Monday, January 2, 2012

||ಇಪ್ಪತ್ತೆಂಟನೆಯ ಅಧ್ಯಾಯ||


||ಶ್ರೀ ಸಾಯಿ ಸಚ್ಚರಿತ್ರೆ||
||ಇಪ್ಪತ್ತೆಂಟನೆಯ ಅಧ್ಯಾಯ||
||ದಾರದಿಂದ ಕಟ್ಟೆಳೆದ ಪಕ್ಷಿಗಳು||
ಶ್ರೀ ಗಣೇಶಾಯ ನಮಃ ಶ್ರೀ ಸರಸ್ವತಯೇ ನಮಃ
ಶ್ರೀ ವೆಂಕಟೇಶಾಯ ನಮಃ ಶ್ರೀ ಸಾಯಿನಾಥಾಯ ನಮಃ
ಶ್ರೀ ಸದ್ಗುರುಭ್ಯೋನ್ನಮಃ

ಅಧ್ಯಾಯದಲ್ಲಿ ಹೇಮಾಡ್ ಪಂತ್, ಲಕ್ಷ್ಮೀಚಂದ್, ಬರ್ಹಾಂಪುರದ ಮಹಿಳೆ, ಮೇಘ ಮತ್ತು ಇತರ ವಿಷಯಗಳನ್ನು ಹೇಳುತ್ತಾರೆ

ಸದ್ಗುರು ಸಾಯಿ

ಬಲಗಾಲನ್ನು ಎಡಗಾಲ ಮೇಲಿಟ್ಟು, ಎಡಗೈ ಬಲಗಾಲ ಪಾದದ ಮೇಲಿಟ್ಟು, ಕರುಣಾಪೂರ್ಣ ದೃಷ್ಟಿಯಿಂದ ಭಕ್ತರನ್ನು ನೋಡುತ್ತಿರುವ, ನಮಗೆಲ್ಲರಿಗೂ ಕಾಣುತ್ತಿರುವ ಬಾಬಾ, ರೂಪಕ್ಕೆ ಮಾತ್ರ ಸೀಮಿತರಲ್ಲ. ಸಾಯಿ ರೂಪದ ಆಚೆಯೂ ಇದ್ದಾರೆ. ಅವರು ಅಣುರೇಣು ತೃಣ ಕಾಷ್ಠಗಳಲ್ಲಿದ್ದಾರೆ. ಅಣೋರಣೀಯಾನ್ ಮಹತೋಮಹೀಯಾನ್ ಅವರು. ಸಕಲ ಚರಾಚರ ವಸ್ತುಗಳಲ್ಲಿ ತುಂಬಿದ್ದಾರೆ. ನಮ್ಮ ಜ್ಞಾನೇಂದ್ರಿಯಗಳು ಗ್ರಹಿಸ ಬಹುದಾದ, ಗ್ರಹಿಸಲಾರದಾದ ವಸ್ತುಗಳೆಲ್ಲದರಲ್ಲಿಯೂ ಅವರೇ ಇದ್ದಾರೆ. ಎಲ್ಲದರ ಆದಿಮಧ್ಯಾಂತಗಳಲ್ಲಿ ಇದ್ದಾರೆ. ಅವರಿಲ್ಲದ ವಸ್ತು, ಜಾಗ, ಜೀವಿ ಯಾವುದೂ ಇಲ್ಲ. ಅವರು ಸರ್ವತ್ರ ತುಂಬಿದ್ದಾರೆ. ಅವರೇ ಪರಬ್ರಹ್ಮ. ಪೂರ್ಣ ಬ್ರಹ್ಮ. ಅವರೇ ನಮ್ಮ ಸದ್ಗುರು. ನಮ್ಮನ್ನು ಉದ್ಧರಿಸಿ ನಾವು ಹೋಗಬೇಕಾದ ಗಮ್ಯಕ್ಕೆ ಸೇರಿಸಬಲ್ಲವರು. ತಂದೆಯಾದವನು ದೇಹಕ್ಕೆ ಜನ್ಮ ಕೊಟ್ಟವನು ಅಷ್ಟೇ! ಆದರೆ, ಸದ್ಗುರುವು ನಮ್ಮನ್ನು ಜನನ ಮರಣ ಚಕ್ರದಿಂದ ಆಚೆಗೆ ತೆಗೆದುಕೊಂಡು ಹೋಗಬಲ್ಲವನು. ನಮ್ಮ ತಂದೆಗಿಂತ ಹೆಚ್ಚು ದಯೆ ಕರುಣೆಯುಳ್ಳವನು. ವಿಷಯದಲ್ಲಿ ಬಾಬಾ ಯಾವಾಗಲೂ ಹೇಳುತ್ತಿದ್ದರು, "ನನ್ನ ಭಕ್ತ ಎಲ್ಲೇ ಇರಲಿ, ಸಪ್ತ ಸಾಗರಗಳ ಆಚೆ ಇರಲಿ, ಅವನನ್ನು ಗುಬ್ಬಿಯ ಕಾಲಿಗೆ ದಾರ ಕಟ್ಟಿ ಎಳೆದು ತರುವಂತೆ ಎಳೆದು ಇಲ್ಲಿಗೆ ತರುತ್ತೇನೆ." ಅದು ಅವರ ಭಕ್ತರಲ್ಲಿ ಅವರಿಗಿದ್ದ ಪ್ರೀತಿ ವಿಶ್ವಾಸದ ಗುರುತು. ಬಾಬಾರಿಂದ ಹಾಗೆ ಎಳೆದು ತರಲ್ಪಟ್ಟ ಮೂರು ಗುಬ್ಬಿಗಳನ್ನು ನೋಡೋಣ.

ಲಕ್ಷ್ಮೀಚಂದರ ಕಥೆ

ಲಕ್ಷ್ಮೀಚಂದರು ಶ್ರೀ ವೆಂಕಟೇಶ್ವರ ಮುದ್ರಣಾಲಯದಲ್ಲಿ ಗುಮಾಸ್ತೆ (ಮುನ್ಶಿ) ಯಾಗಿ ಕೆಲಸಮಾಡಿದರು. ನಂತರ ರೈಲ್ವೆಯಲ್ಲಿಯೂ, ರಾಲಿ ಬಂಧುಗಳಲ್ಲಿಯೂ ಕೆಲಸ ಮಾಡಿದರು. ೧೯೧೦ರ ಕ್ರಿಸ್ಮಸ್ಗೆ ಮುಂಚೆ ಅವರು ಸಾಂಟಾಕ್ರೂಜ್ನಲ್ಲಿದ್ದಾಗ, ಕನಸೊಂದನ್ನು ಕಂಡರು. ಅದರಲ್ಲಿ ಗಡ್ಡಬಿಟ್ಟು, ಭಕ್ತರಿಂದ ಸುತ್ತುವರೆಯಲ್ಪಟ್ಟಿದ್ದ ವಯಸ್ಸಾದ ಮುದುಕನೊಬ್ಬನನ್ನು ನೋಡಿದರು. ಮನುಷ್ಯ ಉದ್ದ ತೋಳಿನ ಒಂದು ನಿಲುವಂಗಿ ತೊಟ್ಟು, ತಲೆಗೆ ಒಂದು ಬಿಳಿಯ ವಸ್ತ್ರವನ್ನು ಸುತ್ತಿ, ಅದರ ಗಂಟು ತನ್ನ ಎಡಗಡೆಗೆ ಬೀಳುವಂತೆ ಕಟ್ಟಿದ್ದ. ವಯಸ್ಸಿನ ಕಾರಣದಿಂದಾಗಿಯೋ ಏನೋ ಸ್ವಲ್ಪ ಬಗ್ಗಿ ನಡೆಯುತ್ತಿದ್ದ. ಲಕ್ಷ್ಮೀಚಂದರಿಗೆ ಅವನು ಯಾರು, ಎಲ್ಲಿಯವನು ಎಂಬುದು ಏನೂ ತಿಳಿಯಲಿಲ್ಲ. ಆದರೆ ಅವನ ಮೂರ್ತಿ ಮಾತ್ರ, ಅವರ ಮನಸ್ಸಿನಲ್ಲಿ ಧೃಢವಾಗಿ ನಿಂತುಹೋಯಿತು.

ಸ್ವಲ್ಪ ದಿನಗಳಾದಮೇಲೆ ಲಕ್ಷ್ಮೀಚಂದ್, ತಮ್ಮ ಸ್ನೇಹಿತರಾದ ದತ್ತಾತ್ರೇಯ ಮಂಜುನಾಥ ಬಿಜೂರರವರ ಮನೆಗೆ, ದಾಸಗಣು ಮಹಾರಾಜರ ಕೀರ್ತನೆ ಕೇಳಲು ಹೋದರು. ಅಲ್ಲಿ, ದಾಸಗಣು ತಮ್ಮ ಅಭ್ಯಾಸದಂತೆ, ಬಾಬಾರ ದೊಡ್ಡ ಚಿತ್ರಪಟವನ್ನಿಟ್ಟು, ಅದಕ್ಕೆ ಪೂಜೆ ಮಾಡಿ ಕೀರ್ತನೆ ಆರಂಭಿಸಿದರು. ಲಕ್ಷ್ಮೀಚಂದ್ಗೆ ಚಿತ್ರಪಟವನ್ನು ನೋಡಿ ಅತ್ಯಾಶ್ಚರ್ಯವಾಯಿತು. ಅವರಿಗೆ ಕನಸಿನಲ್ಲಿ ಕಂಡ ಮನುಷ್ಯ, ಮತ್ತು ಚಿತ್ರಪಟದಲ್ಲಿನ ಮನುಷ್ಯ ಒಬ್ಬರೇ, ಎಂದು ಖಚಿತವಾಯಿತು. ಅದನ್ನು ಕುರಿತು ವಿಚಾರಿಸಿದಾಗ, ಪಟದಲ್ಲಿನ ಮನುಷ್ಯ ಸಾಯಿಬಾಬಾ ಎಂದೂ, ಅವರು ಶಿರಡಿಯಲ್ಲಿರುತ್ತಾರೆಂದೂ ತಿಳಿಯಿತು. ಇದಕ್ಕೆ ಮುಂಚೆ ಚೋಳ್ಕರ್, ಪಿತಳೆ ಮುಂತಾದವರು ದಾಸಗಣೂರ ಕೀರ್ತನೆಗಳಿಂದ ಪ್ರಭಾವಿತರಾಗಿ, ಶಿರಡಿಗೆ ಹೋಗಿ ಬಾಬಾರ ದರ್ಶನಮಾಡಿಕೊಂಡಂತೆ ಲಕ್ಷ್ಮೀಚಂದರೂ ಕೀರ್ತನೆ ಕೇಳಿ, ಶಿರಡಿಗೆ ಹೋಗಿ ಬಾಬಾರ ದರ್ಶನ ಮಾಡಿಕೊಳ್ಳಬೇಕೆಂದು ನಿರ್ಧರಿಸಿಕೊಂಡರು.

ದೇವರ ಬಗ್ಗೆ ಸತ್ಸಂಕಲ್ಪವೊಂದನ್ನು ಮಾಡಿಕೊಂಡಾಗ, ಸಂಕಲ್ಪವನ್ನು ನಡೆಸಿಕೊಡುವುದು ದೇವರದೇ ಜವಾಬ್ದಾರಿ. ಅವನೇ ಅದಕ್ಕೆ ಬೇಕಾದ ಅನುಕೂಲಗಳನ್ನು ಏರ್ಪಡಿಸುತ್ತಾನೆ, ಎಂಬುದು ಅನೇಕ ಭಕ್ತರ ಅನುಭವ. ಇದು ಸರ್ವಕಾಲೀಕವಾದದ್ದು. ಲಕ್ಷ್ಮೀಚಂದ್ ಶಿರಡಿಗೆ ಹೋಗಲು ನಿರ್ಧರಿಸಿ, ಕೀರ್ತನೆ ಮುಗಿಸಿ ರಾತ್ರಿ ಮನೆಗೆ ಹೋದಾಗ, ಅವರಿಗೆ ಆಶ್ಚರ್ಯವೊಂದು ಕಾದಿತ್ತು. ಶಂಕರ ರಾವ್ ಎನ್ನುವ ಸ್ನೇಹಿತರೊಬ್ಬರು ಅವರ ಮನೆಗೆ ಬಂದು, ಲಕ್ಷ್ಮೀಚಂದರನ್ನು ಶಿರಡಿಗೆ ಬರಬಲ್ಲರೇ ಎಂದು ಕೇಳಿದರು. ಲಕ್ಷ್ಮೀಚಂದರ ಸಂತೋಷಾಶ್ಚರ್ಯಗಳಿಗೆ ಕೊನೆ ಮೊದಲೇ ಇಲ್ಲದೇ ಹೋಯಿತು. ತಮ್ಮ ಬಂಧುವಿನಿಂದ ಹದಿನೈದು ರೂಪಾಯಿ ಸಾಲ ಮಾಡಿ, ಶಂಕರ ರಾವ್ ಜೊತೆ ಶಿರಡಿಗೆ ಹೊರಟೇ ಬಿಟ್ಟರು.

ಇಬ್ಬರೂ ರೈಲು ಹತ್ತಿದಾಗ, ಅಲ್ಲಿ ಶಿರಡಿಗೆ ಹೊರಟಿದ್ದ ಅವರ ಅನೇಕ ಬಂಧುಗಳೂ ಸ್ನೇಹಿತರೂ ಕಂಡರು. ರೈಲು ಹೊರಟಮೇಲೆ ಎಲ್ಲರೂ ಸೇರಿ ಭಜನೆಗಳನ್ನು ಮಾಡಿದರು. ಲಕ್ಷ್ಮೀಚಂದರು ಬಾಬಾರ ಬಗ್ಗೆ ಅನೇಕರನ್ನು ವಿಚಾರಿಸಿದರು. ಪ್ರಯಾಣಿಕರಲ್ಲಿ ನಾಲ್ಕು ಜನ ಮುಸ್ಲಿಮರಿದ್ದರು. ಅವರು, “ಬಾಬಾ ಒಬ್ಬ ದೊಡ್ಡ ಔಲಿಯಾ. ಅನೇಕ ವರ್ಷಗಳಿಂದ ಶಿರಡಿಯಲ್ಲಿ ಇದ್ದಾರೆಎಂದು ಹೇಳಿದರು. ರೀತಿಯ ಮಾತುಕಥೆಗಳು ರೈಲು ಕೋಪರಗಾಂವ್ ಸೇರುವವರೆಗೂ ನಡೆಯಿತು. ಕೋಪರಗಾಂವ್ನಲ್ಲಿ ಇಳಿದು, ಬಾಬಾರಿಗೆ ಅರ್ಪಿಸಲು ಕೆಲವು ಸೀಬೆಹಣ್ಣುಗಳನ್ನು ಕೊಳ್ಳಬೇಕೆಂದುಕೊಂಡರು. ಆದರೆ, ಸುತ್ತಮುತ್ತಲಿನ ಪ್ರಕೃತಿ ಸೌಂದರ್ಯದಲ್ಲಿ ತಲ್ಲೀನರಾಗಿ, ಲಕ್ಷ್ಮೀಚಂದ್ ಹಣ್ಣಿನ ವಿಷಯ ಮರೆತೇಬಿಟ್ಟರು.

ಸ್ನೇಹಿತರಿಬ್ಬರೂ ಟಾಂಗಾ ಮಾಡಿಕೊಂಡು ಶಿರಡಿಗೆ ಹೊರಟರು. ದಾರಿಯಲ್ಲಿ, ತಾವು ಬಾಬಾಗೆ ಹಣ್ಣುಗಳನ್ನು ಕೊಳ್ಳಬೇಕು, ಎಂದುಕೊಂಡಿದ್ದು ನೆನಪಿಗೆ ಬಂತು. ಹಣ್ಣು ಕೊಳ್ಳಲಿಲ್ಲವೆಂದು ಖೇದವಾಯಿತು. ಅಷ್ಟರಲ್ಲಿ ತಲೆಯಮೇಲೆ ಬುಟ್ಟಿ ಹೊತ್ತುಕೊಂಡಿದ್ದ ಮುದುಕಿಯೊಬ್ಬಳು, ಟಾಂಗಾದ ಹಿಂದೆ ಓಡಿಬರುತ್ತಾ ಇದ್ದದ್ದು ಕಾಣಿಸಿತು. ಟಾಂಗಾ ನಿಲ್ಲಿಸಿ, ಆಕೆಯ ಬುಟ್ಟಿಯಲ್ಲಿದ್ದ ಹಣ್ಣುಗಳಲ್ಲಿ ಉತ್ತಮವಾದ ನಾಲ್ಕನ್ನು ಆರಿಸಿ ಹಣಕೊಟ್ಟರು. ಹೆಂಗಸು, " ಉಳಿದ ಹಣ್ಣುಗಳನ್ನೂ ನನ್ನ ಪರವಾಗಿ ಬಾಬಾರಿಗೆ ಅರ್ಪಿಸಿ" ಎಂದು ಹೇಳಿ ಬುಟ್ಟಿಯನ್ನು ಅವರಿಗೆ ಕೊಟ್ಟಳು. ಅದನ್ನು ಕೇಳಿದ ಲಕ್ಷ್ಮೀಚಂದರಿಗೆ ಆಶ್ಚರ್ಯವಾಯಿತು. ಬಹುಶಃ ಆಕೆ ತಾವು ಕನಸಿನಲ್ಲಿ ಕಂಡ ಮುದುಕನ ಬಂಧುವಿರಬೇಕು ಎಂದುಕೊಂಡರು. ಶಿರಡಿ ಸೇರಿ ಇಬ್ಬರೂ ಮಸೀದಿಯ ಬಳಿ ಟಾಂಗಾದಿಂದ ಇಳಿದರು. ಮಸೀದಿಯ ಮೇಲಿದ್ದ ಝಂಡಾಗಳನ್ನು ನೋಡಿ ಕೈಮುಗಿದು, ನಮಸ್ಕಾರಮಾಡಿ ತಮ್ಮ ಗೌರವವನ್ನು ತೋರಿಸಿದರು. ನಂತರ ಪೂಜಾ ಸಾಮಗ್ರಿಗಳನ್ನು ಖರೀದಿಸಿ, ಮಸೀದಿಯ ಒಳಗೆ ಹೋಗಿ ಬಾಬಾರನ್ನು ಕಂಡು, ಅತೀವ ಸಂತೋಷದಿಂದ ಬಾಬಾರ ಪೂಜೆಯನ್ನು ಮುಗಿಸಿದರು. ಆಗ ಬಾಬಾ ಹೇಳಿದರು, "ಚಾಣಾಕ್ಷ, ಭಜನೆ ಮಾಡುತ್ತೀಯೆ. ಮತ್ತೆ ಇತರರನ್ನು ಕೇಳುತ್ತೀಯಾ? ಬೇರೆಯವರನ್ನು ಕೇಳಬೇಕಾದರೂ ಏಕೆ? ನಾವು ನಮ್ಮ ಕಣ್ಣಿನಿಂದಲೇ ನೋಡಿ ತಿಳಿದುಕೊಳ್ಳಬೇಕು. ಕನಸು ಸುಳ್ಳಲ್ಲ, ತಿಳಿದುಕೋ. ಸಾಲ ಮಾಡಿ ಶಿರಡಿಗೆ ಬರಬೇಕಾದ ಅವಶ್ಯಕತೆಯೇನಿತ್ತು? ನಿನ್ನ ಆಸೆ ಪೂರಯಿಸಿತೇ?" ಲಕ್ಷ್ಮೀಚಂದ್ ಬಾಬಾರ ಸರ್ವಜ್ಞತೆ ಕಂಡು ಆಶ್ಚರ್ಯ ಚಕಿತರಾದರು. ಅವರಿಗೆ ದಾರಿಯಲ್ಲಿ ನಡೆದದ್ದೆಲ್ಲ ಬಾಬಾರಿಗೆ ಹೇಗೆ ತಿಳಿಯಿತು ಎಂದು ಅರ್ಥವಾಗಲಿಲ್ಲ. ಭಕ್ತರು ಸಾಲಮಾಡಿಕೊಂಡು ಶಿರಡಿಗೆ ಬರುವುದು ಬಾಬಾರು ಇಷ್ಟಪಡುತ್ತಿರಲಿಲ್ಲ. ತಮ್ಮನ್ನು ಕಾಣಲು ಬರುವ ಭಕ್ತರು ಸಾಲಗಾರರಾಗಬಾರದು ಎಂಬುದು ಅವರ ಇಚ್ಛೆ.

ಸಾಂಜಾ

ಮಧ್ಯಾಹ್ನದ ಆರತಿಯಾದ ಮೇಲೆ ಎಲ್ಲರೂ ಪ್ರಸಾದಕ್ಕಾಗಿ ಕುಳಿತರು. ಭಕ್ತರೊಬ್ಬರು ಸಾಂಜಾ ಪ್ರಸಾದವಾಗಿ ಮಾಡಿ ತಂದಿದ್ದು, ಅಂದು ಎಲ್ಲರಿಗೂ ಹಂಚಿದರು. ಲಕ್ಷ್ಮೀಚಂದರಿಗೆ ಸಾಂಜಾ ಬಹಳ ಇಷ್ಟವಾಯಿತು. ಮರುದಿನವೂ ಸಾಂಜಾಗಾಗಿ ಎದುರುನೋಡಿದರು. ಆದರೆ ಅವರಿಗೆ ಸಾಂಜಾ ಕಾಣದೆ ನಿರಾಸೆಯಾಯಿತು. ಸಾಂಜಾ ಮತ್ತೆ ಯಾವಾಗ ಬರುವುದೋ ಎಂದು ಕಾತರರಾಗಿದ್ದರು. ಅದರ ಮರುದಿನ, ಬಾಪೂ ಸಾಹೇಬ್ ಜೋಗ್, “ಇಂದು ನೈವೇದ್ಯಕ್ಕೆ ಏನು ತರಲಿಎಂದು ಕೇಳಿದಾಗ ಬಾಬಾ ಸಾಂಜಾ ತರಲು ಹೇಳಿದರು. ಎರಡು ದೊಡ್ಡ ಪಾತ್ರೆಗಳಲ್ಲಿ ಸಾಂಜಾ ಮಾಡಿ ತಂದರು. ಮಧ್ಯಾನ್ಹ ಆರತಿಯವೇಳೆಗೆ, ಲಕ್ಷ್ಮೀಚಂದರಿಗೆ ಬಹಳ ಹಸಿವೆಯಾಗಿತ್ತು. ಆಗ ಆತ ಬೆನ್ನು ನೋವಿನಿಂದಲೂ ನರಳುತ್ತಿದ್ದರು. ಪ್ರಸಾದವನ್ನು ಹಂಚುವಾಗ ಬಾಬಾ ಲಕ್ಷ್ಮೀಚಂದರನ್ನು ಕುರಿತು, "ನಿನಗೆ ಹಸಿವೆಯಾಗಿದೆಯಲ್ಲವೇ? ಸಾಂಜಾ ತಿನ್ನು. ನಿನ್ನ ಬೆನ್ನು ನೋವಿಗೆ ಔಷಧ ತೆಗೆದುಕೋ" ಎಂದರು. ಮತ್ತೊಮ್ಮೆ ಲಕ್ಷ್ಮೀಚಂದ್ ಮೂಕರಾಗಿಹೋದರು. ತನ್ನ ಮನಸ್ಸಿನಲ್ಲಿ ನಡೆಯುವುದೆಲ್ಲ ಬಾಬಾರಿಗೆ ಹೇಗೆ ತಿಳಿಯುತ್ತದೆ ಎಂದು ಆಶ್ಚರ್ಯಪಟ್ಟರು.

ಕೆಟ್ಟ ದೃಷ್ಟಿ

ಅಂದು ರಾತ್ರಿ, ಲಕ್ಷ್ಮೀಚಂದ್ ಚಾವಡಿ ಉತ್ಸವವನ್ನು ನೋಡಿದರು. ಆಗ ಬಾಬಾ ಸಣ್ಣಗೆ ಕೆಮ್ಮುತ್ತಿದ್ದರು. ಅದನ್ನು ನೋಡಿದ ಲಕ್ಷ್ಮೀಚಂದ್, ಬಾಬಾರಿಗೆ ಯಾರದೋ ಕೆಟ್ಟ ದೃಷ್ಟಿ ತಾಕಿರಬೇಕು ಎಂದುಕೊಂಡರು. ಮರುದಿನ ಅವರು ಬಾಬಾರನ್ನು ಕಾಣಲು ಹೋದಾಗ, ಬಾಬಾ ಶ್ಯಾಮಾರೊಡನೆ, "ನನಗೆ ನಿನ್ನೆ ಕೆಮ್ಮು ಬರುತ್ತಿತ್ತು. ಯಾರೋ ನನ್ನ ಮೇಲೆ ಕೆಟ್ಟ ದೃಷ್ಟಿ ಹಾಕಿರಬೇಕು. ಅದಕ್ಕೇ ನಾನು ಒದ್ದಾಡುತ್ತಿದ್ದೇನೆ" ಎಂದರು. ಮೂರನೆಯ ಸಲ ಲಕ್ಷ್ಮೀಚಂದರಿಗೆ ಆಘಾತವಾದಂತಾಯಿತು. ಅವರಿಗೆ ಬಾಬಾ ತಮ್ಮ ಯೋಚನೆಗಳನ್ನೆಲ್ಲಾ ಹೇಗೆ ತಿಳಿಯುತ್ತಾರೆ ಎಂಬುದು ಅರ್ಥವಾಗಲೇ ಇಲ್ಲ.

ನಿಧಾನವಾಗಿ ಅವರು ಬಾಬಾರ ಸರ್ವಜ್ಞತ್ವ, ಅವರು ಭಕ್ತರಲ್ಲಿ ತೋರಿಸುವ ದಯೆ, ಕಾರುಣ್ಯಗಳನ್ನು ಅರಿತುಕೊಂಡರು. ಬಾಬಾರ ಚರಣಗಳಲ್ಲಿ ಶಿರಸ್ಸನ್ನಿಟ್ಟು, "ಬಾಬಾ ನಿಮ್ಮನ್ನು ಬಿಟ್ಟರೆ ನನಗೆ ಬೇರೆ ಯಾರೂ ಇಲ್ಲ. ಯಾವ ದೇವರೂ ಇಲ್ಲ. ನೀವೇ ನನಗೆ ಎಲ್ಲಾ. ನನ್ನನ್ನು ಅನುಗ್ರಹಿಸಿ ಯಾವಾಗಲೂ ಕಾಪಾಡುತ್ತಿರಿ. ನಿಮ್ಮ ನಾಮ ಸ್ಮರಣೆ, ನಿಮ್ಮ ಭಜನೆ ಯಾವಾಗಲೂ ನನ್ನಲ್ಲಿ ನಡೆಯುತ್ತಿರುವಹಾಗೆ, ನನ್ನ ಮನಸ್ಸು ನಿಮ್ಮ ಪಾದಾರವಿಂದಗಳಲ್ಲಿ ಯಾವಾಗಲೂ ನೆಲೆಯಾಗಿರುವ ಹಾಗೆ ಅನುಗ್ರಹಿಸಿ" ಎಂದು ಬೇಡಿಕೊಂಡರು. ಬಾಬಾ ಅಶೀರ್ವಾದ ಪಡೆದು, ಊದಿಪ್ರಸಾದ ತೆಗೆದುಕೊಂಡು ತಮ್ಮ ಊರಿಗೆ ಹಿಂತಿರುಗಿದರು. ಅಂದಿನಿಂದ ಅವರು ಬಾಬಾರ ಅವಿಚ್ಛಿನ್ನ ಭಕ್ತರಾಗಿ, ಶಿರಡಿಗೆ ಹೋಗುವವರೊಡನೆ ತಪ್ಪದೇ ಬಾಬಾರಿಗೆ ಹಾರಗಳು, ಕರ್ಪೂರ, ದಕ್ಷಿಣೆಗಳನ್ನು ಕಳುಹಿಸುತ್ತಿದ್ದರು.

ಬರ್ಹಾಂಪುರದ ಮಹಿಳೆಯ ಕಥೆ

ಇನ್ನೊಂದು ಗುಬ್ಬಿಯನ್ನು ಬಾಬಾ ಶಿರಡಿಗೆ ಹೇಗೆ ಎಳೆದು ತಂದರೋ ನೋಡೋಣ. ಒಂದು ರಾತ್ರಿ, ಬರ್ಹಾಂಪುರದ ಚಿಡಿಬಾಯಿಗೆ ಕನಸಿನಲ್ಲಿ ಬಾಬಾ ಕಾಣಿಸಿಕೊಂಡು, ಕಿಚಡಿ ಕೇಳಿದ ಹಾಗಾಯಿತು. ಆಕೆ ಎದ್ದು, ಸುತ್ತಲೂ ನೋಡಿದಾಗ ಯಾರೂ ಕಾಣಲಿಲ್ಲ. ಗಂಡನನ್ನು ಎಬ್ಬಿಸಿ, ಆತನಿಗೂ ಕನಸಿನ ವಿಷಯ ಹೇಳಿದರು. ಆಕೆಯ ಗಂಡ ಅಂಚೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು. ಕನಸಾದ ಕೆಲವು ದಿನಗಳಿಗೆ, ಆತನಿಗೆ ಅಂಕೋಲಾಗೆ ವರ್ಗವಾಯಿತು. ಅಂಕೋಲಾಗೆ ಹೋದ ಮೇಲೆ, ಭಕ್ತರಾದ ಗಂಡಹೆಂಡರಿಬ್ಬರೂ ಶಿರಡಿಗೆ ಹೋಗಿ ಬಾಬಾ ದರ್ಶನ ಮಾಡಿಕೊಂಡು ಬರಲು ನಿಶ್ಚಯಿಸಿ, ಅದರಂತೆ ಶಿರಡಿಗೆ ಬಂದು ಎರಡು ತಿಂಗಳಿದ್ದರು. ದಿನವೂ ಗಂಡ ಹೆಂಡತಿ ಇಬ್ಬರೂ ಮಸೀದಿಗೆ ಹೋಗಿ, ಬಾಬಾರ ದರ್ಶನ ಸೇವೆ ಮಾಡುತ್ತಿದ್ದರು. ಅವರು ಶಿರಡಿಗೆ ಬಂದಿದ್ದು ಮುಖ್ಯವಾಗಿ, ಬಾಬಾರಿಗೆ ಕಿಚಡಿ ಮಾಡಿ ಸಮರ್ಪಿಸಬೇಕೆಂದು. ಹದಿನೈದು ದಿನಗಳಾದರೂ ಅದಕ್ಕೆ ಅವಕಾಶವೇ ಸಿಕ್ಕಲಿಲ್ಲ. ಇದರಿಂದ ಆಕೆಗೆ ತುಂಬಾ ಬೇಸರವಾಯಿತು. ಹದಿನೈದನೆಯ ದಿನ ಕಿಚಡಿ ಮಾಡಿ, ಮಸೀದಿಗೆ ತೆಗೆದುಕೊಂಡು ಹೋದರು. ಆಕೆ ಹೋಗುವುದು ಸ್ವಲ್ಪ ತಡವಾಗಿ, ಹೋಗುವ ವೇಳೆಗೆ ಎಲ್ಲರೂ ಊಟಕ್ಕೆ ಕುಳಿತಿದ್ದರು. ತೆರೆ ಎಳೆಯಲ್ಪಟ್ಟಿತ್ತು. ಅಲ್ಲಿನ ನಿಯಮದಂತೆ, ಒಂದುಸಲ ತೆರೆ ಎಳೆದಮೇಲೆ ಬಾಬಾ ಊಟವಾಗುವವರೆಗೂ, ತೆರೆಸರಿಸಿ ಯಾರೂ ಒಳಕ್ಕೆ ಹೋಗುವಹಾಗಿಲ್ಲ. ಅದನ್ನು ತಿಳಿದ ಆಕೆಗೆ ನಿರಾಸೆಯಾಯಿತು. ಆದರೂ, ಬಾಬಾರಿಗೆ ಕಿಚಡಿ ಅರ್ಪಿಸಬೇಕೆಂಬ ಹಂಬಲದಿಂದ ಬಂದಿದ್ದ ಆಕೆ, ಧೈರ್ಯದಿಂದ ಒಳಕ್ಕೆ ಹೋಗಿ, ಬಾಬಾರ ತಟ್ಟೆಯಲ್ಲಿ ಕಿಚಡಿ ಬಡಿಸಿದರು. ಅದಕ್ಕಾಗಿಯೇ ಕಾಯುತ್ತಿದ್ದರೇನೋ ಎಂಬಂತೆ, ಬಾಬಾ ಅದನ್ನು ಬಹಳ ಆಸೆಯಿಂದ ಚಪ್ಪರಿಸುತ್ತಾ ತಿನ್ನಲು ಆರಂಭಿಸಿದರು. ಅದನ್ನು ಕಂಡ ಅಲ್ಲಿದ್ದವರೆಲ್ಲಾ ಆಶ್ಚರ್ಯಪಟ್ಟರು. ಮತ್ತೊಮ್ಮೆ ಬಾಬಾ, ತಾವು ಭಕ್ತರನ್ನು ಯಾವ ರೀತಿ ಪ್ರೀತಿಯಿಂದ ಕಾಣುತ್ತಾರೆ, ಎಂಬುದನ್ನು ನಿರೂಪಿಸಿದರು.

ಮೇಘಾ ಕಥೆ

ಮೂರನೆಯ ಗುಬ್ಬಿ ಮೇಘಾ. ಈತ ರಾವ್ ಬಹಾದೂರ್ ಹೆಚ್. ವಿ. ಸಾಠೆಯವರ ಬ್ರಾಹ್ಮಣ ಅಡಿಗೆ ಭಟ್ಟ. ಆತನೊಬ್ಬ ಸಾದಾ ಸೀದಾ ಮನುಷ್ಯ. ವಿದ್ಯೆಯ ಗಂಧವಿಲ್ಲದವ. ಶಿವ ಭಕ್ತ. ಸದಾ ಶಿವಪಂಚಾಕ್ಷರಿ - ಓಂ ನಮಃ ಶಿವಾಯ - ಎಂದು ಶಿವ ಸ್ಮರಣೆ ಮಾಡುತ್ತಿದ್ದ. ಆತನಿಗೆ ಸಂಧ್ಯಾವಂದನೆ, ಗಾಯತ್ರಿ ಮಂತ್ರೋಚ್ಚಾರ ಮುಂತಾದುವೇನೂ ತಿಳಿಯದು. ಶಿವ ಪಂಚಾಕ್ಷರಿಯನ್ನು ಬಿಟ್ಟರೆ ಇನ್ನೇನೂ ತಿಳಿಯದು. ಸಾಠೆ ಮನುಷ್ಯನಲ್ಲಿ ಪ್ರೀತಿ ತೋರಿಸಿ ಆತನಿಗೆ ಕಷ್ಟಪಟ್ಟು ಸಂಧ್ಯಾವಂದನೆ, ಗಾಯತ್ರಿಮಂತ್ರಗಳನ್ನು ಕಲಿಸಿದ್ದರು. ಸಾಠೆ ಮೇಘಾಗೆ, “ಶಿವ ಶಿರಡಿಯಲ್ಲಿ ಅವತರಿಸಿದ್ದಾನೆ. ಹೋಗಿ ಬಾಬಾರನ್ನು ಕಾಣುಎಂದು ಹೇಳಿದರು. ಅವರ ಮಾತಿನಂತೆ ಹೊರಟ ಆತನಿಗೆ, ಬರೂಚ್ ರೈಲ್ವೆ ನಿಲ್ದಾಣದಲ್ಲಿ, ಬಾಬಾ ಒಬ್ಬ ಮುಸ್ಲಿಮ್ ಎಂದು ತಿಳಿಯಿತು. ಆಚಾರವಂತ ಬ್ರಾಹ್ಮಣನಾದ ತಾನು ಮುಸ್ಲಿಮನಿಗೆ ತಲೆಬಾಗುವುದೇ, ಎಂಬ ಯೋಚನೆಯಿಂದ ತಳಮಳಗೊಂಡು ಹಿಂತಿರುಗಿ, ಸಾಠೆಯವರನ್ನು ತನ್ನನ್ನು ಶಿರಡಿಗೆ ಕಳುಹಿಸ ಬಾರದೆಂದು ಬೇಡಿಕೊಂಡರು. ಸಾಠೆ, ಅವರನ್ನು ಕಳುಹಿಸಲೇಬೇಕೆಂಬ ನಿರ್ಧಾರದಿಂದ, ತನ್ನ ಮಾವ ಗಣೇಶ ದಾಮೋದರರಿಗೆ (ದಾದಾ ಕೇಲ್ಕರ್) ಒಂದು ಪರಿಚಯ ಪತ್ರ ಬರೆದು, ಮೇಘಾನನ್ನು ಬಾಬಾರ ಬಳಿ ಕರೆದುಕೊಂಡು ಹೋಗುವಂತೆ ಕೇಳಿಕೊಂಡರು. ಮೇಘಾ ಪತ್ರದೊಡನೆ ಶಿರಡಿ ಸೇರಿ ಮಸೀದಿಗೆ ಹೋದರು. ಆತ ಇನ್ನೂ ಮಸೀದಿಯೊಳಕ್ಕೆ ಕಾಲಿಡುತ್ತಿದಂತೆಯೇ ಬಾಬಾ ಅಲ್ಲಿಗೆ ಬಂದು, " ನೀಚನನ್ನು ಆಚೆಗೆ ಹೊರದೂಡಿ. ನೀನು ಉನ್ನತಕುಲದ ಬ್ರಾಹ್ಮಣ. ನಾನು ನೀಚಕುಲದ ಮುಸ್ಲಿಮ್. ಇಲ್ಲಿಗೆ ಬಂದರೆ ನಿನ್ನ ಜಾತಿ ಕೆಡುತ್ತದೆ. ಹೋಗು. ಹೊರಟು ಹೋಗು" ಎಂದು ಘರ್ಜಿಸಿದರು., ಬಾಬಾ, ಅವರನ್ನು ಮಸೀದಿಯೊಳಕ್ಕೆ ಬರಲು ಬಿಡಲಿಲ್ಲ. ಮೇಘಾ, ತನ್ನ ಮನಸ್ಸಿನಲ್ಲಿ ಎದ್ದ ಆಲೋಚನೆಗಳು ಬಾಬಾಗೆ ಹೇಗೆ ತಿಳಿಯಿತು, ಎಂದು ಬೆರಗಾದರು. ಶಿರಡಿಯಲ್ಲೇ ಕೆಲವು ದಿನಗಳಿದ್ದರೂ, ಆತನ ಆಂದೋಳನ ಕಡಮೆಯಾಗಲಿಲ್ಲ. ಮನೆಗೆ ಹಿಂತಿರುಗಿ, ಮತ್ತೆ ಅಲ್ಲಿಂದ ನಾಸಿಕಕ್ಕೆ ಹೋಗಿ, ಅಲ್ಲಿ ಒಂದೂವರೆ ವರ್ಷವಿದ್ದರು. ತ್ರಯಂಬಕೇಶ್ವರದಿಂದ ಶಿರಡಿಗೆ ಬಂದರು. ಸಲ, ದಾದಾಕೇಳ್ಕರ್ ಮತ್ತಿತರರ ಮಧ್ಯಸ್ತಿಕೆಯಿಂದ, ಮೇಘಾ ಮಸೀದಿಯೊಳಕ್ಕೆ ಬರಲು ಬಾಬಾ ಒಪ್ಪಿದರು. ಹೊರಗೆ ತೋರುವಂತೆ ಯಾವ ಚಮತ್ಕಾರವನ್ನೂ ಮಾಡದೆ, ಮೇಘಾ ಮನಸ್ಸಿನಮೇಲೆ ಬಾಬಾ ಪರಿಣಾಮ ಬೀರಿದರು. ಎರಡನೆಯ ಸಲ ಶಿರಡಿಗೆ ಬಂದಾಗ, ಮೇಘಾ ಬಹಳ ಬದಲಾಯಿಸಿದ್ದರು. ಬದಲಾವಣೆಯಿಂದ ಅವರು ಬಾಬಾರನ್ನು ಶಿವನಂತೆ ನೋಡಲು ಉಪಕ್ರಮಿಸಿದರು. ಶಿವನಿಗೆ ಬಿಲ್ವ ಪತ್ರೆ ಎಂದರೆ ಬಹಳ ಪ್ರೀತಿ. ಮೇಘಾ ಮೈಲಿಗಟ್ಟಳೆ ನಡೆದು ಬಿಲ್ವ ಪತ್ರೆ ಶೇಖರಿಸಿ ತಂದು ತನ್ನ ಶಿವ ಬಾಬಾರನ್ನು ಪೂಜಿಸುತ್ತಿದ್ದರು. ಶಿರಡಿಯಲ್ಲಿ ಮೇಘಾ ತಮ್ಮ ನಿಯಮದಂತೆ ದಿನವೂ ಶಿರಡಿಯಲ್ಲಿನ ದೇವಸ್ಥಾನಗಳ ಪೂಜೆಯನ್ನು ಮುಗಿಸಿ, ನಂತರ ಮಸೀದಿಗೆ ಬಂದು, ಬಾಬಾರ ಗದ್ದಿಗೆಗೆ ಪೂಜೆಮಾಡಿ, ಬಾಬಾರ ಪಾದಗಳನ್ನು ಮೃದುವಾಗಿ ನೀವಿ, ಕಾಲು ತೊಳೆದು, ತೀರ್ಥವನ್ನು ಸೇವಿಸುತ್ತಿದ್ದರು.

ಒಂದುಸಲ, ಮೇಘಾ ಖಂಡೋಬಾ ದೇವಾಲಯಕ್ಕೆ ಹೋದಾಗ ಬಾಗಿಲು ಇನ್ನೂ ತೆರೆದಿರಲಿಲ್ಲ. ಅಂದು ಖಂಡೋಬಾ ಪೂಜೆ ಮಾಡದೆ, ಮೇಘಾ ಮಸೀದಿಗೆ ಹೋದರು. ಅಲ್ಲಿ ಬಾಬಾ, "ಖಂಡೋಬಾ ಪೂಜೆ ಮಾಡಿ ಬಾ" ಎಂದರು. ದೇವಸ್ಥಾನದ ಬಾಗಿಲು ಇನ್ನೂ ತೆರೆದಿರಲಿಲ್ಲವೆಂದು ಮೇಘಾ ಹೇಳಿದ್ದಕ್ಕೆ ಬಾಬಾ, "ಈಗ ತೆರೆದಿದೆ. ಹೋಗಿ ಪೂಜೆ ಮಾಡಿಕೊಂಡು ಬಾ" ಎಂದರು. ಹೋಗಿ ನೋಡಿದರೆ ಬಾಗಿಲು ತೆರೆದಿತ್ತು. ಆಶ್ಚರ್ಯಪಟ್ಟ ಮೇಘಾ, ಖಂಡೋಬಾ ಪೂಜೆ ಮುಗಿಸಿ ಮಸೀದಿಗೆ ಬಂದು ಬಾಬಾರ ಪೂಜೆ ಮಾಡಿದರು.

ಗಂಗಾಭಿಷೇಕ

ಶಿವ ಅಭಿಷೇಕ ಪ್ರಿಯನೆಂದೂ, ವಿಷ್ಣು ಅಲಂಕಾರ ಪ್ರಿಯನೆಂದೂ ಹೇಳುತ್ತಾರೆ. ಶಿವ ಭಕ್ತರು, ಕ್ರಮಬದ್ಧವಾಗಿ ಶಿವನಿಗೆ ರುದ್ರಾಭಿಷೇಕ ಮಾಡುತ್ತಾರೆ. ಶಿವನ ಪರಮ ಭಕ್ತರಾದ ಮೇಘಾ, ಒಂದುಸಲ, ತನ್ನ ಶಿವನಾದ ಬಾಬಾರಿಗೆ ಗಂಗಾಭಿಷೇಕ ಮಾಡಬೇಕೆಂದು ಯೋಚಿಸಿದರು. ಮೊದಲು ಗಂಧ ಹಚ್ಚಿ ಆಮೇಲೆ ಅಭಿಷೇಕ ಮಾಡುವುದು ರೀತಿ. ಆದರೆ ಅದಕ್ಕೆ ಬಾಬಾ ಒಪ್ಪಿಕೊಳ್ಳಲಿಲ್ಲ. ಮೇಲಿಂದಮೇಲೆ ಒತ್ತಾಯಮಾಡಿದ್ದಕ್ಕೆ ಕೊನೆಗೆ ಒಪ್ಪಿಕೊಂಡರು. ಅದರಿಂದ ಸಂತೋಷಗೊಂಡ ಮೇಘಾ ಸುಮಾರು ೨೪ ಮೈಲಿ ನಡೆದು, ಗೋಮತಿ ನದಿಗೆ ಹೋಗಿ ಅಲ್ಲಿಂದ ನೀರು ತಂದರು. ಎಲ್ಲವನ್ನೂ ಅಣಿಮಾಡಿಕೊಂಡು, ಬಾಬಾರನ್ನು ಅಭಿಷೇಕಕ್ಕಾಗಿ ಬರುವಂತೆ ಕೇಳಿಕೊಂಡರು. ತಾನು ಫಕೀರನೆಂದೂ, ತನಗೂ ಗಂಗಾಭಿಷೇಕಕ್ಕೂ ಯಾವ ಸಂಬಂಧ ಇಲ್ಲವೆಂದು ಹೇಳಿದರೂ ಕೇಳದೆ, ಮೇಘಾ ಬಲವಂತ ಮಾಡಿದರು. ಆಗ ಬಾಬಾ, ಶಿರಸ್ಸೇ ಶರೀರಕ್ಕೆ ಪ್ರಧಾನ ಅಂಗ, ಆದ್ದರಿಂದ ತನ್ನ ತಲೆಯಮೇಲೆ ಮಾತ್ರ ನೀರು ಸುರಿಯಬೇಕೆಂದು ಹೇಳಿದರು. ಅದಕ್ಕೆ ಒಪ್ಪಿ, ಮೇಘಾ ಬಾಬಾ ಕುಳಿತಮೇಲೆ, ಮಂತ್ರಗಳನ್ನು ಹೇಳುತ್ತಾ, ತಲೆಯ ಮೇಲೆ ನೀರು ಹಾಕಲು ಆರಂಭಿಸಿದರು. ಅಭಿಷೇಕ ಮಾಡುತ್ತ ಮಾಡುತ್ತಾ ಪರವಶರಾಗಿ ಮೇಘಾ, ಹರಗಂಗೆ ಹರಗಂಗೆ ಎನ್ನುತ್ತಾ ಬಿಂದಿಗೆಯಲ್ಲಿದ್ದ ನೀರನ್ನೆಲ್ಲಾ ಬಾಬಾರ ಮೈಮೇಲೆ ಸುರಿದರು. ಸಂತೋಷದ ಪರಮಾವಧಿಯಲ್ಲಿದ್ದ ಮೇಘಾ ಬಿಂದಿಗೆ ಕೆಳಗಿಟ್ಟು ನೋಡಿದರೆ, ಬಾಬಾರ ತಲೆ ಮಾತ್ರ ನೆನೆದಿತ್ತೇ ಹೊರತು ಬೇರೆ ಕಡೆ ನೀರಿನ ಹನಿ ಕೂಡಾ ಕಾಣಲಿಲ್ಲ. ಮೇಘಾ ಆಶ್ಚರ್ಯಚಕಿತರಾಗಿ ಹೋದರು.

ತ್ರಿಶೂಲ ಮತ್ತು ಲಿಂಗ

ಮೇಘಾ ಮನುಷ್ಯ ರೂಪದಲ್ಲಿ ಬಾಬಾರನ್ನು ಮಸೀದಿಯಲ್ಲಿ ಪೂಜಿಸುತ್ತಿದ್ದರು. ನಾನಾ ಸಾಹೇಬ್ ಚಾಂದೋರ್ಕರರು ಬಾಬಾರ ಒಂದು ಚಿತ್ರಪಟವನ್ನು ಅವರಿಗೆ ಕೊಟ್ಟಿದ್ದರು. ವಾಡಾದಲ್ಲಿ ಚಿತ್ರಪಟವಿಟ್ಟು ಪೂಜಿಸುತ್ತಿದ್ದರು. ರೀತಿಯಲ್ಲಿ ಅವರು ಒಂದು ವರ್ಷ ಸತತವಾಗಿ ತಪ್ಪದೇ ಪ್ರತಿದಿನವೂ, ಎರಡೂ ಕಡೆ ಪೂಜೆಗಳನ್ನು ಮಾಡುತ್ತಿದ್ದರು. ಇದರಿಂದ ಸಂತುಷ್ಟರಾದ ಬಾಬಾ, ತಮ್ಮ ಸಂತಸವನ್ನು ತೋರಿಸಲು ಒಂದು ದಿನ ಬೆಳಗಿನ ಜಾವದಲ್ಲಿ ಅವರಿಗೆ, ಕನಸಿನಲ್ಲೋ ಎಂಬಂತೆ ಹಾಸಿಗೆಯ ಹತ್ತಿರ ಕಾಣಿಸಿಕೊಂಡರು. ಆಗ ಮೇಘಾ, ಇನ್ನೂ ಕಣ್ಣು ಮುಚ್ಚಿ ಹಾಸಿಗೆಯ ಮೇಲೇ ಇದ್ದರು. ಅವರಿಗೆ ಬಾಬಾರ ರೂಪ ಕಾಣಿಸಿತು. ಬಾಬಾ ಹಾಸಿಗೆಯಮೇಲೆ ಅಕ್ಷತೆ ಚೆಲ್ಲಿ, ತ್ರಿಶೂಲ ಬರೆ ಎಂದು ಹೇಳಿ ಅದೃಶ್ಯರಾದರು. ಅವರ ಮಾತು ಕೇಳಿ ಮೇಘಾ ಎದ್ದು ನೋಡಿದರೆ, ಅಲ್ಲಿ ಯಾರೂ ಕಾಣಿಸಲಿಲ್ಲ. ಬಾಬಾ ಬಂದಿದ್ದಕ್ಕೆ ಗುರುತಾಗಿ, ಹಾಸಿಗೆಯ ಮೇಲೆ ಅಕ್ಷತೆ ಕಾಳುಗಳು ಕಾಣಿಸಿದವು. ಅವರು ಬಾಬಾರ ಬಳಿಗೆ ಹೋಗಿ, ತನಗೆ ಕಂಡ ನೋಟವನ್ನು ಕುರಿತು ಬಾಬಾಗೆ ಹೇಳಿ, ತ್ರಿಶೂಲವನ್ನು ಬರೆಯಲು ಅಪ್ಪಣೆ ಬೇಡಿದರು. ಬಾಬಾ ಸ್ವಲ್ಪ ಅಸಮಾಧಾನ ತೋರುವಂತೆ, "ತ್ರಿಶೂಲವನ್ನು ಬರೆ ಎಂದು ಹೇಳಿದ್ದು ಕೇಳಿಸಲಿಲ್ಲವೇನು? ಅದು ಕಲ್ಪನಾಚಿತ್ರವಲ್ಲ. ನನ್ನ ಆಜ್ಞೆ. ನನ್ನ ಮಾತುಗಳು ಯಾವಾಗಲೂ ಅರ್ಥಪೂರ್ಣವಾದವು. ಬರೀ ಪೊಳ್ಳಲ್ಲ" ಎಂದರು. ಅದಕ್ಕೆ ಮೇಘಾ, "ನೀವು ನನ್ನನ್ನು ಎಬ್ಬಿಸಿದರೇನೋ ಎಂದುಕೊಂಡೆ. ಅದರೆ ಬಾಗಿಲ ಚಿಲಕ ಹಾಕಿತ್ತು. ಅದರಿಂದ ಕನಸೇನೋ ಎಂದು ಅನುಮಾನಿಸಿದೆ" ಎಂದರು. ಅದಕ್ಕೆ ಬಾಬಾ, "ನನಗೆ ಒಳಕ್ಕೆ ಬರಲು ಬಾಗಿಲು ಬೇಕಾಗಿಲ್ಲ. ನನಗೆ ರೂಪವಿಲ್ಲ. ಎಲ್ಲೆಲ್ಲಿಯೂ ಇದ್ದೇನೆ. ಸೂತ್ರಧಾರನಂತೆ, ನನ್ನನ್ನು ನಂಬಿ ನನ್ನ ಬಳಿಗೆ ಬಂದವರನ್ನು, ನನಗೆ ಬೇಕಾದ ಹಾಗೆ ನಡೆಸುತ್ತೇನೆ" ಎಂದರು.

ಮೇಘಾ ವಾಡಾಕ್ಕೆ ಹಿಂತಿರುಗಿ ಬಾಬಾರ ಚಿತ್ರಪಟದ ಪಕ್ಕದಲ್ಲಿ, ತ್ರಿಶೂಲವೊಂದನ್ನು ಬರೆದರು. ಮಾರನೆಯ ದಿನ, ಪೂನಾದಿಂದ ಬಂದ ಭಕ್ತನೊಬ್ಬ ಬಾಬಾರಿಗೆ ನಮಸ್ಕರಿಸಿ, ಶಿವಲಿಂಗವೊಂದನ್ನು ಅರ್ಪಿಸಿದ. ಅದೇ ವೇಳೆಗೆ ಮೇಘಾ ಮಸೀದಿಯೊಳಕ್ಕೆ ಬಂದರು. ಬಾಬಾ, "ನೋಡು. ಶಿವ ಬಂದಿದ್ದಾನೆ. ತೆಗೆದುಕೋ. ಇವನನ್ನು ಕಾಪಾಡು" ಎಂದು, ಶಿವಲಿಂಗವನ್ನು ಮೇಘಾಗೆ ಕೊಟ್ಟರು. ತ್ರಿಶೂಲವನ್ನು ಹಿಂಬಾಲಿಸಿ ಬಂದ ಶಿವಲಿಂಗವನ್ನು ಕಂಡ ಮೇಘಾಗೆ, ಅತ್ಯಂತ ಆಶ್ಚರ್ಯವಾಯಿತು.

ವಾಡಾದಲ್ಲಿ ಕಾಕಾ ಸಾಹೇಬ್ ದೀಕ್ಷಿತರು ಸ್ನಾನಮಾಡಿ, ಸಾಯಿ ನಾಮೋಚ್ಚರಣೆ ಮಾಡುತ್ತಾ ತಲೆ ಒರೆಸಿಕೊಳ್ಳುತ್ತಿದ್ದರು. ಆಗ ಅವರಿಗೆ ಕಣ್ಣು ಮುಂದೆ ಶಿವಲಿಂಗವೊಂದು ಕಂಡಂತಾಯಿತು. ಅವರಿಗೆ ಅದು ಸೋಜಿಗವಾಗಿ ಕಂಡಿತು. ಸ್ವಲ್ಪಹೊತ್ತಿನಲ್ಲೇ, ಮೇಘಾ ಬಾಬಾ ತನಗೆ ದಯಪಾಲಿಸಿದ ಶಿವಲಿಂಗವನ್ನು ತಂದು ದೀಕ್ಷಿತರಿಗೆ ತೋರಿಸಿದರು. ಶಿವಲಿಂಗ, ತಾನು ಕಂಡ ಶಿವಲಿಂಗದಂತೆಯೇ ಇದ್ದದ್ದು ನೋಡಿ ದೀಕ್ಷಿತರಿಗೆ ಅತ್ಯಾಶ್ಚರ್ಯವಾಯಿತು. ಮುಂದೆ ನಾಲ್ಕಾರು ದಿನಗಳಲ್ಲಿ ಶಿವಲಿಂಗವನ್ನು, ವಾಡಾದಲ್ಲಿ ಮೇಘಾ ಪೂಜೆಮಾಡಿಕೊಳ್ಳುತ್ತಿದ್ದ ಚಿತ್ರಪಟದ ಪಕ್ಕದಲ್ಲಿ, ಬಾಬಾ ಸ್ಥಾಪಿಸಿದರು. ಮೇಘಾಗೆ ಶಿವ ಪೂಜೆ ಎಂದರೆ ಎಲ್ಲಿಲ್ಲದ ಆಸಕ್ತಿ. ಅದನ್ನು ಅನುಮೋದಿಸಲು ಬಾಬಾ ತ್ರಿಶೂಲವನ್ನು ಮೊದಲು ಬರೆಸಿ ನಂತರ ಶಿವಲಿಂಗವನ್ನೂ ಸ್ಥಾಪಿಸಿದರು.

ಹಲವಾರು ವರ್ಷಗಳು ಅತ್ಯಂತ ವಿಧೇಯತೆಯಿಂದ, ಶ್ರದ್ಧಾಭಕ್ತಿಪೂರ್ಣನಾಗಿ ಬಾಬಾರನ್ನು ಸೇವಿಸಿದ ಮೇಘಾ ೧೯೧೨ರಲ್ಲಿ, ಬಾಬಾರ ಸನ್ನಿಧಿಯಲ್ಲಿ ತಮ್ಮ ಕೊನೆಯುಸಿರು ಬಿಟ್ಟರು. ಬಾಬಾ ಅವರ ದೇಹದ ಮೇಲೆಲ್ಲಾ ಕೈ ಆಡಿಸಿ, "ಇವನು ನನ್ನ ನಿಜವಾದ ಭಕ್ತನಾಗಿದ್ದ" ಎಂದು ಹೇಳಿ ತಮ್ಮ ಖರ್ಚಿನಲ್ಲೇ ಆತನ ಅಂತಿಮ ಕ್ರಿಯೆಗಳು, ಬ್ರಾಹ್ಮಣರಿಗೆ ಊಟ ಎಲ್ಲವನ್ನೂ ಮಾಡಿಸಿದರು. ಬಾಬಾರ ಆಜ್ಞೆಯನ್ನು ಕಾಕಾ ಸಾಹೇಬ್ ದೀಕ್ಷಿತರು ಶಿರಸಾವಹಿಸಿ ನಡೆಸಿಕೊಟ್ಟರು.

ಇದರೊಂದಿಗೆ ಲಕ್ಷ್ಮೀಚಂದ್, ಬರ್ಹಾಂಪುರದ ಮಹಿಳೆ, ಮೇಘಾ ಇತ್ಯಾದಿ ವಿಷಯಗಳನ್ನು ಕುರಿತು ಹೇಳುವ ಇಪ್ಪತ್ತೆಂಟನೆಯ ಅಧ್ಯಾಯ ಮುಗಿಯಿತು. ಮುಂದಿನ ಅಧ್ಯಾಯದಲ್ಲಿ ಹೇಮಾಡ್ ಪಂತ್ ಮದ್ರಾಸಿ ಭಜನ ಮೇಳ, ತೆಂಡೂಲ್ಕರ್, ಕ್ಯಾ. ಹಾಟೆ, ವಾಮನ್ ನಾರ್ವೇಕರ್, ಇತ್ಯಾದಿ ವಿಷಯಗಳನ್ನು ಹೇಳುತ್ತಾರೆ

||ಶ್ರೀ ಸದ್ಗುರು ಸಾಯಿನಾಥಾರ್ಪಣಮಸ್ತು||ಶುಭಂ ಭವತು||
||ಓಂ ಶಾಂತಿಃ ಶಾಂತಿಃ ಶಾಂತಿಃ||


No comments:

Post a Comment