Monday, December 26, 2011

||ಇಪ್ಪತ್ತೊಂದನೆಯ ಅಧ್ಯಾಯ||


||ಶ್ರೀ ಸಾಯಿ ಸಚ್ಚರಿತ್ರೆ||
||ಇಪ್ಪತ್ತೊಂದನೆಯ ಅಧ್ಯಾಯ||
||ಅನುಗ್ರಹ ಪ್ರಕರಣ||
ಶ್ರೀ ಗಣೇಶಾಯ ನಮಃ ಶ್ರೀ ಸರಸ್ವತಯೇ ನಮಃ
ಶ್ರೀ ವೆಂಕಟೇಶಾಯ ನಮಃ ಶ್ರೀ ಸಾಯಿನಾಥಾಯ ನಮಃ
ಶ್ರೀ ಸದ್ಗುರುಭ್ಯೋನ್ನಮಃ

ಅಧ್ಯಾಯದಲ್ಲಿ ಹೇಮಾಡ್ ಪಂತ್, ವಿ. ಹೆಚ್. ಥಾಕೂರ್, ಅನಂತರಾವ್ ಪಾಟಣಕರ್, ಪಂಡರಪುರದ ವಕೀಲ ಮತ್ತು ಇತರ ವಿಷಯಗಳನ್ನು ಹೇಳುತ್ತಾರೆ.

ಸಂತರ ಸಂಸ್ಥೆ

ಸಂತರನ್ನು ಹುಡುಕುವುದು, ಅವರನ್ನು ಕಾಣುವುದು, ಅವರ ಉಪದೇಶಗಳಿಂದ ಪ್ರಯೋಜನ ಪಡೆಯುವುದು, ಎಲ್ಲರಿಗೂ ಸಾಧ್ಯವಾಗುವ ವಿಷಯವಲ್ಲ. ಅಂತಹ ಅವಕಾಶ ದೊರಕಬೇಕಾದರೆ, ಹಿಂದಿನ ಜನ್ಮಗಳಲ್ಲಿ ಮಾಡಿದ್ದ ಪುಣ್ಯಕರ್ಮಗಳ ಫಲದಿಂದಲೇ ಆಗಬೇಕು. ಸಂತರನ್ನು ಕಾಣುವ ಅಂತಹ ಸದವಕಾಶ ದೊರೆತರೂ, ಅನುಕೂಲ ಸಮಯ ಬರದೆ, ಅವರ ಚರಣತಲದಲ್ಲಿ ಕೂತು ಸೇವೆ ಮಾಡುವ ಅವಕಾಶ ಒದಗುವುದಿಲ್ಲ. ಹೇಮಾಡ್ ಪಂತ್ ತಮ್ಮ ಅನುಭವವನ್ನೇ ಇಲ್ಲಿ ಹೇಳಿದ್ದಾರೆ. ಅವರು ಬಾಂದ್ರಾದಲ್ಲಿ ರೆಸಿಡೆಂಟ್ ಮಾಜಿಸ್ಟ್ರೇಟ್ ಆಗಿದ್ದಾಗ, ಪೀರ್ ಮೊಹಮ್ಮದ್ ಮೌಲಾನ ಎಂಬ ಮಹಮ್ಮದೀಯ ಸಂತರೊಬ್ಬರು ಅಲ್ಲಿದ್ದರು. ಹಿಂದೂಗಳು, ಮುಸ್ಲಿಮರು, ಪಾರ್ಸಿಗಳು, ಎಲ್ಲಾ ಮತದವರೂ ಅವರ ದರ್ಶನಕ್ಕೆ ಹೋಗಿ ಆಶೀರ್ವಾದ ಪಡೆಯುತ್ತಿದ್ದರು. ಸಂತರಿಗೆ ಈನೂಸ್ ಎಂಬುವ ಮುಜಾವರ್ (ಪೂಜಾರಿ) ಒಬ್ಬರಿದ್ದರು. ಅವರು ಹೇಮಾಡ್ ಪಂತರ ಪರಿಚಯಸ್ಥರು. ಈನೂಸ್ ಹೇಮಾಡ್ ಪಂತರನ್ನು ಒಮ್ಮೆ ಹೋಗಿ, ಸಂತರನ್ನು ಕಂಡು ಬರುವಂತೆ, ಅನೇಕ ಸಲ ಒತ್ತಾಯಪಡಿಸಿದ್ದರು. ಆದರೂ ಅನುಕೂಲ ಸಮಯ ಬರದೇ ಹೇಮಾಡ್ ಪಂತರು ಸಂತರನ್ನು ನೋಡಲು ಹೋಗಬೇಕೆಂದು ಅನೇಕ ಸಲ ಪ್ರಯತ್ನಮಾಡಿದರೂ ಅದು ಸಾಧ್ಯವಾಗಲೇ ಇಲ್ಲ. ಅನುಕೂಲ ಸಮಯ ಬಂದ ಕ್ಷಣವೇ, ಶಿರಡಿಯ ಕರೆ ಬಂದು, ಪಂತರು ಶಿರಡಿಗೆ ಹೋಗಿ, ಸಾಯಿಬಾಬಾರ ದರ್ಬಾರಿನ ಖಾಯಂ ಸದಸ್ಯರಾದರು.

ಸಂತರು ಒಂದು ನಿರ್ದಿಷ್ಟ ಗುರಿಯನ್ನು ಇಟ್ಟುಕೊಂಡೇ ಭೂಮಿಗೆ ಬರುತ್ತಾರೆ. ಇದು ಕರ್ಮ ಭೂಮಿ. ಸಂತರಿಗೆ ಕಾಲದೇಶಗಳ ಪರಿಮಿತಿಯಿಲ್ಲ. ಒಬ್ಬರಾದ ಮೇಲೆ ಇನ್ನೊಬ್ಬರು ಬರಬೇಕು ಎಂಬುವ ನಿಯಮವೂ ಇಲ್ಲ. ಒಂದೇ ಕಾಲದಲ್ಲಿ, ಅನೇಕ ಸಂತರು ಇರಬಹುದು. ಅಂತಹ ಸಂದರ್ಭಗಳು ಅನೇಕವಿವೆ. ಬರುವವರು ಪ್ರತಿಯೊಬ್ಬರೂ ಅವರವರದೇ ಆದ ಗುರಿಯನ್ನು ಇಟ್ಟುಕೊಂಡು ಬಂದಿರುತ್ತಾರೆ. ಆದರೂ ಭೂಮಿಯಲ್ಲಿರುವವರೆಗೂ ಎಲ್ಲರೂ ಒಂದೇ ಎನ್ನುವ ರೀತಿಯಲ್ಲಿ ಪ್ರವರ್ತಿಸುತ್ತಾರೆ. ಎಲ್ಲೇ ಇದ್ದರೂ, ಒಬ್ಬರು ಇನ್ನೊಬ್ಬರನ್ನು ನೋಡದೇ ಇದ್ದರೂ, ಯಾರು ಎಲ್ಲಿ ಏನು ಮಾಡುತ್ತಿದ್ದಾರೆ, ಎನ್ನುವುದು ಅವರೆಲ್ಲರಿಗೂ ತಿಳಿದಿರುತ್ತದೆ. ಒಬ್ಬರು ಇನ್ನೊಬ್ಬರಿಗೆ ಪರಸ್ಪರ ಪೂರಕವಾಗಿ ಕೆಲಸಮಾಡುತ್ತಾರೆ. ಅಂತಹ ಕೆಲವು ದೃಷ್ಟಾಂತಗಳನ್ನು ನೋಡೋಣ.

ವಿ.ಹೆಚ್. ಠಾಕೂರರ ಕತೆ

ವಿ. ಹೆಚ್. ಠಾಕೂರ್, ರೆವೆನ್ಯೂ ಇಲಾಖೆಯಲ್ಲಿ ಕೆಲಸಮಾಡುತ್ತಿದ್ದ ಒಬ್ಬ ಗುಮಾಸ್ತೆ. ಒಂದುಸಲ, ಅವರು ಸರ್ವೆ ಪಾರ್ಟಿಯೊಂದಿಗೆ ಬೆಳಗಾವಿಯ ಹತ್ತಿರದ ವಡಗಾಂವ್ಗೆ ಕಛೇರಿಯ ಕೆಲಸದ ಮೇಲೆ ಹೋಗಬೇಕಾಗಿ ಬಂತು. ಅಲ್ಲಿ ಅವರಿಗೆ ಅಪ್ಪ ಎಂಬುವ ಸಂತರನ್ನು ಕಾಣುವ ಸದವಕಾಶ ದೊರಕಿತು. ಠಾಕೂರ್ ಅವರನ್ನು ಕಂಡು ಅವರ ಪಾದಗಳಿಗೆ ನಮಸ್ಕರಿಸಿದರು. ಆಗ ಅಪ್ಪ, ನಿಶ್ಚಲದಾಸರ "ವಿಚಾರ ಸಾಗರ" ಎನ್ನುವ ಪುಸ್ತಕದ ವ್ಯಾಖ್ಯಾನವನ್ನು ಹೇಳುತ್ತಿದ್ದರು. ಠಾಕೂರ್ ಅವರಿಗೆ ನಮಸ್ಕರಿಸಿ ಹೊರಟಾಗ ಸಂತರು, " ಪುಸ್ತಕವನ್ನು ನೀನು ಓದಬೇಕು. ಓದಿದರೆ ನಿನ್ನ ಅಭೀಷ್ಟಗಳೆಲ್ಲವೂ ನೆರವೇರುತ್ತವೆ. ನೀನು ನಿನ್ನ ಕೆಲಸದ ಮೇಲೆ ಉತ್ತರಕ್ಕೆ ಹೋದಾಗ ಅಲ್ಲಿ ನಿನಗೆ ಒಬ್ಬರು ಸಂತರ ಪರಿಚಯ ಆಗುತ್ತದೆ. ಅವರು ನಿನಗೆ ಮುಂದಿನ ಮಾರ್ಗ ತೋರಿಸುತ್ತಾರೆ," ಎಂದು ಹೇಳಿದರು.

ಇದಾದ ಸ್ವಲ್ಪಕಾಲದ ಮೇಲೆ, ಠಾಕೂರರಿಗೆ ಜುನ್ನರ್ಗೆ ವರ್ಗವಾಯಿತು. ಅಲ್ಲಿಗೆ ಹೋಗಲು, ನಾನ್ಹೆ ಘಾಟನ್ನು ದಾಟಿ ಹೋಗಬೇಕು. ಎಮ್ಮೆಯ ಮೇಲೆ ಕುಳಿತು ಘಾಟನ್ನು ದಾಟಬೇಕು. ಬೇರೆ ಯಾವ ದಾರಿಯೂ ಇರಲಿಲ್ಲ. ಹಾಗೆ ಸವಾರಿ ಮಾಡುವುದು ಅವರಿಗೆ ಬಹು ಕಷ್ಟವಾಗಿ, ಮೈಯೆಲ್ಲ ಬಹಳ ನೋವಾಯಿತು. ಅಲ್ಲಿಂದಲೂ, ಸ್ವಲ್ಪ ಸಮಯವಾದ ಮೇಲೆ, ಅವರಿಗೆ ಮತ್ತೆ ಕಲ್ಯಾಣ್ಗೆ ವರ್ಗವಾಯಿತು. ಕಲ್ಯಾಣ್ನಲ್ಲಿ ಅವರಿಗೆ ನಾನಾ ಸಾಹೇಬ್ ಚಾಂದೋರ್ಕರರ ಭೇಟಿ ಆಯಿತು. ಬಾಬಾರ ವಿಷಯವಾಗಿ ಆಗಲೇ ಕೇಳಿದ್ದ ಅವರು, ಬಾಬಾರನ್ನು ನೋಡುವ ಆಸೆಯನ್ನು ನಾನಾ ಸಾಹೇಬರಲ್ಲಿ ವ್ಯಕ್ತಪಡಿಸಿದರು. ಚಾಂದೋರ್ಕರ್ ತಾವು ಶಿರಡಿಗೆ ಹೊರಟಾಗ ಠಾಕೂರರನ್ನು ತಮ್ಮ ಜೊತೆಯಲ್ಲಿ ಹೊರಡಲು ಹೇಳಿದರು. ಆದರೆ ಠಾಕೂರರಿಗೆ ಅಂದೇ ಸಿವಿಲ್ ನ್ಯಾಯಾಲಯದಲ್ಲಿ ಒಂದು ಖಟ್ಲೆ ಇದ್ದುದರಿಂದ, ಅವರೊಡನೆ ಹೊರಡಲಾಗಲಿಲ್ಲ. ಆದರೆ ಅವರು ನ್ಯಾಯಾಲಯಕ್ಕೆ ಹೋದಾಗ, ಖಟ್ಲೆ ಮುಂದೂಡಲ್ಪಟ್ಟಿತ್ತು. ಒಳ್ಳೆಯದಾಯಿತು ಎಂದುಕೊಂಡು ಅವರು ಅಂದೇ ಶಿರಡಿಗೆ ಹೋಗಲು ನಿಶ್ಚಯಿಸಿದರು. ಅಂದೇ ಹೊರಟರೆ, ಚಾಂದೋರ್ಕರರೂ ಅಲ್ಲೇ ಸಿಗಬಹುದು. ಅವರ ಸಹಾಯದಿಂದ ಬಾಬಾರ ದರ್ಶನವು ಸುಲಭವಾಗ ಬಹುದು ಎಂದುಕೊಂಡರು. ಆದರೆ ಅವರು ಶಿರಡಿ ಸೇರಿದಾಗ ಅವರಿಗೆ ನಿರಾಸೆ ಕಾದಿತ್ತು. ಚಾಂದೋರಕರರು ಹಿಂದಿನ ದಿನ ಸಾಯಂಕಾಲವೇ ಶಿರಡಿ ಬಿಟ್ಟಿದ್ದರು. ಬೇರೆ ಸ್ನೇಹಿತರು ಕೆಲವರನ್ನು ಶಿರಡಿಯಲ್ಲಿ ಕಂಡ ಠಾಕೂರ್, ಅವರೊಡನೆ ಬಾಬಾರ ದರ್ಶನಕ್ಕೆ ಮಸೀದಿಗೆ ಹೋದರು. ಬಾಬಾರನ್ನು ಕಾಣುತ್ತಲೇ, ಅವರ ಮನಸ್ಸು ಪುಳಕಿತವಾಯಿತು. ಕಣ್ಣಲ್ಲಿ ನೀರು ತುಂಬಿ, ಧಾರೆಯಾಗಿ ಹರಿಯಿತು. ಬಾಬಾರ ಚರಣಗಳಲ್ಲಿ ತಲೆಯಿಟ್ಟು ಬಾಬಾರಲ್ಲೇ ಲೀನವಾಗಿ ಹೋದರು. ಆಗ ಬಾಬಾ, "ಇಲ್ಲಿಗೆ ಬರುವುದು ಬಹು ಕಷ್ಟತರವಾದದ್ದು. ಕನ್ನಡ ಸಾಧು ಅಪ್ಪಾ ಹೇಳಿದಷ್ಟು, ಸುಲಭವಲ್ಲ. ನಾನ್ಹೆ ಘಾಟಿನಲ್ಲಿ ಮಾಡಿದ ಎಮ್ಮೆ ಸವಾರಿಗಿಂತಲೂ ಬಹಳ ಕಷ್ಟ. ಆಧ್ಯಾತ್ಮಿಕ ದಾರಿ ಬಹು ಕಷ್ಟಸಾಧ್ಯವಾದದ್ದು. ನೀನು ಅದಕ್ಕೆ ಬಹಳ ಪ್ರಯಾಸಪಡಬೇಕು" ಎಂದರು. ತನಗೊಬ್ಬನಿಗೆ ಮಾತ್ರ ತಿಳಿದಿದ್ದ ಮಾತನ್ನು ಬಾಬಾ ಹೇಳಿದ್ದು ಕೇಳಿ, ಠಾಕೂರ್ ಆಶ್ಚರ್ಯಪಟ್ಟು, ಬಾಬಾರ ಸರ್ವಜ್ಞತ್ವವನ್ನು ಕಂಡುಕೊಂಡರು. ಮತ್ತೆ ಅವರ ಚರಣಗಳಲ್ಲಿ ಬಿದ್ದುನನ್ನನ್ನು ಸ್ವೀಕರಿಸಿ, ಆಶೀರ್ವದಿಸಿಎಂದು ಬೇಡಿಕೊಂಡರು. ಬಾಬಾ ಮತ್ತೆ, "ಬರಿಯ ಓದುವುದರಿಂದ ಪ್ರಯೋಜನವಿಲ್ಲ. ಅಪ್ಪಾ ಹೇಳಿದ್ದು ನಿಜ. ಆದರೆ ಏನನ್ನು ಓದುತ್ತೀಯೋ, ಅದನ್ನು ಅರ್ಥಮಾಡಿಕೊಂಡು, ಅದರ ಬಗ್ಗೆ ಯೋಚಿಸಿ, ಅದನ್ನು ಮನನಮಾಡಿ, ನಿನ್ನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಇಲ್ಲದಿದ್ದರೆ ಪ್ರಯೋಜನವೇನು? ಗುರುವಿನ ಸಹಾಯವಿಲ್ಲದೆ ಓದಿದರೆ ಉಪಯೋಗವಿಲ್ಲ" ಎಂದರು. ಠಾಕೂರ್ ವಿಚಾರ ಸಾಗರವನ್ನು ಪ್ರತಿದಿನವೂ ಓದುತ್ತಿದ್ದರು. ಅದನ್ನು ಅಭ್ಯಾಸಕ್ಕೆ ತರುವ ಸರಿಯಾದ ಮಾರ್ಗ ಯಾವುದು ಎಂಬುದರ ಬಗೆಗೆ ಒಳ್ಳೆಯ ಉಪದೇಶ ಇಲ್ಲಿ ಸಿಕ್ಕಿತು. ಬಾಬಾ-ಅಪ್ಪಾ ಇಬ್ಬರೂ ಬೇರೆ ಬೇರೆ ಕಡೆಗಳಲ್ಲಿದ್ದರೂ, ಅವರಿಬ್ಬರೂ ತಮ್ಮ ಭಕ್ತರ ಒಳಿತಿಗಾಗಿ ಹೇಗೆ ಒಟ್ಟಿಗೇ ಕೆಲಸಮಾಡುತ್ತಾರೆ ಎಂಬುದನ್ನು, ಠಾಕೂರ್ ಶಿರಡಿಯಲ್ಲಿ ಕಣ್ಣಾರೆ ಕಂಡುಕೊಂಡರು.

ಅನಂತರಾವ್ ಪಾಟಣಕರರ ಕಥೆ

ಅನಂತರಾವ್ ಪಾಟಣಕರ್ ಪೂನಾದಿಂದ ಬಾಬಾರ ದರ್ಶನಕ್ಕೆ ಶಿರಡಿಗೆ ಬಂದರು. ಬಾಬಾರನ್ನು ಕಂಡು ಅತ್ಯಂತ ಸಂತೋಷದಿಂದ, ಅವರ ಚರಣಗಳಲ್ಲಿ ನಮಸ್ಕಾರಮಾಡಿದರು. ಅವರ ಪಾದಗಳನ್ನು ಹಿಡಿದು, "ಬಾಬಾ, ನಾನು ವೇದ, ಉಪನಿಷತ್ತುಗಳು, ಪುರಾಣಗಳು ಎಲ್ಲವನ್ನೂ ವಿಸ್ತಾರವಾಗಿ ಓದಿದ್ದೇನೆ. ಆದರೂ ನನ್ನ ಮನಸ್ಸು ಇನ್ನೂ ಶಾಂತಿಗೊಂಡಿಲ್ಲ. ಭಕ್ತಿಯಿಂದ ಕೂಡಿದ ಅಜ್ಞಾನಿಗಳಾದ ಸಾಮಾನ್ಯ ಮನುಷ್ಯರೇ ನನಗಿಂತ ಮೇಲು. ಮನಸ್ಸಿಗೆ ಶಾಂತಿ ತರಲಾರದ ಪುಸ್ತಕಜ್ಞಾನದಿಂದ ಪ್ರಯೋಜನವಾದರೂ ಏನು? ನೀವು ದೃಷ್ಟಿ ಮಾತ್ರದಿಂದಲೇ ಶಾಂತಿ ದಯಪಾಲಿಸುತ್ತೀರೆಂದು ಅನೇಕರು ಹೇಳಿದ್ದನ್ನು ಕೇಳಿದ್ದೇನೆ. ನಾನು ನಿಮ್ಮ ಚರಣಾಶ್ರಿತನಾಗಿದ್ದೇನೆ. ನನ್ನ ಮೇಲೆ ಕರುಣೆ ತೋರಿ, ಅನುಗ್ರಹಿಸಿ" ಎಂದು ಬೇಡಿಕೊಂಡರು. ಆಗ ಅವರಿಗೆ ಬಾಬಾ ಒಂದು ನೀತಿಕಥೆ ಹೇಳಿದರು.

ನವವಿಧ ಭಕ್ತಿ

"ಒಮ್ಮೆ ಒಬ್ಬ ವರ್ತಕ ಇಲ್ಲಿಗೆ ಬಂದ. ಅವನ ಮುಂದೆ ಕುದುರೆಯೊಂದು ಲದ್ದಿ ಹಾಕಿತು. ವರ್ತಕ ತನ್ನ ಬಟ್ಟೆಯನ್ನು ಹಾಸಿ, ಅದು ಹಾಕಿದ ಒಂಭತ್ತು ಲದ್ದಿ ಉಂಡೆಗಳನ್ನು ಕಟ್ಟಿಕೊಂಡ. ಅದರಿಂದ ಅವನು ಏಕಾಗ್ರತೆ, ಶಾಂತಿಗಳನ್ನು ಪಡೆದ."

ಪಾಟಣಕರರಿಗೆ ಬಾಬಾ ಹೇಳಿದ ಮಾತಿನ ತಲೆಬುಡ ತಿಳಿಯಲಿಲ್ಲ. ಅದರ ಬಗ್ಗೆ ಎಷ್ಟು ಯೋಚಿಸಿದರೂ, ಅರ್ಥ ಏನೆಂದು ಅವರ ಮನಸ್ಸಿಗೆ ಹೊಳೆಯಲಿಲ್ಲ. ಕೊನೆಗೆ ತಮ್ಮ ಸ್ನೇಹಿತ ಗಣೇಶ ದಾಮೋದರರ ಬಳಿಗೆ ಹೋಗಿ (ಅವರನ್ನು ದಾದಾ ಕೇಳ್ಕರ್ ಎಂದೂ ಕರೆಯುತ್ತಾರೆ) ಕಥೆಯ ಅರ್ಥ ಏನು ಎಂದು ಕೇಳಿದರು. ದಾದಾ ಹೇಳಿದರು, "ನನಗೂ ಬಾಬಾ ಏನು ಹೇಳುತ್ತಿದ್ದಾರೆಂದು ಅರ್ಥವಾಗುತ್ತಿಲ್ಲ. ಆದರೂ, ಅವರ ಪ್ರೇರಣೆಯಿಂದ ಇದು ಹೀಗಿರಬಹುದು ಎಂದು ಹೇಳಬಲ್ಲೆ. ಕುದುರೆ ಎನ್ನುವುದು ದೈವ ಕೃಪೆ. ವರ್ತಕ ಭಕ್ತ. ಒಂಭತ್ತು ಉಂಡೆಗಳು, ಶ್ರವಣ, ಕೀರ್ತನ, ಸ್ಮರಣ, ಪಾದಸೇವನೆ, ಅರ್ಚನ, ನಮಸ್ಕಾರ, ದಾಸ್ಯ, ಸಖ್ಯ, ಆತ್ಮನಿವೇದನ, ಎಂಬ ನವವಿಧ ಭಕ್ತಿಗಳಿಗೆ ಸಂಕೇತ. ಇವುಗಳಲ್ಲಿ ಯಾವುದೊಂದನ್ನಾದರೂ ಸತತವಾಗಿ, ಪ್ರಾಮಾಣಿಕವಾಗಿ, ಏಕಾಗ್ರಚಿತ್ತದಿಂದ, ಅನುಸರಿಸಿದರೆ ಪರಮಾತ್ಮ ಅಂತಹ ಭಕ್ತನ ಮನೆಗೆ ತಪ್ಪದೇ ಬರುತ್ತಾನೆ. ಜಪ, ತಪ, ಯಜ್ಞ, ಯಾಗಾದಿಗಳು ಯಾವುವೂ ಬೇಕಾಗಿಲ್ಲ. ದೇವರನ್ನು ಕಾಣಲು, ಭಕ್ತಿಯಿಲ್ಲದೆ ಮಾಡಿದ ವೇದ ಶಾಸ್ತ್ರಪುರಾಣಾದಿಗಳ ಪಠನ, ವಿಚಾರಗಳು, ಯಾವುವೂ ಉಪಯೋಗಕ್ಕೆ ಬರುವುದಿಲ್ಲ. ಸತ್ಯವನ್ನು ಅರಸುತ್ತಿರುವ ವರ್ತಕ ನೀನೇ ಎಂದುಕೋ. ನವವಿಧ ಭಕ್ತಿಗಳಲ್ಲಿ ಒಂದನ್ನು ಆರಿಸಿಕೊಂಡು, ಅದನ್ನು ನಿಷ್ಠೆಯಿಂದ ವೃದ್ಧಿಮಾಡಿಕೋ. ಆಗ ನಿನ್ನ ಮನಸ್ಸು ಶಾಂತಿ ಪಡೆಯುತ್ತದೆ" ಎಂದು ಹೇಳಿದರು.

ಮಾರನೆಯ ದಿನ ಪಾಟಣಕರ್ ಬಾಬಾರನ್ನು ಕಾಣಲು ಹೋದಾಗ ಬಾಬಾ, "ನೀನು ಒಂಭತ್ತು ಉಂಡೆಗಳನ್ನು ತೆಗೆದುಕೊಂಡೆಯಾ?" ಎಂದು ಕೇಳಿದರು, ಆಗ ಪಾಟಣಕರ್, "ನಿಮ್ಮ ಅನುಗ್ರಹವಿಲ್ಲದೆ ನಾನು ಏನು ಮಾಡಬಲ್ಲೆ? ನಾನೊಬ್ಬ ಹುಲು ಮಾನವ" ಎಂದರು. ಬಾಬಾ ಅವರನ್ನು ಅನುಗ್ರಹಿಸಿ, ಮನಶ್ಶಾಂತಿ ದೊರೆಯುವುದೆಂಬ ಭರವಸೆ ನೀಡಿದರು. ಪಾಟಣಕರ್ ಸಂತಸದಿಂದ ತುಂಬಿದವರಾಗಿ ತಮ್ಮ ಊರಿಗೆ ಹಿಂತಿರುಗಿದರು.

ಪಂಡರಪುರದ ವಕೀಲ

ಬಾಬಾ ಸರ್ವವ್ಯಾಪಿ. ಅವರಿಗೆ ಕಾಲದೇಶಗಳ ಪರಿಮಿತಿಯಿಲ್ಲ. ಅವರು ಭಕ್ತರು ಎಲ್ಲೇ ಇರಲಿ ಅವರನ್ನು ತಮ್ಮ ಗಮನದಲ್ಲಿಟ್ಟಿರುತ್ತಿದ್ದರು. ತಪ್ಪುದಾರಿಯನ್ನು ತುಳಿಯುತ್ತಿರುವವರಿಗೆ ಎಚ್ಚರಿಕೆ ನೀಡಿ, ನೇರವಾದ ದಾರಿಗೆ ಎಳೆಯುತ್ತಿದ್ದರು. ಪಂಡರಪುರದ ಒಬ್ಬ ವಕೀಲ ಬಾಬಾರ ದರ್ಶನಕ್ಕೆ ಶಿರಡಿಗೆ ಬಂದ. ಬಾಬಾರ ದರ್ಶನ ಮಾಡಿಕೊಂಡು, ಅವರಿಗೆ ದಕ್ಷಿಣೆ ಕೊಟ್ಟು, ಸ್ವಲ್ಪ ದೂರದಲ್ಲಿ, ಬಾಬಾರ ಮಾತುಗಳನ್ನು ಕೇಳುತ್ತಾ ಕುಳಿತ. ಬಾಬಾ ಅದು ಇದು ಹೇಳುತ್ತಾ, ಅವನ ಕಡೆ ತಿರುಗಿ, " ಜನ ಎಂಥ ಮೋಸಗಾರರು! ಮುಂದೆ ಬಂದು ನಮಸ್ಕಾರ ಮಾಡಿ, ದಕ್ಷಿಣೆ ಕೊಡುತ್ತಾರೆ. ಹಿಂದೆ ಬೈಯುತ್ತಾರೆ. ಇದು ಆಶ್ಚರ್ಯವಲ್ಲವೇ?" ಎಂದರು. ಅಲ್ಲಿದ್ದವರಿಗೆ ಬಾಬಾ ಏನು ಹೇಳುತ್ತಿದ್ದಾರೆ, ಎಂಬುವುದೇ ಅರ್ಥವಾಗಲಿಲ್ಲ. ಆದರೆ ವಕೀಲ ಮಾತ್ರ, ಅದು ತನಗಾಗಿಯೇ ಹೇಳಿದ್ದು, ಎಂದು ಚೆನ್ನಾಗಿ ಅರ್ಥಮಾಡಿಕೊಂಡ. ಆದರೂ ಏನೂ ಮಾತನಾಡದೇ ಸುಮ್ಮನೆ ಕುಳಿತಿದ್ದ.

ನಂತರ ಕಾಕಾ ಸಾಹೇಬ್ ದೀಕ್ಷಿತರೊಂದಿಗೆ ವಾಡಾಗೆ ಹಿಂತಿರುಗುತ್ತಿದ್ದಾಗ ಅವನು ಹೇಳಿದ, "ಬಾಬಾರು ಮಾತುಗಳನ್ನು ಹೇಳಿದ್ದು ನನ್ನನ್ನು ಕುರಿತಾಗಿಯೇ. ಪಂಡರಪುರದ ಮುನ್ಸೀಫ಼್ ನೂಲ್ಕರರು ಅನಾರೋಗ್ಯದಿಂದಿದ್ದಾಗ ಅವರು ಶಿರಡಿಗೆ ಬಂದದ್ದು, ನಮ್ಮ ಚರ್ಚೆಗೆ ಗ್ರಾಸವಾಯಿತು. "ಸಾಯಿ ಬಾಬಾರ ದರ್ಶನದಿಂದ ಅವರ ಖಾಯಿಲೆ ವಾಸಿಯಾಗುವುದೇ? ಅದಕ್ಕೆ ಸರಿಯಾದ ವೈದ್ಯ ಚಿಕಿತ್ಸೆ ಇಲ್ಲದೆ, ಹೇಗೆ ಸಾಧ್ಯ? ಮುನ್ಸೀಫ಼ರಂತಹ ವಿದ್ಯಾವಂತರೂ, ರೀತಿ ನಂಬಿಕೆಗಳಿಗೆ ಒಳಗಾಗುವುದು ಸರಿಯೇ?" ಎಂದು ಚರ್ಚೆ ನಡೆಸುತ್ತ, ಅದರಲ್ಲಿ ಮುನ್ಸೀಫ಼ರು, ಬಾಬಾ ಇಬ್ಬರನ್ನೂ ನಗೆಯಾಡಿದರು. ನಾನೂ ಅದರಲ್ಲಿ ಪ್ರತ್ಯಕ್ಷವಾಗಿ ಭಾಗವಹಿಸಿದ್ದೆ. ಬಾಬಾ ನಾನು ಮಾಡಿದ ಅಸಭ್ಯ ವರ್ತನೆಯನ್ನು ನನಗೆ ತೋರಿಸಿಕೊಟ್ಟರು. ಅದು ನನಗೆ ಕೊಟ್ಟ ಬೈಗಳಲ್ಲ. ‘ಅನವಶ್ಯಕವಾಗಿ ಇನ್ನೊಬ್ಬರ ವಿಷಯದಲ್ಲಿ ತಲೆಹಾಕುವುದು, ಅವರ ಬಗ್ಗೆ ತುಚ್ಚವಾಗಿ ಮಾತನಾಡುವುದು ಮಾಡಬೇಡಎಂದು ನನಗೆ ಪರೋಕ್ಷವಾಗಿ ಹೇಳಿದ ಬುದ್ಧಿಮಾತುಗಳು."

ಶಿರಡಿ ಪಂಡರಪುರಕ್ಕೆ ಮುನ್ನೂರು ಮೈಲಿಗಳ ದೂರದಲ್ಲಿದೆ. ಬಾಬಾ ಶಿರಡಿ ಬಿಟ್ಟು ಎಂದೂ ಆಚೆ ಹೋಗಿರಲಿಲ್ಲ. ಅವರಿಗೆ ಪಂಡರಪುರದಲ್ಲಿ ನಡೆದ ವಿಷಯ ಹೇಗೆ ತಿಳಿಯಿತು? ಅವರು ಕಾಲದೇಶಾತೀತರು. ಅವರಿಗೆ ಕಾಡು, ಮೇಡು, ನದಿ, ಬೆಟ್ಟ, ಗುಡ್ಡ ಯಾವುವೂ ಅಡ್ಡಿಯಲ್ಲ. ಮಸೀದಿಯಲ್ಲೇ ಕುಳಿತು, ಪ್ರಪಂಚದಲ್ಲಿ ತನ್ನ ಭಕ್ತರು ಎಲ್ಲೆಲ್ಲಿ ಏನೇನು ಮಾಡುತ್ತಿರುತ್ತಾರೋ, ಅದನ್ನೆಲ್ಲಾ ತಮ್ಮೆದುರಿಗೆ ನಡೆಯುತ್ತಿರುವಂತೆ ತಿಳಿದುಕೊಳ್ಳಬಲ್ಲರು. ಯಾರೂ ಬಾಬಾರ ದೃಷ್ಟಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಅದರಿಂದಲೇ, ವಕೀಲ ತನ್ನ ನಡತೆಯನ್ನು ತಿದ್ದಿಕೊಳ್ಳುವಂತೆ ಮಾಡಿದರು.

ಇದು ನಮ್ಮೆಲ್ಲರಿಗೂ ಅನ್ವಯಿಸುವ ಕಥೆ. ನಮ್ಮ ಅಂತರಾಳವನ್ನು ಕೆದಕಿ ನೋಡಿದರೆ, ಯಾವಾಗಲಾದರೊಮ್ಮೆ, ನಾವು ಇಂತಹ ಅನುಚಿತ ವರ್ತನೆ, ಅದರಲ್ಲೂ, ಸಂತರ ಅವಹೇಳನ ಮಾಡಿರುವುದು, ನಮ್ಮ ಅರಿವಿಗೆ ಬರುತ್ತದೆ. ಬಾಬಾ ವಕೀಲನ ನೆವದಲ್ಲಿ ನಮ್ಮೆಲ್ಲರಿಗೂ ಪಾಠ ಹೇಳಿದ್ದಾರೆ. ನಾವು ಕಥೆಯನ್ನು ನೆನಪಿನಲ್ಲಿಟ್ಟುಕೊಂಡು ಅದನ್ನು ಮನನ ಮಾಡುತ್ತಾ ನಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಬಾಬಾ ಪಾಠ ಹೇಳುವ ರೀತಿಯೇ ವಿಚಿತ್ರ. ವಿಶಿಷ್ಟ. ಅಳೆಯಲಸಾಧ್ಯವಾದುದು. ಅಂತಹ ಅಪ್ರಮೇಯ ಸದ್ಗುರುವಾದ ಬಾಬಾರಿಗೆ ಸಾಷ್ಟಾಂಗ ನಮಸ್ಕಾರಮಾಡಿ ಅವರು ನಮ್ಮಲ್ಲಿ ಕರುಣೆ ತೋರಲಿ ಎಂದು ಬೇಡಿಕೊಳ್ಳೋಣ.

ಇದರೊಂದಿಗೆ ವಿ. ಹೆಚ್. ಠಾಕೂರ್, ಅನಂತರಾವ್ ಪಾಟಣಕರ್, ಪಂಡರಪುರದ ವಕೀಲ ಮತ್ತು ಇತರ ವಿಷಯಗಳನ್ನು ಕುರಿತು ಹೇಳುವ ಇಪ್ಪತ್ತೊಂದನೆಯ ಅಧ್ಯಾಯ ಮುಗಿಯಿತು. ಮುಂದಿನ ಅಧ್ಯಾಯದಲ್ಲಿ ಹೇಮಾಡ್ ಪಂತ್ ಬಾಲಾಸಾಹೇಬ್ ಮಿರೀಕರ್, ಬಾಪೂ ಸಾಹೇಬ್ ಬೂಟಿ ಮತ್ತು ಅಮೀರ್ ಶಕ್ಕರರನ್ನು ಹಾವಿನಿಂದ ಬಾಬಾ ರಕ್ಷಿಸಿದ್ದು, ಇತ್ಯಾದಿ ವಿಷಯಗಳನ್ನು ಹೇಳುತ್ತಾರೆ

||ಶ್ರೀ ಸದ್ಗುರು ಸಾಯಿನಾಥಾರ್ಪಣಮಸ್ತು||ಶುಭಂ ಭವತು||
||ಓಂ ಶಾಂತಿಃ ಶಾಂತಿಃ ಶಾಂತಿಃ||


No comments:

Post a Comment