Saturday, February 18, 2012

||ನಲವತ್ತೊಂಭತ್ತನೆಯ ಅಧ್ಯಾಯ||


||ಶ್ರೀ ಸಾಯಿ ಸಚ್ಚರಿತ್ರೆ||
||ನಲವತ್ತೊಂಭತ್ತನೆಯ ಅಧ್ಯಾಯ||
||ಬಾಬಾರನ್ನು ಪರೀಕ್ಷಿಸಿದ ಭಕ್ತರು||
ಶ್ರೀ ಗಣೇಶಾಯ ನಮಃ ಶ್ರೀ ಸರಸ್ವತಯೇ ನಮಃ
ಶ್ರೀ ವೆಂಕಟೇಶಾಯ ನಮಃ ಶ್ರೀ ಸಾಯಿನಾಥಾಯ ನಮಃ
ಶ್ರೀ ಸದ್ಗುರುಭ್ಯೋನ್ನಮಃ

ಅಧ್ಯಾಯದಲ್ಲಿ ಹೇಮಾಡ್ ಪಂತ್, ಹರಿ ಕನೋಬಾ, ಸೋಮದೇವ ಸ್ವಾಮಿ, ನಾನಾಸಾಹೇಬ್ ಚಾಂದೋರ್ಕರರ ಕಥೆಗಳು ಇತ್ಯಾದಿ ವಿಷಯಗಳನ್ನು ಕುರಿತು ಹೇಳುತ್ತಾರೆ.

ಸದ್ಗುರುಸಾಯಿ

ವೇದ ಶಾಸ್ತ್ರಪುರಾಣಗಳೇ ಬ್ರಹ್ಮನನ್ನು ಹೊಗಳಲಾರದೆ ಹೋಗಿರುವಾಗ, ಹುಲು ಮಾನವನಾದ ನಾನು, ಬಹುಮುಖನಾದ ಸದ್ಗುರು ಸಾಯಿನಾಥನನ್ನು ಹೇಗೆ ತಾನೇ ಹೊಗಳಲಿ? ಸದ್ಗುರುವನ್ನು ಸಂಪೂರ್ಣವಾಗಿ ತಿಳಿಯದೆ ಹೊಗಳುವುದಕ್ಕಿಂತ ಸುಮ್ಮನಿರುವುದೇ ಲೇಸು. ನಿಜವೆಂದರೆ, ಮೌನವೇ ಸದ್ಗುರುವನ್ನು ಮನಃ ಪೂರ್ತಿಯಾಗಿ ಹೊಗಳುವ ರೀತಿ. ಆದರೆ, ದೃಷ್ಟಿಗೋಚರವಾಗುವ ಆತನ ಅನೇಕ ಸದ್ಗುಣಗಳು, ನಾವು ಸುಮ್ಮನಿರುವಂತೆ ಬಿಡುವುದಿಲ್ಲ. ಷಡ್ರಸೋಪೇತವಾದ ಅಡಿಗೆಯನ್ನು ಮಾಡಿ ಬಂಧು ಬಾಂಧವರು, ಸ್ನೇಹಿತರು ಜೊತೆಯಲ್ಲಿ ಇಲ್ಲದೆ ಊಟಮಾಡಿದರೆ, ಅದು ರುಚಿಸುವುದಿಲ್ಲ. ಎಲ್ಲರೊಡನೆ ಕೂತು ಊಟಮಾಡಿದಾಗ, ಅದರಲ್ಲಿ ವಿಶೇಷ ರುಚಿ ಕಾಣಿಸಿಕೊಳ್ಳುತ್ತದೆ. ಸಾಯಿ ಲೀಲಾಮೃತವೂ ಅಷ್ಟೆ. ಒಂಟಿಯಾಗಿ ಕೂತು ಅಮೃತವನ್ನು ಪಾನಮಾಡಿದರೆ, ಅದು ಅಷ್ಟು ರುಚಿಯಾಗಿ ಇರುವುದಿಲ್ಲ. ಬಂಧು ಬಾಂಧವ ಸ್ನೇಹಿತರೊಡನೆ ಕೂತು ಪಾನಮಾಡಿದರೆ, ಅದರ ರುಚಿಯೇ ಬೇರೆಯಾಗಿ, ಹೆಚ್ಚಿನ ಆನಂದ ಕೊಡುತ್ತದೆ. ತನ್ನ ಕಥೆಗಳನ್ನು, ತನ್ನದೇ ಆದ ರೀತಿಯಲ್ಲಿ, ನನ್ನ ಮುಖೇನ ಸಾಯಿಯೇ ಹೇಳುತ್ತಿದ್ದಾರೆ. ಆದ್ದರಿಂದ ಸಾಯಿ ಸದ್ಗುರುವಿಗೆ ಶರಣಾಗಿ, ಆತನನ್ನು ಹೃದಯದಲ್ಲಿ ತುಂಬಿಕೊಂಡು, ಆತನ ಧ್ಯಾನದಲ್ಲಿ ನಿರತರಾಗುವುದೊಂದೇ ನಮ್ಮ ಕರ್ತವ್ಯ. ಸಾಧನೆ, ತೀರ್ಥಯಾತ್ರೆ, ವ್ರತ, ತಪಸ್ಸು, ಯಜ್ಞಯಾಗಾದಿಗಳು, ದಾನ ಧರ್ಮಗಳು ಎಲ್ಲಕ್ಕಿಂತ ಹರಿಭಕ್ತಿಯೇ ದೊಡ್ಡದು. ಅದಕ್ಕೆ ಮಿಗಿಲಾದದ್ದು ಸದ್ಗುರುವಿನ ಅಚಂಚಲ ಧ್ಯಾನಎಂದು ಹೇಮಾಡ್ಪಂತರು ಹೇಳುತ್ತಾರೆ.

ಹರಿ ಕನೋಬಾ ಕಥೆ

ಬೊಂಬಾಯಿನ ಹರಿ ಕನೋಬಾ, ತನ್ನ ಬಂಧು ಬಾಂಧವರಿಂದ, ಸ್ನೇಹಿತರಿಂದ ಬಾಬಾರ ಅನೇಕ ಲೀಲೆಗಳನ್ನು ಕೇಳಿದ್ದರು. ಆದರೆ ಅಪನಂಬಿಕೆಯ ಮನುಷ್ಯನಾದ ಆತನಿಗೆ ಲೀಲೆಗಳು ನಿಜವೆನ್ನಿಸಲಿಲ್ಲ. ನಿಜವನ್ನು ಸ್ವತಃ ತಾನೇ ತಿಳಿದುಕೊಳ್ಳಬೇಕೆಂಬ ನಿರ್ಧಾರದಿಂದ, ಕೆಲವು ಸ್ನೇಹಿತರೊಡನೆ ಶಿರಡಿಗೆ ಹೊರಟರು. ಶಿರಡಿ ಸೇರಿ, ಮಸೀದಿಗೆ ಬಾಬಾರನ್ನು ಕಾಣಲು ಹೋಗುವಾಗ, ಆತ ತಲೆಯಮೇಲೆ ಒಂದು ಜರಿ ಪೇಟ, ಕಾಲಿಗೆ ಹೊಸ ಚಪ್ಪಲಿ ಹಾಕಿ ಹೊರಟರು. ಮಸೀದಿಗೆ ಹೋದಾಗ, ಚಪ್ಪಲಿಗಳು, ಅದೂ ಹೊಸದು, ಎಲ್ಲಿ ಬಿಡಬೇಕೆಂಬ ಸಮಸ್ಯೆಯಾಯಿತು. ದೂರದಿಂದಲೇ ಬಾಬಾರನ್ನು ನೋಡಿ, ಬಾಬಾರಿಗೆ ನಮಸ್ಕಾರ ಮಾಡಬೇಕೆಂದು ಆತನಿಗೆ ಮನಸ್ಸಾಯಿತು. ಕೊನೆಗೂ, ಸುರಕ್ಷಿತವೆಂದುಕೊಂಡ ಒಂದು ಜಾಗದಲ್ಲಿ ಚಪ್ಪಲಿಗಳನ್ನು ಬಿಟ್ಟು, ಮಸೀದಿಯೊಳಕ್ಕೆ ಹೋಗಿ, ಬಾಬಾರಿಗೆ ನಮಸ್ಕಾರ ಮಾಡಿದರು. ಆದರೆ ಅವರ ಮನಸ್ಸು ಮಾತ್ರ ಹೊರಗಿದ್ದ ಚಪ್ಪಲಿಗಳ ಮೇಲೇ ನಿಂತಿತ್ತು. ಬಾಬಾರ ದರ್ಶನ ಮಾಡಿ, ಊದಿ ಪ್ರಸಾದ ಪಡೆದು ಮಸೀದಿಯಿಂದ ಹೊರಕ್ಕೆ ಬಂದರು. ಬಂದು ನೋಡಿದಾಗ, ಸುರಕ್ಷಿತ ಜಾಗ ಎಂದು ಎಲ್ಲಿ ಚಪ್ಪಲಿಗಳನ್ನು ಬಿಟ್ಟಿದ್ದರೋ, ಅಲ್ಲಿಂದ ಅವು ಮಾಯವಾಗಿದ್ದವು. ಸುತ್ತಮುತ್ತಲೆಲ್ಲ ಬಹಳವಾಗಿ ಹುಡುಕಾಡಿದರೂ, ಅವು ಎಲ್ಲೂ ಕಾಣಿಸಲಿಲ್ಲ. ಚಿಂತಾಕ್ರಾಂತರಾಗಿ, ವಾಡಾಕ್ಕೆ ಹಿಂತಿರುಗಿದರು. ಸ್ನಾನ ಮಾಡಿ, ದೇವರಿಗೆ ಪೂಜೆ, ನೈವೇದ್ಯಗಳನ್ನು ಮುಗಿಸಿ, ತಾವು ಊಟಮಾಡಲು ಕುಳಿತರು. ಇದೆಲ್ಲಾ ಮಾಡುತ್ತಿರುವಾಗಲೂ, ಚಪ್ಪಲಿಗಳ ಚಿಂತೆ ಅವರನ್ನು ಬಿಟ್ಟಿರಲಿಲ್ಲ. ಊಟಮಾಡಿ, ಕೈ ತೊಳೆಯಲು ಹೊರಗೆ ಬಂದಾಗ, ಹುಡುಗನೊಬ್ಬ ಒಂದು ಕೋಲಿಗೆ ಚಪ್ಪಲಿಗಳ ಜೊತೆಯೊಂದನ್ನು ತಗುಲಿಸಿಕೊಂಡು ತಮ್ಮ ಕಡೆ ಬರುತ್ತಿರುವುದನ್ನು ಕಂಡರು. ಹುಡುಗ, "ಬಾಬಾ ಕೋಲನ್ನು ನನ್ನ ಕೈಲಿಟ್ಟು, ‘ಹರೀ ಕಾ ಬೇಟಾ ಜರೀಕಾ ಪೇಟಾಎಂದು ಕೂಗುತ್ತಾ ಹೋಗು. ಯಾರಾದರೂ ಚಪ್ಪಲಿಗಳು ನನ್ನವು ಎಂದರೆ, ಅವರು ಜರತಾರಿ ಪೇಟ ಹಾಕಿಕೊಂಡಿದ್ದಾರೆಯೇ, ಅವರ ಹೆಸರು ಹರಿ, ಅವರುಎನ್ನುವವರ ಮಗ ಎಂಬುದನ್ನು ಖಚಿತಮಾಡಿಕೊಂಡು, ಅವರಿಗೆ ಚಪ್ಪಲಿಗಳನ್ನು ಕೊಡುಎಂದು ಹೇಳಿದ್ದಾರೆಎಂದು ಹೇಳುತ್ತಿದ್ದ. ಅದನ್ನು ಕೇಳಿದ ಹರಿ ಕನೋಬಾ, ಹುಡುಗನ ಹತ್ತಿರ ಹೋಗಿ, " ಚಪ್ಪಲಿಗಳು ನನ್ನವು. ನನ್ನ ಹೆಸರು ಹರಿ. ನಾನು ಕನೋಬಾರ ಮಗ. ಇಗೋ ಇಲ್ಲಿದೆ ನನ್ನ ಜರತಾರಿ ಪೇಟ." ಎಂದು ತೋರಿಸಿದರು. ಹುಡುಗ ಅವರ ವಿವರಣೆಯಿಂದ ಸಂತುಷ್ಟನಾಗಿ ಚಪ್ಪಲಿಗಳನ್ನು ಅವರಿಗೆ ಕೊಟ್ಟು, ಹೊರಟು ಹೋದ.

ಹರಿ ಕನೋಬಾಗೆ, "ಜರಿ ಪೇಟ ನಾನು ಧರಿಸಿರುವುದರಿಂದ ಅನೇಕರು ನೋಡಿರುತ್ತಾರೆ. ಬಾಬಾರೂ ನೋಡಿರಬಹುದು. ಆದರೆ ಶಿರಡಿಗೆ ಇದೇ ಮೊದಲನೆಯಸಲ ನಾನು ಬರುತ್ತಿರುವುದು. ಬಾಬಾರಿಗೆ ನನ್ನ ಹೆಸರು ಹರಿ ಎಂದೂ, ತುಂಬಾ ಆತ್ಮೀಯರು ಮಾತ್ರ ನನ್ನ ತಂದೆಯನ್ನುಎಂದು ಕರೆಯುತ್ತಿದ್ದ ಹೆಸರು, ಬಾಬಾರಿಗೆ ಹೇಗೆ ತಿಳಿಯಿತು?" ಎಂಬೆಲ್ಲಾ ಯೋಚನೆಗಳಿಂದ ಅವರ ಮನಸ್ಸು ತುಂಬಿ ಹೋಯಿತು. ಬಾಬಾರನ್ನು ಪರೀಕ್ಷೆಮಾಡಲು ಅವರು ಶಿರಡಿಗೆ ಬಂದಿದ್ದರು. ಸಣ್ಣದೊಂದು ಲೀಲೆಯಿಂದ ಬಾಬಾ ಹರಿ ಕನೋಬಾಗೆ ತಮ್ಮ ಸರ್ವಜ್ಞತ್ವವನ್ನು ತೋರಿಸಿದರು. ಅವರ ಆಸೆ ಪೂರಯಿಸಿತು. ತೃಪ್ತರಾದ ಅವರು ಬೊಂಬಾಯಿಗೆ ಹಿಂತಿರುಗಿದರು. ಅಂದಿನಿಂದ ಅವರು ಬಾಬಾರ ಭಕ್ತರಾದರು.

ಸೋಮದೇವಸ್ವಾಮಿಯ ಕಥೆ

ಇದು ಬಾಬಾರನ್ನು ಪರೀಕ್ಷಿಸಲು ಬಂದ ಇನ್ನೊಬ್ಬರ ಕಥೆ.

ಕಾಕಾ ಸಾಹೇಬ್ ದೀಕ್ಷಿತರ ಸಹೋದರ ಭಾಯೀಜಿ ನಾಗಪುರ ನಿವಾಸಿ. ೧೯೦೬ರಲ್ಲಿ ಅವರು ಹಿಮಾಲಯದ ಯಾತ್ರೆಗೆ ಹೋದಾಗ, ಹರಿದ್ವಾರದ ಹತ್ತಿರ ಉತ್ತರ ಕಾಶಿಯಲ್ಲಿ, ಸೋಮದೇವಸ್ವಾಮಿ ಎಂಬುವರೊಬ್ಬರನ್ನು ಭೇಟಿ ಮಾಡಿದರು. ಅವರಿಬ್ಬರೂ ಸ್ನೇಹಿತರಾಗಿ, ಮತ್ತೆ ಭೇಟಿಯಾಗುವ ಇಚ್ಛೆಯಿಂದ ತಮ್ಮ ತಮ್ಮ ವಿಳಾಸಗಳನ್ನು ಬದಲಾಯಿಸಿಕೊಂಡು ಒಬ್ಬರನ್ನೊಬ್ಬರು ಬೀಳ್ಕೊಟ್ಟರು. ಐದು ವರ್ಷಗಳ ನಂತರ, ಸೋಮದೇವಸ್ವಾಮಿ ನಾಗಪುರಕ್ಕೆ ಬಂದು ಭಾಯೀಜಿ ಮನೆಯಲ್ಲಿದ್ದರು. ಬಾಬಾರ ಕೀರ್ತಿ ಕೇಳಿ, ಶಿರಡಿಗೆ ಹೋಗಿ ಬಾಬಾರ ದರ್ಶನ ಮಾಡುವ ಇಚ್ಛೆಯನ್ನು ಅವರು ವ್ಯಕ್ತಪಡಿಸಿದರು. ಭಾಯೀಜಿ ತಮ್ಮ ಸಹೋದರ ದೀಕ್ಷಿತರಿಗೆ ಒಂದು ಪರಿಚಯ ಪತ್ರ ಬರೆದು ಕೊಟ್ಟರು. ಪತ್ರದೊಡನೆ ಸೋಮದೇವಸ್ವಾಮಿ ಕೋಪರಗಾಂವ್ಗೆ ಬಂದು, ಅಲ್ಲಿಂದ ಟಾಂಗಾದಲ್ಲಿ ಶಿರಡಿಗೆ ಹೊರಟರು. ಶಿರಡಿಯನ್ನು ಸಮೀಪಿಸುತ್ತಿದ್ದಾಗ ಸ್ವಲ್ಪ ದೂರದಲ್ಲಿ, ಮಸೀದಿಯ ಮೇಲೆ ಎರಡು ಬಾವುಟಗಳು ಹಾರಾಡುತ್ತಿದ್ದುದನ್ನು ಅವರು ನೋಡಿದರು. ಸಂತರು ಆಂತರ್ಯದಲ್ಲಿ, ಎಲ್ಲರೂ ಒಂದೇ ಆದರೂ, ಬಾಹ್ಯವಾಗಿ ಅವರ ನಡವಳಿಕೆಗಳು, ದಿರಸು ಬೇರೆ ಬೇರೆಯಾಗಿರಬಹುದು. ಅವರು ಹೊರಗೆ ಇರುವ ರೀತಿಯನ್ನು ನೋಡಿ, ಅವರನ್ನು ಅಂದಾಜು ಮಾಡುವುದು ಬಹಳ ದೊಡ್ಡ ತಪ್ಪು. ಸೋಮದೇವಸ್ವಾಮಿಯವರ ಯೋಚನೆಗಳು ತದ್ವಿರುದ್ಧವಾಗಿದ್ದವು. ಗಾಳಿಯಲ್ಲಿ ಎಗರಾಡುತ್ತಿದ್ದ ಬಾವುಟಗಳನ್ನು ನೋಡಿದ ಅವರು, "ಸಂತರಾಗಿಯೂ ಬಾಬಾರಿಗೆ ಬಾವುಟಗಳ ಮೇಲೆ ಏಕೆ ಇಷ್ಟೊಂದು ಮೋಹ? ಅಂದರೆ ಅವರು ಕೀರ್ತಿ, ಪ್ರತಿಷ್ಠೆಗಳಿಗಾಗಿ ಆಸೆ ಪಡುವವರು. ಇಂತಹ ಸಂತರನ್ನು ನೋಡುವುದಾದರೂ ಏಕೆ?" ಎಂಬ ಯೋಚನೆಯಿಂದ, ತನ್ನ ಶಿರಡಿಯ ಪ್ರಯಾಣ ಮುಂದುವರಿಸಲು ಇಚ್ಛಿಸದೆ ಹಿಂತಿರುಗಲು ನಿಶ್ಚಯಿಸಿ, ತಮ್ಮ ನಿಶ್ಚಯವನ್ನು ಸಹಪ್ರಯಾಣಿಕರಿಗೆ ಹೇಳಿದರು. ಸಹಪ್ರಯಾಣಿಕರು ಅವರನ್ನು ತಮಾಷೆಮಾಡಿ, "ನೀವು ಇಷ್ಟು ದೂರ ಬಂದಿದ್ದಾದರೂ ಏಕೆ? ಬರಿಯ ಬಾವುಟಗಳನ್ನು ನೋಡಿಯೇ ನೀವು ಇಷ್ಟು ಉದ್ವಿಗ್ನರಾದರೆ, ಇನ್ನು ಅವರ ಪಲ್ಲಕ್ಕಿ, ರಥ, ಕುದುರೆಗಳನ್ನು ನೋಡಿದರೆ ಏನು ಹೇಳುತ್ತೀರೋ?" ಎಂದರು. ಅದನ್ನು ಕೇಳಿ ಸ್ವಾಮಿ ಇನ್ನೂ ಕ್ಷೋಭೆಗೊಂಡು, "ನಾನು ಅನೇಕ ಸಂತರನ್ನು, ಮಹಾತ್ಮರನ್ನು ನೋಡಿದ್ದೇನೆ. ಸಂತ ಬೇರೆಯಾಗಿ ಕಾಣುತ್ತಾನೆ. ಈತ ಸಂಪತ್ತು ಗಳಿಕೆಯಲ್ಲಿ ಆಸೆಯಿರುವಂತೆ ಕಾಣುತ್ತಾನೆ. ಇಂತಹ ಸಂತರನ್ನು ನೋಡದೇ ಇರುವುದೇ ವಾಸಿ" ಎಂದು ಹಿಂತಿರುಗಲು ಸಿದ್ಧವಾದರು. ಜೊತೆಯವರು ಆತನನ್ನು ನಿಲ್ಲಿಸಿ, "ನಿನ್ನ ಸಣ್ಣತನವನ್ನು ಬಿಡು. ಮಸೀದಿಯಲ್ಲಿನ ಸಂತ, ಅವುಗಳ ಬಗ್ಗೆ ಯೋಚನೆಯನ್ನೂ ಮಾಡುವುದಿಲ್ಲ. ಅವೆಲ್ಲ ಆತನ ಭಕ್ತರು ಆತನಮೇಲಿನ ಭಕ್ತಿವಿಶ್ವಾಸಗಳಿಂದ ಕೊಟ್ಟ ಕಾಣಿಕೆಗಳು" ಎಂದು ಹೇಳಿ, ಬಹಳ ಒತ್ತಾಯಮಾಡಿದ ಮೇಲೆ ಸ್ವಾಮಿ ನಿಜವೇನು ಎಂದು ತಾನೇ ಸ್ವತಃ ನೋಡಲು ನಿರ್ಧರಿಸಿ, ಶಿರಡಿ ಪ್ರಯಾಣ ಮುಂದುವರೆಸಿದರು.

ಶಿರಡಿ ಸೇರಿ ಮಸೀದಿಗೆ ಹೋಗಿ ಬಾಬಾರನ್ನು ನೋಡಿದಾಗ ಆತನ ಮನಸ್ಸು ಕರಗಿಹೋಯಿತು. ಆತನಿಗೆ ಅಪಾರವಾದ ಆನಂದವಾಗಿ ಅಶ್ರುಧಾರೆಗಳು ಸುರಿದವು. ಗಂಟಲು ಗದ್ಗದವಾಯಿತು. ಆತನ ಮನಸ್ಸಿನಲ್ಲಿ ಬಾಬಾರ ಬಗ್ಗೆ ಇದ್ದ ಭಾವನೆಗಳೆಲ್ಲವೂ ಕಾಣದಾದವು. ಮನಸ್ಸು ಸಮಾಧಾನವಾಗಿತ್ತು. ಆಗ ಆತನಿಗೆ ತನ್ನ ಗುರು ಹೇಳಿದ್ದ, "ಎಲ್ಲಿ ನಿನ್ನ ಮನಸ್ಸು ಪ್ರಶಾಂತವಾಗಿರುತ್ತದೋ ಅದೇ ನಿನ್ನ ವಿಶ್ರಾಮ ಧಾಮವೆಂದು ತಿಳಿ" ಎಂಬ ಮಾತುಗಳು ನೆನಪಿಗೆ ಬಂದವು. ಮುಂದೆ ಹೋಗಿ ಬಾಬಾರಿಗೆ ನಮಸ್ಕಾರಮಾಡಬೇಕೆನ್ನಿಸಿತು. ಆತ ಒಳಕ್ಕೆ ಹೋಗಿ ಬಗ್ಗಿ ಬಾಬಾರ ಪಾದಗಳನ್ನು ಮುಟ್ಟಬೇಕೆಂದು ಕೊಳ್ಳುವಷ್ಟರಲ್ಲಿ, ಬಾಬಾ ಗಟ್ಟಿಯಾಗಿ, "ನಮ್ಮ ವಸ್ತುಗಳು ನಮ್ಮಲ್ಲಿಯೇ ಇರಲಿ. ಹುಷಾರು. ಮಸೀದಿಯ ಮೇಲೆ ಬಾವುಟ ಹಾರಾಡಿಸುವ ಸಂತನನ್ನು ನೀನೇಕೆ ನೋಡಲು ಬರಬೇಕು? ಅದೇನು ಸಂತನ ಸದ್ಗುಣವೇ? ಹೊರಟು ಹೋಗು. ಇಲ್ಲಿ ಇನ್ನು ಒಂದು ಕ್ಷಣವೂ ನಿಲ್ಲಬೇಡ" ಎಂದೆಲ್ಲಾ ಕೂಗಾಡಿದರು. ದಿಗ್ಭ್ರಮೆಗೊಂಡ ಸೋಮದೇವಸ್ವಾಮಿ, ಬಾಬಾ ತನ್ನ ಮನಸ್ಸಿನಲ್ಲಿ ನಡೆದದ್ದನ್ನೆಲ್ಲ, ಅದೂ ತಾನು ಇನ್ನು ಶಿರಡಿಯಿಂದ ದೂರದಲ್ಲಿದ್ದಾಗ, ತಿಳಿದಿದ್ದರು ಎಂಬುದನ್ನು ಅರಿತರು. ಅವರಿಗೆ ಬಾಬಾರ ಸರ್ವಜ್ಞತ್ವದ ಅರಿವಾಯಿತು. ತನ್ನ ಸಣ್ಣತನವನ್ನು ತಿಳಿದುಕೊಂಡ ಆತನಿಗೆ, ಬಾಬಾರ ದೊಡ್ಡಸ್ತಿಕೆ ಏನೆಂದು ಅರ್ಥವಾಯಿತು. ಬಾಬಾರು ಕೆಲವರನ್ನು ಆಲಂಗಿಸುತ್ತಾ, ಕೆಲವರ ತಲೆ ನೇವರಿಸುತ್ತಾ, ಕೆಲವರನ್ನು ಸಂತೈಸುತ್ತಾ, ಕೆಲವರ ಮೇಲೆ ತಮ್ಮ ಕೃಪಾದೃಷ್ಟಿಯನ್ನು ಹರಿಸುತ್ತಾ ಇದ್ದುದನ್ನು ಕಂಡರು. ಇನ್ನೂ ಕೆಲವರಿಗೆ ಊದಿಪ್ರಸಾದವನ್ನು ಕೊಟ್ಟು, ಅವರ ದುಃಖ ದುರಿತಗಳನ್ನು ನೀಗಿಸುತ್ತಿದ್ದುದನ್ನೂ ಕಂಡರು. ಇಂತಹ ಪ್ರೇಮಸ್ವರೂಪಿ ತನ್ನ ಮೇಲೆ ಕೋಪಗೊಂಡದ್ದು ಏಕೆ ಎಂಬ ಯೋಚನೆ ಅವರಿಗೆ ಬಂತು. ತನ್ನ ತಪ್ಪು ನಡವಳಿಕೆಗೆ ಅವರು ಕೊಟ್ಟ ಶಿಕ್ಷೆ ಅದು ಎಂದು ಆತನಿಗೆ ಅರ್ಥವಾಯಿತು. ಅದು ಶಿಕ್ಷೆಯಲ್ಲ, ತನಗೆ ಅವರು ಕೊಟ್ಟ ಆಶೀರ್ವಾದ ಎಂದು ತಿಳಿದು, ಬಾಬಾರಲ್ಲಿ ಸಂಪೂರ್ಣ ಶರಣಾದರು.

ನಾನಾ ಸಾಹೇಬರ ಕಥೆ

ಒಂದು ಸಲ, ನಾನಾ ಸಾಹೇಬ್ ಚಾಂದೋರ್ಕರರು, ಮಸೀದಿಯಲ್ಲಿ, ಮಹಲ್ಸಪತಿ ಮತ್ತಿತರ ಜೊತೆ ಬಾಬಾರ ಬಳಿ ಕುಳಿತಿದ್ದರು. ಆಗ ವೈಜಾಪುರದಿಂದ ಶ್ರೀಮಂತರೊಬ್ಬರು, ತಮ್ಮ ಸಂಸಾರದೊಡನೆ ಬಾಬಾರ ದರ್ಶನಕ್ಕೆ ಬಂದರು. ಗುಂಪಿನ ಹೆಂಗಸರೆಲ್ಲ ಬುರ್ಖಾ ಹಾಕಿಕೊಂಡಿದ್ದರು. ಅದನ್ನು ಕಂಡ ನಾನಾ ಸಾಹೇಬರು, ಅಲ್ಲಿಂದ ಎದ್ದು ಹೋಗಲು ಅಣಿಯಾದರು. ಆದರೆ, ಬಾಬಾ ಅವರನ್ನು ತಡೆದು ನಿಲ್ಲಿಸಿದರು. ಹೆಂಗಸರು ಮುಂದೆ ಬಂದು, ಬಾಬಾರ ಪಾದಗಳಿಗೆ ನಮಸ್ಕರಿಸಿ ಹೋದರು. ಅದರಲ್ಲಿ ಒಬ್ಬಾಕೆ, ನಮಸ್ಕಾರ ಮಾಡುವಾಗ ತನ್ನ ಬುರ್ಖಾ ಪಕ್ಕಕ್ಕೆ ಸರಿಸಿ, ನಮಸ್ಕಾರಮಾಡಿಕೊಂಡು, ಮತ್ತೆ ಬುರ್ಖಾ ಸರಿಪಡಿಸಿಕೊಂಡು ಹೊರಟು ಹೋದಳು. ಆಕೆಯ ಮುಖ ಸೌಂದರ್ಯದಿಂದ ಆಕರ್ಷಿತರಾದ ನಾನಾ ಸಾಹೇಬರು, ಅವಳ ಮುಖವನ್ನು ಮತ್ತೊಂದುಸಲ ನೋಡಬೇಕೆಂದು ಕಾತರರಾದರು. ಅಲ್ಲೋಲಕಲ್ಲೋಲವಾದ ಆತನ ಮನಸ್ಸು, ಬಾಬಾರ ಸನ್ನಿಧಿಯಲ್ಲಿ ಅವರು ನಾಚಿಕೆಯಿಂದ ತಲೆತಗ್ಗಿಸುವಂತೆ ಮಾಡಿದರೂ, ಅವರ ಕಣ್ಣುಗಳು ಮಾತ್ರ ಆಕೆಯನ್ನು ಹಿಂಬಾಲಿಸಿ ಹೋದವು. ನಾನಾರ ಮನಃಸ್ಥಿತಿಯನ್ನು ಅರಿತ ಬಾಬಾ, ಅವರನ್ನು ಸಮಾಧಾನಪಡಿಸಲು, "ನಾನಾ, ಕಾರಣವಿಲ್ಲದೆ ಏಕೆ ಉದ್ವಿಗ್ನನಾಗುತ್ತಿದ್ದೀಯೆ? ಇಂದ್ರಿಯಗಳು ತಮ್ಮ ಕೆಲಸ ಮಾಡಲು ಬಿಡು. ಅದನ್ನು ನಾವು ತಡೆಯಬಾರದು. ಪರಮಾತ್ಮ ಸುಂದರವಾದ ಪ್ರಪಂಚವನ್ನು ಸೃಷ್ಟಿಸಿದ್ದಾನೆ. ಸೌಂದರ್ಯವನ್ನು ಸರಿಯಾದ ರೀತಿಯಲ್ಲಿ ಆಸ್ವಾದಿಸುವುದು ನಮ್ಮ ಕರ್ತವ್ಯ. ಹೆಬ್ಬಾಗಿಲು ತೆರೆದಿರುವಾಗ ಹಿಂಬಾಗಿಲಿನಿಂದ ಬರುವ ಅವಶ್ಯಕತೆ ಏನಿದೆ? ಮನಸ್ಸು ಪರಿಶುದ್ಧವಾಗಿರುವವರೆಗೂ ಯಾವ ಕಷ್ಟವೂ ಇಲ್ಲ. ನಮ್ಮ ಮನಸ್ಸಿನಲ್ಲಿ ಅಶುದ್ಧಭಾವನೆಗಳು ಇಲ್ಲದಿದ್ದಾಗ ನಾವು ಯಾರಿಗೂ ಹೆದರಬೇಕಾಗಿಲ್ಲ. ಕಣ್ಣುಗಳು ತಮ್ಮ ಕೆಲಸ ಮಾಡಿಕೊಂಡು ಹೋಗಲಿ. ಅದಕ್ಕಾಗಿ ನಾಚಿಕೆಪಟ್ಟು, ನೀನು ನಿನ್ನ ಮನಸ್ಸಮಾಧಾನವನ್ನು ಕಳೆದುಕೊಳ್ಳಬೇಕಾಗಿಲ್ಲ" ಎಂದರು. ಅಲ್ಲಿದ್ದ ಶ್ಯಾಮಾಗೆ ಬಾಬಾ ರೀತಿ ಏಕೆ ಹೇಳುತ್ತಿದ್ದಾರೆ ಎಂಬುದು ಅರ್ಥವಾಗಲಿಲ್ಲ. ಅವರಿಬ್ಬರು ವಾಡಾಕ್ಕೆ ಹಿಂತಿರುಗುತ್ತಿದಾಗ, ಶ್ಯಾಮಾ ಬಾಬಾ ಏನು ಹೇಳುತ್ತಿದ್ದರು ಎಂದು ನಾನಾ ಸಾಹೇಬರನ್ನು ಕೇಳಿದರು.

ನಾನಾ ಸಾಹೇಬರು ಮೊದಮೊದಲು ಹೇಳಲು ನಾಚಿಕೆಪಟ್ಟರೂ, ಆಮೇಲೆ ತಾವು ಹೆಂಗಸಿನಿಂದ ಆಕರ್ಷಿತರಾಗಿದ್ದು, ಆಕೆಯನ್ನು ಮತ್ತೊಮ್ಮೆ ಕಾಣಬೇಕೆಂದು ಬಯಸಿದ್ದು, ಆದರೆ ಎಲ್ಲರೆದುರಿಗೆ ಹಾಗೆ ಮಾಡಲು ಸಾಧ್ಯವಿಲ್ಲದೆ ತಮ್ಮ ಮನಸ್ಸು ಆಂದೋಳನಗೊಂಡದ್ದು, ಎಲ್ಲವನ್ನೂ ತಿಳಿಸಿ, ಬಾಬಾ ಅದು ಸರಿಯಲ್ಲ ಎಂದು ತಮಗೆ ಬುದ್ಧಿವಾದ ಹೇಳಿದರು ಎಂದು ವಿವರಿಸಿದರು.

ನಾನಾ ಮುಂದುವರೆದು, "ನಮ್ಮ ಮನಸ್ಸು ಸದಾ ಚಂಚಲವಾಗಿಯೇ ಇರುತ್ತದೆ. ಆದರೆ ಅದು ಕೆಳಮಟ್ಟಕ್ಕೆ ಹೋಗದಂತೆ ನಾವು ನೋಡಿಕೊಳ್ಳಬೇಕು. ಇಂದ್ರಿಯಗಳು ಅತ್ತಿತ್ತ ಹೋದರೂ, ಮನಸ್ಸನ್ನು ಹತೋಟಿಯಲ್ಲಿಟ್ಟುಕೊಂಡು, ಅದು ಇಂದ್ರಿಯಗಳ ಹಿಂದೆ ಹೋಗದಂತೆ ನೋಡಿಕೊಳ್ಳಬೇಕು. ಇಂದ್ರಿಯಗಳು ಸದಾ ವಿಷಯವಸ್ತುಗಳ ಕಡೆಗೇ ಹೋಗುತ್ತಿರುತ್ತವೆ. ಮೆಲ್ಲ ಮೆಲ್ಲಗೆ, ಅಭ್ಯಾಸಬಲದಿಂದ ಅವುಗಳನ್ನು ವಿಷಯವಸ್ತುಗಳ ಕಡೆಗೆ ಹೋಗದಂತೆ ತಡೆದು, ನಮ್ಮ ಅಧೀನಕ್ಕೆ ತರಬೇಕು. ನಾವು ಇಂದ್ರಿಯಗಳ ದಾಸರಾಗಬಾರದು. ಸಂಪೂರ್ಣವಾಗಿ ಅವುಗಳನ್ನು ಹತೋಟಿಗೆ ತರಲು ಸಾಧ್ಯವಾಗದಿದ್ದರೂ, ಸಂದರ್ಭಕ್ಕೆ ತಕ್ಕಂತೆ ಅವುಗಳನ್ನು ನಿಯಂತ್ರಿಸಿಟ್ಟುಕೊಳ್ಳಲು ಅಭ್ಯಾಸ ಮಾಡಬೇಕು. ಕಣ್ಣುಗಳು ಇರುವುದು ಸೌಂದರ್ಯವನ್ನು ನೋಡುವುದಕ್ಕೆ. ಯಾವ ಭಯವೂ ಇಲ್ಲದೆ ಸೌಂದರ್ಯವನ್ನು ನೋಡೋಣ. ಆದರೆ ನೋಡುವಿಕೆಯಲ್ಲಿ, ಯಾವ ಅಶುದ್ಧ ಭಾವನೆಗಳೂ ಇಲ್ಲದಂತೆ ನೋಡಬೇಕು. ಆಗ ನಾವು ಯಾರಿಗೂ, ಯಾವುದಕ್ಕೂ ಹೆದರಬೇಕಾಗಿಲ್ಲ. ಮನಸ್ಸು ಅಶಾ ರಹಿತವಾಗಿ, ಪರಮಾತ್ಮನ ಸೃಷ್ಟಿ ಸೌಂದರ್ಯವನ್ನು ನೋಡಿದಾಗ, ಇಂದ್ರಿಯಗಳು ನಮ್ಮ ಹತೋಟಿಯಲ್ಲಿದ್ದು, ಹಾಗೆ ನೋಡಿದ ಸೌಂದರ್ಯ, ಪರಮಾತ್ಮನನ್ನು ನೆನಪಿಗೆ ತರುತ್ತದೆ. ಹಾಗಲ್ಲದೆ, ಇಂದ್ರಿಯಗಳ ಹತೋಟಿಯಿಲ್ಲದೆ, ಮನಸ್ಸು ಅದು ಹೋದ ದಾರಿಯಲ್ಲಿ ಬಿಟ್ಟಾಗ, ಅದು ತಾನು ಪತನವಾಗುವುದರ ಜೊತೆಗೆ ನಮ್ಮನ್ನೂ ಪತನದ ಹಾದಿಯಲ್ಲಿ ಕರೆದುಕೊಂಡು ಹೋಗಿ, ನಮ್ಮನ್ನು ಶಾಶ್ವತವಾಗಿ ಜನನ ಮರಣ ಚಕ್ರದಲ್ಲಿ ಸಿಕ್ಕಿಹಾಕಿಸುತ್ತದೆ. ವಿಷಯ ವಸ್ತುಗಳು ಸದಾ ಇಂದ್ರಿಯಗಳನ್ನು ಋಜು ಮಾರ್ಗದಿಂದ ದುರ್ಮಾರ್ಗಕ್ಕೆ ಎಳೆದುಕೊಂಡು ಹೋಗಬೇಕೆಂದು ನೋಡುತ್ತಿರುತ್ತವೆ. ಅದರಿಂದಲೇ, ನಾವು ವಿವೇಕವನ್ನು ಸಾರಥಿಯನ್ನಾಗಿ ಮಾಡಿ, ಮನಸ್ಸೆಂಬ ಲಗಾಮನ್ನು ಹಿಡಿದು, ಇಂದ್ರಿಯಗಳೆಂಬ ಕುದುರೆಗಳನ್ನು, ವಿಷಯ ವಸ್ತುಗಳೆಂಬ ತಪ್ಪುದಾರಿ ಹಿಡಿಯದಂತೆ ನಿಯಂತ್ರಿಸಬೇಕು. ಆಗ ವಿವೇಕವೆಂಬ ಸಾರಥಿ, ನಮ್ಮನ್ನು ಋಜುಮಾರ್ಗದಲ್ಲಿ ನಡೆಸಿ, ನಮ್ಮ ಗಮ್ಯವಾದ ದಿವ್ಯವಾದ ವಿಷ್ಣುಪಾದಕ್ಕೆ ಸೇರಿಸುತ್ತಾನೆ. ಅದೇ ನಮ್ಮ ಅಂತಿಮ ತಾಣ. ಅಲ್ಲಿಂದ ಹಿಂತಿರುಗುವುದೆಂಬುದು ಇಲ್ಲ."

ಹೇಮಾಡ್ ಪಂತ್ ನಿರೂಪಣೆಯೊಡನೆ ಅಧ್ಯಾಯವನ್ನು ಮುಗಿಸಿದ್ದಾರೆ.

ನಮಗೂ ಅಂತಹ ವಿವೇಕವನ್ನು ದಯಪಾಲಿಸು ಎಂದು ಪ್ರೇಮಸಾಗರ, ದಯಾಪೂರ್ಣ ಸಾಯಿಬಾಬಾರನ್ನು ಬೇಡಿಕೊಳ್ಳುತ್ತಾ ಆತನ ದಿವ್ಯ ಪಾದಗಳಲ್ಲಿ ನಮಸ್ಕರಿಸೋಣ. ಶ್ರೀ ಸದ್ಗುರು ಸಾಯಿನಾಥ ಮಹರಾಜಕೀ ಜೈ!

ಇದರೊಂದಿಗೆ ಹರಿ ಕನೋಬಾ, ಸೋಮದೇವ ಸ್ವಾಮಿ, ನಾನಾಸಾಹೇಬ್ ಚಾಂದೋರ್ಕರರ ಕಥೆಗಳು ಮತ್ತು ಇತರ ವಿಷಯಗಳನ್ನು ಕುರಿತು ಹೇಳುವ ನಲವತ್ತೊಂಭತ್ತನೆಯ ಅಧ್ಯಾಯ ಮುಗಿಯಿತು. ಮುಂದಿನ ಅಧ್ಯಾಯದಲ್ಲಿ ಹೇಮಾಡ್ ಪಂತ್, ಕಾಕಾ ಸಾಹೇಬ್ ದೀಕ್ಷಿತ್, ಟೇಂಬೆ ಸ್ವಾಮಿ, ಬಲರಾಮ ಧುರಂದರರ ಕಥೆಗಳು ಇತ್ಯಾದಿ ವಿಷಯಗಳನ್ನು ಹೇಳುತ್ತಾರೆ.

||ಸದ್ಗುರು ಶ್ರೀ ಸಾಯಿನಾಥಾರ್ಪಣಮಸ್ತು||ಶುಭಂ ಭವತು||
||ಓಂ ಶಾಂತಿಃ ಶಾಂತಿಃ ಶಾಂತಿಃ||


No comments:

Post a Comment