Friday, January 13, 2012

||ಮುವ್ವತ್ತೇಳನೆಯ ಅಧ್ಯಾಯ||


||ಶ್ರೀ ಸಾಯಿ ಸಚ್ಚರಿತ್ರೆ||
||ಮುವ್ವತ್ತೇಳನೆಯ ಅಧ್ಯಾಯ||
||ಚಾವಡಿ ಉತ್ಸವ||
ಶ್ರೀ ಗಣೇಶಾ ನಮಃ ಶ್ರೀ ಸರಸ್ವತಯೇ ನಮಃ
ಶ್ರೀ ವೆಂಕಟೇಶಾಯ ನಮಃ ಶ್ರೀ ಸಾಯಿನಾಥಾಯ ನಮಃ
ಶ್ರೀ ಸದ್ಗುರುಭ್ಯೋನ್ನಮಃ

ಅಧ್ಯಾಯದಲ್ಲಿ ಹೇಮಾಡ್ ಪಂತ್, ಚಾವಡಿ ಉತ್ಸವ ಇತ್ಯಾದಿ ವಿಷಯಗಳನ್ನು ಕುರಿತು ಹೇಳುತ್ತಾರೆ.

ಬಾಬಾರ ಜೀವನ ಶೈಲಿ

ಬಾಬಾರ ಜೀವನ ಶೈಲಿಯನ್ನು ಅರ್ಥಮಾಡಿಕೊಳ್ಳುವುದು ದುಸ್ಸಾಧ್ಯ. ಅವರ ಜೀವನವೆಲ್ಲ ಒಗಟುಗಳಿಂದ ತುಂಬಿದ ದೊಡ್ಡ ಒಗಟು. ಹಲವು ವೇಳೆ, ಅವರು ಬ್ರಹ್ಮಾನಂದದಲ್ಲಿ ಮುಳುಗಿದ್ದಂತೆ ಕಾಣುತ್ತಿದ್ದರು. ಹಲವು ವೇಳೆ, ಆತ್ಮಜ್ಞಾನದಲ್ಲಿ ನಿರತರಾಗಿರುವಂತೆ ತೋರುತ್ತಿದ್ದರು. ಇನ್ನೂ ಹಲವು ವೇಳೆ, ಒಂದೇ ಸಮಯದಲ್ಲಿ ಹಲವಾರು ಕಾರ್ಯಗಳನ್ನು ಒಟ್ಟಿಗೇ ಮಾಡುವಂತೆ ತೋರುತ್ತಿದ್ದರೂ, ಅವರಿಗೆ ಅದರಲ್ಲಿ ಏನೂ ಸಂಬಂಧವಿಲ್ಲದಂತೆ ಕಾಣುತ್ತಿದ್ದರು. ಮತ್ತೆ ಕೆಲವು ವೇಳೆ, ಪ್ರಶಾಂತ ಸಾಗರದಂತೆ ಏನೂ ಮಾಡದೆ ಕುಳಿತಿರುವಂತೆ ಕಾಣುತ್ತಿದ್ದರು. ಅವರು ಯಾವಾಗಲೂ ನಿಷ್ಕ್ರಿಯರಾಗಿರಲಿಲ್ಲ. ಹಾಗೆಂದು ನಿದ್ರಾಪರವಶರಾಗಿಯೂ ಇರುತ್ತಿರಲಿಲ್ಲ. ಸದಾಕಾಲವೂ, ತಮ್ಮ ಭಕ್ತರ ವಿಷಯವಾಗಿಯೇ ಚಿಂತಿಸುತ್ತಿದ್ದರು. ಅವರ ಒಳಿತಿಗಾಗಿಯೇ ಯೋಚಿಸುತ್ತಿದ್ದರು. ಅವರ ಈ ಅನಿರ್ವಚನೀಯ ಪ್ರಕೃತಿಯನ್ನು ಯಾರು ತಾನೇ ವರ್ಣಿಸಬಲ್ಲರು? ಅವರು ಹೆಂಗಸರನ್ನು ಯಾವತ್ತೂ ತಾಯಿಯಂತೆ, ಇಲ್ಲ ಅಕ್ಕತಂಗಿಯರಂತೆ ಮಾತ್ರ ಕಾಣುತ್ತಿದ್ದರು. ಗಂಡಸರೆಲ್ಲರೂ ಅವರಿಗೆ ಅಣ್ಣ ತಮ್ಮಂದಿರೇ! ಅವರು ತಮ್ಮ ಭಕ್ತರನ್ನು ಎಂದೂ ಲಿಂಗ, ಕುಲ, ಮತ ಬೇಧದಿಂದ ನೋಡಲಿಲ್ಲ. ಎಲ್ಲರನ್ನೂ ಒಂದೇ ಸಮನಾಗಿ ಕಾಣುತ್ತಿದ್ದರು. ಪ್ರತಿಯೊಬ್ಬರನ್ನೂ ಸಮಾನವಾಗಿ ನೋಡುತ್ತಾ, ಅವರ ರಕ್ಷಣೆಯನ್ನೇ ಗುರಿಯಾಗಿಟ್ಟುಕೊಂಡು, ಅವರ ಬೇಕು-ಬೇಡಗಳನ್ನು ಪೂರಯಿಸುತ್ತಾ, ಅವರನ್ನು ಕಷ್ಟಕಾರ್ಪಣ್ಯಗಳು, ದುಃಖದುರಿತಗಳಿಂದ ದೂರಮಾಡಿ, ಅವರವರ ಯೋಗ್ಯತೆಗೆ ತಕ್ಕಂತೆ ಅವರಿಗೆ ಜ್ಞಾನಮಾರ್ಗದ ವಿಧಿಯನ್ನು ಬೋಧಿಸಿ, ಆತ್ಮಸಾಕ್ಷಾತ್ಕಾರದ ಕಡೆಗೆ ನಡೆಸುತ್ತಿದ್ದರು. ಈಗ ಅವರು ಸಗುಣರೂಪಿನಲ್ಲಿ ನಮ್ಮೊಡನೆ ಇಲ್ಲದಿದ್ದರೂ, ಅವರು ನಮಗಾಗಿ ಕೊಟ್ಟುಹೋಗಿರುವ ಸಚ್ಚರಿತ್ರೆಯನ್ನು ಶ್ರದ್ಧಾ ಭಕ್ತಿಗಳಿಂದ ಪಾರಾಯಣ ಮಾಡಿದರೆ, ಅವರ ಬೋಧೆಗಳೇನು ಎಂಬುದು ಅರ್ಥವಾಗುತ್ತವೆ. ಬಹಳ ಕ್ಲಿಷ್ಟವಾದ ಆಧ್ಯಾತ್ಮಿಕ ವಿಷಯಗಳನ್ನೂ ಅವರು ಬಹು ಸರಳವಾದ ಮಾತು ಕಥೆಗಳ ಮೂಲಕ ನಮಗೆ ಹೇಳಿದ್ದಾರೆ.

ಚಾವಡಿ ಉತ್ಸವ

ಒಂದು ರಾತ್ರಿ ಮಸೀದಿ, ಮಾರನೆಯ ರಾತ್ರಿ ಚಾವಡಿಯಲ್ಲಿ ಮಲಗುವುದು ಬಾಬಾರ ಅಭ್ಯಾಸವಾಗಿತ್ತು. ಈ ಅಭ್ಯಾಸ ಅವರ ಮಹಾಸಮಾಧಿಯವರೆಗೂ ನಡೆಯುತ್ತಿತ್ತು. ೧೦ನೇ ಡಿಸೆಂಬರ್ ೧೯೦೯ರಲ್ಲಿ ಭಕ್ತರು ಬಾಬಾರನ್ನು ಚಾವಡಿಯಲ್ಲಿ ಪೂಜಿಸುವುದು ಮೊದಲಾದ ಮೇಲೆ ಚಾವಡಿ ಉತ್ಸವವೂ ಪ್ರಾರಂಭವಾಯಿತು. ಚಾವಡಿಯಲ್ಲಿ ಬಾಬಾ ಮಲಗುವ ರಾತ್ರಿ, ಭಕ್ತರೆಲ್ಲರೂ ಸೇರಿ ಅವರನ್ನು ಮಸೀದಿಯಿಂದ ಚಾವಡಿಯವರೆಗೆ ಮೆರವಣಿಗೆಯಲ್ಲಿ ಕರೆದುಕೊಂಡು ಹೋಗುತ್ತಿದ್ದರು. ಅದೊಂದು ಅದ್ಭುತವಾದ ಮೆರವಣಿಗೆ. ಕಣ್ಣಿಗೆ ಹಬ್ಬ. ಸಾಯಿ ಭಕ್ತರಿಗೆ ಅದು ಚಿರಸ್ಮರಣೀಯ. ಅಂತಹ ಮೆರವಣಿಗೆಯಲ್ಲಿ ನಾವೂ ಭಾಗವಹಿಸೋಣ ಬನ್ನಿ.

ಭಕ್ತರೆಲ್ಲರೂ ಮಸೀದಿಯಲ್ಲಿ ಒಟ್ಟುಗೂಡಿದ್ದಾರೆ. ಕೆಲವರು ಅಂಗಳದಲ್ಲಿ ಭಜನೆ ಮಾಡುತ್ತಿದ್ದಾರೆ. ಅವರ ಹಿಂದೆ ಅಲಂಕರಿಸಿದ ರಥವೊಂದು ನಿಂತಿದೆ. ಬಲಗಡೆಗೆ ತುಳಸಿ ಬೃಂದಾವನ. ಅದರ ಮುಂದೆ ಬಾಬಾ. ಭಜನೆಯಲ್ಲಿ ಆಸಕ್ತಿ ಇರುವವರೆಲ್ಲರೂ ಬಂದು ಸೇರುತ್ತಿದ್ದಾರೆ. ಹೆಂಗಸರು, ಗಂಡಸರು ಮಕ್ಕಳು ಎಂಬ ಬೇಧವಿಲ್ಲದೆ ಜನ ಬಂದು ಸೇರುತ್ತಿದ್ದಾರೆ. ತಾಳ, ಚಿಪಳಿ, ಮೃದಂಗ, ಮದ್ದಳೆಗಳನ್ನು ಬಾರಿಸುತ್ತಾ ಭಜನೆಗಳಲ್ಲಿ ಮಗ್ನರಾಗಿಹೋಗಿದ್ದಾರೆ. ಇದೆಲ್ಲದರ ಹಿಂದಿರುವ ಶಕ್ತಿ ಬಾಬಾರದೇ!

ಇನ್ನೊಂದೆಡೆ ಜನ ದೀವಟಿಗೆಗಳನ್ನು ಸರಿಯಾಗಿ ಉರಿಯುತ್ತಿರುವಂತೆ ಮಾಡಲು ಅವನ್ನು ದುರಸ್ತಿಮಾಡುತ್ತಿದ್ದಾರೆ. ಇನ್ನು ಕೆಲವರು, ಪಲ್ಲಕ್ಕಿಯ ಹತ್ತಿರ ಸೇರಿ, ಅದನ್ನು ಬಗೆಬಗೆಯ ಹೂವುಗಳಿಂದ ಅಲಂಕರಿಸಿ ಸುಂದರವಾಗಿ ಕಾಣುವಂತೆ ಮಾಡುತ್ತಿದ್ದಾರೆ. ಇನ್ನೂ ಕೆಲವರು, ಸಣ್ಣ ಕೋಲೊಂದನ್ನು ಹಿಡಿದು, ಬಾಬಾ ಹೊರಗೆ ಬಂದಾಗ ಯಾವುದೇ ತೊಂದರೆಯಾಗದಂತೆ, ಜನ ಜಂಗುಳಿಯನ್ನು ನಿಯಂತ್ರಿಸುತ್ತಿದ್ದಾರೆ. ಎಲ್ಲರೂ ಶ್ರೀ ಸದ್ಗುರು ಸಾಯಿನಾಥ ಮಹರಾಜಕೀ ಜೈ ಎಂದು ಜೈಕಾರ ಮಾಡುತ್ತಿದ್ದಾರೆ. ಎಣ್ಣೆ ಬತ್ತಿಗಳಿಂದ ಕೂಡಿದ ಸಣ್ಣ ಸಣ್ಣ ಹಣತೆಗಳನ್ನು ಮಸೀದಿಯ ಸುತ್ತಲೂ ಅಂದವಾಗಿ ಜೋಡಿಸಿದ್ದಾರೆ. ಅವುಗಳು ತಮ್ಮ ಬೆಳಕಿನಿಂದ ಮಸೀದಿಗೆ ಹೆಚ್ಚು ಶೋಭೆಯನ್ನು ಕೊಟ್ಟಿವೆ. ರಾತ್ರಿಯಲ್ಲಿ ಈ ಸಣ್ಣ ಸಣ್ಣ ದೀಪಗಳು, ಆಕಾಶದಲ್ಲಿ ಮಿಣುಕು ಮಿಣುಕೆಂದು ಹೊಳೆಯುತ್ತಿರುವ ನಕ್ಷತ್ರಗಳಂತೆ ತೋರುತ್ತಿವೆ. ಬಾಬಾರ ಕುದುರೆ ಶ್ಯಾಮಕರ್ಣ ಅಲಂಕೃತವಾಗಿ ಬಾಬಾರಿಗೋಸ್ಕರ ಕಾಯುತ್ತಿರುವುದೋ ಎಂಬಂತೆ ಮಸೀದಿಯ ಬಾಗಿಲಲ್ಲಿ ಸಿದ್ಧವಾಗಿ ನಿಂತಿದೆ. ಅದರ ಕಾಲುಗಳಿಗೆ ಜನ ಸಣ್ಣ ಸಣ್ಣ ಗೆಜ್ಜೆಗಳನ್ನು ಕಟ್ಟುತ್ತಿದ್ದಾರೆ. ಅಲ್ಲಿ ಸೇರಿರುವ ಜನರೆಲ್ಲರೂ, ದೊಡ್ಡ ಹಬ್ಬಕ್ಕೆ ಬಂದಂತೆ ಹೊಸ ಹೊಸ ಉಡುಗೆಗಳನ್ನುಟ್ಟು ಬಂದಿದ್ದಾರೆ.

ತಾತ್ಯಾ ಪಾಟೀಲ್ ಈಗತಾನೇ ಮಸೀದಿಯೊಳಕ್ಕೆ ಹೋದರು. ಅವರು ಹೋಗಿ ಬಾಬಾರನ್ನು ಮೆರವಣಿಗೆಗೆ ಸಿದ್ಧರಾಗುವಂತೆ ಕೇಳಿಕೊಳ್ಳುತ್ತಿದ್ದಾರೆ. ಬಾಬಾ ತಾವು ಸಿದ್ಧರಾಗಿಯೇ ಇದ್ದಾರೆಂದೂ, ಅವರಿಗೋಸ್ಕರವಾಗಿಯೇ ಕಾಯುತ್ತಿದ್ದೇನೆಂದೂ ಹೇಳಿದರು. ಅವರು ಎಂದಿನಂತೆ ತಮ್ಮ ಕಫ್ನಿ ಹಾಕಿಕೊಂಡು ಕಂಕುಳಲ್ಲಿ ಸಟ್ಕ ಹಿಡಿದಿದ್ದಾರೆ. ಹುಕ್ಕಾ ಒಂದು ಸಲ ಉಫ಼್ ಎಂದು ಊದಿ, ಅದನ್ನು ಕೈಯಲ್ಲಿ ಹಿಡಿದು ನಿಂತಿದ್ದಾರೆ. ತಾತ್ಯಾ ಪಾಟೀಲ್, "ಮಾಮಾ ಹೊರಡೋಣವೇ?" ಎಂದು ಕೇಳಿದರು. ಬಾಬಾ ಹೂಂ ಎಂದಮೇಲೆ, ತಾತ್ಯಾ ಅವರ ಭುಜಗಳಮೇಲೆ ಒಂದು ಜರತಾರಿ ಶಾಲು ಹೊದಿಸಿದ್ದಾರೆ. ಓಹ್! ಬಾಬಾ ಎಷ್ಟು ಅಂದವಾಗಿ ಕಾಣುತ್ತಿದ್ದಾರೆ! ಬಾಬಾ ಎದ್ದು ತಮ್ಮ ಬಲಗಾಲಿನ ಹೆಬ್ಬೆಟ್ಟಿನಿಂದ ಧುನಿಯಲ್ಲಿ ಉರಿಯುತ್ತಿದ್ದ ಕಟ್ಟಿಗೆಯನ್ನು ಒಳಕ್ಕೆ ಸರಿಸಿ, ಬಲಗೈಯಿಂದ ಉರಿಯುತ್ತಿದ್ದ ದೀಪವನ್ನು ಆರಿಸಿದರು. ಬಾಬಾರೇ ಜಾಜ್ವಲ್ಯಮಾನವಾಗಿ ಉರಿಯುತ್ತಿರುವ ದೀಪದಂತೆ ಇರುವಾಗ ಬೇರೆ ದೀಪದ ಅವಶ್ಯಕತೆಯಾದರೂ ಏನು?

ಮಸೀದಿಯ ಬಾಗಿಲ ಹೊಸಲಿಗೆ ಬಾಬಾ ಬಂದಿದ್ದಾರೆ. ಅವರು ಹೊರಗೆ ಬರುವುದನ್ನೇ ಕಾಯುತ್ತಿದ್ದ ಭಕ್ತರೆಲ್ಲರೂ, ತಮ್ಮ ಬಾಜಾ ಬಜಂತ್ರಿಗಳನ್ನು ಜೋರುಜೋರಾಗಿ ಬಾರಿಸುತ್ತಾ, ತಾರ ಸ್ವರದಲ್ಲಿ ಭಜನೆಗಳನ್ನು ಹಾಡಲು ಆರಂಭಿಸಿದ್ದಾರೆ. ಅಗಾಗ ಅವರು ಹೇಳುತ್ತಿರುವ ಸಾಯಿನಾಥ ಮಹರಾಜಕೀ ಜೈ ಎಂಬ ಕೂಗು ಗಗನವನ್ನು ಮುಟ್ಟುತ್ತಿದೆ. ಅನತಿದೂರದಲ್ಲಿ, ಕೆಲವರು ಬಾಣ ಬಿರುಸುಗಳನ್ನು ಆರಂಭಿಸಿದರು. ಅದರ ಬೆಳಕಿನಿಂದ ರಾತ್ರಿ ದೀಪ್ತಮಾನವಾಗಿದೆ. ಭಕ್ತ ಜನರೆಲ್ಲರೂ ಮುಂದಕ್ಕೆ ಹೆಜ್ಜೆಯಿಟ್ಟರು. ಬಾಬಾರ ಜೈಕಾರಗಳನ್ನು ಜೋರಾಗಿ ಹೇಳುತ್ತಾ, ತಾಳ ಮೃದಂಗಗಳೊಡನೆ ಭಜನೆ ಮಾಡುತ್ತಾ, ಜನ ಸಾವಧಾನವಾಗಿ ಮುಂದುವರೆಯುತ್ತಿದ್ದಾರೆ. ಬಾಬಾ ನಿಧಾನವಾಗಿ ಮಸೀದಿಯ ಮೆಟ್ಟಿಲುಗಳನ್ನು ಇಳಿಯುತ್ತಿದ್ದಾರೆ. ದಿರಸಿಯನ್ನು ಹಾಕಿಕೊಂಡ ವಂದಿಮಾಗಧರು ಬಾಬಾರ ಜೈಕಾರಗಳನ್ನು ಗಟ್ಟಿಯಾಗಿ ಕೂಗುತ್ತಿದ್ದಾರೆ. ತಾತ್ಯಾ ಬಂದು ಬಾಬಾರ ಎಡಗೈ ಹಿಡಿದು, ಅವರನ್ನು ನಿಧಾನವಾಗಿ ಮೆಟ್ಟಿಲಿಳಿಯಲು ಸಹಾಯ ಮಾಡುತ್ತಿದ್ದಾರೆ. ಆಗತಾನೇ ಬಂದ ಮಹಲ್ಸಾಪತಿ ಬಾಬಾರ ಬಲಗೈ ಹಿಡಿದಿದ್ದಾರೆ. ಬಾಪೂ ಸಾಹೇಬ್ ಜೋಗರು ಬಾಬಾರ ಹಿಂದೆ ನಿಂತು, ಅವರ ತಲೆಯಮೇಲೆ ಛತ್ರವನ್ನು ಹಿಡಿದಿದ್ದಾರೆ. ಮಸೀದಿಯಿಂದ ಚಾವಡಿಗೆ ಹೋಗುವ ದಾರಿಯುದ್ದಕ್ಕೂ, ಶುಭ್ರವಾದ ಬಿಳಿಯ ವಸ್ತ್ರವೊಂದನ್ನು ಹಾಸಿದ್ದಾರೆ. ಬಹುಶಃ ಬಾಬಾರ ಭಕ್ತರಿಗೆ ತಮ್ಮ ಆರಾಧ್ಯ ದೈವ ಬರಿಯ ಕಲ್ಲುಮಣ್ಣಿನ ದಾರಿಯಲ್ಲಿ ನಡೆಯುವುದು ಇಷ್ಟವಿಲ್ಲವೇನೋ! ಅಲಂಕೃತವಾದ ಶ್ಯಾಮಕರ್ಣ ಮುಂದೆ, ಹಿಂದೆ ಭಜನೆ, ಜೈಕಾರಗಳನ್ನು ಮಾಡುತ್ತಿರುವ ಭಕ್ತಜನ, ಇವರ ಮಧ್ಯೆ ಮಸೀದಿಯ ಮೆಟ್ಟಿಲಿಳಿದು ಬಾಬಾ ಚಾವಡಿಯ ಕಡೆಗೆ ಹೆಜ್ಜೆ ಇಡುತ್ತಿದ್ದಾರೆ. ವಾದ್ಯ ವಾದನಗಳೊಡನೆ ಉಚ್ಚಸ್ವರದಲ್ಲಿ ಹೇಳುತ್ತಿರುವ ಹರಿನಾಮ, ಆಕಾಶವನ್ನು ಮುಟ್ಟುತ್ತಿದೆ. ಪ್ರತಿಯೊಬ್ಬರೂ ಮತ್ತರಾಗಿ ಕಂಠ ಬಿರಿಯುವಂತೆ, ಶ್ರೀ ಸದ್ಗುರು ಸಾಯಿನಾಥ ಮಹರಾಜಕೀ ಜೈ ಎಂದು ಗಟ್ಟಿಯಾಗಿ ಘೋಷಣೆ ಮಾಡುತ್ತಿದ್ದಾರೆ. ಇಂತಹ ಸಂತಸದ ವಾತಾವರಣದಲ್ಲಿ ಮೆರವಣಿಗೆ ಮುಂದುವರೆದು, ಮಸೀದಿಯ ಮೂಲೆಯ ಹತ್ತಿರಕ್ಕೆ ಬಂದಿದೆ. ಜನರೆಲ್ಲಾ ಸಂತೋಷದಿಂದ ತುಂಬಿ ತುಳುಕಾಡುತ್ತಿದ್ದಾರೆ. ಅರೆ! ಅದೇನು? ಇದ್ದಕ್ಕಿದ್ದಂತೆ ಮೆರವಣಿಗೆ ನಿಂತುಹೋಗಿದೆ. ಯಾತಕ್ಕೆ? ನೋಡೋಣ ಬನ್ನಿ.
ನಡೆಯುತ್ತಿದ್ದ ಬಾಬಾ, ಇದ್ದಕ್ಕಿದ್ದಹಾಗೇ ನಡಗೆ ನಿಲ್ಲಿಸಿ, ತಾವಿದ್ದಲ್ಲಿಯೇ ಚಾವಡಿಯ ಕಡೆ ಮುಖಮಾಡಿ ನಿಂತುಬಿಟ್ಟಿದ್ದಾರೆ. ಆಹಾ! ಅವರ ಮುಖ ಅರುಣ ಸೂರ್ಯನಂತೆ ಬೆಳಗುತ್ತಿದೆ. ಅವರ ದೇಹದ ಪ್ರತಿಯೊಂದು ಕಣದಿಂದಲೂ ಪ್ರಭೆ ಪ್ರಸರಿಸುತ್ತಿದೆ. ಅವರು ಉತ್ತರಕ್ಕೆ ಮುಖಮಾಡಿ ಯಾರನ್ನೋ ಹುಡುಕುತ್ತಿರುವಂತಿದೆ. ಯಾರವರು? ಅಗೋ, ಕಾಕಾ ಸಾಹೇಬ ದೀಕ್ಷಿತರು ಬೆಳ್ಳಿಯ ತಟ್ಟೆಯೊಂದನ್ನು ಹಿಡಿದು ಅಲ್ಲಿ ನಿಂತಿದ್ದಾರೆ. ತಟ್ಟೆಯಲ್ಲಿ ಹೂವುಗಳು, ಗುಲಾಲ್ ಇದೆ. ಎಲ್ಲರೂ ನೋಡುತ್ತಿದ್ದಂತೆಯೆ ದೀಕ್ಷಿತರು, ಹೂವುಗಳನ್ನು ತೆಗೆದು ಬಾಬಾರ ಮೇಲೆ ಚೆಲ್ಲಿ, ಗುಲಾಲ್ ಚುಮುಕಿಸುತ್ತಿದ್ದಾರೆ. ಬಾಬಾ ಈಗ ಮತ್ತೆ ತಮ್ಮ ಹೆಜ್ಜೆ ಮುಂದಿಟ್ಟರು. ಓಹೋ! ಇದೇನು! ಬಾಬಾರು ತಮ್ಮ ಬಲಗೈಯನ್ನು ಮೇಲಕ್ಕೆ ಕೆಳಕ್ಕೆ ಆಡಿಸುತ್ತಿದ್ದಾರೆ. ಬಹುಶಃ ಯಾರಿಗೋ ಏನೋ ಅಪ್ಪಣೆ ಮಾಡುತ್ತಿದ್ದಾರೇನೋ! ಸ್ವಲ್ಪ ಹೊತ್ತು ತಾಮಸದಿಂದಿದ್ದ ಬಾಜಾ ಬಜಂತ್ರಿಗಳು ಮತ್ತೆ ವಿಜೃಂಭಿಸುತ್ತಿವೆ. ಸುಂದರವಾದ ಬಾಬಾರ ಮುಖ ಹೊಳೆಯುತ್ತಿದೆ. ಅಲ್ಲಿ ಸೇರಿದ್ದ ಜನರೆಲ್ಲಾ ಆ ಸುಂದರ ಮುಖವನ್ನು ನೋಡಿ, ಸಂತುಷ್ಟರಾಗಿ, ಅದನ್ನು ತಮ್ಮ ಜೀವನ ಪಾವನವಾಗಲು ಹೃದಯದಲ್ಲಿ ಎಂದೂ ಅಳಿಯದಂತೆ ಅಡಗಿಸಿಟ್ಟುಕೊಳ್ಳುತ್ತಿದ್ದಾರೆ. ಆ ಪರಿಸರದಲ್ಲಿ ಕಾಣುತ್ತಿರುವ ಸಂತಸವನ್ನು ಬಾಯಲ್ಲಿ ಹೇಳುವುದು ಸಾಧ್ಯವಿಲ್ಲ. ಅನುಭವಿಸಬೇಕಾದ ಸಂತಸವದು! ಅರೆ! ಇದೇನಿದು! ಮಹಲ್ಸಪತಿ ಚಪ್ಪಾಳೆ ಹಾಕುತ್ತಾ, ಭಜನೆಯ ತಾಳಕ್ಕೆ ಸರಿಯಾಗಿ ಹೆಜ್ಜೆ ಹಾಕುತ್ತಾ, ನಾಟ್ಯ ಮಾಡಲು ಆರಂಭಿಸಿದ್ದಾರೆ. ಸುತ್ತಲೂ ಇಷ್ಟೆಲ್ಲಾ ಸದ್ದು ಗದ್ದಲಗಳಾಗುತ್ತಿದ್ದರೂ ಬಾಬಾರ ಏಕಾಗ್ರತೆಗೆ ಮಾತ್ರ ಭಂಗಬಂದಿಲ್ಲ. ಅಷ್ಟರಲ್ಲಿ ತಾತ್ಯಾ ಹೋಗಿ ಲಾಂದ್ರವೊಂದನ್ನು ತಂದು ಅದನ್ನು ಹಿಡಿದುಕೊಂಡು ಬಾಬಾರಿಗೆ ಅತಿಸಮೀಪವಾಗಿ ಎಡಗಡೆ ನಡೆಯುತ್ತಿದ್ದಾರೆ. ಮಹಲ್ಸಪತಿ ತನ್ನ ನರ್ತನವನ್ನು ನಿಲ್ಲಿಸಿ, ಬಾಬಾರ ಹಿಂದೆ ಅವರ ಶಾಲುವಿನ ಅಂಚು ಹಿಡಿದು ನಡೆಯುತ್ತಿದ್ದಾರೆ. ಓಹ್! ಎಂತಹ ಸುಂದರವಾದ ಮೆರವಣಿಗೆ! ಎಂತಹ ಸ್ತುತಿ! ಎಷ್ಟು ಭಕ್ತಿ! ಈ ಮೆರವಣಿಗೆಯಲ್ಲಿ ಭಾಗಿಗಳಾದವರೆಲ್ಲಾ ಅತ್ಯಂತ ಪುಣ್ಯವಂತರು. ಈಗ ಬಾಬಾ ಸಾವಧಾನವಾಗಿ ನಡೆಯುತ್ತಾ ಚಾವಡಿಯ ಹತ್ತಿರಕ್ಕೆ ಬಂದಿದ್ದಾರೆ. ಎಲ್ಲೆಲ್ಲಿ ನೋಡಿದರೂ ಸಂತಸವೇ ಸಂತಸ. ಎಲ್ಲೆಲ್ಲೂ ಸಂತಸ ತುಂಬಿ ತುಳುಕಾಡುತ್ತಿದೆ. ಬನ್ನಿ, ಚಾವಡಿ ಒಳಗೆ ಹೋಗಿ ನೋಡೋಣ.

ಚಾವಡಿಯನ್ನು ಬಹಳ ಮೋಹಕವಾಗಿ ಅಲಂಕರಿಸಿದ್ದಾರೆ. ಸುಣ್ಣ ಬಣ್ಣಗಳು ಹೊಸದಾಗಿವೆ. ಅನೇಕ ತರಹೆಯ ದೀಪಗಳನ್ನು ಅಂದವಾಗಿ ಕಾಣುವಂತೆ ತೂಗುಹಾಕಿದ್ದಾರೆ. ದೊಡ್ಡ ದೊಡ್ಡ ಕನ್ನಡಿಗಳನ್ನು, ಚಾವಡಿಯ ಒಳಗೆ ಗೋಡೆಗಳಿಗೆ ಒರಗಿಸಿಟ್ಟಿದ್ದಾರೆ. ಕನ್ನಡಿಗಳಲ್ಲಿ ಕಾಣುತ್ತಿರುವ ದೀಪಗಳ ಪ್ರತಿಬಿಂಬಗಳು, ಹುಣ್ಣಿಮೆಯ ಚಂದ್ರನ ಪ್ರತಿಬಿಂಬಗಳೋ ಎಂಬಂತೆ ಕಾಣುತ್ತಿವೆ. ಬನ್ನಿ ಬನ್ನಿ. ಮೆರವಣಿಗೆ ಆಗಲೇ ಚಾವಡಿಯ ಬಾಗಿಲಿಗೆ ಬಂದಿದೆ. ಹೋಗಿ ಬಾಬಾರನ್ನು ಸ್ವಾಗತಿಸೋಣ. ತಾತ್ಯಾ ಚಾವಡಿಯ ಒಳಕ್ಕೆ ಬಂದಿದ್ದಾರೆ. ಬಾಬಾರು ಕುಳಿತುಕೊಳ್ಳಲು ಅನುಕೂಲವಾಗುವಂತೆ, ಆಸನವನ್ನು ಸಿದ್ಧಪಡಿಸುತ್ತಿದ್ದಾರೆ. ಬಾಬಾ ಒರಗಿ ಕುಳಿತುಕೊಳ್ಳಲು ಒರಗುದಿಂಬೊಂದನ್ನು ಇಟ್ಟಿದ್ದಾರೆ. ಮಹಲ್ಸಪತಿ ಬಾಬಾರನ್ನು ಒಳಕ್ಕೆ ಕರೆತಂದರು. ತಾತ್ಯಾರೂ ಅವರೊಡನೆ ಕೈಸೇರಿಸಿದ್ದಾರೆ. ಅವರಿಬ್ಬರೂ ಬಾಬಾರು ಸುಖವಾಗಿ ಆಸೀನರಾಗುವಂತೆ ಸಹಾಯಕೊಟ್ಟು ಅವರನ್ನು ಕೂಡಿಸಿದ್ದಾರೆ. ಬಾಬಾ ಈಗ ಆರಾಮವಾಗಿ ಕೂತರು. ಮುಗುಳು ನಗೆಯೊಂದು ಅವರ ಮುಖದಲ್ಲಿ ಲಾಸ್ಯವಾಡುತ್ತಿದೆ. ತಾತ್ಯಾ ಇನ್ನೊಂದು ಶಾಲುವನ್ನು ಅವರ ಭುಜದಮೇಲೆ ಹೊದಿಸಿದರು. ಭಕ್ತರು ಒಬ್ಬೊಬ್ಬರಾಗಿ ಬಂದು ಬಾಬಾರನ್ನು ಅರ್ಚಿಸಿಕೊಳ್ಳುತ್ತಿದ್ದಾರೆ.

ಓಹ್! ಏಂತಹ ಮೋಹಕವಾದ ದೃಶ್ಯವಿದು! ಒಬ್ಬರು ಮಯೂರ ಪುಚ್ಛಗಳಿಂದ ಮಾಡಿದ ಕಿರೀಟವೊಂದನ್ನು ಬಾಬಾರ ತಲೆಯಮೇಲಿಟ್ಟರು. ಬಾಬಾ ಈಗ ಸಾಕ್ಷಾತ್ ಕೃಷ್ಣನಂತೆ ಕಾಣುತ್ತಿದ್ದಾರೆ. ಕೆಲವರು, ಬಗೆಬಗೆಯ ಹೂವಿನ ಹಾರಗಳನ್ನು ಬಾಬಾರಿಗೆ ಹಾಕಿ ಅಲಂಕರಿಸುತ್ತಿದ್ದಾರೆ. ಮತ್ತೊಬ್ಬರು, ಬಾಬಾರ ಕೊರಳಿಗೆ ಒಡವೆಗಳನ್ನು ಹಾಕುತ್ತಿದ್ದಾರೆ. ಕೆಲವರು ಸುಗಂಧಪೂರಿತ ಬೀಸಣಿಗೆಯಿಂದ ಗಾಳಿ ಹಾಕುತ್ತಿದ್ದಾರೆ. ಈ ಅಲಂಕಾರಗಳಿಂದ ಬಾಬಾ ನಿಜವಾಗಿಯೂ ಕಂಗೊಳಿಸುತ್ತಿದ್ದಾರೆ. ಅಗೋ, ಇನ್ನೊಬ್ಬ ಭಕ್ತರು ಬಂದು ಅವರನ್ನು ವೈಷ್ಣವ ರೀತಿಯಲ್ಲಿ ಹಣೆಗೆ ತಿಲಕ ಹಚ್ಚಿ ಅಲಂಕರಿಸುತ್ತಿದ್ದಾರೆ. ಅಲ್ಲಿ ನೋಡಿ. ಒಬ್ಬ ಭಕ್ತ ಸ್ವಲ್ಪ ಪಕ್ಕಕ್ಕೆ ಹೋಗಿ, ಬಾಬಾ ಇವೆಲ್ಲದರಿಂದ ಹೇಗೆ ಕಾಣುತ್ತಿದ್ದಾರೆ ಎಂಬುದನ್ನು ವಿಮರ್ಶಾತ್ಮಕ ಬುದ್ಧಿಯಿಂದ ನೋಡಿ, ಎಲ್ಲವೂ ಸರಿಯಾಗಿದೆ ಎಂಬ ಭಾವವನ್ನು ಮುಖದಲ್ಲಿ ತೋರಿಸುತ್ತಾ, ಸ್ವಸ್ಥಾನಕ್ಕೆ ಸೇರಿದ್ದಾರೆ. ತಮ್ಮ ಭಕ್ತರ ಭಕ್ತ್ಯೋತ್ಸಾಹವನ್ನು ಮನ್ನಿಸಿ, ಬಾಬಾ ಅವರವರ ಇಷ್ಟದಂತೆ ಮಾಡಿಕೊಳ್ಳಲು ಬಿಟ್ಟು, ತಾವು ‘ತೂಷ್ಣೀಂ’ ಕೂತಿದ್ದಾರೆ. ನಿರಾಳರಾಗಿ ಕೂತ ಬಾಬಾ, ಅತ್ಯಂತ ಸುಂದರವಾಗಿ ಕಾಣುತ್ತಿದ್ದಾರೆ.

ನಾನಾಸಾಹೇಬ್ ನಿಮೋನ್ಕಾರರು ಬಾಪೂ ಸಾಹೇಬ್ ಜೋಗರಿಂದ ಛತ್ರವನ್ನು ತೆಗೆದುಕೊಂಡು, ಬಾಬಾರ ಹಿಂದೆ ನಿಂತು, ಅದನ್ನು ಬಾಬಾರ ತಲೆಯಮೇಲೆ ಹಿಡಿದು ತಿರುಗಿಸುತ್ತಿದ್ದಾರೆ. ಹಾಗೆ ಅದು ತಿರುಗುವಾಗ, ಅದಕ್ಕೆ ತೂಗು ಹಾಕಿರುವ ಸಣ್ಣ ಸಣ್ಣ ಗಂಟೆಗಳು, ಕೇಳಲು ಇಂಪಾದ ಸುನಾದವನ್ನು ಮಾಡುತ್ತಿವೆ. ಬಾಪೂ ಸಾಹೇಬ್ ಬೆಳ್ಳಿ ತಟ್ಟೆಯೊಂದನ್ನು ತಂದು, ಅದರಲ್ಲಿ ಬಾಬಾರ ಪಾದಗಳನ್ನಿಟ್ಟು, ತೊಳೆದು, ಆಮೇಲೆ ಬಾಬಾರಿಗೆ ಅರ್ಘ್ಯವನ್ನು ಕೊಡುತ್ತಿದ್ದಾರೆ. ಸಾಯಿ ನಾಮೋಚ್ಚಾರಣೆ ಮಾಡುತ್ತಾ, ಅವರು ಬಾಬಾರಿಗೆ ಪೂಜೆಯನ್ನರ್ಪಿಸಿದರು. ಈಗ ಬಾಬಾರ ಕಪೋಲ, ಹಸ್ತ ಪಾದಗಳಿಗೆ ಚಂದನವನ್ನು ಲೇಪನ ಮಾಡುತ್ತಿದ್ದಾರೆ. ನಂತರ ಅವರಿಗೆ ತಾಂಬೂಲ ಸಮರ್ಪಿಸಿ, ಅವರ ಪಾದಗಳಲ್ಲಿ ತಲೆಯಿಟ್ಟು ನಮಸ್ಕರಿಸಿದರು. ಈಗ ನಮಸ್ಕರಿಸಿಕೊಳ್ಳಲು, ತಾತ್ಯಾರ ಸರದಿ. ಅವರಾದ ಮೇಲೆ, ಭಕ್ತರು ಒಬ್ಬೊಬ್ಬರಾಗಿ ಬಂದು ಬಾಬಾರಿಗೆ ನಮಸ್ಕಾರಮಾಡಿಕೊಂಡು ಹೋಗುತ್ತಿದ್ದಾರೆ. ಕೆಲವರು ಬಾಬಾರ ಹಿಂದೆ ನಿಂತು, ಅವರಿಗೆ ಚಾಮರಸೇವೆ ಮಾಡುತ್ತಿದ್ದಾರೆ. ಅಷ್ಟರಲ್ಲಿ ಶ್ಯಾಮಾ, ಹುಕ್ಕಾ ತಯಾರುಮಾಡಿ, ತಾತ್ಯಾರ ಕೈಲಿಟ್ಟರು. ತಾತ್ಯಾ ಅದನ್ನು ಸೇದಿ ಚೆನ್ನಾಗಿ ಉರಿಯುವಂತೆ ಮಾಡಿ, ಬಾಬಾರಿಗೆ ಕೊಟ್ಟರು. ಬಾಬಾ ಅದನ್ನು ಸೇದಿ, ಮಹಲ್ಸಪತಿಗೆ ಕೊಟ್ಟರು. ಮಹಲ್ಸಪತಿಯಾದ ಮೇಲೆ, ಎಲ್ಲರೂ ಸರದಿಯಾಗಿ ಅದನ್ನು ತೆಗೆದುಕೊಂಡರು. ಮತ್ತೆ ಕೆಲವರು ಭಕ್ತರು, ಹೂವಿನ ಹಾರಗಳನ್ನು ತಂದಿದ್ದಾರೆ. ಇನ್ನೂ ಕೆಲವರು, ಹೂ ಗುಚ್ಚಗಳನ್ನು ತಂದಿದ್ದಾರೆ. ಅವರೆಲ್ಲರು ಅವನ್ನು ಬಾಬಾರಿಗೆ ಭಕ್ತಿ ಪೂರ್ವಕವಾಗಿ ಅರ್ಪಿಸಿದರು. ಈಗ ಕೆಲವರು, ಅವರ ಕೈಗಳಿಗೆ "ಅತ್ತರ"ನ್ನು ಹಚ್ಚುತ್ತಿದ್ದಾರೆ. ಅವರವರ ಇಚ್ಛೆಯಂತೆ ಪೂಜೆಮಾಡಿಕೊಳ್ಳಲು ಬಿಟ್ಟು, ಬಾಬಾ ತಾವು "ನಿಸ್ಸಂಗ"ರಾಗಿ ಕುಳಿತಿದ್ದಾರೆ. ಯಾವ ಮೋಹಗಳಿಗೂ ಸಿಲುಕದ ಬಾಬಾ, ಸಮ ಚಿತ್ತರಾಗಿ ಕುಳಿತಿದ್ದಾರೆ. ಅವರಿಗೆ ತಮ್ಮ ಭಕ್ತರ ಮೇಲಿರುವ ಪ್ರೀತಿ ವಿಶ್ವಾಸಗಳು, ಭಕ್ತರು ಯಾವ ರೀತಿಯಲ್ಲಿ ಪೂಜೆ ಮಾಡಿದರೂ ಒಪ್ಪಿಕೊಳ್ಳುವಂತೆ ಮಾಡಿದೆ. ಭಕ್ತರೆಲ್ಲಾ ನಮಸ್ಕಾರ ಮಾಡಿಕೊಂಡು, ಪಕ್ಕಕ್ಕೆ ಸರಿದಮೇಲೆ, ಬಾಪೂ ಸಾಹೇಬರು ಆರತಿ ತಂದರು. ಆರತಿ ಮಾಡುತ್ತಿರುವಾಗ, ಸುಶ್ರಾವ್ಯವಾದ ಹಾಡುಗಳ ಜೊತೆಗೆ ರಾತ್ರಿಯ ತಂಪಾದ ಗಾಳಿಯೂ ಸೇರಿ, ಅಲ್ಲಿನ ವಾತಾವರಣ ಎಣೆಯಿಲ್ಲದ ದೈವೀಭಾವವನ್ನು ಸೂಸುತ್ತಿದೆ. ನೆರೆದಿರುವ ಪ್ರತಿಯೊಬ್ಬರ ಹೃದಯವೂ, ಒಟ್ಟಾಗಿ ಸೇರಿ ಹಾಡುತ್ತಿರುವ ಆ ಆರತಿಯ ಹಾಡುಗಳೊಡನೆ ಸ್ಪಂದಿಸಿ, ಸದಾಕಾಲವೂ ತಮ್ಮನ್ನು ಕಾಪಾಡುತ್ತಾ, ಅವರ ಆಶೀರ್ವಾದಗಳನ್ನು ತಮ್ಮ ಮೇಲೆ ಹರಿಸುತ್ತಿರುವಂತೆ, ಬಾಬಾರನ್ನು ಮನಸ್ಸಿನಲ್ಲೇ ಬೇಡಿಕೊಳ್ಳುತ್ತಿದ್ದಾರೆ.

ಆರತಿ ಮುಗಿಯಿತು. ಭಕ್ತರು ಒಬ್ಬೊಬ್ಬರಾಗಿ ಬಂದು, ಬಾಬಾರ ಅನುಮತಿ ಪಡೆದು, ತಮ್ಮ ತಮ್ಮ ಮನೆಗಳಿಗೆ ಹೋಗುತ್ತಿದ್ದಾರೆ. ಎಲ್ಲರೂ ಹೋಗಿಯಾಯಿತು. ತಾತ್ಯಾ ಒಬ್ಬರೇ ಅಲ್ಲಿ ಉಳಿದಿದ್ದಾರೆ. ತಾತ್ಯಾ ಬಾಬಾರಿಗೆ ಹುಕ್ಕಾ ಕೊಟ್ಟು, ಅತ್ತರ್ ಹಚ್ಚಿ, ಗುಲಾಬಿ ನೀರು ಕೊಟ್ಟರು. ಹೊರಡಲು ಸಿದ್ಧರಾಗುತ್ತಿದ್ದ ತಾತ್ಯಾರನ್ನು ನಿಲ್ಲಿಸಿ, ಬಾಬಾ ಏನೋ ಹೇಳುತ್ತಿದ್ದಾರೆ. ಬನ್ನಿ ಸ್ವಲ್ಪ ಹತ್ತಿರಕ್ಕೆ ಹೋಗಿ ಅದೇನೆಂದು ಕೇಳೋಣ. ಬಾಬಾ ಹೇಳುತ್ತಿದ್ದಾರೆ, "ಹೋಗಲೇ ಬೇಕಾದರೆ ಹೋಗು. ಆದರೆ ರಾತ್ರಿ ಯಾವಾಗಲಾದರೂ ಒಮ್ಮೆ ಬಂದು ವಿಚಾರಿಸಿಕೊಳ್ಳುತ್ತಿರು." ಹಾಗೆಯೇ ಮಾಡುತ್ತೇನೆಂದು ಭರವಸೆ ಕೊಟ್ಟು ತಾತ್ಯಾ ಚಾವಡಿ ಬಿಟ್ಟು ಮನೆಗೆ ಹೊರಟರು.

ಎಲ್ಲರೂ ಹೊರಟುಹೋದರು. ಬಾಬಾ ಒಬ್ಬರೇ ಆಗಿದ್ದಾರೆ. ೫೦-೬೦ ದುಪ್ಪಟಿಗಳನ್ನು ಒಂದರಮೇಲೊಂದು ಹಾಸಿ, ತಮ್ಮ ಹಾಸಿಗೆಯನ್ನು ತಾವೇ ಸಿದ್ಧಪಡಿಸಿಕೊಂಡರು. ಸರಿಯಾಗಿದೆ ಎಂಬುದನ್ನು ಖಚಿತಮಾಡಿಕೊಂಡು, ಅದರ ಮೇಲೆ ಮಲಗಿ ಬಾಬಾ ವಿಶ್ರಮಿಸಿದರು.

ಆ ದೃಶ್ಯ, ಅಂದಿನ ದಿನಗಳು, ಮತ್ತೆಂದೂ ಬರಲಾರವು. ಅದನ್ನು ನಾವು ಇನ್ನೆಂದೂ ಕಾಣಲಾರೆವು. ಆ ದೃಶ್ಯಗಳನ್ನು ನಮ್ಮ ಮನೋಪಟಲದ ಮೇಲೆ ತಂದುಕೊಂಡು ನೋಡಿ ತೃಪ್ತರಾಗಬೇಕು. ಆ ದಿನಗಳಲ್ಲಿ ತಮ್ಮನ್ನು ಸಂಪೂರ್ಣವಾಗಿ ಬಾಬಾರಿಗೆ ಅರ್ಪಿಸಿಕೊಂಡು, ಅವರ ಅವಿಚ್ಛಿನ್ನ ಭಕ್ತರಾಗಿದ್ದವರನ್ನು ನೆನಸಿಕೊಂಡು ಅವರು ನಮಗೆ ತೋರಿಸಿ ಕೊಟ್ಟಿರುವ ಭಕ್ತಿ, ಅರ್ಪಣಾ ಭಾವಗಳನ್ನು ಅರಿತು, ಅದರಂತೆ ನಡೆಯಲು ಪ್ರಯತ್ನಶೀಲರಾಗೋಣ. ನಮ್ಮ ಮನಸ್ಸಿಗೆ ಶಾಂತಿ ಸಮಾಧಾನಗಳು ಬೇಕೆಂದರೆ. ದಿನದಿನವೂ ಅಂದಿನ ಆ ದೃಶ್ಯಗಳನ್ನು ಮೆಲುಕುಹಾಕುತ್ತಾ, ಮಲಗುವಾಗ ಅದನ್ನೇ ನೆನಸಿಕೊಳ್ಳುತ್ತಾ, ಬಾಬಾರ ಧ್ಯಾನ ಮಾಡುತ್ತಾ ಇದ್ದರೆ ಬಾಬಾರೇ ನಮ್ಮನ್ನು ಆಶೀರ್ವದಿಸಲು ಕಾಣಿಸಿಕೊಳ್ಳುತ್ತಾರೆ. ನಮಗೆ ಮಾತ್ರ ಅವರಲ್ಲಿ ಶ್ರದ್ಧೆ ಭಕ್ತಿಗಳು ತುಂಬಿರಬೇಕು. ಈ ಅನೀತಿ ತುಂಬಿದ ಪ್ರಕ್ಷುಬ್ಧ ಪ್ರಪಂಚದಲ್ಲಿ ಅವರೇ ನಮಗೆ ಆಸರೆ! ಶ್ರೀ ಸದ್ಗುರು ಸಾಯಿನಾಥ ಮಹಾರಾಜಕೀ ಜೈ.

ಇದರೊಂದಿಗೆ ಚಾವಡಿ ಉತ್ಸವ ಮತ್ತು ಇತರ ವಿಷಯಗಳನ್ನು ಕುರಿತು ಹೇಳುವ ಮುವ್ವತ್ತೇಳನೆಯ ಅಧ್ಯಾಯ ಮುಗಿಯಿತು. ಮುಂದಿನ ಅಧ್ಯಾಯದಲ್ಲಿ ಹೇಮಾಡ್ ಪಂತ್ ಬಾಬಾರ ಹಂಡಿ, ದೇವಾಲಯಗಳಿಗೆ ಅಗೌರವ, ಕಲಸು-ಮೇಲೋಗರ, ಮಜ್ಜಿಗೆ ಬಟ್ಟಲು ಇತ್ಯಾದಿ ವಿಷಯಗಳನ್ನು ಹೇಳುತ್ತಾರೆ.

||ಸದ್ಗುರು ಶ್ರೀ ಸಾಯಿನಾಥಾರ್ಪಣಮಸ್ತು||ಶುಭಂ ಭವತು||
||ಓಂ ಶಾಂತಿಃ ಶಾಂತಿಃ ಶಾಂತಿಃ||


No comments:

Post a Comment