||ಶ್ರೀ ಸಾಯಿ ಸಚ್ಚರಿತ್ರೆ||
||ಮುವ್ವತ್ತಾರನೆಯ ಅಧ್ಯಾಯ||
||ಗೋವಾ ಗಣ್ಯರ ಪ್ರಕರಣ||
ಶ್ರೀ ಗಣೇಶಾಯ ನಮಃ ಶ್ರೀ ಸರಸ್ವತಯೇ ನಮಃ
ಶ್ರೀ ವೆಂಕಟೇಶಾಯ ನಮಃ ಶ್ರೀ ಸಾಯಿನಾಥಾಯ ನಮಃ
ಶ್ರೀ ಸದ್ಗುರುಭ್ಯೋನ್ನಮಃ
||ಮುವ್ವತ್ತಾರನೆಯ ಅಧ್ಯಾಯ||
||ಗೋವಾ ಗಣ್ಯರ ಪ್ರಕರಣ||
ಶ್ರೀ ಗಣೇಶಾಯ ನಮಃ ಶ್ರೀ ಸರಸ್ವತಯೇ ನಮಃ
ಶ್ರೀ ವೆಂಕಟೇಶಾಯ ನಮಃ ಶ್ರೀ ಸಾಯಿನಾಥಾಯ ನಮಃ
ಶ್ರೀ ಸದ್ಗುರುಭ್ಯೋನ್ನಮಃ
ಈ ಅಧ್ಯಾಯದಲ್ಲಿ ಹೇಮಾಡ್ ಪಂತ್, ಇಬ್ಬರು ಗೋವಾದ ಗಣ್ಯರು, ಶ್ರೀಮತಿ ಔರಂಗಾಬಾದಕರ ಇತ್ಯಾದಿ ವಿಷಯಗಳನ್ನು ಕುರಿತು ಹೇಳುತ್ತಾರೆ.
ಬಾಬಾರ ಕಥೆಗಳು
ನಮ್ಮ ಪ್ರೇಮದ ಪುತ್ಥಳಿ ಬಾಬಾರ ಕಥೆಗಳು ಯಾವ ಸಮಯದಲ್ಲೇ ಆಗಲಿ, ಎಲ್ಲೇ ಆಗಲಿ, ಸಚ್ಚರಿತ್ರೆಯಲ್ಲಿ ಹೇಳಿರುವಂತೆ ಅಥವಾ ಇನ್ನಾವರೀತಿಯಲ್ಲಿ ಹೇಳಿದರೂ, ಅವು ಸುಶ್ರಾವ್ಯವಾಗಿ, ಆನಂದ ದಾಯಕವಾಗಿರುತ್ತವೆ. ಪ್ರತಿ ಕಥೆಯೂ ಅಮೃತ ಭಾಂಡವೇ! ಸಚ್ಚರಿತ್ರೆಯ ಈ ಕಥೆಗಳನ್ನು ಮನಸ್ಸಿಟ್ಟು ಶ್ರದ್ಧಾ ಭಕ್ತಿಗಳಿಂದ ಪಾರಾಯಣ ಮಾಡಿದರೆ ಅವು ನಮ್ಮ ದುರಿತಗಳನ್ನೆಲ್ಲ ದೂರ ಮಾಡುತ್ತವೆ.ಶ್ರೇಯಸ್ಸನ್ನು ಕೋರುವವರುಅವಶ್ಯವಾಗಿ ಸಚ್ಚರಿತ್ರೆಯ ಪಾರಾಯಣ ಮಾಡಬೇಕು. ಪಾವನಗೊಳಿಸುವ ಈ ಕಥೆಗಳ ಪಠನ, ಶ್ರವಣಗಳನ್ನು, ಮಾಡುವವರಿಬ್ಬರನ್ನೂ ಶ್ರೀ ಸಾಯಿ ತಪ್ಪದೇ ಅನುಗ್ರಹಿಸುತ್ತಾರೆ.
ಇಬ್ಬರು ಗೋವಾದ ಗಣ್ಯರು
ಬಾಬಾರ ಕೀರ್ತಿ ಪ್ರತಿಷ್ಠೆಗಳು ಬೆಳೆದಂತೆಲ್ಲಾ ಸುತ್ತಮುತ್ತಲಿನವರಷ್ಟೇ ಅಲ್ಲ, ದೂರ ದೂರದಿಂದಲೂ ಜನ ಅವರ ದರ್ಶನಕ್ಕಾಗಿ ಬರುತ್ತಿದ್ದರು. ಒಂದುಸಲ ಗೋವಾದಿಂದ ಇಬ್ಬರು ದೊಡ್ಡಮನುಷ್ಯರು ಶಿರಡಿಗೆ ಬಂದರು. ವಾಡಾದಲ್ಲಿಳಿದು, ಸ್ನಾನಾದಿಗಳನ್ನು ಮುಗಿಸಿ, ಬಾಬಾರ ದರ್ಶನಕ್ಕೆಂದು ಮಸೀದಿಗೆ ಬಂದರು. ಇಬ್ಬರೂ ಅವರಿಗೆ ನಮಸ್ಕರಿಸಿದಾಗ, ಬಾಬಾ ಅವರಲ್ಲಿ ಒಬ್ಬನನ್ನು ೧೫ ರೂಪಾಯಿ ದಕ್ಷಿಣೆ ಕೇಳಿ ತೆಗೆದುಕೊಂಡರು. ಇನ್ನೊಬ್ಬರು ಸ್ವಇಚ್ಚೆಯಿಂದ ೩೫ ರೂಪಾಯಿ ದಕ್ಷಿಣೆ ಕೊಟ್ಟರೆ, ಬಾಬಾ ಅದನ್ನು ನಿರಾಕರಿಸಿದರು. ಆಗ ಅಲ್ಲೇ ಇದ್ದ ಶ್ಯಾಮಾ, "ದೇವಾ, ಈ ತಾರತಮ್ಯವೇಕೆ? ಒಬ್ಬರನ್ನು ನೀನೇ ದಕ್ಷಿಣೆ ಕೇಳುತ್ತೀಯೆ, ಇನ್ನೊಬ್ಬರು ತಾವಾಗಿಯೇ ಕೊಟ್ಟರೂ ಬೇಡವೆನ್ನುತ್ತೀಯೆ. ಇದೇಕೆ ಹೀಗೆ?" ಎಂದು ಕೇಳಿದರು. ಅದಕ್ಕೆ ಬಾಬಾ, "ಶಾಮ್ಯಾ, ನಿನಗೇನೂ ತಿಳಿಯದು. ನಾನು ಯಾರಿಂದಲೂ ಏನನ್ನೂ ತೆಗೆದುಕೊಳ್ಳುವುದಿಲ್ಲ. ಮಸೀದಿಮಾಯಿ ಋಣವನ್ನು ತೀರಿಸುವಂತೆ ಕೇಳುತ್ತಾಳೆ. ಋಣಿ ಅದನ್ನು ಕೊಟ್ಟು ಬಿಡುಗಡೆ ಹೊಂದುತ್ತಾನೆ. ನನಗೇನು ಹಣ ಬೇಕಾಗಿಲ್ಲ. ನನಗೇನು ಮನೆಯೇ? ಮಠವೇ? ಸಂಸಾರವಿದೆಯೇ? ನಾನೊಬ್ಬ ಸ್ವತಂತ್ರ ಜೀವಿ. ಸಾಲ, ಶತೃತ್ವ, ಕೊಲೆ ಇವುಗಳ ಋಣವನ್ನು ತೀರಿಸಲೇ ಬೇಕು. ಅದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ" ಎಂದು ಹೇಳಿ, ಕೆಳಗಿನ ಕಥೆಯನ್ನು ಹೇಳಿದರು.
ಒಬ್ಬ ಬಡವ ಇದ್ದ. ತನಗೆ ಕೆಲಸ ಸಿಕ್ಕಿದರೆ, ತನ್ನ ಮೊದಲ ತಿಂಗಳ ಸಂಬಳವನ್ನು ದೇವರಿಗೆ ಒಪ್ಪಿಸುತ್ತೇನೆ, ಎಂದು ಅವನು ಹರಕೆ ಮಾಡಿಕೊಂಡ. ಅವನಿಗೆ ಕೆಲಸ ಸಿಕ್ಕಿತು. ಅವನ ಮೊದಲ ತಿಂಗಳ ಸಂಬಳ ೧೫ ರೂಪಾಯಿಗಳು. ಕ್ರಮಕ್ರಮವಾಗಿ ಅವನು ವೃದ್ಧಿಯಾಗಿ, ಅವನ ಸಂಬಳ ಹೆಚ್ಚುತ್ತಾ ೩೦, ೬೦, ೧೦೦, ೨೦೦ ಕೊನೆಗೆ ೭೦೦ ರೂಪಾಯಿಗಳಿಗೆ ಏರಿತು. ಹೀಗೆ ವರ್ಧಮಾನ ನಾಗುತ್ತಾ ಬಂದಂತೆಲ್ಲಾ ತಾನು ಮಾಡಿಕೊಂಡಿದ್ದ ಹರಕೆಯ ವಿಷಯವೇ ಅವನಿಗೆ ಮರೆತುಹೋಯಿತು. ಅವನ ಕರ್ಮ ಅವನನ್ನು ಇಲ್ಲಿಗೆ ಕರೆದು ತಂದಿದೆ. ಅದರಿಂದ ಅವನನ್ನು ನಾನು ೧೫ ರೂಪಾಯಿ ದಕ್ಷಿಣೆ ಕೇಳಿದೆ."
ಮುಂದುವರೆಸಿ ಬಾಬಾ ಹೇಳಿದರು, "ಸಮುದ್ರ ತೀರದಲ್ಲಿ ಅಡ್ಡಾಡುತ್ತಾ, ಒಂದು ದೊಡ್ಡ ಬಂಗಲೆಯನ್ನು ನೋಡಿ, ನಾನು ಅದರ ವರಾಂಡದಲ್ಲಿ ಕುಳಿತೆ. ಅದರ ಬ್ರಾಹ್ಮಣ ಮಾಲೀಕ ನನ್ನನ್ನು ಒಳಕ್ಕೆ ಕರೆದು, ಸತ್ಕರಿಸಿ, ಒಳ್ಳೆಯ ಊಟ ಕೊಟ್ಟು, ಮಲಗಲು ಅಲಮಾರಿನ ಹತ್ತಿರ ಒಂದು ಜಾಗ ತೋರಿಸಿ, ಅನುಕೂಲ ಮಾಡಿಕೊಟ್ಟ. ಸುಸ್ತಾಗಿದ್ದುದರಿಂದ, ನನಗೆ ಗಾಢವಾದ ನಿದ್ದೆ ಬಂತು. ಹಾಗೆ ನಿದ್ದೆ ಮಾಡುತ್ತಿದ್ದಾಗ, ಆ ಮಾಲೀಕ ಗೋಡೆಯಲ್ಲಿ ಒಂದು ರಂಧ್ರ ಮಾಡಿ, ಒಳಗೆ ಬಂದು ನನ್ನಲ್ಲಿದ್ದ ಹಣವನ್ನೆಲ್ಲಾ ಕದ್ದುಕೊಂಡುಹೋದ. ಎಚ್ಚರವಾದಾಗ, ನನ್ನಲ್ಲಿ ನೋಟುಗಳ ರೂಪದಲ್ಲಿದ್ದ ೩೦,೦೦೦ ರೂಪಾಯಿ ಕಳುವಾಗಿದೆಯೆಂದು ತಿಳಿಯಿತು. ಬಹಳ ದುಃಖವಾಗಿ, ಅಲ್ಲೇ ಅಳುತ್ತಾ ಕುಳಿತೆ. ಮಾಲೀಕನೇ ಆ ಹಣ ಕದ್ದಿರಬೇಕೆಂದು ನನಗೆ ಸಂದೇಹ ಬಂತು. ಹಾಗೆ ಅನ್ನ ನೀರು ಬಿಟ್ಟು, ೧೫ ದಿನಗಳು ವರಾಂಡದಲ್ಲೇ ಅಳುತ್ತಾ ಕುಳಿತಿದ್ದೆ. ಆಗ ಒಬ್ಬ ಫಕೀರ ನಾನು ಅಳುತ್ತಿರುವುದನ್ನು ಕಂಡು, ಕಾರಣವೇನು ಎಂದು ಕೇಳಿದ. ನಾನು ಅವನಿಗೆ ಎಲ್ಲವನ್ನೂ ಹೇಳಿದೆ. ಅದಕ್ಕೆ ಅವನು, "ನಾನು ಹೇಳಿದಂತೆ ಮಾಡಿದರೆ, ನಿನ್ನ ಹಣ ನಿನಗೆ ದೊರೆಯುತ್ತದೆ. ನಾನು ಹೇಳುವ ಫಕೀರನೊಬ್ಬನನ್ನು ಆಶ್ರಯಿಸಿ, ಅವನಿಗೆ ಶರಣಾಗು. ಅವನು ನಿನ್ನ ಹಣ ಕೊಡಿಸುತ್ತಾನೆ. ಹಣ ದೊರಕಿ, ಅವನನ್ನು ನೀನು ದರ್ಶನ ಮಾಡಿಕೊಳ್ಳುವವರೆಗೂ, ನಿನಗೆ ಅತಿ ಪ್ರಿಯವಾದ ಆಹಾರವನ್ನು ತಿನ್ನುವುದಿಲ್ಲವೆಂದು ಶಪಥ ಮಾಡಿಕೋ" ಎಂದ. ಆ ಫಕೀರ ಹೇಳಿದಂತೆ ನಾನು ಮಾಡಿದೆ. ಕಳೆದುಹೋಗಿದ್ದ ಹಣ ಮತ್ತೆ ಪಡೆದೆ. ಆಮೇಲೆ, ನಾನು ಸಮುದ್ರ ತಟಕ್ಕೆ ಹೋದೆ. ಅಲ್ಲಿ ಹಡಗೊಂದು ಹೊರಡಲು ಸಿದ್ಧವಾಗಿ ನಿಂತಿತ್ತು. ಅದು ಆಗಲೇ ತುಂಬಿ ಹೋಗಿದ್ದುದರಿಂದ ಅಲ್ಲಿ ನನಗೆ ಜಾಗ ಸಿಕ್ಕಲಿಲ್ಲ. ಅಪರಿಚಿತ ಸಹೃದಯಿ ಜವಾನನೊಬ್ಬನ ಮಧ್ಯಸ್ಥಿಕೆಯಿಂದಾಗಿ ನನಗೆ ಜಾಗ ದೊರೆಯಿತು. ಆ ಹಡಗು ನನ್ನನ್ನು ಇನ್ನೊಂದು ತಟಕ್ಕೆ ಕರೆದೊಯ್ಯಿತು. ಅಲ್ಲಿಂದ ನಾನು ರೈಲಿನಲ್ಲಿ ಮಸೀದಿಮಾಯಿಗೆ ಬಂದೆ" ಎಂದು ಹೇಳಿ, ಶ್ಯಾಮಾರಿಗೆ ಅತಿಥಿಗಳನ್ನು ಕರೆದುಕೊಂಡು ಹೋಗಿ, ಊಟಕ್ಕೆ ಏರ್ಪಾಡು ಮಾಡು ಎಂದರು. ಇದನ್ನೆಲ್ಲಾ ಕೇಳುತ್ತಿದ್ದ ಶ್ಯಾಮಾರಿಗೆ ದಿಕ್ಕೇ ತೋಚದಂತಾಗಿತ್ತು.
ಅತಿಥಿಗಳನ್ನು ಮನೆಗೆ ಕರೆದುಕೊಂಡು ಹೋಗಿ ಶ್ಯಾಮಾ ಊಟಕ್ಕೆ ಏರ್ಪಾಡುಮಾಡಿದರು. ಊಟಮಾಡುತ್ತಾ ಆತ ಆ ಅತಿಥಿಗಳನ್ನು ಕೇಳಿದರು, "ಬಾಬಾ ಹೇಳಿದ್ದು, ನಿಮಗೇನಾದರೂ ಅರ್ಥವಾಯಿತೇ? ನನಗೆ ತಿಳಿದಂತೆ, ಬಾಬಾ ಎಂದೂ ಯಾವ ಸಮುದ್ರ ತಟಕ್ಕೂ ಹೋಗಿಲ್ಲ. ಎಂದೂ ಅವರ ಬಳಿ ಹಣ ಇರಲಿಲ್ಲ. ಅವರು ಹಣ ಎಂದೂ ಕಳೆದುಕೊಂಡಿಲ್ಲ. ಹಣ ವಾಪಸ್ಸು ಪಡೆದಿಲ್ಲ. ರೈಲಿನಲ್ಲಿ ಪ್ರಯಾಣವನ್ನೂ ಮಾಡಿಲ್ಲ." ಅದಕ್ಕೆ ಬಂದಿದ್ದ ಆ ಅತಿಥಿಗಳು, ಬಾಬಾರ ಕಥೆಗಳಿಂದ ಅತ್ಯಂತ ಪ್ರಭಾವಿತರಾಗಿ, ಕಣ್ಣೀರು ಸುರಿಸುತ್ತಾ, "ಬಾಬಾ ಸರ್ವಜ್ಞರು. ಪರಮಾತ್ಮ. ಅಪ್ರಮೇಯ ಪರಬ್ರಹ್ಮ. ಅವರು ಹೇಳಿದ್ದೆಲ್ಲಾ ನಮ್ಮ ಕಥೆಯೇ! ಊಟವಾದಮೇಲೆ ಎಲ್ಲವನ್ನೂ ವಿವರವಾಗಿ ಹೇಳುತ್ತೇವೆ" ಎಂದರು.
ಊಟವಾದಮೇಲೆ ತಾಂಬೂಲ ಹಾಕಿಕೊಳ್ಳುತ್ತಾ, ಅತಿಥಿಗಳಲ್ಲಿ ಒಬ್ಬರು ಹೇಳಿದರು, "ನನ್ನ ಮನೆ ಘಟ್ಟದ ಮೇಲಿದೆ. ನಾನು ಕೆಲಸ ಹುಡುಕುತ್ತಾ, ಗೋವಾಕ್ಕೆ ಹೋದೆ. ಕೆಲಸ ಸಿಕ್ಕಿದರೆ ನನ್ನ ಮೊದಲನೆಯ ತಿಂಗಳ ಸಂಬಳ ನಿನಗೆ ಒಪ್ಪಿಸುತ್ತೇನೆ ಎಂದು ದತ್ತಾತ್ರೇಯರಿಗೆ ಹರಕೆ ಹೊತ್ತೆ. ಅವನ ಕರುಣೆಯಿಂದ ನನಗೆ ತಿಂಗಳಿಗೆ ೧೫ ರೂಪಾಯಿ ಸಂಬಳದ ಮೇಲೆ, ಕೆಲಸ ಸಿಕ್ಕಿತು. ಕ್ರಮಕ್ರಮವಾಗಿ ಬಡತಿಯೂ ಸಿಕ್ಕಿ, ಬಾಬಾ ಹೇಳಿದಂತೆ, ನನ್ನ ಸಂಬಳ ೭೦೦ ರೂಪಾಯಿಗಳಿಗೆ ಹೆಚ್ಚಿತು. ಆ ಸಂಭ್ರಮದಲ್ಲಿ, ಮಾಡಿದ್ದ ಹರಕೆ ಸಂಪೂರ್ಣವಾಗಿ ಮರೆತುಹೋಯಿತು. ಅದನ್ನು ಮತ್ತೆ ನನ್ನ ನೆನಪಿಗೆ ತಂದುಕೊಟ್ಟು, ಬಾಬಾ ನನ್ನಿಂದ ೧೫ ರೂಪಾಯಿ ತೆಗೆದುಕೊಂಡು, ನನ್ನನ್ನು ಋಣಮುಕ್ತನನ್ನಾಗಿ ಮಾಡಿದ್ದಾರೆ. ನಾನು ಕೊಟ್ಟದ್ದು ದಕ್ಷಿಣೆಯಲ್ಲ. ಹಳೆಯ ಸಾಲ. ಮರೆತಿದ್ದ ಹರಕೆಯ ಪೂರೈಕೆ" ಎಂದರು.
ಬಾಬಾ ಎಂದೂ ಹಣಕ್ಕಾಗಿ ಬೇಡಲಿಲ್ಲ. ತನ್ನ ಭಕ್ತರನ್ನು ಹಣ ಬೇಡಲು ಬಿಡಲಿಲ್ಲ. ಆತ್ಮಸಾಕ್ಷಾತ್ಕಾರದ ಹಾದಿಯಲ್ಲಿ, ಹಣ ಒಂದು ದೊಡ್ಡ ಅಡಚಣೆ. ಆದ್ದರಿಂದ ಬಾಬಾ ತಮ್ಮ ಭಕ್ತರನ್ನು ಈ ಅಡಚಣೆಯಲ್ಲಿ ಸಿಕ್ಕಿಹಾಕಿಕೊಳ್ಳಲು, ಬಿಡುತ್ತಿರಲಿಲ್ಲ. ಮಹಲ್ಸಾಪತಿ ಅಹನ್ಯಹನಿ ಕಾಲಕ್ಷೇಪ ಮಾಡುವ ಅತ್ಯಂತ ಬಡವರು. ತಮ್ಮ ದಕ್ಷಿಣೆಯ ಹಣದಲ್ಲಿ, ಒಂದೇ ಒಂದು ಪೈಸಾ ಕೂಡಾ ಬಾಬಾ ಎಂದೂ ಮಹಲ್ಸಾಪತಿಗೆ ಕೊಡಲಿಲ್ಲ. ಬೇರೆಯವರಿಂದ ಆತ ಹಣ ಪಡೆಯಲೂ ಬಿಡಲಿಲ್ಲ. ಒಂದುಸಲ, ಹನ್ಸರಾಜ್ ಎನ್ನುವ ಉದಾರಿ ವ್ಯಾಪಾರಿಯೊಬ್ಬರು ಮಹಲ್ಸಾಪತಿಗೆ ದೊಡ್ಡ ಮೊತ್ತವೊಂದನ್ನು ಬಾಬಾರ ಸಮ್ಮುಖದಲ್ಲಿ ಕೊಡ ಬೇಕೆಂದುಕೊಂಡರು. ಅದಕ್ಕೆ ಬಾಬಾ ಅನುಮತಿ ಕೊಡಲಿಲ್ಲ.
ಎರಡನೆಯ ಅತಿಥಿ ತಮ್ಮ ಕಥೆ ಹೇಳುತ್ತಾ, "ಅತ್ಯಂತ ವಿಧೇಯನಾಗಿ, ಒಬ್ಬ ಬ್ರಾಹ್ಮಣ ಅಡಿಗೆಯವನು ೩೫ ವರ್ಷಗಳಿಂದ ನನ್ನಲ್ಲಿ ಕೆಲಸ ಮಾಡಿಕೊಂಡಿದ್ದ. ದುರದೃಷ್ಟವಶಾತ್ ಅವನು ಕೆಟ್ಟ ಸಹವಾಸದಲ್ಲಿ ಬಿದ್ದು, ಒಂದು ದಿನ ನನ್ನ ಮನೆಯ ಗೋಡೆಗೆ ಕನ್ನ ಹಾಕಿ, ನೋಟುಗಳ ರೂಪದಲ್ಲಿದ್ದ ನನ್ನ ಹಣವನ್ನೆಲ್ಲ ಕದ್ದುಕೊಂಡು ಹೋದ. ಅದು ನಾನು ಬಹಳ ದಿನಗಳಿಂದ ಸೇರಿಸಿಟ್ಟಿದ್ದ ೩೦,೦೦೦ ರೂಪಾಯಿಗಳು. ದಿಕ್ಕುತೋಚದೆ ಅಳುತ್ತಾ ಕುಳಿತಿದ್ದೆ. ಹಾಗೇ ಹದಿನೈದು ದಿನಗಳು ಕಳೆದವು. ಒಂದು ದಿನ ನಾನು ಹಾಗೆ ಅಳುತ್ತಾ ಕುಳಿತಿದ್ದುದನ್ನು ನೋಡಿದ ಒಬ್ಬ ಫಕೀರ, ನನ್ನ ಅಳುವಿಗೆ ಕಾರಣವೇನೆಂದು ಕೇಳಿದ. ನಾನು ಎಲ್ಲವನ್ನೂ ವಿವರಿಸಿದೆ. ಆಗ ಆ ಫಕೀರ, "ಕೋಪರಗಾಂವ್ ತಾಲೂಕಿನ ಶಿರಡಿಯಲ್ಲಿ ಸಾಯಿಬಾಬಾ ಎಂಬ ಔಲಿಯಾ ಇದ್ದಾರೆ. ನಿನ್ನ ಹಣ ಮತ್ತೆ ನಿನಗೆ ದೊರೆಯುವಂತೆ ಮಾಡಿದರೆ, ಅವರ ದರ್ಶನಮಾಡುವವರೆಗೂ ನನ್ನ ಪ್ರೀತಿಯ ಅಹಾರವನ್ನು ಮುಟ್ಟುವುದಿಲ್ಲ ಎಂದು ಹರಕೆ ಮಾಡಿಕೋ" ಎಂದು ಹೇಳಿದ. ಆ ಫಕೀರ ಹೇಳಿದಂತೆ, ಹಣ ದೊರೆತು, ನಾನು ಅವರ ದರ್ಶನ ಮಾಡುವವರೆಗೂ, ನನ್ನ ಪ್ರೀತಿಯ ಅನ್ನವನ್ನು ಮುಟ್ಟುವುದಿಲ್ಲ, ಎಂದು ಹರಕೆ ಮಾಡಿಕೊಂಡೆ.
ಹದಿನೈದು ದಿನಗಳ ನಂತರ, ಆ ಬ್ರಾಹ್ಮಣ ತನ್ನಷ್ಟಕ್ಕೆ ತಾನೇ ಬಂದು, ಹಣವನ್ನೆಲ್ಲ ಹಿಂತಿರುಗಿಸಿ, "ಹುಚ್ಚನಾಗಿ ಆ ರೀತಿ ವರ್ತಿಸಿದೆ, ಈ ಹಣ ತೆಗೆದುಕೊಂಡು ನನ್ನನ್ನು ಕ್ಷಮಿಸಿ" ಎಂದು ಬೇಡಿಕೊಂಡ. ಹಾಗೆ ಎಲ್ಲವೂ ಸುಗಮವಾಗಿ ಅಂತ್ಯವಾಯಿತು. ನನಗೆ ಹಾಗೆ ಸಹಾಯಮಾಡಿದ ಆ ಫಕೀರನನ್ನು ಮತ್ತೆ ನಾನು ಕಾಣಲಿಲ್ಲ. ಸಾಯಿಬಾಬಾರೇ ನನ್ನ ಮನೆಗೆ ಬಂದು ನನಗೆ ಸಹಾಯ ಮಾಡಿದರೆಂದು ನನಗೆ ನಂಬಿಕೆಯಾಗಿತ್ತು. ಅವರನ್ನು ಕಾಣುವ ಇಚ್ಛೆಯೂ ಬಹಳವಾಗಿತ್ತು. ನಾನು ಕೊಟ್ಟ ೩೫ ರೂಪಾಯಿ ದಕ್ಷಿಣೆಯನ್ನು ಅವರು ನಿರಾಕರಿಸಿದ್ದು, ಸಹಜವೇ ಆಗಿದೆ. ತನ್ನ ಭಕ್ತರಿಗೋಸ್ಕರ ಏನೆಲ್ಲಾ ಮಾಡುವ ಬಾಬಾ ನನ್ನ ೩೫ ರೂಪಾಯಿಗೋಸ್ಕರ ಆಸೆ ಪಡುತ್ತಾರೆಯೇ? ಅವರು ಯಾವುದೇ ಅಪೇಕ್ಷೆಯಿಲ್ಲದೆ ಭಕ್ತರ ಆಗುಹೋಗುಗಳನ್ನು ನೋಡಿಕೊಳ್ಳುತ್ತಾರೆ.
ಹಣ ಸಿಕ್ಕಿದ ಮೇಲೆ, ಸಂತೋಷದಲ್ಲಿ ಮುಳುಗಿ, ಹರಕೆಯ ವಿಷಯವನ್ನೇ ಮರೆತೆ. ಒಂದುದಿನ ರಾತ್ರಿ, ನಾನು ಕೊಲಾಬಾದಲ್ಲಿದ್ದಾಗ, ಬಾಬಾರನ್ನು ಕನಸಿನಲ್ಲಿ ಕಂಡೆ. ಆಗ, ಶಿರಡಿಗೆ ಹೋಗಬೇಕಾಗಿದ್ದುದು ನೆನಪಿಗೆ ಬಂತು. ನಾನು ಗೋವಾಕ್ಕೆ ಹೋಗಿ, ಅಲ್ಲಿಂದ ಬೊಂಬಾಯಿಗೆ ಹಡಗಿನಲ್ಲಿ ಹೋಗಿ, ಅಲ್ಲಿಂದ ಶಿರಡಿಗೆ ರೈಲಿನಲ್ಲಿ ಹೋಗ ಬೇಕೆಂದುಕೊಂಡೆ. ಬಂದರಿಗೆ ಹೋದಾಗ ಹಡಗು ಆಗಲೇ ತುಂಬಿದ್ದುದರಿಂದ ನನಗೆ ಸ್ಥಳ ಸಿಕ್ಕಲಿಲ್ಲ. ಒಬ್ಬ ಅಪರಿಚಿತ ಸೇವಕ ನನ್ನ ಪರವಾಗಿ ಮಾತನಾಡಿ, ಸ್ಥಳ ದೊರಕಿಸಿಕೊಟ್ಟ. ಬೊಂಬಾಯಿಗೆ ಬಂದು, ಅಲ್ಲಿಂದ ಶಿರಡಿಗೆ ಬಂದೆ. ಬಾಬಾ ಸರ್ವವ್ಯಾಪಿ. ಅವರಿಗೆ ಎಲ್ಲವೂ ತಿಳಿಯುತ್ತದೆ. ನಾವ್ಯಾರು? ಅನಪೇಕ್ಷಿತವಾಗಿ ಅವರು ಬಂದು ನಮ್ಮನ್ನು ಕಾಪಾಡಲು, ನಮಗೂ ಅವರಿಗೂ ಸಂಬಂಧವೇನು? ಅವರು ದೇವರ ಅವತಾರವೇ! ನಾವು ಅವರ ಹೆಸರನ್ನು ತಪ್ಪಿಯೂ ಉಚ್ಚರಿಸಲಿಲ್ಲ. ಆದರೂ, ಅವರು ನಮ್ಮ ಮೇಲೆ ಕರುಣೆ ತೋರಿ ನಮ್ಮ ಸಹಾಯಕ್ಕೆ ಬಂದರು. ಅವರೇ ನಮ್ಮನ್ನು ಇಲ್ಲಿಗೆ ಬರುವಂತೆ ಮಾಡಿದ್ದು, ನಮ್ಮ ಅದೃಷ್ಟವೇ! ಶಿರಡಿಯಲ್ಲಿನ ನೀವೆಲ್ಲರೂ ನಿಜವಾಗಿಯೂ ಬಹಳ ಪುಣ್ಯಮಾಡಿದವರು. ಎಷ್ಟೋ ಕಾಲದಿಂದ ಬಾಬಾ ನಿಮ್ಮೊಡನೆಯೇ ಇದ್ದು, ನಿಮ್ಮೊಡನೆ ಮಾತನಾಡುತ್ತಾ, ಆಟವಾಡುತ್ತಾ, ನಕ್ಕು ನಲಿಯುತ್ತಾ ಇದ್ದಾರೆ. ಸಾಯಿಯೇ ನಮ್ಮ ದತ್ತ . ಅವರೇ ನನ್ನ ಕೈಲಿ ಹರಕೆ ಮಾಡಿಸಿ, ಹಡಗಿನಲ್ಲಿ ಜಾಗ ಕೊಡಿಸಿ, ನನ್ನನ್ನು ಇಲ್ಲಿಗೆ ಕರೆತಂದರು. ಹಾಗೆ ಮಾಡಿ, ಅವರು ತಮ್ಮ ಸರ್ವಜ್ಞತ್ವ, ಸರ್ವವ್ಯಾಪಕತ್ವವನ್ನು ನಮ್ಮಲ್ಲಿ ಧೃಢೀಕರಿಸಿದರು.
ಶ್ರೀಮತಿ ಔರಂಗಾಬಾದಕರರ ಕಥೆ
ಶೋಲಾಪುರದ ಸಖಾರಾಮ ಔರಂಗಾಬಾದಕರರ ಹೆಂಡತಿ, ಮದುವೆಯಾಗಿ ೨೭ ವರ್ಷಗಳಾಗಿದ್ದರೂ ಗರ್ಭವತಿಯಾಗಿರಲಿಲ್ಲ. ಎಲ್ಲ ದೇವರಿಗೂ ಹರಕೆಗಳನ್ನು ಮಾಡಿಕೊಂಡರೂ, ಯಾವುದೇ ಪ್ರಯೋಜನವಾಗಲಿಲ್ಲ. ಸಂತಾನದ ಆಸೆಯನ್ನೇ ಬಿಡಬೇಕೆಂದುಕೊಂಡ ಆಕೆಗೆ ಸಹೃದಯಿಗಳೊಬ್ಬರು, ಆಸೆಯನ್ನೇ ಬಿಟ್ಟಿದ್ದ ಅನೇಕರಿಗೆ ಆಸೆಯನ್ನು ಚಿಗುರಿಸಿದ ಶಿರಡಿಯ ಸಂತರನ್ನೇಕೆ ಕಾಣಬಾರದು? ಎಂಬ ಸಲಹೆ ಕೊಟ್ಟರು. ತಮ್ಮ ಕೊನೆಯ ಪ್ರಯತ್ನವೆಂದು, ಆಕೆ ತಮ್ಮ ಮಲಮಗ ವಿಶ್ವನಾಥನೊಡನೆ ಶಿರಡಿಗೆ ಬಂದರು. ಅವರು ಅಲ್ಲಿ ಎರಡು ತಿಂಗಳಿದ್ದು ಶ್ರದ್ಧಾ ಭಕ್ತಿಗಳಿಂದ ತಮ್ಮ ಮನಸ್ಸಿಗೆ ತೃಪ್ತಿಯಾಗುವ ಹಾಗೆ ಬಾಬಾರ ಸೇವೆ ಮಾಡಿದರು. ಬಾಬಾ ಒಬ್ಬರೇ ಇದ್ದಾಗ ತಮ್ಮ ಅಳಲನ್ನು ಹೇಳಿಕೊಳ್ಳಬೇಕೆಂಬ ಆಕೆಯ ಆಸೆ ಮಾತ್ರ ಪೂರ್ತಿಯಾಗುವ ಲಕ್ಷಣಗಳು ಕಾಣಲಿಲ್ಲ. ಯಾವಾಗ ಬಾಬಾರನ್ನು ಕಾಣಲು ಹೋದಾಗಲೂ ಅಲ್ಲಿ ಜನ ತುಂಬಿರುತ್ತಿದ್ದರು. ಇನ್ನು ತಡೆಯಲಾಗದು ಎಂಬಂತಹ ಪರಿಸ್ಥಿತಿ ಬಂದಾಗ ಆಕೆ ಶ್ಯಾಮರನ್ನು ಕಂಡು, ತನಗೆ ಸಹಾಯ ಮಾಡಲು ಕೇಳಿಕೊಂಡರು. ಆಕೆಗೆ ಯಾವುದೇ ಭರವಸೆ ಕೊಡದಿದ್ದರೂ, ಖಂಡಿತವಾಗಿಯೂ ಪ್ರಯತ್ನ ಮಾಡುತ್ತೇನೆಂದು ಆತ ಮಾತುಕೊಟ್ಟರು. ಒಂದು ದಿನ ಶ್ಯಾಮಾ, ಆಕೆಗೆ ತೆಂಗಿನಕಾಯಿ ಅಗರುಬತ್ತಿಗಳನ್ನು ಇಟ್ಟುಕೊಂಡು, ಬಾಬಾರ ಊಟದ ಸಮಯದಲ್ಲಿ ಮಸೀದಿಯಲ್ಲಿ ಸಿದ್ಧವಾಗಿರುವಂತೆ ಹೇಳಿದರು.
ಬಾಬಾ ಊಟಮಾಡಿ ಕೈತೊಳೆದುಕೊಂಡ ಮೇಲೆ, ಶ್ಯಾಮಾ ಅವರ ಕೈ ಒರೆಸುತ್ತಿದ್ದರು. ಆಗ ಬಾಬಾ ತಮಾಷೆಯಾಗಿ ಶ್ಯಾಮಾರ ಕೆನ್ನೆ ಚಿವುಟಿದರು. ಕೋಪ ನಟಿಸುತ್ತಾ ಶ್ಯಾಮಾ, "ದೇವಾ, ಹೀಗೆ ನಮ್ಮನ್ನು ಚಿವುಟುವುದು ಸರಿಯೇ? ಚಿವುಟುತ್ತಾ, ತುಂಟಾಟವಾಡುವ ದೇವರು ನಮಗೆ ಬೇಕಾಗಿಲ್ಲ" ಎಂದರು. ಅದಕ್ಕೆ ಬಾಬಾ, "ಕಳೆದ ೭೨ ಜನ್ಮಗಳಿಂದಲೂ ನನ್ನೊಡನೆ ಇರುವ ನಿನ್ನನ್ನು ಎಂದಾದರೂ ಚಿವುಟಿದ್ದೇನೆಯೇ? ಈಗ ಸುಮ್ಮನೆ ಮುಟ್ಟಿದ ಮಾತ್ರಕ್ಕೆ ನನ್ನಲ್ಲಿ ತಪ್ಪೆಣಿಸುತ್ತೀಯಾ?" ಎಂದರು. ಶ್ಯಾಮಾ ಮತ್ತೆ, "ನಮಗೆ ಸಿಹಿ ಕೊಟ್ಟು ಮುತ್ತಿಡುವ ದೇವರು ಬೇಕು. ನಿಮ್ಮಿಂದ ನಮಗೆ ಗೌರವಾದರಗಳು ಬೇಕಾಗಿಲ್ಲ. ನಾವು ಸದಾಕಾಲ ನಿನ್ನ ಚರಣಾರವಿಂದಗಳಲ್ಲಿ ನಂಬಿಕೆಯಿಟ್ಟಿರುವಂತೆ ಮಾಡು. ಅಷ್ಟು ಸಾಕು" ಎಂದರು. ಬಾಬಾ,"ಅದಕ್ಕೇ ನಾನಿಲ್ಲಿಗೆ ಬಂದಿರುವುದು. ನಿಮಗೆ ಅನ್ನಾಹಾರಗಳನ್ನು ಕೊಟ್ಟು ನಿಮ್ಮನ್ನು ಪ್ರೀತಿ ವಿಶ್ವಾಸಗಳಿಂದ ನೋಡಿ ಕೊಳ್ಳುತ್ತಿದ್ದೇನೆ" ಎಂದು ಹೇಳಿ ತಮ್ಮ ಜಾಗಕ್ಕೆ ಹೋಗಿ ಕುಳಿತರು.
ಶ್ಯಾಮಾ, ಆಕೆಗೆ ಒಳಕ್ಕೆ ಬರುವಂತೆ ಸಂಜ್ಞೆಮಾಡಿದರು. ಆಕೆ ತೆಂಗಿನಕಾಯಿ ಅಗರುಬತ್ತಿಗಳನ್ನು ಹಿಡಿದು ಒಳಗೆ ಬಂದರು. ತೆಂಗಿನಕಾಯಿ ತೆಗೆದುಕೊಂಡು ಬಾಬಾ ಅದನ್ನು ಅಲ್ಲಾಡಿಸಿದರು. ಒಳಗೆ ತಿರುಳು ಒಣಗಿದ್ದುದರಿಂದ ಹೊರಳಾಡಿ ಸದ್ದು ಮಾಡಿತು. ಬಾಬಾ ಹೇಳಿದರು, "ಶಾಮ್ಯಾ, ನೋಡು. ಈ ತಿರುಳು ಏನು ಹೇಳುತ್ತಿದೆ?" ಎಂದರು. ಅವಕಾಶಕ್ಕಾಗಿ ಕಾಯುತ್ತಿದ್ದ ಶ್ಯಾಮಾ, ಅದನ್ನೇ ಹಿಡಿದು, "ಈ ಹೆಂಗಸು ತನ್ನ ಹೊಟ್ಟೆಯಲ್ಲೂ ಇದೇ ರೀತಿ ಮಗುವೊಂದು ಹೊರಳಾಡಬೇಕು ಎಂದು ಬಯಸುತ್ತಿದ್ದಾಳೆ. ಆಶಿರ್ವಾದ ಮಾಡಿ, ಆಕೆಗೆ ತೆಂಗಿನಕಾಯಿ ಕೊಡಿ" ಎಂದರು. ಆಗ ಬಾಬಾ, "ತೆಂಗಿನಕಾಯಿ ಮಗುವನ್ನು ಕೊಡುವುದು ಎಲ್ಲಾದರೂ ಉಂಟೆ? ಈ ಜನ ಎಂತಹ ಮೂರ್ಖರು" ಎಂದರು. ಆದರೆ ಶ್ಯಾಮಾ ಆ ಮಾತನ್ನು ಕೇಳದೆ, "ನಿಮ್ಮ ಮಾತು, ಆಶೀರ್ವಾದದ ಶಕ್ತಿ ಎಷ್ಟು ಎಂಬುದು ನನಗೆ ಗೊತ್ತು. ನಿಮ್ಮ ಮಾತೇ ಆಕೆಗೆ ಮಕ್ಕಳನ್ನು ಕೊಡುತ್ತದೆ. ಆಕೆಗೆ ಆಶೀರ್ವಾದ ಮಾಡದೆ ನೀವು ಸುಮ್ಮಸುಮ್ಮನೆ ಇಲ್ಲಸಲ್ಲದ ಮಾತುಗಳನ್ನಾಡುತ್ತಿದ್ದೀರಿ" ಎಂದರು. ಇದೇ ರೀತಿಯಲ್ಲಿ ಸ್ವಲ್ಪಕಾಲ ಬಾಬಾ ತೆಂಗಿನಕಾಯಿ ಒಡೆಯುವಂತೆ, ಶ್ಯಾಮಾ ಅದನ್ನು ಆಶೀರ್ವದಿಸಿ ಆಕೆಗೆ ಕೊಡುವಂತೆ ವಾದ ವಿವಾದಗಳಾದಮೇಲೆ, ಕೊನೆಗೆ ಬಾಬಾ ಒಪ್ಪಿ "ಆಕೆಗೆ ಮಗುವಾಗುತ್ತದೆ" ಎಂದರು. ಶ್ಯಾಮಾ ಅಲ್ಲಿಗೇ ಸುಮ್ಮನಾಗದೆ,"ಯಾವಾಗ" ಎಂದರು. ಬಾಬಾ "೧೨ ತಿಂಗಳಲ್ಲಿ" ಎಂದರು. ಆಗ ಶ್ಯಾಮಾ, ತೆಂಗಿನಕಾಯಿ ಒಡೆದು, ಒಂದುಪಾಲು ಆಕೆಗೆ ಕೊಟ್ಟು, ಇನ್ನೊಂದು ಪಾಲನ್ನು ತಾವು ಬಾಬಾ ಇಬ್ಬರೂ ತಿಂದರು. ಶ್ಯಾಮಾ ಆ ಹೆಂಗಸಿನ ಕಡೆ ತಿರುಗಿ, "ಅಮ್ಮ, ನನ್ನ ಈ ಮಾತುಗಳಿಗೆ ನೀವೇ ಸಾಕ್ಷಿ. ಇನ್ನು ಹನ್ನೆರಡು ತಿಂಗಳಲ್ಲಿ ನಿಮಗೆ ಮಗುವಾಗದಿದ್ದರೆ, ನನ್ನ ಈ ದೇವನ ತಲೆಯಮೇಲೆ ತೆಂಗಿನಕಾಯಿ ಒಡೆದು ಈ ಮಸೀದಿಯಿಂದ ಹೊರಗೆ ಅಟ್ಟುತ್ತೇನೆ. ಹಾಗೆ ಮಾಡದಿದ್ದರೆ ನನ್ನ ಹೆಸರು ಮಾಧವನೇ ಅಲ್ಲ" ಎಂದರು.
ಬಾಬಾ ಹೇಳಿದಂತೆ ಆಕೆಗೆ ಹನ್ನೆರಡು ತಿಂಗಳಲ್ಲಿ ಒಂದು ಮಗುವಾಯಿತು. ಮಗುವಿನ ಐದನೇ ತಿಂಗಳಿನಲ್ಲಿ ಮಗುವಿನೊಡನೆ ಗಂಡಹೆಂಡಿರು ಶಿರಡಿಗೆ ಬಂದು ಮಗುವನ್ನು ಬಾಬಾರ ಪಾದಗಳಲ್ಲಿಟ್ಟು, ಆಶೀರ್ವಾದ ಮಾಡುವಂತೆ ಕೇಳಿಕೊಂಡರು. ಆತ ಬಾಬಾರಿಗೆ ೫೦೦ ರೂಪಾಯಿಗಳು ದಕ್ಷಿಣೆಯಾಗಿ ಕೊಟ್ಟರು. ಆ ಹಣವನ್ನು ಬಾಬಾರ ಕುದುರೆ ಶ್ಯಾಮಕರ್ಣನಿಗೆ ಕೊಟ್ಟಿಗೆಯನ್ನು ಕಟ್ಟಲು ಉಪಯೋಗಿಸಲಾಯಿತು.
ಅಂತಹ ಪ್ರೇಮಸ್ವರೂಪಿ ದಯಾಮಯ ಬಾಬಾರಿಗೆ ನಮಸ್ಕಾರ ಮಾಡಿ ಈ ಅಧ್ಯಾಯವನ್ನು ಮುಗಿಸೋಣ.
ಇದರೊಂದಿಗೆ ಇಬ್ಬರು ಗೋವಾದ ಗಣ್ಯರು, ಶ್ರೀಮತಿ ಔರಂಗಾಬಾದಕರ್ ಮತ್ತು ಇತರ ವಿಷಯಗಳನ್ನು ಕುರಿತು ಹೇಳುವ ಮುವ್ವತ್ತಾರನೆಯ ಅಧ್ಯಾಯ ಮುಗಿಯಿತು. ಮುಂದಿನ ಅಧ್ಯಾಯದಲ್ಲಿ ಹೇಮಾಡ್ ಪಂತ್ ಚಾವಡಿ ಉತ್ಸವ ಇತ್ಯಾದಿ ವಿಷಯಗಳನ್ನು ಹೇಳುತ್ತಾರೆ.
||ಸದ್ಗುರು ಶ್ರೀ ಸಾಯಿನಾಥಾರ್ಪಣಮಸ್ತು||ಶುಭಂ ಭವತು||
||ಓಂ ಶಾಂತಿಃ ಶಾಂತಿಃ ಶಾಂತಿಃ||
||ಓಂ ಶಾಂತಿಃ ಶಾಂತಿಃ ಶಾಂತಿಃ||
No comments:
Post a Comment