||ಶ್ರೀ ಸಾಯಿ ಸಚ್ಚರಿತ್ರೆ||
||ನಲವತ್ತನೆಯ ಅಧ್ಯಾಯ||
||ಉದ್ಯಾಪನೆ ಮತ್ತು ಇತರ ಕಥೆಗಳು||
ಶ್ರೀ ಗಣೇಶಾಯ ನಮಃ ಶ್ರೀ ಸರಸ್ವತಯೇ ನಮಃ
ಶ್ರೀ ವೆಂಕಟೇಶಾಯ ನಮಃ ಶ್ರೀ ಸಾಯಿನಾಥಾಯ ನಮಃ
ಶ್ರೀ ಸದ್ಗುರುಭ್ಯೋನ್ನಮಃ
||ನಲವತ್ತನೆಯ ಅಧ್ಯಾಯ||
||ಉದ್ಯಾಪನೆ ಮತ್ತು ಇತರ ಕಥೆಗಳು||
ಶ್ರೀ ಗಣೇಶಾಯ ನಮಃ ಶ್ರೀ ಸರಸ್ವತಯೇ ನಮಃ
ಶ್ರೀ ವೆಂಕಟೇಶಾಯ ನಮಃ ಶ್ರೀ ಸಾಯಿನಾಥಾಯ ನಮಃ
ಶ್ರೀ ಸದ್ಗುರುಭ್ಯೋನ್ನಮಃ
ಈ ಅಧ್ಯಾಯದಲ್ಲಿ ಹೇಮಾಡ್ ಪಂತ್, ಬಾಬಾರ ಕಥೆಗಳು, ಶ್ರೀಮತಿ ದೇವ್ ಅವರ ಉದ್ಯಾಪನೆ, ಹೇಮಾಡ್ ಪಂತರ ಮನೆಗೆ ಬಾಬಾ ಹೋಗಿದ್ದು ಇತ್ಯಾದಿ ವಿಷಯಗಳನ್ನು ಕುರಿತು ಹೇಳುತ್ತಾರೆ.
ಸದ್ಗುರು ಸಾಯಿ ಬಾಬಾ
ಬಾಬಾರ ದಿವ್ಯ ಪಾದಗಳಿಗೆ ನಮಸ್ಕಾರ ಮಾಡಿದವರೇ ಧನ್ಯರು. ಬಾಬಾರ ಚರಣಗಳಲ್ಲಿ ತಲೆಯಿಟ್ಟಾಗ, ಅವರು ತಲೆಯನ್ನು ಮೃದುವಾಗಿ ನೇವರಿಸಿ ನಮ್ಮನ್ನು ಮೇಲಕ್ಕೆಬ್ಬಿಸುತ್ತಾರೆ. ಹಾಗೆ ತಲೆಯಮೇಲೆ ಕೈಯಿಟ್ಟು, ತಮ್ಮ ಶಕ್ತಿಯನ್ನು ನಮಗೆ ವರ್ಗಾಯಿಸಿ ನಮ್ಮ ದ್ವೈತ ಭಾವನೆಗಳ ಅಜ್ಞಾನವನ್ನು ಕಳೆಯುತ್ತಾರೆ. ನಾವು ಸಾಯಿಯಲ್ಲಿ, ಅವರು ನಮ್ಮಲ್ಲಿ ಒಂದಾಗಿ ಹೋಗುತ್ತೇವೆ. ನದಿ ಸಮುದ್ರವನ್ನು ಸೇರಿ ಅದರಲ್ಲಿ ಲೀನವಾಗಿ ಹೋಗುವಂತೆ, ನಾವು ಅವರಲ್ಲಿ ಲೀನವಾಗಿ ಹೋಗುತ್ತೇವೆ. ಈ ಸುಲಭವಾದಂತಹ ಪುಣ್ಯ ಪಡೆಯಲು ನಾವು ಮಾಡಬೇಕಾದದ್ದು, ಸಾಯಿ ಸಚ್ಚರಿತ್ರೆಯನ್ನು ಸಹನೆಕೂಡಿದ ಶ್ರದ್ಧಾ ಭಕ್ತಿಗಳಿಂದ ಓದಬೇಕಾದುದಷ್ಟೇ! ಅವರ ಕಥೆಗಳನ್ನು ಮನಸ್ಸಿಟ್ಟು ಓದಿದರೆ ಸಾಕು, ನಮಗೆ ದೊರೆಯಲಾರದ್ದೂ ದೊರೆಯುತ್ತದೆ.
ದೇವರು ತನಗಿಂತಲೂ ತನ್ನ ಭಕ್ತರ ಹೊಗಳಿಕೆಯನ್ನು ಹೆಚ್ಚು ಪ್ರೀತಿಸುತ್ತಾನೆ. ಬಾಬಾರ ಕಥೆಗಳನ್ನು ತನಗೋಸ್ಕರ ಓದಿಕೊಳ್ಳುವುದು, ಇನ್ನೊಬ್ಬರಿಗೆ ಓದಿ ಹೇಳುವುದು, ಬಾಬಾರ ವಿಷಯಗಳ ಯೋಚನೆಯಲ್ಲೇ ಸದಾಕಾಲ ತಲ್ಲೀನರಾಗಿರುವುದು, ನಮ್ಮನ್ನು ನಮ್ಮ ಗತಜನ್ಮ ಪಾಪಗಳಿಂದ ದೂರಮಾಡುತ್ತದೆ.
ಬಿ.ವಿ. ದೇವ್ ಅವರ ಕಥೆ
ದಹಾಣುವಿನ ಮಾಮಲತದಾರ್ ಬಿ.ವಿ. ದೇವರ ತಾಯಿ ಧರ್ಮ ಶ್ರದ್ಧೆಯುಳ್ಳ ಹೆಂಗಸು. ಆಕೆ ಅನೇಕ ವ್ರತಗಳನ್ನು ಮಾಡಿದ್ದರು. ವ್ರತ ಸಾಫಲ್ಯಕ್ಕಾಗಿ ಉದ್ಯಾಪನೆ ಮಾಡಬೇಕಾಗಿತ್ತು. ಅದರ ಅಂಗವಾಗಿ ಬ್ರಾಹ್ಮಣ ಅತಿಥಿ ಭೋಜನವಾಗಬೇಕಿತ್ತು. ಆಕೆ ಉದ್ಯಾಪನೆ ಮಾಡಲು ನಿಶ್ಚಯಿಸಿ, ೧೦೦-೨೦೦ ಜನರನ್ನು ಊಟಕ್ಕೆ ಆಹ್ವಾನಿಸಿದ್ದರು. ಬಾಬಾರ ಸನ್ನಿಹಿತ ಭಕ್ತರಾಗಿದ್ದ ದೇವ್ ಅವರು, ಈ ಸಮಾರಂಭದಲ್ಲಿ ಬಾಬಾರು ಇದ್ದರೆ ಬಹಳ ಸಂತೋಷಕರವಾಗಿರುತ್ತದೆ, ಎಂದು ಕೊಂಡರು. ರೂಯಿ, ರಾಹತಾ ಮತ್ತು ನೀಮ್‍ಗಾಂವ್‍ಗಳನ್ನು ಹೊರತು, ಬಾಬಾ ಎಂದೂ ಶಿರಡಿ ಬಿಟ್ಟು, ಇನ್ನೆಲ್ಲೂ ಹೋಗುವುದಿಲ್ಲ ಎಂಬುದನ್ನೂ ಅವರು ಬಲ್ಲರು. ಆದರೂ, ಬಾಬಾರೂ ಇದ್ದರೆ ಅದು ಎಲ್ಲರಿಗೂ ಸಂತೋಷ ಎಂಬ ಆಸೆಯಿಂದ ಬಾಪೂ ಸಾಹೇಬ್ ಜೋಗ್ ಅವರಿಗೆ, ತನ್ನ ಪರವಾಗಿ ಬಾಬಾರನ್ನು ಸಮಾರಂಭಕ್ಕೆ ಬರುವಂತೆ ಕೇಳಿಕೊಳ್ಳಿ, ಎಂದು ಕಾಗದ ಬರೆದರು. ಆ ಕಾಗದದಲ್ಲಿ ಬಾಬಾರು ಇಲ್ಲದೆ ಈ ಸಮಾರಂಭ ಶೋಭಿಸುವುದಿಲ್ಲವೆಂದೂ ಬರೆದಿದ್ದರು. ಬಾಪೂ ಸಾಹೇಬ್ ಜೋಗ್ ಆ ಕಾಗದವನ್ನು ಬಾಬಾರಿಗೆ ಓದಿ ಹೇಳಿದರು. ಅದಕ್ಕೆ ಬಾಬಾ, "ನನ್ನನ್ನು ಯಾರು ಸ್ಮರಿಸುತ್ತಾರೆಯೋ ಅವರನ್ನು ನಾನು ಯಾವಾಗಲೂ ನೆನಸುತ್ತೇನೆ. ನನಗೆ ರೈಲು ಟಾಂಗಾಗಳ ಅವಶ್ಯಕತೆಯಿಲ್ಲ. ನನ್ನನ್ನು ಪ್ರೇಮದಿಂದ ಕರೆದವರ ಬಳಿ, ನಾನು ಕಾಣಿಸಿಕೊಳ್ಳುತ್ತೇನೆ. ಅವನಿಗೆ ಪತ್ರವನ್ನು ಬರೆದು, ಅದರಲ್ಲಿ ನಾನು, ನೀನು ಇನ್ನೊಬ್ಬರ ಜೊತೆ, ಸಮಾರಂಭಕ್ಕೆ ಬರುತ್ತೇವೆ ಎಂದು ತಿಳಿಸು" ಎಂದರು. ಆ ಪತ್ರವನ್ನು ಓದಿದ ದೇವ್ ಅತ್ಯಂತ ಆನಂದ ಭರಿತರಾದರು. ಆವರಿಗೆ ಬಾಬಾ ತಾವೇ ಸ್ವತಃ ಬರದಿದ್ದರೂ, ತಮ್ಮ ಮಾತಿನಂತೆ ನಡೆದುಕೊಳ್ಳಲು, ಬೇರೆ ಯಾರ ರೂಪದಲ್ಲಿಯಾದರೂ ಬರಬಹುದು ಎಂಬ ನಂಬಿಕೆಯಿತ್ತು.
ಈ ಪ್ರಸಂಗ ನಡೆಯುವುದಕ್ಕೆ ಸ್ವಲ್ಪ ಮುಂಚೆ, ಬೆಂಗಾಲಿಯಂತೆ ದಿರಸು ಧರಿಸಿದ್ದ ಸನ್ಯಾಸಿಯೊಬ್ಬರು ದಹಾಣುವಿಗೆ ಬಂದರು. ಅವರು ರೈಲು ನಿಲ್ದಾಣದಲ್ಲಿ ಸ್ಟೇಷನ್ ಮಾಸ್ಟರನ್ನು ಕಂಡು, ತಾನು ಗೋರಕ್ಷಣೆಗೋಸ್ಕರ ಕೆಲಸ ಮಾಡುತ್ತಿರುವ ಸ್ವಯಂಸೇವಕನೆಂದೂ, ಈ ಶ್ಲಾಘ್ಯವಾದ ಕೆಲಸಕ್ಕೆ ನಿಧಿ ಕೂಡಿಸಲು ಸಹಾಯ ಮಾಡಬೇಕೆಂದೂ ಕೇಳಿದರು. ಆ ಸ್ಟೇಷನ್ ಮಾಸ್ಟರ್, ಈ ಕೆಲಸಕ್ಕೆ ತಾವು ಸರಿಯಾದವರಲ್ಲವೆಂದೂ, ಮಾಮಲತದಾರರ ಬಳಿಗೆ ಹೋದರೆ ಅವರ ಕೆಲಸ ಸುಲಭವಾಗುವುದೆಂದೂ ಹೇಳಿದರು. ಅದೇ ಸಮಯಕ್ಕೆ ಸರಿಯಾಗಿ ಮಾಮಲತದಾರರೇ ಅಲ್ಲಿಗೆ ಬಂದರು. ಸ್ಟೇಶನ್ ಮಾಸ್ಟರ್ ಅವರನ್ನು ಸನ್ಯಾಸಿಗೆ ಪರಿಚಯ ಮಾಡಿಕೊಟ್ಟರು. ಇಬ್ಬರೂ ಸ್ವಲ್ಪ ಹೊತ್ತು ಗೋರಕ್ಷಣೆಯ ವಿಷಯವಾಗಿ ವಿಚಾರ ವಿನಿಮಯ ಮಾಡಿಕೊಂಡರು. ದೇವ್ ಅವರಿಗೆ ಆ ವಿಷಯ ಸಮ್ಮತವಾಗಿ, ಸನ್ಯಾಸಿಗೆ ಸಹಾಯ ಮಾಡಬೇಕೆಂಬ ಸದ್ಭಾವನೆಯಿಂದ ಹೇಳಿದರು, "ರಾವ್ ಸಾಹೇಬ್ ನರೋತ್ತಮ ಶೆಟ್ಟರು ಈಗಷ್ಟೇ ಬೇರೆ ಕಾರಣಕ್ಕಾಗಿ ಹಣ ಕೂಡಿಸಿದ್ದಾರೆ. ಈಗಲೇ ಮತ್ತೊಂದು ಸಲ ಹಣ ಕೂಡಿಸಲು ಹೋದರೆ ಅದು ಅಷ್ಟು ಸಮಂಜಸವಾಗಲಾರದು. ಇನ್ನೊಂದೆರಡು ತಿಂಗಳು ಬಿಟ್ಟು ಬಂದರೆ ಆಗ ಗೋ ರಕ್ಷಣೆ ಕುರಿತು ಪ್ರಚಾರ ಮಾಡಬಹುದು" ಎಂದರು. ಅದಕ್ಕೆ ಸನ್ಯಾಸಿ ಒಪ್ಪಿ, ಮತ್ತೆ ಬರುತ್ತೇನೆಂದು ಹೇಳಿ ಹೊರಟು ಹೋದರು.
ಉದ್ಯಾಪನೆಯ ದಿನ ಬೆಳಗ್ಗೆ, ಸುಮಾರು ಹತ್ತು ಗಂಟೆಯ ಸಮಯದಲ್ಲಿ, ದೇವ್ ಆವರ ಮನೆಯ ಮುಂದೆ ಅದೇ ಸನ್ಯಾಸಿ ಟಾಂಗಾದಲ್ಲಿ ಬಂದಿಳಿದರು. ಉದ್ಯಾಪನೆಯ ಕೆಲಸದಲ್ಲಿ ಮಗ್ನರಾಗಿದ್ದ ದೇವ್, ಸನ್ಯಾಸಿಯನ್ನು ಕಂಡು ಮತ್ತೆ ಈತ ನಿಧಿ ಶೇಖರಣೆಗೋಸ್ಕರ ಬಂದಿರಬೇಕೆಂದು ಭಾವಿಸಿ ಸ್ವಲ್ಪ ವ್ಯಗ್ರರಾದರು. ಅದನ್ನು ಕಂಡ ಸನ್ಯಾಸಿ, "ನಾನು ನಿಧಿ ಶೇಖರಣೆಗೆ ಬರಲಿಲ್ಲ. ನಿಮ್ಮಲ್ಲಿ ಊಟಕ್ಕಾಗಿ ಬಂದಿದ್ದೇನೆ" ಎಂದು ಹೇಳಿದರು. ದೇವ್ ಅತ್ಯಂತ ಸಂತುಷ್ಟರಾಗಿ, ದೇವರೇ ಆ ರೂಪದಲ್ಲಿ ಬಂದಿದ್ದಾನೆ ಎಂದುಕೊಂಡು, "ಅವಶ್ಯವಾಗಿ ಬನ್ನಿ. ನೀವು ಇಂದು ನಮ್ಮ ಮನೆಗೆ ಬಂದಿರುವುದು ನಮ್ಮ ಪುಣ್ಯ. ನಿಮ್ಮ ಮನೆಯೇ ಎಂದು ಭಾವಿಸಿ ಒಳಗೆ ಬನ್ನಿ" ಎಂದರು. ಸನ್ಯಾಸಿ ತನ್ನ ಜೊತೆಯಲ್ಲಿ ಇನ್ನಿಬ್ಬರಿದ್ದಾರೆಂದು ಹೇಳಿದರು. ಅದಕ್ಕೆ ದೇವ್, "ಅವರು ಎಲ್ಲಿದ್ದಾರೆಂದು ಹೇಳಿದರೆ, ಅವರನ್ನು ಕರೆದು ತರಲು ಏರ್ಪಾಡು ಮಾಡುತ್ತೇನೆ" ಎಂದರು. "ಅದರ ಅವಶ್ಯಕತೆಯಿಲ್ಲ, ಅವರೊಡನೆ ಊಟದ ಸಮಯಕ್ಕೆ ನಾನೇ ಬರುತ್ತೇನೆ" ಎಂದು ಸನ್ಯಾಸಿ ಉತ್ತರ ಕೊಟ್ಟರು. ದೇವ್, "ಮಧ್ಯಾಹ್ನದ ಹೊತ್ತಿಗೆ ಊಟ ಸಿದ್ಧವಾಗಿರುತ್ತದೆ. ಆ ವೇಳೆಗೆ ದಯವಿಟ್ಟು ಬನ್ನಿ" ಎಂದರು. ಹೇಳಿದ ಹಾಗೆ, ಆ ಸನ್ಯಾಸಿ ತನ್ನ ಇಬ್ಬರು ಜೊತೆಗಾರರೊಂದಿಗೆ ಸಮಯಕ್ಕೆ ಸರಿಯಾಗಿ ಬಂದರು. ದೇವ್ ಅವರನ್ನು ಎಲ್ಲರೊಡನೆ ಕೂಡಿಸಿ ಉಪಚಾರ ಮಾಡಿದರು. ಆ ಮೂವರೂ ಊಟ ಮುಗಿಸಿ, ತಾಂಬೂಲ ಸ್ವೀಕರಿಸಿ ಹೊರಟು ಹೋದರು. ದಿನವೆಲ್ಲಾ ದೇವ್ ಬಾಬಾರಿಗೋಸ್ಕರ ಕಾದು, ಅವರು ಬರದಿದ್ದುದರಿಂದ ವ್ಯಾಕುಲರಾಗಿದ್ದರು.
ಸಮಾರಂಭವೆಲ್ಲ ಮುಗಿದಮೇಲೆ, ಬಾಬಾ ತಮ್ಮನ್ನು ನಿರಾಸೆಗೊಳಿಸಿದರು, ಎಂದು ದೇವ್ ಆಕ್ಷೇಪ ಮಾಡಿ, ಬಾಪೂ ಸಾಹೇಬ್ ಜೋಗ್ ಅವರಿಗೆ ಕಾಗದ ಬರೆದರು. ಜೋಗ್ ಬಾಬಾರ ಬಳಿಗೆ ಹೋಗಿ, ಆ ಕಾಗದವನ್ನು ತೆರೆಯುವುದಕ್ಕೆ ಮುಂಚೆಯೇ ಬಾಬಾ, "ನನ್ನ ಮಾತಿನಂತೆ ನಾನು ಹೋಗದೆ ಅವನಿಗೆ ಮೋಸ ಮಾಡಿದ್ದೇನೆ ಎಂದು ಆಕ್ಷೇಪ ಮಾಡಿದ್ದಾನೆ. ಅವನಿಗೆ ಜವಾಬು ಬರೆ. ಇನ್ನಿಬ್ಬರ ಜೊತೆ, ನಾನು ಅವನ ಮನೆಗೆ ಹೋಗಿ, ಉದ್ಯಾಪನೆಯ ಊಟ ಮಾಡಿದೆ. ಅವನು ನನ್ನನ್ನು ಗುರುತಿಸಲಿಲ್ಲ. ಸನ್ಯಾಸಿ ಹಣಕ್ಕಾಗಿ ಬಂದಿದ್ದಾನೆ ಎಂದುಕೊಂಡ. ನಾನು ಧನ ಕೂಡಿಸಲು ಬರಲಿಲ್ಲ. ಅವರ ಮನೆಯಲ್ಲಿ ಊಟಕ್ಕಾಗಿ ಬಂದಿದ್ದೇನೆ ಎಂದು ಹೇಳಿದೆ. ನನ್ನೊಡನೆ ಇನ್ನಿಬ್ಬರು ಇದ್ದಾರೆ ಎಂದೂ ಹೇಳಿದೆ. ನಾವು ಮೂವರೂ ಸರಿಯಾದ ಸಮಯಕ್ಕೆ ಅವನ ಮನೆಗೆ ಹೋಗಿ ಊಟ ಮಾಡಿಕೊಂಡು ಬಂದೆವು. ಮಾತನ್ನು ಉಳಿಸಿಕೊಳ್ಳಲು ನನ್ನ ಪ್ರಾಣವನ್ನೇ ಕೊಡಲು ಸಿದ್ಧ. ನಾನು ಎಂದೂ ಸುಳ್ಳು ಹೇಳುವುದಿಲ್ಲ" ಎಂದರು.
ಅದನ್ನು ಕೇಳಿದ ಜೋಗ್ ಬಹು ಸಂತೋಷದಿಂದ ಬಾಬಾರು ಹೇಳಿದ್ದನ್ನೆಲ್ಲ ಯಥಾವತ್ತಾಗಿ ದೇವ್ ಅವರಿಗೆ ಬರೆದು ತಿಳಿಸಿದರು. ಆ ಕಾಗದವನ್ನು ಓದಿದ ದೇವ್ ಅವರು ಬಾಬಾ ತಮ್ಮ ಮನೆಗೆ ಬಂದಿದ್ದರು, ಎಂಬುದನ್ನು ತಿಳಿದು ಬಹಳ ಸಂತೋಷಪಟ್ಟರೂ, ಅವರನ್ನು ಗುರುತಿಸಲಾರದೇ ಹೋದುದಕ್ಕೆ ತಮ್ಮನ್ನು ತಾವೇ ಹಳಿದು ಕೊಂಡರು. ಬಾಬಾ ತನಗೆ ಸೂಚನೆ ಕೊಟ್ಟರೂ ಅದನ್ನು ತಿಳಿದುಕೊಳ್ಳಲಾರದೇ, ಅವರನ್ನು ಆಕ್ಷೇಪಣೆ ಮಾಡಿ ಕಾಗದ ಬರೆದಿದ್ದು, ಅವರಿಗೆ ಅತೀವ ದುಃಖವನ್ನುಂಟುಮಾಡಿತು. ಪ್ರೇಮದಿಂದ ಯಾರು ಕರೆದರೂ, ಬಾಬಾ ಬರುತ್ತೇನೆಂದು ಒಮ್ಮೆ ಮಾತು ಕೊಟ್ಟರೆ ಎಂದಿಗೂ ತಪ್ಪಿಸುವುದಿಲ್ಲ ಎಂಬುದನ್ನು ಈ ಪ್ರಸಂಗ ಧೃಢಪಡಿಸುತ್ತದೆ. ತನ್ನ ಭಕ್ತರನ್ನು ಸಂತೋಷಗೊಳಿಸಲು ಬಾಬಾ ಧರ್ಮಯುತವಾದದ್ದನ್ನೇನಾದರೂ ಮಾಡಲು ಸಿದ್ಧ. ಅಂತಹ ಭಕ್ತಪರಾಧೀನ ಬಾಬಾರಿಗೆ ಮತ್ತೊಮ್ಮೆ ವಂದಿಸೋಣ.
ಹೇಮಾಡ್ ಪಂತರ ಕಥೆ
ದೇವ್ ಅವರ ಕಥೆಯಲ್ಲಿ ಬಾಬಾ ಅವರ ಆಹ್ವಾನವನ್ನು ಮನ್ನಿಸಿ ಅವರ ಮನೆಗೆ ಹೋದರು. ಆದರೆ ಈ ಕಥೆಯಲ್ಲಿ ಅದಕ್ಕೆ ತದ್ವಿರುದ್ಧ. ತಾವೇ ಬರುವುದಾಗಿ ಹೇಳಿ, ಭಕ್ತನ ಮನೆಗೆ ಹೋದರು. ಅದೇನು, ಹೇಗೆ ಎಂದು ನೋಡೋಣ.
೧೯೧೭ರಲ್ಲಿ, ಹೇಮಾಡ್ ಪಂತ್ ಬಾಂದ್ರಾದಲ್ಲಿದ್ದಾಗ, ಹೋಳಿ ಹುಣ್ಣಿಮೆಯದಿನ ಬೆಳಗ್ಗೆ, ಅವರಿಗೆ ಒಂದು ಕನಸಾಯಿತು. ಅದರಲ್ಲಿ ಸನ್ಯಾಸಿಯ ವೇಷದಲ್ಲಿ ಬಾಬಾ ಅವರಿಗೆ ಕಾಣಿಸಿಕೊಂಡು, ತಾವು ಅವರ ಮನೆಗೆ ಅಂದು ಊಟಕ್ಕೆ ಬರುತ್ತೇನೆಂದು ಹೇಳಿದರು. ಹೇಮಾಡ್ ಪಂತ್ ಎಚ್ಚೆತ್ತಾಗ, ಅವರಿಗೆ ಯಾವ ಸನ್ಯಾಸಿಯೂ ಕಾಣಲಿಲ್ಲ. ಬಾಬಾರೂ ಕಾಣಲಿಲ್ಲ. ಆದರೆ ಅವರಿಗೆ ತಾವು ಕನಸಿನಲ್ಲಿ ಕೇಳಿದ ಪ್ರತಿಯೊಂದು ಪದವೂ ನೆನಪಿನಲ್ಲಿದ್ದು, ಅಶ್ಚರ್ಯವನ್ನು ತಂದಿತು. ತಾವು ಇಷ್ಟು ವರ್ಷಗಳು ಬಾಬಾರ ಜೊತೆಯಲ್ಲಿದ್ದರೂ, ಬಾಬಾ ಎಂದೂ ತಮ್ಮ ಮನೆಗೆ ಊಟಕ್ಕೆ ಬರುತ್ತೇನೆಂದು ಹೇಳಿರಲಿಲ್ಲ. ಅವು "ಶಿಮ್ಗಾ" ದಿನಗಳು. ಹೇಮಾಡ್ ಪಂತ್ ತಮ್ಮ ಹೆಂಡತಿಗೆ, "ಸನ್ಯಾಸಿಯೊಬ್ಬರು ಊಟಕ್ಕೆ ಬರುತ್ತಾರೆ, ಸ್ವಲ್ಪ ಹೆಚ್ಚು ಅಡಿಗೆಯನ್ನು ಮಾಡು" ಎಂದು ಹೇಳಿದರು. ಆಕೆ, ಕುತೂಹಲದಿಂದ ಯಾರು ಬರುತ್ತಾರೆ ಎಂದು ಕೇಳಿದರು. ಆಕೆ ಇಲ್ಲದ ಊಹೆ ಮಾಡದಂತೆ, ತಮಗಾದ ಕನಸೆಲ್ಲವನ್ನೂ, ಪಂತರು ಹೇಳಿದರು. ಆಕೆ, "ಶಿರಡಿಯ ರುಚಿಕರವಾದ ಊಟವನ್ನು ಬಿಟ್ಟು, ನಮ್ಮ ಮನೆಯ ಸಾಧಾರಣವಾದ ಊಟಕ್ಕೆ, ಬಾಬಾ ಬರುತ್ತಾರೆಯೇ?" ಎಂದು ಸಂದೇಹಪಟ್ಟರು. ಅದಕ್ಕೆ ಹೇಮಾಡ್ ಪಂತರು, "ಬಾಬಾರೇ ಬರದಿರಬಹುದು. ಯಾರಾದರೂ ಅತಿಥಿಯ ರೂಪದಲ್ಲಿ ಬರಬಹುದು. ಇಷ್ಟಕ್ಕೂ, ಸ್ವಲ್ಪ ಹೆಚ್ಚು ಅಡಿಗೆ ಮಾಡುವುದರಿಂದ ನಷ್ಟವೇನೂ ಇಲ್ಲ" ಎಂದರು
ಮಧ್ಯಾಹ್ನದ ವೇಳೆಗೆ, ಪೂಜೆಗಳೆಲ್ಲಾ ಮುಗಿದು, ಎಲ್ಲರಿಗೂ ಎಲೆ ಹಾಕಿ ತಯಾರಾಗಿದ್ದ ಅಡಿಗೆಗಳನ್ನೆಲ್ಲಾ ಬಡಿಸಿದರು. ಎಲೆಗಳ ಮುಂದೆ ರಂಗೋಲಿ ಹಾಕಿ, ಅತಿಥಿ ಅಭ್ಯಾಗತರಿಗೆ ಎರಡುಸಾಲು, ಮಧ್ಯೆ ವಿಶೇಷವಾಗಿ ಒಂದು ಎಲೆ ಹಾಕಲಾಗಿತ್ತು. ಬಂದಿದ್ದವರೆಲ್ಲರೂ ಎಲೆಗಳ ಮುಂದೆ ಕುಳಿತರು. ಬಡಿಸುವುದೂ ಮುಗಿಯಿತು. ಆದರೂ, ಆ ವಿಶೇಷ ಅತಿಥಿಯ ಸುಳುಹು ಕಾಣಲಿಲ್ಲ. ಬಂದಿದ್ದ ಅತಿಥಿಗಳಿಗೆ ತಡವಾಗಬಾರದೆಂದು ಕೃಷ್ಣಾರ್ಪಣೆ ಮಾಡಿ ಇನ್ನೇನು ಎಲ್ಲರೂ ಊಟ ಆರಂಭ ಮಾಡಬೇಕು ಎನ್ನುವ ಹೊತ್ತಿಗೆ ಸರಿಯಾಗಿ, ಯಾರೋ ಬರುವ ಹೆಜ್ಜೆಯ ಸಪ್ಪಳ ಕೇಳಿಸಿತು. ಬಂದವರು ಬಾಗಿಲು ತಟ್ಟಿದರು. ಹೇಮಾಡ್ ಪಂತ್ ಹೋಗಿ ಬಾಗಿಲು ತೆರೆದು ನೋಡಿದರೆ, ಅಲ್ಲಿ ಆಲಿ ಮೊಹಮ್ಮದ್ ಮತ್ತು ಮೌಲಾನಾ ಇಸ್ಮು ಮುಝಾವರ್ ಇಬ್ಬರೂ, ತಮ್ಮ ಕೈಯಲ್ಲಿ ಒಂದು ಕಾಗದದಲ್ಲಿ ಸುತ್ತಿದ್ದ ಕಟ್ಟು ಹಿಡಿದು ನಿಂತಿದ್ದರು. ಎಲ್ಲರೂ ಊಟಕ್ಕೆ ಸಿದ್ಧರಾಗಿರುವುದನ್ನು ನೋಡಿ, ಬಂದವರು, "ನಮ್ಮನ್ನು ಕ್ಷಮಿಸಿ. ನಿಮ್ಮ ಊಟಕ್ಕೆ ಅಡ್ಡಬಂದೆವು. ಎಲ್ಲರೂ ಸಿದ್ಧರಾಗಿ ಕೂತಿದ್ದಾರೆ. ಈ ಕಟ್ಟನ್ನು ತೆಗೆದುಕೊಳ್ಳಿ. ಇದರ ಕಥೆ ಆಮೇಲೆ ಹೇಳುತ್ತೇವೆ. ಊಟ ಮಾಡಿ" ಎಂದು ಹೇಳಿ, ಆ ಕಟ್ಟನ್ನು ಹೇಮಾಡ್ ಪಂತರ ಕೈಲಿಟ್ಟರು.
ಹೇಮಾಡ್ ಪಂತ್ ಅದನ್ನು ತೆಗೆದು ನೋಡಿದರೆ, ಅದು ಬಾಬಾರ ಸುಂದರವಾದ ದೊಡ್ಡ ಚಿತ್ರಪಟ. ಅತ್ಯಂತ ಆನಂದಭರಿತರಾದ ಪಂತರಿಗೆ, ಕಣ್ಣಿನಿಂದ ಆನಂದ ಬಾಷ್ಪಗಳು ಧಾರೆಯಾಗಿ ಸುರಿದವು. ಬಾಬಾ ತಮ್ಮ ಮಾತಿನಂತೆ ಬಂದು, ತಮ್ಮನ್ನು ಆಶೀರ್ವದಿಸುತ್ತಿದ್ದಾರೆ, ಎಂದು ಭಾವಿಸಿಕೊಂಡರು. ಆ ಚಿತ್ರಪಟಕ್ಕೆ ನಮಸ್ಕಾರಮಾಡಿ, ಕುತೂಹಲ ತಡೆಯಲಾರದೆ ಬಂದವರನ್ನು ಆ ಚಿತ್ರಪಟ ಅವರಿಗೆ ಎಲ್ಲಿ ಸಿಕ್ಕಿತು ಎಂದು ಕೇಳಿದರು. ಬಂದವರಿಬ್ಬರೂ, "ನಿಮಗೆ ಊಟಕ್ಕೆ ತಡವಾಗುತ್ತದೆ. ಎಲ್ಲರೂ ಕಾದಿದ್ದಾರೆ. ಆ ಪಟದ ವಿಷಯ ಮತ್ತೆ ಯಾವಾಗಲಾದರೂ ಹೇಳುತ್ತೇವೆ. ಈಗ ಹೋಗಿ ಊಟಮಾಡಿ" ಎಂದು ಹೇಳಿ ಹೊರಟು ಹೋದರು. ಅವರನ್ನು ಬೀಳ್ಕೊಟ್ಟು, ಒಳಗೆ ಬಂದು, ಪಂತರು ತಡ ಮಾಡದೆ ಆ ಚಿತ್ರಪಟವನ್ನು ವಿಶೇಷ ಅತಿಥಿಗೆಂದು ಸಿದ್ಧಮಾಡಿದ್ದ ಜಾಗದಲ್ಲಿ ಇಟ್ಟು, ಅದಕ್ಕೆ ಪೂಜೆ ನೈವೇದ್ಯಗಳನ್ನು ಮಾಡಿ ಮಿಕ್ಕೆಲ್ಲರೊಡನೆ ಊಟ ಆರಂಭಿಸಿದರು. ಈ ಲೀಲೆಯಿಂದ ಬಂದಿದ್ದ ಅತಿಥಿಗಳೆಲ್ಲರೂ, ಬಾಬಾ ತಾವು ಹೇಳಿದ್ದಂತೆ ಊಟದ ಹೊತ್ತಿಗೆ ಸರಿಯಾಗಿ ಬಂದಿದ್ದನ್ನು ಕಂಡು, ಆನಂದಾಶ್ಚರ್ಯಗಳಿಂದ ತುಂಬಿಹೋದರು. ಅದಾದನಂತರ ಹೇಮಾಡ್ ಪಂತರು ಆ ಚಿತ್ರಪಟವನ್ನು ತಮ್ಮ ಪೂಜಾಗೃಹದಲ್ಲಿಟ್ಟು, ದಿನವೂ ಪೂಜೆ ಮಾಡಿಕೊಳ್ಳಲು ಆರಂಭಿಸಿದರು. ಪ್ರತಿವರ್ಷವೂ ಹೋಳಿಯ ದಿನ ಅದಕ್ಕೆ ವಿಶೇಷ ಪೂಜೆಗಳನ್ನು ಅರ್ಪಿಸುತ್ತಿದ್ದರು.
ಕನಸಿನಲ್ಲೋ, ನಿಜವಾಗಿಯೋ, ತಾವು ಕೊಟ್ಟ ಮಾತನ್ನು ತಪ್ಪದೇ, ಬಾಬಾ ಉಳಿಸಿಕೊಳ್ಳುತ್ತಿದ್ದರು. ಅಂತಹ ಭಕ್ತಪರಾಧೀನ ಬಾಬಾರ ಚರಣಾರವಿಂದಗಳಲ್ಲಿ ನಮಸ್ಕರಿಸಿ ಧನ್ಯರಾಗೋಣ.
ಇದರೊಂದಿಗೆ ಬಾಬಾರ ಕಥೆಗಳು, ಶ್ರೀಮತಿ ದೇವ್ ಅವರ ಉದ್ಯಾಪನೆ, ಹೇಮಾಡ್ ಪಂತ್ ಮನೆಗೆ ಬಾಬಾ ಹೋಗಿದ್ದು ಮತ್ತು ಇತರ ವಿಷಯಗಳನ್ನು ಕುರಿತು ಹೇಳುವ ನಲವತ್ತನೆಯ ಅಧ್ಯಾಯ ಮುಗಿಯಿತು. ಮುಂದಿನ ಅಧ್ಯಾಯದಲ್ಲಿ ಹೇಮಾಡ್ ಪಂತ್, ಬಾಬಾರ ಚಿತ್ರಪಟದ ಕಥೆ, ಚಿಂದಿಯ ಕಳವು, ಜ್ಞಾನೇಶ್ವರಿ ಓದುವುದು ಇತ್ಯಾದಿ ವಿಷಯಗಳನ್ನು ಹೇಳುತ್ತಾರೆ.
||ಸದ್ಗುರು ಶ್ರೀ ಸಾಯಿನಾಥಾರ್ಪಣಮಸ್ತು||ಶುಭಂ ಭವತು||
||ಓಂ ಶಾಂತಿಃ ಶಾಂತಿಃ ಶಾಂತಿಃ||
||ಓಂ ಶಾಂತಿಃ ಶಾಂತಿಃ ಶಾಂತಿಃ||