Monday, January 9, 2012

||ಮುವ್ವತ್ತಮೂರನೆಯ ಅಧ್ಯಾಯ||


||ಶ್ರೀ ಸಾಯಿಸಚ್ಚರಿತ್ರೆ||
||ಮುವ್ವತ್ತಮೂರನೆಯ ಅಧ್ಯಾಯ||
||ವಿಭೂತಿ ಪ್ರಸಾದದ ಮಹಿಮೆ||
ಶ್ರೀ ಗಣೇಶಾಯ ನಮಃ ಶ್ರೀ ಸರಸ್ವತಯೇ ನಮಃ
ಶ್ರೀ ವೆಂಕಟೇಶಾಯ ನಮಃ ಶ್ರೀ ಸಾಯಿನಾಥಾಯ ನಮಃ
ಶ್ರೀ ಸದ್ಗುರುಭ್ಯೋನ್ನಮಃ

ಅಧ್ಯಾಯದಲ್ಲಿ ಹೇಮಾಡ್ ಪಂತ್, ಚೇಳು ಕಡಿತ, ಪ್ಲೇಗ್ ವ್ಯಾಧಿಗಳು ಗುಣವಾದದ್ದು, ಜಾಮನೇರ್ ಲೀಲೆ, ನಾರಾಯಣ ರಾವ್ ಖಾಯಿಲೆ, ಬಾಲಾ ಬುವಾ ಸುತಾರ್, ಹರಿಭಾವು ಕಾರ್ಣಿಕ್ ಮತ್ತು ಇತರ ವಿಷಯಗಳನ್ನು ಹೇಳುತ್ತಾರೆ.

ಸದ್ಗುರು ಸಾಯಿಬಾಬಾ

ಸಣ್ಣದೋ, ದೊಡ್ಡದೋ, ಯಾವುದೇ ವಿಷಯವಾಗಲಿ, ನಾವು ಸರಿಯಾದ ದಾರಿಯಲ್ಲಿ ನಡೆಯಬೇಕಾದರೆ ಅದಕ್ಕೆ ಮಾರ್ಗದರ್ಶಿ (ಸದ್ಗುರು) ಒಬ್ಬ ಬೇಕು ಎಂದು ಬಾಬಾ ಯಾವಾಗಲೂ ಹೇಳುತ್ತಿದ್ದರು. ಬುದ್ಧಿವಂತಿಕೆಯ, ಅರ್ಥ ಪೂರ್ಣವಾದ ಯೋಚನೆಗಳೆಂಬ ಸೂರ್ಯ ರಶ್ಮಿಗಳು ತೂರಿ ಹೋಗಲಾರದಂತೆ, ಅನೇಕ ಆಧ್ಯಾತ್ಮಿಕ ತತ್ವಗಳು, ಸಿದ್ಧಾಂತಗಳು, ಮತ ಬೋಧನೆಗಳು ಎಂಬ ದಟ್ಟವಾಗಿ, ಎತ್ತರವಾಗಿ, ಬೆಳೆದಿರುವ ಮರಗಳಿಂದ ಜೀವನವೆಂಬ ಅರಣ್ಯ ತುಂಬಿದೆ. ಒಂದಕ್ಕೊಂದು ವಿರುದ್ಧವಾದ ವಾದ ವಿವಾದಗಳು ತುಂಬಿದ ಅರಣ್ಯದಲ್ಲಿ, ನಿಜವಾದ ಆತ್ಮಸಾಕ್ಷಾತ್ಕಾರ ಹುಡುಕುತ್ತಿರುವ ಸಾಮಾನ್ಯರಾದ, ಅದೀಕ್ಷಿತ ಮುಮುಕ್ಷುಗಳಿಗೆ ಯಾವುದಾದರೂ ದಾರಿಯಿದೆಯೇ? ಎಂದರೆ ಬಾಬಾ ಹೇಳುತ್ತಾರೆ, "ಅಂತಹ ದಾರಿ ತೋರಬಲ್ಲವನು ಪ್ರೀತಿ ವಿಶ್ವಾಸಗಳಿಂದ ತುಂಬಿದ ಸದ್ಗುರುವೊಬ್ಬನೇ! ಅವನೇ ನಮ್ಮ ಶಾರೀರಿಕ, ಪಾರಮಾರ್ಥಿಕ ಬೇಕುಗಳನ್ನೆಲ್ಲ ಪೂರಯಿಸಿ, ಅನ್ನ ಪಾನಾದಿಗಳನ್ನು ಕೊಟ್ಟು ನಮ್ಮನ್ನು ಕೈಹಿಡಿದು ನಡೆಸುತ್ತಾನೆ. ಅವನು ನಮ್ಮಿಂದ ಅಪೇಕ್ಷಿಸುವುದು - ಅನನ್ಯ, ಅಕುಂಠಿತ, ಅಚಂಚಲ, ಸಂಪೂರ್ಣ ಶ್ರದ್ಧೆ-ಭಕ್ತಿಗಳು ಮಾತ್ರ. ಸದ್ಗುರುವಿಗೆ ಶಿಷ್ಯನೆನ್ನಿಸಿಕೊಳ್ಳ ಬೇಕಾದರೆ ವೇದ ವೇದಾಂತ ಶಾಸ್ತ್ರ ಪುರಾಣಗಳ ಅಭ್ಯಾಸ ಬೇಕಾಗಿಲ್ಲ. ವಾದ ವಿವಾದಗಳನ್ನು ಮಾಡಿಇದು ಹೀಗೇಎಂದು ಸಾಧಿಸಬೇಕಾದ, ಬುದ್ಧಿವಂತಿಕೆಯ ಅವಶ್ಯಕತೆಯಿಲ್ಲ. ಶ್ರದ್ಧೆ, ಸಹನೆ ಇವೆರಡು ಮಾತ್ರ ಸಾಕು. ಅವೆರಡಿದ್ದರೆ ಗುರುವು ನಮ್ಮನ್ನು ಗಮ್ಯದತ್ತ ಕರೆದೊಯ್ಯುತ್ತಾನೆ. ಹೆಚ್ಚಿನ ಶ್ರಮವಿಲ್ಲದಂತೆ, ಸದ್ಗುರುವಿನ ಮಾರ್ಗದರ್ಶನದಿಂದ, ಸಾಕ್ಷಾತ್ಕಾರ ಮಿಂಚಿನಂತೆ ಮನೋಗೋಚರವಾಗುತ್ತದೆ. ಅದೇ ಸದ್ಗುರುವಿನ ಕೃಪಾಕಟಾಕ್ಷದ ಶಕ್ತಿ. ಅಂತಹ ಕೃಪಾಕಟಾಕ್ಷ ತುಂಬಿ ಸದ್ಗುರು ಸಾಯಿಬಾಬಾ, ನಮ್ಮ ಪೂರ್ವಜನ್ಮಕೃತ ಪುಣ್ಯಫಲದಿಂದ ನಮಗೆ ದೊರೆತಿದ್ದಾರೆ. ಅವರ ಮನಸ್ಸು ತಮ್ಮ ಭಕ್ತರಿಗೋಸ್ಕರ ಯಾವಾಗಲೂ ತಲ್ಲಣಗೊಳ್ಳುತ್ತಿರುತ್ತದೆ. ಭಕ್ತರ ಒಳಿತಿಗೋಸ್ಕರ ತಮ್ಮ ಖಜಾನೆಯ ಬಾಗಿಲನ್ನು ತೆರೆದಿಟ್ಟು "ಬನ್ನಿ, ತೆಗೆದುಕೊಳ್ಳಿ"ಎಂದು ಹೇಳುತ್ತಿದ್ದಾರೆ. ಇಂತಹ ದಯಾ ಪರಿಪೂರ್ಣ, ಕ್ಷಮಾಶೀಲ, ವಿಶ್ವಾಸಭರಿತ, ಸದ್ಗುರು ಸಾಯಿನಾಥನ ಪಾದಪದ್ಮಗಳಲ್ಲಿ ತಲೆಯಿಟ್ಟು ನಮಸ್ಕರಿಸಿ ಪುನೀತರಾಗೋಣ.

ಮಸೀದಿಗೆ ಹೋಗಿ, ಬಾಬಾರ ದರ್ಶನ ಮಾಡಿ ಅವರಿಗೆ ನಮಸ್ಕಾರಮಾಡಿದವರೆಲ್ಲಾ ಅನುಗ್ರಹ, ಆಶೀರ್ವಾದಗಳು ಮಾತ್ರವಲ್ಲ, ಊದಿಪ್ರಸಾದವನ್ನೂ ಪಡೆಯುತ್ತಿದ್ದರು ಎಂಬುದು ಎಲ್ಲರಿಗೂ ವಿದಿತವಾದದ್ದು. ಕೆಲವರಿಗೆ ಬಾಬಾ ಊದಿ ಕೈಯಲ್ಲಿ ಹಾಕುತ್ತಿದ್ದರು. ಕೆಲವರಿಗೆ ಹಣೆಯಮೇಲೆ ಹಚ್ಚುತ್ತಿದ್ದರು. ಯಾವುದಕ್ಕೇ ಆದರೂ ಬಾಬಾ ಊದಿಯನ್ನೇ ಉಪಯೋಗಿಸುತ್ತಿದ್ದರು. ಬಾಬಾ ಊದಿಗೆ ಏಕೆ ಅಂತಹ ಪ್ರಾಮುಖ್ಯತೆ ನೀಡಿದ್ದರು?

ಸದ್ಗುರುವಾದ ಅವರು ನಮಗೆ ಊದಿಪ್ರಸಾದದ ಮೂಲಕ ಅನೇಕ ತರಹೆಯ ಶಿಕ್ಷಣ ಕೊಡುತ್ತಿದ್ದಾರೆ. ಊದಿ ಎಂದರೆ ಬೂದಿಯೇ ಹೊರತು ಮತ್ತಿನ್ನೇನೂ ಅಲ್ಲ. ಎಲ್ಲವೂ ಉರಿದಮೇಲೆ ಉಳಿಯುವುದೇ ಬೂದಿ! ಕುಲ, ಮತ, ಲಿಂಗ ಬೇಧಗಳಿಲ್ಲದೆ ಎಲ್ಲರೂ ದಹನವಾದಮೇಲೆ, ಕೊನೆಗೆ ಉಳಿಯುವುದು ಬರಿಯ ಬೂದಿ. ಬೂದಿಯಲ್ಲಿ ಯಾವ ಬೇಧವೂ ಕಾಣುವುದಿಲ್ಲ. ಪ್ರಕೃತಿಯಲ್ಲಿ ಯಾವುದೇ ದಹನವಾಗುವಂತಹ ಪದಾರ್ಥ ದಹನವಾದ ಮೇಲೆ ಉಳಿಯುವುದು ಬೂದಿಯೇ! ಬೂದಿಯೇ ಬ್ರಹ್ಮ. ಅದೇ ನಮಗೆ ಪರೋಕ್ಷವಾಗಿ ಬಾಬಾ ಕೊಡುತ್ತಿರುವ ಶಿಕ್ಷಣ. ಬ್ರಹ್ಮನೇ ಅಂತಿಮವಾಗಿ ನಾವು ತಿಳಿಯಬೇಕಾದ ನಿಜಸ್ಥಿತಿ.

ಊದಿ ಧುನಿಯ ಪವಿತ್ರಾಗ್ನಿಯಿಂದ ತೆಗೆದದ್ದು. ಬಾಬಾ ಶಿರಡಿಗೆ ಬಂದ ದಿನದಿಂದಲೂ ಧುನಿಯನ್ನು ಸತತವಾಗಿ ಉರಿಸುತ್ತಿದ್ದರು (ಶಿರಡಿಯಲ್ಲಿ ಈಗಲೂ ಅದೇ ಧುನಿ ಉರಿಯುತ್ತಿರುವುದು). ಬಾಬಾ ಭಕ್ತರಿಂದ ದಕ್ಷಿಣೆ ಪಡೆದು, ದಕ್ಷಿಣೆಯಲ್ಲಿ ಬಹು ದೊಡ್ಡ ಪಾಲನ್ನು ದಾನವಾಗಿ ಹಂಚುತ್ತಿದ್ದರು. ಸ್ವಲ್ಪ ಹಣ ಮಾತ್ರ ಧುನಿಯ ಕಟ್ಟಿಗೆ ಕೊಳ್ಳುವುದಕ್ಕೋಸ್ಕರ ಉಪಯೋಗಿಸುತ್ತಿದ್ದರು. ಊದಿಯನ್ನು ಪ್ರಸಾದವಾಗಿ ಶಿರಡಿಯಿಂದ ಹಿಂತಿರುಗುವ ಭಕ್ತರೆಲ್ಲರಿಗೂ ಕೊಡುತ್ತಿದ್ದರು. ಪ್ರಪಂಚ ನಶ್ವರ, ಮಾಯೆಯಿಂದ ಕೂಡಿದ್ದು. ತಂದೆ, ತಾಯಿ, ಹೆಂಡತಿ, ಮಗ, ಮಗಳು, ಅಕ್ಕತಂಗಿಯರು, ಅಣ್ಣತಮ್ಮಂದಿರು, ಯಾರೂ ನಿಜವಾಗಿಯೂ ನಮ್ಮವರಲ್ಲ. ನಾವು ಒಂಟಿಯಾಗಿಯೇ ಪ್ರಪಂಚಕ್ಕೆ ಬಂದಿದ್ದೇವೆ. ಒಂಟಿಯಾಗಿಯೇ ಹೋಗುತ್ತೇವೆ. ಬರುವಾಗ ಏನನ್ನೂ ತರಲಿಲ್ಲ. ಹೋಗುವಾಗ ಏನನ್ನೂ ತೆಗೆದುಕೊಂಡು ಹೋಗಲಾಗುವುದಿಲ್ಲ. ನಿತ್ಯಾನಿತ್ಯ ವಿವೇಚನೆಯನ್ನೇ ಬಾಬಾ ನಮಗೆ ಊದಿಯ ಮೂಲಕ ಹೇಳುತ್ತಿದ್ದಾರೆ. ಹಾಗೆಯೇ, ಅವರು ದಕ್ಷಿಣೆಯ ಮೂಲಕ ಅನಿತ್ಯದಲ್ಲಿ ನಿರ್ಮೋಹವಿರಬೇಕೆಂಬ ವಿವೇಕವನ್ನು ತಿಳಿಸುತ್ತಿದ್ದಾರೆ. ವಿವೇಕ, ವೈರಾಗ್ಯಗಳನ್ನು ನಾವು ಕಲಿಯದಿದ್ದರೆ, ಸಂಸಾರಸಾಗರವನ್ನು ದಾಟಲಾರೆವು.

ಆಧ್ಯಾತ್ಮಿಕ ಸೂಚ್ಯಾರ್ಥಗಳ ಜೊತೆಗೆ ಪ್ರಾಪಂಚಿಕವಾಗಿಯೂ ಊದಿಯಿಂದ ಲಾಭವಿದೆ. ಅನೇಕರಿಗೆ ಅನೇಕ ರೀತಿಯಲ್ಲಿ ಆರೋಗ್ಯ, ಐಶ್ವರ್ಯ, ಮನಶ್ಶಾಂತಿ, ಮುಂತಾದುವೆಲ್ಲಾ ದೊರೆತಿವೆ. "ರಮತೇ ರಾಮ ಆವೋಜಿ, ಊದಿಯೋಂಕಿ ಗೋನೆ ಲಾವೋಜಿ" ಎಂದು ಬಾಬಾ ಹಾಡುತ್ತಿದ್ದರು. ಎಷ್ಟು ಜನಕ್ಕೆ ಊದಿಯಿಂದ ಲಾಭವಾಗಿದೆಯೋ ಲೆಕ್ಕವಿಟ್ಟಿರುವವರು ಯಾರು?

ಚೇಳು ಕಡಿತ

ರಾಮಚಂದ್ರ ವಾಮನ ಮೋಡಕರು ಬಾಬಾರ ಭಕ್ತರಲ್ಲೊಬ್ಬರು. ಅವರಲ್ಲಿ ನಾರಾಯಣ ಮೋತಿರಾಮ ಜಾನಿ ಕೆಲಸ ಮಾಡುತ್ತಿದ್ದರು. ಒಂದುಸಲ, ನಾರಾಯಣ ಜಾನಿ ತಮ್ಮ ತಾಯಿಯೊಡನೆ ಶಿರಡಿಗೆ ಹೋದಾಗ, ಬಾಬಾ ಅವರ ತಾಯಿಯ ಹತ್ತಿರ, "ನಾರಾಯಣ ಇನ್ನು ಮೇಲೆ ಯಾರ ಹತ್ತಿರವೂ ಕೆಲಸಮಾಡಬೇಕಾಗಿಲ್ಲ. ಅವನದೇ ಸ್ವಂತ ಉದ್ಯಮ ಮಾಡಲಿ" ಎಂದರು. ತನ್ನ ಆರ್ಥಿಕ ಪರಿಸ್ಥಿತಿಯನ್ನರಿತ ಜಾನಿ, ಬಾಬಾರ ಮಾತುಗಳು ನಿಜವಾಗುವ ಸಾಧ್ಯತೆಯಿದೆಯೇ ಎಂದು ಸಂದೇಹಪಟ್ಟರು. ಸ್ವಲ್ಪ ದಿನಗಳಾದ ಮೇಲೆ, ಮೋಡಕರ ಹತ್ತಿರ ಕೆಲಸ ಮಾಡುವುದನ್ನು ಬಿಟ್ಟು, ತಮ್ಮದೇ ಆದಆನಂದಾಶ್ರಮಎಂಬ ಉಪಹಾರ ಗೃಹವನ್ನು ಆರಂಭಿಸಿದರು. ಅದು ಲಾಭದಾಯಕವಾಗಿ ನಡೆಯಿತು. ನಾರಾಯಣ ಜಾನಿಗೆ ಬಾಬಾರ ಮಾತುಗಳು ನಿಜವಾದುದಕ್ಕೆ ಬಹಳ ಸಂತೋಷವಾಗಿ, ಅವರಲ್ಲಿ ನಂಬಿಕೆ ಹೆಚ್ಚಿ, ಭಕ್ತಿ ಶ್ರದ್ಧೆಗಳು ಇನ್ನೂ ಧೃಢವಾದವು.

ಒಂದುಸಲ ನಾರಾಯಣ ಜಾನಿಯ ಸ್ನೇಹಿತರೊಬ್ಬರಿಗೆ ಚೇಳು ಕಡಿಯಿತು. ತಡೆಯಲಾರದ ನೋವಿನಿಂದ ಸ್ನೇಹಿತ ಒದ್ದಾಡುತ್ತಿದ್ದ. ಬಾಬಾರಲ್ಲಿ ನಂಬಿಕೆಯಿದ್ದ ಜಾನಿ, ಚೇಳು ಕಚ್ಚಿದ ಜಾಗಕ್ಕೆ ಊದಿ ಹಚ್ಚಬೇಕೆಂದು ನೋಡಿದರೆ, ಮನೆಯಲ್ಲಿ ಊದಿ ಇರಲಿಲ್ಲ. ಏನುಮಾಡಬೇಕೆಂದು ತೋಚದೆ ಅವರು, ಬಾಬಾರ ಪಟದ ಮುಂದೆ ನಿಂತು, ಅವರ ಸಹಾಯ ಬೇಡಿದರು. ಬಾಬಾರ ಪ್ರೇರಣೆಯಿಂದ, ಬಾಬಾರ ಚಿತ್ರಪಟದ ಮುಂದೆ ಬಿದ್ದಿದ್ದ ಅಗರುಬತ್ತಿಯ ಬೂದಿಯನ್ನು ತೆಗೆದುಕೊಂಡು, ಅದನ್ನೇ ಊದಿಪ್ರಸಾದವೆಂದು ತಿಳಿದು, ತನ್ನ ಸ್ನೇಹಿತನ ಚೇಳು ಕಚ್ಚಿದ್ದ ಜಾಗಕ್ಕೆ ಹಚ್ಚಿದರು. ಊದಿ ಹಚ್ಚಿ ಕೈ ತೆಗೆಯುತ್ತಿದಂತೆಯೇ, ನೋವೆಲ್ಲಾ ಮಾಯವಾಗಿ ಹೋಯಿತು. ಅದರಿಂದ ಇಬ್ಬರಿಗೂ ಅಪಾರ ಸಂತೋಷವಾಯಿತು.

ಜಾಮನೇರ್ ಲೀಲೆ

೧೯೦೪-೫ರ ಸಮಯದಲ್ಲಿ, ನಾನಾ ಸಾಹೇಬ್ ಚಾಂದೋರ್ಕರರು ಜಾಮನೇರ್ನಲ್ಲಿ ಮಾಮಲತದಾರರಾಗಿದ್ದರು. ಜಾಮನೇರ್ ಶಿರಡಿಯಿಂದ ೧೦೦ ಮೈಲಿಗಳಿಗೂ ಹೆಚ್ಚು ದೂರದಲ್ಲಿದೆ. ಅವರ ಮಗಳು ಮೈನಾತಾಯಿಗೆ ಹೆರಿಗೆಯಾಗಬೇಕಿತ್ತು. ಹೆರಿಗೆ ನೋವಿನಿಂದಾಗಿ ಆಕೆ ಬಹಳ ಒದ್ದಾಡುತ್ತಿದ್ದಳು. ಎರಡು ಮೂರು ದಿನಗಳಾದರೂ ನೋವು ತಗ್ಗದೆ, ಬಹಳ ಯಾತನೆ ಪಡುತ್ತಿದ್ದ ಆಕೆಯ ಪರಿಸ್ಥಿತಿ ಅಷ್ಟು ಸಮಾಧಾನಕರವಾಗಿರಲಿಲ್ಲ. ಮನೆಯವರೆಲ್ಲರೂ ಬಹಳ ಚಿಂತಾಕ್ರಾಂತರಾಗಿದ್ದರು. ಆಗ ನಾನಾ ಸಾಹೇಬರು ಬಾಬಾರ ಸಹಾಯ ಕೋರಿ ಅವರನ್ನು ಪ್ರಾರ್ಥಿಸಿಕೊಂಡರು.

ಅದೇ ಸಮಯದಲ್ಲಿ, ಶಿರಡಿಯಲ್ಲಿ ರಾಮಗಿರಿ ಬುವಾ ಎನ್ನುವ ಬಾಬಾ ಭಕ್ತರೊಬ್ಬರು (ಅವರನ್ನುಬಾಪೂಗೀರ್ಎಂದು ಬಾಬಾ ಕರೆಯುತ್ತಿದ್ದರು), ತನ್ನ ಸ್ವಗ್ರಾಮಕ್ಕೆ ಹೋಗಲು ಅನುವಾಗುತ್ತಿದ್ದರು. ಬಾಬಾ ಅವರನ್ನು ಕರೆದು ಜಾಮನೇರಿಗೆ ಹೋಗಿ, ನಾನಾ ಸಾಹೇಬರಿಗೆ ಊದಿ ಕೊಟ್ಟು, ಅಲ್ಲಿಂದ ತನ್ನ ಊರಿಗೆ ಹೋಗಲು ಹೇಳಿದರು. ಬುವಾ, “ನನ್ನ ಹತ್ತಿರ ಎರಡೇ ರೂಪಾಯಿ ಇರುವುದು, ಜಲಗಾಂವ್ ವರೆಗೆ ಹೋಗಲು ಸಾಕಾಗುತ್ತದೆ. ಅಲ್ಲಿಂದ ಜಾಮನೇರ್ಗೆ ೩೦ ಮೈಲಿ ದೂರ. ಅಲ್ಲಿಗೆ ಹೋಗಲು ನನ್ನ ಬಳಿ ಹಣವಿಲ್ಲಎಂದರು. ವಿಷಯದಲ್ಲಿ ಆತನೇನೂ ಯೋಚನೆ ಮಾಡಬೇಕಾಗಿಲ್ಲವೆಂದೂ, ಎಲ್ಲವೂ ಅನುಕೂಲಕರ ವಾಗಿರುತ್ತದೆಯೆಂದೂ, ಬಾಬಾ ಹೇಳಿದರು. ನಂತರ, ಶ್ಯಾಮಾರನ್ನು ಮಾಧವ ಅಡಕರರ ಆರತಿ ಹಾಡು ಬರೆದು ಕೊಡುವಂತೆ ಬಾಬಾ ಹೇಳಿದರು. ಬಾಬಾರಲ್ಲಿ ಸಂಪೂರ್ಣ ನಂಬಿಕೆಯಿದ್ದ ಬುವಾ, ಅವರು ಕೊಟ್ಟ ಊದಿಪೊಟ್ಟಣವನ್ನೂ, ಶ್ಯಾಮಾ ಬರೆದುಕೊಟ್ಟ ಆರತಿ ಹಾಡನ್ನೂ ತೆಗೆದುಕೊಂಡು ಶಿರಡಿಯಿಂದ ಹೊರಟು, ಮಾರನೆಯ ದಿನ ಮುಂಜಾವು ಮೂರುಗಂಟೆಯ ವೇಳೆಗೆ ಜಲಗಾಂವ್ ಸೇರಿದರು. ಆಗ ಅವರಲ್ಲಿದ್ದ ಹಣ ಎರಡು ಆಣೆ ಮಾತ್ರ. ರೈಲಿನಿಂದಿಳಿದು ಹೊರಕ್ಕೆ ಬಂದು, ಮುಂದೇನು ಮಾಡಬೇಕೆಂದು ಯೋಚಿಸುತ್ತಿದ್ದಾಗ, "ಶಿರಡಿಯಿಂದ ಬಂದ ಬಾಪೂಗೀರ್ ಯಾರು?" ಎಂಬ ಕೂಗು ಕೇಳಿಸಿತು. ಬುವಾ ತಾವೇ ಎಂದು ಹೇಳಿದರು. ಮನುಷ್ಯ ಬುವಾರ ಸಾಮಾನು ತೆಗೆದುಕೊಂಡು, ಒಂದು ಸುಂದರವಾದ, ಶ್ರೇಷ್ಠವಾದ ಕುದುರೆಗಳನ್ನು ಕಟ್ಟಿದ್ದ ಟಾಂಗಾದ ಬಳಿಗೆ, ಅವರನ್ನು ಕರೆದುಕೊಂಡು ಹೋದ. ಟಾಂಗಾ ಹತ್ತಿ ಇಬ್ಬರೂ ಅಲ್ಲಿಂದ ಹೊರಟರು. ಚುರುಕಾಗಿ ಓಡುತ್ತಿದ್ದ ಕುದುರೆಗಳು ಮುಂಜಾನೆಯ ವೇಳೆಗೆ ಒಂದು ಕೆರೆಯ ಬಳಿಗೆ ಬಂದವು. ಟಾಂಗಾವಾಲಾ ಕುದುರೆಗಳಿಗೆ ನೀರು ಕುಡಿಸಲು ಅಲ್ಲಿ ನಿಲ್ಲಿಸಿ, ಬುವಾಗೂ ಮುಖ ಕೈ ಕಾಲು ತೊಳೆದುಕೊಳ್ಳಲು ಹೇಳಿದ. ಅನಂತರ ಅವರಿಗೆ ತಿನ್ನಲು ಕೆಲವು ತಿನಿಸುಗಳನ್ನು ಕೊಟ್ಟ. ಅವನು ಹಾಕಿದ್ದ ದಿರಸು, ಅವನ ಗಡ್ಡ ಮೀಸೆಗಳನ್ನು ನೋಡಿ ಅವನು ಮುಸ್ಲಿಮನೇನೋ ಎಂದು ಬುವಾ ಸಂದೇಹಪಟ್ಟರು. ಆಗ ಅವನು, ತಾನು ಗರವಾಲ್ ಕ್ಷತ್ರಿಯನೆಂದೂ, ತಿನಿಸುಗಳನ್ನು ನಾನಾ ಸಾಹೇಬರೇ ಕಳುಹಿಸಿದ್ದಾರೆಂದೂ ಹೇಳಿದ. ನಂತರ ಇಬ್ಬರೂ ಕುಳಿತು ತಿನ್ನುವುದನ್ನು ಮುಗಿಸಿ, ಮತ್ತೆ ಟಾಂಗಾದಲ್ಲಿ ಕುಳಿತು ಸುಮಾರು ಏಳು ಗಂಟೆಯ ವೇಳೆಗೆ ಜಾಮನೇರ್ ತಲುಪಿದರು. ಬುವಾ ಟಾಂಗಾದಿಂದಿಳಿದು ಕಾಲಕೃತ್ಯಗಳನ್ನು ತೀರಿಸಲು, ಪಕ್ಕಕ್ಕೆ ಹೋದರು. ಅವರು ಹಿಂತಿರುಗಿದಾಗ ಟಾಂಗಾ ಆಗಲೀ, ಟಾಂಗಾವಾಲಾ ಆಗಲೀ ಕಾಣಿಸಲಿಲ್ಲ. ಆಶ್ಚರ್ಯಪಟ್ಟ ಅವರು ಮುಂದೇನು ಮಾಡಬೇಕೆಂದು ತೋಚದೆ, ಹತ್ತಿರದ ಕಚೇರಿಗೆ ಹೋಗಿ ನಾನಾ ಸಾಹೇಬರ ಮನೆಯ ವಿಳಾಸ ತೆಗೆದುಕೊಂಡು, ನಾನಾ ಸಾಹೇಬರು ಊರಿನಲ್ಲಿಯೇ ಇದ್ದಾರೆಂದೂ ತಿಳಿದು ಅವರ ಮನೆಗೆ ಹೋದರು. ಮನೆ ಸೇರಿ ನಾನಾ ಸಾಹೇಬರಿಗೆ ತಾನು ಶಿರಡಿಯಿಂದ ಬಂದಿದ್ದೇನೆ ಎಂದು ತಿಳಿಸಿದರು.

ಮಗಳ ಪರಿಸ್ಥಿತಿ ಬಹಳ ವಿಷಮವಾಗಿದ್ದು, ನಾನಾ ಬಹಳ ಚಿಂತೆಯಲ್ಲಿದ್ದರು. ಬಾಬಾ ಕಳುಹಿಸಿದ್ದ ಊದಿ ಆರತಿಗಳನ್ನು ರಾಮಗಿರ್ ಬುವಾರಿಂದ ಪಡೆದ ತಕ್ಷಣ, ಅವರ ಮನಸ್ಸು ಬಹಳ ನಿರಾಳವಾಯಿತು. ತಮ್ಮ ಹೆಂಡತಿಯನ್ನು ಕರೆದು ಊದಿಯನ್ನು ನೀರಿನಲ್ಲಿ ಕಲಸಿ ಮಗಳಿಗೆ ಕುಡಿಸುವಂತೆ ಹೇಳಿ, ತಾವು ಬಾಬಾರ ಪಟದ ಮುಂದೆ ನಿಂತು ಆರತಿಯನ್ನು ಹಾಡಲು ಆರಂಭಿಸಿದರು. ಕೆಲವೇ ನಿಮಿಷಗಳಲ್ಲಿ ಹೆರಿಗೆ ಸುಸೂತ್ರವಾಗಿ ಆಯಿತೆಂದು ಒಳಗಿಂದ ಸಮಾಚಾರ ಬಂತು. ಸಂಕಟ ತೀರಿತ್ತು. ಎಲ್ಲರಿಗೂ ನೆಮ್ಮದಿಯಾಯಿತು. ಶಿರಡಿಯಿಂದ ಸಮಯಕ್ಕೆ ಸರಿಯಾಗಿ ಊದಿ ತಂದುಕೊಟ್ಟಿದ್ದಕ್ಕೆ, ರಾಮಗೀರ್ ಬುವಾಗೆ ಬಹಳ ಆಪ್ಯಾಯತೆಯಿಂದ ನಾನಾ ವಂದನೆಗಳನ್ನು ಹೇಳಿದರು. ಅದಕ್ಕೆ ಬುವಾ, ನಾನಾ ಸಾಹೇಬರು ಟಾಂಗಾ ಕಳುಹಿಸದಿದ್ದರೆ ತಾನು ಸಮಯಕ್ಕೆ ಸರಿಯಾಗಿ ಬರಲು ಸಾಧ್ಯವಾಗುತ್ತಿರಲಿಲ್ಲ ಎಂದು, ಅಂತಹ ಸುಂದರವಾದ ಟಾಂಗಾ, ಒಳ್ಳೆಯ ತಿನಿಸುಗಳನ್ನು ಕಳುಹಿಸಿದಕ್ಕೆ ನಾನಾ ಸಾಹೇಬರಿಗೆ ವಂದನೆಗಳನ್ನು ಅರ್ಪಿಸಿದರು.

ನಾನಾ ಸಾಹೇಬರು ಬೆರಗಾಗಿ ಯೋಚನೆಯಲ್ಲಿ ಬಿದ್ದರು. ತಾವು ಟಾಂಗಾ ಆಗಲೀ, ಟಾಂಗಾವಾಲನನ್ನಾಗಲೀ ಕಳುಹಿಸಿರಲಿಲ್ಲವೆಂದೂ, ಹಾಗೆ ನೋಡಿದರೆ ತಮಗೆ ಶಿರಡಿಯಿಂದ ಒಬ್ಬರು ಬರುತ್ತಿದ್ದಾರೆ ಎಂಬುದು ತಿಳಿದೇ ಇರಲಿಲ್ಲವೆಂದೂ ಹೇಳಿದರು. ನಡೆದ ವಿಷಯ ಇಬ್ಬರಿಗೂ ಅರ್ಥವಾಗಿ, ಇಬ್ಬರೂ ಅಚ್ಚರಿಗೊಂಡು ತಮ್ಮ ಭಕ್ತರ ಒಳಿತಿಗೋಸ್ಕರ ಬಾಬಾ ಎಷ್ಟು ಆಸ್ತೆ ತೋರಿಸುತ್ತಾರೆ ಎಂಬುದನ್ನು ಅರಿತರು.

ಸಾಯಿಲೀಲಾ ಪತ್ರಿಕೆಯ ಸಂಪುಟ ೧೩, ಸಂಚಿಕೆ ೧೧, ೧೨,೧೩ ರಲ್ಲಿ, ನಿವೃತ್ತ ಮಾಮಲತದಾರಾದ ಶ್ರೀ ಬಿ. ವಿ. ದೇವ್, ಗದ್ಯ ಪದ್ಯ ರೂಪದಲ್ಲಿ ಘಟನೆಯನ್ನು ಕುರಿತು ಒಂದು ವ್ಯಾಖ್ಯೆಯನ್ನು ಬರೆದಿದ್ದಾರೆ. ರಾಮಗೀರ್ ಬುವಾ ಮತ್ತು ನಾನಾ ಸಾಹೇಬ್ ಚಾಂದೋರ್ಕರರ ಮಗ ಬಾಪೂ ರಾವ್ ಚಾಂದೋರ್ಕರ್, ಇಬ್ಬರನ್ನೂ ಭೇಟಿ ಮಾಡಿ ಅವರು ಇದನ್ನು ಬರೆದರು. ದೀರ್ಘವಾದ ವ್ಯಾಖ್ಯೆ ಓದಲು ಬಹಳ ಚೆನ್ನಾಗಿದೆ. ಬಿ.ವಿ.ಎನ್. ಸ್ವಾಮಿ ಅವರೂ ಮೈನಾತಾಯಿ, ಬಾಪೂಸಾಹೇಬ್ ಚಾಂದೋರ್ಕರ್, ರಾಮಗೀರ್ ಬುವಾರವರನ್ನು ಭೇಟಿ ಮಾಡಿ, ಅವರಿಂದ ಪಡೆದ ಹೇಳಿಕೆಗಳನ್ನು ತಮ್ಮ "ಭಕ್ತರ ಅನುಭವಗಳು" ಎಂಬ ಪುಸ್ತಕದಲ್ಲಿ ಬರೆದಿದ್ದಾರೆ. ಅವರು ಬರೆದಿರುವ ರಾಮಗೀರ್ ಬುವಾ ಅವರ ಹೇಳಿಕೆ ಹೀಗಿದೆ, "ಒಂದು ದಿನ ಬಾಬಾ ನನ್ನನ್ನು ಕರೆದು, ಒಂದು ಪೊಟ್ಟಣ ಊದಿ ಮತ್ತು ಆರತಿ ಬರೆದಿದ್ದ ಕಾಗದಗಳನ್ನು ಕೊಟ್ಟು, ಅವನ್ನು ಜಾಮನೇರ್ಗೆ ಹೋಗಿ ನಾನಾ ಸಾಹೇಬ್ ಚಾಂದೋರ್ಕರರಿಗೆ ಕೊಡಲು ಹೇಳಿದರು. ನಾನು ಬಾಬಾರಿಗೆ, ನನ್ನ ಹತ್ತಿರ ಎರಡು ರೂಪಾಯಿ ಮಾತ್ರ ಇದೆ. ಅಷ್ಟು ಹಣದಲ್ಲಿ ನಾನು ಕೋಪರಗಾಂವ್ನಿಂದ ಜಲಗಾಂವ್ಗೆ ಹೋಗಿ ಅಲ್ಲಿಂದ ಗಾಡಿಯಲ್ಲಿ ಜಾಮನೇರ್ಗೆ ಹೋಗಲು ಹೇಗೆ ಸಾಧ್ಯ ಎಂದೆ. ಬಾಬಾದೇವರು ಕೊಡುತ್ತಾನೆ ಹೋಗುಎಂದರು. ಅಂದು ಶುಕ್ರವಾರ. ನಾನು ಅಂದೇ ಹೊರಟೆ. ಮನಮಾಡ್ ಸಾಯಂಕಾಲ -೩೦ ಕ್ಕೆ ಸೇರಿ, ಅಲ್ಲಿಂದ ಜಲಗಾಂವ್ಗೆ ರಾತ್ರಿ -೪೫ರ ವೇಳೆಗೆ ಸೇರಿದೆ. ಆಗ ಪ್ಲೇಗ್ ನಿಬಂಧನೆಗಳು ಜಾರಿಯಲ್ಲಿದ್ದು, ನನಗೆ ಬಹಳ ತೊಂದರೆಯಾಯಿತು. ಜಾಮನೇರ್ಗೆ ಹೇಗೆ ಹೋಗಬೇಕೆಂದು ಯೋಚಿಸುತ್ತಿದ್ದೆ. . ಗಂಟೆಯ ವೇಳೆಗೆ ಪೇಟ ಸುತ್ತಿ, ಬೂಟ್ಸ್ ಹಾಕಿ, ಒಳ್ಳೆಯ ದಿರಸು ಧರಿಸಿದ್ದ ಜವಾನನೊಬ್ಬ ಬಂದು, ನನ್ನ ಸಾಮಾನು ತೆಗೆದುಕೊಂಡು, ಟಾಂಗಾದಲ್ಲಿ ಕೂರಿಸಿಕೊಂಡು ಹೊರಟ. ನನಗೆ ಹೆದರಿಕೆಯಾಯಿತು. ದಾರಿಯಲ್ಲಿ, ಬಾಗೂರಿನಲ್ಲಿ ಸ್ವಲ್ಪ ತಿಂಡಿ ತಿಂದೆವು. ಬೆಳಗಿನ ಜಾವ ಜಾಮನೇರ್ ಸೇರಿದೆವು. ನಾನು ಕಾಲಕೃತ್ಯಗಳನ್ನು ತೀರಿಸಿ ಬರುವುದರೊಳಗೆ ಟಾಂಗಾ ಆಗಲಿ, ಟಾಂಗಾವಾಲಾ ಆಗಲಿ ಕಾಣಲಿಲ್ಲ”.

ಬುಬೋನಿಕ್ ಪ್ಲೇಗ್

ಒಂದು ಸಲ, ನಾನಾ ಸಾಹೇಬ್ ಚಾಂದೋರ್ಕರ್ ತಮ್ಮ ಹೆಂಡತಿಯೊಡನೆ ರೈಲಿನಲ್ಲಿ ಕಲ್ಯಾಣ್ಗೆ ಹೋಗುತ್ತಿದ್ದರು. ಅವರ ಸ್ನೇಹಿತನೊಬ್ಬನ ಮಗಳಿಗೆ ಪ್ಲೇಗ್ ಆಗಿದೆ ಎಂಬ ಸಮಾಚಾರ ತಿಳಿಯಿತು. ಸ್ನೇಹಿತ ಮಗಳಿಗೆ ಊದಿ ಕಳುಹಿಸಬೇಕೆಂದುಕೊಂಡ. ಆದರೆ ಆಗ, ಅವನ ಹತ್ತಿರ ಊದಿ ಇರಲಿಲ್ಲ. ಚಾಂದೋರ್ಕರರನ್ನು ಊದಿ ಕೇಳಲು ಅವರ ಬಳಿಗೆ ಹೋದ. ಅವರು ರೈಲು ಪ್ರಯಾಣದಲ್ಲಿದ್ದುದರಿಂದ, ಅವರ ಬಳಿಯೂ ಊದಿ ಇರಲಿಲ್ಲ. ಥಾಣೆ ನಿಲ್ದಾಣ ಬರುತ್ತಲೂ ಅವರು ಇಳಿದು, ಪ್ಲಾಟ್ ಫಾರ್ಮ್ ಮೇಲಿನ ಮಣ್ಣು ಸ್ವಲ್ಪ ತೆಗೆದುಕೊಂಡು, ಬಾಬಾರನ್ನು ಧ್ಯಾನಿಸಿ, ತಮ್ಮ ಹೆಂಡತಿಯ ಹಣೆಗೆ ಹಚ್ಚಿದರು. ಇದೆಲ್ಲವನ್ನು ಸ್ನೇಹಿತ ನೋಡಿದ. ಆಮೇಲೆ ಅವನು ತನ್ನ ಮಗಳ ಮನೆಗೆ ಹೋದಾಗ ಅಲ್ಲಿ ಮೂರು ನಾಲ್ಕು ದಿನಗಳಿಂದ ನೋವು ತಿನ್ನುತ್ತಿದ್ದ ಹುಡುಗಿ, ಚಾಂದೋರ್ಕರ್ ತಮ್ಮ ಹೆಂಡತಿಯ ಹಣೆಗೆ ಮಣ್ಣು ಹಚ್ಚಿದ ಘಳಿಗೆಯಿಂದ, ಸುಧಾರಿಸಿದ್ದಳು. ಅದನ್ನು ಕಂಡ ಸ್ನೇಹಿತ ಆಶ್ಚರ್ಯಗೊಂಡ.

ನಾರಾಯಣ ರಾವ್ ಕಥೆ

ಅವರ ಮಹಾಸಮಾಧಿಗೆ ಮುಂಚೆ, ಬಾಬಾರನ್ನು ಪ್ರತ್ಯಕ್ಷ ದರ್ಶನ ಮಾಡಿಕೊಂಡ ಅನೇಕ ಭಕ್ತರಲ್ಲಿ ನಾರಾಯಣ ರಾವ್ ಒಬ್ಬರು. ಬಾಬಾರನ್ನು ಶಿರಡಿಯಲ್ಲಿ ಎರಡುಸಲ ಕಂಡಿದ್ದರು. ಬಾಬಾ ಮಹಾಸಮಾಧಿಯಾದ ವರ್ಷದಲ್ಲಿ ನಾರಾಯಣ ರಾವ್ ಖಾಯಿಲೆಯಿಂದ ಬಹಳ ನರಳಿದರು. ಮಾಡಬಹುದಾದ ಚಿಕಿತ್ಸೆಗಳನ್ನೆಲ್ಲಾ ಮಾಡಿದರೂ ಅವರಿಗೆ ಖಾಯಿಲೆ ಕಡಮೆಯಾಗಲಿಲ್ಲ. ಅವರು ಬಾಬಾರನ್ನು ಹಗಲೂ ಇರುಳೂ ಧ್ಯಾನಮಾಡುತ್ತಿದ್ದರು. ಒಂದುದಿನ ಬಾಬಾ ಅವರ ಕನಸಿನಲ್ಲಿ ಕಾಣಿಸಿಕೊಂಡು, "ಚಿಂತೆ ಮಾಡಬೇಡ. ನಾಳೆಯಿಂದ ನೀನು ಗುಣಮುಖನಾಗುತ್ತೀಯೆ. ಒಂದು ವಾರದಲ್ಲಿ ಗುಣಹೊಂದುತ್ತೀಯೆ" ಎಂದು ಸಾಂತ್ವನದ ಮಾತುಗಳನ್ನು ಹೇಳಿದರು. ಬಾಬಾ ಹೇಳಿದಂತೆ ಅವರಿಗೆ ಒಂದು ವಾರದಲ್ಲಿ ಪೂರ್ತಿ ಗುಣವಾಗಿ, ಮೊದಲಿನಂತಾದರು. ಬಾಬಾ ೧೯೧೮ರ ವರೆಗೆ ಮಾತ್ರ ಬದುಕಿದ್ದರು ಎಂದುಕೊಳ್ಳುವವರಿಗೆ ಘಟನೆ ಕಣ್ಣು ತೆರೆಸುವಂತಹುದು. ಬಾಬಾರು ಮಹಾತ್ಮರು. ಅವರಿಗೆ ಭಕ್ತೋದ್ಧರಣಕ್ಕಾಗಿ ಸಗುಣ ರೂಪವೇ ಬೇಕೆಂಬ ನಿರ್ಬಂಧವೇನೂ ಇಲ್ಲ. ಸಗುಣವಾಗಿಯೋ ನಿರ್ಗುಣವಾಗಿಯೋ ಅವರು ಸದಾಕಾಲ ನಮ್ಮೊಡನೆ ಇದ್ದಾರೆ. ಅವರ ಅವಿಚ್ಚಿನ್ನ ಭಕ್ತರಿಗೆ ಮಾತ್ರ ಅವರು ಲಭ್ಯರು ಎಂದೇನಿಲ್ಲ. ಆರ್ತರಾಗಿ, ಅವರಲ್ಲಿ ಸಂಪೂರ್ಣ ನಂಬಿಕೆಯಿಟ್ಟು, ಶ್ರದ್ಧಾ ಭಕ್ತಿಗಳಿಂದ ಅವರನ್ನು ಕರೆಯುವ ಯಾರಿಗಾದರೂ ಅವರು ಲಭ್ಯರು. ನಮ್ಮಲ್ಲಿ ಬೇಧ ಭಾವಗಳಿರಬಹುದು. ಆದರೆ ಬಾಬಾರಲ್ಲಿ ಅಂತಹ ಬೇಧ ಭಾವಗಳಿಲ್ಲ. ಸದಾಕಾಲದಲ್ಲೂ ಅವರು "ಕೊಡಲು" ಸಿದ್ಧರಾಗಿಯೇ ಇದ್ದಾರೆ.

ಬಾಲಾ ಬುವಾ ಸುತಾರರ ಕಥೆ

ಬಾಲಾ ಬುವಾ ಸುತಾರ್ ಬೊಂಬಾಯಿನ ಒಬ್ಬ ಸಂತರು. ಅವರ ಭಕ್ತಿ, ಶ್ರದ್ಧೆ, ಭಜನೆಗಳಿಂದ ಅವರು "ನವಕಾಲೀನ ತುಕಾರಾಮ್" ಎಂದು ಪ್ರಸಿದ್ಧರಾಗಿದ್ದರು. ಅವರು ಮೊದಲನೆಯ ಸಲ ಶಿರಡಿಗೆ ಬಂದು, ಮಸೀದಿಗೆ ಹೋಗಿ, ಬಾಬಾರ ದರ್ಶನಮಾಡಿ ನಮಸ್ಕರಿಸಿದರು. ಬಾಬಾ ಅವರನ್ನು ನೋಡುತ್ತಲೇ, "ನಾಲ್ಕು ವರ್ಷಗಳಿಂದ ನಾನು ಇವನನ್ನು ಬಲ್ಲೆ" ಎಂದರು. ಅದನ್ನು ಕೇಳಿದ ಬಾಲಾ ಬುವಾ ಸುತಾರರು ದಂಗಾಗಿ ಹೋದರು. ತಾನು ಇದೇ ಮೊದಲ ಸಲ ಶಿರಡಿಗೆ ಬರುತ್ತಿರುವುದು. ಬಾಬಾ ನನ್ನನ್ನು ಹೇಗೆ ಬಲ್ಲರು ಎಂದು ಯೋಚನೆ ಮಾಡಿದಮೇಲೆ, ತಾವು ನಾಲ್ಕು ವರ್ಷಗಳ ಹಿಂದೆ ಬಾಬಾರ ಪಟಕ್ಕೆ ನಮಸ್ಕಾರ ಮಾಡಿದ್ದುದು ನೆನಪಿಗೆ ಬಂತು. ಬಾಬಾರ ಮಾತು ಅವರಿಗೆ ಅರ್ಥವಾಗಿ, ಮಹಾತ್ಮರ ಸರ್ವಜ್ಞತ್ವ, ಸರ್ವವ್ಯಾಪಕತ್ವಗಳ ಅರಿವಾಯಿತು. “ನಾನು ಅವರ ಪಟಕ್ಕೆ ನಮಸ್ಕರಿಸಿದ್ದನ್ನು ಮರೆತರೂ ಅವರು ನೆನಪಿನಲ್ಲಿಟ್ಟುಕೊಂಡಿದ್ದಾರೆ. ಎಂತಹ ಕರುಣಾಮಯಿ ಮಹಾತ್ಮ! ಅವರ ಚಿತ್ರಪಟವನ್ನು ಕಂಡರೂ, ಅವರನ್ನು ಕಂಡಂತೆಯೇ ಎಂಬುದನ್ನು ನನಗೆ ಮನದಟ್ಟು ಮಾಡಿಕೊಟ್ಟಿದ್ದಾರೆಎಂದು ಬಾಲಾ ಬುವಾ ಸುತಾರರು ಅರ್ಥ ಮಾಡಿಕೊಂಡರು.

ಅಪ್ಪಾ ಸಾಹೇಬ್ ಕುಲಕರ್ಣಿ ಕಥೆ

೧೯೧೭ರಲ್ಲಿ ಅಪ್ಪಾ ಸಾಹೇಬ ಕುಲಕರ್ಣಿಗೆ ಥಾಣೆಗೆ ವರ್ಗವಾಯಿತು. ಅವರು ದಿನವೂ, ಬಾಲಾ ಸಾಹೇಬ್ ಭಾಟೆ ಕೊಟ್ಟಿದ್ದ ಬಾಬಾರ ಪಟವನ್ನು ಮನಃಪೂರ್ತಿಯಾಗಿ, ಧೂಪ ದೀಪ ನೈವೇದ್ಯಗಳೊಡನೆ ಪೂಜೆಮಾಡುತ್ತಿದ್ದರು. ಬಾಬಾರನ್ನು ಪ್ರತ್ಯಕ್ಷವಾಗಿ ಕಾಣಬೇಕೆಂಬ ಆಸೆ ಅವರ ಮನಸ್ಸಿನಲ್ಲಿ ತಳವೂರಿ ನಿಂತಿತ್ತು. ಅಂತಹ ಅವಕಾಶಕ್ಕಾಗಿ ಕಾಯುತ್ತಿದ್ದರು.

ಅವರು ಥಾಣೆಯಲ್ಲಿದ್ದಾಗ, ಕಚೇರಿಯ ಕೆಲಸದ ಮೇಲೆ ಆಗಾಗ್ಗೆ ಭಿವಂಡಿಗೆ ಹೋಗಬೇಕಾಗುತ್ತಿತ್ತು. ಒಂದು ಸಲ, ಅವರು ಭಿವಂಡಿಗೆ ಹೋಗಿ ಒಂದುವಾರ ಅಲ್ಲಿರಬೇಕಾದ ಸಂದರ್ಭ ಬಂತು. ಅವರು ಊರಿಗೆ ಹೋದಾಗ ಒಬ್ಬ ಫಕೀರ ಅವರ ಮನೆಗೆ ಬಂದ. ಅವನು ಪಟದಲ್ಲಿದ್ದ ಬಾಬಾರ ತದ್ರೂಪು ಎನ್ನುವಂತಿದ್ದ. ಕುಲಕರ್ಣಿಯ ಹೆಂಡತಿ ಮಕ್ಕಳು ಅವನನ್ನು, "ನೀವು ಶಿರಡಿಯ ಸಾಯಿಬಾಬಾನೇ?" ಎಂದು ಕೇಳಿದರು. ಅದಕ್ಕೆ ಫಕೀರ, "ನಾನು ಬಾಬಾ ಅಲ್ಲ. ಅವರ ಶಿಷ್ಯ. ನಿಷ್ಠಾವಂತ ಸೇವಕ. ನಿಮ್ಮೆಲ್ಲರ ಕ್ಷೇಮ ಸಮಾಚಾರ ತಿಳಿದುಕೊಳ್ಳಲು ಬಂದಿದ್ದೇನೆ" ಎಂದು ಹೇಳಿ ದಕ್ಷಿಣೆ ಕೇಳಿದ. ಆಕೆ ಅವನಿಗೆ ಒಂದು ರೂಪಾಯಿ ದಕ್ಷಿಣೆ ಕೊಟ್ಟರು. ಫಕೀರ ಅವರಿಗೆ ಒಂದು ಪೊಟ್ಟಣದಲ್ಲಿ ಊದಿ ಕೊಟ್ಟು ಅದನ್ನು ಬಾಬಾರ ಪಟದ ಹತ್ತಿರ ಇಟ್ಟು ಪೂಜೆಮಾಡಿಕೊಳ್ಳಲು ಹೇಳಿ ಹೊರಟು ಹೋದ.

ಕುಲಕರ್ಣಿಯ ಕುದುರೆಗೆ ಖಾಯಿಲೆಯಾಗಿ ಆತ ತನ್ನ ಪ್ರಯಾಣವನ್ನು ಮುಂದುವರಿಸಲಾಗದೆ ಥಾಣೆಗೆ ಹಿಂತಿರುಗಬೇಕಾಯಿತು. ಬಾಬಾರ ತದ್ರೂಪಿಯಂತೆ ಕಾಣುತ್ತಿದ್ದ ಫಕೀರನೊಬ್ಬ ಮನೆಗೆ ಬಂದಿದ್ದುದನ್ನು ಮನೆಯವರು ತಿಳಿಸಿದರು. ಕುಲಕರ್ಣಿ ಅವರನ್ನು ತಾನು ಕಾಣಲಾಗಲಿಲ್ಲವೆಂದು ಪರಿತಾಪ ಪಟ್ಟರು. ಆಕೆ ಒಂದು ರೂಪಾಯಿ ದಕ್ಷಿಣೆ ಕೊಟ್ಟದ್ದನ್ನು ಕೇಳಿ, ಬಹಳ ವ್ಯಗ್ರನಾಗಿ, ಬಾಬಾರಿಗೆ ಒಂದು ರೂಪಾಯಿ ಬಹಳ ಕಡಮೆಯೆಂದೂ, ತಾನಾಗಿದ್ದರೆ ಹತ್ತು ರೂಪಾಯಿಗೆ ಕಡಮೆ ಕೊಡುತ್ತಿರಲಿಲ್ಲವೆಂದೂ ಹೇಳುತ್ತಾ, ಫಕೀರನನ್ನು ಹುಡುಕಲು ಹೊರಟರು. ಫಕೀರರು ಇರಬಹುದಾದಂತಹ ಸ್ಥಳಗಳಲ್ಲೆಲ್ಲಾ ಹುಡುಕಿದರೂ ಫಕೀರ ಮಾತ್ರ ಕಾಣಲಿಲ್ಲ. "ಬರಿಯ ಹೊಟ್ಟೆಯಲ್ಲಿ ಯಾವ ಕೆಲಸವನ್ನೂ ಸರಿಯಾಗಿ ಮಾಡಲಾಗದು" ಎಂದು ಬಾಬಾ ಹೇಳುತ್ತಿದ್ದ ಮಾತುಗಳು ನೆನಪಿಗೆ ಬಂದು, ಮನೆಗೆ ಹಿಂತಿರುಗಿದರು. ಊಟಮಾಡಿ ಮತ್ತೆ ತಮ್ಮ ಸ್ನೇಹಿತ ಚಿತ್ರೆಯೊಡನೆ ಅಡ್ಡಾಡಿ ಬರಲು ಹೊರಟರು. ದಾರಿಯಲ್ಲಿ ಒಬ್ಬ ಮನುಷ್ಯ ತಮ್ಮ ಕಡೆಗೆ ಬೇಗ ಬೇಗ ಬರುತ್ತಿರುವಂತೆ ಕಾಣಿಸಿತು. ಅಪ್ಪಾ ಸಾಹೇಬರು ಮನುಷ್ಯ ಮನೆಯಲ್ಲಿ ಹೇಳಿದ ಫಕೀರನೇ ಎಂದು ಗುರುತಿಸಿದರು. ತಾನು ಪೂಜೆಮಾಡಿಕೊಳ್ಳುತ್ತಿದ್ದ ಪಟದಲ್ಲಿನ ಬಾಬಾರ ಪ್ರತಿರೂಪನೇ ಆದ ಫಕೀರ ಅವರ ಬಳಿಗೆ ಬಂದು ಕೈಚಾಚಿ ದಕ್ಷಿಣೆ ಕೇಳಿದ. ಅಪ್ಪಾ ಸಾಹೇಬ್ ಅವನಿಗೆ ಒಂದು ರೂಪಾಯಿ ಕೊಟ್ಟರು. ಅದನ್ನು ಅವನು ಒಳಕ್ಕಿಟ್ಟು, ಮತ್ತೆ ಕೈಚಾಚಿದ. ಅಪ್ಪಾ ಸಾಹೇಬ್ ಮತ್ತೆ ಎರಡು ರೂಪಾಯಿ ಕೊಟ್ಟರು. ಅದನ್ನೂ ಅವನು ಒಳಕ್ಕೆ ಸೇರಿಸಿ, ಮತ್ತೊಮ್ಮೆ ಕೈ ಮುಂದೆ ಮಾಡಿದ. ಅಪ್ಪಾ ಸಾಹೇಬ್ ಅವನಿಗೆ ಸಲ ತಮ್ಮ ಸ್ನೇಹಿತನಿಂದ ಮೂರು ರೂಪಾಯಿ ತೆಗೆದುಕೊಂಡು ಕೊಟ್ಟರು. ಅದನ್ನೂ ಒಳಗಿಟ್ಟು, ಅವನು ಇನ್ನೂ ಕೇಳಿದ. ಅಪ್ಪಾ ಸಾಹೇಬ್, ತನ್ನೊಡನೆ ಮನೆಗೆ ಬಂದರೆ ಫಕೀರ ಕೇಳಿದ ದಕ್ಷಿಣೆ ಕೊಡಬಲ್ಲೆ, ಎಂದರು. ಮನೆ ಸೇರಿದ ಮೇಲೆ ಅವರು ಫಕೀರನಿಗೆ ಮತ್ತೆ ಮೂರು ರೂಪಾಯಿ ಕೊಟ್ಟರು. ಅದನ್ನು ಒಳಗಿಟ್ಟೂ, ಅವನು ಇನ್ನೂ ಕೇಳಿದ. ಅಪ್ಪಾ ಸಾಹೇಬರು ತಮ್ಮ ಬಳಿ ಚಿಲ್ಲರೆ ಇಲ್ಲವೆಂದು, ಹತ್ತು ರೂಪಾಯಿ ನೋಟ್ ಮಾತ್ರ ಇದೆಯೆಂದೂ ಹೇಳಿದರು. ಅವನು ಅದನ್ನೇ ಕೇಳಿ ತೆಗೆದುಕೊಂಡು, ಇದಕ್ಕೆ ಮುಂಚೆ ಕೊಟ್ಟಿದ್ದ ಒಂಭತ್ತು ರೂಪಾಯಿಗಳನ್ನು ಹಿಂದಕ್ಕೆ ಕೊಟ್ಟು ಹೊರಟು ಹೋದ. ಒಂಭತ್ತು ನಾಣ್ಯಗಳು ಹಾಗೆ ಬಾಬಾರ ಕೈಯಿಂದ ಪವಿತ್ರ ಮಾಡಲ್ಪಟ್ಟು, ಅಪ್ಪಾ ಸಾಹೇಬರಿಗೆ ಕೊಡಲ್ಪಟ್ಟವು. ಲಕ್ಷ್ಮೀಬಾಯಿಗೆ ಕೂಡಾ ಬಾಬಾ ಮಹಾಸಮಾಧಿಯಾಗುವುದಕ್ಕೆ ಮುಂಚೆ ಒಂಭತ್ತು ನಾಣ್ಯಗಳನ್ನು ಕೊಟ್ಟಿದ್ದರು, ಎಂಬುದನ್ನು ಇಲ್ಲಿ ನೆನಸಿಕೊಳ್ಳಬಹುದು. ಅವು ನವವಿಧ ಭಕ್ತಿಯ ಸಂಕೇತಗಳು.

ಫಕೀರ ಹೊರಟುಹೋದಮೇಲೆ, ಅಪ್ಪಾ ಸಾಹೇಬ್ ಫಕೀರ ಕೊಟ್ಟಿದ್ದ ಪೊಟ್ಟಣವನ್ನು ಬಿಚ್ಚಿ ನೋಡಿದರೆ ಅದರಲ್ಲಿ ಕೆಲವು ಹೂವಿನ ಪಕಳೆಗಳು, ಅಕ್ಷತೆ ಇತ್ತು. ಅಪ್ಪಾ ಸಾಹೇಬ್ ಶಿರಡಿಗೆ ಹೋದಾಗ, ಬಾಬಾರ ಕೂದಲೊಂದನ್ನು ಪಡೆದರು. ಅವರು ಅದನ್ನೂ ಊದಿಪೊಟ್ಟಣವನ್ನೂ ಸೇರಿಸಿ ತಾಯತ ಮಾಡಿಸಿ, ಸದಾಕಾಲ ಧರಿಸುತ್ತಿದ್ದರು. ಊದಿಯ ಪ್ರಭಾವ ಏನು ಎಂಬುದು ಅವರಿಗೆ ಸ್ವಲ್ಪದಿನಗಳಲ್ಲೇ ಗೊತ್ತಾಯಿತು. ಆತ ಬುದ್ಧಿವಂತ. ಕಷ್ಟಪಟ್ಟು ಕೆಲಸ ಮಾಡುವವರು. ಆದರೂ, ಆತನಿಗೆ ಕೇವಲ ೪೦ ರೂಪಾಯಿಗಳ ಸಂಬಳ ಬರುತ್ತಿತ್ತು. ಊದಿ ಪ್ರಸಾದ ಬಂದಮೇಲೆ, ಆತನ ಸಂಬಳ ೪೦ ರೂಪಾಯಿಗಳಿಗಿಂತ ಬಹಳ ಪಟ್ಟು ಹೆಚ್ಚಾಯಿತು. ಅವರ ಕೀರ್ತಿ ಪ್ರತಿಷ್ಠೆಗಳೂ ಹೆಚ್ಚಿದವು. ಲೌಕಿಕವಾಗಿಯೇ ಅಲ್ಲದೆ, ಅವರ ಆಧ್ಯಾತ್ಮಿಕ ಪ್ರಗತಿಯೂ ಬಹಳ ವೃದ್ಧಿಯಾಯಿತು.

ಹರಿಭಾವು ಕಾರ್ಣಿಕ್ ಕಥೆ

ದಹಾಣುವಿನ ಹರಿಭಾವು ಕಾರ್ಣಿಕ್ಗೆ ಇನ್ನೊಂದು ರೀತಿಯ ಅನುಭವವಾಯಿತು. ೧೯೧೭ರಲ್ಲಿ ಗುರುಪೂರ್ಣಿಮೆಯ ದಿನ, ಅವರು ಶಿರಡಿಗೆ ಬಂದರು. ಶಾಸ್ತ್ರಾನುಸಾರವಾಗಿ ಬಾಬಾರ ಪೂಜೆಮಾಡಿಕೊಂಡರು. ವಸ್ತ್ರ ದಕ್ಷಿಣೆಗಳನ್ನರ್ಪಿಸಿದರು. ನಂತರ ಶ್ಯಾಮಾರ ಮೂಲಕ ಶಿರಡಿ ಬಿಟ್ಟು ಹೊರಡಲು ಬಾಬಾರ ಅನುಮತಿ ಬೇಡಿದರು. ಅನುಮತಿ ಪಡೆದು ಮಸೀದಿಯ ಮೆಟ್ಟಿಲಿಳಿಯುತ್ತಾ ಬಾಬಾರಿಗೆ ಇನ್ನೊಂದು ರೂಪಾಯಿ ಕೊಡಬೇಕೆಂದು ಮೆಟ್ಟಿಲು ಹತ್ತಲು ಹಿಂತಿರುಗಿದರು. ಆಗ ಶ್ಯಾಮಾ ಆತನ ಭಾವವನ್ನು ಗ್ರಹಿಸಿ, ಒಂದುಸಲ ಹೊರಡಲು ಬಾಬಾರ ಅಪ್ಪಣೆ ಪಡೆದಮೇಲೆ, ಮತ್ತೆ ಹಿಂತಿರುಗಬಾರದು ಎಂದು ಹೇಳಿದರು.

ಅದನ್ನು ಮನ್ನಿಸಿ ಹರಿಭಾವು ಮನೆಗೆ ಹಿಂತಿರುಗುತ್ತಾ, ದಾರಿಯಲ್ಲಿ ನಾಸಿಕದಲ್ಲಿ ಕಾಲಾರಾಮನ ದೇವಸ್ಥಾನಕ್ಕೆ ಹೋದರು. ತಮ್ಮ ಶಿಷ್ಯರ ಜೊತೆಯಲ್ಲಿ ದೇವಸ್ಥಾನದ ಬಾಗಿಲಲ್ಲಿ ಕುಳಿತಿದ್ದ ನರಸಿಂಗ ಮಹಾರಾಜರು, ಇವರನ್ನು ಕಂಡ ತಕ್ಷಣ ಎದ್ದು ಬಂದು, ಹರಿಭಾವುವಿನ ಮುಂದೆ ಕೈನೀಡಿ, "ನನ್ನ ರೂಪಾಯಿ ನನಗೆ ಕೊಡು" ಎಂದರು. ಚಕಿತರಾದ ಹರಿಭಾವು, ತಾನು ಕೊಡಬೇಕೆಂದುಕೊಂಡ ಒಂದು ರೂಪಾಯಿಯನ್ನು ರೀತಿಯಲ್ಲಿ ಬಾಬಾ ನರಸಿಂಗ ಮಹಾರಾಜರ ಮೂಲಕ ತೆಗೆದುಕೊಳ್ಳುತ್ತಿದ್ದಾರೆ ಎಂದು ಭಾವಿಸಿ, ಸಂತೋಷದಿಂದ ರೂಪಾಯಿ ತೆಗೆದು ಕೊಟ್ಟರು. ಬಾಬಾರ ಲೀಲೆಯಿಂದ ಬಹಳ ಪ್ರಭಾವಿತರಾದ ಹರಿಭಾವು ಅವರಿಗೆ ಬಾಬಾರಲ್ಲಿ ಭಕ್ತಿ ಮತ್ತಷ್ಟು ಧೃಢವಾಯಿತು. ಊದಿಯಿಂದ ಲೌಕಿಕ ಪಾರಮಾರ್ಥಿಕ ಲಾಭವನ್ನು ಪಡೆದ ಇನ್ನೂ ಅನೇಕ ಭಕ್ತರ ಅನುಭವಗಳನ್ನು ಮುಂದಿನ ಅಧ್ಯಾಯಗಳಲ್ಲಿ ನೋಡೋಣ.

ಇದರೊಂದಿಗೆ ಪ್ಲೇಗ್ ವ್ಯಾಧಿಗಳನ್ನು ಗುಣಪಡಿಸಿದ್ದು, ಜಾಮನೇರ್ ಲೀಲೆ, ನಾರಾಯಣ ರಾವ್ ಖಾಯಿಲೆ, ಬಾಲಾ ಬುವಾ ಸುತಾರ್, ಹರಿಭಾವು ಕಾರ್ಣಿಕ್ ಮತ್ತು ಇತರ ವಿಷಯಗಳನ್ನು ಕುರಿತು ಹೇಳುವ ಮುವ್ವತ್ತಮೂರನೆಯ ಅಧ್ಯಾಯ ಮುಗಿಯಿತು. ಮುಂದಿನ ಅಧ್ಯಾಯದಲ್ಲಿ ಹೇಮಾಡ್ ಪಂತ್, ಡಾಕ್ಟರ್ ಮುಲ್ಕಿ, ಡಾಕ್ಟರ್ ಪಿಳ್ಳೆ, ಶ್ಯಾಮಾರ ನಾದಿನಿ, ಇರಾನಿ ಹುಡುಗಿ, ಹರ್ದಾದ ಗಣ್ಯ, ಬೊಂಬಾಯಿನ ಹೆಂಗಸು ಇತ್ಯಾದಿ ವಿಷಯಗಳನ್ನು ಹೇಳುತ್ತಾರೆ.

||ಸದ್ಗುರು ಶ್ರೀ ಸಾಯಿನಾಥಾರ್ಪಣಮಸ್ತು||ಶುಭಂ ಭವತು||
||ಓಂ ಶಾಂತಿಃ ಶಾಂತಿಃ ಶಾಂತಿಃ||


No comments:

Post a Comment