Tuesday, January 10, 2012

||ಮುವ್ವತ್ನಾಲ್ಕನೆಯ ಅಧ್ಯಾಯ||


||ಶ್ರೀ ಸಾಯಿ ಸಚ್ಚರಿತ್ರೆ||
||ಮುವ್ವತ್ನಾಲ್ಕನೆಯ ಅಧ್ಯಾಯ||
||ವಿಭೂತಿ ಪ್ರಸಾದದ ಮಹಿಮೆ – 2||
ಶ್ರೀ ಗಣೇಶಾಯ ನಮಃ ಶ್ರೀ ಸರಸ್ವತಯೇ ನಮಃ
ಶ್ರೀ ವೆಂಕಟೇಶಾಯ ನಮಃ ಶ್ರೀ ಸಾಯಿನಾಥಾಯ ನಮಃ
ಶ್ರೀ ಸದ್ಗುರುಭ್ಯೋನ್ನಮಃ

ಈ ಅಧ್ಯಾಯದಲ್ಲಿ ಹೇಮಾಡ್ ಪಂತ್, ಡಾಕ್ಟರ್ ಮುಲ್ಕಿ, ಡಾಕ್ಟರ್ ಪಿಳ್ಳೆ, ಶ್ಯಾಮಾರ ನಾದಿನಿ, ಇರಾನಿ ಹುಡುಗಿ, ಹರ್ದಾದ ಗೃಹಸ್ಥ, ಬೊಂಬಾಯಿನ ಮಹಿಳೆ ಇತ್ಯಾದಿ ವಿಷಯಗಳನ್ನು ಕುರಿತು ಹೇಳುತ್ತಾರೆ

ಮಾಲೇಗಾವ್ ಡಾಕ್ಟರ್ ಕಥೆ

ನಾಸಿಕ್ ಜಿಲ್ಲೆಯ ಮಾಲೆಗಾಂವ್‍ನಲ್ಲಿ, ಡಾಕ್ಟರ್ ಐ.ಎಮ್. ಮುಲ್ಕಿ ಎಂಬ ವೈದ್ಯರಿದ್ದರು. ಅವರು ಸ್ನಾತಕೋತ್ತರ ವೈದ್ಯಕೀಯ ಪರೀಕ್ಷೆಯಲ್ಲಿ ಉತ್ತೀರ್ಣರಾದವರು. ಅವರ ಸಹೋದರರೂ ವೈದ್ಯರು. ಒಂದುಸಲ ಆತನ ಸಹೋದರನ ಮಗನೊಬ್ಬನಿಗೆ ಕ್ಷಯ ರೋಗದಿಂದಾಗುವ ಮೂಳೆಯ ಕುರು ಆಯಿತು. ಮನೆಯಲ್ಲಿ ಎಲ್ಲರೂ ವೈದ್ಯರೇ ಆದುದರಿಂದ ಅವನಿಗೆ ಎಲ್ಲರೂ ಒಟ್ಟಾಗಿ ಸೇರಿ ಎಲ್ಲ ತರಹೆಯ ಚಿಕಿತ್ಸೆಗಳನ್ನೂ ಮಾಡಿದರು. ಶಸ್ತ್ರಚಿಕಿತ್ಸೆಯೂ ಆಯಿತು. ಆದರೂ ಆ ಹುಡುಗನಿಗೆ ಯಾವುದೇ ರೀತಿಯ ಶಮನವೂ ಕಾಣಲಿಲ್ಲ. ಅದರ ಬದಲು ಅವನಿಗೆ ನೋವು ಇನ್ನೂ ಹೆಚ್ಚಾಯಿತು. ಅವರ ಸ್ನೇಹಿತರು ಕೆಲವರು ಇದು ವೈದ್ಯ ಚಿಕಿತ್ಸೆಗೆ ಸರಿಹೋಗುವುದಿಲ್ಲ. ದೈವ ಕೃಪೆಯಿಂದಲೇ ಸರಿಯಾಗಬೇಕು. ಇದರ ಬಗ್ಗೆ ಶಿರಡಿಯ ಸಂತನನ್ನು ಕಾಣ ಬಾರದೇಕೆ? ಎಂದು ಸಲಹೆ ಕೊಟ್ಟರು. ಅವರನ್ನು ಶಿರಡಿಯ ಸಾಯಿಬಾಬಾ ಎಂದು ಕರೆಯುತ್ತಾರೆ, ಇಂತಹ ಅನೇಕ ರೋಗಗಳನ್ನು ಅವರು ಗುಣಪಡಿಸಿದ್ದಾರೆ, ಎಂದೂ ತಿಳಿಸಿದರು. ಹುಡುಗನ ತಂದೆತಾಯಿಗಳು ಅವರ ಸಲಹೆಯಂತೆ ಆ ಹುಡುಗನನ್ನು ಕರೆದುಕೊಂಡು ಶಿರಡಿಗೆ ಹೋದರು.

ಶಿರಡಿ ಸೇರಿ, ಆ ಹುಡುಗನನ್ನು ಎತ್ತಿಕೊಂಡು ಮಸೀದಿಗೆ ಹೋಗಿ ಬಾಬಾರ ಪಾದಗಳಲ್ಲಿ ಮಲಗಿಸಿದರು. ಆ ದುಃಖಿತ ತಂದೆ ತಾಯಿಗಳು, ತಮ್ಮ ಹುಡುಗನನ್ನು ನೋವಿನಿಂದ ಬಿಡುಗಡೆ ಮಾಡಿ ಎಂದು ವಿನಯದಿಂದ, ಕಳಕಳಿಯಿಂದ ಬೇಡಿಕೊಂಡರು. ದಯಾಪೂರ್ಣರಾದ ಬಾಬಾ ಅವರಿಗೆ ಸಾಂತ್ವನ ಹೇಳಿ, "ಹೆದರಬೇಡಿ. ಚಿಂತೆ ಬಿಡಿ. ಯಾರು ಈ ಮಸೀದಿಯಲ್ಲಿ ಕಾಲಿಡುತ್ತಾರೋ ಅವರು ಜೀವಮಾನದಲ್ಲಿ ಮತ್ತೆಂದೂ ಸಂಕಟಗಳಿಗೆ ಗುರಿಯಾಗುವುದಿಲ್ಲ. ಧೈರ್ಯವಾಗಿರಿ. ಆ ಕುರುವಿನ ಮೇಲೆ ಈ ಊದಿಯನ್ನು ಹಚ್ಚಿ. ಒಂದುವಾರದಲ್ಲಿ ಅವನಿಗೆ ಗುಣವಾಗುತ್ತದೆ. ಇದು ಮಸೀದಿಯಲ್ಲ. ದ್ವಾರವತಿ. ಇದರ ಒಳ ಹೊಕ್ಕವರೆಲ್ಲಾ ಆರೋಗ್ಯೈಶ್ವರ್ಯಗಳನ್ನು ಪಡೆಯುತ್ತಾರೆ. ಆ ಹುಡುಗನ ದುರಿತಗಳೆಲ್ಲಾ ಇಂದಿನಿಂದ ದೂರವಾಗುತ್ತವೆ" ಎಂದು ಹೇಳಿದರು. ಆ ಹುಡುಗನನ್ನು ಬಾಬಾರ ಹತ್ತಿರ ಕೂಡಿಸಿದರು. ಬಾಬಾ ಅವನಿಗೆ ಆಗಿದ್ದ ಹುಣ್ಣಿನ ಮೇಲೆ ಮೃದುವಾಗಿ ಕೈ ಆಡಿಸಿದರು. ಅವರು ಹಾಗೆ ಕೈಯಾಡಿಸಿ ಪ್ರೇಮ ಪೂರ್ಣ ದೃಷ್ಟಿಯಿಂದ ಒಂದುಸಲ ಅವನನ್ನು ನೋಡಿದರು. ಆ ಹುಡುಗನಿಗೆ ತನ್ನ ನೋವೆಲ್ಲಾ ಮರೆತುಹೋಗಿ ಆನಂದವಾಯಿತು. ವಾಡಾಕ್ಕೆ ಹೋಗಿ ಬಾಬಾ ಹೇಳಿದಂತೆ ಊದಿಯನ್ನು ನಿಯಮದಿಂದ ಹಚ್ಚುತ್ತಾ ಬಂದಂತೆಲ್ಲಾ, ಬಾಬಾ ಹೇಳಿದ್ದ ಕಾಲಮಿತಿಯಲ್ಲಿ ಆ ಹುಡುಗನಿಗೆ ಹುಣ್ಣು ಸಂಪೂರ್ಣವಾಗಿ ಗುಣವಾಗಿ ಅವನು ಎದ್ದು ಓಡಾಡತೊಡಗಿದ. ಅತ್ಯಂತ ಸಂತುಷ್ಟರಾದ ಆ ಹುಡುಗನ ತಂದೆತಾಯಿಗಳು ಬಾಬಾರಿಗೆ ಭಕ್ತಿಪೂರ್ವಕವಾಗಿ ನಮಸ್ಕರಿಸಿ, ಊರಿಗೆ ಹಿಂತಿರುಗಲು ಅಪ್ಪಣೆ ಬೇಡಿದರು. ಬಾಬಾ ಅವರಿಗೆ ಊದಿಕೊಟ್ಟು, ಆಶೀರ್ವದಿಸಿ ಕಳುಹಿಸಿದರು. ಅವರೆಲ್ಲರೂ ಜೀವನ ಪರ್ಯಂತ ಬಾಬಾರ ಆರಾಧನೆ ಮಾಡುತ್ತಿದ್ದರು.

ತನ್ನ ಸಹೋದರನ ಮಗನಿಗೆ ಗುಣವಾದ ಸಂಗತಿ ಡಾಕ್ಟರ್ ಮುಲ್ಕಿಗೆ ತಿಳಿಯಿತು. ವೃತ್ತಿನಿರತ ವೈದ್ಯರಾದದ್ದರಿಂದ ಈ ಲೀಲಾಪ್ರಸಂಗದಿಂದ ಆಶ್ಚರ್ಯಗೊಂಡ ಆವರು, ಬಾಬಾರನ್ನು ಕಾಣಲು ಆತುರರಾದರು. ಆದರೆ ಮಾಲೆಗಾಂವ್‍ನಲ್ಲಿ ಕೆಲವರು ಬಾಬಾರ ವಿರುದ್ಧವಾಗಿ ಮಾತನಾಡಿದರು. ಮನಮಾಡಿನಲ್ಲೂ, ಅವರು ಬಾಬಾರ ಬಗ್ಗೆ ಒಳ್ಳೆಯ ಮಾತುಗಳನ್ನು ಕೇಳಲಿಲ್ಲ. ಅದರಿಂದ ಖತಿಗೊಂಡ ಅವರು, ಶಿರಡಿಗೆ ಹೋಗುವ ಯೋಚನೆಯನ್ನು ಬಿಟ್ಟು ನೇರವಾಗಿ ಬೊಂಬಾಯಿಗೆ ಹೋಗಿ, ತನ್ನ ಕೆಲಸವನ್ನು ಮುಗಿಸಿ ರಜಾದಿನಗಳನ್ನು ಆಲಿಬಾಗ್‍ನಲ್ಲಿ ಕಳೆಯಬೇಕೆಂದು ನಿಶ್ಚಯಿಸಿಕೊಂಡರು. ಅವರು ಬೊಂಬಾಯಿಯಲ್ಲಿ ಇದ್ದಾಗ ಅವರಿಗೆ ದಿನವೂ ರಾತ್ರಿ "ನನ್ನನ್ನು ಇನ್ನೂ ನಂಬುವುದಿಲ್ಲವೇ?" ಎಂಬ ಮಾತುಗಳು ಕೇಳಿಸಿತು. ಅದನ್ನು ಕೇಳಿ ಡಾಕ್ಟರ್ ಮುಲ್ಕಿ ತಮ್ಮ ನಿಲುವನ್ನು ಬದಲಾಯಿಸಿ, ಶಿರಡಿಗೆ ಹೋಗಲು ನಿರ್ಧರಿಸಿದರು. ಆ ಸಮಯದಲ್ಲಿ ಅವರು ಅಂಟುರೋಗ ಜ್ವರದಿಂದ ನರಳುತ್ತಿದ್ದ ಒಬ್ಬ ರೋಗಿಯ ಚಿಕಿತ್ಸೆ ಮಾಡುತ್ತಿದ್ದರು. ಅವನಿಗೆ ಜ್ವರ ಕಡಮೆಯಾಗುವ ಲಕ್ಷಣಗಳು ಕಾಣಲಿಲ್ಲ. ರೋಗಿಯ ಪರಿಸ್ಥಿತಿಯೂ ಸರಿಯಾಗಿರಲಿಲ್ಲ. ಅದರಿಂದ ಶಿರಡಿಯ ಪ್ರಯಾಣ ಮುಂದೂಡ ಬೇಕಾಗುವುದೇನೋ ಎಂದುಕೊಂಡರು. ಅಷ್ಟರಲ್ಲಿ ಅವರಿಗೆ ಇನ್ನೊಂದು ಯೋಚನೆ ಬಂತು. ತನ್ನನ್ನು ತಾನೇ ಪರೀಕ್ಷೆಗೆ ಗುರಿಮಾಡಿಕೊಳ್ಳುವಂತೆ, "ಇಂದು ಈ ರೋಗಿಗೆ ಜ್ವರ ಕಡಮೆಯಾಗಿ ಅವನು ಎಂದಿನಂತಾದರೆ ನಾಳೆಯೇ ಶಿರಡಿಗೆ ಹೊರಡುತ್ತೇನೆ" ಎಂದು ನಿಶ್ಚಯಿಸಿಕೊಂಡರು.

ಚಮತ್ಕಾರವೋ ಎಂಬಂತೆ, ಅವರ ಯೋಚನೆಗೆ ಉತ್ತರಕೊಟ್ಟಂತೆ, ಆ ರೋಗಿಗೆ ಜ್ವರ ಕಡಮೆಯಾಗಲು ಮೊದಲಾಗಿ, ಮಾರನೆಯದಿನ ರೋಗಿಯನ್ನು ನೋಡಲು ಹೋದಾಗ ಅವನ ಜ್ವರ ಮಾಮೂಲಿಗೆ ಬಂದಿತ್ತು. ಅದನ್ನು ಕಂಡ ಡಾ. ಮುಲ್ಕಿ ತಮ್ಮ ನಿರ್ಧಾರದಂತೆ ಅಂದು ರಾತ್ರಿಯೇ ಶಿರಡಿಗೆ ಹೊರಟರು. ಅಲ್ಲಿ ಹೋಗಿ ಮಸೀದಿಯಲ್ಲಿ ಬಾಬಾರನ್ನು ಕಂಡು, ಅವರ ಚರಣಗಳಲ್ಲಿ ತಲೆಯಿಟ್ಟು ಆಶೀರ್ವಾದ ಪಡೆದರು. ಅದಾದಮೇಲೆ ಅವರಿಗೆ ಬಾಬಾರ ಮೂಲಕ ಅನೇಕ ಅನುಭವಗಳಾದವು. ಆತ ಬಾಬಾರ ಅವಿಚ್ಛಿನ್ನ ಭಕ್ತರಾದರು. ಶಿರಡಿಯಲ್ಲಿ ನಾಲ್ಕು ದಿನಗಳಿದ್ದು, ಸಂತೋಷಗೊಂಡವರಾಗಿ ಬಾಬಾರ ಅಪ್ಪಣೆ ಪಡೆದು ತಮ್ಮ ಊರಿಗೆ ಹಿಂತಿರುಗಿದರು. ಆತ ಹಿಂತಿರುಗಿದ ಕೆಲವೇ ದಿನಗಳಲ್ಲಿ ಆತನಿಗೆ ಉನ್ನತಜಾಗಕ್ಕೆ ಬಡತಿ ಸಿಕ್ಕಿ, ಬಿಜಾಪುರಕ್ಕೆ ವರ್ಗವಾಯಿತು.

ಡಾಕ್ಟರ್ ಪಿಳ್ಳೆ ಕಥೆ

ಡಾ. ಪಿಳ್ಳೆ ಬಾಬಾರ ಅತಿಸನ್ನಿಹಿತ ಭಕ್ತರಲ್ಲೊಬ್ಬರು. ಬಾಬಾರಿಗೆ ಅವರೆಂದರೆ ಬಹಳ ಪ್ರೀತಿ. ಅವರನ್ನು ಬಾಬಾ ‘ಭಾವೂ’ ಎಂದು ಕರೆಯುತ್ತಿದ್ದರು. ಅವರೊಡನೆ ಅನೇಕ ವಿಷಯಗಳ ಬಗ್ಗೆ ಚರ್ಚೆಮಾಡುತ್ತಿದ್ದರು. ಡಾ. ಪಿಳ್ಳೆ ಮಸೀದಿಯಲ್ಲಿ ಯಾವಾಗಲೂ ಬಾಬಾರ ಪಕ್ಕದಲ್ಲಿ ಕುಳಿತುಕೊಳ್ಳುತ್ತಿದ್ದರು. ಒಂದುಸಲ ಅವರಿಗೆ ನಾರು ಹುಣ್ಣಾಗಿ ಬಹಳ ನರಳಿದರು. ಒಂದಾದಮೇಲೊಂದರಂತೆ ಏಳು ಕುರುಗಳಾಗಿ ಅಸಾಧ್ಯವಾದ ನೋವು ಅನುಭವಿಸಿದರು. ಆ ತಡೆಯಲಾರದ ನೋವಿನಿಂದ ಅವರು ಬಾಬಾ ಸ್ಮರಣೆಯನ್ನೂ ಮಾಡಲಾರದೆ ಹೋದರು. ಕಾಕಾ ಸಾಹೇಬ್ ದೀಕ್ಷಿತರು ಅವರನ್ನು ನೋಡಲು ಹೋದಾಗ ಡಾ. ಪಿಳ್ಳೆ, "ಈ ನೋವನ್ನು ಸಹಿಸಲಾರೆ. ಇದಕ್ಕಿಂತ ಸಾವೇ ವಾಸಿ. ಇದು ನನ್ನ ಪೂರ್ವ ಜನ್ಮ ಕೃತ ಕರ್ಮಫಲವೆಂದು ನನಗೆ ಗೊತ್ತು. ದಯವಿಟ್ಟು ಬಾಬಾರ ಬಳಿಗೆ ಹೋಗಿ ಇದನ್ನು ಮುಂದಿನ ಹತ್ತು ಜನ್ಮಗಳಿಗೆ ವರ್ಗಾಯಿಸಿ, ಇದರಿಂದ ನನಗೆ ಬಿಡುಗಡೆ ಕೊಡುವಂತೆ ಕೇಳಿಕೊಳ್ಳಿ" ಎಂದರು. ದೀಕ್ಷಿತರು ಬಾಬಾರ ಬಳಿಗೆ ಹೋಗಿ, ಪಿಳ್ಳೆಯವರ ಅಹವಾಲನ್ನು ಬಾಬಾರಿಗೆ ಹೇಳಿದರು. ಅದಕ್ಕೆ ಬಾಬಾ, "ಅವನನ್ನು ಚಿಂತೆಮಾಡದೆ ಧೈರ್ಯದಿಂದಿರುವಂತೆ ಹೇಳು. ಹತ್ತು ಜನ್ಮಗಳೇಕೆ ಅವನು ನೋವು ತಿನ್ನಬೇಕು? ಇನ್ನು ಹತ್ತು ದಿನಗಳಲ್ಲೇ ಅವನ ನೋವನ್ನೆಲ್ಲಾ ಹೋಗಲಾಡಿಸುವೆ. ಅವನ ಪೂರ್ವಜನ್ಮಕೃತ ಫಲಗಳಿಂದ ಅವನನ್ನು ಮುಕ್ತನನ್ನಾಗಿ ಮಾಡುವೆ. ಸಹಾಯಕ್ಕಾಗಿ ನಾನಿಲ್ಲಿರುವಾಗ ಅವನು ಸಾವನ್ನೇಕೆ ಬಯಸಬೇಕು? ಅವನನ್ನು ಯಾರಾದರೂ ಬೆನ್ನ ಮೇಲೆ ಕೂಡಿಸಿ ಕೊಂಡು ಇಲ್ಲಿಗೆ ಕರೆತನ್ನಿ. ಅವನ ದುಃಖಗಳನ್ನೆಲ್ಲ ಒಂದೇಸಲಕ್ಕೆ ಮುಗಿಸಿ ಬಿಡೋಣ" ಎಂದರು.

ಪಿಳ್ಳೆಯನ್ನು ಮಸೀದಿಗೆ ಹೊತ್ತು ತಂದು, ಬಾಬಾರ ಪಕ್ಕದಲ್ಲಿ ಕೂಡಿಸಿದರು. ಬಾಬಾ ಅವರಿಗೆ ತಮ್ಮ ಲೋಡುದಿಂಬನ್ನು ಆಸರೆಯಾಗಿ ಕೊಟ್ಟು , ಪಕ್ಕದಲ್ಲಿ ಕೂಡಿಸಿಕೊಂಡು, "ಕರ್ಮ ಫಲಗಳನ್ನು ಅನುಭವಿಸಿ ತೀರಿಸುವುದೇ ಸರಿಯಾದ ದಾರಿ. ನಮ್ಮ ಕರ್ಮಗಳೇ ನಮ್ಮ ಸುಖ ದುಃಖಗಳಿಗೆ ಕಾರಣಗಳು. ಆದ್ದರಿಂದ ಬಂದದ್ದನ್ನು ಅನುಭವಿಸಲು ಸಿದ್ಧರಾಗಿರಬೇಕು. ಅಲ್ಲಾ ಒಬ್ಬನೇ ಅವುಗಳಿಂದ ವಿಮೋಚನೆ-ರಕ್ಷಣೆಗಳನ್ನು ಕೊಡಬಲ್ಲವನು. ಅವನನ್ನೇ ಯಾವಾಗಲೂ ಸ್ಮರಿಸುತ್ತಿರುವವರ ಯೋಗಕ್ಷೇಮಗಳನ್ನು ಅವನೇ ನೋಡಿಕೊಳ್ಳುತ್ತಾನೆ. ಕಾಯಾ, ವಾಚಾ, ಮನಸಾ ಅವನಿಗೆ ಶರಣಾಗತರಾಗಿ. ಆಗ ಅವನೇನು ಮಾಡುತ್ತಾನೆ ಎಂಬುದು ತಿಳಿಯುತ್ತದೆ" ಎಂದರು. ಪಿಳ್ಳೆ, "ನಾನಾ ಸಾಹೇಬ್ ಚಾಂದೋರ್ಕರರು ಹುಣ್ಣಿನ ಮೇಲೆ ಕಟ್ಟು ಕಟ್ಟಿದರು. ಅದರಿಂದ ಕೂಡಾ ಯಾವ ಶಮನವೂ ಸಿಕ್ಕಲಿಲ್ಲ" ಎಂದು ಹೇಳಿದರು. ಅದಕ್ಕೆ ಬಾಬಾ, "ನಾನಾ ಒಬ್ಬ ಮೂರ್ಖ. ಆ ಕಟ್ಟನ್ನು ಬಿಚ್ಚಿ, ಆಚೆಗೆ ಎಸೆ. ಇಲ್ಲದಿದ್ದರೆ ನೀನು ಸಾಯುವೆ. ಈಗ ಕಾಗೆಯೊಂದು ಬಂದು ನಿನ್ನ ಹುಣ್ಣು ಚುಚ್ಚುತ್ತದೆ. ಅದರಿಂದ ನಿನ್ನ ನೋವು ಉಪಶಮನವಾಗುತ್ತದೆ" ಎಂದರು.

ಆ ಹೊತ್ತಿಗೆ ಸಾಯಂಕಾಲವಾಗಿತ್ತು. ಮಸೀದಿಯನ್ನು ಗುಡಿಸಿ, ದೀಪಗಳನ್ನು ಹಚ್ಚುವ ಸಮಯ. ಬಾಬಾ ತಮ್ಮ ಮಾತುಗಳನ್ನು ಇನ್ನೂ ಮುಗಿಸುತ್ತಿದ್ದಂತೆಯೇ, ಅಬ್ದುಲ್ ದೀಪಗಳನ್ನು ಹಚ್ಚಲು ಒಳಕ್ಕೆ ಬಂದ. ಕಾಲು ನೀಡಿ ಸ್ವಲ್ಪ ಆರಾಮವಾಗಿ ಕುಳಿತಿದ್ದ ಡಾ. ಪಿಳ್ಳೆಯ ಕಾಲನ್ನು ನೋಡದೆ, ಅದರಮೇಲೆ ತನ್ನ ಕಾಲಿಟ್ಟು ಗಟ್ಟಿಯಾಗಿ ತುಳಿದುಬಿಟ್ಟ. ಆ ತುಳಿತದಿಂದ ಉಂಟಾದ ನೋವನ್ನು ತಡೆಯಲಾರದೆ ಪಿಳ್ಳೆ ಗಟ್ಟಿಯಾಗಿ ಕಿರುಚಿಕೊಂಡರು. ಸ್ವಲ್ಪ ಹೊತ್ತು ಹಾಗೇ ಅರಚಾಡುತ್ತಾ, ನಿಧಾನವಾಗಿ ಹಾಡಲು ಆರಂಭಿಸಿದರು. ಅರಚುವುದು ಹಾಡುವುದು ಸ್ವಲ್ಪ ಹೊತ್ತು ನಡೆಯಿತು. ಇದರಿಂದ ವಿನೋದಗೊಂಡ ಬಾಬಾ, "ನೋಡು. ನೋಡು. ಭಾವೂಗೆ ಗುಣವಾಗಿದೆ. ಅದಕ್ಕೇ ಅವನು ಹಾಡುತ್ತಿದ್ದಾನೆ" ಎಂದರು. ಆಗ ಪಿಳ್ಳೆ, "ಬಾಬಾ, ಕಾಗೆ ಯಾವಾಗ ಬರುತ್ತದೆ?" ಎಂದು ಕೇಳಿದರು. ಅದಕ್ಕೆ ಬಾಬಾ, "ನೀನು ಕಾಗೆಯನ್ನು ನೋಡಲಿಲ್ಲವೇ? ಅದು ಮತ್ತೆ ಬರುವುದಿಲ್ಲ. ಅಬ್ದುಲ್ಲಾನೇ ಕಾಗೆ. ಈಗ ಹೋಗಿ ವಾಡಾದಲ್ಲಿ ವಿಶ್ರಮಿಸು. ಬಹು ಬೇಗ ಗುಣಮುಖನಾಗುತ್ತೀಯೆ" ಎಂದರು. ಅಬ್ದುಲ್, ಪಿಳ್ಳೆಯ ಕಾಲು ತುಳಿದಾಗ ಹುಣ್ಣುಗಳು ಒಡೆದು, ಹುಳುಗಳ ಸಹಿತ ಕೀವೆಲ್ಲ ಆಚೆ ಬಂತು. ನೋವಿನ ಕಾರಣ ಹೋದಮೇಲೆ ಪಿಳ್ಳೆ ಗುಣಮುಖರಾಗಲು ಬಹಳ ದಿನಗಳಾಗಲಿಲ್ಲ. ದಿನವೂ ಹುಣ್ಣಿನ ಮೇಲೆ ಊದಿಪ್ರಸಾದವನ್ನು ಹಚ್ಚುತ್ತಾ, ಅದನ್ನು ನೀರಿನಲ್ಲಿ ಕಲಸಿ ಕುಡಿಯುತ್ತಾ ಬಂದಂತೆಲ್ಲಾ, ಬಾಬಾ ಹೇಳಿದಂತೆ ಹತ್ತು ದಿನಗಳಲ್ಲಿ ಪಿಳ್ಳೆ ಸಂಪೂರ್ಣ ಗುಣಹೊಂದಿದರು.

ಶ್ಯಾಮಾರ ನಾದಿನಿ

ಶ್ಯಾಮಾರ ಕಿರಿಯ ಸಹೋದರ ಬಾಪಾಜಿ ತಮ್ಮ ಸಂಸಾರದೊಡನೆ ಸಾವೂಲ್ ಭಾವಿಯ ಹತ್ತಿರ ವಾಸವಾಗಿದ್ದರು. ಒಮ್ಮೆ ಅವರ ಹೆಂಡತಿಗೆ ಪ್ಲೇಗ್ ನಿಂದ, ತೀವ್ರವಾಗಿ ಜ್ವರ ಬಂದು ಗಡ್ಡೆಗಳೂ ಕಾಣಿಸಿಕೊಂಡು, ಬಹಳ ನರಳುತ್ತಿದ್ದಳು. ಬಾಪಾಜಿ ಶಿರಡಿಗೆ ಬಂದು, ಅಣ್ಣ ಶ್ಯಾಮಾರಿಗೆ ಎಲ್ಲವನ್ನೂ ತಿಳಿಸಿ ಅವರ ಸಹಾಯ ಕೋರಿದರು. ಶ್ಯಾಮಾರಿಗೂ ಹೆದರಿಕೆಯಾಗಿ, ಸಾವೂಲ್‍ಗೆ ಹೋಗಲು ನಿರ್ಧರಿಸಿ, ಅನುಮತಿ ಬೇಡಲು ಬಾಬಾರ ಬಳಿಗೆ ಹೋದರು. ಬಾಬಾರಿಗೆ ನಮಸ್ಕರಿಸಿ, ಅವರಿಗೆ ವಿಷಯವೆಲ್ಲವನ್ನೂ ಹೇಳಿ, ಹೊರಡಲು ಅವರ ಅಪ್ಪಣೆ ಬೇಡಿದರು. ಆದರೆ ಬಾಬಾ, "ಈ ರಾತ್ರಿಯಲ್ಲಿ ನೀನು ಹೋಗಬೇಕಾಗಿಲ್ಲ. ಅವಳಿಗೋಸ್ಕರ ಊದಿ ಕಳುಹಿಸು. ಜ್ವರ ಗಡ್ಡೆಗಳಿಗೆ ಏತಕ್ಕೆ ಹೆದರಬೇಕು? ದೇವರೇ ನಮ್ಮ ತಾಯಿ ತಂದೆ. ಬೇಗನೇ ಗುಣಮುಖಳಾಗುತ್ತಾಳೆ. ನೀನು ಬೆಳಗ್ಗೆ ಹೋಗಿ ಬೇಗನೇ ಬಂದುಬಿಡು" ಎಂದರು.

ಶ್ಯಾಮಾರಿಗೆ, ಬಾಬಾರ ಮಾತುಗಳೇ ವೇದವಾಕ್ಯ. ಈ ರಾತ್ರಿ ಹೋಗಬೇಡ ಊದಿ ಕಳುಹಿಸು ಎಂದು ಬಾಬಾ ಹೇಳಿದ್ದನ್ನು ವೇದವಾಕ್ಯವಾಗಿ ಪರಿಗಣಿಸಿ, ಅವರು ಬಾಪಾಜಿಯ ಕೈಯಲ್ಲಿ ಊದಿ ಕೊಟ್ಟು, ಅದನ್ನು ಹೇಗೆ ಉಪಯೋಗಿಸಬೇಕು ಎಂಬುದನ್ನು ಹೇಳಿದರು. ಬಾಪಾಜಿ ಊರಿಗೆ ಹಿಂತಿರುಗಿ, ಅಣ್ಣ ಹೇಳಿದ್ದಂತೆ ಸ್ವಲ್ಪ ಊದಿಯನ್ನು ನೀರಿನಲ್ಲಿ ಕಲಸಿ, ತನ್ನ ಪತ್ನಿಗೆ ಕುಡಿಯಲು ಕೊಟ್ಟರು. ಆಕೆ ಆ ಊದಿಮಿಶ್ರಿತ ನೀರನ್ನು ಕುಡಿಯುತ್ತಲೇ ಮೈಯೆಲ್ಲಾ ಬೆವೆತು ಜ್ವರ ಇಳಿಯಲು ಪ್ರಾರಂಭವಾಯಿತು. ರಾತ್ರಿ ಸುಖ ನಿದ್ರೆಯೂ ಬಂತು. ಮರುದಿನ ಬೆಳಗ್ಗೆ ಬಾಪಾಜಿ ಎದ್ದು ನೋಡಿದರೆ, ಅವರ ಹೆಂಡತಿ ಅವರಿಗಿಂತ ಮುಂಚೆಯೇ ಎದ್ದು, ತನ್ನ ದಿನ ನಿತ್ಯದ ಕಾರ್ಯಕ್ರಮಗಳನ್ನು ಆರಂಭಿಸಿ, ಒಲೆಯ ಮುಂದೆ ಕುಳಿತು ಚಹಾ ಮಾಡುತ್ತಿದ್ದಳು. ಶ್ಯಾಮಾ ಬೆಳಗ್ಗೆ ಆಕೆಯನ್ನು ಕಾಣಲು ಬಂದಾಗ ಆ ದೃಶ್ಯವನ್ನು ನೋಡಿ ಆಶ್ಚರ್ಯ ಚಕಿತರಾದರು. ಆತನ ತಮ್ಮ ಅದೆಲ್ಲಾ ಊದಿಯ ಮಾಹಾತ್ಮ್ಯೆಯೆಂದೂ, ಊದಿಯೇ ತನ್ನ ಹೆಂಡತಿ ಅಷ್ಟು ಶೀಘ್ರವಾಗಿ ಗುಣಮುಖಳಾಗಲು ಕಾರಣವೆಂದೂ, ಹೇಳಿದರು. ಆಗ ಬಾಬಾರು ತನಗೆ, "ಬೆಳಗ್ಗೆ ಹೋಗು. ನೋಡಿಕೊಂಡು ತಕ್ಷಣವೇ ಹಿಂತಿರುಗಿ ಬಾ" ಎಂದು ಹೇಳಿದ ಮಾತುಗಳು ಶ್ಯಾಮಾರ ನೆನಪಿಗೆ ಬಂದವು. ನಾದಿನಿ ಕೊಟ್ಟ ಚಹಾ ಕುಡಿದು, ಅವರು ತಕ್ಷಣವೇ ಶಿರಡಿಗೆ ಹಿಂತಿರುಗಿ ನೇರವಾಗಿ ಮಸೀದಿಗೆ ಬಂದರು. ಬಾಬಾರ ಚರಣಗಳಲ್ಲಿ ತಲೆಯಿಟ್ಟು, "ದೇವಾ, ಇದೇನು ನಿನ್ನ ಲೀಲೆ! ನೀನೇ ಜನರನ್ನು ತೊಂದರೆಗೆ ಈಡುಮಾಡುತ್ತೀಯೆ. ಅವರ ಮನಸ್ಸಿನಲ್ಲಿ ಆಂದೋಳನವೆಬ್ಬಿಸಿ, ಅದನ್ನು ನೀನೇ ಶಮನಗೊಳಿಸಿ, ಶಾಂತಿ ಆನಂದಗಳನ್ನು ಉಂಟು ಮಾಡುತ್ತೀಯೆ" ಎಂದರು. ಅದಕ್ಕೆ ಬಾಬಾ, "ಕರ್ಮಫಲಗಳು ಅತ್ಯಂತ ಗೂಢವಾದವು. ನಾನೇನೂ ಮಾಡುವುದಿಲ್ಲ. ಆದರೂ, ಜನ ಅದಕ್ಕೆ ನಾನೇ ಜವಾಬ್ದಾರನೆನ್ನುತ್ತಾರೆ. ವಿಧಿ ವಿಧಿಸಿದಂತೆ ಕರ್ಮಗಳು ನಡೆಯುತ್ತವೆ. ಅದಕ್ಕೆ ನಾನೊಬ್ಬ, ನಿಷ್ಕ್ರಿಯ ಸಾಕ್ಷಿ. ಆ ದಯಾನಿಧಿಯಾದ ದೇವರೇ ಎಲ್ಲವನ್ನೂ ಮಾಡುವವನು. ಮಾಡಿಸುವವನು. ನಾನು ಅವನ ನಿಷ್ಠಾವಂತ ಸೇವಕ ಅಷ್ಟೇ! ಅವನಿಗೆ ಶರಣಾಗತರಾದವರು, ಭವ ಶೃಂಖಲೆಗಳಿಂದ ಬಿಡುಗಡೆ ಹೊಂದಿ ಮುಕ್ತಿ ಪಡೆಯುತ್ತಾರೆ" ಎಂದರು.

ಇರಾನಿ ಹುಡುಗಿ

ಬೊಂಬಾಯಿಯಲ್ಲಿ ಇರಾನಿ ಗೃಹಸ್ಥನೊಬ್ಬನಿಗೆ ಒಬ್ಬಳು ಚಿಕ್ಕ ಮಗಳಿದ್ದಳು. ನೋಡಲು ಅಂದವಾಗಿದ್ದ ಆ ಹುಡುಗಿಗೆ ಗಂಟೆಗೊಂದುಸಲ ಮೂರ್ಛೆ ಬರುತ್ತಿತ್ತು. ಹಾಗಾದಾಗ ಕೈಕಾಲು ಝಾಡಿಸುತ್ತಾ ಮಾತಿಲ್ಲದೆ, ಪ್ರಜ್ಞೆ ಇಲ್ಲದೆ ಬಿದ್ದುಬಿಡುತ್ತಿದ್ದಳು. ಯಾವ ವೈದ್ಯನಿಗೂ ಆ ಹುಡುಗಿಯ ಖಾಯಿಲೆ ವಾಸಿಮಾಡಲು ಸಾಧ್ಯವಾಗಲಿಲ್ಲ. ಕೆಲವು ಸಹೃದಯ ಸ್ನೇಹಿತರು, ಬಾಬಾರ ಊದಿ ಇಂತಹ ವಿಷಯಗಳಲ್ಲಿ ಬಹಳ ಸಹಾಯಕರವೆಂದೂ, ಅದನ್ನು ಹಚ್ಚಿ ನೋಡಬಹುದೆಂದೂ ಸಲಹೆ ಕೊಟ್ಟರು. ವಿಲೆಪಾರ್ಲೆಯ ಕಾಕಾ ಸಾಹೇಬ ದೀಕ್ಷಿತರ ಬಳಿ ಊದಿ ದೊರೆಯುವುದೆಂದೂ ತಿಳಿಸಿದರು. ಮರು ದಿನವೇ ಆ ಗೃಹಸ್ಥ ಕಾಕಾ ಸಾಹೇಬ ದೀಕ್ಷಿತರನ್ನು ಕಂಡು, ಇರುವ ವಿಷಯವನ್ನೆಲ್ಲ ತಿಳಿಸಿ, ಊದಿ ಕೊಡುವಂತೆ ಬೇಡಿಕೊಂಡರು. ಇಂತಹ ವಿಷಯಗಳಲ್ಲಿ ಯಾವಾಗಲೂ ಸಹಾಯ ಹಸ್ತ ನೀಡಲು ಸಿದ್ಧರಾದ ಕಾಕಾ ಸಾಹೇಬರು, ಆ ಗೃಹಸ್ಥನಿಗೆ ಬಾಬಾರ ಊದಿಪ್ರಸಾದವನ್ನು ಕೊಟ್ಟರು. ಅದನ್ನು ತಂದು ಆ ಹುಡುಗಿಗೆ ಹಣೆಯಲ್ಲಿ ಹಚ್ಚಿ, ತೀರ್ಥಮಾಡಿ ಕುಡಿಸಿದರು. ಊದಿಯ ಪ್ರಭಾವದಿಂದ ಮೊದಲು ಗಂಟೆಗೊಂದುಸಲ ಬರುತ್ತಿದ್ದ ಮೂರ್ಛೆ ಏಳು ಗಂಟೆಗಳಿಗೊಮ್ಮೆ ಬರಲು ಆರಂಭವಾಗಿ, ಕೆಲವು ದಿನಗಳಲ್ಲಿ ಸಂಪೂರ್ಣವಾಗಿ ನಿಂತುಹೋಯಿತು.

ಹರ್ದಾದ ಗೃಹಸ್ಥ

ಹರ್ದಾದಲ್ಲಿ ವಯಸ್ಸಾದ ಗೃಹಸ್ಥರೊಬ್ಬರಿದ್ದರು. ವಯಸ್ಸಿನ ಕಾರಣದಿಂದಾಗಿ ಆತನಿಗೆ ಮೂತ್ರಪಿಂಡಗಳಲ್ಲಿ ಕಲ್ಲುಗಳು ಸೇರಿ ಬಹಳ ಬಾಧೆಯಾಗುತ್ತಿತ್ತು. ಯಾವ ಔಷಧವೂ ಆತನಿಗೆ ಶಮನ ಕೊಡಲಾರದೆ ಹೋದವು. ಅದಕ್ಕೆ ಶಸ್ತ್ರ ಚಿಕಿತ್ಸೆಯೊಂದೇ ದಾರಿ ಎಂದು ವೈದ್ಯರು ಹೇಳಿದರು. ವಯಸ್ಸು ಬಹಳವಾಗಿದ್ದಿದುದರಿಂದ ಅದು ಕೂಡಾ ಸಾಧ್ಯವಿರಲಿಲ್ಲ. ತನ್ನ ವಿಧಿ, ಏನು ಮಾಡುವುದು, ಸಾಯುವವರೆಗೂ ಈ ನೋವನ್ನು ಅನುಭವಿಸಲೇಬೇಕು ಎಂದು ಆತ ಕೈಚೆಲ್ಲಿ ಕುಳಿತಿದ್ದ. ಆತನ ಅದೃಷ್ಟಕ್ಕೆ, ಆತನ ಮಗನಿಗೆ ಯಾರೋ ಊದಿ ಇಂತಹ ವಿಷಯದಲ್ಲಿ ಬಹಳ ಅನುಕೂಲಕರ ಎಂದು ಹೇಳಿದರು. ಆ ಊರಿನ ಇನಾಮದಾರರು ಬಾಬಾರ ಅಸೀಮ ಭಕ್ತರು. ಅವರ ಬಳಿ ಯಾವಾಗಲೂ ಊದಿ ಇರುತ್ತದೆ ಎಂದೂ ತಿಳಿಯಿತು. ಆ ಗೃಹಸ್ಥರ ಮಗ ಇನಾಮದಾರರ ಬಳಿಗೆ ಹೋಗಿ ಊದಿ ಪ್ರಸಾದವನ್ನು ಕೊಡುವಂತೆ ಬಿನ್ನವಿಸಿಕೊಂಡ. ಊದಿಯನ್ನು ತಂದು ನೀರಿನಲ್ಲಿ ಕಲಸಿ ಆ ಗೃಹಸ್ಥರಿಗೆ ಕುಡಿಸಿದರು. ಊದಿ ತೀರ್ಥ ಕೊಟ್ಟ ಐದೇ ನಿಮಿಷಗಳಲ್ಲಿ ಮೂತ್ರಪಿಂಡದಲ್ಲಿದ್ದ ಕಲ್ಲುಗಳು ಕರಗಿ, ಮೂತ್ರದೊಡನೆ ಹೊರಕ್ಕೆ ಬಂದವು.

ಬೊಂಬಾಯಿನ ಹೆಂಗಸು

ಬೊಂಬಾಯಿಯಲ್ಲಿ ಕಾಯಸ್ಥಪ್ರಭು ಜಾತಿಗೆ ಸೇರಿದ ಒಬ್ಬಾಕೆಗೆ ಹೆರಿಗೆ ಸಮಯದಲ್ಲಿ ಅತೀವ ನೋವಿನಿಂದಾಗಿ ಬಹಳವಾಗಿ ಒದ್ದಾಡುತ್ತಿದ್ದಳು. ಅದರಿಂದ ಆ ಹೆಂಗಸು ತನಗೆ ಮಕ್ಕಳೇ ಬೇಡವೆಂದು ಹೇಳುವ ಸ್ಥಿತಿಯಲ್ಲಿದ್ದಳು. ಆದರೂ ಕಾಲಾನಂತರದಲ್ಲಿ ಆಕೆ ಮತ್ತೆ ಗರ್ಭಿಣಿಯಾದಳು. ನೋವಿನ ಹೆದರಿಕೆಯಿಂದ ಬಹಳ ಭಯಗ್ರಸ್ಥಳಾಗಿದ್ದಳು. ಬಾಬಾರ ಅವಿಚ್ಛಿನ್ನ ಭಕ್ತರಾದ ಶ್ರೀ ರಾಮ ಮೂರ್ತಿಯವರು, ಶಿರಡಿಗೆ ಹೋಗಿ ಅಲ್ಲಿ ಹೆರಿಗೆ ಮಾಡಿಕೊಳ್ಳುವಂತೆ ಸಲಹೆ ಕೊಟ್ಟರು. ದಂಪತಿಗಳು ಶಿರಡಿ ಸೇರಿ, ಕೆಲವು ತಿಂಗಳು, ಹೆರಿಗೆಯ ಸಮಯ ಬರುವವರೆಗೂ ಇದ್ದರು. ಬಾಬಾರನ್ನು ಪ್ರತಿದಿನವೂ ಪೂಜಿಸಿಕೊಳ್ಳುತ್ತಾ, ಅವರ ಸಾನ್ನಿಧ್ಯದಲ್ಲಿ ಮನಸ್ಸ್ವಾಸ್ಥ್ಯದಿಂದಿದ್ದರು. ಹೆರಿಗೆಯ ಸಮಯ ಬಂದಾಗ, ಮತ್ತೆ ಅದೇ ನೋವು ಅಸಾಧ್ಯವಾಗಿ ಆರಂಭವಾಯಿತು. ಆಕೆ ಮನಸ್ಸಿನಲ್ಲಿ ಬಾಬಾರ ಧ್ಯಾನಮಾಡುತ್ತಾ, ಬಾಬಾರ ಸಹಾಯವನ್ನು ಮನಸ್ಸಿನಲ್ಲೇ ಬೇಡಿಕೊಂಡಳು. ಹೆರಿಗೆಯ ಸಮಯದಲ್ಲಿ ಪಕ್ಕದ ಮನೆಯಾಕೆಯೊಬ್ಬಳು, ಆ ಹೆಂಗಸಿಗೆ ಊದಿ ತೀರ್ಥವನ್ನು ಕುಡಿಸಿದಳು. ಅದರಿಂದ ಹೆರಿಗೆ ನೋವಿಲ್ಲದೆ, ಸುಸೂತ್ರವಾಗಿ ಆಯಿತು. ಹುಟ್ಟಿದ ಮಗು ಹೊಟ್ಟೆಯಲ್ಲೇ ಸತ್ತುಹೋಗಿತ್ತು. ಆದರೆ ತಾಯಿಗೆ ಯಾವ ನೋವೂ ಆತಂಕವೂ ಇಲ್ಲದಂತೆ ಹೆರಿಗೆ ಆಗಿದ್ದು ಸಂತೋಷವನ್ನು ತಂದಿತು.

ಇದರೊಂದಿಗೆ ಊದಿಯ ಮಾಹಾತ್ಮೆ, ಡಾಕ್ಟರ್ ಮುಲ್ಕಿ, ಡಾಕ್ಟರ್ ಪಿಳ್ಳೆ, ಶ್ಯಾಮಾರ ನಾದಿನಿ, ಇರಾನಿ ಹುಡುಗಿ, ಹರ್ದಾದ ಗೃಹಸ್ಥ, ಬೊಂಬಾಯಿನ ಮಹಿಳೆ ಮತ್ತು ಇತರ ವಿಷಯಗಳನ್ನು ಕುರಿತು ಹೇಳುವ ಮುವ್ವತ್ನಾಲ್ಕನೆಯ ಅಧ್ಯಾಯ ಮುಗಿಯಿತು. ಮುಂದಿನ ಅಧ್ಯಾಯದಲ್ಲಿ ಹೇಮಾಡ್ ಪಂತ್, ಕಾಕಾ ಮಹಾಜನಿಯ ಸ್ನೇಹಿತ, ಯಜಮಾನ, ಬಾಂದ್ರಾ ವ್ಯಕ್ತಿಯ ಅನಿದ್ರತೆ, ಬಾಲಾ ಪಾಟೀಲ್ ನೇವಾಸ್ಕರ್ ಇತ್ಯಾದಿ ವಿಷಯಗಳನ್ನು ಹೇಳುತ್ತಾರೆ.

||ಸದ್ಗುರು ಶ್ರೀ ಸಾಯಿನಾಥಾರ್ಪಣಮಸ್ತು||ಶುಭಂ ಭವತು||
||ಓಂ ಶಾಂತಿಃ ಶಾಂತಿಃ ಶಾಂತಿಃ||


No comments:

Post a Comment