳು ಬಂದು ನಿನ್ನನ್ನು ಸರಿಯಾಗಿ ವಿಚಾರಿಸಿಕೊಳ್ಳುತ್ತಾರೆ" ಎಂದರು.

ಸಲ ಮನುಷ್ಯ ತನ್ನ ತಪ್ಪನ್ನು ಅರಿತುಕೊಂಡು, ದೀನನಾಗಿ, "ನನ್ನ ಪಾಪಗಳನ್ನೆಲ್ಲಾ ಕ್ಷಮಿಸಿ, ನನ್ನನ್ನು ದುರಿತದಿಂದ ಪಾರುಮಾಡಿ. ನೀವೊಬ್ಬರೇ ನನ್ನನ್ನು ಕಾಪಾಡಬಲ್ಲವರು. ಇನ್ನು ಯಾರೂ ಇಲ್ಲ. ದಯವಿಟ್ಟು ನನ್ನನ್ನು ರಕ್ಷಿಸಿ" ಎಂದು ಕಳಕಳಿಯಿಂದ ಬೇಡಿಕೊಂಡ.

ಬಾಬಾರು ಅವನನ್ನು ಮತ್ತೆ ಕಣ್ಣು ಮುಚ್ಚಿಕೊಳ್ಳುವಂತೆ ಹೇಳಿದರು. ಅವನು ಕಣ್ಣು ಮುಚ್ಚಿಕೊಂಡ.

ಕಣ್ಣು ತೆರೆದಾಗ, ಅವನು ಸ್ವತಂತ್ರನಾಗಿದ್ದ. ಪೋಲಿಸರು ಠಾಣೆ ಯಾವುದೂ ಕಾಣಲಿಲ್ಲ. ತಾನು, ಬಾಬಾ ಇಬ್ಬರೇ ಬಟ್ಟಬಯಲಿನಲ್ಲಿ ನಿಂತಿದ್ದರು. ಅವನು ಬಾಬಾರ ಪಾದಗಳಲ್ಲಿ ಬಿದ್ದ.

ಆಗ
ಬಾಬಾ ಕೇಳಿದರು, "ಈಗ ನೀನು ಮಾಡುತ್ತಿರುವ ನಮಸ್ಕಾರಕ್ಕೂ, ಇದಕ್ಕೆ ಮುಂಚೆ ನೀನು ಮಾಡಿದ ನಮಸ್ಕಾರಕ್ಕೂ, ವ್ಯತ್ಯಾಸವಿದೆಯೇನು?".

ಅದಕ್ಕೆ ಅವನು, "ಮೊದಲು ಮಾಡಿದ ನಮಸ್ಕಾರ ಹಣಕ್ಕಾಗಿ. ಈಗ ಮಾಡುತ್ತಿರುವುದು ನೀವು ದೇವರೆಂದು. ಆಗ ನೀವು ಮುಸ್ಲಿಮರು. ಹಿಂದೂಗಳನ್ನು ಹಾಳುಮಾಡುತ್ತಿದ್ದೀರಿ ಎಂದುಕೊಂಡಿದ್ದೆ" ಎಂದು ಹೇಳಿದ.

ಮತ್ತೆ ಬಾಬಾ ಕೇಳಿದರು, "ನೀನು ಮಹಮ್ಮದೀಯ ದೇವರುಗಳನ್ನು ನಂಬುವುದಿಲ್ಲವೇ?" ಅವನು ಅದಕ್ಕೆ "ಇಲ್ಲ" ಎಂದ.

ಆಗ
ಸರ್ವಜ್ಞರಾದ ಬಾಬಾ, "ನಿನ್ನ ಮನೆಯಲ್ಲಿ ಪಾಂಜಾ ಇಲ್ಲವೇ? ನೀನು ಮನೆಯಲ್ಲಿ ತಾಬೂತ್ ಪೂಜೆ ಮಾಡುವುದಿಲ್ಲವೇ? ಕಾಡಬೀಬಿಯನ್ನು ಮದುವೆ ಮುಂತಾದ ಸಂದರ್ಭಗಳಲ್ಲಿ ಪೂಜೆ ಮಾಡಿಕೊಳ್ಳುವುದಿಲ್ಲವೇ? ಆಕೆಗೆ ಶಾಂತಿ ಮಾಡುವುದಿಲ್ಲವೇ?" ಎಂದು ಕೇಳಿದರು.

ಅವನು ಅದೆಲ್ಲವನ್ನೂ ಒಪ್ಪಿಕೊಂಡ.

ಆಗ ಬಾಬಾ ನಗುತ್ತಾ, "ಇನ್ನೇನು ಬೇಕು ನಿನಗೆ?" ಎಂದು ಕೇಳಿದರು. ಸಂತ ರಾಮದಾಸರ ಭಕ್ತನಾದ ಅವನು ರಾಮದಾಸರನ್ನು ಕಾಣಲು ಇಚ್ಛಿಸಿದ. ಅವನ ಇಚ್ಛೆಯನ್ನು ಪೂರಯಿಸುವ ಹಾಗೆ ಬಾಬಾ ಅವನನ್ನು "ಹಿಂತಿರುಗಿ ನೋಡು" ಎಂದರು.

ತಿರುಗಿ
ನೋಡಿದಾಗ, ಆಶ್ಚರ್ಯವೋ ಎಂಬಂತೆ, ಅಲ್ಲಿ ತನ್ನ ಗುರು ಸಂತ ರಾಮದಾಸರು ನಿಂತಿದ್ದರು. ಅವರಿಗೆ ನಮಸ್ಕಾರ ಮಾಡಿಕೊಳ್ಳಬೇಕು ಎಂದುಕೊಳ್ಳುವಷ್ಟರಲ್ಲಿ ಅವರು ಮಾಯವಾದರು.

ಮತ್ತೆ
ಮನುಷ್ಯ ಬಾಬಾರ ಕಡೆ ತಿರುಗಿ, "ನೀವು ಬಹಳ ವಯಸ್ಸಾದವರಂತೆ ಕಾಣುತ್ತೀರಿ. ನಿಮ್ಮ ವಯಸ್ಸೇನು?" ಎಂದು ಕೇಳಿದ.

ಅದಕ್ಕೆ
ಬಾಬಾ ನಕ್ಕು ಹೇಳಿದರು, "ನಾನು ವಯಸ್ಸಾದವನೇ? ನನ್ನ ಜೊತೆ ಓಡಿ ನೋಡು. ಯಾರು ಗೆಲ್ಲುತ್ತಾರೋ ನೋಡೋಣ" ಎಂದು ಹೇಳುತ್ತಾ ಓಡಲು ಆರಂಭಿಸಿ, ಹಾಗೆಯೇ ಓಡುತ್ತಾ ಕಾಣಿಸದೇ ಹೋದರು.

ಕನಸಿನಿಂದ ಎಚ್ಚೆತ್ತ ಅವನು, ತನ್ನ ಕನಸಿನ ಬಗ್ಗೆ ದೀರ್ಘವಾಗಿ ಯೋಚನೆ ಮಾಡಲಾರಂಭಿಸಿದ. ಅದರಲ್ಲೂ ಬಾಬಾರೊಡನೆ ನಡೆದ ಸಂಭಾಷಣೆಗಳನ್ನು ಮತ್ತೆ ಮತ್ತೆ ನೆನಪಿಗೆ ತಂದುಕೊಳ್ಳುತ್ತಾ, ಅದರ ಅರ್ಥವೇನು ಎಂಬುದನ್ನು ಚೆನ್ನಾಗಿ ತಿಳಿದುಕೊಂಡ. ಬಾಬಾ ಎಂತಹ ಮಹಾತ್ಮರು ಎಂಬುದು ಅವನಿಗೆ ಅರಿವಾಯಿತು. ಅದರೊಡನೆ ತನ್ನ ಸಣ್ಣತನವನ್ನೂ ಅರಿತುಕೊಂಡ. ಹೀಗೆ ತನ್ನ ನಿಲುವನ್ನು ಬದಲಾಯಿಸಿಕೊಂಡ ಅವನು ಬಾಹ್ಯ ವಸ್ತುಗಳಿಗೆ ಆಸೆ ಪಡದೆ ತನ್ನ ಆಂತರ್ಯದಲ್ಲಿ ಶಾಂತಿ ಆನಂದಗಳನ್ನು ಕಂಡುಕೊಂಡ. ಆನಂದವನ್ನು ಶಾಶ್ವತವಾಗಿ ತನ್ನಲ್ಲಿಟ್ಟುಕೊಳ್ಳಬೇಕಾದರೆ ಬಾಬಾರ ಚರಣಗಳಲ್ಲಿ ಬಿದ್ದು ನೀವೇ ಗತಿ ಎಂದು ಶರಣಾಗತನಾಗುವುದೊಂದೇ ದಾರಿ ಎಂಬುದನ್ನೂ ಅರಿತ ಅವನು, ಮಾರನೆಯದಿನ ಬೆಳಗ್ಗೆ ಬೇಗ ಎದ್ದು ಮಸೀದಿಗೆ ಹೋಗಿ, ಮನಃಪೂರ್ವಕವಾಗಿ ಬಾಬಾರ ಪೂಜೆ ಮಾಡಿ, ಆರತಿ ಕೊಟ್ಟು ಬಾಬಾರ ಚರಣಾರವಿಂದಗಳಲ್ಲಿ ತಲೆಯಿಟ್ಟು ನಮಸ್ಕರಿಸಿದ. ಬಾಬಾ ಅವನನ್ನು ಆಶೀರ್ವದಿಸಿ ಸಿಹಿ ಕೊಟ್ಟು, ಒಂದು ರೂಪಾಯಿ ಕೈಯಲ್ಲಿಟ್ಟು ಇನ್ನೂ ನಾಲ್ಕು ದಿನ ಇದ್ದು ಹೋಗಿ ಎಂದರು. ಶಿರಡಿ ಬಿಟ್ಟು ಹೊರಡುವ ಸಮಯಬಂದಾಗ, ಅವರೆಲ್ಲರನ್ನೂ ಬಾಬಾ ಮತ್ತೆ ಆಶೀರ್ವದಿಸಿ, "ಅಲ್ಲಾ ನಿಮಗೆ ಸಮೃದ್ಧಿಯಾಗಿ ಕೊಟ್ಟು, ಒಳ್ಳೆಯದು ಮಾಡುತ್ತಾನೆ. ಹೋಗಿ ಬನ್ನಿ" ಎಂದು ಹೇಳಿದರು. ಅವನಿಗೆ ತನ್ನ ಆಸೆಯಂತೆ ಶಿರಡಿಯಲ್ಲಿ ಬಹಳ ಹಣ ಸಿಕ್ಕಲಿಲ್ಲ. ಆದರೆ ಬಹು ಅಮೂಲ್ಯವಾದ ಬಾಬಾರ ಆಶೀರ್ವಾದಗಳನ್ನು ಪಡೆದುಕೊಂಡ. ಬಾಬಾರ ಅನುಗ್ರಹದಿಂದ ಅವರಿಗೆ ಮುಂದಿನ ಪ್ರಯಾಣಕಾಲದಲ್ಲಿ, ಯಾವುದೇ ತೊಂದರೆಗಳೂ ಆಗದೆ, ತಮ್ಮ ತೀರ್ಥಯಾತ್ರೆಯನ್ನು ಮುಗಿಸಿದರು. ನಂತರ ಅವನಿಗೆ ವಿಫುಲವಾಗಿ ಹಣವೂ ದೊರಕಿತು. ಅವರೆಲ್ಲರೂ ತಾವು ಬಾಬಾರ ಸನ್ನಿಧಾನದಲ್ಲಿ ಕಳೆದ ಸುಖ ಸಂತೋಷಗಳ ದಿನಗಳನ್ನು ನೆನಸಿಕೊಳ್ಳುತ್ತಾ, ಬಾಬಾರನ್ನೇ ನಂಬಿ ಬದುಕಿದರು.

ತೆಂಡೂಲ್ಕರರ ಕಥೆ

ಬಾಂದ್ರಾದಲ್ಲಿ ನೆಲಸಿದ್ದ ತೆಂಡೂಲ್ಕರರ ಸಂಸಾರದವರೆಲ್ಲಾ ಬಾಬಾರ ಅವಿಚ್ಛಿನ್ನ ಭಕ್ತರು. ಶ್ರೀಮತಿ ಸಾವಿತ್ರಿಬಾಯಿ ತೆಂಡೂಲ್ಕರರು, ೮೨೫ ಪದ್ಯಗಳುಳ್ಳ, ಬಾಬಾರ ಲೀಲೆಗಳನ್ನು ವಿವರಿಸುವ "ಶ್ರೀ ಸಾಯಿನಾಥ ಭಜನಮಾಲಾ" ಎಂಬ ಮರಾಠಿ ಬಾಷೆಯ ಪುಸ್ತಕವನ್ನು ಪ್ರಕಟಿಸಿದ್ದಾರೆ. ಓದಿದವರಿಗೆ ಬಹಳ ಸಂತೋಷವನ್ನು ತಂದುಕೊಡುವಂತಹುದು. ಅವರ ಮಗ ಬಾಬು ಹಗಲು ರಾತ್ರಿ ಬಹಳ ಕಷ್ಟಪಟ್ಟು, ವೈದ್ಯ ಪರೀಕ್ಷೆಗಾಗಿ ಓದುತ್ತಿದ್ದ. ಜ್ಯೋತಿಷಿ ಒಬ್ಬ ಅವನ ಜಾತಕವನ್ನು ನೋಡಿ, ಗ್ರಹಗತಿಗಳು ಸರಿಯಾಗಿ ಇಲ್ಲದೇ ಇರುವುದರಿಂದ, ವರ್ಷ ಅವನು ಎಷ್ಟೇ ಕಷ್ಟಪಟ್ಟರೂ, ಪರೀಕ್ಷೆಯಲ್ಲಿ ತೇರ್ಗಡೆಯಾಗುವ ಸಂಭವ ಬಹಳ ಕಡಮೆ ಎಂದೂ, ಮುಂದಿನ ವರ್ಷದಲ್ಲಿ ಉತ್ತೀರ್ಣನಾಗುವುದು ಖಚಿತ, ಎಂದೂ ಹೇಳಿದ. ಅದನ್ನು ಕೇಳಿದ ಬಾಬು, ಬಹಳ ನಿರಾಸೆಯಿಂದ ಖೇದಗೊಂಡು ಓದುವುದನ್ನೇ ನಿಲ್ಲಿಸಿಬಿಟ್ಟ. ಅವನ ತಂದೆತಾಯಿಗಳಿಗೆ ಅದು ಬಹಳ ವಿಷಾದಕರವಾಗಿತ್ತು. ಪರಿಸ್ಥಿತಿಯಲ್ಲಿದ್ದಾಗ ಶ್ರೀಮತಿ ತೆಂಡೂಲ್ಕರ್ ಶಿರಡಿಗೆ ಹೋಗುವ ಅವಕಾಶ ಬಂದು, ಆಕೆ ಶಿರಡಿಗೆ ಹೋದರು. ಅಲ್ಲಿ ಆಕೆ ಬಾಬಾರ ದರ್ಶನ ಮಾಡಿ, ಅವರಿಗೆ ಜ್ಯೋತಿಷಿ ಹೇಳಿದ್ದು, ಅದರಿಂದ ತನ್ನ ಮಗ ಚಿಂತಾಕುಲನಾಗಿದ್ದು, ಎಲ್ಲಾ ಹೇಳಿಕೊಂಡರು. ಅದಕ್ಕೆ ಬಾಬಾ, "ಜಾತಕ, ಅದರ ಫಲಾಫಲಗಳು, ಜ್ಯೋತಿಷಿಗಳನ್ನು ಪಕ್ಕಕ್ಕಿಟ್ಟು, ಶಾಂತ ಮನಸ್ಸಿನಿಂದ ನನ್ನನ್ನು ನಂಬಿ, ಚೆನ್ನಾಗಿ ಓದಿ ಪರೀಕ್ಷೆ ಬರೆಯುವಂತೆ, ಹೇಳು. ಅವನು ವರ್ಷ ಖಂಡಿತವಾಗಿಯೂ ಪರೀಕ್ಷೆಯಲ್ಲಿ ಉತ್ತೀರ್ಣನಾಗುತ್ತಾನೆ" ಎಂದು ಹೇಳಿದರು. ಆಕೆ ಶಿರಡಿಯಿಂದ ಹಿಂತಿರುಗಿ, ಬಾಬಾ ಹೇಳಿದ್ದನ್ನು ತನ್ನ ಮಗನಿಗೆ ಹೇಳಿದರು. ಬಾಬಾರ ಮಾತಿಗೆ ಬೆಲೆಕೊಟ್ಟು, ಹುಡುಗ ಚೆನ್ನಾಗಿ ಓದಿ ಪರೀಕ್ಷೆಯಲ್ಲಿ ಚೆನ್ನಾಗಿ ಬರೆದ. ಮತ್ತೆ ಅಕಾರಣವಾಗಿ, ಅವನು ಹಿಂದಿನಂತೆ ತನ್ನ ಆತ್ಮವಿಶ್ವಾಸವನ್ನು ಕಳೆದುಕೊಂಡು, ಲಿಖಿತ ಪರೀಕ್ಷೆಯಲ್ಲಿ ತಾನು ಉತ್ತೀರ್ಣನಾಗುವುದಿಲ್ಲವೆಂಬ ಭಯದಿಂದ, ಮೌಖಿಕ ಪರೀಕ್ಷೆಗೆ ಹೋಗಲಿಲ್ಲ. ಆದರೆ ಬಾಬಾರ ಇಚ್ಛೆಯೇ ಬೇರೆಯಿತ್ತು. ಪರೀಕ್ಷಕರೇ ಅವನು ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣನಾಗಿರುವುದರಿಂದ, ಮೌಖಿಕ ಪರೀಕ್ಷೆಗೆ ಹಾಜರಾಗಬೇಕೆಂದು ಸಂದೇಶ ಕಳುಹಿಸಿದರು. ಅದರಿಂದ ಉತ್ಸಾಹಿತನಾದ ಬಾಬು, ಮೌಖಿಕ ಪರೀಕ್ಷೆಗೆ ಹಾಜರಾಗಿ, ಬಾಬಾರ ಅನುಗ್ರಹದಿಂದ, ಅದರಲ್ಲೂ ಉತ್ತೀರ್ಣನಾದ. ಬಾಬಾ ಹೀಗೆ ಜ್ಯೋತಿಷಿಗಳ ಭವಿಷ್ಯವಾಣಿಯನ್ನು ಸುಳ್ಳಾಗಿಸಿದರು.

ಇಲ್ಲ ಸಲ್ಲದ ಸಂದೇಹಗಳು ಬರುವುದೆಲ್ಲಾ ನಾವು ಕಷ್ಟದಲ್ಲಿದ್ದಾಗಲೇ! ಅಂತಹ ಸಮಯದಲ್ಲೇ ಜ್ಯೋತಿಷಿಗಳು, ಹಸ್ತಸಾಮುದ್ರಿಕರು ಇವರುಗಳೆಲ್ಲಾ ನೆನಪಿಗೆ ಬಂದು, ಅವರ ಬಳಿಗೆ ಹೋಗುವುದು. ನಮಗೆ ದೇವರ, ಬಾಬಾರ ನೆನಪು ಬರುವುದೇ ಇಲ್ಲ. ಅದಕ್ಕೇ ಬಾಬಾ, "ನಿಮಗೆ ಎಂಥದೇ ಬಲವತ್ತರವಾದ ಕಾರಣಗಳಿರಲಿ, ನನ್ನಲ್ಲಿ ನಂಬಿಕೆಯನ್ನು ಕಳೆದುಕೊಳ್ಳಬೇಡಿ" ಎಂದು ಹೇಳಿದರು. ನೀವು ಮಾಡುತ್ತಿರುವುದು ಒಳ್ಳೆಯದು ಎಂಬುದು ನಿಮಗೆ ಖಚಿತವಾದರೆ, ಬಾಬಾರಲ್ಲಿ ಪೂರ್ಣ ನಂಬಿಕೆಯಿಟ್ಟು ಮುನ್ನಡೆಯಿರಿ. ಬಾಬಾರ ದಯೆಯಿಂದ ಏನೇ ಅಡೆತಡೆಗಳು ಬಂದರೂ ಅವೆಲ್ಲವೂ, ಸೂರ್ಯ ರಶ್ಮಿಯಿಂದ ಮಂಜು ಕರಗಿದಂತೆ ಕರಗಿಹೋಗುತ್ತವೆ. ಸೂರ್ಯ ಕಿರಣಗಳಿಂದ ಮಂಜು ಮಾತ್ರವೇ ಅಲ್ಲ, ಅಂಧಕಾರವೂ ಕಣ್ಮರೆಯಾಗಿ ಹೋಗುತ್ತದೆ!.

ಹುಡುಗನ ತಂದೆ ರಘುನಾಥ ರಾವ್ ಒಂದು ವಾಣಿಜ್ಯ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ವಯಸ್ಸಿನಿಂದಾಗಿ, ಅವರು ಕೆಲಸ ಮುಂಚಿನಂತೆ ಮನಸ್ಸಿಟ್ಟು ಮಾಡಲು ಸಾಧ್ಯವಾಗುತ್ತಿರಲಿಲ್ಲ. ಅದಕ್ಕೆ ಅವರು ಆರೋಗ್ಯ ಸುಧಾರಿಸಿಕೊಳ್ಳಲು ಕೆಲವು ದಿನ ರಜೆಯ ಮೇಲಿದ್ದರು. ಆದರೂ ಅವರಿಗೆ ಮುಂಚಿನಂತೆ ಕೆಲಸ ಮಾಡುವುದು ದುಸ್ಸಾಧ್ಯವಾಯಿತು. ಅದಕ್ಕೆ ಅವರು ನಿವೃತ್ತಿ ಪಡೆಯಬೇಕಾಯಿತು. ಬಹಳ ಕಾಲ ನಂಬಿಕೆಯಿಂದ ಕೆಲಸಮಾಡುತ್ತಿದ್ದ ಅವರಿಗೆ ಕಂಪನಿಯ ಮುಖ್ಯಸ್ಥ, ಪೆನ್ಶನ್ ಕೊಡಬೇಕೆಂದು ನಿರ್ಧರಿಸಿದ. ಆತನಿಗೆ ತಿಂಗಳಿಗೆ ೧೫೦ ರೂಪಾಯಿ ಸಂಬಳ ಬರುತ್ತಿತ್ತು. ಪೆನ್ಶನ್ ಅದರಲ್ಲಿ ಅರ್ಧ, ಎಂದರೆ ೭೫ ರೂಪಾಯಿಗಳಲ್ಲಿ ಸಂಸಾರ ಸಾಗಿಸುವುದು, ಬಹಳ ಕಷ್ಟವಾಗುತ್ತಿತ್ತು. ಇದು ಮನೆಯಲ್ಲಿ ಎಲ್ಲರಿಗೂ ಚಿಂತೆಯ ವಿಷಯವಾಗಿತ್ತು. ಇನ್ನೇನು ಪೆನ್ಶನ್ ವಿಷಯದಲ್ಲಿ ಕೊನೆಯ ನಿರ್ಧಾರಕ್ಕೆ ಬರಬೇಕು, ಎಂದಿರುವ ಸಮಯದಲ್ಲಿ ಶ್ರೀಮತಿ ತೆಂಡೂಲ್ಕರ್ ಅವರ ಕನಸಿನಲ್ಲಿ ಬಾಬಾ ಕಾಣಿಸಿಕೊಂಡು, "ನಿನ್ನ ಗಂಡನಿಗೆ ೧೦೦ ರೂಪಾಯಿ ಪೆನ್ಶನ್ ಬಂದರೆ ನಿನಗೆ ಸಂತೋಷವೇ?" ಎಂದು ಕೇಳಿದರು. ಅದಕ್ಕೆ ಆಕೆ, "ನನ್ನನ್ನೇಕೆ ಕೇಳುತ್ತೀರಿ ಬಾಬಾ? ನೀವು ಏನು ನಿರ್ಧರಿಸಿದರೂ ಅದು ನಮ್ಮ ಒಳ್ಳೆಯದಕ್ಕೇ ಆಗಿರುತ್ತದೆ" ಎಂದರು. ಬಾಬಾ ೧೦೦ ರೂಪಾಯಿ ಎಂದು ಹೇಳಿದ್ದರೂ, ಕೊನೆಗೆ ಅವರಿಗೆ ೧೧೦ ರೂಪಾಯಿಗಳ ಪೆನ್ಶನ್ ನಿರ್ಧಾರಮಾಡಿದರು. ಬಾಬಾ ತಮ್ಮ ಭಕ್ತರನ್ನು ಎಷ್ಟು ಜತನದಿಂದ ನೋಡಿಕೊಳ್ಳುತ್ತಿದ್ದರು, ಎಂಬುದಕ್ಕೆ ಇದು ಇನ್ನೊಂದು ನಿದರ್ಶನ. ಅಂತಹ ಕರುಣಾ ಮೂರ್ತಿಯ ಪಾದಪದ್ಮಗಳಿಗೆ ನಮಸ್ಕರಿಸಿ, ನಮನ್ನೂ ಹಾಗೆ ಜತನದಿಂದ ಕಾಪಾಡು, ಎಂದು ಕೇಳಿಕೊಳ್ಳುವ ಅರ್ಹತೆಯನ್ನು ಪಡೆಯಲು ಅನುಗ್ರಹಮಾಡು ಎಂದು ಕೇಳಿಕೊಳ್ಳೋಣ.

ಕ್ಯಾಪ್ಟನ್ ಹಾಟೆ

ಬಿಕಾನೀರ್ನಲ್ಲಿ ನೆಲೆಗೊಂಡಿದ್ದ ಕ್ಯಾ. ವೀರ್ ಹಾಟೆ ಬಾಬಾರ ದೊಡ್ಡ ಭಕ್ತರು. ಒಂದುಸಲ ಬಾಬಾ ಅವರ ಕನಸಿನಲ್ಲಿ ಕಾಣಿಸಿಕೊಂಡು, "ಏನು, ನನ್ನನ್ನು ಮರೆತೆಯಾ?" ಎಂದು ಕೇಳಿದರು. ಹಾಟೆ ಆಶ್ಚರ್ಯದಿಂದ, "ತಾಯಿಯನ್ನು ಮರೆತು ಮಗು ಹೇಗೆ ತಾನೇ ಇರಬಲ್ಲುದು?" ಎಂದು, ತೋಟಕ್ಕೆ ಹೋಗಿ ಚಪ್ಪರದವರೆಕಾಯಿ ಕಿತ್ತುಕೊಂಡು ಬಂದು, ಅದನ್ನು ದಕ್ಷಿಣೆಯೊಡನೆ ಬಾಬಾಗೆ ಅರ್ಪಿಸಬೇಕು ಎಂದುಕೊಳ್ಳುತ್ತಿರುವಾಗಲೇ ಅವರಿಗೆ ಎಚ್ಚರಿಕೆಯಾಗಿಹೋಯಿತು. ಕನಸಿನಲ್ಲಿ ಕಂಡಂತೆ ಅದನ್ನು ಬಾಬಾರಿಗೆ ಅರ್ಪಿಸಬೇಕು ಎಂದು ನಿಶ್ಚಯಿಸಿಕೊಂಡರು. ಗ್ವಾಲಿಯರ್ಗೆ ಹೋದಾಗ, ಕಾಕಾ ಸಾಹೇಬ್ ದೀಕ್ಷಿತರಿಗೆ ಅಲ್ಲಿಂದ ೧೨ ರೂಪಾಯಿ ಹಣ ಕಳುಹಿಸಿ, ಅದರಲ್ಲಿ ರೂಪಾಯಿಗಳಿಗೆ ಸ್ವಯಂಪಾಕದ ಸಾಮಾನುಗಳನ್ನು, ಚಪ್ಪರದವರೆಕಾಯಿಯೊಡನೆ ಬಾಬಾರಿಗೆ ತನ್ನ ಪರವಾಗಿ ಅರ್ಪಿಸಿ, ೧೦ ರೂಪಾಯಿ ದಕ್ಷಿಣೆಯಾಗಿ ಕೊಡಿ, ಎಂದು ಕೇಳಿಕೊಂಡು ಕಾಗದ ಬರೆದರು. ಕಾಕಾ ಸಾಹೇಬರು ಶಿರಡಿಗೆ ಹೋಗಿ ಹಾಟೆ ಹೇಳಿದಂತೆ, ಎಲ್ಲಾ ಸಾಮಾನು ಕೊಂಡುಕೊಂಡರು. ಆದರೆ ಚಪ್ಪರದವರೆಕಾಯಿ ಮಾತ್ರ ಸಿಕ್ಕಲಿಲ್ಲ. ನಿರಾಸೆಯಿಂದ ಅವರು ಬರುತ್ತಿದ್ದಾಗ, ಮುದುಕಿಯೊಬ್ಬಳು ಅದೇ ತರಕಾರಿಯನ್ನು ಒಂದು ಬುಟ್ಟಿಯ ತುಂಬಾ ತಂದಳು. ಆಶ್ಚರ್ಯಗೊಂಡ ಕಾಕಾ ಸಾಹೇಬ್ ಅದನ್ನು ಕೊಂಡು, ಎಲ್ಲವನ್ನೂ ತಂದು, ದಕ್ಷಿಣೆಯೊಡನೆ ಹಾಟೆಯ ಪರವಾಗಿ ಬಾಬಾರಿಗೆ ಅರ್ಪಿಸಿದರು. ಮಾರನೆಯದಿನ ನಿಮೋನ್ಕರ್ ನೈವೇದ್ಯಕ್ಕಾಗಿ ಅನ್ನ, ಅವರೆಕಾಯಿ ಪಲ್ಯ ಮಾಡಿ ಬಾಬಾರಿಗೆ ಅರ್ಪಿಸಿದರು. ಅದನ್ನು ಸಂತೋಷದಿಂದ ಸ್ವೀಕರಿಸಿದ ಬಾಬಾ, ಬೇರೆ ಯಾವುದನ್ನೂ ಮುಟ್ಟದೆ ಬರೀ ಅವರೆಕಾಯಿ ಪಲ್ಯವನ್ನೇ ತಿಂದರು. ಅದನ್ನೆಲ್ಲ ಕಾಕಾ ಸಾಹೇಬರಿಂದ ತಿಳಿದುಕೊಂಡ ಹಾಟೆಗೆ ಅತೀವ ಸಂತೋಷವಾಯಿತು.

ಇನ್ನೊಂದುಸಲ ಹಾಟೆಗೆ ಒಂದುರೂಪಾಯಿ ನಾಣ್ಯವೊಂದನ್ನು ಬಾಬಾರ ಕೈಯಿಂದ ಪವಿತ್ರಗೊಳಿಸಿ ಅದನ್ನು ಪೂಜೆಯಲ್ಲಿಟ್ಟುಕೊಳ್ಳಬೇಕು ಎನ್ನಿಸಿತು. ಅವರು ಹಾಗೆಂದುಕೊಳ್ಳುತ್ತಿರುವಾಗಲೇ ಅವರ ಸ್ನೇಹಿತರೊಬ್ಬರು, ಶ್ರೀ ಸವಲ್ ರಾಮ್, ಶಿರಡಿಗೆ ಹೊರಡುವುದರಲ್ಲಿದ್ದರು. ಹಾಟೆ ಅವರ ಕೈಯಲ್ಲಿ ಒಂದು ರೂಪಾಯಿ ನಾಣ್ಯವನ್ನು ಕೊಟ್ಟು, ಅದನ್ನು ಬಾಬಾ ಕೈಯಲ್ಲಿ ಮುಟ್ಟಿಸಿ, ಪವಿತ್ರಗೊಳಿಸಿ ತರಬೇಕೆಂದು ಕೇಳಿಕೊಂಡರು. ಸ್ನೇಹಿತ ಶಿರಡಿಗೆ ಹೋಗಿ, ಬಾಬಾರ ದರ್ಶನ ಮಾಡಿ, ತನ್ನ ದಕ್ಷಿಣೆಯನ್ನು ಕೊಟ್ಟ. ಬಾಬಾ ಅದನ್ನು ಜೇಬಿನಲ್ಲಿ ಹಾಕಿಕೊಂಡರು. ನಂತರ ಅವನು ಹಾಟೆ ಕೊಟ್ಟ ರೂಪಾಯಿ ನಾಣ್ಯವನ್ನು ಬಾಬಾರ ಕೈಲಿಟ್ಟು, "ಇದು ಹಾಟೆಯವರು ಕಳುಹಿಸಿದ್ದು" ಎಂದ. ಬಾಬಾ ಅದನ್ನು ಕೈಯಲ್ಲಿ ತೆಗೆದುಕೊಂಡು, ಸ್ವಲ್ಪ ಹೊತ್ತು ತದೇಕಚಿತ್ತರಾಗಿ ಅದನ್ನು ನೋಡಿ, ಚಿಮ್ಮಿ ಮೇಲಕ್ಕೆಸೆದು, ಅದರೊಡನೆ ಸ್ವಲ್ಪ ಹೊತ್ತು ಆಟವಾಡಿ, ಅದನ್ನು ಸವಲ್ ರಾಮನಿಗೆ ಕೊಟ್ಟು, "ಇದನ್ನು ಊದಿ ಪ್ರಸಾದದೊಡನೆ, ಅದರ ಯಜಮಾನನಿಗೆ ಕೊಡು. ನನಗೆ ಅವನಿಂದ ಏನೂ ಬೇಕಾಗಿಲ್ಲ. ತೃಪ್ತಿ ಸಂತೋಷಗಳಿಂದ ಜೀವನ ಮಾಡು ಎಂದು ಅವನಿಗೆ ಹೇಳು" ಎಂದರು.

ಸ್ನೇಹಿತ ಗ್ವಾಲಿಯರ್ಗೆ ಹಿಂತಿರುಗಿ ಹಾಟೆಯನ್ನು ಕಂಡು, ಅವರಿಗೆ ರೂಪಾಯಿ ನಾಣ್ಯವನ್ನು ಕೊಟ್ಟು, ಶಿರಡಿಯಲ್ಲಿ ನಡೆದದ್ದನ್ನೆಲ್ಲಾ ವಿವರವಾಗಿ ತಿಳಿಸಿದ. ವಿಶೇಷವಾಗಿ ಹಾಟೆಗೋಸ್ಕರವಾಗಿಯೇ ಹೇಳಿದ ಬಾಬಾರ ಮಾತುಗಳನ್ನೂ ಹೇಳಿದ. ಅದನ್ನೆಲ್ಲಾ ಕೇಳಿದ ಹಾಟೆ ಅತ್ಯಂತ ಸಂತೋಷಪಟ್ಟವರಾಗಿ, ಬಾಬಾ ತನ್ನ ಮನೋಭಿಲಾಷೆಯನ್ನು ಪೂರಯಿಸಿ, ಉತ್ತಮ ಯೋಚನೆಗಳಿಗೆ ಹೇಗೆ ಉತ್ತೇಜನ ಕೊಡುತ್ತಾರೆ ಎಂಬುದನ್ನು ಕಂಡುಕೊಂಡರು.

ವಾಮನ ನಾರ್ವೇಕರರ ಕಥೆ

ಮೇಲಿನ ಕಥೆಗಿಂತ, ಇದೊಂದು ವಿಭಿನ್ನವಾದ ಕಥೆ. ವಾಮನ ನಾರ್ವೇಕರ್, ಬಾಬಾರ ಇನ್ನೊಬ್ಬ ಭಕ್ತರು. ಅವರಿಗೆ ಬಾಬಾರಲ್ಲಿ ಅಪರಿಮಿತ ಪ್ರೀತಿ. ಒಂದುಸಲ ಅವರು ಒಂದು ನಾಣ್ಯವನ್ನು ತಂದರು. ಅದಕ್ಕೆ ಒಂದು ಕಡೆ ರಾಮ, ಲಕ್ಷ್ಮಣ, ಸೀತಾ ಮೂರ್ತಿಗಳು, ಇನ್ನೊಂದು ಕಡೆ ಕೈ ಮುಗಿದು ಕೂತಿರುವ ಆಂಜನೇಯ ಕೆತ್ತಲಾಗಿತ್ತು. ಅವರು ನಾಣ್ಯವನ್ನು ಬಾಬಾ ಕೈಲಿಟ್ಟು ಅವರಿಂದ ಪವಿತ್ರಗೊಳಿಸಿ ತೆಗೆದುಕೊಳ್ಳಬೇಕೆಂದು ತಂದಿದ್ದರು. ಆದರೆ ಬಾಬಾ ಅದನ್ನು ಬಹಳ ನೆಚ್ಚಿಕೊಂಡು, ನಾಣ್ಯವನ್ನು ಹಿಂತಿರುಗಿಸದೆ ತಾವೇ ಇಟ್ಟುಕೊಂಡರು. ಇದನ್ನು ನೋಡುತ್ತಿದ್ದ ಶ್ಯಾಮಾ, " ನಾಣ್ಯ ನಾರ್ವೇಕರ್ ಕೊಟ್ಟಿದ್ದು ಪವಿತ್ರಗೊಳಿಸಿ ಕೊಡಲಿ ಎಂದು. ಅದನ್ನು ಅವರಿಗೆ ಹಿಂತಿರುಗಿಸಿ" ಎಂದರು. ಅದಕ್ಕೆ ಬಾಬಾ, "ಅದೇಕೆ ಹಿಂದಕ್ಕೆ ಕೊಡಬೇಕು? ಅದನ್ನು ನಾವೇ ಇಟ್ಟುಕೊಳ್ಳೋಣ. ಅವನು ೨೫ ರೂಪಾಯಿ ಕೊಟ್ಟರೆ ಅದನ್ನು ವಾಪಸ್ಸು ಮಾಡೋಣ" ಎಂದರು. ನಾರ್ವೇಕರ್ ಹೇಗೋ ಮಾಡಿ ೨೫ ರೂಪಾಯಿ ತಂದು ಕೊಟ್ಟರು. ಮತ್ತೆ ಬಾಬಾ, "ಅದರ ಮೌಲ್ಯ ೨೫ ರೂಪಾಯಿಗಳಿಗಿಂತ ಬಹಳ ದೊಡ್ಡದು. ಶಾಮ್ಯಾ, ಇದನ್ನು ನೀನೇ ಇಟ್ಟುಕೋ. ಪೂಜಾಗೃಹದಲ್ಲಿಟ್ಟು ದಿನವೂ ಪೂಜೆ ಮಾಡಿಕೋ" ಎಂದರು. ಬಾಬಾರನ್ನುಹಾಗೇಕೆ ಮಾಡಿದಿರಿಎಂದು ಕೇಳುವ ಧೈರ್ಯ ಯಾರಿಗೂ ಇರಲಿಲ್ಲ. ಅವರ ರೀತಿ ನೀತಿಗಳು ವಿಚಿತ್ರ-ವಿಶಿಷ್ಟವಾದವು. ಅವರೇನು ಮಾಡುತ್ತಾರೆ ಎಂಬುದು ಅವರಿಗೇ ಗೊತ್ತು. ಅಂತಹ ವಿಚಿತ್ರ ವೈಶಿಷ್ಟವುಳ್ಳ ಬಾಬಾ ಪಾದಗಳಿಗೆ ನಮಸ್ಕರಿಸಿ ಆತನ ದಯೆಗೆ ಪಾತ್ರರಾಗೋಣ.

ಇದರೊಂದಿಗೆ ಮದ್ರಾಸಿ ಭಜನ ಮೇಳ, ತೆಂಡೂಲ್ಕರ್, ಕ್ಯಾ. ಹಾಟೆ, ವಾಮನ ನಾರ್ವೇಕರ್ ಮತ್ತು ಇತರ ವಿಷಯಗಳನ್ನು ಕುರಿತು ಹೇಳುವ ಇಪ್ಪತ್ತೊಂಭತ್ತನೆಯ ಅಧ್ಯಾಯ ಮುಗಿಯಿತು. ಮುಂದಿನ ಅಧ್ಯಾಯದಲ್ಲಿ ಹೇಮಾಡ್ ಪಂತ್ ವಣಿಯ ಕಾಕಾಜಿ ವೈದ್ಯ, ಬೊಂಬಾಯಿಯ ಪಂಜಾಬಿ ರಾಮಲಾಲ್ ಇತ್ಯಾದಿ ವಿಷಯಗಳನ್ನು ಹೇಳುತ್ತಾರೆ.

||ಶ್ರೀ ಸದ್ಗುರು ಸಾಯಿನಾಥಾರ್ಪಣಮಸ್ತು||ಶುಭಂ ಭವತು||
||ಓಂ ಶಾಂತಿಃ ಶಾಂತಿಃ ಶಾಂತಿಃ||


Monday, January 2, 2012

||ಇಪ್ಪತ್ತೆಂಟನೆಯ ಅಧ್ಯಾಯ||


||ಶ್ರೀ ಸಾಯಿ ಸಚ್ಚರಿತ್ರೆ||
||ಇಪ್ಪತ್ತೆಂಟನೆಯ ಅಧ್ಯಾಯ||
||ದಾರದಿಂದ ಕಟ್ಟೆಳೆದ ಪಕ್ಷಿಗಳು||
ಶ್ರೀ ಗಣೇಶಾಯ ನಮಃ ಶ್ರೀ ಸರಸ್ವತಯೇ ನಮಃ
ಶ್ರೀ ವೆಂಕಟೇಶಾಯ ನಮಃ ಶ್ರೀ ಸಾಯಿನಾಥಾಯ ನಮಃ
ಶ್ರೀ ಸದ್ಗುರುಭ್ಯೋನ್ನಮಃ

ಅಧ್ಯಾಯದಲ್ಲಿ ಹೇಮಾಡ್ ಪಂತ್, ಲಕ್ಷ್ಮೀಚಂದ್, ಬರ್ಹಾಂಪುರದ ಮಹಿಳೆ, ಮೇಘ ಮತ್ತು ಇತರ ವಿಷಯಗಳನ್ನು ಹೇಳುತ್ತಾರೆ

ಸದ್ಗುರು ಸಾಯಿ

ಬಲಗಾಲನ್ನು ಎಡಗಾಲ ಮೇಲಿಟ್ಟು, ಎಡಗೈ ಬಲಗಾಲ ಪಾದದ ಮೇಲಿಟ್ಟು, ಕರುಣಾಪೂರ್ಣ ದೃಷ್ಟಿಯಿಂದ ಭಕ್ತರನ್ನು ನೋಡುತ್ತಿರುವ, ನಮಗೆಲ್ಲರಿಗೂ ಕಾಣುತ್ತಿರುವ ಬಾಬಾ, ರೂಪಕ್ಕೆ ಮಾತ್ರ ಸೀಮಿತರಲ್ಲ. ಸಾಯಿ ರೂಪದ ಆಚೆಯೂ ಇದ್ದಾರೆ. ಅವರು ಅಣುರೇಣು ತೃಣ ಕಾಷ್ಠಗಳಲ್ಲಿದ್ದಾರೆ. ಅಣೋರಣೀಯಾನ್ ಮಹತೋಮಹೀಯಾನ್ ಅವರು. ಸಕಲ ಚರಾಚರ ವಸ್ತುಗಳಲ್ಲಿ ತುಂಬಿದ್ದಾರೆ. ನಮ್ಮ ಜ್ಞಾನೇಂದ್ರಿಯಗಳು ಗ್ರಹಿಸ ಬಹುದಾದ, ಗ್ರಹಿಸಲಾರದಾದ ವಸ್ತುಗಳೆಲ್ಲದರಲ್ಲಿಯೂ ಅವರೇ ಇದ್ದಾರೆ. ಎಲ್ಲದರ ಆದಿಮಧ್ಯಾಂತಗಳಲ್ಲಿ ಇದ್ದಾರೆ. ಅವರಿಲ್ಲದ ವಸ್ತು, ಜಾಗ, ಜೀವಿ ಯಾವುದೂ ಇಲ್ಲ. ಅವರು ಸರ್ವತ್ರ ತುಂಬಿದ್ದಾರೆ. ಅವರೇ ಪರಬ್ರಹ್ಮ. ಪೂರ್ಣ ಬ್ರಹ್ಮ. ಅವರೇ ನಮ್ಮ ಸದ್ಗುರು. ನಮ್ಮನ್ನು ಉದ್ಧರಿಸಿ ನಾವು ಹೋಗಬೇಕಾದ ಗಮ್ಯಕ್ಕೆ ಸೇರಿಸಬಲ್ಲವರು. ತಂದೆಯಾದವನು ದೇಹಕ್ಕೆ ಜನ್ಮ ಕೊಟ್ಟವನು ಅಷ್ಟೇ! ಆದರೆ, ಸದ್ಗುರುವು ನಮ್ಮನ್ನು ಜನನ ಮರಣ ಚಕ್ರದಿಂದ ಆಚೆಗೆ ತೆಗೆದುಕೊಂಡು ಹೋಗಬಲ್ಲವನು. ನಮ್ಮ ತಂದೆಗಿಂತ ಹೆಚ್ಚು ದಯೆ ಕರುಣೆಯುಳ್ಳವನು. ವಿಷಯದಲ್ಲಿ ಬಾಬಾ ಯಾವಾಗಲೂ ಹೇಳುತ್ತಿದ್ದರು, "ನನ್ನ ಭಕ್ತ ಎಲ್ಲೇ ಇರಲಿ, ಸಪ್ತ ಸಾಗರಗಳ ಆಚೆ ಇರಲಿ, ಅವನನ್ನು ಗುಬ್ಬಿಯ ಕಾಲಿಗೆ ದಾರ ಕಟ್ಟಿ ಎಳೆದು ತರುವಂತೆ ಎಳೆದು ಇಲ್ಲಿಗೆ ತರುತ್ತೇನೆ." ಅದು ಅವರ ಭಕ್ತರಲ್ಲಿ ಅವರಿಗಿದ್ದ ಪ್ರೀತಿ ವಿಶ್ವಾಸದ ಗುರುತು. ಬಾಬಾರಿಂದ ಹಾಗೆ ಎಳೆದು ತರಲ್ಪಟ್ಟ ಮೂರು ಗುಬ್ಬಿಗಳನ್ನು ನೋಡೋಣ.

ಲಕ್ಷ್ಮೀಚಂದರ ಕಥೆ

ಲಕ್ಷ್ಮೀಚಂದರು ಶ್ರೀ ವೆಂಕಟೇಶ್ವರ ಮುದ್ರಣಾಲಯದಲ್ಲಿ ಗುಮಾಸ್ತೆ (ಮುನ್ಶಿ) ಯಾಗಿ ಕೆಲಸಮಾಡಿದರು. ನಂತರ ರೈಲ್ವೆಯಲ್ಲಿಯೂ, ರಾಲಿ ಬಂಧುಗಳಲ್ಲಿಯೂ ಕೆಲಸ ಮಾಡಿದರು. ೧೯೧೦ರ ಕ್ರಿಸ್ಮಸ್ಗೆ ಮುಂಚೆ ಅವರು ಸಾಂಟಾಕ್ರೂಜ್ನಲ್ಲಿದ್ದಾಗ, ಕನಸೊಂದನ್ನು ಕಂಡರು. ಅದರಲ್ಲಿ ಗಡ್ಡಬಿಟ್ಟು, ಭಕ್ತರಿಂದ ಸುತ್ತುವರೆಯಲ್ಪಟ್ಟಿದ್ದ ವಯಸ್ಸಾದ ಮುದುಕನೊಬ್ಬನನ್ನು ನೋಡಿದರು. ಮನುಷ್ಯ ಉದ್ದ ತೋಳಿನ ಒಂದು ನಿಲುವಂಗಿ ತೊಟ್ಟು, ತಲೆಗೆ ಒಂದು ಬಿಳಿಯ ವಸ್ತ್ರವನ್ನು ಸುತ್ತಿ, ಅದರ ಗಂಟು ತನ್ನ ಎಡಗಡೆಗೆ ಬೀಳುವಂತೆ ಕಟ್ಟಿದ್ದ. ವಯಸ್ಸಿನ ಕಾರಣದಿಂದಾಗಿಯೋ ಏನೋ ಸ್ವಲ್ಪ ಬಗ್ಗಿ ನಡೆಯುತ್ತಿದ್ದ. ಲಕ್ಷ್ಮೀಚಂದರಿಗೆ ಅವನು ಯಾರು, ಎಲ್ಲಿಯವನು ಎಂಬುದು ಏನೂ ತಿಳಿಯಲಿಲ್ಲ. ಆದರೆ ಅವನ ಮೂರ್ತಿ ಮಾತ್ರ, ಅವರ ಮನಸ್ಸಿನಲ್ಲಿ ಧೃಢವಾಗಿ ನಿಂತುಹೋಯಿತು.

ಸ್ವಲ್ಪ ದಿನಗಳಾದಮೇಲೆ ಲಕ್ಷ್ಮೀಚಂದ್, ತಮ್ಮ ಸ್ನೇಹಿತರಾದ ದತ್ತಾತ್ರೇಯ ಮಂಜುನಾಥ ಬಿಜೂರರವರ ಮನೆಗೆ, ದಾಸಗಣು ಮಹಾರಾಜರ ಕೀರ್ತನೆ ಕೇಳಲು ಹೋದರು. ಅಲ್ಲಿ, ದಾಸಗಣು ತಮ್ಮ ಅಭ್ಯಾಸದಂತೆ, ಬಾಬಾರ ದೊಡ್ಡ ಚಿತ್ರಪಟವನ್ನಿಟ್ಟು, ಅದಕ್ಕೆ ಪೂಜೆ ಮಾಡಿ ಕೀರ್ತನೆ ಆರಂಭಿಸಿದರು. ಲಕ್ಷ್ಮೀಚಂದ್ಗೆ ಚಿತ್ರಪಟವನ್ನು ನೋಡಿ ಅತ್ಯಾಶ್ಚರ್ಯವಾಯಿತು. ಅವರಿಗೆ ಕನಸಿನಲ್ಲಿ ಕಂಡ ಮನುಷ್ಯ, ಮತ್ತು ಚಿತ್ರಪಟದಲ್ಲಿನ ಮನುಷ್ಯ ಒಬ್ಬರೇ, ಎಂದು ಖಚಿತವಾಯಿತು. ಅದನ್ನು ಕುರಿತು ವಿಚಾರಿಸಿದಾಗ, ಪಟದಲ್ಲಿನ ಮನುಷ್ಯ ಸಾಯಿಬಾಬಾ ಎಂದೂ, ಅವರು ಶಿರಡಿಯಲ್ಲಿರುತ್ತಾರೆಂದೂ ತಿಳಿಯಿತು. ಇದಕ್ಕೆ ಮುಂಚೆ ಚೋಳ್ಕರ್, ಪಿತಳೆ ಮುಂತಾದವರು ದಾಸಗಣೂರ ಕೀರ್ತನೆಗಳಿಂದ ಪ್ರಭಾವಿತರಾಗಿ, ಶಿರಡಿಗೆ ಹೋಗಿ ಬಾಬಾರ ದರ್ಶನಮಾಡಿಕೊಂಡಂತೆ ಲಕ್ಷ್ಮೀಚಂದರೂ ಕೀರ್ತನೆ ಕೇಳಿ, ಶಿರಡಿಗೆ ಹೋಗಿ ಬಾಬಾರ ದರ್ಶನ ಮಾಡಿಕೊಳ್ಳಬೇಕೆಂದು ನಿರ್ಧರಿಸಿಕೊಂಡರು.

ದೇವರ ಬಗ್ಗೆ ಸತ್ಸಂಕಲ್ಪವೊಂದನ್ನು ಮಾಡಿಕೊಂಡಾಗ, ಸಂಕಲ್ಪವನ್ನು ನಡೆಸಿಕೊಡುವುದು ದೇವರದೇ ಜವಾಬ್ದಾರಿ. ಅವನೇ ಅದಕ್ಕೆ ಬೇಕಾದ ಅನುಕೂಲಗಳನ್ನು ಏರ್ಪಡಿಸುತ್ತಾನೆ, ಎಂಬುದು ಅನೇಕ ಭಕ್ತರ ಅನುಭವ. ಇದು ಸರ್ವಕಾಲೀಕವಾದದ್ದು. ಲಕ್ಷ್ಮೀಚಂದ್ ಶಿರಡಿಗೆ ಹೋಗಲು ನಿರ್ಧರಿಸಿ, ಕೀರ್ತನೆ ಮುಗಿಸಿ ರಾತ್ರಿ ಮನೆಗೆ ಹೋದಾಗ, ಅವರಿಗೆ ಆಶ್ಚರ್ಯವೊಂದು ಕಾದಿತ್ತು. ಶಂಕರ ರಾವ್ ಎನ್ನುವ ಸ್ನೇಹಿತರೊಬ್ಬರು ಅವರ ಮನೆಗೆ ಬಂದು, ಲಕ್ಷ್ಮೀಚಂದರನ್ನು ಶಿರಡಿಗೆ ಬರಬಲ್ಲರೇ ಎಂದು ಕೇಳಿದರು. ಲಕ್ಷ್ಮೀಚಂದರ ಸಂತೋಷಾಶ್ಚರ್ಯಗಳಿಗೆ ಕೊನೆ ಮೊದಲೇ ಇಲ್ಲದೇ ಹೋಯಿತು. ತಮ್ಮ ಬಂಧುವಿನಿಂದ ಹದಿನೈದು ರೂಪಾಯಿ ಸಾಲ ಮಾಡಿ, ಶಂಕರ ರಾವ್ ಜೊತೆ ಶಿರಡಿಗೆ ಹೊರಟೇ ಬಿಟ್ಟರು.

ಇಬ್ಬರೂ ರೈಲು ಹತ್ತಿದಾಗ, ಅಲ್ಲಿ ಶಿರಡಿಗೆ ಹೊರಟಿದ್ದ ಅವರ ಅನೇಕ ಬಂಧುಗಳೂ ಸ್ನೇಹಿತರೂ ಕಂಡರು. ರೈಲು ಹೊರಟಮೇಲೆ ಎಲ್ಲರೂ ಸೇರಿ ಭಜನೆಗಳನ್ನು ಮಾಡಿದರು. ಲಕ್ಷ್ಮೀಚಂದರು ಬಾಬಾರ ಬಗ್ಗೆ ಅನೇಕರನ್ನು ವಿಚಾರಿಸಿದರು. ಪ್ರಯಾಣಿಕರಲ್ಲಿ ನಾಲ್ಕು ಜನ ಮುಸ್ಲಿಮರಿದ್ದರು. ಅವರು, “ಬಾಬಾ ಒಬ್ಬ ದೊಡ್ಡ ಔಲಿಯಾ. ಅನೇಕ ವರ್ಷಗಳಿಂದ ಶಿರಡಿಯಲ್ಲಿ ಇದ್ದಾರೆಎಂದು ಹೇಳಿದರು. ರೀತಿಯ ಮಾತುಕಥೆಗಳು ರೈಲು ಕೋಪರಗಾಂವ್ ಸೇರುವವರೆಗೂ ನಡೆಯಿತು. ಕೋಪರಗಾಂವ್ನಲ್ಲಿ ಇಳಿದು, ಬಾಬಾರಿಗೆ ಅರ್ಪಿಸಲು ಕೆಲವು ಸೀಬೆಹಣ್ಣುಗಳನ್ನು ಕೊಳ್ಳಬೇಕೆಂದುಕೊಂಡರು. ಆದರೆ, ಸುತ್ತಮುತ್ತಲಿನ ಪ್ರಕೃತಿ ಸೌಂದರ್ಯದಲ್ಲಿ ತಲ್ಲೀನರಾಗಿ, ಲಕ್ಷ್ಮೀಚಂದ್ ಹಣ್ಣಿನ ವಿಷಯ ಮರೆತೇಬಿಟ್ಟರು.

ಸ್ನೇಹಿತರಿಬ್ಬರೂ ಟಾಂಗಾ ಮಾಡಿಕೊಂಡು ಶಿರಡಿಗೆ ಹೊರಟರು. ದಾರಿಯಲ್ಲಿ, ತಾವು ಬಾಬಾಗೆ ಹಣ್ಣುಗಳನ್ನು ಕೊಳ್ಳಬೇಕು, ಎಂದುಕೊಂಡಿದ್ದು ನೆನಪಿಗೆ ಬಂತು. ಹಣ್ಣು ಕೊಳ್ಳಲಿಲ್ಲವೆಂದು ಖೇದವಾಯಿತು. ಅಷ್ಟರಲ್ಲಿ ತಲೆಯಮೇಲೆ ಬುಟ್ಟಿ ಹೊತ್ತುಕೊಂಡಿದ್ದ ಮುದುಕಿಯೊಬ್ಬಳು, ಟಾಂಗಾದ ಹಿಂದೆ ಓಡಿಬರುತ್ತಾ ಇದ್ದದ್ದು ಕಾಣಿಸಿತು. ಟಾಂಗಾ ನಿಲ್ಲಿಸಿ, ಆಕೆಯ ಬುಟ್ಟಿಯಲ್ಲಿದ್ದ ಹಣ್ಣುಗಳಲ್ಲಿ ಉತ್ತಮವಾದ ನಾಲ್ಕನ್ನು ಆರಿಸಿ ಹಣಕೊಟ್ಟರು. ಹೆಂಗಸು, " ಉಳಿದ ಹಣ್ಣುಗಳನ್ನೂ ನನ್ನ ಪರವಾಗಿ ಬಾಬಾರಿಗೆ ಅರ್ಪಿಸಿ" ಎಂದು ಹೇಳಿ ಬುಟ್ಟಿಯನ್ನು ಅವರಿಗೆ ಕೊಟ್ಟಳು. ಅದನ್ನು ಕೇಳಿದ ಲಕ್ಷ್ಮೀಚಂದರಿಗೆ ಆಶ್ಚರ್ಯವಾಯಿತು. ಬಹುಶಃ ಆಕೆ ತಾವು ಕನಸಿನಲ್ಲಿ ಕಂಡ ಮುದುಕನ ಬಂಧುವಿರಬೇಕು ಎಂದುಕೊಂಡರು. ಶಿರಡಿ ಸೇರಿ ಇಬ್ಬರೂ ಮಸೀದಿಯ ಬಳಿ ಟಾಂಗಾದಿಂದ ಇಳಿದರು. ಮಸೀದಿಯ ಮೇಲಿದ್ದ ಝಂಡಾಗಳನ್ನು ನೋಡಿ ಕೈಮುಗಿದು, ನಮಸ್ಕಾರಮಾಡಿ ತಮ್ಮ ಗೌರವವನ್ನು ತೋರಿಸಿದರು. ನಂತರ ಪೂಜಾ ಸಾಮಗ್ರಿಗಳನ್ನು ಖರೀದಿಸಿ, ಮಸೀದಿಯ ಒಳಗೆ ಹೋಗಿ ಬಾಬಾರನ್ನು ಕಂಡು, ಅತೀವ ಸಂತೋಷದಿಂದ ಬಾಬಾರ ಪೂಜೆಯನ್ನು ಮುಗಿಸಿದರು. ಆಗ ಬಾಬಾ ಹೇಳಿದರು, "ಚಾಣಾಕ್ಷ, ಭಜನೆ ಮಾಡುತ್ತೀಯೆ. ಮತ್ತೆ ಇತರರನ್ನು ಕೇಳುತ್ತೀಯಾ? ಬೇರೆಯವರನ್ನು ಕೇಳಬೇಕಾದರೂ ಏಕೆ? ನಾವು ನಮ್ಮ ಕಣ್ಣಿನಿಂದಲೇ ನೋಡಿ ತಿಳಿದುಕೊಳ್ಳಬೇಕು. ಕನಸು ಸುಳ್ಳಲ್ಲ, ತಿಳಿದುಕೋ. ಸಾಲ ಮಾಡಿ ಶಿರಡಿಗೆ ಬರಬೇಕಾದ ಅವಶ್ಯಕತೆಯೇನಿತ್ತು? ನಿನ್ನ ಆಸೆ ಪೂರಯಿಸಿತೇ?" ಲಕ್ಷ್ಮೀಚಂದ್ ಬಾಬಾರ ಸರ್ವಜ್ಞತೆ ಕಂಡು ಆಶ್ಚರ್ಯ ಚಕಿತರಾದರು. ಅವರಿಗೆ ದಾರಿಯಲ್ಲಿ ನಡೆದದ್ದೆಲ್ಲ ಬಾಬಾರಿಗೆ ಹೇಗೆ ತಿಳಿಯಿತು ಎಂದು ಅರ್ಥವಾಗಲಿಲ್ಲ. ಭಕ್ತರು ಸಾಲಮಾಡಿಕೊಂಡು ಶಿರಡಿಗೆ ಬರುವುದು ಬಾಬಾರು ಇಷ್ಟಪಡುತ್ತಿರಲಿಲ್ಲ. ತಮ್ಮನ್ನು ಕಾಣಲು ಬರುವ ಭಕ್ತರು ಸಾಲಗಾರರಾಗಬಾರದು ಎಂಬುದು ಅವರ ಇಚ್ಛೆ.

ಸಾಂಜಾ

ಮಧ್ಯಾಹ್ನದ ಆರತಿಯಾದ ಮೇಲೆ ಎಲ್ಲರೂ ಪ್ರಸಾದಕ್ಕಾಗಿ ಕುಳಿತರು. ಭಕ್ತರೊಬ್ಬರು ಸಾಂಜಾ ಪ್ರಸಾದವಾಗಿ ಮಾಡಿ ತಂದಿದ್ದು, ಅಂದು ಎಲ್ಲರಿಗೂ ಹಂಚಿದರು. ಲಕ್ಷ್ಮೀಚಂದರಿಗೆ ಸಾಂಜಾ ಬಹಳ ಇಷ್ಟವಾಯಿತು. ಮರುದಿನವೂ ಸಾಂಜಾಗಾಗಿ ಎದುರುನೋಡಿದರು. ಆದರೆ ಅವರಿಗೆ ಸಾಂಜಾ ಕಾಣದೆ ನಿರಾಸೆಯಾಯಿತು. ಸಾಂಜಾ ಮತ್ತೆ ಯಾವಾಗ ಬರುವುದೋ ಎಂದು ಕಾತರರಾಗಿದ್ದರು. ಅದರ ಮರುದಿನ, ಬಾಪೂ ಸಾಹೇಬ್ ಜೋಗ್, “ಇಂದು ನೈವೇದ್ಯಕ್ಕೆ ಏನು ತರಲಿಎಂದು ಕೇಳಿದಾಗ ಬಾಬಾ ಸಾಂಜಾ ತರಲು ಹೇಳಿದರು. ಎರಡು ದೊಡ್ಡ ಪಾತ್ರೆಗಳಲ್ಲಿ ಸಾಂಜಾ ಮಾಡಿ ತಂದರು. ಮಧ್ಯಾನ್ಹ ಆರತಿಯವೇಳೆಗೆ, ಲಕ್ಷ್ಮೀಚಂದರಿಗೆ ಬಹಳ ಹಸಿವೆಯಾಗಿತ್ತು. ಆಗ ಆತ ಬೆನ್ನು ನೋವಿನಿಂದಲೂ ನರಳುತ್ತಿದ್ದರು. ಪ್ರಸಾದವನ್ನು ಹಂಚುವಾಗ ಬಾಬಾ ಲಕ್ಷ್ಮೀಚಂದರನ್ನು ಕುರಿತು, "ನಿನಗೆ ಹಸಿವೆಯಾಗಿದೆಯಲ್ಲವೇ? ಸಾಂಜಾ ತಿನ್ನು. ನಿನ್ನ ಬೆನ್ನು ನೋವಿಗೆ ಔಷಧ ತೆಗೆದುಕೋ" ಎಂದರು. ಮತ್ತೊಮ್ಮೆ ಲಕ್ಷ್ಮೀಚಂದ್ ಮೂಕರಾಗಿಹೋದರು. ತನ್ನ ಮನಸ್ಸಿನಲ್ಲಿ ನಡೆಯುವುದೆಲ್ಲ ಬಾಬಾರಿಗೆ ಹೇಗೆ ತಿಳಿಯುತ್ತದೆ ಎಂದು ಆಶ್ಚರ್ಯಪಟ್ಟರು.

ಕೆಟ್ಟ ದೃಷ್ಟಿ

ಅಂದು ರಾತ್ರಿ, ಲಕ್ಷ್ಮೀಚಂದ್ ಚಾವಡಿ ಉತ್ಸವವನ್ನು ನೋಡಿದರು. ಆಗ ಬಾಬಾ ಸಣ್ಣಗೆ ಕೆಮ್ಮುತ್ತಿದ್ದರು. ಅದನ್ನು ನೋಡಿದ ಲಕ್ಷ್ಮೀಚಂದ್, ಬಾಬಾರಿಗೆ ಯಾರದೋ ಕೆಟ್ಟ ದೃಷ್ಟಿ ತಾಕಿರಬೇಕು ಎಂದುಕೊಂಡರು. ಮರುದಿನ ಅವರು ಬಾಬಾರನ್ನು ಕಾಣಲು ಹೋದಾಗ, ಬಾಬಾ ಶ್ಯಾಮಾರೊಡನೆ, "ನನಗೆ ನಿನ್ನೆ ಕೆಮ್ಮು ಬರುತ್ತಿತ್ತು. ಯಾರೋ ನನ್ನ ಮೇಲೆ ಕೆಟ್ಟ ದೃಷ್ಟಿ ಹಾಕಿರಬೇಕು. ಅದಕ್ಕೇ ನಾನು ಒದ್ದಾಡುತ್ತಿದ್ದೇನೆ" ಎಂದರು. ಮೂರನೆಯ ಸಲ ಲಕ್ಷ್ಮೀಚಂದರಿಗೆ ಆಘಾತವಾದಂತಾಯಿತು. ಅವರಿಗೆ ಬಾಬಾ ತಮ್ಮ ಯೋಚನೆಗಳನ್ನೆಲ್ಲಾ ಹೇಗೆ ತಿಳಿಯುತ್ತಾರೆ ಎಂಬುದು ಅರ್ಥವಾಗಲೇ ಇಲ್ಲ.

ನಿಧಾನವಾಗಿ ಅವರು ಬಾಬಾರ ಸರ್ವಜ್ಞತ್ವ, ಅವರು ಭಕ್ತರಲ್ಲಿ ತೋರಿಸುವ ದಯೆ, ಕಾರುಣ್ಯಗಳನ್ನು ಅರಿತುಕೊಂಡರು. ಬಾಬಾರ ಚರಣಗಳಲ್ಲಿ ಶಿರಸ್ಸನ್ನಿಟ್ಟು, "ಬಾಬಾ ನಿಮ್ಮನ್ನು ಬಿಟ್ಟರೆ ನನಗೆ ಬೇರೆ ಯಾರೂ ಇಲ್ಲ. ಯಾವ ದೇವರೂ ಇಲ್ಲ. ನೀವೇ ನನಗೆ ಎಲ್ಲಾ. ನನ್ನನ್ನು ಅನುಗ್ರಹಿಸಿ ಯಾವಾಗಲೂ ಕಾಪಾಡುತ್ತಿರಿ. ನಿಮ್ಮ ನಾಮ ಸ್ಮರಣೆ, ನಿಮ್ಮ ಭಜನೆ ಯಾವಾಗಲೂ ನನ್ನಲ್ಲಿ ನಡೆಯುತ್ತಿರುವಹಾಗೆ, ನನ್ನ ಮನಸ್ಸು ನಿಮ್ಮ ಪಾದಾರವಿಂದಗಳಲ್ಲಿ ಯಾವಾಗಲೂ ನೆಲೆಯಾಗಿರುವ ಹಾಗೆ ಅನುಗ್ರಹಿಸಿ" ಎಂದು ಬೇಡಿಕೊಂಡರು. ಬಾಬಾ ಅಶೀರ್ವಾದ ಪಡೆದು, ಊದಿಪ್ರಸಾದ ತೆಗೆದುಕೊಂಡು ತಮ್ಮ ಊರಿಗೆ ಹಿಂತಿರುಗಿದರು. ಅಂದಿನಿಂದ ಅವರು ಬಾಬಾರ ಅವಿಚ್ಛಿನ್ನ ಭಕ್ತರಾಗಿ, ಶಿರಡಿಗೆ ಹೋಗುವವರೊಡನೆ ತಪ್ಪದೇ ಬಾಬಾರಿಗೆ ಹಾರಗಳು, ಕರ್ಪೂರ, ದಕ್ಷಿಣೆಗಳನ್ನು ಕಳುಹಿಸುತ್ತಿದ್ದರು.

ಬರ್ಹಾಂಪುರದ ಮಹಿಳೆಯ ಕಥೆ

ಇನ್ನೊಂದು ಗುಬ್ಬಿಯನ್ನು ಬಾಬಾ ಶಿರಡಿಗೆ ಹೇಗೆ ಎಳೆದು ತಂದರೋ ನೋಡೋಣ. ಒಂದು ರಾತ್ರಿ, ಬರ್ಹಾಂಪುರದ ಚಿಡಿಬಾಯಿಗೆ ಕನಸಿನಲ್ಲಿ ಬಾಬಾ ಕಾಣಿಸಿಕೊಂಡು, ಕಿಚಡಿ ಕೇಳಿದ ಹಾಗಾಯಿತು. ಆಕೆ ಎದ್ದು, ಸುತ್ತಲೂ ನೋಡಿದಾಗ ಯಾರೂ ಕಾಣಲಿಲ್ಲ. ಗಂಡನನ್ನು ಎಬ್ಬಿಸಿ, ಆತನಿಗೂ ಕನಸಿನ ವಿಷಯ ಹೇಳಿದರು. ಆಕೆಯ ಗಂಡ ಅಂಚೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು. ಕನಸಾದ ಕೆಲವು ದಿನಗಳಿಗೆ, ಆತನಿಗೆ ಅಂಕೋಲಾಗೆ ವರ್ಗವಾಯಿತು. ಅಂಕೋಲಾಗೆ ಹೋದ ಮೇಲೆ, ಭಕ್ತರಾದ ಗಂಡಹೆಂಡರಿಬ್ಬರೂ ಶಿರಡಿಗೆ ಹೋಗಿ ಬಾಬಾ ದರ್ಶನ ಮಾಡಿಕೊಂಡು ಬರಲು ನಿಶ್ಚಯಿಸಿ, ಅದರಂತೆ ಶಿರಡಿಗೆ ಬಂದು ಎರಡು ತಿಂಗಳಿದ್ದರು. ದಿನವೂ ಗಂಡ ಹೆಂಡತಿ ಇಬ್ಬರೂ ಮಸೀದಿಗೆ ಹೋಗಿ, ಬಾಬಾರ ದರ್ಶನ ಸೇವೆ ಮಾಡುತ್ತಿದ್ದರು. ಅವರು ಶಿರಡಿಗೆ ಬಂದಿದ್ದು ಮುಖ್ಯವಾಗಿ, ಬಾಬಾರಿಗೆ ಕಿಚಡಿ ಮಾಡಿ ಸಮರ್ಪಿಸಬೇಕೆಂದು. ಹದಿನೈದು ದಿನಗಳಾದರೂ ಅದಕ್ಕೆ ಅವಕಾಶವೇ ಸಿಕ್ಕಲಿಲ್ಲ. ಇದರಿಂದ ಆಕೆಗೆ ತುಂಬಾ ಬೇಸರವಾಯಿತು. ಹದಿನೈದನೆಯ ದಿನ ಕಿಚಡಿ ಮಾಡಿ, ಮಸೀದಿಗೆ ತೆಗೆದುಕೊಂಡು ಹೋದರು. ಆಕೆ ಹೋಗುವುದು ಸ್ವಲ್ಪ ತಡವಾಗಿ, ಹೋಗುವ ವೇಳೆಗೆ ಎಲ್ಲರೂ ಊಟಕ್ಕೆ ಕುಳಿತಿದ್ದರು. ತೆರೆ ಎಳೆಯಲ್ಪಟ್ಟಿತ್ತು. ಅಲ್ಲಿನ ನಿಯಮದಂತೆ, ಒಂದುಸಲ ತೆರೆ ಎಳೆದಮೇಲೆ ಬಾಬಾ ಊಟವಾಗುವವರೆಗೂ, ತೆರೆಸರಿಸಿ ಯಾರೂ ಒಳಕ್ಕೆ ಹೋಗುವಹಾಗಿಲ್ಲ. ಅದನ್ನು ತಿಳಿದ ಆಕೆಗೆ ನಿರಾಸೆಯಾಯಿತು. ಆದರೂ, ಬಾಬಾರಿಗೆ ಕಿಚಡಿ ಅರ್ಪಿಸಬೇಕೆಂಬ ಹಂಬಲದಿಂದ ಬಂದಿದ್ದ ಆಕೆ, ಧೈರ್ಯದಿಂದ ಒಳಕ್ಕೆ ಹೋಗಿ, ಬಾಬಾರ ತಟ್ಟೆಯಲ್ಲಿ ಕಿಚಡಿ ಬಡಿಸಿದರು. ಅದಕ್ಕಾಗಿಯೇ ಕಾಯುತ್ತಿದ್ದರೇನೋ ಎಂಬಂತೆ, ಬಾಬಾ ಅದನ್ನು ಬಹಳ ಆಸೆಯಿಂದ ಚಪ್ಪರಿಸುತ್ತಾ ತಿನ್ನಲು ಆರಂಭಿಸಿದರು. ಅದನ್ನು ಕಂಡ ಅಲ್ಲಿದ್ದವರೆಲ್ಲಾ ಆಶ್ಚರ್ಯಪಟ್ಟರು. ಮತ್ತೊಮ್ಮೆ ಬಾಬಾ, ತಾವು ಭಕ್ತರನ್ನು ಯಾವ ರೀತಿ ಪ್ರೀತಿಯಿಂದ ಕಾಣುತ್ತಾರೆ, ಎಂಬುದನ್ನು ನಿರೂಪಿಸಿದರು.

ಮೇಘಾ ಕಥೆ

ಮೂರನೆಯ ಗುಬ್ಬಿ ಮೇಘಾ. ಈತ ರಾವ್ ಬಹಾದೂರ್ ಹೆಚ್. ವಿ. ಸಾಠೆಯವರ ಬ್ರಾಹ್ಮಣ ಅಡಿಗೆ ಭಟ್ಟ. ಆತನೊಬ್ಬ ಸಾದಾ ಸೀದಾ ಮನುಷ್ಯ. ವಿದ್ಯೆಯ ಗಂಧವಿಲ್ಲದವ. ಶಿವ ಭಕ್ತ. ಸದಾ ಶಿವಪಂಚಾಕ್ಷರಿ - ಓಂ ನಮಃ ಶಿವಾಯ - ಎಂದು ಶಿವ ಸ್ಮರಣೆ ಮಾಡುತ್ತಿದ್ದ. ಆತನಿಗೆ ಸಂಧ್ಯಾವಂದನೆ, ಗಾಯತ್ರಿ ಮಂತ್ರೋಚ್ಚಾರ ಮುಂತಾದುವೇನೂ ತಿಳಿಯದು. ಶಿವ ಪಂಚಾಕ್ಷರಿಯನ್ನು ಬಿಟ್ಟರೆ ಇನ್ನೇನೂ ತಿಳಿಯದು. ಸಾಠೆ ಮನುಷ್ಯನಲ್ಲಿ ಪ್ರೀತಿ ತೋರಿಸಿ ಆತನಿಗೆ ಕಷ್ಟಪಟ್ಟು ಸಂಧ್ಯಾವಂದನೆ, ಗಾಯತ್ರಿಮಂತ್ರಗಳನ್ನು ಕಲಿಸಿದ್ದರು. ಸಾಠೆ ಮೇಘಾಗೆ, “ಶಿವ ಶಿರಡಿಯಲ್ಲಿ ಅವತರಿಸಿದ್ದಾನೆ. ಹೋಗಿ ಬಾಬಾರನ್ನು ಕಾಣುಎಂದು ಹೇಳಿದರು. ಅವರ ಮಾತಿನಂತೆ ಹೊರಟ ಆತನಿಗೆ, ಬರೂಚ್ ರೈಲ್ವೆ ನಿಲ್ದಾಣದಲ್ಲಿ, ಬಾಬಾ ಒಬ್ಬ ಮುಸ್ಲಿಮ್ ಎಂದು ತಿಳಿಯಿತು. ಆಚಾರವಂತ ಬ್ರಾಹ್ಮಣನಾದ ತಾನು ಮುಸ್ಲಿಮನಿಗೆ ತಲೆಬಾಗುವುದೇ, ಎಂಬ ಯೋಚನೆಯಿಂದ ತಳಮಳಗೊಂಡು ಹಿಂತಿರುಗಿ, ಸಾಠೆಯವರನ್ನು ತನ್ನನ್ನು ಶಿರಡಿಗೆ ಕಳುಹಿಸ ಬಾರದೆಂದು ಬೇಡಿಕೊಂಡರು. ಸಾಠೆ, ಅವರನ್ನು ಕಳುಹಿಸಲೇಬೇಕೆಂಬ ನಿರ್ಧಾರದಿಂದ, ತನ್ನ ಮಾವ ಗಣೇಶ ದಾಮೋದರರಿಗೆ (ದಾದಾ ಕೇಲ್ಕರ್) ಒಂದು ಪರಿಚಯ ಪತ್ರ ಬರೆದು, ಮೇಘಾನನ್ನು ಬಾಬಾರ ಬಳಿ ಕರೆದುಕೊಂಡು ಹೋಗುವಂತೆ ಕೇಳಿಕೊಂಡರು. ಮೇಘಾ ಪತ್ರದೊಡನೆ ಶಿರಡಿ ಸೇರಿ ಮಸೀದಿಗೆ ಹೋದರು. ಆತ ಇನ್ನೂ ಮಸೀದಿಯೊಳಕ್ಕೆ ಕಾಲಿಡುತ್ತಿದಂತೆಯೇ ಬಾಬಾ ಅಲ್ಲಿಗೆ ಬಂದು, " ನೀಚನನ್ನು ಆಚೆಗೆ ಹೊರದೂಡಿ. ನೀನು ಉನ್ನತಕುಲದ ಬ್ರಾಹ್ಮಣ. ನಾನು ನೀಚಕುಲದ ಮುಸ್ಲಿಮ್. ಇಲ್ಲಿಗೆ ಬಂದರೆ ನಿನ್ನ ಜಾತಿ ಕೆಡುತ್ತದೆ. ಹೋಗು. ಹೊರಟು ಹೋಗು" ಎಂದು ಘರ್ಜಿಸಿದರು., ಬಾಬಾ, ಅವರನ್ನು ಮಸೀದಿಯೊಳಕ್ಕೆ ಬರಲು ಬಿಡಲಿಲ್ಲ. ಮೇಘಾ, ತನ್ನ ಮನಸ್ಸಿನಲ್ಲಿ ಎದ್ದ ಆಲೋಚನೆಗಳು ಬಾಬಾಗೆ ಹೇಗೆ ತಿಳಿಯಿತು, ಎಂದು ಬೆರಗಾದರು. ಶಿರಡಿಯಲ್ಲೇ ಕೆಲವು ದಿನಗಳಿದ್ದರೂ, ಆತನ ಆಂದೋಳನ ಕಡಮೆಯಾಗಲಿಲ್ಲ. ಮನೆಗೆ ಹಿಂತಿರುಗಿ, ಮತ್ತೆ ಅಲ್ಲಿಂದ ನಾಸಿಕಕ್ಕೆ ಹೋಗಿ, ಅಲ್ಲಿ ಒಂದೂವರೆ ವರ್ಷವಿದ್ದರು. ತ್ರಯಂಬಕೇಶ್ವರದಿಂದ ಶಿರಡಿಗೆ ಬಂದರು. ಸಲ, ದಾದಾಕೇಳ್ಕರ್ ಮತ್ತಿತರರ ಮಧ್ಯಸ್ತಿಕೆಯಿಂದ, ಮೇಘಾ ಮಸೀದಿಯೊಳಕ್ಕೆ ಬರಲು ಬಾಬಾ ಒಪ್ಪಿದರು. ಹೊರಗೆ ತೋರುವಂತೆ ಯಾವ ಚಮತ್ಕಾರವನ್ನೂ ಮಾಡದೆ, ಮೇಘಾ ಮನಸ್ಸಿನಮೇಲೆ ಬಾಬಾ ಪರಿಣಾಮ ಬೀರಿದರು. ಎರಡನೆಯ ಸಲ ಶಿರಡಿಗೆ ಬಂದಾಗ, ಮೇಘಾ ಬಹಳ ಬದಲಾಯಿಸಿದ್ದರು. ಬದಲಾವಣೆಯಿಂದ ಅವರು ಬಾಬಾರನ್ನು ಶಿವನಂತೆ ನೋಡಲು ಉಪಕ್ರಮಿಸಿದರು. ಶಿವನಿಗೆ ಬಿಲ್ವ ಪತ್ರೆ ಎಂದರೆ ಬಹಳ ಪ್ರೀತಿ. ಮೇಘಾ ಮೈಲಿಗಟ್ಟಳೆ ನಡೆದು ಬಿಲ್ವ ಪತ್ರೆ ಶೇಖರಿಸಿ ತಂದು ತನ್ನ ಶಿವ ಬಾಬಾರನ್ನು ಪೂಜಿಸುತ್ತಿದ್ದರು. ಶಿರಡಿಯಲ್ಲಿ ಮೇಘಾ ತಮ್ಮ ನಿಯಮದಂತೆ ದಿನವೂ ಶಿರಡಿಯಲ್ಲಿನ ದೇವಸ್ಥಾನಗಳ ಪೂಜೆಯನ್ನು ಮುಗಿಸಿ, ನಂತರ ಮಸೀದಿಗೆ ಬಂದು, ಬಾಬಾರ ಗದ್ದಿಗೆಗೆ ಪೂಜೆಮಾಡಿ, ಬಾಬಾರ ಪಾದಗಳನ್ನು ಮೃದುವಾಗಿ ನೀವಿ, ಕಾಲು ತೊಳೆದು, ತೀರ್ಥವನ್ನು ಸೇವಿಸುತ್ತಿದ್ದರು.

ಒಂದುಸಲ, ಮೇಘಾ ಖಂಡೋಬಾ ದೇವಾಲಯಕ್ಕೆ ಹೋದಾಗ ಬಾಗಿಲು ಇನ್ನೂ ತೆರೆದಿರಲಿಲ್ಲ. ಅಂದು ಖಂಡೋಬಾ ಪೂಜೆ ಮಾಡದೆ, ಮೇಘಾ ಮಸೀದಿಗೆ ಹೋದರು. ಅಲ್ಲಿ ಬಾಬಾ, "ಖಂಡೋಬಾ ಪೂಜೆ ಮಾಡಿ ಬಾ" ಎಂದರು. ದೇವಸ್ಥಾನದ ಬಾಗಿಲು ಇನ್ನೂ ತೆರೆದಿರಲಿಲ್ಲವೆಂದು ಮೇಘಾ ಹೇಳಿದ್ದಕ್ಕೆ ಬಾಬಾ, "ಈಗ ತೆರೆದಿದೆ. ಹೋಗಿ ಪೂಜೆ ಮಾಡಿಕೊಂಡು ಬಾ" ಎಂದರು. ಹೋಗಿ ನೋಡಿದರೆ ಬಾಗಿಲು ತೆರೆದಿತ್ತು. ಆಶ್ಚರ್ಯಪಟ್ಟ ಮೇಘಾ, ಖಂಡೋಬಾ ಪೂಜೆ ಮುಗಿಸಿ ಮಸೀದಿಗೆ ಬಂದು ಬಾಬಾರ ಪೂಜೆ ಮಾಡಿದರು.

ಗಂಗಾಭಿಷೇಕ

ಶಿವ ಅಭಿಷೇಕ ಪ್ರಿಯನೆಂದೂ, ವಿಷ್ಣು ಅಲಂಕಾರ ಪ್ರಿಯನೆಂದೂ ಹೇಳುತ್ತಾರೆ. ಶಿವ ಭಕ್ತರು, ಕ್ರಮಬದ್ಧವಾಗಿ ಶಿವನಿಗೆ ರುದ್ರಾಭಿಷೇಕ ಮಾಡುತ್ತಾರೆ. ಶಿವನ ಪರಮ ಭಕ್ತರಾದ ಮೇಘಾ, ಒಂದುಸಲ, ತನ್ನ ಶಿವನಾದ ಬಾಬಾರಿಗೆ ಗಂಗಾಭಿಷೇಕ ಮಾಡಬೇಕೆಂದು ಯೋಚಿಸಿದರು. ಮೊದಲು ಗಂಧ ಹಚ್ಚಿ ಆಮೇಲೆ ಅಭಿಷೇಕ ಮಾಡುವುದು ರೀತಿ. ಆದರೆ ಅದಕ್ಕೆ ಬಾಬಾ ಒಪ್ಪಿಕೊಳ್ಳಲಿಲ್ಲ. ಮೇಲಿಂದಮೇಲೆ ಒತ್ತಾಯಮಾಡಿದ್ದಕ್ಕೆ ಕೊನೆಗೆ ಒಪ್ಪಿಕೊಂಡರು. ಅದರಿಂದ ಸಂತೋಷಗೊಂಡ ಮೇಘಾ ಸುಮಾರು ೨೪ ಮೈಲಿ ನಡೆದು, ಗೋಮತಿ ನದಿಗೆ ಹೋಗಿ ಅಲ್ಲಿಂದ ನೀರು ತಂದರು. ಎಲ್ಲವನ್ನೂ ಅಣಿಮಾಡಿಕೊಂಡು, ಬಾಬಾರನ್ನು ಅಭಿಷೇಕಕ್ಕಾಗಿ ಬರುವಂತೆ ಕೇಳಿಕೊಂಡರು. ತಾನು ಫಕೀರನೆಂದೂ, ತನಗೂ ಗಂಗಾಭಿಷೇಕಕ್ಕೂ ಯಾವ ಸಂಬಂಧ ಇಲ್ಲವೆಂದು ಹೇಳಿದರೂ ಕೇಳದೆ, ಮೇಘಾ ಬಲವಂತ ಮಾಡಿದರು. ಆಗ ಬಾಬಾ, ಶಿರಸ್ಸೇ ಶರೀರಕ್ಕೆ ಪ್ರಧಾನ ಅಂಗ, ಆದ್ದರಿಂದ ತನ್ನ ತಲೆಯಮೇಲೆ ಮಾತ್ರ ನೀರು ಸುರಿಯಬೇಕೆಂದು ಹೇಳಿದರು. ಅದಕ್ಕೆ ಒಪ್ಪಿ, ಮೇಘಾ ಬಾಬಾ ಕುಳಿತಮೇಲೆ, ಮಂತ್ರಗಳನ್ನು ಹೇಳುತ್ತಾ, ತಲೆಯ ಮೇಲೆ ನೀರು ಹಾಕಲು ಆರಂಭಿಸಿದರು. ಅಭಿಷೇಕ ಮಾಡುತ್ತ ಮಾಡುತ್ತಾ ಪರವಶರಾಗಿ ಮೇಘಾ, ಹರಗಂಗೆ ಹರಗಂಗೆ ಎನ್ನುತ್ತಾ ಬಿಂದಿಗೆಯಲ್ಲಿದ್ದ ನೀರನ್ನೆಲ್ಲಾ ಬಾಬಾರ ಮೈಮೇಲೆ ಸುರಿದರು. ಸಂತೋಷದ ಪರಮಾವಧಿಯಲ್ಲಿದ್ದ ಮೇಘಾ ಬಿಂದಿಗೆ ಕೆಳಗಿಟ್ಟು ನೋಡಿದರೆ, ಬಾಬಾರ ತಲೆ ಮಾತ್ರ ನೆನೆದಿತ್ತೇ ಹೊರತು ಬೇರೆ ಕಡೆ ನೀರಿನ ಹನಿ ಕೂಡಾ ಕಾಣಲಿಲ್ಲ. ಮೇಘಾ ಆಶ್ಚರ್ಯಚಕಿತರಾಗಿ ಹೋದರು.

ತ್ರಿಶೂಲ ಮತ್ತು ಲಿಂಗ

ಮೇಘಾ ಮನುಷ್ಯ ರೂಪದಲ್ಲಿ ಬಾಬಾರನ್ನು ಮಸೀದಿಯಲ್ಲಿ ಪೂಜಿಸುತ್ತಿದ್ದರು. ನಾನಾ ಸಾಹೇಬ್ ಚಾಂದೋರ್ಕರರು ಬಾಬಾರ ಒಂದು ಚಿತ್ರಪಟವನ್ನು ಅವರಿಗೆ ಕೊಟ್ಟಿದ್ದರು. ವಾಡಾದಲ್ಲಿ ಚಿತ್ರಪಟವಿಟ್ಟು ಪೂಜಿಸುತ್ತಿದ್ದರು. ರೀತಿಯಲ್ಲಿ ಅವರು ಒಂದು ವರ್ಷ ಸತತವಾಗಿ ತಪ್ಪದೇ ಪ್ರತಿದಿನವೂ, ಎರಡೂ ಕಡೆ ಪೂಜೆಗಳನ್ನು ಮಾಡುತ್ತಿದ್ದರು. ಇದರಿಂದ ಸಂತುಷ್ಟರಾದ ಬಾಬಾ, ತಮ್ಮ ಸಂತಸವನ್ನು ತೋರಿಸಲು ಒಂದು ದಿನ ಬೆಳಗಿನ ಜಾವದಲ್ಲಿ ಅವರಿಗೆ, ಕನಸಿನಲ್ಲೋ ಎಂಬಂತೆ ಹಾಸಿಗೆಯ ಹತ್ತಿರ ಕಾಣಿಸಿಕೊಂಡರು. ಆಗ ಮೇಘಾ, ಇನ್ನೂ ಕಣ್ಣು ಮುಚ್ಚಿ ಹಾಸಿಗೆಯ ಮೇಲೇ ಇದ್ದರು. ಅವರಿಗೆ ಬಾಬಾರ ರೂಪ ಕಾಣಿಸಿತು. ಬಾಬಾ ಹಾಸಿಗೆಯಮೇಲೆ ಅಕ್ಷತೆ ಚೆಲ್ಲಿ, ತ್ರಿಶೂಲ ಬರೆ ಎಂದು ಹೇಳಿ ಅದೃಶ್ಯರಾದರು. ಅವರ ಮಾತು ಕೇಳಿ ಮೇಘಾ ಎದ್ದು ನೋಡಿದರೆ, ಅಲ್ಲಿ ಯಾರೂ ಕಾಣಿಸಲಿಲ್ಲ. ಬಾಬಾ ಬಂದಿದ್ದಕ್ಕೆ ಗುರುತಾಗಿ, ಹಾಸಿಗೆಯ ಮೇಲೆ ಅಕ್ಷತೆ ಕಾಳುಗಳು ಕಾಣಿಸಿದವು. ಅವರು ಬಾಬಾರ ಬಳಿಗೆ ಹೋಗಿ, ತನಗೆ ಕಂಡ ನೋಟವನ್ನು ಕುರಿತು ಬಾಬಾಗೆ ಹೇಳಿ, ತ್ರಿಶೂಲವನ್ನು ಬರೆಯಲು ಅಪ್ಪಣೆ ಬೇಡಿದರು. ಬಾಬಾ ಸ್ವಲ್ಪ ಅಸಮಾಧಾನ ತೋರುವಂತೆ, "ತ್ರಿಶೂಲವನ್ನು ಬರೆ ಎಂದು ಹೇಳಿದ್ದು ಕೇಳಿಸಲಿಲ್ಲವೇನು? ಅದು ಕಲ್ಪನಾಚಿತ್ರವಲ್ಲ. ನನ್ನ ಆಜ್ಞೆ. ನನ್ನ ಮಾತುಗಳು ಯಾವಾಗಲೂ ಅರ್ಥಪೂರ್ಣವಾದವು. ಬರೀ ಪೊಳ್ಳಲ್ಲ" ಎಂದರು. ಅದಕ್ಕೆ ಮೇಘಾ, "ನೀವು ನನ್ನನ್ನು ಎಬ್ಬಿಸಿದರೇನೋ ಎಂದುಕೊಂಡೆ. ಅದರೆ ಬಾಗಿಲ ಚಿಲಕ ಹಾಕಿತ್ತು. ಅದರಿಂದ ಕನಸೇನೋ ಎಂದು ಅನುಮಾನಿಸಿದೆ" ಎಂದರು. ಅದಕ್ಕೆ ಬಾಬಾ, "ನನಗೆ ಒಳಕ್ಕೆ ಬರಲು ಬಾಗಿಲು ಬೇಕಾಗಿಲ್ಲ. ನನಗೆ ರೂಪವಿಲ್ಲ. ಎಲ್ಲೆಲ್ಲಿಯೂ ಇದ್ದೇನೆ. ಸೂತ್ರಧಾರನಂತೆ, ನನ್ನನ್ನು ನಂಬಿ ನನ್ನ ಬಳಿಗೆ ಬಂದವರನ್ನು, ನನಗೆ ಬೇಕಾದ ಹಾಗೆ ನಡೆಸುತ್ತೇನೆ" ಎಂದರು.

ಮೇಘಾ ವಾಡಾಕ್ಕೆ ಹಿಂತಿರುಗಿ ಬಾಬಾರ ಚಿತ್ರಪಟದ ಪಕ್ಕದಲ್ಲಿ, ತ್ರಿಶೂಲವೊಂದನ್ನು ಬರೆದರು. ಮಾರನೆಯ ದಿನ, ಪೂನಾದಿಂದ ಬಂದ ಭಕ್ತನೊಬ್ಬ ಬಾಬಾರಿಗೆ ನಮಸ್ಕರಿಸಿ, ಶಿವಲಿಂಗವೊಂದನ್ನು ಅರ್ಪಿಸಿದ. ಅದೇ ವೇಳೆಗೆ ಮೇಘಾ ಮಸೀದಿಯೊಳಕ್ಕೆ ಬಂದರು. ಬಾಬಾ, "ನೋಡು. ಶಿವ ಬಂದಿದ್ದಾನೆ. ತೆಗೆದುಕೋ. ಇವನನ್ನು ಕಾಪಾಡು" ಎಂದು, ಶಿವಲಿಂಗವನ್ನು ಮೇಘಾಗೆ ಕೊಟ್ಟರು. ತ್ರಿಶೂಲವನ್ನು ಹಿಂಬಾಲಿಸಿ ಬಂದ ಶಿವಲಿಂಗವನ್ನು ಕಂಡ ಮೇಘಾಗೆ, ಅತ್ಯಂತ ಆಶ್ಚರ್ಯವಾಯಿತು.

ವಾಡಾದಲ್ಲಿ ಕಾಕಾ ಸಾಹೇಬ್ ದೀಕ್ಷಿತರು ಸ್ನಾನಮಾಡಿ, ಸಾಯಿ ನಾಮೋಚ್ಚರಣೆ ಮಾಡುತ್ತಾ ತಲೆ ಒರೆಸಿಕೊಳ್ಳುತ್ತಿದ್ದರು. ಆಗ ಅವರಿಗೆ ಕಣ್ಣು ಮುಂದೆ ಶಿವಲಿಂಗವೊಂದು ಕಂಡಂತಾಯಿತು. ಅವರಿಗೆ ಅದು ಸೋಜಿಗವಾಗಿ ಕಂಡಿತು. ಸ್ವಲ್ಪಹೊತ್ತಿನಲ್ಲೇ, ಮೇಘಾ ಬಾಬಾ ತನಗೆ ದಯಪಾಲಿಸಿದ ಶಿವಲಿಂಗವನ್ನು ತಂದು ದೀಕ್ಷಿತರಿಗೆ ತೋರಿಸಿದರು. ಶಿವಲಿಂಗ, ತಾನು ಕಂಡ ಶಿವಲಿಂಗದಂತೆಯೇ ಇದ್ದದ್ದು ನೋಡಿ ದೀಕ್ಷಿತರಿಗೆ ಅತ್ಯಾಶ್ಚರ್ಯವಾಯಿತು. ಮುಂದೆ ನಾಲ್ಕಾರು ದಿನಗಳಲ್ಲಿ ಶಿವಲಿಂಗವನ್ನು, ವಾಡಾದಲ್ಲಿ ಮೇಘಾ ಪೂಜೆಮಾಡಿಕೊಳ್ಳುತ್ತಿದ್ದ ಚಿತ್ರಪಟದ ಪಕ್ಕದಲ್ಲಿ, ಬಾಬಾ ಸ್ಥಾಪಿಸಿದರು. ಮೇಘಾಗೆ ಶಿವ ಪೂಜೆ ಎಂದರೆ ಎಲ್ಲಿಲ್ಲದ ಆಸಕ್ತಿ. ಅದನ್ನು ಅನುಮೋದಿಸಲು ಬಾಬಾ ತ್ರಿಶೂಲವನ್ನು ಮೊದಲು ಬರೆಸಿ ನಂತರ ಶಿವಲಿಂಗವನ್ನೂ ಸ್ಥಾಪಿಸಿದರು.

ಹಲವಾರು ವರ್ಷಗಳು ಅತ್ಯಂತ ವಿಧೇಯತೆಯಿಂದ, ಶ್ರದ್ಧಾಭಕ್ತಿಪೂರ್ಣನಾಗಿ ಬಾಬಾರನ್ನು ಸೇವಿಸಿದ ಮೇಘಾ ೧೯೧೨ರಲ್ಲಿ, ಬಾಬಾರ ಸನ್ನಿಧಿಯಲ್ಲಿ ತಮ್ಮ ಕೊನೆಯುಸಿರು ಬಿಟ್ಟರು. ಬಾಬಾ ಅವರ ದೇಹದ ಮೇಲೆಲ್ಲಾ ಕೈ ಆಡಿಸಿ, "ಇವನು ನನ್ನ ನಿಜವಾದ ಭಕ್ತನಾಗಿದ್ದ" ಎಂದು ಹೇಳಿ ತಮ್ಮ ಖರ್ಚಿನಲ್ಲೇ ಆತನ ಅಂತಿಮ ಕ್ರಿಯೆಗಳು, ಬ್ರಾಹ್ಮಣರಿಗೆ ಊಟ ಎಲ್ಲವನ್ನೂ ಮಾಡಿಸಿದರು. ಬಾಬಾರ ಆಜ್ಞೆಯನ್ನು ಕಾಕಾ ಸಾಹೇಬ್ ದೀಕ್ಷಿತರು ಶಿರಸಾವಹಿಸಿ ನಡೆಸಿಕೊಟ್ಟರು.

ಇದರೊಂದಿಗೆ ಲಕ್ಷ್ಮೀಚಂದ್, ಬರ್ಹಾಂಪುರದ ಮಹಿಳೆ, ಮೇಘಾ ಇತ್ಯಾದಿ ವಿಷಯಗಳನ್ನು ಕುರಿತು ಹೇಳುವ ಇಪ್ಪತ್ತೆಂಟನೆಯ ಅಧ್ಯಾಯ ಮುಗಿಯಿತು. ಮುಂದಿನ ಅಧ್ಯಾಯದಲ್ಲಿ ಹೇಮಾಡ್ ಪಂತ್ ಮದ್ರಾಸಿ ಭಜನ ಮೇಳ, ತೆಂಡೂಲ್ಕರ್, ಕ್ಯಾ. ಹಾಟೆ, ವಾಮನ್ ನಾರ್ವೇಕರ್, ಇತ್ಯಾದಿ ವಿಷಯಗಳನ್ನು ಹೇಳುತ್ತಾರೆ

||ಶ್ರೀ ಸದ್ಗುರು ಸಾಯಿನಾಥಾರ್ಪಣಮಸ್ತು||ಶುಭಂ ಭವತು||
||ಓಂ ಶಾಂತಿಃ ಶಾಂತಿಃ ಶಾಂತಿಃ||


Sunday, January 1, 2012

||ಇಪ್ಪತ್ತೇಳನೆಯ ಅಧ್ಯಾಯ||


||ಶ್ರೀ ಸಾಯಿ ಸಚ್ಚರಿತ್ರೆ||
||ಇಪ್ಪತ್ತೇಳನೆಯ ಅಧ್ಯಾಯ||
||ಮಮತ ಮತ್ತು ಸಮತ||
ಶ್ರೀ ಗಣೇಶಾಯ ನಮಃ ಶ್ರೀ ಸರಸ್ವತಯೇ ನಮಃ
ಶ್ರೀ ವೆಂಕಟೇಶಾಯ ನಮಃ ಶ್ರೀ ಸಾಯಿನಾಥಾಯ ನಮಃ
ಶ್ರೀ ಸದ್ಗುರುಭ್ಯೋನ್ನಮಃ

ಅಧ್ಯಾಯದಲ್ಲಿ ಹೇಮಾಡ್ ಪಂತ್, ಭಾಗವತ, ವಿಷ್ಣು ಸಹಸ್ರನಾಮ, ಗೀತಾ ರಹಸ್ಯ ಮತ್ತು ಇತರ ವಿಷಯಗಳನ್ನು ಹೇಳುತ್ತಾರೆ.

ಬಾಬಾರ ಕಥೆಗಳು

ಎಲ್ಲ ನದಿಗಳೂ, ಪವಿತ್ರನದಿಗಳೂ ಸೇರಿದಂತೆ, ಸಮುದ್ರದಲ್ಲಿ ಕೊನೆಗಾಣುತ್ತವೆ. ಆದ್ದರಿಂದ ಸಮುದ್ರದಲ್ಲಿ ಸ್ನಾನ ಮಾಡಿದರೆ ಎಲ್ಲ ನದಿಗಳಲ್ಲೂ ಸ್ನಾನಮಾಡಿದ ಪುಣ್ಯ ಬರುತ್ತದೆ. ಹಾಗೆ ನಾವು ಸದ್ಗುರುವಿಗೆ ನಮಸ್ಕಾರ ಮಾಡಿದರೆ ಎಲ್ಲ ದೇವರುಗಳಿಗೂ, ಅದರಲ್ಲೂ ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು, ಮಹೇಶ್ವರರಿಗೆ, ನಮಸ್ಕಾರ ಮಾಡಿದಂತಾಗುತ್ತದೆ. ಅಂತಹ ಸದ್ಗುರು ಸಾಯಿ ಬಾಬಾರಿಗೆ ನಮಸ್ಕಾರ ಮಾಡಿದಾಗ, ತ್ರಿಮೂರ್ತಿಗಳಿಗೆ ನಮಸ್ಕಾರ ಮಾಡಿದ ಫಲ ಮಾತ್ರವೇ ಅಲ್ಲ, ಸದ್ಗುರುವಿನಿಂದ ನಮಗೆ ಆತ್ಮ ದರ್ಶನ ಮಾಡಿಕೊಳ್ಳಲು ಬೇಕಾದ ಮಾರ್ಗದರ್ಶನವೂ ದೊರೆಯುತ್ತದೆ. ಅವರೇ ನಮಗೆ ಮಾರ್ಗದರ್ಶಿಯಾಗಿ, ಕೈಹಿಡಿದು ನಡೆಸುತ್ತಾರೆ. ಅವರು ಕರೆದುಕೊಂಡು ಹೋಗುವ ದಾರಿಯಲ್ಲಿ ಹಳ್ಳಕೊಳ್ಳಗಳೂ, ಮುಳ್ಳುಪೊದೆಗಳೂ ಇರುವುದಿಲ್ಲ. ಅವರೇ ನಮ್ಮ ಕೈಹಿಡಿದು ನಡೆಸಿದಾಗ, ನಾವು ನಮ್ಮ ಗಮ್ಯವನ್ನು ಸೇರುವುದರಲ್ಲಿ ಯಾವ ಸಂಶಯವೂ ಇಲ್ಲ. ಅವರನ್ನು ಕಾಣಲು, ಅವರ ಸನ್ನಿಹಿತರಾಗಲು ನಾವೇನು ಮಾಡಬೇಕು ಎಂಬುದಕ್ಕೂ, ಭಕ್ತರ ಕಲ್ಪವೃಕ್ಷ, ಕಾಮಧೇನು, ಜ್ಞಾನ ಸಮುದ್ರನೇ ನಮಗೆ ಒಂದು ಸುಲಭವಾದ ಹಾದಿಯನ್ನು ತೋರಿಸಿಕೊಟ್ಟಿದ್ದಾರೆ. ಅದೇ ಅವರ ಲೀಲೆಗಳನ್ನು, ಕಥೆಗಳನ್ನು, ಕೇಳುವುದು, ಓದುವುದು, ಮನನಮಾಡುವುದು. ಸಚ್ಚರಿತ್ರೆಯಲ್ಲಿ ಹೇಳಿರುವಂತೆ ನಾವು ಬಾಬಾರ ಕಥೆಗಳು, ಲೀಲೆಗಳು ಎಂಬ ನೀರಿನ ಹನಿಗಾಗಿ ಕಾದಿರುವ ಚಾತಕ ಪಕ್ಷಿಗಳು. ಅವರ ಲೀಲೆಗಳನ್ನೂ, ಕಥೆಗಳನ್ನೂ ಕೇಳುತ್ತಾ ನಮ್ಮ ಮನಸ್ಸು ಆನಂದದಿಂದ ತುಂಬಿ ಭಾವಪರವಶವಾಗಿ ಕಣ್ಣು ತುಂಬಿ ಬರುತ್ತದೆ. ಮೈ ನವಿರೇಳುತ್ತದೆ. ರಾಗ ದ್ವೇಷಗಳೆಲ್ಲ ಮರೆಯುತ್ತವೆ. ಹೇಮಾಡ್ ಪಂತ್, "ಇಂತಹ ಲಕ್ಷಣಗಳು ನಮ್ಮಲ್ಲಿ ಕಂಡುಬಂದಾಗ ನಾವು ಸದ್ಗುರುವಿನ ಅನುಗ್ರಹಕ್ಕೆ ಒಳಗಾಗಿದ್ದೇವೆ. ಗುರುವು ನಮ್ಮ ಬಳಿಯೇ ಇದ್ದು ನಮಗೆ ಸಹಾಯಹಸ್ತ ನೀಡಲು ಸಿದ್ಧವಾಗಿದ್ದಾರೆ. ಅವರು ಹಾಗೆ ನಮ್ಮ ಬಳಿಗೆ ಬಂದಾಗ, ನಮ್ಮನ್ನು ಆವರಿಸಿರುವ ಮಾಯಾಶೃಂಖಲೆ ಕಳಚಿಹೋಗುವುದು. ನಾವು ನಮ್ಮ ಗುರಿಯತ್ತ ಸರಿಯಾಗಿ ಸಾಗುತ್ತಿದ್ದೇವೆ ಎಂದರ್ಥ" ಎಂದು ಹೇಳುತ್ತಾರೆ

ಪುಸ್ತಕಗಳನ್ನು ಪವಿತ್ರಗೊಳಿಸುವುದು

ಅವರವರ ಸ್ತರಕ್ಕೆ ತಕ್ಕಂತೆ, ತನ್ನ ಭಕ್ತರಿಗೆ ಆಧ್ಯಾತ್ಮ ಜ್ಞಾನವನ್ನು, ಬಾಬಾ ಬೋಧಿಸುತ್ತಿದ್ದರು. ಅಂತಹ ಕೆಲವನ್ನು ಈಗಾಗಲೇ ನೋಡಿದ್ದೇವೆ. ಈಗ ಇನ್ನೊಂದು ವೈವಿಧ್ಯವನ್ನು ನೋಡೋಣ. ಭಕ್ತರು ಅನೇಕ ಅಭಿಲಾಷೆಗಳನ್ನು ಇಟ್ಟುಕೊಂಡು ಬಾಬಾರ ಬಳಿಗೆ ಬರುತ್ತಿದ್ದರು. ಕೆಲವರು ಸಂತಾನಕ್ಕೋಸ್ಕರ, ಕೆಲವರು ರೋಗ ನಿವಾರಣೆಗೋಸ್ಕರ, ಮತ್ತೆ ಕೆಲವರು ತಮ್ಮ ವ್ಯವಹಾರಗಳಲ್ಲಿ ಲಾಭವಾಗಲೆಂದು, ಹೀಗೆ ಅನೇಕ ಆಸೆಗಳನ್ನು ಇಟ್ಟುಕೊಂಡು, ಜನ ಬಾಬಾರನ್ನು ಕಾಣಲು ಬರುತ್ತಿದ್ದರು. ಕೆಲವರು ಆಧ್ಯಾತ್ಮಿಕ ಪುಸ್ತಕಗಳ ಓದುವಿಕೆಯ ಅಭ್ಯಾಸವಿದ್ದವರು, ತಾವು ಓದಬೇಕೆಂದುಕೊಂಡ ಪುಸ್ತಕವನ್ನು ತಂದು ಬಾಬಾರ ಕೈಲಿಟ್ಟು, ಅವರು ಅದನ್ನು ಮುಟ್ಟಿ ಹಿಂದಕ್ಕೆ ಕೊಟ್ಟ ಮೇಲೆ ಓದುತ್ತಿದ್ದರು. ಬಾಬಾರ ಕೈ ಸ್ಪರ್ಶವಾದ ಪುಸ್ತಕ ಪವಿತ್ರವಾಗುತ್ತಿತ್ತು. ಅದೂ ಅಲ್ಲದೆ, ಪುಸ್ತಕವನ್ನು ಓದುವಾಗ ಅವರಿಗೆ ಬಾಬಾ ತಮ್ಮ ಬಳಿಯೇ ಇದ್ದಂತೆ ಭಾಸವಾಗುತ್ತಿತ್ತು.

ಒಂದು ಸಲ, ಕಾಕಾ ಮಹಾಜನಿ ಏಕನಾಥ ಭಾಗವತವನ್ನು ಮಸೀದಿಗೆ ತಂದರು. ಅದು ಅವರಿಗೆ ಬಹಳ ಪ್ರಿಯವಾದ ಪುಸ್ತಕ. ಪ್ರತಿದಿನ ಬೆಳಗ್ಗೆ, ಅದನ್ನು ಪಠಿಸುತ್ತಿದ್ದರು. ಅವರು ಪುಸ್ತಕದೊಡನೆ ಮಸೀದಿಗೆ ಬಂದಾಗ, ಶ್ಯಾಮಾ ಕೂಡಾ ಅಲ್ಲಿದ್ದರು. ಅವರು ಕಾಕಾರ ಕೈಲಿದ್ದ ಪುಸ್ತಕವನ್ನು ತಮ್ಮ ಕೈಗೆ ತೆಗೆದುಕೊಂಡು ಓದುತ್ತಿದ್ದರು. ಅದನ್ನು ನೋಡಿದ ಬಾಬಾ, ಶ್ಯಾಮಾರಿಂದ ಪುಸ್ತಕವನ್ನು ತೆಗೆದುಕೊಂಡು, ಹಲವು ಪುಟಗಳನ್ನು ತಿರುವಿಹಾಕಿ, ಮತ್ತೆ ಅದನ್ನು ಅವರಿಗೇ ಕೊಟ್ಟು "ಇದನ್ನು ನೀನೇ ಇಟ್ಟುಕೋ" ಎಂದರು. ಶ್ಯಾಮಾಗೆ ಅದೇನು ಏಕೆ ಎಂದು ತಿಳಿಯಲಿಲ್ಲ. ಅವರು ಪುಸ್ತಕ ಕಾಕಾರದೆಂದೂ, ಅದನ್ನು ಅವರಿಗೆ ಹಿಂತಿರುಗಿಸಬೇಕೆಂದೂ, ಹೇಳಿದರು. ಅದಕ್ಕೆ ಬಾಬಾ, "ಇಲ್ಲ, ಇಲ್ಲ. ಅದನ್ನು ನಾನು ನಿನಗೆ ಕೊಟ್ಟಿದ್ದೇನೆ. ನೀನೇ ಇಟ್ಟುಕೋ. ನಿನಗೆ ಉಪಯೋಗಕ್ಕೆ ಬರುತ್ತದೆ" ಎಂದರು. ರೀತಿ ಶ್ಯಾಮಾರಿಗೆ, ಬಾಬಾ ಅನೇಕ ಪುಸ್ತಕಗಳನ್ನು ಜೋಪಾನವಾಗಿಡಲು ದಯಪಾಲಿಸಿದ್ದರು. ಕಾಕಾರಿಗೆ ಬಾಬಾರ ರೀತಿನೀತಿಗಳು ಗೊತ್ತಿದ್ದುದರಿಂದ, ಅವರು ಆಗ ಏನೂ ಹೇಳಲಿಲ್ಲ. ಮತ್ತೊಮ್ಮೆ ಬಂದಾಗ, ಇನ್ನೊಂದು ಪುಸ್ತಕ ತಂದು ಬಾಬಾರ ಕೈಲಿಟ್ಟರು. ಬಾಬಾ ಪುಸ್ತಕವನ್ನು ಮುಟ್ಟಿ ಅನುಗ್ರಹಿಸಿ ಹಿಂದಕ್ಕೆ ಕೊಟ್ಟು, "ಇದನ್ನು ಜೋಪಾನವಾಗಿಟ್ಟುಕೋ. ಅದು ನಿನಗೆ ಬಹಳ ಸಹಾಯಕಾರಿಯಾಗುತ್ತದೆ" ಎಂದು ಹೇಳಿದರು. ಕಾಕಾ ಅದನ್ನು ಗೌರವದಿಂದ ಸ್ವೀಕರಿಸಿ ಅವರಿಗೆ ನಮಸ್ಕರಿಸಿದರು.

ವಿಷ್ಣು ಸಹಸ್ರನಾಮ

ರಾಮದಾಸ ಪಂಥಕ್ಕೆ ಸೇರಿದ ರಾಮದಾಸ ಬುವಾ, ಒಂದುಸಲ ಶಿರಡಿಗೆ ಬಂದರು. ಅವರು ದಿನವೂ ಬೆಳಗ್ಗೆ ಬೇಗ ಎದ್ದು ಸ್ನಾನ ಮಾಡಿ, ತಮ್ಮ ಪ್ರಾತರ್ವಿಧಿಗಳನ್ನೆಲ್ಲಾ ಮುಗಿಸಿ ಮಸೀದಿಗೆ ಬಂದು, ಅಲ್ಲಿ ಕೂತು ವಿಷ್ಣು ಸಹಸ್ರನಾಮ, ಆಧ್ಯಾತ್ಮ ರಾಮಾಯಣ, ತಪ್ಪದೇ ಪಠಿಸುತ್ತಿದ್ದರು. ಭಗವದ್ಗೀತೆಯನ್ನು ಬಿಟ್ಟರೆ, ವಿಷ್ಣು ಸಹಸ್ರನಾಮವೇ ಬಹಳ ಮುಖ್ಯವಾದದ್ದೆಂದು ಹೇಳುತ್ತಾರೆ. ಬಾಬಾಗೂ ವಿಷ್ಣು ಸಹಸ್ರನಾಮ ಬಹಳ ಪ್ರಿಯವಾದದ್ದು. ಬಾಬಾ ರಾಮದಾಸ ಬುವಾರ ಅಭ್ಯಾಸವನ್ನು ದಿನವೂ ಎಚ್ಚರದಿಂದ ಗಮನಿಸುತ್ತಿದ್ದರು. ಒಂದು ದಿನ ಬಾಬಾ ಬುವಾರನ್ನು ಕರೆದು, "ನನಗೆ ಬಹಳ ಹೊಟ್ಟೆ ನೋಯುತ್ತಿದೆ. ಸೋನಾಮುಖಿ ಕಷಾಯ ಕುಡಿಯದೆ ಅದು ಕಡಮೆಯಾಗುವುದಿಲ್ಲ. ಅಂಗಡಿಗೆ ಹೋಗಿ ಸೋನಾಮುಖಿ ತೆಗೆದುಕೊಂಡು ಬಾ" ಎಂದು ಹೇಳಿದರು. ಬುವಾ ಓದುತ್ತಿದ್ದ ಪುಸ್ತಕವನ್ನು ಮುಚ್ಚಿಟ್ಟು, ಅಂಗಡಿಗೆ ಹೋದರು. ಅವರು ಅತ್ತ ಹೋದ ಕೂಡಲೇ, ಬಾಬಾ ಎದ್ದು ಕೆಳಗಿಳಿದು ಬಂದು, ಬುವಾ ಕುಳಿತಿದ್ದ ಜಾಗಕ್ಕೆ ಹೋಗಿ ಅವರು ಓದುತ್ತಿದ್ದ ವಿಷ್ಣು ಸಹಸ್ರನಾಮದ ಪುಸ್ತಕವನ್ನು ತೆಗೆದುಕೊಂಡು, ಮತ್ತೆ ತಮ್ಮ ಜಾಗಕ್ಕೆ ಬಂದು ಕುಳಿತರು. ಪುಸ್ತಕದ ಹಲವಾರು ಪುಟಗಳನ್ನು ತಿರುಗಿಸಿ ನೋಡಿ, ಶ್ಯಾಮಾರನ್ನು ಕರೆದು, " ಪುಸ್ತಕ ಬಹಳ ಅಮೂಲ್ಯವಾದದ್ದು. ಬಹಳ ಪರಿಣಾಮಕಾರಿಯಾದದ್ದು. ಇದನ್ನು ನಿನಗೆ ಕೊಡುತ್ತಿದ್ದೇನೆ, ಓದು. ಒಂದುಸಲ ನನಗೆ ಪ್ರಾಣ ಹೋಗುವಷ್ಟು ನೋವುಂಟಾಯಿತು. ಆಗ ನಾನು ಪುಸ್ತಕವನ್ನು ನನ್ನ ಎದೆಗೆ ಒತ್ತಿಕೊಂಡೆ. ನನಗೆ ಅದರಿಂದ ಗಮನಾರ್ಹವಾದ ನೆಮ್ಮದಿಯುಂಟಾಯಿತು. ಅಲ್ಲಾನೇ ಬಂದು ನನ್ನನ್ನು ರಕ್ಷಿಸಿದಂತಾಯಿತು. ಆದ್ದರಿಂದ, ಇದನ್ನು ನಿನಗೆ ಕೊಡುತ್ತಿದ್ದೇನೆ. ಇದನ್ನು ಸ್ವಲ್ಪಸ್ವಲ್ಪವಾಗಿ ನಿಧಾನವಾಗಿ ಓದು. ದಿನಕ್ಕೆ ಒಂದು ನಾಮವಾದರೂ ತಪ್ಪದೇ ಓದು" ಎಂದರು. ಶ್ಯಾಮಾಗೆ ಬಹಳ ಹೆದರಿಕೆಯಾಯಿತು. " ಬುವಾ ಬಹಳ ಜಗಳಗಂಟ. ಕೋಪ ಎನ್ನುವುದು ಯಾವಾಗಲೂ ಅವನ ಮೂಗಿನ ತುದಿಯಲ್ಲೇ ಎನ್ನುವುದು ಎಲ್ಲರಿಗೂ ತಿಳಿದ ವಿಷಯ. ನಾನೊಬ್ಬ ಹಳ್ಳಿಮುಕ್ಕ. ನನಗೆ ಸಂಸ್ಕೃತ ಓದಲೂ ಬಾರದು. ಜೊತೆಗೆ ಬುವಾ ಎಂತಹ ಮನುಷ್ಯ ಎಂದು ಎಲ್ಲರಿಗೂ ತಿಳಿದ ವಿಷಯ" ಎಂದೆಲ್ಲಾ ಹೇಳಿದರು.

ಬಾಬಾ ತನ್ನನ್ನು ಬುವಾ ಮೇಲೆ ಎತ್ತಿಕಟ್ಟಿ ತಮಾಷೆ ನೋಡಬೇಕೆಂದಿದ್ದಾರೆ ಎಂದು ಶ್ಯಾಮಾ ಭಾವಿಸಿದ್ದರು. ಬಾಬಾಗೆ ತಮ್ಮ ಮೇಲೆ ಎಷ್ಟು ಗೌರವ, ಪ್ರೀತಿ, ವಿಶ್ವಾಸಗಳಿವೆ ಎಂದು ಅವರಿಗೆ ಅರ್ಥವಾಗಿರಲಿಲ್ಲ. ಶ್ಯಾಮಾ ತಮ್ಮ ಬಹು ಸನ್ನಿಹಿತ ಭಕ್ತನಾದದ್ದರಿಂದ, ಅವರನ್ನು ಪ್ರಪಂಚದ ದುಃಖ ದುರಿತಗಳಿಂದ ದೂರಮಾಡಬೇಕೆನ್ನುವ ಉದ್ದೇಶದಿಂದ ಬಾಬಾ ಇದನ್ನು ಮಾಡುತ್ತಿದ್ದಾರೆ, ಎಂದು ತಿಳಿಯಲಿಲ್ಲ.

"ದಿನಕ್ಕೆ ಒಂದುಸಲವಾದರೂ ಪರಮಾತ್ಮನ ಒಂದು ನಾಮವನ್ನು ಹೇಳಿದರೂ ಸಾಕು. ಅದು ಬಹಳ ಪರಿಣಾಮಕಾರಿ. ಪರಮಾತ್ಮನ ನಾಮ ಸ್ಮರಣೆಗಿಂತ, ಬೇರೆ ಯಾವ ಸಾಧನೆಗಳೂ ಬೇಕಿಲ್ಲ. ಜೀವನ ಮರಣ ಚಕ್ರ ಭ್ರಮಣೆಯಿಂದ ತಪ್ಪಿಸಿಕೊಳ್ಳಲು, ವಿಷ್ಣು ಸಹಸ್ರನಾಮ ಪಠನೆ ಪಾರಾಯಣಗಳು ಅತ್ಯವಶ್ಯಕ, ಅವು ನಮ್ಮ ಪಾಪಗಳನ್ನು ತೊಡೆದುಹಾಕುತ್ತವೆ" ಎಂದೆಲ್ಲಾ ಹೇಳಿ ಬಾಬಾ ಪುಸ್ತಕವನ್ನು ತೆಗೆದುಕೊಳ್ಳುವಂತೆ ಶ್ಯಾಮಾರನ್ನು ಒಪ್ಪಿಸಿದರು.

ಏಕನಾಥ ಮಹಾರಾಜರೂ ಒಂದುಸಲ ಹೀಗೇ ಮಾಡಿದ್ದರು. ಅವರ ನೆರೆಯವನೊಬ್ಬ ಬ್ರಾಹ್ಮಣ, ಪೂಜೆ ಪುನಸ್ಕಾರಗಳನ್ನೆಲ್ಲಾ ಬಿಟ್ಟು, ಅವನತಿಯ ಹಾದಿ ಹಿಡಿದಿದ್ದ. ಅವನಿಗೆ ಇಷ್ಟವಿಲ್ಲದಿದ್ದರೂ ಅವನನ್ನು ಹಿಡಿದು ಅವನ ಕೈಲಿ ದಿನಕ್ಕೆ ಒಂದು ನಾಮವನ್ನು ಹೇಳಿಸಿ, ಕೊನೆಗೆ ಅವನು ಸಹಸ್ರನಾಮಗಳನ್ನು ಸುಲಲಿತವಾಗಿ ಹೇಳುವಂತೆ ಮಾಡಿದರು. ಅದರಿಂದ ಅವನಿಗೆ ಜ್ಞಾನೋದಯವಾಗಿ, ಆತ್ಮಸಾಕ್ಷಾತ್ಕಾರದ ಕಡೆ ಹೆಜ್ಜೆ ಇಟ್ಟ. ಅವನು ಜೀವನಪರ್ಯಂತ ಏಕನಾಥರಿಗೆ ಆಭಾರಿಯಾದ.

ಇಷ್ಟೆಲ್ಲಾ ನಡೆಯುವ ವೇಳೆಗೆ ರಾಮದಾಸಿ ಬುವಾ, ಸೋನಾಮುಖಿ ತೆಗೆದುಕೊಂಡು ಬಂದರು. ಮಸೀದಿಯಲ್ಲಿ ನಡೆದದ್ದೆಲ್ಲವನ್ನೂ ನೋಡುತ್ತಿದ್ದ ಅಣ್ಣಾ ಚಿಂಚಿಣಿಕರ್, ನಾರದನ ಕೆಲಸ ಮಾಡಿ ನಡೆದದ್ದನ್ನೆಲ್ಲಾ ಬುವಾಗೆ ವಿವರಿಸಿದರು. ಬೆಂಕಿಗೆ ತುಪ್ಪ ಹಾಕಿದಂತಾಗಿ, ಬುವಾ ಭುಗಿಲೆದ್ದು, ಶ್ಯಾಮಾರನ್ನು ತೆಗಳಲು ಆರಂಭಿಸಿದರು. ಶ್ಯಾಮಾರೇ ಬಾಬಾರನ್ನು ಪುಸಲಾಯಿಸಿ ತನ್ನನ್ನು ಅಂಗಡಿಗೆ ಕಳುಹಿಸುವಂತೆ ಮಾಡಿ, ತಾನು ಹೋದ ಕ್ಷಣವೇ ಪುಸ್ತಕವನ್ನು ತೆಗೆದುಕೊಂಡರೆಂದು ಆಪಾದಿಸಿದರು. ಮನಸ್ಸಿಗೆ ಬಂದಷ್ಟು ತೆಗಳಿ ಪುಸ್ತಕವನ್ನು ಹಿಂತಿರುಗಿಸದಿದ್ದರೆ ತಲೆ ಒಡೆದುಕೊಂಡು ಸಾಯುತ್ತೇನೆ, ಎಂದು ಹೆದರಿಸಿದರು. ಶ್ಯಾಮಾರಿಗೆ ಏನು ಹೇಳಬೇಕೆಂದು ತೋಚಲಿಲ್ಲ. ಅವರು ಪುಸ್ತಕವನ್ನು ತಾನು ತೆಗೆದುಕೊಳ್ಳಲಿಲ್ಲವೆಂದು ಹೇಳಲು ಎಷ್ಟು ಪ್ರಯತ್ನಪಟ್ಟರೂ, ಸಫಲರಾಗಲಿಲ್ಲ. ಇದೆಲ್ಲವನ್ನೂ ನೋಡುತ್ತಿದ್ದ ಬಾಬಾ, ಬುವಾನನ್ನು ಹತ್ತಿರ ಕರೆದು, "ಏನಾಯಿತಯ್ಯಾ? ಶ್ಯಾಮಾನೂ ನಮ್ಮವನೇ ಅಲ್ಲವೇ? ಅವನನ್ನೇಕೆ ಅಕಾರಣವಾಗಿ ಬೈಯುತ್ತಿದ್ದೀಯೆ? ಸಮಾಧಾನವಾಗಿ ಒಳ್ಳೆಯ ಮಾತನಾಡು. ಇಷ್ಟು ಪುಸ್ತಕಗಳನ್ನು ಓದಿದರೂ, ನಿನ್ನ ಮನಸ್ಸು ಇನ್ನೂ ಶುದ್ಧವಾಗಲಿಲ್ಲ. ನಿನ್ನ ಕೋಪತಾಪಗಳು ಇನ್ನೂ ಹಿಡಿತಕ್ಕೆ ಬಂದಿಲ್ಲ. ರಾಮದಾಸಿಯಾಗಿದ್ದುಕೊಂಡು ನೀನು ಇಷ್ಟು ಸಣ್ಣವಿಷಯಗಳಿಗೆ ಇಷ್ಟೊಂದು ಉದ್ವೇಗಗೊಳ್ಳುವ ಅವಶ್ಯಕತೆ ಏನು? ನಿನಗೆ ಪುಸ್ತಕದ ಅವಶ್ಯಕತೆಯಾದರೂ ಏನು? ನಿನಗೆ ಅದು ಕಂಠಸ್ಥವಾಗಿದೆಯಲ್ಲವೇ? ನಿಜವಾದ ರಾಮದಾಸಿಗೆ ಸಮತೆ ಇರಬೇಕು. ಮಮತೆ ಅಲ್ಲ. ಶ್ಯಾಮನೊಡನೆ ಪುಸ್ತಕಕ್ಕಾಗಿ ಜಗಳವಾಡುತ್ತಿದ್ದೀಯೆ. ಹಣ ಕೊಟ್ಟರೆ ಪುಸ್ತಕಗಳು ಬೇಕಾದಷ್ಟು ದೊರೆಯುತ್ತವೆ, ಆದರೆ ಶ್ಯಾಮಾನಂತಹ ಸಹೃದಯರು ದೊರೆಯುತ್ತಾರೆಯೇ? ನಿಜವೆಂದರೆ ಶ್ಯಾಮ ಪುಸ್ತಕವನ್ನು ತೆಗೆದುಕೊಳ್ಳಲಿಲ್ಲ. ಅದರಿಂದ ಅವನು ಲಾಭ ಪಡೆಯಲಿ ಎಂದು, ನಾನೇ ಅದನ್ನು ಅವನಿಗೆ ಕೊಟ್ಟೆ" ಎಂದು ಹೇಳಿದರು.

ಇದು ಬಾಬಾರು, ರಾಮದಾಸಿಗೆ ಸಮತೆ ಮಮತೆಗಳ ಬಗ್ಗೆ ಶಿಕ್ಷಣ ಕೊಟ್ಟ ರೀತಿ. ಒಂದು ಪ್ರಸಂಗದಿಂದ ಬಾಬಾ "ತ್ಯಾಗ" ಎಂದರೇನು ಎಂಬುದನ್ನು ಬಹಳ ಸರಳವಾಗಿ, ಎಲ್ಲರಿಗೂ ಅರ್ಥವಾಗುವಂತೆ ತೋರಿಸಿಕೊಟ್ಟರು. ನಮಗೆ ಬಹಳ ಇಷ್ಟವಾದ ವಸ್ತುಗಳನ್ನು ಯಾವುದೇ ಆಶಾ ಮೋಹವಿಲ್ಲದೆ ತ್ಯಾಗ ಮಾಡಬೇಕು ಎನ್ನುವ ಪಾಠವನ್ನು ಇದರಿಂದ ಕಲಿಯಬೇಕು.

ಬಾಬಾರ ಮಾತುಗಳು ಅಮೃತದಂತೆ ಕೆಲಸಮಾಡಿ, ರಾಮದಾಸ ಬುವಾ ಇದರಿಂದ ಬುದ್ಧಿ ಕಲಿತರು. ಆತ ಸಮಾಧಾನವಾಗಿ ಶ್ಯಾಮಾರಿಗೆ, " ವಿಷ್ಣು ಸಹಸ್ರನಾಮ ನೀವೇ ಇಟ್ಟುಕೊಳ್ಳಿ. ಅದರ ಬದಲು ನಾನು ಪಂಚರತ್ನಗೀತೆಯನ್ನು ತೆಗೆದುಕೊಳ್ಳುತ್ತೇನೆ" ಎಂದು ಹೇಳಿದರು.ಶ್ಯಾಮಾರಿಗೂ ಸಂತೋಷವಾಗಿ, ಪಂಚರತ್ನಗೀತೆಯನ್ನು ಕೊಡಲು ಒಪ್ಪಿದರು.

ಇದರಿಂದ ಹಲವು ಪ್ರಶ್ನೆಗಳು ಹುಟ್ಟುತ್ತವೆ. ತಾವು ಪರಿಗಣಿಸದೇ ಇದ್ದ ದೇವರನ್ನು ಕುರಿತ ಪುಸ್ತಕವನ್ನು ಬುವಾ ಏಕೆ ಕೇಳಿದರು? ಶ್ಯಾಮಾರೊಡನೆ ಜಗಳವಾಡುವ ಮನುಷ್ಯ, ಮಸೀದಿಗೆ ಬಂದು ಬಾಬಾರ ಮುಂದೆ ಕುಳಿತು ಅಧ್ಯಾತ್ಮಿಕ ಪುಸ್ತಕಗಳನ್ನು ಏತಕ್ಕೆ ಓದುತ್ತಿದ್ದರು? ಇಂತಹ ಪ್ರಶ್ನೆಗಳಿಗೆ ಉತ್ತರ ಹುಡುಕುವುದು ಬಹಳ ಕಷ್ಟ. ಆದರೆ ಪ್ರಸಂಗದಿಂದ ಎರಡು ಮುಖ್ಯವಾದ ಅಂಶಗಳು ಹೊರಬೀಳುತ್ತವೆ. ಮೊದಲನೆಯದು, ರಾಮದಾಸಿ ಬುವಾಗೆ ಸಮತೆ ಮಮತೆಗಳ ನಿಜವಾದ ಅರ್ಥ ತಿಳಿದದ್ದು. ಎರಡನೆಯದು, ಶ್ಯಾಮಾರು ವಿಷ್ಣು ಸಹಸ್ರನಾಮದ ಪ್ರಾಮುಖ್ಯತೆಯನ್ನು ತಿಳಿದುಕೊಂಡಿದ್ದು. ಬಾಬಾ ಹೇಳಿದಂತೆ, ಅವರು ಅದನ್ನು ಸ್ವಲ್ಪ ಸ್ವಲ್ಪವಾಗಿ ಓದುತ್ತಾ, ಆದ್ಯಂತವಾಗಿ ಓದಿ, ಅದರ ಒಳ ಅರ್ಥವನ್ನೂ ತಿಳಿದು, ಬಾಪೂ ಸಾಹೇಬ್ ಬೂಟಿಯವರ ಅಳಿಯ, ಪೂನಾ ಇಂಜಿನೀರಿಂಗ್ ಕಾಲೇಜಿನಲ್ಲಿ ಪ್ರೊಫೆಸರ್ ಆಗಿದ್ದ, ಗಣೇಶ ಗೋವಿಂದ ನಾರ್ಕೆಗೆ ವಿವರಿಸಿ ಹೇಳಬಲ್ಲವರಾದರು.

ವಿಠಲನ ದರ್ಶನ

ದಿನವೂ ಕಾಕಾಸಾಹೇಬ್ ದೀಕ್ಷಿತ್ ಬೆಳಗ್ಗೆ ಸ್ನಾನಾದಿಗಳಾದ ಮೇಲೆ ವಿಠಲನ ಧ್ಯಾನದಲ್ಲಿ ಮಗ್ನರಾಗುತ್ತಿದ್ದರು. ಒಂದು ದಿನ ಅವರು ಧ್ಯಾನ ಮಗ್ನರಾಗಿದ್ದಾಗ, ವಿಠಲನ ಮೂರ್ತಿಯೊಂದನ್ನು ಕಂಡರು. ಧ್ಯಾನ ಮುಗಿಸಿ ಬಾಬಾರನ್ನು ಕಾಣಲು ಹೋದಾಗ ಬಾಬಾ, "ವಿಠಲ ಬಂದಿದ್ದ ಅಲ್ಲವೇ? ನೀನು ನೋಡಿದೆಯಾ? ಅವನನ್ನು ಘಟ್ಟಿಯಾಗಿ ಹಿಡಿದಿಟ್ಟುಕೋ. ಇಲ್ಲದಿದ್ದರೆ, ನೀನು ಸ್ವಲ್ಪ ಬೇಹುಷಾರಿಯಾದರೂ ಅವನು ತಪ್ಪಿಸಿಕೊಂಡು ಓಡಿಹೋಗುತ್ತಾನೆ" ಎಂದರು. ಅದೇ ದಿನ ಸಾಯಂಕಾಲ ಯಾರೋ ಒಬ್ಬರು ಶಿರಡಿಗೆ ವಿಠಲನ ಫೋಟೋಗಳನ್ನು ಮಾರಲು ತಂದಿದ್ದರು. ಅದು ತಾನು ಧ್ಯಾನದಲ್ಲಿ ಕಂಡ ವಿಠಲನ ತದ್ರೂಪವಾಗಿರುವುದನ್ನು ಕಂಡ ದೀಕ್ಷಿತ್ ಆಶ್ಚರ್ಯಪಟ್ಟು, ಒಂದು ಚಿತ್ರವನ್ನು ಕೊಂಡು ತಮ್ಮ ಪೂಜಾ ಮಂದಿರದಲ್ಲಿ ಇಟ್ಟುಕೊಂಡರು.

ಗೀತಾ ರಹಸ್

ಆಧ್ಯಾತ್ಮಿಕ ಪುಸ್ತಕಗಳನ್ನು ಓದುವವರ ಮೇಲೆ ಬಾಬಾರಿಗೆ ವಿಶೇಷವಾದ ಪ್ರೀತಿ. ಅವರಿಗೆ ಉತ್ತೇಜನ ಕೊಡುತ್ತಿದ್ದರು. ಕಾಕಾ ಸಾಹೇಬ್ ದೀಕ್ಷಿತರಂತೆ, ಬಾಪೂ ಸಾಹೇಬ್ ಜೋಗರು ಕೂಡ ದಿನವೂ ಬೆಳಗ್ಗೆ ಆಧ್ಯಾತ್ಮಿಕ ಪುಸ್ತಕಗಳನ್ನು ಓದುವ ಅಭ್ಯಾಸವಿಟ್ಟುಕೊಂಡಿದ್ದರು. ಒಂದು ಸಲ, ಲೋಕಮಾನ್ಯ ತಿಲಕರಗೀತಾ ರಹಸ್ಯಎಂಬುವ ಪುಸ್ತಕವನ್ನು ಅವರು ಅಂಚೆಯ ಮೂಲಕ ತರಿಸಿದ್ದರು. ಮಸೀದಿಗೆ ಹೋಗುತ್ತಿದ್ದಾಗ, ಅಂಚೆ ಅವರ ಕೈಸೇರಿತು. ಪ್ಯಾಕೆಟ್ಟನ್ನು ಕಂಕುಳಲ್ಲಿ ಇಟ್ಟುಕೊಂಡು, ಅವರು ಮಸೀದಿಗೆ ಹೋಗಿ ಬಾಬಾರಿಗೆ ನಮಸ್ಕಾರ ಮಾಡಲು ಬಗ್ಗಿದಾಗ, ಅದು ಕೆಳಕ್ಕೆ ಬಾಬಾರ ಕಾಲ ಬಳಿ ಬಿತ್ತು. ಅದೇನೆಂದು ಬಾಬಾ ಕೇಳಿದಾಗ, ಅವರು ಪ್ಯಾಕೆಟ್ಟನ್ನು ಬಿಚ್ಚಿ, ಅದರಲ್ಲಿದ್ದ ಪುಸ್ತಕವನ್ನು ಬಾಬಾರ ಕೈಲಿಟ್ಟರು. ಬಾಬಾ ಪುಸ್ತಕದಲ್ಲಿನ ನಾಲ್ಕಾರು ಪುಟಗಳನ್ನು ತಿರುಗಿಸಿ ನೋಡಿ, ತಮ್ಮ ಜೇಬಿನಿಂದ ಒಂದು ರೂಪಾಯಿ ತೆಗೆದು ಪುಸ್ತಕದ ಮೇಲಿಟ್ಟು, ಬಾಪೂ ಸಾಹೇಬರಿಗೆ ಅದನ್ನು ಹಿಂತಿರುಗಿಸಿ ಹೇಳಿದರು, "ಇದನ್ನು ಪೂರ್ತಿಯಾಗಿ ಓದು. ನಿನಗೆ ಲಾಭದಾಯಕವಾಗುತ್ತದೆ."

ಖಾಪರ್ಡೆಯ ಕಥೆ

ದಾದಾಸಾಹೇಬ್ ಖಾಪರ್ಡೆ ಅಮರಾವತಿಯಲ್ಲಿ ಪ್ರಸಿದ್ಧರಾದ, ಶ್ರೀಮಂತ ನ್ಯಾಯವಾದಿ. ಅಸಾಧಾರಣ ಮನುಷ್ಯ. ಕೌನ್ಸಿಲ್ ಆಫ್ ಸ್ಟೇಟ್ ಸದಸ್ಯರು. ಬುದ್ಧಿಮಾನ್, ಒಳ್ಳೆಯ ವಾಗ್ಮಿ. ೧೯೧೦ರಲ್ಲಿ ಅವರು ಮೊದಲನೆಯ ಸಲ ಶಿರಡಿಗೆ ಭೇಟಿ ಕೊಟ್ಟರು. ಬಾಬಾರ ದರ್ಶನ ಮಾಡಿ, ಅವರಿಂದ ಪ್ರಭಾವಿತರಾಗಿ, ಅವರಿಗೆ ಶರಣಾದರು. ಮತ್ತೆ ಒಂದು ವರ್ಷದ ನಂತರ, ಅವರು ಸಂಸಾರದೊಡನೆ ಬಂದು, ಅಲ್ಲಿ ಹಲವಾರು ತಿಂಗಳಕಾಲ ಇದ್ದರು. ಅವರು ಆಗ ಬರೆದ ತಮ್ಮ ದಿನಚರಿಯನ್ನು ಇಂಗ್ಲಿಷಿನಲ್ಲಿ ಸಂಸ್ಥಾನದವರು ಪ್ರಕಟಿಸಿದ್ದಾರೆ. ಅಷ್ಟು ಬುದ್ಧಿಮಾನ್, ವಾಗ್ಮಿ ಎಂದೆಲ್ಲಾ ಹೆಸರು ಪಡೆದಿದ್ದರೂ, ಬಾಬಾರ ಮುಂದೆ ನಿಂತಾಗ, ಅವರು ಮೂಕರಾಗಿಹೋಗುತ್ತಿದ್ದರು. ವಿದ್ಯಾರಣ್ಯ ಸ್ವಾಮಿಗಳಿಂದ ವಿರಚಿತವಾದ ಅದ್ವೈತವನ್ನು ಪ್ರತಿಪಾದಿಸುವ "ಪಂಚದಶಿ"ಯನ್ನು ನಿರರ್ಗಳವಾಗಿ ವ್ಯಾಖ್ಯಾನಮಾಡಬಲ್ಲ ಖಾಪರ್ಡೆ, ಬಾಬಾರ ಮುಂದೆ ಬಾಯಿ ಬಿಡುತ್ತಿರಲಿಲ್ಲ. ಮಿಕ್ಕವರೆಲ್ಲಾ ಎಷ್ಟೇ ಮಾತನಾಡಿದರೂ, ಖಾಪರ್ಡೆ, ಬೂಟಿ, ನೂಲ್ಕರ್, ಮೂವರೂ ಮಾತ್ರ ಬಾಬಾ ಮುಂದೆ ಎಂದೂ ಮೌನವಾಗಿ ಇರುತ್ತಿದ್ದರು. ಆತ್ಮ ಸಾಕ್ಷಾತ್ಕಾರವನ್ನು ಪಡೆದವರ ಮುಂದೆ ಲೌಕಿಕ ಜ್ಞಾನ ಏನೂ ಪ್ರಯೋಜನಕ್ಕೆ ಬರುವುದಿಲ್ಲ.

ಖಾಪರ್ಡೆ ಶಿರಡಿಯಲ್ಲಿ ನಾಲ್ಕು ತಿಂಗಳಿದ್ದರು. ಅವರ ಪತ್ನಿ, ಶ್ರೀಮತಿ ಲಕ್ಷ್ಮೀಬಾಯಿ ಖಾಪರ್ಡೆ ಅಲ್ಲಿ ಏಳು ತಿಂಗಳಿದ್ದರು. ಆಕೆ ಬಾಬಾರಲ್ಲಿ ಅತಿಶಯವಾದ ಭಕ್ತಿಭಾವದಿಂದ ಕೂಡಿದವರಾಗಿದ್ದರು. ಬಾಬಾರಲ್ಲಿ ಪರಮ ಪ್ರೀತಿಯಿಟ್ಟಿದ್ದ ಆಕೆ, ಪ್ರತಿದಿನವೂ ಮಧ್ಯಾನ್ಹ ತಾನೇ ಮಾಡಿದ ಅಡಿಗೆಯನ್ನು ತಟ್ಟೆಯಲ್ಲಿಟ್ಟುಕೊಂಡು, ಮಸೀದಿಗೆ ತಂದು ಬಾಬಾರಿಗೆ ನೈವೇದ್ಯವೆಂದು ಅರ್ಪಿಸಿ, ಬಾಬಾ ಅದನ್ನು ತಿಂದಮೇಲೆ ಮನೆಗೆ ಹೋಗಿ ತಾನು ಊಟ ಮಾಡುತ್ತಿದ್ದರು. ಆಕೆಯ ಅಕುಂಠಿತ ಭಕ್ತಿಯನ್ನು ಕಂಡ ಬಾಬಾ ಅದನ್ನು ಇತರರಿಗೂ ತೋರಿಸಬೇಕೆಂದು ಮನಸ್ಸು ಮಾಡಿದರು.

ಮಾರನೆಯ ದಿನ ಎಂದಿನಂತೆ ಶ್ರೀಮತಿ ಖಾಪರ್ಡೆ ಮಧ್ಯಾಹ್ನ ಸಾಂಜಾ, ಪೂರಿ, ಅನ್ನ, ರಸ, ಖೀರು ಎಲ್ಲವನ್ನೂ ತಟ್ಟೆಯಲ್ಲಿಟ್ಟು ಮುಚ್ಚಿಟ್ಟುಕೊಂಡು, ಮಸೀದಿಗೆ ನೈವೇದ್ಯಕ್ಕೆ ತಂದರು. ಆಕೆ ಇನ್ನೂ ಒಳಕ್ಕೆ ಬರುತ್ತಿದ್ದಹಾಗೆಯೇ, ಬಾಬಾ ಆಕೆ ತಂದಿದ್ದ ತಟ್ಟೆಯನ್ನು ತೆಗೆದುಕೊಂಡು, ಅದರಲ್ಲಿದ್ದುದನ್ನೆಲ್ಲಾ ಒಂದೊಂದಾಗಿ ತಿನ್ನಲು ಪ್ರಾರಂಭಿಸಿದರು. ದಿನವೂ ಬಲವಂತಮಾಡುವವರೆಗೂ ಊಟಕ್ಕೆ ಏಳದೇ ಇರುತ್ತಿದ್ದ ಬಾಬಾ, ಇಂದು ಇದೇನು ಹೀಗೆ ಮಾಡಿದರು ಎಂದು ಇದನ್ನೆಲ್ಲಾ ನೋಡುತ್ತಿದ್ದ ಜನಕ್ಕೆ ಆಶ್ಚರ್ಯವಾಯಿತು. ಆಗ ಶ್ಯಾಮಾ, "ದೇವಾ, ಏಕೆ ಬೇಧಭಾವ? ಇತರರು ಕೊಟ್ಟ ನೈವೇದ್ಯವನ್ನು ಕಣ್ಣೆತ್ತಿಕೂಡಾ ನೋಡುವುದಿಲ್ಲ, ಹಾಗೆಯೇ ತಳ್ಳಿಬಿಡುತ್ತೀಯೆ. ಈಕೆ ತಂದ ನೈವೇದ್ಯವನ್ನು ಚೂರೂ ಬಿಡದಂತೆ, ಬೇರೆ ಯಾರಿಗೂ ಇರದಂತೆ, ನೀನೇ ಎಲ್ಲವನ್ನು ತಿನ್ನುತ್ತಿದ್ದೀಯೇ? ಆಕೆಯ ಅಡಿಗೆಯಲ್ಲಿ ಏನು ಅಂತಹ ವಿಶೇಷ?" ಎಂದು ಕೇಳಿದರು. ಅದಕ್ಕೆ ಬಾಬಾ, "ನಾನು ಆಕೆಯನ್ನು ಬಹಳ ಕಾಲವಾದಮೇಲೆ ನೋಡುತ್ತಿದ್ದೇನೆ. ಆಕೆ ತನ್ನ ಹಿಂದಿನ ಜನ್ಮದಲ್ಲಿ ಒಬ್ಬ ವರ್ತಕನ ಹತ್ತಿರ ಸಮೃದ್ಧಿಯಾಗಿ ಹಾಲು ಕೊಡುವ ಹಸುವಾಗಿದ್ದಳು. ಅದಾದಮೇಲೆ ಒಬ್ಬ ತೋಟಗಾರನ ಮನೆಯಲ್ಲಿ ಹುಟ್ಟಿದಳು. ನಂತರ ಆಕೆ ಕ್ಷತ್ರಿಯಕುಲದಲ್ಲಿ ಹುಟ್ಟಿ ವೈಶ್ಯನೊಬ್ಬನನ್ನು ಮದುವೆಯಾದಳು. ನಂತರ ಬ್ರಾಹ್ಮಣ ಕುಲದಲ್ಲಿ ಹುಟ್ಟಿದ್ದಾಳೆ. ಆಕೆ ಪ್ರೀತಿ ವಿಶ್ವಾಸಗಳಿಂದ ಅಡಿಗೆ ಮಾಡಿ ತಂದಿದ್ದಾಳೆ" ಎಂದು ಹೇಳುತ್ತಾ ಬಾಬಾ ತಟ್ಟೆಯಲ್ಲಿದ್ದುದನ್ನೆಲ್ಲಾ ಮುಗಿಸಿ ತಟ್ಟೆ ಖಾಲಿ ಮಾಡಿದರು. ಕೈ-ಬಾಯಿ ತೊಳೆದು, ತಾನು ತಿಂದ ಆಹಾರದಿಂದ ತನಗೆ ತೃಪ್ತಿಯಾಯಿತೆಂದು ಸೂಚಿಸುವ ಹಾಗೆ ಒಂದು ತೇಗು ತೇಗಿ, ತಮ್ಮ ಜಾಗದಲ್ಲಿ ಹೋಗಿ ಕುಳಿತರು.

ಶ್ರೀಮತಿ ಖಾಪರ್ಡೆ ಬಾಬಾರ ಪಾದಗಳ ಬಳಿ ಕುಳಿತು, ಮೃದುವಾಗಿ ಅವರ ಪಾದಗಳನ್ನು ಒತ್ತುತ್ತಾ ಕುಳಿತರು. ಆಕೆ ಪಾದಗಳನ್ನು ಒತ್ತುತ್ತಿದ್ದಾಗಲೇ, ಬಾಬಾ ಕೂಡಾ ಆಕೆಯ ತೋಳುಗಳನ್ನು ಮೆತ್ತಗೆ ಮೃದುವಾಗಿ ಒತ್ತಲು ಅರಂಭಿಸಿದರು. ಇದನ್ನು ಕಂಡ ಶ್ಯಾಮಾ ಉಲ್ಲಾಸಗೊಂಡು, " ಓಹ್, ಎಂತಹ ದೃಶ್ಯವನ್ನು ನೋಡುತ್ತಿದ್ದೇವೆ ನಾವು! ದೇವರು ಮತ್ತು ಭಕ್ತೆ. ಒಬ್ಬರಿನ್ನೊಬ್ಬರ ಸೇವೆಯಲ್ಲಿ ಮಗ್ನರಾಗಿದ್ದಾರೆ" ಎಂದರು. ಆಕೆಯ ಭಕ್ತಿಯನ್ನು ಕಂಡ ಬಾಬಾ ಅತ್ಯಂತ ಸಂತೋಷದಿಂದ ಆಕೆಯ ಕಿವಿಯಲ್ಲಿ ಮೆಲ್ಲಗೆ ಉಸುರಿದರು, " ‘ರಾಜಾರಾಮ ರಾಜಾರಾಮಎಂದು ಯಾವಾಗಲೂ ಹೇಳಿಕೊಳ್ಳುತ್ತಿರು. ನಿನ್ನ ಜೀವನ ಸಫಲವಾಗುತ್ತದೆ." ಆಧ್ಯಾತ್ಮದಲ್ಲಿ ಹೆಚ್ಚು ತಿಳಿವಳಿಕೆ ಇಲ್ಲದವರಿಗೆ ಇದು ಗುರು ಶಿಷ್ಯ ಸಂಬಂಧಕ್ಕಿಂತ ಬೇರೆಯಾಗಿ ಕಾಣಬಹುದು. ಆದರೆ, ಇದೇ ಶಕ್ತಿಪಾತ, ಗುರುವು ಶಿಷ್ಯನಿಗೆ ತನ್ನ ಶಕ್ತಿಯನ್ನೆಲ್ಲಾ ಧಾರೆಯೆರೆಯುವುದು. ಬಾಬಾರ ಮಾತುಗಳು ಎಷ್ಟು ಶಕ್ತಿಯುತವಾಗಿತ್ತೆಂದರೆ ಕ್ಷಣದಲ್ಲೇ ಅವು ಆಕೆಯ ಹೃದಯವನ್ನು ಪ್ರವೇಶಿಸಿ ಅಲ್ಲಿ ಶಾಶ್ವತವಾಗಿ ನೆಲೆಯಾದವು.

ಗುರು ಶಿಷ್ಯರ ಸಂಬಂಧ ರೀತಿಯಲ್ಲಿರಬೇಕು. ಇಬ್ಬರೂ ಒಬ್ಬರಿನ್ನೊಬ್ಬರ ಸೇವೆಯಲ್ಲಿ ತಮ್ಮ ತಮ್ಮದೇ ಆದ ರೀತಿಯಲ್ಲಿ ನಿರತರಾಗಿರಬೇಕು. ಅವರಿಬ್ಬರಲ್ಲಿ ಯಾವ ಬೇಧವೂ ಇಲ್ಲ. ಇಬ್ಬರೂ ಒಂದೇ! ಶಿಷ್ಯ ತನ್ನ ಶಿರಸ್ಸನ್ನು ಗುರುಪಾದಗಳಲ್ಲಿಟ್ಟರೆ, ಗುರು ತನ್ನ ಕೈ ಅವನ ತಲೆಯಮೇಲಿಟ್ಟು, ಅವನಿಗೆ ತನ್ನ ಶಕ್ತಿಯನ್ನು ಧಾರೆಯೆರೆಯುತ್ತಾ, ಶಕ್ತಿ ವರ್ಗಾಯಿಸಿ ಚಕ್ರವನ್ನು ಪೂರ್ಣಗೊಳಿಸುತ್ತಾನೆ.

ಇದರೊಂದಿಗೆ ಭಾಗವತ, ವಿಷ್ಣು ಸಹಸ್ರನಾಮ, ಗೀತಾ ರಹಸ್ಯ ಮತ್ತು ಇತರ ವಿಷಯಗಳನ್ನು ಕುರಿತು ಹೇಳುವ ಇಪ್ಪತ್ತೇಳನೆಯ ಅಧ್ಯಾಯ ಮುಗಿಯಿತು. ಮುಂದಿನ ಅಧ್ಯಾಯದಲ್ಲಿ ಹೇಮಾಡ್ ಪಂತ್ ಲಕ್ಷ್ಮೀಚಂದ್, ಬರ್ಹಾಂಪುರದ ಮಹಿಳೆ, ಮೇಘಾ ಇತ್ಯಾದಿ ವಿಷಯಗಳನ್ನು ಹೇಳುತ್ತಾರೆ

||ಶ್ರೀ ಸದ್ಗುರು ಸಾಯಿನಾಥಾರ್ಪಣಮಸ್ತು||ಶುಭಂ ಭವತು||
||ಓಂ ಶಾಂತಿಃ ಶಾಂತಿಃ ಶಾಂತಿಃ||