||ಶ್ರೀ ಸಾಯಿ ಸಚ್ಚರಿತ್ರೆ||
||ನಲವತ್ತೆರಡನೆಯ ಅಧ್ಯಾಯ||
||ಮಹಾಸಮಾಧಿ||
ಶ್ರೀ ಗಣೇಶಾಯ ನಮಃ ಶ್ರೀ ಸರಸ್ವತಯೇ ನಮಃ
ಶ್ರೀ ವೆಂಕಟೇಶಾಯ ನಮಃ ಶ್ರೀ ಸಾಯಿನಾಥಾಯ ನಮಃ
ಶ್ರೀ ಸದ್ಗುರುಭ್ಯೋನ್ನಮಃ
||ನಲವತ್ತೆರಡನೆಯ ಅಧ್ಯಾಯ||
||ಮಹಾಸಮಾಧಿ||
ಶ್ರೀ ಗಣೇಶಾಯ ನಮಃ ಶ್ರೀ ಸರಸ್ವತಯೇ ನಮಃ
ಶ್ರೀ ವೆಂಕಟೇಶಾಯ ನಮಃ ಶ್ರೀ ಸಾಯಿನಾಥಾಯ ನಮಃ
ಶ್ರೀ ಸದ್ಗುರುಭ್ಯೋನ್ನಮಃ
ಈ ಅಧ್ಯಾಯದಲ್ಲಿ ಹೇಮಾಡ್ ಪಂತ್, ಬಾಬಾರ ಮಹಾಸಮಾಧಿಯ ವಿಷಯಗಳನ್ನು ಕುರಿತು ಹೇಳುತ್ತಾರೆ.
ಸದ್ಗುರು ಸಾಯಿ
ಹೇಮಾಡ್ ಪಂತರು ಈ ಅಧ್ಯಾಯವನ್ನು ಡಾ. ಪಂಡಿತರು ಬಾಬಾರನ್ನು ಹೇಗೆ ತಮ್ಮದೇ ಆದ ರೀತಿಯಲ್ಲಿ ಪೂಜಿಸಿದರು ಎಂಬ ವರ್ಣನೆಯಿಂದ ಆರಂಭಿಸಿದ್ದಾರೆ.
ತಾತ್ಯಾ ಸಾಹೇಬ್ ನೂಲ್ಕರರ ಸ್ನೇಹಿತರಾದ ಡಾ. ಪಂಡಿತರು ಒಂದು ಸಲ ಶಿರಡಿಗೆ ಬಂದರು. ದಾದಾಭಟ್ಟರ ಜೊತೆಯಲ್ಲಿ ಮಸೀದಿಗೆ ಹೋಗಿ ಬಾಬಾರ ದರ್ಶನ ಮಾಡಿದರು. ತಮ್ಮ ಸರದಿ ಬಂದಾಗ, ಅವರು ಬಾಬಾರ ಪೂಜೆ ಮಾಡಿ ದಾದಾಭಟ್ಟರ ತಟ್ಟೆಯಿಂದ ಗಂಧ ತೆಗೆದುಕೊಂಡು ಬಾಬಾರ ಹಣೆಯಲ್ಲಿ ತ್ರಿಪುಂಡ್ರವನ್ನು ಇಟ್ಟರು. ಬಾಬಾ ಸಾಧಾರಣವಾಗಿ ಯಾರನ್ನೂ ತಮ್ಮ ಹಣೆ ಮುಟ್ಟಲು ಬಿಡುತ್ತಿರಲಿಲ. ಮಹಲ್ಸಪತಿ ಕೂಡ ಅವರ ಕಂಠಕ್ಕೆ ಚಂದನ ಹಚ್ಚುತ್ತಿದ್ದರೇ ವಿನಃ ಹಣೆಯನ್ನು ಮುಟ್ಟುತ್ತಲೂ ಇರಲಿಲ್ಲ. ಆದರೆ, ಪಂಡಿತರು ಹಣೆಯಲ್ಲಿ ತ್ರಿಪುಂಡ್ರವನ್ನಿಟ್ಟಾಗ ಬಾಬಾ ಏನೂ ಮಾತನಾಡದೆ, ಮೌನವಾಗಿ ಗಂಧ ಹಚ್ಚಿಸಿಕೊಂಡರು. ಇದನ್ನು ಕಂಡು ಅಲ್ಲಿದ್ದವರೆಲ್ಲರಿಗೂ ಪರಮಾಶ್ಚರ್ಯವಾಯಿತು. ಅದೇಕೆ ಹಾಗೆ ಮಾಡಿದಿರಿ ಎಂದು ಕೇಳಿದ್ದಕ್ಕೆ ಬಾಬಾ, "ಅವನು ನನ್ನನ್ನು ತನ್ನ ಗುರುವೆಂದೇ ಭಾವಿಸಿ, ಅವರನ್ನು ಪೂಜೆಮಾಡುವಂತೆ ನನ್ನನ್ನು ಪೂಜೆ ಮಾಡಿಕೊಂಡ. ಅದಕ್ಕೇ ಸುಮ್ಮನಿದ್ದೆ" ಎಂದರು. ನಂತರ ಪಂಡಿತರು ಅದು ನಿಜವೆಂದು ಹೇಳಿದರು. ಹಾಗೆ ಬಾಬಾ ತಮ್ಮ ಭಕ್ತರು ತಮ್ಮ ರೀತಿಯಲ್ಲೇ ಪೂಜೆಮಾಡಿಕೊಳ್ಳಲು ಬಿಡುತ್ತಿದ್ದರು.
ಸೀಮೋಲ್ಲಂಘನ
ಪ್ರತಿ ವರ್ಷ ವಿಜಯದಶಮಿಯ ದಿನ ಶಿರಡಿಯ ಜನ ಸೀಮೋಲ್ಲಂಘನವನ್ನು ಆಚರಿಸುತ್ತಿದ್ದರು. ಅಂದು, ತಮ್ಮ ಊರಿನ ಸೀಮೆಯನ್ನು ದಾಟಿ ಪರಊರಿಗೆ ಹೋಗಿ, ಅಲ್ಲಿನ ಜನರಲ್ಲಿ ಕಲೆತು, ಸ್ವಲ್ಪ ಕಾಲ ಕಳೆದು ಹಿಂತಿರುಗುತ್ತಿದ್ದರು. ೧೯೧೬ರಲ್ಲಿ ಹಾಗೆ ಅವರು ಸೀಮೋಲ್ಲಂಘನ ಮುಗಿಸಿ ವಾಪಸ್ಸು ಬರುತ್ತಿದ್ದಾಗ, ಅವರು ಊಹೆಯೂ ಮಾಡಲಾಗದಂತಹ ಒಂದು ಅನುಭವವಾಯಿತು. ಎಲ್ಲರೂ ಮಸೀದಿಯ ಹತ್ತಿರಕ್ಕೆ ಬಂದಾಗ ಇದ್ದಕ್ಕಿದ್ದಹಾಗೇ, ಬಾಬಾ ತಲೆಗೆ ಸುತ್ತಿದ್ದ ಬಟ್ಟೆ, ಕಫ್ನಿ, ಲಂಗೋಟಿಗಳನ್ನು ಬಿಚ್ಚಿ ಧುನಿಗೆ ಹಾಕಿ, ಕೋಪದಿಂದ ಕಣ್ಣು ಕೆಂಪಗೆ ಮಾಡಿಕೊಂಡು, ದಿಗಂಬರರಾಗಿ ನಿಂತು, ಗಟ್ಟಿಯಾಗಿ ಅರಚಲು ಮೊದಲುಮಾಡಿದರು, "ನೋಡಿ. ಈಗ ನೋಡಿ ನನ್ನನ್ನು. ನಾನು ಹಿಂದುವೊ ಮುಸ್ಲಿಮನೋ ಈಗ ನೋಡಿ ನಿರ್ಧರಿಸಿಕೊಳ್ಳಿ" ಎನ್ನುತ್ತಿದ್ದರು. ಅವರನ್ನು ಹಾಗೆ ಕಂಡವರೆಲ್ಲಾ ದಿಗ್ಭ್ರಾಂತರಾಗಿಹೋದರು. ಅವರ ಹತ್ತಿರ ಹೋಗಲು ಯಾರಿಗೂ ಧೈರ್ಯವಿರಲಿಲ್ಲ. ಎಲ್ಲರೂ ಭಯದಿಂದ ನಡುಗಿಹೋದರು. ಕುಷ್ಟು ರೋಗಿ ಭಕ್ತ ಭಾಗೋಜಿ ಧೈರ್ಯಮಾಡಿ, ಅವರ ಹತ್ತಿರಕ್ಕೆ ಹೋಗಿ, ಅವರಿಗೆ ಲಂಗೋಟಿ ಹಾಕಿ, "ಇದೇನು ಬಾಬಾ? ಇಂದು ಸೀಮೋಲ್ಲಂಘನವಲ್ಲವೇ?" ಎಂದು ಕೇಳಿದ. ಅದಕ್ಕೆ ಬಾಬಾ ತಮ್ಮ ಸಟ್ಕಾವನ್ನು ಎತ್ತಿ ಹೊಡೆಯುತ್ತಾ, "ಇದೇ ನನ್ನ ಸೀಮೋಲ್ಲಂಘನದ ದಿನ" ಎಂದು ಕೋಪದಿಂದ ಗರ್ಜಿಸಿದರು. ಅವರು ಬಹಳ ಹೊತ್ತು ಶಾಂತರಾಗಲಿಲ್ಲ. ಅಂದು ಚಾವಡಿ ಉತ್ಸವ ನಡೆಯುವುದೋ ಇಲ್ಲವೋ ಎಂದು ಎಲ್ಲರೂ ಆತಂಕಗೊಂಡಿದ್ದರು. ಸುಮಾರು ಹನ್ನೊಂದು ಗಂಟೆಯವೇಳೆಗೆ ಬಾಬಾ ಶಾಂತರಾದರು. ಆಗ ಅವರಿಗೆ ಎಂದಿನಂತೆ ಕಫ್ನಿ ತೊಡಿಸಿ, ಉತ್ಸವಕ್ಕೆ ಸಿದ್ಧತೆಗಳನ್ನು ಮಾಡಿಕೊಂಡು, ಚಾವಡಿ ಉತ್ಸವವನ್ನು ಮುಗಿಸಿದರು. ಇದೆಲ್ಲಾ ಆಗುವ ವೇಳೆಗೆ, ರಾತ್ರಿ ಸುಮಾರು ಹೊತ್ತಾಗಿ, ಎಲ್ಲರೂ ಮನೆಗೆ ಹೋಗುವ ಆತುರದಲ್ಲಿ ಬಾಬಾರು ಅಶಾಂತರಾಗಿದ್ದಾಗ ಹೇಳಿದ್ದ ಮಾತುಗಳನ್ನು ಮರೆತರು.
ರಾಮಚಂದ್ರ ಪಾಟೀಲರ ಕಥೆ
ಈ ಘಟನೆಯಾದ ಸ್ವಲ್ಪ ದಿನಗಳ ಮೇಲೆ, ಶಿರಡಿಯ ಮುಖ್ಯಸ್ಥರಾದ ರಾಮಚಂದ್ರ ಪಾಟೀಲ್ ತೀವ್ರವಾದ ಖಾಯಿಲೆಯಿಂದ ನರಳುತ್ತಿದ್ದರು. ಯಾವ ಚಿಕಿತ್ಸೆಯೂ ಅವರಿಗೆ ಫಲಕೊಡಲಿಲ್ಲ. ಕ್ರಮಕ್ರಮವಾಗಿ ಅವರು ಕ್ಷೀಣಿಸುತ್ತಾ ಹೋದರು. ಕೊನೆಗೆ ಅವರಿಗೆ, ಸಾವು ಸಮೀಪದಲ್ಲಿದೆ ಎಂಬುದು ಅರ್ಥವಾಯಿತು. ಆದರೆ ಎಂದು ಆ ಬಿಡುಗಡೆ ಬರುತ್ತದೆ ಎಂಬುದು ತಿಳಿಯಲಿಲ್ಲ. ಒಂದು ದಿನ ಅವರ ಕನಸಿನಲ್ಲಿ, ಬಾಬಾ ಅವರ ತಲೆದಿಂಬಿನ ಬಳಿ ಕಾಣಿಸಿಕೊಂಡರು. ಪಾಟೀಲ್ ಧೈರ್ಯಮಾಡಿ, ತಮ್ಮ ಶಕ್ತಿಯನ್ನೆಲ್ಲಾ ಕೂಡಿಸಿ, ಬಾಬಾರಿಗೆ ನಮಸ್ಕಾರ ಮಾಡಿ, "ಬಾಬಾ, ಇನ್ನು ನನಗೆ ಉಳಿಯುವ ಆಸೆಯಿಲ್ಲ. ನನ್ನ ಕೊನೆ ಯಾವಾಗ ಎಂಬುದನ್ನು ಹೇಳಿ" ಎಂದರು. ಅದಕ್ಕೆ ಆ ದಯಾಪೂರ್ಣ ಬಾಬಾ, "ಚಿಂತೆ ಮಾಡಬೇಡ. ನಿನ್ನ ಸಾವಿನ ಚೀಟಿಯನ್ನು ಹಿಂದಕ್ಕೆ ತೆಗೆದುಕೊಂಡಿದ್ದೇನೆ. ನೀನು ಬೇಗ ಗುಣಮುಖನಾಗುತ್ತೀಯೆ. ಆದರೆ ನನಗೆ ತಾತ್ಯಾನದೇ ಚಿಂತೆಯಾಗಿದೆ. ಅವನು ೧೯೧೮ರ ವಿಜಯದಶಮಿಯ ದಿನ ಮರಣಿಸುತ್ತಾನೆ. ಇದನ್ನು ಯಾರಿಗೂ ಹೇಳಬೇಡ. ಅವನಿಗೆ ತಿಳಿದರೆ ಅವನು ಚಿಂತಾಕ್ರಾಂತನಾಗುತ್ತಾನೆ" ಎಂದರು. ಸ್ವಲ್ಪ ದಿನಗಳಲ್ಲೇ ಪಾಟೀಲ್ ಗುಣ ಹೊಂದಿದರು. ಆದರೆ ಬಾಬಾ ಹೇಳಿದ ಮಾತುಗಳು ಅವರನ್ನು ಚಿಂತೆಗೀಡುಮಾಡಿದವು. ಅವರಿಗೆ ತಾತ್ಯಾ ಎಂದರೆ ಬಹಳ ಪ್ರೀತಿ. ಬಾಬಾ ಹೇಳಿದ ನಿಜವನ್ನು ಯಾರಿಗೂ ಹೇಳುವಂತಿಲ್ಲ. ತನ್ನಲ್ಲಿಯೇ ಇಟ್ಟುಕೊಳ್ಳುವ ಹಾಗೂ ಇಲ್ಲ. ಈ ಉಭಯ ಸಂಕಟದಲ್ಲಿದ್ದ ಆತ ಅದನ್ನು ಬಾಲಾಶಿಂಪಿಗೆ ಮಾತ್ರ ಹೇಳಿದರು. ಇಬ್ಬರೂ ಭಯ, ಆತಂಕಗಳಿಂದ ದಿನಗಳನ್ನೆಣಿಸುತ್ತಾ ಕಾಲ ಕಳೆಯುತ್ತಿದ್ದರು.
ಕಾಲ ಯಾರಿಗೂ ಕಾಯುವುದಿಲ್ಲ. ೧೯೧೮ ಬಂದೇ ಬಂತು. ಭಾದ್ರಪದಮಾಸವೂ ಕಳೆಯಿತು. ಬಾಬಾರ ಭವಿಷ್ಯದ್ವಾಣಿಯಂತೆ ತಾತ್ಯಾ ಖಾಯಿಲೆಯಿಂದ ಮಲಗಿದರು. ಚಿಕಿತ್ಸೆಗಳು ಯಾವುವೂ ಫಲವಾಗಲಿಲ್ಲ. ದಿನೇದಿನೇ ಕ್ಷೀಣಿಸುತ್ತಾ ಬಂದ ಅವರು, ಮಸೀದಿಗೂ ಹೋಗಲಾರದಷ್ಟು ಅಶಕ್ತರಾದರು. ವಿಚಿತ್ರವೋ ಎಂಬಂತೆ ಬಾಬಾರಿಗೂ ಅದೇ ಸಮಯದಲ್ಲಿ ಮೈ ಸರಿಯಿಲ್ಲದೆ ಹೋಯಿತು. ಅವರೂ ಜ್ವರದಿಂದ ಮಲಗಿದರು. ತಾತ್ಯಾರ ಖಾಯಿಲೆ ಬಹಳ ಹೆಚ್ಚಾಗಿ ಅವರು ಹಾಸಿಗೆ ಬಿಟ್ಟೇಳಲೂ ಸಾಧ್ಯವಾಗದೇ ಹೋಯಿತು. ಅತ್ತಿತ್ತ ಹೊರಳಾಡುವುದೂ ಅಸಾಧ್ಯವಾಯಿತು. ಇಷ್ಟೆಲ್ಲಾ ಆದರೂ, ತಾನು ಯಾರನ್ನು ತನ್ನ ದೇವರೆಂದು ಮಾತ್ರವಲ್ಲ ತನ್ನ ಎಲ್ಲವೂ ಅವರೇ ಎಂದು ಧೃಢವಾಗಿ ನಂಬಿದ್ದರೋ, ಆ ಬಾಬಾರ ಸ್ಮರಣೆಯನ್ನು ಮಾತ್ರ ತಾತ್ಯಾ ಬಿಡಲಿಲ್ಲ. ಸದಾಕಾಲವೂ ಏಕಾಗ್ರತೆಯಿಂದ ಬಾಬಾರ ನಾಮ ಸ್ಮರಣೆ ಮಾಡುತ್ತಿದ್ದರು. ಮಸೀದಿಯಲ್ಲಿ ಬಾಬಾರ ಪರಿಸ್ಥಿತಿಯೂ ಅಷ್ಟೇನೂ ಉತ್ತೇಜನಕರವಾಗಿರಲಿಲ್ಲ. ಅವರಿಗೂ ಜ್ವರ ಜಾಸ್ತಿಯಾಗುತ್ತಿತ್ತು. ರಾಮಚಂದ್ರ ಪಾಟೀಲ್ ಮತ್ತು ಬಾಳಾಶಿಂಪಿ ಇಬ್ಬರೂ ನಿದ್ದೆಯಿಲ್ಲದೆ ರಾತ್ರಿಗಳನ್ನು ಕಳೆಯುತ್ತಿದ್ದರು. ಅವರಿಗೆ ಸದಾಕಾಲವೂ ತಾತ್ಯಾದೇ ಯೋಚನೆ. ವಿಜಯದಶಮಿ ದಿನ ಹತ್ತಿರ ಬಂದಂತೆಲ್ಲಾ ತಾತ್ಯಾರ ಆರೋಗ್ಯ ಕ್ಷೀಣಿಸುತ್ತಾ ಬಂದು ಅವರಿಗೆ ಯಾವಾಗ ಸಾವು ಬರುವುದೋ ಎಂದು ಅವರು ಎದುರು ನೋಡುತ್ತಿದ್ದರು.
ವಿಜಯದಶಮಿಯೂ ಬಂದೇ ಬಂತು. ಬಾಬಾರ ಭಕ್ತರನೇಕರು ತಾತ್ಯಾರ ಬಳಿಯಲ್ಲಿಯೇ ಇದ್ದರು. ಅವರ ನಾಡಿ ಬಡಿತ ನಿಂತೇಹೋಗಿದೆ ಎನ್ನುವ ಸ್ಥಿತಿಯಲ್ಲಿತ್ತು. ಅಂದು ಅಕ್ಟೋಬರ್ ೧೯೧೮, ಮಂಗಳವಾರ ಮಧ್ಯಾಹ್ನ ಸುಮಾರು ಎರಡು ಗಂಟೆಯ ಸಮಯ. ಆಗ ಪವಾಡ ಸದೃಶವಾದ ಘಟನೆಯೊಂದು ನಡೆಯಿತು. ಇದ್ದಕ್ಕಿದ್ದಹಾಗೇ ತಾತ್ಯಾರ ಆರೋಗ್ಯ ಕುದುರುತ್ತಾ ಬಂತು. ನಾಡಿ ಮಿಡಿತ ಸ್ಥಿಮಿತಕ್ಕೆ ಬಂದು ಎಂದಿನಂತಾಯಿತು. ಎಲ್ಲರೂ ಸಮಾಧಾನದ ನಿಟ್ಟುಸಿರು ಬಿಟ್ಟರು. ತಾತ್ಯಾ ಮೃತ್ಯುವಿನ ಮುಖದಿಂದ ಪಾರಾಗಿ ಆರೋಗ್ಯದ ಕಡೆ ಹೆಜ್ಜೆಯಿಟ್ಟರು.
ಇದು ಸಂತೋಷದ ವಿಷಯವಾದರೆ ಜನರಿಗೆ ಮತ್ತೊಂದು ಆಘಾತ ಕಾದಿತ್ತು. ಸ್ವಲ್ಪ ಹೊತ್ತಿನಲ್ಲೇ ಅವರಿಗೆ "ಬಾಬಾ ತಮ್ಮ ಕೊನೆಯುಸಿರೆಳೆದರು" ಎಂಬ ಘೋರವಾದ ವಾರ್ತೆ ಬಂತು. ಅದನ್ನು ಕೇಳಿದ ಇಡೀ ಶಿರಡಿಯೇ ದುಃಖದಲ್ಲಿ ಮುಳುಗಿಹೋಯಿತು. ಅನೇಕರು ತಾತ್ಯಾಗೋಸ್ಕರ, ಬಾಬಾ ತಮ್ಮ ಪ್ರಾಣವನ್ನೇ ಕೊಟ್ಟರು ಎಂದು ಭಾವಿಸಿದರು.
ಮಾರನೆಯ ದಿನ ಬೆಳಗ್ಗೆ ಪಂಡರಪುರದಲ್ಲಿದ್ದ ದಾಸಗಣು ಮಹರಾಜರಿಗೆ, ಕನಸಿನಲ್ಲಿ ಬಾಬಾ ಕಾಣಿಸಿಕೊಂಡು, "ಮಸೀದಿ ಕುಸಿಯಿತು. ಶಿರಡಿಯ ತೇಲಿ ವಣಿಗಳೆಲ್ಲಾ ನನಗೆ ಬಹಳ ತೊಂದರೆ ಕೊಟ್ಟರು. ಶಿರಡಿಯನ್ನು ಬಿಟ್ಟಿದ್ದೇನೆ. ನಿನಗೆ ಹೇಳಲು ಬಂದೆ. ತಕ್ಷಣವೇ ನೀನು ಶಿರಡಿಗೆ ಹೋಗಿ ನನ್ನನ್ನು ಬಕುಳ ಪುಷ್ಪಗಳಿಂದ ಮುಚ್ಚು" ಎಂದು ಹೇಳಿದರು. ಸ್ವಲ್ಪ ಸಮಯದಲ್ಲಿಯೇ ಅವರಿಗೆ ಶಿರಡಿಯಿಂದ ಬಂದ ಪತ್ರಮುಖೇನವೂ ಸಮಾಚಾರ ತಿಳಿಯಿತು. ಆತ ಕೂಡಲೇ ಶಿರಡಿ ಸೇರಿ, ಬಾಬಾರ ಸಮಾಧಿಯನ್ನು ಬಕುಳ ಪುಷ್ಪಗಳಿಂದ ಮುಚ್ಚಿ, ಹತ್ತಿರದಲ್ಲೇ ಕುಳಿತು ದಿನಪೂರ್ತಿ ಭಜನೆ ಕೀರ್ತನೆಗಳನ್ನು ಮಾಡುತ್ತಾ ಕಳೆದರು. ಸುಂದರವಾದ ಹರಿನಾಮ ತುಂಬಿದ ಹೂಮಾಲೆಯೊಂದನ್ನು ತಯಾರಿಸಿ ಸಮಾಧಿಯ ಮೇಲಿಟ್ಟರು. ಅಂದು ಅವರು ಅಲ್ಲಿ ಅನ್ನದಾನದ ವ್ಯವಸ್ಥೆಯನ್ನೂ ಮಾಡಿದರು.
ಲಕ್ಷ್ಮೀಬಾಯಿಯ ಕಥೆ
ಬಾಬಾರ ಅನಾರೋಗ್ಯ ಸ್ಥಿತಿ ಸಣ್ಣ ಜ್ವರದಿಂದ ಆರಂಭವಾಯಿತು. ಅಂದು ೨೮ ಸೆಪ್ಟೆಂಬರ್ ೧೯೧೮. ಜ್ವರ ಬಿಟ್ಟಮೇಲೂ, ಬಾಬಾ ಆಹಾರ ತೆಗೆದುಕೊಳ್ಳುವುದನ್ನು ನಿಲ್ಲಿಸಿದರು. ಅದರಿಂದಾಗಿ ಅವರು ದಿನೇದಿನೇ ಕ್ಷೀಣಿಸಿ ನಿಶ್ಶಕ್ತರಾಗುತ್ತಿದ್ದರು. ಹಾಗೆ ಅವರು ೧೭ ದಿನ ನರಳಿದರು. ೧೭ನೆಯ ದಿನವೇ ವಿಜಯದಶಮಿ. ಹಿಂದೂಗಳಿಗೆ ಬಹಳ ಪವಿತ್ರವಾದ ದಿನ. ಆ ದಿನವೇ ಬಾಬಾ ತಮ್ಮ ದೇಹತ್ಯಾಗ ಮಾಡಲು ನಿರ್ಧರಿಸಿದ್ದು. ಅವರ ದೇಹ ನರಳುತ್ತಿದ್ದರೂ ಅವರು ಮಾತ್ರ ಒಳಗೆ ಎಚ್ಚರವಾಗಿಯೇ ಇದ್ದರು. ಕೊನೆಯ ಘಳಿಗೆಯಲ್ಲಿ ಎದ್ದು ನೆಟ್ಟಗೆ ಕುಳಿತರು. ಅಲ್ಲಿದ್ದ ಕೆಲವೇ ಕೆಲವು ಜನ ಅಪಾಯ ಕಳೆಯಿತು ಎಂದು ಹರ್ಷಗೊಂಡರು. ಬಾಬಾ ತಮ್ಮ ಜೇಬಿಗೆ ಕೈಹಾಕಿ ಮೊದಲು ಐದು, ಮತ್ತೆ ನಾಲ್ಕು, ಒಟ್ಟು ಒಂಭತ್ತು ರೂಪಾಯಿ ನಾಣ್ಯಗಳನ್ನು ತೆಗೆದು ಲಕ್ಷ್ಮೀಬಾಯಿಗೆ ಕೊಟ್ಟರು.
ಲಕ್ಷ್ಮೀಬಾಯಿ ಶ್ರೀಮಂತ ಹೆಂಗಸು. ಒಳ್ಳೆಯ ಮನಸ್ಸಿನವರು. ಬಾಬಾರಲ್ಲಿ ಗಾಢವಾದ ಪ್ರೀತಿಯನ್ನಿಟ್ಟಿದ್ದವರು. ಹಗಲೂ ರಾತ್ರಿ ಮಸೀದಿಯಲ್ಲಿ ಬಾಬಾರ ಸೇವೆ ಮಾಡುತ್ತಿದ್ದರು. ರಾತ್ರಿ ಹೊತ್ತಿನಲ್ಲಿ ಮಹಲ್ಸಪತಿ, ತಾತ್ಯಾ, ಲಕ್ಶ್ಮೀಬಾಯಿ ಮೂವರನ್ನು ಬಿಟ್ಟು, ಬಾಬಾ ಇನ್ನಾರನ್ನೂ ಮಸೀದಿಯಲ್ಲಿ ಇರಲು ಬಿಡುತ್ತಿರಲಿಲ್ಲ. ಒಂದು ದಿನ ಸಾಯಂಕಾಲ ಲಕ್ಷ್ಮೀಬಾಯಿ ಬಂದು ಬಾಬಾರಿಗೆ ನಮಸ್ಕರಿಸಿದಾಗ ಬಾಬಾ, "ಲಕ್ಷ್ಮಿ, ನನಗೆ ಬಹಳ ಹಸಿವಾಗಿದೆ" ಎಂದರು. ಆಕೆ, "ಬಾಬಾ ಸ್ವಲ್ಪ ಹೊತ್ತು ತಡೆದುಕೊಳ್ಳಿ. ಮನೆಗೆ ಹೋಗಿ ಭಾಕರಿ ಪಲ್ಯ ತರುತ್ತೇನೆ" ಎಂದು ಹೇಳಿ ತಕ್ಷಣವೇ ಮನೆಗೆ ಹೋಗಿ ಭಾಕರಿ ಪಲ್ಯಗಳನ್ನು ಮಾಡಿಕೊಂಡು ಬಂದು ಬಾಬಾರಿಗೆ ಕೊಟ್ಟರು. ಬಾಬಾ ಅದನ್ನು ಅಲ್ಲಿ ಮಲಗಿದ್ದ ನಾಯಿಗೆ ಕೊಟ್ಟರು. ಅದನ್ನು ನೋಡಿದ ಲಕ್ಷ್ಮೀಬಾಯಿ, "ಇದೇನು ಬಾಬಾ? ಏಕೆ ಹೀಗೆ ಮಾಡಿದಿರಿ? ನಾನು ನಿಮಗೋಸ್ಕರ ಬೇಗ ಮನೆಗೆ ಹೋಗಿ ರೊಟ್ಟಿ ಮಾಡಿ ತಂದರೆ ಅದರಲ್ಲಿ ಒಂದು ಚೂರನ್ನಾದರೂ ಮುಟ್ಟದೆ, ನಾಯಿಗೆ ಹಾಕಿದಿರಿ. ನನಗೇಕೆ ಇಲ್ಲದ ತೊಂದರೆ ಕೊಟ್ಟಿರಿ?" ಎಂದು ಆಪಾದಿಸಿದರು. ಅದಕ್ಕೆ ಬಾಬಾ, "ಏಕೆ ನನ್ನನ್ನು ಆಪಾದಿಸುತ್ತಿದ್ದೀಯೆ? ನಾಯಿಯ ಹಸಿವನ್ನು ತೀರಿಸುವುದು ನನ್ನ ಹಸಿವನ್ನು ತೀರಿಸಿದಂತೆಯೇ! ನನ್ನಂತೆಯೇ ನಾಯಿಗೂ ಹಸಿವಿದೆ. ಜೀವಿಗಳು ಬೇರೆ ಬೇರೆಯಾಗಿರಬಹುದು. ಆದರೆ ಹಸಿವು ಎಲ್ಲರಿಗೂ ಒಂದೇ! ಯಾರು ಹಸಿದಿರುವವರಿಗೆ ಅನ್ನವಿಡುತ್ತಾರೋ ಅವರು ನನ್ನ ಸೇವೆ ಮಾಡಿದಂತೆಯೇ! ಇದನ್ನು ಸತ್ಯಸ್ಯ ಸತ್ಯ ಎಂದು ತಿಳಿದುಕೋ" ಎಂದರು.
ಇದು ಬಹಳ ಸಾಧಾರಣವಾದ ಘಟನೆಯಂತೆ ಕಂಡರೂ, ಬಾಬಾ ಇದರಲ್ಲಿ ಒಂದು ಆಧ್ಯಾತ್ಮಿಕ ಸತ್ಯವನ್ನು ವಿವರಿಸಿ, ಅದನ್ನು ಕಾರ್ಯತಃ ಮಾಡಿ ತೋರಿಸಿದರು. ಆ ದಿನದಿಂದ ಲಕ್ಷ್ಮೀಬಾಯಿ ಪ್ರತಿದಿನವೂ ಸಾಯಂಕಾಲ ಬಾಬಾರಿಗೆ ಪ್ರೀತಿವಿಶ್ವಾಸಗಳಿಂದ ರೊಟ್ಟಿ ಹಾಲುಗಳನ್ನು ತಪ್ಪದೇ ತಂದುಕೊಡುತ್ತಿದ್ದರು. ಬಾಬಾ ಅದರಲ್ಲಿ ಸ್ವಲ್ಪ ತಾವು ತಿಂದು ಮಿಕ್ಕಿದ್ದನ್ನು ರಾಧಾಕೃಷ್ಣಮಾಯಿಗೆ ಕಳುಹಿಸುತ್ತಿದ್ದರು. ಆಕೆ ಅದನ್ನು ಬಾಬಾರ ಪ್ರಸಾದವಾಗಿ ಭಾವಿಸಿ ತಿನ್ನುತ್ತಿದ್ದರು.
ಯಾರಾದರೂ ಸರಿ, ತಮಗೆ ಸಲ್ಲಿಸಿದ ಸೇವೆಯನ್ನು ಬಾಬಾ ಎಂದೂ ಮರೆಯುತ್ತಿರಲಿಲ್ಲ. ಅವರೇ ಹೇಳುತ್ತಿದ್ದರು, "ನಾನು ಯಾರಿಂದಲಾದರೂ ಒಂದು ಪಡೆದರೆ ಅದಕ್ಕೆ ಹತ್ತರಷ್ಟು ಅವರಿಗೆ ಕೊಡಬೇಕು." ತಮ್ಮ ದೇಹವನ್ನು ಬಿಡುವಾಗ, ಲಕ್ಷ್ಮೀಬಾಯಿಗೆ ಒಂಭತ್ತು, ಒಂದು ರೂಪಾಯಿ ನಾಣ್ಯಗಳನ್ನು ಕೊಟ್ಟರು. ಆಕೆಗೆ ಹಣದ ಅವಶ್ಯಕತೆಯಿರಲಿಲ್ಲ. ಒಂಭತ್ತು ಎಂಬುದು ನವವಿಧ ಭಕ್ತಿಗೆ ಸಂಕೇತ. ಅದು ಸೀಮೋಲ್ಲಂಘನೆಗಾಗಿ ಕೊಟ್ಟ ದಕ್ಷಿಣೆಯೂ ಆಗಬಹುದು. ಭಾಗವತ ಸ್ಕಂದ ೧೧, ಅಧ್ಯಾಯ ೧೦, ಶ್ಲೋಕ ೬ರಲ್ಲಿ ಹೇಳಿದಂತೆ, ನಿಜವಾದ ಶಿಷ್ಯನಿಗೆ ಇರಬೇಕಾದ ಒಂಭತ್ತು ಗುಣ (ಲಕ್ಷಣ) ಗಳ ಸಂಕೇತವೂ ಆಗಬಹುದು. ಆ ಶ್ಲೋಕದಲ್ಲಿಯೂ ಮೊದಲು ಐದು ನಂತರ ನಾಲ್ಕು ಲಕ್ಷಣಗಳನ್ನು ಹೇಳಿದೆ. ಶ್ರೀ ಕೃಷ್ಣ ಉದ್ಧವನಿಗೆ, ಶಿಷ್ಯನಾದವನು ತನ್ನ ಗುರುವಿನಲ್ಲಿ ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ವಿವರಿಸುತ್ತಾ, ಈ ಐದು ಮತ್ತು ನಾಲ್ಕು ಗುಣಗಳನ್ನು ಹೇಳಿದ್ದಾನೆ. ಲಕ್ಷ್ಮೀಬಾಯಿಗೆ ಐದು ಮತ್ತು ನಾಲ್ಕು ನಾಣ್ಯಗಳನ್ನು ಕೊಟ್ಟಾಗ, ಬಾಬಾ ಈ ನವವಿಧ ಭಕ್ತಿಯ ಸೂಚನೆಯನ್ನು ಕೊಟ್ಟಿರಬಹುದು. ಆಕೆಗೆ ಬಹು ಪವಿತ್ರವಾದ ಈ ನಾಣ್ಯಗಳ ಒಡೆತನ, ಬಹಳ ಅಪೂರ್ವವಾದದ್ದು.
ತನ್ನ ಭಕ್ತರ ಮೇಲಿನ ಪ್ರೇಮ, ಕೊನೆಯ ಘಳಿಗೆಯಲ್ಲಿ ತನ್ನನ್ನು ಕಟ್ಟಿಹಾಕಬಾರದೆಂಬ ಉದ್ದೇಶದಿಂದ ಕಾಕಾ ಸಾಹೇಬ್ ದೀಕ್ಷಿತ್, ಬಾಪೂ ಸಾಹೇಬ್ ಬೂಟಿ, ಮುಂತಾದವರೆಲ್ಲರನ್ನೂ ವಾಡಾಕ್ಕೆ ಹೋಗಿ ಊಟ ಮಾಡಿ ಬರುವಂತೆ ಬಾಬಾ ಹೇಳಿದರು. ಬಾಬಾರ ಸ್ಥಿತಿಯನ್ನು ನೋಡಿದ್ದ ಅವರಾರಿಗೂ ಅವರನ್ನು ಬಿಟ್ಟು ಹೋಗಲು ಇಚ್ಚೆಯಿರಲಿಲ್ಲ. ಆದರೂ ಬಾಬಾರ ಆಣತಿ. ಪಾಲಿಸದೇ ಇರಲು ಸಾಧ್ಯವಿಲ್ಲ. ಹಾಗಾಗಿ ಅವರೆಲ್ಲರು ಮನಸ್ಸಿಲ್ಲದ ಮನಸ್ಸಿನಿಂದ ವಾಡಾಕ್ಕೆ ಊಟಕ್ಕೆ ಹೋದರು. ಇನ್ನೂ ಊಟ ಮಾಡುತ್ತಿದ್ದಾಗಲೇ, ಅವರಿಗೆ ಬಾಬಾರ ಸಮಾಧಿಯ ವಾರ್ತೆ ಬಂತು. ತರಾತುರಿಯಿಂದ ಎಲ್ಲರೂ ಎದ್ದು ಕೈತೊಳೆದು ಮಸೀದಿಗೆ ಓಡಿದರು. ಅಲ್ಲಿ ತಮ್ಮ ಪ್ರೇಮ ಪುತ್ಥಳಿಯಾದ ಬಾಬಾ ಶಾಂತರಾಗಿ, ಸೌಮ್ಯರಾಗಿ, ಬಾಯಾಜಿ ಕೋತೆ ತೊಡೆಯಮೇಲೆ ತಲೆಯಿಟ್ಟು ತಮ್ಮ ಅಂತಿಮ ವಿಶ್ರಾಂತಿಯಲ್ಲಿದ್ದರು. ನೆಲದ ಮೇಲೆ ಬಿದ್ದುಹೋಗಿಯಾಗಲೀ, ಹಾಸಿಗೆಯಮೇಲೆ ಮಲಗಿಯಾಗಲೀ ಇರಲಿಲ್ಲ. ಮೌನವಾಗಿ ತಮ್ಮ ಜಾಗದಲ್ಲಿ ಕುಳಿತು ಸ್ವಹಸ್ತದಿಂದ ದಾನಮಾಡುತ್ತಾ ಕೊನೆಯುಸಿರೆಳೆದಿದ್ದರು.
ಸಂತರು ಈ ಪ್ರಪಂಚಕ್ಕೆ ಬರುವುದು ಒಂದು ನಿರ್ದೇಶಿತ ಕಾರ್ಯಕ್ಕಾಗಿ. ಅದನ್ನು ಪೂರಯಿಸಿದ ನಂತರ ಯಾರಿಗೂ ತಿಳಿಯದಂತೆ ಹೇಗೆ ಬಂದರೋ ಅದೇ ರೀತಿಯಲ್ಲಿ ತಮ್ಮ ಸ್ವಧಾಮಕ್ಕೆ ಹಿಂತಿರುಗುತ್ತಾರೆ. ಯಾವ ಬಾಜಾ ಬಜಂತ್ರಿಗಳೂ ಇಲ್ಲದೆ, ಬಾಬಾ ಶಿರಡಿಯಲ್ಲಿ ಪರಕೀಯನಂತೆ ಕಾಲಿಟ್ಟಿದ್ದರು. ಅವರು ಈ ಪ್ರಪಂಚವನ್ನು ಬಿಟ್ಟಾಗಲೂ, ಅವರೊಡನೆ ಬಹಳ ಜನರಿರಲಿಲ್ಲ. ಇರುವವರೆಗೆ ಅವರು ಎಲ್ಲರೊಡನೆ ಇದ್ದಂತೆ ಕಂಡರೂ, ಒಂಟಿಯಾಗಿಯೇ ಇದ್ದರು. ಸಹಾಯವನ್ನು ಕೋರಿದವರಿಗೆ ಸಹಾಯ ಹಸ್ತವನ್ನು ನೀಡುವುದೇ ಅವರ ಕಾರ್ಯ. ಅನೇಕರಿಗೆ ಅನೇಕ ರೀತಿಯ ಸಹಾಯವನ್ನು ನೀಡಿದರೂ ಯಾರಿಂದಲೂ ಏನನ್ನೂ ಅಪೇಕ್ಷಿಸಲಿಲ್ಲ. ಅವರು ಅಪೇಕ್ಷಿಸಿದುದು ಭಕ್ತರ ಪ್ರೀತಿ ವಿಶ್ವಾಸಗಳನ್ನು ಮಾತ್ರ. ಭಕ್ತರಿಂದ ಅವರು ಕೋರಿದ್ದು, ಶ್ರದ್ಧೆ ಸಬೂರಿಗಳನ್ನು ಮಾತ್ರ. ಅವರು ಮನುಷ್ಯ ರೂಪದಲ್ಲಿದ್ದರೂ, ಆ ರೂಪದಿಂದ ಮರೆಯಾದರೂ, ಅವರು ಭಕ್ತರ ಅಭೀಷ್ಟಗಳನ್ನು ತೀರಿಸುತ್ತಲೇ ಇದ್ದಾರೆ. ಇಂತಹ, ಕರುಣಾಸಾಗರ, ಪ್ರೇಮ ಮೂರ್ತಿಗೆ ನಮ್ಮ ಪ್ರೀತಿ ವಿಶ್ವಾಸಗಳು ತುಂಬಿದ ಆತ್ಮ ತರ್ಪಣವನ್ನು ಅರ್ಪಿಸೋಣ. ಶ್ರೀ ಸಚ್ಚಿದಾನಂದ ಸದ್ಗುರು ಶ್ರೀ ಸಾಯಿನಾಥ ಮಹರಾಜಕೀ ಜೈ.
ಇದರೊಂದಿಗೆ ಬಾಬಾರ ಮಹಾಸಮಾಧಿ ಮತ್ತು ಇತರ ವಿಷಯಗಳನ್ನು ಕುರಿತು ಹೇಳುವ ನಲವತ್ತೆರಡನೆಯ ಅಧ್ಯಾಯ ಮುಗಿಯಿತು. ಮುಂದಿನ ಅಧ್ಯಾಯದಲ್ಲಿ ಹೇಮಾಡ್ ಪಂತ್, ಬಾಬಾರ ಮಹಾಸಮಾಧಿಯನ್ನು ಮುಂದುವರೆಸಿ ಹೇಳುತ್ತಾರೆ.
||ಸದ್ಗುರು ಶ್ರೀ ಸಾಯಿನಾಥಾರ್ಪಣಮಸ್ತು||ಶುಭಂ ಭವತು||
||ಓಂ ಶಾಂತಿಃ ಶಾಂತಿಃ ಶಾಂತಿಃ||
||ಓಂ ಶಾಂತಿಃ ಶಾಂತಿಃ ಶಾಂತಿಃ||
No comments:
Post a Comment