Sunday, February 5, 2012

||ನಲವತ್ತೊಂದನೆಯ ಅಧ್ಯಾಯ||


||ಶ್ರೀ ಸಾಯಿ ಸಚ್ಚರಿತ್ರೆ||
||ನಲವತ್ತೊಂದನೆಯ ಅಧ್ಯಾಯ||
||ಚಿತ್ರಪಟದ ಕಥೆ||
ಶ್ರೀ ಗಣೇಶಾಯ ನಮಃ ಶ್ರೀ ಸರಸ್ವತಯೇ ನಮಃ
ಶ್ರೀ ವೆಂಕಟೇಶಾಯ ನಮಃ ಶ್ರೀ ಸಾಯಿನಾಥಾಯ ನಮಃ
ಶ್ರೀ ಸದ್ಗುರುಭ್ಯೋನ್ನಮಃ

ಅಧ್ಯಾಯದಲ್ಲಿ ಹೇಮಾಡ್ ಪಂತ್, ಬಾಬಾ ಚಿತ್ರಪಟದ ಕಥೆ, ಚಿಂದಿಯ ಕಳವು, ಜ್ಞಾನೇಶ್ವರಿಯ ಓದು ಇತ್ಯಾದಿ ವಿಷಯಗಳನ್ನು ಕುರಿತು ಹೇಳುತ್ತಾರೆ.

ಸದ್ಗುರು ಸಾಯಿ

ದೇಹದಲ್ಲಿ ಮಾಡಿದ ಪುಣ್ಯ ಪಾಪಗಳು, ದೇಹ ನಾಶವಾದಮೇಲೆ, ನಾಶವಾಗಿ ಹೋಗುವುದಿಲ್ಲ. ಕರ್ಮ ಮಾಡಿದ ದೇಹ ಹೋದರೂ ಕರ್ಮ ಫಲ ಹಾಗೇ ಇರುತ್ತದೆ. ಅದರಿಂದ ಬಿಡುಗಡೆ ಹೊಂದ ಬೇಕಾದರೆ "ನಾನು ಜೀವ. ದೇಹವಲ್ಲ." ಎಂಬ ಅರಿವು ಬರಬೇಕು. ಅಂತಹ ಅರಿವು ಬಂದಾಗ ಕರ್ಮ ಫಲಗಳು ಜೀವವನ್ನು ಅಂಟಲಾರವು. ಏಕೆಂದರೆ ಕರ್ಮ ಮಾಡಿದವನು ಜೀವ ಅಲ್ಲ. ಅರಿವನ್ನು ಪಡೆಯಬೇಕಾದರೆ ಸದ್ಗುರುವನ್ನು ಆಶ್ರಯಿಸಬೇಕು. ಅಂತಹ ಸದ್ಗುರುವೇ ನಮ್ಮ ಸಾಯಿಬಾಬಾ. ನಾವು ಸದ್ಗುರುವಿಗೆ ಶರಣಾಗತರಾದರೆ ಅವನೇ ನಮ್ಮನ್ನು ಮೇಲಕ್ಕೆತ್ತುತ್ತಾನೆ. ಮೇಲಕ್ಕೆತ್ತಿ ನಮಗೆ ಅದ್ಭುತವಾದ ಅನುಭವಗಳನ್ನು ನೀಡಿ, ಋಜುಮಾರ್ಗದಲ್ಲಿ ನಡೆಸುತ್ತಾನೆ. ಹಾಗೆ ಸದ್ಗುರು ಸಾಯಿಯ ಆಶಿಸ್ಸನ್ನು ಪಡೆಯಬೇಕೆಂದರೆ ಸಾಯಿ ಸಚ್ಚರಿತ್ರೆಯನ್ನು ಮತ್ತೆ ಮತ್ತೆ ಪಾರಾಯಣ ಮಾಡುತ್ತಿರಬೇಕು. ನಮ್ಮ ಅಹಂಕಾರವನ್ನು ಬಿಟ್ಟು, ಕೀರ್ತಿ, ಐಶ್ವರ್ಯ, ಔದಾರ್ಯ, ಜ್ಞಾನ, ವೈರಾಗ್ಯ ಮತ್ತು ಪ್ರಶಾಂತತೆ ಎಂಬ ಷಡ್ಗುಣಗಳಿಂದ ಕೂಡಿದ ದೈವಸ್ವರೂಪಿ ಸಾಯಿ ಸದ್ಗುರುವಿನ ಚರಣಾರವಿಂದಗಳಲ್ಲಿ ಲೀನರಾಗಬೇಕು. ಬಾಬಾ ಪರಮ ದಯಾಳು. ನಾವು ಅವರ ಭಕ್ತರಲ್ಲದಿದ್ದರೂ, ಅವರ ಪೂಜೆ ಮಾಡದಿದ್ದರೂ, ಅವರನ್ನು ನಂಬಿ ಆರ್ತರಾಗಿ ಒಂದುಸಲ ಕರೆದರೆ ಸಾಕು, ಅವರು ಓಗೊಡುತ್ತಾರೆ.

ಆಲಿ ಮೊಹಮ್ಮದರ ಕಥೆ

ಹಿಂದಿನ ಅಧ್ಯಾಯದಲ್ಲಿ ಹೇಮಾಡ್ ಪಂತರಿಗೆ, ತಾನು ಕನಸಿನಲ್ಲಿ ಊಟಕ್ಕೆ ಬರುತ್ತೇನೆಂದು ಕೊಟ್ಟ ಮಾತನ್ನು ಹೇಗೆ ಬಾಬಾ ಚಿತ್ರಪಟದ ರೂಪದಲ್ಲಿ ಬಂದು ಉಳಿಸಿಕೊಂಡರು, ಎಂದು ನೋಡಿದೆವು. ಆಲಿ ಮೊಹಮ್ಮದರಿಗೆ ಚಿತ್ರಪಟ ಹೇಗೆ ಸಿಕ್ಕಿತು ಎಂಬುದನ್ನು ತಿಳಿಯಲು ಹೇಮಾಡ್ ಪಂತರು ಬಹಳ ಕುತೂಹಲಿಗಳಾಗಿದ್ದರು. ವಿಷಯವನ್ನು ತಮ್ಮ ಮುಂದಿನ ಭೇಟಿಯಲ್ಲಿ ತಿಳಿಸುತ್ತೇನೆಂದು ಹೇಳಿ, ಪಟವನ್ನು ಕೊಟ್ಟು, ಆಲಿ ಹೊರಟು ಹೋಗಿದ್ದರು. ಭೇಟಿ ಒಂಭತ್ತು ವರ್ಷಗಳ ನಂತರ ಆಯಿತು.

ಒಮ್ಮೆ, ಆಲಿಯವರು ಬೊಂಬಾಯಿನ ದಾರಿಯಲ್ಲಿ ನಡೆದು ಹೋಗುತ್ತಿರುವಾಗ, ತಿರುಗಾಟದ ವ್ಯಾಪಾರಿಯೊಬ್ಬನ ಹತ್ತಿರ ಬಾಬಾರ ದೊಡ್ಡ ಚಿತ್ರಪಟವನ್ನು ನೋಡಿದರು. ಬಾಬಾರ ಭಕ್ತರಾಗಿದ್ದ ಅವರಿಗೆ ಪಟ ಬಹು ನೆಚ್ಚಿಕೆಯಾಯಿತು. ಅದನ್ನು ಕೊಂಡು, ಕಟ್ಟುಹಾಕಿಸಿ ಮನೆಯಲ್ಲಿ ತೂಗುಹಾಕಿದರು. ದಿನವೂ ಪಟಕ್ಕೆ ನಮಸ್ಕಾರ ಮಾಡುತ್ತಿದ್ದರು. ಹೇಮಾಡ್ ಪಂತರನ್ನು ಕಾಣಲು ಬರುವುದಕ್ಕೆ ಸ್ವಲ್ಪ ಮುಂಚೆ ಅವರಿಗೆ ಕಾಲಿನಲ್ಲಿ ವ್ರಣವಾಗಿ ಬಹಳ ನರಳಿದರು. ವೈದ್ಯರ ಸಲಹೆಯಂತೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು, ಸುಧಾರಿಸಿಕೊಳ್ಳಲೆಂದು ಆಲಿಯವರು ತಮ್ಮ ಭಾವನವರಾದ ನೂರ್ ಮೊಹಮ್ಮದ್ ಪೀರಭಾಯಿಯವರ ಮನೆಯಲ್ಲಿ ಮೂರು ತಿಂಗಳಿದ್ದರು. ಅಲ್ಲಿರುವವರೆಗೂ ಅವರ ಬಾಂದ್ರಾದ ಮನೆಗೆ ಬೀಗಹಾಕಿದ್ದರು. ಅವರ ಮನೆಯಲ್ಲಿ ಬಾಬಾರವರದೇ ಅಲ್ಲದೆ ಬೇರೆ ಅನೇಕ ಮಹಮದೀಯ ಸಂತರು, ಬಾಬಾ ಅಬ್ದುರ್ ರಹಮಾನ್, ಮೌಲಾನ ಸಾಹೇಬ್ ಮಹಮ್ಮದ್ ಹುಸೇನ್, ಬಾಬಾ ತಾಜುದ್ದೀನ್ ಮುಂತಾದವರ ಪಟಗಳೂ ಇದ್ದವು. ಅವರಿಗೆ ಬಾಬಾ ಅಬ್ದುರ್ ರಹಮಾನ್ ರವರ ಪಟ ದೊರೆತಿದ್ದು ಒಂದು ವಿಚಿತ್ರ. ಬಾಬಾ ಅಬ್ದುರ್ ರಹಮಾನ್ ಮಹಮದ್ ಅವರ ಸಣ್ಣ ಭಾವಚಿತ್ರವೊಂದು ಮೊಹಮದ್ ಹುಸೇನ್ ತರಿಯಾತೋಪನ್ ಮೂಲಕ ಆಲಿ ಮೊಹಮ್ಮದರಿಗೆ ಸಿಕ್ಕಿತ್ತು. ಅದೃಷ್ಟವನ್ನು ತರುತ್ತದೆ ಎಂಬ ನಂಬಿಕೆಯಿಂದ ಚಿತ್ರವನ್ನು ತಮ್ಮ ಬಾವನವರಾದ ನೂರ್ ಮೊಹಮ್ಮದರಿಗೆ ಕೊಟ್ಟರು. ಅವರು ಅದನ್ನು ತಮ್ಮ ಮೇಜಿನಲ್ಲಿ ಎಂಟು ವರ್ಷ ಹಾಗೇ ಇಟ್ಟಿದ್ದರು. ಒಂದು ದಿನ ಅದನ್ನು ತೆಗೆದು ಛಾಯಾಚಿತ್ರಕಾರನೊಬ್ಬನಿಗೆ ಕೊಟ್ಟು ದೊಡ್ದದು ಮಾಡಿಸಿ, ಅದರ ನಕಲುಗಳನ್ನು ತೆಗೆಸಿ, ಕಟ್ಟು ಹಾಕಿಸಿ ತಮ್ಮ ಬಂಧುವರ್ಗದವರಲ್ಲಿ ಹಂಚಿದರು. ಆಲಿ ಮೊಹಮ್ಮದರಿಗೂ ಒಂದು ಚಿತ್ರವನ್ನು ಕೊಟ್ಟರು. ಬಾಬಾ ಅಬ್ದುರ್ ರಹಮಾನ್ ಶಿಷ್ಯರಾದ ನೂರ್ ಮೊಹಮ್ಮದರು, ತಮ್ಮ ಗುರು ದರ್ಬಾರಿನಲ್ಲಿ ಕೂತಿದ್ದಾಗ ಅವರಿಗೂ ಒಂದು ಚಿತ್ರವನ್ನು ಅರ್ಪಿಸಿದರು. ಚಿತ್ರವನ್ನು ನೋಡುತ್ತಲೇ ಅವರ ಗುರುಗಳು ಕೋಪಗೊಂಡು, ಉಗ್ರರಾಗಿ, ನೂರ್ ಮೊಹಮ್ಮದರನ್ನು ಅಲ್ಲಿಂದ ಹೊರದೂಡಿದರು. ಅವರಿಗೆ ವಿಗ್ರಹಾರಾಧನೆ ಇಷ್ಟವಿರಲಿಲ್ಲ.

ತಮ್ಮ ಕೆಲಸದಿಂದಾಗಿ ನೂರ್ ಮೊಹಮ್ಮದರಿಗೆ ಬಹಳ ದುಃಖವಾಯಿತು. ಅಷ್ಟೊಂದು ಹಣ ಖರ್ಚುಮಾಡಿ, ಗುರುಗಳ ಆಗ್ರಹಕ್ಕೆ ಒಳಗಾಗಿ, ಅವರ ನಂಬಿಕೆಯನ್ನೂ ಕಳೆದುಕೊಂಡೆನಲ್ಲ ಎಂದು ಅಸಂತುಷ್ಟರಾದ ಅವರು, ತಮ್ಮ ಗುರುವಿನ ನಂಬಿಕೆಯಂತೆ ನಡೆಯಲು, ದೋಣಿಯೊಂದನ್ನು ಬಾಡಿಗೆಗೆ ಪಡೆದು, ಸಮುದ್ರದಲ್ಲಿ ದೂರಕ್ಕೆ ಹೋಗಿ ಚಿತ್ರವನ್ನು ಮುಳುಗಿಸಿಬಿಟ್ಟರು. ಅಷ್ಟೇ ಅಲ್ಲದೆ, ಬಂಧುವರ್ಗದವರಲ್ಲಿ ಹಂಚಿದ್ದ ಚಿತ್ರಗಳನ್ನೆಲ್ಲಾ ಶೇಖರಿಸಿ ಅವೆಲ್ಲವನ್ನೂ ಒಬ್ಬ ಮೀನುಗಾರನ ಕೈಯಲ್ಲಿ ಕೊಟ್ಟು ಸಮುದ್ರದೊಳಗೆ ಮುಳುಗಿಸಿ ಬರುವಂತೆ ಹೇಳಿದರು. ಸಮಯದಲ್ಲಿ ಆಲಿ ಮೊಹಮ್ಮದರು ನೂರ್ ಮೊಹಮ್ಮದರ ಮನೆಯಲ್ಲೇ ಇದ್ದುದರಿಂದ ಅವರಿಗೆ, "ನಿಮ್ಮ ಮನೆಯಲ್ಲಿರುವ ಸಂತರ ಚಿತ್ರಗಳನ್ನೆಲ್ಲ ತೆಗೆಸಿ ಅವನ್ನೆಲ್ಲಾ ಸಮುದ್ರದಲ್ಲಿ ಮುಳುಗಿಸಿಬಿಡಿ. ನಿಮ್ಮ ತಾಪತ್ರಯಗಳೆಲ್ಲ ತೀರಿಹೋಗುತ್ತವೆ" ಎಂದು ಹೇಳಿದರು. ಅವರ ಸಲಹೆಯಂತೆ ಆಲಿ ಮೊಹಮ್ಮದರು ತಮ್ಮ ಮೇನೇಜರನನ್ನು ಕರೆದು, ತಮ್ಮ ಮನೆಗೆ ಹೋಗಿ ಅಲ್ಲಿರುವ ಚಿತ್ರಪಟಗಳನ್ನೆಲ್ಲಾ ತೆಗೆದುಕೊಂಡು ಹೋಗಿ, ಸಮುದ್ರದಲ್ಲಿ ಮುಳುಗಿಸಿಬರುವಂತೆ ಅಪ್ಪಣೆ ಮಾಡಿದರು.

ಎರಡು ತಿಂಗಳಾದ ಮೇಲೆ ಅವರು ಮನೆಗೆ ಹಿಂತಿರುಗಿದಾಗ, ಅವರಿಗೆ ಒಂದು ಆಶ್ಚರ್ಯ ಕಾದಿತ್ತು. ಮನೆಯ ಒಳಗೆ ಕಾಲಿಡುತ್ತಲೇ ಅವರ ಕಣ್ಣಿಗೆ ಬಿದ್ದದ್ದು ತನ್ನನ್ನೇ ದೃಷ್ಟಿಸಿ ನೋಡುತ್ತಿರುವಂತೆ ಕಾಣುತ್ತಿದ್ದ ಬಾಬಾರ ಚಿತ್ರ. ಎಲ್ಲ ಚಿತ್ರಗಳನ್ನೂ ತೆಗೆದುಕೊಂಡು ಹೋದ ಮೇನೇಜರ್ ಬಾಬಾರ ಚಿತ್ರ ಮಾತ್ರ ಹೇಗೆ ಬಿಟ್ಟು ಹೋಗಿದ್ದ ಎಂಬುದು ಅವರಿಗೆ ಅರ್ಥವಾಗಲಿಲ್ಲ. ನೂರ್ ಮೊಹಮ್ಮದ್ ಅದನ್ನು ಕಂಡರೆ ಅದನ್ನೂ ಸಮುದ್ರದಲ್ಲಿ ಮುಳುಗಿಸಿಬಿಡುತ್ತಾರೆ ಎಂಬ ಭಯದಿಂದ ಅದನ್ನು ಒಂದು ಬೀರುವಿನಲ್ಲಿ ಮುಚ್ಚಿಟ್ಟರು. ಅದನ್ನು ಏನುಮಾಡಬೇಕೆಂದು ಅವರಿಗೆ ತಿಳಿಯಲಿಲ್ಲ. ಆಲಿಯವರಿಗೆ ಬಾಬಾರ ಚಿತ್ರಪಟದ ಮೇಲೆ ಅತೀವ ಪ್ರೇಮವಿತ್ತು. ಅದನ್ನು ಗೋಡೆಯ ಮೇಲೆ ತೂಗುಹಾಕುವ ಹಾಗಿಲ್ಲ: ಸಮುದ್ರದಲ್ಲಿ ಎಸೆಯುವ ಹಾಗಿಲ್ಲ. ಉಭಯ ಸಂಕಟದಲ್ಲಿದ್ದಾಗ, ಬಾಬಾ ಅವರಿಗೆ ಮೌಲಾನಾ ಇಸ್ಮೂ ಮುಜಾವರ್ ಅವರ ಸಲಹೆಯನ್ನು ಪಡೆಯುವಂತೆ ಪ್ರೇರೇಪಿಸಿದರು. ಮಾರನೆಯ ದಿನವೇ ಅವರು ಮೌಲಾನಾ ಅವರನ್ನು ಕಂಡು, ತಮ್ಮ ಮನೆಯಲ್ಲಿ ನಡೆದ ವಿಷಯವನ್ನೆಲ್ಲ ವಿವರವಾಗಿ ತಿಳಿಸಿದರು. ಮೌಲಾನಾ ಅವರು ಯೋಚನೆಮಾಡಿ, ಪಟವನ್ನು ಅಣ್ಣಾ ಸಾಹೇಬ್ ದಾಭೋಲ್ಕರರಿಗೆ ಕೊಟ್ಟರೆ, ಅವರು ಅದನ್ನು ಜೋಪಾನ ಮಾಡುತ್ತಾರೆ ಎಂದು ಸಲಹೆ ಕೊಟ್ಟರು. ಅಂತೆಯೇ ಅವರಿಬ್ಬರೂ ಜೊತೆಗೂಡಿ ಪಟದೊಡನೆ, ಹಿಂದೆ ಹೇಳಿದಹಾಗೆ ಹೇಮಾಡ್ ಪಂತರ ಮನೆಗೆ ಬಂದು, ಸುಸಮಯದಲ್ಲಿ ಅವರಿಗೆ ಒಪ್ಪಿಸಿದರು.

ತಮ್ಮ ಭಕ್ತರ ಜೀವನದಲ್ಲಿ ಹೇಗೆ ಹಾಸುಹೊಕ್ಕಾಗಿ ಸೇರಿ ಅವರಿಗೆ ಸುಖ ಸಂತೋಷಗಳನ್ನು ಬಾಬಾ ಉಂಟು ಮಾಡುತ್ತಿದ್ದರು ಎಂಬುದನ್ನು ಮೇಲಿನ ಕಥೆ ತೋರಿಸುತ್ತದೆ. ಅಂತಹ ಕಾರ್ಯವಾಗಬೇಕಾದರೆ ಅದು ಭೂತ ಭವಿಷ್ಯತ್ ವರ್ತಮಾನಗಳನ್ನು ಬಲ್ಲವರಿಗೆ ಮಾತ್ರ ಸಾಧ್ಯ! ಬಾಬಾ ಕಾಲಾತೀತರು!

ಬಿ.ವಿ.ದೇವ್ ಅವರ ಕಥೆ

ಮಹಾರಾಷ್ಟ್ರದ ಪ್ರಸಿದ್ಧ ಸಂತರು, ಸಂತ್ ಜ್ಞಾನೇಶ್ವರ್, ಆತ್ಮ ಸಾಕ್ಷಾತ್ಕಾರವನ್ನು ಪಡೆದಿದ್ದವರು ಮಾತ್ರವೇ ಅಲ್ಲ ಒಳ್ಳೆಯ ಕವಿಯೂ ಆಗಿದ್ದರು. ೧೯ನೆಯ ವರ್ಷದ ವಯಸ್ಸಿನಲ್ಲೇ ಅವರು, ಮರಾಠಿ ಭಾಷೆಯಲ್ಲಿ ಮೇರು ಕೃತಿಯಾದ ಜ್ಞಾನೇಶ್ವರಿ ಎಂಬ ಗೀತೆಯಮೇಲಿನ ವ್ಯಾಖ್ಯಾನವನ್ನು ಬಹು ಸುಂದರವಾದ ಪದ್ಯ ರೂಪದಲ್ಲಿ ಬರೆದಿದ್ದರು. ಗೀತೆಯನ್ನು ಶಾಸ್ತ್ರೋಕ್ತವಾದ ಭಾವಾರ್ಥಗಳಿಂದ ವಿವರಿಸದೆ ಅನೇಕವಾದ ದೃಷ್ಟಾಂತಗಳು, ರೂಪಕಗಳು, ಉಪಮೆಗಳು ಇವುಗಳಿಂದ ವಿವರಿಸಿದ್ದಾರೆ. ಜ್ಞಾನೇಶ್ವರಿ ಬಾಬಾರಿಗೆ ಅತ್ಯಂತ ಪ್ರಿಯವಾದ ಪುಸ್ತಕ. ಅವರು ಅದನ್ನುಪೋತಿಎಂದು ಕರೆಯುತ್ತಿದ್ದರು.

ದಹಾಣು ಮಾಮಲತದಾರರಾದ ಬಿ.ವಿ.ದೇವ್ ಅವರು ಜ್ಞಾನೇಶ್ವರಿಯನ್ನು ಓದಲು ಬಹಳ ಕಾತುರರಾಗಿದ್ದರು. ಪ್ರತಿದಿನವೂ ಅವರು ಗೀತೆಯ ಒಂದು ಅಧ್ಯಾಯ ಮತ್ತು ಇತರ ಆಧ್ಯಾತ್ಮಿಕ ಪುಸ್ತಕಗಳನ್ನು ಓದುತ್ತಿದ್ದರು. ಆದರೆ, ಜ್ಞಾನೇಶ್ವರಿಯನ್ನು ಓದಲು ಆರಂಭಮಾಡಿದಾಗಲೆಲ್ಲಾ ಏನೋ ಒಂದು ಆತಂಕವಾಗಿ ಓದು ಮುಂದುವರೆಯುತ್ತಿರಲಿಲ್ಲ. ಮೂರು ತಿಂಗಳು ರಜೆಯ ಮೇಲಿದ್ದು, ಶಿರಡಿಗೆ ಹೋಗಿ ಅಲ್ಲಿಂದ ಪೌಂಡ್ ಸೇರಿದರು. ಅಲ್ಲಿಯೂ ಕೂಡ ಬೇರೆ ಎಲ್ಲ ಪುಸ್ತಕಗಳನ್ನು ಓದಲು ಸಾಧ್ಯವಾದರೂ, ಜ್ಞಾನೇಶ್ವರಿಯನ್ನು ಮಾತ್ರ ಓದಲು ಸಾಧ್ಯವಾಗಲಿಲ್ಲ. ಬಹಳ ಸಲ ಪ್ರಯತ್ನಮಾಡಿದರೂ, ಜ್ಞಾನೇಶ್ವರಿಯ ಓದುವಿಕೆ ಸಾಧ್ಯವಾಗದಿದ್ದಾಗ ಅವರು "ಬಾಬಾರು ನನ್ನನ್ನು ಜ್ಞಾನೇಶ್ವರಿ ಓದು ಎಂದು ಹೇಳುವವರೆಗೂ ನಾನು ಅದನ್ನು ಓದುವುದಿಲ್ಲ" ಎಂದು ನಿಶ್ಚಯಮಾಡಿಕೊಂಡರು.

೧೯೧೪ರಲ್ಲಿ ದೇವ್ ಅವರು ಮನೆಯವರೊಡನೆ ಶಿರಡಿಗೆ ಹೋದರು. ಮಸೀದಿಗೆ ಹೋಗುವಾಗ, ಬಾಪೂ ಸಾಹೇಬ್ ಜೋಗ್ ಅವರನ್ನು ಭೇಟಿಯಾದರು. ದೇವ್ ಅವರನ್ನು ದಿನವೂ ಜ್ಞಾನೇಶ್ವರಿಯನ್ನು ಓದುತ್ತಿದ್ದೀರಾ ಎಂದು ಜೋಗರು ಕೇಳಿದರು. ಅದಕ್ಕೆ ದೇವ್, ಜ್ಞಾನೇಶ್ವರಿಯನ್ನು ಓದಲು ತಮಗೆ ಬಹಳ ಇಷ್ಟವೆಂದೂ, ಆದರೆ ಅದನ್ನು ಓದುವುದಕ್ಕೆ ಆರಂಭ ಮಾಡಿದಾಗಲೆಲ್ಲಾ ಏನಾದರೂ ಆತಂಕವಾಗಿ ಓದಲಾಗುತ್ತಿಲ್ಲವೆಂದೂ, ಬಾಬಾರೇ ತಮಗೆ ಅದನ್ನು ಓದು ಎಂದು ಹೇಳುವವರೆಗೂ ತಾವು ಅದನ್ನು ಓದುವುದಿಲ್ಲ ಎಂದೂ ಹೇಳಿದರು. ಅದಕ್ಕೆ ಜೋಗ್, ಜ್ಞಾನೇಶ್ವರಿಯ ಪುಸ್ತಕವೊಂದನ್ನು ಬಾಬಾರ ಕೈಲಿಟ್ಟು, ಪವಿತ್ರಗೊಳಿಸಿ, ಬಾಬಾರ ಆಶೀರ್ವಾದದೊಡನೆ ಓದಲು ಆರಂಭಿಸಿ ಎಂಬ ಸಲಹೆ ಕೊಟ್ಟರು. ದೇವ್, "ನನಗೆ ಹಾಗೆ ಮಾಡಲು ಇಷ್ಟವಿಲ್ಲ. ನನ್ನ ಆಸೆಯೇನು ಎಂದು ಬಾಬಾರಿಗೆ ಗೊತ್ತು. ಬಾಬಾರೇ ಅಪ್ಪಣೆ ಕೊಡುವವರೆಗೂ ನಾನು ಏನೂ ಮಾಡುವುದಿಲ್ಲ" ಎಂದರು.

ಎಲ್ಲರೂ ಮಸೀದಿಗೆ ಹೋಗಿ ಬಾಬಾರ ದರ್ಶನ ಮಾಡಿದರು. ದೇವ್ ಬಾಬಾರಿಗೆ ಒಂದು ರೂಪಾಯಿ ದಕ್ಷಿಣೆ ಕೊಟ್ಟರು. ಬಾಬಾ ೨೦ ರೂಪಾಯಿ ಕೇಳಿದರು. ದೇವ್ ಅದನ್ನೂ ಸಂತೋಷದಿಂದ ಕೊಟ್ಟರು. ಅಂದು ರಾತ್ರಿ, ದೇವ್ ಬಾಲಕರಾಮ್ ಎಂಬುವವರನ್ನು ಕಂಡು, ಅವರು ಹೇಗೆ ಬಾಬಾರ ಸನ್ನಿಹಿತ ಭಕ್ತರಾದರು ಎಂದು ಕೇಳಿದರು. ಬಾಲಕರಾಮ್ ಮಾರನೆಯ ದಿನ ಆರತಿಯಾದಮೇಲೆ ಹೇಳುತ್ತೇನೆ ಎಂದರು. ಮಾರನೆಯ ದಿನ ಎಂದಿನಂತೆ ದೇವ್ ಬಾಬಾರನ್ನು ಕಾಣಲು ಹೋದರು. ಬಾಬಾ ಅವರನ್ನು ಮತ್ತೆ ೨೦ ರೂಪಾಯಿ ದಕ್ಷಿಣೆ ಕೇಳಿದರು. ದೇವ್ ಅದನ್ನೂ ಸಂತೋಷದಿಂದ ಕೊಟ್ಟರು. ಆಗ ಆರತಿಯ ಸಮಯ. ಮಸೀದಿಯಲ್ಲಿ ಜನ ತುಂಬಿದ್ದುದರಿಂದ ದೇವ್ ಒಂದು ಮೂಲೆಗೆ ಹೋಗಿ ಅಲ್ಲಿ ಕುಳಿತರು. ಬಾಬಾ ಅವರನ್ನು ಕರೆದು ತಮ್ಮ ಹತ್ತಿರ ಕೂಳಿತುಕೊಳ್ಳುವಂತೆ ಹೇಳಿದರು. ದೇವ್ ಬಾಬಾರಿಗೆ ಹತ್ತಿರವಾಗಿ ಕುಳಿತರು.

ಆರತಿ ಮುಗಿದು ಜನರೆಲ್ಲ ಹೊರಟ ಮೇಲೆ, ದೇವ್ ಮತ್ತೆ ಬಾಲಕರಾಮರನ್ನು ಕಂಡು ತಮ್ಮ ಪ್ರಶ್ನೆಗೆ ಉತ್ತರ ಕೇಳಿದರು. ಅವರು ಉತ್ತರ ಕೊಡುವಷ್ಟರಲ್ಲಿ, ದೇವ್ ಅವರನ್ನು ಬಾಬಾ ಕರೆಯಿಸಿಕೊಂಡರು. ದೇವ್ ಬಾಬಾ ಬಳಿಗೆ ಹೋದರು. ಬಾಬಾ ಅವರನ್ನು, "ಯಾರ ಹತ್ತಿರ ಏನು ಮಾತನಾಡುತ್ತಿದ್ದೆ?" ಎಂದು ಕೇಳಿದರು. ವಿನಯ ವಿಧೇಯತೆಗಳಿಂದ ದೇವ್, "ಬಾಲಕರಾಮ್ ಅವರ ಹತ್ತಿರ, ನಿಮ್ಮನ್ನೇ ಕುರಿತು ಕೇಳುತ್ತಿದ್ದೆ" ಎಂದರು. ಬಾಬಾ ಮತ್ತೆ ಅವರನ್ನು ೨೫ ರೂಪಾಯಿ ದಕ್ಷಿಣೆ ಕೇಳಿದರು. ದೇವ್ ಅದನ್ನೂ ಕೊಟ್ಟರು. ಬಾಬಾ ಅವರನ್ನು ಒಳಕ್ಕೆ ಕರೆದುಕೊಂಡು ಹೋಗಿ, ಕಂಬದ ಬಳಿ ಕುಳಿತು, " ನನಗೆ ತಿಳಿಯದಂತೆ ನೀನು ನನ್ನ ಚಿಂದಿಗಳನ್ನು ಕದ್ದಿದ್ದೀಯೆ" ಎಂದರು. ಅಪವಾದದ ಮಾತುಗಳನ್ನು ಕೇಳಿದ ದೇವ್, ದಿಗ್ಭ್ರಾಂತರಾಗಿ, "ನನಗೆ ಚಿಂದಿಯ ವಿಷಯ ಏನೂ ತಿಳಿಯದು" ಎಂದರು. ಬಾಬಾ, "ಹುಡುಕಿ ನೋಡು" ಎಂದರು. ದೇವ್ ಅಲ್ಲೆಲ್ಲ ಹುಡುಕಾಡಿದರೂ ಏನೂ ಸಿಕ್ಕಲಿಲ್ಲ. ಬಾಬಾ ಉದ್ರಿಕ್ತರಾಗಿ, "ಇಲ್ಲಿ ಇನ್ನು ಯಾರೂ ಇಲ್ಲ. ನೀನೊಬ್ಬನೇ ಇರುವುದು. ನೀನೇ ಕಳ್ಳ. ಇಷ್ಟು ವಯಸ್ಸಾಗಿ, ಕೂದಲು ಬೆಳ್ಳಗಾದರೂ ನೀನು ಕದಿಯುವುದನ್ನು ಬಿಟ್ಟಿಲ್ಲ" ಎಂದೆಲ್ಲಾ ಕೂಗಾಡಿದರು. ತಮ್ಮ ಸಹನೆಯನ್ನು ಕಳೆದುಕೊಂಡ ಬಾಬಾ, ದೇವ್ ಅವರನ್ನು ಬಾಯಿಗೆ ಬಂದಂತೆಲ್ಲಾ ಬೈಯುತ್ತಾ ಹೊಡೆಯಲು ಹೋದರು. ದೇವ್ ಅವರಿಗೆ ಇವೆಲ್ಲಾ ಏನೆಂದು ಅರ್ಥವಾಗದೆ ಸುಮ್ಮನೇ ಕೂತರು. ಸ್ವಲ್ಪ ಹೊತ್ತಾದ ಮೇಲೆ ಬಾಬಾ ಶಾಂತರಾಗಿ, ಅವರನ್ನು ವಾಡಾಕ್ಕೆ ಹೋಗಲು ಹೇಳಿದರು.

ದೇವ್ ವಾಡಾಗೆ ಹೋಗಿ, ಜೋಗ್ ಮತ್ತು ಬಾಲಕರಾಮ್ ಅವರನ್ನು ಕಂಡು, ಮಸೀದಿಯಲ್ಲಿ ನಡೆದದ್ದನ್ನೆಲ್ಲಾ ಹೇಳಿದರು. ಅವರಿಗೂ ಬಾಬಾರ ರೀತಿಯ ವರ್ತನೆ ಏನು, ಏಕೆ ಎಂದು ಅರ್ಥವಾಗಲಿಲ್ಲ. ಸ್ವಲ್ಪ ಹೊತ್ತಾದ ಮೇಲೆ ಅವರು ಮೂವರನ್ನೂ ಬಾಬಾ ಮಸೀದಿಗೆ ಬರಹೇಳಿದರು. ಮೂವರೂ ಮಸೀದಿಗೆ ಹೋಗಿ ಬಾಬಾರಿಗೆ ನಮಸ್ಕರಿಸಿದಾಗ ಬಾಬಾ, "ನನ್ನ ಮಾತುಗಳಿಂದ ಮುದುಕನಿಗೆ ನೋವಾಗಿರಬೇಕು. ಆದರೆ ಅವನು ಕಳ್ಳತನ ಮಾಡಿದ್ದಾನೆ. ಅದಕ್ಕೇ ಸುಮ್ಮನಿದ್ದಾನೆ" ಎಂದು ಹೇಳಿ, ದೇವ್ ಅವರನ್ನು ಮತ್ತೆ ೧೨ ರೂಪಾಯಿ ದಕ್ಷಿಣೆ ಕೇಳಿದರು. ಕಡಮೆಯಿದ್ದ ರೂಪಾಯಿಗಳನ್ನು ಜೊತೆಯವರಿಂದ ತೆಗೆದುಕೊಂಡು ಬಾಬಾರಿಗೆ ದಕ್ಷಿಣೆ ಕೊಟ್ಟು ದೇವ್ ನಮಸ್ಕರಿಸಿದರು. ಆಗ ಬಾಬಾ, "ದಿನವೂ ಪೋತಿ ಓದು. ವಾಡಾದಲ್ಲಿ ಕೂತು ಭಾಗಶಃ ಅದನ್ನು ಓದು. ನೀನು ಏನು ಓದುತ್ತೀಯೋ, ಅದನ್ನು ಬೇರೆಯವರಿಗೂ ಶ್ರದ್ಧಾ ಭಕ್ತಿಗಳಿಂದ ವಿವರಿಸು. ನಾನು ನಿನಗೆ ಜರತಾರಿ ಶಾಲುವನ್ನು ಹೊದಿಸಬೇಕು ಎಂದುಕೊಳ್ಳುತ್ತಿದ್ದರೆ ನೀನು ಚಿಂದಿ ಕದಿಯುವುದು ಸರಿಯೇ? ಕಳ್ಳತನ ಮಾಡುವುದೇತಕ್ಕೆ?" ಎಂದರು.

ಮಾತುಗಳನ್ನು ಕೇಳಿ, ತಾವು ಬಯಸುತ್ತಿದ್ದುದು ಸಿಕ್ಕಿತು, ಎಂದು ದೇವ್ ಅವರಿಗೆ ಬಹಳ ಆನಂದವಾಯಿತು. ಬಾಬಾ ಅವರನ್ನು ಜ್ಞಾನೇಶ್ವರಿ ಓದು ಎಂದು ಹೇಳಿದ್ದು ಅವರಿಗೆ ಅತೀವ ಸಂತೋಷವನ್ನುಂಟುಮಾಡಿತು. ಅವರು ಬಾಬಾರಿಗೆ ಮತ್ತೆ ನಮಸ್ಕರಿಸಿ, "ನನ್ನನ್ನು ನಿಮ್ಮ ಮಗುವಿನಂತೆ ಕಾಪಾಡಿ. ಜ್ಞಾನೇಶ್ವರಿಯನ್ನು ಸರಿಯಾಗಿ ಓದಲು ನನಗೆ ನೆರವು ನೀಡಿ" ಎಂದು ಬೇಡಿಕೊಂಡರು. ಬಾಬಾರಲ್ಲಿ ಸಂಪೂರ್ಣ ಶರಣಾಗತರಾದ ಅವರಿಗೆ ಈಗ ಚಿಂದಿ ಕಳವು ಎಂದರೇನು ಎಂಬುದು ಅರ್ಥವಾಯಿತು. ಬಾಲಕರಾಮರನ್ನು ತಾವು ಕೇಳಿದ್ದು ಚಿಂದಿ. ಬಾಬಾರ ಕೀರ್ತಿ ಪ್ರತಿಷ್ಠೆಗಳನ್ನು ಬಾಬಾರಿಗೆ ತಿಳಿಯದಂತೆ ಇನ್ನೊಬ್ಬರನ್ನು ಕೇಳುವುದೇ ಕಳ್ಳತನ. ತಾವೇ ಎಲ್ಲ ಪ್ರಶ್ನೆಗಳಿಗೂ ಉತ್ತರ ಕೊಡಲು ಸಿದ್ಧರಾಗಿರುವಾಗ, ಮತ್ತೊಬ್ಬರನ್ನು ಕೇಳುವುದು ಬಾಬಾರಿಗೆ ಇಷ್ಟವಾಗಲಿಲ್ಲ. ಅದಕ್ಕೇ ಬಾಬಾ ಅವರನ್ನು ಬೈದು ಕೂಗಾಡಿದರು. ಆದರೆ ಅದು ನಿಜವಾಗಿಯೂ ಬೈದು ಕೂಗಾಡುವುದಲ್ಲ. ತನಗೆ ಪಾಠಕಲಿಸಲು ಮಾಡಿದ್ದು ಎಂದು ದೇವ್ ಅವರಿಗೆ ಅರ್ಥವಾಯಿತು. ಅವೆಲ್ಲಾ ಬಾಬಾರ ಆಶೀರ್ವಚನಗಳೇ ಎಂದು ತೃಪ್ತರಾದ ಅವರು ಆನಂದದಿಂದ ಮನೆಗೆ ಹಿಂತಿರುಗಿದರು.

ಬಾಬಾರಿಗೆ ಬೇಕಾದದ್ದು ತಮ್ಮ ಭಕ್ತರ ಕ್ಷೇಮ. ಅದಕ್ಕೇ ಅವರು ಯಾವಾಗಲೂ ತಮ್ಮ ಭಕ್ತರ ಮೇಲೆ ಗಮನವಿಟ್ಟುಕೊಂಡೇ ಇರುತ್ತಿದ್ದರು. ದೇವ್ ಅವರ ವಿಷಯದಲ್ಲಿಯೂ ಅದೇ ಆಯಿತು. ವರ್ಷ ಮುಗಿಯುವುದರೊಳಗಾಗಿ ಜ್ಞಾನೇಶ್ವರಿಯ ಓದು ಹೇಗೆ ನಡೆಯುತ್ತಿದೆ ಎಂಬುದನ್ನು ಕಂಡುಕೊಳ್ಳಲು ಬಾಬಾರು ೧೯೧೪ ಏಪ್ರಿಲ್ ೧೪ರಂದು ಗುರುವಾರ ಬೆಳಗಿನ ಜಾವ ದೇವ್ ಅವರ ಕನಸಿನಲ್ಲಿ ಕಾಣಿಸಿಕೊಂಡು, "ಪೋತಿ ಅರ್ಥವಾಯಿತೇ?" ಎಂದು ಕೇಳಿದರು. ದೇವ್, "ಇಲ್ಲ. ಇನ್ನೂ ಅರ್ಥವಾಗಿಲ್ಲ" ಎಂದರು. ಮತ್ತೆ ಬಾಬಾ, "ಹಾಗಾದರೆ ಯಾವಾಗ ಅರ್ಥಮಾಡಿಕೊಳ್ಳುತ್ತೀಯೆ?" ಎಂದರು. ಅದಕ್ಕೆ ದೇವ್, "ಬಾಬಾ ನಿಮ್ಮಕೃಪೆ ಇಲ್ಲದೆ ಅದನ್ನು ಓದುವುದು ಸುಲಭವಾಗುತ್ತಿಲ್ಲ. ಅರ್ಥವಾಗುವುದು ಇನ್ನೂ ಕಷ್ಟವಾಗುತ್ತಿದೆ" ಎಂದರು. ಆಗ ಬಾಬಾ, "ನೀನು ಓದುವಾಗ ಬಹಳ ಆತುರಾತುರವಾಗಿ ಓದುತ್ತೀಯೆ. ನಿಧಾನವಾಗಿ ಓದು. ನನ್ನೆದುರಿಗೆ ಈಗ ಕೂತು ಓದು" ಎಂದರು. "ಏನು ಓದಲಿ" ಎಂದಿದ್ದಕ್ಕೆ "ಆಧ್ಯಾತ್ಮವನ್ನು ಓದು" ಎಂದರು, ದೇವ್ ಒಳಗೆ ಹೋಗಿ ಪುಸ್ತಕವನ್ನು ತರುತ್ತಿರುವಾಗ ಅವರಿಗೆ ಎಚ್ಚರವಾಗಿ ಹೋಯಿತು. ದೇವ್ ಅವರಿಗೆ ಕನಸಿನಿಂದಾದ ಸಂತೋಷ ವರ್ಣಿಸಲಸಾಧ್ಯ!

ಕಾಯಾ ವಾಚಾ ಮನಸಾ ಬಾಬಾರಿಗೆ ನಾವು ಶರಣಾಗತರಾದಾಗ ಅವರು ನಮಗೆ ಅತಿ ಸಣ್ಣ ವಿಷಯದಲ್ಲೂ, ಸರಿಯಾದ ದಾರಿ ತೋರಿಸುತ್ತಾರೆ. ಅವರ ಕೃಪೆ-ಮಾರ್ಗದರ್ಶನವಿದ್ದಾಗ ಭವಸಾಗರವನ್ನು ದಾಟುವುದು ಕಷ್ಟವಾಗುವುದಿಲ್ಲ. ನಮ್ಮ ಎಲ್ಲ ದುಃಖ ದುರಿತಗಳೂ ನಿವಾರಣೆಯಾಗಿ ಸುಖ ಸಂತೋಷಗಳು ನಮ್ಮದಾಗುತ್ತವೆ. ಅವರ ದಿವ್ಯ ಚರಣಾರವಿಂದಗಳಲ್ಲಿ ಪ್ರತಿದಿನವೂ ಭಕ್ತಿ ಶ್ರದ್ಧೆಗಳಿಂದ ನಮಸ್ಕರಿಸುವವರ ಕಷ್ಟಗಳೆಲ್ಲಾ ಪರಿಹಾರವಾಗುತ್ತವೆ. ಸದ್ಗುರು ಮೃತ್ಯುಮುಖದಿಂದಲೂ ನಮ್ಮನ್ನು ಕಾಪಾಡುತ್ತಾನೆ. ಆತನ ಅಪಾರಶಕ್ತಿಯನ್ನು ಇಷ್ಟೆಂದು ಅಳೆಯಲು ಸಾಧ್ಯವಿಲ್ಲ. ಅಂತಹ ಕೃಪಾಸಾಗರ, ಸದ್ಗುರು ಸಾಯಿನಾಥನಿಗೆ ಮತ್ತೊಮ್ಮೆ ಅನನ್ಯ ಭಕ್ತಿಯಿಂದ ನಮಸ್ಕಾರಮಾಡಿ, ನಮ್ಮನ್ನು ಸನ್ಮಾರ್ಗದಲ್ಲಿ ನಡೆಸು ಎಂದು ಬೇಡಿಕೊಳ್ಳೋಣ. ಶ್ರೀ ಸಚ್ಚಿದಾನಂದ ಸದ್ಗುರು ಸಾಯಿನಾಥ ಮಹರಾಜಕೀ ಜೈ.

ಇದರೊಂದಿಗೆ ಬಾಬಾ ಚಿತ್ರಪಟದ ಕಥೆ, ಚಿಂದಿಯ ಕಳವು, ಜ್ಞಾನೇಶ್ವರಿಯ ಓದು ಮತ್ತು ಇತರ ವಿಷಯಗಳನ್ನು ಕುರಿತು ಹೇಳುವ ನಲವತ್ತೊಂದನೆಯ ಅಧ್ಯಾಯ ಮುಗಿಯಿತು. ಮುಂದಿನ ಅಧ್ಯಾಯದಲ್ಲಿ ಹೇಮಾಡ್ ಪಂತ್ ಬಾಬಾರ ಮಹಾಸಮಾಧಿ ಇತ್ಯಾದಿ ವಿಷಯಗಳನ್ನು ಹೇಳುತ್ತಾರೆ.

||ಸದ್ಗುರು ಶ್ರೀ ಸಾಯಿನಾಥಾರ್ಪಣಮಸ್ತು||ಶುಭಂ ಭವತು||
||ಓಂ ಶಾಂತಿಃ ಶಾಂತಿಃ ಶಾಂತಿಃ||


No comments:

Post a Comment