Friday, January 6, 2012

||ಮುವ್ವತ್ತೊಂದನೆಯ ಅಧ್ಯಾಯ||


||ಶ್ರೀ ಸಾಯಿಸಚ್ಚರಿತ್ರೆ||
||ಮುವ್ವತ್ತೊಂದನೆಯ ಅಧ್ಯಾಯ||
||ದರ್ಶನ ಮಹಿಮೆ||
ಶ್ರೀ ಗಣೇಶಾಯ ನಮಃ ಶ್ರೀ ಸರಸ್ವತಯೇ ನಮಃ
ಶ್ರೀ ವೆಂಕಟೇಶಾಯ ನಮಃ ಶ್ರೀ ಸಾಯಿನಾಥಾಯ ನಮಃ
ಶ್ರೀ ಸದ್ಗುರುಭ್ಯೋನ್ನಮಃ

ಅಧ್ಯಾಯದಲ್ಲಿ ಹೇಮಾಡ್ ಪಂತ್, ಬಾಬಾರ ಸನ್ನಿಧಾನದಲ್ಲಿ ಪ್ರಾಣ ತ್ಯಜಿಸಿದ ಸನ್ಯಾಸಿ ವಿಜಯಾನಂದ, ಬಲರಾಮ ಮಾನ್ಕರ್, ನೂಲ್ಕರ್, ಮೇಘಾ, ಹುಲಿ ಮತ್ತು ಇತರ ವಿಷಯಗಳನ್ನು ಹೇಳುತ್ತಾರೆ.

ಅಂತಿಮ ಕೋರಿಕೆ

"ಅಂತಿಮಕಾಲದಲ್ಲಿ ಯಾರು ನನ್ನನ್ನೇ ಸ್ಮರಿಸುತ್ತಾ ದೇಹವನ್ನು ತ್ಯಜಿಸುತ್ತಾರೋ, ಅವರು ನನ್ನನ್ನೇ ಸೇರುತ್ತಾರೆ. ಇದರಲ್ಲಿ ಸಂಶಯವೇ ಇಲ್ಲ" ಎಂದು ಭಗವದ್ಗೀತೆಯಲ್ಲಿ ಶ್ರೀ ಕೃಷ್ಣ ಹೇಳಿದ್ದಾನೆ.

ಯಾರು ಸದಾ ಯಾವುದನ್ನು ಚಿಂತಿಸುತ್ತಾ, ಅದರಲ್ಲೇ ನಿರತರಾಗಿ ದೇಹ ತ್ಯಾಗ ಮಾಡುತ್ತಾರೋ, ಅವರು ಅದೇ ಆಗುತ್ತಾರೆ. ನಾವು ಇಂದ್ರಿಯ ವಿಷಯಗಳ ಯೋಚನೆ ಮಾಡುತ್ತಾ ಪ್ರಾಣ ತ್ಯಜಿಸಿದರೆ ಮುಂದಿನ ಜನ್ಮದಲ್ಲಿ ಇಂದ್ರಿಯ ವಿಷಯಗಳನ್ನೇ ಹೊಂದುತ್ತೇವೆ. ಇದಕ್ಕೆ ಜಡಭರತನ ಕಥೆಯೇ ಉದಾಹರಣೆ. ಅವನು ತನ್ನ ಅಂತ್ಯಕಾಲದಲ್ಲಿ ಜಿಂಕೆಯನ್ನೇ ಯೋಚಿಸುತ್ತಾ ಪ್ರಾಣ ಬಿಟ್ಟುದದರಿಂದ ತನ್ನ ಮುಂದಿನ ಜನ್ಮದಲ್ಲಿ ಜಿಂಕೆಯಾಗಿಯೇ ಹುಟ್ಟಿದ. ನಾವು ಪರಮಾತ್ಮನ ಪಾದಗಳನ್ನೇ ಚಿಂತಿಸುತ್ತಾ ಪ್ರಾಣ ತ್ಯಾಗ ಮಾಡಿದರೆ, ಪರಮಾತ್ಮನ ಪಾದಗಳೇ ಆಗಿ ಜನನ ಮರಣ ಚಕ್ರ ಭ್ರಮಣೆಯಿಂದ ಬಿಡುಗಡೆ ಹೊಂದುತ್ತೇವೆ. ಇದು ಸಾಧ್ಯವಾಗಬೇಕಾದರೆ, ಅದಕ್ಕೆ ನಿರಂತರ ಅಭ್ಯಾಸವಿರಬೇಕು. ಆದುದರಿಂದಲೇ ಸಂತರು, ಮಹಾತ್ಮರು ನಮಗೆ ಸತತವಾಗಿ ಸದಾಕಾಲ ಪರಮಾತ್ಮನ ನಾಮ ಸ್ಮರಣೆ ಮಾಡಿಕೊಳ್ಳಲು ಹೇಳಿದ್ದಾರೆ. ಹಾಗೆ ಮಾಡುವುದರಿಂದ, ಪ್ರಾಣ ಪ್ರಯಾಣ ಕಾಲದಲ್ಲಿ ಪರಮಾತ್ಮನ ನಾಮ ಸ್ಮರಣೆಯೇ ನಮ್ಮಲ್ಲಿದ್ದು, ನಾವು ಯಾವ ಆತಂಕಗಳೂ ಇಲ್ಲದೆ, ಪ್ರಾಣ ತ್ಯಾಗ ಮಾಡಬಹುದು. ರೀತಿ ನಾವು ಸದಾಕಾಲವೂ ನಾಮಸ್ಮರಣೆಯನ್ನು ಮಾಡಿಕೊಂಡಿರಲು, ಸದ್ಗುರುವು ಮಾತ್ರವೇ ಸಹಾಯಮಾಡಬಲ್ಲವನು. ಅವನಲ್ಲಿ ಸಂಪೂರ್ಣ ಶರಣಾಗತರಾದರೆ, ಅವನು ನಮ್ಮನ್ನು ಮಾರ್ಗದಲ್ಲಿ ನಡೆಸುವನು. ಅಧ್ಯಾಯವನ್ನು ಪ್ರಾರಂಭಿಸುವುದಕ್ಕೆ ಮುಂಚೆ, ನಮಗೆ ಅಂತಹ ನಾಮಸ್ಮರಣೆಯನ್ನು ಮಾಡಿಕೊಳ್ಳುವಂತಹ ಸ್ಥಿರಮನಸ್ಸನ್ನು ಅನುಗ್ರಹಿಸು ಎಂದು ಸದ್ಗುರುವಿಗೆ ನಮಸ್ಕರಿಸಿ ಬೇಡಿಕೊಳ್ಳೋಣ.

ವಿಜಯಾನಂದರ ಕಥೆ

ವಿಜಯಾನಂದರು ಮದ್ರಾಸಿನ ಒಬ್ಬರು ಸನ್ಯಾಸಿ. ಒಂದುಸಲ, ಜಪಾನೀಯನೊಬ್ಬನ ಹತ್ತಿರವಿದ್ದ ಮಾನಸ ಸರೋವರದ ವಿವರಗಳನ್ನು ನೋಡಿ, ಅವರು ಅಲ್ಲಿಗೆ ಹೋಗಬೇಕೆಂದು ನಿಶ್ಚಯಿಸಿಕೊಂಡರು. ಅದು ಆದದ್ದು ಸುಮಾರು ೧೯೧೧ರಲ್ಲಿ. ವೇಳೆಗೆ, ಬಾಬಾರ ಕೀರ್ತಿ ದೇಶದಲ್ಲೆಲ್ಲಾ ವ್ಯಾಪಕವಾಗಿತ್ತು. ವಿಜಯಾನಂದರೂ ಅದನ್ನು ಕೇಳಿದ್ದರು. ಆದ್ದರಿಂದ ಅವರು ಮಾನಸ ಸರೋವರಕ್ಕೆ ಹೋಗುತ್ತಾ, ದಾರಿಯಲ್ಲಿ ಶಿರಡಿಯ ಬಾಬಾರನ್ನು ದರ್ಶನ ಮಾಡಿಕೊಂಡು ಹೋಗಬೇಕೆಂದುಕೊಂಡು ಶಿರಡಿಗೆ ಬಂದರು. ಶಿರಡಿಯಲ್ಲಿ ಸೋಮದೇವಸ್ವಾಮಿ ಎಂಬ ಹರಿದ್ವಾರದ ಸನ್ಯಾಸಿಯೊಬ್ಬರ ಭೇಟಿ ಆಯಿತು. ಸನ್ಯಾಸಿ - ಮಾನಸ ಸರೋವರ, ಗಂಗೋತ್ರಿಗೆ ೫೦೦ ಮೈಲಿಗಳ ದೂರದಲ್ಲಿದೆಯೆಂದೂ, ಪ್ರಯಾಣ ಕಷ್ಟಸಾಧ್ಯ, ದಾರಿ ಹಳ್ಳಕೊಳ್ಳಗಳಿಂದ ತುಂಬಿದೆ, ಕೆಲವು ಕಡೆಗಳಲ್ಲಿ ಭೂ ಕುಸಿತಗಳೂ ಆಗುತ್ತವೆಯೆಂದೂ, ಹಲವಾರುಕಡೆ ಹಿಮಾಚ್ಛಾದಿತವಾಗಿದೆ - ಎಂದೆಲ್ಲಾ ಅವರಿಗೆ ಹೇಳಿದರು. ಮತ್ತೆ, ಅಲ್ಲಿನ ಆಡುವಭಾಷೆ ಪ್ರತಿ ೧೫೦ ಮೈಲಿಗಳಿಗೆ ಬೇರೆಯಾಗುವುದು, ಟಿಬೆಟ್ ಜನ ಅಷ್ಟು ನಂಬಲರ್ಹರಾದವರಲ್ಲ, ಯಾತ್ರಿಗಳಿಗೆ ಅನೇಕ ವಿಧದಲ್ಲಿ ಬಹಳ ಕಷ್ಟಕೊಡುತ್ತಾರೆಯೆಂದೂ ಹೇಳಿದರು. ವಿವರಗಳನ್ನೆಲ್ಲಾ ಕೇಳಿದ ವಿಜಯಾನಂದರು, ತಮ್ಮ ಮಾನಸ ಸರೋವರದ ಯಾತ್ರೆಯನ್ನು ಕೈಬಿಟ್ಟು, ಶಿರಡಿಯಲ್ಲೇ ಇರಲು ನಿರ್ಧರಿಸಿದರು.

ಮರುದಿನ ಅವರು ಬಾಬಾರ ದರ್ಶನ ಮಾಡಲು ಮಸೀದಿಗೆ ಹೋಗಿ ಬಾಬಾರ ಪಾದಗಳಿಗೆ ನಮಸ್ಕಾರ ಮಾಡಿದರು. ಆತನನ್ನು ಕಾಣುತ್ತಲೇ ಬಾಬಾ ಕೋಪಗ್ರಸ್ತರಾಗಿ, " ಮನುಷ್ಯನನ್ನು ಹೊರಕ್ಕೆ ಕಳುಹಿಸಿ. ಅವನು ಇಲ್ಲಿರಲು ಲಾಯಕ್ಕಲ್ಲ" ಎಂದು ಕೂಗಿದರು. ವಿಜಯಾನಂದರಿಗೆ ಅದೇ ಶಿರಡಿಯ ಮೊದಲ ಭೇಟಿಯಾದದ್ದರಿಂದ, ಬಾಬಾ ಏನು ಹೇಳುತ್ತಿದ್ದಾರೆ ಎಂಬುದು ಅವರಿಗೆ ಅರ್ಥವಾಗದೆ, ಅವರ ಮಾತುಗಳಿಂದ ಮುಜುಗರಗೊಂಡು, ದೂರ ಹೋಗಿ ಮಸೀದಿಯ ಒಂದು ಮೂಲೆಯಲ್ಲಿ, ಅಲ್ಲಿ ನಡೆಯುತ್ತಿದ್ದ ವಿದ್ಯಮಾನವನ್ನೆಲ್ಲಾ ನೋಡುತ್ತಾ ಕುಳಿತರು. ಅದು ಬಾಬಾರ ಬೆಳಗಿನ ದರ್ಬಾರು ಸಮಯ. ಭಕ್ತರು ಬಾಬಾರನ್ನು ಅನೇಕ ರೀತಿಯಲ್ಲಿ ಪೂಜಿಸುತ್ತಿದ್ದರು. ಕೆಲವರು ಬೀಸಣಿಗೆಯಿಂದ ಗಾಳಿ ಬೀಸುತ್ತಿದ್ದರು. ಕೆಲವರು ಅವರ ಪಾದಗಳನ್ನು ತೊಳೆದು ನೀರನ್ನು ಪವಿತ್ರವಾದ ಪಾದತೀರ್ಥವೆಂದು ಕುಡಿಯುತ್ತಿದ್ದರು. ಇನ್ನು ಕೆಲವರು ಅವರಿಗೆ ಚಂದನ ಲೇಪನ ಮಾಡುತ್ತಿದ್ದರು. ಇದನ್ನೆಲ್ಲ ನೋಡುತ್ತಿದ್ದ ವಿಜಯಾನಂದರಿಗೆ ಬಹಳ ಸಂತೋಷವಾಗಿ, ಮಸೀದಿಯನ್ನು ಬಿಟ್ಟು ಹೋಗಲಾರದೆ ಅಲ್ಲೇ ಕುಳಿತು ಎಲ್ಲವನ್ನೂ ವೀಕ್ಷಿಸುತ್ತಿದ್ದರು.

ಅವರು ಶಿರಡಿಯಲ್ಲಿ ಎರಡು ದಿನಗಳಿದ್ದರು. ದಿನವೂ ಬೆಳಗ್ಗೆ ಮಸೀದಿಗೆ ಹೋಗಿ ಬಾಬಾರ ದರ್ಶನಮಾಡಿ, ನಮಸ್ಕರಿಸಿ ಮಸೀದಿಯ ಮೂಲೆಯೊಂದರಲ್ಲಿ ಕುಳಿತು ಅಲ್ಲಿ ನಡೆಯುವುದನ್ನೆಲ್ಲ ನೋಡುತ್ತಾ ಕುಳಿತಿರುತ್ತಿದ್ದರು. ಮೂರನೆಯ ದಿನ ಅವರಿಗೆ ಮದ್ರಾಸಿನಿಂದ ಕಾಗದವೊಂದು ಬಂತು. ಅದರಲ್ಲಿ ಅವರ ತಾಯಿಗೆ ಬಹಳ ಖಾಯಿಲೆಯಾಗಿದೆ, ಬದುಕುವ ಸಾಧ್ಯತೆ ಕಡಮೆ ಎಂದು ಬರೆದಿತ್ತು. ಅದನ್ನು ಓದಿದ ವಿಜಯಾನಂದರಿಗೆ ದುಃಖವಾಗಿ, ಆಕೆಯ ಅಂತ್ಯಕಾಲದಲ್ಲಿ ತಾನು ಅಕೆಯ ಬಳಿ ಇರಬೇಕೆಂದುಕೊಂಡು, ಮದ್ರಾಸಿಗೆ ಹಿಂತಿರುಗಲು ನಿಶ್ಚಯಿಸಿದರು. ಅದರಂತೆ ಮಸೀದಿಗೆ ಹೋಗಿ ಬಾಬಾರಿಗೆ ನಮಸ್ಕರಿಸಿ, ತಾನು ಮದ್ರಾಸಿಗೆ ಏಕೆ ಹಿಂತಿರುಗುತ್ತಿದ್ದೇನೆ ಎಂಬುದನ್ನು ವಿವರಿಸಿದರು. ಭೂತ, ಭವಿಷ್ಯ, ವರ್ತಮಾನಗಳನ್ನು ಬಲ್ಲ ಬಾಬಾ, "ನಿನ್ನ ತಾಯಿಯನ್ನು ಅಷ್ಟೊಂದು ಪ್ರೀತಿಸುವುದಾದರೆ, ನೀನು ಸನ್ಯಾಸಿಯಾದದ್ದು ಏಕೆ? ಮೋಹ, ಕಾವಿ ಬಟ್ಟೆಗೆ ಸರಿಹೋಗುವುದಿಲ್ಲ. ಕೆಲವು ದಿನ ಸಹನೆಯಿಂದಿರು. ವಾಡಾದಲ್ಲಿ ಸುಮ್ಮನೆ ಕುಳಿತುಕೋ. ವಾಡಾದಲ್ಲಿ ಕಳ್ಳರಿದ್ದಾರೆ. ಕೊಠಡಿಯ ಬಾಗಿಲು ಹಾಕಿಕೊಂಡು, ಎಚ್ಚರಿಕೆಯಿಂದ ಒಳಗೆ ಕುಳಿತುಕೋ. ಇಲ್ಲದಿದ್ದರೆ ಕಳ್ಳರು ಎಲ್ಲವನ್ನೂ ಕದ್ದುಕೊಂಡು ಹೋಗುತ್ತಾರೆ. ಪ್ರಪಂಚವೆಲ್ಲವೂ ಅಸ್ಥಿರ. ದೇಹ ಶಿಥಿಲವಾಗಿ ಸಾಯುತ್ತದೆ. ಮೋಹ ಆಸೆಗಳನ್ನು ತ್ಯಜಿಸಿ, ನಿನ್ನ ಕರ್ತವ್ಯ ಮಾಡುತ್ತಾ ಕುಳಿತುಕೋ. ಹಾಗೆ ಮಾಡುತ್ತಾ, ಶ್ರೀಹರಿಯ ಚರಣಾರವಿಂದಗಳಲ್ಲಿ ಮನಸ್ಸಿಡು. ಶ್ರದ್ಧೆಯಿಂದ ಪ್ರೀತಿಯಿಟ್ಟು ಕರೆದರೆ, ಪರಮಾತ್ಮ ಓಡಿ ಬರುತ್ತಾನೆ. ನಿನ್ನ ಪೂರ್ವ ಪುಣ್ಯ ಫಲದಿಂದ ಈಗ ನೀನು ಶಿರಡಿಗೆ ಬಂದಿದ್ದೀಯೆ. ನಾನು ಹೇಳಿದಂತೆ ಮಾಡಿ, ನಿನ್ನ ಜನ್ಮ ಸಾಫಲ್ಯ ಮಾಡಿಕೋ. ನಾಳೆಯಿಂದ ಭಾಗವತ ಪಾರಾಯಣ ಆರಂಭಮಾಡಿ, ಮೂರು ಸಪ್ತಾಹಗಳನ್ನು ಮುಗಿಸು. ದೇವರು ಸಂಪ್ರೀತನಾಗಿ ನಿನ್ನ ದುಃಖಗಳನ್ನೆಲ್ಲ ಪರಿಹರಿಸುತ್ತಾನೆ. ನಿನ್ನ ಭ್ರಮೆ ಭ್ರಾಂತಿಗಳೆಲ್ಲ ತೊಲಗಿ, ಮನಸ್ಸಿಗೆ ಶಾಂತಿ ಸಿಕ್ಕುತ್ತದೆ" ಎಂದರು. ತಮ್ಮ ಮಹಾಸಮಾಧಿಗೆ ಮುಂಚೆ, ಮೃತ್ಯುದೇವತೆಗೆ ಪ್ರಿಯವಾದ ರಾಮವಿಜಯದ ಪಾರಾಯಣಕ್ಕೆ, ಬಾಬಾ ಏರ್ಪಾಟು ಮಾಡಿಕೊಂಡಿದ್ದರು.

ಮಾರನೆಯ ದಿನ ವಿಜಯಾನಂದ್ ಬೆಳಗ್ಗೆ ಬೇಗ ಎದ್ದು ಸ್ನಾನ ಮಾಡಿ ಪ್ರಾತಃಕರ್ಮಗಳನ್ನೆಲ್ಲಾ ಮುಗಿಸಿ, ಲೆಂಡಿಯ ಒಂದು ಪ್ರಶಾಂತ ಜಾಗದಲ್ಲಿ ಕುಳಿತು, ಭಾಗವತದ ಪಾರಾಯಣ ಆರಂಭಮಾಡಿದರು. ಎರಡು ಸಪ್ತಾಹ ಮುಗಿಸಿ ಬಹಳ ಬಳಲಿ, ವಾಡಾಕ್ಕೆ ಹೋಗಿ ತನ್ನ ಕೊಠಡಿಯಲ್ಲಿ ಎರಡು ದಿನವಿದ್ದು, ಮೂರನೆಯ ದಿನ ಬಡೆ ಬಾಬಾರ ಜೊತೆ ಮಾತನಾಡುತ್ತಾ, ಅವರ ತೊಡೆಯ ಮೇಲೆ ತಲೆಯಿಟ್ಟು ಕೊನೆಯುಸಿರೆಳೆದರು. ಬಾಬಾ ದೇಹವನ್ನು ಒಂದು ದಿನ ಹಾಗೆಯೇ ಇಡುವಂತೆ ಹೇಳಿದರು. ಪೋಲೀಸರು ಬಂದು ಮಹಜರು ಮುಗಿಸಿ ಮುಂದಿನ ಕಾರ್ಯಗಳಿಗೆ ದೇಹವನ್ನು ಒಪ್ಪಿಸಿದರು. ದೇಹಕ್ಕೆ ಮಾಡಬೇಕಾದ ಕರ್ಮಗಳನ್ನೆಲ್ಲಾ ಮಾಡಿ, ಒಂದು ಒಳ್ಳೆಯ ಜಾಗದಲ್ಲಿ ಹೂತರು. ಆತನನ್ನು ನೋಡಿದ ಕ್ಷಣದಲ್ಲಿಯೇ, ಆತನ ಅಂತ್ಯವನ್ನು ಕಂಡ ಬಾಬಾ, ಆತನನ್ನು ತನ್ನ ಬಳಿಯೇ ನಿಲ್ಲಿಸಿಕೊಂಡು ಸದ್ಗತಿ ನೀಡಿದರು.

ಬಲರಾಮ ಮಾನ್ಕರರ ಕಥೆ

ಬಾಬಾರಿಗೆ ಶ್ರೀಮಂತರು, ಬಡವರು, ಚಿಕ್ಕವರು, ದೊಡ್ಡವರು, ಗಂಡಸರು, ಹೆಂಗಸರು, ರೋಗಿಗಳು, ಆರೋಗ್ಯವಂತರು ಎಲ್ಲ ರೀತಿಯ ಭಕ್ತರೂ ಇದ್ದರು. ಕುಲ ಮತ ಭೇದಗಳಿಲ್ಲದೆ, ಲಿಂಗ ಭೇದವಿಲ್ಲದೆ, ಎಲ್ಲರೂ ತಮ್ಮ ತಮ್ಮ ಇಷ್ಟದಂತೆ ಬಾಬಾರ ಪೂಜೆಯಲ್ಲಿ ನಿರತರಾಗಿರುತ್ತಿದ್ದರು. ಅಂತಹ ಭಕ್ತ ಸಮುದಾಯದಲ್ಲಿ, ಸಂಸಾರವಂದಿಗ ಬಲರಾಮ್ ಮಾನ್ಕರ್ ಒಬ್ಬರು. ವಯಸ್ಸಾದ ಹೆಂಡತಿ ತೀರಿಕೊಂಡ ಮೇಲೆ, ಆತನಿಗೆ ಜೀವನದಲ್ಲಿ ಜಿಗುಪ್ಸೆಯಾಗಿ, ಸಂಸಾರಭಾರವನ್ನೆಲ್ಲ ತನ್ನ ಮಗನಿಗೆ ಒಪ್ಪಿಸಿ, ತಾನು ಶಿರಡಿಗೆ ಬಂದರು. ಅಚಲ ಶ್ರದ್ಧೆಯಿಂದ ಬಾಬಾರ ಸೇವೆ ಮಾಡುತ್ತಿದ್ದರು. ಅವರ ಸೇವೆಯಿಂದ ಸಂಪ್ರೀತರಾದ ಬಾಬಾ, ಅವರಿಗೆ ಏನಾದರೂ ಒಳ್ಳೆಯದು ಮಾಡಬೇಕು, ಎಂದುಕೊಂಡರು. ಅವರಿಗೆ ಹನ್ನೆರಡು ರೂಪಾಯಿ ಕೊಟ್ಟು, ಅವರನ್ನು ಮಚ್ಚೀಂದ್ರಗಡಕ್ಕೆ ಹೋಗುವಂತೆ ಹೇಳಿದರು. ಮಾನ್ಕರ್ ಅದಕ್ಕೆ ಒಪ್ಪಿಕೊಳ್ಳಲಿಲ್ಲ. ಬಾಬಾ ಎದುರಿಗಿಲ್ಲದೆ ತಾನು ತನ್ನ ಜೀವನವನ್ನು ಎದುರಿಸುವುದು ಹೇಗೆ ಎಂಬ ಹೆದರಿಕೆ, ದುಃಖ. ಬಾಬಾ ಆತನನ್ನು ಹೇಗೋ ಮಾಡಿ, ಹೋಗುವಂತೆ ಒಪ್ಪಿಸಿದರು. ಬಾಬಾರ ಮಾತನ್ನು ಅಲ್ಲಗಳೆಯಲಾರದ ಅಸೀಮ ಭಕ್ತ, ಮಚ್ಚೀಂದ್ರಗಡಕ್ಕೆ ಹೋದರು. ಅಲ್ಲಿನ ಪ್ರಕೃತಿ ಸೌಂದರ್ಯ, ಹಿತಕರ ವಾತಾವರಣ, ಶುದ್ಧ ನೀರು ಗಾಳಿ ಎಲ್ಲವನ್ನು ನೋಡಿ, ತಮ್ಮನ್ನು ಅಲ್ಲಿಗೆ ಕಳುಹಿಸಿದ್ದಕ್ಕೆ ಬಾಬಾರಿಗೆ ವಂದನೆಗಳನ್ನು ಅರ್ಪಿಸಿದರು. ಕಾಲವ್ಯಯಮಾಡದೆ ಬಾಬಾ ಹೇಳಿದಂತೆ ದಿನವೂ ಮೂರುಸಲ ಧ್ಯಾನಮಾಡಲು ಆರಂಭಿಸಿದರು.

ಕೆಲವು ದಿನಗಳಾದಮೇಲೆ ಅವರಿಗೆ ಒಂದು ದರ್ಶನವಾಯಿತು. ಸಾಮಾನ್ಯವಾಗಿ ಇಂತಹ ದರ್ಶನಗಳು ಆಗುವುದು ಸಮಾಧಿಸ್ಥಿತಿಯಲ್ಲಿದ್ದಾಗ. ಮಾನ್ಕರರಿಗೆ, ಹಚ್ಚ ಹಗಲಿನಲ್ಲಿ ಎಚ್ಚರವಾಗಿದ್ದಾಗಲೇ ದರ್ಶನ ಆಯಿತು. ತನ್ನ ಧ್ಯಾನ ಮುಗಿಸಿ, ಕಣ್ಣು ತೆರೆದಾಗ ಬಾಬಾ ಎದುರು ನಿಂತಿದ್ದದ್ದು ಕಾಣಿಸಿತು. ಮಾನ್ಕರರ ಆಶ್ಚರ್ಯ ಸಂತೋಷಗಳಿಗೆ ಮೇರೆಯಿಲ್ಲದೇ ಹೋಯಿತು. ಸ್ವಲ್ಪಹೊತ್ತು ಮೂಕನಂತಿದ್ದ ಅವರು, "ನನ್ನನ್ನು ಇಲ್ಲಿಗೆ ಏಕೆ ಕಳುಹಿಸಿದಿರಿ?" ಎಂದು ಬಾಬಾರನ್ನು ಕೇಳಿದರು. ಬಾಬಾ ಹೇಳಿದರು, "ನಿನ್ನ ಚಂಚಲ ಮನಸ್ಸು ಶಾಂತವಾಗುವಂತೆ ಮಾಡಲು, ನಿನ್ನನ್ನು ಇಲ್ಲಿಗೆ ಕಳುಹಿಸಿದೆ. ಶಿರಡಿಯಲ್ಲಿ ನಿನ್ನ ಮನಸ್ಸಿನಲ್ಲಿ ಅನೇಕಾನೇಕ ಯೋಚನೆಗಳು, ಸಂಶಯಗಳೂ ತುಂಬಿಕೊಂಡಿದ್ದವು. ಮೂರೂವರೆ ಮೊಳದ ಪಾಂಚಭೌತಿಕ ದೇಹದಲ್ಲಿ ಮಾತ್ರ ನಾನು ಇದ್ದೇನೆಂದೂ, ದೇಹದಿಂದ ಆಚೆ ನಾನಿಲ್ಲವೆಂದೂ ನೀನು ಭಾವಿಸಿಕೊಂಡಿದ್ದೆ. ಈಗ ನೋಡು. ನೀನು ಶಿರಡಿಯಲ್ಲಿ ನೋಡಿದ ನಾನು, ಇಲ್ಲಿ ನೀನು ನೋಡುತ್ತಿರುವ ನಾನು, ಇಬ್ಬರೂ ಒಂದೇ ಹೌದೋ ಅಲ್ಲವೋ ನೀನೇ ನಿರ್ಧರಿಸಿಕೋ. ಕಾರಣದಿಂದಾಗಿಯೇ ನಾನು ನಿನ್ನನ್ನು ಇಲ್ಲಿಗೆ ಕಳುಹಿಸಿದ್ದು. ನಾನು ದೇಹಕ್ಕೆ ಸೀಮಿತನಲ್ಲ. ಎಲ್ಲೆಲ್ಲೂ ಇದ್ದೇನೆ." ಇಷ್ಟು ಹೇಳಿ, ಮಾನ್ಕರ್ ನಮಸ್ಕಾರ ಮಾಡುವಷ್ಟರಲ್ಲಿ, ಅವರು ಅದೃಶ್ಯರಾದರು. ಅನುಭವದಿಂದ ಪುಳಕಿತರಾದ ಮಾನ್ಕರ್, ಇನ್ನೂ ಕೆಲವುದಿನ ಮಚ್ಚೀಂದ್ರಗಡದಲ್ಲಿ ಇದ್ದು ನಂತರ ತನ್ನ ಊರಾದ ಬಾಂದ್ರಾಕ್ಕೆ, ಪೂನಾದ ಮೂಲಕ ರೈಲಿನಲ್ಲಿ ಹೋಗಬೇಕೆಂದು ನಿಶ್ಚಯಿಸಿಕೊಂಡರು. ರೈಲು ನಿಲ್ದಾಣದಲ್ಲಿ ಅಪಾರ ಜನಸಂದಣಿಯಿತ್ತು. ಟಿಕೆಟ್ ಕೊಳ್ಳಲು ಸಾಧ್ಯವಾಗದೆ, ಏನು ಮಾಡಬೇಕೆಂದು ಯೋಚಿಸುತ್ತಿದ್ದಾಗ, ಒಂದು ಕೌಪೀನ ಧರಿಸಿ, ಕಂಬಳಿ ಹೊದ್ದುಕೊಂಡಿದ್ದ ಹಳ್ಳಿಯವನಂತೆ ಕಾಣುತ್ತಿದ್ದ ಒಬ್ಬನು ಬಂದು ಮಾನ್ಕರರನ್ನು, "ನೀವೆಲ್ಲಿಗೆ ಹೋಗುತ್ತಿದ್ದೀರಿ?"ಎಂದು ಕೇಳಿದ. “ದಾದರಿಗೆಎಂದರು ಮಾನ್ಕರ್. ಹಳ್ಳಿಯವ ತನ್ನಲ್ಲಿದ್ದ ಟಿಕೆಟ್ಟನ್ನು ಮಾನ್ಕರರಿಗೆ ಕೊಟ್ಟು, “ನನಗೆ ಯಾವುದೋ ಬಹಳ ತುರ್ತು ಕೆಲಸ ಬಂದಿರುವುದರಿಂದ ಈಗ ನಾನು ದಾದರಿಗೆ ಹೋಗಲಾರೆ. ಟಿಕೆಟ್ಟನ್ನು ನೀವು ತೆಗೆದುಕೊಳ್ಳಿಎಂದು ಹೇಳಿ ಟಿಕೆಟ್ಟನ್ನು ಅವರ ಕೈಲಿಟ್ಟ. ಮಾನ್ಕರರಿಗೆ ಬಹಳ ಸಂತೋಷವಾಯಿತು. ಟಿಕೆಟ್ಟನ್ನು ತೆಗೆದುಕೊಂಡು, ಜೇಬಿನಿಂದ ಹಣ ತೆಗೆದು ಕೊಡುವಷ್ಟರಲ್ಲಿ, ಮನುಷ್ಯ ಕಾಣದಾಗಿದ್ದ. ಎಷ್ಟು ಹುಡುಕಿದರೂ, ಎಲ್ಲೂ ಅವನು ಕಾಣಲಿಲ್ಲ. ರೈಲು ಹೊರಡುವವರೆಗೂ ಕಾದರೂ, ಹಳ್ಳಿಯವನ ಜಾಡು ಕಾಣಲಿಲ್ಲ. ಇದು ಮಾನ್ಕರರಿಗೆ ಆದ ಎರಡನೆಯ ದರ್ಶನ. ಅನುಭವಗಳು ಬಾಬಾ ಸರ್ವವ್ಯಾಪಿ ಎಂಬುದನ್ನು ಅವರಿಗೆ ತೋರಿಸಿಕೊಟ್ಟಿತು.

ಬಾಂದ್ರಾಗೆ ಹೋಗಿ ಸ್ವಲ್ಪಕಾಲ ಅಲ್ಲಿದ್ದು, ಬಾಬಾರ ಜೊತೆಯಿಲ್ಲದೆ ಜೀವಿಸುವುದು ಸಾಧ್ಯವಿಲ್ಲ ಎನ್ನಿಸಿ, ಮತ್ತೆ ಅವರು ಶಿರಡಿಗೆ ಬಂದರು. ಇನ್ನು ತನ್ನ ಜೀವಮಾನವೆಲ್ಲಾ ಶಿರಡಿಯಲ್ಲೇ ಕಳೆಯುವುದೆಂದು ನಿರ್ಧರಿಸಿ, ಬಾಬಾರ ಸೇವೆಯಲ್ಲಿ ನಿಂತರು. ಬಾಬಾರ ಆಶಿರ್ವಾದಗಳೊಡನೆ, ಅವರ ಸನ್ನಿಧಿಯಲ್ಲೇ ತಮ್ಮ ಕೊನೆಯುಸಿರೆಳೆದರು.

ತಾತ್ಯಾ ಸಾಹೇಬ ನೂಲ್ಕರರ ಕಥೆ

ಪಂಡರಪುರದಲ್ಲಿ, ನಾನಾ ಸಾಹೇಬ್ ಚಾಂದೋರ್ಕರರು ಮಾಮಲತದಾರರಾಗಿದ್ದಾಗ, ತಾತ್ಯಾ ಸಾಹೇಬ ನೂಲ್ಕರರು ಅಲ್ಲಿ ಸಬ್ ಜಡ್ಜ್ ಆಗಿದ್ದರು. ೧೯೦೯ರ ಕಾಲ ಅದು. ಆಗ ತಾತ್ಯಾ ಸಾಹೇಬರಿಗೆ ಶಿರಡಿಯಾಗಲೀ, ಬಾಬಾ ಆಗಲೀ ತಿಳಿದಿರಲಿಲ್ಲ. ಅವರು ಶಿರಡಿಗೆ ಎಂದೂ ಹೋಗಿರಲಿಲ್ಲ. ಆಗಾಗ ಇಬ್ಬರೂ ಭೇಟಿಯಾಗಿ ಸಂತರು, ಮಹಾತ್ಮರ ವಿಷಯವಾಗಿ ಮಾತನಾಡಿಕೊಳ್ಳುತ್ತಿದ್ದರು. ತಾತ್ಯಾ ಸಾಹೇಬರಿಗೆ ಸಂತರು ಮಹಾತ್ಮರುಗಳಲ್ಲಿ ನಂಬಿಕೆಯಿರಲಿಲ್ಲ. ಆವೇಳೆಗಾಗಲೇ ಚಾಂದೋರ್ಕರರು ಬಾಬಾರ ಪರಮ ಭಕ್ತರಾಗಿದ್ದರು. ಅವರು ತಾತ್ಯಾರಿಗೆ ಬಾಬಾರ ಲೀಲೆಗಳನ್ನು ಕುರಿತು ಹೇಳುತ್ತಾ ಶಿರಡಿಗೆ ಹೋಗಿ, ಬಾಬಾರ ದರ್ಶನ ಮಾಡಿಕೊಳ್ಳಲು, ತಾತ್ಯಾರನ್ನು ಒತ್ತಾಯಮಾಡುತ್ತಿದ್ದರು. ಚಾಂದೋರ್ಕರ್ ಅಷ್ಟೊಂದು ಹೇಳುವುದನ್ನು ಕೇಳಿದ ತಾತ್ಯಾ ಸಾಹೇಬರು, ಎರಡು ನಿಬಂಧನೆಗಳ ಮೇಲೆ ಶಿರಡಿಗೆ ಹೋಗಲು ಒಪ್ಪಿಕೊಂಡರು. . ತನ್ನ ಜೊತೆಗೆ ಬ್ರಾಹ್ಮಣ ಅಡಿಗೆಯವನು ಇರಬೇಕು. . ಒಂದು ಬುಟ್ಟಿ ಒಳ್ಳೆಯ ನಾಗಪುರದ ಕಿತ್ತಳೆ ಹಣ್ಣು ಸಿಗಬೇಕು. ದೈವಕೃಪೆಯಿಂದ ಎರಡು ನಿಬಂಧನೆಗಳೂ ಪೂರ್ಣವಾದವು. ಒಬ್ಬ ಬ್ರಾಹ್ಮಣ ಚಾಂದೋರ್ಕರರ ಬಳಿಗೆ ಕೆಲಸ ಕೇಳಿ ಬಂದ. ಅವನನ್ನು ಅವರು ತಾತ್ಯಾ ಬಳಿಗೆ ಕಳುಹಿಸಿದರು. ನೂರು ಒಳ್ಳೆಯ ನಾಗಪುರದ ಕಿತ್ತಳೆ ಹಣ್ಣುಗಳಿದ್ದ ಬುಟ್ಟಿಯೊಂದು ತಾತ್ಯಾ ಸಾಹೇಬರಿಗೆ ಬಂತು. ಅದನ್ನು ಯಾರು ಕಳುಹಿಸಿದ್ದರು ಎಂಬುದು ತಿಳಿಯಲಿಲ್ಲ. ಎರಡೂ ನಿಬಂಧನೆಗಳು ಪೂರ್ಣವಾದುದರಿಂದ, ಅವರು ಶಿರಡಿಗೆ ಹೊರಡಲೇ ಬೇಕಾಯಿತು. ಶಿರಡಿಗೆ ಹೋಗಿ ಬಾಬಾರನ್ನು ಕಾಣಲು ಮಸೀದಿಯಲ್ಲಿ ಕಾಲಿಡುತ್ತಲೇ, ಬಾಬಾ ಅವರನ್ನು ಕಂಡು ಕೋಪಗೊಂಡರು. ಅದಾದಮೇಲೆ, ಕ್ರಮೇಣ ಅನೇಕ ಅಪೂರ್ವ ಅನುಭವಗಳನ್ನು ಪಡೆದ ತಾತ್ಯಾ ಸಾಹೇಬರ ಸಂದೇಹಗಳೆಲ್ಲ ನಿವೃತ್ತಿಯಾಗಿ, ಬಾಬಾರಲ್ಲಿನ ನಂಬಿಕೆ ಶ್ರದ್ಧೆಗಳು ಧೃಢವಾಗಿ, ಅವರು ಶಿರಡಿಯಲ್ಲೇ ನೆಲೆಗೊಳ್ಳಲು ನಿರ್ಧಾರಮಾಡಿದರು.

ಕಾಲಾನಂತರದಲ್ಲಿ ಅವರ ಅಂತಿಮ ಸಮಯ ಬಂದಾಗ ಅವರ ಮುಂದೆ ಪ್ರತಿದಿನ ಪವಿತ್ರ ಗ್ರಂಥಗಳ ಪಠನೆ ಮಾಡಲಾಯಿತು. ಕೊನೆಯ ಘಳಿಗೆಯಲ್ಲಿ ಅವರಿಗೆ ಬಾಬಾರ ಪಾದತೀರ್ಥ ಕುಡಿಸಲಾಯಿತು. ಆತ ಗತಪ್ರಾಣರಾದಮೇಲೆ, ಅವರಲ್ಲಿ ಅಗಾಧ ಪ್ರೀತಿಯನ್ನಿಟ್ಟಿದ್ದ ಬಾಬಾ, " ತಾತ್ಯಾ ನಮ್ಮನ್ನು ಬಿಟ್ಟು ಅಗಲಿದ. ಅವನಿಗೆ ಪುನರ್ಜನ್ಮವಿಲ್ಲ" ಎಂದು ಹೇಳಿದರು ಪ್ರಸಂಗ ಸಾಯಿಲೀಲಾ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಮೇಘಾರ ಕಥೆ

ಅಧ್ಯಾಯ ೨೮ರಲ್ಲಿ ಮೇಘಾ ತೀರಿಕೊಂಡಿದ್ದು ಹೇಳಲ್ಪಟ್ಟಿದೆ. ಆತ ತೀರಿಕೊಂಡಾಗ, ಶಿರಡಿಯ ಜನರೆಲ್ಲ ಆತನ ಅಂತಿಮ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಬಾಬಾ ಕೂಡಾ ಮೆರವಣಿಗೆಯಲ್ಲಿ ಜನರೊಡನೆ ಹೋಗಿ ಮೇಘಾ ಪಾರ್ಥಿವ ಶರೀರದ ಮೇಲೆ ಹೂವುಗಳನ್ನಿಟ್ಟು, ಅಂತಿಮ ಸಂಸ್ಕಾರವಾದ ಮೇಲೆ ಸಾಮಾನ್ಯ ಜನರಂತೆ ಕಣ್ಣಿರಿಟ್ಟುಕೊಂಡರು. ಅಶ್ರುಧಾರೆಗಳು ಅವರ ಕಣ್ಣಿನಿಂದ ಧಾರಾಕಾರವಾಗಿ ಸುರಿದವು. ಬಾಬಾರು ದುಃಖ ಪೂರಿತರಾಗಿ ಕಣ್ಣೀರಿಟ್ಟುಕೊಂಡ ಬಹಳ ಅಪರೂಪವಾದ ಸನ್ನಿವೇಶ. ತನ್ನ ಬಹಳ ಹತ್ತಿರದ ಬಂಧುವನ್ನು ಕಳೆದುಕೊಂಡಂತೆ, ಬಾಬಾ ಕಣ್ಣೀರಿಡುತ್ತಾ ಮಸೀದಿಗೆ ಹಿಂತಿರುಗಿದರು. ಬಹುಶಃ ಸ್ವಲ್ಪಕಾಲಕ್ಕೆ ಅವರನ್ನು ಮಾಯೆ ಆವರಿಸಿತ್ತೋ ಏನೋ!

ಅನೇಕ ಮಾನವರಿಗೆ ಬಾಬಾ ಸದ್ಗತಿ ಕೊಟ್ಟಿದ್ದರು. ಆದರೆ, ಆಶ್ಚರ್ಯವಾದುದೆಂದರೆ ತನ್ನ ಆಸರೆಗೆ ಬಂದ ಕ್ರೂರಮೃಗವಾದ ಹುಲಿಗೂ ಅವರು ಸದ್ಗತಿ ಕೊಟ್ಟಿದ್ದು.

ಹುಲಿಯ ಕಥೆ

ಒಂದುಸಲ, ಒಂದು ಗಾಡಿ ಶಿರಡಿಗೆ ಬಂತು. ಅದರಲ್ಲಿ ಬಂಧಿತವಾದ ಹುಲಿಯೊಂದನ್ನು ಬೋನಿನಲ್ಲಿಟ್ಟು ತಂದಿದ್ದರು. ಮೂರು ಜನ ಕಾವಲಿದ್ದರು. ಹಳ್ಳಿ ಹಳ್ಳಿಗೂ ಅದನ್ನು ತೆಗೆದುಕೊಂಡು ಹೋಗಿ, ಅದರ ಪ್ರದರ್ಶನ ಮಾಡಿ, ಅದರಿಂದ ಅವರು ಹಣ ಸಂಪಾದಿಸಿ, ಜೀವನ ಮಾಡುತ್ತಿದ್ದರು. ಕಾಲಕ್ರಮೇಣ ಅದಕ್ಕೆ ಖಾಯಿಲೆಯಾಗಿ, ಹೇಳಿಕೊಳ್ಳಲಾರದ ದುಃಖನೋವುಗಳಿಂದ ಒದ್ದಾಡುತ್ತಿತ್ತು. ಯಾವ ಚಿಕಿತ್ಸೆಯೂ ಉಪಯೋಗಕ್ಕೆ ಬರಲಿಲ್ಲ. ಬಾಬಾರ ಮಹಿಮೆಗಳನ್ನು ಕೇಳಿದ್ದ ಅವರು, ಬಾಬಾರ ಬಳಿಗೆ ಹುಲಿಯನ್ನು ಕರೆದುಕೊಡು ಹೋದರೆ ಅನುಕೂಲವಾಗಬಹುದೇನೋ ಎಂಬುವ ಆಸೆಯಿಂದ ಶಿರಡಿಗೆ ಬಂದರು. ಮಸೀದಿಗೆ ಅದನ್ನು ತೆಗೆದುಕೊಂಡುಹೊಗಿ ಬಾಬಾರ ಮುಂದೆ ನಿಲ್ಲಿಸಿ, ಬಾಬಾರಿಗೆ ತಮ್ಮ ದುಃಖವನ್ನೆಲ್ಲಾ ಹೇಳಿಕೊಂಡರು. ಹುಲಿ ಜನರಿಗೆಲ್ಲಾ ಆಕರ್ಷಣೆಯಾಗಿತ್ತು. ಹುಲಿಯನ್ನು ಮಸೀದಿಯ ಒಳಕ್ಕೆ ಕರೆದುತರುವಂತೆ ಬಾಬಾ ಹೇಳಿದರು. ಅದನ್ನು ಸರಿಯಾಗಿ ಬಂಧಿಸಿ ತಂದು ಬಾಬಾರ ಮುಂದೆ ನಿಲ್ಲಿಸಿದರು. ಹುಲಿ ಮಸೀದಿಯ ಮೆಟ್ಟಿಲ ಬಳಿ ಬರುತ್ತಲೇ, ಬಾಬಾರ ದೇಹದ ಕಾಂತಿಯನ್ನು ತಡೆಯಲಾರದೋ ಎಂಬಂತೆ ತನ್ನ ತಲೆ ತಗ್ಗಿಸಿತು. ಬಾಬಾ ಹುಲಿಯನ್ನು, ಹುಲಿ ಬಾಬಾರನ್ನು ಒಂದು ಕ್ಷಣ ದೃಷ್ಟಿಸಿ ನೋಡಿದರು. ನಂತರ ಹುಲಿ ಮೆಟ್ಟಿಲ ಮೇಲೆ ಕಾಲಿಟ್ಟು, ವಿಶೇಷ ಪ್ರೇಮ ದೃಷ್ಟಿಯನ್ನು ಬೀರುತ್ತಾ, ಮೂರುಸಲ ತನ್ನ ಬಾಲ ನೆಲಕ್ಕೆ ಹೊಡೆದು, ಎಲ್ಲರೂ ನೋಡುತ್ತಿದ್ದಹಾಗೇ ಗತಪ್ರಾಣವಾಗಿ ಕೆಳಕ್ಕೆ ಬಿತ್ತು. ಅದರ ಯಜಮಾನರಿಗೆ ಅದನ್ನು ಕಂಡು ಆಘಾತವಾಯಿತು. ತಮ್ಮ ಜೀವನೋಪಾಯವೇ ಹೋದಂತಾಯಿತು. ಸರಿಯಾದ ರೀತಿಯಲ್ಲಿ ಯೋಚಿಸಿದಾಗ, ಅದು ಸತ್ತದ್ದೇ ಒಳ್ಳೆಯದಾಯಿತು ಎನ್ನಿಸಿತು. ಆಯುಸ್ಸು ಮುಗಿದಿದ್ದ ಹುಲಿ, ಅದರ ಅದೃಷ್ಟವೋ ಎಂಬಂತೆ, ಒಬ್ಬ ಮಹಾತ್ಮನ ಮುಂದೆ ಕೊನೆಯುಸಿರೆಳೆಯಿತು. ಬಾಬಾರಿಗೆ ಹುಲಿ ತೋರಿಸಿದ ಗೌರವ ಕಂಡು ಆಲ್ಲಿದ್ದವರಿಗೆಲ್ಲರಿಗೂ ಆಶ್ಚರ್ಯವಾಯಿತು.

ಹುಲಿಯ ಯಜಮಾನರ ದುಃಖವನ್ನು ನೋಡಿದ ಬಾಬಾ, ಅವರಿಗೆ ಹೇಳಿದರು, "ದುಃಖಿಸಬೇಡಿ. ಹುಲಿ ಅದೃಷ್ಟಮಾಡಿತ್ತು. ಇಲ್ಲಿ ಸಾಯಬೇಕಾದದ್ದರಿಂದಲೇ ಅದು ಇಲ್ಲಿಗೆ ಬಂತು. ಈಗ ಅದಕ್ಕೆ ಶಾಂತಿ ದೊರಕಿದೆ. ತಾಕಿಯಾ ಹಿಂದೆ ಶಿವಾಲಯದ ನಂದಿಯ ಬಳಿ ಅದನ್ನು ಹೂತಿಡಿ. ಹಾಗೆ ಮಾಡುವುದರಿಂದ ನೀವು ಅದನ್ನು ಋಣಾನುಬಂಧದಿಂದ ಮುಕ್ತಮಾಡುತ್ತೀರಿ. ಅದು ನಿಮಗೆ ಹಿಂದಿನ ಜನ್ಮದಲ್ಲಿ ಋಣಿಯಾಗಿತ್ತು. ಋಣ ತೀರಿಸಲು ಅದು ಹುಲಿಯಾಗಿ ಹುಟ್ಟಿ ನಿಮ್ಮ ಸೇವೆ ಮಾಡಿ ತನ್ನ ಋಣ ತೀರಿಸಿಕೊಂಡಿತು. ನೀವು ಅದನ್ನು ಹೂತಿಟ್ಟ ಮೇಲೆ ಅದು ಮೇಲಿನ ಲೋಕಕ್ಕೆ ಹೋಗುತ್ತದೆ." ಬಾಬಾ ಹೇಳಿದಂತೆ ಎಲ್ಲರೂ ಮೂವರೊಡನೆ ಸೇರಿ ಹುಲಿಯನ್ನು ಬಾಬಾ ಹೇಳಿದ ಜಾಗದಲ್ಲಿ ಹೂತಿಟ್ಟರು.

ಒಬ್ಬ ಮಹಾತ್ಮನ ಸನ್ನಿಧಿಯಲ್ಲಿ ದೇಹತ್ಯಾಗ ಮಾಡುವುದೆಂದರೆ, ಅದು ಅದೃಷ್ಟವೇ ಸರಿ. ಯಾರೇ ಆಗಲಿ, ಯಾವ ಪ್ರಾಣಿ, ಪಕ್ಷಿಯೇ ಆಗಲಿ ತನ್ನ ಪೂರ್ವ ಜನ್ಮಕೃತ ಪುಣ್ಯಕಾರ್ಯಗಳ ಫಲಗಳಿಂದ ಮಾತ್ರವೇ, ಅಂತಹ ದೈವ ಕೃಪೆಯನ್ನು ಪಡೆಯಬಲ್ಲರು. ರೀತಿಯಲ್ಲಿ ದೇಹ ತ್ಯಾಗ ಮಾಡಿದವರು ದೈವವನ್ನೇ ಸೇರುತ್ತಾರೆ.

ಇದರೊಂದಿಗೆ ಬಾಬಾರ ಸನ್ನಿಧಾನದಲ್ಲಿ ಪ್ರಾಣ ತ್ಯಜಿಸಿದ ಸನ್ಯಾಸಿ ವಿಜಯಾನಂದ, ಬಲರಾಮ ಮಾನ್ಕರ್, ನೂಲ್ಕರ್, ಮೇಘಾ, ಹುಲಿ ಮತ್ತು ಇತರ ವಿಷಯಗಳನ್ನು ಕುರಿತು ಹೇಳುವ ಮುವ್ವತ್ತೊಂದನೆಯ ಅಧ್ಯಾಯ ಮುಗಿಯಿತು. ಮುಂದಿನ ಅಧ್ಯಾಯದಲ್ಲಿ ಹೇಮಾಡ್ ಪಂತ್ ಬಾಬಾ ತಮ್ಮ ಗುರುವನ್ನು ಹೇಗೆ ಸಂಧಿಸಿದರು, ಶ್ರೀಮತಿ ಗೋಖಲೆ ಇತ್ಯಾದಿ ವಿಷಯಗಳನ್ನು ಹೇಳುತ್ತಾರೆ.

||ಶ್ರೀ ಸದ್ಗುರು ಸಾಯಿನಾಥಾರ್ಪಣಮಸ್ತು||ಶುಭಂ ಭವತು||
||ಓಂ ಶಾಂತಿಃ ಶಾಂತಿಃ ಶಾಂತಿಃ||


No comments:

Post a Comment