||ಶ್ರೀ ಸಾಯಿ ಸಚ್ಚರಿತ್ರೆ||
||ಐವತ್ತನೆಯ ಅಧ್ಯಾಯ||
||ಭಕ್ತತ್ರಯರ ವೃತ್ತಾಂತ||
ಶ್ರೀ ಗಣೇಶಾಯ ನಮಃ ಶ್ರೀ ಸರಸ್ವತಯೇ ನಮಃ
ಶ್ರೀ ವೆಂಕಟೇಶಾಯ ನಮಃ ಶ್ರೀ ಸಾಯಿನಾಥಾಯ ನಮಃ
ಶ್ರೀ ಸದ್ಗುರುಭ್ಯೋನ್ನಮಃ
ಮರಾಠಿ ಮೂಲದ ಸಚ್ಚರಿತ್ರೆಯ ಐವತ್ತನೆಯ ಅಧ್ಯಾಯವನ್ನು ಮುವ್ವತ್ತೊಂಭತ್ತನೆಯ ಅಧ್ಯಾಯದೊಡನೆ ಸೇರಿಸಿರುವುದರಿಂದ, ಇಲ್ಲಿ ಐವತ್ತೊಂದನೆಯ ಅಧ್ಯಾಯವನ್ನು ಐವತ್ತನೆಯ ಅಧ್ಯಾಯವಾಗಿ ಪರಿಗಣಿಸಲಾಗಿದೆ.
ಈ ಅಧ್ಯಾಯದಲ್ಲಿ ಹೇಮಾಡ್ ಪಂತ್, ಕಾಕಾ ಸಾಹೇಬ್ ದೀಕ್ಷಿತ್, ಶ್ರೀ ಟೆಂಬೆ ಸ್ವಾಮಿ, ಬಲರಾಮ ಧುರಂಧರರ ಕಥೆಗಳು ಇತ್ಯಾದಿ ವಿಷಯಗಳನ್ನು ಕುರಿತು ಹೇಳುತ್ತಾರೆ.
ಸದ್ಗುರು ಸಾಯಿ
ಹೇ, ಸಾಯಿನಾಥ, ಸದ್ಗುರು, ನೀನೇ ನಮ್ಮ ಆಧಾರ. ಗೀತೆಯಲ್ಲಿ ಹೇಳಿರುವಂತೆ, ಧರ್ಮವನ್ನು ಪಾಲಿಸಲು ನಮಗೆ ಶಿಕ್ಷಣಕೊಡುವ ಗುರು. ನಿನ್ನ ಕೃಪಾ ದೃಷ್ಟಿ ನಮ್ಮ ಮೇಲೆ ಸದಾ ಹರಿಯುತ್ತಿರಲಿ. ಮಲಯಗಿರಿಯಲ್ಲಿ ಚಂದನ ವೃಕ್ಷಗಳು ಹೇಗೆ ಬಿಸಿಲಿನ ತಾಪವನ್ನು ತಗ್ಗಿಸುತ್ತವೆಯೋ, ಹೇಗೆ ಮೇಘಗಳು ವರ್ಷ ಧಾರೆಯನ್ನು ಸುರಿಸಿ ತಂಪನ್ನುಂಟು ಮಾಡುತ್ತವೆಯೋ ಹಾಗೆ ನಿನ್ನ ಕಥೆಗಳು ಓದುಗರಿಗೂ, ಕೇಳುಗರಿಗೂ ಶಾಂತಿ-ದಾಂತಿಗಳನ್ನು ಕೊಡುತ್ತವೆ. ಹೇಳುವ ಬಾಯಿ, ಕೇಳುವ ಕಿವಿ ಎರಡೂ ಪುನೀತವಾಗುತ್ತವೆ. ಸದ್ಗುರುವಿನ ಕಥೆಗಳ ಶ್ರವಣ ಮಾತ್ರದಿಂದಲೇ ಆ ಗುರುವಿನ ಆಶಿಸ್ಸುಗಳನ್ನು ಪಡೆಯಬಹುದು. ಸದ್ಗುರುವಿನ ದಯೆಯಿಲ್ಲದೆ, ಆ ಕೃಪಾಳುವಿನ ಅನುಗ್ರಹವಿಲ್ಲದೆ ನಾವು ಮಾಡಿದ ಯಾವುದೇ ಸಾಧನೆಯೂ ನಮ್ಮನ್ನು ನಮ್ಮ ಗಮ್ಯಕ್ಕೆ ಸೇರಿಸಲಾರದು. ಈ ಕೆಳಗಿನ ಕಥೆಗಳು ಅದನ್ನು ನಿರೂಪಿಸುತ್ತವೆ.
ಕಾಕಾ ಸಾಹೇಬ್ ದೀಕ್ಷಿತ್(೧೮೬೪ - ೧೯೨೬)
ಕಾಕಾ ಸಾಹೇಬ್ ದೀಕ್ಷಿತ್ ಎಂದು ಕರೆಯಲ್ಪಡುತ್ತಿದ್ದ ಹರಿ ಸೀತಾರಾಮ್ ದೀಕ್ಷಿತರು, ೧೮೬೪ರಲ್ಲಿ ಖಾಂಡ್ವಾದಲ್ಲಿನ ವಾದಾನಗರದ ಬ್ರಾಹ್ಮಣ ವಂಶದಲ್ಲಿ ಹುಟ್ಟಿದರು. ಅವರ ಪ್ರೈಮರಿ ಶಿಕ್ಷಣ, ಖಾಂಡ್ವಾ ಮತ್ತು ಹಿಂಗನಘಾಟ್ಗಳಲ್ಲಾಯಿತು. ನಾಗಪುರದಲ್ಲಿ ಸೆಕೆಂಡರಿ ಶಿಕ್ಷಣ, ಉನ್ನತ ಶ್ರೇಣಿಯಲ್ಲಿ ಮುಗಿಸಿ, ಉನ್ನತ ಶಿಕ್ಷಣಕ್ಕಾಗಿ ಬೊಂಬಾಯಿಗೆ ಬಂದರು. ಅಲ್ಲಿ ಮೊದಲು ವಿಲ್ಸನ್ ಕಾಲೇಜು, ನಂತರ ಎಲಿಫಿನ್ಸ್ಟಯನ್ ಕಾಲೇಜುಗಳಲ್ಲಿ ಓದಿದರು. ೧೮೮೩ರಲ್ಲಿ ಪದವೀಧರರಾಗಿ, ಕಾನೂನು ಮತ್ತು ಸಾಲಿಸಿಟರ್ ಪರೀಕ್ಷೆಗಳಲ್ಲೂ ಉತ್ತೀರ್ಣರಾಗಿ, ಲಿಟ್ಟಲ್ ಕಂಪನಿಯಲ್ಲಿ ಕೆಲಸಮಾಡಿದರು. ನಂತರ ತಮ್ಮದೇ ಆದ ಕಾನೂನು ಸಲಹಾ ಸಂಸ್ಥೆಯನ್ನು ಆರಂಭಿಸಿದರು.
೧೯೦೯ರವರೆಗೂ ಕಾಕಾ ಸಾಹೇಬರು ಸಾಯಿಬಾಬಾರ ಹೆಸರನ್ನು ಕೇಳಿರಲಿಲ್ಲ. ಆ ನಂತರದ ಕಾಲದಲ್ಲಿ, ಅವರು ಬಾಬಾರ ಅತಿ ಸನ್ನಿಹಿತ ಭಕ್ತರಲ್ಲೊಬ್ಬರಾದರು. ಅವರು ಲೋನಾವಳದಲ್ಲಿದ್ದಾಗ, ಕಾಕತಾಳೀಯವೋ ಎನ್ನುವಂತೆ ತಮ್ಮ ಹಳೆಯ ಸ್ನೇಹಿತ, ನಾನಾ ಸಾಹೇಬ್ ಚಾಂದೋರ್ಕರರನ್ನು, ಬಹಳ ಕಾಲವಾದ ಮೇಲೆ ಭೇಟಿಯಾದರು. ಅವರಿಬ್ಬರೂ ಬಹಳ ಹೊತ್ತು ತಮ್ಮ ಹಳೆಯ ನೆನಪುಗಳನ್ನು ಕುರಿತು ಮಾತನಾಡುತ್ತಿದ್ದಾಗ, ಕಾಕಾ ಸಾಹೇಬರು ತಾವು ಲಂಡನ್ನಿನಲ್ಲಿದ್ದಾಗ, ರೈಲು ಹತ್ತುವಾಗ ಕಾಲುಜಾರಿ ಬಿದ್ದದ್ದು, ಆಗ ಮುರಿದ ಕಾಲು ಚಿಕಿತ್ಸೆಗಳ ನಂತರವೂ, ತಮಗೆ ಇನ್ನೂ ತ್ರಾಸದಾಯಕವಾಗಿರುವುದು ಎಲ್ಲವನ್ನೂ ಹೇಳಿದರು. ಆಗ ಚಾಂದೋರ್ಕರರು ಅವರ ಕಾಲಿನ ಕುಂಟು, ನೋವು ಹೋಗಬೇಕಾದರೆ, ಶಿರಡಿಯ ಸಾಯಿಬಾಬಾರನ್ನು ದರ್ಶಿಸಬೇಕು ಎಂದು ಹೇಳಿ, ತನ್ನ ಸದ್ಗುರುವಿನ ಬಗ್ಗೆ ಎಲ್ಲ ವಿವರಗಳನ್ನೂ ತಿಳಿಸಿದರು. ವಿಶೇಷವಾಗಿ ಬಾಬಾ ಹೇಳುತ್ತಿದ್ದ, "ನನ್ನ ಭಕ್ತರನ್ನು, ಅವರು ಸಪ್ತಸಾಗರಗಳ ಆಚೆಯಿದ್ದರೂ, ಗುಬ್ಬಚ್ಚಿಯ ಕಾಲಿಗೆ ದಾರ ಕಟ್ಟಿ ಎಳೆದು ತರುವಂತೆ, ಎಳೆದು ತರುತ್ತೇನೆ" ಎಂಬ ಮಾತುಗಳನ್ನು ಮತ್ತೆ ಮತ್ತೆ ಹೇಳಿದರು. ಬಾಬಾರ ಸನ್ನಿಹಿತರಲ್ಲದವರು, ಅವರಿಂದ ಆಕರ್ಷಿತರಾಗುವುದಿಲ್ಲ, ಅವರ ದರ್ಶನವೂ ಆಗುವುದಿಲ್ಲ ಎಂದೂ ನಾನಾ ಸಾಹೇಬರು ಹೇಳಿದರು. ಅದನ್ನು ಕೇಳಿದ ಕಾಕಾ ಸಾಹೇಬರು, ಬಹಳ ಸಂತಸ, ಕುತೂಹಲಭರಿತರಾಗಿ, ತಾನು ಶಿರಡಿಗೆ ತಪ್ಪದೇ ಹೋಗುತ್ತೇನೆಂದೂ,
ಬಾಬಾರನ್ನು ತನ್ನ ಕಾಲಿನ ಕುಂಟು ವಾಸಿಮಾಡುವುದರ ಬದಲು, ತನ್ನ ಮನಸ್ಸನ್ನು ಕುಂಟು ಮಾಡಿ, ಅದನ್ನು ಒಂದು ಕಡೆ ಸ್ಥಿರವಾಗಿ ನಿಲ್ಲಿಸಿ, ಎಂದು ಬೇಡಿಕೊಳ್ಳುತ್ತೇನೆ ಎಂದೂ ಹೇಳಿದರು.
ಹಲವು ದಿನಗಳಾದ ಮೇಲೆ ಕಾಕಾ ಸಾಹೇಬರು, ವಿಧಾನ ಸಭೆಯ ಮತಗಳಿಕೆಗಾಗಿ ಅಹಮದ್ನಗರಕ್ಕೆ ಬಂದು, ಕಾಕಾ ಸಾಹೇಬ್ ಮಿರೀಕರರ ಮನೆಯಲ್ಲಿ ಇಳಿದುಕೊಂಡರು. ಕಾಕಾ ಸಾಹೇಬ್ ಮಿರೀಕರರ ಮಗ, ಕೋಪರಗಾಂವ್ನ ಮಾಮಾಲತದಾರರಾದ, ಬಾಲಾ ಸಾಹೇಬ್ ಮಿರೀಕರ್ ಸಹ, ಆ ಸಮಯದಲ್ಲಿ, ಅಲ್ಲೇ ಇದ್ದರು. ಅವರು ಕುದುರೆಗಳ ಪ್ರದರ್ಶನಕ್ಕಾಗಿ ಬಂದಿದ್ದರು. ಕಾಕಾ ಸಾಹೇಬ್ ದೀಕ್ಷಿತರು, ಚುನಾವಣೆಯ ಕೆಲಸ ಮುಗಿದಮೇಲೆ ಶಿರಡಿಗೆ ಹೋಗಿ ಬಾಬಾರ ದರ್ಶನ ಮಾಡುವ ಇಚ್ಛೆಯನ್ನು ವ್ಯಕ್ತಪಡಿಸಿದರು. ತಂದೆ ಮಗ ಇಬ್ಬರೂ, ಅವರನ್ನು ಶಿರಡಿಗೆ ಯಾರ ಜೊತೆಯಲ್ಲಿ ಕಳುಹಿಸಬೇಕೆಂಬ ಯೋಚನೆಯಲ್ಲಿದ್ದರು. ಕಾಕಾ ಸಾಹೇಬರನ್ನು ಹೇಗೆ ಶಿರಡಿಗೆ ಕರೆಸಿಕೊಳ್ಳಬೇಕು ಎಂಬುದನ್ನು ಬಾಬಾ ಕೂಡಾ ಶಿರಡಿಯಲ್ಲಿ ಆಲೋಚಿಸುತ್ತಿದ್ದರು.
ಅದೇ ಸಮಯದಲ್ಲಿ, ಶ್ಯಾಮಾರ ಅತ್ತೆಯವರಿಗೆ ಮೈಯಲ್ಲಿ ಹುಷಾರಿಲ್ಲವೆಂದೂ, ಅವರು ತಕ್ಷಣವೇ ಅಹಮದ್ ನಗರಕ್ಕೆ ಬರಬೇಕೆಂದೂ ತಂತಿ ಬಂತು. ಬಾಬಾರ ಅಪ್ಪಣೆ ಪಡೆದು, ಶ್ಯಾಮಾ ತಕ್ಷಣವೇ ಅಹಮದ್ ನಗರಕ್ಕೆ ಹೊರಟರು. ಅಲ್ಲಿ, ತಮ್ಮ ಅತ್ತೆಯವರು ಸ್ವಲ್ಪ ಸುಧಾರಿಸಿಕೊಂಡಿರುವುದನ್ನು ನೋಡಿ ಅವರು ಸಮಾಧಾನಗೊಂಡರು.
ಕಾಕತಾಳೀಯವೋ ಎಂಬಂತೆ, ಅಹಮದ್ ನಗರದಲ್ಲಿ ನಾನಾ ಸಾಹೇಬ್ ಪಾನ್ಶೆ ಮತ್ತು ಅಪ್ಪಾ ಸಾಹೇಬ್ ಗದ್ರೆ ಇಬ್ಬರೂ ಶ್ಯಾಮಾರನ್ನು ಭೇಟಿಯಾದರು. ಅವರು ಶ್ಯಾಮಾರನ್ನು ಮಿರೀಕರರ ಮನೆಗೆ ಹೋಗಿ, ಕಾಕಾ ಸಾಹೇಬ್ ದೀಕ್ಷಿತರನ್ನು ತಮ್ಮ ಜೊತೆಯಲ್ಲಿ ಶಿರಡಿಗೆ ಕರೆದುಕೊಂಡು ಹೋಗಲು ಹೇಳಿದರು. ಶ್ಯಾಮಾರು ಅಹಮದ್ ನಗರದಲ್ಲಿರುವ ವಿಷಯವನ್ನು ಅವರು ಮಿರೀಕರರಿಗೂ ತಿಳಿಸಿದರು. ಶ್ಯಾಮಾರು ಮಿರೀಕರರ ಮನೆಗೆ ಸಾಯಂಕಾಲ ಹೋದರು. ಅವರಿಗೆ ಕಾಕಾ ಸಾಹೇಬ್ ದೀಕ್ಷಿತರನ್ನು ಮಿರೀಕರರು ಪರಿಚಯ ಮಾಡಿಕೊಟ್ಟರು. ಅವರಿಬ್ಬರೂ ಅಂದು ರಾತ್ರಿ ಹತ್ತು ಗಂಟೆಯ ರೈಲಿನಲ್ಲಿ ಕೋಪರಗಾಂವ್ಗೆ ಹೋಗುವುದೆಂದು ನಿಶ್ಚಯವಾಯಿತು. ಆಗ ಒಂದು ಗಮನಾರ್ಹವಾದ ಘಟನೆ ನಡೆಯಿತು.
ಬಾಲಾ ಸಾಹೇಬ್ ಮಿರೀಕರರು ಒಂದು ದೊಡ್ಡ ಚಿತ್ರಪಟವನ್ನು ತಂದು, ಮುಚ್ಚಿದ್ದ ಬಟ್ಟೆಯ ಮುಸುಕನ್ನು ತೆಗೆದರು. ಅದನ್ನು ಕಂಡ ಕಾಕಾ ಸಾಹೇಬರಿಗೆ ಆಶ್ಚರ್ಯವಾಯಿತು. ಅದು ಬಾಬಾರ ಚಿತ್ರಪಟ. ತಾನು ಯಾರನ್ನು ನೋಡಬೇಕೆಂದು ಶಿರಡಿಗೆ ಹೋಗಬೇಕೆಂದುಕೊಂಡಿದ್ದರೋ, ಅವರೇ ತಮ್ಮನ್ನು ಸ್ವಾಗತಿಸಲು ಇಲ್ಲಿಗೆ ಬಂದಿದ್ದಾರೆಂಬ ಭಾವನೆ ಅವರಲ್ಲಿ ಮೂಡಿ, ಅವರ ಕಣ್ಣು ತುಂಬಿ, ನೀರು ಹರಿಯಿತು. ಅಲ್ಲೇ ಅವರು ಬಾಬಾರ ಚಿತ್ರಪಟಕ್ಕೆ ನಮಸ್ಕರಿಸಿದರು. ಆ ಚಿತ್ರಪಟ ಮೇಘಾ ಅವರದು. ಅದರ ಗಾಜು ಒಡೆದದ್ದರಿಂದ, ದುರಸ್ತಿಗಾಗಿ ಬಂದಿತ್ತು. ಮಿರೀಕರರು ಅದನ್ನು ದುರಸ್ತಿಮಾಡಿಸಿ ಶಿರಡಿಗೆ ಕಳುಹಿಸಲು ಸಿದ್ಧಮಾಡಿಟ್ಟಿದ್ದರು. ಆ ಚಿತ್ರಪಟವನ್ನು ಶ್ಯಾಮಾರ ಜೊತೆಯಲ್ಲಿ ಶಿರಡಿಗೆ ಕಳುಹಿಸಬೇಕೆಂದಾಯಿತು.
ಶ್ಯಾಮಾ, ಕಾಕಾ ಸಾಹೇಬ್ ದೀಕ್ಷಿತ್ ಇಬ್ಬರೂ ರಾತ್ರಿ ಸಕಾಲಕ್ಕೆ ರೈಲು ನಿಲ್ದಾಣ ತಲುಪಿ, ಎರಡನೆಯ ದರ್ಜೆಯ ಟಿಕೆಟ್ಟನ್ನು ಪಡೆದರು. ರೈಲು ಬಂದಾಗ ಎರಡನೆಯ ದರ್ಜೆಯ ಬೋಗಿ ಕಿಕ್ಕಿರಿದು ತುಂಬಿಹೋಗಿತ್ತು. ಅವರಿಗೆ ಜಾಗ ಸಿಕ್ಕುವುದು ಸಾಧ್ಯವೇ ಇರಲಿಲ್ಲ. ಅದೃಷ್ಟವಶಾತ್, ದೀಕ್ಷಿತರಿಗೆ ಆ ರೈಲಿನ ಗಾರ್ಡ್ ಪರಿಚಯದವನಾಗಿದ್ದುದರಿಂದ ಅವರಿಗೆ ಮೊದಲನೆಯ ದರ್ಜೆಯ ಬೋಗಿಯಲ್ಲಿ ಜಾಗ ಕೊಟ್ಟು ಕೂಡಿಸಿದ. ಅವರು ಸುಖವಾಗಿ ಪ್ರಯಾಣ ಮಾಡಿ ಕೋಪರಗಾಂವ್ ತಲುಪಿದರು. ಅಲ್ಲಿ ರೈಲು ಇಳಿದಾಗ, ಅವರಿಗೆ ಮತ್ತೊಂದು ಆಶ್ಚರ್ಯ ಕಾದಿತ್ತು. ನಾನಾ ಸಾಹೇಬ್ ಚಾಂದೋರ್ಕರರು ಪ್ಲಾಟ್ಫಾ.ರಮ್ ಮೇಲೆ ನಿಂತಿದ್ದರು. ಅವರೂ ಶಿರಡಿಗೆ ಹೊರಟಿದ್ದಾರೆ ಎಂದು ತಿಳಿದು, ದೀಕ್ಷಿತರಿಗೆ ಅತ್ಯಂತ ಸಂತೋಷವಾಯಿತು. ಗೋದಾವರಿಯಲ್ಲಿ ಸ್ನಾನಮಾಡಿ, ಟಾಂಗಾದಲ್ಲಿ ಅವರು ಮೂವರೂ ಶಿರಡಿಗೆ ಹೊರಟರು.
ಶಿರಡಿ ಸೇರಿ, ಮಸೀದಿಗೆ ಹೋಗಿ, ಮೂವರೂ ಬಾಬಾರ ದರ್ಶನ ಮಾಡಿ, ಅವರ ಪಾದಗಳಿಗೆ ನಮಸ್ಕರಿಸಿದರು. ಆಗ ಬಾಬಾ ದೀಕ್ಷಿತರಿಗೆ, "ನಿನಗೋಸ್ಕರವಾಗಿಯೇ ಕಾದಿದ್ದೆ. ಅದಕ್ಕೇ, ನಿನ್ನನ್ನು ಕರೆತರಲು ಶಾಮ್ಯಾನನ್ನು ಕಳುಹಿಸಿದ್ದೆ" ಎಂದರು. ಕಾಕಾ ಸಾಹೇಬರು ಭಾವಪರವಶರಾಗಿಹೋದರು. ಧಾರಾಕಾರವಾಗಿ ಕಣ್ಣೀರು ಸುರಿಯಿತು. ಗದ್ಗದ ಕಂಠರಾಗಿ, ಮಾತೇ ಹೊರಡದಂತಾಯಿತು. ಅವರು ಹಿಂದೆಂದೂ ಅನುಭವಿಸಿಲ್ಲದ್ದಂತಹ ಸಂತೋಷ ಅವರಲ್ಲಿ ಉಕ್ಕಿಬರುತ್ತಿತ್ತು.
ಇದಾದಮೇಲೆ ದೀಕ್ಷಿತರು, ಬಾಬಾರಿಗೆ ಸನ್ನಿಹಿತರಾಗಿ ಅನೇಕ ವರ್ಷಗಳು, ಅವರ ಸನ್ನಿಧಿಯಲ್ಲಿ ಕಳೆದರು. ಶಿರಡಿಯಲ್ಲಿ ಒಂದು ವಾಡಾ ಕಟ್ಟಿ (ದೀಕ್ಷಿತ್ ವಾಡಾ) ಅದನ್ನೇ ತಮ್ಮ ಶಾಶ್ವತ ವಾಸ ಸ್ಥಾನವನ್ನಾಗಿ ಮಾಡಿಕೊಂಡರು. ಅವರಿಗೆ ಬಾಬಾ ನಾನಾ ರೀತಿಯ ಅನೇಕ ಅನುಭವಗಳನ್ನು ದಯಪಾಲಿಸಿದರು. ಅವುಗಳೆಲ್ಲವನ್ನೂ ಇಲ್ಲಿ ವಿವರಿಸುವುದು ಅಸಾಧ್ಯ. ಅವುಗಳನ್ನು ತಿಳಿಯಬೇಕೆಂಬ ಇಚ್ಛೆಯಿರುವ ಓದುಗರು ಸಾಯಿಲೀಲಾ ಪತ್ರಿಕೆಯ ಸಂಪುಟ ೧೨, ಸಂಚಿಕೆ ೬-೯ನ್ನು ನೋಡಬಹುದು. ಬಾಬಾರವರು ದೀಕ್ಷಿತರಲ್ಲಿಟ್ಟಿದ್ದ ಅಪಾರ ಪ್ರೇಮವನ್ನು ತೋರಿಸುವ ಒಂದೇ ಒಂದು ಉದಾಹರಣೆಯನ್ನು ಇಲ್ಲಿ ಹೇಳಲಾಗಿದೆ.
ದೀಕ್ಷಿತರಿಗೆ, ಅವರ ಕಾಲಬಂದಾಗ, ಅವರನ್ನು ವಿಮಾನದಲ್ಲಿ ಕರೆದುಕೊಂಡು ಹೋಗುತ್ತೇನೆ ಎಂಬ ಭರವಸೆ ಬಾಬಾ ಕೊಟ್ಟಿದ್ದರು. ಜೂಲೈ, ೫, ೧೯೨೬ರಂದು ಕಾಕಾ ಸಾಹೇಬರು ರೈಲಿನಲ್ಲಿ ಹೇಮಾಡ್ ಪಂತ್ ಜೊತೆಯಲ್ಲಿ ಪ್ರಯಾಣ ಮಾಡುತ್ತಿದ್ದರು. ಇಬ್ಬರೂ ಬಾಬಾರ ವಿಚಾರವಾಗಿ ಮಾತನಾಡುತ್ತಿದ್ದರು, ದೀಕ್ಷಿತರು ಬಾಬಾ ಬಗ್ಗೆಯೇ ಗಾಢವಾಗಿ ಯೋಚನೆಮಾಡುತ್ತಾ, ಇದ್ದಕ್ಕಿದ್ದಹಾಗೇ, ತಮ್ಮ ತಲೆಯನ್ನು ಹೇಮಾಡ್ ಪಂತರ ಭುಜಕ್ಕೆ ಒರಗಿಸಿದರು. ಭಯ, ನೋವು ಯಾವುದೂ ಇಲ್ಲದೆ, ಶಾಂತಚಿತ್ತರಾಗಿ ತಮ್ಮ ಕೊನೆಯುಸಿರನ್ನು ಬಿಟ್ಟರು. ಬಾಬಾರ ಅತ್ಯಂತ ಸನ್ನಿಹಿತ ಭಕ್ತರಲ್ಲೊಬ್ಬರು, ಬಾಬಾರಲ್ಲಿ ಲೀನವಾದರು.
ಶ್ರೀ ಟೇಂಬೆ ಸ್ವಾಮಿಗಳ ಕಥೆ
ಟೇಂಬೆ ಸ್ವಾಮಿಗಳೆಂದೇ ಪ್ರಸಿದ್ಧರಾಗಿದ್ದ, ಶ್ರೀ ವಾಸುದೇವಾನಂದ ಸರಸ್ವತಿ ಅವರು, ಒಂದುಸಲ ಗೋದಾವರಿ ತಟದಲ್ಲಿರುವ, ರಾಜಮಹೇಂದ್ರಿಯಲ್ಲಿ ಬೀಡು ಬಿಟ್ಟಿದ್ದರು. ಅವರು ದತ್ತಾತ್ರೇಯರ ಮತಾಚಾರ ನಿಷ್ಠ ಯೋಗಿ. ದತ್ತಾತ್ರೇಯರ ಅಚಂಚಲಭಕ್ತರು.
ಅವರನ್ನು ದರ್ಶಿಸಲು ನಾಂದೇಡ್ನ ನ್ಯಾಯವಾದಿ, ಪುಂಡಲೀಕ ರಾವು ತಮ್ಮ ಸ್ನೇಹಿತರೊಡನೆ ಹೋದರು. ಅವರು ಮಾತನಾಡುತ್ತಿದ್ದಾಗ, ಶ್ರೀ ಸಾಯಿಬಾಬಾರ ವಿಷಯವೂ ಬಂತು. ಬಾಬಾರ ಹೆಸರು ಹೇಳಿದ ತಕ್ಷಣವೇ, ಟೇಂಬೆ ಸ್ವಾಮಿಗಳು ಎರಡೂ ಕೈ ಜೋಡಿಸಿ ಗೌರವದಿಂದ ನಮಸ್ಕರಿಸಿ, ಒಂದು ತೆಂಗಿನಕಾಯಿ ಕೈಗೆ ತೆಗೆದುಕೊಂಡು, ಅದನ್ನು ಪುಂಡಲೀಕ ರಾವ್ ಅವರ ಕೈಲಿಟ್ಟು, "ಈ ಶ್ರೀಫಲವನ್ನು ನನ್ನ ಸಹೋದರ ಸಾಯಿಗೆ, ನನ್ನ ಪರವಾಗಿ, ಗೌರವ ಪೂರ್ವಕವಾಗಿ ಅರ್ಪಿಸಿ, ನನ್ನಲ್ಲಿ ಸದಾಕಾಲ ದಯಾಪೂರ್ಣರಾಗಿರುವಂತೆ ದಯವಿಟ್ಟು ಅವರಿಗೆ ಹೇಳಿ" ಎಂದರು. ನಂತರ ಟೇಂಬೆ ಸ್ವಾಮಿಗಳು ಹೇಳಿದರು, "ಸಾಮಾನ್ಯವಾಗಿ ನಾವು ಸನ್ಯಾಸಿಗಳು ಇನ್ನೊಬ್ಬರಿಗೆ ಕೈಯೆತ್ತಿ ನಮಸ್ಕಾರ ಮಾಡುವುದಿಲ್ಲ. ಆದರೆ ಶ್ರೀ ಸಾಯಿಬಾಬಾರವರು ಬಹಳ ಅಪೂರ್ವವಾದವರು." ಪುಂಡಲೀಕ ರಾವ್ ಆ ಕಾಯಿ ತೆಗೆದುಕೊಂಡು, ಅದನ್ನು ತಪ್ಪದೇ ಬಾಬಾರಿಗೆ ಅರ್ಪಿಸುವುದಾಗಿ ಸ್ವಾಮಿಯವರಿಗೆ ಮಾತುಕೊಟ್ಟರು. ಟೇಂಬೆ ಸ್ವಾಮಿಯವರು ಸಾಯಿಬಾಬಾರನ್ನು ಸಹೋದರ ಎಂದು ಕರೆದದ್ದು ಬಹಳ ಉಚಿತವಾಗಿದೆ. ಏಕೆಂದರೆ ಟೇಂಬೆ ಸ್ವಾಮಿಯವರು ಅಗ್ನಿಹೋತ್ರಿಗಳು. ಸದಾಕಾಲವೂ ಅಗ್ನಿಯನ್ನು ಉರಿಸುತ್ತಿದ್ದರು. ಬಾಬಾ ಕೂಡಾ ಧುನಿಯನ್ನು ಸದಾಕಾಲ ಉರಿಸುತ್ತಿದ್ದರು. ತಿಂಗಳಾದ ಮೇಲೆ ಪುಂಡಲೀಕ ರಾವ್, ತನ್ನ ಸ್ನೇಹಿತರೊಡನೆ ಟೇಂಬೆ ಸ್ವಾಮಿಯವರು ಕೊಟ್ಟಿದ್ದ ತೆಂಗಿನಕಾಯಿ ತೆಗೆದುಕೊಂಡು ಶಿರಡಿಗೆ ಹೊರಟರು. ಮನ್ಮಾಡ್ ಸೇರಿದಾಗ, ಎಲ್ಲರಿಗೂ ಬಾಯಾರಿಕೆಯಾಗಿ, ಹತ್ತಿರದಲ್ಲಿದ್ದ ಕಾಲುವೆಗೆ ನೀರು ಕುಡಿಯಲು ಹೊರಟರು. ಬರಿಯ ಹೊಟ್ಟೆಯಲ್ಲಿ ನೀರು ಕುಡಿಯ ಬಾರದು ಎಂದು, ತಮ್ಮ ಹತ್ತಿರವಿದ್ದ ತಿಂಡಿ ತೆಗೆದು ತಿಂದರು. ಅದು ಬಹಳ ಖಾರವಾಗಿದ್ದುದರಿಂದ ಅದಕ್ಕೆ ತಮ್ಮ ಹತ್ತಿರ ಇದ್ದ ತೆಂಗಿನಕಾಯಿ ಒಡೆದು ಅದನ್ನು ಸೇರಿಸಿ ತಿಂದು, ನೀರು ಕುಡಿದು ಮತ್ತೆ ಶಿರಡಿಗೆ ಹೊರಟರು. ಹೋಗುತ್ತಾ ದಾರಿಯಲ್ಲಿ, ಅವರಿಗೆ ತಾವು ಮಾಡಿದ ತಪ್ಪು ತಿಳಿಯಿತು. ಅವರು ತಿಂದ ತೆಂಗಿನಕಾಯಿ, ಟೇಂಬೆ ಸ್ವಾಮಿಯವರು ಸಾಯಿಬಾಬಾರಿಗೆ ಕೊಡಿ ಎಂದು ಕೊಟ್ಟಿದ್ದ ತೆಂಗಿನಕಾಯಿ. ಶಿರಡಿ ಸೇರಿದ ಮೇಲೆ ಏನೇನು ಅನಾಹುತಗಳಾಗುತ್ತವೆಯೋ ಎಂದು ಬಹಳ ಭಯಪಟ್ಟರು.
ಶಿರಡಿಗೆ ಹೋಗಿ ಬಾಬಾರ ದರ್ಶನ ಮಾಡಿ, ಅವರಿಗೆ ನಮಸ್ಕರಿಸಿದರು. ಸರ್ವಜ್ಞರಾದ ಬಾಬಾರಿಗೆ ನಡೆದಿದ್ದೆಲ್ಲವೂ ತಿಳಿದಿತ್ತು. ಸಂತರು-ಸಂತರಲ್ಲಿ ಅವರದೇ ಆದ ಒಂದು ವಾರ್ತಾ ವಿನಿಮಯದ ರೀತಿ ಇದೆ. ಬಾಬಾ ಪುಂಡಲೀಕ ರಾವ್ ಅವರನ್ನು, "ನನ್ನ ಸಹೋದರ ಕಳುಹಿಸಿದ ತೆಂಗಿನಕಾಯಿ ನನಗೆ ಕೊಡು" ಎಂದರು. ಪುಂಡಲೀಕ ರಾವ್ ತಕ್ಷಣವೇ ಅವರ ಕಾಲಿಗೆ ಬಿದ್ದು, ನಡೆದದ್ದನ್ನೆಲ್ಲಾ ವಿವರವಾಗಿ ಹೇಳಿ, ತಮ್ಮ ತಪ್ಪನ್ನು ಕ್ಷಮಿಸ ಬೇಕೆಂದೂ, ತಾವು ಇನ್ನೊಂದು ತೆಂಗಿನಕಾಯಿ ತಂದು ಕೊಡುವುದಾಗಿಯೂ ಹೇಳಿದರು. ಆಗ ಬಾಬಾ, "ಆ ತೆಂಗಿನಕಾಯಿ ಬೇರೆ ಎಲ್ಲ ಕಾಯಿಗಳಿಗಿಂತ ಹೆಚ್ಚಾದ ಮೌಲ್ಯವುಳ್ಳದ್ದು. ಸಾಧಾರಣವಾದ ಯಾವ ತೆಂಗಿನಕಾಯಿಯೂ ಅದರ ಮೌಲ್ಯಕ್ಕೆ ಸರಿತೂಗುವುದಿಲ್ಲ" ಎಂದು ಹೇಳಿ, ಮತ್ತೆ ಅವರಿಗೆ, "ಚಿಂತೆ ಮಾಡಬೇಡ. ನಿನ್ನನ್ನು ನೋಡಬೇಕೆಂಬ ಇಚ್ಛೆಯಿಂದ, ನಾನು ಆ ತೆಂಗಿನಕಾಯನ್ನು ನಿನಗೆ ಕೊಡುವಂತೆ ಮಾಡಿದೆ. ದಾರಿಯಲ್ಲಿ ನೀನು ಅದನ್ನು ಒಡೆದು ತಿಂದುಬಿಟ್ಟೆ. ಅದರ ಜವಾಬ್ದಾರಿಯನ್ನು ನೀನೇಕೆ ಹೊರುತ್ತೀಯೆ? ಯಾವುದೇ ಕೆಲಸ, ಸಣ್ಣದಾಗಲೀ, ದೊಡ್ಡದಾಗಲೀ, ‘ನಾನು ಮಾಡುತ್ತಿದ್ದೇನೆ’ ಎಂದು ಯೋಚಿಸಬೇಡ. ಅಹಂಕಾರ, ಜಂಭ, ಗರ್ವಗಳನ್ನು ಬಿಟ್ಟು, ಮಾಡಬೇಕಾದ ಕೆಲಸವನ್ನು ಮಾಡು. ಆಗ ನಿನ್ನ ಆಧ್ಯಾತ್ಮಿಕ ಪ್ರವೃತ್ತಿ ವೃದ್ಧಿಯಾಗುತ್ತದೆ" ಎಂದು ಹೇಳಿದರು. ಬಾಬಾ ಹೇಳಿದ ಈ ಆಧ್ಯಾತ್ಮಿಕ ಬುದ್ಧಿವಾದ ಎಷ್ಟು ಅದ್ಭುತವಾಗಿದೆ!
ಬಲರಾಮ್ ದುರಂಧರೆಯವರ ಕಥೆ
ಸಾಂತಾಕ್ರೂಜ್ನ ಬಲರಾಮ ದುರಂಧರೆ, ಪಥಾರೆ ಪ್ರಭು ಕುಲಕ್ಕೆ ಸೇರಿದ ಗಣ್ಯರು. ಬೊಂಬಾಯಿನ ಉಚ್ಚ ನ್ಯಾಯಾಲಯದಲ್ಲಿ ನ್ಯಾಯವಾದಿಯಾಗಿದ್ದರು. ಕಾನೂನು ಕಾಲೇಜಿನ ಪ್ರಾಂಶುಪಾಲರೂ ಆಗಿದ್ದರು. ಅವರ ಮನೆಯವರೆಲ್ಲ ಬಹಳ ಸಾತ್ವಿಕ ಸ್ವಭಾವದವರು. ಆಚಾರಶೀಲರು. ತಮ್ಮ ಕುಲಕ್ಕಾಗಿ ಬಹಳ ಸೇವೆ ಮಾಡಿದ ಬಲರಾಮ್ ದುರಂಧರೆ ಅವರು, ತಮ್ಮ ಕುಲದ ಬಗ್ಗೆ ಒಂದು ಪುಸ್ತಕವನ್ನೂ ಬರೆದಿದ್ದರು. ತದನಂತರದ ಕಾಲದಲ್ಲಿ, ಅವರು ಅಧ್ಯಾತ್ಮದ ಕಡೆಗೆ ಮನಸ್ಸು ಕೊಟ್ಟರು. ಬಹಳ ಭಕ್ತಿ ಶ್ರದ್ಧೆಗಳಿಂದ ಭಗವದ್ಗೀತೆಯನ್ನು ವ್ಯಾಖ್ಯಾನ ಸಹಿತ ಅಧ್ಯಯನ ಮಾಡಿದರು. ಜ್ಞಾನೇಶ್ವರಿ, ಮುಂತಾದ ಇನ್ನೂ ಅನೇಕ ಆಧ್ಯಾತ್ಮಿಕ ಪುಸ್ತಕಗಳನ್ನು ಓದಿದರು. ಅವರು ಪಂಡರಪುರದ ವಿಠೋಬನ ಅವಿಚ್ಛಿನ್ನ ಭಕ್ತರು. ೧೯೧೨ರಲ್ಲಿ ಅವರಿಗೆ ಬಾಬಾರ ದರ್ಶನ ಮಾಡುವ ಸದವಕಾಶ ದೊರೆಯಿತು.
ಅದಕ್ಕೆ ಆರು ತಿಂಗಳು ಮುಂಚೆ ಅವರ ಸಹೋದರರು ಬಾಬುಲ್ಜೀ ಮತ್ತು ವಾಮನ ರಾವ್ ಅವರು ಶಿರಡಿಗೆ ಹೋಗಿ, ಬಾಬಾರ ದರ್ಶನ ಪಡೆದಿದ್ದರು. ಅವರು ಹಿಂತಿರುಗಿ ಬಂದು ತಮ್ಮ ಅನುಭವಗಳನ್ನು ತಮ್ಮ ಮನೆಯವರೆಲ್ಲರಿಗೂ ವಿವರಿಸಿದ್ದರು. ಬಲರಾಮ್ ಮತ್ತು ಅವರ ಮನೆಯವರೆಲ್ಲರೂ ಅದನ್ನು ಕೇಳಿ ಬಹಳ ಪುಳಕಿತರಾಗಿ, ಶಿರಡಿಗೆ ಹೋಗಿ ಬಾಬಾರ ದರ್ಶನ ಮಾಡಿಕೊಂಡು ಬರಲು ನಿರ್ಧರಿಸಿ, ಶಿರಡಿಗೆ ಹೊರಟರು. ಅವರು ಶಿರಡಿ ಸೇರುವುದಕ್ಕೆ ಮುಂಚೆಯೇ ಬಾಬಾ ಮಸೀದಿಯಲ್ಲಿದ್ದವರಿಗೆ, "ಇಂದು ನನ್ನ ದರ್ಬಾರಿಗೆ ಸೇರಿದ ಅನೇಕರು ಬರುತ್ತಿದ್ದಾರೆ" ಎಂದು ಹೇಳಿದರು. ಬಲರಾಮ್ ಮತ್ತು ಅವರ ಮನೆಯವರು, ಶಿರಡಿ ಸೇರಿದಾಗ, ಅಲ್ಲಿನವರಿಂದ ಬಾಬಾ ಹೇಳಿದ ಮಾತುಗಳನ್ನು ಕೇಳಿ ಬಹಳ ಆಶ್ಚರ್ಯಪಟ್ಟರು. ಅವರು ಶಿರಡಿಗೆ ಬರುವ ವಿಷಯ ಯಾರಿಗೂ ತಿಳಿಸಿರಲಿಲ್ಲ. ಎಲ್ಲರೂ ಮಸೀದಿಗೆ ಹೋಗಿ ಬಾಬಾರ ದರ್ಶನ ಮಾಡಿ, ಅವರಿಗೆ ನಮಸ್ಕರಿಸಿ ಬಾಬಾರ ಬಳಿ ಕುಳಿತರು. ಆಗ ಬಾಬಾ, "ಇವರೇ ನಾನು ಆಗಲೇ ಹೇಳಿದ ನನ್ನ ದರ್ಬಾರಿಗೆ ಸೇರಿದ ಜನ" ಎಂದರು. ಅನಂತರ ಬಲರಾಮ್ ಮತ್ತಿತರರ ಕಡೆಗೆ ತಿರುಗಿ, "ನನ್ನ ನಿಮ್ಮ ಸಂಬಂಧ ಹಿಂದಿನ ಅರವತ್ತು ಜನ್ಮಗಳಿಂದಲೂ ಇದೆ" ಎಂದರು. ಬಂದಿದ್ದ ಪರಿವಾರದಲ್ಲಿನ ಪ್ರತಿಯೊಬ್ಬರೂ, ವಿನಯ ವಿಧೇಯತೆಗಳಿಂದ ಕೈಜೋಡಿಸಿ, ಬಾಬಾರನ್ನು ತದೇಕದೃಷ್ಟಿಯಿಂದ ನೋಡುತ್ತಾ ಕುಳಿತರು. ಅಶ್ರುಪೂರ್ಣ ನೇತ್ರಗಳು, ಗದ್ಗದ ಕಂಠ, ಭಾವೋದ್ವೇಗ, ಮುಂತಾದ ಸಾತ್ವಿಕ ಗುಣಗಳೆಲ್ಲ ಅವರಲ್ಲಿ ಗೋಚರವಾಗಿತ್ತು. ಸಂತೋಷಗೊಂಡಿದ್ದ ಅವರೆಲ್ಲರೂ ಸ್ವಲ್ಪ ಹೊತ್ತು ಅಲ್ಲಿ ಕುಳಿತಿದ್ದು, ವಾಡಾಗೆ ಹಿಂತಿರುಗಿದರು.
ಊಟ ಮುಗಿಸಿ, ಮತ್ತೆ ಎಲ್ಲರೂ ಮಸೀದಿಗೆ ಬಂದು, ಬಾಬಾರ ಪಾದ ಸೇವನೆ ಮಾಡುತ್ತಾ ಕುಳಿತರು. ಬಾಬಾ ಆಗ ತಾವು ಸೇದುತ್ತಿದ್ದ ಹುಕ್ಕಾ ಬಲರಾಮ್ ಅವರಿಗೆ ಕೊಟ್ಟರು. ಅವರಿಗೆ ಎಂದೂ ಹುಕ್ಕಾ ಎಳೆದು ಅಭ್ಯಾಸವಿರಲಿಲ್ಲ. ಆದರೂ ಬಾಬಾ ಕೊಟ್ಟದ್ದು ಎಂಬ ಗೌರವದಿಂದ ಕಷ್ಟಪಟ್ಟು ಒಂದುಸಲ ಹುಕ್ಕಾ ಎಳೆದು, ಅದನ್ನು ಬಾಬಾರಿಗೆ ಹಿಂತಿರುಗಿಸಿದರು. ಅವರು ಹುಕ್ಕಾ ಸೇದಿದ ಕ್ಷಣದಿಂದ, ಆರು ವರ್ಷಗಳಿಂದ ಅವರನ್ನು ಕಾಡುತ್ತಿದ್ದ ಆಸ್ತಮಾ ರೋಗ ಮಾಯವಾಗಿತ್ತು. ಅವರನ್ನು ಆ ರೋಗ, ಮತ್ತೆ ಎಂದೂ ಬಾಬಾರು ಜೀವಂತರಾಗಿರುವವರೆಗೂ ಕಾಡಲಿಲ್ಲ. ಆರು ವರ್ಷಗಳ ನಂತರ ಅವರಿಗೆ ಮತ್ತೆ ಅದು ಕಾಣಿಸಿಕೊಂಡಾಗ, ಅಂದು ಬಾಬಾರ ಮಹಾಸಮಾಧಿಯಾಗಿತ್ತು. ಬಲರಾಮ್ ಅವರು ಶಿರಡಿಗೆ ಬಂದ ದಿನ ಗುರುವಾರವಾಗಿತ್ತು. ಅಂದು ರಾತ್ರಿ ಚಾವಡಿ ಉತ್ಸವವನ್ನು ವೀಕ್ಷಿಸುವ ಸೌಭಾಗ್ಯ ಅವರದಾಗಿತ್ತು. ಚಾವಡಿಯಲ್ಲಿ ಬಾಬಾರಿಗೆ ಆರತಿಯಾಗುತ್ತಿದ್ದಾಗ ಅವರಿಗೆ ಬಾಬಾ ಪಾಂಡುರಂಗನಂತೆ ಕಾಣಿಸಿದರು. ಮತ್ತೆ ಮಾರನೆಯ ದಿನ ಕಾಕಡಾ ಆರತಿಯ ಸಮಯದಲ್ಲೂ ಅವರಿಗೆ ಬಾಬಾ ತಮ್ಮ ಆರಾಧ್ಯ ದೈವ ಪಾಂಡುರಂಗನಂತೆ ಕಾಣಿಸಿದರು.
ಬಲರಾಮ ದುರಂಧರರು, ಮರಾಠಿ ಭಾಷೆಯಲ್ಲಿ, ಮಹಾರಾಷ್ಟ್ರದ ಪ್ರಖ್ಯಾತ ಸಂತರು, ಸಂತ ತುಕಾರಾಮರ ಜೀವನ ಚರಿತ್ರೆಯನ್ನು ಬರೆದಿದ್ದಾರೆ. ಅವರು ತಮ್ಮ ಜೀವಿತ ಕಾಲದಲ್ಲಿ ಅದರ ಪ್ರಕಾಶನವನ್ನು ನೋಡಲಾಗಲಿಲ್ಲ. ಅವರು ಕಾಲವಾದಮೇಲೆ ಅವರ ಮಕ್ಕಳು ಅದನ್ನು ಪ್ರಕಟಣೆಗೊಳಿಸಿದರು. ಆ ಪುಸ್ತಕದ ಮೊದಲಲ್ಲಿ ಬಲರಾಮ್ ಅವರ ಪರಿಚಯ ಪುಟಗಳಲ್ಲಿ, ಅವರ ಈ ಶಿರಡಿಯ ಭೇಟಿಯ ಬಗ್ಗೆ ವಿವರವಾಗಿ ತಿಳಿಸಿದ್ದಾರೆ.
ಅಂತಹ ಶರಣಾಗತವತ್ಸಲರಾದ ಬಾಬಾರ ಚರಣಾರವಿಂದಗಳಲ್ಲಿ ನಾವು ಮತ್ತೊಮ್ಮೆ ತಲೆಬಾಗಿ ನಮಸ್ಕರಿಸಿ, ಅವರ ಅನುಗ್ರಹವನ್ನು ಬೇಡಿಕೊಳ್ಳೋಣ. ಶ್ರೀ ಸಚ್ಚಿದಾನಂದ ಸದ್ಗುರು ಸಾಯಿನಾಥ ಮಹರಾಜಕೀ ಜೈ!
ಇದರೊಂದಿಗೆ ಕಾಕಾ ಸಾಹೇಬ್ ದೀಕ್ಷಿತ್, ಶ್ರೀ ಟೆಂಬೆ ಸ್ವಾಮಿ, ಬಲರಾಮ ದುರಂಧರರ ಕಥೆಗಳು ಮತ್ತು ಇತರ ವಿಷಯಗಳನ್ನು ಕುರಿತು ಹೇಳುವ ಐವತ್ತನೆಯ ಅಧ್ಯಾಯ ಮುಗಿಯಿತು. ಮುಂದಿನ ಅಧ್ಯಾಯದಲ್ಲಿ ಹೇಮಾಡ್ ಪಂತ್, ಬಾಬಾರ ಹಿರಿಮೆ, ಫಲಶೃತಿ ಇತ್ಯಾದಿ ವಿಷಯಗಳನ್ನು ಹೇಳುತ್ತಾರೆ.
||ಸದ್ಗುರು ಶ್ರೀ ಸಾಯಿನಾಥಾರ್ಪಣಮಸ್ತು||ಶುಭಂ ಭವತು||
||ಓಂ ಶಾಂತಿಃ ಶಾಂತಿಃ ಶಾಂತಿಃ||