||ಶ್ರೀ ಸಾಯಿ ಸಚ್ಚರಿತ್ರೆ||
||ಇಪ್ಪತ್ತೇಳನೆಯ ಅಧ್ಯಾಯ||
||ಮಮತ ಮತ್ತು ಸಮತ||
ಶ್ರೀ ಗಣೇಶಾಯ ನಮಃ ಶ್ರೀ ಸರಸ್ವತಯೇ ನಮಃ
ಶ್ರೀ ವೆಂಕಟೇಶಾಯ ನಮಃ ಶ್ರೀ ಸಾಯಿನಾಥಾಯ ನಮಃ
ಶ್ರೀ ಸದ್ಗುರುಭ್ಯೋನ್ನಮಃ
||ಇಪ್ಪತ್ತೇಳನೆಯ ಅಧ್ಯಾಯ||
||ಮಮತ ಮತ್ತು ಸಮತ||
ಶ್ರೀ ಗಣೇಶಾಯ ನಮಃ ಶ್ರೀ ಸರಸ್ವತಯೇ ನಮಃ
ಶ್ರೀ ವೆಂಕಟೇಶಾಯ ನಮಃ ಶ್ರೀ ಸಾಯಿನಾಥಾಯ ನಮಃ
ಶ್ರೀ ಸದ್ಗುರುಭ್ಯೋನ್ನಮಃ
ಈ ಅಧ್ಯಾಯದಲ್ಲಿ ಹೇಮಾಡ್ ಪಂತ್, ಭಾಗವತ, ವಿಷ್ಣು ಸಹಸ್ರನಾಮ, ಗೀತಾ ರಹಸ್ಯ ಮತ್ತು ಇತರ ವಿಷಯಗಳನ್ನು ಹೇಳುತ್ತಾರೆ.
ಬಾಬಾರ ಕಥೆಗಳು
ಎಲ್ಲ ನದಿಗಳೂ, ಪವಿತ್ರನದಿಗಳೂ ಸೇರಿದಂತೆ, ಸಮುದ್ರದಲ್ಲಿ ಕೊನೆಗಾಣುತ್ತವೆ. ಆದ್ದರಿಂದ ಸಮುದ್ರದಲ್ಲಿ ಸ್ನಾನ ಮಾಡಿದರೆ ಎಲ್ಲ ನದಿಗಳಲ್ಲೂ ಸ್ನಾನಮಾಡಿದ ಪುಣ್ಯ ಬರುತ್ತದೆ. ಹಾಗೆ ನಾವು ಸದ್ಗುರುವಿಗೆ ನಮಸ್ಕಾರ ಮಾಡಿದರೆ ಎಲ್ಲ ದೇವರುಗಳಿಗೂ, ಅದರಲ್ಲೂ ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು, ಮಹೇಶ್ವರರಿಗೆ, ನಮಸ್ಕಾರ ಮಾಡಿದಂತಾಗುತ್ತದೆ. ಅಂತಹ ಸದ್ಗುರು ಸಾಯಿ ಬಾಬಾರಿಗೆ ನಮಸ್ಕಾರ ಮಾಡಿದಾಗ, ತ್ರಿಮೂರ್ತಿಗಳಿಗೆ ನಮಸ್ಕಾರ ಮಾಡಿದ ಫಲ ಮಾತ್ರವೇ ಅಲ್ಲ, ಸದ್ಗುರುವಿನಿಂದ ನಮಗೆ ಆತ್ಮ ದರ್ಶನ ಮಾಡಿಕೊಳ್ಳಲು ಬೇಕಾದ ಮಾರ್ಗದರ್ಶನವೂ ದೊರೆಯುತ್ತದೆ. ಅವರೇ ನಮಗೆ ಮಾರ್ಗದರ್ಶಿಯಾಗಿ, ಕೈಹಿಡಿದು ನಡೆಸುತ್ತಾರೆ. ಅವರು ಕರೆದುಕೊಂಡು ಹೋಗುವ ದಾರಿಯಲ್ಲಿ ಹಳ್ಳಕೊಳ್ಳಗಳೂ, ಮುಳ್ಳುಪೊದೆಗಳೂ ಇರುವುದಿಲ್ಲ. ಅವರೇ ನಮ್ಮ ಕೈಹಿಡಿದು ನಡೆಸಿದಾಗ, ನಾವು ನಮ್ಮ ಗಮ್ಯವನ್ನು ಸೇರುವುದರಲ್ಲಿ ಯಾವ ಸಂಶಯವೂ ಇಲ್ಲ. ಅವರನ್ನು ಕಾಣಲು, ಅವರ ಸನ್ನಿಹಿತರಾಗಲು ನಾವೇನು ಮಾಡಬೇಕು ಎಂಬುದಕ್ಕೂ, ಆ ಭಕ್ತರ ಕಲ್ಪವೃಕ್ಷ, ಕಾಮಧೇನು, ಜ್ಞಾನ ಸಮುದ್ರನೇ ನಮಗೆ ಒಂದು ಸುಲಭವಾದ ಹಾದಿಯನ್ನು ತೋರಿಸಿಕೊಟ್ಟಿದ್ದಾರೆ. ಅದೇ ಅವರ ಲೀಲೆಗಳನ್ನು, ಕಥೆಗಳನ್ನು, ಕೇಳುವುದು, ಓದುವುದು, ಮನನಮಾಡುವುದು. ಸಚ್ಚರಿತ್ರೆಯಲ್ಲಿ ಹೇಳಿರುವಂತೆ ನಾವು ಬಾಬಾರ ಕಥೆಗಳು, ಲೀಲೆಗಳು ಎಂಬ ನೀರಿನ ಹನಿಗಾಗಿ ಕಾದಿರುವ ಚಾತಕ ಪಕ್ಷಿಗಳು. ಅವರ ಲೀಲೆಗಳನ್ನೂ, ಕಥೆಗಳನ್ನೂ ಕೇಳುತ್ತಾ ನಮ್ಮ ಮನಸ್ಸು ಆನಂದದಿಂದ ತುಂಬಿ ಭಾವಪರವಶವಾಗಿ ಕಣ್ಣು ತುಂಬಿ ಬರುತ್ತದೆ. ಮೈ ನವಿರೇಳುತ್ತದೆ. ರಾಗ ದ್ವೇಷಗಳೆಲ್ಲ ಮರೆಯುತ್ತವೆ. ಹೇಮಾಡ್ ಪಂತ್, "ಇಂತಹ ಲಕ್ಷಣಗಳು ನಮ್ಮಲ್ಲಿ ಕಂಡುಬಂದಾಗ ನಾವು ಆ ಸದ್ಗುರುವಿನ ಅನುಗ್ರಹಕ್ಕೆ ಒಳಗಾಗಿದ್ದೇವೆ. ಗುರುವು ನಮ್ಮ ಬಳಿಯೇ ಇದ್ದು ನಮಗೆ ಸಹಾಯಹಸ್ತ ನೀಡಲು ಸಿದ್ಧವಾಗಿದ್ದಾರೆ. ಅವರು ಹಾಗೆ ನಮ್ಮ ಬಳಿಗೆ ಬಂದಾಗ, ನಮ್ಮನ್ನು ಆವರಿಸಿರುವ ಮಾಯಾಶೃಂಖಲೆ ಕಳಚಿಹೋಗುವುದು. ನಾವು ನಮ್ಮ ಗುರಿಯತ್ತ ಸರಿಯಾಗಿ ಸಾಗುತ್ತಿದ್ದೇವೆ ಎಂದರ್ಥ" ಎಂದು ಹೇಳುತ್ತಾರೆ
ಪುಸ್ತಕಗಳನ್ನು ಪವಿತ್ರಗೊಳಿಸುವುದು
ಅವರವರ ಸ್ತರಕ್ಕೆ ತಕ್ಕಂತೆ, ತನ್ನ ಭಕ್ತರಿಗೆ ಆಧ್ಯಾತ್ಮ ಜ್ಞಾನವನ್ನು, ಬಾಬಾ ಬೋಧಿಸುತ್ತಿದ್ದರು. ಅಂತಹ ಕೆಲವನ್ನು ಈಗಾಗಲೇ ನೋಡಿದ್ದೇವೆ. ಈಗ ಇನ್ನೊಂದು ವೈವಿಧ್ಯವನ್ನು ನೋಡೋಣ. ಭಕ್ತರು ಅನೇಕ ಅಭಿಲಾಷೆಗಳನ್ನು ಇಟ್ಟುಕೊಂಡು ಬಾಬಾರ ಬಳಿಗೆ ಬರುತ್ತಿದ್ದರು. ಕೆಲವರು ಸಂತಾನಕ್ಕೋಸ್ಕರ, ಕೆಲವರು ರೋಗ ನಿವಾರಣೆಗೋಸ್ಕರ, ಮತ್ತೆ ಕೆಲವರು ತಮ್ಮ ವ್ಯವಹಾರಗಳಲ್ಲಿ ಲಾಭವಾಗಲೆಂದು, ಹೀಗೆ ಅನೇಕ ಆಸೆಗಳನ್ನು ಇಟ್ಟುಕೊಂಡು, ಜನ ಬಾಬಾರನ್ನು ಕಾಣಲು ಬರುತ್ತಿದ್ದರು. ಕೆಲವರು ಆಧ್ಯಾತ್ಮಿಕ ಪುಸ್ತಕಗಳ ಓದುವಿಕೆಯ ಅಭ್ಯಾಸವಿದ್ದವರು, ತಾವು ಓದಬೇಕೆಂದುಕೊಂಡ ಪುಸ್ತಕವನ್ನು ತಂದು ಬಾಬಾರ ಕೈಲಿಟ್ಟು, ಅವರು ಅದನ್ನು ಮುಟ್ಟಿ ಹಿಂದಕ್ಕೆ ಕೊಟ್ಟ ಮೇಲೆ ಓದುತ್ತಿದ್ದರು. ಬಾಬಾರ ಕೈ ಸ್ಪರ್ಶವಾದ ಪುಸ್ತಕ ಪವಿತ್ರವಾಗುತ್ತಿತ್ತು. ಅದೂ ಅಲ್ಲದೆ, ಆ ಪುಸ್ತಕವನ್ನು ಓದುವಾಗ ಅವರಿಗೆ ಬಾಬಾ ತಮ್ಮ ಬಳಿಯೇ ಇದ್ದಂತೆ ಭಾಸವಾಗುತ್ತಿತ್ತು.
ಒಂದು ಸಲ, ಕಾಕಾ ಮಹಾಜನಿ ಏಕನಾಥ ಭಾಗವತವನ್ನು ಮಸೀದಿಗೆ ತಂದರು. ಅದು ಅವರಿಗೆ ಬಹಳ ಪ್ರಿಯವಾದ ಪುಸ್ತಕ. ಪ್ರತಿದಿನ ಬೆಳಗ್ಗೆ, ಅದನ್ನು ಪಠಿಸುತ್ತಿದ್ದರು. ಅವರು ಆ ಪುಸ್ತಕದೊಡನೆ ಮಸೀದಿಗೆ ಬಂದಾಗ, ಶ್ಯಾಮಾ ಕೂಡಾ ಅಲ್ಲಿದ್ದರು. ಅವರು ಕಾಕಾರ ಕೈಲಿದ್ದ ಪುಸ್ತಕವನ್ನು ತಮ್ಮ ಕೈಗೆ ತೆಗೆದುಕೊಂಡು ಓದುತ್ತಿದ್ದರು. ಅದನ್ನು ನೋಡಿದ ಬಾಬಾ, ಶ್ಯಾಮಾರಿಂದ ಆ ಪುಸ್ತಕವನ್ನು ತೆಗೆದುಕೊಂಡು, ಹಲವು ಪುಟಗಳನ್ನು ತಿರುವಿಹಾಕಿ, ಮತ್ತೆ ಅದನ್ನು ಅವರಿಗೇ ಕೊಟ್ಟು "ಇದನ್ನು ನೀನೇ ಇಟ್ಟುಕೋ" ಎಂದರು. ಶ್ಯಾಮಾಗೆ ಅದೇನು ಏಕೆ ಎಂದು ತಿಳಿಯಲಿಲ್ಲ. ಅವರು ಆ ಪುಸ್ತಕ ಕಾಕಾರದೆಂದೂ, ಅದನ್ನು ಅವರಿಗೆ ಹಿಂತಿರುಗಿಸಬೇಕೆಂದೂ, ಹೇಳಿದರು. ಅದಕ್ಕೆ ಬಾಬಾ, "ಇಲ್ಲ, ಇಲ್ಲ. ಅದನ್ನು ನಾನು ನಿನಗೆ ಕೊಟ್ಟಿದ್ದೇನೆ. ನೀನೇ ಇಟ್ಟುಕೋ. ನಿನಗೆ ಉಪಯೋಗಕ್ಕೆ ಬರುತ್ತದೆ" ಎಂದರು. ಈ ರೀತಿ ಶ್ಯಾಮಾರಿಗೆ, ಬಾಬಾ ಅನೇಕ ಪುಸ್ತಕಗಳನ್ನು ಜೋಪಾನವಾಗಿಡಲು ದಯಪಾಲಿಸಿದ್ದರು. ಕಾಕಾರಿಗೆ ಬಾಬಾರ ರೀತಿನೀತಿಗಳು ಗೊತ್ತಿದ್ದುದರಿಂದ, ಅವರು ಆಗ ಏನೂ ಹೇಳಲಿಲ್ಲ. ಮತ್ತೊಮ್ಮೆ ಬಂದಾಗ, ಇನ್ನೊಂದು ಪುಸ್ತಕ ತಂದು ಬಾಬಾರ ಕೈಲಿಟ್ಟರು. ಬಾಬಾ ಆ ಪುಸ್ತಕವನ್ನು ಮುಟ್ಟಿ ಅನುಗ್ರಹಿಸಿ ಹಿಂದಕ್ಕೆ ಕೊಟ್ಟು, "ಇದನ್ನು ಜೋಪಾನವಾಗಿಟ್ಟುಕೋ. ಅದು ನಿನಗೆ ಬಹಳ ಸಹಾಯಕಾರಿಯಾಗುತ್ತದೆ" ಎಂದು ಹೇಳಿದರು. ಕಾಕಾ ಅದನ್ನು ಗೌರವದಿಂದ ಸ್ವೀಕರಿಸಿ ಅವರಿಗೆ ನಮಸ್ಕರಿಸಿದರು.
ವಿಷ್ಣು ಸಹಸ್ರನಾಮ
ರಾಮದಾಸ ಪಂಥಕ್ಕೆ ಸೇರಿದ ರಾಮದಾಸ ಬುವಾ, ಒಂದುಸಲ ಶಿರಡಿಗೆ ಬಂದರು. ಅವರು ದಿನವೂ ಬೆಳಗ್ಗೆ ಬೇಗ ಎದ್ದು ಸ್ನಾನ ಮಾಡಿ, ತಮ್ಮ ಪ್ರಾತರ್ವಿಧಿಗಳನ್ನೆಲ್ಲಾ ಮುಗಿಸಿ ಮಸೀದಿಗೆ ಬಂದು, ಅಲ್ಲಿ ಕೂತು ವಿಷ್ಣು ಸಹಸ್ರನಾಮ, ಆಧ್ಯಾತ್ಮ ರಾಮಾಯಣ, ತಪ್ಪದೇ ಪಠಿಸುತ್ತಿದ್ದರು. ಭಗವದ್ಗೀತೆಯನ್ನು ಬಿಟ್ಟರೆ, ವಿಷ್ಣು ಸಹಸ್ರನಾಮವೇ ಬಹಳ ಮುಖ್ಯವಾದದ್ದೆಂದು ಹೇಳುತ್ತಾರೆ. ಬಾಬಾಗೂ ವಿಷ್ಣು ಸಹಸ್ರನಾಮ ಬಹಳ ಪ್ರಿಯವಾದದ್ದು. ಬಾಬಾ ರಾಮದಾಸ ಬುವಾರ ಈ ಅಭ್ಯಾಸವನ್ನು ದಿನವೂ ಎಚ್ಚರದಿಂದ ಗಮನಿಸುತ್ತಿದ್ದರು. ಒಂದು ದಿನ ಬಾಬಾ ಬುವಾರನ್ನು ಕರೆದು, "ನನಗೆ ಬಹಳ ಹೊಟ್ಟೆ ನೋಯುತ್ತಿದೆ. ಸೋನಾಮುಖಿ ಕಷಾಯ ಕುಡಿಯದೆ ಅದು ಕಡಮೆಯಾಗುವುದಿಲ್ಲ. ಅಂಗಡಿಗೆ ಹೋಗಿ ಸೋನಾಮುಖಿ ತೆಗೆದುಕೊಂಡು ಬಾ" ಎಂದು ಹೇಳಿದರು. ಬುವಾ ಓದುತ್ತಿದ್ದ ಪುಸ್ತಕವನ್ನು ಮುಚ್ಚಿಟ್ಟು, ಅಂಗಡಿಗೆ ಹೋದರು. ಅವರು ಅತ್ತ ಹೋದ ಕೂಡಲೇ, ಬಾಬಾ ಎದ್ದು ಕೆಳಗಿಳಿದು ಬಂದು, ಬುವಾ ಕುಳಿತಿದ್ದ ಜಾಗಕ್ಕೆ ಹೋಗಿ ಅವರು ಓದುತ್ತಿದ್ದ ವಿಷ್ಣು ಸಹಸ್ರನಾಮದ ಪುಸ್ತಕವನ್ನು ತೆಗೆದುಕೊಂಡು, ಮತ್ತೆ ತಮ್ಮ ಜಾಗಕ್ಕೆ ಬಂದು ಕುಳಿತರು. ಆ ಪುಸ್ತಕದ ಹಲವಾರು ಪುಟಗಳನ್ನು ತಿರುಗಿಸಿ ನೋಡಿ, ಶ್ಯಾಮಾರನ್ನು ಕರೆದು, "ಈ ಪುಸ್ತಕ ಬಹಳ ಅಮೂಲ್ಯವಾದದ್ದು. ಬಹಳ ಪರಿಣಾಮಕಾರಿಯಾದದ್ದು. ಇದನ್ನು ನಿನಗೆ ಕೊಡುತ್ತಿದ್ದೇನೆ, ಓದು. ಒಂದುಸಲ ನನಗೆ ಪ್ರಾಣ ಹೋಗುವಷ್ಟು ನೋವುಂಟಾಯಿತು. ಆಗ ನಾನು ಈ ಪುಸ್ತಕವನ್ನು ನನ್ನ ಎದೆಗೆ ಒತ್ತಿಕೊಂಡೆ. ನನಗೆ ಅದರಿಂದ ಗಮನಾರ್ಹವಾದ ನೆಮ್ಮದಿಯುಂಟಾಯಿತು. ಅಲ್ಲಾನೇ ಬಂದು ನನ್ನನ್ನು ರಕ್ಷಿಸಿದಂತಾಯಿತು. ಆದ್ದರಿಂದ, ಇದನ್ನು ನಿನಗೆ ಕೊಡುತ್ತಿದ್ದೇನೆ. ಇದನ್ನು ಸ್ವಲ್ಪಸ್ವಲ್ಪವಾಗಿ ನಿಧಾನವಾಗಿ ಓದು. ದಿನಕ್ಕೆ ಒಂದು ನಾಮವಾದರೂ ತಪ್ಪದೇ ಓದು" ಎಂದರು. ಶ್ಯಾಮಾಗೆ ಬಹಳ ಹೆದರಿಕೆಯಾಯಿತು. "ಆ ಬುವಾ ಬಹಳ ಜಗಳಗಂಟ. ಕೋಪ ಎನ್ನುವುದು ಯಾವಾಗಲೂ ಅವನ ಮೂಗಿನ ತುದಿಯಲ್ಲೇ ಎನ್ನುವುದು ಎಲ್ಲರಿಗೂ ತಿಳಿದ ವಿಷಯ. ನಾನೊಬ್ಬ ಹಳ್ಳಿಮುಕ್ಕ. ನನಗೆ ಸಂಸ್ಕೃತ ಓದಲೂ ಬಾರದು. ಜೊತೆಗೆ ಬುವಾ ಎಂತಹ ಮನುಷ್ಯ ಎಂದು ಎಲ್ಲರಿಗೂ ತಿಳಿದ ವಿಷಯ" ಎಂದೆಲ್ಲಾ ಹೇಳಿದರು.
ಬಾಬಾ ತನ್ನನ್ನು ಬುವಾ ಮೇಲೆ ಎತ್ತಿಕಟ್ಟಿ ತಮಾಷೆ ನೋಡಬೇಕೆಂದಿದ್ದಾರೆ ಎಂದು ಶ್ಯಾಮಾ ಭಾವಿಸಿದ್ದರು. ಬಾಬಾಗೆ ತಮ್ಮ ಮೇಲೆ ಎಷ್ಟು ಗೌರವ, ಪ್ರೀತಿ, ವಿಶ್ವಾಸಗಳಿವೆ ಎಂದು ಅವರಿಗೆ ಅರ್ಥವಾಗಿರಲಿಲ್ಲ. ಶ್ಯಾಮಾ ತಮ್ಮ ಬಹು ಸನ್ನಿಹಿತ ಭಕ್ತನಾದದ್ದರಿಂದ, ಅವರನ್ನು ಈ ಪ್ರಪಂಚದ ದುಃಖ ದುರಿತಗಳಿಂದ ದೂರಮಾಡಬೇಕೆನ್ನುವ ಉದ್ದೇಶದಿಂದ ಬಾಬಾ ಇದನ್ನು ಮಾಡುತ್ತಿದ್ದಾರೆ, ಎಂದು ತಿಳಿಯಲಿಲ್ಲ.
"ದಿನಕ್ಕೆ ಒಂದುಸಲವಾದರೂ ಆ ಪರಮಾತ್ಮನ ಒಂದು ನಾಮವನ್ನು ಹೇಳಿದರೂ ಸಾಕು. ಅದು ಬಹಳ ಪರಿಣಾಮಕಾರಿ. ಆ ಪರಮಾತ್ಮನ ನಾಮ ಸ್ಮರಣೆಗಿಂತ, ಬೇರೆ ಯಾವ ಸಾಧನೆಗಳೂ ಬೇಕಿಲ್ಲ. ಜೀವನ ಮರಣ ಚಕ್ರ ಭ್ರಮಣೆಯಿಂದ ತಪ್ಪಿಸಿಕೊಳ್ಳಲು, ವಿಷ್ಣು ಸಹಸ್ರನಾಮ ಪಠನೆ ಪಾರಾಯಣಗಳು ಅತ್ಯವಶ್ಯಕ, ಅವು ನಮ್ಮ ಪಾಪಗಳನ್ನು ತೊಡೆದುಹಾಕುತ್ತವೆ" ಎಂದೆಲ್ಲಾ ಹೇಳಿ ಬಾಬಾ ಆ ಪುಸ್ತಕವನ್ನು ತೆಗೆದುಕೊಳ್ಳುವಂತೆ ಶ್ಯಾಮಾರನ್ನು ಒಪ್ಪಿಸಿದರು.
ಏಕನಾಥ ಮಹಾರಾಜರೂ ಒಂದುಸಲ ಹೀಗೇ ಮಾಡಿದ್ದರು. ಅವರ ನೆರೆಯವನೊಬ್ಬ ಬ್ರಾಹ್ಮಣ, ಪೂಜೆ ಪುನಸ್ಕಾರಗಳನ್ನೆಲ್ಲಾ ಬಿಟ್ಟು, ಅವನತಿಯ ಹಾದಿ ಹಿಡಿದಿದ್ದ. ಅವನಿಗೆ ಇಷ್ಟವಿಲ್ಲದಿದ್ದರೂ ಅವನನ್ನು ಹಿಡಿದು ಅವನ ಕೈಲಿ ದಿನಕ್ಕೆ ಒಂದು ನಾಮವನ್ನು ಹೇಳಿಸಿ, ಕೊನೆಗೆ ಅವನು ಸಹಸ್ರನಾಮಗಳನ್ನು ಸುಲಲಿತವಾಗಿ ಹೇಳುವಂತೆ ಮಾಡಿದರು. ಅದರಿಂದ ಅವನಿಗೆ ಜ್ಞಾನೋದಯವಾಗಿ, ಆತ್ಮಸಾಕ್ಷಾತ್ಕಾರದ ಕಡೆ ಹೆಜ್ಜೆ ಇಟ್ಟ. ಅವನು ಜೀವನಪರ್ಯಂತ ಏಕನಾಥರಿಗೆ ಆಭಾರಿಯಾದ.
ಇಷ್ಟೆಲ್ಲಾ ನಡೆಯುವ ವೇಳೆಗೆ ರಾಮದಾಸಿ ಬುವಾ, ಸೋನಾಮುಖಿ ತೆಗೆದುಕೊಂಡು ಬಂದರು. ಮಸೀದಿಯಲ್ಲಿ ನಡೆದದ್ದೆಲ್ಲವನ್ನೂ ನೋಡುತ್ತಿದ್ದ ಅಣ್ಣಾ ಚಿಂಚಿಣಿಕರ್, ನಾರದನ ಕೆಲಸ ಮಾಡಿ ನಡೆದದ್ದನ್ನೆಲ್ಲಾ ಬುವಾಗೆ ವಿವರಿಸಿದರು. ಬೆಂಕಿಗೆ ತುಪ್ಪ ಹಾಕಿದಂತಾಗಿ, ಬುವಾ ಭುಗಿಲೆದ್ದು, ಶ್ಯಾಮಾರನ್ನು ತೆಗಳಲು ಆರಂಭಿಸಿದರು. ಶ್ಯಾಮಾರೇ ಬಾಬಾರನ್ನು ಪುಸಲಾಯಿಸಿ ತನ್ನನ್ನು ಅಂಗಡಿಗೆ ಕಳುಹಿಸುವಂತೆ ಮಾಡಿ, ತಾನು ಹೋದ ಕ್ಷಣವೇ ಪುಸ್ತಕವನ್ನು ತೆಗೆದುಕೊಂಡರೆಂದು ಆಪಾದಿಸಿದರು. ಮನಸ್ಸಿಗೆ ಬಂದಷ್ಟು ತೆಗಳಿ ಪುಸ್ತಕವನ್ನು ಹಿಂತಿರುಗಿಸದಿದ್ದರೆ ತಲೆ ಒಡೆದುಕೊಂಡು ಸಾಯುತ್ತೇನೆ, ಎಂದು ಹೆದರಿಸಿದರು. ಶ್ಯಾಮಾರಿಗೆ ಏನು ಹೇಳಬೇಕೆಂದು ತೋಚಲಿಲ್ಲ. ಅವರು ಪುಸ್ತಕವನ್ನು ತಾನು ತೆಗೆದುಕೊಳ್ಳಲಿಲ್ಲವೆಂದು ಹೇಳಲು ಎಷ್ಟು ಪ್ರಯತ್ನಪಟ್ಟರೂ, ಸಫಲರಾಗಲಿಲ್ಲ. ಇದೆಲ್ಲವನ್ನೂ ನೋಡುತ್ತಿದ್ದ ಬಾಬಾ, ಬುವಾನನ್ನು ಹತ್ತಿರ ಕರೆದು, "ಏನಾಯಿತಯ್ಯಾ? ಶ್ಯಾಮಾನೂ ನಮ್ಮವನೇ ಅಲ್ಲವೇ? ಅವನನ್ನೇಕೆ ಅಕಾರಣವಾಗಿ ಬೈಯುತ್ತಿದ್ದೀಯೆ? ಸಮಾಧಾನವಾಗಿ ಒಳ್ಳೆಯ ಮಾತನಾಡು. ಇಷ್ಟು ಪುಸ್ತಕಗಳನ್ನು ಓದಿದರೂ, ನಿನ್ನ ಮನಸ್ಸು ಇನ್ನೂ ಶುದ್ಧವಾಗಲಿಲ್ಲ. ನಿನ್ನ ಕೋಪತಾಪಗಳು ಇನ್ನೂ ಹಿಡಿತಕ್ಕೆ ಬಂದಿಲ್ಲ. ರಾಮದಾಸಿಯಾಗಿದ್ದುಕೊಂಡು ನೀನು ಇಷ್ಟು ಸಣ್ಣವಿಷಯಗಳಿಗೆ ಇಷ್ಟೊಂದು ಉದ್ವೇಗಗೊಳ್ಳುವ ಅವಶ್ಯಕತೆ ಏನು? ನಿನಗೆ ಈ ಪುಸ್ತಕದ ಅವಶ್ಯಕತೆಯಾದರೂ ಏನು? ನಿನಗೆ ಅದು ಕಂಠಸ್ಥವಾಗಿದೆಯಲ್ಲವೇ? ನಿಜವಾದ ರಾಮದಾಸಿಗೆ ಸಮತೆ ಇರಬೇಕು. ಮಮತೆ ಅಲ್ಲ. ಶ್ಯಾಮನೊಡನೆ ಆ ಪುಸ್ತಕಕ್ಕಾಗಿ ಜಗಳವಾಡುತ್ತಿದ್ದೀಯೆ. ಹಣ ಕೊಟ್ಟರೆ ಪುಸ್ತಕಗಳು ಬೇಕಾದಷ್ಟು ದೊರೆಯುತ್ತವೆ, ಆದರೆ ಶ್ಯಾಮಾನಂತಹ ಸಹೃದಯರು ದೊರೆಯುತ್ತಾರೆಯೇ? ನಿಜವೆಂದರೆ ಶ್ಯಾಮ ಆ ಪುಸ್ತಕವನ್ನು ತೆಗೆದುಕೊಳ್ಳಲಿಲ್ಲ. ಅದರಿಂದ ಅವನು ಲಾಭ ಪಡೆಯಲಿ ಎಂದು, ನಾನೇ ಅದನ್ನು ಅವನಿಗೆ ಕೊಟ್ಟೆ" ಎಂದು ಹೇಳಿದರು.
ಇದು ಬಾಬಾರು, ರಾಮದಾಸಿಗೆ ಸಮತೆ ಮಮತೆಗಳ ಬಗ್ಗೆ ಶಿಕ್ಷಣ ಕೊಟ್ಟ ರೀತಿ. ಈ ಒಂದು ಪ್ರಸಂಗದಿಂದ ಬಾಬಾ "ತ್ಯಾಗ" ಎಂದರೇನು ಎಂಬುದನ್ನು ಬಹಳ ಸರಳವಾಗಿ, ಎಲ್ಲರಿಗೂ ಅರ್ಥವಾಗುವಂತೆ ತೋರಿಸಿಕೊಟ್ಟರು. ನಮಗೆ ಬಹಳ ಇಷ್ಟವಾದ ವಸ್ತುಗಳನ್ನು ಯಾವುದೇ ಆಶಾ ಮೋಹವಿಲ್ಲದೆ ತ್ಯಾಗ ಮಾಡಬೇಕು ಎನ್ನುವ ಪಾಠವನ್ನು ಇದರಿಂದ ಕಲಿಯಬೇಕು.
ಬಾಬಾರ ಮಾತುಗಳು ಅಮೃತದಂತೆ ಕೆಲಸಮಾಡಿ, ರಾಮದಾಸ ಬುವಾ ಇದರಿಂದ ಬುದ್ಧಿ ಕಲಿತರು. ಆತ ಸಮಾಧಾನವಾಗಿ ಶ್ಯಾಮಾರಿಗೆ, "ಆ ವಿಷ್ಣು ಸಹಸ್ರನಾಮ ನೀವೇ ಇಟ್ಟುಕೊಳ್ಳಿ. ಅದರ ಬದಲು ನಾನು ಪಂಚರತ್ನಗೀತೆಯನ್ನು ತೆಗೆದುಕೊಳ್ಳುತ್ತೇನೆ" ಎಂದು ಹೇಳಿದರು.ಶ್ಯಾಮಾರಿಗೂ ಸಂತೋಷವಾಗಿ, ಪಂಚರತ್ನಗೀತೆಯನ್ನು ಕೊಡಲು ಒಪ್ಪಿದರು.
ಇದರಿಂದ ಹಲವು ಪ್ರಶ್ನೆಗಳು ಹುಟ್ಟುತ್ತವೆ. ತಾವು ಪರಿಗಣಿಸದೇ ಇದ್ದ ದೇವರನ್ನು ಕುರಿತ ಪುಸ್ತಕವನ್ನು ಬುವಾ ಏಕೆ ಕೇಳಿದರು? ಶ್ಯಾಮಾರೊಡನೆ ಜಗಳವಾಡುವ ಮನುಷ್ಯ, ಮಸೀದಿಗೆ ಬಂದು ಬಾಬಾರ ಮುಂದೆ ಕುಳಿತು ಅಧ್ಯಾತ್ಮಿಕ ಪುಸ್ತಕಗಳನ್ನು ಏತಕ್ಕೆ ಓದುತ್ತಿದ್ದರು? ಇಂತಹ ಪ್ರಶ್ನೆಗಳಿಗೆ ಉತ್ತರ ಹುಡುಕುವುದು ಬಹಳ ಕಷ್ಟ. ಆದರೆ ಈ ಪ್ರಸಂಗದಿಂದ ಎರಡು ಮುಖ್ಯವಾದ ಅಂಶಗಳು ಹೊರಬೀಳುತ್ತವೆ. ಮೊದಲನೆಯದು, ರಾಮದಾಸಿ ಬುವಾಗೆ ಸಮತೆ ಮಮತೆಗಳ ನಿಜವಾದ ಅರ್ಥ ತಿಳಿದದ್ದು. ಎರಡನೆಯದು, ಶ್ಯಾಮಾರು ವಿಷ್ಣು ಸಹಸ್ರನಾಮದ ಪ್ರಾಮುಖ್ಯತೆಯನ್ನು ತಿಳಿದುಕೊಂಡಿದ್ದು. ಬಾಬಾ ಹೇಳಿದಂತೆ, ಅವರು ಅದನ್ನು ಸ್ವಲ್ಪ ಸ್ವಲ್ಪವಾಗಿ ಓದುತ್ತಾ, ಆದ್ಯಂತವಾಗಿ ಓದಿ, ಅದರ ಒಳ ಅರ್ಥವನ್ನೂ ತಿಳಿದು, ಬಾಪೂ ಸಾಹೇಬ್ ಬೂಟಿಯವರ ಅಳಿಯ, ಪೂನಾ ಇಂಜಿನೀರಿಂಗ್ ಕಾಲೇಜಿನಲ್ಲಿ ಪ್ರೊಫೆಸರ್ ಆಗಿದ್ದ, ಗಣೇಶ ಗೋವಿಂದ ನಾರ್ಕೆಗೆ ವಿವರಿಸಿ ಹೇಳಬಲ್ಲವರಾದರು.
ವಿಠಲನ ದರ್ಶನ
ದಿನವೂ ಕಾಕಾಸಾಹೇಬ್ ದೀಕ್ಷಿತ್ ಬೆಳಗ್ಗೆ ಸ್ನಾನಾದಿಗಳಾದ ಮೇಲೆ ವಿಠಲನ ಧ್ಯಾನದಲ್ಲಿ ಮಗ್ನರಾಗುತ್ತಿದ್ದರು. ಒಂದು ದಿನ ಅವರು ಧ್ಯಾನ ಮಗ್ನರಾಗಿದ್ದಾಗ, ವಿಠಲನ ಮೂರ್ತಿಯೊಂದನ್ನು ಕಂಡರು. ಧ್ಯಾನ ಮುಗಿಸಿ ಬಾಬಾರನ್ನು ಕಾಣಲು ಹೋದಾಗ ಬಾಬಾ, "ವಿಠಲ ಬಂದಿದ್ದ ಅಲ್ಲವೇ? ನೀನು ನೋಡಿದೆಯಾ? ಅವನನ್ನು ಘಟ್ಟಿಯಾಗಿ ಹಿಡಿದಿಟ್ಟುಕೋ. ಇಲ್ಲದಿದ್ದರೆ, ನೀನು ಸ್ವಲ್ಪ ಬೇಹುಷಾರಿಯಾದರೂ ಅವನು ತಪ್ಪಿಸಿಕೊಂಡು ಓಡಿಹೋಗುತ್ತಾನೆ" ಎಂದರು. ಅದೇ ದಿನ ಸಾಯಂಕಾಲ ಯಾರೋ ಒಬ್ಬರು ಶಿರಡಿಗೆ ವಿಠಲನ ಫೋಟೋಗಳನ್ನು ಮಾರಲು ತಂದಿದ್ದರು. ಅದು ತಾನು ಧ್ಯಾನದಲ್ಲಿ ಕಂಡ ವಿಠಲನ ತದ್ರೂಪವಾಗಿರುವುದನ್ನು ಕಂಡ ದೀಕ್ಷಿತ್ ಆಶ್ಚರ್ಯಪಟ್ಟು, ಒಂದು ಚಿತ್ರವನ್ನು ಕೊಂಡು ತಮ್ಮ ಪೂಜಾ ಮಂದಿರದಲ್ಲಿ ಇಟ್ಟುಕೊಂಡರು.
ಗೀತಾ ರಹಸ್ಯ
ಆಧ್ಯಾತ್ಮಿಕ ಪುಸ್ತಕಗಳನ್ನು ಓದುವವರ ಮೇಲೆ ಬಾಬಾರಿಗೆ ವಿಶೇಷವಾದ ಪ್ರೀತಿ. ಅವರಿಗೆ ಉತ್ತೇಜನ ಕೊಡುತ್ತಿದ್ದರು. ಕಾಕಾ ಸಾಹೇಬ್ ದೀಕ್ಷಿತರಂತೆ, ಬಾಪೂ ಸಾಹೇಬ್ ಜೋಗರು ಕೂಡ ದಿನವೂ ಬೆಳಗ್ಗೆ ಆಧ್ಯಾತ್ಮಿಕ ಪುಸ್ತಕಗಳನ್ನು ಓದುವ ಅಭ್ಯಾಸವಿಟ್ಟುಕೊಂಡಿದ್ದರು. ಒಂದು ಸಲ, ಲೋಕಮಾನ್ಯ ತಿಲಕರ ’ಗೀತಾ ರಹಸ್ಯ’ ಎಂಬುವ ಪುಸ್ತಕವನ್ನು ಅವರು ಅಂಚೆಯ ಮೂಲಕ ತರಿಸಿದ್ದರು. ಮಸೀದಿಗೆ ಹೋಗುತ್ತಿದ್ದಾಗ, ಆ ಅಂಚೆ ಅವರ ಕೈಸೇರಿತು. ಆ ಪ್ಯಾಕೆಟ್ಟನ್ನು ಕಂಕುಳಲ್ಲಿ ಇಟ್ಟುಕೊಂಡು, ಅವರು ಮಸೀದಿಗೆ ಹೋಗಿ ಬಾಬಾರಿಗೆ ನಮಸ್ಕಾರ ಮಾಡಲು ಬಗ್ಗಿದಾಗ, ಅದು ಕೆಳಕ್ಕೆ ಬಾಬಾರ ಕಾಲ ಬಳಿ ಬಿತ್ತು. ಅದೇನೆಂದು ಬಾಬಾ ಕೇಳಿದಾಗ, ಅವರು ಆ ಪ್ಯಾಕೆಟ್ಟನ್ನು ಬಿಚ್ಚಿ, ಅದರಲ್ಲಿದ್ದ ಪುಸ್ತಕವನ್ನು ಬಾಬಾರ ಕೈಲಿಟ್ಟರು. ಬಾಬಾ ಪುಸ್ತಕದಲ್ಲಿನ ನಾಲ್ಕಾರು ಪುಟಗಳನ್ನು ತಿರುಗಿಸಿ ನೋಡಿ, ತಮ್ಮ ಜೇಬಿನಿಂದ ಒಂದು ರೂಪಾಯಿ ತೆಗೆದು ಆ ಪುಸ್ತಕದ ಮೇಲಿಟ್ಟು, ಬಾಪೂ ಸಾಹೇಬರಿಗೆ ಅದನ್ನು ಹಿಂತಿರುಗಿಸಿ ಹೇಳಿದರು, "ಇದನ್ನು ಪೂರ್ತಿಯಾಗಿ ಓದು. ನಿನಗೆ ಲಾಭದಾಯಕವಾಗುತ್ತದೆ."
ಖಾಪರ್ಡೆಯ ಕಥೆ
ದಾದಾಸಾಹೇಬ್ ಖಾಪರ್ಡೆ ಅಮರಾವತಿಯಲ್ಲಿ ಪ್ರಸಿದ್ಧರಾದ, ಶ್ರೀಮಂತ ನ್ಯಾಯವಾದಿ. ಅಸಾಧಾರಣ ಮನುಷ್ಯ. ಕೌನ್ಸಿಲ್ ಆಫ್ ಸ್ಟೇಟ್ನ ಸದಸ್ಯರು. ಬುದ್ಧಿಮಾನ್, ಒಳ್ಳೆಯ ವಾಗ್ಮಿ. ೧೯೧೦ರಲ್ಲಿ ಅವರು ಮೊದಲನೆಯ ಸಲ ಶಿರಡಿಗೆ ಭೇಟಿ ಕೊಟ್ಟರು. ಬಾಬಾರ ದರ್ಶನ ಮಾಡಿ, ಅವರಿಂದ ಪ್ರಭಾವಿತರಾಗಿ, ಅವರಿಗೆ ಶರಣಾದರು. ಮತ್ತೆ ಒಂದು ವರ್ಷದ ನಂತರ, ಅವರು ಸಂಸಾರದೊಡನೆ ಬಂದು, ಅಲ್ಲಿ ಹಲವಾರು ತಿಂಗಳಕಾಲ ಇದ್ದರು. ಅವರು ಆಗ ಬರೆದ ತಮ್ಮ ದಿನಚರಿಯನ್ನು ಇಂಗ್ಲಿಷಿನಲ್ಲಿ ಸಂಸ್ಥಾನದವರು ಪ್ರಕಟಿಸಿದ್ದಾರೆ. ಅಷ್ಟು ಬುದ್ಧಿಮಾನ್, ವಾಗ್ಮಿ ಎಂದೆಲ್ಲಾ ಹೆಸರು ಪಡೆದಿದ್ದರೂ, ಬಾಬಾರ ಮುಂದೆ ನಿಂತಾಗ, ಅವರು ಮೂಕರಾಗಿಹೋಗುತ್ತಿದ್ದರು. ವಿದ್ಯಾರಣ್ಯ ಸ್ವಾಮಿಗಳಿಂದ ವಿರಚಿತವಾದ ಅದ್ವೈತವನ್ನು ಪ್ರತಿಪಾದಿಸುವ "ಪಂಚದಶಿ"ಯನ್ನು ನಿರರ್ಗಳವಾಗಿ ವ್ಯಾಖ್ಯಾನಮಾಡಬಲ್ಲ ಖಾಪರ್ಡೆ, ಬಾಬಾರ ಮುಂದೆ ಬಾಯಿ ಬಿಡುತ್ತಿರಲಿಲ್ಲ. ಮಿಕ್ಕವರೆಲ್ಲಾ ಎಷ್ಟೇ ಮಾತನಾಡಿದರೂ, ಖಾಪರ್ಡೆ, ಬೂಟಿ, ನೂಲ್ಕರ್, ಈ ಮೂವರೂ ಮಾತ್ರ ಬಾಬಾ ಮುಂದೆ ಎಂದೂ ಮೌನವಾಗಿ ಇರುತ್ತಿದ್ದರು. ಆತ್ಮ ಸಾಕ್ಷಾತ್ಕಾರವನ್ನು ಪಡೆದವರ ಮುಂದೆ ಲೌಕಿಕ ಜ್ಞಾನ ಏನೂ ಪ್ರಯೋಜನಕ್ಕೆ ಬರುವುದಿಲ್ಲ.
ಖಾಪರ್ಡೆ ಶಿರಡಿಯಲ್ಲಿ ನಾಲ್ಕು ತಿಂಗಳಿದ್ದರು. ಅವರ ಪತ್ನಿ, ಶ್ರೀಮತಿ ಲಕ್ಷ್ಮೀಬಾಯಿ ಖಾಪರ್ಡೆ ಅಲ್ಲಿ ಏಳು ತಿಂಗಳಿದ್ದರು. ಆಕೆ ಬಾಬಾರಲ್ಲಿ ಅತಿಶಯವಾದ ಭಕ್ತಿಭಾವದಿಂದ ಕೂಡಿದವರಾಗಿದ್ದರು. ಬಾಬಾರಲ್ಲಿ ಪರಮ ಪ್ರೀತಿಯಿಟ್ಟಿದ್ದ ಆಕೆ, ಪ್ರತಿದಿನವೂ ಮಧ್ಯಾನ್ಹ ತಾನೇ ಮಾಡಿದ ಅಡಿಗೆಯನ್ನು ತಟ್ಟೆಯಲ್ಲಿಟ್ಟುಕೊಂಡು, ಮಸೀದಿಗೆ ತಂದು ಬಾಬಾರಿಗೆ ನೈವೇದ್ಯವೆಂದು ಅರ್ಪಿಸಿ, ಬಾಬಾ ಅದನ್ನು ತಿಂದಮೇಲೆ ಮನೆಗೆ ಹೋಗಿ ತಾನು ಊಟ ಮಾಡುತ್ತಿದ್ದರು. ಆಕೆಯ ಈ ಅಕುಂಠಿತ ಭಕ್ತಿಯನ್ನು ಕಂಡ ಬಾಬಾ ಅದನ್ನು ಇತರರಿಗೂ ತೋರಿಸಬೇಕೆಂದು ಮನಸ್ಸು ಮಾಡಿದರು.
ಮಾರನೆಯ ದಿನ ಎಂದಿನಂತೆ ಶ್ರೀಮತಿ ಖಾಪರ್ಡೆ ಮಧ್ಯಾಹ್ನ ಸಾಂಜಾ, ಪೂರಿ, ಅನ್ನ, ರಸ, ಖೀರು ಎಲ್ಲವನ್ನೂ ತಟ್ಟೆಯಲ್ಲಿಟ್ಟು ಮುಚ್ಚಿಟ್ಟುಕೊಂಡು, ಮಸೀದಿಗೆ ನೈವೇದ್ಯಕ್ಕೆ ತಂದರು. ಆಕೆ ಇನ್ನೂ ಒಳಕ್ಕೆ ಬರುತ್ತಿದ್ದಹಾಗೆಯೇ, ಬಾಬಾ ಆಕೆ ತಂದಿದ್ದ ತಟ್ಟೆಯನ್ನು ತೆಗೆದುಕೊಂಡು, ಅದರಲ್ಲಿದ್ದುದನ್ನೆಲ್ಲಾ ಒಂದೊಂದಾಗಿ ತಿನ್ನಲು ಪ್ರಾರಂಭಿಸಿದರು. ದಿನವೂ ಬಲವಂತಮಾಡುವವರೆಗೂ ಊಟಕ್ಕೆ ಏಳದೇ ಇರುತ್ತಿದ್ದ ಬಾಬಾ, ಇಂದು ಇದೇನು ಹೀಗೆ ಮಾಡಿದರು ಎಂದು ಇದನ್ನೆಲ್ಲಾ ನೋಡುತ್ತಿದ್ದ ಜನಕ್ಕೆ ಆಶ್ಚರ್ಯವಾಯಿತು. ಆಗ ಶ್ಯಾಮಾ, "ದೇವಾ, ಏಕೆ ಈ ಬೇಧಭಾವ? ಇತರರು ಕೊಟ್ಟ ನೈವೇದ್ಯವನ್ನು ಕಣ್ಣೆತ್ತಿಕೂಡಾ ನೋಡುವುದಿಲ್ಲ, ಹಾಗೆಯೇ ತಳ್ಳಿಬಿಡುತ್ತೀಯೆ. ಈಕೆ ತಂದ ನೈವೇದ್ಯವನ್ನು ಚೂರೂ ಬಿಡದಂತೆ, ಬೇರೆ ಯಾರಿಗೂ ಇರದಂತೆ, ನೀನೇ ಎಲ್ಲವನ್ನು ತಿನ್ನುತ್ತಿದ್ದೀಯೇ? ಆಕೆಯ ಅಡಿಗೆಯಲ್ಲಿ ಏನು ಅಂತಹ ವಿಶೇಷ?" ಎಂದು ಕೇಳಿದರು. ಅದಕ್ಕೆ ಬಾಬಾ, "ನಾನು ಆಕೆಯನ್ನು ಬಹಳ ಕಾಲವಾದಮೇಲೆ ನೋಡುತ್ತಿದ್ದೇನೆ. ಆಕೆ ತನ್ನ ಹಿಂದಿನ ಜನ್ಮದಲ್ಲಿ ಒಬ್ಬ ವರ್ತಕನ ಹತ್ತಿರ ಸಮೃದ್ಧಿಯಾಗಿ ಹಾಲು ಕೊಡುವ ಹಸುವಾಗಿದ್ದಳು. ಅದಾದಮೇಲೆ ಒಬ್ಬ ತೋಟಗಾರನ ಮನೆಯಲ್ಲಿ ಹುಟ್ಟಿದಳು. ನಂತರ ಆಕೆ ಕ್ಷತ್ರಿಯಕುಲದಲ್ಲಿ ಹುಟ್ಟಿ ವೈಶ್ಯನೊಬ್ಬನನ್ನು ಮದುವೆಯಾದಳು. ಆ ನಂತರ ಬ್ರಾಹ್ಮಣ ಕುಲದಲ್ಲಿ ಹುಟ್ಟಿದ್ದಾಳೆ. ಆಕೆ ಪ್ರೀತಿ ವಿಶ್ವಾಸಗಳಿಂದ ಅಡಿಗೆ ಮಾಡಿ ತಂದಿದ್ದಾಳೆ" ಎಂದು ಹೇಳುತ್ತಾ ಬಾಬಾ ತಟ್ಟೆಯಲ್ಲಿದ್ದುದನ್ನೆಲ್ಲಾ ಮುಗಿಸಿ ತಟ್ಟೆ ಖಾಲಿ ಮಾಡಿದರು. ಕೈ-ಬಾಯಿ ತೊಳೆದು, ತಾನು ತಿಂದ ಆಹಾರದಿಂದ ತನಗೆ ತೃಪ್ತಿಯಾಯಿತೆಂದು ಸೂಚಿಸುವ ಹಾಗೆ ಒಂದು ತೇಗು ತೇಗಿ, ತಮ್ಮ ಜಾಗದಲ್ಲಿ ಹೋಗಿ ಕುಳಿತರು.
ಶ್ರೀಮತಿ ಖಾಪರ್ಡೆ ಬಾಬಾರ ಪಾದಗಳ ಬಳಿ ಕುಳಿತು, ಮೃದುವಾಗಿ ಅವರ ಪಾದಗಳನ್ನು ಒತ್ತುತ್ತಾ ಕುಳಿತರು. ಆಕೆ ಪಾದಗಳನ್ನು ಒತ್ತುತ್ತಿದ್ದಾಗಲೇ, ಬಾಬಾ ಕೂಡಾ ಆಕೆಯ ತೋಳುಗಳನ್ನು ಮೆತ್ತಗೆ ಮೃದುವಾಗಿ ಒತ್ತಲು ಅರಂಭಿಸಿದರು. ಇದನ್ನು ಕಂಡ ಶ್ಯಾಮಾ ಉಲ್ಲಾಸಗೊಂಡು, " ಓಹ್, ಎಂತಹ ದೃಶ್ಯವನ್ನು ನೋಡುತ್ತಿದ್ದೇವೆ ನಾವು! ದೇವರು ಮತ್ತು ಭಕ್ತೆ. ಒಬ್ಬರಿನ್ನೊಬ್ಬರ ಸೇವೆಯಲ್ಲಿ ಮಗ್ನರಾಗಿದ್ದಾರೆ" ಎಂದರು. ಆಕೆಯ ಭಕ್ತಿಯನ್ನು ಕಂಡ ಬಾಬಾ ಅತ್ಯಂತ ಸಂತೋಷದಿಂದ ಆಕೆಯ ಕಿವಿಯಲ್ಲಿ ಮೆಲ್ಲಗೆ ಉಸುರಿದರು, " ‘ರಾಜಾರಾಮ ರಾಜಾರಾಮ’ ಎಂದು ಯಾವಾಗಲೂ ಹೇಳಿಕೊಳ್ಳುತ್ತಿರು. ನಿನ್ನ ಜೀವನ ಸಫಲವಾಗುತ್ತದೆ." ಆಧ್ಯಾತ್ಮದಲ್ಲಿ ಹೆಚ್ಚು ತಿಳಿವಳಿಕೆ ಇಲ್ಲದವರಿಗೆ ಇದು ಗುರು ಶಿಷ್ಯ ಸಂಬಂಧಕ್ಕಿಂತ ಬೇರೆಯಾಗಿ ಕಾಣಬಹುದು. ಆದರೆ, ಇದೇ ಶಕ್ತಿಪಾತ, ಗುರುವು ಶಿಷ್ಯನಿಗೆ ತನ್ನ ಶಕ್ತಿಯನ್ನೆಲ್ಲಾ ಧಾರೆಯೆರೆಯುವುದು. ಬಾಬಾರ ಮಾತುಗಳು ಎಷ್ಟು ಶಕ್ತಿಯುತವಾಗಿತ್ತೆಂದರೆ ಆ ಕ್ಷಣದಲ್ಲೇ ಅವು ಆಕೆಯ ಹೃದಯವನ್ನು ಪ್ರವೇಶಿಸಿ ಅಲ್ಲಿ ಶಾಶ್ವತವಾಗಿ ನೆಲೆಯಾದವು.
ಗುರು ಶಿಷ್ಯರ ಸಂಬಂಧ ಈ ರೀತಿಯಲ್ಲಿರಬೇಕು. ಇಬ್ಬರೂ ಒಬ್ಬರಿನ್ನೊಬ್ಬರ ಸೇವೆಯಲ್ಲಿ ತಮ್ಮ ತಮ್ಮದೇ ಆದ ರೀತಿಯಲ್ಲಿ ನಿರತರಾಗಿರಬೇಕು. ಅವರಿಬ್ಬರಲ್ಲಿ ಯಾವ ಬೇಧವೂ ಇಲ್ಲ. ಇಬ್ಬರೂ ಒಂದೇ! ಶಿಷ್ಯ ತನ್ನ ಶಿರಸ್ಸನ್ನು ಗುರುಪಾದಗಳಲ್ಲಿಟ್ಟರೆ, ಗುರು ತನ್ನ ಕೈ ಅವನ ತಲೆಯಮೇಲಿಟ್ಟು, ಅವನಿಗೆ ತನ್ನ ಶಕ್ತಿಯನ್ನು ಧಾರೆಯೆರೆಯುತ್ತಾ, ಶಕ್ತಿ ವರ್ಗಾಯಿಸಿ ಚಕ್ರವನ್ನು ಪೂರ್ಣಗೊಳಿಸುತ್ತಾನೆ.
ಇದರೊಂದಿಗೆ ಭಾಗವತ, ವಿಷ್ಣು ಸಹಸ್ರನಾಮ, ಗೀತಾ ರಹಸ್ಯ ಮತ್ತು ಇತರ ವಿಷಯಗಳನ್ನು ಕುರಿತು ಹೇಳುವ ಇಪ್ಪತ್ತೇಳನೆಯ ಅಧ್ಯಾಯ ಮುಗಿಯಿತು. ಮುಂದಿನ ಅಧ್ಯಾಯದಲ್ಲಿ ಹೇಮಾಡ್ ಪಂತ್ ಲಕ್ಷ್ಮೀಚಂದ್, ಬರ್ಹಾಂಪುರದ ಮಹಿಳೆ, ಮೇಘಾ ಇತ್ಯಾದಿ ವಿಷಯಗಳನ್ನು ಹೇಳುತ್ತಾರೆ
||ಶ್ರೀ ಸದ್ಗುರು ಸಾಯಿನಾಥಾರ್ಪಣಮಸ್ತು||ಶುಭಂ ಭವತು||
||ಓಂ ಶಾಂತಿಃ ಶಾಂತಿಃ ಶಾಂತಿಃ||
||ಓಂ ಶಾಂತಿಃ ಶಾಂತಿಃ ಶಾಂತಿಃ||
No comments:
Post a Comment