Wednesday, January 11, 2012

||ಮುವ್ವತ್ತೈದನೆಯ ಅಧ್ಯಾಯ||


||ಶ್ರೀ ಸಾಯಿ ಸಚ್ಚರಿತ್ರೆ||
||ಮುವ್ವತ್ತೈದನೆಯ ಅಧ್ಯಾಯ||
||ವಿಭೂತಿ ಪ್ರಸಾದದ ಮಹಿಮೆ – 3||
ಶ್ರೀ ಗಣೇಶಾಯ ನಮಃ ಶ್ರೀ ಸರಸ್ವತಯೇ ನಮಃ
ಶ್ರೀ ವೆಂಕಟೇಶಾಯ ನಮಃ ಶ್ರೀ ಸಾಯಿನಾಥಾಯ ನಮಃ
ಶ್ರೀ ಸದ್ಗುರುಭ್ಯೋನ್ನಮಃ

ಅಧ್ಯಾಯದಲ್ಲಿ ಹೇಮಾಡ್ ಪಂತ್, ಕಾಕಾ ಮಹಾಜನಿಯ ಸ್ನೇಹಿತ, ಯಜಮಾನ, ಬಾಂದ್ರಾ ವ್ಯಕ್ತಿಯ ಅನಿದ್ರತೆ, ಬಾಲಾ ಪಾಟೀಲ್ ನೇವಾಸ್ಕರ್ ಇತ್ಯಾದಿ ವಿಷಯಗಳನ್ನು ಕುರಿತು ಹೇಳುತ್ತಾರೆ.

ಸಂಕುಚಿತ ಮನೋವೃತ್ತಿ

ಒಂದೇ ತತ್ವಕ್ಕೆ ಅಂಟಿಕೊಂಡಿರುವ ಸಂಕುಚಿತ ಮನೋಭಾವಕ್ಕೆ, ಪಂಥಾಭಿಮಾನ ಎನ್ನುತ್ತಾರೆ. ಉದಾಹರಣೆಗೆ, ನಿರ್ಗುಣ ಬ್ರಹ್ಮನನ್ನು ಆರಾಧಿಸುವ ಜನ ಸಗುಣ ಬ್ರಹ್ಮನ ಆರಾಧನೆ ಮಾಡುವವರನ್ನು ತುಚ್ಛ ಭಾವದಿಂದ ನೋಡುತ್ತಾ, ತಾವು ಮಾಡುವ ರೀತಿಯ ಆರಾಧನೆಯೇ ಶ್ರೇಷ್ಠ ಎಂದು ಹೇಳಿಕೊಳ್ಳುತ್ತಾರೆ. ಅಂತಹ ಕಣ್ಣುಪಟ್ಟು ಕಟ್ಟಿಕೊಂಡು ನೋಡುವ ವಿಧಾನಗಳು ಆಧ್ಯಾತ್ಮದ ಪ್ರಗತಿಗೆ ಅಡ್ಡಗಳು. ಪ್ರತಿಯೊಬ್ಬನಿಗೂ ತನಗೆ ತೋರಿದ ರೀತಿಯಲ್ಲಿ, ತನ್ನ ಅನುಕೂಲ, ಅನಾನುಕೂಲಗಳಿಗೆ ತಕ್ಕಂತೆ ತನ್ನ ದಾರಿಯನ್ನು ಕಂಡುಕೊಳ್ಳಲು ಸ್ವಾತಂತ್ರ್ಯವಿದೆ. ಸಂತರೂ ಮನುಷ್ಯರೇ ಅಲ್ಲವೇ! ಏನು ಮಹಾ! ಎಂದು ಹೇಳುವವರೂ ಇದ್ದಾರೆ. ಆದರೆ ಎಲ್ಲ ಸಂತರೂ ಹೇಳುವುದು ಒಂದೇ - ಮಾನವ ದೇಹದಲ್ಲೇ ದೇವರನ್ನು ಸಾಕ್ಷಾತ್ಕರಿಸಿ ಕೊಳ್ಳಲು ಸಾಧ್ಯ, ಎಂದು. ದಕ್ಷಿಣೆಯ ಬಗ್ಗೆಯೂ ಅಸಹನೆಯ ಮಾತುಗಳು ಹೇಳಲ್ಪಟ್ಟಿವೆ. ಸಂತರು ದಕ್ಷಿಣೆ ತೆಗೆದುಕೊಳ್ಳುವುದಾದರೆ ಅವರನ್ನು ಸಂತರೆಂದು ಕರೆಯುವುದು ಹೇಗೆ? ಅವರ ಸಂತತ್ವ ಏನಾಯಿತು? ಎಂದು ಕೇಳುತ್ತಾರೆ. ದಕ್ಷಿಣೆಯ ಮೀಮಾಂಸೆಯಲ್ಲಿ ನಾವು ನೋಡಿದಂತೆ ಸಂತರು ದಕ್ಷಿಣೆ ತೆಗೆದುಕೊಳ್ಳುವುದು ಹಣಕ್ಕಾಗಿ ಅಲ್ಲ. ದಕ್ಷಿಣೆಯ ರೂಪದಲ್ಲಿ ಅವರು ನಮ್ಮ ಪೂರ್ವ ಜನ್ಮಕೃತ ದುಷ್ಕರ್ಮ ಫಲಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಇನ್ನೂ ಕೆಲವರು ನಾನು ಶಿರಡಿಗೆ ಹೋಗುವುದಿಲ್ಲ. ಹೋಗಬೇಕಾಗಿ ಬಂದರೂ ನಾನು ಮಾನವ ಮಾತ್ರನಿಗೆ ತಲೆಬಾಗುವುದಿಲ್ಲ. ದಕ್ಷಿಣೆಯನ್ನೂ ಕೊಡುವುದಿಲ್ಲ. ಎಂದು ಗರ್ವದಿಂದ ಹೇಳುತ್ತಾರೆ. ಆದರೆ ಅಂಥವರೇ ತಮ್ಮ ಕರೆ ಬಂದಾಗ, ಶಿರಡಿಗೆ ಹೋಗಿ ಪ್ರೀತಿಯ ತವರಾದ ಬಾಬಾರ ಚರಣಾರವಿಂದಗಳಲ್ಲಿ ಶಿರಸಾ ನಮಿಸಿ, ದಕ್ಷಿಣೆ ಕೊಡುತ್ತಾರೆ. ಅಂತಹ ಕೆಲವು ಪ್ರಸಂಗಗಳನ್ನು ನೋಡೋಣ.

ಕಾಕಾ ಮಹಾಜನಿ ಬಾಬಾರ ಅವಿಚ್ಛಿನ್ನ ಭಕ್ತರು. ಅವರಿಗೆ ವಿಷಯದಲ್ಲಿ ಭಿನ್ನಾಭಿಪ್ರಾಯವಿದ್ದ ಸ್ನೇಹಿತರೂ ಇದ್ದರು. ಅವರಲ್ಲೊಬ್ಬರು ವಿಗ್ರಹಾರಾಧನೆ ಸರಿಯಲ್ಲವೆಂದೂ, ನಿರ್ಗುಣ ರೂಪದಲ್ಲಿ ದೇವರನ್ನು ಪೂಜಿಸಿದರೆ ಮಾತ್ರ ಆತ್ಮ ಸಾಕ್ಷಾತ್ಕಾರ ಸಾಧಿಸಲು ಸಾಧ್ಯ, ಎನ್ನುವ ಖಚಿತವಾದ ಅಭಿಪ್ರಾಯವಿದ್ದವರು. ಅವರು ಸಂತರಿಗೆ ದಕ್ಷಿಣೆ ಕೊಡುವುದನ್ನು ಒಪ್ಪುತ್ತಿರಲಿಲ್ಲ. ಮಹಾಜನಿ ಒಂದುಸಲ ಶಿರಡಿಗೆ ಹೋಗುವಾಗ, ಅವರನ್ನು ತಮ್ಮ ಜೊತೆಗೆ ಬರುವಂತೆ ಕರೆದರು. ಸ್ನೇಹಿತ ತನ್ನ ಎರಡು ನಿಬಂಧನೆಗಳಿಗೆ ಒಪ್ಪಿಕೊಂಡರೆ ಮಾತ್ರ, ತಾನು ಬರುತ್ತೇನೆಂದು ಹೇಳಿದರು. ನಿಬಂಧನೆಗಳು ಹೀಗಿತ್ತು: ) ನಾನು ಬಾಬಾರಿಗೆ ನಮಸ್ಕರಿಸುವುದಿಲ್ಲ. ) ನಾನು ಅವರಿಗೆ ದಕ್ಷಿಣೆ ಕೊಡುವುದಿಲ್ಲ. ಕಾಕಾ ಎರಡು ನಿಬಂಧನೆಗಳಿಗೆ ಒಪ್ಪಿ, ಅವರ ಜೊತೆಯಲ್ಲಿ ಶಿರಡಿ ಸೇರಿ, ಮಸೀದಿಗೆ ಹೋದರು. ಅವರು ಇನ್ನೂ ಮಸೀದಿಯ ಒಳಕ್ಕೆ ಕಾಲಿಡುತ್ತಿರುವಂತೆಯೇ, ಬಾಬಾ ಸ್ನೇಹಿತರನ್ನು, "ಬನ್ನಿ, ಬನ್ನಿ. ಒಳಕ್ಕೆ ಬನ್ನಿ" ಎಂದು ಸ್ವಾಗತಿಸಿದರು. ಅವರ ಕರೆಗಿಂತ, ಕರೆದ ಧ್ವನಿ ಮುಖ್ಯ. ಕಾಕಾ ಸ್ನೇಹಿತರಿಗೆ ಧ್ವನಿ ಎಷ್ಟು ಇಂಪಾಗಿತ್ತೆಂದರೆ, ಅದು ತನ್ನ ತಂದೆಯವರ ಧ್ವನಿಯಂತೆ ಕೇಳಿಸಿ, ತಮ್ಮ ತಂದೆಯವರ ನೆನಪು ತಂದುಕೊಟ್ಟಿತು. ತಮ್ಮ ತಂದೆಯವರೇ ತಮ್ಮನ್ನು ಕರೆಯುತ್ತಿದ್ದಾರೆಂದು ಭಾಸವಾಯಿತು. ಸ್ನೇಹಿತ ಧ್ವನಿಯನ್ನು ಕೇಳಿದ ಕೂಡಲೇ ಮಿಕ್ಕೆಲ್ಲವನ್ನೂ ಮರೆತು, ತನ್ನ ನಿಬಂಧನೆಯನ್ನೂ ಮರೆತು, ನೇರವಾಗಿ ಬಾಬಾರ ಬಳಿಗೆ ಹೋಗಿ, ಅವರ ಪಾದಗಳನ್ನು ಹಿಡಿದು, ತಮ್ಮ ತಲೆ ಅದರ ಮೇಲಿಟ್ಟು, ಆನಂದ ಬಾಷ್ಪಗಳಿಂದ ಅವನ್ನು ತೋಯಿಸಿದರು.

ಕಾಕಾ ಮಹಾಜನಿ ನಮಸ್ಕಾರ ಮಾಡಿದಾಗ, ಬಾಬಾ ಅವರನ್ನು ದಕ್ಷಿಣೆ ಕೇಳಿದರು. ಮಧ್ಯಾನ್ಹದ ಸಮಯದಲ್ಲಿ, ಅವರು ಶಿರಡಿಯಿಂದ ಹೊರಡಲು ಅನುಮತಿ ಕೇಳಲು ಹೋದಾಗ, ಕಾಕಾರನ್ನು ಮಾತ್ರವೇ ಬಾಬಾ ದಕ್ಷಿಣೆ ಕೇಳಿದರು. ಎರಡುಸಲ ದಕ್ಷಿಣೆ ಕೇಳಿದಾಗಲೂ, ಅವರು ಕಾಕಾರನ್ನು ಮಾತ್ರ ಕೇಳಿದರೇ ಹೊರತು, ಅವರ ಸ್ನೇಹಿತರನ್ನು ಕೇಳಲಿಲ್ಲ. ಸ್ನೇಹಿತರಿಗೆ ಇದು ವಿಚಿತ್ರವೆನಿಸಿತು. ನಾನು ಕಾಕಾರ ಜೊತೆಯಲ್ಲಿ ಬಂದಿದ್ದೇನೆ, ಬಾಬಾ ನನ್ನನ್ನೂ ದಕ್ಷಿಣೆ ಕೇಳಬೇಕಾಗಿತ್ತು ಎಂದುಕೊಂಡು, ಕಾಕಾರನ್ನು ಕೇಳಿದರು, "ಬಾಬಾ ಎರಡುಸಲವೂ ನಿಮ್ಮನ್ನೇ ದಕ್ಷಿಣೆ ಕೇಳಿದರು. ನನ್ನನ್ನು ಏಕೆ ಕೇಳಲಿಲ್ಲ?" ಅದಕ್ಕೆ ಕಾಕಾ, “ನೀವೇ ಬಾಬಾರನ್ನು ಕೇಳಿಎಂದರು. ಸ್ನೇಹಿತರು ಬಾಬಾರನ್ನು, "ನಾನೂ ದಕ್ಷಿಣೆ ಕೊಡಬೇಕೆ?" ಎಂದು ಕೇಳಿದಾಗ, ಬಾಬಾ, "ನಿನಗೆ ದಕ್ಷಿಣೆ ಕೊಡುವ ಮನಸ್ಸಿರಲಿಲ್ಲ. ಅದಕ್ಕೇ ಕೇಳಲಿಲ್ಲ. ಈಗ ನಿನಗೆ ಕೊಡಬೇಕೆನಿಸಿದರೆ ಕೊಡಬಹುದು" ಎಂದರು. ಅವರು ಕಾಕಾ ಕೊಟ್ಟಿದ್ದ ಮೊತ್ತದಷ್ಟೇ -೧೭ ರೂಪಾಯಿ- ಕೊಟ್ಟರು. ಸಮಯದಲ್ಲಿ, ಅವರಿಗೆ ತಮ್ಮ ಎರಡನೆಯ ನಿಬಂಧನೆಯೂ ಮರೆತುಹೋಗಿತ್ತು. ಆಗ ಬಾಬಾ ಅವರಿಗೆ ಬುದ್ಧಿಮಾತು ಹೇಳಿದರು, "ನಮ್ಮಿಬ್ಬರ ಮಧ್ಯೆ ಇರುವ ಗೋಡೆಯನ್ನು ತೊಡೆದುಹಾಕು. ಆಗಲೇ ನಾವಿಬ್ಬರೂ ಒಬ್ಬರನ್ನೊಬ್ಬರು ನೋಡಿಕೊಳ್ಳಬಹುದು." ನಂತರ ಅವರು ಶಿರಡಿ ಬಿಡಲು ಬಾಬಾ ಅನುಮತಿ ಕೊಟ್ಟರು. ಅವರು ಹೊರಡುವ ಸಮಯದಲ್ಲಿ ಮೋಡಗಳು ಮುಚ್ಚಿ ಜೋರಾಗಿ ಮಳೆ ಬರುವ ಸೂಚನೆಗಳಿತ್ತು. ಆದರೆ ಬಾಬಾ ಅವರಿಗೆನಿಮ್ಮ ಪ್ರಯಾಣ ಯಾವ ತೊಂದರೆಯೂ ಇಲ್ಲದೆ ಸುಖಕರವಾಗಿರುತ್ತದೆಎಂದು ಭರವಸೆ ನೀಡಿದರು. ಇಬ್ಬರೂ ಸುಖ ಪ್ರಯಾಣ ಮಾಡಿ, ಕ್ಷೇಮವಾಗಿ ಬೊಂಬಾಯಿ ಸೇರಿಕೊಂಡರು. ಸ್ನೇಹಿತ ತನ್ನ ಮನೆಗೆ ಹೋಗಿ, ಬಾಗಿಲು ತೆರೆದ ತಕ್ಷಣ ಗುಬ್ಬಿಯೊಂದು ಹೊರಕ್ಕೆ ಹಾರಿಹೋಯಿತು. ಎರಡು ಗುಬ್ಬಿಗಳು ಒಳಗೆ ಸತ್ತು ಬಿದ್ದಿದ್ದವು. ತಾವು ಕಿಟಕಿಯನ್ನು ತೆರೆದಿಟ್ಟಿದ್ದಿದ್ದರೆ ಅವು ಸಾಯುತ್ತಿರಲಿಲ್ಲವೇನೊ ಎಂದುಕೊಂಡರು. ಆದರೂ ವಿಧಿಯಂತೆ ಅವು ಸತ್ತವು. ಇನ್ನೊಂದನ್ನು ಉಳಿಸಲೆಂದೇ ಬಾಬಾ ತಮ್ಮನ್ನು ಬೇಗ ಕಳುಹಿಸಿದರು ಎಂದುಕೊಂಡರು.

ಕಾಕಾ ಮಹಾಜನಿಯ ಯಜಮಾನ

ಕಾಕಾ ಮಹಾಜನಿ ಬೊಂಬಾಯಿಯಲ್ಲಿ ಠಕ್ಕರ್ ಧರಮಸೆ ಜೇಠಾಭಾಯಿ ನ್ಯಾಯವಾದಿಗಳ ಕಚೇರಿಯಲ್ಲಿ ಮೇನೇಜರ್ ಆಗಿ ಕೆಲಸ ಮಾಡುತ್ತಿದ್ದರು. ಮೇನೇಜರ್ ಮತ್ತು ಯಜಮಾನ ಬಹಳ ಅನ್ಯೋನ್ಯವಾಗಿದ್ದರು. ಮಹಾಜನಿ ಆಗಾಗ ಶಿರಡಿಗೆ ಹೋಗಿ, ಹಿಂತಿರುಗಲು ಬಾಬಾರ ಅನುಮತಿ ದೊರೆಯಲಿಲ್ಲ ಎಂಬ ಕಾರಣದಿಂದ ಶಿರಡಿಯಲ್ಲಿ ಅನಿರ್ದಿಷ್ಟವಾಗಿ ನಿಲ್ಲುತ್ತಿದ್ದುದು, ಠಕ್ಕರ್ ಗಮನಿಸಿದ್ದರು. ಠಕ್ಕರ್ ಇದಕ್ಕೆ ಪರೋಕ್ಷವಾಗಿ ಅನುಮತಿಕೊಟ್ಟಿದ್ದರೂ, ಕುತೂಹಲಿಗಳಾಗಿ, ಕಾಕಾ ಮಹಾಜನಿ ಇಷ್ಟೊಂದು ಗೌರವಿಸುವ ಬಾಬಾರನ್ನು ಒಂದುಸಲ ಪರೀಕ್ಷಿಸ ಬೇಕೆಂದು ಕೊಳ್ಳುತ್ತಿದ್ದರು. ಒಂದುಸಲ, ಶಿಮ್ಗಾ ರಜಾ ದಿನಗಳಲ್ಲಿ, ಕಾಕಾ ಮಹಾಜನಿಯವರೊಡನೆ ಶಿರಡಿಗೆ ಹೋಗಲು ನಿರ್ಧರಿಸಿದರು. ಕಾಕಾ ಮಹಾಜನಿ ತಮ್ಮೊಡನೆ ಹಿಂತಿರುಗುವುದು ಖಚಿತವಿಲ್ಲವೆಂದು ಬಲ್ಲ ಅವರು, ಇನ್ನೊಬ್ಬ ಸ್ನೇಹಿತರನ್ನು ತಮ್ಮೊಡನೆ ಕರೆದುಕೊಂಡುಹೋಗಲು ಯೋಚಿಸಿದರು. ಹಾಗೆ ಅವರು ಮೂವರೂ ಸೇರಿ ಶಿರಡಿಗೆ ಹೊರಟರು. ದೇವರನ್ನು ಅಥವಾ ಸಂತರನ್ನು ಕಾಣಲು ಹೋಗುವಾಗ ಬರಿಗೈಯಲ್ಲಿ ಹೋಗಬಾರದೆಂದು, ಎರಡು ಸೇರು ಬೀಜದ್ರಾಕ್ಷೆಯನ್ನು ಕೊಂಡು ಎಲ್ಲರೂ ಶಿರಡಿ ಸೇರಿದರು. ಶಿರಡಿಗೆ ಯಾರೇ ಹೋಗಲಿ, ಯಾವ ಭಾವನೆಯಿಂದ ಹೋದರೋ, ಭಾವನೆಗೆ ತಕ್ಕ ಉತ್ತರ ದೊರೆತು, ಅವರು ತೃಪ್ತಿಯಿಂದ ಹಿಂತಿರುಗುತ್ತಿದ್ದರು.

ಮೂವರೂ ಶಿರಡಿ ಸೇರಿ ಬಾಬಾರ ದರ್ಶನಕ್ಕೆ ಮಸೀದಿಗೆ ಹೋದರು. ಮಸೀದಿಯಲ್ಲಿ ಕಾಲಿಡುತ್ತಲೇ ಅಲ್ಲಿ, ತರ್ಖಡರನ್ನು ಕಂಡ ಠಕ್ಕರರಿಗೆ ಆಶ್ಚರ್ಯವಾಯಿತು. ಠಕ್ಕರರು ಅವರನ್ನು, "ನೀವು ಶಿರಡಿಗೆ ಬಂದದ್ದೇಕೆ?" ಎಂದು ಕೇಳಿದರು. ತರ್ಖಡರು, "ಬಾಬಾ ದರ್ಶನಕ್ಕೆ" ಎಂದರು. "ಇಲ್ಲಿ ಪವಾಡಗಳು ನಡೆಯುತ್ತವೆ ಎಂದು ಕೇಳಿದ್ದೇನೆ. ಅದು ನಿಜವೇ?" ಎಂದು ಠಕ್ಕರರು ಕೇಳಿದರು. ಅದಕ್ಕೆ ತರ್ಖಡರು, "ನಾನು ಪವಾಡಗಳನ್ನು ನೋಡಲು ಬಂದಿಲ್ಲ. ನಾನು ಬಂದಿರುವುದು ಬಾಬಾರ ದರ್ಶನಕ್ಕೆ. ಪವಾಡಗಳನ್ನು ನೋಡಲು ಬಂದಿದ್ದರೆ, ಪವಾಡಗಳು ಆಗುತ್ತವೆ" ಎಂದರು. ಅಷ್ಟರಲ್ಲಿ ಕಾಕಾ ಮಹಾಜನಿ ಬಾಬಾರಿಗೆ ದ್ರಾಕ್ಷೆ ಹಣ್ಣುಗಳನ್ನು ಅರ್ಪಿಸಿ ನಮಸ್ಕಾರ ಮಾಡಿದ್ದರು. ಬಾಬಾ ಹಣ್ಣುಗಳನ್ನು ಎಲ್ಲರಿಗೂ ಹಂಚಲು ಹೇಳಿದರು. ಠಕ್ಕರರಿಗೂ ಕೆಲವು ಹಣ್ಣುಗಳು ದೊರೆತವು.

ಠಕ್ಕರರಿಗೆ ಒಂದು ಸಮಸ್ಯೆ ಎದುರಾಯಿತು. ಅವರಿಗೆ ಸಬೀಜ ದ್ರಾಕ್ಷೆ ಇಷ್ಟವಿರಲಿಲ್ಲ. ಅದೂ ಅಲ್ಲದೆ, ಅವರ ವೈದ್ಯರು ದ್ರಾಕ್ಷೆ ಹಣ್ಣನ್ನು ತೊಳೆಯದೆ ತಿನ್ನಬಾರದೆಂದು ಹೇಳಿದ್ದರು. ಆದರೆ ಮಸೀದಿಯಂತಹ ಸ್ಥಳದಲ್ಲಿ ಎಲ್ಲರೂ ತಿನ್ನುತ್ತಿರುವಾಗ, ತಾನು ಮಾತ್ರ ತಿನ್ನದೆ ಇರಲು ಸಾಧ್ಯವಿರಲಿಲ್ಲ. ಅದನ್ನು ಬಾಯಲ್ಲಿ ಹಾಕಿಕೊಂಡರು. ಬೀಜಗಳನ್ನು ಏನು ಮಾಡಬೇಕೋ ತಿಳಿಯದೆ, ತಮ್ಮ ಜೇಬಿನಲ್ಲಿ ಹಾಕಿಕೊಂಡರು. ಹಣ್ಣುಗಳನ್ನು ತಿನ್ನುವಾಗ "ಬಾಬಾ ಸರ್ವಜ್ಞರು ಎಂದು ಎಲ್ಲರೂ ಹೇಳುತ್ತಾರೆ. ಹಾಗಿದ್ದರೆ ಅವರಿಗೆ ನನಗೆ ಬೀಜದ್ರಾಕ್ಷೆ ಇಷ್ಟವಿಲ್ಲವೆಂದು ತಿಳಿಯುವುದಿಲ್ಲವೆ?" ಎಂದುಕೊಂಡರು. ಅಷ್ಟರಲ್ಲಿ ಬಾಬಾ ಮತ್ತೆ ಠಕ್ಕರರಿಗೆ ಇನ್ನೂ ಕೆಲವು ಹಣ್ಣುಗಳನ್ನು ಕೊಟ್ಟರು. ಠಕ್ಕರ್ ಅದನ್ನು ತೆಗೆದುಕೊಂಡರೇ ಹೊರತು ತಿನ್ನಲಿಲ್ಲ. ಅದನ್ನು ಕಂಡ ಬಾಬಾ ಠಕ್ಕರರಿಗೆ " ಹಣ್ಣುಗಳನ್ನು ತಿನ್ನು" ಎಂದು ಹೇಳಿದರು. ಠಕ್ಕರ್ ಇನ್ನೂ ಅನುಮಾನಿಸುತ್ತಿದ್ದಾಗಲೇ, ಬಾಬಾ ಮತ್ತೆ "ಅವನ್ನು ತಿನ್ನು. ಬಹಳ ಸಿಹಿಯಾಗಿವೆ" ಎಂದು ಬಲವಂತ ಮಾಡಿದರು. ಅನಿವಾರ್ಯ ಎಂದು ಠಕ್ಕರರು ಅವನ್ನು ಬಾಯಲ್ಲಿ ಹಾಕಿ ಅಗೆದರು. ಆಶ್ಚರ್ಯವೋ ಎಂಬಂತೆ, ಹಣ್ಣುಗಳಲ್ಲಿ ಒಂದೇ ಒಂದು ಬೀಜವೂ ಇರಲಿಲ್ಲ. ಪಕ್ಕದಲ್ಲೇ ಇದ್ದ ತರ್ಖಡರನ್ನು "ನಿಮಗೆ ಸಿಕ್ಕಿದ ದ್ರಾಕ್ಷೆ ಎಂತಹುದು?" ಎಂದು ಕೇಳಿದರು. ಅವರು ಸಬೀಜ ದ್ರಾಕ್ಷೆ ಎಂದರು. ತಾವು ಕೊಂಡಿದ್ದು ಸಬೀಜ ದ್ರಾಕ್ಷೆ. ಆದರೆ ಈಗ ಅದರಲ್ಲಿ ಬೀಜಗಳು ಹೇಗಿಲ್ಲ ಎಂದು ಆಶ್ಚರ್ಯಗೊಂಡ ಠಕ್ಕರರು, ಮಾತಿಲ್ಲದೆಯೇ ಬಾಬಾ ತಮ್ಮ ಸಂದೇಹಗಳನ್ನು ತೀರಿಸಿದರು ಎಂದು ಅರ್ಥಮಾಡಿಕೊಂಡರು. ಅವರಿಗೆ ಪವಾಡ ಬೇಕಾಗಿತ್ತು. ಬಾಬಾ ಪವಾಡ ತೋರಿಸಿದರು. ಅದರಿಂದಲೇ ತೃಪ್ತರಾಗದ ಠಕ್ಕರರು ಬಾಬಾರನ್ನು ಇನ್ನೂ ಪರೀಕ್ಷಿಸಲು, ಸಲ ಹಣ್ಣುಗಳನ್ನು ಕಾಕಾರಿಂದ ಮೊದಲು ಮಾಡಿ ಹಂಚಬೇಕು ಎಂದು ಕೊಂಡರು. ಅವರಿಗೆ ದಿಗ್ಭ್ರಾಂತಿಯಾಗುವಂತೆ ಬಾಬಾ ಮತ್ತೆ ಹಣ್ಣುಗಳನ್ನು ಕಾಕಾರಿಂದ ಮೊದಲು ಮಾಡಿ ಹಂಚುವಂತೆ ಹೇಳಿದರು. ದಿಗ್ಭ್ರಮೆಗೊಂಡ ಠಕ್ಕರರನ್ನು ಶ್ಯಾಮಾ, ಇವರು ಕಾಕಾರ ಯಜಮಾನಿ ಎಂದು ಬಾಬಾರಿಗೆ ಪರಿಚಯ ಮಾಡಿಕೊಟ್ಟರು. ಅದಕ್ಕೆ ಬಾಬಾ, "ಅವನು ಹೇಗೆ ಯಜಮಾನಿ? ಕಾಕಾ ಯಜಮಾನಿ ಬೇರೆ ಇದ್ದಾನೆ." ಎಂದರು. ಕಾಕಾರಿಗೆ ಮಾತುಗಳು ಬಹಳ ಆಪ್ಯಾಯಮಾನವಾಗಿದ್ದವು. ಠಕ್ಕರ್ ತನ್ನ ನಿಶ್ಚಯವನ್ನು ಮರೆತು, ಬಾಬಾರಿಗೆ ನಮಸ್ಕಾರಮಾಡಿದರು. ನಂತರ ಎಲ್ಲರೂ ವಾಡಾಕ್ಕೆ ಹಿಂತಿರುಗಿದರು.

ಮಧ್ಯಾಹ್ನದ ಆರತಿಗೆ ಮತ್ತೆ ಎಲ್ಲರೂ ಮಸೀದಿಗೆ ಬಂದರು. ಠಕ್ಕರರು ಶಿರಡಿಯಿಂದ ಹೊರಡಲು ಬಾಬಾರ ಅನುಮತಿ ಕಾಕಾರೇ ಕೇಳಬೇಕೆಂದೂ, ತಾವು ಕೇಳುವುದಿಲ್ಲವೆಂದೂ ಹೇಳಿದರು. ಬಾಬಾರ ರೀತಿಯನ್ನು ಬಲ್ಲ ಶ್ಯಾಮಾ, "ಕಾಕಾರು ಹಿಂತಿರುಗಲು, ಒಂದು ವಾರದವರೆಗೂ ಬಾಬಾ ಅನುಮತಿ ಕೊಡುವುದಿಲ್ಲ. ನೀವೇ ಕೇಳಿದರೆ ಒಳ್ಳೆಯದು" ಎಂದರು. ಆರತಿಯಾದ ಮೇಲೆ ಬಾಬಾರ ಅನುಮತಿ ಪಡೆಯಲು, ಎಲ್ಲರೂ ಬಾಬಾರ ಬಳಿಗೆ ಹೋದರು. ಆಗ ಬಾಬಾ, "ಒಬ್ಬ ಚಂಚಲ ಮನಸ್ಸಿನ ಮನುಷ್ಯನಿದ್ದ. ಅವನು ಶ್ರೀಮಂತ. ಆರೋಗ್ಯವಂತ. ಯಾವುದೇ ರೀತಿಯ ಶಾರೀರಿಕ, ಮಾನಸಿಕ ಸಮಸ್ಯೆಗಳಿಲ್ಲದವನು. ಆದರೆ ಅವನು, ಇಲ್ಲಸಲ್ಲದ ಯೋಚನೆಗಳನ್ನು ಮಾಡುತ್ತ ಗೊತ್ತು ಗುರಿಯಿಲ್ಲದವನಂತೆ ಒದ್ದಾಡುತ್ತಿದ್ದ. ಅದರಿಂದ ಅವನ ಮನಶ್ಶಾಂತಿ ಹಾಳಾಗಿಹೋಯಿತು. ಚಂಚಲವಾದ ಅವನ ಮನಸ್ಸು, ಹಾಗೂ ಹೀಗೂ ಓಲಾಡುತ್ತಿತ್ತು. ಅದನ್ನು ನೋಡಿದ ನಾನು, ಅವನಲ್ಲಿ ದಯೆ ತೋರಿ, ಅವನಿಗೆ ಹೇಳಿದೆ, ‘ನಿನ್ನ ಶಕ್ತಿಯನ್ನು ಯಾವುದಾದರೂ ಒಂದು ಗುರಿಯಲ್ಲಿ ನಿಲ್ಲಿಸು. ಸುಮ್ಮನೇ ಅಲೆದಾಡಬೇಡ. ಒಂದುಕಡೆ ಸ್ಥಿರವಾಗಿ ನಿಲ್ಲು’" ಎಂದರು.

ಬಾಬಾ ಅದನ್ನು ಹೇಳಿದ್ದು ತನ್ನನ್ನು ಕುರಿತೇ ಎಂದು ಠಕ್ಕರರಿಗೆ ಅರ್ಥವಾಯಿತು. ಅವರಿಗೆ ಕಾಕಾ ಕೂಡಾ ತಮ್ಮೊಡನೆ ಹಿಂತಿರುಗಿ ಬರಬೇಕೆಂದು ಆಸೆಯಿತ್ತು. ಅವರ ಆಸೆಯನ್ನು ತೀರಿಸುವುದಕ್ಕೋ ಎಂಬಂತೆ ಬಾಬಾ ಕಾಕಾ ಮಹಾಜನಿಯನ್ನೂ ಠಕ್ಕರರ ಜೊತೆ ಹಿಂತಿರುಗಲು ಹೇಳಿ, ಎಲ್ಲರಿಗೂ ಅನುಮತಿ ಕೊಟ್ಟರು. ಹೀಗೆ ಬಾಬಾ, ತಮ್ಮ ಅಭೀಷ್ಟಗಳು ಒಂದೊಂದನ್ನೂ ಪೂರೈಸಿದ್ದನ್ನು ಠಕ್ಕರರು ಕಂಡರು. ಅವರೆಲ್ಲರೂ ಇನ್ನೇನು ಹೊರಡ ಬೇಕೆಂದಿದ್ದಾಗ, ಬಾಬಾ ಕಾಕಾರಿಂದ ೧೫ ರೂಪಾಯಿ ದಕ್ಷಿಣೆ ತೆಗೆದುಕೊಂಡು ಹೇಳಿದರು, "ನಾನು ಎಲ್ಲರಿಂದಲೂ ದಕ್ಷಿಣೆ ತೆಗೆದುಕೊಳ್ಳುವುದಿಲ್ಲ. ಒಂದು ರೂಪಾಯಿ ತೆಗೆದುಕೊಂಡರೆ ಅದಕ್ಕೆ ನಾನು ಹತ್ತರಷ್ಟು ಹಿಂತಿರುಗಿಸಬೇಕು. ಪುಕ್ಕಟೆಯಾಗಿ ನಾನು ಯಾರಿಂದಲೂ, ಏನನ್ನೂ ತೆಗೆದು ಕೊಳ್ಳುವುದಿಲ್ಲ. ನನ್ನ ಫಕೀರ ಯಾರಿಂದ ತೆಗೆದುಕೋ ಎಂದು ಹೇಳುತ್ತಾನೋ, ಅವನಿಂದ ಮಾತ್ರ ತೆಗೆದುಕೊಳ್ಳುತ್ತೇನೆ. ಫಕೀರನೂ ಯಾರಿಂದ ತನಗೆ, ಜನ್ಮದಲ್ಲೋ, ಹಿಂದಿನ ಜನ್ಮಗಳಲ್ಲೋ ಯಾವಾಗಲಾದರೂ ಸರಿ, ಬಾಕಿಯಿದೆಯೋ, ಅದನ್ನು ಮಾತ್ರ ಕೇಳುತ್ತಾನೆ. ದಕ್ಷಿಣೆ ಕೊಡುವುದು ಎಂದರೆ ಬೀಜವನ್ನು ಹುಟ್ಟುಹಾಕಿದಂತೆ. ಅದು ಮುಂದೆ ಅಪಾರವಾದ ಫಲ ನೀಡುತ್ತದೆ. ಈಗ ಬೀಜ ನಾಟದಿದ್ದರೆ ಮುಂದೆ ಫಲವೂ ಸಿಕ್ಕುವುದಿಲ್ಲ. ಧರ್ಮವನ್ನು ಹರಡಲು ಐಶ್ವರ್ಯವನ್ನು ಉಪಯೋಗಿಸಬೇಕು. ಸ್ವಂತಕ್ಕಾಗಿ ಉಪಯೋಗಿಸಿದರೆ ಮಾತ್ರ, ಅದು ವ್ಯರ್ಥವಾದಂತೆಯೇ. ದಕ್ಷಿಣೆ ಕೊಡುವುದರಿಂದ ವೈರಾಗ್ಯ ಹುಟ್ಟುತ್ತದೆ. ಅದರಿಂದ ಭಕ್ತಿ, ಜ್ಞಾನ. ಒಂದು ಕೊಟ್ಟು ಹತ್ತು ತೆಗೆದುಕೋ" ಎಂದರು. ಅದನ್ನು ಕೇಳಿದ ಠಕ್ಕರ್, ತಾನೂ ೧೫ ರೂಪಾಯಿ ದಕ್ಷಿಣೆ ಕೊಟ್ಟರು. ತನ್ನ ಜೀವನದಲ್ಲಿ ಮಾಡಿದ ಒಂದು ಬಹಳ ಒಳ್ಳೆಯ ಕೆಲಸ, ಶಿರಡಿಗೆ ಬಂದದ್ದು ಎಂದುಕೊಂಡರು. ಘಟನೆಯಿಂದ ಅವರು ಹೆಚ್ಚು ವಿವೇಕವಂತರಾದರು.

ಅವರವರ ಸ್ತರಕ್ಕೆ ತಕ್ಕಂತೆ, ಭಕ್ತರಿಗೆ ಮಾರ್ಗದರ್ಶನಮಾಡಿ ಅವರು ಇಚ್ಛಿಸಿದ್ದನ್ನು ಪಡೆಯಲು ಬಾಬಾ ಸಹಾಯಮಾಡುತ್ತಿದ್ದರು. ಮನಸ್ಸಿನಲ್ಲಿ ಯಾವುದೇ ರೀತಿಯ ಭಾವನೆಗಳನ್ನಿಟ್ಟುಕೊಂಡು ಬಂದರೂ, ಬಾಬಾ ಎಲ್ಲರನ್ನೂ ಒಂದೇ ರೀತಿಯಲ್ಲಿ ಕಾಣುತ್ತಿದ್ದರು. ಅವರಿಗೆ ಯಾರಲ್ಲೂ ಮೋಹವಿರಲಿಲ್ಲ. ನಮಸ್ಕಾರಮಾಡಿದರೂ, ಮಾಡದಿದ್ದರೂ, ದಕ್ಷಿಣೆ ಕೊಟ್ಟರೂ, ಕೊಡದಿದ್ದರೂ, ಅವರು ಎಲ್ಲರಲ್ಲೂ ಸಮ ಭಾವದಿಂದಿರುತ್ತಿದ್ದರು. ಯಾರನ್ನೂ ಅಗೌರವದಿಂದ ಕಾಣುತ್ತಿರಲಿಲ್ಲ. ಶತ್ರು, ಮಿತ್ರ ಎಂಬ ಬೇಧವಿಲ್ಲದ ಆವರು ದ್ವಂದ್ವಾತೀತರು. ಯಾವಾಗಲೂ "ಅಲ್ಲಾ ಮಾಲೀಕ್" ಎಂದು ಹೇಳಿಕೊಳ್ಳುತ್ತಾ ಅಲ್ಲಾನಲ್ಲೇ ಲೀನರಾಗಿರುತ್ತಿದ್ದರು. ಅವರಿಗಿದ್ದ ಒಂದೇ ಒಂದು ಯೋಚನೆ - ಭಕ್ತರ ಕಲ್ಯಾಣ. ಭಕ್ತಪರಾಧೀನ ಸಾಯಿ ಪಾದಗಳಿಗೆ ಮತ್ತೊಮ್ಮೆ ನಮಸ್ಕಾರಮಾಡಿಕೊಂಡು ಅವರ ಅನುಗ್ರಹಕ್ಕೆ ಪಾತ್ರರಾಗೋಣ.

ಬಾಂದ್ರಾ ವ್ಯಕ್ತಿಯ ಅನಿದ್ರತೆ

ಬಾಂದ್ರಾದಲ್ಲಿ ಕಾಯಸ್ಥ ಪ್ರಭು ಪಂಗಡಕ್ಕೆ ಸೇರಿದವರೊಬ್ಬರು ಒಂದು ವಿಚಿತ್ರವಾದ ಸಮಸ್ಯೆಯಿಂದ ನರಳುತ್ತಿದ್ದರು. ಅವರು ಮಲಗಿದಾಗಲೆಲ್ಲ, ಅವರ ತಂದೆ ಕನಸಿನಲ್ಲಿ ಬಂದು, ಅವರನ್ನು ಕೋಪೋದ್ರಿಕ್ತರಾಗಿ ಬೈಯುತ್ತಿದ್ದರು. ಇದರಿಂದಾಗಿ ಅವರಿಗೆ ನಿದ್ರೆಯೇ ಇರಲಿಲ್ಲ. ಆರೋಗ್ಯವೂ ಹದಗೆಟ್ಟಿತ್ತು. ಪ್ರತಿರಾತ್ರಿಯೂ ಇದೇ ಕಥೆಯಾಗಿ, ಏನು ಮಾಡಬೇಕೋ ತೋಚಲಿಲ್ಲ. ಬಾಬಾರ ಭಕ್ತನಾದ ಅವರ ಸ್ನೇಹಿತನೊಬ್ಬ ಇದಕ್ಕೆ ಊದಿಯೇ ತಕ್ಕ ಔಷಧ, ಸ್ವಲ್ಪ ಊದಿ ಹಣೆಗೆ ಹಚ್ಚಿಕೊಂಡು, ಸ್ವಲ್ಪ ಒಂದು ಪೊಟ್ಟಣ ಮಾಡಿ ತಲೆಕೆಳಗಿಟ್ಟುಕೊಂಡು ಮಲಗುವಂತೆ ಸಲಹೆ ನೀಡಿದ. ಆತ ಸಲಹೆಯನ್ನು ಅಕ್ಷರಶಃ ಪಾಲಿಸಿದರು. ಅದರಿಂದ ಅವರು ಯಾವುದೇ ತೊಂದರೆಯಿಲ್ಲದೆ, ರಾತ್ರಿ ಸುಖವಾಗಿ ನಿದ್ರೆಮಾಡಿದರು. ಸಂತೋಷಗೊಂಡ ಅವರು, ಬಾಬಾರ ಪಟವೊಂದನ್ನು ತಂದು ಅದರ ಪೂಜೆ ಮಾಡಲಾರಂಭಿಸಿದರು. ಅದಾದಮೇಲೆ ಅವರಿಗೆ ನಿದ್ರೆಮಾಡಲು ಯಾವ ತೊಂದರೆಯೂ ಆಗಲಿಲ್ಲ.

ಬಾಲಾಜಿ ಪಾಟೀಲ್ ನೇವಾಸ್ಕರರ ಕಥೆ

ಬಾಬಾರನ್ನು ಧೃಢವಾಗಿ ನಂಬಿದ ಭಕ್ತರಲ್ಲೊಬ್ಬರು - ಬಾಲಾಜಿ ಪಾಟೀಲ ನೇವಾಸ್ಕರರು. ಆತ ನೀರಿನಲ್ಲಿದ್ದರೂ ನೆನೆಯದ ಕಮಲದಂತೆ, ಸಂಸಾರದಲ್ಲಿದ್ದರೂ ಅದಕ್ಕೆ ಅಂಟಿಕೊಂಡಿರಲಿಲ್ಲ. ತನ್ನ ಹೊಲದಲ್ಲಿ ಬೆಳೆದ ಧಾನ್ಯವನ್ನೆಲ್ಲಾ ತಂದು ಬಾಬಾರಿಗೆ ಅರ್ಪಿಸಿ, ಬಾಬಾ ಕೊಟ್ಟಿದ್ದರಲ್ಲಿ ತೃಪ್ತರಾಗಿ ಜೀವನ ಮಾಡುತ್ತಿದ್ದರು. ಬಾಬಾರೇ ಎಲ್ಲದಕ್ಕೂ ಒಡೆಯರು ಎಂಬುದನ್ನು ಧೃಢವಾಗಿ ನಂಬಿದ್ದರು. ದಿನವೂ ಬಾಬಾ ಓಡಾಡುತ್ತಿದ್ದ ದಾರಿಗಳನ್ನೆಲ್ಲಾ ಸ್ವಚ್ಛಮಾಡುತ್ತಿದ್ದರು.

ನೇವಾಸ್ಕರರು ಕಾಲವಾದ ಮೇಲೆ, ಅವರ ಮನೆಯವರೂ ಇದನ್ನು ಮುಂದುವರೆಸಿದ್ದರು. ಒಂದುಸಲ, ನೇವಾಸ್ಕರರ ವರ್ಷಾಬ್ಧಿಕದ ದಿನ, ಊಟಕ್ಕೆ ಕರೆದಿದ್ದವರಿಗಿಂತ ಮೂರು ಪಟ್ಟು ಹೆಚ್ಚಿನ ಜನ ಬಂದಿದ್ದರು. ಮಾಡಿದ್ದ ಅಡಿಗೆ ಸಾಕಾಗುವುದಿಲ್ಲವೆಂಬ ಸಂದೇಹದಿಂದ ಮನೆಯವರೆಲ್ಲರೂ ಆತಂಕಗೊಂಡಿದ್ದರು. ನೇವಾಸ್ಕರರ ಸೊಸೆ, ಏನೂ ಮಾಡಲು ತೋಚದೆ ಕುಳಿತಿದ್ದರು. ಆಗ ಅವರ ಅತ್ತೆಯವರು, "ಚಿಂತಿಸಬೇಡ. ಅಡಿಗೆ ನಮ್ಮದಲ್ಲ. ಬಾಬಾರದು. ಅವರ ಹೆಸರು ಹೇಳಿ, ಅದರಲ್ಲಿ ಸ್ವಲ್ಪ ಊದಿ ಹಾಕು. ಅಡಿಗೆಯನ್ನೆಲ್ಲ ಒಂದು ಬಟ್ಟೆಯಿಂದ ಮುಚ್ಚಿ, ಬಟ್ಟೆ ತೆಗೆಯದಂತೆ ಬಡಿಸು. ಬಾಬಾರೇ ನಮ್ಮನ್ನು ಅವಘಡದಿಂದ ಪಾರುಮಾಡುತ್ತಾರೆ" ಎಂದರು. ಅತ್ತೆ ಹೇಳಿದಂತೆ ಸೊಸೆ ಮಾಡಿದಳು. ಬಂದವರೆಲ್ಲರೂ ತೃಪ್ತಿಯಾಗಿ ಊಟ ಮಾಡಿದ ಮೇಲೂ, ಮಾಡಿದ್ದ ಅಡಿಗೆ ಹಾಗೇ ಉಳಿದಿತ್ತು. ಯಾವ ಭಾವದಿಂದ ಕೆಲಸ ಮಾಡುತ್ತೇವೆಯೋ, ಭಾವದಂತೆಯೇ ಫಲವೂ ಇರುತ್ತದೆ ಎಂಬುದಕ್ಕೆ, ಇದು ಒಂದು ನಿದರ್ಶನ.

ಹಾವಿನ ರೂಪದಲ್ಲಿ ಸಾಯಿ ಕಾಣಿಸಿಕೊಂಡದ್ದು.

ಒಂದುಸಲ, ಬಾಲಾಜಿ ಪಾಟೀಲರನ್ನು ಕಾಣಲು ಶಿರಡಿಯ ರಘು ಪಾಟೀಲ್ ನೇವಾಸಕ್ಕೆ ಹೋದರು. ಅಲ್ಲಿ ಸಂಜೆಯ ಹೊತ್ತು, ಗೋಶಾಲೆಯಲ್ಲಿ ಹಾವೊಂದು ಸೇರಿ ಬುಸುಗುಟ್ಟುತ್ತಾ ಕುಳಿತಿತ್ತು. ಅದನ್ನು ಕಂಡು ಎಲ್ಲರಿಗೂ ಹೆದರಿಕೆಯಾಯಿತು. ಹಸುಗಳೂ ಭಯಗೊಂಡಿದ್ದವು. ಆದರೆ ಬಾಲಾಜಿ ಮಾತ್ರ ಯಾವ ಭಯವೂ ಇಲ್ಲದೆ, ಬಾಬಾರೇ ರೂಪದಲ್ಲಿ ಬಂದಿದ್ದಾರೆಂದು ಭಾವಿಸಿ, ಒಂದು ಬಟ್ಟಲು ಹಾಲು ತಂದು ಹಾವಿನ ಮುಂದೆ ಇಟ್ಟು, "ಬಾಬಾ, ಸುಮ್ಮನೇ ಏಕೆ ಬುಸುಗುಟ್ಟುತ್ತಿದ್ದೀರಿ? ಹಾಲನ್ನು ಕುಡಿದು ನಮ್ಮನ್ನು ಅನುಗ್ರಹಿಸಿ" ಎಂದು ಹೇಳುತ್ತಾ, ಹಾವಿನ ಮುಂದೆ ಶಾಂತವಾಗಿ ಕುಳಿತರು. ಹಾವು ಹಾಲು ಕುಡಿದು ತನ್ನ ಪಾಡಿಗೆ ತಾನು ಹೊರಟು ಹೋಯಿತು.

ಬಾಲಾಜಿಗೆ ಇಬ್ಬರು ಹೆಂಡತಿಯರು. ನಾಲ್ಕಾರು ಮಕ್ಕಳೂ ಇದ್ದವು. ಅವರೆಲ್ಲರೂ ಸೇರಿ ಆಗಾಗ ಶಿರಡಿಗೆ ಬರುತ್ತಿದ್ದರು. ಹಾಗೆ ತಮ್ಮ ದರ್ಶನಕ್ಕೆ ಬಂದಾಗಲೆಲ್ಲಾ ಬಾಬಾ ಅವರಿಗೆ ಸೀರೆ ಬಟ್ಟೆಗಳನ್ನು ಕೊಟ್ಟು ಆಶೀರ್ವಾದ ಮಾಡಿ ಕಳುಹಿಸುತ್ತಿದ್ದರು.

ಪವಿತ್ರವಾದ ಸಾಯಿ ಸಚ್ಚರಿತ್ರೆ ಗ್ರಂಥವನ್ನು, ಶ್ರದ್ಧಾ ಭಕ್ತಿಗಳಿಂದ ಓದುವ ಜಾಗಗಳೆಲ್ಲ ಪವಿತ್ರವಾಗುತ್ತವೆ. ಬಾಬಾ ಅಲ್ಲಿ ಬಂದು ನೆಲೆಸಿ, ಓದುವವರ ದುಃಖದುರಿತಗಳನ್ನು ದೂರಮಾಡುತ್ತಾರೆ. ಜಪ ತಪ ಪೂಜಾದಿಗಳ ಅವಶ್ಯಕತೆಯಿಲ್ಲ. ಸಚ್ಚರಿತ್ರೆಯ ಪಠನವೊಂದೇ ಸಾಕು, ಬಾಬಾರನ್ನು ಸಂತುಷ್ಟಗೊಳಿಸಲು.

ಹಿಂದಿನ ಮೂರು ಅಧ್ಯಾಯಗಳಲ್ಲಿ ನೋಡಿದಂತೆ, ಊದಿ ಬಹಳ ಪ್ರಭಾವವುಳ್ಳದ್ದು. ನಮ್ಮ ಮನದಾಸೆಗಳನ್ನು ತೀರಿಸುತ್ತದೆ. ಆದರೆ, ನಿಷ್ಠಾವಂತರಾಗಿ, ಶ್ರದ್ಧಾ ಭಕ್ತಿಗಳಿಂದ ಪ್ರಾರ್ಥಿಸಿದವರಿಗೆ ಮಾತ್ರ ಅದು ನಿಜ!

ಅಧ್ಯಾಯವನ್ನು ಮುಗಿಸುವ ಮೊದಲು, ಮತ್ತೊಮ್ಮೆ, ನಮಗೆ ನಮ್ಮ ಆಧ್ಯಾತ್ಮಿಕ ಮಾರ್ಗವನ್ನು ದಾಟಲು ಸುಲಭೋಪಾಯವನ್ನು ತೋರಿಸಿಕೊಟ್ಟಿರುವ, ಪ್ರೀತಿಯ ಆಗರ, ಬಾಬಾರ ದಿವ್ಯ ಚರಣಗಳಲ್ಲಿ ಮುಗಿಬಿದ್ದು, ಅವರ ಅನುಗ್ರಹಕ್ಕಾಗಿ ಪ್ರಾರ್ಥಿಸೋಣ. ಶ್ರೀ ಸಮರ್ಥ ಸದ್ಗುರು ಸಾಯಿನಾಥ ಮಹರಾಜಕೀ ಜೈ!

ಇದರೊಂದಿಗೆ ಕಾಕಾ ಮಹಾಜನಿಯ ಸ್ನೇಹಿತ, ಯಜಮಾನ, ಬಾಂದ್ರಾ ವ್ಯಕ್ತಿಯ ಅನಿದ್ರತೆ, ಬಾಲಾ ಪಾಟೀಲ್ ನೇವಾಸ್ಕರ್ ಮತ್ತು ಇತರ ವಿಷಯಗಳನ್ನು ಕುರಿತು ಹೇಳುವ ಮುವ್ವತ್ತೈದನೆಯ ಅಧ್ಯಾಯ ಮುಗಿಯಿತು. ಮುಂದಿನ ಅಧ್ಯಾಯದಲ್ಲಿ ಹೇಮಾಡ್ ಪಂತ್, ಇಬ್ಬರು ಗೋವಾದ ಗಣ್ಯರು, ಶ್ರೀಮತಿ ಔರಂಗಾಬಾದಕರ್ ಇತ್ಯಾದಿ ವಿಷಯಗಳನ್ನು ಹೇಳುತ್ತಾರೆ.

||ಸದ್ಗುರು ಶ್ರೀ ಸಾಯಿನಾಥಾರ್ಪಣಮಸ್ತು||ಶುಭಂ ಭವತು||
||ಓಂ ಶಾಂತಿಃ ಶಾಂತಿಃ ಶಾಂತಿಃ||


No comments:

Post a Comment