||ಶ್ರೀ ಸಾಯಿ ಸಚ್ಚರಿತ್ರೆ||
||ಇಪ್ಪತ್ತೊಂಭತ್ತನೆಯ ಅಧ್ಯಾಯ||
||ಸ್ವಪ್ನದರ್ಶನ ಲೀಲೆಗಳು||
ಶ್ರೀ ಗಣೇಶಾಯ ನಮಃ ಶ್ರೀ ಸರಸ್ವತಯೇ ನಮಃ
ಶ್ರೀ ವೆಂಕಟೇಶಾಯ ನಮಃ ಶ್ರೀ ಸಾಯಿನಾಥಾಯ ನಮಃ
ಶ್ರೀ ಸದ್ಗುರುಭ್ಯೋನ್ನಮಃ
||ಇಪ್ಪತ್ತೊಂಭತ್ತನೆಯ ಅಧ್ಯಾಯ||
||ಸ್ವಪ್ನದರ್ಶನ ಲೀಲೆಗಳು||
ಶ್ರೀ ಗಣೇಶಾಯ ನಮಃ ಶ್ರೀ ಸರಸ್ವತಯೇ ನಮಃ
ಶ್ರೀ ವೆಂಕಟೇಶಾಯ ನಮಃ ಶ್ರೀ ಸಾಯಿನಾಥಾಯ ನಮಃ
ಶ್ರೀ ಸದ್ಗುರುಭ್ಯೋನ್ನಮಃ
ಈ ಅಧ್ಯಾಯದಲ್ಲಿ ಹೇಮಾಡ್ ಪಂತ್, ಮದ್ರಾಸಿ ಭಜನ ಮೇಳ, ತೆಂಡೂಲ್ಕರ್, ಕ್ಯಾ. ಹಾಟೆ, ವಾಮನ ನಾರ್ವೇಕರ್ ಮತ್ತು ಇತರ ವಿಷಯಗಳನ್ನು ಹೇಳುತ್ತಾರೆ.
ಬಾಬಾರ ಔದಾರ್ಯ
ಭಕ್ತರಿಂದ ಬಾಬಾ ದಕ್ಷಿಣೆ ಕೇಳಿ ತೆಗೆದುಕೊಳ್ಳುತ್ತಿದ್ದರು ಎಂಬುದನ್ನು ನಾವು ಈಗಾಗಲೇ ನೋಡಿದ್ದೇವೆ. ಅವರು ಹಾಗೆ ತೆಗೆದುಕೊಂಡ ದಕ್ಷಿಣೆಯನ್ನು ಮತ್ತೆ ಭಕ್ತರಲ್ಲೇ ಹಂಚಿ ಬಿಡುತ್ತಿದ್ದರು. ಸಾಮಾನ್ಯವಾಗಿ ಬಾಬಾ ಬೆಳಗ್ಗೆ ಸ್ವಲ್ಪ ಆಹಾರವನ್ನು ತೆಗೆದು ಕೊಂಡು ಧುನಿಯ ಹತ್ತಿರ ಕಂಭಕ್ಕೆ ಒರಗಿ ಕುಳಿತುಕೊಳ್ಳುತ್ತಿದ್ದರು. ಆ ವೇಳೆಗೆ ಒಬ್ಬಳು ಸಣ್ಣ ಹುಡುಗಿ, ಮೂರು ವರ್ಷದವಳಿರಬಹುದು, ಬಂದು ಅವರ ತೊಡೆಯನ್ನೇರಿ ಕುಳಿತುಕೊಳ್ಳುತ್ತಿದ್ದಳು. ಅವಳ ಹೆಸರು ಆಮನಿ, ಬಡ ಭಕ್ತಳೊಬ್ಬಳ ಮಗಳು. ಅಮಾನಿ ಸಣ್ಣ ತಗಡಿನ ಡಬ್ಬ ಹಿಡಿದು, ಅದರಲ್ಲಿ ದುಡ್ಡು ಹಾಕಲು ಬಾಬಾರನ್ನು ಪೀಡಿಸುತ್ತಿದ್ದಳು. ಅವಳೊಡನೆ ಬಾಬಾ ಸ್ವಲ್ಪ ಹೊತ್ತು ಆಟವಾಡಿ, ಅವಳ ಡಬ್ಬದಲ್ಲಿ ಒಂದು ರೂಪಾಯಿ ನಾಣ್ಯವನ್ನು ಹಾಕಿದಕೂಡಲೇ, ಆ ಹುಡುಗಿ ಎದ್ದು ಓಡಿಹೋಗುತ್ತಿತ್ತು. ಲೆಂಡಿಗೆ ಹೋಗುವಾಗಲೂ, ಬಾಬಾ ಅವಳಿಗೆ ಮತ್ತೆ ಒಂದು ರೂಪಾಯಿ ಕೊಡುತ್ತಿದ್ದರು. ಹೀಗೆ ಬಾಬಾ ಆ ಮಗುವಿಗೆ ದಿನವೂ ಎರಡು ರೂಪಾಯಿ ಕೊಡುತ್ತಿದ್ದರು. ಅವಳ ಜೊತೆಗೆ ಅವಳ ತಾಯಿ ಜಮಾಲಿಗೂ ಆರು ರೂಪಾಯಿ ಕೊಡುತ್ತಿದ್ದರು. ಹೀಗೆ ಬಾಬಾ ಅನೇಕರಿಗೆ ಎರಡು ರೂಪಾಯಿಯಿಂದ ಹಿಡಿದು ಐದು, ಹತ್ತು, ಇಪ್ಪತ್ತು, ಐವತ್ತು ರೂಪಾಯಿಯವರೆಗೂ ದಿನವೂ ಕೊಡುತ್ತಿದ್ದರು. ದಿನದ ಕೊನೆಯಲ್ಲಿ ಅವರು ತಮಗಾಗಿ ಏನನ್ನೂ ಉಳಿಸಿಕೊಳ್ಳುತ್ತಿರಲಿಲ್ಲ.
ಬಾಬಾ ಕಲಾವಿದರಿಗೂ ಪ್ರೋತ್ಸಾಹ ಕೊಡುತ್ತಿದ್ದರು. ಸಂಗೀತ, ನೃತ್ಯ, ನಾಟಕ ಮುಂತಾದ ಕಲೆಗಳಲ್ಲಿ ನಿರತರಾದವರು ಬಂದು, ಬಾಬಾರ ಮುಂದೆ ಅವರ ಕಲೆಯನ್ನು ಪ್ರದರ್ಶಿಸಿದರೆ, ಅವರನ್ನು ಪ್ರೋತ್ಸಾಹಿಸಲು ಬಾಬಾ ಅವರಿಗೆ ಬಹುಮಾನವಾಗಿ ಹಣ ಕೊಡುತ್ತಿದ್ದರು. ಬರುಬರುತ್ತಾ, ಬಾಬಾರ ಈ ಔದಾರ್ಯ ಪ್ರಚಾರಿತವಾಗಿ ಅನೇಕ ಕಲಾವಿದರು ಶಿರಡಿಗೆ ಬರಲು ಪ್ರಾರಂಭಿಸಿದರು. ಅಂತಹವರಲ್ಲಿ ಮದ್ರಾಸಿನ ಭಜನಮೇಳ ಒಂದು. ಅವರು ಹೇಗೆ ಬಾಬಾರ ಅವಿಚ್ಛಿನ್ನ ಭಕ್ತರಾದರು ಎಂಬ ಲೀಲೆಯನ್ನು ಲೀಲಾ ಸ್ವರೂಪಿ ಬಾಬಾರ ಪಾದಗಳಿಗೆ ನಮಸ್ಕರಿಸಿ ಕೇಳೋಣ.
ಮದ್ರಾಸಿ ಭಜನ ಮೇಳ
ಸುಮಾರು ೧೯೧೫ರಲ್ಲಿ ಸಮರ್ಥ ರಾಮದಾಸರ ಭಕ್ತರು ದೇಶದ ಮೂಲೆಮೂಲೆಗಳಲ್ಲೂ ಹರಡಿದ್ದರು. ದಕ್ಷಿಣಾವರ್ತದಲ್ಲೂ ಅವರ ಶಿಷ್ಯರಿದ್ದರು. ಅವರೆಲ್ಲ ಶಿರಡಿಯಲ್ಲಿ ಸಾಯಿಬಾಬಾ ಎಂಬ ದೊಡ್ಡ ಸಂತರಿದ್ದಾರೆಂದೂ, ಆ ಸಂತ, ಶಾಂತ ಮೂರ್ತಿ, ಬಹಳ ಉದಾರಿ, ತನ್ನ ಭಕ್ತರಿಗೆ ಮಾತ್ರವಲ್ಲದೆ, ತನ್ನ ಮುಂದೆ ಕಲಾಪ್ರವೀಣತೆಯನ್ನು ಪ್ರದರ್ಶಿಸಿದ ಕಲಾವಿದರಿಗೂ, ಉದಾರವಾಗಿ ಹಣ ಕೊಡುತ್ತಾರೆ ಎಂದು ಕೇಳಿದ್ದರು. ಹಾಗೆ ಕೇಳಿದ್ದ ಗಂಡ, ಹೆಂಡತಿ, ಮಗಳು ಮತ್ತು ಅವನ ನಾದಿನಿ ಸೇರಿ, ನಾಲ್ಕುಜನ ಕಲಾವಿದರ ಗುಂಪೊಂದು ಕಾಶಿಗೆ ಹೋಗಲು ನಿರ್ಧರಿಸಿ, ದಾರಿಯಲ್ಲಿ ಶಿರಡಿಗೆ ಬಂದರು. ಅವರನ್ನು ಮದ್ರಾಸಿ ಭಜನ ಮೇಳವೆಂದು ಕರೆಯುತ್ತಿದ್ದರು. ಅವರ ವೈಶಿಷ್ಟ್ಯ, ಕೇಳಿದ ಜನರಿಗೆ ಅನಂದವನ್ನುಂಟು ಮಾಡುವಂತೆ ಭಜನೆಗಳನ್ನು ಬಹಳ ಚೆನ್ನಾಗಿ ಹಾಡುತ್ತಿದ್ದುದು. ಆದರೆ ಆ ಮೇಳದಲ್ಲಿ ಹೆಂಡತಿಯನ್ನು ಬಿಟ್ಟರೆ ಮಿಕ್ಕ ಮೂವರಿಗೂ ಕೀರ್ತಿ, ಪ್ರತಿಷ್ಠೆ, ಹಣ, ಭಜನೆಗಿಂತ ಮುಖ್ಯವಾಗಿತ್ತು. ಆಕೆಗೆ ಬಾಬಾರಲ್ಲಿ ಬಹಳ ಭಕ್ತಿಯಿದ್ದರೂ ಮಿಕ್ಕವರು ಬಹಳ ದುರಾಸೆಯಿಂದಿದ್ದವರು.
ಒಂದು ದಿನ ಮಧ್ಯಾಹ್ನ ಆರತಿ ಸಮಯದಲ್ಲಿ ಎಲ್ಲರೂ ಆರತಿಯ ಹಾಡುಗಳನ್ನು ಹಾಡುತ್ತಿದ್ದರೆ, ಆಕೆ ಮಾತ್ರ ಧಾರಾಕಾರವಾಗಿ ಕಣ್ಣೀರು ಸುರಿಸುತ್ತಾ, ರಾಮ ನಾಮವನ್ನು ಜೋರಾಗಿ ಹೇಳುತ್ತಿದ್ದಳು. ಅಲ್ಲಿದ್ದವರಿಗೆಲ್ಲಾ ಆಕೆ ಏಕೆ ಹಾಗೆ ರಾಮ ನಾಮವನ್ನು ಹೇಳುತ್ತಿದ್ದಾಳೆ ಎಂಬುದು ಅರ್ಥವಾಗಲಿಲ್ಲ. ಆಕೆ ತೋರುತ್ತಿದ್ದ ಅತೀವ ಸಂತೋಷವೂ ಅರ್ಥವಾಗಲಿಲ್ಲ. ಆರತಿಯೆಲ್ಲಾ ಮುಗಿದು ಎಲ್ಲರೂ ಹೊರಡಬೇಕು ಎನ್ನುವುದರಲ್ಲಿದ್ದಾಗ ಆಕೆ, "ನೀವೆಲ್ಲರೂ ಆರತಿಯಹಾಡುಗಳನ್ನು ಹೇಳುತ್ತಿದ್ದಾಗ, ಬಾಬಾ ನನಗೆ ಶ್ರೀ ರಾಮಚಂದ್ರನಂತೆ ದರ್ಶನ ಕೊಟ್ಟರು" ಎಂದು ಹೇಳಿದಳು ಶ್ರೀ ರಾಮಚಂದ್ರ ಆಕೆಯ ಪ್ರೀತಿಯ ದೈವ. ತನ್ನ ಆರಾಧ್ಯ ದೈವವನ್ನು ಕಂಡ ಆಕೆ ಸಂತೋಷಭರಿತಳಾಗಿ, ಆನಂದ ಬಾಷ್ಪಗಳನ್ನು ಸುರಿಸುತ್ತಾ, ರಾಮನಾಮ ಭಜನೆ ಮಾಡುತ್ತಿದ್ದಳು. ಆಕೆ ತನಗಾದ ಅನುಭವವನ್ನು ತನ್ನ ಗಂಡನಿಗೂ ಹೇಳಿದಳು. ಹಣ ಮತ್ತು ಪ್ರಾಪಂಚಿಕ ವಿಷಯಗಳಲ್ಲೇ ಮುಳುಗಿದ ಅವನು, ಆಕೆಯ ಮಾತನ್ನು ನಂಬಲಿಲ್ಲ. ಅಷ್ಟೇ ಅಲ್ಲ. ಅವನು, "ಹೆಂಗಸರು ಸ್ವಾಭಾವಿಕವಾಗಿಯೇ ಬಹಳ ಭಾವನಾ ಪರವಶರು. ಎಲ್ಲರಿಗೂ ಅಲ್ಲಿ ಬಾಬಾ ಕಾಣುತ್ತಿದ್ದರೆ ನಿನಗೆ ಮಾತ್ರ ರಾಮನಂತೆ ಕಾಣಿಸಿದ, ಎಂಬ ಮಾತನ್ನು ನಾನು ನಂಬುವುದಿಲ್ಲ" ಎಂದು ಆಕೆಯನ್ನು ನಗೆಯಾಡಿದ. ಆಕೆ ಅವನ ಆ ಮಾತುಗಳಿಗೆ ಅಷ್ಟು ಪ್ರಾಧಾನ್ಯ ಕೊಡದೆ, ಬಾಬಾ ತನಗೆ ತನ್ನ ಆರಾಧ್ಯದೈವದಂತೆಯೇ ದರ್ಶನ ಕೊಟ್ಟರು ಎಂದು ನಂಬಿ, ಬಾಬಾರಲ್ಲಿ ಇನ್ನೂ ಹೆಚ್ಚಿನ ಭಕ್ತಿಯುಳ್ಳವಳಾದಳು.
ದರ್ಶನ
ಆ ಭಜನೆಯ ಮೇಳದವರು ಶಿರಡಿಯಲ್ಲಿ ಇನ್ನೂ ಕೆಲವು ದಿನಗಳಿದ್ದರು. ಒಂದು ದಿನ, ಆ ಮನುಷ್ಯ ಮಲಗಿದ್ದಾಗ, ಮರೆಯಲಾರದ ಅನುಭವವನ್ನು ಕೊಟ್ಟ ಕನಸೊಂದನ್ನು ಕಂಡ. ಕನಸಿನಲ್ಲಿ, ಅವನು ಒಂದು ದೊಡ್ಡ ಪಟ್ಟಣದಲ್ಲಿದ್ದಾನೆ. ಅಲ್ಲಿ ಅವನನ್ನು ಪೋಲೀಸರು ಸೆರೆ ಹಿಡಿದು, ಕೈತೋಳ ಹಾಕಿ ಜೈಲಿನಲ್ಲಿಟ್ಟಿದ್ದಾರೆ. ಅವನಿಗೆ ಶಿಕ್ಷೆಯಾಗಬೇಕು. ಆಗ ಅವನು ಜೈಲಿನ ಹೊರಗೆ ಕರುಣಾ ದೃಷ್ಟಿಯಿಂದ ನೋಡುತ್ತಾ ನಿಂತಿದ್ದ ಬಾಬಾರನ್ನು ಕಂಡು ಆಶ್ಚರ್ಯಚಕಿತನಾದ.
"ನಿಮ್ಮ ಕೀರ್ತಿಯನ್ನು ಕೇಳಿ, ನಾವು ನಿಮ್ಮ ದರ್ಶನಕ್ಕೆಂದು ಬಂದೆವು. ನೀವು ನಮಗೆ ಹತ್ತಿರದಲ್ಲೇ ಇರುವಾಗಲೂ, ನಮಗೇಕೆ ಇಂತಹ ಆಪತ್ತು ಬರಬೇಕು?" ಎಂದು ಅವರನ್ನು ಕೇಳಿದ.
ಅದಕ್ಕೆ ಬಾಬಾ, "ನಿನ್ನ ಕರ್ಮಫಲಗಳನ್ನು ಅನುಭವಿಸಲೇ ಬೇಕು" ಎಂದರು. ಅವನು, "ಇಂತಹ ಫಲಗಳನ್ನು ಕೊಡುವಂತಹ ಪಾಪಕಾರ್ಯಗಳನ್ನು ನಾನು ಏನೂ ಮಾಡಿಲ್ಲ. ಆದರೂ ಏತಕ್ಕೆ ಹೀಗೆ?" ಎಂದು ಕೇಳಿದ.
ನಗುತ್ತಾ ಬಾಬಾ ಹೇಳಿದರು, "ಈ ಜನ್ಮದಲ್ಲಲ್ಲದಿದ್ದರೆ ಹಿಂದಿನ ಜನ್ಮಗಳಲ್ಲಿ ಅಂತಹ ಪಾಪಗಳನ್ನು ಮಾಡಿದ್ದಿರಬೇಕು".
ಅದಕ್ಕೆ ಅವನು ಬಹಳ ನಿರಾಶನಾಗಿ ಹೇಳಿದ, "ನನಗೆ ಹಿಂದಿನ ಜನ್ಮಗಳ ವಿಷಯ ತಿಳಿಯದು. ಹಾಗೇನಾದರೂ ಮಾಡಿದ್ದರೂ, ನೀವೇಕೆ ನನ್ನ ಆ ಕರ್ಮಫಲಗಳನ್ನು, ಬೆಂಕಿ ಹುಲ್ಲುಕಡ್ಡಿಯನ್ನು ಸುಟ್ಟುಹಾಕಿದಂತೆ ಸುಟ್ಟುಬಿಡಬಾರದು?"
ಆಗ ಬಾಬಾ ಜೋರಾಗಿ ನಗುತ್ತಾ, "ನನ್ನಲ್ಲಿ ನಿನಗೆ ಅಷ್ಟೊಂದು ನಂಬಿಕೆ ಇದೆಯೇ?" ಎಂದು ಕೇಳಿದರು. ಅವನು "ಹೂಂ" ಎಂದ.
ಬಾಬಾ ಅವನನ್ನು, "ಕಣ್ಣು ಮುಚ್ಚಿಕೊಂಡು ನನ್ನನ್ನು ನೆನಸಿಕೋ" ಎಂದರು.
ಅದಕ್ಕೆ ಬಾಬಾ, "ನಿನ್ನ ಕರ್ಮಫಲಗಳನ್ನು ಅನುಭವಿಸಲೇ ಬೇಕು" ಎಂದರು. ಅವನು, "ಇಂತಹ ಫಲಗಳನ್ನು ಕೊಡುವಂತಹ ಪಾಪಕಾರ್ಯಗಳನ್ನು ನಾನು ಏನೂ ಮಾಡಿಲ್ಲ. ಆದರೂ ಏತಕ್ಕೆ ಹೀಗೆ?" ಎಂದು ಕೇಳಿದ.
ನಗುತ್ತಾ ಬಾಬಾ ಹೇಳಿದರು, "ಈ ಜನ್ಮದಲ್ಲಲ್ಲದಿದ್ದರೆ ಹಿಂದಿನ ಜನ್ಮಗಳಲ್ಲಿ ಅಂತಹ ಪಾಪಗಳನ್ನು ಮಾಡಿದ್ದಿರಬೇಕು".
ಅದಕ್ಕೆ ಅವನು ಬಹಳ ನಿರಾಶನಾಗಿ ಹೇಳಿದ, "ನನಗೆ ಹಿಂದಿನ ಜನ್ಮಗಳ ವಿಷಯ ತಿಳಿಯದು. ಹಾಗೇನಾದರೂ ಮಾಡಿದ್ದರೂ, ನೀವೇಕೆ ನನ್ನ ಆ ಕರ್ಮಫಲಗಳನ್ನು, ಬೆಂಕಿ ಹುಲ್ಲುಕಡ್ಡಿಯನ್ನು ಸುಟ್ಟುಹಾಕಿದಂತೆ ಸುಟ್ಟುಬಿಡಬಾರದು?"
ಆಗ ಬಾಬಾ ಜೋರಾಗಿ ನಗುತ್ತಾ, "ನನ್ನಲ್ಲಿ ನಿನಗೆ ಅಷ್ಟೊಂದು ನಂಬಿಕೆ ಇದೆಯೇ?" ಎಂದು ಕೇಳಿದರು. ಅವನು "ಹೂಂ" ಎಂದ.
ಬಾಬಾ ಅವನನ್ನು, "ಕಣ್ಣು ಮುಚ್ಚಿಕೊಂಡು ನನ್ನನ್ನು ನೆನಸಿಕೋ" ಎಂದರು.
ಅವನು ಕಣ್ಣು ಮುಚ್ಚಿಕೊಂಡ ಕೂಡಲೇ, ಏನೋ ಒಂದು ಭಾರವಾದ ವಸ್ತು ಮೇಲಿಂದ ಬಿದ್ದಂತೆ, ದೊಡ್ಡ ಶಬ್ದವಾಯಿತು. ಕಣ್ಣು ಬಿಟ್ಟು ನೋಡಿದರೆ, ಅವನು ಜೈಲಿನಿಂದ ಈಚೆ ಬಂದಿದ್ದ. ಅವನನ್ನು ಬಂಧಿಸಿದ್ದ ಪೋಲೀಸಿನವನು ರಕ್ತ ಕಾರುತ್ತಾ ಕೆಳಗೆ ಬಿದ್ದಿದ್ದ. ಅದನ್ನು ನೋಡಿದ ಅ ಮನುಷ್ಯ ಭಯದಿಂದ ಬಾಬಾ ಕಡೆ ನೋಡಿದ.
ಬಾಬಾ ಇನ್ನೂ ಜೋರಾಗಿ ನಗುತ್ತಾ, "ಈಗ ಇನ್ನೂ ಚೆನ್ನಾಯಿತು. ಅಧಿಕಾರಿಗಳು ಬಂದು ನಿನ್ನನ್ನು ಸರಿಯಾಗಿ ವಿಚಾರಿಸಿಕೊಳ್ಳುತ್ತಾರೆ" ಎಂದರು.
ಬಾಬಾ ಇನ್ನೂ ಜೋರಾಗಿ ನಗುತ್ತಾ, "ಈಗ ಇನ್ನೂ ಚೆನ್ನಾಯಿತು. ಅಧಿಕಾರಿಗಳು ಬಂದು ನಿನ್ನನ್ನು ಸರಿಯಾಗಿ ವಿಚಾರಿಸಿಕೊಳ್ಳುತ್ತಾರೆ" ಎಂದರು.
ಈ ಸಲ ಆ ಮನುಷ್ಯ ತನ್ನ ತಪ್ಪನ್ನು ಅರಿತುಕೊಂಡು, ದೀನನಾಗಿ, "ನನ್ನ ಪಾಪಗಳನ್ನೆಲ್ಲಾ ಕ್ಷಮಿಸಿ, ನನ್ನನ್ನು ಈ ದುರಿತದಿಂದ ಪಾರುಮಾಡಿ. ನೀವೊಬ್ಬರೇ ನನ್ನನ್ನು ಕಾಪಾಡಬಲ್ಲವರು. ಇನ್ನು ಯಾರೂ ಇಲ್ಲ. ದಯವಿಟ್ಟು ನನ್ನನ್ನು ರಕ್ಷಿಸಿ" ಎಂದು ಕಳಕಳಿಯಿಂದ ಬೇಡಿಕೊಂಡ.
ಬಾಬಾರು ಅವನನ್ನು ಮತ್ತೆ ಕಣ್ಣು ಮುಚ್ಚಿಕೊಳ್ಳುವಂತೆ ಹೇಳಿದರು. ಅವನು ಕಣ್ಣು ಮುಚ್ಚಿಕೊಂಡ.ಕಣ್ಣು ತೆರೆದಾಗ, ಅವನು ಸ್ವತಂತ್ರನಾಗಿದ್ದ. ಪೋಲಿಸರು ಠಾಣೆ ಯಾವುದೂ ಕಾಣಲಿಲ್ಲ. ತಾನು, ಬಾಬಾ ಇಬ್ಬರೇ ಬಟ್ಟಬಯಲಿನಲ್ಲಿ ನಿಂತಿದ್ದರು. ಅವನು ಬಾಬಾರ ಪಾದಗಳಲ್ಲಿ ಬಿದ್ದ.
ಆಗ ಬಾಬಾ ಕೇಳಿದರು, "ಈಗ ನೀನು ಮಾಡುತ್ತಿರುವ ನಮಸ್ಕಾರಕ್ಕೂ, ಇದಕ್ಕೆ ಮುಂಚೆ ನೀನು ಮಾಡಿದ ನಮಸ್ಕಾರಕ್ಕೂ, ವ್ಯತ್ಯಾಸವಿದೆಯೇನು?".
ಅದಕ್ಕೆ ಅವನು, "ಮೊದಲು ಮಾಡಿದ ನಮಸ್ಕಾರ ಹಣಕ್ಕಾಗಿ. ಈಗ ಮಾಡುತ್ತಿರುವುದು ನೀವು ದೇವರೆಂದು. ಆಗ ನೀವು ಮುಸ್ಲಿಮರು. ಹಿಂದೂಗಳನ್ನು ಹಾಳುಮಾಡುತ್ತಿದ್ದೀರಿ ಎಂದುಕೊಂಡಿದ್ದೆ" ಎಂದು ಹೇಳಿದ.
ಮತ್ತೆ ಬಾಬಾ ಕೇಳಿದರು, "ನೀನು ಮಹಮ್ಮದೀಯ ದೇವರುಗಳನ್ನು ನಂಬುವುದಿಲ್ಲವೇ?" ಅವನು ಅದಕ್ಕೆ "ಇಲ್ಲ" ಎಂದ.
ಆಗ ಸರ್ವಜ್ಞರಾದ ಬಾಬಾ, "ನಿನ್ನ ಮನೆಯಲ್ಲಿ ಪಾಂಜಾ ಇಲ್ಲವೇ? ನೀನು ಮನೆಯಲ್ಲಿ ತಾಬೂತ್ ಪೂಜೆ ಮಾಡುವುದಿಲ್ಲವೇ? ಕಾಡಬೀಬಿಯನ್ನು ಮದುವೆ ಮುಂತಾದ ಸಂದರ್ಭಗಳಲ್ಲಿ ಪೂಜೆ ಮಾಡಿಕೊಳ್ಳುವುದಿಲ್ಲವೇ? ಆಕೆಗೆ ಶಾಂತಿ ಮಾಡುವುದಿಲ್ಲವೇ?" ಎಂದು ಕೇಳಿದರು.
ಅವನು ಅದೆಲ್ಲವನ್ನೂ ಒಪ್ಪಿಕೊಂಡ.
ಆಗ ಬಾಬಾ ನಗುತ್ತಾ, "ಇನ್ನೇನು ಬೇಕು ನಿನಗೆ?" ಎಂದು ಕೇಳಿದರು. ಸಂತ ರಾಮದಾಸರ ಭಕ್ತನಾದ ಅವನು ರಾಮದಾಸರನ್ನು ಕಾಣಲು ಇಚ್ಛಿಸಿದ. ಅವನ ಇಚ್ಛೆಯನ್ನು ಪೂರಯಿಸುವ ಹಾಗೆ ಬಾಬಾ ಅವನನ್ನು "ಹಿಂತಿರುಗಿ ನೋಡು" ಎಂದರು.
ತಿರುಗಿ ನೋಡಿದಾಗ, ಆಶ್ಚರ್ಯವೋ ಎಂಬಂತೆ, ಅಲ್ಲಿ ತನ್ನ ಗುರು ಸಂತ ರಾಮದಾಸರು ನಿಂತಿದ್ದರು. ಅವರಿಗೆ ನಮಸ್ಕಾರ ಮಾಡಿಕೊಳ್ಳಬೇಕು ಎಂದುಕೊಳ್ಳುವಷ್ಟರಲ್ಲಿ ಅವರು ಮಾಯವಾದರು.
ಮತ್ತೆ ಆ ಮನುಷ್ಯ ಬಾಬಾರ ಕಡೆ ತಿರುಗಿ, "ನೀವು ಬಹಳ ವಯಸ್ಸಾದವರಂತೆ ಕಾಣುತ್ತೀರಿ. ನಿಮ್ಮ ವಯಸ್ಸೇನು?" ಎಂದು ಕೇಳಿದ.
ಅದಕ್ಕೆ ಬಾಬಾ ನಕ್ಕು ಹೇಳಿದರು, "ನಾನು ವಯಸ್ಸಾದವನೇ? ನನ್ನ ಜೊತೆ ಓಡಿ ನೋಡು. ಯಾರು ಗೆಲ್ಲುತ್ತಾರೋ ನೋಡೋಣ" ಎಂದು ಹೇಳುತ್ತಾ ಓಡಲು ಆರಂಭಿಸಿ, ಹಾಗೆಯೇ ಓಡುತ್ತಾ ಕಾಣಿಸದೇ ಹೋದರು.
ಆಗ ಬಾಬಾ ಕೇಳಿದರು, "ಈಗ ನೀನು ಮಾಡುತ್ತಿರುವ ನಮಸ್ಕಾರಕ್ಕೂ, ಇದಕ್ಕೆ ಮುಂಚೆ ನೀನು ಮಾಡಿದ ನಮಸ್ಕಾರಕ್ಕೂ, ವ್ಯತ್ಯಾಸವಿದೆಯೇನು?".
ಅದಕ್ಕೆ ಅವನು, "ಮೊದಲು ಮಾಡಿದ ನಮಸ್ಕಾರ ಹಣಕ್ಕಾಗಿ. ಈಗ ಮಾಡುತ್ತಿರುವುದು ನೀವು ದೇವರೆಂದು. ಆಗ ನೀವು ಮುಸ್ಲಿಮರು. ಹಿಂದೂಗಳನ್ನು ಹಾಳುಮಾಡುತ್ತಿದ್ದೀರಿ ಎಂದುಕೊಂಡಿದ್ದೆ" ಎಂದು ಹೇಳಿದ.
ಮತ್ತೆ ಬಾಬಾ ಕೇಳಿದರು, "ನೀನು ಮಹಮ್ಮದೀಯ ದೇವರುಗಳನ್ನು ನಂಬುವುದಿಲ್ಲವೇ?" ಅವನು ಅದಕ್ಕೆ "ಇಲ್ಲ" ಎಂದ.
ಆಗ ಸರ್ವಜ್ಞರಾದ ಬಾಬಾ, "ನಿನ್ನ ಮನೆಯಲ್ಲಿ ಪಾಂಜಾ ಇಲ್ಲವೇ? ನೀನು ಮನೆಯಲ್ಲಿ ತಾಬೂತ್ ಪೂಜೆ ಮಾಡುವುದಿಲ್ಲವೇ? ಕಾಡಬೀಬಿಯನ್ನು ಮದುವೆ ಮುಂತಾದ ಸಂದರ್ಭಗಳಲ್ಲಿ ಪೂಜೆ ಮಾಡಿಕೊಳ್ಳುವುದಿಲ್ಲವೇ? ಆಕೆಗೆ ಶಾಂತಿ ಮಾಡುವುದಿಲ್ಲವೇ?" ಎಂದು ಕೇಳಿದರು.
ಅವನು ಅದೆಲ್ಲವನ್ನೂ ಒಪ್ಪಿಕೊಂಡ.
ಆಗ ಬಾಬಾ ನಗುತ್ತಾ, "ಇನ್ನೇನು ಬೇಕು ನಿನಗೆ?" ಎಂದು ಕೇಳಿದರು. ಸಂತ ರಾಮದಾಸರ ಭಕ್ತನಾದ ಅವನು ರಾಮದಾಸರನ್ನು ಕಾಣಲು ಇಚ್ಛಿಸಿದ. ಅವನ ಇಚ್ಛೆಯನ್ನು ಪೂರಯಿಸುವ ಹಾಗೆ ಬಾಬಾ ಅವನನ್ನು "ಹಿಂತಿರುಗಿ ನೋಡು" ಎಂದರು.
ತಿರುಗಿ ನೋಡಿದಾಗ, ಆಶ್ಚರ್ಯವೋ ಎಂಬಂತೆ, ಅಲ್ಲಿ ತನ್ನ ಗುರು ಸಂತ ರಾಮದಾಸರು ನಿಂತಿದ್ದರು. ಅವರಿಗೆ ನಮಸ್ಕಾರ ಮಾಡಿಕೊಳ್ಳಬೇಕು ಎಂದುಕೊಳ್ಳುವಷ್ಟರಲ್ಲಿ ಅವರು ಮಾಯವಾದರು.
ಮತ್ತೆ ಆ ಮನುಷ್ಯ ಬಾಬಾರ ಕಡೆ ತಿರುಗಿ, "ನೀವು ಬಹಳ ವಯಸ್ಸಾದವರಂತೆ ಕಾಣುತ್ತೀರಿ. ನಿಮ್ಮ ವಯಸ್ಸೇನು?" ಎಂದು ಕೇಳಿದ.
ಅದಕ್ಕೆ ಬಾಬಾ ನಕ್ಕು ಹೇಳಿದರು, "ನಾನು ವಯಸ್ಸಾದವನೇ? ನನ್ನ ಜೊತೆ ಓಡಿ ನೋಡು. ಯಾರು ಗೆಲ್ಲುತ್ತಾರೋ ನೋಡೋಣ" ಎಂದು ಹೇಳುತ್ತಾ ಓಡಲು ಆರಂಭಿಸಿ, ಹಾಗೆಯೇ ಓಡುತ್ತಾ ಕಾಣಿಸದೇ ಹೋದರು.
ಕನಸಿನಿಂದ ಎಚ್ಚೆತ್ತ ಅವನು, ತನ್ನ ಕನಸಿನ ಬಗ್ಗೆ ದೀರ್ಘವಾಗಿ ಯೋಚನೆ ಮಾಡಲಾರಂಭಿಸಿದ. ಅದರಲ್ಲೂ ಬಾಬಾರೊಡನೆ ನಡೆದ ಸಂಭಾಷಣೆಗಳನ್ನು ಮತ್ತೆ ಮತ್ತೆ ನೆನಪಿಗೆ ತಂದುಕೊಳ್ಳುತ್ತಾ, ಅದರ ಅರ್ಥವೇನು ಎಂಬುದನ್ನು ಚೆನ್ನಾಗಿ ತಿಳಿದುಕೊಂಡ. ಬಾಬಾ ಎಂತಹ ಮಹಾತ್ಮರು ಎಂಬುದು ಅವನಿಗೆ ಅರಿವಾಯಿತು. ಅದರೊಡನೆ ತನ್ನ ಸಣ್ಣತನವನ್ನೂ ಅರಿತುಕೊಂಡ. ಹೀಗೆ ತನ್ನ ನಿಲುವನ್ನು ಬದಲಾಯಿಸಿಕೊಂಡ ಅವನು ಬಾಹ್ಯ ವಸ್ತುಗಳಿಗೆ ಆಸೆ ಪಡದೆ ತನ್ನ ಆಂತರ್ಯದಲ್ಲಿ ಶಾಂತಿ ಆನಂದಗಳನ್ನು ಕಂಡುಕೊಂಡ. ಆ ಆನಂದವನ್ನು ಶಾಶ್ವತವಾಗಿ ತನ್ನಲ್ಲಿಟ್ಟುಕೊಳ್ಳಬೇಕಾದರೆ ಬಾಬಾರ ಚರಣಗಳಲ್ಲಿ ಬಿದ್ದು ನೀವೇ ಗತಿ ಎಂದು ಶರಣಾಗತನಾಗುವುದೊಂದೇ ದಾರಿ ಎಂಬುದನ್ನೂ ಅರಿತ ಅವನು, ಮಾರನೆಯದಿನ ಬೆಳಗ್ಗೆ ಬೇಗ ಎದ್ದು ಮಸೀದಿಗೆ ಹೋಗಿ, ಮನಃಪೂರ್ವಕವಾಗಿ ಬಾಬಾರ ಪೂಜೆ ಮಾಡಿ, ಆರತಿ ಕೊಟ್ಟು ಬಾಬಾರ ಚರಣಾರವಿಂದಗಳಲ್ಲಿ ತಲೆಯಿಟ್ಟು ನಮಸ್ಕರಿಸಿದ. ಬಾಬಾ ಅವನನ್ನು ಆಶೀರ್ವದಿಸಿ ಸಿಹಿ ಕೊಟ್ಟು, ಒಂದು ರೂಪಾಯಿ ಕೈಯಲ್ಲಿಟ್ಟು ಇನ್ನೂ ನಾಲ್ಕು ದಿನ ಇದ್ದು ಹೋಗಿ ಎಂದರು. ಶಿರಡಿ ಬಿಟ್ಟು ಹೊರಡುವ ಸಮಯಬಂದಾಗ, ಅವರೆಲ್ಲರನ್ನೂ ಬಾಬಾ ಮತ್ತೆ ಆಶೀರ್ವದಿಸಿ, "ಅಲ್ಲಾ ನಿಮಗೆ ಸಮೃದ್ಧಿಯಾಗಿ ಕೊಟ್ಟು, ಒಳ್ಳೆಯದು ಮಾಡುತ್ತಾನೆ. ಹೋಗಿ ಬನ್ನಿ" ಎಂದು ಹೇಳಿದರು. ಅವನಿಗೆ ತನ್ನ ಆಸೆಯಂತೆ ಶಿರಡಿಯಲ್ಲಿ ಬಹಳ ಹಣ ಸಿಕ್ಕಲಿಲ್ಲ. ಆದರೆ ಬಹು ಅಮೂಲ್ಯವಾದ ಬಾಬಾರ ಆಶೀರ್ವಾದಗಳನ್ನು ಪಡೆದುಕೊಂಡ. ಬಾಬಾರ ಅನುಗ್ರಹದಿಂದ ಅವರಿಗೆ ಮುಂದಿನ ಪ್ರಯಾಣಕಾಲದಲ್ಲಿ, ಯಾವುದೇ ತೊಂದರೆಗಳೂ ಆಗದೆ, ತಮ್ಮ ತೀರ್ಥಯಾತ್ರೆಯನ್ನು ಮುಗಿಸಿದರು. ನಂತರ ಅವನಿಗೆ ವಿಫುಲವಾಗಿ ಹಣವೂ ದೊರಕಿತು. ಅವರೆಲ್ಲರೂ ತಾವು ಬಾಬಾರ ಸನ್ನಿಧಾನದಲ್ಲಿ ಕಳೆದ ಸುಖ ಸಂತೋಷಗಳ ದಿನಗಳನ್ನು ನೆನಸಿಕೊಳ್ಳುತ್ತಾ, ಬಾಬಾರನ್ನೇ ನಂಬಿ ಬದುಕಿದರು.
ತೆಂಡೂಲ್ಕರರ ಕಥೆ
ಬಾಂದ್ರಾದಲ್ಲಿ ನೆಲಸಿದ್ದ ತೆಂಡೂಲ್ಕರರ ಸಂಸಾರದವರೆಲ್ಲಾ ಬಾಬಾರ ಅವಿಚ್ಛಿನ್ನ ಭಕ್ತರು. ಶ್ರೀಮತಿ ಸಾವಿತ್ರಿಬಾಯಿ ತೆಂಡೂಲ್ಕರರು, ೮೨೫ ಪದ್ಯಗಳುಳ್ಳ, ಬಾಬಾರ ಲೀಲೆಗಳನ್ನು ವಿವರಿಸುವ "ಶ್ರೀ ಸಾಯಿನಾಥ ಭಜನಮಾಲಾ" ಎಂಬ ಮರಾಠಿ ಬಾಷೆಯ ಪುಸ್ತಕವನ್ನು ಪ್ರಕಟಿಸಿದ್ದಾರೆ. ಓದಿದವರಿಗೆ ಬಹಳ ಸಂತೋಷವನ್ನು ತಂದುಕೊಡುವಂತಹುದು. ಅವರ ಮಗ ಬಾಬು ಹಗಲು ರಾತ್ರಿ ಬಹಳ ಕಷ್ಟಪಟ್ಟು, ವೈದ್ಯ ಪರೀಕ್ಷೆಗಾಗಿ ಓದುತ್ತಿದ್ದ. ಜ್ಯೋತಿಷಿ ಒಬ್ಬ ಅವನ ಜಾತಕವನ್ನು ನೋಡಿ, ಗ್ರಹಗತಿಗಳು ಸರಿಯಾಗಿ ಇಲ್ಲದೇ ಇರುವುದರಿಂದ, ಆ ವರ್ಷ ಅವನು ಎಷ್ಟೇ ಕಷ್ಟಪಟ್ಟರೂ, ಪರೀಕ್ಷೆಯಲ್ಲಿ ತೇರ್ಗಡೆಯಾಗುವ ಸಂಭವ ಬಹಳ ಕಡಮೆ ಎಂದೂ, ಮುಂದಿನ ವರ್ಷದಲ್ಲಿ ಉತ್ತೀರ್ಣನಾಗುವುದು ಖಚಿತ, ಎಂದೂ ಹೇಳಿದ. ಅದನ್ನು ಕೇಳಿದ ಬಾಬು, ಬಹಳ ನಿರಾಸೆಯಿಂದ ಖೇದಗೊಂಡು ಓದುವುದನ್ನೇ ನಿಲ್ಲಿಸಿಬಿಟ್ಟ. ಅವನ ತಂದೆತಾಯಿಗಳಿಗೆ ಅದು ಬಹಳ ವಿಷಾದಕರವಾಗಿತ್ತು. ಈ ಪರಿಸ್ಥಿತಿಯಲ್ಲಿದ್ದಾಗ ಶ್ರೀಮತಿ ತೆಂಡೂಲ್ಕರ್ ಶಿರಡಿಗೆ ಹೋಗುವ ಅವಕಾಶ ಬಂದು, ಆಕೆ ಶಿರಡಿಗೆ ಹೋದರು. ಅಲ್ಲಿ ಆಕೆ ಬಾಬಾರ ದರ್ಶನ ಮಾಡಿ, ಅವರಿಗೆ ಜ್ಯೋತಿಷಿ ಹೇಳಿದ್ದು, ಅದರಿಂದ ತನ್ನ ಮಗ ಚಿಂತಾಕುಲನಾಗಿದ್ದು, ಎಲ್ಲಾ ಹೇಳಿಕೊಂಡರು. ಅದಕ್ಕೆ ಬಾಬಾ, "ಜಾತಕ, ಅದರ ಫಲಾಫಲಗಳು, ಜ್ಯೋತಿಷಿಗಳನ್ನು ಪಕ್ಕಕ್ಕಿಟ್ಟು, ಶಾಂತ ಮನಸ್ಸಿನಿಂದ ನನ್ನನ್ನು ನಂಬಿ, ಚೆನ್ನಾಗಿ ಓದಿ ಪರೀಕ್ಷೆ ಬರೆಯುವಂತೆ, ಹೇಳು. ಅವನು ಈ ವರ್ಷ ಖಂಡಿತವಾಗಿಯೂ ಪರೀಕ್ಷೆಯಲ್ಲಿ ಉತ್ತೀರ್ಣನಾಗುತ್ತಾನೆ" ಎಂದು ಹೇಳಿದರು. ಆಕೆ ಶಿರಡಿಯಿಂದ ಹಿಂತಿರುಗಿ, ಬಾಬಾ ಹೇಳಿದ್ದನ್ನು ತನ್ನ ಮಗನಿಗೆ ಹೇಳಿದರು. ಬಾಬಾರ ಮಾತಿಗೆ ಬೆಲೆಕೊಟ್ಟು, ಆ ಹುಡುಗ ಚೆನ್ನಾಗಿ ಓದಿ ಪರೀಕ್ಷೆಯಲ್ಲಿ ಚೆನ್ನಾಗಿ ಬರೆದ. ಮತ್ತೆ ಅಕಾರಣವಾಗಿ, ಅವನು ಹಿಂದಿನಂತೆ ತನ್ನ ಆತ್ಮವಿಶ್ವಾಸವನ್ನು ಕಳೆದುಕೊಂಡು, ಲಿಖಿತ ಪರೀಕ್ಷೆಯಲ್ಲಿ ತಾನು ಉತ್ತೀರ್ಣನಾಗುವುದಿಲ್ಲವೆಂಬ ಭಯದಿಂದ, ಮೌಖಿಕ ಪರೀಕ್ಷೆಗೆ ಹೋಗಲಿಲ್ಲ. ಆದರೆ ಬಾಬಾರ ಇಚ್ಛೆಯೇ ಬೇರೆಯಿತ್ತು. ಪರೀಕ್ಷಕರೇ ಅವನು ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣನಾಗಿರುವುದರಿಂದ, ಮೌಖಿಕ ಪರೀಕ್ಷೆಗೆ ಹಾಜರಾಗಬೇಕೆಂದು ಸಂದೇಶ ಕಳುಹಿಸಿದರು. ಅದರಿಂದ ಉತ್ಸಾಹಿತನಾದ ಬಾಬು, ಮೌಖಿಕ ಪರೀಕ್ಷೆಗೆ ಹಾಜರಾಗಿ, ಬಾಬಾರ ಅನುಗ್ರಹದಿಂದ, ಅದರಲ್ಲೂ ಉತ್ತೀರ್ಣನಾದ. ಬಾಬಾ ಹೀಗೆ ಜ್ಯೋತಿಷಿಗಳ ಭವಿಷ್ಯವಾಣಿಯನ್ನು ಸುಳ್ಳಾಗಿಸಿದರು.
ಇಲ್ಲ ಸಲ್ಲದ ಸಂದೇಹಗಳು ಬರುವುದೆಲ್ಲಾ ನಾವು ಕಷ್ಟದಲ್ಲಿದ್ದಾಗಲೇ! ಅಂತಹ ಸಮಯದಲ್ಲೇ ಜ್ಯೋತಿಷಿಗಳು, ಹಸ್ತಸಾಮುದ್ರಿಕರು ಇವರುಗಳೆಲ್ಲಾ ನೆನಪಿಗೆ ಬಂದು, ಅವರ ಬಳಿಗೆ ಹೋಗುವುದು. ನಮಗೆ ದೇವರ, ಬಾಬಾರ ನೆನಪು ಬರುವುದೇ ಇಲ್ಲ. ಅದಕ್ಕೇ ಬಾಬಾ, "ನಿಮಗೆ ಎಂಥದೇ ಬಲವತ್ತರವಾದ ಕಾರಣಗಳಿರಲಿ, ನನ್ನಲ್ಲಿ ನಂಬಿಕೆಯನ್ನು ಕಳೆದುಕೊಳ್ಳಬೇಡಿ" ಎಂದು ಹೇಳಿದರು. ನೀವು ಮಾಡುತ್ತಿರುವುದು ಒಳ್ಳೆಯದು ಎಂಬುದು ನಿಮಗೆ ಖಚಿತವಾದರೆ, ಬಾಬಾರಲ್ಲಿ ಪೂರ್ಣ ನಂಬಿಕೆಯಿಟ್ಟು ಮುನ್ನಡೆಯಿರಿ. ಬಾಬಾರ ದಯೆಯಿಂದ ಏನೇ ಅಡೆತಡೆಗಳು ಬಂದರೂ ಅವೆಲ್ಲವೂ, ಸೂರ್ಯ ರಶ್ಮಿಯಿಂದ ಮಂಜು ಕರಗಿದಂತೆ ಕರಗಿಹೋಗುತ್ತವೆ. ಸೂರ್ಯ ಕಿರಣಗಳಿಂದ ಮಂಜು ಮಾತ್ರವೇ ಅಲ್ಲ, ಅಂಧಕಾರವೂ ಕಣ್ಮರೆಯಾಗಿ ಹೋಗುತ್ತದೆ!.
ಆ ಹುಡುಗನ ತಂದೆ ರಘುನಾಥ ರಾವ್ ಒಂದು ವಾಣಿಜ್ಯ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ವಯಸ್ಸಿನಿಂದಾಗಿ, ಅವರು ಕೆಲಸ ಮುಂಚಿನಂತೆ ಮನಸ್ಸಿಟ್ಟು ಮಾಡಲು ಸಾಧ್ಯವಾಗುತ್ತಿರಲಿಲ್ಲ. ಅದಕ್ಕೆ ಅವರು ಆರೋಗ್ಯ ಸುಧಾರಿಸಿಕೊಳ್ಳಲು ಕೆಲವು ದಿನ ರಜೆಯ ಮೇಲಿದ್ದರು. ಆದರೂ ಅವರಿಗೆ ಮುಂಚಿನಂತೆ ಕೆಲಸ ಮಾಡುವುದು ದುಸ್ಸಾಧ್ಯವಾಯಿತು. ಅದಕ್ಕೆ ಅವರು ನಿವೃತ್ತಿ ಪಡೆಯಬೇಕಾಯಿತು. ಬಹಳ ಕಾಲ ನಂಬಿಕೆಯಿಂದ ಕೆಲಸಮಾಡುತ್ತಿದ್ದ ಅವರಿಗೆ ಕಂಪನಿಯ ಮುಖ್ಯಸ್ಥ, ಪೆನ್ಶನ್ ಕೊಡಬೇಕೆಂದು ನಿರ್ಧರಿಸಿದ. ಆತನಿಗೆ ತಿಂಗಳಿಗೆ ೧೫೦ ರೂಪಾಯಿ ಸಂಬಳ ಬರುತ್ತಿತ್ತು. ಪೆನ್ಶನ್ ಅದರಲ್ಲಿ ಅರ್ಧ, ಎಂದರೆ ೭೫ ರೂಪಾಯಿಗಳಲ್ಲಿ ಸಂಸಾರ ಸಾಗಿಸುವುದು, ಬಹಳ ಕಷ್ಟವಾಗುತ್ತಿತ್ತು. ಇದು ಮನೆಯಲ್ಲಿ ಎಲ್ಲರಿಗೂ ಚಿಂತೆಯ ವಿಷಯವಾಗಿತ್ತು. ಇನ್ನೇನು ಪೆನ್ಶನ್ ವಿಷಯದಲ್ಲಿ ಕೊನೆಯ ನಿರ್ಧಾರಕ್ಕೆ ಬರಬೇಕು, ಎಂದಿರುವ ಸಮಯದಲ್ಲಿ ಶ್ರೀಮತಿ ತೆಂಡೂಲ್ಕರ್ ಅವರ ಕನಸಿನಲ್ಲಿ ಬಾಬಾ ಕಾಣಿಸಿಕೊಂಡು, "ನಿನ್ನ ಗಂಡನಿಗೆ ೧೦೦ ರೂಪಾಯಿ ಪೆನ್ಶನ್ ಬಂದರೆ ನಿನಗೆ ಸಂತೋಷವೇ?" ಎಂದು ಕೇಳಿದರು. ಅದಕ್ಕೆ ಆಕೆ, "ನನ್ನನ್ನೇಕೆ ಕೇಳುತ್ತೀರಿ ಬಾಬಾ? ನೀವು ಏನು ನಿರ್ಧರಿಸಿದರೂ ಅದು ನಮ್ಮ ಒಳ್ಳೆಯದಕ್ಕೇ ಆಗಿರುತ್ತದೆ" ಎಂದರು. ಬಾಬಾ ೧೦೦ ರೂಪಾಯಿ ಎಂದು ಹೇಳಿದ್ದರೂ, ಕೊನೆಗೆ ಅವರಿಗೆ ೧೧೦ ರೂಪಾಯಿಗಳ ಪೆನ್ಶನ್ ನಿರ್ಧಾರಮಾಡಿದರು. ಬಾಬಾ ತಮ್ಮ ಭಕ್ತರನ್ನು ಎಷ್ಟು ಜತನದಿಂದ ನೋಡಿಕೊಳ್ಳುತ್ತಿದ್ದರು, ಎಂಬುದಕ್ಕೆ ಇದು ಇನ್ನೊಂದು ನಿದರ್ಶನ. ಅಂತಹ ಕರುಣಾ ಮೂರ್ತಿಯ ಪಾದಪದ್ಮಗಳಿಗೆ ನಮಸ್ಕರಿಸಿ, ನಮನ್ನೂ ಹಾಗೆ ಜತನದಿಂದ ಕಾಪಾಡು, ಎಂದು ಕೇಳಿಕೊಳ್ಳುವ ಅರ್ಹತೆಯನ್ನು ಪಡೆಯಲು ಅನುಗ್ರಹಮಾಡು ಎಂದು ಕೇಳಿಕೊಳ್ಳೋಣ.
ಕ್ಯಾಪ್ಟನ್ ಹಾಟೆ
ಬಿಕಾನೀರ್ನಲ್ಲಿ ನೆಲೆಗೊಂಡಿದ್ದ ಕ್ಯಾ. ವೀರ್ ಹಾಟೆ ಬಾಬಾರ ದೊಡ್ಡ ಭಕ್ತರು. ಒಂದುಸಲ ಬಾಬಾ ಅವರ ಕನಸಿನಲ್ಲಿ ಕಾಣಿಸಿಕೊಂಡು, "ಏನು, ನನ್ನನ್ನು ಮರೆತೆಯಾ?" ಎಂದು ಕೇಳಿದರು. ಹಾಟೆ ಆಶ್ಚರ್ಯದಿಂದ, "ತಾಯಿಯನ್ನು ಮರೆತು ಮಗು ಹೇಗೆ ತಾನೇ ಇರಬಲ್ಲುದು?" ಎಂದು, ತೋಟಕ್ಕೆ ಹೋಗಿ ಚಪ್ಪರದವರೆಕಾಯಿ ಕಿತ್ತುಕೊಂಡು ಬಂದು, ಅದನ್ನು ದಕ್ಷಿಣೆಯೊಡನೆ ಬಾಬಾಗೆ ಅರ್ಪಿಸಬೇಕು ಎಂದುಕೊಳ್ಳುತ್ತಿರುವಾಗಲೇ ಅವರಿಗೆ ಎಚ್ಚರಿಕೆಯಾಗಿಹೋಯಿತು. ಕನಸಿನಲ್ಲಿ ಕಂಡಂತೆ ಅದನ್ನು ಬಾಬಾರಿಗೆ ಅರ್ಪಿಸಬೇಕು ಎಂದು ನಿಶ್ಚಯಿಸಿಕೊಂಡರು. ಗ್ವಾಲಿಯರ್ಗೆ ಹೋದಾಗ, ಕಾಕಾ ಸಾಹೇಬ್ ದೀಕ್ಷಿತರಿಗೆ ಅಲ್ಲಿಂದ ೧೨ ರೂಪಾಯಿ ಹಣ ಕಳುಹಿಸಿ, ಅದರಲ್ಲಿ ೨ ರೂಪಾಯಿಗಳಿಗೆ ಸ್ವಯಂಪಾಕದ ಸಾಮಾನುಗಳನ್ನು, ಚಪ್ಪರದವರೆಕಾಯಿಯೊಡನೆ ಬಾಬಾರಿಗೆ ತನ್ನ ಪರವಾಗಿ ಅರ್ಪಿಸಿ, ೧೦ ರೂಪಾಯಿ ದಕ್ಷಿಣೆಯಾಗಿ ಕೊಡಿ, ಎಂದು ಕೇಳಿಕೊಂಡು ಕಾಗದ ಬರೆದರು. ಕಾಕಾ ಸಾಹೇಬರು ಶಿರಡಿಗೆ ಹೋಗಿ ಹಾಟೆ ಹೇಳಿದಂತೆ, ಎಲ್ಲಾ ಸಾಮಾನು ಕೊಂಡುಕೊಂಡರು. ಆದರೆ ಚಪ್ಪರದವರೆಕಾಯಿ ಮಾತ್ರ ಸಿಕ್ಕಲಿಲ್ಲ. ನಿರಾಸೆಯಿಂದ ಅವರು ಬರುತ್ತಿದ್ದಾಗ, ಮುದುಕಿಯೊಬ್ಬಳು ಅದೇ ತರಕಾರಿಯನ್ನು ಒಂದು ಬುಟ್ಟಿಯ ತುಂಬಾ ತಂದಳು. ಆಶ್ಚರ್ಯಗೊಂಡ ಕಾಕಾ ಸಾಹೇಬ್ ಅದನ್ನು ಕೊಂಡು, ಎಲ್ಲವನ್ನೂ ತಂದು, ದಕ್ಷಿಣೆಯೊಡನೆ ಹಾಟೆಯ ಪರವಾಗಿ ಬಾಬಾರಿಗೆ ಅರ್ಪಿಸಿದರು. ಮಾರನೆಯದಿನ ನಿಮೋನ್ಕರ್ ನೈವೇದ್ಯಕ್ಕಾಗಿ ಅನ್ನ, ಅವರೆಕಾಯಿ ಪಲ್ಯ ಮಾಡಿ ಬಾಬಾರಿಗೆ ಅರ್ಪಿಸಿದರು. ಅದನ್ನು ಸಂತೋಷದಿಂದ ಸ್ವೀಕರಿಸಿದ ಬಾಬಾ, ಬೇರೆ ಯಾವುದನ್ನೂ ಮುಟ್ಟದೆ ಬರೀ ಅವರೆಕಾಯಿ ಪಲ್ಯವನ್ನೇ ತಿಂದರು. ಅದನ್ನೆಲ್ಲ ಕಾಕಾ ಸಾಹೇಬರಿಂದ ತಿಳಿದುಕೊಂಡ ಹಾಟೆಗೆ ಅತೀವ ಸಂತೋಷವಾಯಿತು.
ಇನ್ನೊಂದುಸಲ ಹಾಟೆಗೆ ಒಂದುರೂಪಾಯಿ ನಾಣ್ಯವೊಂದನ್ನು ಬಾಬಾರ ಕೈಯಿಂದ ಪವಿತ್ರಗೊಳಿಸಿ ಅದನ್ನು ಪೂಜೆಯಲ್ಲಿಟ್ಟುಕೊಳ್ಳಬೇಕು ಎನ್ನಿಸಿತು. ಅವರು ಹಾಗೆಂದುಕೊಳ್ಳುತ್ತಿರುವಾಗಲೇ ಅವರ ಸ್ನೇಹಿತರೊಬ್ಬರು, ಶ್ರೀ ಸವಲ್ ರಾಮ್, ಶಿರಡಿಗೆ ಹೊರಡುವುದರಲ್ಲಿದ್ದರು. ಹಾಟೆ ಅವರ ಕೈಯಲ್ಲಿ ಒಂದು ರೂಪಾಯಿ ನಾಣ್ಯವನ್ನು ಕೊಟ್ಟು, ಅದನ್ನು ಬಾಬಾ ಕೈಯಲ್ಲಿ ಮುಟ್ಟಿಸಿ, ಪವಿತ್ರಗೊಳಿಸಿ ತರಬೇಕೆಂದು ಕೇಳಿಕೊಂಡರು. ಆ ಸ್ನೇಹಿತ ಶಿರಡಿಗೆ ಹೋಗಿ, ಬಾಬಾರ ದರ್ಶನ ಮಾಡಿ, ತನ್ನ ದಕ್ಷಿಣೆಯನ್ನು ಕೊಟ್ಟ. ಬಾಬಾ ಅದನ್ನು ಜೇಬಿನಲ್ಲಿ ಹಾಕಿಕೊಂಡರು. ನಂತರ ಅವನು ಹಾಟೆ ಕೊಟ್ಟ ರೂಪಾಯಿ ನಾಣ್ಯವನ್ನು ಬಾಬಾರ ಕೈಲಿಟ್ಟು, "ಇದು ಹಾಟೆಯವರು ಕಳುಹಿಸಿದ್ದು" ಎಂದ. ಬಾಬಾ ಅದನ್ನು ಕೈಯಲ್ಲಿ ತೆಗೆದುಕೊಂಡು, ಸ್ವಲ್ಪ ಹೊತ್ತು ತದೇಕಚಿತ್ತರಾಗಿ ಅದನ್ನು ನೋಡಿ, ಚಿಮ್ಮಿ ಮೇಲಕ್ಕೆಸೆದು, ಅದರೊಡನೆ ಸ್ವಲ್ಪ ಹೊತ್ತು ಆಟವಾಡಿ, ಅದನ್ನು ಸವಲ್ ರಾಮನಿಗೆ ಕೊಟ್ಟು, "ಇದನ್ನು ಊದಿ ಪ್ರಸಾದದೊಡನೆ, ಅದರ ಯಜಮಾನನಿಗೆ ಕೊಡು. ನನಗೆ ಅವನಿಂದ ಏನೂ ಬೇಕಾಗಿಲ್ಲ. ತೃಪ್ತಿ ಸಂತೋಷಗಳಿಂದ ಜೀವನ ಮಾಡು ಎಂದು ಅವನಿಗೆ ಹೇಳು" ಎಂದರು.
ಆ ಸ್ನೇಹಿತ ಗ್ವಾಲಿಯರ್ಗೆ ಹಿಂತಿರುಗಿ ಹಾಟೆಯನ್ನು ಕಂಡು, ಅವರಿಗೆ ಆ ರೂಪಾಯಿ ನಾಣ್ಯವನ್ನು ಕೊಟ್ಟು, ಶಿರಡಿಯಲ್ಲಿ ನಡೆದದ್ದನ್ನೆಲ್ಲಾ ವಿವರವಾಗಿ ತಿಳಿಸಿದ. ವಿಶೇಷವಾಗಿ ಹಾಟೆಗೋಸ್ಕರವಾಗಿಯೇ ಹೇಳಿದ ಬಾಬಾರ ಮಾತುಗಳನ್ನೂ ಹೇಳಿದ. ಅದನ್ನೆಲ್ಲಾ ಕೇಳಿದ ಹಾಟೆ ಅತ್ಯಂತ ಸಂತೋಷಪಟ್ಟವರಾಗಿ, ಬಾಬಾ ತನ್ನ ಮನೋಭಿಲಾಷೆಯನ್ನು ಪೂರಯಿಸಿ, ಉತ್ತಮ ಯೋಚನೆಗಳಿಗೆ ಹೇಗೆ ಉತ್ತೇಜನ ಕೊಡುತ್ತಾರೆ ಎಂಬುದನ್ನು ಕಂಡುಕೊಂಡರು.
ವಾಮನ ನಾರ್ವೇಕರರ ಕಥೆ
ಮೇಲಿನ ಕಥೆಗಿಂತ, ಇದೊಂದು ವಿಭಿನ್ನವಾದ ಕಥೆ. ವಾಮನ ನಾರ್ವೇಕರ್, ಬಾಬಾರ ಇನ್ನೊಬ್ಬ ಭಕ್ತರು. ಅವರಿಗೆ ಬಾಬಾರಲ್ಲಿ ಅಪರಿಮಿತ ಪ್ರೀತಿ. ಒಂದುಸಲ ಅವರು ಒಂದು ನಾಣ್ಯವನ್ನು ತಂದರು. ಅದಕ್ಕೆ ಒಂದು ಕಡೆ ರಾಮ, ಲಕ್ಷ್ಮಣ, ಸೀತಾ ಮೂರ್ತಿಗಳು, ಇನ್ನೊಂದು ಕಡೆ ಕೈ ಮುಗಿದು ಕೂತಿರುವ ಆಂಜನೇಯ ಕೆತ್ತಲಾಗಿತ್ತು. ಅವರು ಆ ನಾಣ್ಯವನ್ನು ಬಾಬಾ ಕೈಲಿಟ್ಟು ಅವರಿಂದ ಪವಿತ್ರಗೊಳಿಸಿ ತೆಗೆದುಕೊಳ್ಳಬೇಕೆಂದು ತಂದಿದ್ದರು. ಆದರೆ ಬಾಬಾ ಅದನ್ನು ಬಹಳ ನೆಚ್ಚಿಕೊಂಡು, ಆ ನಾಣ್ಯವನ್ನು ಹಿಂತಿರುಗಿಸದೆ ತಾವೇ ಇಟ್ಟುಕೊಂಡರು. ಇದನ್ನು ನೋಡುತ್ತಿದ್ದ ಶ್ಯಾಮಾ, "ಆ ನಾಣ್ಯ ನಾರ್ವೇಕರ್ ಕೊಟ್ಟಿದ್ದು ಪವಿತ್ರಗೊಳಿಸಿ ಕೊಡಲಿ ಎಂದು. ಅದನ್ನು ಅವರಿಗೆ ಹಿಂತಿರುಗಿಸಿ" ಎಂದರು. ಅದಕ್ಕೆ ಬಾಬಾ, "ಅದೇಕೆ ಹಿಂದಕ್ಕೆ ಕೊಡಬೇಕು? ಅದನ್ನು ನಾವೇ ಇಟ್ಟುಕೊಳ್ಳೋಣ. ಅವನು ೨೫ ರೂಪಾಯಿ ಕೊಟ್ಟರೆ ಅದನ್ನು ವಾಪಸ್ಸು ಮಾಡೋಣ" ಎಂದರು. ನಾರ್ವೇಕರ್ ಹೇಗೋ ಮಾಡಿ ೨೫ ರೂಪಾಯಿ ತಂದು ಕೊಟ್ಟರು. ಮತ್ತೆ ಬಾಬಾ, "ಅದರ ಮೌಲ್ಯ ೨೫ ರೂಪಾಯಿಗಳಿಗಿಂತ ಬಹಳ ದೊಡ್ಡದು. ಶಾಮ್ಯಾ, ಇದನ್ನು ನೀನೇ ಇಟ್ಟುಕೋ. ಪೂಜಾಗೃಹದಲ್ಲಿಟ್ಟು ದಿನವೂ ಪೂಜೆ ಮಾಡಿಕೋ" ಎಂದರು. ಬಾಬಾರನ್ನು ‘ಹಾಗೇಕೆ ಮಾಡಿದಿರಿ’ ಎಂದು ಕೇಳುವ ಧೈರ್ಯ ಯಾರಿಗೂ ಇರಲಿಲ್ಲ. ಅವರ ರೀತಿ ನೀತಿಗಳು ವಿಚಿತ್ರ-ವಿಶಿಷ್ಟವಾದವು. ಅವರೇನು ಮಾಡುತ್ತಾರೆ ಎಂಬುದು ಅವರಿಗೇ ಗೊತ್ತು. ಅಂತಹ ವಿಚಿತ್ರ ವೈಶಿಷ್ಟವುಳ್ಳ ಬಾಬಾ ಪಾದಗಳಿಗೆ ನಮಸ್ಕರಿಸಿ ಆತನ ದಯೆಗೆ ಪಾತ್ರರಾಗೋಣ.
ಇದರೊಂದಿಗೆ ಮದ್ರಾಸಿ ಭಜನ ಮೇಳ, ತೆಂಡೂಲ್ಕರ್, ಕ್ಯಾ. ಹಾಟೆ, ವಾಮನ ನಾರ್ವೇಕರ್ ಮತ್ತು ಇತರ ವಿಷಯಗಳನ್ನು ಕುರಿತು ಹೇಳುವ ಇಪ್ಪತ್ತೊಂಭತ್ತನೆಯ ಅಧ್ಯಾಯ ಮುಗಿಯಿತು. ಮುಂದಿನ ಅಧ್ಯಾಯದಲ್ಲಿ ಹೇಮಾಡ್ ಪಂತ್ ವಣಿಯ ಕಾಕಾಜಿ ವೈದ್ಯ, ಬೊಂಬಾಯಿಯ ಪಂಜಾಬಿ ರಾಮಲಾಲ್ ಇತ್ಯಾದಿ ವಿಷಯಗಳನ್ನು ಹೇಳುತ್ತಾರೆ.
||ಶ್ರೀ ಸದ್ಗುರು ಸಾಯಿನಾಥಾರ್ಪಣಮಸ್ತು||ಶುಭಂ ಭವತು||
||ಓಂ ಶಾಂತಿಃ ಶಾಂತಿಃ ಶಾಂತಿಃ||
||ಓಂ ಶಾಂತಿಃ ಶಾಂತಿಃ ಶಾಂತಿಃ||
No comments:
Post a Comment