||ಶ್ರೀ ಸಾಯಿ ಸಚ್ಚರಿತ್ರೆ||
||ನಲವತ್ತೆಂಟನೆಯ ಅಧ್ಯಾಯ||
||ಭಕ್ತರ ಸಂಶಯ ನಿವಾರಣೆ||
ಶ್ರೀ ಗಣೇಶಾಯ ನಮಃ ಶ್ರೀ ಸರಸ್ವತಯೇ ನಮಃ
ಶ್ರೀ ವೆಂಕಟೇಶಾಯ ನಮಃ ಶ್ರೀ ಸಾಯಿನಾಥಾಯ ನಮಃ
ಶ್ರೀ ಸದ್ಗುರುಭ್ಯೋನ್ನಮಃ
||ನಲವತ್ತೆಂಟನೆಯ ಅಧ್ಯಾಯ||
||ಭಕ್ತರ ಸಂಶಯ ನಿವಾರಣೆ||
ಶ್ರೀ ಗಣೇಶಾಯ ನಮಃ ಶ್ರೀ ಸರಸ್ವತಯೇ ನಮಃ
ಶ್ರೀ ವೆಂಕಟೇಶಾಯ ನಮಃ ಶ್ರೀ ಸಾಯಿನಾಥಾಯ ನಮಃ
ಶ್ರೀ ಸದ್ಗುರುಭ್ಯೋನ್ನಮಃ
ಈ ಅಧ್ಯಾಯದಲ್ಲಿ ಹೇಮಾಡ್ ಪಂತ್, ಶೇವಡೆ, ಸಪತ್ನೇಕರರ ಕಥೆಗಳು ಇತ್ಯಾದಿ ವಿಷಯಗಳನ್ನು ಕುರಿತು ಹೇಳುತ್ತಾರೆ.
ಸಾಯಿಬಾಬಾ ಗುರುವೇ ಅಥವ ಸದ್ಗುರುವೇ ಎಂದು ಹೇಮಾಡ್ ಪಂತರನ್ನು ಕೇಳಿದ್ದಕ್ಕೆ, ಆ ಪ್ರಶ್ನೆಗೆ ಉತ್ತರವೆಂಬಂತೆ, ಗುರು ಮತ್ತು ಸದ್ಗುರುವಿನ ಸ್ವಭಾವಗಳನ್ನು ಈ ಅಧ್ಯಾಯದ ಮೊದಲಲ್ಲಿ ಪಂತರು ತಿಳಿಸಿದ್ದಾರೆ.
ಸದ್ಗುರು
ಯಾರು ವೇದವೇದಾಂತಗಳು, ಶಾಸ್ತ್ರಪುರಾಣಗಳನ್ನು ಕಲಿಸುವುದರಲ್ಲಿ ನಿಪುಣರೋ, ಯಾರು ಬ್ರಹ್ಮನ ಬಗ್ಗೆ ವಿಪುಲವಾಗಿ ವ್ಯಾಖ್ಯಾನ ಮಾಡುವುದರಲ್ಲಿ ವಾಚಾ ನಿಪುಣರೋ, ಅವರು ಸದ್ಗುರುಗಳಲ್ಲ. ಯಾರು ಪ್ರಾಣಾಯಾಮ ನಿಪುಣರಾಗಿ, ಮಂತ್ರೋಪದೇಶ ಮಾಡಿ, ಬರಿಯ ಜಪಮಾಡಲು ಹೇಳುತ್ತಾರೋ, ಅವರೂ ಸದ್ಗುರುಗಳಲ್ಲ. ಯಾರು ಜೀವನದ ಅಂತಿಮ ಗುರಿಯ ಬಗ್ಗೆ ವಿಶೇಷವಾಗಿ ಮಾತನಾಡುತ್ತ, ಸ್ವತಃ ಅದರ ಅನುಭವವನ್ನು ಪಡೆದಿಲ್ಲವೋ ಅವರೂ ಸದ್ಗುರುಗಳಲ್ಲ. ಆದರೆ ಯಾರು ತನ್ನ ನಡವಳಿಕೆಯಲ್ಲಿ, ಎಲ್ಲ ರೀತಿಯ ವಿಷಯಗಳಲ್ಲಿ, ನಿಜವಾದ ವೈರಾಗ್ಯವನ್ನು ತೋರಿಸುತ್ತಾ, ನಮಗೆ ಆತ್ಮಸಾಕ್ಷಾತ್ಕಾರದ ಅನುಭವವನ್ನು ಕೊಡಬಲ್ಲರೋ ಅವರು ನಿಜವಾದ ಸದ್ಗುರುಗಳು. ತಾನು ಆತ್ಮಸಾಕ್ಷಾತ್ಕಾರದ ಅನುಭವವನ್ನು ಪಡೆಯದೆ ಇರುವವನು ಇನ್ನೊಬ್ಬರಿಗೆ ಹೇಗೆ ತಾನೇ ಆತ್ಮಸಾಕ್ಷಾತ್ಕಾರದ ಅನುಭವವನ್ನು ಕೊಡಬಲ್ಲ? ಸದ್ಗುರುವಾದವನು ತನ್ನ ಭಕ್ತರಿಂದ ಏನನ್ನೂ ಅಪೇಕ್ಷಿಸುವುದಿಲ್ಲ. ಬದಲಾಗಿ, ತನ್ನಿಂದ ಅವರಿಗೆ ಆಗಬೇಕಾದ ಸೇವೆ ಏನಿದ್ದರೂ, ಅದನ್ನು ಮಾಡಲು ಸದಾ ಸಿದ್ಧನಾಗಿರುತ್ತಾನೆ. ಸದ್ಗುರುವಾದವನು, ತಾನು ಉನ್ನತ ಸ್ತರದವನು, ತನ್ನ ಶಿಷ್ಯ ಕೆಳ ಸ್ತರದವನು, ಎಂದು ಭೇದವನ್ನು ಮಾಡುವುದಿಲ್ಲ. ಬದಲಾಗಿ ಶಿಷ್ಯ ತನ್ನ ಪ್ರತಿಬಿಂಬ ಎಂದೇ ಭಾವಿಸುತ್ತಾನೆ. ಸದ್ಗುರುವಿನ ವಿಶಿಷ್ಟ ಗುಣವೆಂದರೆ, ಅವನು ಸದಾಕಾಲವೂ ಶಾಂತನಾಗಿ, ಯಾವುದೇ ವಿಷಯಕ್ಕೂ ವಿಚಲಿತನಾಗದೆ, ತನ್ನ ಬಗ್ಗೆ ಯಾವುದೇ ಅಹಂಕಾರವೂ ಇಲ್ಲದೆ, ಸ್ವಸ್ಥಚಿತ್ತನಾಗಿರುತ್ತಾನೆ. ಬಡವ-ಬಲ್ಲಿದ, ಅಕ್ಷರಸ್ಥ-ಅನಕ್ಷರಸ್ಥ, ಗಂಡು-ಹೆಣ್ಣು, ದೊಡ್ಡದು-ಚಿಕ್ಕದು, ಕುಲ ಮತ ಧರ್ಮಗಳು ಎಲ್ಲವೂ ಸದ್ಗುರುವಿಗೆ ಒಂದೇ!
ತನ್ನ ಪೂರ್ವಜನ್ಮಕೃತ ಪುಣ್ಯ ಫಲಗಳಿಂದಲೇ ತಾನು ಸಾಯಿಬಾಬಾರಂತಹ ಸದ್ಗುರುವಿನ ಚರಣಾರವಿಂದಗಳನ್ನು ಸೇವಿಸಿ ಆಶೀರ್ವಾದ ಪಡೆದೆ ಎಂದು ಹೇಮಾಡ್ ಪಂತ್ ಹೇಳುತ್ತಾರೆ. ಹುಡುಗನಾಗಿದ್ದಾಗಿನಿಂದಲೂ ಬಾಬಾ ಹುಕ್ಕಾ ಒಂದನ್ನು ಬಿಟ್ಟರೆ ಮತ್ತಾವ ಸಂಪತ್ತನ್ನೂ ಶೇಖರಿಸಿ ಇಟ್ಟುಕೊಳ್ಳಲಿಲ್ಲ. ಅವರ ಸಂಸಾರವೆಲ್ಲಾ ಅವರ ಭಕ್ತರೇ! ಅವರಿಗೆ ಬೇರೆಯಾದ ಹೆಂಡತಿ, ಮಕ್ಕಳು, ಸ್ನೇಹಿತರು ಎಂದು ಯಾರೂ ಇರಲಿಲ್ಲ. ಮನೆ ಮಠ ಕೂಡಾ ಇರಲಿಲ್ಲ. ೧೮ ವರ್ಷದವರಾಗಿದ್ದಾಗಿನಿಂದಲೇ ಅವರು ತಮ್ಮ ಮನಸ್ಸನ್ನು ಪೂರ್ಣ ಹತೋಟಿಯಲ್ಲಿಟ್ಟುಕೊಂಡಿದ್ದರು. ಯಾವ ಹೆದರಿಕೆ, ಭಯಗಳೂ ಇಲ್ಲದೆ ಕಾಡು ಮೇಡುಗಳಲ್ಲಿ ಅಲೆಯುತ್ತಿದ್ದರು. ಸದಾಕಾಲವೂ ತಮ್ಮ ಭಕ್ತರನ್ನೇ ನೆನಸುತ್ತಾ, ಅವರಿಗೋಸ್ಕರವಾಗಿಯೇ ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದರು. ಸದಾ ತಮ್ಮ ಭಕ್ತರ ಮೇಲೆ ಗಮನವಿಟ್ಟು, ಅವರವರ ಸ್ತರಕ್ಕೆ ತಕ್ಕಂತೆ ಅವರಿಗೆ ಕೊಡಬೇಕಾದ್ದನ್ನು ಕೃಪಾಕರಿಸುತ್ತಿದ್ದರು. ತಾನು ಭಕ್ತ ಪರಾಧೀನ ಎಂದು ಯಾವಾಗಲೂ ಹೇಳುತ್ತಿದ್ದರು. ಅವರು ಸಗುಣರಾಗಿದ್ದಾಗ ಭಕ್ತರು ಯಾವ ಅನುಭವಗಳನ್ನು ಪಡೆದರೋ ಅದೇ ಅನುಭವಗಳನ್ನು ಈಗಲೂ, ಅವರು ನಿರ್ಗುಣರಾದಮೇಲೂ, ಭಕ್ತರು ಪಡೆಯುತ್ತಿದ್ದಾರೆ.
ಭಕ್ತರು, ತಮ್ಮ ಹೃದಯವೆಂಬ ಹಣತೆಯಲ್ಲಿ, ಭಕ್ತಿಯೆಂಬ ಎಣ್ಣೆಯನ್ನು ತುಂಬಿ, ಶ್ರಧ್ಧೆ ಸಬೂರಿ ಎಂಬ ಬತ್ತಿಯನ್ನಿಟ್ಟು, ಪ್ರೇಮವೆಂಬ ಜ್ಯೋತಿಯಿಂದ ಬೆಳಗಿಸಿದರೆ, ಆ ಹಣತೆ ಜ್ಞಾನವೆಂಬ ಬೆಳಕನ್ನು ನೀಡುತ್ತದೆ. ಪ್ರೀತಿಯಿಲ್ಲದೆ ಹುಟ್ಟಿದ ಜ್ಞಾನ ಶುಷ್ಕವಾದದ್ದು. ವ್ಯರ್ಥವಾದ ಅದರಿಂದ ಯಾರಿಗೂ ಲಾಭವಿಲ್ಲ. ಪ್ರೀತಿಯಿಂದಲೇ ಸುಖ. ಅದಕ್ಕೆ ಯಾವ ಮೇರೆಗಳೂ ಇರಕೂಡದು. ಅಚಂಚಲವಾಗಿರಬೇಕು. ಪ್ರೀತಿ ಪ್ರೇಮಗಳಿದ್ದಲ್ಲಿ ಪ್ರಶಾಂತತೆ, ಔದಾರ್ಯ, ಭಕ್ತಿ, ವೈರಾಗ್ಯ ಎಲ್ಲವೂ ತಾವಾಗಿಯೇ ಬರುತ್ತವೆ. ಪರಮಾತ್ಮನಲ್ಲಿಟ್ಟ ಅಚಂಚಲ ಪ್ರೀತಿ, ಪ್ರೇಮಗಳೇ ಮುಕ್ತಿಗೆ ದಾರಿ. ಪ್ರೀತಿ, ಪ್ರೇಮಗಳಿಂದ ತುಂಬಿದ ಭಕ್ತ ಆರ್ತನಾಗಿ ಕರೆದರೆ, ಪರಮಾತ್ಮ ಖಂಡಿತವಾಗಿಯೂ ಓಗೊಡುತ್ತಾನೆ. ಅಂತಹ ಪ್ರೀತಿ ತುಂಬಿದ ಮನಸ್ಸಿನಿಂದ ಸದ್ಗುರುವಿನ ಪಾದಾರವಿಂದಗಳಲ್ಲಿ ಶಿರಸ್ಸಿಟ್ಟು ನಮಸ್ಕರಿದವನು, ದುರ್ಯೋಚನೆಗಳಿಂದ ತುಂಬಿದ್ದರೂ, ಉದ್ಧರಿಸಲ್ಪಡುತ್ತಾನೆ. ಈ ಕೆಳಗಿನ ಕಥೆ ಅದನ್ನು ಧೃಢೀಕರಿಸುತ್ತದೆ.
ಶೇವಡೆಯ ಕಥೆ
ಅಕ್ಕಲಕೋಟೆಯ ಸಪತ್ನೇಕರ್ ಕಾನೂನು ವಿದ್ಯಾರ್ಥಿ. ಆತ ತನ್ನ ಸಹಪಾಠಿ ಶೇವಡೆಯೊಂದಿಗೆ ಇತರ ಸಹಪಾಠಿಗಳನ್ನು ಕೂಡಿಸಿ, ಬರಲಿರುವ ಪರೀಕ್ಷೆಗಳಿಗೆ ಅಭ್ಯಾಸ ಹೇಗೆ ನಡೆದಿದೆ, ಎಂಬುದನ್ನು ಪರಸ್ಪರ ಪ್ರಶ್ನೋತ್ತರಗಳಿಂದ ವಿಮರ್ಶಿಸಿಕೊಂಡರು. ಈ ವಿನಿಮಯದಲ್ಲಿ ಶೇವಡೆ ಮಿಕ್ಕೆಲ್ಲರಿಗಿಂತಲೂ ಬಹಳ ಹಿಂದಿದ್ದು, ಪರೀಕ್ಷೆಯಲ್ಲಿ ಉತ್ತೀರ್ಣನಾಗುವುದು ಸಾಧ್ಯವಿಲ್ಲ ಎಂದು ಎಲ್ಲರೂ ಅವನನ್ನು ಹಾಸ್ಯಮಾಡಿದರು. ಅದಕ್ಕೆ ಶೇವಡೆ, "ನಾನು ಚೆನ್ನಾಗಿ ಓದದೇ ಇರಬಹುದು. ಆದರೂ ನಾನು ಪರೀಕ್ಷೆಯಲ್ಲಿ ಖಂಡಿತವಾಗಿಯೂ ಉತ್ತೀರ್ಣನಾಗುತ್ತೇನೆ. ನನ್ನ ಸಾಯಿಬಾಬಾ ನನಗೆ ಭರವಸೆ ಕೊಟ್ಟಿದ್ದಾರೆ. ಅವರೇ ಎಲ್ಲರಿಗೂ ಯಶಸ್ಸು ಕೊಡುವವರು" ಎಂದು ದೃಢವಾಗಿ ಹೇಳಿದ. ಅದನ್ನು ಕೇಳಿದ ಸಪತ್ನೇಕರ್ ಆಶ್ಚರ್ಯಗೊಂಡು, ಅವನನ್ನು ಪ್ರತ್ಯೇಕವಾಗಿ ಕರೆದು, "ನೀನು ಇಷ್ಟೊಂದು ಹೊಗಳುವ ಆ ಸಾಯಿಬಾಬಾ ಯಾರು?" ಎಂದು ಕೇಳಿದರು. ಅದಕ್ಕೆ ಶೇವಡೆ, "ಅವರು ಶಿರಡಿಯಲ್ಲಿರುವ ಫಕೀರರು. ಮಸೀದಿಯಲ್ಲಿ ವಾಸಮಾಡುವ ದೊಡ್ಡ ಸಂತರು. ಮಿಕ್ಕೆಲ್ಲ ಸಂತರಿಗಿಂತ ಇವರು ಭಿನ್ನರು. ನಮ್ಮ ಪೂರ್ವಕೃತ ಪುಣ್ಯದಿಂದಲೆ ನಾವು ಅವರನ್ನು ಕಾಣಲು ಸಾಧ್ಯ. ನನಗೆ ಅವರಲ್ಲಿ ಸಂಪೂರ್ಣವಾದ ನಂಬಿಕೆಯಿದೆ. ಅವರ ಬಾಯಿಂದ ಹೊರಟ ಮಾತು ಎಂದೂ ಸುಳ್ಳಾಗುವುದಿಲ್ಲ. ಅವರು ನನಗೆ ಖಂಡಿತವಾಗಿಯೂ ಪರೀಕ್ಷೆಯಲ್ಲಿ ಉತ್ತೀರ್ಣನಾಗುತ್ತೇನೆಂದು ಭರವಸೆ ಕೊಟ್ಟಿದ್ದಾರೆ. ನನಗೂ ಅವರ ಆಶೀರ್ವಾದದಿಂದ ಪರೀಕ್ಷೆಯಲ್ಲಿ ಉತ್ತೀರ್ಣನಾಗುತ್ತೇನೆಂಬ ಧೃಢ ವಿಶ್ವಾಸವಿದೆ" ಎಂದು ಹೇಳಿದ. ಇದನ್ನೆಲ್ಲಾ ಕೇಳಿದ ಸಪತ್ನೇಕರ್ ತನ್ನ ಸ್ನೇಹಿತನ ಈ ಮೂಢನಂಬಿಕೆಯನ್ನು ಕಂಡು, ಅವನನ್ನೂ ಅವನ ಸಾಯಿಬಾಬಾನನ್ನೂ ಅಪಹಾಸ್ಯಮಾಡಿದರು. ನಂತರ ಶೇವಡೇ ಪರೀಕ್ಷೆಯಲ್ಲಿ ಉತ್ತೀರ್ಣನಾಗಿದ್ದನ್ನು ನೋಡಿ ಅವರಿಗೆ ಆಶ್ಚರ್ಯವಾಯಿತು.
ಸಪತ್ನೇಕರರ ಕಥೆ
ಪರೀಕ್ಷೆಯಲ್ಲಿ ಉತ್ತೀರ್ಣರಾದ ಮಹಾದೇವ ವಾಮನ ಸಪತ್ನೇಕರ್ ಅಕ್ಕಲಕೋಟೆಯಲ್ಲಿ ನೆಲಸಿ, ಅಲ್ಲಿ ತಮ್ಮ ನ್ಯಾಯವಾದಿ ವೃತ್ತಿಯನ್ನು ಆರಂಭಿಸಿದರು. ಇನ್ನೂ ತರುಣನಾಗಿದ್ದಾಗಲೇ ಹೆಂಡತಿ ಮತ್ತು ಗಂಟಲು ಬೇನೆಯಿಂದ ನರಳುತ್ತಿದ್ದ ಮಗನನ್ನು, ಕಳೆದುಕೊಂಡ. ತಮ್ಮ ೩೩ನೆಯ ವಯಸ್ಸಿನಲ್ಲಿ ಪಾರ್ವತಿಬಾಯಿ ಎಂಬಾಕೆಯನ್ನು ಮದುವೆಯಾದರು. ಮದುವೆಯಾಗಿ ಹಲವು ವರ್ಷಗಳಾದರೂ ಅವರಿಗೆ ಮಕ್ಕಳಾಗಲಿಲ್ಲ. ಇದರಿಂದ ಖಿನ್ನರಾಗಿಹೋದ ಸಪತ್ನೇಕರ್ ಮನಸ್ಸಿನ ಸಮತೋಲವನ್ನು ಕಳೆದು ಕೊಂಡಿದ್ದರು. ೧೯೧೩ರಲ್ಲಿ, ಅವರ ತಂದೆ ಅವರನ್ನು ಶಿರಡಿಯ ಸಾಯಿಬಾಬಾರ ದರ್ಶನ ಮಾಡಿಕೊಂಡು ಬರುವಂತೆ ಹೇಳಿದರು. ಆದರೆ ಆತನಿಗೆ ಸಾಯಿಬಾಬಾರಲ್ಲಿ ನಂಬಿಕೆಯಿರಲಿಲ್ಲವಾಗಿ ಆತ ಶಿರಡಿಗೆ ಹೋಗಲಿಲ್ಲ. ಬದಲಾಗಿ ತನ್ನ ಮನಸ್ಸಮಾಧಾನಕ್ಕಾಗಿ ಗಾಣಗಾಪುರ, ಪಂಡರಪುರಗಳಂತಹ ಪುಣ್ಯ ಸ್ಥಳಗಳನ್ನು ಸುತ್ತಿ ಬಂದರು. ಆದರೂ ಮನಶ್ಶಾಂತಿ ದೊರೆಯಲಿಲ್ಲ. ವೇದ ವೇದಾಂತಗಳನ್ನು ಓದಿದರೂ, ಏನೂ ಲಾಭವಾಗಲಿಲ್ಲ. ಆತ ಗಾಣಗಾಪುರದಲ್ಲಿದ್ದಾಗ ಬಾಬಾರನ್ನು ಕುರಿತು ಶೇವಡೆ ಹೇಳಿದ್ದ ಮಾತುಗಳು ನೆನಪಿಗೆ ಬಂದವು. ತನ್ನ ತಂದೆಯ ಮಾತನ್ನು ಪುರಸ್ಕರಿಸಿ, ಸಾಯಿಬಾಬಾರ ದರ್ಶನಮಾಡಲು ತನ್ನ ತಮ್ಮ ಪಂಡಿತರಾವ್ ಜೊತೆಯಲ್ಲಿ ಶಿರಡಿಗೆ ಹೊರಟರು. ಶಿರಡಿಯಲ್ಲಿ ಬಾಬಾರನ್ನು ಕಂಡ ತಕ್ಷಣವೇ ಆತನ ಮನಸ್ಸು ಶಾಂತವಾಯಿತು. ಬಾಬಾರ ಹತ್ತಿರ ಹೋಗಿ, ಅವರಿಗೆ ಹಣ್ಣು ಕಾಯಿಗಳನ್ನು ಅರ್ಪಿಸಿದಾಗ, ಆತನನ್ನು ಕಂಡ ಬಾಬಾ, "ಇಲ್ಲಿಂದ ಹೊರಗೆ ಹೋಗು" ಎಂದು ಗದ್ದರಿಸಿ, ಅಲ್ಲಿಂದ ಜೋರಾಗಿ ತಳ್ಳಿಬಿಟ್ಟರು. ಆ ಜೋರಿಗೆ ಆತ ಕೆಳಗೆ ಬಿದ್ದು, ಆತನ ತಲೆಪಾಗು ಉರುಳಿ ಕೆಳಗೆ ಬಿದ್ದು ಹೋಯಿತು. ಸಾವರಿಸಿಕೊಂಡು ಎದ್ದ ಸಪತ್ನೇಕರ್, ನಾಚಿಕೆಯಿಂದ ತಲೆಬಗ್ಗಿಸಿ, ಸ್ವಲ್ಪ ದೂರ ಹೋಗಿ ಕುಳಿತರು.
ಈ ಪ್ರಸಂಗದಿಂದ ಆತನಿಗೆ ಬಾಬಾರನ್ನು ಹೇಗೆ ಕಾಣಬೇಕು ಎಂಬುವ ಯೋಚನೆ ಬಲವಾಯಿತು. ಯಾರೋ ಒಬ್ಬರು, ಬಾಲಾಶಿಂಪಿಯ ಸಹಾಯ ಪಡೆಯುವಂತೆ ಆತನಿಗೆ ಸಲಹೆ ಕೊಟ್ಟರು. ಸಪತ್ನೇಕರ್ ಬಾಲಾಶಿಂಪಿಯನ್ನು ಭೇಟಿ ಮಾಡಿ ಅವರ ಸಹಾಯವನ್ನು ಯಾಚಿಸಿದರು. ಬಾಬಾರ ಚಿತ್ರವೊಂದನ್ನು ಕೊಂಡು ಅವರಿಬ್ಬರೂ ಮಸೀದಿಗೆ ಹೋದರು. ಬಾಲಾಶಿಂಪಿ ಬಾಬಾರಿಗೆ ಆ ಚಿತ್ರ ತೋರಿಸಿ, "ಇದು ಯಾರದು?" ಎಂದು ಕೇಳಿದರು. ಅದಕ್ಕೆ ಬಾಬಾ, " ಅದು ನನ್ನ ಸ್ನೇಹಿತನದು" ಎಂದು ಸಪತ್ನೇಕರ್ ಕಡೆ ಕೈತೋರಿಸಿ ಜೋರಾಗಿ ನಕ್ಕರು. ಅಲ್ಲಿದ್ದವರೆಲ್ಲ ಬಾಬಾರ ಜೊತೆ ತಾವೂ ನಕ್ಕರು. ಬಾಲಾಶಿಂಪಿ ಸಪತ್ನೇಕರರಿಗೆ ಸಂಜ್ಞೆ ಮಾಡಿ ಬಾಬಾರ ಹತ್ತಿರಕ್ಕೆ ಬರುವಂತೆ ಹೇಳಿದರು. ಬಾಬಾರನ್ನು ನಮಸ್ಕರಿಸಲು ಹೋದ ಆತನನ್ನು ಬಾಬಾ ಮತ್ತೆ, "ಹೊರಟು ಹೋಗು" ಎಂದು ಗಟ್ಟಿಯಾಗಿ ಕೂಗಿದರು. ಸಪತ್ನೇಕರ್ ಏನೂ ಮಾಡಲು ತೋಚದೆ ಕೈ ಮುಗಿದು ಅಲ್ಲೇ ಕೂತರು. ಬಾಬಾ ಅವರನ್ನು ತಕ್ಷಣವೇ ಅಲ್ಲಿಂದ ಹೊರಡುವಂತೆ ಮತ್ತೊಮ್ಮೆ ಕೂಗಿದರು. ಆಜ್ಞೆಯನ್ನು ಉಲ್ಲಂಘಿಸಲಾಗದೆ ತಮ್ಮ ತಮ್ಮನೊಡನೆ ದುಃಖಪೂರ್ಣವಾದ ಹೃದಯದಿಂದ ಶಿರಡಿಯನ್ನು ಬಿಟ್ಟು ಹೊರಟರು. ದಾರಿಯಲ್ಲಿ, "ಬಾಬಾ, ನನ್ನ ಮೇಲೆ ಕರುಣೆ ತೋರಿಸು. ಮತ್ತೆ ಯಾವಾಗಲಾದರೂ ಬಂದು ನಿನ್ನ ದರ್ಶನ ಮಾಡಿಕೊಳ್ಳುವ ಭಾಗ್ಯವನ್ನು ದಯಪಾಲಿಸು" ಎಂದು ಕಳಕಳಿಯಿಂದ ಪ್ರಾರ್ಥಿಸುತ್ತಾ ತಮ್ಮ ಊರು ಸೇರಿದರು.
ಶ್ರೀಮತಿ ಸಪತ್ನೇಕರರ ಕಥೆ
ಶಿರಡಿಯ ಪ್ರಸಂಗವಾಗಿ ಒಂದು ವರ್ಷ ಕಳೆದರೂ, ಸಪತ್ನೇಕರರ ಮನಸ್ಸಿಗೆ ಶಾಂತಿ ದೊರೆಯಲಿಲ್ಲ. ಗಾಣಗಾಪುರಕ್ಕೆ ಹೋದರು. ಅಲ್ಲಿ ಮನಸ್ಸಿನ ಅಶಾಂತಿ ಹೆಚ್ಚಾಯಿತೇ ಹೊರತು ಕಡಮೆಯಾಗಲಿಲ್ಲ. ಮತ್ತೆ ಮಾಧೆಗಾಂವ್‍ಗೆ ಹೋಗಿ, ಅಲ್ಲಿ ಸ್ವಲ್ಪ ದಿನಗಳಿದ್ದು, ಅಲ್ಲಿಂದ ಕಾಶಿಗೆ ಹೋಗಬೇಕೆಂದು ನಿರ್ಧರಿಸಿದರು. ಕಾಶಿಗೆ ಹೊರಡುವುದಕ್ಕೆ ಎರಡು ದಿನ ಮುಂಚೆ, ಅವರ ಹೆಂಡತಿಗೆ ಒಂದು ಕನಸಾಯಿತು. ಆಕೆಗೆ ತನ್ನ ಮಾವ ಶಿರಡಿಗೆ ಹೋಗಿಬನ್ನಿ, ಎಂದು ಹೇಳಿದ್ದ ದಿನದಿಂದ, ಶಿರಡಿಗೆ ಹೋಗಿ ಬಾಬಾರ ದರ್ಶನ ಮಾಡಿಬರಬೇಕೆಂಬ ಆಸೆ ಬಲವಾಗಿತ್ತು. ಮಾಧೆಗಾಂವ್‍ನಲ್ಲಿ ನೀರಿಗೆ ಬರವಿದ್ದು, ಭಾವಿಯಿಂದ ನೀರು ಸೇದಿ ತರಬೇಕಾಗಿತ್ತು. ಆಕೆ ನೀರು ತರಲು ಬಿಂದಿಗೆ ಹಿಡಿದು ಲಕ್ಕಡ್ ಶಾ ಭಾವಿಗೆ ಹೊರಟಳು. ಬೇಗ ಹೋಗಿ ನೀರು ತರಬೇಕೆಂಬ ಆತುರದಲ್ಲಿದ್ದ ಆಕೆಗೆ, ಭಾವಿಯ ಬಳಿ ಒಬ್ಬ ಫಕೀರ ಕಾಣಿಸಿದ. ತಲೆಯಮೇಲೊಂದು ಬಟ್ಟೆ ಸುತ್ತಿ, ಅಲ್ಲಿ ನಿಂತಿದ್ದ ಆ ಫಕೀರ, ಆಕೆಯ ಹತ್ತಿರಕ್ಕೆ ಬಂದು, "ಮಗು, ನಿನಗ್ಯಾಕೆ ಅಷ್ಟೊಂದು ತೊಂದರೆ. ನಾನೇ ನಿನ್ನ ಬಿಂದಿಗೆಯಲ್ಲಿ ಶುದ್ಧವಾದ ನೀರನ್ನು ತುಂಬಿಕೊಡುತ್ತೇನೆ" ಎಂದ. ಆಕೆಗೆ ಅವನನ್ನು ಕಂಡು ಹೆದರಿಕೆಯಾಗಿ, ಬರಿಯ ಬಿಂದಿಗೆಯನ್ನೇ ಹಿಡಿದು, ತನ್ನ ಮನೆಯ ಕಡೆಗೆ ಓಡಿದಳು. ಆ ಫಕೀರನೂ, "ಓಡಬೇಡ. ಆಮೇಲೆ ಪಶ್ಚಾತ್ತಾಪ ಪಡುತ್ತೀಯೆ. ನಾನು ನಿನಗೆ ಏನನ್ನೋ ಕೊಡಲೆಂದೇ ಬಂದಿದ್ದೇನೆ" ಎನ್ನುತ್ತ ಆಕೆಯನ್ನು ಹಿಂಬಾಲಿಸಿದ. ಆಕೆಗೆ ಹೆದರಿಕೆಯಾಗಿ, ಏನೂ ಮಾಡಲು ತೋಚದೆ, ಕೂಗಿಕೊಳ್ಳಬೇಕೆಂದುಕೊಳ್ಳುವಷ್ಟರಲ್ಲಿ ಆಕೆಗೆ ಎಚ್ಚರಿಕೆಯಾಗಿ ಹೋಯಿತು.
ಮಾರನೆಯ ದಿನ ಬೆಳಗ್ಗೆ ಆಕೆ ತನ್ನ ಕನಸನ್ನು ಮಾವನಿಗೆ ಹೇಳಿದಳು. ಅದನ್ನು ಕೇಳಿದ ಆತನಿಗೆ ಆ ಕನಸಿನಲ್ಲಿ ಏನೋ ದೈವಪ್ರೇರಣೆಯಿದೆ ಎನ್ನಿಸಿ, ಸಪತ್ನೇಕರರಿಗೆ ಹೆಂಡತಿಯೊಡನೆ ಶಿರಡಿಗೆ ಹೋಗಿಬರುವಂತೆ ಹೇಳಿದರು. ಗಂಡ ಹೆಂಡತಿ ಇಬ್ಬರೂ ಒಟ್ಟಿಗೇ ಶಿರಡಿ ಸೇರಿ, ಮಸೀದಿಗೆ ಹೋದಾಗ, ಅಲ್ಲಿ ಬಾಬಾ ಇರಲಿಲ್ಲ. ಬಾಬಾರಿಗಾಗಿ ಕಾಯುತ್ತಾ ಇಬ್ಬರೂ ಮಸೀದಿಯಲ್ಲಿ ಕುಳಿತರು. ಲೆಂಡಿಗೆ ಹೋಗಿದ್ದ ಬಾಬಾ ಹಿಂತಿರುಗಿ ಬಂದಾಗ, ಅವರನ್ನು ನೋಡಿದ ಪಾರ್ವತಿ ಬಾಯಿಗೆ ಬಹಳ ಆಶ್ಚರ್ಯವಾಯಿತು. ತಾನು ಕನಸಿನಲ್ಲಿ ಕಂಡ ಫಕೀರನೇ ಇವರು! ಶ್ರದ್ಧಾ ಭಕ್ತಿಗಳಿಂದ ತುಂಬಿದ ಆಕೆ ಬಾಬಾರಿಗೆ ನಮಸ್ಕಾರ ಮಾಡಿ, ತದೇಕ ದೃಷ್ಟಿಯಿಂದ ಅವರನ್ನೇ ನೋಡುತ್ತಾ, ಅಲ್ಲಿ ಕುಳಿತಳು. ಆಕೆಯನ್ನು ನೋಡುತ್ತಾ, ಬಾಬಾ ತಮ್ಮ ಹೊಟ್ಟೆಯನ್ನು ಎರಡೂ ಕೈಯಲ್ಲಿ ಹಿಡಿದು, "ಅಮ್ಮಾ, ನನಗೆ ಬಹಳ ಹೊಟ್ಟೆ ನೋಯುತ್ತಿದೆ. ನನ್ನ ಸೊಂಟವೂ ನೋವು ಕೊಡುತ್ತಿದೆ" ಎಂದು ಜೋರಾಗಿ ಅರಚಿಕೊಂಡರು. ಶ್ರೀಮತಿ ಸಪತ್ನೇಕರ್ ಅದನ್ನು ಕಂಡು ಬೆರಗಾಗಿ, ಅವರಿಗೆ ಏನಾಗಿದೆ ಎಂದು ಕೇಳಿದಳು. ಪಕ್ಕದಲ್ಲಿದ್ದವರು ಬಾಬಾರು ತಮ್ಮ ಭಕ್ತರಲ್ಲಿ ಯಾರಿಗಾದರೂ ಈ ತರಹೆಯ ನೋವಿದ್ದರೆ, ಹೀಗೆ ಮಾಡಿ ಆ ನೋವನ್ನು ಪರಿಹರಿಸುತ್ತಾರೆ ಎಂದು ಹೇಳಿದರು. ಆಕೆಯ ವಿನಯ, ಭಕ್ತಿಗಳಿಂದ ಸಂಪ್ರೀತರಾದ ಬಾಬಾ, ತಮ್ಮದೇ ಆದ ಧಾಟಿಯಲ್ಲಿ ಒಂದು ಕಥೆ ಹೇಳಿದರು. "ಬಹಳ ಕಾಲದಿಂದ ನಾನು ಬೆನ್ನು, ಹೊಟ್ಟೆ, ಕೈಗಳಲ್ಲಿ ಅಪಾರ ನೋವು ಅನುಭವಿಸಿದೆ. ಯಾವ ಚಿಕಿತ್ಸೆಯೂ ನನಗೆ ಉಪಯೋಗವಾಗಲಿಲ್ಲ. ಔಷಧಗಳಿಂದ ಬೇಸರಗೊಂಡ ನನಗೆ, ಈಗ ಇದ್ದಕ್ಕಿದ್ದಹಾಗೇ ನನ್ನ ನೋವುಗಳೆಲ್ಲ ಮಾಯವಾಗುತ್ತಿರುವುದನ್ನು ಕಂಡು ಆಶ್ಚರ್ಯವಾಗುತ್ತಿದೆ" ಎಂದರು. ಅದರಲ್ಲಿ ಅವರು ಯಾರ ಹೆಸರು ಹೇಳದಿದ್ದರೂ ಅದು ಶ್ರೀಮತಿ ಸಪತ್ನೇಕರರನ್ನು ಕುರಿತದ್ದೇ ಆಗಿತ್ತು. ಬಾಬಾ ಹೇಳಿದಂತೆ ಆಕೆಯ ಬಾಧೆಗಳೆಲ್ಲಾ ತೀರಿಹೋಗಿ, ಆಕೆಗೆ ಬಹಳ ಸಂತೋಷವಾಯಿತು. ಸಂತೋಷಭರಿತಳಾದ ಆಕೆ, ಬಾಬಾರ ಪಾದಗಳಲ್ಲಿ ಶಿರಸ್ಸಿಟ್ಟು, ನಮಸ್ಕರಿಸಿ ತನ್ನನ್ನು ತಾನೇ ಮರೆತಳು. ಬಾಬಾ ಒಂದು ಹಿಡಿ ಊದಿ ತೆಗೆದು ಆಕೆಯ ಕೈಯಲ್ಲಿ ಹಾಕಿ, "ತೆಗೆದುಕೋ. ಒಂದು, ಎರಡು, ನಾಲ್ಕು ನಿನಗೆಷ್ಟು ಬೇಕು?" ಎಂದರು.
ಆಗ ಸಪತ್ನೇಕರ್ ಬಾಬಾರ ದರ್ಶನಕ್ಕೆ ಮುಂದೆ ಬಂದರು. ಆಗಲೂ ಬಾಬಾ ಹಿಂದಿನಂತೆ, "ಹೊರಟು ಹೋಗು" ಎಂದು ಗದ್ದರಿಸಿದರು. ಆದರೆ ಈ ಸಲ, ತನ್ನ ಹಿಂದಿನ ಚರ್ಯೆಗಳಿಂದ ಬಾಬಾರು ಅಸಂತುಷ್ಟರಾಗಿದ್ದಾರೆ ಎಂಬುದನ್ನು ಅರಿತ ಸಪತ್ನೇಕರ್, ಪಶ್ಚಾತ್ತಾಪ, ವಿನಯ, ಧೃಢನಿಶ್ಚಯಗಳಿಂದ ತುಂಬಿ, ತಮ್ಮನ್ನು ತಾವೇ ತಿದ್ದಿಕೊಳ್ಳಲು ನಿರ್ಧರಿಸಿದರು. ಬಾಬಾರ ಆಶೀರ್ವಾದ ದೊರೆಯುವವರೆಗೂ ಶಿರಡಿ ಬಿಟ್ಟು ಹೋಗುವುದಿಲ್ಲ ಎಂದು ನಿರ್ಧಾರಮಾಡಿಕೊಂಡು, ಬಾಬಾ ಮಸೀದಿಯಲ್ಲಿ ಒಬ್ಬರೇ ಇರುವ ಸಮಯ ನೋಡಿಕೊಂಡು, ಅಲ್ಲಿಗೆ ಹೋಗಿ ಅವರ ಕಾಲಲ್ಲಿ ಬಿದ್ದು ನಮಸ್ಕರಿಸಿದರು. ಅಶ್ರುಧಾರೆ ಸುರಿಸುತ್ತಾ, ಬಾಬಾರನ್ನು ತಮ್ಮ ತಪ್ಪುಗಳನ್ನೆಲ್ಲಾ ಕ್ಷಮಿಸುವಂತೆ ಕೇಳಿಕೊಂಡರು. ಬಾಬಾ ಅವರ ತಲೆ ನೇವರಿಸುತ್ತಾ, ಆತನನ್ನು ತಮ್ಮ ಪಕ್ಕದಲ್ಲಿ ಕೂಡಿಸಿಕೊಂಡರು. ಆತ ಬಾಬಾರ ಪಾದಗಳನ್ನು ನೀವುತ್ತಾ ಕುಳಿತರು. ಆಗ ಒಬ್ಬಳು ಹೆಂಗಸು ಬಂದು ಬಾಬಾರ ಬೆನ್ನು ಸೊಂಟಗಳನ್ನು ನೀವುತ್ತಾ ನಿಂತಳು.
ತಮ್ಮದೇ ಆದ ಶೈಲಿಯಲ್ಲಿ, ಬನಿಯ ಒಬ್ಬನ ಕಥೆಯನ್ನು ಬಾಬಾ ಹೇಳಲು ಪ್ರಾರಂಭಿಸಿದರು. ಅವನ ಜೀವನದ ಏರುಪೇರುಗಳನ್ನೆಲ್ಲ ವಿವರವಾಗಿ ಹೇಳಿ, ಅವನು ತನ್ನ ಮಗನನ್ನು ಕಳೆದುಕೊಂಡ ಎಂದು ಹೇಳುವಾಗ ಸಪತ್ನೇಕರರಿಗೆ ಅವರು ಹೇಳುತ್ತಿರುವುದು ತನ್ನದೇ ಕಥೆ ಎಂದು ಅರ್ಥವಾಯಿತು. ತನ್ನ ಜೀವನದ ಪ್ರತಿಯೊಂದು ಅಂಶವೂ ಬಾಬಾರಿಗೆ ಹೇಗೆ ತಿಳಿಯಿತು, ಎಂದು ಆಶ್ಚರ್ಯಗೊಂಡರು. ಬಾಬಾರು ಸರ್ವಜ್ಞರಲ್ಲದಿದ್ದರೆ ಅದು ಹೇಗೆ ಸಾಧ್ಯ ಎಂದು ಮನಸ್ಸಿನಲ್ಲಿ ಆಂದುಕೊಳ್ಳುತ್ತಿದ್ದಂತೆಯೇ, ಬಾಬಾ ಆ ಹೆಂಗಸಿನೊಡನೆ ಮಾತಾನಾಡುವಂತೆ, ಸಪತ್ನೇಕರರ ಕಡೆಗೆ ಕೈತೋರಿಸಿ, "ಇವನ ಮಗನನ್ನು ನಾನು ಕೊಂದೆ, ಎಂದು ಇವನು ಆಪಾದಿಸುತ್ತಿದ್ದಾನೆ. ನಾನು ಮಕ್ಕಳನ್ನು ಕೊಲ್ಲುತ್ತೇನೆಯೇ? ಈ ಮನುಷ್ಯ ಹೀಗೆ ಮಸೀದಿಗೆ ಬಂದು ಕೂಗಾಡುವುದೇಕೆ? ಆ ಮಗುವನ್ನು ಮತ್ತೆ ಇವನ ಹೆಂಡತಿಯ ಗರ್ಭದಲ್ಲಿ ಇಡುತ್ತೇನೆ" ಎಂದು ಹೇಳುತ್ತಾ, ಸಪತ್ನೇಕರರ ತಲೆ ನೇವರಿಸಿ, ಸಾಂತ್ವನದ ಮಾತುಗಳನ್ನು ಹೇಳಿದರು, "ಈ ಪಾದಗಳು ಪುರಾತನವಾದವು. ಪವಿತ್ರವಾದವು. ನೀನು ಚಿಂತೆಗಳಿಂದ ಮುಕ್ತನಾಗಿ ನನ್ನಲ್ಲಿ ಸಂಪೂರ್ಣ ಶರಣಾಗತನಾದಾಗ ನಿನ್ನ ಗುರಿಯನ್ನು ಮುಟ್ಟುತ್ತೀಯೆ." ಅದನ್ನು ಕೇಳಿ ಅತ್ಯಂತ ಸಂತೋಷಭರಿತರಾದ ಸಪತ್ನೇಕರ್, ಧಾರಾಕಾರವಾಗಿ ಸುರಿಯುತ್ತಿದ್ದ ಅಶ್ರುಜಲದಿಂದ ಬಾಬಾರ ಪಾದಗಳನ್ನು ತೊಳೆದು, ನಮಸ್ಕರಿಸಿ ವಾಡಾಗೆ ಹಿಂತಿರುಗಿದರು.
ಮತ್ತೆ, ಸಪತ್ನೇಕರ್, ಪೂಜಾಸಾಮಗ್ರಿಗಳನ್ನೆಲ್ಲಾ ಕೂಡಿಸಿಕೊಂಡು, ತಮ್ಮ ಹೆಂಡತಿಯೊಡನೆ ಮಸೀದಿಗೆ ಬಂದು, ಬಾಬಾರಿಗೆ ಪೂಜೆ ಮಾಡಿ ನೈವೇದ್ಯವನ್ನು ಅರ್ಪಿಸಿ, ಅವರಿಂದ ಪ್ರಸಾದ ಸ್ವೀಕರಿಸಿದರು. ಪ್ರತಿದಿನವೂ ಈ ರೀತಿಯಲ್ಲಿ ಅವರಿಬ್ಬರೂ ಬಾಬಾರ ಸೇವೆ ಮಾಡಿ, ಪ್ರಸಾದ ಸ್ವೀಕರಿಸುತ್ತಿದ್ದರು. ಮಸೀದಿ ಬಹಳ ಕಿಕ್ಕಿರಿದಿದ್ದ ದಿನಗಳಲ್ಲಿ ಇಬ್ಬರೂ ಪೂಜೆಮಾಡಿ, ಮತ್ತೆ ಮತ್ತೆ ಗುಂಪಿನಲ್ಲಿ ನುಗ್ಗಿ ಬಂದು ನಮಸ್ಕಾರಮಾಡುತ್ತಿದ್ದರು. ಅದನ್ನು ಕಂಡ ಬಾಬಾ, "ಶ್ರದ್ಧಾಭಕ್ತಿಗಳಿಂದ ಮಾಡಿದ ಒಂದೇ ನಮಸ್ಕಾರ ಸಾಕು. ಅದು ನನಗೆ ಸೇರುತ್ತದೆ" ಎಂದರು. ಅಂದು ರಾತ್ರಿ ಸಪತ್ನೇಕರ್ ದಂಪತಿಗಳಿಗೆ ಚಾವಡಿ ಉತ್ಸವ ನೋಡುವ ಭಾಗ್ಯವೂ ದೊರೆಯಿತು. ಅವರು ಆಗ ಬಾಬಾರಲ್ಲಿ ಪಾಂಡುರಂಗನನ್ನು ಕಂಡರು.
ಮಾರನೆಯ ದಿನ ತಮ್ಮ ಊರಿಗೆ ಹಿಂತಿರುಗಲು ನಿಶ್ಚಯಿಸಿದ ಸಪತ್ನೇಕರ್ ದಂಪತಿಗಳು, ಬಾಬಾರನ್ನು ಕಾಣಲು ಹೋಗುತ್ತಿದ್ದಾಗ, ಸಪತ್ನೇಕರ್ ಅವರ ಹೆಂಡತಿಗೆ, "ಬಾಬಾರಿಗೆ ಒಂದು ರೂಪಾಯಿ ದಕ್ಷಿಣೆ ಕೊಡುತ್ತೇನೆ. ಅವರು ಮತ್ತೆ ಕೇಳಿದರೆ ಇನ್ನೊಂದು ರೂಪಾಯಿ ಕೊಡುತ್ತೇನೆ. ಅವರು ಇನ್ನೂ ಕೇಳಿದರೆ, ನನ್ನ ಚಿನ್ನದ ಉಂಗುರ, ನಿನ್ನ ಚಿನ್ನದ ಬಳೆಗಳನ್ನು ಮಾರಬೇಕಾಗುತ್ತದೆ" ಎಂದರು. ಆಶ್ಚರ್ಯವೋ ಎಂಬಂತೆ, ಅವರು ಮಸೀದಿಗೆ ಹೋಗಿ ಬಾಬಾರಿಗೆ ನಮಸ್ಕಾರ ಮಾಡಿದಾಗ, ಬಾಬಾ ಅವರನ್ನು ಒಂದು ರೂಪಾಯಿ ದಕ್ಷಿಣೆ ಕೇಳಿದರು. ಸಪತ್ನೇಕರರ ಮನಸ್ಸಿನಲ್ಲಿದ್ದುದನ್ನು ತಿಳಿದಿದ್ದ ಬಾಬಾ, ಅವರನ್ನು ಇನ್ನೊಂದು ರೂಪಾಯಿ ಕೇಳಿ, "ಇನ್ನೂ ಕೊಡು ಎಂದರೆ ನೀನು ನಿನ್ನ ಉಂಗುರ, ನಿನ್ನ ಹೆಂಡತಿಯ ಬಳೆಗಳನ್ನು ಮಾರಬೇಕಾಗುತ್ತದೆ" ಎಂದರು. ಸಪತ್ನೇಕರ್ ಅವರು ಕೇಳಿದ ರೂಪಾಯಿ ಕೊಟ್ಟು ನಮಸ್ಕರಿಸಿದರು. ಬಾಬಾ ಅವರನ್ನು ಆಶೀರ್ವದಿಸಿ, ಒಂದು ಹಣ್ಣು ಕೊಟ್ಟು, "ಈ ಹಣ್ಣು ತೆಗೆದು ನಿನ್ನ ಹೆಂಡತಿಯ ಸೆರಗಿನಲ್ಲಿಡು. ಚಿಂತಾರಹಿತನಾಗಿ ಮನೆಗೆ ಹೋಗು" ಎಂದರು.
ಊರಿಗೆ ಹಿಂತಿರುಗಿದ ವರ್ಷವೆನ್ನುವುದರೊಳಗಾಗಿ, ಶ್ರೀಮತಿ ಸಪತ್ನೇಕರ್ ಗಂಡು ಮಗುವೊಂದಕ್ಕೆ ಜನ್ಮ ಕೊಟ್ಟಳು. ಮಗುವಿಗೆ ಎಂಟು ತಿಂಗಳಾಗಿದ್ದಾಗ, ಮಗುವಿನೊಡನೆ ಸಪತ್ನೇಕರ್ ದಂಪತಿಗಳು ಶಿರಡಿಗೆ ಬಂದು ಅದನ್ನು ಬಾಬಾರ ಪಾದಗಳ ಮೇಲಿಟ್ಟು, ಪ್ರಾರ್ಥಿಸಿಕೊಂಡರು, "ಹೇ, ಬಾಬಾ. ನಿನ್ನ ಋಣವನ್ನು ಹೇಗೆ ತೀರಿಸಬೇಕೋ ನಮಗೆ ತಿಳಿಯದು. ನಿನ್ನ ದಿವ್ಯ ಪಾದಗಳಿಗೆ ಮತ್ತೆ ಮತ್ತೆ ನಮಸ್ಕಾರ ಮಾಡುತ್ತೇವೆ. ನಮ್ಮನ್ನು ಸದಾಕಾಲವೂ ಇದೇ ರೀತಿ ಕಾಪಾಡುತ್ತಿರು. ನಮ್ಮ ಸಂದೇಹ ಭರಿತವಾದ ಮನಸ್ಸನ್ನು ಶುದ್ಧಗೊಳಿಸಿ, ಸದಾ ನಿನ್ನ ನಾಮ ಧ್ಯಾನ, ಭಜನೆಗಳಲ್ಲಿ ನಿರತವಾಗಿರುವಂತೆ ಮಾಡು" ಎಂದು ಕಳಕಳಿಯಿಂದ ಬೇಡಿಕೊಂಡರು.
ಆ ಮಗುವಿಗೆ ಮುರಳೀಧರ ಎಂದು ನಾಮಕರಣ ಮಾಡಿದರು. ಅವರಿಗೆ ಇನ್ನೂ ಎರಡು ಗಂಡುಮಕ್ಕಳಾದವು. ಬಾಬಾರಲ್ಲಿ ಸಂಪೂರ್ಣ ಶರಣಾಗತರಾದ ಸಪತ್ನೇಕರ್ ದಂಪತಿಗಳು, ಆಗಾಗ ಶಿರಡಿಗೆ ಬಂದು ಬಾಬಾರ ದರ್ಶನ ಮಾಡುತ್ತಿದ್ದರು.
ನಾವೂ ಆ ದಂಪತಿಗಳಂತೆ ಬಾಬಾರಲ್ಲಿ ಸಂಪೂರ್ಣ ಶರಣಾಗತರಾಗಿ, ನಮ್ಮ ಮನಸ್ಸು ಚಿಂತಾರಹಿತವಾಗಿ ಬಾಬಾರ ನಾಮಧ್ಯಾನ ಭಜನೆಗಳನ್ನು ಸದಾಕಾಲವೂ ಮಾಡಿಕೊಳ್ಳುತ್ತಿರುವಂತೆ ನಮ್ಮನ್ನು ಅನುಗ್ರಹಿಸು ಎಂದು ಅವರನ್ನು ಬೇಡಿಕೊಳ್ಳೋಣ.
ಇದರೊಂದಿಗೆ ಶೇವಡೆ, ಸಪತ್ನೇಕರರ ಕಥೆಗಳು ಮತ್ತು ಇತರ ವಿಷಯಗಳನ್ನು ಕುರಿತು ಹೇಳುವ ನಲವತ್ತೆಂಟನೆಯ ಅಧ್ಯಾಯ ಮುಗಿಯಿತು. ಮುಂದಿನ ಅಧ್ಯಾಯದಲ್ಲಿ ಹೇಮಾಡ್ ಪಂತ್, ಹರಿ ಕನೋಬಾ, ಸೋಮದೇವ ಸ್ವಾಮಿ, ನಾನಾ ಸಾಹೇಬ್ ಚಾಂದೋರ್ಕರರ ಕಥೆಗಳು ಇತ್ಯಾದಿ ವಿಷಯಗಳನ್ನು ಹೇಳುತ್ತಾರೆ.
||ಸದ್ಗುರು ಶ್ರೀ ಸಾಯಿನಾಥಾರ್ಪಣಮಸ್ತು||ಶುಭಂ ಭವತು||
||ಓಂ ಶಾಂತಿಃ ಶಾಂತಿಃ ಶಾಂತಿಃ||
||ಓಂ ಶಾಂತಿಃ ಶಾಂತಿಃ ಶಾಂತಿಃ||
No comments:
Post a Comment