||ಶ್ರೀ ಸಾಯಿಸಚ್ಚರಿತ್ರೆ||
||ಮುವ್ವತ್ತೆರಡನೆಯ ಅಧ್ಯಾಯ||
||ಗುರು ಮತ್ತು ದೈವದ ಅನ್ವೇಷಣೆ||
ಶ್ರೀ ಗಣೇಶಾಯ ನಮಃ ಶ್ರೀ ಸರಸ್ವತಯೇ ನಮಃ
ಶ್ರೀ ವೆಂಕಟೇಶಾಯ ನಮಃ ಶ್ರೀ ಸಾಯಿನಾಥಾಯ ನಮಃ
ಶ್ರೀ ಸದ್ಗುರುಭ್ಯೋನ್ನಮಃ
||ಮುವ್ವತ್ತೆರಡನೆಯ ಅಧ್ಯಾಯ||
||ಗುರು ಮತ್ತು ದೈವದ ಅನ್ವೇಷಣೆ||
ಶ್ರೀ ಗಣೇಶಾಯ ನಮಃ ಶ್ರೀ ಸರಸ್ವತಯೇ ನಮಃ
ಶ್ರೀ ವೆಂಕಟೇಶಾಯ ನಮಃ ಶ್ರೀ ಸಾಯಿನಾಥಾಯ ನಮಃ
ಶ್ರೀ ಸದ್ಗುರುಭ್ಯೋನ್ನಮಃ
ಈ ಅಧ್ಯಾಯದಲ್ಲಿ ಹೇಮಾಡ್ ಪಂತ್, ಬಾಬಾ ತಮ್ಮ ಗುರುವನ್ನು ಹೇಗೆ ಸಂಧಿಸಿದರು, ಶ್ರೀಮತಿ ಗೋಖಲೆ ಮತ್ತು ಇತರ ವಿಷಯಗಳನ್ನು ಹೇಳುತ್ತಾರೆ
ಅಶ್ವತ್ಥ ವೃಕ್ಷ
ಶ್ವ ಎಂದರೆ ನಾಳೆ. ಶ್ವತ್ಥ ಎಂದರೆ ನಾಳೆಯವರೆಗೂ ಇರುವಂತಹುದು. ಅ-ಶ್ವತ್ಥ ಎಂದರೆ ನಾಳೆಯವರೆಗೂ ಇರಲಾರದ್ದು ಎಂದರ್ಥ. ವೃಕ್ಷ ಎಂದರೆ ಯಾವುದನ್ನು ಕಡಿದುಹಾಕಬಹುದೋ ಅದು ವೃಕ್ಷ. ಸಂಸಾರವನ್ನು ಈ ನಾಳೆಯಿಲ್ಲದ ವೃಕ್ಷಕ್ಕೆ, ಅಶ್ವತ್ಥವೃಕ್ಷಕ್ಕೆ, ಅನೇಕ ಪಂಡಿತರು ಅನೇಕ ಸಂದರ್ಭಗಳಲ್ಲಿ ಹೋಲಿಸಿದ್ದಾರೆ. ಅದನ್ನು ಹೇಗೆ ಕಡಿದು ಹಾಕಬೇಕು? ಅದಕ್ಕೆ ಯಾರು ಸಹಾಯಮಾಡುತ್ತಾರೆ? ಎಂಬುದನ್ನು ಸ್ವಲ್ಪ ನೋಡೋಣ
ಸನಾತನವಾದ ಈ ಅಶ್ವತ್ಥವೃಕ್ಷದ ಬೇರುಗಳು ಊರ್ಧ್ವಮುಖವಾಗಿವೆ. ಶಾಖೆ(ಕೊಂಬೆ)ಗಳು ಅಧೋಮುಖವಾಗಿವೆ. ಅದು ಶುದ್ಧ ಬ್ರಹ್ಮ. ಅದೇ ನಿತ್ಯ. ಅದರಮೇಲೇ ಇತರ ಲೋಕಗಳೆಲ್ಲವೂ ಆಧಾರಪಟ್ಟಿವೆ. ಅದನ್ನು ಮೀರಿ ಹೋಗಲು ಯಾರಿಗೂ ಸಾಧ್ಯವಿಲ್ಲ. ಇದೇ ಅದು. ಎಂದು ಕಠೋಪನಿಷತ್ತಿನಲ್ಲಿ ಹೇಳಲ್ಪಟ್ಟಿದೆ.
ಅಶ್ವತ್ಥವೃಕ್ಷ(ಸಂಸಾರವೃಕ್ಷ) ಅವ್ಯಕ್ತದಿಂದ ಅಚೇತನದವರೆಗೂ ಹರಡಿಕೊಂಡಿದೆ. ಅದಕ್ಕೆ ಮೂಲ ಬ್ರಹ್ಮ. ಬ್ರಹ್ಮನಿಂದಲೇ ಈ ಬ್ರಹ್ಮಾಂಡವೆಲ್ಲಾ ಹೊರಟಿದೆ. ಅಶ್ವತ್ಥ ವೃಕ್ಷವನ್ನು ಹೇಗೆ ಕಡಿದುಹಾಕಬಹುದೋ ಹಾಗೆ ಈ ಸಂಸಾರ ವೃಕ್ಷವನ್ನು ಕಡಿದುಹಾಕಬೇಕು. ಅದಕ್ಕೆ ಬೇಕಾದದ್ದು ಅಸಂಗ, ಆತ್ಮಜ್ಞಾನವೆಂಬ ಖಡ್ಗ.
ಭಗವದ್ಗೀತೆಯಲ್ಲಿ ಶ್ರೀ ಕೃಷ್ಣ ಹೀಗೆ ಹೇಳಿದ್ದಾನೆ:
“ಅಶ್ವತ್ಥವೃಕ್ಷ (ಸಂಸಾರವೃಕ್ಷ), ಯಾವುದರ ಬೇರುಗಳು ಮೇಲಕ್ಕೂ, ಯಾವುದರ ಶಾಖೆಗಳು ಕೆಳಕ್ಕೂ ಹರಡಿಕೊಂಡಿವೆಯೋ, ಯಾವುದರ ಎಲೆಗಳು ವೇದಗಳೋ, ಅದು ನಿತ್ಯವಾದದ್ದು. ಇದನ್ನು ಯಾರು ತಿಳಿಯುತ್ತಾರೋ ಅವರೇ ವೇದವಿದರು”.
ಮುಂದುವರಿಸುತ್ತಾ ಕೃಷ್ಣ ಹೇಳುತ್ತಾನೆ:
“ಅದರ ಶಾಖೆಗಳು ಕೆಳಕ್ಕೂ ಮೇಲಕ್ಕೂ ಹರಡಿ ತ್ರಿಗುಣಗಳು, ಇಂದ್ರಿಯ ವಿಷಯಗಳಿಂದ ಬಲಪಡಿಸಲ್ಪಟ್ಟಿವೆ. ಕರ್ಮಗಳಿಂದ ಪ್ರೇರಿತವಾದ ಬೇರುಗಳು ಈ ಮಾನವ ಪ್ರಪಂಚದಲ್ಲಿ ಹರಡಿವೆ. ಆದರೆ ಅದರ ರೂಪವನ್ನು ಈ ರೀತಿಯಲ್ಲಿ ಇಲ್ಲಿ ತಿಳಿಯಲಾಗುವುದಿಲ್ಲ. ಅದರ ಆದಿಮಧ್ಯಾಂತ್ಯವನ್ನೂ ತಿಳಿಯಲಾಗುವುದಿಲ್ಲ. ಈ ಸಂಸಾರವೃಕ್ಷವನ್ನು ಅಸಂಗವೆಂಬ ಖಡ್ಗದಿಂದ ಛೇದಿಸಿ, ಎಲ್ಲಿಗೆ ಹೋದರೆ ಮತ್ತೆ ಹಿಂತಿರುಗುವುದು ಇಲ್ಲವೋ ಅದನ್ನು ಸೇರಲು ಪ್ರಯತ್ನಿಸಬೇಕು. ಯಾರಿಂದ ಈ ಬ್ರಹ್ಮಾಂಡ ಬಂದಿದೆಯೋ, ಅವನನ್ನು ಆಸರೆಯಾಗಿ ಮಾಡಿಕೊಳ್ಳಲು ಪ್ರಯತ್ನಿಸಬೇಕು. ಅಹಂಕಾರ, ಬೇಧಭಾವಗಳಿಂದ ದೂರವಾಗಿ, ಆಶಾ ಮೋಹಗಳು, ಸುಖ ದುಃಖಗಳು ಎಂಬ ದ್ವಂದ್ವಗಳಿಂದ ಮುಕ್ತರಾಗಿ, ಅಧ್ಯಾತ್ಮ ಚಿಂತನೆಯಲ್ಲೇ ನಿರತರಾಗಿ, ಇರುವವರು ಮಾತ್ರ ಅಂತಹ ಆ ನಿತ್ಯವನ್ನು ಸೇರಬಲ್ಲರು. ಎಲ್ಲಿ ಸೂರ್ಯಾಗ್ನಿಚಂದ್ರರು ಬೆಳಗುವುದಿಲ್ಲವೋ ಅದೇ ನನ್ನ ಪರಮಧಾಮ. ಅದನ್ನು ಸೇರಿದವರು ಮತ್ತೆ ಹಿಂತಿರುಗುವುದಿಲ್ಲ”.
ಅಂತಹ ಸಂಸಾರವೃಕ್ಷವನ್ನು ಕಡಿದು ಹಾಕಲು ಬೇಕಾಗುವ ಖಡ್ಗವನ್ನು ಪಡೆಯಬೇಕಾದರೆ, ಸದ್ಗುರುವಿನ ಸಹಾಯ ಬಹು ಅಗತ್ಯ. ವೇದ ವೇದಾಂತಗಳನ್ನು ಆಳವಾಗಿ ಅಭ್ಯಾಸಮಾಡಿದ ಪಂಡಿತನೂ ಕೂಡಾ ಗುರುವಿನ ಆಸರೆಯಿಲ್ಲದೆ ಈ ಸಂಸಾರ ಕಾನನವನ್ನು ದಾಟಲು ಸಾಧ್ಯವಿಲ್ಲ. ಹಾಗೆ ಗುರುವು ತನ್ನನ್ನು ನಡೆಸಬೇಕು ಎಂದುಕೊಂಡರೆ, ಶಿಷ್ಯನಾದವನು ಗುರುವಿನಲ್ಲಿ, ಸಹನೆಯಿಂದ ಕೂಡಿದ ಶ್ರದ್ಧಾಭಕ್ತಿಗಳಿಂದ, ನಿರಂತರ ಸೇವೆಯಲ್ಲಿ ನಿರತನಾಗಬೇಕು. ಹಾಗಿಲ್ಲದಿದ್ದರೆ, ಅರಣ್ಯದಲ್ಲಿ ದಾರಿತಿಳಿಯದೆ ಸುತ್ತುತ್ತಿರುವುದೇ ಆಗುತ್ತದೆ.
ಈ ಅಧ್ಯಾಯದಲ್ಲಿ ಬಾಬಾ ಈ ತತ್ವಚಿಂತನೆಯನ್ನು, ತಮ್ಮದೇ ಆದ ಅನುಭವವದ ಕಥೆಯ ಮೂಲಕ ವಿವರಿಸುತ್ತಾರೆ. ಅದನ್ನು ಸರಿಯಾಗಿ ಅರ್ಥಮಾಡಿಕೊಂಡು ಶ್ರದ್ಧೆ, ಭಕ್ತಿ, ಸಹನೆಗಳಿಂದ ಅನುಸರಿಸಿದರೆ ನಾವು ಈ ಸಂಸಾರದಿಂದ ಮುಕ್ತರಾಗಬಹುದು. ಆ ಕಥೆಯನ್ನು ಕೇಳೋಣ.
ಶೋಧನೆ
“ಒಂದುಸಲ ನಾವು ನಾಲ್ವರು, ಆಸ್ತಿಕಧರ್ಮದ ಬಗ್ಗೆ ಅಭ್ಯಾಸ ನಡೆಸಿದ್ದೆವು. ಆ ಪಾಂಡಿತ್ಯದಿಂದ ಬ್ರಹ್ಮನನ್ನು ಕುರಿತು ಚರ್ಚೆಮಾಡಿದೆವು. ಒಬ್ಬ ಹೇಳಿದ, "ನಾವೇ ನಮ್ಮ ಉದ್ಧಾರದ ದಾರಿಯನ್ನು ಕಂಡುಕೊಳ್ಳಬೇಕು. ಇನ್ನೊಬ್ಬರ ಮೇಲೆ ಆಧಾರಪಡಬಾರದು." ಇನ್ನೊಬ್ಬ ಹೇಳಿದ, "ನಮ್ಮ ಮನಸ್ಸನ್ನು ಅಂಕಿತದಲ್ಲಿಟ್ಟುಕೊಳ್ಳಬೇಕು. ಯೋಚನಾರಹಿತರಾಗಬೇಕು. ನಮ್ಮನ್ನು ಬಿಟ್ಟು ಈ ಪ್ರಪಂಚದಲ್ಲಿ ಏನೂ ಇಲ್ಲ." ಮೂರನೆಯವನು ಹೇಳಿದ, "ಈ ಪ್ರಪಂಚವೆನ್ನುವುದು ಅನಿತ್ಯ. ಅ ಪರಮಾತ್ಮನೇ ನಿತ್ಯ. ನಾವು ಈ ನಿತ್ಯ-ಅನಿತ್ಯಗಳ ಭೇದವನ್ನು ಚೆನ್ನಾಗಿ ಅರಿತುಕೊಳ್ಳಬೇಕು." ನಾಲ್ಕನೆಯವನು (ಸಾಯಿಬಾಬಾ) ಹೇಳಿದ. "ಪುಸ್ತಕ ಜ್ಞಾನ ಪ್ರಯೋಜನವಿಲ್ಲ. ನಾವು ಮಾಡಬೇಕಾದ ಕರ್ಮಗಳನ್ನು ಮಾಡುತ್ತ, ಕಾಯಾ, ವಾಚಾ, ಮನಸಾ ನಮ್ಮನ್ನು ಗುರುವಿಗೆ ಅರ್ಪಿಸಿಕೊಳ್ಳಬೇಕು. ಗುರುವೇ ದೇವರು. ಅವನು ಸರ್ವವ್ಯಾಪಿ, ಸರ್ವಜ್ಞ. ಆದರೆ ಇದನ್ನು ಮಾಡಲು ಅಚಂಚಲ ಶ್ರದ್ಧೆ ಅತ್ಯವಶ್ಯಕ."
ಈ ರೀತಿ ಚರ್ಚಿಸುತ್ತಾ, ನಾವು ನಾಲ್ವರು ಪಂಡಿತರೂ ದೇವರನ್ನು ಹುಡುಕಲು ಹೊರಟು, ಗೊತ್ತು ಗುರಿಯಿಲ್ಲದೆ, ಅರಣ್ಯದಲ್ಲಿ ಯಾರ ಸಹಾಯವೂ ಇಲ್ಲದೆ ಅಲೆಯುತ್ತಿದ್ದೆವು. ಮೊದಲ ಮೂವರು ತಮ್ಮ ಪಾಂಡಿತ್ಯದ ಸಹಾಯದಿಂದಲೇ ಹುಡುಕುವಿಕೆಯನ್ನು ಮುಂದುವರೆಸಿದರು. ಹೀಗೆ ಹುಡುಕುತ್ತಿದ್ದಾಗ, ದಾರಿಯಲ್ಲಿ ಒಬ್ಬ ವನಜಾರಿಯನ್ನು ಭೇಟಿಮಾಡಿದೆವು. ನಮ್ಮನ್ನು ಕಂಡ ಅವನು, "ಬಿಸಿಲು ಬಹಳವಾಗಿದೆ. ಎಲ್ಲಿಗೆ ಹೋಗುತ್ತಿದ್ದೀರಿ?" ಎಂದು ಕೇಳಿದ. ನಾವು ಹೇಳಿದೆವು, "ಅರಣ್ಯದಲ್ಲಿ ಹುಡುಕುತ್ತಿದ್ದೇವೆ." "ಏನನ್ನು ಹುಡುಕುತ್ತಿದ್ದೀರಿ?" ಅದಕ್ಕೆ ನಾವು ಏನೋ ಹಾರಿಕೆಯ ಉತ್ತರವನ್ನು ಕೊಟ್ಟೆವು. ಗೊತ್ತು ಗುರಿಯಿಲ್ಲದೆ ನಾವು ಹುಡುಕಲು ಹೊರಟಿರುವುದನ್ನು ತಿಳಿದ ಅವನು, ಅನುಕಂಪದಿಂದ, "ಅರಣ್ಯವನ್ನು ಸರಿಯಾಗಿ ತಿಳಿಯದೆ ನೀವೇ ಹುಡುಕಲು ಹೋಗಬಾರದು. ಒಬ್ಬ ಮಾರ್ಗದರ್ಶಿ ಜೊತೆಯಲ್ಲಿ ಇರಬೇಕು. ಈ ಬಿಸಿಲಿನಲ್ಲಿ ಸುಮ್ಮನೇ ಏಕೆ ಗುರಿಯಿಲ್ಲದೆ ಅಲೆಯುತ್ತಿದ್ದೀರಿ? ನೀವು ಏನು ಅರಸುತ್ತಿದ್ದೀರೆಂದು ನನಗೆ ಹೇಳದಿದ್ದರೂ, ಪರವಾಗಿಲ್ಲ. ಆಹಾರ, ನೀರು ಸ್ವೀಕರಿಸಿ, ಸ್ವಲ್ಪಹೊತ್ತು ವಿಶ್ರಮಿಸಿ, ನಂತರ ಹೊರಡಿ. ಯಾವಾಗಲೂ ಸಹನೆಯಿಂದ ವರ್ತಿಸಿ." ಅವನು ಅಷ್ಟು ಮಮತೆಯಿಂದ ಹೇಳಿದರೂ, ನಾವು ಕೇಳದೆ, ಅವನ ಆತಿಥ್ಯವನ್ನು ನಿರಾಕರಿಸಿ ಮುಂದುವರೆದೆವು. ನಮಗೆಲ್ಲಾ ತಿಳಿದಿದೆ, ಯಾರ ಸಹಾಯವೂ ಬೇಕಾಗಿಲ್ಲ, ಎಂದು ನಮ್ಮ ನಂಬಿಕೆ.
ಅಪಾರವಾದ ಆ ಅರಣ್ಯದಲ್ಲಿ, ದಾರಿಕಾಣದಂತೆ ಮರಗಳು ದಟ್ಟವಾಗಿ ಬೆಳೆದು, ಸೂರ್ಯ ರಶ್ಮಿ ತೂರಿ ಬರಲು ಕೂಡ ಸಾಧ್ಯವಿರಲಿಲ್ಲ. ಕೊನೆಗೆ ಅದೃಷ್ಟವೋ ಎಂಬಂತೆ, ಎಲ್ಲಿ ವನಜಾರಿಯನ್ನು ಕಂಡಿದ್ದೆವೋ ಅಲ್ಲಿಗೇ, ನಾವು ಬಂದು ಸೇರಿದೆವು. ಆ ವನಜಾರಿ ನಮ್ಮನ್ನು ಕಂಡು, "ನಿಮ್ಮ ಬುದ್ಧಿವಂತಿಕೆಯನ್ನು ನಂಬಿ ದಾರಿತಪ್ಪಿದಿರಿ. ಯಾವುದೇ ವಿಷಯದಲ್ಲಾದರೂ ಸರಿಯೆ, ಸರಿಯಾದ ದಾರಿ ತೋರಲು ಒಬ್ಬ ಮಾರ್ಗದರ್ಶಿ ಅವಶ್ಯಕ. ಬರಿಯ ಹೊಟ್ಟೆಯಲ್ಲಿ ಏನನ್ನೂ ಹುಡುಕಲು ಸಾಧ್ಯವಾಗುವುದಿಲ್ಲ. ದೈವ ಪ್ರೇರಣೆ ಇಲ್ಲದೆ, ನಿಮ್ಮನ್ನು ಯಾರೂ ಸಂಧಿಸುವುದಿಲ್ಲ. ನಿಮಗೆ ಯಾರಾದರೂ ಆಹಾರ ನೀಡಿದರೆ, ಅದನ್ನು ನಿರಾಕರಿಸಬಾರದು. ಕೊಟ್ಟ ಆಹಾರವನ್ನು ಬಿಸಾಡಬಾರದು. ಆಹಾರ ನೀಡಿಕೆಯನ್ನು ಶುಭಸೂಚನೆ ಏಂದು ತಿಳಿಯಬೇಕು. ಸಹನೆ ಶಾಂತಿಗಳಿಂದ ಇರಿ" ಎಂದೆಲ್ಲಾ ಹೇಳಿ, ಅವನು ಮತ್ತೆ ನಮ್ಮನ್ನು ಊಟಮಾಡಲು ಆಹ್ವಾನಿಸಿದ.
ಅಷ್ಟೆಲ್ಲಾ ಹೇಳಿದರೂ, ಅವನ ಮಾತಿಗೆ ನಾವು ಪುರಸ್ಕಾರ ಕೊಡಲಿಲ್ಲ. ನಮ್ಮಲ್ಲಿ ಮೂವರು ಬಹಳ ಹಟಮಾರಿ ಸ್ವಭಾವದವರು. ಅವನು ನೀಡಿದ ಆಹಾರವನ್ನು ತ್ಯಜಿಸಿ, ಹೊರಡಲು ಅನುವಾದರು. ನಾನು ಬಹಳ ಬಾಯಾರಿದ್ದೆ. ಹಸಿದಿದ್ದೆ. ವನಜಾರಿಯ ಅಪಾರ ಪ್ರೇಮ, ನನ್ನನ್ನು ಬಹಳ ಆಪ್ಯಾಯಮಾನಗೊಳಿಸಿತು. ನಾವೇ ಬುದ್ಧಿವಂತರು ಎಂದುಕೊಂಡ ನಾವು, ದಯೆ ಕರುಣೆ ಎಂದರೇನು ಎಂಬುದನ್ನರಿತಿರಲಿಲ್ಲ. ವನಜಾರಿ ವಿದ್ಯೆಯಿಲ್ಲದವನು. ಮೂಢ. ಕೆಳಗಿನ ಜಾತಿಗೆ ಸೇರಿದವನು. ಆದರೂ, ಅವನಲ್ಲಿ ಪ್ರೀತಿ ತುಂಬಿತ್ತು. ನಮಗೆ ಆಹಾರವನ್ನು ನೀಡಿದ. ಲಾಭ ದೃಷ್ಟಿಯಿಲ್ಲದೆ, ಪ್ರೀತಿವಿಶ್ವಾಸಗಳಿಂದ ತುಂಬಿರುವವನು ಜ್ಞಾನಿಯೇ! ಹೀಗೆಂದು ಯೋಚಿಸಿದ ನಾನು, ಅವನ ಆತಿಥ್ಯವನ್ನು ಸ್ವೀಕರಿಸುವುದು ನನ್ನ ಜ್ಞಾನಾರ್ಜನೆಗೆ ಅನುಕೂಲಕರ ಎಂದು, ಅವನು ಕೊಟ್ಟ ಆಹ್ವಾನವನ್ನು ಮನ್ನಿಸಿ ನೀರು ಆಹಾರಗಳನ್ನು ಸ್ವೀಕರಿಸಿದೆ.
ಆಗ ಗುರುವು ನಮ್ಮ ಮುಂದೆ ಪ್ರತ್ಯಕ್ಷರಾಗಿ, "ಯಾವ ವಿಷಯವಾಗಿ ಚರ್ಚೆ ಹುಡುಕಾಟಗಳು?" ಎಂದು ಕೇಳಿದರು. ನಾನು ನಡೆದದ್ದನ್ನೆಲ್ಲಾ ಅವರಿಗೆ ವಿವರವಾಗಿ ಹೇಳಿದೆ. ಅವರು ಕೇಳಿದರು, "ನೀವು ನನ್ನ ಜೊತೆಯಲ್ಲಿ ಬರಲು ಇಚ್ಛೆಯಿದೆಯೇ? ನಿಮಗೆ ಬೇಕಾದುದ್ದನ್ನು ನಾನು ತೋರಿಸುತ್ತೇನೆ. ಆದರೆ, ನನ್ನ ಮಾತಿನಲ್ಲಿ ಯಾರಿಗೆ ನಂಬಿಕೆ ಇದೆಯೋ ಅವರು ಮಾತ್ರ ಸಫಲರಾಗುತ್ತಾರೆ." ಮಿಕ್ಕ ಮೂವರು ಅವರ ಮಾತನ್ನು ಕೇಳದೆ, ತಮ್ಮದೇ ದಾರಿಯಲ್ಲಿ ಹೊರಟುಹೋದರು. ನಾನು ಗುರುವಿಗೆ ಗೌರವದಿಂದ ನಮಸ್ಕರಿಸಿ, ಅವರ ಮಾತನ್ನು ಒಪ್ಪಿಕೊಂಡೆ. ಅವರು ನನ್ನನ್ನು ಒಂದು ಭಾವಿಯ ಬಳಿಗೆ ಕರೆದುಕೊಂಡು ಹೋಗಿ, ನನ್ನ ಕಾಲುಗಳನ್ನು ಕಟ್ಟಿ ತಲೆಕೆಳಗಾಗಿ ನನ್ನನ್ನು ಭಾವಿಯೊಳಕ್ಕೆ ನೀರಿನಿಂದ ಮೂರಡಿ ಮೇಲಿರುವಂತೆ ತೂಗುಹಾಕಿದರು. ನಾನು ಕೈ ನೀಡಿದರೂ ನೀರನ್ನು ಮುಟ್ಟಲೂ ಆಗುತ್ತಿರಲಿಲ್ಲ. ಹೀಗೆ ನನ್ನನ್ನು ತೂಗುಹಾಕಿ ಅವರು ಎಲ್ಲಿಯೋ ಹೊರಟುಹೋದರು.
೪-೫ ಗಂಟೆಗಳಾದಮೇಲೆ, ಅವರು ಬಂದು ನನ್ನನ್ನು ಭಾವಿಯಿಂದ ಹೊರಕ್ಕೆ ತೆಗೆದು, ಹೇಗಿದ್ದೀಯ ಎಂದು ಕೇಳಿದರು. "ನಾನು ಪರಮಾನಂದದಲ್ಲಿದ್ದೆ. ನನ್ನಂತಹ ಮೂರ್ಖ ಅದನ್ನು ಹೇಗೆ ವರ್ಣಿಸಬಲ್ಲ?" ಎಂದೆ. ಅದನ್ನು ಕೇಳಿದ ಗುರುವು ಬಹಳ ಸಂತೋಷಪಟ್ಟು, ನನ್ನನ್ನು ಹತ್ತಿರಕ್ಕೆಳೆದುಕೊಂಡು, ನನ್ನ ಮೈ ತಟ್ಟಿ, ನನ್ನನ್ನು ತಮ್ಮ ಬಳಿಯೇ ಇಟ್ಟುಕೊಂಡರು. ತಾಯಿ ತನ್ನ ಮಗುವನ್ನು ನೋಡಿಕೊಳ್ಳುವ ರೀತಿಯಲ್ಲಿ, ನನ್ನನ್ನು ನೋಡಿಕೊಂಡರು. ನನ್ನನ್ನು ಅವರ "ಪಾಠಶಾಲೆ"ಗೆ ಸೇರಿಸಿದರು. ಓಹ್! ಅದು ಎಷ್ಟು ಸುಂದರವಾಗಿತ್ತೆಂದರೆ, ನಾನು ನನ್ನ ತಂದೆತಾಯಿಗಳನ್ನೂ ಮರೆತೆ. ನನ್ನ ಆಶಾ ಮೋಹಗಳೆಲ್ಲಾ ಕಳಚಿಹೋಗಿ ನಾನು ಸ್ವತಂತ್ರನಾದೆ. ಅವರನ್ನು ಅಪ್ಪಿಕೊಂಡು ಸದಾ ಅವರನ್ನೇ ನೋಡುತ್ತಾ ಇರಬೇಕು ಎನ್ನಿಸುತ್ತಿತ್ತು, ಹಾಗಿತ್ತು ಆ ಪಾಠಶಾಲೆ. ಅದರಲ್ಲಿ ಒಳಹೊಕ್ಕವರು ಯಾರೂ ರಿಕ್ತಹಸ್ತರಾಗಿ ಈಚೆಗೆ ಬರಲಿಲ್ಲ. ನನ್ನ ಗುರುವೇ ನನಗೆ ಸಮಸ್ತವೂ. ತಂದೆ ತಾಯಿ ಮನೆ ಮಠ ಎಲ್ಲವೂ ಅವರೇ ಆದರು. ನನ್ನ ಇಂದ್ರಿಯಗಳೆಲ್ಲವೂ ಒಂದಾಗಿ, ಅದು ಕಣ್ಣಲ್ಲೇ ಸೇರಿ ನನ್ನ ದೃಷ್ಟಿಯೆಲ್ಲಾ ಅವರಲ್ಲೇ ಕೇಂದ್ರೀಕೃತವಾಗಿತ್ತು. ಅವರೇ ನನ್ನ ಧ್ಯಾನ ಮೂರ್ತಿ ಆಗಿದ್ದರು. ನನಗೆ ಇನ್ನಾವುದರ ಅರಿವೂ ಇರಲಿಲ್ಲ. ಅವರ ಧ್ಯಾನದಲ್ಲಿ ನನ್ನ ಮನೋಬುದ್ಧಿಗಳು ನಿಶ್ಚಲವಾಗಿ ಹೋಗಿದ್ದವು. ಹಾಗೆ ನಾನು ನಿಶ್ಚಲನಾಗಿ, ನಿರ್ವಾಕ್ಕಾಗಿ ಅವರಲ್ಲೇ ಮುಳುಗಿಹೋಗಿದ್ದೆ.
ಇತರ ಪಾಠಶಾಲೆಗಳೂ ಇವೆ. ಅಲ್ಲಿ ನಾವು ನೋಡುವುದೇ ಬೇರೆ. ಕಲಿಯಲಿಚ್ಚಿಸುವವನು ಅಲ್ಲಿಗೆ ಹೋಗಿ, ಕಾಲ ಧನಗಳನ್ನು ವ್ಯಯಮಾಡಿ ಕಷ್ಟಪಟ್ಟಮೇಲೆ, ಕಲಿತಿರುವುದು ಶೂನ್ಯ ಎಂದು ತಿಳಿದು ಪಶ್ಚಾತ್ತಾಪ ಪಡಬೇಕಾಗುತ್ತದೆ. ಅಲ್ಲಿ ಗುರು ಎನ್ನಿಸಿಕೊಂಡವನು ತನ್ನ ಬುದ್ಧಿಮತ್ತೆಯನ್ನು ಹೊಗಳಿಕೊಳ್ಳುತ್ತಾ, ತನ್ನ ಗುರುತ್ವದ ಢಾಂಬಿಕ ಪ್ರದರ್ಶನ ಮಾಡುತ್ತಿರುತ್ತಾನೆ. ಅವನು ಮೃದು ಹೃದಯಿ ಅಲ್ಲ. ಬಹಳ ದೊಡ್ಡ ಮಾತುಗಾರ. ತನ್ನ ಹಿರಿಮೆಯನ್ನು ತಾನೇ ಹಾಡುತ್ತಾ ಇರುತ್ತಾನೆ. ಅವನು ಹೇಳುವುದು ಯಾರ ಹೃದಯಕ್ಕೂ ತಟ್ಟಿ ಅವರನ್ನು ಪ್ರಭಾವಿತರನ್ನಾಗಿ ಮಾಡುವುದಿಲ್ಲ. ಅವನಿಗೆ ಆತ್ಮಸಾಕ್ಷಾತ್ಕಾರ ಏನು ಎಂಬುದರ ಅರಿವಿಲ್ಲ. ಅಂತಹ ಶಾಲೆಗಳಿಂದ ಆಗುವ ಪ್ರಯೋಜನವಾದರೂ ಏನು? ಯಾರಿಗೆ ತಾನೇ ಉಪಯೋಗಕರ? ಆದರೆ ನನ್ನ ಗುರು, ಅವರ ಪಾಠಶಾಲೆ, ಇದೆಲ್ಲಕ್ಕಿಂತ ಭಿನ್ನವಾದುದು. ನನ್ನ ಗುರುವಿನ ಕೃಪೆಯಿಂದ ನನಗೆ ಅತ್ಮಸಾಕ್ಷಾತ್ಕಾರ ಕ್ಷಣದಲ್ಲಿ ಹೊಳೆಯಿತು. ಅದೂ ಯಾವ ವಿಶೇಷ ಪ್ರಯತ್ನವೂ ಇಲ್ಲದೆ! ನಾನು ಯಾವುದನ್ನೂ ಹುಡುಕಬೇಕಾಗಲಿಲ್ಲ. ಎಲ್ಲವೂ ನನಗೆ ಹಚ್ಚ ಹಗಲಿನಂತೆ ಸ್ಪಷ್ಟವಾಗಿ ಕಾಣಿಸಿತು. ತಲೆಕೆಳಕಾಗಿ ನೇತುಹಾಕಿದ್ದರೂ, ಆನಂದವನ್ನು ಹೇಗೆ ದಯಪಾಲಿಸಬೇಕು ಎಂಬುದನ್ನು ಆ ಗುರುವೊಬ್ಬನೇ ಬಲ್ಲ!”
ಆ ನಾಲ್ಕು ಜನರಲ್ಲಿ ಮೊದಲನೆಯವನು ಕರ್ಮಠ. ಎಲ್ಲಿ ಯಾವಾಗ ಹೇಗೆ ಯಾವ ಕರ್ಮ ಮಾಡಬೇಕು, ಯಾವ ಕರ್ಮ ಮಾಡಬಾರದು ಎಂಬುದನ್ನು ಚೆನ್ನಾಗಿ ತಿಳಿದಿದ್ದ. ಎರಡನೆಯವನು ಜ್ಞಾನಿ. ತನ್ನ ಜ್ಞಾನದಿಂದ ಅಹಂಕಾರಿಯಾಗಿದ್ದ. ಮೂರನೆಯವನು ಭಕ್ತ. ಎಲ್ಲವನ್ನೂ ದೇವರೇ ಮಾಡುತ್ತಾನೆ, ಮಾಡಿಸುತ್ತಾನೆ, ಎಂದು ನಂಬಿ ಸುಮ್ಮನೇ ಕರ್ಮಮಾಡದೆ ಕುಳಿತಿರುತ್ತಿದ್ದ. ಅವರೆಲ್ಲರೂ ಅವರವರ ರೀತಿಯಲ್ಲೇ, ದೇವರನ್ನು ಹುಡುಕುತ್ತಾ ಹೊರಟರು. ನಾಲ್ಕನೆಯವರೇ ಸಾಯಿಬಾಬಾ. ಬೇಧಭಾವಗಳು, ರಾಗದ್ವೇಷಗಳಿಂದ ಕೂಡಿದ ಕೆಲವರು ಕೇಳಬಹುದು, "ಅವರು ಮಿಕ್ಕೆಲ್ಲವರಿಗಿಂತ ಬೇರೆಯಾಗಿದ್ದರೆ, ಅಂತಹವರ ಜೊತೆಸೇರಿ ಅವರೇಕೆ ಮೂರ್ಖರಂತೆ ವರ್ತಿಸಿದರು?" ಎಂದು. ಅವರು ಹಾಗೆ ಮಾಡಿದ್ದು ನಮ್ಮೆಲ್ಲರಿಗೋಸ್ಕರವೇ! ನಮಗೆ ಮಾದರಿಯಾಗಿ ನಿಲ್ಲಲು ಹಾಗೆ ಮಾಡಿದರು. ಅವತಾರ ಪುರುಷರಾದರೂ ಸಾಮಾನ್ಯ ಮನುಷ್ಯನಂತೆ ಹೀನಕುಲದವನನ್ನು ಗೌರವದಿಂದ ಕಂಡರು. ಅವನು ಕೊಟ್ಟ ಅನ್ನವನ್ನು ಸ್ವೀಕರಿಸಿ "ಅನ್ನವೇ ಬ್ರಹ್ಮ" ಎಂಬ ಮಾತನ್ನು ಧೃಢೀಕರಿಸಿದರು. ವನಜಾರಿಯ ಮಾತನ್ನು ಅಲ್ಲಗಳೆದವರು ಹೇಗೆ ಕಷ್ಟಾನುಭಾವಿಗಳಾದರು ಎಂಬುದನ್ನು ತೋರಿಸಿದರು. ಗುರುವಿಲ್ಲದೆ ಜ್ಞಾನಾರ್ಜನೆ ಸಾಧ್ಯವಿಲ್ಲ ಎಂದೂ ತೋರಿಸಿದರು. ಮಾತಾ, ಪಿತೃ, ಗುರುಗಳನ್ನು ದೇವರಂತೆಯೇ ಕಾಣಬೇಕು. ಆ ಭಾವನೆಯಿಂದ, ಅವರ ಸೇವೆ ಮಾಡಿದರೆ ನಮ್ಮ ಮನಸ್ಸು ನಿರ್ಮಲವಾಗುತ್ತದೆ. ಆ ನಿರ್ಮಲ ಮನಸ್ಸು ಸಾಕ್ಷಾತ್ಕಾರದ ದಾರಿಯನ್ನು ಹಿಡಿಯುತ್ತದೆ. ವ್ಯಾಕರಣ ಶಾಸ್ತ್ರ ಪುರಾಣಾದಿಗಳನ್ನು ಆಮೂಲಾಗ್ರವಾಗಿ ಓದಿ ಅರಗಿಸಿಕೊಂಡರೂ, ಗುರುಕಟಾಕ್ಷವಿಲ್ಲದೆ ಅವು ನಮ್ಮನ್ನು ಋಜುಮಾರ್ಗಕ್ಕೆ ಕೊಂಡೊಯ್ಯಲಾರವು. ನಾಲ್ಕು ಪುರುಷಾರ್ಥಗಳಲ್ಲಿ ಧರ್ಮ, ಅರ್ಥ, ಕಾಮಗಳನ್ನು ನಮ್ಮ ಪ್ರಯತ್ನದಿಂದ ಸಾಧಿಸಬಹುದು. ಆದರೆ ನಾಲ್ಕನೆಯ ಪುರುಷಾರ್ಥವಾದ ಮೋಕ್ಷವನ್ನು ಸಾಧಿಸಲು ಗುರುಕಟಾಕ್ಷ, ದಯೆಗಳಿಲ್ಲದೆ ಸಾಧ್ಯವಿಲ್ಲ.
ನಮ್ಮ ಸದ್ಗುರುವಾದ ಬಾಬಾರ ದರ್ಬಾರಿನಲ್ಲಿ, ಅನೇಕ ಗಣ್ಯರು ಬಂದು ತಮ್ಮ ತಮ್ಮ ಪಾತ್ರ ವಹಿಸಿದ್ದಾರೆ. ಜ್ಯೋತಿಷಿಗಳು, ರಾಜಮಹಾರಾಜರು, ಮಾನ್ಯರು, ಬಡವರು, ಸಾಧಾರಣ ಮನುಷ್ಯರು, ಸನ್ಯಾಸಿಗಳು, ಯೋಗಿಗಳು, ಸಂಗೀತಗಾರರು ಎಲ್ಲ ತರಹೆಯವರೂ ಬಾಬಾರ ದರ್ಶನಕ್ಕೆ ಬಂದರು. ಐಂದ್ರಜಾಲಿಕರು, ಗೋಂಡಾಲಿಗಳು, ಕುಂಟ. ಕುರುಡ, ಕಿವುಡ, ಮೂಗರು, ನಾಥಪಂಥದವರು, ನಾಟ್ಯಕಾರರು, ಎಲ್ಲ ವಿಧದವರೂ ಬಂದು ತಮ್ಮ ತಮ್ಮ ಪಾತ್ರ ವಹಿಸಿ ಬಾಬಾರ ಆಶೀರ್ವಾದ ಪಡೆದರು. ಇವರೆಲ್ಲರಂತೆ ವನಜಾರಿಯೂ ತನ್ನ ಪಾತ್ರವಹಿಸಿದ್ದ. ಈಗ, ಇನ್ನೊಬ್ಬಾಕೆ ಶ್ರೀಮತಿ ಗೋಖಲೆ ಪಾತ್ರ ಹೇಗಿತ್ತು ಎಂಬುದನ್ನು ನೋಡೋಣ.
ಶ್ರೀಮತಿ ಗೋಖಲೆಯವರ ಕಥೆ
ಬಾಬಾ ಎಂದೂ ಉಪವಾಸ ಮಾಡಲಿಲ್ಲ, ಬೇರೆಯವರು ಉಪವಾಸ ಮಾಡಲು ಬಿಡಲಿಲ್ಲ. ಉಪವಾಸವಿದ್ದವರ ಮನಸ್ಸು ಸ್ಥಿರವಾಗಿರುವುದಿಲ್ಲ. ಅಂತಹವರು ಪರಮಾರ್ಥದ ಬಗ್ಗೆ ಹೇಗೆ ಯೋಚಿಸಲು ಸಾಧ್ಯ? ವನಜಾರಿ ಹೇಳಿದಂತೆ, ಬರಿಯ ಹೊಟ್ಟೆಯಲ್ಲಿ ಏನನ್ನೂ ಮಾಡಲು ಹೋಗಬಾರದು. ಮೊದಲು ಹೊಟ್ಟೆಯ ಹಸಿವು ಇಂಗಬೇಕು. ಆಗಲೇ, ಮಿಕ್ಕ ಇಂದ್ರಿಯಗಳು ತಮ್ಮ ತಮ್ಮ ಕೆಲಸವನ್ನು ಸರಾಗವಾಗಿ ಮಾಡಲು ಸಾಧ್ಯವಾಗುತ್ತದೆ. ಹೊಟ್ಟೆ ಹಸಿದಿದ್ದಾಗ ದೇವರನ್ನು ಹೇಗೆ ಒಮ್ಮನಸ್ಸಿನಿಂದ ಪೂಜೆ ಮಾಡುವುದು ಸಾಧ್ಯ? ಉಪವಾಸವಿರಬಾರದು. ಹಾಗೆಂದು ಹೊಟ್ಟೆ ಬಿರಿಯುವಂತೆ ತಿನ್ನಬಾರದು. ಆಹಾರದಲ್ಲಿ ಇತಿಮಿತಿಯಿರಬೇಕು.
ಶ್ರೀಮತಿ ಕೌಶೀಬಾಯಿ ಕನೀಟ್ಕರರಿಂದ ದಾದಾ ಕೇಳ್ಕರರಿಗೆ ಪರಿಚಯಪತ್ರ ತೆಗೆದುಕೊಂಡು, ಶ್ರೀಮತಿ ಗೋಖಲೆ ಶಿರಡಿಗೆ ಬಂದರು. ಆಕೆ ಶಿರಡಿಯಲ್ಲಿ, ಬಾಬಾರ ದರ್ಶನಮಾಡಿ, ಬಾಬಾರ ಸನ್ನಿಧಿಯಲ್ಲಿ ಮೂರುದಿನಗಳು ಉಪವಾಸ ಮಾಡಬೇಕೆನ್ನುವ ನಿಶ್ಚಯಮಾಡಿಕೊಂಡು ಶಿರಡಿಗೆ ಬಂದಿದ್ದರು. ಆಕೆ ಬರುವ ಹಿಂದಿನ ದಿನ, ಬಾಬಾ ಕೇಳ್ಕರರಿಗೆ ಹೇಳಿದ್ದರು, "ನಾನು ಈ ಹೋಳಿಹಬ್ಬದ ಸಂದರ್ಭದಲ್ಲಿ, ಯಾರೂ ಉಪವಾಸ ಮಾಡಲು ಬಿಡುವುದಿಲ್ಲ. ಉಪವಾಸ ಏಕೆ ಮಾಡಬೇಕು? ಹಾಗೆ ಅವರು ಉಪವಾಸ ಮಾಡುವುದಾದರೆ ನಾನು ಇಲ್ಲೇಕೆ ಇರಬೇಕು?"
ಈ ಹಿನ್ನೆಲೆಯಲ್ಲಿ, ಮಾರನೆಯ ದಿನ ಶ್ರೀಮತಿ ಗೋಖಲೆ ಕೇಳ್ಕರರ ಜೊತೆಯಲ್ಲಿ ಮಸೀದಿಗೆ ಬಂದು, ಬಾಬಾರ ಬಳಿ ಕುಳಿತಾಗ, ಬಾಬಾ ಆಕೆಗೆ ಹೇಳಿದರು, "ಉಪವಾಸಮಾಡುವುದೇತಕ್ಕೆ? ದಾದಾಭಟ್ಟರ ಮನೆಗೆ ಹೋಗಿ ಒಬ್ಬಟ್ಟು ಮಾಡಿ, ಮಕ್ಕಳಿಗೆ ಕೊಟ್ಟು ನೀನೂ ತಿನ್ನು." ಆಗ ದಾದಾಭಟ್ಟರ ಮನೆಯಾಕೆ, ಅಶುಚಿಯಾಗಿ ಮನೆಯೊಳಗಿರಲಿಲ್ಲ. ಅವರ ಮನೆಯಲ್ಲಿ ಅಡಿಗೆ ಮಾಡುವವರು ಬೇರೆ ಯಾರೂ ಇರಲಿಲ್ಲ. ಬಾಬಾರ ಮಾತುಗಳು ಎಷ್ಟು ಸಂದರ್ಭೋಚಿತವಾಗಿತ್ತು! ಶ್ರೀಮತಿ ಗೋಖಲೆ ದಾದಾಭಟ್ಟರ ಮನೆಗೆ ಹೋಗಿ ಒಬ್ಬಟ್ಟು ಮಾಡಿ ಮಕ್ಕಳಿಗೆ ಕೊಟ್ಟು, ತಾವೂ ತಿಂದರು. ಎಂತಹ ಅರ್ಥಪೂರ್ಣವಾದ ಸುಂದರ ಕಥೆ!
ಬಾಬಾರ ಸರ್ಕಾರ್
ತಾವು ಹುಡುಗನಾಗಿದ್ದಾಗಿನ ಒಂದು ಕಥೆ, ಬಾಬಾ ಹೇಳಿದರು, "ನಾನು ಹುಡುಗನಾಗಿದ್ದಾಗ ಬೀಡ್ಗಾಂವ್ಗೆ, ಜೀವನೋಪಾಯಕ್ಕಾಗಿ ಹೋದೆ. ಅಲ್ಲಿ ನಾನು ಕಸೂತಿ ಕೆಲಸ ಮಾಡುತ್ತಿದ್ದೆ. ಕಷ್ಟಪಟ್ಟು ಕೆಲಸ ಮಾಡುತ್ತಿದ್ದ ನನ್ನನ್ನು ನೋಡಿ ಯಜಮಾನಿಗೆ ಸಂತೋಷವಾಯಿತು. ಅಲ್ಲಿ ಇನ್ನೂ ಮೂರು ಹುಡುಗರು ಕೆಲಸ ಮಾಡುತ್ತಿದ್ದರು. ಯಜಮಾನ ಅವರಲ್ಲಿ ಒಬ್ಬನಿಗೆ ತಿಂಗಳಿಗೆ ೫೦, ಇನ್ನೊಬ್ಬನಿಗೆ ೧೦೦, ಮೂರನೆಯವನಿಗೆ ೧೫೦ ರೂಪಾಯಿಗಳ ಸಂಬಳ ಕೊಡುತ್ತಿದ್ದ. ನನ್ನ ಕೆಲಸದಿಂದ ಸಂತೋಷಗೊಂಡಿದ್ದ ಯಜಮಾನ ನನಗೆ ಅವರೆಲ್ಲರಿಗೂ ಸೇರಿ ಬರುತ್ತಿದ್ದ ಸಂಬಳದ ಎರಡರಷ್ಟು ಎಂದರೆ ೬೦೦ ರೂಪಾಯಿಗಳು ಕೊಡುತ್ತಿದ್ದ. ನನ್ನ ಚಾಕಚಕ್ಯತೆಯನ್ನು ಕಂಡ ಯಜಮಾನ, ನನ್ನನ್ನು ಹೊಗಳಿ, ಪ್ರೀತಿಯಿಂದ ನನಗೆ ಒಂದು ದಿರಸು, ತಲೆಗೆ ಪೇಟ ಎಲ್ಲವನ್ನೂ ಕೊಟ್ಟ. ಅವುಗಳನ್ನು ಉಪಯೋಗಿಸದೆ ನಾನು ಹಾಗೇ ತೆಗೆದಿಟ್ಟೆ. ಮನುಷ್ಯ ಕೊಟ್ಟಿದ್ದು ಎಲ್ಲಕಾಲಕ್ಕೂ ಇರುವುದಿಲ್ಲ. ನನ್ನ ಸರ್ಕಾರ ಕೊಟ್ಟದ್ದು ಕೊನೆಯವರೆಗೂ ಇರುತ್ತದೆ. ಅವನು ಕೊಡುವ ಬಳುವಳಿಗೆ ಇನ್ನಾವುದೂ ಸಮಾನವಲ್ಲ. ನನ್ನ ಸರ್ಕಾರ ಹೇಳುತ್ತಾನೆ, "ತೆಗೆದುಕೊಳ್ಳಿ. ತೆಗೆದುಕೊಳ್ಳಿ." ಎಲ್ಲರೂ ನನ್ನ ಬಳಿಗೆ ಬಂದು, "ಕೊಡಿ, ಕೊಡಿ" ಎನ್ನುತ್ತಾರೆ. ಆದರೆ ನಾನು ಹೇಳುವುದನ್ನು ಯಾರೂ ಕೇಳುವುದಿಲ್ಲ. ನನ್ನ ಸರ್ಕಾರನ ಖಜಾನೆ ತುಂಬಿ ತುಳುಕುತ್ತಿದೆ. ಅದನ್ನು ನಿಮ್ಮ ಗಾಡಿಯ ತುಂಬ ತುಂಬಿಸಿಕೊಳ್ಳಿ, ಎಂದು ನಾನು ಹೇಳುತ್ತೇನೆ. ಆದರೆ ಅದನ್ನು ಕೇಳುವವರಾರು? ನನ್ನ ಫಕೀರನ ಲೀಲೆ, ನನ್ನ ಸರ್ಕಾರನ ನೈಪುಣ್ಯ, ಯೋಗ್ಯತೆ, ಎಲ್ಲವೂ ವೈಶಿಷ್ಟ್ಯದಿಂದ ಕೂಡಿದವು. ನನಗೇನಿದೆ? ಈ ದೇಹ ಪಂಚಭೂತಗಳಿಂದ ಆದದ್ದು. ಪಂಚಭೂತಗಳಲ್ಲಿ ಸೇರಿಹೋಗುತ್ತದೆ. ಆದರೆ ಈ ‘ಕ್ಷಣ’ ಮತ್ತೆ ಬರುವುದಿಲ್ಲ. ನಾನು ಎಲ್ಲೋ ಹೋಗುತ್ತೇನೆ. ಏನೋ ಮಾಡುತ್ತೇನೆ. ಈ ಮಾಯೆ ನನಗೆ ಬಹಳ ತೊಂದರೆ ಕೊಡುತ್ತಾಳೆ. ಆದರೂ, ನಾನು ನನ್ನವರಿಗೋಸ್ಕರ ಬಹಳ ತಲ್ಲಣಗೊಳ್ಳುತ್ತಿರುತ್ತೇನೆ. ಆಧ್ಯಾತ್ಮಿಕ ಕೃಷಿ ಮಾಡುವವರು, ಅದಕ್ಕೆ ತಕ್ಕ ಪ್ರತಿಫಲ ಪಡೆಯುತ್ತಾರೆ. ಈ ನನ್ನ ಮಾತುಗಳನ್ನು ನಂಬಿ, ಅದನ್ನು ನೆನಸಿಕೊಂಡು ಅದರಂತೆ ನಡೆಯುವವರಿಗೆ ಅದು ಆನಂದವನ್ನು ಕೊಡುತ್ತದೆ”.
ಈ ಅಧ್ಯಾಯವನ್ನು ಮುಗಿಸುವ ಮೊದಲು, ನಮ್ಮ ಸರ್ಕಾರ ಬಾಬಾರಿಗೆ ನಮಸ್ಕರಿಸಿ, ನಮಗಾಗಿ ಖಜಾನೆಯ ಬಾಗಿಲು ತೆರೆದಿಟ್ಟು, ಅದರಲ್ಲಿರುವುದನ್ನು ತೆಗೆದುಕೊಳ್ಳಲು ನಮ್ಮನ್ನು ಅರ್ಹರನ್ನಾಗಿ ಮಾಡು ಎಂದು ಬೇಡಿಕೊಳ್ಳೋಣ.
ಇದರೊಂದಿಗೆ ಬಾಬಾ ತಮ್ಮ ಗುರುವನ್ನು ಹೇಗೆ ಸಂಧಿಸಿದರು, ಶ್ರೀಮತಿ ಗೋಖಲೆ ಮತ್ತು ಇತರ ವಿಷಯಗಳನ್ನು ಕುರಿತು ಹೇಳುವ ಮುವ್ವತ್ತೆರಡನೆಯ ಅಧ್ಯಾಯ ಮುಗಿಯಿತು. ಮುಂದಿನ ಅಧ್ಯಾಯದಲ್ಲಿ ಹೇಮಾಡ್ ಪಂತ್, ಚೇಳು ಕಡಿತ, ಪ್ಲೇಗ್ ವ್ಯಾಧಿಗಳು ಗುಣವಾದದ್ದು, ಜಾಮನೇರ್ ಲೀಲೆ, ನಾರಾಯಣ ರಾವ್ ಖಾಯಿಲೆ, ಬಾಲಾ ಬುವಾ ಸುತಾರ್, ಹರಿಭಾವು ಕಾರ್ಣಿಕ್ ಮತ್ತು ಇತರ ವಿಷಯಗಳನ್ನು ಹೇಳುತ್ತಾರೆ.
||ಶ್ರೀ ಸದ್ಗುರು ಸಾಯಿನಾಥಾರ್ಪಣಮಸ್ತು||ಶುಭಂ ಭವತು||
||ಓಂ ಶಾಂತಿಃ ಶಾಂತಿಃ ಶಾಂತಿಃ||
||ಓಂ ಶಾಂತಿಃ ಶಾಂತಿಃ ಶಾಂತಿಃ||
No comments:
Post a Comment