Friday, February 10, 2012

||ನಲವತ್ತೇಳನೆಯ ಅಧ್ಯಾಯ||


||ಶ್ರೀ ಸಾಯಿ ಸಚ್ಚರಿತ್ರೆ||
||ನಲವತ್ತೇಳನೆಯ ಅಧ್ಯಾಯ||
||ಬಾಬಾರು ಹೇಳಿದ ಕಥೆ||
ಶ್ರೀ ಗಣೇಶಾಯ ನಮಃ ಶ್ರೀ ಸರಸ್ವತಯೇ ನಮಃ
ಶ್ರೀ ವೆಂಕಟೇಶಾಯ ನಮಃ ಶ್ರೀ ಸಾಯಿನಾಥಾಯ ನಮಃ
ಶ್ರೀ ಸದ್ಗುರುಭ್ಯೋನ್ನಮಃ

ಅಧ್ಯಾಯದಲ್ಲಿ ಹೇಮಾಡ್ ಪಂತ್, ವೀರಭದ್ರಪ್ಪ-ಚನ್ನಬಸಪ್ಪ ಅವರ ಕಥೆ ಇತ್ಯಾದಿ ವಿಷಯಗಳನ್ನು ಕುರಿತು ಹೇಳುತ್ತಾರೆ.

ಸದ್ಗುರು ಸಾಯಿ

ಹೇ ಜ್ಞಾನ ಸಾಗರ! ತ್ರಿಗುಣಾತೀತ! ಸದ್ಗುರು ಸಾಯಿ! ನಿನ್ನ ರೂಪ ಅದೆಷ್ಟು ಮೋಹಕ! ಹೇ ಅಂತರ್ಯಾಮಿ! ನಿನಗೆ ನಾವು ಸದಾ ಋಣಿಗಳು. ನಿನ್ನ ಒಂದು ಕೃಪಾ ದೃಷ್ಟಿಯಿಂದಲೇ ನಮ್ಮ ಕರ್ಮ ಫಲಗಳೆಲ್ಲಾ ಸವೆದು ಹೋಗಿ ನಾವು ಪರಮಾನಂದವನ್ನು ಪಡೆಯುತ್ತೇವೆ. ಹೇ ಕರುಣಾಮಯಿ, ಪ್ರೇಮ ಮೂರ್ತಿ ಸಾಯಿ, ಅಂತಹ ಕೃಪಾದೃಷ್ಟಿಯನ್ನು ಒಂದುಸಲ ನಮ್ಮೆಡೆಗೆ ಬೀರು. ಅದರಿಂದ ನಮ್ಮ ಭವ ಬಂಧಗಳೆಲ್ಲಾ ತೊಲಗಿಹೋಗಿ ನಮಗೆ ಆನಂದಾಗಮನವಾಗುತ್ತದೆ. ಗಂಗೆಯಲ್ಲಿ ಮಿಂದರೆ ಜನರ ಪಾಪಗಳೆಲ್ಲಾ ತೊಲಗಿಹೋಗುತ್ತವೆ. ಅಂತಹ ಗಂಗೆಯೂ ನಿಮ್ಮ ಪಾದಸ್ಪರ್ಶಕ್ಕಾಗಿ ಹಾತೊರೆಯುತ್ತಾಳೆ. ನಿಮ್ಮ ಪಾದಸ್ಪರ್ಶದಿಂದ ತನ್ನಲ್ಲಿ ಸೇರಿದ್ದ ಜನಗಳ ಪಾಪವೆಲ್ಲ ಕಳೆದುಹೋಗಿ ತಾನು ಮತ್ತೆ ನಿರ್ಮಲವಾಗಬೇಕೆಂಬುದು ಅವಳ ಆಸೆ. ಇದು ಸರ್ವ ಸಂತರ ಗುಣ ವಿಶೇಷ. ಸಂತರಿಗೆಲ್ಲ ಮಕುಟ ಮಣಿಯಂತಹವರು ನಮ್ಮ ಸಾಯಿ!!

ಹಾವು ಮತ್ತು ಕಪ್ಪೆ ಅಥವಾ ವೀರಭದ್ರಪ್ಪ- ಚನ್ನಬಸಪ್ಪರ ಕಥೆ

ಒಮ್ಮೆ, ಬಾಬಾ ತಮ್ಮ ಭಕ್ತರ ಮಧ್ಯೆ ಮಸೀದಿಯಲ್ಲಿ ಕುಳಿತಿದ್ದಾಗ ಕೆಳಗಿನ ಕಥೆಯನ್ನು ಹೇಳಿದರು. ಬನ್ನಿ, ಕಥೆಯನ್ನು ಬಾಬಾರ ಬಾಯಿಂದಲೇ ಕೇಳೋಣ.

ಒಂದುದಿನ ಬೆಳಗ್ಗೆ ಅಲ್ಪಾಹಾರವಾದಮೇಲೆ, ನಾನು ತಿರುಗಾಡಿಕೊಂಡು ಬರಲು ಹೊರಟೆ. ದಾರಿಯಲ್ಲಿ ಒಂದು ಸಣ್ಣ ನದಿಯ ದಡಕ್ಕೆ ಬಂದು ಸೇರಿದೆ. ಆಯಾಸವಾಗಿದ್ದುದರಿಂದ, ಕೈಕಾಲು ಮುಖ ತೊಳೆದು, ಅಲ್ಲೇ ವಿಶ್ರಮಿಸಲು ಕುಳಿತೆ. ಹತ್ತಿರದಲ್ಲೇ ಒಂದು ಎತ್ತಿನ ಬಂಡಿ ಹೋಗುವ ದಾರಿ, ಪಕ್ಕದಲ್ಲಿ ಒಂದು ಕಾಲುದಾರಿ ಇತ್ತು. ದಾರಿಯ ಇಕ್ಕೆಲಗಳಲ್ಲೂ ದೊಡ್ಡ ದೊಡ್ಡ ಮರಗಳಿದ್ದು ತಣ್ಣಗೆ ಗಾಳಿ ಬೀಸುತ್ತಿತ್ತು. ಅಲ್ಲಿ ಮರವೊಂದರ ಕೆಳಗೆ ಕುಳಿತು, ಹುಕ್ಕಾ ಸೇದಬೇಕೆಂದು ಅಣಿಯಾಗುತ್ತಿರುವಾಗ, ಒಂದು ಕಪ್ಪೆ ಪ್ರಾಣಾಪಾಯದಲ್ಲಿರುವಂತೆ ಕೂಗಿ ಕೊಂಡದ್ದು ಕೇಳಿಸಿತು. ಹುಕ್ಕಾ ಹೊತ್ತಿಸುವ ಸಮಯಕ್ಕೆ ಸರಿಯಾಗಿ, ಒಬ್ಬ ಪಾದಚಾರಿ ಅಲ್ಲಿಗೆ ಬಂದು, ನನ್ನನ್ನು ಕಂಡು, ಬಳಿ ಕುಳಿತು, ಅವನ ಮನೆಗೆ ಹೋಗಿ ಊಟಮಾಡಿ ವಿಶ್ರಮಿಸಿಕೊಳ್ಳುವಂತೆ, ಬಲವಂತ ಮಾಡಿದ. ತಾನೇ ಹುಕ್ಕಾ ಹೊತ್ತಿಸಿ ನನಗೆ ಕೊಟ್ಟ. ಆಗ ಮತ್ತೊಮ್ಮೆ ಕಪ್ಪೆಯ ಅಳುವಿನ ಕೂಗು ಕೇಳಿಸಿತು. ಪಾದಚಾರಿ ಕುತೂಹಲದಿಂದ ಅದೇನೆಂದು ಕೇಳಿದ. ನಾನು, "ಕಪ್ಪೆಯೊಂದು ತೊಂದರೆಯಲ್ಲಿದೆ. ಅದು ತನ್ನ ಪೂರ್ವ ಜನ್ಮಕೃತ ಫಲವನ್ನು ಅನುಭವಿಸುತ್ತಿದೆ. ಕರ್ಮಫಲವನ್ನು ಅನುಭವಿಸಬೇಕಲ್ಲದೆ ಅಳುವುದರಿಂದ ಪ್ರಯೋಜನವೇನು?" ಎಂದು ಹೇಳಿದೆ. ಒಂದುಸಲ ಹುಕ್ಕಾ ಎಳೆದು ಅವನು, "ಏನು ವಿಷಯ ಎಂದು ನೋಡಿ ಬರುತ್ತೇನೆ" ಎಂದು ಹೇಳಿ ಹೊರಡುವುದರಲ್ಲಿದ್ದಾಗ, ನಾನು ಅವನಿಗೆ ಹೇಳಿದೆ, "ಹಾವಿನ ಬಾಯಿಗೆ ಕಪ್ಪೆಯೊಂದು ಸಿಕ್ಕಿಕೊಂಡು ಸಾಯುವುದರಲ್ಲಿದೆ. ಕಪ್ಪೆ ಹಾಗೆ ಅಳುತ್ತಿದೆ. ಪೂರ್ವ ಜನ್ಮದಲ್ಲಿ ಇಬ್ಬರೂ ದುಷ್ಟರಾಗಿದ್ದು, ಜನ್ಮದಲ್ಲಿ ಅದರ ಫಲವನ್ನು ಅನುಭವಿಸುತ್ತಿದ್ದಾರೆ." ಅವನು ಕಪ್ಪೆಯನ್ನು ನೋಡಲು ಹೋಗಿ, ಅದು ಒಂದು ದೊಡ್ಡ ಹಾವಿನ ಬಾಯಿಗೆ ಸಿಕ್ಕಿರುವುದನ್ನು ನೋಡಿದ.

ಹಿಂತಿರುಗಿ ಬಂದು, "ಇನ್ನು ಹತ್ತು ಹನ್ನೆರಡು ನಿಮಿಷಗಳಲ್ಲಿ ಹಾವು ಕಪ್ಪೆಯನ್ನು ನುಂಗಿಹಾಕುತ್ತದೆ" ಎಂದು ಹೇಳಿದ. ಅದಕ್ಕೆ ನಾನು, "ಇಲ್ಲ. ಅದು ಸಾಧ್ಯವಿಲ್ಲ. ಅದರ ರಕ್ಷಕ ನಾನು ಇಲ್ಲಿದ್ದೇನೆ. ಹಾವು ಅದನ್ನು ನುಂಗಲು ಹೇಗೆ ಸಾಧ್ಯ? ಹೋಗಿ ನೋಡೋಣ ಬಾ" ಎಂದು ಹೇಳಿ, ಇನ್ನೊಂದುಸಲ ಹುಕ್ಕಾ ಎಳೆದು ಇಬ್ಬರೂ ಜೊತೆಯಾಗಿ ಹಾವು ಕಪ್ಪೆಗಳಿದ್ದ ಜಾಗಕ್ಕೆ ಹೋದೆವು. ಹಾವು ನನ್ನನ್ನು ಕಚ್ಚುವುದೇನೋ ಎಂಬ ಹೆದರಿಕೆಯಿಂದ, ಅವನು ನನ್ನನ್ನು ಹತ್ತಿರಕ್ಕೆ ಹೋಗಬೇಡವೆಂದು ತಡೆದ. ನಾನು ಅದನ್ನು ಕಡೆಗಣಿಸಿ, ಅವುಗಳ ಹತ್ತಿರ ಹೋಗಿ, "ಏಯ್, ವೀರಭದ್ರಪ್ಪ, ನೀನು ಹಾವಾಗಿ ಹುಟ್ಟಿ, ಚನ್ನಬಸಪ್ಪ ಕಪ್ಪೆಯಾಗಿ ಹುಟ್ಟಿದ ಮೇಲೂ, ನಿಮ್ಮಿಬ್ಬರ ದ್ವೇಷ ಇನ್ನೂ ತೀರಲಿಲ್ಲವೆ? ನಾಚಿಕೆಗೇಡು. ಈಗಲಾದರೂ ನಿಮ್ಮಿಬ್ಬರ ದ್ವೇಷವನ್ನು ಬಿಟ್ಟು, ಇಬ್ಬರೂ ಶಾಂತಿಯಿಂದಿರಿ" ಎಂದು ಹೇಳಿದೆ. ಅದನ್ನು ಕೇಳಿದ ಹಾವು ಕಪ್ಪೆಯನ್ನು ಬಿಟ್ಟು ನೀರಿನೊಳಕ್ಕೆ ಹೊರಟು ಹೋಯಿತು. ಕಪ್ಪೆ ಅಲ್ಲಿದ್ದ ಪೊದೆಗಳ ಮಧ್ಯೆ ಸೇರಿಕೊಂಡಿತು.

ಅದೆಲ್ಲಾ ನೋಡಿ ಚಕಿತನಾಗಿ ಹೋದ ದಾರಿಹೋಕನ ಮನಸ್ಸಿನಲ್ಲಿ, ನನ್ನ ಮಾತು ಕೇಳಿ ಹಾವು ಕಪ್ಪೆಯನ್ನು ಹೇಗೆ ಬಿಟ್ಟುಬಿಟ್ಟಿತು? ವೀರಭದ್ರಪ್ಪ ಚನ್ನಬಸಪ್ಪ ಯಾರು? ಅವರ ದ್ವೇಷಕ್ಕೆ ಕಾರಣವೇನು? ಮುಂತಾದ ಅನೇಕ ಪ್ರಶ್ನೆಗಳು ತಲೆಯೆತ್ತಿದವು. ಅವನನ್ನು ಕರೆದುಕೊಂಡು, ನಾನು ಮತ್ತೆ ನಾವು ಕುಳಿತಿದ್ದ ಸ್ಥಳಕ್ಕೆ ಬಂದೆ. ಇಬ್ಬರೂ ಕೂತು, ಇನ್ನೊಮ್ಮೆ ಹುಕ್ಕಾ ಎಳೆದೆವು. ನಂತರ ನಾನು ಅವನಿಗೆ ಹಿಂದಿನ ಕಥೆಯನ್ನು ಹೇಳಿದೆ.

ನಾನಿದ್ದ ಮನೆಯಿಂದ - ಮೈಲಿ ದೂರದಲ್ಲಿ ಶಿವಾಲಯವೊಂದಿತ್ತು. ಅದು ಹಳೆಯದಾಗಿ ಶಿಥಿಲವಾಗಿತ್ತು. ಅದರ ದುರಸ್ತಿಯಾಗಬೇಕಿತ್ತು. ಅಲ್ಲಿನ ಹಳ್ಳಿಯ ಜನರೆಲ್ಲಾ ಸೇರಿ, ದೇವಾಲಯದ ದುರಸ್ತಿಗಾಗಿ ಸಾಕಷ್ಟು ಹಣ ಕೂಡಿಸಿ, ಊರಿನ ಶ್ರೀಮಂತನನ್ನು ಖಜಾಂಚಿಯಾಗಿ ಮಾಡಿ, ಕೂಡಿಸಿದ್ದ ಹಣವನ್ನೆಲ್ಲಾ ಅವನ ಕೈಯಲ್ಲಿಟ್ಟು, ದುರಸ್ತಿ ಕಾರ್ಯ ಆರಂಭಮಾಡುವಂತೆ ಹೇಳಿದರು. ಅವನು ಖರ್ಚು ಮಾಡಿದ ಹಣಕ್ಕೆ ಲೆಕ್ಕ ತೋರಿಸಬೇಕಾಗಿತ್ತು.

ಖಜಾಂಚಿಯಾಗಿ ನೇಮಕವಾಗಿದ್ದ ಶ್ರೀಮಂತ ದೊಡ್ಡ ಜಿಪುಣ. ಲೋಭಿ. ದುರಸ್ತಿಕಾರ್ಯಕ್ಕಾಗಿ ಕೊಟ್ಟ ಹಣವನ್ನೆಲ್ಲಾ ನುಂಗಿಹಾಕಿ, ತನ್ನ ಒಳ್ಳೆಯ ಮಾತುಗಳಿಂದ ಜನರನ್ನೆಲ್ಲಾ ಮರುಳುಮಾಡಿ, ಹಣವೆಲ್ಲಾ ಖರ್ಚಾಯಿತೆಂದು ಹೇಳಿದ. ಕೆಲಸ ಮಾತ್ರ ಸ್ವಲ್ಪವೂ ಮುಂದುವರೆದಿರಲಿಲ್ಲ. ಜನರೆಲ್ಲ ಚಿಂತಿತರಾಗಿ, ಮತ್ತೊಂದುಸಲ ಹಣ ಕೂಡಿಸಿ, ಅದನ್ನೂ ಅವನ ಕೈಲಿಟ್ಟು, ಹೇಗಾದರೂ ಮಾಡಿ ದುರಸ್ತಿ ಕೆಲಸ ಮುಂದುವರಿಸಿ ಮುಗಿಸುವಂತೆ ಕೇಳಿಕೊಂಡರು. ತಾನು ಮಾತ್ರ ಚಂದಾ ರೂಪದಲ್ಲಿ ಯಾವ ಹಣವನ್ನೂ ಅದಕ್ಕೆ ಸೇರಿಸದೆ, ಲೋಭಿ ಎರಡನೆಯ ಸಲ ಕೊಟ್ಟ ಹಣವನ್ನೂ ನುಂಗಿಹಾಕಿ ಬಿಟ್ಟ. ಆದರೆ ಕೆಲಸ ಮಾತ್ರ ಏನೂ ಮುಂದುವರೆಯಲಿಲ್ಲ.

ಕೆಲವು ದಿನಗಳ ನಂತರ, ಶ್ರೀಮಂತನ ಹೆಂಡತಿಯ ಕನಸಿನಲ್ಲಿ ಮಹಾದೇವ ಕಾಣಿಸಿಕೊಂಡು, "ನಿನ್ನ ಹಣವನ್ನು ಖರ್ಚುಮಾಡಿ ದೇವಾಲಯದ ಕಲಶವನ್ನು ಕಟ್ಟಿಸು. ನೀನು ಖರ್ಚುಮಾಡುವ ಹಣಕ್ಕೆ ನೂರರಷ್ಟು ನಿನಗೆ ನಾನು ಕೊಡುವೆ" ಎಂದು ಹೇಳಿದ. ಮುಗ್ಧ ಹೆಂಗಸು, ತನಗಾದ ಕನಸನ್ನು ತನ್ನ ಗಂಡನಿಗೆ ಹೇಳಿದಳು. ಅವನು ಇದರಿಂದ ತನ್ನ ಹಣವನ್ನು ಖರ್ಚುಮಾಡಬೇಕಾಗುತ್ತದೆ ಎಂಬ ಭಯದಿಂದ, ಅವಳು ಹೇಳಿದ್ದನ್ನು ಹಾಸ್ಯಮಾಡಿ, "ಅದೊಂದು ಕನಸಷ್ಟೇ. ಕನಸನ್ನು ಯಾರು ನಂಬುತ್ತಾರೆ. ಅದು ನಿಜವೇ ಆಗಿದ್ದರೆ ಮಹಾದೇವ ನನಗೂ ಕಂಡು ಬಂದು ಮಾತನ್ನು ನನಗೂ ಹೇಳಬೇಕಾಗಿತ್ತು. ನಾನೇನು ನಿನ್ನಿಂದ ದೂರದಲ್ಲಿದ್ದೆನೇ? ಕನಸು ಒಳ್ಳೆಯದಲ್ಲ. ನಮ್ಮಿಬ್ಬರ ಸಂಬಂಧವನ್ನು ಹಾಳು ಮಾಡುವಂತಹುದು. ಅದರಿಂದ ಚಿಂತೆಮಾಡಬೇಡ. ದೇವರಿಗೆ, ಇಷ್ಟವಿಲ್ಲದೆ ದಾನಕೊಟ್ಟ ಹಣದ ಅವಶ್ಯಕತೆಯಾದರೂ ಏನು? ದೇವರು, ಪ್ರೀತಿಯಿಂದ ಕೊಟ್ಟ ಕವಡೆಯನ್ನಾದರೂ ಸರಿಯೆ, ಸಂತೋಷದಿಂದ ಸ್ವೀಕರಿಸುತ್ತಾನೆ" ಎಂದ.

ಮಹಾದೇವ ಮತ್ತೆ ಆಕೆಗೆ ಕನಸಿನಲ್ಲಿ ಕಾಣಿಸಿಕೊಂಡು, "ನಿನ್ನ ಗಂಡನ ಮಾತನ್ನು ಕೇಳಬೇಡ. ದೇಣಿಗೆಯ ಹಣಕ್ಕಾಗಿಯೂ ಕಾಯಬೇಡ. ಅವನು ದುರಸ್ತಿಯ ಕೆಲಸವನ್ನು ಮಾಡುವಂತೆ ಬಲವಂತಮಾಡಲೂ ಬೇಡ, ಪ್ರೀತಿವಿಶ್ವಾಸಗಳಿಂದ ನಿನ್ನ ಹಣವನ್ನೇ ಖರ್ಚುಮಾಡಿ ಕೆಲಸ ಮಾಡಿಸು" ಎಂದು ಹೇಳಿದ. ಹೆಂಗಸು ತನ್ನ ಸ್ವಂತ ಆಭರಣಗಳನ್ನೇ ಮಾರಿ ಹಣದಿಂದ ಕೆಲಸಮಾಡಿಸಲು ನಿಶ್ಚಯಿಸಿ, ಅದನ್ನು ತನ್ನ ಗಂಡನಿಗೆ ಹೇಳಿದಳು. ಲೋಭಿ ಈಗ ದೇವರನ್ನೇ ಮೋಸಮಾಡಲು ತಯಾರಾದ. ಅವಳ ಆಭರಣಗಳಿಗೆಲ್ಲಾ ಕಡಮೆ ಬೆಲೆ ಕಟ್ಟಿ, ಒಟ್ಟು ಒಂದು ಸಾವಿರ ರೂಪಾಯಿಗಳೆಂದು ಮೌಲ್ಯ ಕಟ್ಟಿದ. ಹಣಕ್ಕೆ ಬದಲಾಗಿ, ತನ್ನಲ್ಲಿ ೨೦೦ ರೂಪಾಯಿಗಳಿಗೆ ದುಬಕಿ ಎಂಬ ಬಡವಿ ಅಡವಿಟ್ಟಿದ್ದ ಬಂಜರು ಭೂಮಿಯನ್ನು ದೇವಸ್ಥಾನಕ್ಕೆ ಕೊಡಲು ನಿರ್ಧರಿಸಿದ. ಅಡವಿಟ್ಟಿದ್ದ ಭೂಮಿ ಬಡವಳು ಸಾಲ ತೀರಿಸಲಾರದ್ದರಿಂದ ಅವನದೇ ಆಗಿತ್ತು. ರೀತಿಯಲ್ಲಿ ಶ್ರೀಮಂತ ಲೋಭಿ ತನ್ನ ಹೆಂಡತಿ, ಬಡವಳು ದುಬಕಿ, ಜೊತೆಗೆ ದೇವರನ್ನೂ ಮೋಸಗೊಳಿಸಿದ. ಭೂಮಿಯನ್ನು ದೇವಸ್ಥಾನದ ಪೂಜಾರಿಯ ವಶಕ್ಕೆ ಕೊಡಲಾಯಿತು.

ಸ್ವಲ್ಪ ಕಾಲದಲ್ಲೇ ಪವಾಡವೊಂದು ನಡೆಯಿತು. ಗುಡುಗು ಮಿಂಚುಗಳಿಂದ ಕೂಡಿದ ದೊಡ್ಡ ಮಳೆ ಆಯಿತು. ತೀವ್ರವಾದ ಮಿಂಚೊಂದು ಹೊಡೆದು ಲೋಭಿಯ ಮನೆ ಸುಟ್ಟುಹೋಯಿತು. ಅವನು, ಅವನ ಹೆಂಡತಿ, ಇಬ್ಬರೂ ಅಪಘಾತದಲ್ಲಿ ಮೃತರಾದರು. ಬಡವಿಯೂ ಮೃತಳಾದಳು. ಮರುಜನ್ಮದಲ್ಲಿ, ಶ್ರೀಮಂತ ಲೋಭಿ, ಮಧುರೆಯಲ್ಲಿ ಬ್ರಾಹ್ಮಣ ದಂಪತಿಗಳಿಗೆ ಮಗನಾಗಿ ಹುಟ್ಟಿದ. ಅವನಿಗೆ ವೀರಭದ್ರಪ್ಪನೆಂದು ಹೆಸರಿಟ್ಟರು. ಅವನ ಹೆಂಡತಿ ದೇವಾಲಯದ ಪೂಜಾರಿಯ ಮಗಳಾಗಿ ಹುಟ್ಟಿದಳು. ಅವಳಿಗೆ ಗೌರಿ ಎಂದು ಹೆಸರಿಟ್ಟರು. ಬಡ ಹೆಂಗಸು, ದುಬಕಿ, ದೇವಾಲಯದ ಸೇವಕ ವರ್ಗದವರ ಮನೆಯೊಂದರಲ್ಲಿ ಗಂಡುಮಗುವಾಗಿ ಹುಟ್ಟಿದಳು. ಮಗುವಿಗೆ ಚನ್ನಬಸಪ್ಪ ಎಂದು ನಾಮಕರಣಮಾಡಿದರು.

ಪೂಜಾರಿ ನನ್ನ ಸ್ನೇಹಿತ. ಆಗಾಗ ಬಂದು ನನ್ನೊಡನೆ ಕುಳಿತು ಮಾತನಾಡುತ್ತಾ ಹುಕ್ಕಾ ಸೇದಿ ಹೋಗುತ್ತಿದ್ದ. ಅವನ ಮಗಳು ಗೌರಿಯೂ ನನ್ನಲ್ಲಿ ಭಕ್ತಿಯಿಂದಿದ್ದಳು. ಅವಳು ಬೆಳೆದು ದೊಡ್ದವಳಾಗಿ, ಮದುವೆಯ ವಯಸ್ಸಿಗೆ ಬಂದಳು. ಪೂಜಾರಿ ಅವಳ ಮದುವೆಯ ವಿಷಯದಲ್ಲಿ ಬಹಳ ಚಿಂತಿತನಾಗಿದ್ದ. ನಾನು ಅವನಿಗೆ ವಿಷಯದ ಬಗ್ಗೆ ಚಿಂತೆ ಮಾಡಬೇಡವೆಂದೂ, ಅವಳನ್ನು ಮದುವೆಯಾಗುವವನು ಮನೆಯ ಬಾಗಿಲಿಗೇ ಬರುತ್ತಾನೆಂದೂ ಹೇಳಿದೆ. ಕೆಲವು ದಿನಗಳಾದ ಮೇಲೆ, ವೀರಭದ್ರಪ್ಪನೆಂಬ ಬ್ರಾಹ್ಮಣ ಹುಡುಗ ಅವರ ಮನೆಗೆ ಭಿಕ್ಷೆಗೆ ಬಂದ. ನನ್ನ ಸಲಹೆಯ ಮೇರೆಗೆ, ಗೌರಿಯನ್ನು ಹುಡುಗನಿಗೆ ಕೊಟ್ಟು ಪೂಜಾರಿ ಮದುವೆಮಾಡಿದ. ಹುಡುಗನೂ ಮೊದಲು ನನ್ನ ಭಕ್ತನಾಗಿದ್ದರೂ, ಬರುಬರುತ್ತಾ ಕೃತಘ್ನನಾದ. ಅವನಿಗೆ ತನ್ನ ಹೊಸ ಜನ್ಮದಲ್ಲೂ ಹಣದ ಮೋಹ ಕಡಮೆಯಾಗಿರಲಿಲ್ಲ.

ಪರಿಸ್ಠಿತಿಯಲ್ಲಿ ಇನ್ನೊಂದು ಪವಾಡ ನಡೆಯಿತು. ಅಕಾರಣವಾಗಿ ಭೂಮಿಯ ಬೆಲೆಗಳು ಹೆಚ್ಚಾದವು. ಗೌರಿಯ ಭೂಮಿಗೂ ಒಳ್ಳೆಯ ಬೆಲೆ ಬಂದು ಅದು ಒಂದು ಲಕ್ಷ ರೂಪಾಯಿಗಳಿಗೆ ಮಾರಾಟವಾಯಿತು. ಬೆಲೆ ಅವಳು ತನ್ನ ಹಿಂದಿನ ಜನ್ಮದಲ್ಲಿ ಮಾರಾಟಮಾಡಿದ್ದ ಆಭರಣಗಳ ಬೆಲೆಯ ನೂರರಷ್ಟಾಗಿತ್ತು. ೫೦,೦೦೦ ರೂಪಾಯಿಗಳನ್ನು ತಕ್ಷಣವೇ ಕೊಡಬೇಕೆಂದೂ, ಮಿಕ್ಕ ಹಣವನ್ನು ೨೫ ಕಂತುಗಳಲ್ಲಿ ಬಡ್ಡಿ ಸಹಿತ ಕೊಡಬೇಕೆಂದೂ ನಿಶ್ಚಯವಾಯಿತು. ವ್ಯವಹಾರವೇನೋ ಎಲ್ಲರಿಗೂ ಒಪ್ಪಿಗೆಯಾದರೂ, ಹಣ ಹಂಚಿಕೆಯ ವಿಷಯದಲ್ಲಿ ಸ್ವಲ್ಪ ತಗಾದೆಯಾಯಿತು. ಗೌರಿಯ ಗಂಡ ವೀರಭದ್ರಪ್ಪ ಹಣದಲ್ಲಿ ದೊಡ್ಡ ಭಾಗ ತನಗೆ ಕೊಡಬೇಕೆಂದು ಹೇಳಿದ. ಯಾವ ಒಪ್ಪಂದವೂ ಆಗದೆ, ಎಲ್ಲರೂ ನನ್ನ ಬಳಿಗೆ ಬಂದರು. ನಾನು, "ಅದು ದೇವರ ಹಣ. ಪೂಜಾರಿಗೆ ದತ್ತಿಯಾಗಿ ಕೊಡಲ್ಪಟ್ಟಿದೆ. ಅದರ ನಿಜವಾದ ಒಡತಿ ಗೌರಿ. ಅವಳ ಅನುಮತಿಯಿಲ್ಲದೆ ಯಾರೂ ಅದರಲ್ಲಿ ಒಂದು ಬಿಡಿಗಾಸೂ ಖರ್ಚುಮಾಡಕೂಡದು. ಅವಳ ಗಂಡನಿಗೆ ಅದರ ಮೇಲೆ ಯಾವ ಹಕ್ಕೂ ಇಲ್ಲ" ಎಂದು ಹೇಳಿದೆ. ಅದಕ್ಕೆ ವೀರಭದ್ರಪ್ಪ ನನ್ನಮೇಲೆ ಕೋಪಗೊಂಡು, "ಗೌರಿಗೆ ಒಳ್ಳೆಯ ಮಾತಾಡಿ ಹಣವನ್ನೆಲ್ಲ ಕಬಳಿಸಬೇಕೆಂದು ಇವನು ಹೊಂಚುಮಾಡುತ್ತಿದ್ದಾನೆ" ಎಂದು ಆರೋಪಮಾಡಿದ. ನಾನು ಕಣ್ಣು ಮುಚ್ಚಿ, ದೇವರ ಧ್ಯಾನಮಾಡುತ್ತಾ ಸುಮ್ಮನಾದೆ. ಅವನು ಗೌರಿಗೆ ಅನಾವಶ್ಯಕವಾಗಿ ಹಿಂಸೆಯನ್ನು ಕೊಟ್ಟ.

ನಂತರ ಗೌರಿ ನನ್ನ ಬಳಿಗೆ ಬಂದು, "ಅವನು ಹೇಳಿದ ಮಾತುಗಳನ್ನು ಕಿವಿಯ ಮೇಲೆ ಹಾಕಿಕೊಳ್ಳಬೇಡಿ. ನಾನು ನಿಮ್ಮ ಮಗಳು. ನಿಮ್ಮ ಕೃಪಾದೃಷ್ಟಿ ಸದಾ ನನ್ನ ಮೇಲಿರಲಿ" ಎಂದು ಕೇಳಿಕೊಂಡಳು. ಅವಳು ಹಾಗೆ ನನಗೆ ಶರಣಾಗತಳಾದ ಮೇಲೆ, ನಾನು ಅವಳಿಗೆ, "ನೀನು ಎಲ್ಲಿದ್ದರೂ ನಿನ್ನನ್ನು ನಾನು ಕಾಪಾಡುತ್ತೇನೆ" ಎಂದು ಮಾತುಕೊಟ್ಟೆ. ರಾತ್ರಿ ಮಹಾದೇವ ಮತ್ತೆ ಅವಳ ಕನಸಿನಲ್ಲಿ ಕಾಣಿಸಿಕೊಂಡು, " ಹಣವೆಲ್ಲಾ ನಿನ್ನದೇ. ನೀನು ಅದರಲ್ಲಿ ಯಾರಿಗೂ ಪಾಲು ಕೊಡಬೇಕಾಗಿಲ್ಲ. ಚನ್ನಬಸಪ್ಪನನ್ನು ಸಂಪರ್ಕಿಸಿ, ಅವನ ಸಲಹೆಯಂತೆ ದೇವಸ್ಥಾನಕ್ಕಾಗಿ ಸ್ವಲ್ಪ ಖರ್ಚು ಮಾಡು. ಮಿಕ್ಕ ವಿಷಯಗಳಲ್ಲಿ ಮಸೀದಿಯಲ್ಲಿರುವ ಬಾಬಾರ ಸಲಹೆ ಕೇಳಿ ಅದರಂತೆ ಮಾಡು" ಎಂದು ಹೇಳಿದ. ಗೌರಿ ತನ್ನ ಕನಸಿನ ವಿಷಯವನ್ನೆಲ್ಲಾ ನನಗೆ ಹೇಳಿದಳು. ನಾನು ಅವಳಿಗೆ ಮೂಲಧನವನ್ನು ಅವಳೇ ಇಟ್ಟುಕೊಳ್ಳಬೇಕೆಂದೂ, ಬರುವ ಬಡ್ಡಿಯ ಹಣದಲ್ಲಿ ಸ್ವಲ್ಪವನ್ನು ಚನ್ನಬಸಪ್ಪನಿಗೆ ಕೊಡಬೇಕೆಂದೂ ಹೇಳಿದೆ. ಇದರಲ್ಲಿ ವೀರಭದ್ರಪ್ಪನಿಗೆ ಯಾವ ಹಕ್ಕೂ ಇಲ್ಲ ಎಂದೂ ಹೇಳಿದೆ. ಹಾಗೆ ನಾವು ಇನ್ನೂ ಮಾತನಾಡುತ್ತಿರುವಾಗಲೇ ವೀರಭದ್ರಪ್ಪ ಚನ್ನಬಸಪ್ಪರಿಬ್ಬರೂ ಜಗಳವಾಡುತ್ತ ಅಲ್ಲಿಗೆ ಬಂದರು. ನಾನು ಅವರನ್ನು ಸಮಾಧಾನಮಾಡಲು ಯತ್ನಿಸಿ, ಅವರಿಗೆ ಗೌರಿಯ ಕನಸನ್ನು ಹೇಳಿದೆ.

ವೀರಭದ್ರಪ್ಪ ಕೋಪದಿಂದ ಹುಚ್ಚನಂತಾಗಿ, ಚನ್ನಬಸಪ್ಪನನ್ನು ಕಡಿದು ತುಂಡುಮಾಡುವುದಾಗಿ ಕೂಗಾಡಿದ. ಚನ್ನಬಸಪ್ಪ ಸಾಧು ಮನುಷ್ಯ. ಅವನು ನನ್ನ ಕಾಲು ಹಿಡಿದು, ತನ್ನನ್ನು ಕಾಪಾಡುವಂತೆ ಕೇಳಿಕೊಂಡ. ನಾನು ಅವನನ್ನು ಕಾಪಾಡುತ್ತೇನೆಂದು ಮಾತುಕೊಟ್ಟೆ. ಸ್ವಲ್ಪ ಕಾಲಾನಂತರ ಅವರಿಬ್ಬರೂ ಗತಿಸಿದರು. ವೀರಭದ್ರಪ್ಪ ಹಾವಾಗಿ ಹುಟ್ಟಿದ. ಚನ್ನಬಸಪ್ಪ ಕಪ್ಪೆಯಾಗಿ ಹುಟ್ಟಿದ. ಈಗ ಚನ್ನಬಸಪ್ಪನ ಆರ್ತನಾದವನ್ನು ಕೇಳಿ, ನಾನು ಅವನಿಗೆ ಹಿಂದೆ ಮಾತುಕೊಟ್ಟಿದ್ದನ್ನು ನೆನಸಿಕೊಂಡು, ಇಲ್ಲಿಗೆ ಬಂದು ಅವನನ್ನು ಹಾವಿನ ಬಾಯಿಂದ ಕಾಪಾಡಿ, ನನ್ನ ಮಾತನ್ನು ಉಳಿಸಿಕೊಂಡೆ. ಕಷ್ಟಕಾಲದಲ್ಲಿ ದೇವರು ತನ್ನ ಭಕ್ತರನ್ನು ಕಾಪಾಡಲು ಓಡಿಬರುತ್ತಾನೆ. ನನ್ನನ್ನು ಇಲ್ಲಿಗೆ ಬರುವಂತೆ ಮಾಡಿ ಚನ್ನಬಸಪ್ಪನ ಪ್ರಾಣ ಉಳಿಸಿದ. ಎಲ್ಲವೂ ಅವನ ಲೀಲೆಯೇ!"

ನೀತಿ

ಕಥೆಯಿಂದ ತಿಳಿಯುವ ನೀತಿಯೆಂದರೆ, "ನೀನು ಏನನ್ನು ಬಿತ್ತುತ್ತೀಯೋ ಅದರಂತೆ ನಿನಗೆ ಬೆಳೆ ಬರುತ್ತದೆ". ಕೊಟ್ಟು ತೆಗೆದುಕೊಳ್ಳುವ ವ್ಯವಹಾರಗಳೆಲ್ಲವೂ ಸಮರ್ಪಕವಾಗಿ ಮುಗಿಯುವವರೆಗೂ ವಿಮೋಚನೆ ಸಾಧ್ಯವಿಲ್ಲ. ದುರಾಸೆ, ಅದರಲ್ಲೂ ಹಣದ ಮೇಲಿನ ದುರಾಸೆ, ಮನುಷ್ಯನನ್ನು ಅಧೋಗತಿಗಿಳಿಸಿ, ಅವನನ್ನು ನಾಶಮಾಡುತ್ತದೆ.

ಇದರೊಂದಿಗೆ ವೀರಭದ್ರಪ್ಪ-ಚನ್ನಬಸಪ್ಪ ಅವರ ಕಥೆ ಮತ್ತು ಇತರ ವಿಷಯಗಳನ್ನು ಕುರಿತು ಹೇಳುವ ನಲವತ್ತೇಳನೆಯ ಅಧ್ಯಾಯ ಮುಗಿಯಿತು. ಮುಂದಿನ ಅಧ್ಯಾಯದಲ್ಲಿ ಹೇಮಾಡ್ ಪಂತ್, ಶೇವಡೆ, ಸಪತ್ನೇಕರ್ ಅವರ ಕಥೆಗಳು ಇತ್ಯಾದಿ ವಿಷಯಗಳನ್ನು ಹೇಳುತ್ತಾರೆ.

||ಸದ್ಗುರು ಶ್ರೀ ಸಾಯಿನಾಥಾರ್ಪಣಮಸ್ತು||ಶುಭಂ ಭವತು||
||ಓಂ ಶಾಂತಿಃ ಶಾಂತಿಃ ಶಾಂತಿಃ||


No comments:

Post a Comment