||ಶ್ರೀ ಸಾಯಿ ಸಚ್ಚರಿತ್ರೆ||
||ಇಪ್ಪತ್ತೆರಡನೆಯ ಅಧ್ಯಾಯ||
||ಅಪಮೃತ್ಯು ನಿವಾರಣೆ||
ಶ್ರೀ ಗಣೇಶಾಯ ನಮಃ ಶ್ರೀ ಸರಸ್ವತಯೇ ನಮಃ
ಶ್ರೀ ವೆಂಕಟೇಶಾಯ ನಮಃ ಶ್ರೀ ಸಾಯಿನಾಥಾಯ ನಮಃ
ಶ್ರೀ ಸದ್ಗುರುಭ್ಯೋನ್ನಮಃ
||ಇಪ್ಪತ್ತೆರಡನೆಯ ಅಧ್ಯಾಯ||
||ಅಪಮೃತ್ಯು ನಿವಾರಣೆ||
ಶ್ರೀ ಗಣೇಶಾಯ ನಮಃ ಶ್ರೀ ಸರಸ್ವತಯೇ ನಮಃ
ಶ್ರೀ ವೆಂಕಟೇಶಾಯ ನಮಃ ಶ್ರೀ ಸಾಯಿನಾಥಾಯ ನಮಃ
ಶ್ರೀ ಸದ್ಗುರುಭ್ಯೋನ್ನಮಃ
ಈ ಅಧ್ಯಾಯದಲ್ಲಿ ಹೇಮಾಡ್ ಪಂತ್, ಬಾಲಾಸಾಹೇಬ್ ಮಿರೀಕರ್, ಬಾಪು ಸಾಹೇಬ್ ಬೂಟಿ, ಅಮೀರ್ ಶಕ್ಕರ್ ಅವರನ್ನು ಬಾಬಾ ಹಾವಿನಿಂದ ಹೇಗೆ ರಕ್ಷಿಸಿದರು ಮತ್ತು ಇತರ ವಿಷಯಗಳನ್ನು ಹೇಳುತ್ತಾರೆ.
ಧ್ಯಾನ ಬಿಂದು
ಧ್ಯಾನ ಮಾಡಲು ಯಾವುದಾದರೊಂದು ವಸ್ತುವಿನ ಮೇಲೆ ಮನಸ್ಸಿಟ್ಟು, ಯೋಚನೆಗಳೆಲ್ಲವನ್ನೂ ಅದರಮೇಲೆ ಕೇಂದ್ರೀಕೃತ ಮಾಡಬೇಕು. ಆಕಾರವಿರುವ ವಸ್ತುವಾದರೆ ಹಾಗೆ ಮಾಡುವುದು ಸುಲಭ ಸಾಧ್ಯ. ಆದರೆ ಅವರ್ಣನೀಯ, ಸರ್ವವ್ಯಾಪಿಯಾದ ಆ ಪರಮಾತ್ಮನಾದ ಬಾಬಾರನ್ನು, ಹೇಗೆ ಧ್ಯಾನವಸ್ತು ಮಾಡಿಕೊಳ್ಳಲು ಸಾಧ್ಯ? ಪರಮಾತ್ಮನಿಗೆ ರೂಪವೆಲ್ಲಿಯದು? ವೇದಗಳೇ ಅವನನ್ನು ಪದಗುಚ್ಚಗಳಲ್ಲಿ ಕಟ್ಟಿ ಹಾಕಲಾರದೇ ಹೋದವು. ಸಾವಿರ ಹೆಡೆಯ ಆದಿಶೇಷನೂ ಅವನನ್ನು ಬಣ್ಣಿಸಲಾರದೇ ಹೋದ. ಇನ್ನು ನಾವು, ಹುಲು ಮಾನವರು, ನಮ್ಮ ಗತಿಯೇನು? ಆದರೆ ನಮಗೆ ಪರಮಾತ್ಮನ ಆ ವಿಶ್ವರೂಪದ ಬಗ್ಗೆ ಯೋಚನೆ ಯಾಕೆ? ರಾಮಾಯಣದಲ್ಲಿ, ರಾಮ ಸೀತೆಯ ಒಡವೆಗಳನ್ನು ತೋರಿಸಿ ಲಕ್ಷ್ಮಣನನ್ನು ಕೇಳಿದನಂತೆ, ಈ ಒಡವೆಗಳನ್ನು ನೀನು ಗುರುತಿಸಬಲ್ಲೆಯಾ? ಎಂದು. ಅದಕ್ಕೆ ಲಕ್ಷ್ಮಣ, "ದಿನವೂ ನಮಸ್ಕರಿಸಿಕೊಳ್ಳುತ್ತಿದ್ದ ಪಾದಗಳಲ್ಲಿ ಧರಿಸಿದ್ದ ಈ ಕಾಲಂದುಗೆಗಳನ್ನು ಮಾತ್ರ ಗುರುತಿಸಬಲ್ಲೆ. ಮಿಕ್ಕವು ನನಗೆ ಗೊತ್ತಿಲ್ಲ" ಎಂದು ಹೇಳಿದನಂತೆ.
ನಾವೂ ಕೂಡಾ ಆ ಪರಮಾತ್ಮನಾದ ಬಾಬಾರ ಪಾದಗಳಲ್ಲಿ ನಮ್ಮ ಮನಸ್ಸನ್ನು ಕೇಂದ್ರೀಕೃತ ಮಾಡೋಣ. ಅದರಲ್ಲೇ ನಮಗೆ ಮುಕ್ತಿ. ಈ ವಿಷಯದಲ್ಲಿ ಹೇಮಾಡ್ ಪಂತ್ ಒಂದು ಸಲಹೆ ಕೊಡುತ್ತಾರೆ. ಕೃಷ್ಣಪಕ್ಷದ ಚಂದ್ರ ಕುಗ್ಗಿ ಕುಗ್ಗಿ ಕೊನೆಗೆ ಅಮಾವಾಸ್ಯೆಯ ದಿನ ಪೂರ್ತಿಯಾಗಿ ಕಾಣದೇ ಹೋಗುತ್ತಾನೆ. ಮತ್ತೆ ಶುಕ್ಲಪಕ್ಷದ ಮೊದಲನೆಯ ದಿನ ಏನೂ ಕಾಣುವುದಿಲ್ಲ. ಎರಡನೆಯ ದಿನ ಚಂದ್ರ ಒಂದು ಸಣ್ಣ ಗೆರೆಯಂತೆ ತೋರುತ್ತಾನೆ. ಆದರೆ ಅದು ಬರಿಯ ಕಣ್ಣಿಗೆ ಕಾಣುವುದು ಕಷ್ಟ. ಅದನ್ನು ಮರದ ಎರಡು ಕೊಂಬೆಗಳ ಮಧ್ಯದ ಸಂದಿನಿಂದ ನೋಡಿದರೆ ಆಗ ಸಣ್ಣ ಗೆರೆಯಂತೆ ಕಾಣುತ್ತಾನೆ. ಈ ಉಪಮೆಯನ್ನೇ ತೆಗೆದುಕೊಂಡು ಆಸನದ ಮೇಲೆ ಕುಳಿತಿರುವ ಬಾಬಾರ ನಿಲುವನ್ನು ನೋಡಿ. ಅವರು ಬಲಗಾಲನ್ನು ಎಡಗಾಲ ಮಂಡಿಯಮೇಲಿಟ್ಟು ಕೂತಿದ್ದಾರೆ. ಅವರ ಎಡಕೈ ತೋರು ಬೆರಳು ಮಧ್ಯ ಬೆರಳುಗಳ ನಡುವೆ ಅವರ ಬಲಗಾಲಿನ ಹೆಬ್ಬೆಟ್ಟು ಕಾಣುತ್ತಿದೆ. ಈ ದೃಶ್ಯವನ್ನು ನೋಡಿದರೆ ಬಾಬಾ ನಮಗೆ ಏನನ್ನೋ ಹೇಳುತ್ತಿರುವಂತಿದೆ, "ನೀವು ನನ್ನನ್ನು ಕಾಣಬೇಕಾದರೆ ನಿಮ್ಮ ಅಹಂಕಾರವನ್ನು ತೊಡೆದು ಹಾಕಿ, ಮಿಕ್ಕೆಲ್ಲ ಬಾಹ್ಯ ಯೋಚನೆಗಳನ್ನೂ ಹೊರದೂಡಿ, ನನ್ನನ್ನೇ ಚಿಂತಿಸುತ್ತಾ, ನನ್ನ ನಾಮ ಸತತವಾಗಿ ಉಚ್ಚರಿಸುತ್ತಾ, ವಿನಯ ವಿಧೇಯತೆಗಳಿಂದ ನನ್ನ ಬಲಗಾಲ ಹೆಬ್ಬೆಟ್ಟಿನ ಮೇಲೆ ನಿಮ್ಮ ಧ್ಯಾನವೆಲ್ಲವನ್ನೂ ಕೇಂದ್ರೀಕೃತ ಮಾಡಿ. ಅದೇ ನಿಮ್ಮ ಧ್ಯಾನ ಬಿಂದುವಾಗಲಿ. ಆಗ ಮಾತ್ರ ನೀವು ಜ್ಯೋತಿಯನ್ನು ಕಾಣಬಹುದು. ಭಕ್ತಿಯನ್ನು ಸುಲಭವಾಗಿ ಕೈವಶ ಮಾಡಿಕೊಳ್ಳುವ ರೀತಿಯಿದೊಂದೇ!" ಹಾಗೆ ಬಾಬಾರ ಧ್ಯಾನಮಾಡುತ್ತಾ ಶಿರಡಿಗೆ ಹೋಗಿ ಅವರ ಚರಣಾರವಿಂದಗಳಲ್ಲಿ ನಮಸ್ಕರಿಸೋಣ.
ಬಾಬಾ ಅಲ್ಲಿ ನೆಲಸಿದ್ದರೆಂಬ ಒಂದು ಕಾರಣದಿಂದಲೇ ಶಿರಡಿ ಯಾತ್ರಾಸ್ಥಳವಾಯಿತು. ದೇಶದ ನಾನಾ ಮೂಲೆಗಳಿಂದ ಜನ ಶಿರಡಿಗೆ ಬಂದರು. ಯಾರು ಶಿರಡಿಗೆ ಬಂದರೂ, ಅವರು ಬಡವರೋ, ಶ್ರೀಮಂತರೋ, ಯಾವ ಬೇಧವೂ ಇಲ್ಲದೆ ಅವರೆಲ್ಲರಿಗೂ ತಪ್ಪದೇ ಒಂದು ಲಾಭವಾಯಿತು. ಅದು ಬಾಬಾರ ಅಪರಿಮಿತ ಪ್ರೀತಿ ವಿಶ್ವಾಸಗಳು. ಶಿರಡಿಗೆ ಬಂದ ಪ್ರತಿಯೊಬ್ಬರೂ ಬಾಬಾರ ಸರ್ವಜ್ಞತ್ವ, ಸರ್ವವ್ಯಾಪಕತ್ವ ಮತ್ತು ದಯೆ ಪ್ರೀತಿ ವಿಶ್ವಾಸಗಳ ಅನುಭವವನ್ನು ಪಡೆದರು. ಅಂತಹ ಅನುಭವವನ್ನು ಪಡೆದವರೇ ಪುಣ್ಯವಂತರು. ಪ್ರತಿಯೊಬ್ಬರಿಗೂ, ಅವರು ಅರ್ಥಮಾಡಿಕೊಂಡು ಅದನ್ನು ತಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳ ಬಹುದಾದ ರೀತಿಯಲ್ಲಿ ಬಾಬಾ ಅವರಿಗೆ ಅಧ್ಯಾತ್ಮದ ದಾರಿಯನ್ನು ತೋರಿಸುತ್ತಿದ್ದರು. ಕೆಲವರಿಗೆ ಮೌನವಾಗಿ, ಕೆಲವರಿಗೆ ನೀತಿ ಕಥೆಗಳ ಮೂಲಕ, ಮತ್ತೆ ಕೆಲವರಿಗೆ ನೇರವಾಗಿ ಹೇಳುತ್ತಿದ್ದರು. ಹಾಸ್ಯ ವಿನೋದಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಕೆಲವರಿಗೆ ಕೋಪತೋರಿಸಿ, ಕೆಲವರಿಗೆ ಮುಚ್ಚುಮರೆಯಿಲ್ಲದೆ, ತಾವು ಹೇಳಬೇಕಾದ್ದನ್ನು ಕ್ಲುಪ್ತವಾಗಿ ಜೀವನಪರ್ಯಂತ ಅತ್ಯಮೂಲ್ಯವೆಂದು ಕಾಪಿಡಬೇಕಾದ ಮುತ್ತಿನಂತಹ ಮಾತುಗಳಲ್ಲಿ ಹೇಳುತ್ತಿದ್ದರು. ಅವರ ಜೀವನದ ರೀತಿಯನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಿರಲಿಲ್ಲ. ಅದು ನಮ್ಮ ಮನಸ್ಸು, ಬುದ್ಧಿಗಳ ಅವಗಾಹನೆಗೆ ಅತೀತವಾಗಿತ್ತು. ಆದರೂ ಅವರ ಪ್ರೀತಿಯ ಮಾತುಗಳೇ ನಮ್ಮನ್ನು ಅವರ ಬಳಿಗೆ ಬಾರಿಬಾರಿಗೂ ಎಳೆಯುತ್ತವೆ. ಅದೊಂದು ತೀರದ ಬಾಯಾರಿಕೆ. ಅವರು ಭಕ್ತರಲ್ಲಿ ಪ್ರೀತಿ, ಆಸಕ್ತಿ, ರಕ್ಷಣಾ ಭಾವ ಇವುಗಳನ್ನು ಪ್ರತಿಪಾದಿಸುವ ಕೆಲವು ಕಥೆಗಳನ್ನು ನೋಡೋಣ.
ಬಾಲಾಸಾಹೇಬ್ ಮಿರೀಕರರ ಕಥೆ
ಸಿರಿದಾರ್ ಕಾಕಾಸಾಹೇಬ ಮಿರೀಕರರ ಮಗ ಬಾಲಾಸಾಹೇಬ್ ಮಿರೀಕರ್, ಕೋಪರಗಾಂವ್ನ ಮಾಮಲತದಾರರಾಗಿದ್ದರು. ಒಮ್ಮೆ ಅವರು ಕೆಲಸದಮೇಲೆ ಚಿತಳಿಗೆ ಹೋಗಬೇಕಾಯಿತು. ಹೋಗುತ್ತಾ, ದಾರಿಯಲ್ಲಿ ಶಿರಡಿಗೆ ಬಂದು ಮಸೀದಿಯಲ್ಲಿ ಬಾಬಾರ ದರ್ಶನ ಮಾಡಿದರು. ಅವರು ನಮಸ್ಕಾರ ಮಾಡಿ ಹೊರಡಲು ಅಪ್ಪಣೆ ಬೇಡಿದಾಗ ಬಾಬಾ, ಕಾರಣವೇ ಇಲ್ಲದೆ ಅವರನ್ನು, "ನಿನಗೆ ದ್ವಾರಕಾಮಾಯಿ ಗೊತ್ತೇ?" ಎಂದು ಕೇಳಿದರು. ಬಾಲಾ ಸಾಹೇಬರಿಗೆ ಬಾಬಾರ ಈ ಪ್ರಶ್ನೆಯ ಅರ್ಥವೇನೋ ತಿಳಿಯಲಿಲ್ಲ. ಅನೇಕ ಸಲ ಶಿರಡಿಗೆ ಬಂದಿದ್ದರಿಂದ ದ್ವಾರಕಾಮಾಯಿ ಎಂದರೆ ಅವರಿಗೆ ಗೊತ್ತು. ಆದರೆ ಇಂದು ಆ ಪ್ರಶ್ನೆಯ ಅಂತರಾರ್ಥವೇನೋ ತಿಳಿಯಲಿಲ್ಲ. ಬಾಬಾರೇ ಮತ್ತೆ ಮುಂದುವರೆದು, "ಇದೇ ನಮ್ಮ ದ್ವಾರಕಾಮಾಯಿ. ಅವಳು ತನ್ನ ಉಡಿಯಲ್ಲಿ ಕುಳಿತ ತನ್ನ ಮಕ್ಕಳ ಭಯ ಅಪಾಯಗಳನ್ನು ನಿವಾರಿಸುತ್ತಾಳೆ. ಆಕೆ ಬಹಳ ದಯಾಮಯಿ. ಭಕ್ತರು ಒಂದು ಸಲ ಆಕೆಯ ಉಡಿಯಲ್ಲಿ ಕುಳಿತರೆ ಸಾಕು. ಅವರ ಕಷ್ಟಗಳೆಲ್ಲಾ ತೀರಿದಂತೆಯೇ! ಒಂದು ಸಲ ಆಕೆಯ ಛಾಯೆಯ ಅಡಿಯಲ್ಲಿ ಬಂದವರು ಆನಂದ ಭರಿತರಾಗುತ್ತಾರೆ" ಎಂದರು. ನಂತರ, ಅವರ ತಲೆಯ ಮೇಲೆ ಕೈಯಿಟ್ಟು ನೇವರಿಸಿ ಉದಿ ಕೊಟ್ಟರು. ಬಾಲಾಸಾಹೇಬ್ ಇನ್ನೇನು ಹೊರಡಬೇಕು ಎನ್ನುವಾಗ, ಬಾಬಾ ಮತ್ತೆ ತಮ್ಮ ಕೈಯನ್ನು ಹಾವಿನಂತೆ ಆಡಿಸುತ್ತಾ, ಅವರನ್ನು ಕೇಳಿದರು, "ನಿನಗೆ ಈ ಲಂಬೂ ಬಾಬಾ ಗೊತ್ತೆ? ಅವನು ಬಹು ಭಯಂಕರನು. ಆದರೆ ದ್ವಾರಕಾಮಾಯಿ ರಕ್ಷಿಸುತ್ತಿರುವಾಗ ಅವನೇನು ಮಾಡಬಲ್ಲನು?" ಮಸೀದಿಯಲ್ಲಿದ್ದವರು ಯಾರಿಗೂ ಬಾಬಾ ಏನು ಹೇಳುತ್ತಿದ್ದಾರೆ ಎಂಬುದು ಅರ್ಥವಾಗಲಿಲ್ಲ. ಬಾಲಾಸಾಹೇಬರಿಗೂ ಅರ್ಥವಾಗಲಿಲ್ಲ. ಅದರಲ್ಲೂ, ಹಾವು ಬಾಲಾಸಾಹೇಬರನ್ನು ಸೇರಿಸಿ ಹೇಳಿದ ಮಾತಂತೂ, ಏನೇನೂ ಅರ್ಥವಾಗಲಿಲ್ಲ. ಇದೇನು ಎಂದು ಕೇಳುವ ಧೈರ್ಯ ಅಲ್ಲಿ ಯಾರಿಗೂ ಇರಲಿಲ್ಲ. ಬಾಲಾಸಾಹೇಬರು ಶ್ಯಾಮ ಇಬ್ಬರೂ ಕೂಡಿ ಮಸೀದಿಯಿಂದ ಹೊರಟರು. ಅವರಿಬ್ಬರೂ ಮಸೀದಿಯ ಬಾಗಿಲ ಹತ್ತಿರವಿದ್ದಾಗ, ಬಾಬಾ ಶ್ಯಾಮಾರನ್ನು ಕರೆದು ಬಾಲಾಸಾಹೇಬರ ಜೊತೆಯಲ್ಲಿ ಚಿತಳಿಗೆ ಹೋಗುವಂತೆ ಹೇಳಿದರು. ಶ್ಯಾಮಾ ಅದನ್ನು ಬಾಲಾಸಾಹೇಬರಿಗೆ ಹೇಳಿದರು. ಅದಕ್ಕೆ ಅವರು ಪ್ರಯಾಣ ಅಷ್ಟು ಸುಖಕರವಲ್ಲವೆಂದೂ, ಅದೂ ಅಲ್ಲದೆ ಶ್ಯಾಮಾರು ಬರಬೇಕಾದ ಅವಶ್ಯಕತೆ ಇಲ್ಲವೆಂದೂ ಹೇಳಿದರು. ಶ್ಯಾಮಾ ಹಿಂತಿರುಗಿ ಬಂದು ಬಾಬಾಗೆ ಆ ಮಾತನ್ನು ಹೇಳಿದಾಗ ಅವರು, "ಸರಿ. ಹೋಗಬೇಡ. ಏನಾಗಬೇಕೋ ಅದು ಆಗಿಯೇ ತೀರುತ್ತದೆ" ಎಂದರು. ಅಷ್ಟರಲ್ಲಿ ಬಾಲಾಸಾಹೇಬ್ ತಮ್ಮ ನಿಲುವನ್ನು ಬದಲಿಸಿ, ಅದು ಬಾಬಾರ ಆಜ್ಞೆ, ಅದನ್ನು ಪಾಲಿಸಬೇಕು ಎಂದುಕೊಂಡು, ಶ್ಯಾಮಾ ತಮ್ಮ ಜೊತೆಯಲ್ಲಿ ಬರಬಹುದೆಂದರು. ಶ್ಯಾಮಾ ಮತ್ತೆ ಬಾಬಾರ ಬಳಿಗೆ ಹೋಗಿ ಬಾಲಾಸಾಹೇಬ್ ತನ್ನನ್ನು ಜೊತೆಯಲ್ಲಿ ಬರಲು ಹೇಳಿದ್ದಾರೆ ಎಂದರು. ಬಾಬಾ ಅವರಿಗೆ ಅನುಮತಿ ಕೊಟ್ಟು ಹೋಗು ಎಂದರು.
ಇಬ್ಬರೂ ಟಾಂಗಾದಲ್ಲಿ ಕುಳಿತು, ಚಿತಳಿಗೆ ರಾತ್ರಿ ಸುಮಾರು ಒಂಭತ್ತು ಗಂಟೆಯ ವೇಳೆಗೆ ಸೇರಿದರು. ಕಛೇರಿಯವರು ಇನ್ನೂ ಯಾರೂ ಬಂದಿರಲಿಲ್ಲ. ಆದ್ದರಿಂದ ಇಬ್ಬರೂ ಅಲ್ಲಿ ಆಂಜನೇಯನ ದೇವಸ್ಥಾನದಲ್ಲಿ ತಂಗಿದರು. ಬಾಲಾಸಾಹೇಬರು ಕುಳಿತು ದಿನಪತ್ರಿಕೆಯನ್ನು ಓದುತ್ತಿದ್ದರು. ಅವರ ಹರಡಿಕೊಂಡಿದ್ದ ವಲ್ಲಿಯ ಮೇಲೆ, ಯಾರಿಗೂ ಕಾಣದಂತೆ ಬಂದು ಕುಳಿತಿದ್ದ ಹಾವೊಂದು ಬುಸುಗುಟ್ಟುತ್ತಾ ಆಡಲಾರಂಭಿಸಿತು. ಹತ್ತಿರದಲ್ಲಿಯೇ ಇದ್ದ ಅವರ ಆಳು ಲಾಂದ್ರ ತಂದು ನೋಡಿ ಹಾವು ಹಾವು ಎಂದು ಕೂಗಲಾರಂಭಿಸಿದ. ಅದನ್ನು ಕೇಳಿದ ಬಾಲಾಸಾಹೇಬ್ ಹೆದರಿ ನಡುಗುತ್ತಾ ಕುಳಿತರು. ಶ್ಯಾಮಾಗೂ ಏನು ಮಾಡಬೇಕೆಂದು ತೋರಲಿಲ್ಲ. ಆದರೂ ಆ ಹಾವು ತಾನಾಗಿಯೇ ಕೆಳಗಿಳಿಯುವವರೆಗೂ ಕಾಯುತ್ತಾ ಕುಳಿತರು. ಸ್ವಲ್ಪಹೊತ್ತಾದ ನಂತರ ಆ ಹಾವು ಕೆಳಗಿಳಿಯಿತು. ಕೂಡಲೇ ಅದನ್ನು ಹೊಡೆದು ಕೊಂದರು. ಹಾಗೆ ಬಾಬಾರ ಮುಂದಾಗಬಲ್ಲದ್ದನ್ನು ಕಾಣುವ ಶಕ್ತಿ, ಹಾಗೂ ಅವರ ಅನುಗ್ರಹ, ಆಗಬಹುದಾಗಿದ್ದ ಆಪತ್ತನ್ನು ನಿವಾರಿಸಿತು. ಬಾಬಾರಲ್ಲಿ ಬಾಲಾಸಾಹೇಬರ ಭಕ್ತಿ ವಿಶ್ವಾಸಗಳು ಇನ್ನೂ ವೃದ್ಧಿಯಾದವು.
ಬಾಪೂ ಸಾಹೇಬ್ ಬೂಟಿ
ಒಂದುಸಲ ಬಾಪೂ ಸಾಹೇಬ್ ಬೂಟಿ ಶಿರಡಿಯಲ್ಲಿದ್ದಾಗ, ಅವರ ಸ್ನೇಹಿತರು ನಾನಾ ಸಾಹೇಬ್ ಡೇಂಗ್ಲೆ ಕೂಡಾ ಅಲ್ಲಿದ್ದರು. ಡೇಂಗ್ಲೆ ಜ್ಯೋತಿಷ್ಯವನ್ನು ಚೆನ್ನಾಗಿ ಬಲ್ಲವರು. ಅವರು ಬೂಟಿಗೆ, "ಈ ದಿನ ಒಳ್ಳೆಯದಾಗಿಲ್ಲ. ಜ್ಯೋತಿಷ್ಯದ ಪ್ರಕಾರ ನಿನ್ನ ಪ್ರಾಣಕ್ಕೆ ಅಪಾಯವಿದೆ. ಸ್ವಲ್ಪ ಹುಶಾರಾಗಿ ಇರಬೇಕು" ಎಂದು ಹೇಳಿದರು. ಅದನ್ನು ಕೇಳಿದ ಬೂಟಿ ಮನಸ್ಸು ಖತಿಗೊಂಡಿತು. ಅಲ್ಲಿಂದ ಅವರಿಬ್ಬರೂ ಮಸೀದಿಗೆ ಹೋದರು. ಬಾಬಾ ಬೂಟಿಗೆ, "ಈ ನಾನಾ ಏನನ್ನುತ್ತಾನೆ? ಸಾವಿನ ಭವಿಷ್ಯ ಹೇಳಿದ್ದಾನೆ ಅಲ್ಲವೇ? ಧೈರ್ಯವಾಗಿ ಅವನಿಗೆ ಹೇಳು. ಮೃತ್ಯುವು ಹೇಗೆ ಬರುವುದೋ ನೋಡೋಣ" ಎಂದು ಹೇಳಿದರು. ಸಾಯಂಕಾಲ ಬೂಟಿ ಬಹಿರ್ದೇಶಕ್ಕೆ ಹೋದಾಗ, ಅಲ್ಲೊಂದು ಹಾವು ಹೆಡೆಯೆತ್ತಿ ಕುಳಿತಿತ್ತು. ಅವರ ಸೇವಕ ಆ ಹಾವನ್ನು ನೋಡಿ ಅದನ್ನು ಕೊಲ್ಲಲು ಕೈಗೆ ಕಲ್ಲೆತ್ತಿಕೊಂಡ. ಆದರೆ ಬೂಟಿ ಅವನನ್ನು ತಡೆದು, ಹೋಗಿ ಕೋಲೊಂದನ್ನು ತರಲು ಹೇಳಿದರು. ಸೇವಕ ಹೋಗಿ ಕೋಲು ತರುವುದರೊಳಗಾಗಿ ಆ ಹಾವು ಕಾಣೆಯಾಗದೇ ಹೋಯಿತು. ಬಾಬಾರ ಆಶ್ವಾಸನೆಯ ಮಾತುಗಳನ್ನು ಬೂಟಿ ನೆನಪಿಗೆ ತಂದುಕೊಂಡು, ಅಲ್ಲಿಂದಲೇ ಬಾಬಾರಿಗೆ ತಲೆಬಾಗಿಸಿದರು.
ಅಮೀರ್ ಶಕ್ಕರ್ ಕಥೆ
ಬಾಬಾ ಭಕ್ತ, ಕೋಪರಗಾಂವ್ನ ಕೊರಾಲಾ ಹಳ್ಳಿಗೆ ಸೇರಿದ ಅಮೀರ್ ಶಕ್ಕರ್, ಕಟುಕರ ಜಾತಿಗೆ ಸೇರಿದವರು. ದೂರದ ಬಾಂದ್ರಾಗೆ ಹೋಗಿ ಅಲ್ಲಿ ನೆಲೆಯಾಗಿ ಕಮೀಷನ್ ಏಜೆಂಟ್ ಆಗಿದ್ದರು. ಅವರು ಸಂಧಿವಾತ ರೋಗದಿಂದ ಬಹಳ ಒದ್ದಾಡುತ್ತಿದ್ದರು. ಎಲ್ಲ ಚಿಕಿತ್ಸೆಗಳೂ ಅನುಪಯಯುಕ್ತವಾದಾಗ ದೇವರೇ ನನ್ನ ವೈದ್ಯ ಎಂದು ನಿರ್ಧರಿಸಿ ತನ್ನ ವ್ಯವಹಾರವನ್ನೆಲ್ಲಾ ಬದಿಗಿಟ್ಟು ಶಿರಡಿಗೆ ಹೋದರು. ಬಾಬಾರ ಚರಣಗಳಲ್ಲಿ ಬಿದ್ದು ತನ್ನನ್ನು ಆ ನೋವಿನಿಂದ ಬಿಡಿಸಬೇಕೆಂದು ಬೇಡಿಕೊಂಡರು. ಬಾಬಾ ಚಿಕಿತ್ಸೆಗಳು ಅತಿ ವಿಚಿತ್ರ. ಅಮೀರ್ ಶಕ್ಕರರನ್ನು ಚಾವಡಿಯಲ್ಲಿ ತಂಗುವಂತೆ ಹೇಳಿದರು.
ಚಾವಡಿ ಬಹಳ ಹಳೆಯ ಕಟ್ಟಡ. ಅದರ ದುರಸ್ತಿ ಮಾಡಲು ಯಾವ ಪ್ರಯತ್ನವೂ ನಡೆದಿರಲಿಲ್ಲ. ಅಲ್ಲಿ ಹಲ್ಲಿಗಳು, ಹಾವುಗಳು, ಚೇಳುಗಳು ವಾಸವಾಗಿದ್ದವು. ನೆಲವೆಲ್ಲಾ ಅಡ್ಡಾದಿಡ್ಡಿಯಾಗಿಹೋಗಿತ್ತು. ಮಳೆಗಾಲದಲ್ಲಿ ಅಲ್ಲೆಲ್ಲಾ ನೀರು ತುಂಬಿರುತ್ತಿತ್ತು. ನೆಲ ಯಾವಾಗಲೂ ಒದ್ದೆಯಾಗಿರುತ್ತಿತ್ತು. ಅನಾರೋಗ್ಯದಿಂದಿರುವವನಿರಲಿ, ಆರೋಗ್ಯವಾಗಿದ್ದವನೂ ವಾಸಮಾಡಲು ಯೋಗ್ಯವಾಗಿರಲಿಲ್ಲ. ಸಂಧಿವಾತದಿಂದ ನರಳುತ್ತಿರುವವರಿಗೆ ಆ ಜಾಗ ಸುತರಾಂ ಒಳ್ಳೆಯದಲ್ಲ. ಆದರೆ ಬಾಬಾರ ಮಾತುಗಳು ಶಾಸನವಿದ್ದಂತೆ. ಪಾಲಿಸಲೇಬೇಕು. ಅದಕ್ಕಾಗಿ ಅಮೀರ್ ಎದುರು ಮಾತಿಲ್ಲದೆ, ಚಾವಡಿಯಲ್ಲಿ ವಾಸ ಮಾಡಲಾರಂಭಿಸಿದರು. ಅದು ಅವರ ಆರೋಗ್ಯದ ದೃಷ್ಟಿಯಿಂದ ಸರಿಯಾದ ವಾಸಸ್ಥಾನವಲ್ಲದಿದ್ದರೂ, ಅಲ್ಲೊಂದು ದೊಡ್ಡ ಲಾಭವಿತ್ತು. ಪ್ರತಿದಿನ ಬೆಳಗ್ಗೆ ಸಾಯಂಕಾಲ, ಬಾಬಾ ಚಾವಡಿ ಮುಂದಿನಿಂದ ಹೋಗಿ ಬರುತ್ತಿದ್ದರು. ಅದರ ಜೊತೆಗೆ ಅವರು ದಿನ ಬಿಟ್ಟು ದಿನ ಚಾವಡಿಯಲ್ಲಿ ಮಲಗುತ್ತಿದ್ದರು. ಇದರಿಂದ ಅಮೀರ್ ಶಕ್ಕರರಿಗೆ ಯಾವಾಗಲೂ ಬಾಬಾರ ಸಹವಾಸ ಲಭ್ಯವಾಗುತ್ತಿತ್ತು. ಹಾಗೆ ಶಕ್ಕರ್ ಚಾವಡಿಯಲ್ಲಿ ಒಂಭತ್ತು ತಿಂಗಳು ವಾಸ ಮಾಡಿದರು. ಬರುಬರುತ್ತಾ ಅವರಿಗೆ ಆ ಜಾಗ ಅಸಹ್ಯವಾಗತೊಡಗಿತು. ಅಲ್ಲಿಂದ ಹೊರಟು ಹೋಗಬೇಕೆನ್ನುವ ಯೋಚನೆ ಬಲವಾಯಿತು.
ಒಂದು ರಾತ್ರಿ ಎಲ್ಲರೂ ಮಲಗಿದ್ದಾಗ, ಯಾರಿಗೂ ಹೇಳದೆ, ಚಾವಡಿ ಬಿಟ್ಟು ನೇರವಾಗಿ ಕೋಪರಗಾಂವ್ಗೆ ಹೋಗಿ ಅಲ್ಲಿ ಧರ್ಮಶಾಲೆಯಲ್ಲಿ ಇಳಿದರು. ಅಲ್ಲಿ ಬಿದ್ದುಕೊಂಡಿದ್ದ ಮುದಿ ಫಕೀರನೊಬ್ಬ ಅವರನ್ನು ನೀರು ಕೇಳಿದ. ಶಕ್ಕರ್ ನೀರು ತಂದು ಕುಡಿಸಿದರು. ನೀರು ಕುಡಿದ ತಕ್ಷಣವೇ ಅವನು ಸತ್ತು ಬಿದ್ದ. ಶಕ್ಕರ್ಗೆ ಏನು ಮಾಡಬೇಕೋ ತೋಚದೆ ಹೋಯಿತು. ಅಧಿಕಾರಿಗಳಿಗೆ ತಿಳಿಸಿದರೆ, ಆ ಹೊತ್ತಿನಲ್ಲಿ ಅವರೊಬ್ಬರೇ ಅಲ್ಲಿದ್ದುದರಿಂದ ಅವರೇ ಕೊಲೆಗಾರರೆಂದು ಆರೋಪ ಹೊರಿಸುತ್ತಾರೆ. ಅವರಿಗೆ ಬಹಳ ಗಾಬರಿಯಾಯಿತು. ಆ ಜಾಗದಿಂದ ಓಡಿಹೋಗುವುದೊಂದನ್ನು ಬಿಟ್ಟು ಬೇರೆ ಯಾವ ದಾರಿಯೂ ಕಾಣಲಿಲ್ಲ. ಬಾಬಾರ ಅನುಮತಿಯಿಲ್ಲದೆ ಶಿರಡಿ ಬಿಟ್ಟು ಬಂದಿದ್ದಕ್ಕೆ ಪಶ್ಚಾತ್ತಾಪವಾಯಿತು. ಮತ್ತೆ ಶಿರಡಿಯ ದಾರಿ ಹಿಡಿದು, ಬೆಳಗಿನ ಜಾವದ ಹೊತ್ತಿಗೆ ಯಾರಿಗೂ ತಿಳಿಯದಂತೆ, ಚಾವಡಿ ಸೇರಿಕೊಂಡರು. ಆತನ ಮನಸ್ಸೂ ಶಾಂತವಾಯಿತು. ಅದಾದಮೇಲೆ ಬಾಬಾ ಹೇಳಿದಂತೆ ಚಾಚೂ ತಪ್ಪದೆ ನಡೆದುಕೊಳ್ಳುತ್ತಾ ಸ್ವಲ್ಪಕಾಲದಲ್ಲೇ ಆರೋಗ್ಯವಂತರಾದರು.
ಒಂದು ರಾತ್ರಿ ಬಾಬಾ ಚಾವಡಿಯಲ್ಲಿ ಮಲಗಿದ್ದಾಗ ಇದ್ದಕ್ಕಿದ್ದಂತೆ ಎದ್ದು ಕೂಗಾಡತೊಡಗಿದರು, "ಓ ಅಬ್ದುಲ್, ತಕ್ಷಣವೇ ಬಾ. ಯಾವುದೋ ಪಿಶಾಚಿ ನನ್ನ ಹಾಸಿಗೆಗೆ ಅಪ್ಪಳಿಸುತ್ತಿದೆ." ಅಬ್ದುಲ್ ಒಂದು ಲಾಂದ್ರಾ ತಂದು, ಅಲ್ಲೆಲ್ಲಾ ಹುಡುಕಿದರೂ, ಏನೂ ಕಾಣಲಿಲ್ಲ. ಬಾಬಾರಿಗೆ ಸಮಾಧಾನವಾಗದೆ, ಮತ್ತೊಮ್ಮೆ ಸರಿಯಾಗಿ ಹುಡುಕುವಂತೆ ಹೇಳಿದರು. ತಮ್ಮ ಸಟ್ಕಾದಿಂದ ನೆಲದ ಮೇಲೆ ಹೊಡೆಯಲು ಆರಂಭಿಸಿದರು. ಸಾಕಷ್ಟು ಕಾಲ ಬಾಬಾರ ಸಹವಾಸದಲ್ಲಿದ್ದುದರಿಂದ ಶಕ್ಕರ್ ಅವರಿಗೆ ಬಾಬಾರ ರೀತಿ ನೀತಿಗಳು ಚೆನ್ನಾಗಿ ಅರ್ಥವಾಗುತ್ತಿತ್ತು. ಅವರು ಬಾಬಾ ಹಾವನ್ನು ನೋಡಿರಬಹುದು ಎಂದುಕೊಂಡರು. ಅಷ್ಟರಲ್ಲಿ ಬಾಬಾ ಅಬ್ದುಲ್ಗೆ ಶಕ್ಕರರ ಹಾಸಿಗೆ ಹತ್ತಿರ ನೋಡಲು ಹೇಳಿದರು. ಲಾಂದ್ರಾ ಹಿಡಿದು ನೋಡಿದರೆ, ಅಲ್ಲಿ ಹಾವೊಂದು ಹೆಡೆ ಬಿಚ್ಚಿ ತಲೆಯಾಡಿಸುತ್ತಾ ಕುಳಿತಿತ್ತು. ತಕ್ಷಣವೇ ಅದನ್ನು ಹೊಡೆದು ಕೊಲ್ಲಲಾಯಿತು. ತಮ್ಮ ಭಕ್ತರಿಗೋಸ್ಕರ ಸದಾ ಜಾಗರೂಕರಾಗಿರುವ ಬಾಬಾ ಅಮೀರ್ ಶಕ್ಕರರನ್ನು ಹೀಗೆ ಆಪತ್ತಿನಿಂದ ಕಾಪಾಡಿದರು.
ಹೇಮಾಡ್ ಪಂತ್ ಹೇಳಿದ ಕಥೆ
ಬಾಬಾರು ಹೇಳಿದ್ದಂತೆ ಕಾಕಾಸಾಹೇಬ್ ದೀಕ್ಷಿತರು ದಿನವೂ ಏಕನಾಥ ಭಾಗವತ, ಭಾವಾರ್ಥ ರಾಮಾಯಣಗಳನ್ನು ಓದುತ್ತಿದ್ದರು. ಅವರೆಷ್ಟು ಸುಶ್ರಾವ್ಯವಾಗಿ ಓದುತ್ತಿದ್ದರೆಂದರೆ ಕೇಳುತ್ತಿದ್ದ ಶ್ರೋತೃಗಳು ಮೈಮರೆತು ಅದರಲ್ಲೇ ಮಗ್ನರಾಗಿಹೋಗುತ್ತಿದ್ದರು. ಹೇಮಾಡ್ ಪಂತ್ ಕೂಡಾ ಈ ಓದುವಿಕೆಗಳಿಗೆ ಹೋಗುತ್ತಿದ್ದರು. ಒಂದು ದಿನ ಕಾಕಾಸಾಹೇಬ್ ರಾಮಾಯಣವನ್ನು ಓದುತ್ತಿದ್ದರು. ಹನುಮಂತ ತನ್ನ ತಾಯಿಯ ಆದೇಶದ ಮೇರೆಗೆ ರಾಮಲಕ್ಷ್ಮಣರನ್ನು ನೋಡಲು ಹೋಗಿದ್ದ ಘಟ್ಟವದು. ಆಂಜನೇಯ ರಾಮನನ್ನು ಹೇಗೆ ಪರೀಕ್ಷೆಮಾಡಿದ, ಆದರೆ ರಾಮ ಅವನು ಹೇಳದೆಯೆ ಆಂಜನೇಯನ ಗುರುತು ಹೇಗೆ ಹಿಡಿದ ಎಂಬ ಕಥೆಯನ್ನು ಓದುತ್ತಿದ್ದರು. ಪ್ರತಿಯೊಬ್ಬ ಕೇಳುಗನೂ, ಆ ಕಥೆಯಲ್ಲೇ ಲೀನರಾಗಿ ಹೋಗಿದ್ದರು. ನಿಶ್ಶಬ್ದ ತುಂಬಿತ್ತು.
ಎಲ್ಲಿಂದ ಹೇಗೆ ಬಂತೋ ತಿಳಿಯದ ಹಾಗೆ ಬಂದು, ಚೇಳೊಂದು ಹೇಮಾಡ್ ಪಂತರ ಬಲಭುಜದ ಮೇಲೆ, ಅವರ ವಲ್ಲಿಯ ಮೇಲೆ ಕುಳಿತಿತ್ತು. ಯಾರಿಗೂ ಅದರ ಪರಿವೆಯೇ ಇರಲಿಲ್ಲ. ಚೇಳು ತಾನೂ ಕಥೆಯನ್ನು ಕೇಳುತ್ತಿದೆಯೋ ಎಂಬಂತೆ ನಿಶ್ಚಲವಾಗಿ ಕುಳಿತಿತ್ತು. ದೇವರು ತನ್ನ ಕಥೆಗಳಲ್ಲಿ ಲೀನವಾದವರನ್ನು ತಾನೇ ರಕ್ಷಿಸುತ್ತಾನೆ ಎಂಬುವ ಹೇಳಿಕೆಯೊಂದಿದೆ. ಅದರಂತೆ ಹೇಮಾಡ್ ಪಂತ್ ಅಕಾರಣವಾಗಿ ತಮ್ಮ ಬಲಕ್ಕೆ ತಿರುಗಿ ನೋಡಿದರು. ಅಲ್ಲಿ ದೊಡ್ಡ ಚೇಳೊಂದು ತಮ್ಮ ಭುಜದ ಮೇಲೆ ಕುಳಿತಿರುವುದು ಕಾಣಿಸಿತು. ಬೇರೆಯವರಿಗೆ ಯಾವ ರೀತಿಯ ಅಡಚಣೆಯೂ ಆಗದಂತೆ ಮೆಲ್ಲಗೆ ತಮ್ಮ ವಲ್ಲಿಯ ಎರಡೂ ಅಂಚುಗಳನ್ನು ಸೇರಿಸಿ ಚೇಳನ್ನು ಅದರ ಒಳಗೆ ಮುಚ್ಚಿಹಿಡಿದು ಆಚೆ ಬಿಸಾಡಿ ಬಂದರು.
ಮತ್ತೊಂದು ಸಂದರ್ಭದಲ್ಲಿ ಕಾಕಾಸಾಹೇಬರ ವಾಡಾ ಮಹಡಿಯ ಕೊಠಡಿಯಲ್ಲಿ ಹಲವಾರು ಜನ ಕುಳಿತು ಮಾತನಾಡುತ್ತಿದ್ದರು. ಅವರಲ್ಲಿ ಹೇಮಾಡ್ ಪಂತ್ ಕೂಡಾ ಇದ್ದರು. ಗೋಧೂಳಿಯ ಸಮಯ. ಕಿಟಕಿಯ ಮೂಲಕ ಏನೋ ಒಂದು ಹೊಳೆಯುತ್ತಿರುವುದು ಒಳಕ್ಕೆ ಬಂದು ಕುಳಿತುಕೊಂಡಂತೆ ಕಾಣಿಸಿತು. ದೀಪ ತಂದು ನೋಡಿದರೆ, ಅದೊಂದು ಸರ್ಪ. ಸುತ್ತಿ ಕುಳಿತು ಹೆಡೆಯಾಡಿಸುತ್ತಿದೆ. ಆ ಹಾವು ಕುಳಿತಿದ್ದ ಜಾಗ, ಅದರ ಹತ್ತಿರ ಹೋಗಲು ಅಷ್ಟು ಸುಲಭವಾಗಿರಲಿಲ್ಲ. ಅದು ಈಚೆ ಬಂದಾಗ ಅದನ್ನು ಕೊಲ್ಲಲು ಕಾಯುತ್ತಾ ಕುಳಿತರು. ಬಹುಶಃ ಶಬ್ದ ಕೇಳಿಯೋ ಏನೋ, ಇದ್ದಕಿದ್ದಹಾಗೇ ಅದು ತಾನು ಬಂದ ದಾರಿಯಲ್ಲೇ ಆಚೆಗೆ ಹೊರಟು ಹೋಯಿತು. ಎಲ್ಲರೂ ಸಮಾಧಾನದ ನಿಟ್ಟುಸಿರು ಬಿಟ್ಟರು. ಮುಕ್ತಾರಾಮ್ ಎನ್ನುವ ಭಕ್ತನೊಬ್ಬ, “ಅದು ಹಾಗೆ ಹೊರಟು ಹೋದುದೇ ಒಳ್ಳೆಯದಾಯಿತು. ಇಲ್ಲದಿದ್ದರೆ ಅದು ಸಾಯುತ್ತಿತ್ತು” ಎಂದು ಹೇಳಿದ. ಹೇಮಾಡ್ ಪಂತ್ ಅದಕ್ಕೆ ಒಪ್ಪಿಕೊಳ್ಳದೇ, ಅದನ್ನು ಕೊಲ್ಲುವುದೇ ಸಮಂಜಸ ಎಂದರು. ಹಾಗೇ ವಾದ ಸರಿರಾತ್ರಿಯವರೆಗೂ ನಡೆಯಿತು. ಯಾವುದೂ ಇತ್ಯರ್ಥವಾಗಲಿಲ್ಲ.
ಬಾಬಾರ ಅಭಿಪ್ರಾಯ
ಮರುದಿನ ಅವರು ಬಾಬಾರನ್ನು ಕಾಣಲು ಹೋದಾಗ ಯಾವುದು ಸರಿ ಎಂದು ಬಾಬಾರನ್ನು ಕೇಳಿದರು. ಅದಕ್ಕೆ ಬಾಬಾ, "ದೇವರು ಎಲ್ಲ ಪ್ರಾಣಿಗಳಲ್ಲಿಯೂ ಇದ್ದಾನೆ. ಈ ಪ್ರಪಂಚದ ಸೂತ್ರಧಾರ ಅವನು. ಅವನ ಅಪ್ಪಣೆ ಇಲ್ಲದೆ ಯಾರೂ ಯಾರಿಗೂ ತೊಂದರೆ ಕೊಡಲು ಸ್ವತಂತ್ರರಲ್ಲ. ಎಲ್ಲ ಪ್ರಾಣಿಗಳಲ್ಲೂ ದಯೆ, ಪ್ರೀತಿ ಇರಬೇಕು. ಜಗಳಗಳು, ಕೊಲ್ಲುವುದು ಇದನ್ನೆಲ್ಲಾ ಬಿಡಿ. ದೇವರೇ ಸರ್ವರಿಗೂ ರಕ್ಷಕ" ಎಂದು ಹೇಳಿದರು.
ಇದರೊಂದಿಗೆ ಬಾಲಾಸಾಹೇಬ್ ಮಿರೀಕರ್, ಬಾಪು ಸಾಹೇಬ್ ಬೂಟಿ, ಅಮೀರ್ ಶಕ್ಕರ್ ಅವರನ್ನು ಬಾಬಾ ಹಾವಿನಿಂದ ಹೇಗೆ ರಕ್ಷಿಸಿದರು ಮತ್ತು ಇತರ ವಿಷಯಗಳನ್ನು ಕುರಿತು ಹೇಳುವ ಇಪ್ಪತ್ತೆರಡನೆಯ ಅಧ್ಯಾಯ ಮುಗಿಯಿತು. ಮುಂದಿನ ಅಧ್ಯಾಯದಲ್ಲಿ ಹೇಮಾಡ್ ಪಂತ್ ಯೋಗ ಮತ್ತು ಈರುಳ್ಳಿ, ಶ್ಯಾಮಾರನ್ನು ರಕ್ಷಿಸಿದ್ದು ಇತ್ಯಾದಿ ವಿಷಯಗಳನ್ನು ಹೇಳುತ್ತಾರೆ
||ಶ್ರೀ ಸದ್ಗುರು ಸಾಯಿನಾಥಾರ್ಪಣಮಸ್ತು||ಶುಭಂ ಭವತು||
||ಓಂ ಶಾಂತಿಃ ಶಾಂತಿಃ ಶಾಂತಿಃ||
||ಓಂ ಶಾಂತಿಃ ಶಾಂತಿಃ ಶಾಂತಿಃ||
No comments:
Post a Comment