||ಶ್ರೀ ಸಾಯಿ ಸಚ್ಚರಿತ್ರೆ||
||ನಲವತ್ತಾರನೆಯ ಅಧ್ಯಾಯ||
||ಬಾಬಾರ ಗಯಾಯಾತ್ರೆ ಮತ್ತು ಎರಡು ಮೇಕೆಗಳ ಕಥೆ||
ಶ್ರೀ ಗಣೇಶಾಯ ನಮಃ ಶ್ರೀ ಸರಸ್ವತಯೇ ನಮಃ
ಶ್ರೀ ವೆಂಕಟೇಶಾಯ ನಮಃ ಶ್ರೀ ಸಾಯಿನಾಥಾಯ ನಮಃ
ಶ್ರೀ ಸದ್ಗುರುಭ್ಯೋನ್ನಮಃ
||ನಲವತ್ತಾರನೆಯ ಅಧ್ಯಾಯ||
||ಬಾಬಾರ ಗಯಾಯಾತ್ರೆ ಮತ್ತು ಎರಡು ಮೇಕೆಗಳ ಕಥೆ||
ಶ್ರೀ ಗಣೇಶಾಯ ನಮಃ ಶ್ರೀ ಸರಸ್ವತಯೇ ನಮಃ
ಶ್ರೀ ವೆಂಕಟೇಶಾಯ ನಮಃ ಶ್ರೀ ಸಾಯಿನಾಥಾಯ ನಮಃ
ಶ್ರೀ ಸದ್ಗುರುಭ್ಯೋನ್ನಮಃ
ಈ ಅಧ್ಯಾಯದಲ್ಲಿ ಹೇಮಾಡ್ ಪಂತ್, ಬಾಬಾರ ಗಯಾ ಯಾತ್ರೆ, ಎರಡು ಮೇಕೆಗಳ ಕಥೆ ಇತ್ಯಾದಿ ವಿಷಯಗಳನ್ನು ಕುರಿತು ಹೇಳುತ್ತಾರೆ.
ಸದ್ಗುರು ಸಾಯಿ
"ಹೇ ಸಾಯಿ, ನಿನ್ನ ಆ ದಿವ್ಯ ಪಾದಗಳನ್ನು ನೆನಸುವುದೇ ಆನಂದ. ಈ ಲೌಕಿಕ ಪ್ರಪಂಚದ ಭಯಗಳನ್ನು ನಿವಾರಿಸುವ ಆ ಪಾದಗಳ ದರ್ಶನವೇ ಪರಮಾನಂದ. ನಿನ್ನಿಂದಲೇ ನಮ್ಮ ಕರ್ಮ ಬಂಧಗಳೆಲ್ಲವೂ ತೊಲಗುತ್ತವೆ. ಈಗ ನಿನ್ನ ಸಗುಣ ರೂಪವನ್ನು ಭಕ್ತರು ಕಾಣಲಾರದೇ ಹೋದರೂ, ಕಾಣುತ್ತಿರುವ ನಿನ್ನ ಮೂರ್ತಿಯ ಆ ದಿವ್ಯ ಪಾದಾಭಿವಂದನ ಮಾಡುವವರಿಗೆ ನೀನು ಅದೇ ಅನುಭವವನ್ನು ನೀಡುತ್ತೀಯೆ. ನಿನ್ನ ಭಕ್ತರು ಎಲ್ಲೇ ಇರಲಿ, ಅವರನ್ನು ನಿನ್ನ ಅದೃಶ್ಯ ಶಕ್ತಿಯಿಂದ, ನಿನ್ನೆಡೆಗೆ ಸೆಳೆದುಕೊಳ್ಳುತ್ತೀಯೆ. ಅವರನ್ನು ತಾಯಿಯಂತೆ ನೋಡಿಕೊಳ್ಳುತ್ತೀಯೆ. ನೀನು ಎಲ್ಲಿದ್ದೀಯೆ ಎಂಬುದು ನಿನ್ನ ಭಕ್ತರಿಗೆ ತಿಳಿಯದಿದ್ದರೂ, ನಿನ್ನ ಅಭಯ ಹಸ್ತ ಅವರ ತಲೆಯ ಮೇಲೆ ಸದಾಕಾಲವೂ ಇದೆ ಎಂಬುದನ್ನು ಅವರು ಅನುಭವದಿಂದ ಕಂಡುಕೊಳ್ಳುತ್ತಿದ್ದಾರೆ. ನಿನ್ನ ಕೃಪಾದೃಷ್ಟಿಯೇ ಅವರಿಗೆ ಯಾವಾಗಲೂ ರಕ್ಷಾಕವಚ, ವಿದ್ಯಾವಂತರಾದ ಜನರೂ ಕೂಡಾ, ಅಹಂಕಾರದ ಮುದ್ದೆಗಳಾಗಿ ಈ ಭವಸಾಗರವೆಂಬ ಸುಳಿಯಲ್ಲಿ ಸಿಕ್ಕಿಹಾಕಿಕೊಂಡು ಒದ್ದಾಡುತ್ತಾರೆ. ಆದರೆ ಅವರು ನಿನ್ನನ್ನು ಆರ್ತರಾಗಿ ಪ್ರಾರ್ಥಿಸಿದಾಗ, ನಿನ್ನ ಅಪಾರಶಕ್ತಿಯಿಂದ ಅವರನ್ನು ಆ ಸುಳಿಯಿಂದ ಪಾರುಮಾಡಿ ರಕ್ಷಿಸುತ್ತೀಯೆ. ಪರದೆಯ ಹಿಂದೆ ನಿಂತು ನೀನೇ ಎಲ್ಲವನ್ನೂ ಮಾಡುತ್ತಿದ್ದರೂ, ಅದರಲ್ಲಿ ನಿನಗೆ ಏನೂ ಸಂಬಂಧವಿಲ್ಲದಂತೆ ತೋರಿಸಿಕೊಳ್ಳುತ್ತೀಯೆ. ನಿನ್ನನ್ನು ಯಾರೂ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ನಿನ್ನಲ್ಲಿ ಸಂಪೂರ್ಣ ಶರಣಾಗತಿಯೊಂದನ್ನು ಬಿಟ್ಟರೆ ನಮ್ಮ ಒಳಿತಿಗೆ ನಮಗೆ ಬೇರೆ ಇನ್ನಾವ ದಾರಿಯೂ ಇಲ್ಲ. ನಿನ್ನ ನಾಮ ಸ್ಮರಣೆಯೇ ನಮ್ಮ ಪಾಪನಾಶನಕ್ಕೆ ಮದ್ದು. ಆಶಾರಹಿತರಾಗಿ ನಿನ್ನ ಸನಿಹಕ್ಕೆ ಬಂದವರಿಗೆ ಮುಕ್ತಿಯನ್ನು ದಯಪಾಲಿಸುತ್ತೀಯೆ. ಸದಾ ನಿನ್ನ ನಾಮ ಜಪ, ಸ್ಮರಣೆ ಮಾಡುವವರ ರಜಸ್ಸು ತಮಸ್ಸುಗಳು ನಾಶವಾಗಿ ಅವರ ಸಾತ್ವಿಕ ಭಾವ ವೃದ್ಧಿಯಾಗುತ್ತದೆ. ಅದರಿಂದ ವಿವೇಕ ವೈರಾಗ್ಯ ಜ್ಞಾನಗಳು ವೃದ್ಧಿಯಾಗುತ್ತವೆ. ಅದರಿಂದ ಗುರುವಿನೊಡನೆ ಒಂದಾದ ಅನುಭವಗಳು ಬರುತ್ತವೆ. ಇದೆಲ್ಲದರ ಫಲ, ಮನಸ್ಸು ನಿರ್ಮಲವಾಗಿ ಶಾಂತಿಯಿಂದ ತುಂಬಿ ಹೋಗುತ್ತದೆ.
ಬಾಬಾ ತಮ್ಮ ಭಕ್ತರೊಡನೆ ಸರ್ವಕಾಲದಲ್ಲೂ, ಸರ್ವ ದೇಶಗಳಲ್ಲೂ, ಅವರು ಎಲ್ಲೇ ಇರಲಿ, ಏನೇ ಮಾಡುತ್ತಿರಲಿ, ಅವರೊಡನೆ ಇರುತ್ತಾರೆ. ಭಕ್ತರು ಶಿರಡಿಯಿಂದ ಬೇರೆಡೆಗೆ ಹೋದಾಗ, ಅವರಿಗಿಂತ ಮುಂಚೆಯೇ ಬಾಬಾ ಅಲ್ಲಿಗೆ ಹೋಗಿ, ತಾವು ಅಲ್ಲಿ ಇದ್ದೇವೆ ಎಂಬುದನ್ನು ಭಕ್ತರಿಗೆ ಅರಿವು ಮಾಡಿಕೊಡುತ್ತಾರೆ. ಅಂತಹ ಒಂದು ಲೀಲಾ ಪ್ರಸಂಗವನ್ನು ನೋಡೋಣ.
ಬಾಬಾರ ಗಯಾ ಯಾತ್ರೆ
ಕಾಕಾ ಸಾಹೇಬರು, ಬಾಬಾರ ಬಳಿ ಬಂದ ಸ್ವಲ್ಪ ಕಾಲದಮೇಲೆ, ಅವರ ಹಿರಿಯ ಮಗನಿಗೆ ನಾಗಪುರದಲ್ಲಿ ಮುಂಜಿ ಮಾಡಲು ನಿಶ್ಚಯಿಸಿದರು. ಅದೇ ಸಮಯಕ್ಕೆ ನಾನಾ ಸಾಹೇಬ್ ಚಾಂದೋರ್ಕರ್ ಸಹ ಗ್ವಾಲಿಯರ್ನಲ್ಲಿ ತಮ್ಮ ಹಿರಿಯ ಮಗನ ಮದುವೆ ಮಾಡಬೇಕೆಂದು ನಿಶ್ಚಯಿಸಿಕೊಂಡರು. ಇಬ್ಬರೂ ಶಿರಡಿಗೆ ಬಂದು ಬಾಬಾರು ತಮ್ಮ ಮನೆಯ ಸಮಾರಂಭಕ್ಕೆ ಬರಬೇಕೆಂದು ಕೋರಿದರು. ಬಾಬಾ ತಮ್ಮ ಪರವಾಗಿ ಶ್ಯಾಮಾರನ್ನು ಕರೆದುಕೊಂಡು ಹೋಗಲು ಹೇಳಿದರು. ಆದರೆ ಅವರು ಬಾಬಾರೇ ಸ್ವತಃ ಬರಬೇಕೆಂದು ಬಲವಂತ ಮಾಡಿದಾಗ ಬಾಬಾ, "ನೀವು ಶ್ಯಾಮ್ಯಾನನ್ನು ಕರೆದುಕೊಂಡು ಹೋಗಿ. ನಾನು ಕಾಶಿ ಪ್ರಯಾಗಗಳ ಯಾತ್ರೆ ಮಾಡಿಕೊಂಡು ಶ್ಯಾಮಾನಿಗಿಂತ ಮುಂಚೆ ಬರುತ್ತೇನೆ" ಎಂದು ಹೇಳಿದರು.
ಶ್ಯಾಮಾ ಮಸೀದಿಗೆ ಬಂದು, ಬಾಬಾರಿಗೆ ನಮಸ್ಕರಿಸಿ, ನಾಗಪುರ, ಗ್ವಾಲಿಯರ್ಗಳಲ್ಲಿನ ಸಮಾರಂಭಗಳನ್ನು ಮುಗಿಸಿ, ಅಲ್ಲಿಂದ ಕಾಶಿ ಗಯಾ ಯಾತ್ರೆಮಾಡಿ ಬರಲು, ಅನುಮತಿ ಬೇಡಿದರು. ಅನುಮತಿ ಪಡೆದು, ಶ್ಯಾಮಾ ೨೫ ಫೆಬ್ರುವರಿ ೧೯೧೨ರಂದು ಟಾಂಗಾದಲ್ಲಿ ಕೋಪರಗಾಂವ್ಗೆ ಹೊರಟರು. ದಾರಿಯಲ್ಲಿ ಅಪ್ಪಾ ಕೋತೆ ಭೇಟಿಯಾದರು. ಶ್ಯಾಮಾರ ಪ್ರಯಾಣದ ವಿಷಯ ಕೇಳಿ, ಅಪ್ಪಾ ಕೋತೆ, ತಾನು ಎಲ್ಲಿಗೋ ಹೊರಟಿದ್ದುದನ್ನು ಬಿಟ್ಟು, ಶ್ಯಾಮಾರ ಜೊತೆಯಲ್ಲಿ ತಾವೂ ಹೊರಟರು. ಅವರಿಬ್ಬರೂ ಮೊದಲು ನಾಗಪುರಕ್ಕೆ ಹೋಗಿ ಅಲ್ಲಿ ಕಾಕಾ ಸಾಹೇಬರ ಮಗನ ಮುಂಜಿಯ ಸಮಾರಂಭದಲ್ಲಿ ಭಾಗಿಗಳಾದರು. ಅಲ್ಲಿಂದ ಹೊರಡುವಾಗ ಕಾಕಾಸಾಹೇಬರು ಅವರಿಗೆ ಪ್ರಯಾಣದ ಖರ್ಚಿಗೆಂದು ೨೦೦ ರೂಪಾಯಿಗಳನ್ನು ಕೊಟ್ಟರು. ಅವರಿಬ್ಬರೂ ಗ್ವಾಲಿಯರ್ಗೆ ಚಾಂದೋರ್ಕರರ ಮಗನ ಮದುವೆಗೆ ಹೋದರು. ಬಹಳ ಅದ್ಧೂರಿಯಾಗಿ ನಡೆದ ಆ ಸಮಾರಂಭವನ್ನೂ ಮುಗಿಸಿ ಹೊರಡುವಾಗ, ಚಾಂದೋರ್ಕರರು, ಅವರ ಸಂಬಂಧಿ ಜಾತಾರ್ ಇಬ್ಬರೂ, ಅವರಿಗೆ ೧೦೦ ರೂಪಾಯಿಗಳನ್ನು ಬೇರೆಬೇರೆಯಾಗಿ ಕೊಟ್ಟರು.
ಅಲ್ಲಿಂದ ಶ್ಯಾಮಾ ಮತ್ತು ಅಪ್ಪಾ ಇಬ್ಬರೂ ಕಾಶಿಗೆ ಹೋದರು. ಜಾತಾರ್ ಅವರ ಸುಂದರವಾದ ಲಕ್ಷ್ಮೀನಾರಾಯಣ ಮಂದಿರದಲ್ಲಿ ಅವರಿಬ್ಬರೂ ವಸತಿ ಮಾಡಿದರು. ಕಾಶಿಯಲ್ಲಿ ೨ ತಿಂಗಳಿದ್ದು ಅಲ್ಲಿಂದ ಅವರು ಅಯೋಧ್ಯೆಗೆ ಹೋದರು. ಅಲ್ಲಿ ಜಾತಾರರ ಮೇನೇಜರ್ ಅವರನ್ನು ಸ್ವಾಗತಿಸಿ, ಅವರಿಗೆ ರಾಮ ಮಂದಿರದಲ್ಲಿ, ಎಲ್ಲ ಅನುಕೂಲಗಳನ್ನೂ ಮಾಡಿಕೊಟ್ಟರು. ಅವರಿಬ್ಬರೂ ಅಲ್ಲಿ ೨೧ ದಿನಗಳಿದ್ದು, ಅಲ್ಲಿಂದ ಗಯಾಕ್ಕೆ ಹೊರಟರು. ಅವರು ಪ್ರಯಾಣದಲ್ಲಿದ್ದಾಗ ಗಯಾದಲ್ಲಿ ಪ್ಲೇಗ್ ಇದೆ ಎಂದು ತಿಳಿಯಿತು. ಆ ವಾರ್ತೆಯಿಂದ ಅವರ ಮನಸ್ಸಿಗೆ ಸ್ವಲ್ಪ ಇರುಸುಮುರುಸಾದರೂ, ಬಾಬಾ ಎಲ್ಲ ಕಡೆಯಲ್ಲೂ, ಯಾವಾಗಲೂ ತಮ್ಮ ಜೊತೆ ಇದ್ದಾರೆಂಬ ದೃಢ ನಂಬಿಕೆಯಿಂದ, ಸಮಾಧಾನಗೊಂಡು ಪ್ರಯಾಣ ಮುಂದುವರೆಸಿ, ಗಯಾ ರೈಲು ನಿಲ್ದಾಣದಲ್ಲಿ ಬಂದಿಳಿದು, ಅಲ್ಲಿನ ಧರ್ಮಶಾಲೆಯೊದರಲ್ಲಿ ವಸತಿ ಮಾಡಿದರು. ಬೆಳಗ್ಗೆ ಗಯಾಗೆ ಬರುವ ಪ್ರಯಾಣಿಕರ ಬೇಕು ಬೇಡಗಳನ್ನು ನೋಡಿಕೊಳ್ಳುವ ಪಂಡಾ ಒಬ್ಬ ಬಂದು, "ಮಿಕ್ಕವರೆಲ್ಲರೂ ಆಗಲೇ ಹೊರಟಿದ್ದಾರೆ, ನೀವೂ ತಕ್ಷಣ ಹೊರಡಿ" ಎಂದ. ಶ್ಯಾಮಾ ಅವನನ್ನು ಗಯಾದಲ್ಲಿ ಪ್ಲೇಗ್ ಇದೆಯೇ ಎಂದು ಕೇಳಿದರು. ಅದಕ್ಕೆ ಅವನು, "ಇಲ್ಲ. ನೀವು ನನ್ನ ಮನೆಗೆ ಯಾವ ಸಂಕೋಚವೂ ಇಲ್ಲದೆ ಬಂದು ಇರಬಹುದು. ನಿಜವನ್ನು ಅಲ್ಲಿ ನೀವೇ ತಿಳಿದುಕೊಳ್ಳಿ" ಎಂದ. ಅವನೊಡನೆ ಅವನ ಮನೆಗೆ ಹೋದರು. ಅದು, ಅಲ್ಲಿ ಬರುವ ಅನೇಕ ಯಾತ್ರಿಗಳಿಗೆ ಬಹಳ ಅನುಕೂಲವಾಗಿದ್ದಂತಹ ದೊಡ್ಡ ಬಂಗಲೆ. ಶ್ಯಾಮಾರಿಗೆ ಈ ಏರ್ಪಾಡಿನಿಂದ ಬಹಳ ಸಂತೋಷವಾಯಿತು. ಅವರು ಅಲ್ಲಿ ಮಧ್ಯದ ಹಾಲಿನಲ್ಲಿ ಕಾಲಿಡುತ್ತಲೇ ಎದುರಿಗೆ ಕಂಡ ಚಿತ್ರಪಟವನ್ನು ನೋಡಿ ಆಶ್ಚರ್ಯಚಕಿತರಾದರು. ಆ ಚಿತ್ರಪಟ ಬಾಬಾರದು. ಅವರು ತನ್ನನ್ನು ನೋಡಿ ಮುಗುಳ್ನಗುತ್ತಿರುವಂತೆ ಕಾಣುತ್ತಿದೆ. "ಶ್ಯಾಮಾನಿಗಿಂತ ಮುಂಚೆಯೇ ಇರುತ್ತೇನೆ" ಎಂಬ ಬಾಬಾರ ಮಾತುಗಳು ಅವರಿಗೆ ತಕ್ಷಣವೇ ನೆನಪಿಗೆ ಬಂತು. ಕಣ್ಣು ತುಂಬಿ, ಅಶೃ ಧಾರೆಯಾಗಿ ಹರಿಯಿತು. ಗಂಟಲು ಗದ್ಗದವಾಯಿತು. ಚಿತ್ರವನ್ನೇ ನೋಡುತ್ತಾ ಅಳುತ್ತಾ ನಿಂತುಬಿಟ್ಟರು.
ಈ ಸ್ಥಿತಿಯಲ್ಲಿ ಅವರನ್ನು ಕಂಡ ಪಂಡಾ, ಶ್ಯಾಮಾ, ಪ್ಲೇಗ್ ಹೆದರಿಕೆಯಿಂದ ಅಳುತ್ತಿದ್ದಾರೆ ಎಂದುಕೊಂಡು, ಅವರ ಬಳಿಗೆ ಹೋದಾಗ, ಶ್ಯಾಮಾ ಅವನನ್ನು, "ನಿನಗೆ ಈ ಚಿತ್ರಪಟ ಎಲ್ಲಿ ಸಿಕ್ಕಿತು?" ಎಂದು ಕೇಳಿದರು. ಅದಕ್ಕೆ ಅವನು, "ನನಗೆ ಮನ್ಮಾಡ್, ಪುಣತಾಂಬೆ ಗಳಲ್ಲಿ ೨೦೦-೩೦೦ ಜನ ನೌಕರರಿದ್ದಾರೆ. ಅವರು ಆ ಜಾಗಗಳಿಂದ ಗಯಾಗೆ ಬರುವ ಯಾತ್ರಿಕರಿಗೆ ಬೇಕಾದ ಸವಲತ್ತುಗಳನ್ನು ಏರ್ಪಾಡು ಮಾಡಿಕೊಡುತ್ತಾರೆ. ಅವರಿಂದ ಶಿರಡಿಯ ಬಾಬಾರ ಬಗ್ಗೆ ಬಹಳವಾಗಿ ಕೇಳಿದ್ದೆ. ೧೨ವರ್ಷಗಳ ಕೆಳಗೆ ನಾನು ಅಲ್ಲಿ ಬಂದಿದ್ದಾಗ ಶಿರಡಿಗೆ ಹೋಗಿ ಬಾಬಾರ ದರ್ಶನ ಮಾಡಿದೆ. ಅಲ್ಲಿ ಬಾಬಾರ ಸನ್ನಿಹಿತ ಭಕ್ತ, ಶ್ಯಾಮಾರ ಭೇಟಿಯಾಯಿತು. ಶ್ಯಾಮಾರ ಮನೆಯಲ್ಲಿದ್ದ ಈ ಬಾಬಾರ ಚಿತ್ರಪಟ ನನ್ನನ್ನು ಬಹುವಾಗಿ ಆಕರ್ಷಿಸಿತು. ಬಾಬಾರ ಅನುಮತಿಯಿಂದ ಶ್ಯಾಮಾ ಅದನ್ನು ನನಗೆ ಕೊಟ್ಟರು" ಎಂದು ವಿವರಿಸಿದ. ಅದನ್ನು ಕೇಳಿದ ಶ್ಯಾಮಾರಿಗೆ ಹಿಂದಿನದೆಲ್ಲವೂ ನೆನಪಿಗೆ ಬಂತು. ಪಂಡಾಗೂ, ಎದುರಿಗೆ ತನ್ನ ಅಥಿತಿಯಾಗಿ ನಿಂತಿರುವವರು ತನಗೆ ಚಿತ್ರಪಟವನ್ನು ಕೊಟ್ಟ ಆ ಶ್ಯಾಮಾರೇ ಎಂದು ತಿಳಿಯಿತು. ಇಬ್ಬರೂ, ಸಂತೋಷದಿಂದ, ಹಿಂದಿನದೆಲ್ಲಾ ನೆನಸಿಕೊಳ್ಳುತ್ತಾ, ಪ್ರೀತಿ ವಿಶ್ವಾಸಗಳಿಂದ ಮಾತನಾಡುತ್ತಾ ಕಾಲಕಳೆದರು. ಪಂಡಾ ಅಲ್ಲಿನ ಒಬ್ಬ ದೊಡ್ಡ ಶ್ರೀಮಂತ. ಅವನು ಶ್ಯಾಮಾರನ್ನು ಮಹಾರಾಜರಂತೆ ನೋಡಿಕೊಂಡ. ಶ್ಯಾಮಾರನ್ನು ಆನೆಯಮೇಲೆ ಅಂಬಾರಿಯಲ್ಲಿ ಕೂಡಿಸಿ, ತಾನೊಂದು ಪಲ್ಲಕ್ಕಿಯಲ್ಲಿ ಕುಳಿತು ಸುತ್ತಾಡಿಸಿದ. ಅವರಿಬ್ಬರಿಗೂ ಬೇಕಾದ ಎಲ್ಲ ಅನುಕೂಲಗಳನ್ನೂ ಮಾಡಿಕೊಟ್ಟು, ಅವರು ಅಲ್ಲಿದ್ದಷ್ಟು ಕಾಲವೂ, ಸುಖ ಸಂತೋಷಗಳಿಂದ ಇರುವಂತೆ ನೋಡಿಕೊಂಡ. ಶ್ಯಾಮಾ ಅಪ್ಪಾ ಇಬ್ಬರೂ ಗಯಾದಲ್ಲಿ ನಾಲ್ಕಾರು ದಿನಗಳಿದ್ದು, ಶಿರಡಿಗೆ ಹಿಂತಿರುಗಿದರು.
ಮೇಲೆ ಹೇಳಿದ ಕಥೆ, ಬಾಬಾ ತಮ್ಮ ಭಕ್ತರನ್ನು ಪ್ರೀತಿಯಿಂದ ಯಾವ ರೀತಿಯಲ್ಲಿ ಕಾಪಾಡುತ್ತಿದ್ದರು ಎಂಬುದನ್ನು ತೋರಿಸುತ್ತದೆ. ಅವರೇ ಹೇಳಿದಂತೆ ಶ್ಯಾಮಾರಿಗಿಂತ ಮುಂಚೆಯೇ ಅವರು ಗಯಾದಲ್ಲಿದ್ದರು. ಪ್ಲೇಗ್ ಜಾಡ್ಯದ ಹೆದರಿಕೆಯಿದ್ದರೂ ತಮ್ಮ ಭಕ್ತರಿಗೆ ಯಾವುದೇ ರೀತಿಯ ಅನಾನುಕೂಲಗಳಾಗದಂತೆ ಕಾಪಾಡಿದರು. ಅಷ್ಟೇ ಅಲ್ಲ, ಅಲ್ಲಿ ಅವರು ರಾಜ ಅಥಿತಿಗಳಂತೆ ಸಂತೋಷವಾಗಿ ಕಾಲಕಳೆಯುವಂತೆ ನೋಡಿಕೊಂಡರು.
ಮುಂದಿನ ಕಥೆ, ಬಾಬಾ ಮನುಷ್ಯರನ್ನು ಮಾತ್ರವೇ ಅಲ್ಲ, ಇತರ ಪ್ರಾಣಿಗಳನ್ನೂ ಹೇಗೆ ಪ್ರೀತಿಯಿಂದ ನೋಡುತ್ತಿದ್ದರು ಎಂಬುದನ್ನು ತೋರಿಸುತ್ತದೆ. ಬಾಬಾರದು ಸರ್ವಜೀವಪ್ರೀತಿ.
ಎರಡು ಮೇಕೆಗಳ ಕಥೆ
ಒಂದು ಸಲ, ಲೆಂಡಿಬಾಗ್ನಿಂದ ಹಿಂತಿರುಗಿ ಬರುತ್ತಿದ್ದಾಗ ಬಾಬಾ ಮೇಕೆಗಳ ಮಂದೆಯೊಂದನ್ನು ಕಂಡರು. ಅವುಗಳಲ್ಲಿ ಎರಡು ಮೇಕೆಗಳು ಬಾಬಾರ ಕಡೆ ದೈನ್ಯದಿಂದ ನೋಡಿದವು. ಅವುಗಳನ್ನು ನೋಡಿದ ಬಾಬಾ, ಅವುಗಳ ಬಳಿಗೆ ಹೋಗಿ ಅವನ್ನು ಮುದ್ದಾಡಿ ಎರಡನ್ನೂ ೩೨ ರೂಪಾಯಿಗಳಿಗೆ ಕೊಂಡುಕೊಂಡರು. ಅದನ್ನು ಕಂಡ ಅಲ್ಲಿದ್ದ ಭಕ್ತರಿಗೆ ಆಘಾತವಾಯಿತು. ಎರಡೂ ಮೇಕೆಗಳ ಬೆಲೆ ೪ ರೂಪಾಯಿಗಳು, ಹೆಚ್ಚೆಂದರೆ ೮ ರೂಪಾಯಿಗಳು ಮಾತ್ರ ಆಗಬಹುದು. ಬಾಬಾರು ಈ ವ್ಯವಹಾರದಲ್ಲಿ ಮೋಸ ಹೋದರೆಂದು ಎಲ್ಲರೂ ಭಾವಿಸಿದರು. ಬಾಬಾರು ಏನೂ ಮಾತನಾಡದೆ ಸುಮ್ಮನಿದ್ದರು. ಆದರೆ ತಾತ್ಯಾ ಮತ್ತು ಶ್ಯಾಮಾ ಇಬ್ಬರೂ, ಬಾಬಾರನ್ನು ಈ ಬಗ್ಗೆ ಪ್ರಶ್ನಿಸಿದಾಗ, ಬಾಬಾ, "ಹಣ ಕೂಡಿಡಲು ನನಗೇನು ಹೆಂಡತಿ ಮಕ್ಕಳು ಇದ್ದಾರೆಯೇ?" ಎಂದು ಹೇಳಿ, ೪ ಸೇರು ಕಾಳು ತರಿಸಿ, ಅದನ್ನು ಆ ಮೇಕೆಗಳಿಗೆ ಪ್ರೀತಿ ವಿಶ್ವಾಸಗಳಿಂದ ತಿನ್ನಿಸಿ, ಅವನ್ನು ಮತ್ತೆ ಮಂದೆಯ ಯಜಮಾನನಿಗೆ ಹಿಂತಿರುಗಿಸಿದರು.
ಎಲ್ಲಾ ಆದಮೇಲೆ ಬಾಬಾ ಆ ಮೇಕೆಗಳ ಕಥೆಯನ್ನು ಹೀಗೆ ಹೇಳಿದರು, "ಶ್ಯಾಮ್ಯಾ, ತಾತ್ಯಾ, ನೀವಿಬ್ಬರೂ ಈ ವ್ಯವಹಾರದಲ್ಲಿ ನಾನು ಮೋಸ ಹೋಗಿದ್ದೇನೆಂದು ತಿಳಿದುಕೊಂಡಿದ್ದೀರಿ. ಆ ಮೇಕೆಗಳ ಕಥೆಯನ್ನು ಕೇಳಿ. ಅವೆರಡೂ ಹಿಂದಿನ ಜನ್ಮದಲ್ಲಿ ಅಣ್ಣತಮ್ಮಂದಿರು. ನನಗೆ ಬಹಳ ಹತ್ತಿರದ ಸ್ನೇಹಿತರಾಗಿದ್ದರು. ಸಣ್ಣ ವಯಸ್ಸಿನಲ್ಲಿ ಇಬ್ಬರೂ ಬಹಳ ಅನ್ಯೋನ್ಯವಾಗಿದ್ದರು. ವಯಸ್ಸು ಬಂದಂತೆಲ್ಲಾ ಆ ಅನ್ಯೋನ್ಯತೆ ಕಡಮೆಯಾಗಿ, ಕೊನೆಗೆ ಅದು ದ್ವೇಷವಾಗಿ ಪರಿಣಮಿಸಿತು. ಅವರಿಬ್ಬರೂ ಬದ್ಧ ದ್ವೇಷಿಗಳಾದರು. ದೊಡ್ಡವನು ಸೋಮಾರಿ. ಚಟುವಟಿಕೆಯ ಚಿಕ್ಕವನು, ಕಷ್ಟಪಟ್ಟು ಕೆಲಸ ಮಾಡಿ ಬಹಳ ಹಣ ಸಂಪಾದಿಸಿದ. ಅದನ್ನು ನೋಡಿದ ದೊಡ್ದವನು ಹೊಟ್ಟೆಕಿಚ್ಚಿನಿಂದ ಚಿಕ್ಕವನ ಹಣವನ್ನೆಲ್ಲಾ ಹೊಡೆದುಹಾಕಲು ಅನೇಕ ಸಲ ಪ್ರಯತ್ನಿಸಿದ. ಯಾವುದೂ ಸಫಲವಾಗಲಿಲ್ಲ. ಕೊನೆಗೆ ಅವನನ್ನು ಕೊಂದು, ಅವನ ಹಣವನ್ನು ದೋಚಲು ಪ್ರಯತ್ನಿಸಿದ. ಇದರಿಂದಾಗಿ ಇಬ್ಬರೂ ಕಟ್ಟಾ ದ್ವೇಷಿಗಳಾದರು. ಒಂದುದಿನ ದೊಡ್ಡವನು ಚಿಕ್ಕವನ ತಲೆಯಮೇಲೆ ಭಾರಿ ಹೊಡೆತ ಹೊಡೆದ. ಚಿಕ್ಕವನು ಗೊಡಲಿಯಿಂದ ದೊಡ್ಡವನಿಗೆ ಹಿಂತಿರುಗಿ ಹೊಡೆದ. ಆ ಹೊಡೆತಗಳಿಂದ ಇಬ್ಬರೂ ಸ್ಥಳದಲ್ಲಿಯೇ ಸತ್ತು ಬಿದ್ದರು. ಆ ಕರ್ಮಗಳಿಂದ, ಅವರು ಈಗ ಮೇಕೆಗಳಾಗಿ ಹುಟ್ಟಿದ್ದಾರೆ. ಮಂದೆಯಲ್ಲಿ ಅವನ್ನು ಕಂಡಾಗ, ಅವುಗಳ ಹಿಂದಿನ ಜನ್ಮ ನನಗೆ ಜ್ಞಾಪಕಕ್ಕೆ ಬಂದು, ಅವುಗಳ ಮೇಲೆ ಕರುಣೆ ಹುಟ್ಟಿ, ಅವಕ್ಕೆ ಸ್ವಲ್ಪ ಆಹಾರ ತಿನ್ನಿಸಿ, ಸ್ವಲ್ಪ ಶಾಂತಿ ಸಮಾಧಾನಗಳನ್ನು ಕೊಡಬೇಕೆಂದುಕೊಂಡೆ. ಅದಕ್ಕೇ ಅವನ್ನು ನೀವು ಬಹಳ ಹೆಚ್ಚು ಎಂದುಕೊಂಡ ಹಣ ಕೊಟ್ಟು ಕೊಂಡೆ. ನಿಮಗೆ ಅದು ಸರಿಯಲ್ಲ ಎನ್ನಿಸಿದ್ದರಿಂದ, ಅವನ್ನು ಮತ್ತೆ ಅವುಗಳ ಯಜಮಾನನಿಗೆ ಹಿಂತಿರುಗಿಸಿದೆ” ಎಂದರು. ಬಾಬಾರಿಗೆ ಮೇಕೆಗಳೇ ಅಲ್ಲ, ಎಲ್ಲ ಪ್ರಾಣಿಗಳಲ್ಲೂ ಅಪಾರವಾದ ಪ್ರೇಮವಿತ್ತು.
ಇದರೊಂದಿಗೆ ಬಾಬಾರ ಗಯಾ ಯಾತ್ರೆ, ಎರಡು ಮೇಕೆಗಳ ಕಥೆ ಮತ್ತು ಇತರ ವಿಷಯಗಳನ್ನು ಕುರಿತು ಹೇಳುವ ನಲವತ್ತಾರನೆಯ ಅಧ್ಯಾಯ ಮುಗಿಯಿತು. ಮುಂದಿನ ಅಧ್ಯಾಯದಲ್ಲಿ ಹೇಮಾಡ್ ಪಂತ್, ವೀರಭದ್ರಪ್ಪ ಮತ್ತು ಚೆನ್ನಬಸಪ್ಪ ಅವರ ಕಥೆ ಇತ್ಯಾದಿ ವಿಷಯಗಳನ್ನು ಹೇಳುತ್ತಾರೆ.
||ಸದ್ಗುರು ಶ್ರೀ ಸಾಯಿನಾಥಾರ್ಪಣಮಸ್ತು||ಶುಭಂ ಭವತು||
||ಓಂ ಶಾಂತಿಃ ಶಾಂತಿಃ ಶಾಂತಿಃ||
||ಓಂ ಶಾಂತಿಃ ಶಾಂತಿಃ ಶಾಂತಿಃ||
No comments:
Post a Comment