Wednesday, January 4, 2012

||ಮುವ್ವತ್ತನೆಯ ಅಧ್ಯಾಯ||


||ಶ್ರೀ ಸಾಯಿ ಸಚ್ಚರಿತ್ರೆ||
||ಮುವ್ವತ್ತನೆಯ ಅಧ್ಯಾಯ||
||ಹರಕೆಯ ಪ್ರಕರಣ||
ಶ್ರೀ ಗಣೇಶಾಯ ನಮಃ ಶ್ರೀ ಸರಸ್ವತಯೇ ನಮಃ
ಶ್ರೀ ವೆಂಕಟೇಶಾಯ ನಮಃ ಶ್ರೀ ಸಾಯಿನಾಥಾಯ ನಮಃ
ಶ್ರೀ ಸದ್ಗುರುಭ್ಯೋನ್ನಮಃ

ಈ ಅಧ್ಯಾಯದಲ್ಲಿ ಹೇಮಾಡ್ ಪಂತ್, ವಣಿಯ ಕಾಕಾಜಿ ವೈದ್ಯ, ಬೊಂಬಾಯಿಯ ಪಂಜಾಬಿ ರಾಮಲಾಲ್ ಮತ್ತು ಇತರ ವಿಷಯಗಳನ್ನು ಹೇಳುತ್ತಾರೆ.

ಸದ್ಗುರು ಸಾಯಿ

ಮೊದಲು, ಆ ದಯಾಸಮುದ್ರ, ಕ್ಷಮಾಸಾಗರ, ಪ್ರೀತಿಯ ಆಗರವಾದ ನಮ್ಮ ಪ್ರೇಮ ಮೂರ್ತಿ ಸಾಯಿಬಾಬಾರ ಪಾದಗಳಲ್ಲಿ ತಲೆಯಿಟ್ಟು, ನಮಸ್ಕರಿಸಿ ನಮ್ಮ ತಪ್ಪುಗಳು, ಪಾಪಗಳು ಎಲ್ಲವನ್ನೂ ಕ್ಷಮಿಸಿ ನಮ್ಮನ್ನು ಈ ಪ್ರಪಂಚವೆಂಬ ಅಂಧಕಾರದಿಂದ ಹೊರಕ್ಕೆ ತನ್ನಿ ಎಂದು ಬೇಡಿಕೊಳ್ಳೋಣ. ನಮ್ಮ ತಾಪತ್ರಯಗಳನ್ನು ತಿಳಿದು, ನಮ್ಮನ್ನು ಕಾಪಾಡಿ ಶಾಂತಿಯನ್ನು ದಯಪಾಲಿಸ ಬಲ್ಲವರು ಅವರೊಬ್ಬರೇ! ಯಾವಾಗ ನಾವು ಕಷ್ಟ ಕಾರ್ಪಣ್ಯಗಳಲ್ಲಿ ಸಿಕ್ಕಿಕೊಂಡು, ಮುಂದೆ ಹೋಗಲು ದಾರಿ ಕಾಣದೆ, ಏನು ಮಾಡಬೇಕು ಎಂಬುದನ್ನು ಅರಿಯದೆ, ಅಂಧಕಾರದಲ್ಲಿ ಮುಳುಗಿರುತ್ತೇವೋ, ಆವಾಗಲೇ ನಾವು ಅವರಲ್ಲಿ ಮೊರೆಯಿಡಬೇಕು. ಅವರೊಬ್ಬರೇ ನಮ್ಮನ್ನು ಈ ದುಃಖ ದುರಿತಗಳಿಂದ ಪಾರುಮಾಡಬಲ್ಲವರು. ಅವರು ಅವತಾರವೆತ್ತಿರುವುದೇ, ಭಕ್ತರ ಉದ್ಧಾರಕ್ಕಾಗಿ. ಸುರಕ್ಷಿತವಾಗಿ ಈ ಸಂಸಾರ ಸಾಗರದಿಂದ ನಮ್ಮನ್ನು ದಡಮುಟ್ಟಿಸಬಲ್ಲವರು ಅವರೊಬ್ಬರೇ! ಸಂಸಾರವೆಂಬ ಸಮುದ್ರದಲ್ಲಿ ಮುಳುಗಿ, ಅರಿಷಡ್ವರ್ಗಗಳೆಂಬ ಜಲಚರಗಳ ಬಾಧೆಗೆ ಸಿಲುಕಿ, ಒದ್ದಾಡುತ್ತಿರುವ ಭಕ್ತರನ್ನು ಕಾಪಾಡಲೆಂದೇ, ಸಾಯಿಬಾಬಾ ಎಂಬ ಸಗುಣ ರೂಪದಲ್ಲಿ, ಆ ನಿರ್ಗುಣ ಬ್ರಹ್ಮ ಪರಮಾತ್ಮ ನಮ್ಮೊಡನೆ ಬಂದು ನೆಲೆಸಿದ್ದಾನೆ. ಆ ಸುಂದರ ಸಗುಣ ರೂಪವನ್ನು ನಮ್ಮ ಕಣ್ಣ ಮುಂದೆ ನಿಲ್ಲಿಸಿ, ಮನಸ್ಸಿನಲ್ಲಿ ಆತನ ನಾಮಧ್ಯಾನ ಮಾಡುತ್ತಾ, ಆತನ ಪಾದಾಶ್ರಯವನ್ನು ಪಡೆದವರು ಈ ಪ್ರಪಂಚದ ದುಃಖ ದುರಿತಗಳಿಂದ ದೂರವಾಗುತ್ತಾರೆ. ಅವರ ನಾಮಸ್ಮರಣೆ ನಮಗೆ ನಿತ್ಯಾನಿತ್ಯಗಳ ಅರಿವನ್ನುಂಟುಮಾಡಿಕೊಡುತ್ತದೆ. ಅದೇ ನಮ್ಮ ಅಂತಶ್ಶಕ್ತಿ. ಪ್ರಪಂಚವೇ ನಮ್ಮನ್ನು ದೂರೀಕರಿಸಿದರೂ, ಆತ ನಮ್ಮ ಕೈಬಿಡುವುದಿಲ್ಲ. ಸಂಸಾರವೆಂಬ ಈ ಕತ್ತಲೆಯ ದಾರಿಯಲ್ಲಿ ಬೆಳಕು ತೋರಬಲ್ಲವನು ಆತನೇ!

ನಾವು ಕೇಳದೆಯೇ ನಮ್ಮ ಬೇಕು ಬೇಡಗಳನ್ನು ತೀರಿಸುವ ಆ ಸಾಯಿಬಾಬಾಗೆ ನಾವು ಸದಾ ಋಣಿಗಳಾಗಿರಬೇಕು. ರಘುನಾಥ್ ರಾವ್ ತೆಂಡೂಲ್ಕರ್ ಕೇಳದೆಯೇ, ಅವರಿಗೆ ಅವರ ಖರ್ಚುವೆಚ್ಚಗಳಿಗೆ ಬೇಕಾಗುವಷ್ಟು ಹಣವನ್ನು ಪೆನ್ಶನ್ ರೂಪದಲ್ಲಿ ಕೊಡಿಸಿದ ಮಹಾನುಭಾವ ಅವರು. ಸಾಯಿ ಸಚ್ಚರಿತ್ರೆಯಂತಹ ಅಮೃತಭಾಂಡಾರವನ್ನು ಬರೆದು ಪೂರಯಿಸಲು ಹೇಮಾಡ್ ಪಂತ್‍ಗೆ ಆಸರೆಯಾಗಿ ನಿಂತವರು ಅವರೇ! ಹೇಮಾಡ್ ಪಂತ್ ಬರಿಯ ಲೇಖನಿಯಷ್ಟೇ! ಸಾಯಿಯೇ ಅವರಲ್ಲಿ ಕೂತು ಅದನ್ನು ಬರೆದರು. ಹೇಮಾಡ್ ಪಂತರ ಪೂರ್ವಜನ್ಮಕೃತ ಪುಣ್ಯಫಲದಿಂದಲೇ ಅಂತಹ ಅದೃಷ್ಟ ಒದಗಿ ಬಂತು. ಸಚ್ಚರಿತ್ರೆಯಲ್ಲಿ ಇರುವ ಕಥೆಗಳು ತರ್ಕಕ್ಕೆ ಸಿಕ್ಕುವುದಿಲ್ಲ. ಕಾಕತಾಳೀಯವೆಂದು ಕಂಡುಬರುವ ಪ್ರಸಂಗಗಳು, ಘಟನೆಗಳು, ಮನುಷ್ಯನ ಊಹೆಗೆ ಸಿಲುಕಲಾರದಂತಹವು. ಈ ಕಾಕತಾಳೀಯವೆಂದು ಕಂಡುಬರುವವೆಲ್ಲವೂ ಸರ್ವಜ್ಞ, ಸರ್ವವ್ಯಾಪಿ, ಅವ್ಯಕ್ತ ಶಕ್ತಿರೂಪಿ ಸಾಯಿಬಾಬಾರಿಂದ ಮೊದಲೇ ನಿರ್ಧರಿಸಲ್ಪಟ್ಟಿದ್ದು! ಸಾಯಿಲೀಲೆಗಳು ಎಂಬ ಈ ಅಮೃತ, ಸಂಸಾರಿಗರಿಗೆ ತೃಪ್ತಿ, ಅಜ್ಞಾನಿ ಜೀವಿಗಳಿಗೆ ಮುಕ್ತಿ, ಸಾಧಕರಿಗೆ ಸಾಧನಾ ಮಾರ್ಗ.

ಕಾಕಾಜಿ ವೈದ್ಯರ ಥೆ

ನಾಸಿಕ್ ಜಿಲ್ಲೆಯಲ್ಲಿ ವಣಿ ಎಂಬ ಊರೊಂದಿದೆ. ಅಲ್ಲಿ, ಸಪ್ತಶೃಂಗಿ ದೇವಾಲಯದ ಪೂಜಾರಿ, ಕಾಕಾಜಿ ವೈದ್ಯ ಎಂಬುವವರೊಬ್ಬರಿದ್ದರು. ಅವರು ದೈವ ಭೀರು. ಪ್ರತಿದಿನ ಬೆಳಗ್ಗೆ ದೇವಾಲಯಕ್ಕೆ ಹೋಗಿ, ದೇವಿಯ ಪೂಜೆ ಮುಗಿಸಿ, ದೇವಿಗೆ ಆರತಿ ನೈವೇದ್ಯಗಳನ್ನು ಕೊಟ್ಟು, ನಂತರ ಮನೆಗೆ ಹೋಗಿ ಊಟ ಮಾಡುವ ಅಭ್ಯಾಸ. ಆತ ಆ ದೇವಾಲಯದಲ್ಲಿ ಬಹಳ ವರ್ಷಗಳಿಂದ ಪೂಜಾರಿಯಾಗಿದ್ದರು. ತೃಪ್ತಿ, ಸಂತೋಷಗಳಿಂದಿದ್ದ ಆ ಮನುಷ್ಯನಿಗೆ ದುಷ್ಕಾಲ ಪ್ರಾರಂಭವಾಗಿ, ಆತ ಬಹಳ ಕಷ್ಟದಲ್ಲಿ ಸಿಕ್ಕಿಬಿದ್ದರು. ಆಂದೋಳನಗೊಂಡಿದ್ದ ಮನಸ್ಸು ಆತ್ಮಹತ್ಯೆಯ ಯೋಚನೆಯನ್ನೂ ಮಾಡಿತ್ತು. ಒಂದು ಸಂಜೆ ಅವರು ದೇವಾಲಯಕ್ಕೆ ಹೋಗಿ ದೇವಿಯ ಮುಂದೆ ತಮ್ಮ ಅಳಲನ್ನೆಲ್ಲಾ ಹೇಳಿಕೊಂಡು, ತಮ್ಮನ್ನು ಆ ಬವಣೆಗಳಿಂದ ಪಾರುಮಾಡಬೇಕೆಂದು ಕಳಕಳಿಯಿಂದ ಬೇಡಿಕೊಂಡರು. ಅವರ ಪ್ರಾರ್ಥನೆಯಿಂದ ಪ್ರಸನ್ನಳಾದ ದೇವಿ, ರಾತ್ರಿ ಕನಸಿನಲ್ಲಿ ಕಾಣಿಸಿಕೊಂಡು, "ಹೋಗಿ ಬಾಬಾರನ್ನು ಕಾಣು. ಅವರು ನಿನಗೆ ಶಾಂತಿ ಸಮಾಧಾನಗಳನ್ನು ನೀಡುತ್ತಾರೆ" ಎಂದಳು. ಬಾಬಾ ಯಾರು, ಎಲ್ಲಿರುತ್ತಾರೆ ಎಂದು ಕೇಳುವಷ್ಟರಲ್ಲಿ, ಅವರಿಗೆ ಎಚ್ಚರಿಕೆಯಾಗಿಹೋಯಿತು. ಸಾಯಿಬಾಬಾರ ಹೆಸರು ಆಗ ಇನ್ನೂ ಹೆಚ್ಚಿಗೆ ಪ್ರಸಾರಕ್ಕೆ ಬಂದಿರಲಿಲ್ಲ. ಕಾಕಾಜಿ ಯೋಚನೆಮಾಡಿ, ದೇವಿ ಹೇಳಿದ ಬಾಬಾ ಎಂದರೆ ನಾಸಿಕದ ತ್ರಯಂಬಕೇಶ್ವರನೇ ಇರಬೇಕೆಂದು ಅಲ್ಲಿಗೆ ಹೋಗಿ, ಹತ್ತು ದಿನಗಳ ಕಾಲ ತ್ರಯಂಬಕೇಶ್ವರನಿಗೆ ಸೇವೆ ಮಾಡಿದರು. ಬೆಳಗ್ಗೆ ಬೇಗನೆದ್ದು, ಸ್ನಾನಮಾಡಿ, ಸದಾಶಿವನಾದ ತ್ರಯಂಬಕನಿಗೆ ರುದ್ರಾಭಿಷೇಕಪೂರ್ವಕವಾಗಿ ಪೂಜೆ ಮಾಡಿ, ಆರತಿ ನೈವೇದ್ಯಗಳನ್ನು ಕೊಟ್ಟು, ತನ್ನ ಕಷ್ಟಗಳನ್ನೆಲ್ಲಾ ತೀರಿಸಿ ತನ್ನ ಮನಸ್ಸಿಗೆ ಶಾಂತಿ ಸಮಾಧಾನಗಳನ್ನು ಕೊಡುವಂತೆ ಬೇಡಿಕೊಂಡರು. ಆದರೂ, ಅವರ ಮನಸ್ಸಿನ ಆಂದೋಳನ ಕಡಮೆಯಾಗಲಿಲ್ಲ. ವಣಿಗೆ ಹಿಂತಿರುಗಿ, ಮತ್ತೆ ದೇವಿಯಲ್ಲಿ ಮನವಿ ಮಾಡಿಕೊಂಡರು. ಸಪ್ತಶೃಂಗಿದೇವಿ, ಮತ್ತೊಮ್ಮೆ ಕನಸಿನಲ್ಲಿ ಕಾಣಿಸಿಕೊಂಡು, "ನೀನು ತ್ರಯಂಬಕಕ್ಕೆ ಏಕೆ ಹೋದೆ? ನಾನು ಹೇಳಿದ್ದು ಶಿರಡಿಯ ಸಾಯಿಬಾಬಾ" ಎಂದಳು. ಕಾಕಾಜೀಗೆ ಶಿರಡಿ ಎಲ್ಲಿದೆ, ಅಲ್ಲಿಯ ಸಾಯಿಬಾಬಾ ಯಾರು ಎಂಬುದು ಏನೂ ತಿಳಿಯದು. ತನ್ನ ಕುಲದೈವವೇ ಆದ ತಾಯಿಯ ಆಜ್ಞೆಯನ್ನು ನಡೆಸುವುದು ಹೇಗೆ, ಎಂಬ ಯೋಚನೆಯಲ್ಲೇ ಅವರು ಮುಳುಗಿಹೋದರು. ಮನುಷ್ಯ ಶುದ್ಧ ಮನಸ್ಸಿನಿಂದ ಮಾಡಿದ ಸಂಕಲ್ಪವನ್ನು ದೇವರೇ ಪೂರ್ಣವಾಗುವಂತೆ ನೋಡಿಕೊಳ್ಳುತ್ತಾನೆ. ಭಕ್ತರಿಗೆ ಒತ್ತಾಸೆಯಾಗಿ ನಿಂತು, ಅವರ ಹಂಬಲಗಳನ್ನು ತಾನೇ ತೀರಿಸುತ್ತಾನೆ, ದೇವರೇ ಆದ ಸಂತರು ಕೂಡಾ ಅಷ್ಟೇ. ತಮ್ಮನ್ನು ಕಾಣಬೇಕೆಂದು ಶುದ್ಧಮನಸ್ಸಿನಿಂದ ಹಂಬಲಿಸುವ ಭಕ್ತರ ಹಂಬಲಿಕೆಯನ್ನು ತೀರಿಸಲು, ತಾವೇ ಬೇಕಾದ ಸಹಾಯವನ್ನು ನೀಡುತ್ತಾರೆ. ಭಕ್ತನ ಹಂಬಲ ಎಷ್ಟು ತೀವ್ರ ಮತ್ತು ಧೃಢವೋ ಅಷ್ಟೆ ತೀವ್ರವಾಗಿ ಅವನ ಹಂಬಲವೂ ತೀರಿಸಲ್ಪಡುತ್ತದೆ. ನಮ್ಮನ್ನು ಆಹ್ವಾನಿಸಿದವರು, ಅದನ್ನು ಪೂರಯಿಸಲು ಬೇಕಾದ ಸಹಾಯಹಸ್ತವನ್ನೂ ಅವರೇ ಕೊಡುತ್ತಾರೆ. ಕಾಕಾಜೀಯ ವಿಷಯದಲ್ಲೂ ಇದು ನಿಜವಾಯಿತು. ಶಿರಡಿಗೆ ಹೋಗಬೇಕೆಂದು ಧೃಢನಿಶ್ಚಯಮಾಡಿದ್ದ ಕಾಕಾಜೀಯನ್ನು ಕರೆದುಕೊಂಡು ಹೋಗಲು ಬಾಬಾ ತಮ್ಮ ಅತಿಸನ್ನಿಹಿತ ಭಕ್ತನನ್ನೇ ವಣಿಗೆ ಕಳುಹಿಸಿದರು.

ಶ್ಯಾಮಾರ ಕಥೆ

ಶ್ಯಾಮಾರಿಗೆ, ಸಣ್ಣವರಾಗಿದ್ದಾಗ ಯಾವುದೋ ಖಾಯಿಲೆಯಾಗಿ, ಯಾವ ಚಿಕಿತ್ಸೆಗೂ ಅದು ಸರಿಹೋಗಲಿಲ್ಲ. ಆಗ ಅವರ ತಾಯಿ, ಮಗನಿಗೆ ಗುಣವಾದರೆ ಅವನನ್ನು ತಂದು ನಿನ್ನ ಪಾದಗಳಲ್ಲಿಡುತ್ತೇನೆ ಎಂದು ವಣಿಯ ಸಪ್ತಶೃಂಗಿ ದೇವಿಗೆ ಹರಸಿಕೊಂಡಿದ್ದರು. ಆಕೆಯ ಹರಕೆಯನ್ನು ದೇವಿ ಒಪ್ಪಿಕೊಂಡಳೋ ಎಂಬಂತೆ ಆ ಮಗುವಿಗೆ ಗುಣವಾಗಿ ಎಂದಿನಂತಾದ. ಕಾರಣಾಂತರಗಳಿಂದ ಆಕೆ ಆ ಹರಕೆಯನ್ನು ತೀರಿಸಲಾಗಲಿಲ್ಲ. ಅದಾದಮೇಲೆ ಆಕೆಗೂ ಸ್ತನಗಳಲ್ಲಿ ಏನೋ ಹುಣ್ಣಾಗಿ ಬಹಳ ಬಾಧೆ ಅನುಭವಿಸಿದಳು. ಆಗಲೂ ಆಕೆ ತನ್ನ ಬಾಧೆ ತೀರಿದರೆ ದೇವಿಗೆ ಎರಡು ಬೆಳ್ಳಿಯ ಸ್ತನಗಳನ್ನು ಅರ್ಪಿಸುತ್ತೇನೆಂದು ಇನ್ನೊಂದು ಹರಕೆ ಮಾಡಿಕೊಂಡಳು. ಆಕೆಗೂ ಗುಣವಾಯಿತು. ತನಗೆ ಬಾಧೆಯಾದಾಗ ಮಾಡಿಕೊಂಡ ಹರಕೆಯನ್ನು, ತನ್ನ ಬಾಧೆ ತೀರಿದಾಗ, ತೀರಿಸಬೇಕೆಂಬುದನ್ನು ಅಷ್ಟೇ ಬೇಗ ಮನುಷ್ಯ ಮರೆಯುತ್ತಾನೆ. ಇಲ್ಲೂ ಅದೇ ಆಯಿತು. ಶ್ಯಾಮಾರ ತಾಯಿ ಎರಡೂ ಹರಕೆಗಳನ್ನು ಸಕಾಲದಲ್ಲಿ ತೀರಿಸಲು ಮರೆತರು. ಕೊನೆಗಾಲ ಸಮೀಪಿಸಿದಾಗ, ಆಕೆಗೆ ಹರಕೆಗಳು ಜ್ಞಾಪಕಕ್ಕೆ ಬಂದವು. ಮಗ ಶ್ಯಾಮನನ್ನು ಕರೆದು, ಆ ಹರಕೆಗಳನ್ನು ಪೂರೈಸುವಂತೆ ಹೇಳಿದರು. ಅವನಿಂದ ಮಾತು ಪಡೆದು, ಆಕೆ ಪ್ರಾಣ ಬಿಟ್ಟಳು. ಶ್ಯಾಮಾ ಕೂಡಾ ಕಾಲಕ್ರಮೇಣ ತಾನು ತಾಯಿಗೆ ಕೊಟ್ಟಿದ್ದ ಮಾತನ್ನು ಮರೆತರು. ಮೂವತ್ತು ವರ್ಷಗಳು ಕಳೆದುಹೋದವು.

ಆ ಸಮಯದಲ್ಲಿ ಜ್ಯೋತಿಷಿಯೊಬ್ಬರು ಶಿರಡಿಗೆ ಬಂದರು. ಆತ ಬೂಟಿ ಮತ್ತಿತರರಿಗೆ ಹೇಳಿದ ಭವಿಷ್ಯ ನಿಜವಾಗಿತ್ತು. ಶ್ಯಾಮಾರ ತಮ್ಮ ಬಾಪಾಜಿ ಕೂಡ ಆ ಜ್ಯೋತಿಷಿಯನ್ನು ಕಂಡರು. ಆ ಜ್ಯೋತಿಷಿ ಅವರ ತಾಯಿಯ ಹರಕೆಗಳ ವಿಷಯವನ್ನು ಹೇಳಿ, ಶ್ಯಾಮಾ ಅದನ್ನು ತೀರಿಸದೇ ಇರುವುದರಿಂದ ದೇವಿ ಅಪ್ರಸನ್ನಳಾಗಿದ್ದಾಳೆಂದೂ, ಅವರ ಕಷ್ಟಗಳು ತೀರಬೇಕಾದರೆ, ತಕ್ಷಣವೇ ಆ ಹರಕೆಗಳನ್ನು ತೀರಿಸಬೇಕೆಂದೂ ಹೇಳಿದರು. ಬಾಪಾಜಿ ಅದನ್ನು ತಮ್ಮ ಅಣ್ಣ ಶ್ಯಾಮಾಗೆ ತಿಳಿಸಿದರು. ತಡಮಾಡದೆ ಶ್ಯಾಮಾ ಅಕ್ಕಸಾಲಿಗನ ಬಳಿಗೆ ಹೋಗಿ ಎರಡು ಬೆಳ್ಳಿಯ ಸ್ತನಗಳನ್ನು ಮಾಡಿಸಿ, ಮಸೀದಿಗೆ ಬಂದು, ಬಾಬಾರ ಪಾದಗಳಿಗೆ ನಮಸ್ಕರಿಸಿ, ಆ ಬೆಳ್ಳಿಯ ಸ್ತನಗಳನ್ನು ಅವರಿಗೆ ಅರ್ಪಿಸಿ, ಬಾಬಾರೇ ತನ್ನ ಸಪ್ತಶೃಂಗಿಯಾದದ್ದರಿಂದ ಅದನ್ನು ಒಪ್ಪಿಸಿಕೊಂಡು, ತನ್ನನ್ನು ಹರಕೆಗಳಿಂದ ಬಿಡುಗಡೆ ಮಾಡಬೇಕು, ಎಂದು ಕೇಳಿಕೊಂಡರು. ಬಾಬಾ ಅದನ್ನು ಒಪ್ಪಿಕೊಳ್ಳದೆ, ಶ್ಯಾಮಾ ಸ್ವಯಂ ತಾನೇ ವಣಿಗೆ ಹೋಗಿ, ಅವನ್ನು ದೇವಿ ಸಪ್ತಶೃಂಗಿಗೆ ಅರ್ಪಿಸಿ ಬರಬೇಕೆಂದು ಹೇಳಿದರು. ಹಾಗೆ ಬಾಬಾರ ಅನುಮತಿ ಊದಿಪ್ರಸಾದಗಳನ್ನು ತೆಗೆದುಕೊಂಡು ಅವರು ವಣಿಗೆ ಬಂದರು.

ವಣಿಗೆ ಬಂದ ಶ್ಯಾಮ, ಸಪ್ತಶೃಂಗಿ ದೇವಾಲಯದ ಪೂಜಾರಿಯ ಮನೆಯನ್ನು ಹುಡುಕುತ್ತಾ ಕಾಕಾಜಿಯ ಮನೆಗೆ ಬಂದರು. ಹಾಗೆ ಬಾಬಾರ ಅತಿ ಸನ್ನಿಹಿತ ಭಕ್ತರೊಬ್ಬರು, ಬಾಬಾರನ್ನು ಕಾಣಲು ಅತಿಕಾತುರವಾಗಿದ್ದವರೊಬ್ಬರನ್ನು ಕಾಣಲು ಬಂದರು. ಎಂತಹ ಅದ್ಭುತ ಕಾಕತಾಳೀಯತೆ! ಬಾಬಾ ತನ್ನ ಭಕ್ತರನ್ನು ತನ್ನೆಡೆಗೆ ಕರೆದುಕೊಳ್ಳಲು ಎಂತಹ ಸುಂದರವಾದ ರೀತಿಯಲ್ಲಿ ಒಂದಕ್ಕೊಂದನ್ನು ತಾಳೆಹಾಕುತ್ತಾರೆ! ದೇವರನ್ನು, ಸಂತರನ್ನು ಕಾಣಲು ಶ್ರದ್ಧಾಭಕ್ತಿಗಳಿಂದ ಪರಿತಪಿಸುವವರನ್ನು ತನ್ನೆಡೆಗೆ ಕರೆದುಕೊಳ್ಳಲು ದೇವರೇ, ಸಂತರೇ ಸಹಾಯ ಮಾಡುತ್ತಾರೆ ಎಂಬ ಮಾತು ಕಾಕಾಜೀಯ ವಿಷಯದಲ್ಲಿ ಅಕ್ಷರಶಃ ನಿಜವಾಯಿತು. ಬಾಬಾರನ್ನು ಕಾಣಲು ಆತ ಶ್ರದ್ಧಾಭಕ್ತಿಗಳಿಂದ ಮಾಡಿದ ತಪನದಿಂದ ಬಾಬಾರೇ ಶ್ಯಾಮಾ ರೂಪದಲ್ಲಿ ಆತನನ್ನು ಶಿರಡಿಗೆ ಕರೆದುಕೊಂಡುಹೋಗಲು ವಣಿಗೆ ಬಂದರು.

ಶ್ಯಾಮಾ ಕಾಕಾಜೀಯ ಮನೆಯ ಬಾಗಿಲು ತಟ್ಟಿದಾಗ, ಆತನೇ ಬಂದು ಬಾಗಿಲು ತೆರೆದು, ಬಂದವರು ಯಾರು, ಏನು ಕೆಲಸ ಎಂದು ವಿಚಾರಿಸಿದರು. ಶ್ಯಾಮಾ ತಾನು ಶಿರಡಿಯಿಂದ ಬರುತ್ತಿದ್ದೇನೆ ಎಂದು ಇನ್ನೂ ಹೇಳುತ್ತಿರುವಷ್ಟರಲ್ಲಿ, ಕಾಕಾಜೀಯ ಸಂತೋಷ ಉಕ್ಕಿ ಬಂದು, ಶ್ಯಾಮಾರನ್ನು ಗಟ್ಟಿಯಾಗಿ ಅಪ್ಪಿಕೊಂಡರು. ಪರೋಕ್ಷವಾಗಿ ಬಾಬಾರ ಪ್ರೀತಿ ವಿಶ್ವಾಸಗಳನ್ನು ಅನುಭವಿಸಿದ ಕಾಕಾಜಿ ಆನಂದಾಶ್ರುಗಳನ್ನು ಸುರಿಸುತ್ತಾ, ಶ್ಯಾಮಾರನ್ನು ಒಳಕ್ಕೆ ಕರೆದು, ಕೂಡಿಸಿ, ಬಾಬಾರ ಬಗ್ಗೆ, ಅವರ ಲೀಲೆಗಳ ಬಗ್ಗೆ ಬಹಳ ಹೊತ್ತು ಮಾತನಾಡಿಸಿದರು. ನಂತರ ಕಾಕಾಜಿ ಶ್ಯಾಮಾರನ್ನು ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ ತಾಯಿ ಸಪ್ತಶೃಂಗಿಗೆ, ಶ್ಯಾಮಾರ ಹರಕೆಗಳು ತೀರುವಂತೆ ಪೂಜಾದಿಗಳನ್ನು ಮಾಡಿ, ಎಲ್ಲವನ್ನೂ ಸಾಂಗೋಪಾಂಗವಾಗಿ ನಡೆಸಿಕೊಟ್ಟರು.

ವಣಿಯಲ್ಲಿನ ಕೆಲಸವನ್ನೆಲ್ಲಾ ಮುಗಿಸಿ ಇಬ್ಬರೂ ಜೊತೆಯಾಗಿ ಶಿರಡಿಗೆ ಹೊರಟರು. ಶಿರಡಿ ಸೇರಿ ಮಸೀದಿಗೆ ಹೋಗಿ, ಅಲ್ಲಿ ಕಾಕಾಜಿ ಬಾಬಾರ ದರ್ಶನಮಾಡಿ, ಅವರ ಚರಣಗಳಲ್ಲಿ ಶಿರಸ್ಸನ್ನಿಟ್ಟರು. ದೇವಿ ಸಪ್ತಶೃಂಗಿ ಹೇಳಿದ್ದಂತೆ ಬಾಬಾರನ್ನು ಕಂಡಕೂಡಲೇ, ಯಾವ ಮಾತುಗಳೂ, ಆಶ್ವಾಸನೆಗಳೂ ಇಲ್ಲದೆ, ಕಾಕಾಜೀಯ ಮನಸ್ಸಿನ ಆಂದೋಳನವೆಲ್ಲಾ ಕಳೆದು, ಆತ ಶಾಂತಿ ಸಮಾಧಾನಗಳನ್ನು ಅನುಭವಿಸಿದರು. "ಇದೆಂತಹ ಅದ್ಭುತ ಶಕ್ತಿ! ಅವರೊಡನೆ ಮಾತನಾಡಲೂ ಇಲ್ಲ. ಪ್ರಶ್ನೋತ್ತರಗಳೇನೂ ಇಲ್ಲ. ಆಶೀರ್ವಾದಗಳು, ಆಶ್ವಾಸನೆಗಳು ಯಾವುವೂ ಇಲ್ಲ. ಕೇವಲ ದರ್ಶನ ಮಾತ್ರದಿಂದಲೇ ಎಲ್ಲವೂ ಶಾಂತವಾಯಿತು. ಮನಸ್ಸು ಆನಂದದಿಂದ ತುಂಬಿದೆ. ಇದೇ ದರ್ಶನ ಮಾಹಾತ್ಮ್ಯೆ!" ಎಂದು ತಿಳಿದ ಕಾಕಾಜೀ, ಬಾಬಾರ ಪಾದಗಳಲ್ಲಿ ದೃಷ್ಟಿಯನ್ನು ನಿಲ್ಲಿಸಿ, ಬಾಬಾರಿಗೆ ಸಂಪೂರ್ಣ ಶರಣಾದರು. ಹನ್ನೆರಡು ದಿನಗಳ ಕಾಲ ಶಿರಡಿಯಲ್ಲಿ ಬಾಬಾರ ಸನ್ನಿಧಿಯಲ್ಲಿ ಕಳೆದು, ಆನಂದಾಮೃತಪಾನಮತ್ತರಾಗಿ, ಬಾಬಾರ ಅನುಮತಿ ಪಡೆದು ವಣಿಗೆ ಹಿಂತಿರುಗಿದರು.

ಕುಶಾಲಚಂದರ ಕಥೆ

ಬೆಳಗಿನ ಜಾವದಲ್ಲಿ ಆಗುವ ಕನಸುಗಳು ನಿಜವಾಗುತ್ತವೆ ಎಂಬುದೊಂದು ನಂಬಿಕೆ. ಆದರೆ ಬಾಬಾರ ಕನಸುಗಳು ದೇಶಕಾಲಗಳಿಗೆ ಪರಿಮಿತವಾಗಿರಲಿಲ್ಲ. ಒಂದು ಮಧ್ಯಾಹ್ನ, ಬಾಬಾ ಕಾಕಾಸಾಹೇಬ ದೀಕ್ಷಿತರನ್ನು ಕರೆದು, "ಟಾಂಗಾ ತೆಗೆದುಕೊಂಡು ರಾಹತಾಗೆ ಹೋಗಿ ಕುಶಾಲಚಂದರನ್ನು ಕರೆದುಕೊಂಡು ಬಾ. ಅವರನ್ನು ನೋಡಿ ಬಹಳ ದಿನಗಳಾಗಿವೆ" ಎಂದರು. ಅದರಂತೆ ಕಾಕಾ ಸಾಹೇಬ್ ದೀಕ್ಷಿತರು ರಾಹತಾಗೆ ಟಾಂಗಾದಲ್ಲಿ ಹೋದರು. ಕುಶಾಲಚಂದರನ್ನು ಕಂಡು ಅವರಿಗೆ ಬಾಬಾ ಸಂದೇಶವನ್ನು ಹೇಳಿದರು. ಅದನ್ನು ಕೇಳಿದ ಕುಶಾಲಚಂದರಿಗೆ ಬಹಳ ಆಶ್ಚರ್ಯವಾಯಿತು. ದೀಕ್ಷಿತರು ಬರುವುದಕ್ಕೆ ಸ್ವಲ್ಪ ಮುಂಚೆ ಕುಶಾಲಚಂದರು ಊಟ ಮುಗಿಸಿ ತನಿನಿದ್ದೆಯಲ್ಲಿದ್ದರು. ನಿದ್ದೆಯಲ್ಲಿ ಬಾಬಾ ಕಾಣಿಸಿಕೊಂಡು, "ಬಹಳ ದಿನಗಳಾಗಿವೆ ನಿನ್ನನ್ನು ನೋಡಿ. ಶಿರಡಿಗೆ ಬಾ." ಎಂದರು. ಅವರ ಆದೇಶದಂತೆ ಹೊರಡಲು ಸಿದ್ಧರಾದಾಗ, ತಮ್ಮ ಕುದುರೆ ಇಲ್ಲದಿದ್ದುದು ತಿಳಿಯಿತು. ತಮ್ಮ ಮಗನನ್ನು ಶಿರಡಿಗೆ ಹೋಗಿ ಬಾಬಾರಿಗೆ ಸದ್ಯದಲ್ಲೇ ಬಂದು ಕಾಣುತ್ತೇನೆ ಎಂದು ತಿಳಿಸಿಬಾ, ಎಂದು ಕಳುಹಿಸಿದ್ದರು. ಈಗ ನೋಡಿದರೆ, ಅವರನ್ನು ಕರೆದುಕೊಂಡು ಹೋಗಲು ಬಾಬಾರೇ ಟಾಂಗಾ ಕಳುಹಿಸಿದ್ದಾರೆ. ಏನು ಆಶ್ಚರ್ಯ! ದೀಕ್ಷಿತ್ ಮತ್ತು ಕುಶಾಲಚಂದ್ ಇಬ್ಬರೂ ಕೂಡಿ ಶಿರಡಿಗೆ ಬಂದರು. ಶಿರಡಿ ಸೇರಿ ಕುಶಾಲಚಂದರು ಬಾಬಾರ ಪಾದಗಳಲ್ಲಿ ಶಿರವಿಟ್ಟು ನಮಸ್ಕಾರಮಾಡಿದರು. ಈ ಲೀಲೆಯಿಂದ ಅತೀವ ಆನಂದಗೊಂಡ ಕುಶಾಲಚಂದರಿಗೆ ಬಾಬಾರಲ್ಲಿ ಭಕ್ತಿ ಶ್ರದ್ಧೆಗಳು ಇನ್ನೂ ಧೃಢವಾಯಿತು.

ಪಂಜಾಬಿ ರಾಮಲಾಲರ ಕಥೆ

ರಾಮಲಾಲ್ ಬೊಂಬಾಯಿಯಲ್ಲಿ ನೆಲೆಸಿದ್ದ ಒಬ್ಬರು ಪಂಜಾಬಿ ಬ್ರಾಹ್ಮಣರು. ಅವರಿಗೆ ಒಂದು ಕನಸಾಯಿತು. ಅದರಲ್ಲಿ, ಮಹಾತ್ಮರೊಬ್ಬರು ಕಾಣಿಸಿಕೊಂಡು ಶಿರಡಿಗೆ ಬರುವಂತೆ ಹೇಳಿದರು. ಅವರಿಗೆ ಆ ಮಹಾತ್ಮ ಯಾರು, ಎಲ್ಲಿಂದ ಬಂದರು ಎಂಬುದು ಏನೂ ತಿಳಿಯದು. ಆ ಮಹಾತ್ಮನನ್ನು ಹೇಗೆ ಕಾಣುವುದು, ಎಂದು ಅವರು ಚಿಂತಾಕ್ರಾಂತರಾದರು. ಯಾರು ನಮ್ಮನ್ನು ಆಹ್ವಾನಿಸುತ್ತಾರೋ ಅವರೇ ನಮ್ಮ ಆಗುಹೋಗುಗಳನ್ನೂ ನೋಡಿಕೊಳ್ಳುತ್ತಾರೆ ಎಂಬುದು ನಂಬಿಕೆ. ಅದರಂತೆ ಅಂದು ಮಧ್ಯಾಹ್ನ ರಾಮಲಾಲರು ದಾರಿಯಲ್ಲಿ ನಡೆದು ಹೋಗುತ್ತಿರುವಾಗ, ಒಂದು ಅಂಗಡಿಯಲ್ಲಿ ಚಿತ್ರಪಟವೊಂದನ್ನು ನೋಡಿದರು. ಅದರಲ್ಲಿದ್ದವರ ಚಿತ್ರ ತಾನು ಕನಸಿನಲ್ಲಿ ಕಂಡಿದ್ದ ಮಹಾತ್ಮರ ತದ್ರೂಪು ಎನ್ನುವಂತಿತ್ತು. ಅಂಗಡಿಯವನನ್ನು ಅದು ಯಾರ ಚಿತ್ರ ಎಂದು ಕೇಳಿದಾಗ, ಅವನು ಅದು ಶಿರಡಿಯ ಸಾಯಿಬಾಬಾರದು ಎಂದು ಹೇಳಿ ಶಿರಡಿಗೆ ಹೋಗುವುದು ಹೇಗೆ ಎಂದೂ ತಿಳಿಸಿದನು. ರಾಮಲಾಲ್ ಶಿರಡಿಗೆ ಹೋಗಿ ಬಾಬಾರನ್ನು ಕಂಡು, ಅವರಿಂದ ಆಕರ್ಷಿತರಾಗಿ, ಬಾಬಾರ ಮಹಾಸಮಾಧಿಯಾಗುವವರೆಗೂ ಶಿರಡಿಯಲ್ಲೇ ನೆಲಸಿದರು.

ಈ ರೀತಿಯಲ್ಲಿ ಬಾಬಾ ತಮ್ಮ ಅನೇಕ ಅಪ್ರಕಟಿತ ಭಕ್ತರನ್ನು, ಸ್ವಪ್ನ ದರ್ಶನ ಕೊಟ್ಟು ತಮ್ಮಲ್ಲಿಗೆ ಬರಮಾಡಿಕೊಂಡು, ಅವರ ಪ್ರಾಪಂಚಿಕ, ಆಧ್ಯಾತ್ಮಿಕ ಆಸೆಗಳನ್ನು ಪೂರೈಸುತ್ತಿದ್ದರು. ಅಂತಹ ಕರುಣಾಸಾಗರ, ದಯಾಸಿಂಧು. ಭವಾರ್ಣವತಾರಿ, ಪ್ರೀತಿವಿಶ್ವಾಸಗಳ ಆಗರ, ಸಾಯಿಬಾಬಾರ ಚರಣಾರವಿಂದಗಳಲ್ಲಿ ನಮಸ್ಕರಿಸಿ ಪುನೀತರಾಗೋಣ.

ಇದರೊಂದಿಗೆ ವಣಿಯ ಕಾಕಾಜಿ ವೈದ್ಯ, ಕುಶಾಲಚಂದ್, ಬೊಂಬಾಯಿಯ ಪಂಜಾಬಿ ರಾಮಲಾಲ್ ಮತ್ತು ಇತರ ವಿಷಯಗಳನ್ನು ಕುರಿತು ಹೇಳುವ ಮುವ್ವತ್ತನೆಯ ಅಧ್ಯಾಯ ಮುಗಿಯಿತು. ಮುಂದಿನ ಅಧ್ಯಾಯದಲ್ಲಿ ಹೇಮಾಡ್ ಪಂತ್ ಸನ್ಯಾಸಿ ವಿಜಯಾನಂದರ ಅಂತ್ಯ, ಬಲರಾಮ್ ಮಾನ್ಕರ್, ನೂಲ್ಕರ್, ಮೇಘಾ, ಒಂದು ಹುಲಿ, ಇತ್ಯಾದಿ ವಿಷಯಗಳನ್ನು ಹೇಳುತ್ತಾರೆ

||ಶ್ರೀ ಸದ್ಗುರು ಸಾಯಿನಾಥಾರ್ಪಣಮಸ್ತು||ಶುಭಂ ಭವತು||
||ಓಂ ಶಾಂತಿಃ ಶಾಂತಿಃ ಶಾಂತಿಃ||


No comments:

Post a Comment