Saturday, January 14, 2012

||ಮುವ್ವತ್ತೊಂಭತ್ತು ಮತ್ತು ಐವತ್ತನೆಯ ಅಧ್ಯಾಯಗಳು||


||ಶ್ರೀ ಸಾಯಿ ಸಚ್ಚರಿತ್ರೆ||
||ಮುವ್ವತ್ತೊಂಭತ್ತು ಮತ್ತು ಐವತ್ತನೆಯ ಅಧ್ಯಾಯಗಳು||
||ಬಾಬಾರ ಗೀತಾಶ್ಲೋಕಾರ್ಥ ನಿವೇದನೆ||
ಶ್ರೀ ಗಣೇಶಾಯ ನಮಃ ಶ್ರೀ ಸರಸ್ವತಯೇ ನಮಃ
ಶ್ರೀ ವೆಂಕಟೇಶಾಯ ನಮಃ ಶ್ರೀ ಸಾಯಿನಾಥಾಯ ನಮಃ
ಶ್ರೀ ಸದ್ಗುರುಭ್ಯೋನ್ನಮಃ

ಅಧ್ಯಾಯದಲ್ಲಿ ಹೇಮಾಡ್ ಪಂತ್, ಗೀತೆಯ ಶ್ಲೋಕದ ಅಂತರಾರ್ಥ, ಸಮಾಧಿ ಮಂದಿರ ನಿರ್ಮಾಣ ಇತ್ಯಾದಿ ವಿಷಯಗಳನ್ನು ಕುರಿತು ಹೇಳುತ್ತಾರೆ.
(ಕೆಲವರು ಬಾಬಾರಿಗೆ ಸಂಸ್ಕೃತ ತಿಳಿದಿರಲಿಲ್ಲವೆಂದೂ ಗೀತೆಯ ಅಂತರಾರ್ಥವನ್ನು ಹೇಳಿದ್ದು ನಾನಾ ಸಾಹೇಬ್ ಚಾಂದೋರ್ಕರ್ ಎಂದೂ ಹೇಳುತ್ತಾರೆ. ಅದನ್ನು ಅಲ್ಲಗಳೆಯುತ್ತಾ ಹೇಮಾಡ್ ಪಂತ್ ೫೦ನೆಯ ಅಧ್ಯಾಯದಲ್ಲೂ ಇದೇ ವಿಷಯವನ್ನು ದೀರ್ಘವಾಗಿ ವಿವರಿಸಿದ್ದಾರೆ. ಎರಡು ಅಧ್ಯಾಯಗಳಲ್ಲೂ ಒಂದೇ ವಿಷಯ ಇರುವುದರಿಂದ ಎರಡೂ ಅಧ್ಯಾಯಗಳನ್ನು ಒಟ್ಟಿಗೇ ಸೇರಿಸಿ ಬರೆಯಲಾಗಿದೆ.)

ಶಿರಡಿ ಮತ್ತು ಸಾಯಿ

ಮೊದಲು, ಶಿರಡಿ ಎಲ್ಲೋ ಮಾರುಮೂಲೆಯಲ್ಲಿದ್ದ ಒಂದು ಕುಗ್ರಾಮ. ಬಾಬಾರು ಅಲ್ಲಿಗೆ ಬಂದ ಮೇಲೆ, ಅದಕ್ಕೆ ಪ್ರಾಮುಖ್ಯತೆ ಬಂದು ಅದೊಂದು ಯಾತ್ರಾ ಸ್ಠಳವಾಯಿತು. ಬಾಬಾ ನೆಲಸಿದ ಶಿರಡಿ ಧನ್ಯ. ಅವರು ವಾಸ ಮಾಡಿದ ದ್ವಾರಕಾಮಾಯಿ ಧನ್ಯ. ಸದಾ ಅವರ ರಕ್ಷಣೆಯಲ್ಲೇ ಬೆಳೆದ ಅಲ್ಲಿಯ ಜನ ಧನ್ಯರು. ಶಿರಡಿಯ ಜನ ತಮ್ಮ ತನು, ಮನ, ಧನಗಳನ್ನು ಬಾಬಾರಿಗೆ ಅರ್ಪಿಸಿ, ಅವರ ಪ್ರೀತಿ ವಿಶ್ವಾಸಗಳನ್ನು ಸಂಪಾದಿಸಿದರು. ಪ್ರತಿಯೊಬ್ಬರಿಗೂ, ಬಾಬಾ ಅವರ ಮನೆಯವರೇ ಆಗಿದ್ದರು. ಎಲ್ಲರಿಗೂ ಬಾಬಾರ ಮಾತೇ ಪಾಲಿಸಬೇಕಾದ ವೇದವಾಕ್ಯ. ಬಾಬಾರ ಕೀರ್ತಿ ಪ್ರತಿಷ್ಠೆಗಳನ್ನು ಹೇಳುವ ಹಾಡುಗಳನ್ನು ಹಾಡಿಕೊಳ್ಳುತ್ತಾ, ಶಿರಡಿಯ ಹೆಂಗಸರು ತಮ್ಮ ತಮ್ಮ ಕೆಲಸಗಳನ್ನು ಮಾಡುತ್ತಿದ್ದರು. ಸರಳ, ಸುಂದರ ಸುಲಭವಾಗಿ ಹೇಳಿಕೊಳ್ಳುವಂತಹ ಹಾಡುಗಳನ್ನು ಹಾಡುವಾಗ, ಅವರ ಪ್ರೇಮ ಅದರಲ್ಲಿ ತುಂಬಿರುತ್ತಿತ್ತು. ಶಿರಡಿಯ ಜನರೆಲ್ಲರ ಸಮಯವೆಲ್ಲಾ ಬಾಬಾರಿಂದಲೇ ತುಂಬಿತ್ತು. ಅದರಿಂದಲೇ ಅವರ ಮನಸ್ಸು ಶಾಂತ, ಆಹ್ಲಾದಕರವಾಗಿರುತ್ತಿತ್ತು. ಬಾಬಾರನ್ನು ಪಡೆದ ಶಿರಡಿಯ ಜನ ನಿಜವಾಗಿಯೂ ಪುಣ್ಯವಂತರು.

ಬಾಬಾ ಮತ್ತು ಭಗವದ್ಗೀತೆ

೧೯೦೦-೧೯೦೨ರ ಸುಮಾರಿನಲ್ಲಿ ನಾನಾ ಸಾಹೇಬ್ ಚಾಂದೋರ್ಕರರು ಬಾಬಾರನ್ನು ಕಾಣಲು ಆಗಾಗ ಶಿರಡಿಗೆ ಬರುತ್ತಲೇ ಇದ್ದರು. ಚಾಂದೋರ್ಕರರ ತಂದೆ ತಾಯಿಗಳು, ಶಾಸ್ತ್ರವೇತ್ತರಾದ, ಗೌರವಾನ್ವಿತ, ಸುಸಂಸ್ಕೃತ, ಸಮಾಜದಲ್ಲಿ ಬಹು ಮಾನಿತರಾದವರು. ಅವರ ತಂದೆ ಸರ್ಕಾರದಲ್ಲಿ ಉನ್ನತ ಉದ್ಯೋಗಿಯಾಗಿದ್ದು ನಿವೃತ್ತರಾದವರು. ಕಲ್ಯಾಣದಲ್ಲಿ ಸ್ವಂತ ಮನೆಯೊಂದನ್ನು ಕಟ್ಟಿಕೊಂಡಿದ್ದರು. ಮನೆಯನ್ನು ಜನ ಚಾಂದೋರ್ಕರ್ ವಾಡಾ ಎಂದು ಕರೆಯುತ್ತಿದ್ದರು. ನಾನಾ ಸಾಹೇಬ್ ಸ್ವತಃ ಪ್ರತಿಭಾನ್ವಿತ ವಿದ್ಯಾರ್ಥಿ. ೨೦ ವರ್ಷಗಳಿಗೇ ಪದವೀಧರರಾದ ಅವರು, ಸರ್ಕಾರಿ ನೌಕರಿಗೆ ಸೇರಿ, ಪ್ರವೃದ್ಧಮಾನರಾಗಿ ಏಳೇ ವರ್ಷಗಳಲ್ಲಿ ಡೆಪ್ಯುಟಿ ಕಲೆಕ್ಟರ್ ಆಗಿದ್ದರು. ಎಲ್ಲರೂ ಸಾಧನೆ ಆಗಿನ ಕಾಲದಲ್ಲಿ ಅಸಾಧಾರಣ ಎನ್ನುತ್ತಿದ್ದರು. ಆತನ ನಡವಳಿಕೆ ಸುಸಂಸ್ಕೃತ ಹಿಂದುವಿನಂತೆ ಇತ್ತು. ವೇದಾಂತವನ್ನು ತನ್ನ ವಿಶೇಷ ಪಠ್ಯವನ್ನಾಗಿ ಓದಿ, ಅದರಲ್ಲಿ ಪ್ರವೀಣರಾಗಿದ್ದರು. ಶಂಕರ ಭಾಷ್ಯದೊಡನೆ ಭಗವದ್ಗೀತೆಯನ್ನು ಆಳವಾಗಿ ಅಭ್ಯಾಸಮಾಡಿ, ಅದರಲ್ಲಿ ಪರಿಣತೆಯನ್ನೂ ಪಡೆದಿದ್ದರು. ಹಿಂದೂ ಶಾಸ್ತ್ರಗಳನ್ನು ಆಳವಾಗಿ ಅಭ್ಯಾಸಮಾಡಿ, ಅದರಲ್ಲಿನ ವಿಶಿಷ್ಟತೆಯನ್ನು ತಿಳಿದು, ಅದನ್ನು ತಮ್ಮ ಏಳಿಗೆಗಾಗಿ ಬಳಸಿಕೊಳ್ಳುತ್ತಿದ್ದರು. ಹೀಗೆ ಸಿದ್ಧವಾಗಿದ್ದ ಆತನಿಗೆ ಆಧ್ಯಾತ್ಮದ ಉನ್ನತಿಗೇರಲು ಸರಿಯಾದ ದಾರಿ ತೋರುವ ಗುರುವೊಬ್ಬನ ಅವಶ್ಯಕತೆಯಿತ್ತು.

ನಾನಾ ಸಾಹೇಬರಿಗೆ ತಮ್ಮ ಪೂರ್ವ ಜನ್ಮಗಳ ಬಗ್ಗೆ ಏನೂ ತಿಳಿಯದು. ಸರ್ವಜ್ಞರಾದ ಬಾಬಾರಿಗೆ ಚಾಂದೋರ್ಕರರ ಹಿಂದು, ಮುಂದು ಎಲ್ಲಾ ತಿಳಿದಿತ್ತು. ಹಿಂದಿನ ನಾಲ್ಕು ಜನ್ಮಗಳಲ್ಲಿ ನಾನಾ ತಮ್ಮ ಶಿಷ್ಯನಾಗಿದ್ದನೆಂಬುದು, ಅವರಿಗೆ ಗೊತ್ತಿತ್ತು. ಅದನ್ನು ಜನ್ಮದಲ್ಲಿಯೂ ಮುಂದುವರೆಸಿ, ಅವರು ತಮ್ಮ ಗಮ್ಯವನ್ನು ಸೇರಲು ಸಹಾಯಕರಾಗಬೇಕೆಂದು ಬಾಬಾ ನಿಶ್ಚಯಿಸಿಕೊಂಡಿದ್ದರು. ಅವರು ಸಾಧಾರಣವಾಗಿ ದೊಡ್ಡ ಹುದ್ದೆಗಳಲ್ಲಿರುವವರನ್ನು ತಾವಾಗಿಯೇ ಕಾಣಲು ಇಚ್ಛಿಸುತ್ತಿರಲಿಲ್ಲ. ಆದರೂ, ನಾನಾರು ತಮ್ಮನ್ನು ಬಂದು ಕಾಣಬೇಕೆಂದು, ಅವರಿಗೆ ಹಲವಾರು ಸಲ ಹೇಳಿ ಕಳುಹಿಸಿದ್ದರು. ಆತ್ಮಸಾಕ್ಷಾತ್ಕಾರದ ದಾರಿಯಲ್ಲಿ ಇರುವ ಅಡೆತಡೆಗ ಬಗ್ಗೆ ಸರಿಯಾದ ಜ್ಞಾನ ನೀಡಿ, ಅವರನ್ನು ಋಜು ಮಾರ್ಗಕ್ಕೆ ತರಬೇಕೆಂಬುದು ಬಾಬಾರ ಇಚ್ಛೆ. ಬಾಬಾರು ಅದನ್ನು ನೆರವೇರಿಸುವ ರೀತಿ ಮಾತ್ರ ವಿಚಿತ್ರ. ಸುಲಭವಾಗಿ ಅರ್ಥವಾಗುವಂತಹುದ್ದಲ್ಲ.

ಷಡ್ರಿಪುಗಳಾದ ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸರ್ಯ ಆಧ್ಯಾತ್ಮಿಕ ಹಾದಿಯಲ್ಲಿ ಮುಂದುವರೆಯಲು ಇರುವ ಅಡ್ಡಗೋಡೆಗಳು. ಅದರಲ್ಲೂ ಮದ -ಅಹಂಕಾರ- ಎನ್ನುವುದು ಅತಿ ದೊಡ್ಡದು. ತಾನೇ ತಿಳಿದವನು, ತಾನೇ ದೊಡ್ಡವನು, ಹಾಗೂ ಉನ್ನತ ಕುಲಕ್ಕೆ ಸೇರಿದವನು, ಎಂಬ ಅಹಂಕಾರಗಳು ಮನುಷ್ಯನನ್ನು ಅಧೋಗತಿಗೆ ತಳ್ಳುವುದರಲ್ಲಿ ಬಹಳ ದೊಡ್ಡ ಪಾತ್ರ ವಹಿಸುತ್ತವೆ. ನಾನಾ ಸಾಹೇಬರ ವಿಷಯದಲ್ಲಿಯೂ ಹಾಗೇ ಆಗಿತ್ತು. ಪ್ರತಿದಿನ ಗೀತೆಯನ್ನು ಓದುವ ಅಭ್ಯಾಸವಿದ್ದ ಅವರು, ಗೀತೆಯ ಮೇಲಿನ ಅನೇಕ ವ್ಯಾಖ್ಯಾನಗಳನ್ನು ಆದ್ಯಂತವಾಗಿ ಓದಿ, ಅದರ ಸ್ಥೂಲ ಅರ್ಥವನ್ನು ಚೆನ್ನಾಗಿ ಬಲ್ಲವರಾಗಿದ್ದರು. ಸಂಸ್ಕೃತ ಭಾಷೆಯನ್ನು ಚೆನ್ನಾಗಿ ಅರಿತಿದ್ದ ಅವರು, ಹಿಂದು ಧರ್ಮದ ಬಗ್ಗೆ ಅನೇಕ ಪುಸ್ತಕಗಳನ್ನು ಓದಿದ್ದರು. ವೇದಾಂತವನ್ನು ಅಭ್ಯಾಸ ಮಾಡಿದ್ದರು. ಇಷ್ಟೆಲ್ಲ ಓದಿ ತಿಳಿದುಕೊಂಡಿದ್ದ ಆತನಲ್ಲಿ, ತಾನು ಬಹಳ ತಿಳಿದ ಜ್ಞಾನಿ ಎಂಬ ಅಹಂಕಾರ ಮನೆ ಮಾಡಿಕೊಂಡಿತ್ತು. ತರಹೆಯ ವಾಸನೆಗಳು ಆತ್ಮೋನ್ನತಿಯ ದಾರಿಯಲ್ಲಿ ಅಡಚಣೆಗಳು. ಇವುಗಳನ್ನು ಕಳೆದು ಕೊಳ್ಳದಿದ್ದರೆ, ಆತ್ಮೋನ್ನತಿ ಅಸಾಧ್ಯ. ಅದರಲ್ಲೂ "ನಾನು ಬಹಳ ವಿದ್ಯಾವಂತ, ನನಗೆ ಎಲ್ಲವೂ ತಿಳಿದಿದೆ. ನಾನು ಹೇಳುವುದು ವೇದವಾಕ್ಯ, ಎಲ್ಲರೂ ಕೇಳಬೇಕು" ಎನ್ನುವ ವಿದ್ಯಾವಾಸನೆ ಎಲ್ಲಕ್ಕಿಂತ ದೊಡ್ಡ ಅಹಂಕಾರ. ನಾನಾ ಸಾಹೇಬರಿಗೆ ಅಹಂಕಾರ ಬಹಳವಾಗಿತ್ತು. ಇಂತಹ ಅಹಂಕಾರವನ್ನು ತೊಡೆದು ಹಾಕದಿದ್ದರೆ ಆತನಿಗೆ ಮುಕ್ತಿಯಿಲ್ಲ ಎಂಬುದನ್ನು ಅರಿತಿದ್ದ ಬಾಬಾ, ಅವರ ಅಹಂಕಾರವನ್ನು ಮೊಟಕು ಮಾಡಲು ನಿಶ್ಚಯಿಸಿಕೊಂಡರು.

ಒಂದು ದಿನ ಮಧ್ಯಾಹ್ನ, ಬಾಬಾ ವಿಶ್ರಮಿಸುತ್ತಿದ್ದಾಗ, ನಾನಾ ಅವರ ಕಾಲು ಮೃದುವಾಗಿ ಒತ್ತುತ್ತಾ, ವ್ಯರ್ಥವಾದ ಯೋಚನೆಗಳನ್ನು ಮಾಡುವುದು ಬಿಟ್ಟು, ಗೀತೆಯ ಶ್ಲೋಕಗಳನ್ನು, ಬಾಬಾರಿಗೆ ತೊಂದರೆಯಾಗದಂತೆ, ಮೆಲ್ಲಗೆ ಗುಣುಗುಣಿಸುತ್ತಿದ್ದರು. ನಾನಾ ಏನುಮಾಡುತ್ತಿದ್ದಾರೆ ಎಂಬುದನ್ನು ಅರಿತ ಬಾಬಾ, ಅವರು ಗುರುಶಿಷ್ಯಸಂಬಂಧದ ಶ್ಲೋಕಕ್ಕೆ ಬಂದಾಗ, ಅವರನ್ನು, "ನಾನಾ, ಅದೇನದು? ಏನು ಗೊಣಗುತ್ತಿದ್ದೀಯೆ?" ಎಂದು ಕೇಳಿದರು.

ನಾನಾ: ಸಂಸ್ಕೃತದ ಒಂದು ಶ್ಲೋಕ.
ಬಾಬಾ: ಯಾವ ಶ್ಲೋಕ?
ನಾನಾ: ಭಗವದ್ಗೀತೆಯದು.

ಬಾಬಾ: ನಾನೂ ಕೇಳುವಂತೆ ಜೋರಾಗಿ ಹೇಳು.
ನಾನಾ ಶ್ಲೋಕವನ್ನು ಜೋರಾಗಿ ಹೇಳಿದರು.

ತದ್ವಿದ್ಧಿ ಪ್ರಣಿಪಾತೇನ ಪರಿಪ್ರಶ್ನೇನ ಸೇವಯಾ
ಉಪದೇಕ್ಷ್ಯಂತಿ ತೇ ಜ್ಞಾನಂ ಜ್ಞಾನಿನಃ ತತ್ವದರ್ಶಿನಃ
ಅಧ್ಯಾಯ , ಶ್ಲೋಕ ೩೪
ಬಾಬಾ: ನಿನಗೆ ಅದು ಅರ್ಥವಾಗಿದೆಯೇ?
ನಾನಾ: ಆಗಿದೆ.
ಬಾಬಾ: ಹಾಗಿದ್ದರೆ ಹೇಳು.
ನಾನಾ: ನಮಸ್ಕರಿಸಿ, ಸೇವೆಯನ್ನು ಮಾಡಿ, ಗುರುವನ್ನು ಪ್ರಶ್ನೆಮಾಡಿದರೆ, ಅವರು ಜ್ಞಾನವೇನೆಂಬುದನ್ನು ತಿಳಿಸುತ್ತಾರೆ. ನಂತರ ಸದ್ವಸ್ತುವಾದ ಬ್ರಹ್ಮನನ್ನು ತಿಳಿದವರು, ಜ್ಞಾನವನ್ನು ಉಪದೇಶಿಸುತ್ತಾರೆ.
ಬಾಬಾ: ನನಗೆ ಅದರ ತಾತ್ಪರ್ಯ ಬೇಕಿಲ್ಲ. ಪ್ರತಿ ಪದದ ಅರ್ಥ ಮತ್ತು ಅದರ ಗೂಡಾರ್ಥ ಹೇಳು.
ಆಗ, ನಾನಾ ಪ್ರತಿ ಪದದ ಅರ್ಥ ಹೇಳಿ ಅದು ಏನ
ನ್ನು ಸೂಚಿಸುತ್ತದೆ ಎಂಬುದನ್ನು ಹೇಳಿದರು.
ಬಾಬಾ: ಬರಿಯ ನಮಸ್ಕಾರ ಮಾಡಿದರೆ ಸಾಕೇ?
ನಾನಾ: ಪ್ರಣಿಪಾತ ಎಂಬ ಪದಕ್ಕೆ ನನಗೆ ಬೇರೆ ಅರ್ಥ ತಿಳಿಯದು.
ಬಾಬಾ: ಪರಿಪ್ರಶ್ನೆ ಎಂದರೇನು?
ನಾನಾ: ಪ್ರಶ್ನೆ ಮಾಡುವುದು. ಕೇಳುವುದು.
ಬಾಬಾ; ಪ್ರಶ್ನೆ ಎಂದರೇನು?
ನಾನಾ: ಅದೇ. ಪ್ರಶ್ನೆ ಕೇಳುವುದು.
ಬಾಬಾ: ಪರಿಪ್ರಶ್ನೆ ಎಂದರೂ, ಪ್ರಶ್ನೆ ಎಂದರೂ ಒಂದೇ ಅರ್ಥವಿರುವುದಾದರೆ ವ್ಯಾಸರು "ಪರಿ" ಎಂದು ಏಕೆ ಹೇಳಿದರು, ಅವರೇನು ಹುಚ್ಚರೇ?
ನಾನಾ: ಪರಿಪ್ರಶ್ನೆ ಎನ್ನುವುದಕ್ಕೆ ನನಗೆ ಬೇರೆ ಅರ್ಥ ಗೊತ್ತಿಲ್ಲ.
ಬಾಬಾ: ಸೇವೆ ಎಂದರೇನು?

ನಾನಾ: ನಾವು ನಿಮಗೆ ಮಾಡುತ್ತಿರುವುದು.
ಬಾಬಾ: ಸೇವೆಯಷ್ಟೇ ಸಾಕೆ?
ನಾನಾ: ಸೇವೆ ಎಂದರೆ ಇನ್ನೇನು ಅರ್ಥ ಎಂದು ನನಗೆ ತಿಳಿಯದು.
ಬಾಬಾ: ಎರಡನೆಯ ಪಾದದಲ್ಲಿ "ಉಪದೇಕ್ಷ್ಯಂತಿ ತೇ ಜ್ಞಾನಂ" ಎಂದಿರುವುದರಲ್ಲಿ, ಜ್ಞಾನಂ
ನ್ನುವುದಕ್ಕೆ ಬದಲಾಗಿ ಬೇರೆ ಏನಾದರೂ ಹೇಳಬಹುದೇ?
ನಾನಾ: ಹೇಳಬಹುದು.
ಬಾಬಾ: ಏನದು?
ನಾನಾ: ಅಜ್ಞಾನಂ.
ಬಾಬಾ: "ಜ್ಞಾನಂ" ಎನ್ನುವುದಕ್ಕೆ ಬದಲಾಗಿ "ಅಜ್ಞಾನಂ" ಎಂದು ಹೇಳಿದರೆ ಅದನ್ನು ಸರಿಯಾಗಿ ಅರ್ಥೈಸಬಹುದೇ?
ನಾನಾ: ಇಲ್ಲ. ಶಂಕರ ಭಾಷ್ಯದಲ್ಲಿ ಅಂತಹ ಅರ್ಥವನ್ನು ಕೊಟ್ಟಿಲ್ಲ.
ಬಾಬಾ: ಶಂಕರ ಭಾಷ್ಯವನ್ನು ಹಾಗಿಡು. ಅಜ್ಞಾನಂ ಎನ್ನುವ ಪದ ಹಾಕಿದರೆ ಅದು ಜ್ಞಾನಂ ಎಂದು ಹೇಳುವುದಕ್ಕಿಂತ ಒಳ್ಳೆಯ ಅರ್ಥ ಕೊಡುವುದೇ?

ನಾನಾ ಸಾಹೇಬರಿಗೆ ಗುರುವು ಅಜ್ಞಾನವನ್ನು ಹೇಗೆ ಬೋಧಿಸುತ್ತಾನೆ, ಅದು ಹೇಗೆ ಇನ್ನೂ ಒಳ್ಳೆಯ ಅರ್ಥ ಕೊಡುತ್ತದೆ ಎಂದು ತಿಳಿಯಲಿಲ್ಲ. ಹೀಗೆ ಬಾಬಾ ಅವರನ್ನು ಪದ ಪದಗಳ ಅರ್ಥ ಕೇಳಿ ಗೊಂದಲದಲ್ಲಿ ಸಿಕ್ಕಿಸಿದರು.

ಬಾಬಾ: "ಕೃಷ್ಣ ಅರ್ಜುನನನ್ನು ಜ್ಞಾನಿಗಳು, ತತ್ವದರ್ಶಿಗಳ ಹತ್ತಿರಕ್ಕೆ ಹೋಗು ಎಂದೇಕೆ ಹೇಳಿದ? ಕೃಷ್ಣ ತಾನೇ ತತ್ವದರ್ಶಿ ಮತ್ತು ಜ್ಞಾನಿಯಲ್ಲವೇ?"
ನಾನಾ: ನಿಜ. ಆದರೆ ಅವನು ಅರ್ಜುನನನ್ನು ಜ್ಞಾನಿಗಳ ಬಳಿಗೆ ಹೋಗಲು ಏಕೆ ಹೇಳಿದ ಎಂಬುದು ನನಗೆ ಗೊತ್ತಿಲ್ಲ.
ಬಾಬಾ: ನಿನಗೆ ಅರ್ಥವಾಗಲಿಲ್ಲ
ವೇ?

ನಾನಾರ ಗರ್ವಭಂಗವಾಯಿತು. ಸಂಸ್ಕೃತವನ್ನು ಚೆನ್ನಾಗಿ ಬಲ್ಲ, ಉಪನಿಷತ್ತುಗಳ ಸಾರವನ್ನು ಅರೆದು ಕುಡಿದಿರುವ ಬೃಹದಾಕಾರದ ವ್ಯಕ್ತಿಯ ಮುಂದೆ ತಾವು ಕೂತಿದ್ದೇನೆ ಎಂದು ಅರಿವಾಯಿತು. ವಿನಯದಿಂದ ವರು ಬಾಬಾರನ್ನೇ ಅವರು ಕೇಳಿದ್ದ ಪ್ರಶ್ನೆಗಳಿಗೆಲ್ಲ ಉತ್ತರ ಕೊಡುವಂತೆ ಬೇಡಿಕೊಂಡರು. ಬಾಬಾ ಅವರಿಗೆ ಕೊಟ್ಟ ಉತ್ತರಗಳು ಉಪನಿಷತ್ತುಗಳ ಗಣಿ. ಪದಗಳನ್ನು ಬಿಡಿಸಿ, ಅವುಗಳನ್ನು ಸರಿಯಾದ ರೀತಿಯಲ್ಲಿ ಜೋಡಿಸಿದರೆ, ಅವುಗಳಿಗೆ ಹೇಗೆ ಹೊಸ ಅರ್ಥಗಳನ್ನು ಕೊಡಬಹುದು ಎಂಬುದನ್ನು ಬಾಬಾ ತೋರಿಸಿಕೊಟ್ಟರು. ನಾನಾ ಸಾಹೇಬರ ಅಹಂಕಾರಕ್ಕೆ ದೊಡ್ಡ ಕೊಡಲಿಯೇಟು ಬಿತ್ತು. ಬಾಬಾರ ಹೊರರೂಪವನ್ನು ಮಾತ್ರ ನೋಡಿ, ಅವರ ತಿಳಿವಳಿಕೆಯನ್ನು ಕಡೆಗಣಿಸಿದ್ದ ಅವರಿಗೆ, ಬಾಬಾರ ಇನ್ನೊಂದು ಮುಖದ ಪರಿಚಯವಾಗಿರಲಿಲ್ಲ. "ಬಾಬಾ ಸಣ್ಣವರಾಗಿದ್ದಾಗಲೇ ಶಿರಡಿಗೆ ಬಂದರು. ಅವರಿಗೆ ಯಾವುದೇ ರೀತಿಯ ಸಾಂಪ್ರದಾಯಿಕ ಶಿಕ್ಷಣವೂ ಇರಲಿಲ್ಲ. ಅವರ ಜ್ಞಾನವೆಲ್ಲ ಅವರ ಅನುಭವದಿಂದ ಬಂದಿದ್ದು. ಸಂಸ್ಕೃತವಾಗಲೀ, ಆಧ್ಯಾತ್ಮಿಕ ಜ್ಞಾನವಾಗಲೀ ಇಲ್ಲ" ಎಂದೆಲ್ಲಾ ತಿಳಿದಿದ್ದ ನಾನಾ ಸಾಹೇಬರಿಗೆ, ಬಾಬಾ ಕೇಳಿದ ಪ್ರಶ್ನೆಗಳು, ಅದಕ್ಕೆ ಅವರೇ ಕೊಟ್ ಉತ್ತರಗಳು, ದಂಗುಬಡಿಸಿದವು.

ಬಾಬಾ ಶ್ಲೋಕದ ನಿಜವಾದ ಅರ್ಥವನ್ನು ಹೀಗೆ ವಿವರಿಸಿದರು:

. ಬರಿಯ ನಮಸ್ಕಾರ ಮಾಡಿದರಷ್ಟೇ ಸಾಲದು. ಸದ್ಗುರುವಿಗೆ ಕಾಯಾ, ವಾಚಾ, ಮನಸಾ ಶರಣಾಗತರಾಗಬೇಕು.
. ಪ್ರಶ್ನೆ ಕೇಳಬೇಕೆಂದು ಕೇಳುವುದಲ್ಲ. ತಾನು ಮೋಕ್ಷ ಮಾರ್ಗದಲ್ಲಿ, ಆತ್ಮೋನ್ನತಿಯ ದಾರಿಯಲ್ಲಿ ಮುಂದುವರಿಯಬೇಕು ಎನ್ನುವ ಆತುರತೆಯಿಂದ ಪ್ರಶ್ನೆ ಮಾಡಬೇಕು. ಕೇಳುವ ವಿಷಯ ಗುರುವಿಗೆ ತಿಳಿದಿದೆಯೋ ಇಲ್ಲವೋ ಎಂದು ಪರೀಕ್ಷೆಮಾಡುವ ರೀತಿಯಲ್ಲಿ ಪ್ರಶ್ನಿಸುವುದಲ್ಲ.
. ಸೇವೆ ಎಂದರೆ ಬರಿಯ ಕೈಕಾಲು ಒತ್ತುವುದು, ನೀವುವುದು ಅಲ್ಲ. ಇಷ್ಟವಿದ್ದರೆ ಸೇವೆ ಮಾಡುವುದು ಇಲ್ಲದಿದ್ದರೆ ಸುಮ್ಮನಿರುವುದು ಅಲ್ಲ. ನಿಜವಾದ ಸೇವೆ ಎಂದರೆ " ದೇಹ ನನ್ನದಲ್ಲ. ಗುರುವಿಗೆ ಮೀಸಲಾದದ್ದು. ಅದಿರುವುದೇ ಗುರುವಿನ ಸೇವೆಗಾಗಿ" ಎಂ ಭಾವದಿಂದ ಮಾಡಿದ ಸೇವೆಯಾಗಿರಬೇಕು. ರೀತಿಯಲ್ಲಿ ಸೇವೆಗೆ ನಿಂತರೆ ಆಗ, ಗುರುವು ಜ್ಞಾನ ಎಂದರೆ ಏನು ಎಂಬುದನ್ನು ತಿಳಿಸಿಕೊಡುತ್ತಾನೆ.

ಗುರುವು ಅಜ್ಞಾನವನ್ನು ಹೇಗೆ ಬೋಧಿಸಬಲ್ಲ? ಎಂಬುದು ನಾನಾ ಸಾಹೇಬರಿಗೆ ಅರ್ಥವಾಗಿರಲಿಲ್ಲ. ಬಾಬಾರನ್ನೇ ಕೇಳಿದರು. ಅದಕ್ಕೆ ಬಾಬಾ ಹೀಗೆ ಹೇಳಿದರು, "ಜ್ಞಾನೋಪದೇಶ ಹೇಗೆ ಸಾಧ್ಯ? ಜ್ಞಾನಿಗೆ ತಾನು ಜ್ಞಾನಿ ಎಂಬ ಅರಿವಿದೆ. ಅಜ್ಞಾನಿಯಾದ ಶಿಷ್ಯನೂ ಜ್ಞಾನಿಯೇ! ಆದರೆ ಅಜ್ಞಾನದ ತೆರೆಯೊಂದು ಅವನ ಜ್ಞಾನದ ಮೇಲೆ ಮುಸುಕಿ, ಅವನಿಗೆ ತಾನು ಜ್ಞಾನಿಯೆಂಬ ಅರಿವು ಹೋಗಿದೆ. ಗುರುವು ಅಜ್ಞಾನದ ತೆರೆಯನ್ನು ಬಿಡಿಸಿ ಅವನಿಗೆ "ನಾನು ಜ್ಞಾನಿ" ಎಂಬ ಅರಿವನ್ನುಂಟುಮಾಡುತ್ತಾನೆ.

ಅಜ್ಞಾನವನ್ನು ಕಳೆಯುವುದು ಎಂದರೆ ಜ್ಞಾನವನ್ನು ಪಡೆಯುವುದು. ಕತ್ತಲೆಯನ್ನು ಓಡಿಸುವುದು ಎಂದರೆ ಬೆಳಕನ್ನು ತರುವುದು. ದ್ವೈತವನ್ನು ಕಳೆಯುವುದು ಎಂದರೆ ಅದ್ವೈತವನ್ನು ಅರಿಯುವುದು. ನಮ್ಮಲ್ಲಿರುವ ದ್ವೈತ ಜ್ಞಾನವನ್ನು ಹೊರದೂಡಿದಾಗ ಉಳಿಯುವುದೇ ಅದ್ವೈತ. ರೀತಿಯನ್ನು ಬಲ್ಲವನೇ ಅದನ್ನು ಇನ್ನೊಬ್ಬರಿಗೆ ಹೇಳಬಲ್ಲ. ತಾನೇ ದ್ವೈತಭಾವದಲ್ಲಿರುವವನು ಇನ್ನೊಬ್ಬರಿಗೆ ಅದ್ವೈತವನ್ನು ಹೇಗೆ ತಾನೇ ಹೇಳಬಲ್ಲ?

ಶಿಷ್ಯನೂ ಗುರುವಿನಂತೆ ಜ್ಞಾನಮೂರ್ತಿಯೇ. ಆದರೆ ಅವರಲ್ಲಿರುವ ಬೇಧವೆಂದರೆ ಶಿಷ್ಯನಿಗೆ ತಾನು ಜ್ಞಾನಿ ಎಂಬ ಅರಿವಿಲ್ಲ. ಗುರುವಿಗೆ ಅದರ ಅರಿವಿದೆ! ಗುರುವು ಈಗ ಮಾನುಷ ರೂಪದಲ್ಲಿದ್ದರೂ ಆತನ ಮೂಲ ರೂಪವಾದ ಸತ್-ಚಿತ್-ಆನಂದ ರೂಪ ಬದಲಾಗಿಲ್ಲ. ರೂಪದ ಗುಣಗಳೆಲ್ಲ ಅವನಲ್ಲಿ ಈಗಲೂ ಇವೆ! ಅವನು ನಿರ್ಗುಣನೇ! ಮಾನವ ಕುಲದ ಉದ್ಧಾರಕ್ಕೆಂದೇ ಅವನು ಮಾನುಷರೂಪದಲ್ಲಿ ಬಂದಿದ್ದಾನೆ!

ಶಿಷ್ಯನೂ ಗುರುಸ್ವರೂಪನೇ. ಆದರೆ, ಜನ್ಮ ಜನ್ಮಾಂತರಗಳ ಸಂಸ್ಕಾರ ಫಲದಿಂದ ಅವನ ನಿಜ ಸ್ವರೂಪ ಅಜ್ಞಾನದ ಪರದೆಗಳಿಂದ ಮುಚ್ಚಿಹೋಗಿದೆ. ತಾನು ಶುದ್ಧ ಚೈತನ್ಯ ಎಂಬುದನ್ನು ಪರದೆಗಳು ಅವನು ಮರೆಯುವಂತೆ ಮಾಡಿವೆ. ಒಂದೊಂದು ಪದರವೂ ಅವನನ್ನು "ಜಡ, ಹೀನವಾದ ಪ್ರಾಣಿಯಾದ ನಾನೇ ಜೀವ" ಎಂದು ಭ್ರಮೆಗೊಳಿಸಿದೆ. ಗುರುವು ಭ್ರಮೆಯನ್ನು ಸರಿಯಾದ ಶಿಕ್ಷಣ ಕೊಟ್ಟು ನಿಧಾನವಾಗಿ ಕಳೆಯಬೇಕು. ನೂರಾರು ಜನ್ಮಗಳಲ್ಲಿ ಶಿಕ್ಷಣವನ್ನು ಕೊಟ್ಟು," ಶುದ್ಧ ಚೈತನ್ಯ ಸ್ವರೂಪಿ ಬ್ರಹ್ಮ ನೀನೇ" ಎಂದು ಬೋಧಿಸಬೇಕು. ಬೋಧನೆಯಿಂದ ಅವನ ಅಜ್ಞಾನ ನಾಶವಾಗಿ, ಕ್ರಮಕ್ರಮವಾಗಿ ಶಿಷ್ಯ ತಾನೇ ಬ್ರಹ್ಮ ಸ್ವರೂಪ ಎಂದು ತಿಳಿದುಕೊಳ್ಳುತ್ತಾನೆ. ಅವನಿಗೆ ಜೀವ-ಬ್ರಹ್ಮ-ಪ್ರಪಂಚ ಎಲ್ಲಾ ಬೇರೆಬೇರೆ ಎಂಬ ಭ್ರಮೆ ಬಂದಿರುವುದು ಪೂರ್ವ ಜನ್ಮ ಕೃತ ಕರ್ಮಫಲಗಳಿಂದ. ಭ್ರಮೆಯನ್ನು ಕಳೆದುಕೊಳ್ಳಲು ಶಿಷ್ಯ ತನ್ನಲ್ಲಿ ತಾನು, "ನಾನು ಯಾರು? ಭ್ರಮೆಯೇನು? ಎಲ್ಲಿಂದ ಬಂದಿದೆ?" ಇತ್ಯಾದಿಯಾಗಿ ಪ್ರಶ್ನಿಸಿಕೊಳ್ಳಬೇಕು. ಒಂದೊಂದು ಪ್ರಶ್ನೆಗೂ ಗುರುವೇ ಉತ್ತರ ತೋರಿಸುತ್ತಾನೆ. ಅದೇ "ಗುರೂಪದೇಶ". ಶಿಷ್ಯನ ಅಜ್ಞಾನದ ರೂಪಗಳು ಹೀಗಿವೆ:

. ನಾನೇ ಜೀವ
. ದೇಹವೇ ಆತ್ಮ.
. ದೇವರು, ಪ್ರಪಂಚ, ಬ್ರಹ್ಮ ಎಲ್ಲವೂ ಬೇರೆಬೇರೆ.
. ನಾನು ದೇವರಲ್ಲ.
. ದೇಹ ಆತ್ಮನಲ್ಲ ಎಂದು ತಿಳಿಯದಿರುವುದು.
. ಪರಮಾತ್ಮ, ಪ್ರಪಂಚ, ಜೀವ ಬೇರೆಬೇರೆಯಲ್ಲ ಎಂದು ತಿಳಿಯದಿರುವುದು.

ದೋಷಗಳನ್ನು ಶಿಷ್ಯನ ಅವಗಾಹನೆಗೆ ತರದಿದ್ದರೆ, ಶಿಷ್ಯ ದೇವರು, ಜೀವ, ದೇಹಿ, ಪ್ರಪಂಚ ಎಂದರೇನು? ಅವು ಒಂದಕ್ಕೊಂದು ಹೇಗೆ ಸಂಭಂಧಿಸಿವೆ? ಅವು ಬೇರೆ ಬೇರೆಯೇ? ಇಲ್ಲ ಒಂದೆಯೇ? ಎಂಬುದನ್ನು ಅರಿಯಲಾರ. ಅವನಿಗೆ ಇದನ್ನು ಕಲಿಸಿ, ಅವನ ಅಜ್ಞಾನವನ್ನು ಕಳೆಯುವುದೇ ಜ್ಞಾನ ಬೋಧೆ ಅಥವಾ ಅಜ್ಞಾನ ಶಿಕ್ಷಣ. ಗುರುವು ತನ್ನ ಉಪದೇಶದಿಂದ ಶಿಷ್ಯನ ತಪ್ಪುಗಳನ್ನು ತೋರಿಸಿಕೊಟ್ಟು, ಅವನ ಅಜ್ಞಾನವನ್ನು ತೊಡೆದು ಹಾಕುತ್ತಾನೆ. ಜ್ಞಾನ ಮೂರ್ತಿಯೇ ಆದ ಶಿಷ್ಯನಿಗೆ ಜ್ಞಾನವನ್ನು ಕಲಿಸುವುದು ಏಕೆ?

ಬಾಬಾ ಮುಂದುವರೆದು ಹೇಳಿದರು. ಪ್ರಣಿಪಾತ ಎಂದರೆ ಸಂಪೂರ್ಣ ಶರಣಾಗತಿ. ಕಾಯಾ, ವಾಚಾ, ಮನಸಾ ಶರಣಾಗುವುದು. ತಾನು ಎಂಬುದೇನಿಲ್ಲ. ಇರುವುದೆಲ್ಲವೂ ಗುರುವೇ! ಎಂಬ ಭಾವದಿಂದ ತನು ಮನ ಧನಗಳನ್ನು ಗುರುವಿಗೆ ಅರ್ಪಿಸಿ, ಶ್ರದ್ಧಾ ವಿನಯ ಭಕ್ತಿಗಳಿಂದ ನಮಸ್ಕರಿಸುವುದೇ ಪ್ರಣಿಪಾತ.

ಕೃಷ್ಣನು ಅರ್ಜುನನನ್ನು ಜ್ಞಾನಿಗಳ ಬಳಿಗೆ ಹೋಗುವಂತೆ ಏಕೆ ಹೇಳಿದನು ಎಂಬ ಪ್ರಶ್ನೆಗೆ ಬಾಬಾ ಹೀಗೆ ಹೇಳಿದರು. ಸಮಸ್ತವೂ ವಾಸುದೇವನೇ ಎಂದು ಸದ್ಭಕ್ತ ನಂಬುತ್ತಾನೆ. ಶಿಷ್ಯನೂ ವಾಸುದೇವನೇ ಎಂದು ಗುರು ಭಾವಿಸುತ್ತಾನೆ. ಕೃಷ್ಣ ಗುರು ಶಿಷ್ಯರಿಬ್ಬರೂ ತನ್ನ ಪ್ರಾಣ ಆತ್ಮ ಎಂದು ಭಾವಿಸುತ್ತಾನೆ.

ವಾಕ್ಕಿನಲ್ಲಿ, ಶಾರೀರಿಕವಾಗಿ, ಮನಸ್ಸಿನಲ್ಲಿ, ಸದಾಕಾಲದಲ್ಲೂ, ಸರ್ವ ದೇಶಗಳಲ್ಲೂ ಕೃಷ್ಣನನ್ನೇ ತನ್ನಲ್ಲಿ ತುಂಬಿಕೊಂಡಿರುವವರನ್ನು ಕೃಷ್ಣ ಜ್ಞಾನಿಗಳು, ತತ್ವದರ್ಶಿಗಳು ಎಂದು ಹೇಳಿದ್ದಾನೆ. ಅದರಿಂದ ಅವರ ಬಳಿಸಾರಲು ಹೇಳಿದ.

ಸಮಾಧಿ ಮಂದಿರ ನಿರ್ಮಾಣ

ಆಗರ್ಭ ಶ್ರೀಮಂತ ಬಾಪೂ ಸಾಹೇಬ್ ಬೂಟಿ ಬಾಬಾರ ಸನ್ನಿಹಿತ ಭಕ್ತರಾದಮೇಲೆ, ಸಂಸಾರದೊಡನೆ ಶಿರಡಿಯಲ್ಲೇ ನೆಲೆಗೊಂಡರು. ಅವರಿಗೆ ತಮ್ಮದೇ ಆದ ಭವನವೊಂದನ್ನು ಶಿರಡಿಯಲ್ಲಿ ನಿರ್ಮಿಸಬೇಕೆಂಬ ಆಲೋಚನೆ ಬಂತು. ಬಾಬಾರ ಅನುಮತಿಗೋಸ್ಕರ ಸರಿಯಾದ ಸಮಯಕ್ಕಾಗಿ ಕಾಯುತ್ತಿದ್ದರು. ಒಮ್ಮೆ, ಸಾಠೆ ವಾಡಾದಲ್ಲಿ ನಿದ್ರಿಸುತ್ತಿದ್ದಾಗ. ಅವರಿಗೊಂದು ಕನಸಾಯಿತು. ಅದರಲ್ಲಿ ಬಾಬಾ ಕಾಣಿಸಿಕೊಂಡು, "ನಿನ್ನದೇ ಆದ ಒಂದು ವಾಡಾ ಕಟ್ಟು. ಅದರಲ್ಲಿ ದೇವಸ್ಥಾನವೂ ಇರಲಿ" ಎಂದು ಹೇಳಿದರು. ಸರ್ವಜ್ಞರಾದ ಬಾಬಾರಿಗೆ ಬೂಟಿಯವರ ಆಸೆ ತಿಳಿದಿತ್ತು. ಸರ್ವರಿಗೂ ಉಪಯೋಗ ವಾಗುವಂತಹ ಆಲೋಚನೆಗಳಿಗೆ ಬಾಬಾ ಯಾವಾಗಲೂ ಉತ್ತೇಜನ ಕೊಡುತ್ತಿದ್ದರು.

ಅದೇ ಸಮಯದಲ್ಲಿ, ಶ್ಯಾಮಾರೂ ಅಲ್ಲೇ ಮಲಗಿದ್ದರು. ಅವರಿಗೂ ಬಾಬಾ ಕನಸಿನಲ್ಲಿ ಕಾಣಿಸಿಕೊಂಡು, ಬೂಟಿಗೆ ಹೇಳಿದ ಮಾತನ್ನೇ ಹೇಳಿದರು. ಬೂಟಿ ಎಚ್ಚರಗೊಂಡು ನೋಡಿದರೆ, ಶ್ಯಾಮಾ ಕಣ್ಣೀರು ಸುರಿಸುತ್ತಾ ಕುಳಿತ್ತಿದ್ದುದು ಕಾಣಿಸಿತು. ಏಕೆ ಅಳುತ್ತೀದ್ದಿರೆಂದು ಕೇಳಿದ್ದಕ್ಕೆ ಶ್ಯಾಮಾ, "ಬಾಬಾ ಕನಸಿನಲ್ಲಿ ಕಾಣಿಸಿಕೊಂಡು ವಾಡಾ ಒಂದನ್ನು ದೇವಾಲಯದ ಸಹಿತ ಕಟ್ಟು. ಅಲ್ಲಿ ನಾನು ಇದ್ದು ಎಲ್ಲರ ಆಸೆಗಳನ್ನೂ ತೀರಿಸುತ್ತೇನೆ" ಎಂದರು. ನನಗೆ ಮಾತುಗಳನ್ನು ಕೇಳಿ, ಕಣ್ಣೀರು ಧಾರೆಯಾಗಿ ಸುರಿಯಿತು. ಅದನ್ನು ನೆನಸಿಕೊಂಡು ಅಳುತ್ತಿದ್ದೇನೆ" ಎಂದರು. ಇಬ್ಬರಿಗೂ ಒಂದೇ ರೀತಿಯ ಕನಸಾದುದ್ದನ್ನು ಕಂಡು ಅವರಿಗೆ ಆಶ್ಚರ್ಯವಾಯಿತು.
ಹಣದ ಅಡಚಣೆ ಇಲ್ಲದೆ ಇದ್ದುದರಿಂದ, ಬಾಬಾ ಹೇಳಿದಂತೆ ದೇವಾಲಯ ಕೂಡಿದ ಭವನ ನಿರ್ಮಾಣಕ್ಕೆ ಬೂಟಿ ಅನುವಾದರು. ಶ್ಯಾಮಾರ ಜೊತೆ ಗೂಡಿ ಭವನದ ನಕ್ಷೆಯೊಂದನ್ನು ತಯಾರಿಸಿದರು. ಅದನ್ನು ಬಾಬಾರ ಬಳಿಗೆ ತೆಗೆದುಕೊಂಡು ಹೋಗಿ ಅವರ ಅನುಮತಿಗೋಸ್ಕರ ಅವರ ಮುಂದಿಟ್ಟರು. ಬಾಬಾ ತಮ್ಮ ಆಶೀರ್ವಾದಗಳೊಡನೆ ಅದಕ್ಕೆ ಅನುಮತಿ ಕೊಟ್ಟರು. ಶ್ಯಾಮಾರ ಮೇಲುಸ್ತುವಾರಿಯಲ್ಲಿ ನಿರ್ಮಾಣ ಕಾರ್ಯ ತಕ್ಷಣವೇ ಆರಂಭಮಾಡಿ, ನೆಲ ಅಂತಸ್ತಿನ ನಿರ್ಮಾಣ ಮುಗಿಸಿದರು. ನಿರ್ಮಾಣ ಕಾರ್ಯ ನಡೆಯುತ್ತಿರುವಾಗ, ಲೆಂಡಿಗೆ ಹೋಗಿಬರುವಾಗ, ಬಾಬಾ ತಮ್ಮ ಸಲಹೆಗಳನ್ನು ಹೇಳುತ್ತಿದ್ದರು. ಅವನ್ನು ಒಳಪಡಿಸಿ ನಿರ್ಮಾಣ ಕಾರ್ಯ ಮುಂದುವರೆಸುತ್ತಿದ್ದರು.

ಬೂಟಿ ಸಾಹೇಬರು ನಿರ್ಮಾಣ ಕಾರ್ಯ ನಡೆಯುತ್ತಿದ್ದ ಸ್ಥಳದಲ್ಲೇ ನಿಂತು, ಕಾರ್ಯ ವೀಕ್ಷಣೆ ಮಾಡುತ್ತಿದ್ದರು. ಒಂದು ದಿನ, ಅರ್ಧ ತಯಾರಾಗಿದ್ದ ಕಟ್ಟಡ ನೋಡಿ, ಕಟ್ಟಡದಲ್ಲಿ ಒಂದು ಅಂಗಳ ಮಾಡಿ, ಅಲ್ಲೊಂದು ವೇದಿಕೆಯನ್ನು ಕಟ್ಟಿ, ಅದರಮೇಲೆ ಮುರಳೀಧರನ ಪ್ರತಿಮೆಯನ್ನು ಸ್ಥಾಪಿಸಬೇಕು ಎನ್ನುವ ಯೋಚನೆಯೊಂದು ಅವರಿಗೆ ಬಂತು. ವಿಷಯವಾಗಿ, ಬಾಬಾರ ಅಭಿಪ್ರಾಯ ತಿಳಿದುಕೊಳ್ಳುವಂತೆ ಶ್ಯಾಮಾರನ್ನು ಕೇಳಿಕೊಂಡರು. ಬಾಬಾ ಅಲ್ಲಿಗೆ ಬಂದಾಗ, ಬೂಟಿಯವರ ಯೋಚನೆಯನ್ನು ಬಾಬಾರಿಗೆ ತಿಳಿಸಿ, ಅದು ಅವರಿಗೆ ಒಪ್ಪಿಗೆಯೇ ಎಂದು ಶ್ಯಾಮಾ ಕೇಳಿದರು. ಬಾಬಾ ಅದಕ್ಕೆ ತಕ್ಷಣವೇ ತಮ್ಮ ಸಮ್ಮತಿ ಕೊಟ್ಟರು. ಕಟ್ಟಡ ರೂಪು ಗೊಳ್ಳುತ್ತಿರುವ ರೀತಿಯನ್ನು ನೋಡಿ ಬಾಬಾ, "ವಾಡಾ ಪೂರ್ತಿಯಾದಮೇಲೆ ನಾನೇ ಇಲ್ಲಿಗೆ ಬರುತ್ತೇನೆ. ನಾವೇ ಅದನ್ನು ಉಪಯೋಗಿಸಿಕೊಳ್ಳೋಣ. ನಾವೆಲ್ಲಾ ಅಲ್ಲಿಯೇ ಇದ್ದುಕೊಂಡು ಆಟವಾಡುತ್ತಾ ಸಂತೋಷವಾಗಿರೋಣ" ಎಂದರು. ಗುಡಿಯ ತಳಪಾಯ ಹಾಕಲು ಅದು ಒಳ್ಳೆಯ ಮುಹೂರ್ತವೇ ಎಂದು ಬಾಬಾರನ್ನು ಕೇಳಿದ್ದಕ್ಕೆ ಅವರು ಸರಿಯಾಗಿದೆ ಎಂದರು. ತಕ್ಷಣವೇ ಶ್ಯಾಮಾ ತೆಂಗಿನ ಕಾಯೊಂದನ್ನು ತಂದು ಅಲ್ಲಿ ಅದನ್ನು ಒಡೆದು ಕಾರ್ಯವನ್ನಾರಂಭಿಸಿದರು.

ನಿರ್ಮಾಣ ಕಾರ್ಯ ಶೀಘ್ರವಾಗಿ ಪೂರ್ತಿಯಾಯಿತು. ಅಮೃತ ಶಿಲೆಯ ಕೃಷ್ಣನ ವಿಗ್ರಹ ತಯಾರುಮಾಡಲು ವ್ಯವಸ್ಥೆ ಮಾಡಲಾಯಿತು. ಆದರೆ ಅಂದು ಕೊಂಡಂತೆ ನಡೆಯುವುದಕ್ಕೆ ಮುಂಚೆಯೇ, ಎಲ್ಲವೂ ಬದಲಾದವು. ಬಾಬಾರು ಅಸ್ವಸ್ಥರಾಗಿ ಅವರ ಪರಿಸ್ಥಿತಿ ಬಿಗಡಾಯಿಸಿತು. ಬಾಪೂ ಸಾಹೇಬರು ಇದರಿಂದ ಬಹಳ ವ್ಯಥಿತರಾದರು. ಬಾಬಾರೇ ಇಲ್ಲದೆ ಹೋದರೆ, ವಾಡಾ ಏತಕ್ಕೆ? ಅದನ್ನು ಪವಿತ್ರಗೊಳಿಸುವವರು ಯಾರು? ಎಂದೆಲ್ಲಾ ಯೋಚನೆಗಳು ಬಂದವು. ಬಾಬಾರು ಆಲ್ಲಿ ವಾಸಿಸುತ್ತಾರೆ ಎಂಬ ಆಸೆಯಿಂದ ವಾಡಾವನ್ನು ಅಂದವಾಗಿ ಕಟ್ಟಿಸಿದ್ದರು. ಬಾಬಾರೇ ಇಲ್ಲದೆ ಹೋದರೆ, ವಾಡಾ ವಿಗ್ರಹವಿಲ್ಲದ ದೇವಸ್ಥಾನದಂತೆ ಆಗುವುದು. ಬೂಟಿಯವರ ಯೋಚನೆಗಳನ್ನೆಲ್ಲಾ ಬಲ್ಲ ಬಾಬಾ ತಮ್ಮ ಮಹಾಸಮಾಧಿಗೆ ಮುಂಚೆ, "ನನ್ನನ್ನು ಬೂಟಿ ವಾಡಾಕ್ಕೆ ತೆಗೆದುಕೊಂಡುಹೋಗಿ" ಎಂದು ಹೇಳಿದರು. ಬಾಪೂ ಸಾಹೇಬರಿಗೆ ಅದೊಂದು ಸಣ್ಣ ಸಮಾಧಾನ. ತಾವು ಕಟ್ಟಿಸಿದ ವಾಡಾದಲ್ಲಿ ಬಾಬಾ ವಾಸಿಸುತ್ತಾರೆ ಎಂದುಕೊಂಡಿದ್ದರೇ ಹೊರತು, ಅದು ಅವರ ಸಮಾಧಿ ಮಂದಿರವಾಗುತ್ತದೆ ಎಂದು ಕೊಂಡಿರಲಿಲ್ಲ. ಎಲ್ಲಿ ಕೃಷ್ಣನ ವಿಗ್ರಹವನ್ನು ಇಡಬೇಕೆಂದು ಕೊಂಡಿದ್ದರೋ ಅಲ್ಲಿ, ಬಾಬಾರ ಪವಿತ್ರ ಶರೀರವನ್ನು ಸಮಾಧಿ ಮಾಡಲಾಯಿತು. ಬಾಬಾರೇ ಮುರಳೀಧರರಾದರು. ವಾಡಾ ಬಾಬಾರ ಸಮಾಧಿ ಮಂದಿರವಾಯಿತು. ಬಾಬಾರು ಹೇಳಿದ್ದ "ನಾವೆಲ್ಲರೂ ಅಲ್ಲಿ ಸಂತೋಷ ವಾಗಿರೋಣ" ಎಂಬ ಮಾತು ನಿಜವಾಯಿತು.

ಬಾಬಾರಿಗೆ ಶಾಶ್ವತ ವಿಶ್ರಾಮ ಧಾಮವನ್ನು ಕಟ್ಟಿಸಿದ ಬಾಪೂಸಾಹೇಬ ಬೂಟಿಯವರೇ ಧನ್ಯರು! ಮತ್ತೊಮ್ಮೆ ಸದ್ಗುರು ಸಾಯಿನಾಥನಿಗೆ ನಮಸ್ಕರಿಸಿ ಜೈಕಾರ ಹೇಳೋಣ.

ಶ್ರೀ ಸಚ್ಚಿದಾನಂದ ಸದ್ಗುರು ಸಾಯಿನಾಥ ಮಹರಾಜಕೀ ಜೈ!

ಇದರೊಂದಿಗೆ ಗೀತೆಯ ಶ್ಲೋಕದ ಅಂತರಾರ್ಥ, ಸಮಾಧಿ ಮಂದಿರ ನಿರ್ಮಾಣ ಮತ್ತು ಇತರ ವಿಷಯಗಳನ್ನು ಕುರಿತು ಹೇಳುವ ಮುವ್ವತ್ತೊಂಭತ್ತು ಮತ್ತು ಐವತ್ತನೆಯ ಅಧ್ಯಾಯಗಳು ಮುಗಿಯಿತು. ಮುಂದಿನ ಅಧ್ಯಾಯದಲ್ಲಿ ಹೇಮಾಡ್ ಪಂತ್, ಬಾಬಾರ ಕಥೆಗಳು, ಶ್ರೀಮತಿ ದೇವ್ ಅವರ ಉದ್ಯಾಪನೆ, ಹೇಮಾಡ್ ಪಂತರ ಮನೆಗೆ ಬಾಬಾ ಹೋಗಿದ್ದು ಇತ್ಯಾದಿ ವಿಷಯಗಳನ್ನು ಹೇಳುತ್ತಾರೆ.

||ಸದ್ಗುರು ಶ್ರೀ ಸಾಯಿನಾಥಾರ್ಪಣಮಸ್ತು||ಶುಭಂ ಭವತು||
||ಓಂ ಶಾಂತಿಃ ಶಾಂತಿಃ ಶಾಂತಿಃ||


No comments:

Post a Comment