Wednesday, February 8, 2012

||ನಲವತ್ತೈದನೆಯ ಅಧ್ಯಾಯ||


||ಶ್ರೀ ಸಾಯಿ ಸಚ್ಚರಿತ್ರೆ||
||ನಲವತ್ತೈದನೆಯ ಅಧ್ಯಾಯ||
||ಆನಂದರಾವ್ ಪಾಖಾಡೆಯವರ ಅನುಭವ||
ಶ್ರೀ ಗಣೇಶಾಯ ನಮಃ ಶ್ರೀ ಸರಸ್ವತಯೇ ನಮಃ
ಶ್ರೀ ವೆಂಕಟೇಶಾಯ ನಮಃ ಶ್ರೀ ಸಾಯಿನಾಥಾಯ ನಮಃ
ಶ್ರೀ ಸದ್ಗುರುಭ್ಯೋನ್ನಮಃ

ಅಧ್ಯಾಯದಲ್ಲಿ ಹೇಮಾಡ್ ಪಂತ್, ಕಾಕಾ ಸಾಹೇಬರ ಸಂದೇಹ, ಆನಂದರಾವ್ ದರ್ಶನ, ಮರದ ಹಲಗೆ, ಬಾಬಾರ ಮಂಚ ಇತ್ಯಾದಿ ವಿಷಯಗಳನ್ನು ಕುರಿತು ಹೇಳುತ್ತಾರೆ.

ಸದ್ಗುರು ಸಾಯಿ

ತಮ್ಮ ಭೌತಿಕ ದೇಹವನ್ನು ಬಿಟ್ಟು, ಬಾಬಾ, ಕಾಲಾತೀತವಾದ ರೂಪದಲ್ಲಿ ಸೇರಿಹೋದರು ಎಂಬುದನ್ನು ನೋಡಿದೆವು. ಅವರು ಮಾನುಷ ರೂಪದಲ್ಲಿದ್ದಾಗ ನಡೆಯುತ್ತಿದ್ದ ಲೀಲೆಗಳು, ಭಕ್ತರು ಹೆಚ್ಚು ಹೆಚ್ಚಾದಂತೆಲ್ಲಾ, ಈಗಲೂ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿವೆ. ಬಾಬಾರು ಆಗಲೂ ಈಗಲೂ, ತಮ್ಮ ಭಕ್ತರಮೇಲೆ ಗಮನವಿಟ್ಟು ಅವರ ರಕ್ಷಣೆಯನ್ನು ನೋಡಿಕೊಳ್ಳುತ್ತಿದ್ದಾರೆ. ಅವರನ್ನು ನೂರು ವರ್ಷಗಳ ಹಿಂದೆ ಕಣ್ಣಾರ ನೋಡಿದವರು ಪುಣ್ಯವಂತರು. ಆಗ ಹಾಗೆ ಅವರನ್ನು ಕಣ್ಣಾರ ಕಂಡೂ ವಿಷಯ ವೈರಾಗ್ಯ ಪಡೆಯದಿದ್ದವರು, ನಿಜವಾಗಿಯೂ ಅತ್ಯಂತ ನತದೃಷ್ಟರೇ! ಬಾಬಾರನ್ನು ಹೃದಯಪೂರ್ವಕವಾಗಿ ಶ್ರದ್ಧಾ ಭಕ್ತಿಗಳಿಂದ ಸೇವಿಸುವುದೊಂದೇ ಬೇಕಾದದ್ದು. ಅವರ ಪಾದಗಳಲ್ಲಿ ದೃಷ್ಟಿಯನ್ನಿಟ್ಟು, ಕಾಯಾ ವಾಚಾ ಮನಸಾ ನಾವು ಅವರ ಧ್ಯಾನದಲ್ಲಿ ನಿರತರಾಗಬೇಕು. ನಮ್ಮ ದೇಹದ ಕಣಕಣವೂ ಧ್ಯಾನದಲ್ಲಿ ಲೀನವಾಗಿಹೋಗಬೇಕು.

ಗುರು-ಶಿಷ್ಯರ ಸಂಬಂಧವನ್ನು ಪತಿವ್ರತೆ ಗಂಡನಲ್ಲಿಟ್ಟಿರುವ ಪ್ರೀತಿಗೆ ಹೋಲಿಸುತ್ತಾರೆ. ಆದರೆ ನಿಜವಾಗಿಯೂ ಗುರು-ಶಿಷ್ಯರ ಸಂಬಂಧ ಅದಕ್ಕಿಂತಲೂ ಬಹಳ ಗಹನವಾದುದು. ಏಕೆಂದರೆ, ತಂದೆ, ತಾಯಿ, ಅಣ್ಣತಮ್ಮಂದಿರು, ಬಂಧು ಬಾಂದವರು, ಯಾರೂ ಕೊಡಲಾರದಂತಹ ಮುಕ್ತಿಯನ್ನು ಗುರುವೊಬ್ಬನೇ ಕೊಡಬಲ್ಲವನು. ಗುರುವು ನಮಗೆ ನಿತ್ಯಾನಿತ್ಯಗಳ ಬೇಧವನ್ನು ತೋರಿಸಿಕೊಟ್ಟು, ಅನಿತ್ಯವನ್ನು ತ್ಯಜಿಸುವ ದಾರಿಯನ್ನು ಹೇಳಿಕೊಡುತ್ತಾನೆ. ನಮಗೆ ವಿಷಯವಾಸನೆಗಳ ವಿರಕ್ತಿ, ವೈರಾಗ್ಯ ಬೋಧಿಸಬಲ್ಲವನು ಗುರುವೊಬ್ಬನೇ!

ಗುರುವೇ ಬ್ರಹ್ಮನೆಂದು ನಮಗೆ ಅರಿವುಂಟಾದಾಗ ಎಲ್ಲರಲ್ಲೂ, ಎಲ್ಲೆಲ್ಲೂ ಯಾವುದೇ ಬೇಧ ಭಾವಗಳಿಲ್ಲದೆ ಬ್ರಹ್ಮನೇ ಕಾಣಿಸುತ್ತಾನೆ. ಏಕತ್ವ ಪೂಜೆಯನ್ನು ನಾವು ಶ್ರದ್ಧಾ ಭಕ್ತಿ ಪೂರ್ವಕವಾಗಿ ಗುರುವಿನಲ್ಲಿ ಮಾಡಿದಾಗ, ಅವನಲ್ಲೇ ಲೀನರಾಗಿ ಆತ್ಮ ಸಾಕ್ಷಾತ್ಕಾರವನ್ನು ಪಡೆಯುತ್ತೇವೆ. ಸದಾ ಗುರುನಾಮ ಧ್ಯಾನ, ಸ್ಮರಣೆಗಳು ನಾವು ಎಲ್ಲರಲ್ಲೂ ಅವನನ್ನೇ ಕಾಣುವಂತೆ ಮಾಡಿ, ನಮಗೆ ಪರಮಾನಂದ ಸ್ಥಿತಿಯನ್ನು ತಂದುಕೊಡುತ್ತವೆ.

ಕಾಕಾ ಸಾಹೇಬರ ಸಂದೇಹ

ಕಾಕಾ ಸಾಹೇಬ ದೀಕ್ಷಿತರನ್ನು ಪ್ರತಿದಿನವೂ ಏಕನಾಥ ಭಾಗವತ, ಭಾವಾರ್ಥ ರಾಮಾಯಣಗಳನ್ನು ಓದುವಂತೆ ಬಾಬಾ ಹೇಳಿದ್ದರು. ಅವರು ಆಣತಿಯನ್ನು ಬಾಬಾರ ಮಹಾಸಮಾಧಿಯಾದಮೇಲೂ ತಪ್ಪದೇ ಪಾಲಿಸುತ್ತಿದ್ದರು. ಒಂದು ದಿನ, ಚೌಪಾತಿಯ ಕಾಕಾ ಮಹಾಜನಿಯವರ ಮನೆಯಲ್ಲಿ ಅವರು ಭಾಗವತವನ್ನು ಓದುತ್ತಿದ್ದಾಗ, ಶ್ಯಾಮಾರೂ ಅವರ ಜೊತೆಯಲ್ಲಿದ್ದರು. ಶ್ಯಾಮಾ, ಕಾಕಾ ಮಹಾಜನಿ, ಇನ್ನು ಕೆಲವರು, ಏಕಾಗ್ರಚಿತ್ತರಾಗಿ, ದೀಕ್ಷಿತರು ಓದುತ್ತಿದ್ದ ಭಾಗವತದ ಹನ್ನೊಂದನೆಯ ಸ್ಕಂದ, ಎರಡನೆಯ ಅಧ್ಯಾಯವನ್ನು ಕೇಳುತ್ತಿದ್ದರು. ಅದರಲ್ಲಿ ನವನಾಥರಾದ ಕವಿ, ಹರಿ, ಅಂತರಿಕ್ಷ, ಪ್ರಬುದ್ಧ, ಪಿಪ್ಪಲಾಯನ, ಆವಿಹೋತ್ರ, ದ್ರುಮಿಳ, ಚಮಸ, ಕರಭಾಜನರು ಭಾಗವತ ಧರ್ಮವನ್ನು ಜನಕ ಮಹಾರಾಜನಿಗೆ ವಿವರಿಸುತ್ತಿದ್ದರು. ಜನಕ ಮಹಾರಾಜನು ವಿಷಯದ ಬಗ್ಗೆ ಅವರನ್ನು ಬಹು ಮುಖ್ಯವಾದ ಪ್ರಶ್ನೆಗಳನ್ನು ಕೇಳಿ, ಅದಕ್ಕೆ ತಕ್ಕ ಉತ್ತರಗಳನ್ನು ಸಿದ್ಧರಿಂದ ಪಡೆಯುತ್ತಿದ್ದನು. ಕವಿ ಭಾಗವತ ಧರ್ಮವೇನೆಂದು ವಿವರಿಸಿದರು. ಭಕ್ತನ ಲಕ್ಷಣಗಳನ್ನು ಹರಿ ಹೇಳಿದರು. ಅಂತರಿಕ್ಷರು, ಮಾಯೆ ಎಂದರೇನು ಎಂದು ವಿವರಣೆ ಕೊಟ್ಟರು. ಮಾಯೆಯನ್ನು ಗೆಲ್ಲುವುದು ಹೇಗೆ ಎಂಬುದನ್ನು ಪ್ರಬುದ್ಧರು ವಿವರಿಸಿದರು. ಪಿಪ್ಪಲಾಯನರು, ಪರಬ್ರಹ್ಮವೇನೆಂದು ವಿವರಿಸಿದರು. ಕರ್ಮವೇನೆಂಬುದನ್ನು ಅವಿರ್ಹೋತ್ರ ವಿವರವಾಗಿ ಹೇಳಿದರು. ದ್ರುಮಳರು ಜನಕರಾಜನಿಗೆ ಪರಮಾತ್ಮನ ಅವತಾರಗಳು, ಅವುಗಳ ಕಾರ್ಯ ಮೊದಲಾದುವನ್ನು ವಿವರಿಸಿ ಹೇಳಿದರು. ಭಕ್ತರಲ್ಲದವರಿಗೆ, ಅವರು ಸತ್ತಮೇಲೆ, ಉಂಟಾಗುವ ಅನುಭವಗಳನ್ನು ಚಮಸರು ವಿವರಿಸಿದರು. ಅಂತಿಮವಾಗಿ ಕರಭಾಜನರು, ಬೇರೆ ಬೇರೆ ಯುಗಗಳಲ್ಲಿ ಪರಮಾತ್ಮನನ್ನು ಹೇಗೆ ಅರ್ಚಿಸಬೇಕು ಎಂಬುದನ್ನು ಜನಕರಾಜನಿಗೆ ವಿವರಿಸಿದರು. ಕಲಿಯುಗದಲ್ಲಿ, ನಿರಂತರ ಗುರು, ದೈವದ ನಾಮ ಸ್ಮರಣೆ, ಅವರ ಚರಣಗಳಲ್ಲಿ ಶರಣಾಗುವುದೇ ಭಕ್ತನ ಪೂಜಾರ್ಚನೆಗಳು ಎಂದು ಹೇಳಿದರು.

ವಿವರಗಳನ್ನೆಲ್ಲಾ ಓದಿದ ದೀಕ್ಷಿತರಿಗೆ, ಒಂದು ತರಹೆಯ ನಿರಾಶಾಭಾವ ಉಂಟಾಯಿತು. ಅವರು, " ನವನಾಥರ ಭಕ್ತಿ ವಿವರಣೆಗಳು ಎಷ್ಟು ಸುಂದರವಾಗಿವೆ. ಅವರು ಪರಿಪೂರ್ಣರು. ಅವರಿಗೆ ಇದೆಲ್ಲಾ ಸಾಧ್ಯ. ಆದರೆ ನಾವು, ಹುಲು ಮಾನವರು. ನಮಗೆ ಅವರು ವಿವರಿಸಿರುವ ಹಾಗೆ ಭಕ್ತಿಯುಂಟಾಗಲು ಸಾಧ್ಯವೇ? ಅವರು ಹೇಳಿರುವ ವಿಧಾನಗಳು ನಮ್ಮಿಂದ ಆಚರಿಸಲು ದುಸ್ಸಾಧ್ಯವಾದವು. ಅಭ್ಯಾಸದಲ್ಲಿಡಲು ಇನ್ನೂ ಕಷ್ಟ. ಅನೇಕ ಜನ್ಮಗಳ ನಂತರವೂ ಇಂತಹ ಭಕ್ತಿಭಾವವನ್ನು ಪಡೆಯಲು ಸಾಧ್ಯವಿಲ್ಲದ ನಮಗೆ, ಇನ್ನು ಮುಕ್ತಿಯೆಲ್ಲಿಂದ? ನಿರಾಶೆಯೇ ನಮಗೆ ಕಟ್ಟಿಟ್ಟಿದ್ದು" ಎಂದು ಪ್ರಲಾಪಿಸಿದರು. ಶ್ಯಾಮಾರಿಗೆ ರೀತಿಯ ನಿರಾಶಾಭಾವ ಹಿಡಿಸಲಿಲ್ಲ. ಅವರು, "ನಮಗೆ ಬಾಬಾರಂತಹ ಗುರುವು ದೊರೆತು, ಅವರಲ್ಲಿ ಅಚಲ ಭಕ್ತಿ ಇರುವಾಗ, ಏಕೆ ರೀತಿ ವಿಷಣ್ಣರಾಗಬೇಕು? ನಾಥರ ಭಕ್ತಿ ಅಪೂರ್ವವಾದದ್ದೇ ಇರಬಹುದು. ಆದರೆ ಬಾಬಾರಲ್ಲಿ ನಮ್ಮ ಭಕ್ತಿವಿಶ್ವಾಸಗಳೂ ಅಷ್ಟೇ ಅಪೂರ್ವವಾದದ್ದು. ‘ಸದಾಕಾಲ ಗುರು, ಹರಿ ನಾಮೋಚ್ಚರಣೆಯೇ ನಮಗೆ ಮುಕ್ತಿದಾಯಕವಾಗುತ್ತದೆಎಂದು ಬಾಬಾರು ಅಧಿಕಾರಯುಕ್ತವಾಗಿ ಹೇಳಿಲ್ಲವೇ? ಹಾಗಿರುವಾಗ ಸಂದೇಹಕ್ಕೆಡೆಯೆಲ್ಲಿ? ಅದೃಷ್ಟವಶಾತ್ ನಮಗೆ ಬಾಬಾರಂತಹ ಗುರುವಿರುವಾಗ, ಇಂತಹ ಸಂದೇಹಗಳು ತಲೆಯೆತ್ತುವುದು ಶೋಚನೀಯ" ಎಂದರು. ದೀಕ್ಷಿತರಿಗೆ ವಿವರಣೆಯಿಂದ ಮನಸ್ಸಿಗೆ ಸಮಾಧಾನವಾಗಲಿಲ್ಲ. ಅವರು ದಿನವೆಲ್ಲಾ ನಾಥರು ಹೇಳಿದ ಭಕ್ತಿಯನ್ನು ಪಡೆಯುವುದು ಹೇಗೆ ಎನ್ನುವ ಯೋಚನೆಯಲ್ಲೇ ಮುಳುಗಿಹೋದರು. ಮಾರನೆಯ ದಿನ ಬೆಳಗ್ಗೆ ಪವಾಡವೊಂದು ನಡೆಯಿತು.

ಆನಂದ ರಾವ್ ಅವರ ದರ್ಶನ

ಆನಂದ ರಾವ್ ಪಾಖಾಡೆ ಎಂಬುವವರೊಬ್ಬರು, ಮಾಧವ ರಾವ್ ದೇಶಪಾಂಡೆ (ಶ್ಯಾಮಾ) ಅವರನ್ನು ಹುಡುಕಿಕೊಂದು ಕಾಕಾ ಮಹಾಜನಿ ಅವರ ಮನೆಗೆ ಬಂದರು. ಅವರು ಬಂದಾಗ ದೀಕ್ಷಿತರ ಭಾಗವತ ಪಠನೆ ನಡೆಯುತ್ತಿತ್ತು. ಆನಂದ ರಾವ್ ಒಳಕ್ಕೆ ಬಂದು, ಶ್ಯಾಮಾರ ಪಕ್ಕದಲ್ಲಿ ಕೂತು ಅವರ ಕಿವಿಯಲ್ಲಿ ಏನೋ ಪಿಸುಗುಟ್ಟುತ್ತಿದ್ದರು. ಪಿಸುಗುಟ್ಟುವಿಕೆಯಿಂದ ಭಾಗವತ ಪಠನೆಗೆ ತೊಂದರೆಯಾಯಿತು. ಪಠನೆಯನ್ನು ನಿಲ್ಲಿಸಿ, ದೀಕ್ಷಿತರು ಶ್ಯಾಮಾರನ್ನು ಏನು ವಿಷಯ ಎಂದು ಕೇಳಿದರು. ಅದಕ್ಕೆ ಶ್ಯಾಮಾ, "ನಿನ್ನೆ ನಿಮಗೆ ಪಠನವಾದಮೇಲೆ ಸಂದೇಹವೊಂದು ಬಂತು. ಸಂದೇಹಕ್ಕೆ ನಿಮಗೆ ಉತ್ತರ ಇಲ್ಲಿದೆ. ಪಾಖಾಡೆಯವರ ಸ್ವಪ್ನ ದರ್ಶನವನ್ನು ಕೇಳಿ. ಅದು ಭಕ್ತನನ್ನು ಅವನ ಭಕ್ತಿ ಹೇಗೆ ಕಾಪಾಡುತ್ತದೆ ಎಂದೂ, ಗುರುವಿನ ಚರಣಗಳಿಗೆ ನಮಸ್ಕಾರಮಾಡಿದರೆ ಸಾಕು ಎಂದೂ ತಿಳಿಸುತ್ತದೆ" ಎಂದರು. ಅಲ್ಲಿದ್ದ ಎಲ್ಲರೂ, ವಿಶೇಷವಾಗಿ ಕಾಕಾ ಸಾಹೇಬರು, ಅದೇನೆಂದು ಕೇಳಲು ಕಾತುರರಾದರು.

ಆನಂದ ರಾವ್ ಹೇಳಿದರು, "ನಾನು ಸೊಂಟದುದ್ದ ನೀರಿನಲ್ಲಿ, ಸಮುದ್ರದಲ್ಲಿ ನಿಂತಿದ್ದೆ. ಇದ್ದಕ್ಕಿದ್ದಹಾಗೇ, ಬಾಬಾರ ದರ್ಶನವಾಯಿತು. ಅವರು ಹೊಳೆಯುತ್ತಿರುವ ರತ್ನ ಸಿಂಹಾಸನದ ಮೇಲೆ, ಕಾಲುಗಳನ್ನು ನೀರಿನಲ್ಲಿ ಬಿಟ್ಟುಕೊಂಡು, ಕುಳಿತಿದ್ದರು. ಅವರ ರೂಪ, ಬಹಳ ಸುಂದರವಾಗಿ ಆನಂದದಾಯಕವಾಗಿತ್ತು. ದರ್ಶನ ಎಷ್ಟು ಸಹಜವಾಗಿತ್ತೆಂದರೆ, ನನಗೆ ಅದು ಸ್ವಪ್ನ ಎನ್ನಿಸಲಿಲ್ಲ. ವಿಚಿತ್ರವೋ ಎಂಬಂತೆ ಮಾಧವ ರಾವ್ ಅವರೂ ಅಲ್ಲಿ ನಿಂತಿದ್ದರು. ಅವರು ಕಳಕಳಿಯಿಂದ, "ಬಾಬಾರ ಪಾದಗಳಿಗೆ ನಮಸ್ಕಾರ ಮಾಡಿಕೋ" ಎಂದರು. ನಾನು, "ಮಾಡಬೇಕೆಂದು ನನಗೂ ಆಸೆ. ಆದರೆ ಅವರ ಪಾದಗಳು ನೀರಿನಲ್ಲಿವೆ. ನಾನೇನು ಮಾಡಲಿ?" ಎಂದೆ. ಅದನ್ನು ಕೇಳಿದ ಮಾಧವ ರಾವ್, "ದೇವಾ, ನಿಮ್ಮ ಪಾದಗಳನ್ನು ನೀರಿನಿಂದ ಈಚೆಗೆ ತೆಗೆಯಿರಿ" ಎಂದು ಕೇಳಿಕೊಂಡರು. ಕೂಡಲೇ ಬಾಬಾ ತಮ್ಮ ಪಾದಗಳನ್ನು ನೀರಿನಿಂದ ಹೊರಕ್ಕೆ ತೆಗೆದರು. ನಾನು, ತಡಮಾಡದೆ, ಅವರ ಪಾದಗಳನ್ನು ಹಿಡಿದು, ಅವುಗಳ ಮೇಲೆ ತಲೆಯಿಟ್ಟು, ನಮಸ್ಕರಿಸಿದೆ. ಅದನ್ನು ಕಂಡ ಬಾಬಾ, ನನ್ನನ್ನು ಆಶೀರ್ವದಿಸಿ, "ಈಗ ಹೋಗು. ನಿನಗೆ ಎಲ್ಲವೂ ಕ್ಷೇಮವಾಗುತ್ತದೆ. ಭಯ, ಕಾತುರಗಳಿಗೆ ಕಾರಣವಿಲ್ಲ" ಎಂದು ಹೇಳಿ, " ನನ್ನ ಶಾಮ್ಯಾನಿಗೆ ಒಂದು ಜರತಾರಿ ಅಂಚಿನ ರೇಷ್ಮೆ ಪಂಚೆಯನ್ನು ಕೊಡು. ಅದರಿಂದ ನಿನಗೆ ಒಳ್ಳೆಯದಾಗುತ್ತದೆ" ಎಂದರು.

ಬಾಬಾರ ಆಣತಿಯಂತೆ ಆನಂದ ರಾವ್, ತಂದಿದ್ದ ಪಂಚೆಯನ್ನು ತೆಗೆದು, ಅದನ್ನು ಶ್ಯಾಮಾರಿಗೆ ಕೊಡುವಂತೆ ದೀಕ್ಷಿತರನ್ನು ಕೇಳಿಕೊಂಡರು. "ಬಾಬಾ ಅದನ್ನು ತೆಗೆದುಕೊಳ್ಳುವಂತೆ ನನಗೆ ಹೇಳಲಿಲ್ಲ" ಎನ್ನುವ ಕಾರಣದಿಂದ ಶ್ಯಾಮಾ ಅದನ್ನು ತೆಗೆದುಕೊಳ್ಳಲು ನಿರಾಕರಿಸಿದರು. ಸ್ವಲ್ಪ ಹೊತ್ತು ಚರ್ಚೆಯಾದಮೇಲೆ, ಕಾಕಾ ಸಾಹೇಬರು ಚೀಟಿಯನ್ನು ಎತ್ತಲು ನಿರ್ಧರಿಸಿದರು. ಸಂದೇಹ ಬಂದಾಗ ನಿರ್ಣಯಮಾಡಲು ಚೀಟಿ ಹಾಕಿ, ಅದರಲ್ಲಿ ಬಂದ ಉತ್ತರದಂತೆ ನಡೆಯುವುದು ಕಾಕಾ ಸಾಹೇಬರ ಅಭ್ಯಾಸ. ವಿಷಯದಲ್ಲೂ ಅದನ್ನೇ ಮಾಡಲು ನಿರ್ಧರಿಸಿ, ಒಂದು ಚೀಟಿಯಲ್ಲಿತೆಗೆದುಕೋಎಂತಲೂ, ಇನ್ನೊಂದು ಚೀಟಿಯಲ್ಲಿಬೇಡಎಂತಲೂ ಬರೆದು, ಅವನ್ನು ಬಾಬಾರ ಪಾದಗಳಲ್ಲಿಟ್ಟು, ಮಗುವಿನ ಕೈಯಿಂದ ಚೀಟಿ ಎತ್ತಿಸಲಾಯಿತು. ಅದರಲ್ಲಿತೆಗೆದುಕೋಎಂದು ಬಂತು. ಅದರಂತೆ ಪಂಚೆಯನ್ನು ಶ್ಯಾಮಾರಿಗೆ ಕೊಡಲಾಯಿತು. ಶ್ಯಾಮಾ, ಆನಂದ ರಾವ್ ಇಬ್ಬರೂ ಸಂತುಷ್ಟರಾದರು. ಅದರೊಡನೆ ಕಾಕಾ ಸಾಹೇಬರ ಸಂದೇಹವೂ ತೀರಿತು.

ಕಥೆಯಿಂದ ನಾವು ಕಲಿಯುವ ಪಾಠ, "ಇತರ ಸಂತರ ವಾಣಿಯನ್ನೂ ಗೌರವಿಸು. ಆದರೆ ನಿನ್ನ ಗುರುವಿನಲ್ಲಿ ಸಂಪೂರ್ಣ ನಂಬಿಕೆಯಿಟ್ಟು ಅವರ ಮಾತಿನಂತೆ ನಡೆ. ನಮ್ಮ ಗುರುವಿಗೆ ನಮಗೇನು ಬೇಕು ಎಂಬುದು ಮಿಕ್ಕವರಿಗಿಂತ ಚೆನ್ನಾಗಿ, ಹೆಚ್ಚಾಗಿ ಗೊತ್ತಿದೆ."

ಬಾಬಾ ಹೇಳುತ್ತಿದ್ದರು, " ಪ್ರಪಂಚದಲ್ಲಿ ಅಸಂಖ್ಯಾತ ಜನ ಸಂತರಿದ್ದಾರೆ. ಆದರೆ ನಿನ್ನ ಗುರುವೇ ನಿನಗೆ ತಂದೆ. ಇತರ ಸಂತರು ಒಳ್ಳೆಯದನ್ನೇ ಹೇಳಬಹುದು. ಆದರೆ ನಿನಗೆ ನಿನ್ನ ಗುರುವಿನ ಮಾತುಗಳೇ ಪ್ರಮಾಣ. ಹೆಚ್ಚೇನು, ನಿನ್ನ ಗುರುವನ್ನು ಮನಸಾರ ನಂಬಿ, ಅವನಿಗೆ ಸಂಪೂರ್ಣ ಶರಣಾಗು. ಆಗ ನಿನಗೆ, ಸೂರ್ಯ ಬಂದಾಗ ಅಂಧಕಾರ ಓಡಿಹೋಗುವಂತೆ, ಭವಸಾಗರವೆಂಬುದು ಅದೃಶ್ಯವಾಗುತ್ತದೆ."

ಬಾಬಾರ ಮಾತುಗಳನ್ನು ನಾವು ನಮ್ಮ ಹೃದಯದಲ್ಲಿಟ್ಟುಕೊಂಡು ಅದರಂತೆ ಸದಾ ನಡೆದುಕೊಳ್ಳಬೇಕು.

ಮರದ ಹಲಗೆಯ ಕಥೆ

ಇದಕ್ಕೆ ಮುಂಚೆ ಹತ್ತನೆಯ ಅಧ್ಯಾಯದಲ್ಲಿ ಹೇಳಿದಂತೆ, ಬಾಬಾ ಒಂದು ಮರದ ಹಲಗೆಯ ಮೇಲೆ, ನಾಲ್ಕೂ ಮೂಲೆಗಳಲ್ಲಿ ಹಣತೆಗಳನ್ನಿಟ್ಟು ಮಲಗುತ್ತಿದ್ದು, ಅದನ್ನು ಒಡೆದು ಧುನಿಗೆ ಹಾಕಿದರು ಎಂಬುದು ಓದುಗರಿಗೆ ನೆನಪಿರಬಹುದು. ಒಂದು ದಿನ, ಕಾಕಾ ಸಾಹೇಬರಿಗೆ ಮರದ ಹಲಗೆಯ ಪ್ರಾಮುಖ್ಯತೆಯನ್ನು ಬಾಬಾ ಹೇಳುತ್ತಿದ್ದರು. ಅದನ್ನು ಕೇಳಿದ ಕಾಕಾ ಸಾಹೇಬರು, "ನೀವು ಅದನ್ನು ಅಷ್ಟೊಂದು ಪ್ರೀತಿಸುವುದಾದರೆ ನಾನು ಇನ್ನೊಂದು ಹಲಗೆಯನ್ನು ಮಸೀದಿಯಲ್ಲಿ ಉಯ್ಯಾಲೆಯಂತೆ ತೂಗುಹಾಕಿಸುತ್ತೇನೆ. ಅದರ ಮೇಲೆ ನೀವು ಮಲಗಬಹುದು" ಎಂದರು. ಅದಕ್ಕೆ ಬಾಬಾ, "ಮಹಲ್ಸಪತಿಯನ್ನು ನೆಲದಮೇಲೆ ಮಲಗಲು ಬಿಟ್ಟು, ನಾನೊಬ್ಬನೇ ಮೇಲೆ ಮಲಗಲು ಇಷ್ಟಪಡುವುದಿಲ್ಲ" ಎಂದರು. ಕಾಕಾ ಮತ್ತೆ, "ಅವರಿಗೂ ಒಂದು ಹಾಕಿಸುತ್ತೇನೆ" ಎಂದರು. ಆಗ ಬಾಬಾ, "ಅವನು ಹಲಗೆಯ ಮೇಲೆ ಹೇಗೆ ಮಲಗಬಲ್ಲ? ಹಲಗೆಯ ಮೇಲೆ ಮಲಗುವುದು ಅಷ್ಟು ಸುಲಭವಲ್ಲ. ಕಣ್ಣು ಬಿಟ್ಟುಕೊಂಡು ಯಾರು ನಿದ್ದೆ ಮಾಡಬಲ್ಲರೋ, ಅವರು ಮಾತ್ರ ಹಲಗೆಯ ಮೇಲೆ ಮಲಗಬಲ್ಲರು. ನಾನು ಮಲಗಿದಾಗ ಅವನನ್ನು ನನ್ನ ಪಕ್ಕದಲ್ಲಿ ಕೂತು, ನನ್ನ ಹೃದಯದ ಮೇಲೆ ಕೈಯಿಟ್ಟು, ಅಲ್ಲಿ ಸದಾ ನಡೆಯುತ್ತಿರುವ ನಾಮ ಜಪವನ್ನು ಕೇಳುತ್ತಿರು. ನಾನೇನಾದರೂ ನಿದ್ರೆಮಾಡಿದರೆ, ನನ್ನನ್ನು ಎಬ್ಬಿಸು ಎಂದು ಹೇಳುತ್ತೇನೆ. ಅದನ್ನೇ ಮಾಡಲಾರದೆ ಅವನು ಮಂಪರಿನಿಂದ ತಲೆ ತೂಗುತ್ತಾನೆ. ಅವನ ಕೈ ನನ್ನ ಎದೆಯ ಮೇಲೆ ಕಲ್ಲಿನಂತೆ ಭಾರವಾಗಿ ನಾನು ಭಗತ್ಎಂದು ಕೂಗಿದಾಗ, ಅವನು ಕಣ್ಣು ಬಿಟ್ಟು ಎಚ್ಚರಗೊಳ್ಳುತ್ತಾನೆ. ನೆಲದಮೇಲೇ ಕೂತು ಸರಿಯಾಗಿ ನಿದ್ದೆ ಮಾಡಲಾರದ ಅವನು, ನಿದ್ದೆಗೆ ದಾಸನಾದವನು, ಸ್ಥಿರವಾದ ಆಸನವಿಲ್ಲದವನು, ಎತ್ತರದಲ್ಲಿ ಹಲಗೆಯಮೇಲೆ ಹೇಗೆ ನಿದ್ರಿಸಬಲ್ಲ?" ಎಂದರು.

ಹಲವಾರು ಸಲ ಬಾಬಾ ತಮ್ಮ ಭಕ್ತರಿಗೆ, "ಒಳ್ಳೆಯದೋ ಕೆಟ್ಟುದೋ ನಮ್ಮದು ನಮ್ಮ ಬಳಿ ಇರುತ್ತದೆ. ಇತರರದು ಅವರ ಬಳಿ ಇರುತ್ತದೆ" ಎಂದು ಹೇಳುತ್ತಿದ್ದರು.

ಇದರೊಂದಿಗೆ ಕಾಕಾ ಸಾಹೇಬರ ಸಂದೇಹ, ಆನಂದರಾವ್ ದರ್ಶನ, ಮರದ ಹಲಗೆ, ಬಾಬಾರ ಮಂಚ ಮತ್ತು ಇತರ ವಿಷಯಗಳನ್ನು ಕುರಿತು ಹೇಳುವ ನಲವತ್ತೈದನೆಯ ಅಧ್ಯಾಯ ಮುಗಿಯಿತು. ಮುಂದಿನ ಅಧ್ಯಾಯದಲ್ಲಿ ಹೇಮಾಡ್ ಪಂತ್, ಬಾಬಾರ ಗಯಾ ಯಾತ್ರೆ, ಎರಡು ಮೇಕೆಗಳ ಕಥೆ ಇತ್ಯಾದಿ ವಿಷಯಗಳನ್ನು ಹೇಳುತ್ತಾರೆ.

||ಸದ್ಗುರು ಶ್ರೀ ಸಾಯಿನಾಥಾರ್ಪಣಮಸ್ತು||ಶುಭಂ ಭವತು||
||ಓಂ ಶಾಂತಿಃ ಶಾಂತಿಃ ಶಾಂತಿಃ||


No comments:

Post a Comment