||ಶ್ರೀ ಸಾಯಿ ಸಚ್ಚರಿತ್ರೆ||
||ನಲವತ್ಮೂರು ಮತ್ತು ನಲವತ್ನಾಲ್ಕನೆಯ ಅಧ್ಯಾಯಗಳು||
||ಮಹಾಸಮಾಧಿ (ಮುಂದುವರೆದುದು)||
ಶ್ರೀ ಗಣೇಶಾಯ ನಮಃ ಶ್ರೀ ಸರಸ್ವತಯೇ ನಮಃ
ಶ್ರೀ ವೆಂಕಟೇಶಾಯ ನಮಃ ಶ್ರೀ ಸಾಯಿನಾಥಾಯ ನಮಃ
ಶ್ರೀ ಸದ್ಗುರುಭ್ಯೋನ್ನಮಃ
||ನಲವತ್ಮೂರು ಮತ್ತು ನಲವತ್ನಾಲ್ಕನೆಯ ಅಧ್ಯಾಯಗಳು||
||ಮಹಾಸಮಾಧಿ (ಮುಂದುವರೆದುದು)||
ಶ್ರೀ ಗಣೇಶಾಯ ನಮಃ ಶ್ರೀ ಸರಸ್ವತಯೇ ನಮಃ
ಶ್ರೀ ವೆಂಕಟೇಶಾಯ ನಮಃ ಶ್ರೀ ಸಾಯಿನಾಥಾಯ ನಮಃ
ಶ್ರೀ ಸದ್ಗುರುಭ್ಯೋನ್ನಮಃ
ಈ ಅಧ್ಯಾಯದಲ್ಲಿ ಹೇಮಾಡ್ ಪಂತ್, ಬಾಬಾರ ಮಹಾಸಮಾಧಿ ಮತ್ತು ಇತರ ವಿಷಯಗಳನ್ನು ಕುರಿತು ಹೇಳುತ್ತಾರೆ.
ಯಾರಿಗಾದರೂ ಮರಣ ಸಮೀಪಿಸಿದಾಗ ಅವರ ಹತ್ತಿರ ಕುಳಿತು ರಾಮಾಯಣ, ಭಾಗವತ, ಭಗವದ್ಗೀತೆಗಳಂತಹ ಪವಿತ್ರ ಗ್ರಂಥಗಳನ್ನು ಓದುವುದು ಹಿಂದುಗಳಲ್ಲಿ ಒಂದು ಸಂಪ್ರದಾಯ. ಇದರಿಂದ ಸಾವನ್ನು ನಿರೀಕ್ಷಿಸುತ್ತಾ ಇರುವ ಮನುಷ್ಯನ ಮನಸ್ಸು, ಲೌಕಿಕ ವಿಷಯಗಳಿಂದ ದೂರವಾಗಿ, ಪರಮಾತ್ಮನಲ್ಲಿ ನೆಲೆಗೊಂಡು, ಸ್ವರ್ಗಕ್ಕೆ ದಾರಿ ಸುಗಮವಾಗುತ್ತದೆ ಎಂದು ನಂಬಿಕೆ. ಪರೀಕ್ಷಿತ್ ಮಹಾರಾಜ, ಋಷಿಶಾಪಗ್ರಸ್ತನಾಗಿ ಸರ್ಪದಂಷ್ಟ್ರದಿಂದ ಸಾಯುವ ಮುಂಚೆ ಏಳು ದಿನಗಳು ಶುಕಮುನಿಗಳು ಅವನಿಗೆ ಭಾಗವತ ಪುರಾಣವನ್ನು ವಿಸ್ತಾರವಾಗಿ ಹೇಳಿದರು. ಅದರಿಂದ ಪರೀಕ್ಷಿತ್ ತನ್ನ ಮನಸ್ಸನ್ನು ಪರಮಾತ್ಮನಲ್ಲಿ ನಿಲ್ಲಿಸಿ ಮೋಕ್ಷಪಡೆಯಲು ಸಾಧ್ಯವಾಯಿತು. ಈಗಲೂ ಆ ಅಭ್ಯಾಸ ರೂಢಿಯಲ್ಲಿದೆ. ಶುದ್ಧಾತ್ಮ ಬಾಬಾರಿಗೆ ಅಂತಹುದೇನೂ ಬೇಕಾಗಿರಲಿಲ್ಲ. ಆದರೂ ಸಾಮಾನ್ಯರು, ಮೇಲಿನವರು ತೋರಿಸಿಕೊಟ್ಟ ದಾರಿಯಲ್ಲಿ ನಡೆಯುವುದರಿಂದ ಆ ಅಭ್ಯಾಸವನ್ನು ತಪ್ಪಿಸಬಾರದೆಂದು ಬಾಬಾ, ಅಂತಿಮ ದಿನಕ್ಕೆ ೧೪ ದಿನ ಮುಂಚೆ, ವಜೆ ಎಂಬ ಭಕ್ತನನ್ನು "ರಾಮವಿಜಯ" ವನ್ನು ತಮ್ಮ ಮುಂದೆ ಕೂತು ಓದಲು ಹೇಳಿದರು. ಆತ ಆ ಪುಸ್ತಕವನ್ನು ಒಂದು ವಾರದಲ್ಲಿ ಓದಿ ಮುಗಿಸಿದರು. ಬಾಬಾ ಮತ್ತೆ ಅವರನ್ನು ಅದನ್ನು ಮೂರು ದಿನಗಳಲ್ಲಿ ಓದಿ ಮುಗಿಸಲು ಹೇಳಿದರು. ಅದಾದಮೇಲೆ ಮತ್ತೆ ಒಂದುಸಲ ಮೂರು ದಿನಗಳಲ್ಲಿ ಓದಲು ಹೇಳಿದರು. ಹೀಗೆ ನಿರಂತರವಾಗಿ ಓದಿ ಆತ ದಣಿದುಹೋದರು. ಬಾಬಾರು ಅವರಿಗೆ ಓದುವುದನ್ನು ಸಾಕುಮಾಡಲು ಹೇಳಿದರು. ಪ್ರಾಪಂಚಿಕ ವಿಷಯಗಳಿಂದ ದೂರವಾದ ಬಾಬಾ, ಎರಡು ದಿನಗಳ ಮುಂಚಿನಿಂದಲೇ ಲೆಂಡಿಗೆ ಹೋಗುವುದನ್ನು ನಿಲ್ಲಿಸಿದ್ದರು. ಭಿಕ್ಷೆಗೂ ಹೋಗದೆ ಮಸೀದಿಯಲ್ಲೇ ಕುಳಿತಿರುತ್ತಿದ್ದರು. ಸದಾ ಜಾಗೃತರಾಗಿದ್ದ ಅವರು, ಭಕ್ತರಿಗೆ ಯಾವಾಗಲೂ ಶಾಂತಿ ಸಮಾಧಾನಗಳಿಂದ ಇರಲು ಹೇಳುತ್ತಿದ್ದರು. ಕಾಕಾ ಸಾಹೇಬ್ ದೀಕ್ಷಿತ್, ಬೂಟಿ ಬಾಬಾರ ಜೊತೆಯಲ್ಲಿ ಪ್ರತಿದಿನವೂ ಊಟಮಾಡುತ್ತಿದ್ದರು. ಅಕ್ಟೋಬರ್ ೧೫ರಂದು ಆರತಿ ಆದಮೇಲೆ ಅವರನ್ನು ಬಾಬಾ ಅವರವರ ಮನೆಗಳಿಗೆ ಹೋಗಿ ಊಟಮಾಡಿ ಬರಲು ಹೇಳಿದರು. ಲಕ್ಷ್ಮೀಬಾಯಿ ಶಿಂಧೆ, ನಾನಾ ಸಾಹೇಬ್ ನಿಮೋನ್ಕರ್, ಬಾಯಾಜಿ ಲಕ್ಷ್ಮಣ ಶಿಂಪಿ, ಮತ್ತು ಭಾಗೋಜಿ ಶಿಂಧೆ ಮಾತ್ರ ಮಸೀದಿಯಲ್ಲಿ ಇದ್ದರು. ಬಾಬಾರ ನೆರಳಿನಂತೆ ಇದ್ದ ಶ್ಯಾಮಾ ವ್ಯಾಕುಲಗೊಂಡು ಮಸೀದಿಯ ಮೆಟ್ಟಿಲ ಮೇಲೆ ಕುಳಿತಿದ್ದರು. ಯಾವ ಕ್ಷಣಕ್ಕೆ ಏನೋ ಎಂಬ ದುಗುಡ ಅವರ ಮನಸ್ಸನ್ನು ತುಂಬಿತ್ತು.
ಮಸೀದಿಯ ಒಳಗಡೆ ಲಕ್ಷ್ಮೀಬಾಯಿಗೆ ಒಂಭತ್ತು ನಾಣ್ಯಗಳನ್ನು ಕೊಟ್ಟ ಮೇಲೆ, ಬಾಬಾ ತಮಗೆ ಮಸೀದಿ ಸರಿಯಿಲ್ಲವೆಂದೂ, ತಮ್ಮನ್ನು ಬೂಟಿಯ ದಗಡೀವಾಡಾಕ್ಕೆ ಕರೆದೊಯ್ಯಬೇಕೆಂದೂ ಹೇಳಿದರು. ಹಾಗೆ ಹೇಳುತ್ತಾ ಬಾಯಾಜಿ ಮೇಲೆ ಒರಗಿದರು. ಬಾಯಾಜಿ ಅವರ ಮೂಗಿನ ಹತ್ತಿರ ಕೈಯಿಟ್ಟು ಉಸಿರಾಟ ನಿಂತಿದ್ದುದನ್ನು ನೋಡಿ, ನಾನಾ ಸಾಹೇಬ್ ನಿಮೋಂಕರರಿಗೆ ಹೇಳಿದರು. ಅವರು ತಕ್ಷಣವೇ ಪವಿತ್ರ ಜಲವನ್ನು ತಂದು ಬಾಬಾರ ಬಾಯಲ್ಲಿ ಹಾಕಿದರು. ಆದರೆ ನೀರು ಒಳಕ್ಕೆ ಹೋಗಲಿಲ್ಲ. ಬಾಯಿಂದ ಈಚೆ ಬಂದು ಬಿಟ್ಟಿತು. ನಾನಾ ಸಾಹೇಬ್ ತಮ್ಮ ದುಃಖೋದ್ವೇಗವನ್ನು ತಡೆಯಲಾರದೆ "ಓ ಬಾಬಾ" ಎಂದು ಜೋರಾಗಿ ಕೂಗಿಕೊಂಡರು. ಬಾಬಾ ಆ ಕೂಗನ್ನು ಕೇಳಿದರೋ ಎಂಬಂತೆ ಕಣ್ಣು ತೆಗೆದು "ಆ’ ಎಂದಂತಾಯಿತು. ಆದರೆ ಆ ಹೊತ್ತಿಗಾಗಲೇ ಅವರು ಈ ಪಾರ್ಥಿವ ದೇಹವನ್ನು ಬಿಟ್ಟು "ಸರ್ವ" ದಲ್ಲಿ ಲೀನರಾಗಿ ಹೋಗಿದ್ದರು. ಮಾನವ ರೂಪದಲ್ಲಿದ್ದ ಅವರು, ದೇಹಾತೀತರಾಗಿ, ಪ್ರಪಂಚದ ಜೀವಿಗಳೆಲ್ಲರಲ್ಲೂ ಸೇರಿ ಹೋದರು. ಸಿಡಿಲಿನಂತೆ ಬಂದು ಬಿದ್ದ ಆ ವಾರ್ತೆ ಕಾಳ್ಗಿಚ್ಚಿನಂತೆ ಶಿರಡಿಯಲ್ಲೆಲ್ಲ ಕ್ಷಣದಲ್ಲಿ ಹರಡಿತು. ದಿಗ್ಭ್ರಾಂತರಾದ ಶಿರಡಿಯ ಜನರೆಲ್ಲಾ ತಾವು ಮಾಡುತ್ತಿದ್ದುದೆಲ್ಲವನ್ನೂ ಹೇಗಿದ್ದರೆ ಹಾಗೆಯೇ ಬಿಟ್ಟು, ಉಟ್ಟಿದ್ದ ಬಟ್ಟೆಗಳಲ್ಲಿಯೇ, ಓಡುತ್ತಾ ಮಸೀದಿಯ ಬಳಿಗೆ ಬಂದು ಸೇರಿದರು. ಅವರ ಆಧಾರವಾಗಿದ್ದ ಜೀವಜ್ಯೋತಿ ನಂದಿಹೋಗಿ ಎಲ್ಲವೂ ಅಂಧಕಾರ ಮಯವಾಗಿತ್ತು. ಕೆಲವರು ತಮ್ಮ ಆಧಾರ ಸ್ಥಂಭವಾದ ಬಾಬಾರ ಬಳಿಯಲ್ಲಿ ಕೊನೆಯ ಘಳಿಗೆಯಲ್ಲಿ ಇರದೇ ಹೋದುದಕ್ಕಾಗಿ ವಿಷಾದ ಪಟ್ಟರು. ತಾವು ಆ ಸಮಯದಲ್ಲಿ ಅಲ್ಲಿ ಇದ್ದಿದ್ದರೆ ಏನಾದರೂ ಉಪಯೊಗಕ್ಕೆ ಬರುತ್ತಿದ್ದೆವೇನೋ ಎಂದು ಹಲವರ ಯೋಚನೆ. ಕೆಲವರು ಜೋರಾಗಿ ಅಳುತ್ತಿದ್ದರು. ಇನ್ನು ಕೆಲವರು ದಿಗ್ಮೂಢರಾಗಿ ಸುಮ್ಮನೆ ಶೂನ್ಯವನ್ನು ನೋಡುತ್ತಾ ಕುಳಿತುಬಿಟ್ಟಿದ್ದರು. ಕೆಲವರು ಪ್ರಜ್ಞಾಹೀನರಾದರು. ಪ್ರತಿಯೊಬ್ಬರೂ ದುಃಖ ದುಮ್ಮಾನಗಳಿಂದ ತುಂಬಿ ಅಶ್ರುಧಾರೆಗಳನ್ನು ಸುರಿಸುತ್ತಾ ದಿಕ್ಕು ತೋಚದೆ ನಿಂತಿದ್ದರು.
ಯಾರೋ ಒಬ್ಬರು ಸಾಯಿ ಮಹಾರಾಜರು "ನಾನು ಎಂಟು ವರ್ಷದ ಹುಡುಗನಾಗಿ ಮತ್ತೆ ಬರುತ್ತೇನೆ" ಎಂದು ಹೇಳಿದ್ದ ಮಾತುಗಳನ್ನು ನೆನಸಿಕೊಂಡರು. ಆ ಮಾತುಗಳು ಸಂತರಿಂದ ಬಂದವು. ಆದ್ದರಿಂದ ಅವನ್ನು ಸಂದೇಹಿಸುವ ಅವಶ್ಯಕತೆಯಿಲ್ಲ. ಹಿಂದೆ ಮಹಾವಿಷ್ಣುವೂ ದೇವಕಿಯ ಸ್ವಪ್ನದಲ್ಲಿ ಕಾಣಿಸಿಕೊಂಡು ನಾನು ಎಂಟು ವರ್ಷದ ಬಾಲಕನಾಗಿ ಬರುತ್ತೇನೆ ಎಂದು ಹೇಳಿದ್ದ. ಶ್ರೀ ಕೃಷ್ಣ ಧರೆಗಿಳಿದು ಬಂದದ್ದು ಭೂಭಾರವನ್ನು ಇಳಿಸುವುದಕ್ಕೆ. ಆದರೆ ಬಾಬಾರವರು ಬಂದದ್ದು ತಮ್ಮ ಭಕ್ತರ ಉದ್ಧಾರಕ್ಕೋಸ್ಕರ. ಬಾಬಾ-ಭಕ್ತ ಸಂಬಂಧ ಒಂದು ಪೀಳಿಗೆಗೆ ಸೀಮಿತವಲ್ಲ. ಅದು ೭೨ ಪೀಳಿಗೆಗಳಿಂದಲೂ ಮುಂದುವರೆಯುತ್ತಿದೆ. ಅನೇಕ ಭಕ್ತರು ಬಾಬಾರ ನಿಶ್ಚೇಷ್ಟಿತವಾದ ಭೌತಿಕ ದೇಹವನ್ನು ನೋಡಿದ ಮೇಲೂ, ಬಾಬಾ ಸತ್ತಿಲ್ಲ, ಎಲ್ಲೋ ದೂರ ಪ್ರಯಾಣಕ್ಕೆ ಹೊರಟಿದ್ದಾರೆ, ಮತ್ತೆ ಹಿಂತಿರುಗಿ ಬರುತ್ತಾರೆ ಎಂದೇ ನಂಬಿದ್ದರು. ಅದು ಬಾಬಾ ಅವರಲ್ಲಿಟ್ಟಿದ್ದ ಪ್ರೇಮ. ಅದೇ ಪ್ರೇಮವನ್ನು ಇಂದೂ ಅವರ ಮಹಾಸಮಾಧಿಯಲ್ಲಿ ಭಕ್ತರು ತೋರಿಸುತ್ತಿದ್ದಾರೆ.
ಮಹಾರಾಜ ಸಾಯಿ ಯಾವ ಮತಬೇಧವನ್ನು ತಪ್ಪಿಸಬೇಕೆಂದು ತಮ್ಮ ಜೀವಮಾನವೆಲ್ಲಾ ಒದ್ದಾಡಿದರೋ, ಅದು ಈ ಸಮಯದಲ್ಲಿ ಮತ್ತೆ ತಲೆಯೆತ್ತಿತು. ಹಿಂದು ಮುಸ್ಲಿಮ್ ಇಬ್ಬರ ಯೋಚನೆಗಳಲ್ಲಿ ಬೇಧವುಂಟಾಯಿತು. ಮುಸ್ಲಿಮರು, ಹೊರಗೆ ಬಯಲಿನಲ್ಲಿ ದೇಹವನ್ನು ಹೂತು ಅದರ ಮೇಲೆ ಗೋರಿಯೊಂದನ್ನು ಕಟ್ಟಬೇಕು, ಎಂದರು. ಕುಶಾಲ್ ಚಂದ್ ಮತ್ತು ಅಮೀರ್ ಶಕ್ಕರ್ ಅದನ್ನು ಅನುಮೋದಿಸಿದರು. ಆದರೆ ಶಿರಡಿಯ ಮುಖ್ಯಸ್ಥ, ರಾಮಚಂದ್ರ ಪಾಟೀಲರು ಅದಕ್ಕೆ ಒಪ್ಪಲಿಲ್ಲ. ಬಾಬಾರ ದೇಹವನ್ನು ಬೂಟಿ ವಾಡಾದಲ್ಲೇ ಇಡಬೇಕೆಂದು ಒತ್ತಾಯ ಮಾಡಿದರು. ಈ ವಾದ ವಿವಾದಗಳ ಮಧ್ಯೆ ಬಾಬಾರ ಭೌತಿಕ ದೇಹ ೩೬ ಗಂಟೆಗಳ ಕಾಲ ಯಾರ ಗಮನಕ್ಕೂ ಬರದೆ ಹಾಗೇ ಇತ್ತು.
ಬುಧವಾರ ಬೆಳಗ್ಗೆ, ಲಕ್ಷ್ಮಣ ಜೋಶಿ ಅವರ ಕನಸಿನಲ್ಲಿ ಬಾಬಾ ಕಾಣಿಸಿಕೊಂಡು, ಅವರ ಕೈಹಿಡಿದೆಳೆದು, "ಏಳು, ಬಾಪೂ ಸಾಹೇಬ ನಾನು ಸತ್ತಿದ್ದೇನೆ ಎಂದುಕೊಂಡಿದ್ದಾನೆ. ಅವನು ಪೂಜೆಗೆ ಬರುವುದಿಲ್ಲ. ನೀನು ಬಂದು ಪೂಜೆ ಮಾಡಿ ಕಾಕಡಾ ಆರತಿ ಕೊಡು" ಎಂದರು. ಲಕ್ಷ್ಮಣ ಜೋಶಿ ಹಳ್ಳಿಯ ಜ್ಯೋತಿಷ್ಕ. ಶ್ಯಾಮಾರ ಸೋದರಮಾವ. ಆತ ಸದಾಚಾರ ಬ್ರಾಹ್ಮಣ. ಪ್ರತಿದಿನವೂ ಬಾಬಾರ ಪೂಜೆ ಮಾಡಿದಮೇಲೆಯೇ ಇತರ ದೇವತೆಗಳ ಪೂಜೆ ಮಾಡುತ್ತಿದ್ದರು. ಬಾಬಾರೇ ಅವರಿಗೆ ಸಕಲ ದೇವತೆಗಳು. ಕನಸು ಮುಗಿದಮೇಲೆ ಆತ ಸ್ನಾನ ಸಂಧ್ಯೆಗಳನ್ನು ಮುಗಿಸಿ ಪೂಜಾ ಸಾಮಗ್ರಿಗಳನ್ನು ತೆಗೆದುಕೊಂಡು ಮಸೀದಿಗೆ ಬಂದರು. ಯಾರು ಅಡ್ಡಮಾಡಿದರೂ ಲಕ್ಷ್ಯಮಾಡದೆ, ಬಾಬಾರ ಪೂಜೆಯನ್ನು ಮಾಡಿ, ಕಾಕಡಾ ಆರತಿ ಕೊಟ್ಟು, ಬಾಬಾರ ಪಾದಗಳಿಗೆ ನಮಸ್ಕರಿಸಿ ಹೊರಟು ಹೋಡರು. ಇದು ದುಃಖತಪ್ತರಾದ ಭಕ್ತರಿಗೆ, ಬಾಬಾ ತಮ್ಮೊಡನೆಯೇ ಇದ್ದಾರೆ ಎಂಬ ಭಾವನೆಯನ್ನು ಮೂಡಿಸಿತು. ಏನೂ ಆಗಿಯೇ ಇಲ್ಲವೇನೋ ಎಂಬಂತೆ ಎಂದಿನಂತೆ ಮಧ್ಯಾಹ್ನದ ಆರತಿಯನ್ನು ಬಾಪೂ ಸಾಹೇಬ್ ಜೋಗ್ ಅವರು ಮಾಡಿದರು.
ಭಕ್ತರೆಲ್ಲರು ಬಾಬಾರ ಕೊನೆಯ ಕೋರಿಕೆಯನ್ನು ಗೌರವಿಸಿ ಅವರನ್ನು ವಾಡಾದಲ್ಲಿಯೇ ಇಡಬೇಕೆಂದು ಬೂಟಿವಾಡಾದ ಮಧ್ಯದಲ್ಲಿ ಅಗೆಯಲು ಆರಂಭಿಸಿದರು. ಮಂಗಳವಾರದ ದಿನವೇ ರಾಹತಾದಿಂದ ಸಬ್ ಇನ್ಸ್ಪೆಕ್ಟರ್ ಬಂದಿದ್ದರು. ಬೇರೆ ಊರುಗಳಿಂದ ಭಕ್ತರೂ ಬರಲಾರಂಭಿಸಿದ್ದರು. ಬೊಂಬಾಯಿಯಿಂದ ಅಮೀರ್ ಭಾಯಿ, ಕೋಪರಗಾಂವ್‍ನಿಂದ ಮಾಮಾಲತದಾರರು ಬಂದಿದ್ದರು. ಎಲ್ಲರೂ ದೇಹವನ್ನು ವಾಡಾದಲ್ಲಿ ಇಡಲು ಒಪ್ಪಿದರೂ, ಕೆಲವರು ಮಾತ್ರ, ಅದನ್ನು ಹೊರಗೆ ಬಯಲಿನಲ್ಲಿ ಇಟ್ಟು ಗೋರಿ ಕಟ್ಟಬೇಕೆಂದು ಹಟಮಾಡಿದರು. ಮಾಮಲತದಾರರು ಅಲ್ಲಿ ನೆರೆದಿದ್ದವರೆಲ್ಲರ ಇಚ್ಚೆಯೇನು ಎಂದು ಲೆಕ್ಕ ತೆಗೆದುಕೊಂಡಾಗ, ವಾಡಾದಲ್ಲಿಯೇ ಇಡಬೇಕೆಂಬ ನಿರ್ಣಯಕ್ಕೆ ಹೆಚ್ಚು ಮತಗಳು ಬಂದವು. ಮಾಮಲತದಾರರು ಆ ವಿಷಯವನ್ನು ಕಲೆಕ್ಟರ್ ಅವರಿಗೆ ತಿಳಿಸಿ ಬರಬೇಕೆಂದು, ಕಾಕಾ ಸಾಹೇಬರಲ್ಲಿ ವಿನಂತಿ ಮಾಡಿಕೊಂಡರು. ಕಾಕಾ ಸಾಹೇಬರೂ ಹೊರಡಲು ಅಣಿಯಾದರು. ಅಷ್ಟರಲ್ಲಿ, ಬಾಬಾರ ಅದೃಶ್ಯ ಮಧ್ಯಸ್ಥಿಕೆಯಿಂದಾಗಿ, ಎಲ್ಲರೂ ವಾಡಾದಲ್ಲೇ ದೇಹವನ್ನು ಇಡಬೇಕೆಂಬ ಮಾತಿಗೆ ಒಪ್ಪಿಕೊಂಡರು. ಬುಧವಾರ ಸಾಯಂಕಾಲ ಬಾಬಾರ ಪಾರ್ಥಿವ ದೇಹವನ್ನು, ಸಾಯಿನಾಥ ಮಹಾರಾಜಕೀ ಜೈ ಎಂದು ಜೈಕಾರ ಮಾಡುತ್ತಾ, ಬಾಬಾರ ಭಜನೆಗಳನ್ನು ಹಾಡುತ್ತಾ, ಮೆರವಣಿಗೆಯಲ್ಲಿ ವಾಡಾಕ್ಕೆ ತಂದರು. ವಾಡಾದ ಮಧ್ಯದಲ್ಲಿ, ಕೃಷ್ಣ ದೇಗುಲದ ಗರ್ಭಗುಡಿಯ ಪ್ರದೇಶದಲ್ಲಿ ಎಲ್ಲವನ್ನು ವ್ಯವಸ್ಥಿತವಾಗಿ ಏರ್ಪಾಡುಮಾಡಲಾಗಿತ್ತು. ಅಲ್ಲಿ ಬಾಬಾರ ದೇಹವನ್ನು ವಿಧಿಪ್ರಕಾರ ಹೂಳಲಾಯಿತು. ಬಾಬಾ ಮುರಳೀಧರನ ಜಾಗದಲ್ಲಿ ಉಪಸ್ಥಿತರಾಗಿ ತಾವೇ ಮುರಳೀಧರನಾದರು. ವಾಡಾ ದೇವಾಲಯವಾಯಿತು. ಬಾಬಾರ, "ದೇವಾಲಯ ಸಿದ್ಧವಾದಮೇಲೆ ನಾನೇ ಬಂದು ಅಲ್ಲಿರುತ್ತೇನೆ" ಎಂಬ ಮಾತುಗಳು ನಿಜವಾದವು. ಬಾಪೂ ಸಾಹೇಬ್ ಬೂಟಿ ಅವರು ಕಟ್ಟಿಸಿದ ಕಟ್ಟಡ, ಲಕ್ಷಾಂತರ ಜನ ಬಂದು ತಮ್ಮ ಸುಖ ಶಾಂತಿಗಳನ್ನು ಪಡೆಯುವ ದೇವಸ್ಥಾನವಾಯಿತು.
ಬಾಲಾ ಸಾಹೇಬ ಭಾಟೆ ಮತ್ತು ಉಪಾಸನಿ ಬಾಬಾ ಇಬ್ಬರೂ ಭಕ್ತಿ ಶ್ರದ್ಧೆಗಳಿಂದ ಬಾಬಾರ ಉತ್ತರಕ್ರಿಯೆಗಳನ್ನು ಪೂರಯಿಸಿದರು. ಬಾಬಾರ ದೇಹ ೩೬ ಗಂಟೆಗಳ ನಂತರವು ಬಿಗಿದುಕೊಂಡಿರಲಿಲ್ಲ ಎಂಬುದನ್ನು ಪ್ರೊ. ನಾರ್ಕೆ ಗಮನಿಸಿದರು.
ಇಟ್ಟಿಗೆ ಒಡೆದದ್ದು
ಬಾಬಾರ ಹತ್ತಿರ ಒಂದು ಹಳೆಯ ಇಟ್ಟಿಗೆ ಇತ್ತು. ಅದನ್ನು ಅವರು ಬಹಳವಾಗಿ ಪ್ರೀತಿಸುತ್ತಿದ್ದರು. ಮಲಗುವಾಗ, ಅದನ್ನು ತಲೆದಿಂಬಾಗಿ ಉಪಯೋಗಿಸುತ್ತಿದ್ದರು. ಆ ಇಟ್ಟಿಗೆ ತಮ್ಮ ಗುರು ತಮಗೆ ಕೊಟ್ಟ ಕಾಣಿಕೆ ಎಂದು ಅವರು ಹೇಳುತ್ತಿದ್ದರು. ಆ ಕಾರಣಕ್ಕಾಗಿಯೇ ಅವರಿಗೆ ಆ ಇಟ್ಟಿಗೆ ಮಿಕ್ಕೆಲ್ಲದಕ್ಕಿಂತಲೂ ಅಮೂಲ್ಯವಾಗಿತ್ತು. ಬಾಬಾರ ಮಹಾಸಮಾಧಿಗೆ ಸ್ವಲ್ಪ ದಿನಗಳ ಮುಂಚೆ, ಮಾಧವ ಫಾಲ್ಸೆ ಎನ್ನುವ ಹುಡುಗ ಇಟ್ಟಿಗೆಯನ್ನು ತನ್ನ ಕೈಯಲ್ಲಿ ಹಿಡಿದು, ಮಸೀದಿಯನ್ನು ಗುಡಿಸುತ್ತಿದ್ದ. ಆಗ ಅಕಸ್ಮಾತ್ತಾಗಿ ಕೈತಪ್ಪಿ, ಆ ಇಟ್ಟಿಗೆ ಕೆಳಕ್ಕೆ ಬಿದ್ದು ಎರಡಾಗಿ ಒಡೆಯಿತು. ಆ ಸಮಯದಲ್ಲಿ ಬಾಬಾ ಮಸೀದಿಯಲ್ಲಿ ಇರಲಿಲ್ಲ.
ಬಾಬಾಗೆ ಇದು ತಿಳಿದಾಗ ಅವರು ಅತ್ಯಂತ ದುಃಖಿತರಾದರು. "ಅದು ನನ್ನ ಜೀವನದ ಸಂಗಾತಿಯಾಗಿತ್ತು. ಅದನ್ನಿಟ್ಟುಕೊಂಡು ನಾನು ಆತ್ಮಧ್ಯಾನ ಮಾಡುತ್ತಿದ್ದೆ. ಒಡೆದದ್ದು ಇಟ್ಟಿಗೆಯಲ್ಲ. ನನ್ನ ಅದೃಷ್ಟವೇ ಒಡೆಯಿತು. ಅದು ನನ್ನನ್ನು ಇಂದು ಬಿಟ್ಟು ಹೋಯಿತು" ಎಂದು ಕಣ್ಣೀರಿಟ್ಟುಕೊಂಡರು. ಅತಿಸಾಮಾನ್ಯವಾದ ಒಂದು ಇಟ್ಟಿಗೆಗೋಸ್ಕರ, ಬಾಬಾರಂತಹವರು ಇಷ್ಟೊಂದು ದುಃಖಪಡಬೇಕೇಕೆ ಎಂಬ ಸಂಶಯ ಬರಬಹುದು. ಹೇಮಾಡ್ ಪಂತ್ ಹೇಳುತ್ತಾರೆ, "ಬಾಬಾ ದೇವರ ಅವತಾರವೇ ಆದರೂ, ಅವರು ಮನುಷ್ಯ ರೂಪದಲ್ಲಿದ್ದುದರಿಂದ, ಮನುಷ್ಯರಂತೆಯೇ ವರ್ತಿಸಿದರು. ಅವರೇ ಹೇಳುತ್ತಿದ್ದರು, ‘ನಾನು ಎಷ್ಟೇ ಜಾಗರೂಕನಾಗಿದ್ದರೂ ಮಾಯೆ ಕೆಲವುಸಲ ನನ್ನನ್ನೂ ಮೋಹಗೊಳಿಸುತ್ತಾಳೆ. ಬ್ರಹ್ಮನನ್ನೇ ಬಿಡದ ಮಾಯೆ ನನ್ನನ್ನು ಬಿಡುತ್ತಾಳೆಯೇ?’ ಮಾಯಾವೃತನಾದ ದೇವರೂ ಮನುಷ್ಯನಂತೆ ಸುಖದುಃಖಗಳಿಗೆ ಅತೀತನಲ್ಲ.
೩೨ ವರ್ಷಗಳ ಹಿಂದೆ
೩೨ ವರ್ಷಗಳ ಹಿಂದೆ, ಎಂದರೆ ೧೮೯೬ರಲ್ಲಿ, ಬಾಬಾ ಮೊದಲನೆಯ ಸಲ ಮೃತ್ಯುವಶರಾಗಿದ್ದರು. ಮಾರ್ಗಶಿರ ಹುಣ್ಣಿಮೆ, ಬಾಬಾ ಆಸ್ತಮಾದಿಂದ ನರಳುತ್ತಿದ್ದರು. ಆಗ ಅವರು ಸಮಾಧಿ ಸ್ಥಿತಿಗೆ ಹೋಗಬೇಕೆಂದು ನಿಶ್ಚಯಿಸಿ, ತಮ್ಮೊಡನೆ ಇದ್ದ ಮಹಲ್ಸಪತಿಯನ್ನು ಕರೆದು ಹೇಳಿದರು, "ನಾನು ಸಮಾಧಿ ಸ್ಥಿತಿಯಲ್ಲಿರುತ್ತೇನೆ. ಈ ದೇಹವನ್ನು ಮೂರು ದಿನಗಳ ಕಾಲ ಕಾಪಾಡು. ಅಷ್ಟರಲ್ಲಿ ನಾನು ಹಿಂತಿರುಗದಿದ್ದರೆ ನನ್ನ ಈ ಭೌತಿಕ ದೇಹವನ್ನು ಆ ಜಾಗದಲ್ಲಿ ಹೂತು ಅದರ ಮೇಲೆ ಗುರುತಿಗಾಗಿ ಎರಡು ಬಾವುಟಗಳನ್ನು ನೆಡು" ಎಂದು ಹೇಳುತ್ತಾ, ಒಂದು ಜಾಗದಕಡೆ ಕೈ ತೋರಿಸಿದರು. ಅಷ್ಟು ಹೇಳಿ ಸುಮಾರು ಹತ್ತು ಗಂಟೆಯ ವೇಳೆಗೆ ಅವರು ಮಹಲ್ಸಪತಿಯ ತೊಡೆಯ ಮೇಲೆ ತಲೆಯಿಟ್ಟು ಮಲಗಿದರು. ಅವರ ಉಸಿರಾಟ ನಿಂತುಹೋಯಿತು. ನಾಡಿಯೂ ನಿಂತಿತು. ಹೊರಗಿನಿಂದ ನೋಡುವವರಿಗೆ ಅವರು ತಮ್ಮ ಕೊನೆಯುಸಿರೆಳೆದಿದ್ದಾರೆ ಎಂಬಂತೆ ತೋರುತ್ತಿತ್ತು. ಮಾರನೆಯ ದಿನ ಬೆಳಗ್ಗೆ ಬಾಬಾರ ದರ್ಶನಕ್ಕೆ ಬಂದವರಿಗೆ ಮಹಲ್ಸಪತಿಯ ತೊಡೆಯಮೇಲೆ ಪ್ರಾಣವಿಲ್ಲದವರಂತೆ ಮಲಗಿದ್ದ ಬಾಬಾರನ್ನು ನೋಡಿ ಸಿಡಿಲು ಬಡಿದಂತಾಯಿತು. ದುಃಖಿತರಾದ ಶಿರಡಿಯ ಜನರಿಗೆಲ್ಲಾ ಅಂಧಕಾರ ಆವೃತವಾದಂತಾಯಿತು. ಸಾಯಂಕಾಲದ ವೇಳೆಗೆ ಮಹಜರು ಆದಮೇಲೆ ಭೌತಿಕ ದೇಹವನ್ನು ಬಾಬಾ ತೋರಿಸಿದ್ದ ಜಾಗದಲ್ಲಿ ಹೂಳಲು ನಿಶ್ಚಯಿಸಿದರು. ಬಾಬಾ ಹೇಳಿದ್ದನ್ನು ಮಹಲ್ಸಪತಿ ಎಲ್ಲರಿಗೂ ಎಷ್ಟು ಹೇಳಿದರೂ ಯಾರೂ ಅವರ ಮಾತನ್ನು ಗಣನೆಗೆ ತೆಗೆದುಕೊಳ್ಳಲಿಲ್ಲ. ಮೂರು ದಿನಗಳವರೆಗೆ ದೇಹವನ್ನು ಕಾಪಾಡು ಎಂದು ಬಾಬಾ ಹೇಳಿದರು ಎಂಬುವುದನ್ನು ಯಾರೂ ನಂಬಲಿಲ್ಲ. ಮಹಲ್ಸಪತಿ ಮಾತ್ರ ಅವರ ಕಾರ್ಯಗಳಿಗೆ ಅಡ್ಡಗೋಡೆಯಾಗಿ ನಿಂತು, "ಯಾರು ಏನೇ ಹೇಳಿದರೂ ನಾನು ಮಾತ್ರ ಈ ದೇಹವನ್ನು ನಿಮಗೆ ಕೊಡುವುದಿಲ್ಲ. ಬಾಬಾರೇ ಹೇಳಿದ್ದಾರೆ ಮೂರುದಿನಗಳು ಕಾಪಾಡು ಎಂದು. ನಾವು ಅವರ ಮಾತನ್ನು ಪಾಲಿಸಿ, ಮೂರು ದಿನಗಳಾದ ಮೇಲೆಯೇ ಯಾವ ನಿರ್ಧಾರಕ್ಕೂ ಬರಬೇಕು. ಅಲ್ಲಿಯವರೆಗೆ ಏನಾದರಾಗಲಿ ನಾನು ಈ ದೇಹವನ್ನು ನಿಮಗೆ ಕೊಡುವುದಿಲ್ಲ" ಎಂದು ಹಟಮಾಡಿ ದೇಹವನ್ನು ಅಪ್ಪಿ ಕುಳಿತರು. ಮೂರು ದಿನಗಳು ತಾನು ಅಲ್ಲಿಂದ ಅಲುಗಾಡದೆ, ಅನ್ನ ನೀರು ಬಿಟ್ಟು, ಮಹಲ್ಸಪತಿ ಆ ದೇಹವನ್ನು ತನ್ನ ಪ್ರಾಣಕ್ಕಿಂತಲೂ ಮಿಗಿಲಾಗಿ ಕಾಪಾಡಿದರು. ಅನೇಕರು ಅನೇಕ ರೀತಿಯ ಭರ್ತ್ಸನೆಗಳನ್ನು ಮಾಡಿದರೂ, ಎಲ್ಲವನ್ನೂ ಸಹಿಸಿಕೊಂಡು ಮಹಲ್ಸಪತಿ ಆ ದೇಹದೊಡನೆ ಅಲ್ಲೇ ಕುಳಿತಿದ್ದರು. ಯಾರು ಏನೇ ಹೇಳಿದರು ಅವರದು ಒಂದೇ ಉತ್ತರ, "ಮೂರುದಿನಗಳು ಕಾಯಬೇಕು." ಮೂರು ದಿನಗಳಾದವು. ಶಿರಡಿಯ ಜನರೆಲ್ಲಾ ಮಸೀದಿಯಲ್ಲಿ ನಡೆಯುವ ಪವಾಡವನ್ನು ನೋಡಲು ಕಿಕ್ಕಿರಿದಿದ್ದರು. ಬೆಳಗಿನ ಜಾವ ಸುಮಾರು ಮೂರು ಗಂಟೆ. ಆ ಮೃತದೇಹದಲ್ಲಿ ಪ್ರಾಣ ಸಂಚಾರವಾದಂತಾಯಿತು. ಬಾಬಾ ಹೊಟ್ಟೆ ಅಲುಗಿತು. ನಿಧಾನವಾಗಿ ಬಾಬಾ ಕಣ್ಣು ತೆರೆದರು. ಕೈಕಾಲುಗಳನ್ನು ನೀಡುತ್ತಾ, ಸುತ್ತಲೂ ಕಣ್ಣಾಡಿಸಿದರು. ಮಹಲ್ಸಪತಿಯ ಸಹಾಯದಿಂದ ಎದ್ದು ಕುಳಿತರು. ಬಾಬಾ ಮತ್ತೆ ಜೀವಂತರಾದರು! ಪವಾಡ ನಡೆದೇ ನಡೆಯಿತು! ಸೇರಿದ್ದ ಜನರೆಲ್ಲ ನಿಟ್ಟುಸಿರುಬಿಟ್ಟು, ತಮ್ಮ ಆರಾಧ್ಯ ದೈವ ಮತ್ತೆ ತಮ್ಮ ಜೊತೆಯಲ್ಲಿ ಇರಲು ಬಂದಿದ್ದಕ್ಕೆ ಅವರಿಗೆ ಅಪಾರವಾದ ಸಂತೋಷವಾಯಿತು. ಆ ಸಂತೋಷವನ್ನು ಅವರೆಲ್ಲರೂ ಒಂದೇ ಕೊರಳಿನಿಂದ ಶ್ರೀ ಸಾಯಿನಾಥ ಮಹರಾಜಕೀ ಜೈ ಎಂದು ಜೈಕಾರ ಮಾಡುತ್ತಾ, ವ್ಯಕ್ತಪಡಿಸಿದರು.
ಆ ಪವಾಡ ನಡೆದದ್ದು ೧೮೯೬ರಲ್ಲಿ. ಆದರೆ ಈಗ ನಡೆದಿರುವುದು ಇನ್ನೂ ದೊಡ್ಡ ಪವಾಡ. ಮೂರೂವರೆ ಮೊಳದುದ್ದದ ಭೌತಿಕ ದೇಹದಿಂದ ಹೊರ ಬಂದು ಕೋಟ್ಯಂತರ ಇತರ ದೇಹಗಳಲ್ಲಿ ಬಾಬಾ ಸೇರಿಹೋದರು. ಅಣುವಿಗಿಂತಲೂ ಅಣುವಾದ, ಮಹತ್ತಿಗಿಂತಲೂ ಮಹತ್ತಾದ ಎಲ್ಲ ಚೈತನ್ಯಗಳಲ್ಲೂ ಬಾಬಾ ಸೇರಿಹೋದರು. ಪಾಂಚಭೌತಿಕವಾದ ಅವರ ದೇಹ ಎಂಭತ್ತು ವರ್ಷಗಳ ಕಾಲ ಅವರ ಸೇವೆಯನ್ನು ಮಾಡಿ ಸವೆದಿತ್ತು. ಹಳೆಯ ದೇಹವನ್ನು ಬಿಟ್ಟು, ಅದರಲ್ಲಿದ್ದ ದಿವ್ಯಜ್ಯೋತಿ, ಜ್ಞಾನ, ವಿವೇಕ, ದಯೆ, ಕಾರುಣ್ಯ, ಕ್ಷಮೆಗಳು ಅನಂತ ಸಾಗರದಲ್ಲಿ ಸೇರಿ ಅದರಲ್ಲಿ ಲೀನವಾಗಿ ಹೋಯಿತು. ಆ ದಿವ್ಯಜ್ಯೋತಿ ಆರಿ ಹೋಗುವಂತಹುದಲ್ಲ. ಮುಗಿಯದ ತಮ್ಮ ಕಾರ್ಯವನ್ನು ಮುಂದುವರಿಸಲೆಂದೇ, ಅವರು ಲಕ್ಷ ಲಕ್ಷ ಜೀವಿಗಳಲ್ಲಿ ಸೇರಿಹೋಗಿದ್ದಾರೆ. ಅವರು ತ್ಯಜಿಸಿರುವುದು ಭೌತಿಕ ದೇಹ ಮಾತ್ರ. ದತ್ತಾತ್ರೇಯರಂತೆ, ಶ್ರೀಪಾದ ಶ್ರೀವಲ್ಲಭರಂತೆ, ಗುರು ನರಸಿಂಹ ಸರಸ್ವತಿ ಯತಿಗಳಂತೆ, ಅವರು ಎಂದೆಂದಿಗೂ ಜೀವಂತರೇ!
ಅವರನ್ನು ಈಗ ಪ್ರತ್ಯಕ್ಷವಾಗಿ ಕಾಣಲಾಗದಿದ್ದರೂ, ಈಗಲೂ ಅವರ ಇರುವಿಕೆಯನ್ನು ಅನುಭವಿಸುತ್ತಿರುವ ಅನೇಕರು ಇದ್ದಾರೆ. ಆರ್ತರಾಗಿ, ಶ್ರದ್ಧೆಯಿಂದ ಅವರನ್ನು ಕರೆದರೆ, ಅವರು ನಿಜವಾಗಿಯೂ ಓಗೊಡುತ್ತಾರೆ ಎಂಬುದಕ್ಕೆ ಅನೇಕ ದೃಷ್ಟಾಂತಗಳಿವೆ. ಕಣ್ಣು ಮುಚ್ಚಿ ಅವರನ್ನು ತದೇಕಮನಸ್ಸಿನಿಂದ ಧ್ಯಾನಿಸಿದರೆ, ಅವರ ರೂಪ ಕಣ್ಣು ಮುಂದೆ ನಿಲ್ಲುತ್ತದೆ. ಮೂರ್ತಿರೂಪದಲ್ಲೇ ಕಾಣಬೇಕು ಎನ್ನುವವರಿಗೆ ಶಿರಡಿಗೆ ಹೋಗಿ ಮಸೀದಿಯಲ್ಲಿ ಇರುವ ಅಮೃತಶಿಲೆಯ ವಿಗ್ರಹವನ್ನು ನೋಡುವುದೇ ಪರಿಹಾರ. ಸಮಾಧಿಯ ಹಿಂದೆ ಎಲ್ಲರೆಡೆಗೆ ಕೃಪಾದೃಷ್ಟಿಯನ್ನು ಬೀರುತ್ತಾ, ಬಾಬಾ ಗಾಂಭೀರ್ಯದ ಮೂರ್ತಿಯಾಗಿ ಅಲ್ಲಿ ಕೂತಿದ್ದಾರೆ. ಈ ಅದ್ಭುತ ಮೂರ್ತಿಯನ್ನು ಕೆತ್ತಿದ ಶಿಲ್ಪಿ, ಬಾಲಾಜಿ ವಸಂತ ತಾಲೀಮ್ ಕೂಡ ಹೇಮಾದ್ ಪಂತರಂತೆ ಬಾಬಾರ ಒಂದು ಉಪಕರಣವೇ ಆಗಿದ್ದರು. ೧೯೫೪ ಅಕ್ಟೋಬರ್ ೭ರಂದು, ಅಲ್ಲಿ ಸ್ಥಾಪಿತವಾದ ಆ ಅಮೃತಶಿಲೆಯ ಮೂರ್ತಿ, ಬಾಬಾ ತಮ್ಮ ಭೌತಿಕ ದೇಹವನ್ನು ಬಿಟ್ಟು ಅದರಲ್ಲಿ ಶಾಶ್ವತವಾಗಿ ನೆಲೆಗೊಂಡಿದ್ದಾರೇನೋ ಎಂಬಂತೆ ಕಾಣುತ್ತದೆ. ಆ ಮೂರ್ತಿಯನ್ನು ಕಂಡವರಿಗೆಲ್ಲಾ ಅದು ಜೀವಂತವಾಗಿ ತಮ್ಮೆದುರಿಗೆ ಬಾಬಾ ಕುಳಿತಿದ್ದಾರೇನೋ ಎಂಬ ಅನುಭವ ನೀಡುತ್ತದೆ.
ದ್ವಾರಕಾಮಾಯಿಯಲ್ಲಿರುವ ಅವರ ವರ್ಣಚಿತ್ರ, ಚಿತ್ರಕಲಾಕಾರ, ಬಾಬಾರ ಭಕ್ತ, ಶ್ಯಾಮರಾವ್ ಜಯಕರ್ ಚಿತ್ರಿಸಿದ್ದು. ಇದು ಸಮಾಧಿ ಮಂದಿರದಲ್ಲಿ ಅಮೃತಶಿಲೆಯ ಮೂರ್ತಿ ಸ್ಥಾಪನೆ ಯಾಗುವುದಕ್ಕೆ ಮೊದಲು ಅಲ್ಲಿತ್ತು. ಅಂದಿನ ಪುಣ್ಯವಂತ ಶಿರಡಿಯ ಜನರಂತೆ ನಾವು ಈಗ ಬಾಬಾರನ್ನು ಜೀವಂತ ಕಾಣಲಾರೆವು. ದ್ವಾರಕಾಮಾಯಿಯ ವರ್ಣಚಿತ್ರ, ಮಸೀದಿಯ ಅಮೃತಶಿಲೆಯ ಮೂರ್ತಿಗಳನ್ನು ಕಂಡು, ಅಂದಿನ ದಿನಗಳನ್ನು ನೆನಪಿಗೆ ತಂದುಕೊಂಡು ತೃಪ್ತರಾಗಬೇಕು. ನಂಬಿದವರಿಗೆ, ಅವರು ಎಲ್ಲೇ ಇರಲಿ, ಬಾಬಾ ಅವರಿಗೆ ಕಾಣಿಸಿಕೊಳ್ಳುತ್ತಾರೆ. ನಂಬಿಕೆ ಇಲ್ಲದಿದ್ದವರಿಗೆ ಶಿರಡಿಯಲ್ಲೂ ಕಾಣಿಸುವುದಿಲ್ಲ. ಚಾವಡಿಯಲ್ಲಿ ಅವರು ಅವ್ಯಕ್ತವಾಗಿ ಇದ್ದಾರೆ. ದ್ವಾರಕಾಮಾಯಿಯಲ್ಲಿ ಬ್ರಹ್ಮರೂಪದಲ್ಲಿ ಇದ್ದಾರೆ. ಸಮಾಧಿ ಮಂದಿರದಲ್ಲಿ ಸಮಾಧಿ ಸ್ಥಿತಿಯಲ್ಲಿ ಇದ್ದಾರೆ. ಶಿರಡಿಯಲ್ಲಿ ಎಲ್ಲೆಲ್ಲೂ ತಮ್ಮ ಅನುಗ್ರಹವನ್ನು ಬೀರುತ್ತಾ ಓಡಾಡುತ್ತಾ ಇದ್ದಾರೆ.
ಬಾಪೂ ಸಾಹೇಬ ಜೋಗರ ಕಥೆ
ಬಾಪೂ ಸಾಹೇಬ್ ಜೋಗ್ ಎಂದು ಎಲ್ಲರಿಂದಲೂ ಕರೆಯಲ್ಪಡುತ್ತಿದ್ದ, ಸಖಾರಾಮ್ ಹರಿ, ಪೂನಾದ ಪ್ರಸಿದ್ಧ ವಾರ್ಕರಿ, ವಿಷ್ಣುಬುವಾ ಜೋಗ್ ಅವರ ಹತ್ತಿರದ ಸಂಬಂಧಿ. ಅವರಿಗೆ ಮಕ್ಕಳಿರಲಿಲ್ಲ. ಅವರು ಪಿ. ಡಬ್ಳ್ಯು. ಡಿ ಯಲ್ಲಿ ಮೇಲ್ವಿಚಾರಕರಾಗಿ ಕೆಲಸ ಮಾಡುತ್ತಿದ್ದರು. ೧೯೦೯ರಲ್ಲಿ ಸ್ವ ಇಚ್ಛೆಯಿಂದ ನಿವೃತ್ತಿ ಪಡೆದು, ಶಿರಡಿಗೆ ಬಂದು ನೆಲೆಸಿದರು. ಗಂಡ ಹೆಂಡತಿ ಇಬ್ಬರೂ ಬಾಬಾರ ಸೇವೆ ಅರ್ಚನೆಗಳಲ್ಲಿ ತಮ್ಮ ದಿನದ ಹೆಚ್ಚಿನ ಭಾಗವನ್ನೆಲ್ಲಾ ಕಳೆಯುತ್ತಿದ್ದರು. ಮೇಘಾ ನಿಧನರಾದಮೇಲೆ ಬಾಪೂ ಸಾಹೇಬ್ ಜೋಗ್ ಅವರೇ ಬಾಬಾರಿಗೆ ಮಸೀದಿಯಲ್ಲೂ, ಚಾವಡಿಯಲ್ಲೂ ಬಾಬಾರ ಮಹಾಸಮಾಧಿಯಾಗುವವರೆಗೂ ಪೂಜೆ ಆರತಿಗಳನ್ನು ಮಾಡುತ್ತಿದ್ದರು. ಪ್ರತಿದಿನವೂ ಸಾಠೆವಾಡಾದಲ್ಲಿ ಏಕನಾಥ ಭಾಗವತ, ಜ್ಞಾನೇಶ್ವರಿ ಪುಸ್ತಕಗಳನ್ನು ಓದಿ, ಕೇಳುಗರಿಗೆ ಅದರ ವ್ಯಾಖ್ಯಾನವನ್ನು ವಿವರಿಸುವಂತೆ ಬಾಬಾ ಅವರಿಗೆ ಹೇಳಿದ್ದರು. ಒಂದು ದಿನ ಬಾಪೂ ಸಾಹೇಬ್, "ಬಾಬಾ, ಇಷ್ಟು ವರ್ಷಗಳಿಂದ ನಿಮ್ಮ ಸೇವೆ ಮಾಡುತ್ತಿದ್ದೇನೆ. ಆದರೂ ನನ್ನ ಮನಸ್ಸು ಇನ್ನೂ ಶಾಂತಿ ಹೊಂದಿಲ್ಲ. ಸಂತರ ಸಹವಾಸವೂ ಏಕೆ ನನ್ನಲ್ಲಿ ಬದಲಾವಣೆಯನ್ನು ತಂದಿಲ್ಲ? ದಯವಿಟ್ಟು ನನ್ನನ್ನು ಆಶೀರ್ವದಿಸಿ ನನಗೆ ಶಾಂತಿ ನೀಡಿ" ಎಂದು ಬೇಡಿಕೊಂಡರು. ಅದಕ್ಕೆ ಬಾಬಾ, "ಇನ್ನು ಸ್ವಲ್ಪಕಾಲದಲ್ಲೇ ನಿನ್ನ ಕರ್ಮಫಲಗಳೆಲ್ಲವೂ ತೀರಿಹೋಗುತ್ತವೆ. ನಿನ್ನ ಕಾಮ ಕ್ರೋಧಾದಿಗಳು, ರುಚಿಪಕ್ವಗಳು ಎಲ್ಲವನ್ನು ತೊಡೆದುಹಾಕು. ದೇವರನ್ನು ತುಂಬುಹೃದಯದಿಂದ ಸೇವೆ ಮಾಡು. ಸನ್ಯಾಸಿಯಾಗು. ನೀನು ಯಾವಾಗ ಎಲ್ಲರಲ್ಲೂ ಎಲ್ಲದರಲ್ಲೂ ವೈರಾಗ್ಯವನ್ನು ತೋರಿಸುತ್ತೀಯೋ ಆಗ ನೀನು ಅನುಗ್ರಹಿಸಲ್ಪಟ್ಟಿದ್ದೀಯೆ ಎಂದು ನಾನು ಭಾವಿಸುತ್ತೇನೆ" ಎಂದರು. ಬಾಬಾರ ಮಾತುಗಳು ಸ್ವಲ್ಪಕಾಲದಲ್ಲೇ ನಿಜವಾದವು. ಬಾಪೂ ಸಾಹೇಬರ ಪತ್ನಿ ಕಾಲವಾದರು. ಅವರಿಗೆ ಮತ್ತೆ ಇನ್ನಾವ ಬಂಧನಗಳೂ ಇರಲಿಲ್ಲ. ಸನ್ಯಾಸಿಯಾಗಲು ಯಾವ ಅಡೆತಡೆಗಳೂ ಇರಲಿಲ್ಲ. ಸನ್ಯಾಸಿಯಾದ ಅವರು ನಿಧನರಾಗುವುದಕ್ಕೆ ಮುಂಚೆಯೇ ಅವರ ಜೀವಿತೋದ್ದೇಶ ನೆರವೇರಿತು.
ಬಾಬಾರ ಅಮೃತವಾಣಿಗಳು
“ಯಾರು ನನ್ನನ್ನು ಬಹಳವಾಗಿ ಪ್ರೀತಿಸುತ್ತಾ, ಸದಾ ನನ್ನನ್ನೇ ನೆನಸುತ್ತಾ, ಧ್ಯಾನಮಾಡುತ್ತಾ, ನನ್ನನ್ನೇ ಕಾಣುತ್ತಿರುತ್ತಾರೋ, ಯಾರಿಗೆ ನನ್ನ ಕಥೆಗಳು, ನನ್ನ ವಿಷಯಗಳಲ್ಲದೆ ಬೇರೆ ಯಾವುದೂ ರುಚಿಸುವುದಿಲ್ಲವೋ, ಯಾರು ಸದಾ ನನ್ನ ನಾಮೋಚ್ಚರಣೆ ಮಾಡುತ್ತಿರುತ್ತಾರೋ, ಅವರಿಗೆ ನಾನಿಲ್ಲದ ಪ್ರಪಂಚವೇ ಇಲ್ಲ. ನನಗೆ ಸಂಪೂರ್ಣ ಶರಣಾಗತನಾಗಿ ನನ್ನ ಧ್ಯಾನದಲ್ಲಿ ನಿರತನಾದವನಿಗೆ ನಾನು ಸದಾ ಋಣಿ. ಅವನಿಗೆ ಮುಕ್ತಿ ಕೊಟ್ಟು ಆ ಋಣದಿಂದ ನಾನು ಪಾರಾಗುತ್ತೇನೆ. ಯಾರು ನನ್ನ ಚಿಂತನೆಯಲ್ಲೇ ಮುಳುಗಿ, ನನಗೆ ಅರ್ಪಿಸದೆ ಏನನ್ನೂ ತಿನ್ನದೆ-ಕುಡಿಯದೆ ಇರುತ್ತಾರೋ ನಾನು ಅವರ ಆಶ್ರಿತ. ಯಾರು ಇಂತಹ ಭಾವನೆಗಳಲ್ಲಿ ನನ್ನಲ್ಲಿಗೆ ಬರುತ್ತಾರೋ ಅವರು, ನದಿ ಸಾಗರದಲ್ಲಿ ಸೇರಿ ಒಂದಾಗಿ ಹೋದಂತೆ, ನನ್ನಲ್ಲೇ ಸೇರಿ ಒಂದಾಗಿ ಹೋಗುತ್ತಾರೆ. ನಿಮ್ಮ ಅಹಂಕಾರ, ಜಂಭ, ಗರ್ವಗಳನ್ನು ತ್ಯಜಿಸಿ, ನಿಮ್ಮ ಹೃದಯಗಳಲ್ಲಿ ತಟಸ್ಥನಾಗಿರುವ ನನ್ನಲ್ಲಿ ಶರಣಾಗಿ”.
"ನಾನು" ಎಂದು ಅವರು ಆಗಾಗ ಹೇಳುತ್ತಿದ್ದುದನ್ನು ಬಾಬಾ ಹೀಗೆ ವಿವರಿಸಿದರು, "ನೀವು ನನ್ನನ್ನು ಹುಡುಕಿಕೊಂಡು ದೂರಕ್ಕೆಲ್ಲೂ ಹೋಗಬೇಕಾದ ಅವಶ್ಯಕತೆಯಿಲ್ಲ. ನಿಮ್ಮ ನಾಮ ರೂಪಗಳನ್ನು ಬಿಟ್ಟರೆ, ನಿಮ್ಮಲ್ಲಿ ಆತ್ಮಸಾಕ್ಷಿ ಎಂಬುದೊಂದಿದೆ. ಅದೇ ನಾನು. ಇದನ್ನು ಸರಿಯಾಗಿ ತಿಳಿದುಕೊಂಡು, ನಿಮ್ಮೊಳಗೇ ನನ್ನನ್ನು ಕಾಣಿರಿ. ಹಾಗೆಯೆ ಎಲ್ಲದರಲ್ಲೂ, ಎಲ್ಲರಲ್ಲೂ ನನ್ನನ್ನೇ ಕಾಣಿರಿ. ಇದೇ ನಿಮಗೆ ಅಭ್ಯಾಸವಾದರೆ ಎಲ್ಲದರಲ್ಲೂ ನೀವೇ ಎಂಬ ಭಾವನೆ ಬರುವುದು. ಆ ಸ್ಥಿತಿಯಲ್ಲಿ ನೀವು ನನ್ನಲ್ಲಿ ಒಂದಾಗುತ್ತೀರಿ."
ಹೇಮಾಡ್ ಪಂತ್ ವಿನಯದಿಂದ, ಪ್ರೀತಿಯಿಂದ ಎಲ್ಲರಿಗೂ ನಮಸ್ಕರಿಸಿ ಹೀಗೆ ಹೇಳುತ್ತಾರೆ, "ಸಂತರು, ಸಂತರ ಭಕ್ತರು, ದೇವರುಗಳು ಎಲ್ಲರನ್ನೂ ಪ್ರೀತಿ ಗೌರವಗಳಿಂದ ಕಾಣಿರಿ." ಬಾಬಾ ಸದಾ ಹೀಗೆ ಹೇಳುತ್ತಿದ್ದರು, "ಯಾರು ಇನ್ನೊಬ್ಬರೊಡನೆ ಜಗಳವಾಡುತ್ತಾರೋ ಅವರು ನನ್ನನ್ನು ಗಾಯಗೊಳಿಸಿ ನನಗೆ ನೋವು ಕೊಡುತ್ತಾರೆ. ಯಾರು ಇನ್ನೊಬ್ಬರ ಕೆಟ್ಟ ಮಾತುಗಳನ್ನು ಸಹನೆಯಿಂದ ತಡೆದುಕೊಳ್ಳುತ್ತಾರೋ ಅವರು ನನಗೆ ಅತ್ಯಂತ ಪ್ರಿಯರು." ಬಾಬಾ ಎಲ್ಲದರಲ್ಲೂ ಎಲ್ಲರಲ್ಲೂ ಇದ್ದಾರೆ. ಅವರು ಸರ್ವವನ್ನೂ ಆವರಿಸಿ ನಿಂತಿದ್ದಾರೆ. ಎಲ್ಲರಲ್ಲೂ ಪ್ರೀತಿ ವಿಶ್ವಾಸಗಳನ್ನು ತೋರುವುದೇ ಅವರಿಗೆ ಇಷ್ಟವಾದದ್ದು. ಬಾಬಾರು ಹೇಳುತ್ತಿದ್ದ ಮಾತುಗಳನ್ನು ಸರಿಯಾದ ರೀತಿಯಲ್ಲಿ ಅರ್ಥಮಾಡಿಕೊಂಡು, ಯಾರು ಅದನ್ನು ಪಾಲಿಸುತ್ತಾರೋ ಅವರು ಮೃತ್ಯುಮುಖದಿಂದಲೂ ಪಾರಾಗಬಲ್ಲರು. ಅಂತಹ ಪ್ರೇಮ ಮೂರ್ತಿ ಬಾಬಾರಿಗೆ ಮತ್ತೊಮ್ಮೆ ನಮಸ್ಕರಿಸಿ ಭಕ್ತಿಯಿಂದ ಒಮ್ಮೆ ಶ್ರೀಸಚ್ಚಿದಾನಂದ ಸದ್ಗುರು ಸಾಯಿನಾಥ ಮಹರಾಜಕೀ ಜೈ ಎಂದು ಘೋಷಿಸೋಣ.
ಇದರೊಂದಿಗೆ (ಮುಂದುವರೆದ) ಬಾಬಾರ ಮಹಾಸಮಾಧಿ ಮತ್ತು ಇತರ ವಿಷಯಗಳನ್ನು ಕುರಿತು ಹೇಳುವ ನಲವತ್ತಮೂರು ಮತ್ತು ನಲವತ್ತನಾಲ್ಕನೆಯ ಅಧ್ಯಾಯಗಳು ಮುಗಿಯಿತು. ಮುಂದಿನ ಅಧ್ಯಾಯದಲ್ಲಿ ಹೇಮಾಡ್ ಪಂತ್, ಕಾಕಾ ಸಾಹೇಬರ ಸಂದೇಹ, ಆನಂದರಾವ್ ಅವರ ದರ್ಶನ, ಮರದ ಹಲಗೆ, ಬಾಬಾರ ಮಂಚ ಇತ್ಯಾದಿ ವಿಷಯಗಳನ್ನು ಹೇಳುತ್ತಾರೆ.
||ಸದ್ಗುರು ಶ್ರೀ ಸಾಯಿನಾಥಾರ್ಪಣಮಸ್ತು||ಶುಭಂ ಭವತು||
||ಓಂ ಶಾಂತಿಃ ಶಾಂತಿಃ ಶಾಂತಿಃ||
||ಓಂ ಶಾಂತಿಃ ಶಾಂತಿಃ ಶಾಂತಿಃ||
No comments:
Post a Comment