Tuesday, December 27, 2011

||ಇಪ್ಪತ್ತೆರಡನೆಯ ಅಧ್ಯಾಯ||


||ಶ್ರೀ ಸಾಯಿ ಸಚ್ಚರಿತ್ರೆ||
||ಇಪ್ಪತ್ತೆರಡನೆಯ ಅಧ್ಯಾಯ||
||ಅಪಮೃತ್ಯು ನಿವಾರಣೆ||
ಶ್ರೀ ಗಣೇಶಾಯ ನಮಃ ಶ್ರೀ ಸರಸ್ವತಯೇ ನಮಃ
ಶ್ರೀ ವೆಂಕಟೇಶಾಯ ನಮಃ ಶ್ರೀ ಸಾಯಿನಾಥಾಯ ನಮಃ
ಶ್ರೀ ಸದ್ಗುರುಭ್ಯೋನ್ನಮಃ

ಅಧ್ಯಾಯದಲ್ಲಿ ಹೇಮಾಡ್ ಪಂತ್, ಬಾಲಾಸಾಹೇಬ್ ಮಿರೀಕರ್, ಬಾಪು ಸಾಹೇಬ್ ಬೂಟಿ, ಅಮೀರ್ ಶಕ್ಕರ್ ಅವರನ್ನು ಬಾಬಾ ಹಾವಿನಿಂದ ಹೇಗೆ ರಕ್ಷಿಸಿದರು ಮತ್ತು ಇತರ ವಿಷಯಗಳನ್ನು ಹೇಳುತ್ತಾರೆ.

ಧ್ಯಾನ ಬಿಂದು

ಧ್ಯಾನ ಮಾಡಲು ಯಾವುದಾದರೊಂದು ವಸ್ತುವಿನ ಮೇಲೆ ಮನಸ್ಸಿಟ್ಟು, ಯೋಚನೆಗಳೆಲ್ಲವನ್ನೂ ಅದರಮೇಲೆ ಕೇಂದ್ರೀಕೃತ ಮಾಡಬೇಕು. ಆಕಾರವಿರುವ ವಸ್ತುವಾದರೆ ಹಾಗೆ ಮಾಡುವುದು ಸುಲಭ ಸಾಧ್ಯ. ಆದರೆ ಅವರ್ಣನೀಯ, ಸರ್ವವ್ಯಾಪಿಯಾದ ಪರಮಾತ್ಮನಾದ ಬಾಬಾರನ್ನು, ಹೇಗೆ ಧ್ಯಾನವಸ್ತು ಮಾಡಿಕೊಳ್ಳಲು ಸಾಧ್ಯ? ಪರಮಾತ್ಮನಿಗೆ ರೂಪವೆಲ್ಲಿಯದು? ವೇದಗಳೇ ಅವನನ್ನು ಪದಗುಚ್ಚಗಳಲ್ಲಿ ಕಟ್ಟಿ ಹಾಕಲಾರದೇ ಹೋದವು. ಸಾವಿರ ಹೆಡೆಯ ಆದಿಶೇಷನೂ ಅವನನ್ನು ಬಣ್ಣಿಸಲಾರದೇ ಹೋದ. ಇನ್ನು ನಾವು, ಹುಲು ಮಾನವರು, ನಮ್ಮ ಗತಿಯೇನು? ಆದರೆ ನಮಗೆ ಪರಮಾತ್ಮನ ವಿಶ್ವರೂಪದ ಬಗ್ಗೆ ಯೋಚನೆ ಯಾಕೆ? ರಾಮಾಯಣದಲ್ಲಿ, ರಾಮ ಸೀತೆಯ ಒಡವೆಗಳನ್ನು ತೋರಿಸಿ ಲಕ್ಷ್ಮಣನನ್ನು ಕೇಳಿದನಂತೆ, ಒಡವೆಗಳನ್ನು ನೀನು ಗುರುತಿಸಬಲ್ಲೆಯಾ? ಎಂದು. ಅದಕ್ಕೆ ಲಕ್ಷ್ಮಣ, "ದಿನವೂ ನಮಸ್ಕರಿಸಿಕೊಳ್ಳುತ್ತಿದ್ದ ಪಾದಗಳಲ್ಲಿ ಧರಿಸಿದ್ದ ಕಾಲಂದುಗೆಗಳನ್ನು ಮಾತ್ರ ಗುರುತಿಸಬಲ್ಲೆ. ಮಿಕ್ಕವು ನನಗೆ ಗೊತ್ತಿಲ್ಲ" ಎಂದು ಹೇಳಿದನಂತೆ.

ನಾವೂ ಕೂಡಾ ಪರಮಾತ್ಮನಾದ ಬಾಬಾರ ಪಾದಗಳಲ್ಲಿ ನಮ್ಮ ಮನಸ್ಸನ್ನು ಕೇಂದ್ರೀಕೃತ ಮಾಡೋಣ. ಅದರಲ್ಲೇ ನಮಗೆ ಮುಕ್ತಿ. ವಿಷಯದಲ್ಲಿ ಹೇಮಾಡ್ ಪಂತ್ ಒಂದು ಸಲಹೆ ಕೊಡುತ್ತಾರೆ. ಕೃಷ್ಣಪಕ್ಷದ ಚಂದ್ರ ಕುಗ್ಗಿ ಕುಗ್ಗಿ ಕೊನೆಗೆ ಅಮಾವಾಸ್ಯೆಯ ದಿನ ಪೂರ್ತಿಯಾಗಿ ಕಾಣದೇ ಹೋಗುತ್ತಾನೆ. ಮತ್ತೆ ಶುಕ್ಲಪಕ್ಷದ ಮೊದಲನೆಯ ದಿನ ಏನೂ ಕಾಣುವುದಿಲ್ಲ. ಎರಡನೆಯ ದಿನ ಚಂದ್ರ ಒಂದು ಸಣ್ಣ ಗೆರೆಯಂತೆ ತೋರುತ್ತಾನೆ. ಆದರೆ ಅದು ಬರಿಯ ಕಣ್ಣಿಗೆ ಕಾಣುವುದು ಕಷ್ಟ. ಅದನ್ನು ಮರದ ಎರಡು ಕೊಂಬೆಗಳ ಮಧ್ಯದ ಸಂದಿನಿಂದ ನೋಡಿದರೆ ಆಗ ಸಣ್ಣ ಗೆರೆಯಂತೆ ಕಾಣುತ್ತಾನೆ. ಉಪಮೆಯನ್ನೇ ತೆಗೆದುಕೊಂಡು ಆಸನದ ಮೇಲೆ ಕುಳಿತಿರುವ ಬಾಬಾರ ನಿಲುವನ್ನು ನೋಡಿ. ಅವರು ಬಲಗಾಲನ್ನು ಎಡಗಾಲ ಮಂಡಿಯಮೇಲಿಟ್ಟು ಕೂತಿದ್ದಾರೆ. ಅವರ ಎಡಕೈ ತೋರು ಬೆರಳು ಮಧ್ಯ ಬೆರಳುಗಳ ನಡುವೆ ಅವರ ಬಲಗಾಲಿನ ಹೆಬ್ಬೆಟ್ಟು ಕಾಣುತ್ತಿದೆ. ದೃಶ್ಯವನ್ನು ನೋಡಿದರೆ ಬಾಬಾ ನಮಗೆ ಏನನ್ನೋ ಹೇಳುತ್ತಿರುವಂತಿದೆ, "ನೀವು ನನ್ನನ್ನು ಕಾಣಬೇಕಾದರೆ ನಿಮ್ಮ ಅಹಂಕಾರವನ್ನು ತೊಡೆದು ಹಾಕಿ, ಮಿಕ್ಕೆಲ್ಲ ಬಾಹ್ಯ ಯೋಚನೆಗಳನ್ನೂ ಹೊರದೂಡಿ, ನನ್ನನ್ನೇ ಚಿಂತಿಸುತ್ತಾ, ನನ್ನ ನಾಮ ಸತತವಾಗಿ ಉಚ್ಚರಿಸುತ್ತಾ, ವಿನಯ ವಿಧೇಯತೆಗಳಿಂದ ನನ್ನ ಬಲಗಾಲ ಹೆಬ್ಬೆಟ್ಟಿನ ಮೇಲೆ ನಿಮ್ಮ ಧ್ಯಾನವೆಲ್ಲವನ್ನೂ ಕೇಂದ್ರೀಕೃತ ಮಾಡಿ. ಅದೇ ನಿಮ್ಮ ಧ್ಯಾನ ಬಿಂದುವಾಗಲಿ. ಆಗ ಮಾತ್ರ ನೀವು ಜ್ಯೋತಿಯನ್ನು ಕಾಣಬಹುದು. ಭಕ್ತಿಯನ್ನು ಸುಲಭವಾಗಿ ಕೈವಶ ಮಾಡಿಕೊಳ್ಳುವ ರೀತಿಯಿದೊಂದೇ!" ಹಾಗೆ ಬಾಬಾರ ಧ್ಯಾನಮಾಡುತ್ತಾ ಶಿರಡಿಗೆ ಹೋಗಿ ಅವರ ಚರಣಾರವಿಂದಗಳಲ್ಲಿ ನಮಸ್ಕರಿಸೋಣ.

ಬಾಬಾ ಅಲ್ಲಿ ನೆಲಸಿದ್ದರೆಂಬ ಒಂದು ಕಾರಣದಿಂದಲೇ ಶಿರಡಿ ಯಾತ್ರಾಸ್ಥಳವಾಯಿತು. ದೇಶದ ನಾನಾ ಮೂಲೆಗಳಿಂದ ಜನ ಶಿರಡಿಗೆ ಬಂದರು. ಯಾರು ಶಿರಡಿಗೆ ಬಂದರೂ, ಅವರು ಬಡವರೋ, ಶ್ರೀಮಂತರೋ, ಯಾವ ಬೇಧವೂ ಇಲ್ಲದೆ ಅವರೆಲ್ಲರಿಗೂ ತಪ್ಪದೇ ಒಂದು ಲಾಭವಾಯಿತು. ಅದು ಬಾಬಾರ ಅಪರಿಮಿತ ಪ್ರೀತಿ ವಿಶ್ವಾಸಗಳು. ಶಿರಡಿಗೆ ಬಂದ ಪ್ರತಿಯೊಬ್ಬರೂ ಬಾಬಾರ ಸರ್ವಜ್ಞತ್ವ, ಸರ್ವವ್ಯಾಪಕತ್ವ ಮತ್ತು ದಯೆ ಪ್ರೀತಿ ವಿಶ್ವಾಸಗಳ ಅನುಭವವನ್ನು ಪಡೆದರು. ಅಂತಹ ಅನುಭವವನ್ನು ಪಡೆದವರೇ ಪುಣ್ಯವಂತರು. ಪ್ರತಿಯೊಬ್ಬರಿಗೂ, ಅವರು ಅರ್ಥಮಾಡಿಕೊಂಡು ಅದನ್ನು ತಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳ ಬಹುದಾದ ರೀತಿಯಲ್ಲಿ ಬಾಬಾ ಅವರಿಗೆ ಅಧ್ಯಾತ್ಮದ ದಾರಿಯನ್ನು ತೋರಿಸುತ್ತಿದ್ದರು. ಕೆಲವರಿಗೆ ಮೌನವಾಗಿ, ಕೆಲವರಿಗೆ ನೀತಿ ಕಥೆಗಳ ಮೂಲಕ, ಮತ್ತೆ ಕೆಲವರಿಗೆ ನೇರವಾಗಿ ಹೇಳುತ್ತಿದ್ದರು. ಹಾಸ್ಯ ವಿನೋದಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಕೆಲವರಿಗೆ ಕೋಪತೋರಿಸಿ, ಕೆಲವರಿಗೆ ಮುಚ್ಚುಮರೆಯಿಲ್ಲದೆ, ತಾವು ಹೇಳಬೇಕಾದ್ದನ್ನು ಕ್ಲುಪ್ತವಾಗಿ ಜೀವನಪರ್ಯಂತ ಅತ್ಯಮೂಲ್ಯವೆಂದು ಕಾಪಿಡಬೇಕಾದ ಮುತ್ತಿನಂತಹ ಮಾತುಗಳಲ್ಲಿ ಹೇಳುತ್ತಿದ್ದರು. ಅವರ ಜೀವನದ ರೀತಿಯನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಿರಲಿಲ್ಲ. ಅದು ನಮ್ಮ ಮನಸ್ಸು, ಬುದ್ಧಿಗಳ ಅವಗಾಹನೆಗೆ ಅತೀತವಾಗಿತ್ತು. ಆದರೂ ಅವರ ಪ್ರೀತಿಯ ಮಾತುಗಳೇ ನಮ್ಮನ್ನು ಅವರ ಬಳಿಗೆ ಬಾರಿಬಾರಿಗೂ ಎಳೆಯುತ್ತವೆ. ಅದೊಂದು ತೀರದ ಬಾಯಾರಿಕೆ. ಅವರು ಭಕ್ತರಲ್ಲಿ ಪ್ರೀತಿ, ಆಸಕ್ತಿ, ರಕ್ಷಣಾ ಭಾವ ಇವುಗಳನ್ನು ಪ್ರತಿಪಾದಿಸುವ ಕೆಲವು ಕಥೆಗಳನ್ನು ನೋಡೋಣ.

ಬಾಲಾಸಾಹೇಬ್ ಮಿರೀಕರರ ಕಥೆ

ಸಿರಿದಾರ್ ಕಾಕಾಸಾಹೇಬ ಮಿರೀಕರರ ಮಗ ಬಾಲಾಸಾಹೇಬ್ ಮಿರೀಕರ್, ಕೋಪರಗಾಂವ್ ಮಾಮಲತದಾರರಾಗಿದ್ದರು. ಒಮ್ಮೆ ಅವರು ಕೆಲಸದಮೇಲೆ ಚಿತಳಿಗೆ ಹೋಗಬೇಕಾಯಿತು. ಹೋಗುತ್ತಾ, ದಾರಿಯಲ್ಲಿ ಶಿರಡಿಗೆ ಬಂದು ಮಸೀದಿಯಲ್ಲಿ ಬಾಬಾರ ದರ್ಶನ ಮಾಡಿದರು. ಅವರು ನಮಸ್ಕಾರ ಮಾಡಿ ಹೊರಡಲು ಅಪ್ಪಣೆ ಬೇಡಿದಾಗ ಬಾಬಾ, ಕಾರಣವೇ ಇಲ್ಲದೆ ಅವರನ್ನು, "ನಿನಗೆ ದ್ವಾರಕಾಮಾಯಿ ಗೊತ್ತೇ?" ಎಂದು ಕೇಳಿದರು. ಬಾಲಾ ಸಾಹೇಬರಿಗೆ ಬಾಬಾರ ಪ್ರಶ್ನೆಯ ಅರ್ಥವೇನೋ ತಿಳಿಯಲಿಲ್ಲ. ಅನೇಕ ಸಲ ಶಿರಡಿಗೆ ಬಂದಿದ್ದರಿಂದ ದ್ವಾರಕಾಮಾಯಿ ಎಂದರೆ ಅವರಿಗೆ ಗೊತ್ತು. ಆದರೆ ಇಂದು ಪ್ರಶ್ನೆಯ ಅಂತರಾರ್ಥವೇನೋ ತಿಳಿಯಲಿಲ್ಲ. ಬಾಬಾರೇ ಮತ್ತೆ ಮುಂದುವರೆದು, "ಇದೇ ನಮ್ಮ ದ್ವಾರಕಾಮಾಯಿ. ಅವಳು ತನ್ನ ಉಡಿಯಲ್ಲಿ ಕುಳಿತ ತನ್ನ ಮಕ್ಕಳ ಭಯ ಅಪಾಯಗಳನ್ನು ನಿವಾರಿಸುತ್ತಾಳೆ. ಆಕೆ ಬಹಳ ದಯಾಮಯಿ. ಭಕ್ತರು ಒಂದು ಸಲ ಆಕೆಯ ಉಡಿಯಲ್ಲಿ ಕುಳಿತರೆ ಸಾಕು. ಅವರ ಕಷ್ಟಗಳೆಲ್ಲಾ ತೀರಿದಂತೆಯೇ! ಒಂದು ಸಲ ಆಕೆಯ ಛಾಯೆಯ ಅಡಿಯಲ್ಲಿ ಬಂದವರು ಆನಂದ ಭರಿತರಾಗುತ್ತಾರೆ" ಎಂದರು. ನಂತರ, ಅವರ ತಲೆಯ ಮೇಲೆ ಕೈಯಿಟ್ಟು ನೇವರಿಸಿ ಉದಿ ಕೊಟ್ಟರು. ಬಾಲಾಸಾಹೇಬ್ ಇನ್ನೇನು ಹೊರಡಬೇಕು ಎನ್ನುವಾಗ, ಬಾಬಾ ಮತ್ತೆ ತಮ್ಮ ಕೈಯನ್ನು ಹಾವಿನಂತೆ ಆಡಿಸುತ್ತಾ, ಅವರನ್ನು ಕೇಳಿದರು, "ನಿನಗೆ ಲಂಬೂ ಬಾಬಾ ಗೊತ್ತೆ? ಅವನು ಬಹು ಭಯಂಕರನು. ಆದರೆ ದ್ವಾರಕಾಮಾಯಿ ರಕ್ಷಿಸುತ್ತಿರುವಾಗ ಅವನೇನು ಮಾಡಬಲ್ಲನು?" ಮಸೀದಿಯಲ್ಲಿದ್ದವರು ಯಾರಿಗೂ ಬಾಬಾ ಏನು ಹೇಳುತ್ತಿದ್ದಾರೆ ಎಂಬುದು ಅರ್ಥವಾಗಲಿಲ್ಲ. ಬಾಲಾಸಾಹೇಬರಿಗೂ ಅರ್ಥವಾಗಲಿಲ್ಲ. ಅದರಲ್ಲೂ, ಹಾವು ಬಾಲಾಸಾಹೇಬರನ್ನು ಸೇರಿಸಿ ಹೇಳಿದ ಮಾತಂತೂ, ಏನೇನೂ ಅರ್ಥವಾಗಲಿಲ್ಲ. ಇದೇನು ಎಂದು ಕೇಳುವ ಧೈರ್ಯ ಅಲ್ಲಿ ಯಾರಿಗೂ ಇರಲಿಲ್ಲ. ಬಾಲಾಸಾಹೇಬರು ಶ್ಯಾಮ ಇಬ್ಬರೂ ಕೂಡಿ ಮಸೀದಿಯಿಂದ ಹೊರಟರು. ಅವರಿಬ್ಬರೂ ಮಸೀದಿಯ ಬಾಗಿಲ ಹತ್ತಿರವಿದ್ದಾಗ, ಬಾಬಾ ಶ್ಯಾಮಾರನ್ನು ಕರೆದು ಬಾಲಾಸಾಹೇಬರ ಜೊತೆಯಲ್ಲಿ ಚಿತಳಿಗೆ ಹೋಗುವಂತೆ ಹೇಳಿದರು. ಶ್ಯಾಮಾ ಅದನ್ನು ಬಾಲಾಸಾಹೇಬರಿಗೆ ಹೇಳಿದರು. ಅದಕ್ಕೆ ಅವರು ಪ್ರಯಾಣ ಅಷ್ಟು ಸುಖಕರವಲ್ಲವೆಂದೂ, ಅದೂ ಅಲ್ಲದೆ ಶ್ಯಾಮಾರು ಬರಬೇಕಾದ ಅವಶ್ಯಕತೆ ಇಲ್ಲವೆಂದೂ ಹೇಳಿದರು. ಶ್ಯಾಮಾ ಹಿಂತಿರುಗಿ ಬಂದು ಬಾಬಾಗೆ ಮಾತನ್ನು ಹೇಳಿದಾಗ ಅವರು, "ಸರಿ. ಹೋಗಬೇಡ. ಏನಾಗಬೇಕೋ ಅದು ಆಗಿಯೇ ತೀರುತ್ತದೆ" ಎಂದರು. ಅಷ್ಟರಲ್ಲಿ ಬಾಲಾಸಾಹೇಬ್ ತಮ್ಮ ನಿಲುವನ್ನು ಬದಲಿಸಿ, ಅದು ಬಾಬಾರ ಆಜ್ಞೆ, ಅದನ್ನು ಪಾಲಿಸಬೇಕು ಎಂದುಕೊಂಡು, ಶ್ಯಾಮಾ ತಮ್ಮ ಜೊತೆಯಲ್ಲಿ ಬರಬಹುದೆಂದರು. ಶ್ಯಾಮಾ ಮತ್ತೆ ಬಾಬಾರ ಬಳಿಗೆ ಹೋಗಿ ಬಾಲಾಸಾಹೇಬ್ ತನ್ನನ್ನು ಜೊತೆಯಲ್ಲಿ ಬರಲು ಹೇಳಿದ್ದಾರೆ ಎಂದರು. ಬಾಬಾ ಅವರಿಗೆ ಅನುಮತಿ ಕೊಟ್ಟು ಹೋಗು ಎಂದರು.

ಇಬ್ಬರೂ ಟಾಂಗಾದಲ್ಲಿ ಕುಳಿತು, ಚಿತಳಿಗೆ ರಾತ್ರಿ ಸುಮಾರು ಒಂಭತ್ತು ಗಂಟೆಯ ವೇಳೆಗೆ ಸೇರಿದರು. ಕಛೇರಿಯವರು ಇನ್ನೂ ಯಾರೂ ಬಂದಿರಲಿಲ್ಲ. ಆದ್ದರಿಂದ ಇಬ್ಬರೂ ಅಲ್ಲಿ ಆಂಜನೇಯನ ದೇವಸ್ಥಾನದಲ್ಲಿ ತಂಗಿದರು. ಬಾಲಾಸಾಹೇಬರು ಕುಳಿತು ದಿನಪತ್ರಿಕೆಯನ್ನು ಓದುತ್ತಿದ್ದರು. ಅವರ ಹರಡಿಕೊಂಡಿದ್ದ ವಲ್ಲಿಯ ಮೇಲೆ, ಯಾರಿಗೂ ಕಾಣದಂತೆ ಬಂದು ಕುಳಿತಿದ್ದ ಹಾವೊಂದು ಬುಸುಗುಟ್ಟುತ್ತಾ ಆಡಲಾರಂಭಿಸಿತು. ಹತ್ತಿರದಲ್ಲಿಯೇ ಇದ್ದ ಅವರ ಆಳು ಲಾಂದ್ರ ತಂದು ನೋಡಿ ಹಾವು ಹಾವು ಎಂದು ಕೂಗಲಾರಂಭಿಸಿದ. ಅದನ್ನು ಕೇಳಿದ ಬಾಲಾಸಾಹೇಬ್ ಹೆದರಿ ನಡುಗುತ್ತಾ ಕುಳಿತರು. ಶ್ಯಾಮಾಗೂ ಏನು ಮಾಡಬೇಕೆಂದು ತೋರಲಿಲ್ಲ. ಆದರೂ ಹಾವು ತಾನಾಗಿಯೇ ಕೆಳಗಿಳಿಯುವವರೆಗೂ ಕಾಯುತ್ತಾ ಕುಳಿತರು. ಸ್ವಲ್ಪಹೊತ್ತಾದ ನಂತರ ಹಾವು ಕೆಳಗಿಳಿಯಿತು. ಕೂಡಲೇ ಅದನ್ನು ಹೊಡೆದು ಕೊಂದರು. ಹಾಗೆ ಬಾಬಾರ ಮುಂದಾಗಬಲ್ಲದ್ದನ್ನು ಕಾಣುವ ಶಕ್ತಿ, ಹಾಗೂ ಅವರ ಅನುಗ್ರಹ, ಆಗಬಹುದಾಗಿದ್ದ ಆಪತ್ತನ್ನು ನಿವಾರಿಸಿತು. ಬಾಬಾರಲ್ಲಿ ಬಾಲಾಸಾಹೇಬರ ಭಕ್ತಿ ವಿಶ್ವಾಸಗಳು ಇನ್ನೂ ವೃದ್ಧಿಯಾದವು.

ಬಾಪೂ ಸಾಹೇಬ್ ಬೂಟಿ

ಒಂದುಸಲ ಬಾಪೂ ಸಾಹೇಬ್ ಬೂಟಿ ಶಿರಡಿಯಲ್ಲಿದ್ದಾಗ, ಅವರ ಸ್ನೇಹಿತರು ನಾನಾ ಸಾಹೇಬ್ ಡೇಂಗ್ಲೆ ಕೂಡಾ ಅಲ್ಲಿದ್ದರು. ಡೇಂಗ್ಲೆ ಜ್ಯೋತಿಷ್ಯವನ್ನು ಚೆನ್ನಾಗಿ ಬಲ್ಲವರು. ಅವರು ಬೂಟಿಗೆ, " ದಿನ ಒಳ್ಳೆಯದಾಗಿಲ್ಲ. ಜ್ಯೋತಿಷ್ಯದ ಪ್ರಕಾರ ನಿನ್ನ ಪ್ರಾಣಕ್ಕೆ ಅಪಾಯವಿದೆ. ಸ್ವಲ್ಪ ಹುಶಾರಾಗಿ ಇರಬೇಕು" ಎಂದು ಹೇಳಿದರು. ಅದನ್ನು ಕೇಳಿದ ಬೂಟಿ ಮನಸ್ಸು ಖತಿಗೊಂಡಿತು. ಅಲ್ಲಿಂದ ಅವರಿಬ್ಬರೂ ಮಸೀದಿಗೆ ಹೋದರು. ಬಾಬಾ ಬೂಟಿಗೆ, " ನಾನಾ ಏನನ್ನುತ್ತಾನೆ? ಸಾವಿನ ಭವಿಷ್ಯ ಹೇಳಿದ್ದಾನೆ ಅಲ್ಲವೇ? ಧೈರ್ಯವಾಗಿ ಅವನಿಗೆ ಹೇಳು. ಮೃತ್ಯುವು ಹೇಗೆ ಬರುವುದೋ ನೋಡೋಣ" ಎಂದು ಹೇಳಿದರು. ಸಾಯಂಕಾಲ ಬೂಟಿ ಬಹಿರ್ದೇಶಕ್ಕೆ ಹೋದಾಗ, ಅಲ್ಲೊಂದು ಹಾವು ಹೆಡೆಯೆತ್ತಿ ಕುಳಿತಿತ್ತು. ಅವರ ಸೇವಕ ಹಾವನ್ನು ನೋಡಿ ಅದನ್ನು ಕೊಲ್ಲಲು ಕೈಗೆ ಕಲ್ಲೆತ್ತಿಕೊಂಡ. ಆದರೆ ಬೂಟಿ ಅವನನ್ನು ತಡೆದು, ಹೋಗಿ ಕೋಲೊಂದನ್ನು ತರಲು ಹೇಳಿದರು. ಸೇವಕ ಹೋಗಿ ಕೋಲು ತರುವುದರೊಳಗಾಗಿ ಹಾವು ಕಾಣೆಯಾಗದೇ ಹೋಯಿತು. ಬಾಬಾರ ಆಶ್ವಾಸನೆಯ ಮಾತುಗಳನ್ನು ಬೂಟಿ ನೆನಪಿಗೆ ತಂದುಕೊಂಡು, ಅಲ್ಲಿಂದಲೇ ಬಾಬಾರಿಗೆ ತಲೆಬಾಗಿಸಿದರು.

ಅಮೀರ್ ಶಕ್ಕರ್ ಕಥೆ

ಬಾಬಾ ಭಕ್ತ, ಕೋಪರಗಾಂವ್ ಕೊರಾಲಾ ಹಳ್ಳಿಗೆ ಸೇರಿದ ಅಮೀರ್ ಶಕ್ಕರ್, ಕಟುಕರ ಜಾತಿಗೆ ಸೇರಿದವರು. ದೂರದ ಬಾಂದ್ರಾಗೆ ಹೋಗಿ ಅಲ್ಲಿ ನೆಲೆಯಾಗಿ ಕಮೀಷನ್ ಏಜೆಂಟ್ ಆಗಿದ್ದರು. ಅವರು ಸಂಧಿವಾತ ರೋಗದಿಂದ ಬಹಳ ಒದ್ದಾಡುತ್ತಿದ್ದರು. ಎಲ್ಲ ಚಿಕಿತ್ಸೆಗಳೂ ಅನುಪಯಯುಕ್ತವಾದಾಗ ದೇವರೇ ನನ್ನ ವೈದ್ಯ ಎಂದು ನಿರ್ಧರಿಸಿ ತನ್ನ ವ್ಯವಹಾರವನ್ನೆಲ್ಲಾ ಬದಿಗಿಟ್ಟು ಶಿರಡಿಗೆ ಹೋದರು. ಬಾಬಾರ ಚರಣಗಳಲ್ಲಿ ಬಿದ್ದು ತನ್ನನ್ನು ನೋವಿನಿಂದ ಬಿಡಿಸಬೇಕೆಂದು ಬೇಡಿಕೊಂಡರು. ಬಾಬಾ ಚಿಕಿತ್ಸೆಗಳು ಅತಿ ವಿಚಿತ್ರ. ಅಮೀರ್ ಶಕ್ಕರರನ್ನು ಚಾವಡಿಯಲ್ಲಿ ತಂಗುವಂತೆ ಹೇಳಿದರು.

ಚಾವಡಿ ಬಹಳ ಹಳೆಯ ಕಟ್ಟಡ. ಅದರ ದುರಸ್ತಿ ಮಾಡಲು ಯಾವ ಪ್ರಯತ್ನವೂ ನಡೆದಿರಲಿಲ್ಲ. ಅಲ್ಲಿ ಹಲ್ಲಿಗಳು, ಹಾವುಗಳು, ಚೇಳುಗಳು ವಾಸವಾಗಿದ್ದವು. ನೆಲವೆಲ್ಲಾ ಅಡ್ಡಾದಿಡ್ಡಿಯಾಗಿಹೋಗಿತ್ತು. ಮಳೆಗಾಲದಲ್ಲಿ ಅಲ್ಲೆಲ್ಲಾ ನೀರು ತುಂಬಿರುತ್ತಿತ್ತು. ನೆಲ ಯಾವಾಗಲೂ ಒದ್ದೆಯಾಗಿರುತ್ತಿತ್ತು. ಅನಾರೋಗ್ಯದಿಂದಿರುವವನಿರಲಿ, ಆರೋಗ್ಯವಾಗಿದ್ದವನೂ ವಾಸಮಾಡಲು ಯೋಗ್ಯವಾಗಿರಲಿಲ್ಲ. ಸಂಧಿವಾತದಿಂದ ನರಳುತ್ತಿರುವವರಿಗೆ ಜಾಗ ಸುತರಾಂ ಒಳ್ಳೆಯದಲ್ಲ. ಆದರೆ ಬಾಬಾರ ಮಾತುಗಳು ಶಾಸನವಿದ್ದಂತೆ. ಪಾಲಿಸಲೇಬೇಕು. ಅದಕ್ಕಾಗಿ ಅಮೀರ್ ಎದುರು ಮಾತಿಲ್ಲದೆ, ಚಾವಡಿಯಲ್ಲಿ ವಾಸ ಮಾಡಲಾರಂಭಿಸಿದರು. ಅದು ಅವರ ಆರೋಗ್ಯದ ದೃಷ್ಟಿಯಿಂದ ಸರಿಯಾದ ವಾಸಸ್ಥಾನವಲ್ಲದಿದ್ದರೂ, ಅಲ್ಲೊಂದು ದೊಡ್ಡ ಲಾಭವಿತ್ತು. ಪ್ರತಿದಿನ ಬೆಳಗ್ಗೆ ಸಾಯಂಕಾಲ, ಬಾಬಾ ಚಾವಡಿ ಮುಂದಿನಿಂದ ಹೋಗಿ ಬರುತ್ತಿದ್ದರು. ಅದರ ಜೊತೆಗೆ ಅವರು ದಿನ ಬಿಟ್ಟು ದಿನ ಚಾವಡಿಯಲ್ಲಿ ಮಲಗುತ್ತಿದ್ದರು. ಇದರಿಂದ ಅಮೀರ್ ಶಕ್ಕರರಿಗೆ ಯಾವಾಗಲೂ ಬಾಬಾರ ಸಹವಾಸ ಲಭ್ಯವಾಗುತ್ತಿತ್ತು. ಹಾಗೆ ಶಕ್ಕರ್ ಚಾವಡಿಯಲ್ಲಿ ಒಂಭತ್ತು ತಿಂಗಳು ವಾಸ ಮಾಡಿದರು. ಬರುಬರುತ್ತಾ ಅವರಿಗೆ ಜಾಗ ಅಸಹ್ಯವಾಗತೊಡಗಿತು. ಅಲ್ಲಿಂದ ಹೊರಟು ಹೋಗಬೇಕೆನ್ನುವ ಯೋಚನೆ ಬಲವಾಯಿತು.

ಒಂದು ರಾತ್ರಿ ಎಲ್ಲರೂ ಮಲಗಿದ್ದಾಗ, ಯಾರಿಗೂ ಹೇಳದೆ, ಚಾವಡಿ ಬಿಟ್ಟು ನೇರವಾಗಿ ಕೋಪರಗಾಂವ್ಗೆ ಹೋಗಿ ಅಲ್ಲಿ ಧರ್ಮಶಾಲೆಯಲ್ಲಿ ಇಳಿದರು. ಅಲ್ಲಿ ಬಿದ್ದುಕೊಂಡಿದ್ದ ಮುದಿ ಫಕೀರನೊಬ್ಬ ಅವರನ್ನು ನೀರು ಕೇಳಿದ. ಶಕ್ಕರ್ ನೀರು ತಂದು ಕುಡಿಸಿದರು. ನೀರು ಕುಡಿದ ತಕ್ಷಣವೇ ಅವನು ಸತ್ತು ಬಿದ್ದ. ಶಕ್ಕರ್ಗೆ ಏನು ಮಾಡಬೇಕೋ ತೋಚದೆ ಹೋಯಿತು. ಅಧಿಕಾರಿಗಳಿಗೆ ತಿಳಿಸಿದರೆ, ಹೊತ್ತಿನಲ್ಲಿ ಅವರೊಬ್ಬರೇ ಅಲ್ಲಿದ್ದುದರಿಂದ ಅವರೇ ಕೊಲೆಗಾರರೆಂದು ಆರೋಪ ಹೊರಿಸುತ್ತಾರೆ. ಅವರಿಗೆ ಬಹಳ ಗಾಬರಿಯಾಯಿತು. ಜಾಗದಿಂದ ಓಡಿಹೋಗುವುದೊಂದನ್ನು ಬಿಟ್ಟು ಬೇರೆ ಯಾವ ದಾರಿಯೂ ಕಾಣಲಿಲ್ಲ. ಬಾಬಾರ ಅನುಮತಿಯಿಲ್ಲದೆ ಶಿರಡಿ ಬಿಟ್ಟು ಬಂದಿದ್ದಕ್ಕೆ ಪಶ್ಚಾತ್ತಾಪವಾಯಿತು. ಮತ್ತೆ ಶಿರಡಿಯ ದಾರಿ ಹಿಡಿದು, ಬೆಳಗಿನ ಜಾವದ ಹೊತ್ತಿಗೆ ಯಾರಿಗೂ ತಿಳಿಯದಂತೆ, ಚಾವಡಿ ಸೇರಿಕೊಂಡರು. ಆತನ ಮನಸ್ಸೂ ಶಾಂತವಾಯಿತು. ಅದಾದಮೇಲೆ ಬಾಬಾ ಹೇಳಿದಂತೆ ಚಾಚೂ ತಪ್ಪದೆ ನಡೆದುಕೊಳ್ಳುತ್ತಾ ಸ್ವಲ್ಪಕಾಲದಲ್ಲೇ ಆರೋಗ್ಯವಂತರಾದರು.

ಒಂದು ರಾತ್ರಿ ಬಾಬಾ ಚಾವಡಿಯಲ್ಲಿ ಮಲಗಿದ್ದಾಗ ಇದ್ದಕ್ಕಿದ್ದಂತೆ ಎದ್ದು ಕೂಗಾಡತೊಡಗಿದರು, " ಅಬ್ದುಲ್, ತಕ್ಷಣವೇ ಬಾ. ಯಾವುದೋ ಪಿಶಾಚಿ ನನ್ನ ಹಾಸಿಗೆಗೆ ಅಪ್ಪಳಿಸುತ್ತಿದೆ." ಅಬ್ದುಲ್ ಒಂದು ಲಾಂದ್ರಾ ತಂದು, ಅಲ್ಲೆಲ್ಲಾ ಹುಡುಕಿದರೂ, ಏನೂ ಕಾಣಲಿಲ್ಲ. ಬಾಬಾರಿಗೆ ಸಮಾಧಾನವಾಗದೆ, ಮತ್ತೊಮ್ಮೆ ಸರಿಯಾಗಿ ಹುಡುಕುವಂತೆ ಹೇಳಿದರು. ತಮ್ಮ ಸಟ್ಕಾದಿಂದ ನೆಲದ ಮೇಲೆ ಹೊಡೆಯಲು ಆರಂಭಿಸಿದರು. ಸಾಕಷ್ಟು ಕಾಲ ಬಾಬಾರ ಸಹವಾಸದಲ್ಲಿದ್ದುದರಿಂದ ಶಕ್ಕರ್ ಅವರಿಗೆ ಬಾಬಾರ ರೀತಿ ನೀತಿಗಳು ಚೆನ್ನಾಗಿ ಅರ್ಥವಾಗುತ್ತಿತ್ತು. ಅವರು ಬಾಬಾ ಹಾವನ್ನು ನೋಡಿರಬಹುದು ಎಂದುಕೊಂಡರು. ಅಷ್ಟರಲ್ಲಿ ಬಾಬಾ ಅಬ್ದುಲ್ಗೆ ಶಕ್ಕರರ ಹಾಸಿಗೆ ಹತ್ತಿರ ನೋಡಲು ಹೇಳಿದರು. ಲಾಂದ್ರಾ ಹಿಡಿದು ನೋಡಿದರೆ, ಅಲ್ಲಿ ಹಾವೊಂದು ಹೆಡೆ ಬಿಚ್ಚಿ ತಲೆಯಾಡಿಸುತ್ತಾ ಕುಳಿತಿತ್ತು. ತಕ್ಷಣವೇ ಅದನ್ನು ಹೊಡೆದು ಕೊಲ್ಲಲಾಯಿತು. ತಮ್ಮ ಭಕ್ತರಿಗೋಸ್ಕರ ಸದಾ ಜಾಗರೂಕರಾಗಿರುವ ಬಾಬಾ ಅಮೀರ್ ಶಕ್ಕರರನ್ನು ಹೀಗೆ ಆಪತ್ತಿನಿಂದ ಕಾಪಾಡಿದರು.

ಹೇಮಾಡ್ ಪಂತ್ ಹೇಳಿದ ಕಥೆ

ಬಾಬಾರು ಹೇಳಿದ್ದಂತೆ ಕಾಕಾಸಾಹೇಬ್ ದೀಕ್ಷಿತರು ದಿನವೂ ಏಕನಾಥ ಭಾಗವತ, ಭಾವಾರ್ಥ ರಾಮಾಯಣಗಳನ್ನು ಓದುತ್ತಿದ್ದರು. ಅವರೆಷ್ಟು ಸುಶ್ರಾವ್ಯವಾಗಿ ಓದುತ್ತಿದ್ದರೆಂದರೆ ಕೇಳುತ್ತಿದ್ದ ಶ್ರೋತೃಗಳು ಮೈಮರೆತು ಅದರಲ್ಲೇ ಮಗ್ನರಾಗಿಹೋಗುತ್ತಿದ್ದರು. ಹೇಮಾಡ್ ಪಂತ್ ಕೂಡಾ ಓದುವಿಕೆಗಳಿಗೆ ಹೋಗುತ್ತಿದ್ದರು. ಒಂದು ದಿನ ಕಾಕಾಸಾಹೇಬ್ ರಾಮಾಯಣವನ್ನು ಓದುತ್ತಿದ್ದರು. ಹನುಮಂತ ತನ್ನ ತಾಯಿಯ ಆದೇಶದ ಮೇರೆಗೆ ರಾಮಲಕ್ಷ್ಮಣರನ್ನು ನೋಡಲು ಹೋಗಿದ್ದ ಘಟ್ಟವದು. ಆಂಜನೇಯ ರಾಮನನ್ನು ಹೇಗೆ ಪರೀಕ್ಷೆಮಾಡಿದ, ಆದರೆ ರಾಮ ಅವನು ಹೇಳದೆಯೆ ಆಂಜನೇಯನ ಗುರುತು ಹೇಗೆ ಹಿಡಿದ ಎಂಬ ಕಥೆಯನ್ನು ಓದುತ್ತಿದ್ದರು. ಪ್ರತಿಯೊಬ್ಬ ಕೇಳುಗನೂ, ಕಥೆಯಲ್ಲೇ ಲೀನರಾಗಿ ಹೋಗಿದ್ದರು. ನಿಶ್ಶಬ್ದ ತುಂಬಿತ್ತು.

ಎಲ್ಲಿಂದ ಹೇಗೆ ಬಂತೋ ತಿಳಿಯದ ಹಾಗೆ ಬಂದು, ಚೇಳೊಂದು ಹೇಮಾಡ್ ಪಂತರ ಬಲಭುಜದ ಮೇಲೆ, ಅವರ ವಲ್ಲಿಯ ಮೇಲೆ ಕುಳಿತಿತ್ತು. ಯಾರಿಗೂ ಅದರ ಪರಿವೆಯೇ ಇರಲಿಲ್ಲ. ಚೇಳು ತಾನೂ ಕಥೆಯನ್ನು ಕೇಳುತ್ತಿದೆಯೋ ಎಂಬಂತೆ ನಿಶ್ಚಲವಾಗಿ ಕುಳಿತಿತ್ತು. ದೇವರು ತನ್ನ ಕಥೆಗಳಲ್ಲಿ ಲೀನವಾದವರನ್ನು ತಾನೇ ರಕ್ಷಿಸುತ್ತಾನೆ ಎಂಬುವ ಹೇಳಿಕೆಯೊಂದಿದೆ. ಅದರಂತೆ ಹೇಮಾಡ್ ಪಂತ್ ಅಕಾರಣವಾಗಿ ತಮ್ಮ ಬಲಕ್ಕೆ ತಿರುಗಿ ನೋಡಿದರು. ಅಲ್ಲಿ ದೊಡ್ಡ ಚೇಳೊಂದು ತಮ್ಮ ಭುಜದ ಮೇಲೆ ಕುಳಿತಿರುವುದು ಕಾಣಿಸಿತು. ಬೇರೆಯವರಿಗೆ ಯಾವ ರೀತಿಯ ಅಡಚಣೆಯೂ ಆಗದಂತೆ ಮೆಲ್ಲಗೆ ತಮ್ಮ ವಲ್ಲಿಯ ಎರಡೂ ಅಂಚುಗಳನ್ನು ಸೇರಿಸಿ ಚೇಳನ್ನು ಅದರ ಒಳಗೆ ಮುಚ್ಚಿಹಿಡಿದು ಆಚೆ ಬಿಸಾಡಿ ಬಂದರು.

ಮತ್ತೊಂದು ಸಂದರ್ಭದಲ್ಲಿ ಕಾಕಾಸಾಹೇಬರ ವಾಡಾ ಮಹಡಿಯ ಕೊಠಡಿಯಲ್ಲಿ ಹಲವಾರು ಜನ ಕುಳಿತು ಮಾತನಾಡುತ್ತಿದ್ದರು. ಅವರಲ್ಲಿ ಹೇಮಾಡ್ ಪಂತ್ ಕೂಡಾ ಇದ್ದರು. ಗೋಧೂಳಿಯ ಸಮಯ. ಕಿಟಕಿಯ ಮೂಲಕ ಏನೋ ಒಂದು ಹೊಳೆಯುತ್ತಿರುವುದು ಒಳಕ್ಕೆ ಬಂದು ಕುಳಿತುಕೊಂಡಂತೆ ಕಾಣಿಸಿತು. ದೀಪ ತಂದು ನೋಡಿದರೆ, ಅದೊಂದು ಸರ್ಪ. ಸುತ್ತಿ ಕುಳಿತು ಹೆಡೆಯಾಡಿಸುತ್ತಿದೆ. ಹಾವು ಕುಳಿತಿದ್ದ ಜಾಗ, ಅದರ ಹತ್ತಿರ ಹೋಗಲು ಅಷ್ಟು ಸುಲಭವಾಗಿರಲಿಲ್ಲ. ಅದು ಈಚೆ ಬಂದಾಗ ಅದನ್ನು ಕೊಲ್ಲಲು ಕಾಯುತ್ತಾ ಕುಳಿತರು. ಬಹುಶಃ ಶಬ್ದ ಕೇಳಿಯೋ ಏನೋ, ಇದ್ದಕಿದ್ದಹಾಗೇ ಅದು ತಾನು ಬಂದ ದಾರಿಯಲ್ಲೇ ಆಚೆಗೆ ಹೊರಟು ಹೋಯಿತು. ಎಲ್ಲರೂ ಸಮಾಧಾನದ ನಿಟ್ಟುಸಿರು ಬಿಟ್ಟರು. ಮುಕ್ತಾರಾಮ್ ಎನ್ನುವ ಭಕ್ತನೊಬ್ಬ, “ಅದು ಹಾಗೆ ಹೊರಟು ಹೋದುದೇ ಒಳ್ಳೆಯದಾಯಿತು. ಇಲ್ಲದಿದ್ದರೆ ಅದು ಸಾಯುತ್ತಿತ್ತುಎಂದು ಹೇಳಿದ. ಹೇಮಾಡ್ ಪಂತ್ ಅದಕ್ಕೆ ಒಪ್ಪಿಕೊಳ್ಳದೇ, ಅದನ್ನು ಕೊಲ್ಲುವುದೇ ಸಮಂಜಸ ಎಂದರು. ಹಾಗೇ ವಾದ ಸರಿರಾತ್ರಿಯವರೆಗೂ ನಡೆಯಿತು. ಯಾವುದೂ ಇತ್ಯರ್ಥವಾಗಲಿಲ್ಲ.

ಬಾಬಾರ ಅಭಿಪ್ರಾಯ

ಮರುದಿನ ಅವರು ಬಾಬಾರನ್ನು ಕಾಣಲು ಹೋದಾಗ ಯಾವುದು ಸರಿ ಎಂದು ಬಾಬಾರನ್ನು ಕೇಳಿದರು. ಅದಕ್ಕೆ ಬಾಬಾ, "ದೇವರು ಎಲ್ಲ ಪ್ರಾಣಿಗಳಲ್ಲಿಯೂ ಇದ್ದಾನೆ. ಪ್ರಪಂಚದ ಸೂತ್ರಧಾರ ಅವನು. ಅವನ ಅಪ್ಪಣೆ ಇಲ್ಲದೆ ಯಾರೂ ಯಾರಿಗೂ ತೊಂದರೆ ಕೊಡಲು ಸ್ವತಂತ್ರರಲ್ಲ. ಎಲ್ಲ ಪ್ರಾಣಿಗಳಲ್ಲೂ ದಯೆ, ಪ್ರೀತಿ ಇರಬೇಕು. ಜಗಳಗಳು, ಕೊಲ್ಲುವುದು ಇದನ್ನೆಲ್ಲಾ ಬಿಡಿ. ದೇವರೇ ಸರ್ವರಿಗೂ ರಕ್ಷಕ" ಎಂದು ಹೇಳಿದರು.

ಇದರೊಂದಿಗೆ ಬಾಲಾಸಾಹೇಬ್ ಮಿರೀಕರ್, ಬಾಪು ಸಾಹೇಬ್ ಬೂಟಿ, ಅಮೀರ್ ಶಕ್ಕರ್ ಅವರನ್ನು ಬಾಬಾ ಹಾವಿನಿಂದ ಹೇಗೆ ರಕ್ಷಿಸಿದರು ಮತ್ತು ಇತರ ವಿಷಯಗಳನ್ನು ಕುರಿತು ಹೇಳುವ ಇಪ್ಪತ್ತೆರಡನೆಯ ಅಧ್ಯಾಯ ಮುಗಿಯಿತು. ಮುಂದಿನ ಅಧ್ಯಾಯದಲ್ಲಿ ಹೇಮಾಡ್ ಪಂತ್ ಯೋಗ ಮತ್ತು ಈರುಳ್ಳಿ, ಶ್ಯಾಮಾರನ್ನು ರಕ್ಷಿಸಿದ್ದು ಇತ್ಯಾದಿ ವಿಷಯಗಳನ್ನು ಹೇಳುತ್ತಾರೆ

||ಶ್ರೀ ಸದ್ಗುರು ಸಾಯಿನಾಥಾರ್ಪಣಮಸ್ತು||ಶುಭಂ ಭವತು||
||ಓಂ ಶಾಂತಿಃ ಶಾಂತಿಃ ಶಾಂತಿಃ||


Monday, December 26, 2011

||ಇಪ್ಪತ್ತೊಂದನೆಯ ಅಧ್ಯಾಯ||


||ಶ್ರೀ ಸಾಯಿ ಸಚ್ಚರಿತ್ರೆ||
||ಇಪ್ಪತ್ತೊಂದನೆಯ ಅಧ್ಯಾಯ||
||ಅನುಗ್ರಹ ಪ್ರಕರಣ||
ಶ್ರೀ ಗಣೇಶಾಯ ನಮಃ ಶ್ರೀ ಸರಸ್ವತಯೇ ನಮಃ
ಶ್ರೀ ವೆಂಕಟೇಶಾಯ ನಮಃ ಶ್ರೀ ಸಾಯಿನಾಥಾಯ ನಮಃ
ಶ್ರೀ ಸದ್ಗುರುಭ್ಯೋನ್ನಮಃ

ಅಧ್ಯಾಯದಲ್ಲಿ ಹೇಮಾಡ್ ಪಂತ್, ವಿ. ಹೆಚ್. ಥಾಕೂರ್, ಅನಂತರಾವ್ ಪಾಟಣಕರ್, ಪಂಡರಪುರದ ವಕೀಲ ಮತ್ತು ಇತರ ವಿಷಯಗಳನ್ನು ಹೇಳುತ್ತಾರೆ.

ಸಂತರ ಸಂಸ್ಥೆ

ಸಂತರನ್ನು ಹುಡುಕುವುದು, ಅವರನ್ನು ಕಾಣುವುದು, ಅವರ ಉಪದೇಶಗಳಿಂದ ಪ್ರಯೋಜನ ಪಡೆಯುವುದು, ಎಲ್ಲರಿಗೂ ಸಾಧ್ಯವಾಗುವ ವಿಷಯವಲ್ಲ. ಅಂತಹ ಅವಕಾಶ ದೊರಕಬೇಕಾದರೆ, ಹಿಂದಿನ ಜನ್ಮಗಳಲ್ಲಿ ಮಾಡಿದ್ದ ಪುಣ್ಯಕರ್ಮಗಳ ಫಲದಿಂದಲೇ ಆಗಬೇಕು. ಸಂತರನ್ನು ಕಾಣುವ ಅಂತಹ ಸದವಕಾಶ ದೊರೆತರೂ, ಅನುಕೂಲ ಸಮಯ ಬರದೆ, ಅವರ ಚರಣತಲದಲ್ಲಿ ಕೂತು ಸೇವೆ ಮಾಡುವ ಅವಕಾಶ ಒದಗುವುದಿಲ್ಲ. ಹೇಮಾಡ್ ಪಂತ್ ತಮ್ಮ ಅನುಭವವನ್ನೇ ಇಲ್ಲಿ ಹೇಳಿದ್ದಾರೆ. ಅವರು ಬಾಂದ್ರಾದಲ್ಲಿ ರೆಸಿಡೆಂಟ್ ಮಾಜಿಸ್ಟ್ರೇಟ್ ಆಗಿದ್ದಾಗ, ಪೀರ್ ಮೊಹಮ್ಮದ್ ಮೌಲಾನ ಎಂಬ ಮಹಮ್ಮದೀಯ ಸಂತರೊಬ್ಬರು ಅಲ್ಲಿದ್ದರು. ಹಿಂದೂಗಳು, ಮುಸ್ಲಿಮರು, ಪಾರ್ಸಿಗಳು, ಎಲ್ಲಾ ಮತದವರೂ ಅವರ ದರ್ಶನಕ್ಕೆ ಹೋಗಿ ಆಶೀರ್ವಾದ ಪಡೆಯುತ್ತಿದ್ದರು. ಸಂತರಿಗೆ ಈನೂಸ್ ಎಂಬುವ ಮುಜಾವರ್ (ಪೂಜಾರಿ) ಒಬ್ಬರಿದ್ದರು. ಅವರು ಹೇಮಾಡ್ ಪಂತರ ಪರಿಚಯಸ್ಥರು. ಈನೂಸ್ ಹೇಮಾಡ್ ಪಂತರನ್ನು ಒಮ್ಮೆ ಹೋಗಿ, ಸಂತರನ್ನು ಕಂಡು ಬರುವಂತೆ, ಅನೇಕ ಸಲ ಒತ್ತಾಯಪಡಿಸಿದ್ದರು. ಆದರೂ ಅನುಕೂಲ ಸಮಯ ಬರದೇ ಹೇಮಾಡ್ ಪಂತರು ಸಂತರನ್ನು ನೋಡಲು ಹೋಗಬೇಕೆಂದು ಅನೇಕ ಸಲ ಪ್ರಯತ್ನಮಾಡಿದರೂ ಅದು ಸಾಧ್ಯವಾಗಲೇ ಇಲ್ಲ. ಅನುಕೂಲ ಸಮಯ ಬಂದ ಕ್ಷಣವೇ, ಶಿರಡಿಯ ಕರೆ ಬಂದು, ಪಂತರು ಶಿರಡಿಗೆ ಹೋಗಿ, ಸಾಯಿಬಾಬಾರ ದರ್ಬಾರಿನ ಖಾಯಂ ಸದಸ್ಯರಾದರು.

ಸಂತರು ಒಂದು ನಿರ್ದಿಷ್ಟ ಗುರಿಯನ್ನು ಇಟ್ಟುಕೊಂಡೇ ಭೂಮಿಗೆ ಬರುತ್ತಾರೆ. ಇದು ಕರ್ಮ ಭೂಮಿ. ಸಂತರಿಗೆ ಕಾಲದೇಶಗಳ ಪರಿಮಿತಿಯಿಲ್ಲ. ಒಬ್ಬರಾದ ಮೇಲೆ ಇನ್ನೊಬ್ಬರು ಬರಬೇಕು ಎಂಬುವ ನಿಯಮವೂ ಇಲ್ಲ. ಒಂದೇ ಕಾಲದಲ್ಲಿ, ಅನೇಕ ಸಂತರು ಇರಬಹುದು. ಅಂತಹ ಸಂದರ್ಭಗಳು ಅನೇಕವಿವೆ. ಬರುವವರು ಪ್ರತಿಯೊಬ್ಬರೂ ಅವರವರದೇ ಆದ ಗುರಿಯನ್ನು ಇಟ್ಟುಕೊಂಡು ಬಂದಿರುತ್ತಾರೆ. ಆದರೂ ಭೂಮಿಯಲ್ಲಿರುವವರೆಗೂ ಎಲ್ಲರೂ ಒಂದೇ ಎನ್ನುವ ರೀತಿಯಲ್ಲಿ ಪ್ರವರ್ತಿಸುತ್ತಾರೆ. ಎಲ್ಲೇ ಇದ್ದರೂ, ಒಬ್ಬರು ಇನ್ನೊಬ್ಬರನ್ನು ನೋಡದೇ ಇದ್ದರೂ, ಯಾರು ಎಲ್ಲಿ ಏನು ಮಾಡುತ್ತಿದ್ದಾರೆ, ಎನ್ನುವುದು ಅವರೆಲ್ಲರಿಗೂ ತಿಳಿದಿರುತ್ತದೆ. ಒಬ್ಬರು ಇನ್ನೊಬ್ಬರಿಗೆ ಪರಸ್ಪರ ಪೂರಕವಾಗಿ ಕೆಲಸಮಾಡುತ್ತಾರೆ. ಅಂತಹ ಕೆಲವು ದೃಷ್ಟಾಂತಗಳನ್ನು ನೋಡೋಣ.

ವಿ.ಹೆಚ್. ಠಾಕೂರರ ಕತೆ

ವಿ. ಹೆಚ್. ಠಾಕೂರ್, ರೆವೆನ್ಯೂ ಇಲಾಖೆಯಲ್ಲಿ ಕೆಲಸಮಾಡುತ್ತಿದ್ದ ಒಬ್ಬ ಗುಮಾಸ್ತೆ. ಒಂದುಸಲ, ಅವರು ಸರ್ವೆ ಪಾರ್ಟಿಯೊಂದಿಗೆ ಬೆಳಗಾವಿಯ ಹತ್ತಿರದ ವಡಗಾಂವ್ಗೆ ಕಛೇರಿಯ ಕೆಲಸದ ಮೇಲೆ ಹೋಗಬೇಕಾಗಿ ಬಂತು. ಅಲ್ಲಿ ಅವರಿಗೆ ಅಪ್ಪ ಎಂಬುವ ಸಂತರನ್ನು ಕಾಣುವ ಸದವಕಾಶ ದೊರಕಿತು. ಠಾಕೂರ್ ಅವರನ್ನು ಕಂಡು ಅವರ ಪಾದಗಳಿಗೆ ನಮಸ್ಕರಿಸಿದರು. ಆಗ ಅಪ್ಪ, ನಿಶ್ಚಲದಾಸರ "ವಿಚಾರ ಸಾಗರ" ಎನ್ನುವ ಪುಸ್ತಕದ ವ್ಯಾಖ್ಯಾನವನ್ನು ಹೇಳುತ್ತಿದ್ದರು. ಠಾಕೂರ್ ಅವರಿಗೆ ನಮಸ್ಕರಿಸಿ ಹೊರಟಾಗ ಸಂತರು, " ಪುಸ್ತಕವನ್ನು ನೀನು ಓದಬೇಕು. ಓದಿದರೆ ನಿನ್ನ ಅಭೀಷ್ಟಗಳೆಲ್ಲವೂ ನೆರವೇರುತ್ತವೆ. ನೀನು ನಿನ್ನ ಕೆಲಸದ ಮೇಲೆ ಉತ್ತರಕ್ಕೆ ಹೋದಾಗ ಅಲ್ಲಿ ನಿನಗೆ ಒಬ್ಬರು ಸಂತರ ಪರಿಚಯ ಆಗುತ್ತದೆ. ಅವರು ನಿನಗೆ ಮುಂದಿನ ಮಾರ್ಗ ತೋರಿಸುತ್ತಾರೆ," ಎಂದು ಹೇಳಿದರು.

ಇದಾದ ಸ್ವಲ್ಪಕಾಲದ ಮೇಲೆ, ಠಾಕೂರರಿಗೆ ಜುನ್ನರ್ಗೆ ವರ್ಗವಾಯಿತು. ಅಲ್ಲಿಗೆ ಹೋಗಲು, ನಾನ್ಹೆ ಘಾಟನ್ನು ದಾಟಿ ಹೋಗಬೇಕು. ಎಮ್ಮೆಯ ಮೇಲೆ ಕುಳಿತು ಘಾಟನ್ನು ದಾಟಬೇಕು. ಬೇರೆ ಯಾವ ದಾರಿಯೂ ಇರಲಿಲ್ಲ. ಹಾಗೆ ಸವಾರಿ ಮಾಡುವುದು ಅವರಿಗೆ ಬಹು ಕಷ್ಟವಾಗಿ, ಮೈಯೆಲ್ಲ ಬಹಳ ನೋವಾಯಿತು. ಅಲ್ಲಿಂದಲೂ, ಸ್ವಲ್ಪ ಸಮಯವಾದ ಮೇಲೆ, ಅವರಿಗೆ ಮತ್ತೆ ಕಲ್ಯಾಣ್ಗೆ ವರ್ಗವಾಯಿತು. ಕಲ್ಯಾಣ್ನಲ್ಲಿ ಅವರಿಗೆ ನಾನಾ ಸಾಹೇಬ್ ಚಾಂದೋರ್ಕರರ ಭೇಟಿ ಆಯಿತು. ಬಾಬಾರ ವಿಷಯವಾಗಿ ಆಗಲೇ ಕೇಳಿದ್ದ ಅವರು, ಬಾಬಾರನ್ನು ನೋಡುವ ಆಸೆಯನ್ನು ನಾನಾ ಸಾಹೇಬರಲ್ಲಿ ವ್ಯಕ್ತಪಡಿಸಿದರು. ಚಾಂದೋರ್ಕರ್ ತಾವು ಶಿರಡಿಗೆ ಹೊರಟಾಗ ಠಾಕೂರರನ್ನು ತಮ್ಮ ಜೊತೆಯಲ್ಲಿ ಹೊರಡಲು ಹೇಳಿದರು. ಆದರೆ ಠಾಕೂರರಿಗೆ ಅಂದೇ ಸಿವಿಲ್ ನ್ಯಾಯಾಲಯದಲ್ಲಿ ಒಂದು ಖಟ್ಲೆ ಇದ್ದುದರಿಂದ, ಅವರೊಡನೆ ಹೊರಡಲಾಗಲಿಲ್ಲ. ಆದರೆ ಅವರು ನ್ಯಾಯಾಲಯಕ್ಕೆ ಹೋದಾಗ, ಖಟ್ಲೆ ಮುಂದೂಡಲ್ಪಟ್ಟಿತ್ತು. ಒಳ್ಳೆಯದಾಯಿತು ಎಂದುಕೊಂಡು ಅವರು ಅಂದೇ ಶಿರಡಿಗೆ ಹೋಗಲು ನಿಶ್ಚಯಿಸಿದರು. ಅಂದೇ ಹೊರಟರೆ, ಚಾಂದೋರ್ಕರರೂ ಅಲ್ಲೇ ಸಿಗಬಹುದು. ಅವರ ಸಹಾಯದಿಂದ ಬಾಬಾರ ದರ್ಶನವು ಸುಲಭವಾಗ ಬಹುದು ಎಂದುಕೊಂಡರು. ಆದರೆ ಅವರು ಶಿರಡಿ ಸೇರಿದಾಗ ಅವರಿಗೆ ನಿರಾಸೆ ಕಾದಿತ್ತು. ಚಾಂದೋರಕರರು ಹಿಂದಿನ ದಿನ ಸಾಯಂಕಾಲವೇ ಶಿರಡಿ ಬಿಟ್ಟಿದ್ದರು. ಬೇರೆ ಸ್ನೇಹಿತರು ಕೆಲವರನ್ನು ಶಿರಡಿಯಲ್ಲಿ ಕಂಡ ಠಾಕೂರ್, ಅವರೊಡನೆ ಬಾಬಾರ ದರ್ಶನಕ್ಕೆ ಮಸೀದಿಗೆ ಹೋದರು. ಬಾಬಾರನ್ನು ಕಾಣುತ್ತಲೇ, ಅವರ ಮನಸ್ಸು ಪುಳಕಿತವಾಯಿತು. ಕಣ್ಣಲ್ಲಿ ನೀರು ತುಂಬಿ, ಧಾರೆಯಾಗಿ ಹರಿಯಿತು. ಬಾಬಾರ ಚರಣಗಳಲ್ಲಿ ತಲೆಯಿಟ್ಟು ಬಾಬಾರಲ್ಲೇ ಲೀನವಾಗಿ ಹೋದರು. ಆಗ ಬಾಬಾ, "ಇಲ್ಲಿಗೆ ಬರುವುದು ಬಹು ಕಷ್ಟತರವಾದದ್ದು. ಕನ್ನಡ ಸಾಧು ಅಪ್ಪಾ ಹೇಳಿದಷ್ಟು, ಸುಲಭವಲ್ಲ. ನಾನ್ಹೆ ಘಾಟಿನಲ್ಲಿ ಮಾಡಿದ ಎಮ್ಮೆ ಸವಾರಿಗಿಂತಲೂ ಬಹಳ ಕಷ್ಟ. ಆಧ್ಯಾತ್ಮಿಕ ದಾರಿ ಬಹು ಕಷ್ಟಸಾಧ್ಯವಾದದ್ದು. ನೀನು ಅದಕ್ಕೆ ಬಹಳ ಪ್ರಯಾಸಪಡಬೇಕು" ಎಂದರು. ತನಗೊಬ್ಬನಿಗೆ ಮಾತ್ರ ತಿಳಿದಿದ್ದ ಮಾತನ್ನು ಬಾಬಾ ಹೇಳಿದ್ದು ಕೇಳಿ, ಠಾಕೂರ್ ಆಶ್ಚರ್ಯಪಟ್ಟು, ಬಾಬಾರ ಸರ್ವಜ್ಞತ್ವವನ್ನು ಕಂಡುಕೊಂಡರು. ಮತ್ತೆ ಅವರ ಚರಣಗಳಲ್ಲಿ ಬಿದ್ದುನನ್ನನ್ನು ಸ್ವೀಕರಿಸಿ, ಆಶೀರ್ವದಿಸಿಎಂದು ಬೇಡಿಕೊಂಡರು. ಬಾಬಾ ಮತ್ತೆ, "ಬರಿಯ ಓದುವುದರಿಂದ ಪ್ರಯೋಜನವಿಲ್ಲ. ಅಪ್ಪಾ ಹೇಳಿದ್ದು ನಿಜ. ಆದರೆ ಏನನ್ನು ಓದುತ್ತೀಯೋ, ಅದನ್ನು ಅರ್ಥಮಾಡಿಕೊಂಡು, ಅದರ ಬಗ್ಗೆ ಯೋಚಿಸಿ, ಅದನ್ನು ಮನನಮಾಡಿ, ನಿನ್ನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಇಲ್ಲದಿದ್ದರೆ ಪ್ರಯೋಜನವೇನು? ಗುರುವಿನ ಸಹಾಯವಿಲ್ಲದೆ ಓದಿದರೆ ಉಪಯೋಗವಿಲ್ಲ" ಎಂದರು. ಠಾಕೂರ್ ವಿಚಾರ ಸಾಗರವನ್ನು ಪ್ರತಿದಿನವೂ ಓದುತ್ತಿದ್ದರು. ಅದನ್ನು ಅಭ್ಯಾಸಕ್ಕೆ ತರುವ ಸರಿಯಾದ ಮಾರ್ಗ ಯಾವುದು ಎಂಬುದರ ಬಗೆಗೆ ಒಳ್ಳೆಯ ಉಪದೇಶ ಇಲ್ಲಿ ಸಿಕ್ಕಿತು. ಬಾಬಾ-ಅಪ್ಪಾ ಇಬ್ಬರೂ ಬೇರೆ ಬೇರೆ ಕಡೆಗಳಲ್ಲಿದ್ದರೂ, ಅವರಿಬ್ಬರೂ ತಮ್ಮ ಭಕ್ತರ ಒಳಿತಿಗಾಗಿ ಹೇಗೆ ಒಟ್ಟಿಗೇ ಕೆಲಸಮಾಡುತ್ತಾರೆ ಎಂಬುದನ್ನು, ಠಾಕೂರ್ ಶಿರಡಿಯಲ್ಲಿ ಕಣ್ಣಾರೆ ಕಂಡುಕೊಂಡರು.

ಅನಂತರಾವ್ ಪಾಟಣಕರರ ಕಥೆ

ಅನಂತರಾವ್ ಪಾಟಣಕರ್ ಪೂನಾದಿಂದ ಬಾಬಾರ ದರ್ಶನಕ್ಕೆ ಶಿರಡಿಗೆ ಬಂದರು. ಬಾಬಾರನ್ನು ಕಂಡು ಅತ್ಯಂತ ಸಂತೋಷದಿಂದ, ಅವರ ಚರಣಗಳಲ್ಲಿ ನಮಸ್ಕಾರಮಾಡಿದರು. ಅವರ ಪಾದಗಳನ್ನು ಹಿಡಿದು, "ಬಾಬಾ, ನಾನು ವೇದ, ಉಪನಿಷತ್ತುಗಳು, ಪುರಾಣಗಳು ಎಲ್ಲವನ್ನೂ ವಿಸ್ತಾರವಾಗಿ ಓದಿದ್ದೇನೆ. ಆದರೂ ನನ್ನ ಮನಸ್ಸು ಇನ್ನೂ ಶಾಂತಿಗೊಂಡಿಲ್ಲ. ಭಕ್ತಿಯಿಂದ ಕೂಡಿದ ಅಜ್ಞಾನಿಗಳಾದ ಸಾಮಾನ್ಯ ಮನುಷ್ಯರೇ ನನಗಿಂತ ಮೇಲು. ಮನಸ್ಸಿಗೆ ಶಾಂತಿ ತರಲಾರದ ಪುಸ್ತಕಜ್ಞಾನದಿಂದ ಪ್ರಯೋಜನವಾದರೂ ಏನು? ನೀವು ದೃಷ್ಟಿ ಮಾತ್ರದಿಂದಲೇ ಶಾಂತಿ ದಯಪಾಲಿಸುತ್ತೀರೆಂದು ಅನೇಕರು ಹೇಳಿದ್ದನ್ನು ಕೇಳಿದ್ದೇನೆ. ನಾನು ನಿಮ್ಮ ಚರಣಾಶ್ರಿತನಾಗಿದ್ದೇನೆ. ನನ್ನ ಮೇಲೆ ಕರುಣೆ ತೋರಿ, ಅನುಗ್ರಹಿಸಿ" ಎಂದು ಬೇಡಿಕೊಂಡರು. ಆಗ ಅವರಿಗೆ ಬಾಬಾ ಒಂದು ನೀತಿಕಥೆ ಹೇಳಿದರು.

ನವವಿಧ ಭಕ್ತಿ

"ಒಮ್ಮೆ ಒಬ್ಬ ವರ್ತಕ ಇಲ್ಲಿಗೆ ಬಂದ. ಅವನ ಮುಂದೆ ಕುದುರೆಯೊಂದು ಲದ್ದಿ ಹಾಕಿತು. ವರ್ತಕ ತನ್ನ ಬಟ್ಟೆಯನ್ನು ಹಾಸಿ, ಅದು ಹಾಕಿದ ಒಂಭತ್ತು ಲದ್ದಿ ಉಂಡೆಗಳನ್ನು ಕಟ್ಟಿಕೊಂಡ. ಅದರಿಂದ ಅವನು ಏಕಾಗ್ರತೆ, ಶಾಂತಿಗಳನ್ನು ಪಡೆದ."

ಪಾಟಣಕರರಿಗೆ ಬಾಬಾ ಹೇಳಿದ ಮಾತಿನ ತಲೆಬುಡ ತಿಳಿಯಲಿಲ್ಲ. ಅದರ ಬಗ್ಗೆ ಎಷ್ಟು ಯೋಚಿಸಿದರೂ, ಅರ್ಥ ಏನೆಂದು ಅವರ ಮನಸ್ಸಿಗೆ ಹೊಳೆಯಲಿಲ್ಲ. ಕೊನೆಗೆ ತಮ್ಮ ಸ್ನೇಹಿತ ಗಣೇಶ ದಾಮೋದರರ ಬಳಿಗೆ ಹೋಗಿ (ಅವರನ್ನು ದಾದಾ ಕೇಳ್ಕರ್ ಎಂದೂ ಕರೆಯುತ್ತಾರೆ) ಕಥೆಯ ಅರ್ಥ ಏನು ಎಂದು ಕೇಳಿದರು. ದಾದಾ ಹೇಳಿದರು, "ನನಗೂ ಬಾಬಾ ಏನು ಹೇಳುತ್ತಿದ್ದಾರೆಂದು ಅರ್ಥವಾಗುತ್ತಿಲ್ಲ. ಆದರೂ, ಅವರ ಪ್ರೇರಣೆಯಿಂದ ಇದು ಹೀಗಿರಬಹುದು ಎಂದು ಹೇಳಬಲ್ಲೆ. ಕುದುರೆ ಎನ್ನುವುದು ದೈವ ಕೃಪೆ. ವರ್ತಕ ಭಕ್ತ. ಒಂಭತ್ತು ಉಂಡೆಗಳು, ಶ್ರವಣ, ಕೀರ್ತನ, ಸ್ಮರಣ, ಪಾದಸೇವನೆ, ಅರ್ಚನ, ನಮಸ್ಕಾರ, ದಾಸ್ಯ, ಸಖ್ಯ, ಆತ್ಮನಿವೇದನ, ಎಂಬ ನವವಿಧ ಭಕ್ತಿಗಳಿಗೆ ಸಂಕೇತ. ಇವುಗಳಲ್ಲಿ ಯಾವುದೊಂದನ್ನಾದರೂ ಸತತವಾಗಿ, ಪ್ರಾಮಾಣಿಕವಾಗಿ, ಏಕಾಗ್ರಚಿತ್ತದಿಂದ, ಅನುಸರಿಸಿದರೆ ಪರಮಾತ್ಮ ಅಂತಹ ಭಕ್ತನ ಮನೆಗೆ ತಪ್ಪದೇ ಬರುತ್ತಾನೆ. ಜಪ, ತಪ, ಯಜ್ಞ, ಯಾಗಾದಿಗಳು ಯಾವುವೂ ಬೇಕಾಗಿಲ್ಲ. ದೇವರನ್ನು ಕಾಣಲು, ಭಕ್ತಿಯಿಲ್ಲದೆ ಮಾಡಿದ ವೇದ ಶಾಸ್ತ್ರಪುರಾಣಾದಿಗಳ ಪಠನ, ವಿಚಾರಗಳು, ಯಾವುವೂ ಉಪಯೋಗಕ್ಕೆ ಬರುವುದಿಲ್ಲ. ಸತ್ಯವನ್ನು ಅರಸುತ್ತಿರುವ ವರ್ತಕ ನೀನೇ ಎಂದುಕೋ. ನವವಿಧ ಭಕ್ತಿಗಳಲ್ಲಿ ಒಂದನ್ನು ಆರಿಸಿಕೊಂಡು, ಅದನ್ನು ನಿಷ್ಠೆಯಿಂದ ವೃದ್ಧಿಮಾಡಿಕೋ. ಆಗ ನಿನ್ನ ಮನಸ್ಸು ಶಾಂತಿ ಪಡೆಯುತ್ತದೆ" ಎಂದು ಹೇಳಿದರು.

ಮಾರನೆಯ ದಿನ ಪಾಟಣಕರ್ ಬಾಬಾರನ್ನು ಕಾಣಲು ಹೋದಾಗ ಬಾಬಾ, "ನೀನು ಒಂಭತ್ತು ಉಂಡೆಗಳನ್ನು ತೆಗೆದುಕೊಂಡೆಯಾ?" ಎಂದು ಕೇಳಿದರು, ಆಗ ಪಾಟಣಕರ್, "ನಿಮ್ಮ ಅನುಗ್ರಹವಿಲ್ಲದೆ ನಾನು ಏನು ಮಾಡಬಲ್ಲೆ? ನಾನೊಬ್ಬ ಹುಲು ಮಾನವ" ಎಂದರು. ಬಾಬಾ ಅವರನ್ನು ಅನುಗ್ರಹಿಸಿ, ಮನಶ್ಶಾಂತಿ ದೊರೆಯುವುದೆಂಬ ಭರವಸೆ ನೀಡಿದರು. ಪಾಟಣಕರ್ ಸಂತಸದಿಂದ ತುಂಬಿದವರಾಗಿ ತಮ್ಮ ಊರಿಗೆ ಹಿಂತಿರುಗಿದರು.

ಪಂಡರಪುರದ ವಕೀಲ

ಬಾಬಾ ಸರ್ವವ್ಯಾಪಿ. ಅವರಿಗೆ ಕಾಲದೇಶಗಳ ಪರಿಮಿತಿಯಿಲ್ಲ. ಅವರು ಭಕ್ತರು ಎಲ್ಲೇ ಇರಲಿ ಅವರನ್ನು ತಮ್ಮ ಗಮನದಲ್ಲಿಟ್ಟಿರುತ್ತಿದ್ದರು. ತಪ್ಪುದಾರಿಯನ್ನು ತುಳಿಯುತ್ತಿರುವವರಿಗೆ ಎಚ್ಚರಿಕೆ ನೀಡಿ, ನೇರವಾದ ದಾರಿಗೆ ಎಳೆಯುತ್ತಿದ್ದರು. ಪಂಡರಪುರದ ಒಬ್ಬ ವಕೀಲ ಬಾಬಾರ ದರ್ಶನಕ್ಕೆ ಶಿರಡಿಗೆ ಬಂದ. ಬಾಬಾರ ದರ್ಶನ ಮಾಡಿಕೊಂಡು, ಅವರಿಗೆ ದಕ್ಷಿಣೆ ಕೊಟ್ಟು, ಸ್ವಲ್ಪ ದೂರದಲ್ಲಿ, ಬಾಬಾರ ಮಾತುಗಳನ್ನು ಕೇಳುತ್ತಾ ಕುಳಿತ. ಬಾಬಾ ಅದು ಇದು ಹೇಳುತ್ತಾ, ಅವನ ಕಡೆ ತಿರುಗಿ, " ಜನ ಎಂಥ ಮೋಸಗಾರರು! ಮುಂದೆ ಬಂದು ನಮಸ್ಕಾರ ಮಾಡಿ, ದಕ್ಷಿಣೆ ಕೊಡುತ್ತಾರೆ. ಹಿಂದೆ ಬೈಯುತ್ತಾರೆ. ಇದು ಆಶ್ಚರ್ಯವಲ್ಲವೇ?" ಎಂದರು. ಅಲ್ಲಿದ್ದವರಿಗೆ ಬಾಬಾ ಏನು ಹೇಳುತ್ತಿದ್ದಾರೆ, ಎಂಬುವುದೇ ಅರ್ಥವಾಗಲಿಲ್ಲ. ಆದರೆ ವಕೀಲ ಮಾತ್ರ, ಅದು ತನಗಾಗಿಯೇ ಹೇಳಿದ್ದು, ಎಂದು ಚೆನ್ನಾಗಿ ಅರ್ಥಮಾಡಿಕೊಂಡ. ಆದರೂ ಏನೂ ಮಾತನಾಡದೇ ಸುಮ್ಮನೆ ಕುಳಿತಿದ್ದ.

ನಂತರ ಕಾಕಾ ಸಾಹೇಬ್ ದೀಕ್ಷಿತರೊಂದಿಗೆ ವಾಡಾಗೆ ಹಿಂತಿರುಗುತ್ತಿದ್ದಾಗ ಅವನು ಹೇಳಿದ, "ಬಾಬಾರು ಮಾತುಗಳನ್ನು ಹೇಳಿದ್ದು ನನ್ನನ್ನು ಕುರಿತಾಗಿಯೇ. ಪಂಡರಪುರದ ಮುನ್ಸೀಫ಼್ ನೂಲ್ಕರರು ಅನಾರೋಗ್ಯದಿಂದಿದ್ದಾಗ ಅವರು ಶಿರಡಿಗೆ ಬಂದದ್ದು, ನಮ್ಮ ಚರ್ಚೆಗೆ ಗ್ರಾಸವಾಯಿತು. "ಸಾಯಿ ಬಾಬಾರ ದರ್ಶನದಿಂದ ಅವರ ಖಾಯಿಲೆ ವಾಸಿಯಾಗುವುದೇ? ಅದಕ್ಕೆ ಸರಿಯಾದ ವೈದ್ಯ ಚಿಕಿತ್ಸೆ ಇಲ್ಲದೆ, ಹೇಗೆ ಸಾಧ್ಯ? ಮುನ್ಸೀಫ಼ರಂತಹ ವಿದ್ಯಾವಂತರೂ, ರೀತಿ ನಂಬಿಕೆಗಳಿಗೆ ಒಳಗಾಗುವುದು ಸರಿಯೇ?" ಎಂದು ಚರ್ಚೆ ನಡೆಸುತ್ತ, ಅದರಲ್ಲಿ ಮುನ್ಸೀಫ಼ರು, ಬಾಬಾ ಇಬ್ಬರನ್ನೂ ನಗೆಯಾಡಿದರು. ನಾನೂ ಅದರಲ್ಲಿ ಪ್ರತ್ಯಕ್ಷವಾಗಿ ಭಾಗವಹಿಸಿದ್ದೆ. ಬಾಬಾ ನಾನು ಮಾಡಿದ ಅಸಭ್ಯ ವರ್ತನೆಯನ್ನು ನನಗೆ ತೋರಿಸಿಕೊಟ್ಟರು. ಅದು ನನಗೆ ಕೊಟ್ಟ ಬೈಗಳಲ್ಲ. ‘ಅನವಶ್ಯಕವಾಗಿ ಇನ್ನೊಬ್ಬರ ವಿಷಯದಲ್ಲಿ ತಲೆಹಾಕುವುದು, ಅವರ ಬಗ್ಗೆ ತುಚ್ಚವಾಗಿ ಮಾತನಾಡುವುದು ಮಾಡಬೇಡಎಂದು ನನಗೆ ಪರೋಕ್ಷವಾಗಿ ಹೇಳಿದ ಬುದ್ಧಿಮಾತುಗಳು."

ಶಿರಡಿ ಪಂಡರಪುರಕ್ಕೆ ಮುನ್ನೂರು ಮೈಲಿಗಳ ದೂರದಲ್ಲಿದೆ. ಬಾಬಾ ಶಿರಡಿ ಬಿಟ್ಟು ಎಂದೂ ಆಚೆ ಹೋಗಿರಲಿಲ್ಲ. ಅವರಿಗೆ ಪಂಡರಪುರದಲ್ಲಿ ನಡೆದ ವಿಷಯ ಹೇಗೆ ತಿಳಿಯಿತು? ಅವರು ಕಾಲದೇಶಾತೀತರು. ಅವರಿಗೆ ಕಾಡು, ಮೇಡು, ನದಿ, ಬೆಟ್ಟ, ಗುಡ್ಡ ಯಾವುವೂ ಅಡ್ಡಿಯಲ್ಲ. ಮಸೀದಿಯಲ್ಲೇ ಕುಳಿತು, ಪ್ರಪಂಚದಲ್ಲಿ ತನ್ನ ಭಕ್ತರು ಎಲ್ಲೆಲ್ಲಿ ಏನೇನು ಮಾಡುತ್ತಿರುತ್ತಾರೋ, ಅದನ್ನೆಲ್ಲಾ ತಮ್ಮೆದುರಿಗೆ ನಡೆಯುತ್ತಿರುವಂತೆ ತಿಳಿದುಕೊಳ್ಳಬಲ್ಲರು. ಯಾರೂ ಬಾಬಾರ ದೃಷ್ಟಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಅದರಿಂದಲೇ, ವಕೀಲ ತನ್ನ ನಡತೆಯನ್ನು ತಿದ್ದಿಕೊಳ್ಳುವಂತೆ ಮಾಡಿದರು.

ಇದು ನಮ್ಮೆಲ್ಲರಿಗೂ ಅನ್ವಯಿಸುವ ಕಥೆ. ನಮ್ಮ ಅಂತರಾಳವನ್ನು ಕೆದಕಿ ನೋಡಿದರೆ, ಯಾವಾಗಲಾದರೊಮ್ಮೆ, ನಾವು ಇಂತಹ ಅನುಚಿತ ವರ್ತನೆ, ಅದರಲ್ಲೂ, ಸಂತರ ಅವಹೇಳನ ಮಾಡಿರುವುದು, ನಮ್ಮ ಅರಿವಿಗೆ ಬರುತ್ತದೆ. ಬಾಬಾ ವಕೀಲನ ನೆವದಲ್ಲಿ ನಮ್ಮೆಲ್ಲರಿಗೂ ಪಾಠ ಹೇಳಿದ್ದಾರೆ. ನಾವು ಕಥೆಯನ್ನು ನೆನಪಿನಲ್ಲಿಟ್ಟುಕೊಂಡು ಅದನ್ನು ಮನನ ಮಾಡುತ್ತಾ ನಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಬಾಬಾ ಪಾಠ ಹೇಳುವ ರೀತಿಯೇ ವಿಚಿತ್ರ. ವಿಶಿಷ್ಟ. ಅಳೆಯಲಸಾಧ್ಯವಾದುದು. ಅಂತಹ ಅಪ್ರಮೇಯ ಸದ್ಗುರುವಾದ ಬಾಬಾರಿಗೆ ಸಾಷ್ಟಾಂಗ ನಮಸ್ಕಾರಮಾಡಿ ಅವರು ನಮ್ಮಲ್ಲಿ ಕರುಣೆ ತೋರಲಿ ಎಂದು ಬೇಡಿಕೊಳ್ಳೋಣ.

ಇದರೊಂದಿಗೆ ವಿ. ಹೆಚ್. ಠಾಕೂರ್, ಅನಂತರಾವ್ ಪಾಟಣಕರ್, ಪಂಡರಪುರದ ವಕೀಲ ಮತ್ತು ಇತರ ವಿಷಯಗಳನ್ನು ಕುರಿತು ಹೇಳುವ ಇಪ್ಪತ್ತೊಂದನೆಯ ಅಧ್ಯಾಯ ಮುಗಿಯಿತು. ಮುಂದಿನ ಅಧ್ಯಾಯದಲ್ಲಿ ಹೇಮಾಡ್ ಪಂತ್ ಬಾಲಾಸಾಹೇಬ್ ಮಿರೀಕರ್, ಬಾಪೂ ಸಾಹೇಬ್ ಬೂಟಿ ಮತ್ತು ಅಮೀರ್ ಶಕ್ಕರರನ್ನು ಹಾವಿನಿಂದ ಬಾಬಾ ರಕ್ಷಿಸಿದ್ದು, ಇತ್ಯಾದಿ ವಿಷಯಗಳನ್ನು ಹೇಳುತ್ತಾರೆ

||ಶ್ರೀ ಸದ್ಗುರು ಸಾಯಿನಾಥಾರ್ಪಣಮಸ್ತು||ಶುಭಂ ಭವತು||
||ಓಂ ಶಾಂತಿಃ ಶಾಂತಿಃ ಶಾಂತಿಃ||


Sunday, December 25, 2011

||ಇಪ್ಪತ್ತನೆಯ ಅಧ್ಯಾಯ||


||ಶ್ರೀ ಸಾಯಿ ಸಚ್ಚರಿತ್ರೆ||
||ಇಪ್ಪತ್ತನೆಯ ಅಧ್ಯಾಯ||
||ಈಶಾವಾಸ್ಯೋಪನಿಷತ್||
ಶ್ರೀ ಗಣೇಶಾಯ ನಮಃ ಶ್ರೀ ಸರಸ್ವತಯೇ ನಮಃ
ಶ್ರೀ ವೆಂಕಟೇಶಾಯ ನಮಃ ಶ್ರೀ ಸಾಯಿನಾಥಾಯ ನಮಃ
ಶ್ರೀ ಸದ್ಗುರುಭ್ಯೋನ್ನಮಃ

ಈ ಅಧ್ಯಾಯದಲ್ಲಿ ಹೇಮಾಡ್ ಪಂತ್, ಬಾಬಾ ದಾಸಗಣು ಅವರ ಈಶಾವಾಸ್ಯೋಪನಿಷತ್ತಿನ ತೊಡಕನ್ನು ಹೇಗೆ ಬಿಡಿಸಿದರು ಮತ್ತು ಇತರ ವಿಷಯಗಳನ್ನು ಹೇಳುತ್ತಾರೆ.

ಸದ್ಗುರು ಸಾಯಿ

ಬಾಬಾ ನಿರಾಕಾರ, ನಿರ್ಗುಣ, ರೂಪವಿಲ್ಲದ ಬ್ರಹ್ಮ. ತನ್ನ ಭಕ್ತರಿಗೋಸ್ಕರ ರೂಪತಾಳಿ ಮಾಯೆಯ ಸಹಾಯದಿಂದ ಈ ಜಗತ್ತೆಂಬ ನಾಟಕರಂಗದಲ್ಲಿ ನಟನಾಗಿ ಬಂದರು. ಅವರನ್ನು ನೋಡುವುದೇ ನಮಗೆ ಅತ್ಯಂತ ಆನಂದಕರ. ನೂರು ವರ್ಷಗಳ ಕೆಳಗೆ ಶಿರಡಿಯಲ್ಲಿ ಅವರೇನು ಮಾಡುತ್ತಿದ್ದರು ನೋಡಲು ಹೋಗೋಣ ಬನ್ನಿ.

ಮಧ್ಯಾನ್ಹದ ಆರತಿ ಮುಗಿದಿದೆ. ಬಾಬಾ ಈಚೆಗೆ ಬಂದು ಮಸೀದಿಯ ಪ್ರವೇಶ ದ್ವಾರದ ಹತ್ತಿರ, ಸ್ವಲ್ಪ ಬಾಗಿ ನಿಂತಿದ್ದಾರೆ. ಆರತಿಗೆ ಬಂದಿದ್ದ ಭಕ್ತರೆಲ್ಲಾ ಸಂತೋಷ ಭರಿತರಾಗಿ ಒಬ್ಬೊಬ್ಬರಾಗಿ ಹೊರಕ್ಕೆ ಬಂದು ಬಾಬಾರ ಚರಣಕಮಲಗಳಲ್ಲಿ ತಲೆಯಿಟ್ಟು ಅವರ ಎರಡೂ ಪಾದಗಳನ್ನು ಹಿಡಿದು ಗೌರವಾದರಗಳಿಂದ ನಮಸ್ಕಾರ ಮಾಡುತ್ತಿದ್ದಾರೆ. ಬಾಬಾರ ಕಣ್ಣುಗಳಲ್ಲಿ ಭಕ್ತರ ಮೇಲಿನ ಪ್ರೀತಿವಿಶ್ವಾಸಗಳು ಉಕ್ಕಿ ಹರಿಯುತ್ತಿರುವಂತೆ ಕಾಣಿಸುತ್ತಿದೆ. ಅವರು ಪ್ರತಿಯೊಬ್ಬರ ತಲೆಯಮೇಲೂ ಕೈಯಿಟ್ಟು, ನೇವರಿಸಿ, ಉದಿಪ್ರಸಾದ ಕೊಟ್ಟು ಆಶೀರ್ವದಿಸುತ್ತಿದ್ದಾರೆ. ಕೆಲವರಿಗೆ, "ಬಾಪೂ ಹೋಗು. ಹೋಗಿ ಊಟಮಾಡು" ಎಂದೂ, ಮತ್ತೊಬ್ಬರಿಗೆ, "ಅಮ್ಮಾ, ಮನೆಗೆ ಹೋಗು. ಹೋಗಿ ಸುಧಾರಿಸಿಕೋ" ಎಂದೂ, ಮತ್ತೆ ಕೆಲವರಿಗೆ, "ಬಾಪು, ಹೋಗಿ ಸಂತೋಷವಾಗಿ ಊಟಮಾಡು" ಎಂದೂ, ಒಬ್ಬೊಬ್ಬರನ್ನೂ ತನ್ನದೇ ಆದ ವಿಶಿಷ್ಟ ರೀತಿಯಲ್ಲಿ ವಿಶ್ವಾಸಪೂರಿತ ಮಾತುಗಳಿಂದ ಮಾತನಾಡಿಸಿ ಕಳುಹಿಸುತ್ತಿದ್ದಾರೆ. ಬಾಹ್ಯದಲ್ಲಿ ಅವರು ಒಬ್ಬೊಬ್ಬರನ್ನೂ ಬೇರೆಬೇರೆಯಾಗಿ ಕಂಡರೂ ಆಂತರ್ಯದಲ್ಲಿ ಅವರಿಗೆ ಎಲ್ಲರೂ ಒಂದೇ! ಯಾರಲ್ಲೂ ಅವರಿಗೆ ಮೋಹವಿಲ್ಲ. ಅದು ಅವರ ಹತ್ತಿರ ಸುಳಿಯುವುದೂ ಇಲ್ಲ. ತಾನು ಮಾಡುತ್ತಿರುವುದು ನಟನೆ ಮಾತ್ರವೇ ಎಂದು ತಿಳಿದ ಪಳಗಿದ ನಟನಂತೆ ಅವರು ನಟಿಸುತ್ತಿದ್ದಾರೆ.

ಉದಿಪ್ರಸಾದವನ್ನು ಕೊಡುತ್ತಾ ಹಾಗೆ ಬಾಗಿ ನಿಂತಿರುವ ಬಾಬಾರ ಆ ಚಿತ್ರವನ್ನು ಈಗ ಊಹಿಸಿಕೊಂಡರೆ ನಮ್ಮ ಹೃದಯಗಳು ನಮಗೇ ತಿಳಿಯದಂತೆ ಪರಮಾನಂದದಿಂದ ತುಂಬಿ ತುಳುಕಾಡುತ್ತವೆ. ಅಂತಹ ಆನಂದವನ್ನು ಕೊಡುವ ಬಾಬಾರ ದಿವ್ಯ ಚರಣಾರವಿಂದಗಳಲ್ಲಿ ನಮಸ್ಕರಿಸೋಣ. ಅವರ ಲೀಲೆಗಳನ್ನು ಮತ್ತೆ ಮತ್ತೆ ಮನಸ್ಸಿಗೆ ತಂದುಕೊಂಡು, ಧ್ಯಾನಿಸಿ, ನಮ್ಮ ಹೃದಯಾಂತರ್ಗತ ಮಾಡಿಕೊಂಡು ಆನಂದಭರಿತರಾಗೋಣ.

ಈಶಾವಾಸ್ಯೋಪನಿಷತ್

ಈ ಬಹು ಸುಂದರವಾದ ಉಪನಿಷತ್ತಿನ ಸಾರಾಂಶವೇನು ಎಂಬುದನ್ನು ನಾವು ಮೊದಲು ನೋಡೋಣ.

ಈಶಾವಾಸ್ಯೋಪನಿಷತ್ತು ಬಹಳ ಸಣ್ಣದು. ಕೇವಲ ಹದಿನೆಂಟು ಶ್ಲೋಕಗಳುಳ್ಳದ್ದು. ಆದರೆ ಇದರ ಮಹತ್ವ ದೊಡ್ಡದು. ಬಹುಶಃ ಉಪನಿಷತ್ತುಗಳಲ್ಲೇ ಬಹು ಕ್ಲಿಷ್ಟವಾದದ್ದು. ಸುಲಭವಾಗಿ ಅರ್ಥವಾಗದಂತಹುದು. ಬ್ರಹ್ಮನಿಷ್ಠನಾದ ಗುರುವಿನ ಪಾದದಡಿಯಲ್ಲಿ ಕೂತು ಅವರ ಸಹಾಯದಿಂದ ಆಳವಾಗಿ ಅಭ್ಯಾಸ ಮಾಡಿದರೆ ಅರ್ಥಮಾಡಿಕೊಳ್ಳಬಹುದು. ಈ ಉಪನಿಷತ್ತು ನಮಗೆ ವೈರಾಗ್ಯ, ರಾಗದ್ವೇಷರಹಿತ ಕರ್ಮಗಳಿಂದ ಬಂಧ ಮುಕ್ತಿ, ಆತ್ಮತತ್ತ್ವಜ್ಞಾನ, ಅದರಿಂದ ಉಂಟಾಗುವ ಫಲಗಳು, ಕರ್ಮ ಮುಕ್ತಿ ಇತ್ಯಾದಿ ಅನೇಕ ಜಟಿಲವಾದ ವಿಷಯಗಳನ್ನು ವಿವರಿಸುತ್ತದೆ. ಆತ್ಮ ಸಾಕ್ಷಾತ್ಕಾರವೆಂಬುದು ಇವುಗಳೆಲ್ಲದಕ್ಕಿಂತ ಭಿನ್ನ. ಇವುಗಳನ್ನು ಸಮನ್ವಯಿಸುವುದು ಬಹು ಕಷ್ಟಸಾಧ್ಯವಾದ ಕೆಲಸ.

ಇದನ್ನು ಮಂತ್ರೋಪನಿಷತ್ತು ಎಂದೂ ಕರೆಯುತ್ತಾರೆ. ಇದು ಶುಕ್ಲಯಜುರ್ವೇದ (ವಾಜಸನೇಯ ಸಂಹಿತೆ) ದಲ್ಲಿ ೪೦ನೆಯ ಅಧ್ಯಾಯ. ವೇದ ಸಂಹಿತೆಗಳಿಂದ ಕೂಡಿದ ಈ ಉಪನಿಷತ್ತನ್ನು ಮಿಕ್ಕೆಲ್ಲ ಉಪನಿಷತ್ತುಗಳಿಗಿಂತಲೂ ಉನ್ನತಮಟ್ಟದ್ದು ಎಂದು ಹೇಳುತ್ತಾರೆ. ಬೇರೆಯ ಉಪನಿಷತ್ತುಗಳೆಲ್ಲವೂ ಈ ಉಪನಿಷತ್ತಿನ ವ್ಯಾಖ್ಯಾನಗಳು ಎಂದು ಹೇಳುವವರೂ ಇದ್ದಾರೆ.

ಅತ್ತುತ್ತಮ ದಾರ್ಶನಿಕರಲ್ಲಿ ಒಬ್ಬರು ಎನ್ನಿಸಿಕೊಂಡಿರುವ ಪ್ರೊ. ಆರ್.ಡಿ. ರಾನಡೆ ಹೇಳುತ್ತಾರೆ "ಇದೊಂದು ಸಣ್ಣ ಉಪನಿಷತ್ತು. ಆದರೂ ಇದು ಅತಿವಿಶೇಷವಾದ, ಒಳಹೊಕ್ಕು ನೋಡುವಂತಹ ಸೂಕ್ಷ್ಮ ದೃಷ್ಟಿಯ ಅನೇಕ ಸೂಚನೆಗಳನ್ನು ನೀಡುತ್ತದೆ. ಕೇವಲ ೧೮ ಶ್ಲೋಕಗಳಲ್ಲಿ ಆತ್ಮದ ಬಗ್ಗೆ, ಅತಿಮಹತ್ವವಾದ ಆಧ್ಯಾತ್ಮಿಕ ವಿವರಗಳನ್ನು ಕೊಡುತ್ತದೆ. ಅರಿಷಡ್ವರ್ಗಗಳಿಂದ ವಿಚಲಿತನಾಗದ ಆದರ್ಶ ಜ್ಞಾನಿಯ ಗುಣಗಳನ್ನು ಹೇಳುತ್ತದೆ. ಕರ್ಮ ಯೋಗಗಳ ಸ್ಥೂಲ ನಿರೂಪಣೆಯನ್ನು ಮಾಡಿ, ಕೊನೆಯಲ್ಲಿ ಜ್ಞಾನ ಕರ್ಮಗಳ ಸಮನ್ವಯವನ್ನು ಹೇಳುತ್ತದೆ. ಉಪನಿಷತ್ತು ಇವೆರಡರ ಆವಶ್ಯಕತೆ, ಹಾಗೂ ಕೊನೆಯಲ್ಲಿ ಇವೆರಡನ್ನು ತೊಡೆದು ಹಾಕಿ ಮೇಲಿನ ಸ್ತರಕ್ಕೆ ಹೋಗುವುದನ್ನೂ ಹೇಳುತ್ತದೆ.

ದಾಸಗಣು ಇಂತಹ ಕಷ್ಟಸಾಧ್ಯವಾದ ಉಪನಿಷತ್ತನ್ನು, ‘ಈಶಾವಾಸ್ಯ ಭಾವಾರ್ಥ ಬೋಧಿನಿ’ ಎಂಬ ಹೆಸರಿನಲ್ಲಿ ಮರಾಠಿ ಭಾಷೆಗೆ ತರ್ಜುಮೆ ಮಾಡಲು ಪ್ರಯತ್ನಿಸುತ್ತಿದ್ದರು. ಉಪನಿಷತ್ತಿನ ಯಥಾರ್ಥವಾದ ಅರ್ಥವನ್ನು ತಮ್ಮ ಗ್ರಂಥದಲ್ಲಿ ತರಬೇಕೆಂಬುದು ಅವರ ಇಚ್ಛೆ. ಓವಿ ಛಂದಸ್ಸಿನಲ್ಲಿ ಒಂದೊಂದು ಶ್ಲೋಕವನ್ನು ಅನುವಾದಿಸಿದರು. ಆದರೂ, ಉಪನಿಷತ್ತಿನ ನಿಜವಾದ ಸಾರ ತಿಳಿಯಲಾರದ್ದರಿಂದ ಅವರಿಗೆ ತಾವು ಮಾಡಿದ ಕೆಲಸ, ಸಂತೋಷವನ್ನು ತರಲಿಲ್ಲ. ಹಲವಾರು ಪಂಡಿತರೊಡನೆ ಚರ್ಚೆಮಾಡಿದರೂ, ಅವರ ಸಂದೇಹಗಳು ತೀರಲಿಲ್ಲ. ಏನು ಮಾಡಬೇಕೋ ತೋಚದೆ ಇದ್ದರು.

ಸದ್ಗುರುವೊಬ್ಬನೇ ಸಮರ್ಥ

“ಈಶಾವಾಸ್ಯೋಪನಿಷತ್ತು ಆತ್ಮಸಾಕ್ಷಾತ್ಕಾರವನ್ನು ಕುರಿತು ಹೇಳುತ್ತದೆ. ನಮಗೆ ಈ ಜನನ ಮರಣ ಚಕ್ರಭ್ರಮಣೆಯಿಂದ ಮುಕ್ತಿ ಕೊಡುತ್ತದೆ ಎಂಬುದನ್ನು ನೋಡಿದರೆ, ನನ್ನ ಸಂದೇಹಗಳನ್ನು ತೀರಿಸಬಲ್ಲವರು, ಆತ್ಮಸಾಕ್ಷಾತ್ಕಾರ ಪಡೆದವರೇ ಆಗಿರಬೇಕು. ಬೇರೆ ಯಾರೂ ತೀರಿಸಲಾರರು. ಅಂತಹವರು ಸದ್ಗುರು ಸಾಯಿಬಾಬಾ ಒಬ್ಬರೇ” ಎಂಬ ನಿರ್ಧಾರಕ್ಕೆ ಬಂದರು. ಅನುಕೂಲ ಸಮಯ ನೋಡಿಕೊಂಡು, ಬಾಬಾರ ಚರಣಗಳಲ್ಲಿ ಬಿದ್ದು ತಮ್ಮ ಸಂದೇಹಗಳನ್ನು ಪರಿಹರಿಸಲು ಕೇಳಿಕೊಂಡರು. ಬಾಬಾ ಅವರನ್ನು ಆಶೀರ್ವದಿಸಿ, "ಚಿಂತೆ ಮಾಡಬೇಡ. ವಿಲೆಪಾರ್ಲೆಯ ಕಾಕಾ ಸಾಹೇಬ್ ದೀಕ್ಷಿತರ ಮನೆಯ ಕೆಲಸದಾಳು ನಿನ್ನ ಸಂದೇಹವನ್ನು ತೀರಿಸುತ್ತಾಳೆ" ಎಂದರು. ಅಲ್ಲಿದ್ದವರೆಲ್ಲಾ "ಬಾಬಾ ಪರಿಹಾಸ ಮಾಡುತ್ತಿದ್ದಾರೆ. ವಿದ್ಯೆಯ ಗಂಧವೇ ಇಲ್ಲದ ಕೆಲಸದಾಳು, ಉಪನಿಷತ್ತು ಎಂಬುದೊಂದಿದೆ ಎನ್ನುವುದನ್ನೂ ತಿಳಿಯದವಳು, ಉಪನಿಷತ್ತಿನ ಸಂದೇಹಗಳನ್ನು ತೀರಿಸಬಲ್ಲಳೇ?" ಎಂದು ನಕ್ಕರು. ಆದರೆ ದಾಸಗಣು ಮಾತ್ರ ಬಾಬಾರ ಮಾತುಗಳಲ್ಲಿ ಸಂಪೂರ್ಣ ನಂಬಿಕೆಯಿಂದ, ಅವರ ಮಾತು ಎಂದೂ ಸುಳ್ಳಾಗುವುದಿಲ್ಲ, ಅವರು ಹೇಳಿದ್ದು ಸತ್ಯವಾಗಲೇ ಬೇಕು, ಅವರದು ಬ್ರಹ್ಮವಾಣಿ. ಎಂಬ ಧೃಢನಂಬಿಕೆಯಿಂದ ವಿಲೆಪಾರ್ಲೆಗೆ ಹೋಗಲು ನಿರ್ಧರಿಸಿದರು.

ಕಾಕಾ ಸಾಹೇಬರ ಕೆಲಸದಾಳು

ಬಾಬಾರ ಮಾತುಗಳನ್ನು ಅನುಸರಿಸಿ, ದಾಸಗಣು ವಿಲೆಪಾರ್ಲೆಗೆ ಹೋಗಿ ಕಾಕಾ ಸಾಹೇಬರ ಮನೆಯಲ್ಲಿ ಇದ್ದರು. ಮಾರನೆಯ ದಿನ, ಅವರು ಪೂಜೆ ಮಾಡುತ್ತಿರುವ ಸಮಯದಲ್ಲಿ, ಬಹು ಸುಂದರವಾದ, ಸುಶ್ರಾವ್ಯವಾದ ಹಾಡೊಂದನ್ನು ಕೇಳಿದರು. ಒಂದು ಕೆಂಪು ಸೀರೆ, ಅದರ ಸೆರಗು, ಅಂಚು, ಅದರ ಮೇಲಿನ ಕುಸುರಿ ಕೆಲಸ, ಇವುಗಳನ್ನು ಕುರಿತು ಹೊಗಳುವ ಹಾಡು ಅದು. ಆ ಹಾಡು ಎಷ್ಟು ಆಪ್ಯಾಯಮಾನವಾಗಿತ್ತೆಂದರೆ, ದಾಸಗಣು ಹೊರಗೆ ಬಂದು ಹಾಡುತ್ತಿರುವವರು ಯಾರು ಎಂದು ನೋಡಿದರು. ಎಂಟೊಂಭತ್ತು ವಯಸ್ಸಿನ ಒಬ್ಬಳು ಹುಡುಗಿ. ಕಾಕಾರ ಮನೆಯ ಆಳಿನ ತಂಗಿ. ಹರಿದು ಹಳೆಯದಾದ ಬಟ್ಟೆಗಳನ್ನು ತೊಟ್ಟು, ಪಾತ್ರೆಗಳನ್ನು ತೊಳೆಯುತ್ತಾ ಹಾಡುತ್ತಿದ್ದಾಳೆ. ದಾಸಗಣು ಅವರಿಗೆ ಅವಳನ್ನು ನೋಡಿ ಕನಿಕರವಾಯಿತು. ಬಡತನದಲ್ಲಿದ್ದರೂ ಅವಳನ್ನು ಸಂತೋಷ ಬಿಟ್ಟಿರಲಿಲ್ಲ.

ಮಾರನೆಯ ದಿನ ರಾವ್ ಬಹಾದ್ದೂರ್ ಎಮ್. ಡಬ್ಲ್ಯೂ. ಪ್ರಧಾನ್ ದಾಸಗಣು ಅವರಿಗೆ ಪಂಚೆಯೊಂದನ್ನು ತಂದು ಕೊಟ್ಟರು. ದಾಸಗಣು, ಆ ಚಿಕ್ಕ ಹುಡುಗಿಗೆ ಒಂದು ಸೀರೆಯನ್ನು ತಂದುಕೊಡುವಂತೆ, ಅವರಲ್ಲಿ ಮನವಿ ಮಾಡಿಕೊಂಡರು. ಅದರಂತೆ ಪ್ರಧಾನ್ ಅವಳಿಗೆ ಒಂದು “ಚಿರ್ಡಿ” ಸೀರೆ ತಂದುಕೊಟ್ಟರು. ಅದನ್ನು ನೋಡಿದ ಆ ಹುಡುಗಿಗೆ ತಡೆಯಲಾರದಷ್ಟು ಸಂತೋಷವಾಯಿತು. ಮಾರನೆಯ ದಿನವೇ ಆ ಹೊಸ ಸೀರೆಯನ್ನುಟ್ಟು, ಅವಳು ಕೆಲಸಕ್ಕೆ ಬಂದಳು. ಕುಣಿದು, ಕುಪ್ಪಳಿಸಿ, ಓಡಿ, ಅಡ್ಡಾಡಿ, ನರ್ತಿಸಿ, ತನ್ನ ಸ್ನೇಹಿತರ ಜೊತೆಯಲ್ಲಿ ಆಟವಾಡಿ, ಅತ್ಯಂತ ಆನಂದದಿಂದ ದಿನವೆಲ್ಲ ಕಳೆದಳು. ಮಾರನೆಯ ದಿನ ಅವಳು ತನ್ನ ಹೊಸ ಸೀರೆಯನ್ನು ಮನೆಯಲ್ಲಿ ಇಟ್ಟು, ಹಳೆಯ ಹರಿದು ಹೋಗಿದ್ದ ಸೀರೆಯನ್ನೇ ಉಟ್ಟು ಕೆಲಸಕ್ಕೆ ಬಂದಳು. ಅಂದೂ ಕೂಡಾ, ಅವಳು ಹಾಡುತ್ತಾ, ಆಡುತ್ತ, ತಾನು ಹಿಂದಿನ ದಿನ ಹೊಸ ಸೀರೆಯನ್ನುಟ್ಟುಕೊಂಡು ಬಂದಾಗ ಹೇಗೆ ಸಂತೋಷದಿಂದ ಇದ್ದಳೋ, ಹಾಗೆಯೇ ಸಂತೋಷದಿಂದಿದ್ದಳು. ಅವಳ ಆನಂದವನ್ನು ಕಂಡ ದಾಸಗಣು, ಅವಳನ್ನು ಕನಿಕರದ ಬದಲು ಮೆಚ್ಚಿಕೊಂಡರು. ಅವಳು ಹೊಸಸೀರೆಯನ್ನು ಮನೆಯಲ್ಲಿಟ್ಟು, ಹರಿದ ಸೀರೆಯನ್ನೇ ಉಟ್ಟು ಬಂದಿದ್ದಾಳೆ. ಬಡತನದಿಂದಾಗಿ ಹಳೆಯ ಸೀರೆಯನ್ನೇ ಉಡಬೇಕಾಗಿ ಬಂದಿದೆ. ಆದರೂ, ಅವಳ ಸಂತೋಷಕ್ಕೆ ಧಕ್ಕೆಯಾಗಿಲ್ಲ. ಹೀಗೆ ಯೋಚಿಸುತ್ತಿದ್ದ ದಾಸಗಣೂಗೆ, ಥಟ್ಟನೆ ಮಿಂಚು ಹೊಳೆದಂತಾಯಿತು. ಅವಳನ್ನು ಹರಿದ ಬಟ್ಟೆಯಲ್ಲಿ ಆನಂದದಲ್ಲಿರುವಾಗ ನೋಡಿದ್ದರು. ಹೊಸ ಸೀರೆಯುಟ್ಟು ಬಂದಾಗ ಅವಳು ಆನಂದದಲ್ಲಿದ್ದುದನ್ನು ನೋಡಿದ್ದರು. ಮತ್ತೆ ಹಳೆಯ ಸೀರೆಯನ್ನುಟ್ಟು ಬಂದಾಗಲೂ ಅವಳ ಆನಂದ ಅವಳನ್ನು ಬಿಟ್ಟಿರಲಿಲ್ಲ.

ಅಂದರೆ, ಅವಳ ಉಡುಗೆ ಅವಳ ಮನಸ್ಸಿನ ಸ್ಥಿತಿಯನ್ನು ಯಾವ ರೀತಿಯಲ್ಲೂ ಬದಲಾಯಿಸಿರಲಿಲ್ಲ. ತನ್ನ ಮೈಮೇಲಿನ ಬಟ್ಟೆ, ಅವಳ ಭಾವನೆಗಳನ್ನು ಬದಲಾಯಿಸಿರಲಿಲ್ಲ. ಏನಾದರೂ, ದೇವರ ಇಚ್ಚೆಯಂತೆ ನಡೆಯುತ್ತದೆ, ಎಂದು ನಂಬಿರುವವರಂತೆ ಅವಳು, ಬದಲಾವಣೆಗಳಿಗೆ ಈಡಾಗದೆ, ತನ್ನ ಸಂತೋಷ ಸ್ಥಿತಿಯನ್ನು ಕಳೆದುಕೊಳ್ಳಲಿಲ್ಲ. ತಾನಾಗಿ, ಅವಳು ಯಾವ ಬದಲಾವಣೆಗಳನ್ನು ಕೇಳಲಿಲ್ಲ. ಅದಾಗಿ ಬಂದಾಗ, ಅದನ್ನು ಒಪ್ಪಿಕೊಂಡು ಮೊದಲಿನಂತೆಯೇ ಇದ್ದಳು. ಉಪನಿಷತ್ತಿನ ಮೊದಲನೆಯ ಶ್ಲೋಕ ಹೇಳುವುದೂ ಇದೇ!

“ಈ ಜಗತ್ತಿನಲ್ಲಿರುವ ಸ್ಥಾವರ, ಜಂಗಮಾತ್ಮಕವಾದವೆಲ್ಲವೂ ಈಶ್ವರನಿಂದ ಆವರಿಸಲ್ಪಟ್ಟಿದೆ. ಅದನ್ನು ತ್ಯಾಗದಿಂದ ಭುಜಿಸಬೇಕು. ಇನ್ನೊಬ್ಬರ ಧನಕ್ಕೆ ಆಸೆಪಡಬೇಡ”

ಇದು ಈಶಾವಸ್ಯೋಪನಿಷತ್ತಿನ ಮೊದಲನೆಯ ಶ್ಲೋಕದ ಅರ್ಥ.

ಇದನ್ನು ಅರ್ಥಮಾಡಿಕೊಂಡ ಮೇಲೆ, ದಾಸಗಣು ಸಂದೇಹಗಳೆಲ್ಲವೂ ತೀರಿದವು. ಸದ್ಗುರುವು ತನಗೆ ಕೆಲಸದಾಳಿನಿಂದ ಮಾರ್ಗದರ್ಶನ ಮಾಡಿಸಿದರೆಂದು ಬಹಳ ಸಂತೋಷಗೊಂಡರು.

ಬಾಬಾರ ವಿಶಿಷ್ಟ ರೀತಿಯ ಶಿಕ್ಷಣಾ ಕ್ರಮವನ್ನು ಇಲ್ಲಿ ಮತ್ತೊಮ್ಮೆ ಕಾಣುತ್ತೇವೆ. ಬಾಬಾ ಎಂದೂ ಶಿರಡಿ ಬಿಟ್ಟು ಎಲ್ಲಿಗೂ ಹೋಗದಿದ್ದರೂ, ಭಕ್ತರನ್ನು ಬೇರೆ ಬೇರೆ ಸ್ಥಳಗಳಿಗೆ ಕಳುಹಿಸಿ, ಅವರಿಗೆ ತಾವು ಅವರಿಂದ ದೂರವಿಲ್ಲ ಎಂಬ ಅನುಭವವನ್ನು ಕೊಟ್ಟು, ಉಪದೇಶಮಾಡುತ್ತಿದ್ದರು. ಇಂತಹುದೇ ಕ್ರಮವನ್ನು ಅನುಸರಿಸಿ ಉಪದೇಶ ಕೊಡುತ್ತಾರೆ ಎಂದು ಹೇಳಲು ಸಾಧ್ಯವೇ ಇಲ್ಲ. ಯಾರಿಗೆ ಯಾವ ಕ್ರಮ ಸರಿಯೋ, ಅವರಿಗೆ ಅಂತಹ ಕ್ರಮವನ್ನು ಅನುಸರಿಸುತ್ತಿದ್ದರು. ದಾಸಗಣುವನ್ನು ವಿಲೆಪಾರ್ಲೆಗೆ ಕಳುಹಿಸಿ ಕೆಲಸದಾಳಿನಿಂದ ಮಾರ್ಗದರ್ಶನ ಮಾಡಿಸಿದರು. ಹಲವರು ಕೇಳಬಹುದು, "ಅಲ್ಲಿಗೆ ಕಳುಹಿಸುವುದರ ಬದಲು, ಅದನ್ನು ತಾವೇ ಶಿರಡಿಯಲ್ಲೇ ಹೇಳಬಹುದಾಗಿತ್ತಲ್ಲ?" ಎಂದು. ಅಂತಹವರಿಗೆ ಅರ್ಥವಾಗದೇ ಇರುವುದು ಇದು, "ಬಾಬಾ ದಾಸಗಣುಗೆ ಅದನ್ನು ಶಿರಡಿಯಲ್ಲಿ ಬರಿಯ ಮಾತುಗಳಲ್ಲಿ ಹೇಳಿದ್ದರೆ, ಅವರು ಅದನ್ನು ಕೇಳುತ್ತಿದ್ದರೇ ಹೊರತು ಅವರ ಮನಸ್ಸಿನಮೇಲೆ ಅದರ ಪರಿಣಾಮ ಆಗುತ್ತಿರಲಿಲ್ಲ. ಅವರು ಅನುಸರಿಸಿದ ಕ್ರಮದಿಂದ ದಾಸಗಣು ಯಾರೂ ಏನೂ ಹೇಳದೆ, ತಾವೇ ಅದನ್ನು ವಿಶ್ಲೇಷಿಸಿ ಅರ್ಥಮಾಡಿಕೊಳ್ಳುವ ಅವಕಾಶ ಸಿಕ್ಕಿತು. ಅದರಿಂದ ಅವರ ಮನಸ್ಸಿನಲ್ಲಿ ಅದು ಚೆನ್ನಾಗಿ ಊರಿತು”. ಭಕ್ತರು ತಮ್ಮ ಪ್ರಶ್ನೆಗೆ ತಾವೇ ಉತ್ತರ ಹುಡುಕುವಂತೆ ಮಾಡುವುದು ಬಾಬಾರ ಒಂದು ಕ್ರಮವಾಗಿತ್ತು.

ಈ ಉಪನಿಷತ್ತಿನ ನೀತಿಯೇನೆಂದರೆ, "ದೇವರು ಕೊಡುವುದೆಲ್ಲಾ ಒಳ್ಳೆಯದೇ. ತಾನೇ ಎಲ್ಲದರಲ್ಲೂ ಇರುತ್ತಾ, ಆ ದೇವರು ಒಳ್ಳೆಯದನ್ನೇ ದಯಪಾಲಿಸುತ್ತಾನೆ, ಎಂಬ ಧೃಢನಂಬಿಕೆಯಿಂದ ಬಂದದ್ದನ್ನು ತೃಪ್ತಿಯಾಗಿ ಅನುಭವಿಸು. ಇನ್ನೊಬ್ಬರ ಸ್ವತ್ತಿಗಾಗಿ ಆಸೆಪಡಬೇಡ. ನಿನ್ನ ಪಾಲಿಗೆ ಬಂದದ್ದು ಪರಮಾನ್ನವೆಂದು ಭಾವಿಸಿ, ಅನುಭವಿಸು. ಶಾಸ್ತ್ರಗಳಲ್ಲಿ ಹೇಳಿರುವ ರೀತಿಯಲ್ಲಿ ಮಾಡಬೇಕಾದ ಕರ್ಮಗಳನ್ನು ತಪ್ಪದೇ ಮಾಡುತ್ತಿರು. ಎಲ್ಲವೂ ಅವನ ಇಚ್ಛೆಯಂತೆಯೇ ನಡೆಯುತ್ತದೆ. ಅಕರ್ಮಿಯಾಗಬೇಡ. ಕರ್ಮ ಮಾಡುತ್ತಲೇ ನಿಷ್ಕರ್ಮಿಯಾಗಬೇಕು. ತನ್ನನ್ನು ಇತರರಲ್ಲೂ, ಇತರರನ್ನು ತನ್ನಲ್ಲೂ ಕಂಡುಕೊಳ್ಳುತ್ತಾ ಎಲ್ಲವೂ ಆತ್ಮವತ್ ಆದಾಗ, ಅಂತಹವನಿಗೆ ಮೋಹವೆಲ್ಲಿಯದು? ದುಃಖವೆಲ್ಲಿಯದು? ಆತ್ಮವತ್ ಎಲ್ಲರನ್ನೂ ಕಂಡಾಗ, ಸಹಜ ದುರ್ಗುಣಗಳೆಲ್ಲಾ ನಾಶವಾಗಿ ಹೋಗುವವು”.

ಇದರೊಂದಿಗೆ ಬಾಬಾ ದಾಸಗಣು ಅವರ ಈಶಾವಾಸ್ಯೋಪನಿಷತ್ತಿನ ತೊಡಕನ್ನು ಬಿಡಿಸಿದ್ದು ಮತ್ತು ಇತರ ವಿಷಯಗಳನ್ನು ಕುರಿತು ಹೇಳುವ ಇಪ್ಪತ್ತನೆಯ ಅಧ್ಯಾಯ ಮುಗಿಯಿತು. ಮುಂದಿನ ಅಧ್ಯಾಯದಲ್ಲಿ ಹೇಮಾಡ್ ಪಂತ್ ವಿ.ಹೆಚ್.ಥಾಕೂರ್, ಅನಂತರಾವ್ ಪಾಟಣಕರ್, ಪಂಡರಪುರದ ವಕೀಲ ಮತ್ತು ಇತ್ಯಾದಿ ವಿಷಯಗಳನ್ನು ಹೇಳುತ್ತಾರೆ.

||ಶ್ರೀ ಸದ್ಗುರು ಸಾಯಿನಾಥಾರ್ಪಣಮಸ್ತು||ಶುಭಂ ಭವತು||
||ಓಂ ಶಾಂತಿಃ ಶಾಂತಿಃ ಶಾಂತಿಃ||


Saturday, December 24, 2011

||ಹದಿನೆಂಟನೆಯ ಮತ್ತು ಹತ್ತೊಂಭತ್ತನೆಯ ಅಧ್ಯಾಯಗಳು||


||ಶ್ರೀ ಸಾಯಿ ಸಚ್ಚರಿತ್ರೆ||
||ಹದಿನೆಂಟನೆಯ ಮತ್ತು ಹತ್ತೊಂಭತ್ತನೆಯ ಅಧ್ಯಾಯಗಳು||
||ಹೇಮಾಡ್
ಪಂತರಿಗೆ ಕೃಪಾಪ್ರಸಾದ||
ಶ್ರೀ ಗಣೇಶಾಯ ನಮಃ ಶ್ರೀ ಸರಸ್ವತಯೇ ನಮಃ
ಶ್ರೀ ವೆಂಕಟೇಶಾಯ ನಮಃ ಶ್ರೀ ಸಾಯಿನಾಥಾಯ ನಮಃ
ಶ್ರೀ ಸದ್ಗುರುಭ್ಯೋನ್ನಮಃ

ಈ ಅಧ್ಯಾಯಗಳಲ್ಲಿ ಹೇಮಾಡ್ ಪಂತ್, ಬಾಬಾ ಹೇಗೆ ತಮ್ಮನ್ನು ಒಪ್ಪಿಕೊಂಡರು, ಅನುಗ್ರಹಿಸಿದರು ಮತ್ತು ಇತರ ವಿಷಯಗಳನ್ನು ಹೇಳುತ್ತಾರೆ.

ಸದ್ಗುರು ಸಾಯಿ

ಹಿಂದಿನ ಅಧ್ಯಾಯದಲ್ಲಿ ತನ್ನ ಭಕ್ತರು ಅವರು ಕೇಳಿದ್ದನ್ನು ಪಡೆಯುವುದಕ್ಕೆ ಅರ್ಹರೇ ಅಲ್ಲವೇ ಎಂಬುದನ್ನು ಹೇಗೆ ಪರೀಕ್ಷಿಸಿದರು ಎಂಬುದನ್ನು ನೋಡಿದೆವು. ಸದ್ಗುರುವು ತಾನು ಕೊಟ್ಟ ಉಪದೇಶವನ್ನು ಭಕ್ತರು ಎಲ್ಲಿಯವರೆಗೆ ಗ್ರಹಿಸಬಲ್ಲರು ಎಂಬುದರ ಮೇಲೆ ಮುಂದಿನ ಶಿಕ್ಷಣವನ್ನು ಕೊಡುತ್ತಾರೆ. ಹಾಗೆ ಕೊಟ್ಟ ಉಪದೇಶ ಭಕ್ತರನ್ನು ಆತ್ಮೋದ್ಧಾರದ ಕಡೆಗೆ ಕೊಂಡೊಯ್ಯುತ್ತದೆ. "ಗುರುವು ಒಬ್ಬ ಭಕ್ತನಿಗೆ ಕೊಟ್ಟ ಉಪದೇಶ ಅವನಿಗೆ ಮಾತ್ರ. ಇನ್ನೊಬ್ಬರಿಗೆ ಹೇಳಬಾರದು. ಹಾಗೆ ಹೇಳಿದರೆ ಅದರ ಶಕ್ತಿ ಕಡಮೆಯಾಗುತ್ತದೆ" ಎಂಬುದೊಂದು ನಂಬಿಕೆಯಿದೆ. ಇದಕ್ಕೆ ಆಧಾರವೇನೂ ಇಲ್ಲ. ಸದ್ಗುರುವಿನ ಹೇಳಿಕೆಗಳು ಎಲ್ಲರಿಗೂ ಅನ್ವಯಿಸುವಂತಹವು. ಸದ್ಗುರುವು ನಮ್ಮನ್ನು ಸದಾ, ಬೆಳಗ್ಗೆ ರಾತ್ರಿ ಎನ್ನದೆ, ರಕ್ಷಿಸುತ್ತಿರುತ್ತಾನೆ. ಅವರಿಂದ ಉಪದೇಶ ಪಡೆದವನು ಅದನ್ನು ಸರಿಯಾಗಿ ಅರ್ಥಮಾಡಿಕೊಂಡು ಅನುಷ್ಠಾನದಲ್ಲಿ ಇಟ್ಟುಕೊಂಡಿದ್ದರೆ, ಅದನ್ನು ಬೇರೆಯವರಿಗೆ ಹೇಳಿದರೂ ಅದರ ಶಕ್ತಿ ಕಡಮೆಯಾಗುವುದಿಲ್ಲ. ಬುಧಕೌಶಿಕಮುನಿ ತನಗೆ ಕನಸಿನಲ್ಲಿ ತೋರಿದ ರಾಮ ರಕ್ಷಾ ಸ್ತೋತ್ರವನ್ನು ಸಾರ್ವಜನಿಕವಾಗಿ ಪ್ರಚುರಪಡಿಸಿದರು ಎಂಬುದೊಂದು ಉದಾಹರಣೆ.

ಮಕ್ಕಳು ಸಾಮಾನ್ಯವಾಗಿ ಔಷಧ ಕುಡಿಯಲು ಇಷ್ಟಪಡುವುದಿಲ್ಲ. ಅದರಲ್ಲೂ ಕಹಿ ಔಷಧವಾದರೆ ಇನ್ನೂ ಹೆಚ್ಚಿನ ರಂಪ ಮಾಡುತ್ತಾರೆ. ಆದರೂ ತಾಯಿ ಅದಕ್ಕೆ ಸಕ್ಕರೆ ಸೇರಿಸಿಯೋ, ಇಲ್ಲ ಇನ್ನೇನ್ನಾದರು ಆಮಿಷ ತೋರಿಸಿಯೋ ಔಷಧವನ್ನು ಕುಡಿಸುತ್ತಾಳೆ. ಬಾಬಾ ಕೂಡಾ ಅದೇ ರೀತಿಯಲ್ಲಿ ಭಕ್ತರಿಗೆ ಆಧ್ಯಾತ್ಮಿಕ ಪಾಠಗಳನ್ನು ಬೋಧಿಸಿದರು. ಅವರು ಮುಚ್ಚಿಮಾಡಿ ಅಥವ ಸುತ್ತಿ ಬಳಸಿ ಹೇಳುತ್ತಿರಲಿಲ್ಲ. ನೇರವಾಗಿ ಹೇಳುತ್ತಿದ್ದರು. ಭಕ್ತರು ಅವರು ಹೇಳಿದ್ದನ್ನು ತಪ್ಪಾಗಿ ತಿಳಿದುಕೊಳ್ಳಲು ಸಾಧ್ಯವಿರಲಿಲ್ಲ. ತಾವು ಏನು ಹೇಳುತ್ತಿದ್ದೇವೆಂಬುದು ತಕ್ಷಣವೇ ಅರ್ಥವಾಗುವಂತೆ ಹೇಳುತ್ತಿದ್ದರು. ಕೆಲವು ಸಲ ಅವರು ನೀತಿಕಥೆಗಳ ಮೂಲಕವೂ ಶಿಕ್ಷಣ ಕೊಡುತಿದ್ದರು. ಆ ಕಥೆಗಳನ್ನು ಅರ್ಥಮಾಡಿಕೊಂದು ಅದರಂತೆ ನಡೆದವರಿಗೆ ಬಹಳ ಲಾಭದಾಯಕವಾಗಿರುತ್ತಿತ್ತು. ಬಾಬಾರ ಶಿಕ್ಷಣಗಳು ಆತ್ಮೋದ್ಧಾರವೆಂಬ ಅಂಧಕಾರದಲ್ಲಿ ನಡೆಯುತ್ತಿರುವವನಿಗೆ ದಾರಿದೀಪಗಳು.

ಬಾಬಾ ನಮಗೆ ಕಾಣಿಸುತ್ತಿರುವ ತ್ರಿಮೂರ್ತಿ ಸ್ವರೂಪ. ಅವರೇ ನಮ್ಮ ಮಾತಾ ಪಿತೃಗಳು. ಬಂಧು ಬಳಗ ಸ್ನೇಹಿತ ಎಲ್ಲರೂ. ಈ ಪ್ರಪಂಚವೇ ನಮಗೆ ಎದುರಾದರೂ, ನಮ್ಮನ್ನು ಕಾಪಾಡುವವರು ಅವರೊಬ್ಬರೇ. ವಿವೇಕ ವೈರಾಗ್ಯಗಳನ್ನಿತ್ತು, ನಮ್ಮನ್ನು ಇಂದ್ರಿಯ ವಿಷಯಗಳಿಂದ ದೂರಮಾಡಿ, ಜ್ಞಾನಮಾರ್ಗದಲ್ಲಿ ನಡೆಯುವಂತೆ ಮಾಡುವವರು ಅವರೊಬ್ಬರೇ. ಹೀಗೆ ಎಲ್ಲಾ ವಿಧದಲ್ಲೂ ನಮ್ಮನ್ನು ನೋಡಿಕೊಳ್ಳುವ ಆ ಬಾಬಾರ ಚರಣಬದ್ಧರಾಗಿ ಅವರ ಸೇವೆಯನ್ನು ಶ್ರದ್ಧಾ ಭಕ್ತಿ ಉತ್ಸಾಹಗಳೊಡನೆ ಮಾಡಿ ಈ ಸಂಸಾರ ಸಾಗರದಿಂದ ಪಾರಾಗೋಣ. ನಮ್ಮ ಸೇವೆಯಿಂದ ತೃಪ್ತರಾದ ಅವರು, ನಮ್ಮನ್ನು ತಮ್ಮ ತೆಕ್ಕೆಯಲ್ಲಿಟ್ಟುಕೊಂಡು ನಮ್ಮಮೇಲೆ ಸದಾ ಅವರ ಪ್ರೀತಿ ವಿಶ್ವಾಸಗಳನ್ನು ಸುರಿಸುವಂತೆ ಮಾಡೋಣ. ಅವರನ್ನು ಮತ್ತೆ ಮತ್ತೆ ನಮ್ಮ ಸಂದೇಹಗಳನ್ನು ಪರಿಹರಿಸುವಂತೆ ಕೇಳಿ, ನಾವು ಸದಾ ಸತ್ಯಮಾರ್ಗದಲ್ಲಿಯೇ ನಡೆಯುವಂತೆ ಮಾಡಿ ಎಂದು ಬೇಡಿಕೊಳ್ಳೋಣ. ಆತನ ಕೃಪಾದೃಷ್ಟಿ ನಮ್ಮಿಂದ ತಪ್ಪಿಹೋಗದಂತೆ ನಡೆದುಕೊಳ್ಳೋಣ.

ಸಾಠೆ ಕಥೆ

ಬೊಂಬಾಯಲ್ಲಿ ಕ್ರಾಫರ್ಡ್ ಅಧಿಕಾರದಲ್ಲಿದ್ದಾಗ, ಪ್ರಮುಖರಾಗಿದ್ದ ಸಾಠೆಗೆ (ಇವರು ಷಿರಡಿಯಲ್ಲಿ ಸಾಠೆವಾಡ ಕಟ್ಟಿಸಿದ ಶ್ರೀ ಹರಿ ವಿನಾಯಕ್ ಸಾಠೆಯಲ್ಲ, ಬೇರೆಯವರು) ವ್ಯವಹಾರದಲ್ಲಿ ಬಹಳ ನಷ್ಟವಾಯಿತು. ಇತರ ವಿಷಯಗಳಲ್ಲೂ ಆತನ ಪರಿಸ್ಥಿತಿ ಕ್ಲಿಷ್ಟವಾಗಿದ್ದುದರಿಂದ, ಆತನ ಮನಸ್ಥಿತಿ ಬಹಳ ಕುಗ್ಗಿಹೋಗಿ ಮನೆಬಿಟ್ಟು ಎಲ್ಲಿಯಾದರೂ ಹೊರಟು ಹೋಗಬೇಕೆನ್ನುವ ಮನೋಭಾವಕ್ಕೆ ಆತ ಈಡಾಗಿದ್ದರು.

ಸುಖ ಸಂತೋಷಗಳಲ್ಲಿದ್ದಾಗ ನಮಗೆ ದೇವರ ನೆನಪು ಬರುವುದಿಲ್ಲ. ದುಃಖಗಳು ಎದುರಾದಾಗಲೇ ದೇವರ ನೆನಪಾಗುವುದು. ಆತನ ಪುಣ್ಯದಿಂದಲೋ ಎಂಬಂತೆ, ಅವರ ಸ್ನೇಹಿತರು ಅವರನ್ನು ಶಿರಡಿಗೆ ಹೋಗಿ ಬಾಬಾರ ಚರಣಾರವಿಂದಗಳಲ್ಲಿ ಬೀಳು ಎಂದು ಸಲಹೆ ಕೊಟ್ಟರು. ಸ್ನೇಹಿತರ ಸಲಹೆಯಂತೆ ಆತ ಶಿರಡಿಗೆ ಬಂದು, ಬಾಬಾರ ಚರಣಗಳಿಗೆ ಸಾಷ್ಟಾಂಗ ನಮಸ್ಕಾರ ಮಾಡಿದರು. ಬಾಬಾರ ಆ ತೇಜೋಮಯವಾದ, ಸ್ವಚ್ಛ ಶುದ್ಧ ಮೂರ್ತಿಯನ್ನು ಕಾಣುತ್ತಲೇ, ಅತನ ಮನಸ್ಸು ಶಾಂತವಾಯಿತು. ತಕ್ಷಣವೇ ದೃಢನಿಶ್ಚಯದಿಂದ ಕೂತು ಗುರುಚರಿತ್ರೆಯ ಸಪ್ತಾಹ ಪಾರಾಯಣ ಆರಂಭಿಸಿದರು. ಸಪ್ತಾಹದ ಕೊನೆಯ ದಿನ ಆತನ ಕನಸಿನಲ್ಲಿ, ಬಾಬಾ ಗುರುಚರಿತ್ರೆಯನ್ನು ಕೈಯಲ್ಲಿ ಹಿಡಿದು, ಅದನ್ನು ವಿವರಿಸುತ್ತಿರುವಂತೆ ಕಾಣಿಸಿಕೊಂಡರು. ಎದ್ದ ಮೇಲೂ ಆ ಕನಸು ಅವರ ಮನಸ್ಸಿನಲ್ಲಿ ಅಚ್ಚಳಿಯದಂತೆ ನಿಂತಿತ್ತು. ಹಾಗೆ ಬಾಬಾ ಕನಸಿನಲ್ಲಿ ದರ್ಶನ ಕೊಟ್ಟದ್ದು ತನ್ನ ಪುಣ್ಯಫಲವೇ ಎಂದುಕೊಂಡು, ಕಾಕಾ ಸಾಹೇಬರಿಗೆ ತಮ್ಮ ಕನಸನ್ನು ವಿವರಿಸಿ, “ಅದರ ಅರ್ಥ ಏನು? ನಾನು ಇನ್ನೊಂದು ಸಪ್ತಾಹ ಮಾಡಬೇಕೇ? ಅಥವಾ ಇಷ್ಟೇ ಸಾಕೇ? ಎಂದು ಬಾಬಾರನ್ನು ಕೇಳಿ ನನಗೆ ತಿಳಿಸಿ” ಎಂದು ಪ್ರಾರ್ಥನೆ ಮಾಡಿಕೊಂಡರು.

ಅವಕಾಶ ದೊರೆತಾಗ, ಸಾಠೆಯವರ ಕನಸನ್ನು ಹೇಳಿ, ಕಾಕಾ ಸಾಹೇಬರು ಬಾಬಾರನ್ನು ಸಾಠೆಯವರ ಪರವಾಗಿ, "ಬಾಬಾ ಇದರರ್ಥ ಏನು? ಅವರು ಇನ್ನೊಂದು ಸಪ್ತಾಹ ಪಾರಾಯಣ ಮಾಡಬೇಕೆ?" ಎಂದು ಕೇಳಿದರು. ಅದಕ್ಕೆ ಬಾಬಾ, "ಅವನು ಇನ್ನೊಂದು ಸಪ್ತಾಹ ಪಾರಾಯಣ ಮಾಡಲಿ. ಅದನ್ನು ಸರಿಯಾಗಿ ಅರ್ಥಮಾಡಿಕೊಳ್ಳಲಿ. ಅದರಿಂದ ಅವನ ಮನಶ್ಶುದ್ಧಿಯಾಗಿ ಅವನಿಗೆ ಅನುಕೂಲವಾಗುತ್ತದೆ. ಅಲ್ಲಾ ಅವನನ್ನು ಈ ಪ್ರಪಂಚದ ಬಂಧನಗಳಿಂದ ಪಾರುಮಾಡಿ ಕಾಪಾಡುತ್ತಾನೆ" ಎಂದರು. ಈ ಸಂವಾದ ನಡೆದಾಗ ಹೇಮಾಡ್ ಪಂತ್ ಅಲ್ಲಿ ಕುಳಿತು ಬಾಬಾರ ಪಾದ ನೀವುತ್ತಿದ್ದರು.

ಬಾಬಾರ ಆ ಮಾತುಗಳು ಹೇಮಾಡ್ ಪಂತರ ಮನಸ್ಸಿನಲ್ಲಿ ಯೋಚನಾ ತರಂಗಗಳನ್ನೆಬ್ಬಿಸಿತು. ಅವರು "ನಾನು ಈಗ ೪೦ ವರ್ಷಗಳಿಂದಲೂ ಗುರುಚರಿತ್ರೆಯನ್ನು ಓದುತ್ತಿದ್ದೇನೆ. ನನಗೆ ಯಾವ ಅನುಭವವೂ ಆಗಿಲ್ಲ. ಸಾಠೆ ಒಂದು ಸಪ್ತಾಹ ಮಾಡುವುದರಲ್ಲೇ ಅವರಿಗೆ ಪುರಸ್ಕಾರ ದೊರೆತಿದೆ. ನಾನು ಶಿರಡಿಯಲ್ಲಿ ೭ ವರ್ಷಗಳಿಂದ ಬಾಬಾರ ಸೇವೆ ಮಾಡುತ್ತಾ, ಚಾತಕ ಪಕ್ಷಿಯಂತೆ ಅವರ ಅನುಗ್ರಹಕ್ಕಾಗಿ ಕಾದಿದ್ದೇನೆ, ಇನ್ನೂ ನನಗೆ ಅವರ ಅನುಗ್ರಹ ದೊರೆತಿಲ್ಲ. ಸಾಠೆಗೆ ೭ ದಿನಗಳಲ್ಲೇ ಅವರ ಅನುಗ್ರಹ ಸಿಕ್ಕಿದೆ" ಎಂಬ ಯೋಚನಾಲಹರಿಯಲ್ಲಿ ಮುಳುಗಿದರು. ಅವರ ಮನಸ್ಸಿನಲ್ಲಿ ಈ ರೀತಿಯ ಯೋಚನೆಗಳು ಆರಂಭವಾದೊಡನೆ, ಸರ್ವಜ್ಞರಾದ ಬಾಬಾ ಅದನ್ನು ಗುರುತಿಸಿದರು. ಅವರಿಗೆ ಎಲ್ಲವೂ ವಿದಿತವಾಯಿತು. ತಕ್ಷಣವೇ ಹೇಮಾಡ್ ಪಂತರಿಗೆ ಹೇಳಿದರು, "ಶ್ಯಾಮ ಹತ್ತಿರ ಹೋಗಿ ನನಗೆ ೧೫ ರೂಪಾಯಿಗಳ ದಕ್ಷಿಣೆ ಕೇಳಿ ತೆಗೆದುಕೊಂಡು ಬಾ. ಹಾಗೇ ಅವರ ಹತ್ತಿರ ಕೂತು ಸ್ವಲ್ಪ ಹೊತ್ತು ಮಾತನಾಡಿಕೊಂಡು ಬಾ". ಬಾಬಾರ ಮಾತುಗಳೆಂದರೆ ಅದು ಅವರ ಆಜ್ಞೆಯೇ! ಬಾಬಾರ ಆಜ್ಞೆಯಂತೆ ಹೇಮಾಡ್ ಪಂತ್ ಎದ್ದು ಶ್ಯಾಮಾರನ್ನು ಕಾಣಲು ಹೊರಟರು.

ಹೇಮಾಡ್ ಪಂತ್ ಶ್ಯಾಮಾರ ಮನೆಗೆ ಹೋದರು. ಆಗತಾನೇ ಸ್ನಾನ ಮುಗಿಸಿ, ಶ್ಯಾಮಾ ಹರಿನಾಮೋಚ್ಚಾರಣೆ ಮಾಡುತ್ತಾ ಪಂಚೆಯುಡುತ್ತಿದ್ದರು. ಹೇಮಾಡ್ ಪಂತರನ್ನು ಕಂಡೊಡನೆ ಅವರು, "ಇದೇನು? ಈ ಹೊತ್ತಿನಲ್ಲಿ ಬಂದಿರುವಿರಿ? ಮಸೀದಿಯಿಂದ ಒಬ್ಬರೇ ಬರುತ್ತಿರುವಂತೆ ಕಾಣುತ್ತಿದೆ. ಮನಸ್ಸು ಕಳವಳಗೊಂಡಿರುವಂತಿದೆ. ಕುಳಿತುಕೊಳ್ಳಿ. ಶಾಂತರಾಗಿ. ಇಲ್ಲಿರುವ ಈ ತಾಂಬೂಲವನ್ನು ತೆಗೆದುಕೊಳ್ಳಿ. ನಾನು ಅಷ್ಟರಲ್ಲಿ ಪೂಜೆ ಮುಗಿಸಿ ಬರುತ್ತೇನೆ," ಎಂದರು.

ಹೇಮಾಡ್ ಪಂತ್ ಹಾಗೇ ನೋಡುತ್ತಿದ್ದಾಗ ಅಲ್ಲಿ ನಾಥಭಾಗವತ ಪುಸ್ತಕ ಕಾಣಿಸಿತು. ಅದು ಸಂತ ಏಕನಾಥರು ಭಾಗವತದ ಹನ್ನೊಂದನೆಯ ಅಧ್ಯಾಯಕ್ಕೆ ಬರೆದಿರುವ ವ್ಯಾಖ್ಯಾನ. ಅದನ್ನು ನೋಡುತ್ತಲೇ ಪಂತರಿಗೆ ತಾವು ಬೆಳಗ್ಗೆ ಕಾರಣಾಂತರಗಳಿಂದ ಅದನ್ನು ಪೂರ್ತಿಯಾಗಿ ಓದಲಾಗದೇ ಇದ್ದದ್ದು ನೆನಪಿಗೆ ಬಂತು. ತೆಗೆದರೆ, ಸರಿಯಾಗಿ ತಾವು ಎಲ್ಲಿಗೆ ನಿಲ್ಲಿಸಿದ್ದರೋ ಅದೇ ಪುಟ ಕಾಣಿಸಿತು. ಹೇಮಾಡ್ ಪಂತರಿಗೆ ಆಶ್ಚರ್ಯವಾಯಿತು.

ಬಾಪೂಸಾಹೇಬ್ ಜೋಗ್ ಮತ್ತು ಕಾಕಾಸಾಹೇಬ್ ದೀಕ್ಷಿತರಿಗೆ ದಿನವೂ ಭಾವಾರ್ಥ ದೀಪಿಕೆ, ಜ್ಞಾನೇಶ್ವರಿ, ನಾಥಭಾಗವತ ಹಾಗೂ ಭಾವಾರ್ಥ ರಾಮಾಯಣಗಳನ್ನು ಓದಲು ಬಾಬಾ ಹೇಳಿದ್ದರು. ಕಾಕಾ ಸಾಹೇಬ್ ದೀಕ್ಷಿತ್ ದಿನವೂ ಬಾಬಾರ ಪೂಜೆ ಮಾಡಿ, ನೈವೇದ್ಯ ಆದಮೇಲೆ, ಸ್ವಲ್ಪ ಹಾಲು ಕುಡಿದು ಪುಸ್ತಕ ಪಠನ ಆರಂಭಿಸುತ್ತಿದ್ದರು. ನಾಥ ಭಾಗವತ ಬೆಳಗ್ಗೆ, ಭಾವಾರ್ಥ ರಾಮಾಯಣ ರಾತ್ರಿ ಓದುತ್ತಿದ್ದರು. ಜ್ಞಾನದೇವರ ಜ್ಞಾನೇಶ್ವರಿಯನ್ನು ಬಿಟ್ಟರೆ ಮರಾಠಿ ಭಾಷೆಯಲ್ಲಿ ಭಾವಾರ್ಥ ರಾಮಾಯಣ ಎರಡನೆಯ ಸ್ಥಾನದಲ್ಲಿದೆಯೆಂದು ಪ್ರತೀತಿ. ಸಂತ ತುಕಾರಾಮರು ಅದನ್ನು ಒಂದು ಸಾವಿರ ಸಲ ಭಂಡಾರ ಪರ್ವತದ ಮೇಲೆ ಕೂತು ಓದಿದರೆಂದು ತಿಳಿದವರು ಹೇಳುತ್ತಾರೆ.

ಬಾಬಾರ ಭಕ್ತರು ಅವರಲ್ಲಿಗೆ ಬಂದು ತಮಗೆ ಅರ್ಥವಾಗದ ವಿಷಯದ ಬಗ್ಗೆ ಪ್ರಶ್ನೆ ಕೇಳಿದರೆ ಬಾಬಾ ಹಾಗೆ ಪ್ರಶ್ನೆ ಕೇಳಿದವರನ್ನು ಮೇಲೆ ಹೇಳಿದ ಪುಸ್ತಕಗಳಲ್ಲಿ ಯಾವುದಾದರೂ ಒಂದನ್ನು ಓದಲು ಹೇಳುತ್ತಿದ್ದರು. ಅವರು ಹಾಗೆ ಓದಿದಾಗ, ಅವರಿಗೆ ತಮ್ಮ ಪ್ರಶ್ನೆಗೆ ಬಹು ಸಮರ್ಪಕವಾದ ಉತ್ತರಗಳು ದೊರೆಯುತ್ತಿದ್ದವು. ಹೇಮಾಡ್ ಪಂತ್ ಪ್ರತಿದಿನ ನಾಥಭಾಗವತವನ್ನು ಓದುತ್ತಿದ್ದರು. ಅಂದು ಯಾರ ಜೊತೆಯಲ್ಲೋ ಮಸೀದಿಗೆ ಬರಬೇಕಾಯಿತು. ಅದರಿಂದ ಅವರು ಪಠನ ಪೂರ್ತಿ ಮಾಡಲಾಗಿರಲಿಲ್ಲ. ಶ್ಯಾಮಾ ಮನೆಯಲ್ಲಿ, ಆ ಪುಸ್ತಕ ಕಣ್ಣಿಗೆ ಬಿದ್ದು ಅದನ್ನು ತೆಗೆದುಕೊಂಡು ಅಂದು ಓದಲಾಗದೇ ಇದ್ದ ಭಾಗವನ್ನು ಓದಿ ಮುಗಿಸಬೇಕೆಂದು ಪುಸ್ತಕವನ್ನು ತೆಗೆದರೆ, ತಾವು ಎಲ್ಲಿಗೆ ನಿಲ್ಲಿಸಿದ್ದರೋ ಅದೇ ಪುಟ ತೆರೆದುಕೊಂಡಿತು. ಬಾಬಾ ತನ್ನನ್ನು ಈ ಓದು ಪೂರ್ತಿಮಾಡಲೆಂದೇ ಇಲ್ಲಿಗೆ ಕಳುಹಿಸಿದ್ದಾರೆ ಎಂದುಕೊಂಡು ಅದನ್ನು ಓದಿ ಮುಗಿಸುತ್ತಿರುವಂತೆಯೇ ಶ್ಯಾಮ ತಮ್ಮ ಪೂಜೆ ಮುಗಿಸಿ ಅಲ್ಲಿಗೆ ಬಂದರು.

ಶ್ಯಾಮಾರನ್ನು ಕಾಣುತ್ತಲೇ ಹೇಮಾಡ್ ಪಂತ್ ಶ್ಯಾಮಾರಿಗೆ, "ಬಾಬಾ ನಿಮ್ಮಿಂದ ೧೫ ರೂಪಾಯಿ ದಕ್ಷಿಣೆ ತರಲು ಹೇಳಿದ್ದಾರೆ. ಹಾಗೆಯೇ ನಿಮ್ಮ ಜೊತೆ ಕೂತು ಸ್ವಲ್ಪ ಹೊತ್ತು ಮಾತನಾಡಿಕೊಂಡು ಬರಲೂ ಹೇಳಿದ್ದಾರೆ" ಎಂದರು. ಶ್ಯಾಮಾ ಅದನ್ನು ಕೇಳಿ ಆಶ್ಚರ್ಯದಿಂದ, " ನನ್ನ ಹತ್ತಿರ ಹಣವಿಲ್ಲ ಎಂದು ಬಾಬಾಗೆ ಗೊತ್ತಿದೆ. ಅದರಿಂದ ಹಣದ ಬದಲು ನನ್ನ ಹದಿನೈದು ನಮಸ್ಕಾರಗಳನ್ನು ತೆಗೆದುಕೊಳ್ಳಿ" ಎಂದರು. ಹೇಮಾಡ್ ಪಂತ್, "ಆಯಿತು. ತೆಗೆದುಕೊಂಡಿದ್ದೇನೆ. ನಮ್ಮ ದುರಿತನಾಶನಕ್ಕಾಗಿ ಬಾಬಾರ ಲೀಲೆಗಳನ್ನು ಹೇಳಿ. ಕೇಳಿ ಪುನೀತರಾಗೋಣ" ಏಂದರು.

ಶ್ಯಾಮಾ ಹೇಳಿದರು. "ಬಾಬಾರ ಲೀಲೆಗಳು ಅದ್ಭುತವಾದವು. ಆಶ್ಚರ್ಯಕರವಾದವು. ಬಹಳಷ್ಟು ನೀವು ಆಗಲೇ ಬಲ್ಲಿರಿ. ಇಲ್ಲಿಗೆ ಬಂದಮೇಲೆ ನೀವೇ ಸ್ವತಃ ನೋಡಿದ್ದೀರಿ. ನಾನೊಬ್ಬ ಹಳ್ಳಿಯ ಮುಕ್ಕ. ನೀವಾದರೋ ಓದಿ ಬರೆದವರು. ವಿದ್ಯಾವಂತರು. ನಿಮಗೆ ನಾನೇನು ತಾನೇ ಹೇಳಬಲ್ಲೇ? ಎಲೆ ಅಡಿಕೆ ಹಾಕಿಕೊಳ್ಳಿ. ಅಷ್ಟರಲ್ಲಿ ನಾನು ಬಟ್ಟೆ ಬದಲಿಸಿ ಬರುತ್ತೇನೆ" ಎಂದರು.

ಶ್ಯಾಮಾ ಮತ್ತೆ ಬಂದು ಹೇಮಾಡ್ ಪಂತರ ಜೊತೆ ಕುಳಿತು, "ಈ ದೇವರ ರೀತಿಗಳನ್ನು ಗ್ರಹಿಸಲು ಅಸಾಧ್ಯ. ಅವರ ಲೀಲೆಗಳಿಗೆ ಕೊನೆಯೇ ಇಲ್ಲ. ಆದರೆ ಆ ಲೀಲಾರೂಪರು, ತಾವು ಮಾತ್ರ ತಮ್ಮ ಆ ಲೀಲೆಗಳಿಂದ ಪ್ರಭಾವಿತರಾಗುವುದಿಲ್ಲ. ಈಗ ನೀವು ಬಂದಿರುವುದನ್ನೇ ನೋಡಿ. ನಿಮ್ಮಂತಹ ವಿದ್ಯಾವಂತರನ್ನು ನನ್ನಂತಹ ಹಳ್ಳಿಯವನ ಹತ್ತಿರಕ್ಕೆ ಕಳುಹಿಸಬೇಕಾದರೂ ಏಕೆ? ನಿಮಗೆ ಹೇಳುವಂತಹುದು ನನಗೇನು ಗೊತ್ತಿದೆ? ಅವರು ಏನು ಮಾಡುತ್ತಾರೆಂದು ಅವರೊಬ್ಬರಿಗೇ ಗೊತ್ತು. ಅವರು ಮಾಡುವುದೆಲ್ಲಾ ಆ ದೈವಕ್ಕೇ ತಿಳಿಯಬೇಕು”.

ಇಷ್ಟು ಹೇಳಿದ ಶ್ಯಾಮಾ ಮತ್ತೆ, "ನನಗೊಂದು ಕಥೆ ನೆನಪಿಗೆ ಬರುತ್ತಿದೆ. ಅದು ನನಗೆ ಸ್ವತಃ ಗೊತ್ತಿರುವುದು. ಭಕ್ತರ ಧೃಢಸಂಕಲ್ಪಕ್ಕೆ ಬಾಬಾ ತಕ್ಷಣವೇ ಸ್ಪಂದಿಸುತ್ತಾರೆ. ಬೇರೆ ಸಂದರ್ಭಗಳಲ್ಲಿ ಅವರನ್ನು ಅನೇಕ ಪರೀಕ್ಷೆಗಳಿಗೊಳಪಡಿಸಿ, ಆ ಭಕ್ತರು ಪರೀಕ್ಷೆಗಳಲ್ಲಿ ಉತ್ತೀರ್ಣರಾದರೆ ಮಾತ್ರ ಅವರಿಗೆ ಸದುಪದೇಶ ಕೊಡುತ್ತಾರೆ" ಎಂದು ಹೇಳಿದರು. ಉಪದೇಶ ಅನ್ನುವ ಪದ ಕಿವಿಗೆ ಬಿದ್ದೊಡನೆ ಹೇಮಾಡ್ ಪಂತರ ಮನಸ್ಸಿನಲ್ಲಿ ಮಿಂಚು ಹೊಳೆದಂತಾಗಿ ಸಾಠೆಯ ಪಾರಾಯಣ, ಬಾಬಾರ ಬುದ್ಧಿವಾದ, ಹಾಗೂ ತನ್ನ ಯೋಚನಾಲಹರಿಗಳು ಎಲ್ಲವೂ ಕಾಣಿಸಿಕೊಂಡಿತು. ಬಾಬಾ ತನ್ನನ್ನು ಸಾಂತ್ವನಗೊಳಿಸಲು ಶ್ಯಾಮಾರ ಬಳಿಗೆ ಕಳುಹಿಸಿದರು ಎಂಬುದು ಅರ್ಥವಾಯಿತು. ಆ ಯೋಚನೆಗಳನ್ನೆಲ್ಲಾ ಪಕ್ಕಕ್ಕಿಟ್ಟು ಶ್ಯಾಮಾರು ಹೇಳುವುದನ್ನು ಮನಸ್ಸಿಟ್ಟು ಕೇಳಲು ಸಿದ್ಧರಾದರು.

ಶ್ರೀಮತಿ ರಾಧಾಬಾಯಿ ದೇಶಮುಖರ ಕಥೆ

ಕಾಸಾಬಾ ದೇಶಮುಖರ ತಾಯಿ, ಶ್ರೀಮತಿ ರಾಧಾಬಾಯಿ ದೇಶಮುಖ್, ವಯಸ್ಸಾದ ಹೆಂಗಸು. ಬಾಬಾರ ಕೀರ್ತಿ, ಪ್ರತಿಷ್ಠೆಗಳನ್ನು ಕೇಳಿ ಸಂಗಮನೇರಿನಿಂದ ಬರುತ್ತಿದ್ದ ಕೆಲವರ ಜೊತೆಯಲ್ಲಿ ಶಿರಡಿಗೆ ಬಂದರು. ಬಾಬಾರ ದರ್ಶನದಿಂದ ಬಹಳ ಸಂತೋಷಗೊಂಡ ಆಕೆ, ಅವರಲ್ಲಿ ಪ್ರೀತಿ ವಿಶ್ವಾಸಗಳನ್ನು ಬೆಳೆಸಿಕೊಂಡು ಅವರನ್ನೇ ತನ್ನ ‘ಗುರು’ವಾಗಿ ನಿಶ್ಚಯಿಸಿಕೊಂಡರು. ಗುರುವೆಂದು ನಿಶ್ಚಯಿಸಿಕೊಂಡ ಕೂಡಲೆ ಅವರಿಂದ ಉಪದೇಶ ಪಡೆಯಬೇಕೆಂದೂ ನಿರ್ಧರಿಸಿಕೊಂಡರು. ಹಾಗೆ ನಿರ್ಧಾರ ಮಾಡಿಕೊಂಡ ಅವರು ತನಗೆ ಬಾಬಾ ಉಪದೇಶ ಕೊಡುವವರೆಗೂ, ನಿರಾಹಾರ ದೀಕ್ಷೆಯಲ್ಲಿರಲು ಧೃಢಮನಸ್ಸು ಮಾಡಿದರು. ಒಂದು ದಿನವಾಯಿತು. ಎರಡು ದಿನವಾಯಿತು. ಮೂರನೆಯ ದಿನವೂ ಆಯಿತು. ಏನೂ ಆಗಲಿಲ್ಲ. ಆದರೂ, ಆಕೆ ತನ್ನ ನಿರ್ಧಾರ ಬದಲಿಸಲಿಲ್ಲ. ಮೊದಲೇ ವಯಸ್ಸಾದ ಹೆಂಗಸು. ಮೇಲಾಗಿ ಉಪವಾಸ. ಹೀಗಾಗಿ ಆಕೆಯ ಸ್ಥಿತಿ ಚಿಂತಾಜನಕವಾಗುತ್ತಾ ಬಂತು. ನನಗೆ ಅದರಿಂದ ಹೆದರಿಕೆಯಾಗಿ, ಬಾಬಾರ ಹತ್ತಿರಕ್ಕೆ ಹೋಗಿ, ಅವರ ಬಳಿ ಕುಳಿತೆ. ಬಾಬಾ, "ಶಾಮ್ಯಾ, ಏನು ವಿಷಯ? ಆ ನಾರಾಯಣ ತೇಲಿ ನನ್ನನ್ನು ಬಹಳ ಬಾಧಿಸುತ್ತಿದ್ದಾನೆ" ಎಂದರು. ನನಗೆ ಈ ರೀತಿಯ ಮಾತುಕಥೆ ಬೇಕಾಗಿರಲಿಲ್ಲ. ಆ ಹೆಂಗಸಿನ ವಿಷಯವೇ ನನ್ನ ಮನಸ್ಸನ್ನು ಆವರಿಸಿಕೊಂಡಿತ್ತು. ಪ್ರತಿಕ್ಷಣವೂ ನನ್ನ ಆತಂಕ ಹೆಚ್ಚಾಗುತ್ತಿತ್ತು. ಕೊನೆಗೆ ತಡೆಯಲಾರದೆ ನಾನು, "ದೇವಾ, ಇದೇನು ನಿನ್ನ ಲೀಲೆ? ಭಕ್ತರನ್ನು ದೂರ ದೂರಗಳಿಂದ ನೀನೇ ಎಳೆದು ತರುತ್ತೀಯೆ. ಮತ್ತೆ ಏನೂ ತಿಳಿಯದವನಂತೆ ನಮ್ಮನ್ನೇ ಅವರ ಬಗ್ಗೆ ಕೇಳುತ್ತೀಯೆ. ನಿನ್ನನ್ನು ಅರ್ಥಮಾಡಿಕೊಳ್ಳುವವರು ಯಾರು? ಆ ವಯಸ್ಸಾದ ಹೆಂಗಸು ರಾಧಾಬಾಯಿ ದೇಶಮುಖರನ್ನು ಇಲ್ಲಿಗೆ ಬರುವಂತೆ ಮಾಡಿದೆ. ಆಕೆ ಧೃಢಮನಸ್ಸುಮಾಡಿ ಮೂರುದಿನದಿಂದ ಉಪವಾಸ ಕೂತಿದ್ದಾಳೆ. ಅವಳನ್ನೇಕೆ ಇಂತಹ ತೊಂದರೆಗೆ ಈಡುಮಾಡಿದ್ದೀಯೆ? ಅವಳು ಸಾಯಲೂಬಹುದು. ಆಗ ಜನರೆಲ್ಲಾ ‘ಬಾಬಾ ಅವಳಿಗೆ ಉಪದೇಶ ನೀಡದೆ ಅವಳನ್ನು ಕೊಂದರು’ ಎಂದು ಆಡಿಕೊಳ್ಳುತ್ತಾರೆ. ಅವಳನ್ನು ಕರೆದು ಅವಳಿಗೆ ಏನಾದರೂ ಉಪದೇಶ ಕೊಟ್ಟು ಅನುಗ್ರಹಿಸು. ಅವಳ ಸ್ಥಿತಿಯನ್ನು ನಾನು ನೋಡಲಾರೆ. ಅವಳಲ್ಲಿ ದಯೆ ತೋರು. ಅವಳಿಗೆ ಉಪದೇಶ ನೀಡು" ಎಂದು ಬಹಳ ಕಳಕಳಿಯಿಂದ ಹೇಳಿದೆ. ಆಕೆಯ ಧೃಢಸಂಕಲ್ಪವನ್ನು ತಿಳಿದ ಬಾಬಾ, ಆಕೆಯನ್ನು ತನ್ನ ಹತ್ತಿರಕ್ಕೆ ಕರೆಸಿಕೊಂಡು, ಈ ರೀತಿಯಲ್ಲಿ ಉಪದೇಶ ಕೊಟ್ಟರು.

"ಅಮ್ಮಾ, ನೀನೇ ನನಗೆ ತಾಯಿ. ನಿಜವಾಗಿಯೂ ನಾನು ನಿನ್ನ ಮಗು. ನನ್ನ ಮೇಲೆ ಕರುಣೆ ತೋರು. ನಾನು ಹೇಳುವುದನ್ನು ಕೇಳು. ನನ್ನ ಸ್ವಂತ ಅನುಭವವನ್ನೇ ಹೇಳುತ್ತೇನೆ. ಇದನ್ನು ಕೇಳಿದರೆ, ನಿನಗೂ ಒಳ್ಳೆಯದಾಗುತ್ತದೆ. ನನಗೊಬ್ಬರು ಗುರುಗಳಿದ್ದರು. ಅವರೊಬ್ಬ ಮಹಾಪುರುಷ. ದಯಾಳು. ಬಹಳಕಾಲ ನಾನು ಅವರ ಸೇವೆ ಮಾಡಿದೆ. ಆದರೂ ಅವರು ನನಗೆ ಎಂದೂ ಯಾವತರಹೆಯ ರಹಸ್ಯ ಮಂತ್ರವನ್ನೂ ನನ್ನ ಕಿವಿಯಲ್ಲಿ ಹೇಳಲಿಲ್ಲ. ಆದರೂ ನಾನು ಅವರ ಸೇವೆಯಲ್ಲೇ ಇದ್ದುಕೊಂಡು, ಅವರಿಂದ ಉಪದೇಶ ಪಡೆಯಲೇಬೇಕು ಎಂದು ನಿರ್ಧರಿಸಿಕೊಂಡೆ. ಆ ಮಹಾಪುರುಷನಿಗೆ ತನ್ನದೇ ಆದ ರೀತಿ ನೀತಿಗಳಿದ್ದವು. ಅವರು ನನ್ನ ತಲೆ ಬೋಳಿಸಿ, ನನ್ನನ್ನು ಎರಡುಪೈಸೆ ದಕ್ಷಿಣೆ ಕೇಳಿದರು. ನಾನು ಅದನ್ನು ತಕ್ಷಣವೇ ಅವರಿಗೆ ಕೊಟ್ಟೆ. ‘ನಿಮ್ಮ ಗುರುಗಳು ಪೂರ್ಣರೂಪರು ಎಂದಮೇಲೆ ಅವರೇಕೆ ಹಣ ಕೇಳಿದರು? ಅದರಿಂದ ಅವರಿಗೆ ಹಣದ ಮೇಲೆ ಆಸೆ ಇದೆ ಎಂದಾಗುತ್ತದೆಯಲ್ಲವೇ?’ ಎಂದು ನೀನು ನನ್ನನ್ನು ಕೇಳಬಹುದು. ಆದರೆ ಅವರು ಎಂದೂ ಹಣಕ್ಕಾಗಿ ಆಸೆ ಪಡಲಿಲ್ಲ. ಅವರು ನನ್ನನ್ನು ಕೇಳಿದ್ದು, ಶ್ರದ್ಧೆ, ಸಹನೆ (ಸಬೂರಿ) ಎಂಬ ಎರಡು ಕಾಸುಗಳು. ನಾನು ಅವರಿಗೆ ಅವೆರಡನ್ನೂ ಕೊಟ್ಟೆ. ಅದರಿಂದ ಅವರು ಬಹು ಸಂತುಷ್ಟರಾದರು.

ನಾನು ನನ್ನ ಗುರುವಿಗೆ ಹನ್ನೆರಡು ವರ್ಷಕಾಲ ಸೇವೆ ಮಾಡಿದೆ. ನನಗೆ ಅನ್ನ ಬಟ್ಟೆಗಳಿಗೆ ಎಂದೂ ಕೊರತೆಯಿರಲಿಲ್ಲ. ನನ್ನ ಗುರು ಪ್ರೇಮಸ್ವರೂಪಿ. ಪ್ರೇಮವೇ ಮೂರ್ತಿಯೆತ್ತಿ ಬಂದಂತಿದ್ದರು. ಅದನ್ನು ನಾನು ಹೇಗೆತಾನೇ ವರ್ಣಿಸಲಿ? ನನ್ನನ್ನು ಅವರು ಅತ್ಯಂತ ಪ್ರೀತಿಯಿಂದ ನೋಡಿಕೊಂಡರು. ಅಂತಹ ಗುರು ಸಿಕ್ಕುವುದು ಬಹಳ ಅಪರೂಪ. ಅವರು ಯಾವಾಗಲೂ ಧ್ಯಾನಸ್ಥರಾಗಿ, ಆನಂದ ಸ್ಥಿತಿಯಲ್ಲಿರುತ್ತಿದ್ದರು. ಅವರ ಮುಂದೆ ಕುಳಿತ ನಾನೂ ಆನಂದದಲ್ಲಿರುತ್ತಿದ್ದೆ. ನಾನು ಸದಾ ಅವರನ್ನೇ ನನ್ನ ದೃಷ್ಟಿಯಲ್ಲಿ ಇಟ್ಟುಕೊಂಡಿರುತ್ತಿದ್ದೆ. ನನಗೆ ಹಸಿವು ಬಾಯಾರಿಕೆಗಳು ಆಗುತ್ತಿರಲಿಲ್ಲ. ಅವರಿಲ್ಲದೇ ಹೋದರೆ ನಾನು ಚಡಪಡಿಸಿಹೋಗುತ್ತಿದ್ದೆ. ಅವರಲ್ಲದೆ ನನಗೆ ಬೇರೆ ಯಾವ ಧ್ಯಾನವೂ ಇರಲಿಲ್ಲ. ಅವರೇ ನನ್ನ ಧ್ಯಾನ ಮೂರ್ತಿಯಾಗಿದ್ದರು. ಅವರಲ್ಲದೆ ನನಗೆ ಬೇರೆ ಯಾವುದೂ ದೃಷ್ಟಿಗೆ ಬರುತ್ತಿರಲಿಲ್ಲ. ಆತನೇ ನನ್ನ ಏಕಮಾತ್ರ ಶರಣ್ಯ, ಧ್ಯಾನಮೂರ್ತಿ. ನನ್ನ ಮನಸ್ಸು ಆತನಲ್ಲೇ ಸಂಪೂರ್ಣವಾಗಿ ಲೀನವಾಗಿಹೋಗಿತ್ತು. ಇದು ನನ್ನ ಒಂದು ಪೈಸೆ ದಕ್ಷಿಣೆ. ಇನ್ನೊಂದು ಪೈಸೆ ಸಹನೆ, ಸಬೂರಿ. ಬಹಳ ಕಾಲ ನಾನು ಸಹನೆಯಿಂದ ಗುರುವಿನ ಸೇವೆಯಲ್ಲಿ ನಿರತನಾಗಿ ಹೋಗಿದ್ದೆ. ಸಹನೆ ಈ ನಿಸ್ಸಾರ ಜೀವನದಿಂದ ನಮ್ಮನ್ನು ಪಾರುಮಾಡುತ್ತದೆ. ಮನುಷ್ಯನಿಗೆ ಸಹನೆಯೇ ಪೌರುಷ. ಎಲ್ಲ ಪಾತಕಗಳನ್ನೂ ತೊಡೆದುಹಾಕುತ್ತದೆ. ಸಂಕಟಗಳನ್ನು ನಿವಾರಿಸುತ್ತದೆ. ಅಧೈರ್ಯವನ್ನು ಓಡಿಸುತ್ತದೆ. ಕೊನೆಗೆ ಜಯವನ್ನು ತಂದುಕೊಡುತ್ತದೆ. ಸಹನೆಯೇ ಎಲ್ಲ ಗುಣಗಳ ಆಗರ. ಸುಯೋಚನೆಗಳ ಜೊತೆಗಾರ್ತಿ. ನಿಷ್ಠೆ (ಶ್ರದ್ಧೆ), ಸಬೂರಿ (ಸಹನೆ)ಗಳು ಅವಳಿಜವಳಿಗಳಂತೆ ಯಾವಾಗಲೂ ಅನ್ಯೋನ್ಯವಾಗಿರುವುವು. ನನ್ನ ಗುರು ನನ್ನಿಂದ ಏನನ್ನೂ ಅಪೇಕ್ಷಿಸಲಿಲ್ಲ. ನನ್ನನ್ನು ಅವರು ಕಡೆಗಾಣಿಸಲಿಲ್ಲ. ಎಲ್ಲಾಕಾಲದಲ್ಲೂ ಎಲ್ಲದರಿಂದಲೂ, ಎಲ್ಲರಿಂದಲೂ ನನ್ನನ್ನು ರಕ್ಷಿಸಿದರು. ನಾನು ಯಾವಾಗಲೂ ಅವರ ಜೊತೆಯಲ್ಲೇ ಇರುತ್ತಿದ್ದೆ. ಕೆಲವುಸಲ ಅವರು ನನ್ನಿಂದ ದೂರವಾಗಿದ್ದರೂ, ಅವರ ಪ್ರೇಮದಿಂದ ನಾನು ವಂಚಿತನಾಗಲಿಲ್ಲ. ಅವರು ಎಲ್ಲಿದ್ದರೂ ತಮ್ಮ ದೃಷ್ಟಿಯಿಂದಲೇ ನನ್ನನ್ನು ರಕ್ಷಿಸುತ್ತಿದ್ದರು. ತಾಯಿ ಆಮೆ, ಮರಿ ಆಮೆಯನ್ನು ತಾನು ಎಲ್ಲೇ ಇರಲಿ ತನ್ನ ಪ್ರೇಮ ದೃಷ್ಟಿಯಿಂದಲೇ ಸಾಕುವಂತೆ ಅವರು ನನ್ನನ್ನು ನೋಡಿಕೊಳ್ಳುತ್ತಿದ್ದರು.

"ಅಮ್ಮಾ, ಇಷ್ಟೆಲ್ಲಾ ಇದ್ದರೂ, ನನ್ನ ಗುರುವು ನನಗೆ ಎಂದೂ ಏನೂ ಮಂತ್ರೋಪದೇಶ ನೀಡಲಿಲ್ಲವೆಂದರೆ ನಾನಾದರೂ ಹೇಗೆ ನಿನಗೆ ಮಂತ್ರೋಪದೇಶ ನೀಡಬಲ್ಲೆ? ನಾನು ಈಗ ಹೇಳುವುದನ್ನು ಚೆನ್ನಾಗಿ ನೆನಪಿಟ್ಟುಕೋ. ಗುರುವು "ಕೂರ್ಮದೃಷ್ಟಿ"ಯಿಂದ ನೋಡಿದ ಪ್ರೇಮಪೂರಿತ ನೋಟವೇ ನಮಗೇ ಸುಖ ಸಂತೋಷಗಳನ್ನು ನೀಡುತ್ತದೆ. ಮಂತ್ರ ಉಪದೇಶಗಳಿಗಾಗಿ ಪರದಾಡಬೇಡ. ನನ್ನನ್ನೇ ನಿನ್ನ ಯೋಚನೆಗಳ ವಸ್ತುವನ್ನಾಗಿ ಮಾಡಿಕೋ. ಆ ನಿಶ್ಚಯದಿಂದ ಅತ್ತಿತ್ತ ಅಲುಗಾಡಬೇಡ. ಅದು ನಿನ್ನನ್ನು ಪರಮಾತ್ಮನೆಡೆಗೆ ಕರೆದು ಕೊಂಡುಹೋಗುತ್ತದೆ. ಹೃದಯಾಂತರಾಳದಿಂದ ನನ್ನಲ್ಲಿ ನಿನ್ನ ದೃಷ್ಟಿಯನ್ನಿಡು. ನಾನೂ ನಿನ್ನನ್ನು ಅದೇ ರೀತಿಯಲ್ಲಿ ನೋಡುತ್ತೇನೆ. ನಾನು ಸತ್ಯವನ್ನೇ ಹೇಳುತ್ತಿದ್ದೇನೆ. ಸತ್ಯವಲ್ಲದೆ ಇನ್ನೇನನ್ನೂ ಹೇಳುವುದಿಲ್ಲ. ಶಾಸ್ತ್ರ ಪರಿಣತೆ, ಸಾಧನೆಗಳು ಯಾವುವೂ ಬೇಕಾಗಿಲ್ಲ. ಗುರುವಿನಲ್ಲಿ ಶ್ರದ್ಧೆ ನಂಬಿಕೆಗಳನ್ನು ಇಟ್ಟುಕೋ. ಗುರುವೇ ಎಲ್ಲವನ್ನೂ ಮಾಡುವವನು ಎಂದು ಧೃಢವಾಗಿ ನಂಬಿಕೋ. ಯಾರು ಗುರುವೇ ತ್ರಿಮೂರ್ತಿ ರೂಪ ಎಂದು ಧೃಢವಾಗಿ ನಂಬಿ ಅವನ ಗುರುತತ್ತ್ವವನ್ನು ಕಾಣುತ್ತಾನೋ ಅವನೇ ಅತ್ಯಂತ ಭಾಗ್ಯವಂತ, ಪುಣ್ಯವಂತ." ಇದನ್ನು ಕೇಳಿದ ರಾಧಾಬಾಯಿ ದೇಶಮುಖ್ ಇದರ ಅಂತರಾರ್ಥವನ್ನು ಮನದಟ್ಟು ಮಾಡಿಕೊಂಡು, ಬಾಬಾರಿಗೆ ನಮಸ್ಕಾರಮಾಡಿ ತನ್ನ ಉಪವಾಸ ದೀಕ್ಷೆಯನ್ನು ನಿಲ್ಲಿಸಿದಳು”.

ಈ ಕಥೆಯನ್ನು ಕೇಳಿದ ಹೇಮಾಡ್ ಪಂತ್ ತಾನು ಇಲ್ಲಿಗೆ ಬರುವುದಕ್ಕೆ ಮುಂಚೆ ಮಸೀದಿಯಲ್ಲಿ ನಡೆದ ಘಟನಾವಳಿಗಳನ್ನೆಲ್ಲಾ ನೆನಪಿಗೆ ತಂದುಕೊಂಡು ಇವೆರಡಕ್ಕೂ ತಾಳೆ ಹಾಕಿ ನೋಡಿದರು. ಕಾಕಾ ಸಾಹೇಬರು ಹೇಳಿದ ಸಾಠೆಯವರ ಪಾರಾಯಣ, ಅದಕ್ಕೆ ಬಾಬಾರ ಉತ್ತರ, ತನ್ನ ಮನಸ್ಸಿನ ಆಂದೋಳನ, ಬಾಬಾ ತನ್ನನ್ನು ಶ್ಯಾಮಾ ಬಳಿಗೆ ಕಳುಹಿಸಿದ್ದು, ಸ್ವಲ್ಪಹೊತ್ತು ಅಲ್ಲಿ ಕುಳಿತು ಮಾತನಾಡಿಕೊಂಡು ಬಾ ಎಂದದ್ದು, ಎಲ್ಲವೂ ನೆನಪಿಗೆ ಬಂದವು. ರಾಧಾಬಾಯಿಯವರ ಕಥೆಯೊಡನೆ ಇವೆಲ್ಲವನ್ನೂ ತಾಳೆ ಹಾಕಿ ನೋಡಿದರೆ ಅವರಿಗೆ ಬಾಬಾರ ಅದ್ಭುತ ಲೀಲೆಯೊಂದರ ಸಂಪೂರ್ಣ ಚಿತ್ರ ಕಣ್ಣಮುಂದೆ ಸ್ಫುಟವಾಗಿ ಕಾಣಿಸಿತು.

ಹೇಮಾಡ್ ಪಂತರ ಮನಸ್ಸು ಆಂದೋಳನಕ್ಕೊಳಪಟ್ಟಿದೆ ಎಂಬುದನ್ನರಿತ ಬಾಬಾ, ತಮ್ಮದೇ ಆದ ಕಥೆಯನ್ನು, ತಮ್ಮದೇ ಆದ ರೀತಿಯಲ್ಲಿ, ಶ್ಯಾಮಾ ಮೂಲಕ ಹೇಳಿಸಿದರು. ಅದರ ಅಂತರಾರ್ಥವನ್ನು ಅರ್ಥಮಾಡಿಕೊಂಡ ಹೇಮಾಡ್ ಪಂತರಿಗೆ ಕಣ್ಣು ತುಂಬಿ ಬಂತು. ಬಾಬಾ ತನ್ನಲ್ಲಿ ತೋರಿದ ಪ್ರೀತಿಯ ಆಳವನ್ನು ಅರಿತು ಸಂತೋಷ ಸಾಗರದಲ್ಲಿ ಮುಳುಗಿಹೋದರು. ಆ ಸ್ಥಿತಿಯಲ್ಲಿ ಅವರನ್ನು ನೋಡಿದ ಶ್ಯಾಮಾ, "ಯಾಕೆ? ಏನಾಯಿತು? ಕಣ್ಣೀರೇಕೆ? ಬಾಬಾರ ಅಸಂಖ್ಯ ಲೀಲೆಗಳಲ್ಲಿ ಇನ್ನೂ ಒಂದು ಕೇಳಬೇಕೇನು?" ಎಂದರು. ಅದೇ ಸಮಯಕ್ಕೆ ಸರಿಯಾಗಿ ಮಸೀದಿಯಿಂದ ಘಂಟೆಯ ಶಬ್ದ ಕೇಳಿಸಿತು. ಅದು ಅರತಿಯ ಸಮಯ. ಇಬ್ಬರೂ ಆತುರಾತುರವಾಗಿ ಮಸೀದಿಗೆ ಹೋದರು. ಜೋಗ್ ಆಗಲೇ ಪೂಜೆ ಆರಂಭ ಮಾಡಿದ್ದರು. ಹೆಂಗಸರು ಗಂಡಸರು ಮಕ್ಕಳಾದಿಯಾಗಿ ಎಲ್ಲರೂ ಮಸೀದಿಯಲ್ಲಿ, ಅಂಗಳದಲ್ಲಿ ತುಂಬಿದ್ದರು. ಶ್ಯಾಮಾ ನೇರವಾಗಿ ಹೋಗಿ ಬಾಬಾರ ಬಲಕ್ಕೆ ಕೂತರು. ಹೇಮಾಡ್ ಪಂತ್ ಬಾಬಾ ಮುಂದೆ ಕೂತರು. ಅವರನ್ನು ಕಾಣುತ್ತಲೇ ಬಾಬಾ, “ಶ್ಯಾಮಾರಿಂದ ತಂದ ದಕ್ಷಿಣೆ ಕೊಡು” ಎಂದರು. ಹೇಮಾಡ್ ಪಂತ್, "ಹಣದ ಬದಲು ಶ್ಯಾಮಾ ನಮಸ್ಕಾರಗಳನ್ನು ಕೊಟ್ಟಿದ್ದಾರೆ. ಅವರೇ ಇಲ್ಲಿದ್ದಾರೆ, ನೀವೇ ಕೇಳಿ" ಎಂದರು. ಆಗ ಬಾಬಾ ಪಂತರನ್ನು ಕೇಳಿದರು, "ಈಗ ಹೇಳು. ನೀವಿಬ್ಬರೂ ಏನಾದರೂ ಮಾತನಾಡಿದಿರಾ? ಏನು ಮಾತನಾಡಿದಿರಿ? ಎಲ್ಲವನ್ನೂ ಹೇಳು" ಎಂದರು. ಬಾಬಾ ಹಾಗೆ ಕೇಳುತ್ತಲೇ ಹೇಮಾಡ್ ಪಂತ್ ಅತ್ಯಂತ ಸಂತೋಷದಿಂದ ಉತ್ಸಾಹಿತರಾಗಿ, ಶ್ಯಾಮಾ ಮನೆಯಲ್ಲಿ ನಡೆದದ್ದೆಲ್ಲವನ್ನೂ, ಆರತಿಹಾಡುಗಳು ಘಂಟೆಗಳ ಶಬ್ದದ ಮಧ್ಯೆ ವಿಶದವಾಗಿ ಏನೂ ಬಿಡದಂತೆ ಹೇಳಿದರು. ಬಾಬಾರೂ ಬಹಳ ಉತ್ಸಾಹದಿಂದ ಅವರ ಕಡೆಗೆ ತಿರುಗಿ ತಲೆ ಬಗ್ಗಿಸಿ, ಮನಸ್ಸಿಟ್ಟು ಎಲ್ಲವನ್ನೂ ಕೇಳಿದರು. ಎಲ್ಲವನ್ನೂ ಹೇಳಿದ ಹೇಮಾಡ್ ಪಂತ್, "ಆ ವೃದ್ಧ ಹೆಂಗಸಿನ ಕಥೆ ಅದ್ಭುತವಾದದ್ದು. ನಿಮ್ಮ ಲೀಲೆಗಳನ್ನು ವಿವರಿಸಲಸಾಧ್ಯ. ಆ ಕಥೆಯ ನೆವದಿಂದ ನನ್ನನ್ನು ನೀವು ಅನುಗ್ರಹಿಸಿದ್ದೀರಿ" ಎಂದರು. ಬಾಬಾ, " ಕಥೆಯೇನೋ ಅದ್ಭುತವೇ! ಆದರೆ ನೀನು ಹೇಗೆ ಅದರಿಂದ ಅನುಗ್ರಹಿಸಲ್ಪಟ್ಟೆ?" ಎಂದರು. ಹೇಮಾಡ್ ಪಂತ್ ಮತ್ತೆ ಎಲ್ಲವನ್ನೂ ವಿವರವಾಗಿ ಹೇಳಿ, ಅದರಿಂದ ತನ್ನ ಮನಸ್ಸಿನ ಮೇಲೆ ಆದ ಪರಿಣಾಮವನ್ನೂ ಹೇಳಿದರು. ಆಗ ಬಾಬಾ, "ಕಥೆಯ ಅಂತರಾರ್ಥ ನಿನಗೆ ವೇದ್ಯವಾಯಿತೆ?" ಎಂದು ಮತ್ತೆ, ಒತ್ತಿ ಕೇಳಿದರು. ಹೇಮಾಡ್ ಪಂತ್, "ಹೌದು ಬಾಬಾ, ನನ್ನ ಮನಸ್ಸು ಆಂದೋಳನಕ್ಕೆ ಒಳಗಾಗಿತ್ತು. ಆ ಕಥೆಯನ್ನು ಕೇಳಿದ ಮೇಲೆ ಈಗ ಶಾಂತವಾಗಿದೆ. ಸರಿಯಾದ ದಾರಿ ಏನು ಹೇಗೆ ಎಂಬುದು ತಿಳಿಯಿತು" ಎಂದರು.

ಆಗ ಬಾಬಾ ಹೇಳಿದರು "ನನ್ನ ರೀತಿಗಳು ವಿಚಿತ್ರವಾದವು. ಈ ಕಥೆಯೊಂದನ್ನು ನೆನಪಿನಲ್ಲಿಟ್ಟುಕೋ. ಅದು ನಿನಗೆ ಆಸರೆಯಾಗುತ್ತದೆ. ಆತ್ಮ ಸಾಕ್ಷಾತ್ಕಾರಕ್ಕೆ ಧ್ಯಾನ ಬಹಳ ಅವಶ್ಯ. ಅದರ ಸತತ ಅಭ್ಯಾಸದಿಂದ ಯೋಚನಾಲಹರಿಗಳು ಅಡಗಿಹೋಗುತ್ತವೆ. ಏಕಾಗ್ರತೆ ಕುದುರುತ್ತದೆ. ಆಶಾರಹಿತನಾಗು. ಎಲ್ಲರಲ್ಲೂ ಎಲ್ಲದರಲ್ಲೂ ಇರುವ ಆ ಪರಮಾತ್ಮನನ್ನೇ ಕುರಿತು ಧ್ಯಾನಿಸು. ಮನಸ್ಸು ಏಕಾಗ್ರವಾದಾಗ, ನಾವು ಇಚ್ಚಿಸಿದ ಗಮ್ಯವನ್ನು ಸೇರಲು ಸಾಧ್ಯವಾಗುತ್ತದೆ. ನನ್ನ ನಿರ್ಗುಣ ರೂಪವನ್ನು ಸದಾ ಧ್ಯಾನಿಸು. ಅದೇ ಸಚ್ಚಿದಾನಂದ. ನಿನಗೆ ನಿರ್ಗುಣ ರೂಪ ಧ್ಯಾನ ಅಸಾಧ್ಯವಾದರೆ, ದಿನವೂ ನೋಡುತ್ತಿರುವ ನನ್ನ ಈ ಸಗುಣ ರೂಪವನ್ನು ಧ್ಯಾನಿಸು. ಹಾಗೆ ನೀನು ಸತತವಾಗಿ ಮಾಡುತ್ತಾ ಹೋದರೆ, ನಿನ್ನ ಮನಸ್ಸು ಒಂದುಕಡೆ ಸ್ಥಿರವಾಗಿ, ಕೊನೆಗೆ ಧ್ಯಾನ, ಧ್ಯೇಯ, ಧ್ಯಾತ ಎಲ್ಲವೂ ಒಂದೇ ಆಗಿಹೋಗುತ್ತದೆ. ಧ್ಯಾತ ಅಂತಸ್ಸಾಕ್ಷಿಯೊಡನೆ ಲೀನವಾಗಿ, ಬ್ರಹ್ಮನಲ್ಲಿ ಸೇರುತ್ತಾನೆ. ಆಮೆಯ ಮರಿಗಳು ತಮ್ಮ ತಾಯಿಯನ್ನು ಬಿಟ್ಟು ಮತ್ತೇನನ್ನೂ ಧ್ಯಾನ ಮಾಡುವುದಿಲ್ಲ. ಬೇರೆ ದಡದಲ್ಲಿರುವ ತಾಯಿ ಆಮೆ, ಅವುಗಳಿಗೆ ಆಹಾರವೇನೂ ಕೊಡುವುದಿಲ್ಲ. ಅದರ ದೃಷ್ಟಿಯೇ ಅವಕ್ಕೆ ಪೋಷಣೆ. ಆ ದೃಷ್ಟಿಯೇ ಆ ಮರಿಗಳಿಗೆ ಅಮೃತವರ್ಷ, ಪೋಷಣೆ ಮತ್ತು ಸುಖ ಸಂತೋಷಗಳು. ಅದೇ ರೀತಿಯಲ್ಲೇ ಗುರು ಶಿಷ್ಯರ ಸಂಬಂಧವೂ ಕೂಡಾ."

ಬಾಬಾ ಇಷ್ಟು ಹೇಳಿ ಮುಗಿಸುವ ವೇಳೆಗೆ ಆರತಿಯೂ ಮುಗಿದು ಅಲ್ಲಿ ಕೂಡಿದ್ದವರೆಲ್ಲಾ ಒಂದೇ ಕೊರಳಿನಲ್ಲಿ, "ಸಚ್ಚಿದಾನಂದ ಸದ್ಗುರು ಶ್ರೀ ಸಾಯಿನಾಥ ಮಹಾರಾಜ ಕೀ ಜೈ" ಎಂದು ಉದ್ಘೋಷ ಮಾಡಿದರು. ನಾವೂ ಆ ಸಮಯದಲ್ಲಿ ಮಸೀದಿಯಲ್ಲಿ ಇದ್ದೇವೆಂದು ಊಹಿಸಿಕೊಂಡು ಆ ಉದ್ಘೋಷದಲ್ಲಿ ಭಾಗಿಗಳಾಗಿ, "ಸಚ್ಚಿದಾನಂದ ಸದ್ಗುರು ಶ್ರೀ ಸಾಯಿನಾಥ ಮಹಾರಾಜಕೀ ಜೈ" ಎನ್ನುತ್ತಾ ಅದರಲ್ಲಿ ಪಾಲ್ಗೊಳ್ಳೋಣ.

ಆರತಿಯಾದ ಮೇಲೆ ಎಲ್ಲರಿಗೂ ಪ್ರಸಾದ ಹಂಚಿದರು. ಜೋಗ್ ಬಾಬಾರ ಬಳಿಗೆ ಬಂದು, ನಮಸ್ಕಾರ ಮಾಡಿ, ಅವರ ಕೈಯಲ್ಲಿ ಒಂದು ಹಿಡಿಯಷ್ಟು ಕಲ್ಲುಸಕ್ಕರೆ ಇಟ್ಟರು. ಬಾಬಾ ಅದಷ್ಟನ್ನೂ ಹೇಮಾಡ್ ಪಂತರಿಗೆ ಕೊಟ್ಟು, "ಈ ಕಥೆಯನ್ನು ಚೆನ್ನಾಗಿ ಜ್ಞಾಪಕದಲ್ಲಿಟ್ಟುಕೋ. ಈ ಕಲ್ಲುಸಕ್ಕರೆಯಷ್ಟೇ ನಿನ್ನ ಜೀವನವೂ ಸಿಹಿಯಾಗಿರುವುದು, ನಿನ್ನ ಇಚ್ಛೆಗಳೆಲ್ಲ ಪೂರ್ಣವಾಗುವುವು. ನೀನು ಸಂತೋಷದಿಂದ ಇರುತ್ತೀಯೆ" ಎಂದು ಹೇಳಿದರು.

ಭಾವನಾವಶರಾಗಿ, ಹೇಮಾಡ್ ಪಂತ್ ಕಣ್ಣೀರು ಸುರಿಸುತ್ತಾ, "ಬಾಬಾ, ಎಲ್ಲ ಕಾಲದಲ್ಲೂ ನನ್ನನ್ನು ಇದೇ ರೀತಿಯಲ್ಲಿ ಅನುಗ್ರಹಿಸುತ್ತಾ, ಆಶೀರ್ವದಿಸುತ್ತಾ, ರಕ್ಷಿಸಿ" ಎಂದು ಬೇಡಿಕೊಂಡರು. ಬಾಬಾ ಅವರಿಗೆ ಭರವಸೆ ನೀಡಿ, "ಈ ಕಥೆಯನ್ನು ನೆನಪಿನಲ್ಲಿಟ್ಟುಕೊಂಡು, ಮನನ ಮಾಡುತ್ತಾ, ಅದನ್ನು ನಿನ್ನ ಜೀವನದಲ್ಲಿ ಅಳವಡಿಸಿಕೋ. ಆಗ ನೀನು ಸದಾ ಆ ಪರಮಾತ್ಮನನ್ನು ನೆನಸುತ್ತ ಅವನ ಧ್ಯಾನದಲ್ಲೇ ಇರುವಂತಾಗುತ್ತದೆ. ಅವನು ನಿನ್ನ ಕಣ್ಣಿಗೆ ಕಾಣಿಸಿಕೊಳ್ಳುತ್ತಾನೆ" ಎಂದರು.

ಆಗ ದೊರೆತ ಆ ಕಲ್ಲುಸಕ್ಕರೆಯನ್ನು, ಅಮೃತವನ್ನು, ಹೇಮಾಡ್ ಪಂತ್ ನಮಗೆಲ್ಲ ಶ್ರೀ ಸಾಯಿ ಸಚ್ಚರಿತ್ರೆಯ ರೂಪದಲ್ಲಿ ಹಂಚಿದ್ದಾರೆ. ಆ ಅಮೃತವನ್ನು ನಾವು ಮನಸಾರ ಕುಡಿದು, ಬಾಬಾರ ಅಮೃತ ತುಲ್ಯ ಬೋಧೆಗಳನ್ನು ಪಾಲಿಸುತ್ತಾ, ಈ ಕಥೆಯನ್ನು ಮತ್ತೆ ಮತ್ತೆ ಮನನ ಮಾಡಿಕೊಳ್ಳುತ್ತಾ, ಮೈಗೂಡಿಸಿಕೊಂಡು, ಅದರಂತೆ ನಡೆಯಲು ಪ್ರಯತ್ನಮಾಡೋಣ. ಅಂತಹ ದಿವ್ಯಪ್ರೇಮಿ ಸದ್ಗುರು ಸಾಯಿಬಾಬಾರ ಪಾದಕಮಲಗಳಲ್ಲಿ ತಲೆಯಿಟ್ಟು ನಮಸ್ಕಾರಮಾಡಿ ಪುನೀತರಾಗೋಣ.

ನಮ್ಮ ನಡವಳಿಕೆಯ ಬಗ್ಗೆ ಬಾಬಾರ ಬುದ್ಧಿಮಾತು

ನಮ್ಮ ಒಳ್ಳೆಯ ನಡತೆಯ ಬಗ್ಗೆ ಬಾಬಾ ಹೀಗೆ ಹೇಳಿದ್ದಾರೆ: "ಯಾರೂ ಯಾರಬಳಿಗೂ ಸಂಬಂಧವಿಲ್ಲದೆ ಹೋಗುವುದಿಲ್ಲ. ಯಾರಾದರೂ ನಿಮ್ಮ ಬಳಿಗೆ ಬಂದರೆ ಅವರನ್ನು ಕರೆದು, ಕೂಡಿಸಿ, ಸತ್ಕರಿಸಿ. ಕೆಟ್ಟ ಮಾತನ್ನಾಡಿ ಓಡಿಸಬೇಡಿ. ಬಾಯಾರಿದವರಿಗೆ ನೀರನ್ನು ಕೊಡಿ. ಹಸಿದವರಿಗೆ ಅನ್ನವನ್ನು ನೀಡಿ. ಬಟ್ಟೆಯಿಲ್ಲದವರಿಗೆ ಬಟ್ಟೆ ದಾನ ಮಾಡಿ. ಸುಸ್ತಾಗಿ ಬಂದವರಿಗೆ ಸುಧಾರಿಸಿಕೊಳ್ಳಲು ನಿಮ್ಮ ಅಂಗಳದಲ್ಲಿ ಜಾಗ ಕೊಡಿ. ಇದರಿಂದ ದೇವರು ಸಂತುಷ್ಟನಾಗುತ್ತಾನೆ. ಹಣ ಬೇಡಿ ಯಾರಾದರೂ ಬಂದರೆ, ನಿಮಗೆ ಹಣ ಕೊಡಲು ಇಷ್ಟವಿಲ್ಲದಿದ್ದರೆ, ಕೊಡಬೇಡಿ. ಆದರೆ, ಅವರನ್ನು ದುರ್ಭಾಷೆಗಳಿಂದ ನೋಯಿಸಬೇಡಿ. ಬೇರೆಯವರು ಹೇಳಿದ ದುಷ್ಟ ಮಾತುಗಳಿಗೆ ಪ್ರತಿಕ್ರಿಯೆ ತೋರಿಸಬೇಡಿ. ಮೌನವಾಗಿ ಸಹಿಸಿಕೊಳ್ಳಿ. ಅದರಿಂದ ನಿಮ್ಮ ಮನಸ್ಸಿಗೇ ಸಮಾಧಾನವಾಗುತ್ತದೆ. ನಿಮಗೆ ಕೆಟ್ಟ ಮಾತುಗಳನ್ನು ಕೇಳಲು ಇಷ್ಟವಿಲ್ಲದಿದ್ದರೆ, ಆ ಜಾಗವನ್ನು ಬಿಟ್ಟು ಹೋಗಿ. ಮಾತಿಗೆ ಮಾತು ಸೇರಿಸಬೇಡಿ. ನಿಮ್ಮ ಜಾಗದಲ್ಲಿ ನಿಂತು ನಡೆಯುವುದನ್ನೆಲ್ಲಾ ಸುಮ್ಮನೆ ನೋಡುತ್ತಿರಿ. ಅನವಶ್ಯಕವಾಗಿ ಯಾವುದರಲ್ಲೂ ತಲೆಹಾಕಬೇಡಿ. ನಮ್ಮಿಬ್ಬರ ಮಧ್ಯೆ ಇರುವ ಬೇಧಭಾವನೆಗಳೆಂಬ ಗೋಡೆಯನ್ನು ಹೊಡೆದುಹಾಕಿ. ಆಗ ನಮ್ಮಿಬ್ಬರನ್ನೂ ಕೂಡಿಸುವ ದಾರಿ ಸುಗಮವಾಗುತ್ತದೆ. ನೀನು ನಾನು ಎಂಬ ಬೇಧಭಾವವೆಂಬ ಅಡ್ಡಗೋಡೆ ಗುರುಶಿಷ್ಯರನ್ನು ಬೇರೆ ಮಾಡಿರುತ್ತದೆ. ಆ ಅಡ್ಡಗೋಡೆಯನ್ನು ತೊಡೆದುಹಾಕಿದರೆ ಇಬ್ಬರೂ ಅನ್ಯೋನ್ಯವಾಗುತ್ತಾರೆ. "ಅಲ್ಲಾ ಮಾಲಿಕ್". ಅವನೇ ಎಲ್ಲದಕ್ಕೂ ಯಜಮಾನಿ. ಅಪ್ರಮೇಯ, ಅತಿವಿಚಿತ್ರ, ಗ್ರಹಿಸಲಾರದವು ಆತನ ರೀತಿನೀತಿಗಳು. ತನ್ನ ಇಚ್ಛೆಯನ್ನು ಯಾವ ರೀತಿಯಲ್ಲಿ ನಡೆಸಿಕೊಳ್ಳಬೇಕೆಂಬುದು ಅವನಿಗೆ ಗೊತ್ತು. ನಾವು ಸರಿಯಾದ ದಾರಿಯಲ್ಲಿ ಯಾವ ರೀತಿಯಲ್ಲಿ ನಡೆದುಕೊಳ್ಳಬೇಕೆಂಬುದನ್ನು ತೋರಿಸಿಕೊಟ್ಟು ನಮ್ಮ ಒಳ್ಳೆಯ ವಾಂಛೆಗಳನ್ನೆಲ್ಲಾ ತೀರಿಸುತ್ತಾನೆ. ಋಣಾನುಬಂಧವೇ ನಮ್ಮಿಬ್ಬರನ್ನೂ ಕೂಡಿಸಿರುವುದು. ಒಬ್ಬರನ್ನೊಬ್ಬರು ಪ್ರೀತಿಯಿಂದ ಕಾಣುತ್ತಾ, ಸ್ನೇಹಭಾವದಿಂದ ನೋಡುತ್ತಾ ಒಟ್ಟಿಗೇ ಸುಖ ಸಂತೋಷಗಳಿಂದ ಬಾಳೋಣ. ಯಾರು ತನ್ನ ಜೀವನದ ಅಂತಿಮಗುರಿಯನ್ನು ಸರಿಯಾದ ದಾರಿಯಲ್ಲಿ ನಡೆದು ಸೇರುತ್ತಾನೋ ಅವನು ಪರಮಾನಂದಭರಿತನಾಗುತ್ತಾನೆ. ಮಿಕ್ಕವರು ಉಸಿರಿರುವ ತನಕ ಬದುಕಿರುವ ಪಶುಸಮಾನರು."

ಒಳ್ಳೆಯ ಯೋಚನೆಗಳಿಗೆ ಉತ್ತೇಜನ

"ರಾತ್ರಿ ಮಲಗುವುದಕ್ಕೆ ಮುಂಚೆ ಮನಸ್ಸಿನಲ್ಲಿ ಒಂದು ಸುಸಂಕಲ್ಪವನ್ನು ಮಾಡಿಕೊಂಡು ಮಲಗಿದರೆ, ಬೆಳಗ್ಗೆ ಏಳುತ್ತಿದ್ದಹಾಗೇ, ಆ ಸುಸಂಕಲ್ಪವೇ ಮನಸ್ಸಿನಲ್ಲಿ ಮೂಡಿ ಬರುತ್ತದೆ. ಅದನ್ನೇ ದಿನವೆಲ್ಲಾ ರೂಢಿಸಿಕೊಂಡು ಹೋದರೆ, ಮನಸ್ಸು ಬುದ್ಧಿಗಳು ಪ್ರಶಾಂತವಾಗಿರುತ್ತವೆ" ಎಂದು ತಿಳಿದವರು ಹೇಳಿದ್ದಾರೆ. ಇದನ್ನು ಪ್ರಯೋಗ ಮಾಡಲು ಹೇಮಾಡ್ ಪಂತ್ ನಿರ್ಧರಿಸಿದರು. ಅಂದು ಬುಧವಾರ. ರಾತ್ರಿ ಮಲಗುವುದಕ್ಕೆ ಮುಂಚೆ, "ನಾಳೆ ಗುರುವಾರ. ಒಳ್ಳೆಯ ದಿನ. ಶಿರಡಿ ಒಂದು ಪವಿತ್ರ ಸ್ಥಳ. ನಾನು ನಾಳೆಯ ದಿನವೆಲ್ಲಾ ರಾಮನಾಮ ಸಂಕೀರ್ತನೆಯಲ್ಲಿ ಕಳೆಯುವೆ" ಎಂದು ಸಂಕಲ್ಪವನ್ನು ಮಾಡಿ ಮಲಗಿದರು. ಬೆಳಗ್ಗೆ ಏಳುತ್ತಿದ್ದಹಾಗೆಯೇ ರಾಮನಾಮ ಸ್ಫುರಣೆಯಾಯಿತು. ಅದರಿಂದ ಅವರಿಗೆ ಸಂತೋಷವಾಯಿತು. ಬೆಳಗಿನ ಕಾರ್ಯಕ್ರಮಗಳನ್ನೆಲ್ಲಾ ಮುಗಿಸಿ ಹೂಗಳನ್ನು ತೆಗೆದುಕೊಂಡು ಬಾಬಾರ ದರ್ಶನಕ್ಕೆ ಮಸೀದಿಗೆ ಹೊರಟರು. ದಾರಿಯಲ್ಲಿ ಅವರಿಗೆ ಒಂದು ಸುಶ್ರಾವ್ಯವಾದ ಹಾಡು ಕೇಳಿಸಿತು. ಅದು, ಬಾಬಾ ಮುಂದೆ ಕೂತು ಔರಂಗಾಬಾದಕರ್ ಹಾಡುತ್ತಿದ್ದ ಏಕನಾಥರ ಹಾಡು. ಅದು ಹೀಗಿದೆ:

ಗುರು ಕೃಪಾಂಜನ ಪಾಯೋ ಮೇರೆ ಭಾಯಿ| ರಾಮ ಬಿನ ಕುಚ್ ಮಾನತ್ ನಾಹೀ|
ಅಂದರ್ ರಾಮ ಬಾಹರ ರಾಮ| ಸಪನೇಮೆ ದೇಖತ್ ಸೀತಾರಾಮ|
ಜಾಗತ್ ರಾಮ ಸೋವತ್ ರಾಮ| ಜಹಾ ದೇಖೋ ವಹಾ ಪೂರಣ್ ರಾಮ|
ಏಕ ಜನಾರ್ದನ ಅನುಭವ ಅನೇಕ| ಜಹಾ ದೇಖೆ ವಹಾ ರಾಮಸರೀಖಾ|

"ಗುರುಕೃಪಾಂಜನ ನನಗಿಂದು ದೊರಕಿತು" ಎಂದು ಹೇಳುತ್ತಾ, ಏಕನಾಥರು ರಾಮನನ್ನು ಅಲ್ಲಿ, ಇಲ್ಲಿ, ಎಲ್ಲೆಲ್ಲೂ, ಜಾಗ್ರತನಾಗಿದ್ದಾಗ, ಮಲಗಿನಿದ್ರಿಸುತ್ತಿದ್ದಾಗ, ನೋಡುತ್ತಾ ಇದ್ದರು. ಏಕೆಂದರೆ ಅವರಿಗೆ ರಾಮ ಕೃಪೆ ಎಂಬ ಅಂಜನ ದೊರಕಿ, ಅದನ್ನು ಕಣ್ಣಿಗೆ ಹಚ್ಚಿಕೊಂಡಿದ್ದರು. ಅಂತಹ ರಾಮ ಕೃಪಾಂಜನವನ್ನು ದೊರಕಿಸಿಕೊಂಡು ಮುಕ್ತರಾಗೋಣ.

ಈ ಹಾಡನ್ನು ಕೇಳಿದ ಹೇಮಾಡ್ ಪಂತರಿಗೆ ಅತೀವ ಸಂತೋಷವಾಯಿತು. ನೂರಾರು ಹಾಡುಗಳಿದ್ದರೂ ಅಂದು, ಆಗ, ಅಲ್ಲಿ, ಔರಂಗಾಬಾದಕರ್ ಆ ಹಾಡನ್ನೇ ಹಾಡಲು ಕಾರಣವೇನು? ಬಾಬಾರ ಇಚ್ಚೆಯಂತೆಯೇ ಅದು ಆಗಿದ್ದು. ಹೇಮಾಡ್ ಪಂತರ ರಾಮನಾಮ ಸ್ಫುರಣೆ ಎಂಬ ಸುಸಂಕಲ್ಪಕ್ಕೆ ಉತ್ತೇಜನ ಕೊಟ್ಟು ಅದು ವೃದ್ಧಿಯಾಗುವಂತೆ ಮಾಡಲು ಬಾಬಾ ತೋರಿಸಿದ ಲೀಲೆ.

ಬಾಬಾರಲ್ಲಿ ಶ್ರದ್ಧಾಭಕ್ತಿಗಳಿಂದ ಸಂಪೂರ್ಣ ಶರಣಾಗತರಾದರೆ ಸಾಕು, ಅವರು ತಮ್ಮದೇ ಆದ ರೀತಿಯಲ್ಲಿ ನಾವು ಸುಸಂಕಲ್ಪದಿಂದ ಮಾಡಿದ ಕಾರ್ಯಗಳಿಗೆ ಬೇಕಾದ ಸಹಾಯ, ಸಹಕಾರಗಳನ್ನು ನೀಡುತ್ತಾರೆ.

ಉಪದೇಶಗಳ ವಿವಿಧ ರೀತಿ

ಬಾಬಾರ ಭಕ್ತನೊಬ್ಬ ಸಹಚರರೊಡನೆ ಕೂತು ಮಾತನಾಡುತ್ತಾ, ತನ್ನ ಸಹೋದರನ ಒಳ್ಳೆಯ ಗುಣಗಳನ್ನು ಹೇಳುವುದನ್ನು ಬಿಟ್ಟು, ಅವನ ಕೆಟ್ಟ ಗುಣಗಳನ್ನು ಹೇಳಿ, ಅವನ ಬಗ್ಗೆ ಅವಾಚ್ಯ ಮಾತುಗಳನ್ನಾಡುತ್ತಿದ್ದ. ಅದೂ, ತನ್ನ ಸಹೋದರ ಅಲ್ಲಿ ಇಲ್ಲದ ವೇಳೆಯಲ್ಲಿ. ಅವನ ಸಹಚರರು ಸ್ವಲ್ಪಹೊತ್ತು ಅವನ ಮಾತುಗಳನ್ನು ಕೇಳಿ ಖುಷಿಪಟ್ಟರು. ಆದರೆ, ಅದೇ ಮಾತುಗಳು ಮತ್ತೆ ಮತ್ತೆ ಹೇಳುತ್ತಿದುದರಿಂದ, ಅವರಿಗೆ ಬೇಸರವಾಗಿ ಎದ್ದುಹೋದರು. ಯಾರನ್ನೇ ಆಗಲಿ ನಾಲ್ಕು ಜನರ ಮುಂದೆ ಅವಹೇಳನಮಾಡಬಾರದು. ಅದು ಅವರ ಬಗ್ಗೆ ಕೆಟ್ಟ ಭಾವನೆ ಉಂಟುಮಾಡಿ, ಅವರಲ್ಲಿ ದ್ವೇಷ ಹುಟ್ಟುವಂತೆ ಮಾಡುತ್ತದೆ. ಇದನ್ನು ಸಂತರು ಕಾಣುವ ರೀತಿಯೇ ಬೇರೆ.

ಸಾಮಾನ್ಯವಾಗಿ ಕೊಳೆ ತೊಳೆಯಲು ನೀರು, ಸಾಬೂನು, ಇತ್ಯಾದಿಗಳನ್ನು ಉಪಯೋಗಿಸುತ್ತಾರೆ. ಆದರೆ ಈ ತರಹೆಯ ಅಪವಾದ ಹರಡುವವರು, ಕೊಳೆಯನ್ನು ತೊಳೆಯುವ ರೀತಿಯೇ ಬೇರೆ. ಅವರು ತಮ್ಮ ನಾಲಗೆಯನ್ನು ಉಪಯೋಗಿಸುತ್ತಾರೆ. ನಿಜವೆಂದರೆ, ಅವನು ಯಾರನ್ನು ಬೈಯುತ್ತಿದ್ದಾನೋ, ಅವನ ಸೇವೆಯನ್ನೇ ಮಾಡಿದಂತಾಗುತ್ತದೆ. ಬಾಬಾ ಇದನ್ನು ಹೇಳುತ್ತಿದ್ದ ರೀತಿಯೇ ಬೇರೆ. ಮೇಲೆ ಹೇಳಿದ ಭಕ್ತ, ಸಹೋದರನ ಬಗ್ಗೆ ಏನು ಹೇಳುತ್ತಿದ್ದಾನೆ ಎಂದು ತಿಳಿದ ಬಾಬಾ, ಅವನನ್ನು ಲೆಂಡಿಯ ಹತ್ತಿರ ಸಂಧಿಸಿದಾಗ, ಅವನಿಗೆ ಅಲ್ಲಿ ಕೊಳೆಯನ್ನು ತಿನ್ನುತ್ತಿದ್ದ ಒಂದು ಹಂದಿಯನ್ನು ತೋರಿಸಿ, "ನೋಡು. ಆ ಹಂದಿ ಕೊಳೆಯನ್ನು ಎಷ್ಟು ಆನಂದದಿಂದ ತಿನ್ನುತ್ತಿದೆ. ನೀನೂ ಅದರಂತೆಯೇ ಮಾಡುತ್ತಿದ್ದೀಯೆ. ಅದಕ್ಕೂ ನಿನಗೂ ವ್ಯತ್ಯಾಸವೇನು? ಅನೇಕ ಜನ್ಮಗಳ ಪುಣ್ಯ ಫಲದಿಂದ ಈ ಮಾನವ ಜನ್ಮ ದೊರೆತಿದೆ. ಅದನ್ನು ಇನ್ನೊಬ್ಬರ ಒಳಿತಿಗಾಗಿ ಉಪಯೋಗಿಸು. ನಿನ್ನ ಅಣ್ಣನನ್ನು ಬೈದು, ನಿನಗೆ ಆಗಬೇಕಾದದ್ದಾದರೂ ಏನಿದೆ? ನಿನ್ನ ಈ ಜೀವನವನ್ನು ಹಾಳು ಮಾಡಿಕೊಳ್ಳಬೇಡ" ಎಂದು ಹೇಳಿದರು. ಆ ಮನುಷ್ಯ ಇದರಿಂದ ಪಾಠ ಕಲಿತು, ಒಳ್ಳೆಯವನಾದ ಎಂದು ಬೇರೆ ಹೇಳಬೇಕಾಗಿಲ್ಲ. "ಪುಣ್ಯಫಲದಿಂದ ದೊರೆತ ಈ ಮಾನವ ಜನ್ಮವನ್ನು ಯಾವಾಗಲೂ ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಳ್ಳಬೇಕು, ವೃಥಾ ಹಾಳುಮಾಡಬಾರದು" ಎಂದು ಬಾಬಾ ಹೇಳುತ್ತಿದ್ದರು. ಅವರ ಮಾತುಗಳನ್ನು ನಾವು ಮನಸ್ಸಿನಲ್ಲಿಟ್ಟು, ಅದರಂತೆ ನಡೆದರೆ ಅತ್ಮ ಸಾಕ್ಷಾತ್ಕಾರದ ದಾರಿಯಲ್ಲಿ ಹೆಜ್ಜೆ ಇಟ್ಟಿದ್ದೇವೆ, ಎಂದರ್ಥ. ಈ ದಾರಿಯಲ್ಲಿ ನಾವು ಗಮ್ಯ ಸೇರಲು ಬಹಳ ಕಷ್ಟ ಪಡಬೇಕಾದರೂ ಅವರ ಕೃಪೆಯಿಂದ ಅದು ಸಾಧ್ಯವಾಗುತ್ತದೆ.

ಬಾಬಾ ಸರ್ವಜ್ಞ, ಸರ್ವವ್ಯಾಪಿ, ಸರ್ವಶಕ್ತ. ಈ ಭೂಮ್ಯಾಕಾಶಗಳನ್ನು ಆವರಿಸಿದವರು. ಭೂತ, ಭವಿಷ್ಯ, ವರ್ತಮಾನಗಳನ್ನರಿತವರು. ದೇಶ ಕಾಲಾತೀತರು. ಶ್ರದ್ಧಾ ಭಕ್ತಿಗಳಿಂದ ಅವರಲ್ಲಿ ಸಂಪೂರ್ಣವಾಗಿ ಶರಣಾಗತರಾದವರು, ಸಕ್ಕರೆಯಲ್ಲಿನ ಸಿಹಿಯಂತೆ, ಸಾಗರದಲ್ಲಿನ ಅಲೆಯಂತೆ. ದೃಷ್ಟಿಯಲ್ಲಿನ ಹೊಳಪಿನಂತೆ ಅವರಲ್ಲಿ ಒಂದಾಗಿ ಹೋಗುತ್ತಾರೆ. ಋಜುಮಾರ್ಗದಲ್ಲಿ ನಡೆಯುವವರು ಈ ಜನನ ಮರಣ ಚಕ್ರಭ್ರಮಣೆಯಿಂದ ಪಾರಾಗುತ್ತಾರೆ. ಕಾಯಾ, ವಾಚಾ, ಮನಸಾ ಮತ್ತೊಬ್ಬರಿಗೆ ಅನ್ಯಾಯವೆಸಗದೆ, ಪ್ರಶಾಂತ ಮನಸ್ಸಿನಿಂದ ಕೂಡಿ, ಬೇರೆಯವರಿಗೆ ಒಳ್ಳೆಯದನ್ನು ಮಾಡುವುದರಲ್ಲೇ ನಿರತರಾಗಿರಬೇಕು. ಕೆಟ್ಟದ್ದರ ಯೋಚನೆಯನ್ನೂ ಮಾಡಬಾರದು. ಬಾಬಾರಲ್ಲಿ ಶರಣಾಗಿ ಎಲ್ಲವೂ ಅವರಿಂದಲೇ ನಡೆಯುತ್ತದೆ ಎನ್ನುವ ಮಾತಿನಲ್ಲಿ ನಂಬಿಕೆಯಿಟ್ಟು ಮಾಡುವುದೆಲ್ಲವನ್ನೂ ಅವರಿಗೇ ಒಪ್ಪಿಸಬೇಕು. ಈ ರೀತಿಯಲ್ಲಿ ನಡೆದುಕೊಳ್ಳುತ್ತಾ, ಸದಾ ಅವರ ಕಥೆಗಳನ್ನು, ಲೀಲೆಗಳನ್ನು, ಉಪದೇಶಗಳನ್ನು ಓದುತ್ತಾ, ಮನನ ಮಾಡುತ್ತ ಅವರನ್ನೇ ಕುರಿತು ಯೋಚಿಸುತ್ತಾ ಇರುವವರು ಅವರನ್ನೇ ಸೇರುವುದರಲ್ಲಿ ಸಂದೇಹವೇ ಇಲ್ಲ.

ಕೆಲಸಕ್ಕೆ ತಕ್ಕ ಫಲ

ರಾಧಾಕೃಷ್ನ್ಣ ಮಾಯಿ ಒಂದುಸಲ ಮಲೇರಿಯಾ ರೋಗದಿಂದ ಮಲಗಿದ್ದರು. ಒಂದು ದಿನ ಬಾಬಾ ಆಕೆಯ ಮನೆಯ ಪಕ್ಕದಲ್ಲಿ ಹೋಗುತ್ತಿದ್ದವರು ಯಾವ ಕಾರಣವೂ ಇಲ್ಲದೆ ಒಂದು ಏಣಿಯನ್ನು ತರಲು ಹೇಳಿದರು. ಅದನ್ನು ತಂದವರು, ಬಾಬಾ ಹೇಳಿದ ಕಡೆಯಲ್ಲಿ ಅದನ್ನು ಒರಗಿಸಿಟ್ಟರು. ಬಾಬಾ ಅದನ್ನು ಹತ್ತಿ ವಾಮನ ಗೋಂಡ್ಕರ್ ಮನೆಯ ಮೇಲೆ ಹೋಗಿ, ಅಲ್ಲಿಂದ ರಾಧಾಕೃಷ್ಣ ಮಾಯಿ ಮನೆಯ ಚಾವಣಿ ದಾಟಿ, ಇನ್ನೊಂದು ಪಕ್ಕದಿಂದ ಇಳಿದರು. ಬಾಬಾ ಏಕೆ ಹಾಗೆ ಮಾಡಿದರು ಎಂದು ಯಾರಿಗೂ ಅರ್ಥವಾಗಲಿಲ್ಲ. ಬಹುಶಃ ಆಕೆಯ ಮಲೇರಿಯಾ ರೋಗವನ್ನು ಹೊರಗಟ್ಟಲು ಹಾಗೆ ಮಾಡಿರಬಹುದೆಂದು ಊಹಿಸಿದರು. ಬಾಬಾ ಏಣಿಯಿಂದ ಇಳಿದ ಕೂಡಲೇ ಏಣಿ ತಂದವನಿಗೆ ಎರಡು ರೂಪಾಯಿ ಕೊಟ್ಟರು. ಯಾರೂ ಸಾಮಾನ್ಯವಾಗಿ ಬಾಬಾರು ಮಾಡಿದ್ದನ್ನು ಪ್ರಶ್ನಿಸುವ ಧೈರ್ಯ ಮಾಡುವುದಿಲ್ಲ. ಆದರು ಒಬ್ಬ ಬಾಬಾರನ್ನು, “ಅಷ್ಟು ಸಣ್ಣ ಕೆಲಸಕ್ಕೆ ಅವನಿಗೆ ಏಕೆ ಅಷ್ಟು ಹಣ ಕೊಟ್ಟಿರಿ” ಎಂದು ಪ್ರಶ್ನಿಸಿದ. ಅದಕ್ಕೆ ಬಾಬಾ, "ಇನ್ನೊಬ್ಬರಿಂದ ಯಾವಾಗಲೂ ಬಿಟ್ಟಿ ಕೆಲಸ ಮಾಡಿಸಿಕೊಳ್ಳಬಾರದು. ಕೆಲಸಗಾರನಿಗೆ ತಕ್ಕ ಮಜೂರಿಯನ್ನು ಉದಾರವಾಗಿ ಕೊಡಬೇಕು" ಎಂದು ಹೇಳಿದರು. ಬಾಬಾರ ಈ ವಿವೇಕ ಯುಕ್ತ ವರ್ತನೆಯನ್ನು ಎಲ್ಲರೂ ಪಾಲಿಸಿದರೆ, ಕೆಲಸಗಾರರು ಒಳ್ಳೆಯಕೆಲಸ ಮಾಡುವುದಷ್ಟೇ ಅಲ್ಲ, ಕೆಲಸಗಾರರಿಗೂ ಯಾಜಮಾನ್ಯದವರಿಗೂ ಯಾವುದೇ ರೀತಿಯ ವೈಮನಸ್ಯಗಳು ಇರುವುದಿಲ್ಲ. ಇಬ್ಬರಿಗೂ ಲಾಭದಾಯಕವಾಗಿರುತ್ತದೆ.

ಇದರೊಂದಿಗೆ ಹೇಮಾಡ್ ಪಂತ್ ಬಾಬಾ ತಮ್ಮನ್ನು ಹೇಗೆ ಒಪ್ಪಿಕೊಂಡರು, ಅನುಗ್ರಹಿಸಿದರು ಮತ್ತು ಇತರ ವಿಷಯಗಳನ್ನು ಕುರಿತು ಹೇಳುವ ಹದಿನೆಂಟು ಮತ್ತು ಹತ್ತೊಂಬತ್ತನೆಯ ಅಧ್ಯಾಯಗಳು ಮುಗಿದವು. ಮುಂದಿನ ಅಧ್ಯಾಯದಲ್ಲಿ ಹೇಮಾಡ್ ಪಂತ್ ದಾಸಗಣು ಅವರ ತೊಡಕನ್ನು ಬಾಬಾ ಹೇಗೆ ನಿವಾರಿಸಿದರು ಇತ್ಯಾದಿ ವಿಷಯಗಳನ್ನು ಹೇಳುತ್ತಾರೆ

||ಶ್ರೀ ಸದ್ಗುರು ಸಾಯಿನಾಥಾರ್ಪಣಮಸ್ತು||ಶುಭಂ ಭವತು||
||ಓಂ ಶಾಂತಿಃ ಶಾಂತಿಃ ಶಾಂತಿಃ||