Friday, January 13, 2012

||ಮುವ್ವತ್ತೆಂಟನೆಯ ಅಧ್ಯಾಯ||


||ಶ್ರೀ ಸಾಯಿ ಸಚ್ಚರಿತ್ರೆ||
||ಮುವ್ವತ್ತೆಂಟನೆಯ ಅಧ್ಯಾಯ||
||ಬಾಬಾರ ಹಂಡಿ||
ಶ್ರೀ ಗಣೇಶಾಯ ನಮಃ ಶ್ರೀ ಸರಸ್ವತಯೇ ನಮಃ
ಶ್ರೀ ವೆಂಕಟೇಶಾಯ ನಮಃ ಶ್ರೀ ಸಾಯಿನಾಥಾಯ ನಮಃ
ಶ್ರೀ ಸದ್ಗುರುಭ್ಯೋನ್ನಮಃ

ಈ ಅಧ್ಯಾಯದಲ್ಲಿ ಹೇಮಾಡ್ ಪಂತ್, ಬಾಬಾರ ಹಂಡಿ, ದೇವಾಲಯಗಳಿಗೆ ಅಗೌರವ, ಕಲಸುಮೇಲೋಗರ, ಮಜ್ಜಿಗೆಯ ಬಟ್ಟಲು ಇತ್ಯಾದಿ ವಿಷಯಗಳನ್ನು ಕುರಿತು ಹೇಳುತ್ತಾರೆ.

ಶ್ರೀ ಸದ್ಗುರು ಸಾಯಿಬಾಬಾ

ಬಾಬಾರ ಅನುಗ್ರಹದಿಂದ ಚಾವಡಿಯ ಉತ್ಸವದ ಸುಂದರ ದೃಶ್ಯವನ್ನು ಹಿಂದಿನ ಅಧ್ಯಾಯದಲ್ಲಿ ನೋಡಿದೆವು. ಅದಲ್ಲದೇ, ಅವರೇ ೫೦-೬೦ ದುಪ್ಪಟಿಗಳನ್ನು ಹಾಸಿಕೊಂಡು, ತಮ್ಮ ಹಾಸಿಗೆ ತಾವೇ ಹೇಗೆ ಸಿದ್ಧಪಡಿಸಿ ಮಲಗಿಕೊಂಡರು ಎಂಬುದನ್ನೂ ನೋಡಿದೆವು. ತನ್ನ ಭಕ್ತರಿಗೋಸ್ಕರ ತನ್ನದೆಲ್ಲವನ್ನೂ ಕೊಟ್ಟ ಆ ಮಹಾತ್ಮ ಬಾಬಾರಿಗೆ ಮತ್ತೊಮ್ಮೆ ವಂದಿಸೋಣ. ಬಾಬಾರ ಜನ್ಮ ಬೇರೆಯವರಿಗೆ ಒಳ್ಳೆಯದು ಮಾಡುವುದಕ್ಕೋಸ್ಕರವೇ ಆಗಿದೆ. ಅವರು ತಮ್ಮ ಜೀವಿತ ಕಾಲವನ್ನೆಲ್ಲಾ ತಮ್ಮ ಭಕ್ತರಿಗೋಸ್ಕರವಾಗಿಯೇ ಮುಡಿಪಾಗಿಟ್ಟರು. ಆ ಮಹಾತ್ಮನ ಪಾದಗಳನ್ನು ಆಶ್ರಯಿಸಿ ನಾವು ನಮ್ಮ ಕಷ್ಟ ಕಾರ್ಪಣ್ಯಗಳು, ದುಃಖ ದುರಿತಗಳನ್ನು ದೂರ ಮಾಡಿಕೊಂಡು, ಈ ಭವ ಬಂಧನದಿಂದ ಬಿಡುಗಡೆ ಹೊಂದಲು ಪ್ರಯತ್ನಶೀಲರಾಗೋಣ. ಅಂತಹ ಆಶ್ರಯ ಸಿಕ್ಕುವುದೂ ನಮ್ಮ ಪೂರ್ವಜನ್ಮ ಕೃತ ಪುಣ್ಯ ಫಲಗಳಿಂದಲೇ! ಪರಮಾನಂದದ ವಸತಿ ಸಾಯಿಯೇ! ಅವರೇ ನಮ್ಮ ಹುಡುಕುವಿಕೆಯ ಗಮ್ಯ! ಅವರು ಆತ್ಮಾರಾಮರು! ಮಗುವಿಗೆ ಯಾವುದು ಒಳ್ಳೆಯದು ಯಾವುದು ಒಳ್ಳೆಯದಲ್ಲ ಎಂದು ತಿಳಿದು, ಅದಕ್ಕೆ ಆಹಾರ ತಿನ್ನಿಸುವ ತಾಯಿಯಂತೆ, ಬಾಬಾ ನಮಗೆ ಯಾವುದು ಒಳ್ಳೆಯದು ಯಾವುದು ಒಳ್ಳೆಯದಲ್ಲ ಎಂಬುದನ್ನು ಅರಿತು, ಮೊದಮೊದಲು ನಾವು ಕೇಳಿದ್ದನ್ನು ಕೊಟ್ಟು, ನಂತರ ಅವರು ಕೊಡಬೇಕಾದ್ದನ್ನು, ಅವರೇ ನಮಗೆ ಕೊಡುತ್ತಾರೆ. ಹಾಗೆ ಅವರಿಗೆ ಬೇಕಾದ್ದನ್ನು ಕೊಟ್ಟು, ನಮ್ಮನ್ನು ಆಧ್ಯಾತ್ಮಿಕ ದಾರಿಯಲ್ಲಿ ನಡೆಸಿ, ಸಾಕ್ಷಾತ್ಕಾರದೆಡೆಗೆ ಕರೆದು ಕೊಂಡು ಹೋಗುತ್ತಾರೆ.

ಅನ್ನದಾನ

ಆಧ್ಯಾತ್ಮಿಕವಾಗಿ ಮುಂದುವರೆಯುವುದಕ್ಕೆ ನಮ್ಮ ಶಾಸ್ತ್ರಗಳು ಪ್ರತಿಯೊಂದು ಯುಗಕ್ಕೂ ಸಂಬಂಧಿಸಿದಂತೆ ಕೆಲವು ಸಾಧನಾ ವಿಧಾನಗಳನ್ನು ಹೇಳಿವೆ. ಕೃತ ಯುಗದಲ್ಲಿ ತಪಸ್ಸು. ತ್ರೇತಾ ಯುಗದಲ್ಲಿ ಜ್ಞಾನ ಸಂಪಾದನೆ. ದ್ವಾಪರ ಯುಗದಲ್ಲಿ ಯಜ್ಞ ಯಾಗಾದಿಗಳು. ಕಲಿ ಯುಗದಲ್ಲಿ ದಾನ. ದಾನಗಳಲ್ಲಿ ವಿತ್ತದಾನ, ವಿದ್ಯಾದಾನ, ವಸ್ತ್ರದಾನ, ಅನ್ನದಾನ ಮುಂತಾದ ಅನೇಕ ದಾನಗಳನ್ನು ಹೇಳಿದ್ದಾರೆ. ಅದರಲ್ಲೆಲ್ಲ ಶ್ರೇಷ್ಠವಾದದ್ದು ಅನ್ನದಾನ. ತೈತ್ತಿರೀಯೋಪನಿಷತ್ತಿನಲ್ಲಿ ಹೀಗೆ ಹೇಳಿದೆ:

"ಪ್ರಪಂಚದಲ್ಲಿರುವ ಜೀವಿಗಳೆಲ್ಲಾ ಅನ್ನದಿಂದಲೇ ಹುಟ್ಟಿವೆ. ಅನ್ನದಿಂದಲೇ ಬದುಕುತ್ತವೆ. (ಸತ್ತಮೇಲೆ) ಅನ್ನವನ್ನೇ ಸೇರುತ್ತವೆ. ಅದು ಸರ್ವೌಷಧ. ಯಾರು ಅನ್ನವನ್ನು ಬ್ರಹ್ಮನೆಂದು ಉಪಾಸನೆ ಮಾಡುತ್ತಾರೋ, ಅವರು ಅನ್ನವನ್ನು ಪಡೆಯುತ್ತಾರೆ."

ಅನ್ನದಾನವನ್ನು ಬಿಟ್ಟು ಇನ್ನಾವ ದಾನ ಮಾಡಿದರೂ, ಪಾತ್ರಾಪಾತ್ರ ವಿವೇಚನೆ ಮಾಡಬೇಕು. ಅನ್ನದಾನಕ್ಕೆ ಆ ವಿವೇಚನೆ ಬೇಕಾಗಿಲ್ಲ. ಬಡವ-ಬಲ್ಲಿದ, ಹೆಣ್ಣು-ಗಂಡು, ಚಿಕ್ಕವರು-ದೊಡ್ಡವರು, ರೋಗಿಗಳು-ನಿರೋಗಿಗಳು, ಅಂಗವಂತರು-ಅಂಗವಿಹೀನರು ಎಂಬ ತಾರತಮ್ಯವಿಲ್ಲದೆ ಅನ್ನದಾನ ಮಾಡಬಹುದು. ಮಧ್ಯಾನ್ಹದ ವೇಳೆಯಲ್ಲಿ, ನಮಗೆ ಅನ್ನ ದೊರೆಯದಿದ್ದರೆ ಹೇಗೆ ಹಸಿವಿನಿಂದ ಒದ್ದಾಡುತ್ತೇವೆಯೋ, ಹಾಗೆಯೇ ನಮ್ಮಂತೆಯೇ ಎಲ್ಲರೂ ಒದ್ದಾಡುತ್ತಾರೆ ಎಂಬುದನ್ನು ನಾವು ಅರಿತು ಕೊಳ್ಳಬೇಕು. ಹೊತ್ತಿಗೆ ಸರಿಯಾಗಿ ಅನ್ನ ಸಿಕ್ಕದಿದ್ದರೆ ಎಲ್ಲರಿಗೂ ಪರದಾಟವೇ! ಅತಿಥಿ, ಅಭ್ಯಾಗತ ಎಂದು ಭೇದ ಮಾಡದೆ ಬಂದವರಿಗೆ ಅನ್ನ ಕೊಡುವುದೇ ಧರ್ಮ. ಮಧ್ಯಾಹ್ನದ ಊಟದ ಸಮಯದಲ್ಲಿ ಮನೆಯ ಬಾಗಿಲಿಗೆ ಯಾರೇ ಬಂದರೂ ಯಾವುದೇ ಯೋಚನೆಯನ್ನೂ ಮಾಡದೆ ಅವರಿಗೆ ಅನ್ನವನ್ನು ನೀಡಬೇಕು. ಕುರುಡ, ಕುಂಟ, ಹೆಳವ ಎಂದು ವ್ಯತ್ಯಾಸ ಮಾಡದೆ ಬಂದವರು ಯಾರೇ ಆಗಿರಲಿ, ಅಂತಹವರಿಗೆ ಮೊದಲು ಅನ್ನವಿಟ್ಟು, ನಂತರ ಬಂಧು ಬಾಂಧವರಿಗೆ, ಮಿಕ್ಕವರಿಗೆ ಅನ್ನವಿಡಬೇಕು. ಇತರ ಎಲ್ಲ ದಾನಗಳೂ ಅನ್ನದಾನವಿಲ್ಲದೆ ಅಪೂರ್ಣ!

ಬಾಬಾರ ಹಂಡಿ

ಅನ್ನದಾನವೇ ಶ್ರೇಷ್ಠ ಎಂಬುದನ್ನರಿತ ಬಾಬಾ ಆಗಾಗ ಅನ್ನದಾನದ ಕಾರ್ಯಕ್ರಮವನ್ನು ನಡೆಸುತ್ತಿದ್ದರು. ಮುಂಚೆಯೇ ಹೇಳಿದಂತೆ, ಅವರಿಗೆ ಬೇಕಾಗಿದ್ದದ್ದು ಬಹಳ ಸ್ವಲ್ಪ ಆಹಾರ. ಅದೂ ಭಿಕ್ಷೆ ಮಾಡಿ ತಂದದ್ದು. ಆದರೆ ಅವರಿಗೆ ಅನ್ನದಾನ ಮಾಡಬೇಕೆಂದು ತೋರಿದಾಗ, ಅದಕ್ಕೆ ಬೇಕಾದ ಎಲ್ಲ ಏರ್ಪಾಡುಗಳನ್ನು ತಾವೇ ಸ್ವತಃ ಮಾಡಿಕೊಳ್ಳುತ್ತಿದ್ದರು. ಹಾಗೆ ಬೇರೆಯವರ ಸಹಾಯಬೇಕು ಎಂದಿದ್ದರೆ ಶಿರಡಿಯ ಜನರು ಎಲ್ಲವನ್ನೂ ತಾವೇ ಮಾಡಿ ತಂದಿಡುತ್ತಿದ್ದರು. ಬಾಬಾ ಈ ವಿಷಯದಲ್ಲಿ ಯಾರ ಸಹಾಯವನ್ನೂ ಕೇಳದೆ, ತಾವೇ ಎಲ್ಲವನ್ನೂ ನಿಭಾಯಿಸುತ್ತಿದ್ದರು. ತಾವೇ ಸಂತೆಗೆ ಹೋಗಿ ಅಡಿಗೆಗೆ ಬೇಕಾದ ಒಳ್ಳೊಳ್ಳೆಯ ತರಕಾರಿ, ಮತ್ತಿತರ ಪದಾರ್ಥಗಳನ್ನು ಚೌಕಾಸಿ ಮಾಡಿ, ತಮ್ಮದೇ ಹಣ ಕೊಟ್ಟು ತರುತ್ತಿದ್ದರು. ರುಬ್ಬುವುದು, ಅರೆಯುವುದು, ಮೊದಲಾದ ಎಲ್ಲ ಕೆಲಸಗಳನ್ನೂ ತಾವೇ ಮಾಡುತ್ತಿದ್ದರು. ಬಾಬಾರ ಬಳಿ ಎರಡು ಹಂಡಿಗಳಿದ್ದವು. ಒಂದು ದೊಡ್ಡದು-ನೂರು ಜನರಿಗೆ ಆಗುವಷ್ಟು ಅಡಿಗೆ ಮಾಡುವಂತಹುದು. ಇನ್ನೊಂದು ಚಿಕ್ಕದು. ಐವತ್ತು ಜನರಿಗೆ ಸಾಕಾಗುವಂತಹುದು. ಬಾಬಾರಿಗೆ ಎಲ್ಲ ತರಹೆಯ ಅಡಿಗೆಗಳನ್ನು ಮಾಡುವ ರೀತಿಯೂ ತಿಳಿದಿತ್ತು. ಕೆಲವು ಸಲ "ಮೀಠಾ ಚಾವಲ್" ಮಾಡುತ್ತಿದ್ದರು. ಮತ್ತೆ ಕೆಲವು ಸಲ ಮಾಂಸದ ಪುಲಾವ್ ಮಾಡುತ್ತಿದ್ದರು. ಅಡಿಗೆಗೆ ಬೇಕಾದ ಸಾಂಬಾರ ಪದಾರ್ಥಗಳನ್ನೆಲ್ಲ ತಾವೇ ತಯಾರು ಮಾಡಿಕೊಳ್ಳುತ್ತಿದ್ದರು. ಮಾಡಿದ ಅಡಿಗೆ ರುಚಿಯಾಗಿ ತಿನ್ನುವಂತಿರಬೇಕು ಎಂಬುದು ಅವರ ಇಚ್ಛೆ.

ಅವರು ಮಾಡುತ್ತಿದ್ದ ವಿಶೇಷ ಅಡಿಗೆ ಅಂಬಲಿ. ಜೋಳದ ಹಿಟ್ಟನ್ನು ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ, ಅದಕ್ಕೆ ಮಜ್ಜಿಗೆ ಸೇರಿಸುತ್ತಿದ್ದರು. ಮಿಶ್ರಣವನ್ನು ಚೆನ್ನಾಗಿ ಕುದಿಸಿ, ಊಟ ಆದಮೇಲೆ ಕುಡಿಯಲು ಎಲ್ಲರಿಗೂ ಕೊಡುತ್ತಿದ್ದರು. ಒಂದು ಸಲ ಅಂಬಲಿ ಕುದಿಯುತ್ತಿರುವಾಗ, ಹಂಡಿಯೊಳಕ್ಕೆ ಕೈಹಾಕಿ ಆ ಮಿಶ್ರಣವನ್ನು ಕದಡಿದರು. ಅವರಿಗೆ ಕೈ ಸುಡಬಹುದೇನೋ ಎಂಬ ಯೋಚನೆಯೇ ಇರಲಿಲ್ಲ. ಅವರು ದೇವರೇ ಆದದ್ದರಿಂದ ಅವರ ಕೈ ಸುಡುವುದಾದರೂ ಹೇಗೆ? ಅಡಿಗೆಯೆಲ್ಲಾ ಆದಮೇಲೆ ಅದನ್ನು ಮೌಲ್ವಿಯಿಂದ ಪವಿತ್ರಗೊಳಿಸುತ್ತಿದ್ದರು. ಪವಿತ್ರಗೊಳಿಸಿದ ಅಡಿಗೆಯನ್ನು ಮೊದಲು ತಾತ್ಯಾ ಪಾಟೀಲರು, ಮಹಲ್ಸಪತಿಗೆ ಕಳುಹಿಸಿದ ಮೇಲೆ, ಇತರರಿಗೆ ಹಂಚುತ್ತಿದ್ದರು. ಈ ಅಭ್ಯಾಸವನ್ನು ಅವರು ಎಂದೂ ತಪ್ಪಿಸಲಿಲ್ಲ. ಬಡವರು, ಭಿಕ್ಷುಕರು, ಅಸಹಾಯಕರು, ಮನೆಯಿಲ್ಲದವರು ಮೊದಲಾದವರೆಲ್ಲರನ್ನೂ ಸಾಲಿನಲ್ಲಿ ಕೂಡಿಸಿ, ಎಲೆಹಾಕಿ ತುಪ್ಪದಿಂದ ಮೊದಲು ಮಾಡಿ, ಮಿಕ್ಕ ಅಡಿಗೆಗಳನ್ನು ಬಡಿಸುತ್ತಿದ್ದರು. ಬಡಿಸುವಾಗ, ಒಬ್ಬೊಬ್ಬರನ್ನೂ, "ನಾಚಿಕೆ ಬೇಡ, ಇನ್ನೂ ಸ್ವಲ್ಪ ಹಾಕಿಸಿಕೋ. ನಿಧಾನವಾಗಿ ಊಟ ಮಾಡು." ಎಂದೆಲ್ಲಾ ಪ್ರೀತಿ ವಿಶ್ವಾಸಗಳಿಂದ ಮಾತನಾಡಿಸುತ್ತಾ, ಬಡಿಸುತ್ತಿದ್ದರು. ಹಾಗೆ ಬಾಬಾರೇ ಸ್ವತಃ ಮಾಡಿ ಬಡಿಸಿದ ಅಡಿಗೆಯನ್ನು ಊಟಮಾಡಿದವರು ನಿಜವಾಗಿಯೂ ಬಹಳ ಅದೃಷ್ಟವಂತರು.

ಮಾಂಸಾಹಾರವನ್ನು ಮಾಡಿದಾಗ ಬಾಬಾ ಅದನ್ನು ಎಲ್ಲರಿಗೂ ಹಂಚುತ್ತಿದ್ದರೇ ಎಂಬ ಸಂದೇಹ ಬರಬಹುದು. ಅದಕ್ಕೆ ಉತ್ತರ: ಬಾಬಾ ಪ್ರತಿಯೊಬ್ಬರ ಮನೋನಿಶ್ಚಯಕ್ಕೂ ಗೌರವ ಕೊಡುತ್ತಿದ್ದರು. ಮಾಂಸಾಹಾರ ಒಲ್ಲದವರಿಗೆ ಅದನ್ನು ಮುಟ್ಟುಗೊಡಿಸುತ್ತಿರಲಿಲ್ಲ. ಅಂತಹ ಆಹಾರದಲ್ಲಿ ಅವರಿಗೆ ಆಸಕ್ತಿ ಹುಟ್ಟುವಂತೆಯೂ ಮಾಡುತ್ತಿರಲಿಲ್ಲ. ಶಿಷ್ಯನಾದವನು ಗುರುವಿನ ಮಾತು ಚಾಚೂ ತಪ್ಪದೆ ನಡೆಸುವಾಗ, ಅದರ ಸಾಧ್ಯತೆ ಬಾಧ್ಯತೆಗಳೆಲ್ಲಾ ಗುರುವಿನದೇ ಆಗಿರುತ್ತದೆ. ಶಿಷ್ಯನಿಗೆ ಅದರ ಜವಾಬ್ದಾರಿಯೇನೂ ಇರುವುದಿಲ್ಲ. ಇದು ಎಲ್ಲರಿಗಿಂತ ಹೆಚ್ಚಾಗಿ ಬಾಬಾರಿಗೆ ತಿಳಿದಿತ್ತು. ಬರಿಯ ಆಹಾರದ ವಿಷಯದಲ್ಲಿ ಮಾತ್ರವಲ್ಲ. ಭಕ್ತರು ತಮ್ಮ ಆರಾಧ್ಯ ದೈವವನ್ನು ಬಿಟ್ಟು, ಬೇರೆ ದೇವರುಗಳನ್ನು ಪೂಜಿಸಬೇಕೆಂದು ಯಾರಿಗೂ ಎಂದೂ ಬಾಬಾ ಹೇಳಲಿಲ್ಲ. ಬದಲಾಗಿ, ನಿಮ್ಮ ಕುಲದೈವವನ್ನೇ ಆರಾಧಿಸಿ ಎಂದೇ ಅವರು ಎಲ್ಲರಿಗೂ ಹೇಳುತ್ತಿದ್ದರು.

ದಾದಾ ಸಾಹೇಬ್ ಕೇಳ್ಕರರ ಕಥೆ

ಗುರುವು ಸ್ವಹಸ್ತದಿಂದ ಕೊಟ್ಟ ಪ್ರಸಾದವನ್ನು ಸ್ವೀಕರಿಸಬೇಕೆ ಬೇಡವೇ ಎಂಬುವ ಸಂದೇಹ ಸಚ್ಚಿಷ್ಯನಿಗೆ ಬರುವುದಿಲ್ಲ. ಬರಕೂಡದು ಕೂಡಾ. ಗುರುವು ಕೊಟ್ಟಿದ್ದನ್ನು ಬೇರೆ ಯಾವ ಯೋಚನೆಯೂ ಇಲ್ಲದೆ ಸ್ವೀಕರಿಸುತ್ತಾನೆ. ಅಂತಹ ಸಂದೇಹದಲ್ಲಿ ಬಿದ್ದವನು, ಆತ್ಮನಾಶ ಮಾಡಿಕೊಂಡಂತೆಯೇ! ಗುರುವಿನ ಮಾತನ್ನು ಚಾಚೂ ತಪ್ಪದೆ ಪಾಲಿಸುವುದೇ ಶಿಷ್ಯನ ಕರ್ತವ್ಯ. ಇಂತಹ ವಿಷಯಗಳಲ್ಲಿ ಬಾಬಾ ತಮ್ಮ ಭಕ್ತರನ್ನು ಆಗಾಗ ಪರೀಕ್ಷೆಗೆ ಒಡ್ಡುತ್ತಿದ್ದರು. ಪರೀಕ್ಷೆಯಲ್ಲಿ ಉತ್ತೀರ್ಣರಾದವರು ಬಾಬಾರಿಗೆ ಸನ್ನಿಹಿತರಾಗುತ್ತಿದ್ದರು. ಒಂದು ಏಕಾದಶಿಯ ದಿನ, ಕೇಳ್ಕರರಿಗೆ ಸ್ವಲ್ಪ ಹಣ ಕೊಟ್ಟು, ಅಂಗಡಿಗೆ ಹೋಗಿ ಮಾಂಸವನ್ನು ತರುವಂತೆ ಬಾಬಾ ಹೇಳಿದರು. ಕೇಳ್ಕರರಿಗೆ ಬಾಬಾರಲ್ಲಿ ನಿಶ್ಚಲ ಭಕ್ತಿ-ಪ್ರೇಮಗಳು. ಆಚಾರವಂತರಾದ ಕೇಳ್ಕರ್ ತಮ್ಮ ಮತಾಚಾರಗಳನ್ನು ಎಂದೂ ತಪ್ಪದಂತೆ ಆಚರಿಸುತ್ತಿದ್ದರು. ಪಕ್ಕಾ ಶಾಕಾಹಾರಿ. ಮಾಂಸವನ್ನು ಮುಟ್ಟುವುದಿರಲಿ, ನೋಡುತ್ತಲೂ ಇರಲಿಲ್ಲ. ಅಂತಹ ಮನುಷ್ಯ, ಬಾಬಾ ಮಾಂಸ ತರಲು ಹೇಳಿದಾಗ, ಬೇರೆ ಮಾತಿಲ್ಲದೆ, ಬಾಬಾರ ಆಜ್ಞೆಯನ್ನು ನಿರ್ವಹಿಸಲು ಸಿದ್ಧರಾಗಿ, ಮಾಂಸ ತರಲು ಹೊರಟರು. ಇನ್ನೇನು ಮಸೀದಿಯಿಂದ ಹೊರಗೆ ಕಾಲಿಡಬೇಕು ಎನ್ನುವಾಗ, ಬಾಬಾ ಅವರನ್ನು ಕರೆದು, "ನೀನು ಹೋಗುವುದು ಬೇಡ. ಬೇರೆ ಯಾರನ್ನಾದರೂ ಕಳಿಸು" ಎಂದರು. ಕೇಳ್ಕರ್ ತಮ್ಮ ಸೇವಕ ಪಾಂಡುವನ್ನು ಹೋಗುವಂತೆ ಹೇಳಿದರು. ಅವನು ಹೊರಡುವುದರಲ್ಲಿದ್ದಾಗ ಅವನನ್ನೂ ಹಿಂದಕ್ಕೆ ಕರೆದು ಬಾಬಾ, "ಈಗ ಮಾಂಸ ತರುವುದು ಬೇಡ. ಆಮೇಲೆ ನೋಡೋಣ" ಎಂದರು. ಬಾಬಾರಿಗೆ ನಿಜವಾಗಿಯೂ ಮಾಂಸ ತರುವುದು ಬೇಕಾಗಿರಲಿಲ್ಲ. ಕೇಳ್ಕರ್ ತಮ್ಮ ಮಾತಿಗೆ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂದು ಪರೀಕ್ಷೆ ಮಾಡಿದರು.

ಇನ್ನೊಂದುಸಲ ಬಾಬಾ ಪುಲಾವ್ ತಯಾರಿಸುತ್ತಿದ್ದರು. ಅವರು ಕೇಳ್ಕರರನ್ನು ಕರೆದು, "ಪುಲಾವ್ ಹೇಗಿದೆ? ರುಚಿ ನೋಡಿ ಹೇಳು" ಎಂದರು. ಕೇಳ್ಕರ್ ಏನೂ ಮಾಡದೆ, ಬಾಬಾರ ಮಾತಿಗೆ ಉತ್ತರವಾಗಿ ಸುಮ್ಮನೆ "ರುಚಿಯಾಗಿದೆ" ಎಂದರು. ಆಗ ಬಾಬಾ, "ಅದನ್ನು ಕಣ್ಣು ಬಿಟ್ಟು ನೀನು ನೋಡಲೂ ಇಲ್ಲ. ನಾಲಗೆಯಿಂದ ರುಚಿ ನೋಡಲಿಲ್ಲ. ಅದು ರುಚಿಯಾಗಿದೆ ಎಂದು ಹೇಗೆ ಹೇಳುತ್ತೀಯಾ? ಹಂಡಿಯ ಮುಚ್ಚಳ ತೆಗೆದು ನೋಡು" ಎಂದು ಹೇಳುತ್ತಾ, ಅವರ ಕೈಹಿಡಿದು ಅದನ್ನು ಹಂಡಿಯೊಳಕ್ಕೆ ತೂರಿಸಿ, "ನಿನ್ನ ಆಚಾರಗಳನ್ನೆಲ್ಲಾ ಬದಿಗಿಟ್ಟು, ಯಾವ ಅಬ್ಬರವೂ ಇಲ್ಲದೆ, ಸ್ವಲ್ಪ ಪುಲಾವ್ ತೆಗೆದು ತಟ್ಟೆಯೊಳಕ್ಕೆ ಹಾಕು" ಎಂದರು. ಕೇಳ್ಕರರಿಗೆ ಇದು ಇನ್ನೊಂದು ಪರೀಕ್ಷೆ. ತಾಯಿ ತನ್ನ ಮಗುವನ್ನು ಚಿವುಟಿ, ಅದು ಅತ್ತಾಗ, ಅದನ್ನು ಅಪ್ಪಿಕೊಂಡು ಮುದ್ದಾಡುವಂತೆ ಬಾಬಾ ಕೇಳ್ಕರರನ್ನು ಚಿವುಟಿದರು. ಯಾವ ಗುರುವೂ ತನ್ನ ಶಿಷ್ಯರನ್ನು ಅವರು ಮಾಡಬಾರದ ಕೆಲಸಗಳಲ್ಲಿ ನಿಯಮಿಸುವುದಿಲ್ಲ. ತಿನ್ನುವುದಿರಲಿ, ಮಾಂಸವನ್ನು ಮುಟ್ಟಲೂ ಹೇಸಿಕೊಳ್ಳುವ ಕೇಳ್ಕರರನ್ನು ಬಾಬಾ ಹೇಗೆ ತಾನೇ ಆಚಾರ ಕೆಡುವಂತೆ ಮಾಡುತ್ತಾರೆ?

ಮೊದಲೇ ಹೇಳಿದಂತೆ, ೧೯೧೦ಕ್ಕೆ ಮುಂಚೆ ಬಾಬಾರ ಹೆಸರು ಶಿರಡಿಯ ಸುತ್ತಮುತ್ತಲಿಂದಾಚೆ ಅಷ್ಟೊಂದು ಪ್ರಸಿದ್ಧಿಯಾಗಿರಲಿಲ್ಲ. ನಾನಾ ಸಾಹೇಬ್ ಚಾಂದೋರ್ಕರ್ ಮತ್ತು ದಾಸಗಣುರವರ ಪ್ರಚಾರದಿಂದಾಗಿ ಅವರ ಕೀರ್ತಿ ದೂರದ ಬೊಂಬಾಯಿಯವರೆಗೂ ಹರಡಿ, ಬಾಬಾರನ್ನು ಕಾಣಲು ಬಹಳ ಜನ ಬರಲು ಆರಂಭಿಸಿದರು. ಭಕ್ತರು ಬರುವಾಗ, ಬರಿಯ ಕೈಯಲ್ಲಿ ಬರದೆ, ಬಾಬಾರಿಗೆ ಕಾಣಿಕೆ ಎಂದು ಏನಾದರೂ ತರುತ್ತಿದ್ದರು. ನೈವೇದ್ಯಕ್ಕಾಗಿ ಅನೇಕ ಆಹಾರ ಪದಾರ್ಥಗಳೂ ಬರುತ್ತಿದ್ದವು. ಬರುತ್ತಿದ್ದ ನೈವೇದ್ಯ ಎಷ್ಟಾಗುತ್ತಿತ್ತೆಂದರೆ, ಶಿರಡಿಯಲ್ಲಿನ ಫಕೀರರು, ಬಡವರು, ಮತ್ತಿತರರೂ ಎಲ್ಲರೂ ಕಂಠಪೂರ್ತಿಯಾಗಿ ತಿಂದರೂ, ಇನ್ನೂ ಮಿಕ್ಕಿರುತ್ತಿತ್ತು. ಅದರಿಂದಾಗಿ ೧೯೧೦ರಿಂದಾಚೆಗೆ ಬಾಬಾ ಹಂಡಿಯ ಆಚಾರವನ್ನು ನಿಲ್ಲಿಸಿಬಿಟ್ಟರು.

ಕಲೆಯೋ ಅಥವ ಕಲಸುಮೇಲೋಗರವೋ

ಪ್ರತಿದಿನ ಮಧ್ಯಾನ್ಹದ ಆರತಿಯಾದಮೇಲೆ, ಬಾಬಾ ಪ್ರತಿಯೊಬ್ಬರಿಗೂ ಊದಿ ಪ್ರಸಾದವನ್ನು ಕೊಟ್ಟು, ಆಶಿರ್ವದಿಸುತ್ತಿದ್ದರು. ಎಲ್ಲರೂ ಹೊರಟು ಹೋದಮೇಲೆ, ಒಂದು ತೆರೆಯ ಹಿಂದೆ, ಒಳಕ್ಕೆ ಹೋಗಿ, ತಮ್ಮ ಊಟಕ್ಕೆಂದು ಬಾಬಾ ಕುಳಿತುಕೊಳ್ಳುತ್ತಿದ್ದರು. ಅಕ್ಕಪಕ್ಕಗಳಲ್ಲಿ ಅವರಿಗೆ ಬಹು ಸನ್ನಿಹಿತರಾದ ಅನೇಕ ಭಕ್ತರೂ ಕುಳಿತುಕೊಳ್ಳುತ್ತಿದ್ದರು. ನೈವೇದ್ಯಕ್ಕಾಗಿ ಬಂದ ಎಲ್ಲ ಆಹಾರ ಪದಾರ್ಥಗಳನ್ನೂ ಒಟ್ಟಿಗೇ ಸೇರಿಸಿ "ಕಲಸುಮೇಲೋಗರ" ಮಾಡಿ ಬಾಬಾರ ಮುಂದೆ ಇಡುತ್ತಿದ್ದರು. ಬಾಬಾ ಅದನ್ನು ದೇವರಿಗೊಪ್ಪಿಸಿ ಪವಿತ್ರಮಾಡುತ್ತಿದ್ದರು. ಆದು ಪ್ರಸಾದವಾಗುತ್ತಿತ್ತು. ಅದರಲ್ಲಿ ಒಂದು ಭಾಗವನ್ನು ಹೊರಗಡೆ ಪ್ರಸಾದಕ್ಕಾಗಿ ಕಾಯುತ್ತಿದ್ದವರಿಗೆ ಕೊಡುತ್ತಿದ್ದರು. ಆ ಹಂಚಿಕೆಯಾದಮೇಲೆ, ಬಾಬಾರ ಜೊತೆಯಲ್ಲಿದ್ದವರಿಗೆಲ್ಲ ಪ್ರಸಾದದ ಹಂಚಿಕೆಯಾಗುತ್ತಿತ್ತು. ಮಧ್ಯದಲ್ಲಿ ಬಾಬಾ, ಅವರ ಎಡಬಲ ಪಕ್ಕಗಳಲ್ಲಿ ಭಕ್ತರು ಕೂತಮೇಲೆ, ನಾನಾ ಸಾಹೇಬ್ ನಿಮೋಂಕರ್ ಮತ್ತು ಶ್ಯಾಮಾರಿಗೆ ಪ್ರಸಾದ ಹಂಚಲು ಬಾಬಾ ಹೇಳುತ್ತಿದ್ದರು. ಅವರಿಬ್ಬರೂ ಆ ಕೆಲಸವನ್ನು ಬಹಳ ಶ್ರದ್ಧೆಯಿಂದ ನಿರ್ವಹಿಸುತ್ತಿದ್ದರು. ಪವಿತ್ರವಾದ ಆ ಪ್ರಸಾದದ ಒಂದೊಂದು ತುತ್ತಿನಲ್ಲೂ, ಬಾಬಾರ ಪ್ರೀತಿ ವಿಶ್ವಾಸಗಳು ತುಂಬಿರುತ್ತಿತ್ತು. ಆಗ ಆ ಪ್ರಸಾದವನ್ನು ಬಾಬಾರ ಜೊತೆಯಲ್ಲಿ ಹಂಚಿಕೊಂಡ ಆ ಭಕ್ತರು ಅದೆಷ್ಟು ಅದೃಷ್ಟವಂತರೋ!

ನಾನಾ ಸಾಹೇಬರ ಕಥೆ

"ನಾವು ಕೊಡುವ ದಾನದಕ್ಷಿಣೆಗಳನ್ನು ಮನಃಪೂರ್ವಕವಾಗಿ ಕೊಡಬೇಕು. ಕೊಡಬೇಕಲ್ಲಾ ಎಂದು ದುಃಖದಿಂದ, ಮನಸ್ಸಿಲ್ಲದೆ ಕೊಡಬಾರದು. ಕೊಡಲು ಇಷ್ಟವಿಲ್ಲದಾಗ "ನನ್ನ ಹತ್ತಿರ ಇಲ್ಲ" ಎಂದು ಸುಳ್ಳು ಹೇಳಬಾರದು. ಸಂದರ್ಭಾನುಸಾರವಾಗಿ ಮೃದುವಾಗಿ ಕೊಡಲು ಸಾಧ್ಯವಿಲ್ಲ ಎಂದು ಹೇಳಬೇಕು. ಅದನ್ನು ತಪ್ಪಿಸಿಕೊಳ್ಳುವುದಕ್ಕಾಗಿ ಅಡ್ಡದಾರಿ ಹಿಡಿಯಬಾರದು" ಎಂಬ ಬುದ್ಧಿ ಮಾತುಗಳನ್ನು ಬಾಬಾ ಯಾವಾಗಲೂ ಹೇಳುತ್ತಿದ್ದರು.

ಒಂದುಸಲ, ನಾನಾ ಸಾಹೇಬ ಚಾಂದೋರ್ಕರರು ತಮ್ಮ ಷಡ್ಡಕ ಬಿನಿವಾಲೆಯೊಡನೆ ಶಿರಡಿಗೆ ಬಂದರು. ಮಸೀದಿಗೆ ಬಂದು, ಬಾಬಾರಿಗೆ ನಮಸ್ಕಾರಮಾಡಿ, ಬಾಬಾರೊಡನೆ ಮಾತನಾಡುತ್ತಾ ಕುಳಿತಿದ್ದರು. ನಾನಾ ಸಾಹೇಬರು ತಾವು ಕೋಪರಗಾಂವ್ ದತ್ತಾತ್ರೇಯ ದೇವಸ್ಥಾನಕ್ಕೆ ಕೊಡುತ್ತೇನೆಂದು ಮಾತುಕೊಟ್ಟಿದ್ದ ೩೦೦ ರೂಪಾಯಿಗಳನ್ನು ತರಲಾರದೆ ಹೋದದ್ದರಿಂದ ತಮ್ಮ ಷಡ್ಡಕನನ್ನು ಒಪ್ಪಿಸಿ, ದತ್ತಾತ್ರೇಯ ದೇವಸ್ಥಾನಕ್ಕೆ ಹೋಗುವುದನ್ನು ತಪ್ಪಿಸಿ, ಅಡ್ಡ ದಾರಿ ಹಿಡಿದು ಬಂದಿದ್ದರು. ಅವರು ಬಂದ ದಾರಿ ಮುಳ್ಳು ಕಲ್ಲುಗಳಿಂದ ತುಂಬಿ, ಬರುವಾಗ ಮುಳ್ಳುಗಳು ಚುಚ್ಚಿ ಬಹಳ ನೋವು ಅನುಭವಿಸಿದರು. ಈ ಹಿನ್ನೆಲೆಯಲ್ಲಿ ಬಾಬಾರನ್ನು ಕಾಣಲು ಅವರಿಬ್ಬರೂ ಬಂದಿದ್ದರು. ಮಾತನಾಡುತ್ತಾ ಬಾಬಾ ಇದ್ದಕ್ಕಿದ್ದ ಹಾಗೇ, ನಾನಾ ಸಾಹೇಬರನ್ನು, "ನನ್ನೊಡನೆ ಇಷ್ಟುಕಾಲದಿಂದಿದ್ದೂ ನೀನು ಹೀಗೆ ಮಾಡಬಹುದೇ?" ಎಂದು ಕೇಳಿದರು. ನಾನಾ ಸಾಹೇಬರಿಗೆ ಬಾಬಾ ಏನು ಹೇಳುತ್ತಿದ್ದಾರೆ ಎಂಬುದು ಅರ್ಥವಾಗಲಿಲ್ಲ. ಏನೂ ಉತ್ತರಕೊಡದೆ ಸುಮ್ಮನೆ ಕುಳಿತಿದ್ದರು. ಬಾಬಾ ಮತ್ತೆ, "ನೀನು ಕೋಪರಗಾಂವ್‍ನಿಂದ ಹೇಗೆ ಬಂದೆ? ಟಾಂಗಾ ಎಲ್ಲಿ ಬಾಡಿಗೆಗೆ ತೆಗೆದುಕೊಂಡೆ? ದಾರಿಯಲ್ಲಿ ಏನೇನಾಯಿತು? ಎಂಬುದೆಲ್ಲವನ್ನೂ ಹೇಳು" ಎಂದರು. ಅದನ್ನು ಕೇಳಿದ ಕೂಡಲೇ, ನಾನಾ ಸಾಹೇಬರಿಗೆ ತಮ್ಮ ತಪ್ಪು ಏನೆಂದು ತಿಳಿಯಿತು. ಅವರು, "ಬಿನಿವಾಲೆ ನನ್ನೊಡನೆ ಇದ್ದಿದ್ದರಿಂದ ಕೋಪರಗಾಂವ್‍ನಲ್ಲಿ ಟಾಂಗಾ ತೆಗೆದುಕೊಂಡು, ಗೋದಾವರಿಯಲ್ಲಿ ಸ್ನಾನಮಾಡಿ, ನಿಮ್ಮ ದರ್ಶನಕ್ಕೆ ಹೊರಟೆವು. ಬಿನಿವಾಲೆ ದತ್ತಾತ್ರೇಯರ ಭಕ್ತರು. ಅವರು ದತ್ತಾತ್ರೇಯರ ಗುಡಿಗೆ ಹೋಗಬೇಕೆಂದಿದ್ದರು. ಶಿರಡಿಗೆ ಬರಲು ಆತುರನಾಗಿದ್ದಿದುದರಿಂದ ಹಿಂತಿರುಗುವಾಗ ಹೋಗೋಣವೆಂದು ಅವರಿಗೆ ಹೇಳಿ ಅವರನ್ನು ಕರೆದುಕೊಂಡು ಇಲ್ಲಿಗೆ ಬಂದೆ. ಗೋದಾವರಿಯಲ್ಲಿ ಸ್ನಾನಮಾಡುವಾಗ ದೊಡ್ಡ ಮುಳ್ಳೊಂದು ಚುಚ್ಚಿ ಬಹಳ ನೋವಾಯಿತು" ಎಂದರು. ಅಂತರ್ಯಾಮಿಯಾದ ಬಾಬಾರಿಗೆ ಇದೆಲ್ಲವೂ ತಿಳಿದಿತ್ತು.

"ನನ್ನ ಸರ್ಕಾರ್, ದತ್ತಸ್ವಾಮಿಯನ್ನು ನೋಡುವುದನ್ನು ತಪ್ಪಿಸಿ ಬೇರೆ ದಾರಿಯಲ್ಲಿ ಏಕೆ ಬಂದೆ? ಆ ಸಾಧು ನಿನ್ನನ್ನು ೩೦೦ ರೂಪಾಯಿ ಕೇಳುತ್ತಾನೆಂದು ಈ ರೀತಿ ಮಾಡುವುದು ಸರಿಯಾದ ರೀತಿಯೇನು? ನಿನ್ನ ಕೈಕಾಲುಗಳು ಅಂಗಾಂಗಗಳಿಗೆಲ್ಲಾ ಮುಳ್ಳುಗಳು ಚುಚ್ಚಲಿಲ್ಲವೇನು? ನಿನ್ನ ಷಡ್ಡಕನಿಗೆ ಹಿಂಭಾಗದಲ್ಲೆಲ್ಲ ಮುಳ್ಳುಗಳು ಚುಚ್ಚಿಕೊಳ್ಳಲಿಲ್ಲವೇನು?" ಎಂದೆಲ್ಲ ಹೇಳಿ, ಬಹಳ ಅಸಂತುಷ್ಟರಾಗಿ ಕಂಡು ಬಂದ ಬಾಬಾ, ಮತ್ತೆ ಹೇಳಿದರು, "ಮುಳ್ಳು ಚುಚ್ಚಿದ್ದು ಬಹಳ ಸಣ್ಣ ಶಿಕ್ಷೆ. ದತ್ತ ಭಗವಾನನನ್ನು ನೀನು ಹೇಗೆತಾನೇ ತಿರಸ್ಕರಿಸಬಲ್ಲೆ?"

ಹೇಮಾಡ್ ಪಂತರ ಬಟ್ಟಲು ಮಜ್ಜಿಗೆ

ಇದಕ್ಕೆ ಮುಂಚೆ ವಿವರಿಸಿದ, ಪ್ರಸಾದ ಸ್ವೀಕಾರದಲ್ಲಿ ಭಾಗಿಯಾಗುವ ಅವಕಾಶ, ಒಮ್ಮೆ ಹೇಮಾಡ್ ಪಂತರಿಗೆ ಲಭಿಸಿತು. ತಮ್ಮ ಪಾಲಿಗೆ ಬಂದ ಪ್ರಸಾದವನ್ನೆಲ್ಲಾ ತಿಂದು ಹೊಟ್ಟೆ ತುಂಬಿ ಹೋಗಿತ್ತು. ಇನ್ನೇನೂ ತಿನ್ನಲು ಕುಡಿಯಲು ಸಾಧ್ಯವಿಲ್ಲ ಎನ್ನುವ ಸ್ಥಿತಿಯಲ್ಲಿತ್ತು. ಆಗ ಬಾಬಾ ಅವರಿಗೆ ಒಂದು ಬಟ್ಟಲು ಮಜ್ಜಿಗೆ ಕುಡಿಯಲು ಕೊಟ್ಟರು. ಆಪ್ಯಾಯಮಾನವಾಗಿ ಕಾಣುತ್ತಿದ್ದ ಆ ಬಟ್ಟಲು ಮಜ್ಜಿಗೆ ಕುಡಿಯ ಬೇಕೆಂದುಕೊಂಡರೂ ಹೊಟ್ಟೆ ತುಂಬಿ ಹೋಗಿದ್ದುದರಿಂದ ಅವರು ಅನುಮಾನಾಸ್ಪದವಾಗಿ ಬಟ್ಟಲು ಕೈಯಲ್ಲಿ ಹಿಡಿದಿದ್ದರು. ಆದರೆ ಆಸೆಯನ್ನು ತಡೆಯಲಾರದೆ ಸ್ವಲ್ಪ ಕುಡಿದರು. ಬಹಳ ರುಚಿಯಾಗಿತ್ತು ಆ ಮಜ್ಜಿಗೆ. ಕುಡಿಯುವುದೋ ಬೇಡವೋ ಎಂದು ಅನುಮಾನಿಸುತ್ತಿದ್ದ ಅವರಿಗೆ ಬಾಬಾ, "ಎಲ್ಲವನ್ನೂ ಕುಡಿದುಬಿಡು, ಇಂತಹ ಅವಕಾಶ ಇನ್ನೊಮ್ಮೆ ನಿನಗೆ ಸಿಕ್ಕುವುದಿಲ್ಲ" ಎಂದರು. ಹೇಮಾಡ್ ಪಂತರಿಗೆ ಆ ಮಾತಿನ ಅಂತರಾರ್ಥ ಆಗ ತಿಳಿಯಲಿಲ್ಲ. ಬಾಬಾರ ಮಾತಿನಂತೆ, ಮಜ್ಜಿಗೆಯನ್ನು ಪೂರ್ತಿಯಾಗಿ ಕುಡಿದರು. ಎರಡು ತಿಂಗಳಾದ ಮೇಲೆ ಬಾಬಾ ಎಲ್ಲರ ಪಾಲಿಗೆ ಭೌತಿಕವಾಗಿ ಇಲ್ಲವಾದರು.

ಹೇಮಾಡ್ ಪಂತರು ಕುಡಿದದ್ದು ಬಟ್ಟಲು ಮಜ್ಜಿಗೆ. ಆದರೆ ಅವರು ನಮಗೆ ಕೊಟ್ಟಿದ್ದು ಅಕ್ಷಯವಾದ ಅಮೃತ ಭಾಂಡಾರ. ಹೇಮಾಡ್ ಪಂತರಿಗೆ ಅಮರ ಕೀರ್ತಿಯನ್ನು ತಂದುಕೊಟ್ಟ ಸಪ್ರಮಾಣ ದಾಖಲೆ ಶ್ರೀ ಸಾಯಿ ಸಚ್ಚರಿತ್ರೆ, ರಾಮಾಯಣ ಮಹಾಭಾರತಗಳಂತೆ, ಎಲ್ಲಿಯವರೆಗೆ ಈ ದೇಶದಲ್ಲಿ ನದಿಗಳು ಹರಿಯುತ್ತಿರುತ್ತವೆಯೋ, ಪರ್ವತಗಳು ನಿಂತಿರುತ್ತಿವೆಯೋ ಅಲ್ಲಿಯವರೆಗೂ ತಪ್ಪದೇ ಸಾಯಿ ಭಕ್ತರಿಗೆ ಆಸರೆಯಾಗಿ ನಿಲ್ಲುತ್ತದೆ.

ರಾಮಾಯಣದ ಅನೇಕ ವಿವಿಧ ಆವೃತ್ತಿಗಳು ಬಂದಿವೆ. ಬರುತ್ತವೆ. ಬರುತ್ತಿರುತ್ತವೆ. ಆದರೆ ಮೂಲ ರಾಮಾಯಣ ತನ್ನ ಘನತೆಯನ್ನು ಕಳೆದುಕೊಂಡಿಲ್ಲ. ಅಂತೆಯೇ ಶ್ರೀ ಸಾಯಿ ಸಚ್ಚರಿತ್ರೆ ಅನೇಕ ರೂಪಗಳಲ್ಲಿ ವ್ಯಕ್ತವಾಗಿದೆ. ಆಗಬಹುದು. ಆಗುತ್ತದೆ. ಆದರೆ ಅವೆಲ್ಲವೂ ಹೇಮಾಡ್ ಪಂತರ ಶ್ರೀ ಸಾಯಿ ಸಚ್ಚರಿತ್ರೆಯ ವಿವಿಧ ರೂಪಗಳೇ! ಬರೆಯುವವರೆಲ್ಲರೂ ಹೇಮಾಡ್ ಪಂತರಿಗೆ ಸದಾಋಣಿಗಳಾಗಿರಬೇಕು.

ತನ್ನ ಸನ್ನಿಹಿತ ಭಕ್ತರೆಲ್ಲರಿಗೂ ಅಮರತ್ವವನ್ನು ದಯಪಾಲಿಸಿದ ಆ ದಯಾಸಾಗರ, ಕರುಣಾಮೂರ್ತಿ, ಭಕ್ತಪರಿಪಾಲನಾಸಕ್ತ, ಸಾಯಿಬಾಬಾರ ಪಾದಾರವಿಂದಗಳಲ್ಲಿ ಮತ್ತೆ ಮತ್ತೆ ನಮಸ್ಕರಿಸುತ್ತಾ, ನಮ್ಮನ್ನು ಸದಾಕಾಲ ಅವರ ಅನುಗ್ರಹಕ್ಕೆ ಪಾತ್ರರಾಗಿರುವಂತೆ ಮಾಡು ಎಂದು ಪ್ರಾರ್ಥಿಸುತ್ತಾ ಈ ಅಧ್ಯಾಯವನ್ನು ಮುಗಿಸೋಣ. ಶ್ರೀ ಸದ್ಗುರು ಸಾಯಿನಾಥ ಮಹರಾಜಕೀ ಜೈ!

ಇದರೊಂದಿಗೆ ಬಾಬಾರ ಹಂಡಿ, ದೇವಾಲಯಗಳಿಗೆ ಅಗೌರವ, ಕಲಸುಮೇಲೋಗರ, ಮಜ್ಜಿಗೆಯ ಬಟ್ಟಲು ಮತ್ತು ಇತರ ವಿಷಯಗಳನ್ನು ಕುರಿತು ಹೇಳುವ ಮುವ್ವತ್ತೆಂಟನೆಯ ಅಧ್ಯಾಯ ಮುಗಿಯಿತು. ಮುಂದಿನ ಅಧ್ಯಾಯದಲ್ಲಿ ಹೇಮಾಡ್ ಪಂತ್ ಗೀತೆಯ ಶ್ಲೋಕದ ಅಂತರಾರ್ಥ, ಸಮಾಧಿ ಮಂದಿರನಿರ್ಮಾಣ ಇತ್ಯಾದಿ ವಿಷಯಗಳನ್ನು ಹೇಳುತ್ತಾರೆ.

||ಸದ್ಗುರು ಶ್ರೀ ಸಾಯಿನಾಥಾರ್ಪಣಮಸ್ತು||ಶುಭಂ ಭವತು||
||ಓಂ ಶಾಂತಿಃ ಶಾಂತಿಃ ಶಾಂತಿಃ||


No comments:

Post a Comment