||ಶ್ರೀ ಸಾಯಿ ಸಚ್ಚರಿತ್ರೆ||
||ಐವತ್ತೊಂದನೆಯ ಅಧ್ಯಾಯ||
||ಫಲಶೃತಿ||
ಶ್ರೀ ಗಣೇಶಾಯ ನಮಃ ಶ್ರೀ ಸರಸ್ವತಯೇ ನಮಃ
ಶ್ರೀ ವೆಂಕಟೇಶಾಯ ನಮಃ ಶ್ರೀ ಸಾಯಿನಾಥಾಯ ನಮಃ
ಶ್ರೀ ಸದ್ಗುರುಭ್ಯೋನ್ನಮಃ
||ಐವತ್ತೊಂದನೆಯ ಅಧ್ಯಾಯ||
||ಫಲಶೃತಿ||
ಶ್ರೀ ಗಣೇಶಾಯ ನಮಃ ಶ್ರೀ ಸರಸ್ವತಯೇ ನಮಃ
ಶ್ರೀ ವೆಂಕಟೇಶಾಯ ನಮಃ ಶ್ರೀ ಸಾಯಿನಾಥಾಯ ನಮಃ
ಶ್ರೀ ಸದ್ಗುರುಭ್ಯೋನ್ನಮಃ
ಈ ಅಧ್ಯಾಯದಲ್ಲಿ ಹೇಮಾಡ್ ಪಂತ್, ಬಾಬಾರ ಹಿರಿಮೆ, ಫಲಶೃತಿ, ಇತ್ಯಾದಿ ವಿಷಯಗಳನ್ನು ಕುರಿತು ಹೇಳುತ್ತಾರೆ.
ಇದು ಮೂಲ ಮರಾಠಿ ಸಚ್ಚರಿತ್ರೆಯ ಐವತ್ತೆರಡನೆಯ ಅಧ್ಯಾಯ. ಎಲ್ಲ ಆಧ್ಯಾತ್ಮಿಕ ಪುಸ್ತಕಗಳಲ್ಲೂ ಇರುವಂತೆ ಇದರಲ್ಲೂ ಹೇಮಾಡ್ ಪಂತ್ ಈ ಅಧ್ಯಾಯದಲ್ಲಿ ವಿಷಯಸೂಚಿಯನ್ನು ಕೊಡಲು ಇಚ್ಛಿಸಿದ್ದರು. ಆದರೆ ಅವರು ಬರೆದಿಟ್ಟಿದ್ದ ಕಾಗದಗಳೆಲ್ಲವನ್ನೂ ಬಹಳಷ್ಟು ಹುಡುಕಿದರೂ ವಿಷಯಸೂಚಿ ಎಲ್ಲೂ ಕಾಣಲಿಲ್ಲ. ಆಗ ಬಾಬಾರ ಅವಿಚ್ಚಿನ್ನ ಭಕ್ತರೂ, ಅರ್ಹರೂ ಆಗಿದ್ದ, ಥಾಣೆಯ ಮಾಮಲತದಾರರಾದ ಬಿ.ವಿ.ದೇವ್ ಅವರು ಈ ವಿಷಯಸೂಚಿಯನ್ನು ಬರೆದರು. ಆದರೆ ಇತ್ತೀಚಿನ ಅಭ್ಯಾಸದಂತೆ ವಿಷಯಸೂಚಿಯನ್ನು ಪುಸ್ತಕದ ಆರಂಭದಲ್ಲೇ ಕೊಟ್ಟಿರುವುದರಿಂದ ಇಲ್ಲಿ ಮತ್ತೆ ಅದನ್ನು ಹೇಳಿಲ್ಲ. ಈ ಅಧ್ಯಾಯವನ್ನು ಉಪಸಂಹಾರ ಎಂದು ಹೇಳುವುದು ಸಮಂಜಸವಾಗಿ ತೋರುತ್ತದೆ. ಕೊನೆಯ ಅಧ್ಯಾಯವನ್ನು ಪರಿಷ್ಕರಿಸುವುದಕ್ಕೆ ಮುಂಚೆಯೇ ಹೇಮಾಡ್ ಪಂತ್ ಕಾಲವಶರಾದರು. ಹಾಗಾಗಿ ಈ ಅಧ್ಯಾಯವನ್ನು ಅದು ಹೇಗೆ ದೊರೆಯಿತೋ ಹಾಗೆಯೇ ಪ್ರಕಟನಗೊಳಿಸಲಾಗಿದೆ.
ಸದ್ಗುರು ಸಾಯಿ
ಹೇ ಸಾಯಿನಾಥ! ನಿನಗೆ ನಮ್ಮ ಪಾದಾಭಿವಂದನೆಗಳು. ನಮ್ಮನ್ನು ನಿನ್ನ ಉಡಿಯಲ್ಲಿಟ್ಟುಕೊಂಡು ಕಾಪಾಡು. ನೀನೊಬ್ಬನೇ ಈ ಪ್ರಪಂಚಕ್ಕೆಲ್ಲಾ ಆಶ್ರಯದಾತ. ನಾವು ಅನನ್ಯರಾಗಿ ಆ ಸದ್ಗುರುವಿನಲ್ಲಿ ವಿನಯ, ವಿಧೇಯತೆ, ಶ್ರದ್ಧಾ, ಭಕ್ತಿಗಳಿಂದ ಪ್ರಾರ್ಥನೆ ಮಾಡಿಕೊಂಡರೆ, ಅವನು ನಮ್ಮ ಪ್ರಾಪಂಚಿಕ ಆಸೆಗಳನ್ನೆಲ್ಲಾ ನೆರವೇರಿಸಿ, ನಮ್ಮ ಜೀವನದ ಅಂತಿಮ ಗುರಿಗೆ ಸೇರಿಸುತ್ತಾನೆ. ವಿಷಮಗೊಂಡ ಯೋಚನೆಗಳೆಂಬ ದಡಗಳಲ್ಲಿ, ಬಹು ಆಳವಾಗಿ ಬೇರೂರಿದ ಸ್ಥೈರ್ಯವೆಂಬ ಮರವೂ, ಮಾಯಾ ಮೋಹಗಳೆಂಬ ಬಿರುಗಾಳಿಗೆ ಸಿಕ್ಕಿ ಉರುಳಿ ಹೋಗುತ್ತಿದೆ. ಅಹಂಕಾರವೆಂಬ ಬೀಸುಗಾಳಿ, ಕ್ರೋಧ ದ್ವೇಷ ಮುಂತಾದ ಮೊಸಳೆಗಳು ಈಜಾಡುತ್ತಿರುವ ನಮ್ಮ ಹೃದಯ ಸಾಗರದಲ್ಲಿ ದೊಡ್ಡ ದೊಡ್ಡ ಅಲೆಗಳನ್ನು ಎಬ್ಬಿಸುತ್ತಿದೆ. ಆಸೆ, ಪ್ರತ್ಯಾಸೆಗಳೆಂಬ ಸುಳಿಯಲ್ಲಿ ರಾಗ, ದ್ವೇಷ, ಮತ್ಸರ, ಅಸೂಯೆ ಎಂಬ ಮೀನುಗಳು ಆನಂದವಾಗಿ ಓಡಾಡಿಕೊಂಡಿವೆ. ಇಂತಹ ದುಸ್ಸಾಧ್ಯವಾದ ಭಯಂಕರ ಸಮುದ್ರದಲ್ಲಿ ಶ್ರೀ ಸಾಯಿನಾಥನೆಂಬ ಅಂಬಿಗ ನಮಗೆ ದೊರೆತಿದ್ದಾನೆ. ಅದರಿಂದಲೇ ನಮಗೆ ಯಾವ ಭಯವೂ ಇಲ್ಲ. ಅವನನ್ನು ನಂಬಿದವರನ್ನು ಆ ಅಂಬಿಗ ಸದ್ಗುರು, ಈ ಭವಸಾಗರವೆಂಬ ಸಾಗರದಿಂದ, ಅಭಯವೆಂಬ ದೋಣಿಯಲ್ಲಿ ಕೂಡಿಸಿ, ರಕ್ಷಿಸಿ, ಸುಗಮವಾಗಿ ದಡಮುಟ್ಟಿಸುತ್ತಾನೆ.
ಪ್ರಾರ್ಥನೆ
ಶ್ರೀ ಸಚ್ಚಿದಾನಂದ ಸದ್ಗುರು ಸಾಯಿನಾಥ ಮಹಾರಾಜರಿಗೆ ಸಾಷ್ಟಾಂಗ ನಮಸ್ಕಾರಮಾಡಿ, ಅವರ ಪಾದಗಳನ್ನು ಬಿಗಿಯಾಗಿ ಹಿಡಿದು, ಎಲ್ಲ ಭಕ್ತಸಮೂಹಕ್ಕೂ ಶುಭವಾಗಲಿ, ಕ್ಷೇಮವಾಗಲಿ, ಶಾಂತಿ ದೊರೆಯಲಿ ಎಂದು ಅವರನ್ನು ಪ್ರಾರ್ಥಿಸೋಣ. "ಹೇ ಸಾಯಿ! ನಮ್ಮ ಮನಸ್ಸಿನ ಚಂಚಲತೆಯನ್ನು ಹೊರಗಟ್ಟು. ನಮ್ಮನ್ನು ಈ ಪ್ರಾಪಂಚಿಕ ಮೋಹದಿಂದ ಬಿಡುಗಡೆ ಮಾಡು. ನಿನ್ನ ಚರಣಾರವಿಂದಗಳನ್ನು ಬಿಟ್ಟರೆ ನಮಗೆ ಇನ್ನಾವ ಆಸೆಯೂ ಇಲ್ಲದಂತೆ ಮಾಡು. ಈ ನಿನ್ನ ಸಚ್ಚರಿತ್ರೆ ಪ್ರತಿಯೊಬ್ಬರ ಮನೆಯನ್ನೂ ಸೇರಿ, ಅಲ್ಲಿ ಪಠನಮಾಡಲ್ಪಡಲಿ. ಈ ಚರಿತ್ರೆಯನ್ನು ಶ್ರದ್ಧಾಭಕ್ತಿ ಪ್ರೀತಿ, ವಿಶ್ವಾಸಗಳಿಂದ ಓದುವ ಭಕ್ತರೆಲ್ಲರ ದುಃಖ ದುರಿತಗಳು, ಕಷ್ಟಕಾರ್ಪಣ್ಯಗಳು ನಾಶವಾಗಿ, ಅವರಲ್ಲಿ ಸುಖ ಸಂತೊಷ ತೃಪ್ತಿಗಳು ಶಾಶ್ವತವಾಗಿ ನೆಲಸಲಿ."
ಫಲಶೃತಿ
ಭಕ್ತಿ, ಶ್ರದ್ಧೆ, ವಿಶ್ವಾಸ, ಸಹನೆಗಳಿಂದ ಕೂಡಿ ಮಾಡಿದ ಈ ಸದ್ಗ್ರಂಥದ ಪಠನೆಯಿಂದ ಮನೋಭಿಲಾಷೆಗಳು ಪೂರಯಿಸಲ್ಪಡುತ್ತವೆ. ಪವಿತ್ರ ಗೋದಾವರಿಯಲ್ಲಿ ಸ್ನಾನಮಾಡಿ, ಶಿರಡಿಯ ಸಮಾಧಿಮಂದಿರದಲ್ಲಿ ಬಾಬಾರ ಸಮಾಧಿ ದರ್ಶನ ಮಾಡಿಕೊಂಡು, ಈ ಗ್ರಂಥದ ಪಾರಾಯಣ ಮಾಡಿದರೆ ತಾಪತ್ರಯಗಳೆಲ್ಲವೂ ತೀರಿಹೋಗುತ್ತವೆ. ಬಾಬಾರ ಕಥೆಗಳನ್ನು ಮತ್ತೆ ಮತ್ತೆ ಓದುತ್ತಾ, ಮನನ ಮಾಡುತ್ತಾ ಹೋದಂತೆಲ್ಲ, ನಮ್ಮ ಆಧ್ಯಾತ್ಮಿಕ ಪ್ರಗತಿಯ ಕಡೆಗೆ, ನಮಗೆ ಅರಿವಾಗದಂತೆಯೇ, ಹೆಜ್ಜೆಯಿಡುತ್ತಾ ಹೋಗುತ್ತೇವೆ. ನಿರಂತರವಾಗಿ ಓದುತ್ತಾ, ಅದರಲ್ಲಿ ಹೇಳಿರುವ ವಿಷಯಗಳನ್ನು ಅಧಿಷ್ಠಾನದಲ್ಲಿ ತರಲು ಪ್ರಯತ್ನಿಸುತ್ತಾ ಹೋದರೆ, ನಮ್ಮ ಪಾಪಗಳೆಲ್ಲಾ ನಾಶವಾಗಿ, ನಾವು ನಮ್ಮ ಗುರಿಯತ್ತ ಹೋಗುವುದಕ್ಕೆ ಅನುಕೂಲವಾಗುತ್ತದೆ. ಬಾಬಾರ ಕಥೆಗಳನ್ನು ಓದುತ್ತಾ, ಅವರ ಪಾದಪದ್ಮಗಳಲ್ಲಿ ನಿರಂತರವಾಗಿ ನಿರತರಾಗಿರುತ್ತಾ ಇರುವುದೊಂದೇ, ನಮಗೆ ಈ ಜನನ ಮರಣ ಚಕ್ರಭ್ರಮಣೆಯಿಂದ ಬಿಡುಗಡೆ ಹೊಂದಲು ಇರುವ ಸಾಧನ.
ಈ ಸಾಯಿ ಕಥಾಸಾಗರವನ್ನು ಕಡೆದು, ಅದರಿಂದ ಬಂದ ಅತ್ಯಮೂಲ್ಯ ಉಂಡೆಗಳನ್ನು, ನಿಮ್ಮ ಸ್ನೇಹಿತ, ಬಂಧುವರ್ಗದವರೆಲ್ಲರಿಗೂ ಹಂಚಿ. ಅದರಿಂದ ನಿಮ್ಮ ಮನಸ್ಸಂತೋಷ ಹೆಚ್ಚಾಗುತ್ತಾ ಬರುತ್ತದೆ. ಬಾಬಾರಲ್ಲಿ ಶರಣಾದ ಭಕ್ತರಿಗೆ, ಈ ಲೌಕಿಕ ಪ್ರಪಂಚದ ವ್ಯಾಮೋಹ ಬಿಟ್ಟುಹೋಗುತ್ತದೆ. ನದಿ ಸಾಗರವನ್ನು ಸೇರಿ ಅದರಲ್ಲಿ ಲೀನವಾಗಿಹೋದಂತೆ, ಅವರು ಬಾಬಾರಲ್ಲಿ ಲೀನರಾಗಿ ಹೋಗುತ್ತಾರೆ. ಜಾಗ್ರತ್, ಸ್ವಪ್ನ, ಸುಷುಪ್ತಿ ಎಂಬ ಮೂರು ಅವಸ್ಥೆಗಳಲ್ಲಿ ಯಾವೊಂದರಲ್ಲಿಯಾದರೂ ಸಾಯಿ, ಸಾಯಿ ಎಂಬ ನಾಮಸ್ಮರಣೆಯಲ್ಲೇ ಮಗ್ನರಾಗಿಹೋದವರಿಗೆ ಈ ಪ್ರಪಂಚವೆಂಬ ಮೋಹದಿಂದ ಬಿಡುಗಡೆಯಾಗುತ್ತದೆ. ಶುಚಿಯಾಗಿ, ಶ್ರದ್ಧಾ, ಭಕ್ತಿಗಳಿಂದ ಈ ಗ್ರಂಥವನ್ನು ಸಪ್ತಾಹ ಪಾರಾಯಣ ಮಾಡುವವರ ದುಃಖದುರಿತಗಳು ನಾಶವಾಗಿ, ಅವರಿಗೆ ಮನಶ್ಶಾಂತಿ ದೊರೆಯುತ್ತದೆ. ಪ್ರತಿದಿನವೂ, ಪಠಿಸುವವರ ಭಯ ನಿವಾರಣೆಯಾಗುತ್ತದೆ. ಓದುವವರ ಶ್ರದ್ಧೆ, ಭಕ್ತಿ ನಂಬಿಕೆಗಳಿಗೆ ಅನುವಾಗಿ ಅವರಿಗೆ ಫಲವೂ ದೊರೆಯುತ್ತದೆ. ನಂಬಿಕೆಗಳಿಲ್ಲದಿದ್ದರೆ ಯಾವ ಫಲವೂ ಇಲ್ಲ.
ಗೌರವಾದರಗಳಿಂದ ಈ ಗ್ರಂಥವನ್ನು ಬಾಬಾರಲ್ಲಿ ಸಂಪೂರ್ಣ ನಂಬಿಕೆಯಿಂದ ಪಠನಮಾಡಿದರೆ, ಬಾಬಾರು ನಿಮ್ಮ ಅಜ್ಞಾನವನ್ನು ಕಳೆದು, ಜ್ಞಾನ ನೀಡಿ, ನಿಮ್ಮ ಜೀವನವನ್ನು ಸುಖಸಂತೋಷಗಳಿಂದ ತುಂಬುತ್ತಾರೆ. ಮನಸ್ಸಿಟ್ಟು ಒಂದೇ ಒಂದು ಅಧ್ಯಾಯವನ್ನು ಓದಿದರೂ ಸಾಕು. ಅದು ನಿಮಗೆ ಅಪರಿಮಿತ ಸಂತೋಷ ಕೊಡುತ್ತದೆ. ಗುರುಪೂರ್ಣಿಮೆ, ಗೋಕುಲಾಷ್ಟಮಿ, ರಾಮನವಮಿ, ವಿಜಯದಶಮಿ, ದೀಪಾವಳಿಯಂತಹ ಪರ್ವದಿನಗಳಲ್ಲಿ ಈ ಗ್ರಂಥವನ್ನು ತಪ್ಪದೇ ಓದಬೇಕು. ಬಾಬಾರ ಚರಣಗಳ ಚಿತ್ರವನ್ನು ಮನೋಚಕ್ಷುವಿನಲ್ಲಿ ನಿಲ್ಲಿಸಿ, ಅವರ ಧ್ಯಾನ ಸತತವಾಗಿ ಮಾಡುವವರಿಗೆ ಈ ಸಂಸಾರಸಾಗರ ದಾಟುವುದು ಕಷ್ಟವೆನಿಸುವುದಿಲ್ಲ. ಶ್ರದ್ಧಾಭಕ್ತಿಸಹನೆಗಳಿಂದ ಪಾರಾಯಣಮಾಡುವ ರೋಗಿಗಳು ಆರೋಗ್ಯವಂತರಾಗುತ್ತಾರೆ. ಬಡವರ ಬಡತನ ನೀಗುತ್ತದೆ. ಕಷ್ತಕಾರ್ಪಣ್ಯಗಳು ತೊಲಗಿ ಶಾಂತಿ ಸಮಾಧಾನಗಳುಂಟಾಗುತ್ತವೆ. ಮನಸ್ಸಿನ ಚಂಚಲತೆಯೆಲ್ಲ ಕಳೆದು ಶಾಂತಮನಸ್ಕರಾಗುತ್ತಾರೆ.
ನನ್ನ ಪ್ರಿಯ ಓದುಗ ಬಂಧುಗಳೇ, ಶ್ರೋತೃ ಬಂಧುಗಳೇ, ನಿಮ್ಮಲ್ಲಿ ನನ್ನದೊಂದು ವಿನಂತಿ. ಯಾರ ಚರಿತ್ರೆಯನ್ನು ಇಷ್ಟುಕಾಲವೂ ನೀವು ಶ್ರದ್ಧೆಯಿಂದ ಓದಿದಿರೋ, ಕೇಳಿದಿರೋ, ಆ ಸಾಯಿಬಾಬಾರ ಚಿತ್ರ ನಿಮ್ಮ ಚಿತ್ತಭಿತ್ತಿಯಿಂದ ಎಂದಿಗೂ ಅಳಿಸಿಹೋಗದೇ ಇರಲಿ. ಓದುಗರು ಶ್ರೋತೃಗಳು ಇಬ್ಬರನ್ನೂ ಆ ಪರಮಾತ್ಮ, ದಯಾಳು, ಕರುಣಾನಿಧಿ, ಭವಾರ್ಣವವನ್ನು ದಾಟಿಸುವ ಸದ್ಗುರು ಶ್ರೀ ಸಾಯಿನಾಥ ಮಹಾರಾಜ ಅನುಗ್ರಹಿಸಲಿ ಎಂದು ಬೇಡಿಕೊಳ್ಳುತ್ತಾ ಇದನ್ನು ಮುಗಿಸಲು ಅಪ್ಪಣೆ ಬೇಡುತ್ತೇನೆ.
ಪ್ರಾರ್ಥನೆ
ಕೊನೆಯದಾಗಿ, ಈ ಗ್ರಂಥವನ್ನು ಮುಗಿಸುವ ಮೊದಲು, ಆ ಸರ್ವವ್ಯಾಪಿ, ಸರ್ವಜ್ಞ, ಸರ್ವಶಕ್ತ ಸಾಯಿ ಪರಮಾತ್ಮನನ್ನು ಬೇಡಿಕೊಳ್ಳೋಣ, "ಹೇ, ದೇವಾ, ಸಾಯಿಪರಮೇಶ್ವರ, ಈ ಗ್ರಂಥವನ್ನು ಓದುವ ಕೇಳುವ ಭಕ್ತರನ್ನು ತಮ್ಮ ಹೃದಯಾಂತರಾಳದಿಂದ, ನಿನ್ನ ಚರಣ ಧ್ಯಾನದಲ್ಲಿ ನಿರಂತರವಾಗಿ ನಿರತರಾಗಿರುವಂತೆ ಅನುಗ್ರಹಿಸು. ನಿನ್ನ ರೂಪ ಅವರ ಮನೋಚಕ್ಷುಗಳಲ್ಲಿ ಸದಾ ನೆಲಸಿರುವಂತೆ ಅಶೀರ್ವದಿಸು. ಎಲ್ಲರಲ್ಲೂ, ಎಲ್ಲದರಲ್ಲೂ ನಿನ್ನನ್ನೇ ಕಾಣುವಂತೆ ಅನುಗ್ರಹಿಸು. ಶುಭಂ ಭವತು"
ಇದರೊಂದಿಗೆ ಬಾಬಾರ ಹಿರಿಮೆ, ಫಲಶೃತಿ ಮತ್ತು ಇತರ ವಿಷಯಗಳನ್ನು ಕುರಿತು ಹೇಳುವ ಐವತ್ತೊಂದನೆಯ ಅಧ್ಯಾಯ ಮುಗಿಯಿತು.
ಬಾಬಾರ ಹಿರಿಮೆ, ಫಲಶೃತಿ ಎಂಬ ಐವತ್ತೊಂದನೆಯ ಈ ಅಧ್ಯಾಯದೊಡನೆ ಶ್ರೀ ಸಾಯಿ ಸಚ್ಚರಿತ್ರೆ ಎಂಬ ಸದ್ಗ್ರಂಥವೂ ಸಮಾಪ್ತವಾಯಿತು
||ಸದ್ಗುರು ಶ್ರೀ ಸಾಯಿನಾಥಾರ್ಪಣಮಸ್ತು||ಶುಭಂ ಭವತು||
||ಓಂ ಶ್ರೀ ಸಾಯಿ ಯಶಃಕಾಯ ಶಿರಿಡಿವಾಸಿನೇ ನಮಃ||
||ಓಂ ಶಾಂತಿಃ ಶಾಂತಿಃ ಶಾಂತಿಃ||
||ಓಂ ಶ್ರೀ ಸಾಯಿ ಯಶಃಕಾಯ ಶಿರಿಡಿವಾಸಿನೇ ನಮಃ||
||ಓಂ ಶಾಂತಿಃ ಶಾಂತಿಃ ಶಾಂತಿಃ||
No comments:
Post a Comment