||ಶ್ರೀ ಸಾಯಿ ಸಚ್ಚರಿತ್ರೆ||
||ಹದಿನೆಂಟನೆಯ ಮತ್ತು ಹತ್ತೊಂಭತ್ತನೆಯ ಅಧ್ಯಾಯಗಳು||
||ಹೇಮಾಡ್ ಪಂತರಿಗೆ ಕೃಪಾಪ್ರಸಾದ||
ಶ್ರೀ ಗಣೇಶಾಯ ನಮಃ ಶ್ರೀ ಸರಸ್ವತಯೇ ನಮಃ
ಶ್ರೀ ವೆಂಕಟೇಶಾಯ ನಮಃ ಶ್ರೀ ಸಾಯಿನಾಥಾಯ ನಮಃ
ಶ್ರೀ ಸದ್ಗುರುಭ್ಯೋನ್ನಮಃ
||ಹದಿನೆಂಟನೆಯ ಮತ್ತು ಹತ್ತೊಂಭತ್ತನೆಯ ಅಧ್ಯಾಯಗಳು||
||ಹೇಮಾಡ್ ಪಂತರಿಗೆ ಕೃಪಾಪ್ರಸಾದ||
ಶ್ರೀ ಗಣೇಶಾಯ ನಮಃ ಶ್ರೀ ಸರಸ್ವತಯೇ ನಮಃ
ಶ್ರೀ ವೆಂಕಟೇಶಾಯ ನಮಃ ಶ್ರೀ ಸಾಯಿನಾಥಾಯ ನಮಃ
ಶ್ರೀ ಸದ್ಗುರುಭ್ಯೋನ್ನಮಃ
ಈ ಅಧ್ಯಾಯಗಳಲ್ಲಿ ಹೇಮಾಡ್ ಪಂತ್, ಬಾಬಾ ಹೇಗೆ ತಮ್ಮನ್ನು ಒಪ್ಪಿಕೊಂಡರು, ಅನುಗ್ರಹಿಸಿದರು ಮತ್ತು ಇತರ ವಿಷಯಗಳನ್ನು ಹೇಳುತ್ತಾರೆ.
ಸದ್ಗುರು ಸಾಯಿ
ಹಿಂದಿನ ಅಧ್ಯಾಯದಲ್ಲಿ ತನ್ನ ಭಕ್ತರು ಅವರು ಕೇಳಿದ್ದನ್ನು ಪಡೆಯುವುದಕ್ಕೆ ಅರ್ಹರೇ ಅಲ್ಲವೇ ಎಂಬುದನ್ನು ಹೇಗೆ ಪರೀಕ್ಷಿಸಿದರು ಎಂಬುದನ್ನು ನೋಡಿದೆವು. ಸದ್ಗುರುವು ತಾನು ಕೊಟ್ಟ ಉಪದೇಶವನ್ನು ಭಕ್ತರು ಎಲ್ಲಿಯವರೆಗೆ ಗ್ರಹಿಸಬಲ್ಲರು ಎಂಬುದರ ಮೇಲೆ ಮುಂದಿನ ಶಿಕ್ಷಣವನ್ನು ಕೊಡುತ್ತಾರೆ. ಹಾಗೆ ಕೊಟ್ಟ ಉಪದೇಶ ಭಕ್ತರನ್ನು ಆತ್ಮೋದ್ಧಾರದ ಕಡೆಗೆ ಕೊಂಡೊಯ್ಯುತ್ತದೆ. "ಗುರುವು ಒಬ್ಬ ಭಕ್ತನಿಗೆ ಕೊಟ್ಟ ಉಪದೇಶ ಅವನಿಗೆ ಮಾತ್ರ. ಇನ್ನೊಬ್ಬರಿಗೆ ಹೇಳಬಾರದು. ಹಾಗೆ ಹೇಳಿದರೆ ಅದರ ಶಕ್ತಿ ಕಡಮೆಯಾಗುತ್ತದೆ" ಎಂಬುದೊಂದು ನಂಬಿಕೆಯಿದೆ. ಇದಕ್ಕೆ ಆಧಾರವೇನೂ ಇಲ್ಲ. ಸದ್ಗುರುವಿನ ಹೇಳಿಕೆಗಳು ಎಲ್ಲರಿಗೂ ಅನ್ವಯಿಸುವಂತಹವು. ಸದ್ಗುರುವು ನಮ್ಮನ್ನು ಸದಾ, ಬೆಳಗ್ಗೆ ರಾತ್ರಿ ಎನ್ನದೆ, ರಕ್ಷಿಸುತ್ತಿರುತ್ತಾನೆ. ಅವರಿಂದ ಉಪದೇಶ ಪಡೆದವನು ಅದನ್ನು ಸರಿಯಾಗಿ ಅರ್ಥಮಾಡಿಕೊಂಡು ಅನುಷ್ಠಾನದಲ್ಲಿ ಇಟ್ಟುಕೊಂಡಿದ್ದರೆ, ಅದನ್ನು ಬೇರೆಯವರಿಗೆ ಹೇಳಿದರೂ ಅದರ ಶಕ್ತಿ ಕಡಮೆಯಾಗುವುದಿಲ್ಲ. ಬುಧಕೌಶಿಕಮುನಿ ತನಗೆ ಕನಸಿನಲ್ಲಿ ತೋರಿದ ರಾಮ ರಕ್ಷಾ ಸ್ತೋತ್ರವನ್ನು ಸಾರ್ವಜನಿಕವಾಗಿ ಪ್ರಚುರಪಡಿಸಿದರು ಎಂಬುದೊಂದು ಉದಾಹರಣೆ.
ಮಕ್ಕಳು ಸಾಮಾನ್ಯವಾಗಿ ಔಷಧ ಕುಡಿಯಲು ಇಷ್ಟಪಡುವುದಿಲ್ಲ. ಅದರಲ್ಲೂ ಕಹಿ ಔಷಧವಾದರೆ ಇನ್ನೂ ಹೆಚ್ಚಿನ ರಂಪ ಮಾಡುತ್ತಾರೆ. ಆದರೂ ತಾಯಿ ಅದಕ್ಕೆ ಸಕ್ಕರೆ ಸೇರಿಸಿಯೋ, ಇಲ್ಲ ಇನ್ನೇನ್ನಾದರು ಆಮಿಷ ತೋರಿಸಿಯೋ ಔಷಧವನ್ನು ಕುಡಿಸುತ್ತಾಳೆ. ಬಾಬಾ ಕೂಡಾ ಅದೇ ರೀತಿಯಲ್ಲಿ ಭಕ್ತರಿಗೆ ಆಧ್ಯಾತ್ಮಿಕ ಪಾಠಗಳನ್ನು ಬೋಧಿಸಿದರು. ಅವರು ಮುಚ್ಚಿಮಾಡಿ ಅಥವ ಸುತ್ತಿ ಬಳಸಿ ಹೇಳುತ್ತಿರಲಿಲ್ಲ. ನೇರವಾಗಿ ಹೇಳುತ್ತಿದ್ದರು. ಭಕ್ತರು ಅವರು ಹೇಳಿದ್ದನ್ನು ತಪ್ಪಾಗಿ ತಿಳಿದುಕೊಳ್ಳಲು ಸಾಧ್ಯವಿರಲಿಲ್ಲ. ತಾವು ಏನು ಹೇಳುತ್ತಿದ್ದೇವೆಂಬುದು ತಕ್ಷಣವೇ ಅರ್ಥವಾಗುವಂತೆ ಹೇಳುತ್ತಿದ್ದರು. ಕೆಲವು ಸಲ ಅವರು ನೀತಿಕಥೆಗಳ ಮೂಲಕವೂ ಶಿಕ್ಷಣ ಕೊಡುತಿದ್ದರು. ಆ ಕಥೆಗಳನ್ನು ಅರ್ಥಮಾಡಿಕೊಂದು ಅದರಂತೆ ನಡೆದವರಿಗೆ ಬಹಳ ಲಾಭದಾಯಕವಾಗಿರುತ್ತಿತ್ತು. ಬಾಬಾರ ಶಿಕ್ಷಣಗಳು ಆತ್ಮೋದ್ಧಾರವೆಂಬ ಅಂಧಕಾರದಲ್ಲಿ ನಡೆಯುತ್ತಿರುವವನಿಗೆ ದಾರಿದೀಪಗಳು.
ಬಾಬಾ ನಮಗೆ ಕಾಣಿಸುತ್ತಿರುವ ತ್ರಿಮೂರ್ತಿ ಸ್ವರೂಪ. ಅವರೇ ನಮ್ಮ ಮಾತಾ ಪಿತೃಗಳು. ಬಂಧು ಬಳಗ ಸ್ನೇಹಿತ ಎಲ್ಲರೂ. ಈ ಪ್ರಪಂಚವೇ ನಮಗೆ ಎದುರಾದರೂ, ನಮ್ಮನ್ನು ಕಾಪಾಡುವವರು ಅವರೊಬ್ಬರೇ. ವಿವೇಕ ವೈರಾಗ್ಯಗಳನ್ನಿತ್ತು, ನಮ್ಮನ್ನು ಇಂದ್ರಿಯ ವಿಷಯಗಳಿಂದ ದೂರಮಾಡಿ, ಜ್ಞಾನಮಾರ್ಗದಲ್ಲಿ ನಡೆಯುವಂತೆ ಮಾಡುವವರು ಅವರೊಬ್ಬರೇ. ಹೀಗೆ ಎಲ್ಲಾ ವಿಧದಲ್ಲೂ ನಮ್ಮನ್ನು ನೋಡಿಕೊಳ್ಳುವ ಆ ಬಾಬಾರ ಚರಣಬದ್ಧರಾಗಿ ಅವರ ಸೇವೆಯನ್ನು ಶ್ರದ್ಧಾ ಭಕ್ತಿ ಉತ್ಸಾಹಗಳೊಡನೆ ಮಾಡಿ ಈ ಸಂಸಾರ ಸಾಗರದಿಂದ ಪಾರಾಗೋಣ. ನಮ್ಮ ಸೇವೆಯಿಂದ ತೃಪ್ತರಾದ ಅವರು, ನಮ್ಮನ್ನು ತಮ್ಮ ತೆಕ್ಕೆಯಲ್ಲಿಟ್ಟುಕೊಂಡು ನಮ್ಮಮೇಲೆ ಸದಾ ಅವರ ಪ್ರೀತಿ ವಿಶ್ವಾಸಗಳನ್ನು ಸುರಿಸುವಂತೆ ಮಾಡೋಣ. ಅವರನ್ನು ಮತ್ತೆ ಮತ್ತೆ ನಮ್ಮ ಸಂದೇಹಗಳನ್ನು ಪರಿಹರಿಸುವಂತೆ ಕೇಳಿ, ನಾವು ಸದಾ ಸತ್ಯಮಾರ್ಗದಲ್ಲಿಯೇ ನಡೆಯುವಂತೆ ಮಾಡಿ ಎಂದು ಬೇಡಿಕೊಳ್ಳೋಣ. ಆತನ ಕೃಪಾದೃಷ್ಟಿ ನಮ್ಮಿಂದ ತಪ್ಪಿಹೋಗದಂತೆ ನಡೆದುಕೊಳ್ಳೋಣ.
ಸಾಠೆ ಕಥೆ
ಬೊಂಬಾಯಲ್ಲಿ ಕ್ರಾಫರ್ಡ್ ಅಧಿಕಾರದಲ್ಲಿದ್ದಾಗ, ಪ್ರಮುಖರಾಗಿದ್ದ ಸಾಠೆಗೆ (ಇವರು ಷಿರಡಿಯಲ್ಲಿ ಸಾಠೆವಾಡ ಕಟ್ಟಿಸಿದ ಶ್ರೀ ಹರಿ ವಿನಾಯಕ್ ಸಾಠೆಯಲ್ಲ, ಬೇರೆಯವರು) ವ್ಯವಹಾರದಲ್ಲಿ ಬಹಳ ನಷ್ಟವಾಯಿತು. ಇತರ ವಿಷಯಗಳಲ್ಲೂ ಆತನ ಪರಿಸ್ಥಿತಿ ಕ್ಲಿಷ್ಟವಾಗಿದ್ದುದರಿಂದ, ಆತನ ಮನಸ್ಥಿತಿ ಬಹಳ ಕುಗ್ಗಿಹೋಗಿ ಮನೆಬಿಟ್ಟು ಎಲ್ಲಿಯಾದರೂ ಹೊರಟು ಹೋಗಬೇಕೆನ್ನುವ ಮನೋಭಾವಕ್ಕೆ ಆತ ಈಡಾಗಿದ್ದರು.
ಸುಖ ಸಂತೋಷಗಳಲ್ಲಿದ್ದಾಗ ನಮಗೆ ದೇವರ ನೆನಪು ಬರುವುದಿಲ್ಲ. ದುಃಖಗಳು ಎದುರಾದಾಗಲೇ ದೇವರ ನೆನಪಾಗುವುದು. ಆತನ ಪುಣ್ಯದಿಂದಲೋ ಎಂಬಂತೆ, ಅವರ ಸ್ನೇಹಿತರು ಅವರನ್ನು ಶಿರಡಿಗೆ ಹೋಗಿ ಬಾಬಾರ ಚರಣಾರವಿಂದಗಳಲ್ಲಿ ಬೀಳು ಎಂದು ಸಲಹೆ ಕೊಟ್ಟರು. ಸ್ನೇಹಿತರ ಸಲಹೆಯಂತೆ ಆತ ಶಿರಡಿಗೆ ಬಂದು, ಬಾಬಾರ ಚರಣಗಳಿಗೆ ಸಾಷ್ಟಾಂಗ ನಮಸ್ಕಾರ ಮಾಡಿದರು. ಬಾಬಾರ ಆ ತೇಜೋಮಯವಾದ, ಸ್ವಚ್ಛ ಶುದ್ಧ ಮೂರ್ತಿಯನ್ನು ಕಾಣುತ್ತಲೇ, ಅತನ ಮನಸ್ಸು ಶಾಂತವಾಯಿತು. ತಕ್ಷಣವೇ ದೃಢನಿಶ್ಚಯದಿಂದ ಕೂತು ಗುರುಚರಿತ್ರೆಯ ಸಪ್ತಾಹ ಪಾರಾಯಣ ಆರಂಭಿಸಿದರು. ಸಪ್ತಾಹದ ಕೊನೆಯ ದಿನ ಆತನ ಕನಸಿನಲ್ಲಿ, ಬಾಬಾ ಗುರುಚರಿತ್ರೆಯನ್ನು ಕೈಯಲ್ಲಿ ಹಿಡಿದು, ಅದನ್ನು ವಿವರಿಸುತ್ತಿರುವಂತೆ ಕಾಣಿಸಿಕೊಂಡರು. ಎದ್ದ ಮೇಲೂ ಆ ಕನಸು ಅವರ ಮನಸ್ಸಿನಲ್ಲಿ ಅಚ್ಚಳಿಯದಂತೆ ನಿಂತಿತ್ತು. ಹಾಗೆ ಬಾಬಾ ಕನಸಿನಲ್ಲಿ ದರ್ಶನ ಕೊಟ್ಟದ್ದು ತನ್ನ ಪುಣ್ಯಫಲವೇ ಎಂದುಕೊಂಡು, ಕಾಕಾ ಸಾಹೇಬರಿಗೆ ತಮ್ಮ ಕನಸನ್ನು ವಿವರಿಸಿ, “ಅದರ ಅರ್ಥ ಏನು? ನಾನು ಇನ್ನೊಂದು ಸಪ್ತಾಹ ಮಾಡಬೇಕೇ? ಅಥವಾ ಇಷ್ಟೇ ಸಾಕೇ? ಎಂದು ಬಾಬಾರನ್ನು ಕೇಳಿ ನನಗೆ ತಿಳಿಸಿ” ಎಂದು ಪ್ರಾರ್ಥನೆ ಮಾಡಿಕೊಂಡರು.
ಅವಕಾಶ ದೊರೆತಾಗ, ಸಾಠೆಯವರ ಕನಸನ್ನು ಹೇಳಿ, ಕಾಕಾ ಸಾಹೇಬರು ಬಾಬಾರನ್ನು ಸಾಠೆಯವರ ಪರವಾಗಿ, "ಬಾಬಾ ಇದರರ್ಥ ಏನು? ಅವರು ಇನ್ನೊಂದು ಸಪ್ತಾಹ ಪಾರಾಯಣ ಮಾಡಬೇಕೆ?" ಎಂದು ಕೇಳಿದರು. ಅದಕ್ಕೆ ಬಾಬಾ, "ಅವನು ಇನ್ನೊಂದು ಸಪ್ತಾಹ ಪಾರಾಯಣ ಮಾಡಲಿ. ಅದನ್ನು ಸರಿಯಾಗಿ ಅರ್ಥಮಾಡಿಕೊಳ್ಳಲಿ. ಅದರಿಂದ ಅವನ ಮನಶ್ಶುದ್ಧಿಯಾಗಿ ಅವನಿಗೆ ಅನುಕೂಲವಾಗುತ್ತದೆ. ಅಲ್ಲಾ ಅವನನ್ನು ಈ ಪ್ರಪಂಚದ ಬಂಧನಗಳಿಂದ ಪಾರುಮಾಡಿ ಕಾಪಾಡುತ್ತಾನೆ" ಎಂದರು. ಈ ಸಂವಾದ ನಡೆದಾಗ ಹೇಮಾಡ್ ಪಂತ್ ಅಲ್ಲಿ ಕುಳಿತು ಬಾಬಾರ ಪಾದ ನೀವುತ್ತಿದ್ದರು.
ಬಾಬಾರ ಆ ಮಾತುಗಳು ಹೇಮಾಡ್ ಪಂತರ ಮನಸ್ಸಿನಲ್ಲಿ ಯೋಚನಾ ತರಂಗಗಳನ್ನೆಬ್ಬಿಸಿತು. ಅವರು "ನಾನು ಈಗ ೪೦ ವರ್ಷಗಳಿಂದಲೂ ಗುರುಚರಿತ್ರೆಯನ್ನು ಓದುತ್ತಿದ್ದೇನೆ. ನನಗೆ ಯಾವ ಅನುಭವವೂ ಆಗಿಲ್ಲ. ಸಾಠೆ ಒಂದು ಸಪ್ತಾಹ ಮಾಡುವುದರಲ್ಲೇ ಅವರಿಗೆ ಪುರಸ್ಕಾರ ದೊರೆತಿದೆ. ನಾನು ಶಿರಡಿಯಲ್ಲಿ ೭ ವರ್ಷಗಳಿಂದ ಬಾಬಾರ ಸೇವೆ ಮಾಡುತ್ತಾ, ಚಾತಕ ಪಕ್ಷಿಯಂತೆ ಅವರ ಅನುಗ್ರಹಕ್ಕಾಗಿ ಕಾದಿದ್ದೇನೆ, ಇನ್ನೂ ನನಗೆ ಅವರ ಅನುಗ್ರಹ ದೊರೆತಿಲ್ಲ. ಸಾಠೆಗೆ ೭ ದಿನಗಳಲ್ಲೇ ಅವರ ಅನುಗ್ರಹ ಸಿಕ್ಕಿದೆ" ಎಂಬ ಯೋಚನಾಲಹರಿಯಲ್ಲಿ ಮುಳುಗಿದರು. ಅವರ ಮನಸ್ಸಿನಲ್ಲಿ ಈ ರೀತಿಯ ಯೋಚನೆಗಳು ಆರಂಭವಾದೊಡನೆ, ಸರ್ವಜ್ಞರಾದ ಬಾಬಾ ಅದನ್ನು ಗುರುತಿಸಿದರು. ಅವರಿಗೆ ಎಲ್ಲವೂ ವಿದಿತವಾಯಿತು. ತಕ್ಷಣವೇ ಹೇಮಾಡ್ ಪಂತರಿಗೆ ಹೇಳಿದರು, "ಶ್ಯಾಮ ಹತ್ತಿರ ಹೋಗಿ ನನಗೆ ೧೫ ರೂಪಾಯಿಗಳ ದಕ್ಷಿಣೆ ಕೇಳಿ ತೆಗೆದುಕೊಂಡು ಬಾ. ಹಾಗೇ ಅವರ ಹತ್ತಿರ ಕೂತು ಸ್ವಲ್ಪ ಹೊತ್ತು ಮಾತನಾಡಿಕೊಂಡು ಬಾ". ಬಾಬಾರ ಮಾತುಗಳೆಂದರೆ ಅದು ಅವರ ಆಜ್ಞೆಯೇ! ಬಾಬಾರ ಆಜ್ಞೆಯಂತೆ ಹೇಮಾಡ್ ಪಂತ್ ಎದ್ದು ಶ್ಯಾಮಾರನ್ನು ಕಾಣಲು ಹೊರಟರು.
ಹೇಮಾಡ್ ಪಂತ್ ಶ್ಯಾಮಾರ ಮನೆಗೆ ಹೋದರು. ಆಗತಾನೇ ಸ್ನಾನ ಮುಗಿಸಿ, ಶ್ಯಾಮಾ ಹರಿನಾಮೋಚ್ಚಾರಣೆ ಮಾಡುತ್ತಾ ಪಂಚೆಯುಡುತ್ತಿದ್ದರು. ಹೇಮಾಡ್ ಪಂತರನ್ನು ಕಂಡೊಡನೆ ಅವರು, "ಇದೇನು? ಈ ಹೊತ್ತಿನಲ್ಲಿ ಬಂದಿರುವಿರಿ? ಮಸೀದಿಯಿಂದ ಒಬ್ಬರೇ ಬರುತ್ತಿರುವಂತೆ ಕಾಣುತ್ತಿದೆ. ಮನಸ್ಸು ಕಳವಳಗೊಂಡಿರುವಂತಿದೆ. ಕುಳಿತುಕೊಳ್ಳಿ. ಶಾಂತರಾಗಿ. ಇಲ್ಲಿರುವ ಈ ತಾಂಬೂಲವನ್ನು ತೆಗೆದುಕೊಳ್ಳಿ. ನಾನು ಅಷ್ಟರಲ್ಲಿ ಪೂಜೆ ಮುಗಿಸಿ ಬರುತ್ತೇನೆ," ಎಂದರು.
ಹೇಮಾಡ್ ಪಂತ್ ಹಾಗೇ ನೋಡುತ್ತಿದ್ದಾಗ ಅಲ್ಲಿ ನಾಥಭಾಗವತ ಪುಸ್ತಕ ಕಾಣಿಸಿತು. ಅದು ಸಂತ ಏಕನಾಥರು ಭಾಗವತದ ಹನ್ನೊಂದನೆಯ ಅಧ್ಯಾಯಕ್ಕೆ ಬರೆದಿರುವ ವ್ಯಾಖ್ಯಾನ. ಅದನ್ನು ನೋಡುತ್ತಲೇ ಪಂತರಿಗೆ ತಾವು ಬೆಳಗ್ಗೆ ಕಾರಣಾಂತರಗಳಿಂದ ಅದನ್ನು ಪೂರ್ತಿಯಾಗಿ ಓದಲಾಗದೇ ಇದ್ದದ್ದು ನೆನಪಿಗೆ ಬಂತು. ತೆಗೆದರೆ, ಸರಿಯಾಗಿ ತಾವು ಎಲ್ಲಿಗೆ ನಿಲ್ಲಿಸಿದ್ದರೋ ಅದೇ ಪುಟ ಕಾಣಿಸಿತು. ಹೇಮಾಡ್ ಪಂತರಿಗೆ ಆಶ್ಚರ್ಯವಾಯಿತು.
ಬಾಪೂಸಾಹೇಬ್ ಜೋಗ್ ಮತ್ತು ಕಾಕಾಸಾಹೇಬ್ ದೀಕ್ಷಿತರಿಗೆ ದಿನವೂ ಭಾವಾರ್ಥ ದೀಪಿಕೆ, ಜ್ಞಾನೇಶ್ವರಿ, ನಾಥಭಾಗವತ ಹಾಗೂ ಭಾವಾರ್ಥ ರಾಮಾಯಣಗಳನ್ನು ಓದಲು ಬಾಬಾ ಹೇಳಿದ್ದರು. ಕಾಕಾ ಸಾಹೇಬ್ ದೀಕ್ಷಿತ್ ದಿನವೂ ಬಾಬಾರ ಪೂಜೆ ಮಾಡಿ, ನೈವೇದ್ಯ ಆದಮೇಲೆ, ಸ್ವಲ್ಪ ಹಾಲು ಕುಡಿದು ಪುಸ್ತಕ ಪಠನ ಆರಂಭಿಸುತ್ತಿದ್ದರು. ನಾಥ ಭಾಗವತ ಬೆಳಗ್ಗೆ, ಭಾವಾರ್ಥ ರಾಮಾಯಣ ರಾತ್ರಿ ಓದುತ್ತಿದ್ದರು. ಜ್ಞಾನದೇವರ ಜ್ಞಾನೇಶ್ವರಿಯನ್ನು ಬಿಟ್ಟರೆ ಮರಾಠಿ ಭಾಷೆಯಲ್ಲಿ ಭಾವಾರ್ಥ ರಾಮಾಯಣ ಎರಡನೆಯ ಸ್ಥಾನದಲ್ಲಿದೆಯೆಂದು ಪ್ರತೀತಿ. ಸಂತ ತುಕಾರಾಮರು ಅದನ್ನು ಒಂದು ಸಾವಿರ ಸಲ ಭಂಡಾರ ಪರ್ವತದ ಮೇಲೆ ಕೂತು ಓದಿದರೆಂದು ತಿಳಿದವರು ಹೇಳುತ್ತಾರೆ.
ಬಾಬಾರ ಭಕ್ತರು ಅವರಲ್ಲಿಗೆ ಬಂದು ತಮಗೆ ಅರ್ಥವಾಗದ ವಿಷಯದ ಬಗ್ಗೆ ಪ್ರಶ್ನೆ ಕೇಳಿದರೆ ಬಾಬಾ ಹಾಗೆ ಪ್ರಶ್ನೆ ಕೇಳಿದವರನ್ನು ಮೇಲೆ ಹೇಳಿದ ಪುಸ್ತಕಗಳಲ್ಲಿ ಯಾವುದಾದರೂ ಒಂದನ್ನು ಓದಲು ಹೇಳುತ್ತಿದ್ದರು. ಅವರು ಹಾಗೆ ಓದಿದಾಗ, ಅವರಿಗೆ ತಮ್ಮ ಪ್ರಶ್ನೆಗೆ ಬಹು ಸಮರ್ಪಕವಾದ ಉತ್ತರಗಳು ದೊರೆಯುತ್ತಿದ್ದವು. ಹೇಮಾಡ್ ಪಂತ್ ಪ್ರತಿದಿನ ನಾಥಭಾಗವತವನ್ನು ಓದುತ್ತಿದ್ದರು. ಅಂದು ಯಾರ ಜೊತೆಯಲ್ಲೋ ಮಸೀದಿಗೆ ಬರಬೇಕಾಯಿತು. ಅದರಿಂದ ಅವರು ಪಠನ ಪೂರ್ತಿ ಮಾಡಲಾಗಿರಲಿಲ್ಲ. ಶ್ಯಾಮಾ ಮನೆಯಲ್ಲಿ, ಆ ಪುಸ್ತಕ ಕಣ್ಣಿಗೆ ಬಿದ್ದು ಅದನ್ನು ತೆಗೆದುಕೊಂಡು ಅಂದು ಓದಲಾಗದೇ ಇದ್ದ ಭಾಗವನ್ನು ಓದಿ ಮುಗಿಸಬೇಕೆಂದು ಪುಸ್ತಕವನ್ನು ತೆಗೆದರೆ, ತಾವು ಎಲ್ಲಿಗೆ ನಿಲ್ಲಿಸಿದ್ದರೋ ಅದೇ ಪುಟ ತೆರೆದುಕೊಂಡಿತು. ಬಾಬಾ ತನ್ನನ್ನು ಈ ಓದು ಪೂರ್ತಿಮಾಡಲೆಂದೇ ಇಲ್ಲಿಗೆ ಕಳುಹಿಸಿದ್ದಾರೆ ಎಂದುಕೊಂಡು ಅದನ್ನು ಓದಿ ಮುಗಿಸುತ್ತಿರುವಂತೆಯೇ ಶ್ಯಾಮ ತಮ್ಮ ಪೂಜೆ ಮುಗಿಸಿ ಅಲ್ಲಿಗೆ ಬಂದರು.
ಶ್ಯಾಮಾರನ್ನು ಕಾಣುತ್ತಲೇ ಹೇಮಾಡ್ ಪಂತ್ ಶ್ಯಾಮಾರಿಗೆ, "ಬಾಬಾ ನಿಮ್ಮಿಂದ ೧೫ ರೂಪಾಯಿ ದಕ್ಷಿಣೆ ತರಲು ಹೇಳಿದ್ದಾರೆ. ಹಾಗೆಯೇ ನಿಮ್ಮ ಜೊತೆ ಕೂತು ಸ್ವಲ್ಪ ಹೊತ್ತು ಮಾತನಾಡಿಕೊಂಡು ಬರಲೂ ಹೇಳಿದ್ದಾರೆ" ಎಂದರು. ಶ್ಯಾಮಾ ಅದನ್ನು ಕೇಳಿ ಆಶ್ಚರ್ಯದಿಂದ, " ನನ್ನ ಹತ್ತಿರ ಹಣವಿಲ್ಲ ಎಂದು ಬಾಬಾಗೆ ಗೊತ್ತಿದೆ. ಅದರಿಂದ ಹಣದ ಬದಲು ನನ್ನ ಹದಿನೈದು ನಮಸ್ಕಾರಗಳನ್ನು ತೆಗೆದುಕೊಳ್ಳಿ" ಎಂದರು. ಹೇಮಾಡ್ ಪಂತ್, "ಆಯಿತು. ತೆಗೆದುಕೊಂಡಿದ್ದೇನೆ. ನಮ್ಮ ದುರಿತನಾಶನಕ್ಕಾಗಿ ಬಾಬಾರ ಲೀಲೆಗಳನ್ನು ಹೇಳಿ. ಕೇಳಿ ಪುನೀತರಾಗೋಣ" ಏಂದರು.
ಶ್ಯಾಮಾ ಹೇಳಿದರು. "ಬಾಬಾರ ಲೀಲೆಗಳು ಅದ್ಭುತವಾದವು. ಆಶ್ಚರ್ಯಕರವಾದವು. ಬಹಳಷ್ಟು ನೀವು ಆಗಲೇ ಬಲ್ಲಿರಿ. ಇಲ್ಲಿಗೆ ಬಂದಮೇಲೆ ನೀವೇ ಸ್ವತಃ ನೋಡಿದ್ದೀರಿ. ನಾನೊಬ್ಬ ಹಳ್ಳಿಯ ಮುಕ್ಕ. ನೀವಾದರೋ ಓದಿ ಬರೆದವರು. ವಿದ್ಯಾವಂತರು. ನಿಮಗೆ ನಾನೇನು ತಾನೇ ಹೇಳಬಲ್ಲೇ? ಎಲೆ ಅಡಿಕೆ ಹಾಕಿಕೊಳ್ಳಿ. ಅಷ್ಟರಲ್ಲಿ ನಾನು ಬಟ್ಟೆ ಬದಲಿಸಿ ಬರುತ್ತೇನೆ" ಎಂದರು.
ಶ್ಯಾಮಾ ಮತ್ತೆ ಬಂದು ಹೇಮಾಡ್ ಪಂತರ ಜೊತೆ ಕುಳಿತು, "ಈ ದೇವರ ರೀತಿಗಳನ್ನು ಗ್ರಹಿಸಲು ಅಸಾಧ್ಯ. ಅವರ ಲೀಲೆಗಳಿಗೆ ಕೊನೆಯೇ ಇಲ್ಲ. ಆದರೆ ಆ ಲೀಲಾರೂಪರು, ತಾವು ಮಾತ್ರ ತಮ್ಮ ಆ ಲೀಲೆಗಳಿಂದ ಪ್ರಭಾವಿತರಾಗುವುದಿಲ್ಲ. ಈಗ ನೀವು ಬಂದಿರುವುದನ್ನೇ ನೋಡಿ. ನಿಮ್ಮಂತಹ ವಿದ್ಯಾವಂತರನ್ನು ನನ್ನಂತಹ ಹಳ್ಳಿಯವನ ಹತ್ತಿರಕ್ಕೆ ಕಳುಹಿಸಬೇಕಾದರೂ ಏಕೆ? ನಿಮಗೆ ಹೇಳುವಂತಹುದು ನನಗೇನು ಗೊತ್ತಿದೆ? ಅವರು ಏನು ಮಾಡುತ್ತಾರೆಂದು ಅವರೊಬ್ಬರಿಗೇ ಗೊತ್ತು. ಅವರು ಮಾಡುವುದೆಲ್ಲಾ ಆ ದೈವಕ್ಕೇ ತಿಳಿಯಬೇಕು”.
ಇಷ್ಟು ಹೇಳಿದ ಶ್ಯಾಮಾ ಮತ್ತೆ, "ನನಗೊಂದು ಕಥೆ ನೆನಪಿಗೆ ಬರುತ್ತಿದೆ. ಅದು ನನಗೆ ಸ್ವತಃ ಗೊತ್ತಿರುವುದು. ಭಕ್ತರ ಧೃಢಸಂಕಲ್ಪಕ್ಕೆ ಬಾಬಾ ತಕ್ಷಣವೇ ಸ್ಪಂದಿಸುತ್ತಾರೆ. ಬೇರೆ ಸಂದರ್ಭಗಳಲ್ಲಿ ಅವರನ್ನು ಅನೇಕ ಪರೀಕ್ಷೆಗಳಿಗೊಳಪಡಿಸಿ, ಆ ಭಕ್ತರು ಪರೀಕ್ಷೆಗಳಲ್ಲಿ ಉತ್ತೀರ್ಣರಾದರೆ ಮಾತ್ರ ಅವರಿಗೆ ಸದುಪದೇಶ ಕೊಡುತ್ತಾರೆ" ಎಂದು ಹೇಳಿದರು. ಉಪದೇಶ ಅನ್ನುವ ಪದ ಕಿವಿಗೆ ಬಿದ್ದೊಡನೆ ಹೇಮಾಡ್ ಪಂತರ ಮನಸ್ಸಿನಲ್ಲಿ ಮಿಂಚು ಹೊಳೆದಂತಾಗಿ ಸಾಠೆಯ ಪಾರಾಯಣ, ಬಾಬಾರ ಬುದ್ಧಿವಾದ, ಹಾಗೂ ತನ್ನ ಯೋಚನಾಲಹರಿಗಳು ಎಲ್ಲವೂ ಕಾಣಿಸಿಕೊಂಡಿತು. ಬಾಬಾ ತನ್ನನ್ನು ಸಾಂತ್ವನಗೊಳಿಸಲು ಶ್ಯಾಮಾರ ಬಳಿಗೆ ಕಳುಹಿಸಿದರು ಎಂಬುದು ಅರ್ಥವಾಯಿತು. ಆ ಯೋಚನೆಗಳನ್ನೆಲ್ಲಾ ಪಕ್ಕಕ್ಕಿಟ್ಟು ಶ್ಯಾಮಾರು ಹೇಳುವುದನ್ನು ಮನಸ್ಸಿಟ್ಟು ಕೇಳಲು ಸಿದ್ಧರಾದರು.
ಶ್ರೀಮತಿ ರಾಧಾಬಾಯಿ ದೇಶಮುಖರ ಕಥೆ
ಕಾಸಾಬಾ ದೇಶಮುಖರ ತಾಯಿ, ಶ್ರೀಮತಿ ರಾಧಾಬಾಯಿ ದೇಶಮುಖ್, ವಯಸ್ಸಾದ ಹೆಂಗಸು. ಬಾಬಾರ ಕೀರ್ತಿ, ಪ್ರತಿಷ್ಠೆಗಳನ್ನು ಕೇಳಿ ಸಂಗಮನೇರಿನಿಂದ ಬರುತ್ತಿದ್ದ ಕೆಲವರ ಜೊತೆಯಲ್ಲಿ ಶಿರಡಿಗೆ ಬಂದರು. ಬಾಬಾರ ದರ್ಶನದಿಂದ ಬಹಳ ಸಂತೋಷಗೊಂಡ ಆಕೆ, ಅವರಲ್ಲಿ ಪ್ರೀತಿ ವಿಶ್ವಾಸಗಳನ್ನು ಬೆಳೆಸಿಕೊಂಡು ಅವರನ್ನೇ ತನ್ನ ‘ಗುರು’ವಾಗಿ ನಿಶ್ಚಯಿಸಿಕೊಂಡರು. ಗುರುವೆಂದು ನಿಶ್ಚಯಿಸಿಕೊಂಡ ಕೂಡಲೆ ಅವರಿಂದ ಉಪದೇಶ ಪಡೆಯಬೇಕೆಂದೂ ನಿರ್ಧರಿಸಿಕೊಂಡರು. ಹಾಗೆ ನಿರ್ಧಾರ ಮಾಡಿಕೊಂಡ ಅವರು ತನಗೆ ಬಾಬಾ ಉಪದೇಶ ಕೊಡುವವರೆಗೂ, ನಿರಾಹಾರ ದೀಕ್ಷೆಯಲ್ಲಿರಲು ಧೃಢಮನಸ್ಸು ಮಾಡಿದರು. ಒಂದು ದಿನವಾಯಿತು. ಎರಡು ದಿನವಾಯಿತು. ಮೂರನೆಯ ದಿನವೂ ಆಯಿತು. ಏನೂ ಆಗಲಿಲ್ಲ. ಆದರೂ, ಆಕೆ ತನ್ನ ನಿರ್ಧಾರ ಬದಲಿಸಲಿಲ್ಲ. ಮೊದಲೇ ವಯಸ್ಸಾದ ಹೆಂಗಸು. ಮೇಲಾಗಿ ಉಪವಾಸ. ಹೀಗಾಗಿ ಆಕೆಯ ಸ್ಥಿತಿ ಚಿಂತಾಜನಕವಾಗುತ್ತಾ ಬಂತು. ನನಗೆ ಅದರಿಂದ ಹೆದರಿಕೆಯಾಗಿ, ಬಾಬಾರ ಹತ್ತಿರಕ್ಕೆ ಹೋಗಿ, ಅವರ ಬಳಿ ಕುಳಿತೆ. ಬಾಬಾ, "ಶಾಮ್ಯಾ, ಏನು ವಿಷಯ? ಆ ನಾರಾಯಣ ತೇಲಿ ನನ್ನನ್ನು ಬಹಳ ಬಾಧಿಸುತ್ತಿದ್ದಾನೆ" ಎಂದರು. ನನಗೆ ಈ ರೀತಿಯ ಮಾತುಕಥೆ ಬೇಕಾಗಿರಲಿಲ್ಲ. ಆ ಹೆಂಗಸಿನ ವಿಷಯವೇ ನನ್ನ ಮನಸ್ಸನ್ನು ಆವರಿಸಿಕೊಂಡಿತ್ತು. ಪ್ರತಿಕ್ಷಣವೂ ನನ್ನ ಆತಂಕ ಹೆಚ್ಚಾಗುತ್ತಿತ್ತು. ಕೊನೆಗೆ ತಡೆಯಲಾರದೆ ನಾನು, "ದೇವಾ, ಇದೇನು ನಿನ್ನ ಲೀಲೆ? ಭಕ್ತರನ್ನು ದೂರ ದೂರಗಳಿಂದ ನೀನೇ ಎಳೆದು ತರುತ್ತೀಯೆ. ಮತ್ತೆ ಏನೂ ತಿಳಿಯದವನಂತೆ ನಮ್ಮನ್ನೇ ಅವರ ಬಗ್ಗೆ ಕೇಳುತ್ತೀಯೆ. ನಿನ್ನನ್ನು ಅರ್ಥಮಾಡಿಕೊಳ್ಳುವವರು ಯಾರು? ಆ ವಯಸ್ಸಾದ ಹೆಂಗಸು ರಾಧಾಬಾಯಿ ದೇಶಮುಖರನ್ನು ಇಲ್ಲಿಗೆ ಬರುವಂತೆ ಮಾಡಿದೆ. ಆಕೆ ಧೃಢಮನಸ್ಸುಮಾಡಿ ಮೂರುದಿನದಿಂದ ಉಪವಾಸ ಕೂತಿದ್ದಾಳೆ. ಅವಳನ್ನೇಕೆ ಇಂತಹ ತೊಂದರೆಗೆ ಈಡುಮಾಡಿದ್ದೀಯೆ? ಅವಳು ಸಾಯಲೂಬಹುದು. ಆಗ ಜನರೆಲ್ಲಾ ‘ಬಾಬಾ ಅವಳಿಗೆ ಉಪದೇಶ ನೀಡದೆ ಅವಳನ್ನು ಕೊಂದರು’ ಎಂದು ಆಡಿಕೊಳ್ಳುತ್ತಾರೆ. ಅವಳನ್ನು ಕರೆದು ಅವಳಿಗೆ ಏನಾದರೂ ಉಪದೇಶ ಕೊಟ್ಟು ಅನುಗ್ರಹಿಸು. ಅವಳ ಸ್ಥಿತಿಯನ್ನು ನಾನು ನೋಡಲಾರೆ. ಅವಳಲ್ಲಿ ದಯೆ ತೋರು. ಅವಳಿಗೆ ಉಪದೇಶ ನೀಡು" ಎಂದು ಬಹಳ ಕಳಕಳಿಯಿಂದ ಹೇಳಿದೆ. ಆಕೆಯ ಧೃಢಸಂಕಲ್ಪವನ್ನು ತಿಳಿದ ಬಾಬಾ, ಆಕೆಯನ್ನು ತನ್ನ ಹತ್ತಿರಕ್ಕೆ ಕರೆಸಿಕೊಂಡು, ಈ ರೀತಿಯಲ್ಲಿ ಉಪದೇಶ ಕೊಟ್ಟರು.
"ಅಮ್ಮಾ, ನೀನೇ ನನಗೆ ತಾಯಿ. ನಿಜವಾಗಿಯೂ ನಾನು ನಿನ್ನ ಮಗು. ನನ್ನ ಮೇಲೆ ಕರುಣೆ ತೋರು. ನಾನು ಹೇಳುವುದನ್ನು ಕೇಳು. ನನ್ನ ಸ್ವಂತ ಅನುಭವವನ್ನೇ ಹೇಳುತ್ತೇನೆ. ಇದನ್ನು ಕೇಳಿದರೆ, ನಿನಗೂ ಒಳ್ಳೆಯದಾಗುತ್ತದೆ. ನನಗೊಬ್ಬರು ಗುರುಗಳಿದ್ದರು. ಅವರೊಬ್ಬ ಮಹಾಪುರುಷ. ದಯಾಳು. ಬಹಳಕಾಲ ನಾನು ಅವರ ಸೇವೆ ಮಾಡಿದೆ. ಆದರೂ ಅವರು ನನಗೆ ಎಂದೂ ಯಾವತರಹೆಯ ರಹಸ್ಯ ಮಂತ್ರವನ್ನೂ ನನ್ನ ಕಿವಿಯಲ್ಲಿ ಹೇಳಲಿಲ್ಲ. ಆದರೂ ನಾನು ಅವರ ಸೇವೆಯಲ್ಲೇ ಇದ್ದುಕೊಂಡು, ಅವರಿಂದ ಉಪದೇಶ ಪಡೆಯಲೇಬೇಕು ಎಂದು ನಿರ್ಧರಿಸಿಕೊಂಡೆ. ಆ ಮಹಾಪುರುಷನಿಗೆ ತನ್ನದೇ ಆದ ರೀತಿ ನೀತಿಗಳಿದ್ದವು. ಅವರು ನನ್ನ ತಲೆ ಬೋಳಿಸಿ, ನನ್ನನ್ನು ಎರಡುಪೈಸೆ ದಕ್ಷಿಣೆ ಕೇಳಿದರು. ನಾನು ಅದನ್ನು ತಕ್ಷಣವೇ ಅವರಿಗೆ ಕೊಟ್ಟೆ. ‘ನಿಮ್ಮ ಗುರುಗಳು ಪೂರ್ಣರೂಪರು ಎಂದಮೇಲೆ ಅವರೇಕೆ ಹಣ ಕೇಳಿದರು? ಅದರಿಂದ ಅವರಿಗೆ ಹಣದ ಮೇಲೆ ಆಸೆ ಇದೆ ಎಂದಾಗುತ್ತದೆಯಲ್ಲವೇ?’ ಎಂದು ನೀನು ನನ್ನನ್ನು ಕೇಳಬಹುದು. ಆದರೆ ಅವರು ಎಂದೂ ಹಣಕ್ಕಾಗಿ ಆಸೆ ಪಡಲಿಲ್ಲ. ಅವರು ನನ್ನನ್ನು ಕೇಳಿದ್ದು, ಶ್ರದ್ಧೆ, ಸಹನೆ (ಸಬೂರಿ) ಎಂಬ ಎರಡು ಕಾಸುಗಳು. ನಾನು ಅವರಿಗೆ ಅವೆರಡನ್ನೂ ಕೊಟ್ಟೆ. ಅದರಿಂದ ಅವರು ಬಹು ಸಂತುಷ್ಟರಾದರು.
ನಾನು ನನ್ನ ಗುರುವಿಗೆ ಹನ್ನೆರಡು ವರ್ಷಕಾಲ ಸೇವೆ ಮಾಡಿದೆ. ನನಗೆ ಅನ್ನ ಬಟ್ಟೆಗಳಿಗೆ ಎಂದೂ ಕೊರತೆಯಿರಲಿಲ್ಲ. ನನ್ನ ಗುರು ಪ್ರೇಮಸ್ವರೂಪಿ. ಪ್ರೇಮವೇ ಮೂರ್ತಿಯೆತ್ತಿ ಬಂದಂತಿದ್ದರು. ಅದನ್ನು ನಾನು ಹೇಗೆತಾನೇ ವರ್ಣಿಸಲಿ? ನನ್ನನ್ನು ಅವರು ಅತ್ಯಂತ ಪ್ರೀತಿಯಿಂದ ನೋಡಿಕೊಂಡರು. ಅಂತಹ ಗುರು ಸಿಕ್ಕುವುದು ಬಹಳ ಅಪರೂಪ. ಅವರು ಯಾವಾಗಲೂ ಧ್ಯಾನಸ್ಥರಾಗಿ, ಆನಂದ ಸ್ಥಿತಿಯಲ್ಲಿರುತ್ತಿದ್ದರು. ಅವರ ಮುಂದೆ ಕುಳಿತ ನಾನೂ ಆನಂದದಲ್ಲಿರುತ್ತಿದ್ದೆ. ನಾನು ಸದಾ ಅವರನ್ನೇ ನನ್ನ ದೃಷ್ಟಿಯಲ್ಲಿ ಇಟ್ಟುಕೊಂಡಿರುತ್ತಿದ್ದೆ. ನನಗೆ ಹಸಿವು ಬಾಯಾರಿಕೆಗಳು ಆಗುತ್ತಿರಲಿಲ್ಲ. ಅವರಿಲ್ಲದೇ ಹೋದರೆ ನಾನು ಚಡಪಡಿಸಿಹೋಗುತ್ತಿದ್ದೆ. ಅವರಲ್ಲದೆ ನನಗೆ ಬೇರೆ ಯಾವ ಧ್ಯಾನವೂ ಇರಲಿಲ್ಲ. ಅವರೇ ನನ್ನ ಧ್ಯಾನ ಮೂರ್ತಿಯಾಗಿದ್ದರು. ಅವರಲ್ಲದೆ ನನಗೆ ಬೇರೆ ಯಾವುದೂ ದೃಷ್ಟಿಗೆ ಬರುತ್ತಿರಲಿಲ್ಲ. ಆತನೇ ನನ್ನ ಏಕಮಾತ್ರ ಶರಣ್ಯ, ಧ್ಯಾನಮೂರ್ತಿ. ನನ್ನ ಮನಸ್ಸು ಆತನಲ್ಲೇ ಸಂಪೂರ್ಣವಾಗಿ ಲೀನವಾಗಿಹೋಗಿತ್ತು. ಇದು ನನ್ನ ಒಂದು ಪೈಸೆ ದಕ್ಷಿಣೆ. ಇನ್ನೊಂದು ಪೈಸೆ ಸಹನೆ, ಸಬೂರಿ. ಬಹಳ ಕಾಲ ನಾನು ಸಹನೆಯಿಂದ ಗುರುವಿನ ಸೇವೆಯಲ್ಲಿ ನಿರತನಾಗಿ ಹೋಗಿದ್ದೆ. ಸಹನೆ ಈ ನಿಸ್ಸಾರ ಜೀವನದಿಂದ ನಮ್ಮನ್ನು ಪಾರುಮಾಡುತ್ತದೆ. ಮನುಷ್ಯನಿಗೆ ಸಹನೆಯೇ ಪೌರುಷ. ಎಲ್ಲ ಪಾತಕಗಳನ್ನೂ ತೊಡೆದುಹಾಕುತ್ತದೆ. ಸಂಕಟಗಳನ್ನು ನಿವಾರಿಸುತ್ತದೆ. ಅಧೈರ್ಯವನ್ನು ಓಡಿಸುತ್ತದೆ. ಕೊನೆಗೆ ಜಯವನ್ನು ತಂದುಕೊಡುತ್ತದೆ. ಸಹನೆಯೇ ಎಲ್ಲ ಗುಣಗಳ ಆಗರ. ಸುಯೋಚನೆಗಳ ಜೊತೆಗಾರ್ತಿ. ನಿಷ್ಠೆ (ಶ್ರದ್ಧೆ), ಸಬೂರಿ (ಸಹನೆ)ಗಳು ಅವಳಿಜವಳಿಗಳಂತೆ ಯಾವಾಗಲೂ ಅನ್ಯೋನ್ಯವಾಗಿರುವುವು. ನನ್ನ ಗುರು ನನ್ನಿಂದ ಏನನ್ನೂ ಅಪೇಕ್ಷಿಸಲಿಲ್ಲ. ನನ್ನನ್ನು ಅವರು ಕಡೆಗಾಣಿಸಲಿಲ್ಲ. ಎಲ್ಲಾಕಾಲದಲ್ಲೂ ಎಲ್ಲದರಿಂದಲೂ, ಎಲ್ಲರಿಂದಲೂ ನನ್ನನ್ನು ರಕ್ಷಿಸಿದರು. ನಾನು ಯಾವಾಗಲೂ ಅವರ ಜೊತೆಯಲ್ಲೇ ಇರುತ್ತಿದ್ದೆ. ಕೆಲವುಸಲ ಅವರು ನನ್ನಿಂದ ದೂರವಾಗಿದ್ದರೂ, ಅವರ ಪ್ರೇಮದಿಂದ ನಾನು ವಂಚಿತನಾಗಲಿಲ್ಲ. ಅವರು ಎಲ್ಲಿದ್ದರೂ ತಮ್ಮ ದೃಷ್ಟಿಯಿಂದಲೇ ನನ್ನನ್ನು ರಕ್ಷಿಸುತ್ತಿದ್ದರು. ತಾಯಿ ಆಮೆ, ಮರಿ ಆಮೆಯನ್ನು ತಾನು ಎಲ್ಲೇ ಇರಲಿ ತನ್ನ ಪ್ರೇಮ ದೃಷ್ಟಿಯಿಂದಲೇ ಸಾಕುವಂತೆ ಅವರು ನನ್ನನ್ನು ನೋಡಿಕೊಳ್ಳುತ್ತಿದ್ದರು.
"ಅಮ್ಮಾ, ಇಷ್ಟೆಲ್ಲಾ ಇದ್ದರೂ, ನನ್ನ ಗುರುವು ನನಗೆ ಎಂದೂ ಏನೂ ಮಂತ್ರೋಪದೇಶ ನೀಡಲಿಲ್ಲವೆಂದರೆ ನಾನಾದರೂ ಹೇಗೆ ನಿನಗೆ ಮಂತ್ರೋಪದೇಶ ನೀಡಬಲ್ಲೆ? ನಾನು ಈಗ ಹೇಳುವುದನ್ನು ಚೆನ್ನಾಗಿ ನೆನಪಿಟ್ಟುಕೋ. ಗುರುವು "ಕೂರ್ಮದೃಷ್ಟಿ"ಯಿಂದ ನೋಡಿದ ಪ್ರೇಮಪೂರಿತ ನೋಟವೇ ನಮಗೇ ಸುಖ ಸಂತೋಷಗಳನ್ನು ನೀಡುತ್ತದೆ. ಮಂತ್ರ ಉಪದೇಶಗಳಿಗಾಗಿ ಪರದಾಡಬೇಡ. ನನ್ನನ್ನೇ ನಿನ್ನ ಯೋಚನೆಗಳ ವಸ್ತುವನ್ನಾಗಿ ಮಾಡಿಕೋ. ಆ ನಿಶ್ಚಯದಿಂದ ಅತ್ತಿತ್ತ ಅಲುಗಾಡಬೇಡ. ಅದು ನಿನ್ನನ್ನು ಪರಮಾತ್ಮನೆಡೆಗೆ ಕರೆದು ಕೊಂಡುಹೋಗುತ್ತದೆ. ಹೃದಯಾಂತರಾಳದಿಂದ ನನ್ನಲ್ಲಿ ನಿನ್ನ ದೃಷ್ಟಿಯನ್ನಿಡು. ನಾನೂ ನಿನ್ನನ್ನು ಅದೇ ರೀತಿಯಲ್ಲಿ ನೋಡುತ್ತೇನೆ. ನಾನು ಸತ್ಯವನ್ನೇ ಹೇಳುತ್ತಿದ್ದೇನೆ. ಸತ್ಯವಲ್ಲದೆ ಇನ್ನೇನನ್ನೂ ಹೇಳುವುದಿಲ್ಲ. ಶಾಸ್ತ್ರ ಪರಿಣತೆ, ಸಾಧನೆಗಳು ಯಾವುವೂ ಬೇಕಾಗಿಲ್ಲ. ಗುರುವಿನಲ್ಲಿ ಶ್ರದ್ಧೆ ನಂಬಿಕೆಗಳನ್ನು ಇಟ್ಟುಕೋ. ಗುರುವೇ ಎಲ್ಲವನ್ನೂ ಮಾಡುವವನು ಎಂದು ಧೃಢವಾಗಿ ನಂಬಿಕೋ. ಯಾರು ಗುರುವೇ ತ್ರಿಮೂರ್ತಿ ರೂಪ ಎಂದು ಧೃಢವಾಗಿ ನಂಬಿ ಅವನ ಗುರುತತ್ತ್ವವನ್ನು ಕಾಣುತ್ತಾನೋ ಅವನೇ ಅತ್ಯಂತ ಭಾಗ್ಯವಂತ, ಪುಣ್ಯವಂತ." ಇದನ್ನು ಕೇಳಿದ ರಾಧಾಬಾಯಿ ದೇಶಮುಖ್ ಇದರ ಅಂತರಾರ್ಥವನ್ನು ಮನದಟ್ಟು ಮಾಡಿಕೊಂಡು, ಬಾಬಾರಿಗೆ ನಮಸ್ಕಾರಮಾಡಿ ತನ್ನ ಉಪವಾಸ ದೀಕ್ಷೆಯನ್ನು ನಿಲ್ಲಿಸಿದಳು”.
ಈ ಕಥೆಯನ್ನು ಕೇಳಿದ ಹೇಮಾಡ್ ಪಂತ್ ತಾನು ಇಲ್ಲಿಗೆ ಬರುವುದಕ್ಕೆ ಮುಂಚೆ ಮಸೀದಿಯಲ್ಲಿ ನಡೆದ ಘಟನಾವಳಿಗಳನ್ನೆಲ್ಲಾ ನೆನಪಿಗೆ ತಂದುಕೊಂಡು ಇವೆರಡಕ್ಕೂ ತಾಳೆ ಹಾಕಿ ನೋಡಿದರು. ಕಾಕಾ ಸಾಹೇಬರು ಹೇಳಿದ ಸಾಠೆಯವರ ಪಾರಾಯಣ, ಅದಕ್ಕೆ ಬಾಬಾರ ಉತ್ತರ, ತನ್ನ ಮನಸ್ಸಿನ ಆಂದೋಳನ, ಬಾಬಾ ತನ್ನನ್ನು ಶ್ಯಾಮಾ ಬಳಿಗೆ ಕಳುಹಿಸಿದ್ದು, ಸ್ವಲ್ಪಹೊತ್ತು ಅಲ್ಲಿ ಕುಳಿತು ಮಾತನಾಡಿಕೊಂಡು ಬಾ ಎಂದದ್ದು, ಎಲ್ಲವೂ ನೆನಪಿಗೆ ಬಂದವು. ರಾಧಾಬಾಯಿಯವರ ಕಥೆಯೊಡನೆ ಇವೆಲ್ಲವನ್ನೂ ತಾಳೆ ಹಾಕಿ ನೋಡಿದರೆ ಅವರಿಗೆ ಬಾಬಾರ ಅದ್ಭುತ ಲೀಲೆಯೊಂದರ ಸಂಪೂರ್ಣ ಚಿತ್ರ ಕಣ್ಣಮುಂದೆ ಸ್ಫುಟವಾಗಿ ಕಾಣಿಸಿತು.
ಹೇಮಾಡ್ ಪಂತರ ಮನಸ್ಸು ಆಂದೋಳನಕ್ಕೊಳಪಟ್ಟಿದೆ ಎಂಬುದನ್ನರಿತ ಬಾಬಾ, ತಮ್ಮದೇ ಆದ ಕಥೆಯನ್ನು, ತಮ್ಮದೇ ಆದ ರೀತಿಯಲ್ಲಿ, ಶ್ಯಾಮಾ ಮೂಲಕ ಹೇಳಿಸಿದರು. ಅದರ ಅಂತರಾರ್ಥವನ್ನು ಅರ್ಥಮಾಡಿಕೊಂಡ ಹೇಮಾಡ್ ಪಂತರಿಗೆ ಕಣ್ಣು ತುಂಬಿ ಬಂತು. ಬಾಬಾ ತನ್ನಲ್ಲಿ ತೋರಿದ ಪ್ರೀತಿಯ ಆಳವನ್ನು ಅರಿತು ಸಂತೋಷ ಸಾಗರದಲ್ಲಿ ಮುಳುಗಿಹೋದರು. ಆ ಸ್ಥಿತಿಯಲ್ಲಿ ಅವರನ್ನು ನೋಡಿದ ಶ್ಯಾಮಾ, "ಯಾಕೆ? ಏನಾಯಿತು? ಕಣ್ಣೀರೇಕೆ? ಬಾಬಾರ ಅಸಂಖ್ಯ ಲೀಲೆಗಳಲ್ಲಿ ಇನ್ನೂ ಒಂದು ಕೇಳಬೇಕೇನು?" ಎಂದರು. ಅದೇ ಸಮಯಕ್ಕೆ ಸರಿಯಾಗಿ ಮಸೀದಿಯಿಂದ ಘಂಟೆಯ ಶಬ್ದ ಕೇಳಿಸಿತು. ಅದು ಅರತಿಯ ಸಮಯ. ಇಬ್ಬರೂ ಆತುರಾತುರವಾಗಿ ಮಸೀದಿಗೆ ಹೋದರು. ಜೋಗ್ ಆಗಲೇ ಪೂಜೆ ಆರಂಭ ಮಾಡಿದ್ದರು. ಹೆಂಗಸರು ಗಂಡಸರು ಮಕ್ಕಳಾದಿಯಾಗಿ ಎಲ್ಲರೂ ಮಸೀದಿಯಲ್ಲಿ, ಅಂಗಳದಲ್ಲಿ ತುಂಬಿದ್ದರು. ಶ್ಯಾಮಾ ನೇರವಾಗಿ ಹೋಗಿ ಬಾಬಾರ ಬಲಕ್ಕೆ ಕೂತರು. ಹೇಮಾಡ್ ಪಂತ್ ಬಾಬಾ ಮುಂದೆ ಕೂತರು. ಅವರನ್ನು ಕಾಣುತ್ತಲೇ ಬಾಬಾ, “ಶ್ಯಾಮಾರಿಂದ ತಂದ ದಕ್ಷಿಣೆ ಕೊಡು” ಎಂದರು. ಹೇಮಾಡ್ ಪಂತ್, "ಹಣದ ಬದಲು ಶ್ಯಾಮಾ ನಮಸ್ಕಾರಗಳನ್ನು ಕೊಟ್ಟಿದ್ದಾರೆ. ಅವರೇ ಇಲ್ಲಿದ್ದಾರೆ, ನೀವೇ ಕೇಳಿ" ಎಂದರು. ಆಗ ಬಾಬಾ ಪಂತರನ್ನು ಕೇಳಿದರು, "ಈಗ ಹೇಳು. ನೀವಿಬ್ಬರೂ ಏನಾದರೂ ಮಾತನಾಡಿದಿರಾ? ಏನು ಮಾತನಾಡಿದಿರಿ? ಎಲ್ಲವನ್ನೂ ಹೇಳು" ಎಂದರು. ಬಾಬಾ ಹಾಗೆ ಕೇಳುತ್ತಲೇ ಹೇಮಾಡ್ ಪಂತ್ ಅತ್ಯಂತ ಸಂತೋಷದಿಂದ ಉತ್ಸಾಹಿತರಾಗಿ, ಶ್ಯಾಮಾ ಮನೆಯಲ್ಲಿ ನಡೆದದ್ದೆಲ್ಲವನ್ನೂ, ಆರತಿಹಾಡುಗಳು ಘಂಟೆಗಳ ಶಬ್ದದ ಮಧ್ಯೆ ವಿಶದವಾಗಿ ಏನೂ ಬಿಡದಂತೆ ಹೇಳಿದರು. ಬಾಬಾರೂ ಬಹಳ ಉತ್ಸಾಹದಿಂದ ಅವರ ಕಡೆಗೆ ತಿರುಗಿ ತಲೆ ಬಗ್ಗಿಸಿ, ಮನಸ್ಸಿಟ್ಟು ಎಲ್ಲವನ್ನೂ ಕೇಳಿದರು. ಎಲ್ಲವನ್ನೂ ಹೇಳಿದ ಹೇಮಾಡ್ ಪಂತ್, "ಆ ವೃದ್ಧ ಹೆಂಗಸಿನ ಕಥೆ ಅದ್ಭುತವಾದದ್ದು. ನಿಮ್ಮ ಲೀಲೆಗಳನ್ನು ವಿವರಿಸಲಸಾಧ್ಯ. ಆ ಕಥೆಯ ನೆವದಿಂದ ನನ್ನನ್ನು ನೀವು ಅನುಗ್ರಹಿಸಿದ್ದೀರಿ" ಎಂದರು. ಬಾಬಾ, " ಕಥೆಯೇನೋ ಅದ್ಭುತವೇ! ಆದರೆ ನೀನು ಹೇಗೆ ಅದರಿಂದ ಅನುಗ್ರಹಿಸಲ್ಪಟ್ಟೆ?" ಎಂದರು. ಹೇಮಾಡ್ ಪಂತ್ ಮತ್ತೆ ಎಲ್ಲವನ್ನೂ ವಿವರವಾಗಿ ಹೇಳಿ, ಅದರಿಂದ ತನ್ನ ಮನಸ್ಸಿನ ಮೇಲೆ ಆದ ಪರಿಣಾಮವನ್ನೂ ಹೇಳಿದರು. ಆಗ ಬಾಬಾ, "ಕಥೆಯ ಅಂತರಾರ್ಥ ನಿನಗೆ ವೇದ್ಯವಾಯಿತೆ?" ಎಂದು ಮತ್ತೆ, ಒತ್ತಿ ಕೇಳಿದರು. ಹೇಮಾಡ್ ಪಂತ್, "ಹೌದು ಬಾಬಾ, ನನ್ನ ಮನಸ್ಸು ಆಂದೋಳನಕ್ಕೆ ಒಳಗಾಗಿತ್ತು. ಆ ಕಥೆಯನ್ನು ಕೇಳಿದ ಮೇಲೆ ಈಗ ಶಾಂತವಾಗಿದೆ. ಸರಿಯಾದ ದಾರಿ ಏನು ಹೇಗೆ ಎಂಬುದು ತಿಳಿಯಿತು" ಎಂದರು.
ಆಗ ಬಾಬಾ ಹೇಳಿದರು "ನನ್ನ ರೀತಿಗಳು ವಿಚಿತ್ರವಾದವು. ಈ ಕಥೆಯೊಂದನ್ನು ನೆನಪಿನಲ್ಲಿಟ್ಟುಕೋ. ಅದು ನಿನಗೆ ಆಸರೆಯಾಗುತ್ತದೆ. ಆತ್ಮ ಸಾಕ್ಷಾತ್ಕಾರಕ್ಕೆ ಧ್ಯಾನ ಬಹಳ ಅವಶ್ಯ. ಅದರ ಸತತ ಅಭ್ಯಾಸದಿಂದ ಯೋಚನಾಲಹರಿಗಳು ಅಡಗಿಹೋಗುತ್ತವೆ. ಏಕಾಗ್ರತೆ ಕುದುರುತ್ತದೆ. ಆಶಾರಹಿತನಾಗು. ಎಲ್ಲರಲ್ಲೂ ಎಲ್ಲದರಲ್ಲೂ ಇರುವ ಆ ಪರಮಾತ್ಮನನ್ನೇ ಕುರಿತು ಧ್ಯಾನಿಸು. ಮನಸ್ಸು ಏಕಾಗ್ರವಾದಾಗ, ನಾವು ಇಚ್ಚಿಸಿದ ಗಮ್ಯವನ್ನು ಸೇರಲು ಸಾಧ್ಯವಾಗುತ್ತದೆ. ನನ್ನ ನಿರ್ಗುಣ ರೂಪವನ್ನು ಸದಾ ಧ್ಯಾನಿಸು. ಅದೇ ಸಚ್ಚಿದಾನಂದ. ನಿನಗೆ ನಿರ್ಗುಣ ರೂಪ ಧ್ಯಾನ ಅಸಾಧ್ಯವಾದರೆ, ದಿನವೂ ನೋಡುತ್ತಿರುವ ನನ್ನ ಈ ಸಗುಣ ರೂಪವನ್ನು ಧ್ಯಾನಿಸು. ಹಾಗೆ ನೀನು ಸತತವಾಗಿ ಮಾಡುತ್ತಾ ಹೋದರೆ, ನಿನ್ನ ಮನಸ್ಸು ಒಂದುಕಡೆ ಸ್ಥಿರವಾಗಿ, ಕೊನೆಗೆ ಧ್ಯಾನ, ಧ್ಯೇಯ, ಧ್ಯಾತ ಎಲ್ಲವೂ ಒಂದೇ ಆಗಿಹೋಗುತ್ತದೆ. ಧ್ಯಾತ ಅಂತಸ್ಸಾಕ್ಷಿಯೊಡನೆ ಲೀನವಾಗಿ, ಬ್ರಹ್ಮನಲ್ಲಿ ಸೇರುತ್ತಾನೆ. ಆಮೆಯ ಮರಿಗಳು ತಮ್ಮ ತಾಯಿಯನ್ನು ಬಿಟ್ಟು ಮತ್ತೇನನ್ನೂ ಧ್ಯಾನ ಮಾಡುವುದಿಲ್ಲ. ಬೇರೆ ದಡದಲ್ಲಿರುವ ತಾಯಿ ಆಮೆ, ಅವುಗಳಿಗೆ ಆಹಾರವೇನೂ ಕೊಡುವುದಿಲ್ಲ. ಅದರ ದೃಷ್ಟಿಯೇ ಅವಕ್ಕೆ ಪೋಷಣೆ. ಆ ದೃಷ್ಟಿಯೇ ಆ ಮರಿಗಳಿಗೆ ಅಮೃತವರ್ಷ, ಪೋಷಣೆ ಮತ್ತು ಸುಖ ಸಂತೋಷಗಳು. ಅದೇ ರೀತಿಯಲ್ಲೇ ಗುರು ಶಿಷ್ಯರ ಸಂಬಂಧವೂ ಕೂಡಾ."
ಬಾಬಾ ಇಷ್ಟು ಹೇಳಿ ಮುಗಿಸುವ ವೇಳೆಗೆ ಆರತಿಯೂ ಮುಗಿದು ಅಲ್ಲಿ ಕೂಡಿದ್ದವರೆಲ್ಲಾ ಒಂದೇ ಕೊರಳಿನಲ್ಲಿ, "ಸಚ್ಚಿದಾನಂದ ಸದ್ಗುರು ಶ್ರೀ ಸಾಯಿನಾಥ ಮಹಾರಾಜ ಕೀ ಜೈ" ಎಂದು ಉದ್ಘೋಷ ಮಾಡಿದರು. ನಾವೂ ಆ ಸಮಯದಲ್ಲಿ ಮಸೀದಿಯಲ್ಲಿ ಇದ್ದೇವೆಂದು ಊಹಿಸಿಕೊಂಡು ಆ ಉದ್ಘೋಷದಲ್ಲಿ ಭಾಗಿಗಳಾಗಿ, "ಸಚ್ಚಿದಾನಂದ ಸದ್ಗುರು ಶ್ರೀ ಸಾಯಿನಾಥ ಮಹಾರಾಜಕೀ ಜೈ" ಎನ್ನುತ್ತಾ ಅದರಲ್ಲಿ ಪಾಲ್ಗೊಳ್ಳೋಣ.
ಆರತಿಯಾದ ಮೇಲೆ ಎಲ್ಲರಿಗೂ ಪ್ರಸಾದ ಹಂಚಿದರು. ಜೋಗ್ ಬಾಬಾರ ಬಳಿಗೆ ಬಂದು, ನಮಸ್ಕಾರ ಮಾಡಿ, ಅವರ ಕೈಯಲ್ಲಿ ಒಂದು ಹಿಡಿಯಷ್ಟು ಕಲ್ಲುಸಕ್ಕರೆ ಇಟ್ಟರು. ಬಾಬಾ ಅದಷ್ಟನ್ನೂ ಹೇಮಾಡ್ ಪಂತರಿಗೆ ಕೊಟ್ಟು, "ಈ ಕಥೆಯನ್ನು ಚೆನ್ನಾಗಿ ಜ್ಞಾಪಕದಲ್ಲಿಟ್ಟುಕೋ. ಈ ಕಲ್ಲುಸಕ್ಕರೆಯಷ್ಟೇ ನಿನ್ನ ಜೀವನವೂ ಸಿಹಿಯಾಗಿರುವುದು, ನಿನ್ನ ಇಚ್ಛೆಗಳೆಲ್ಲ ಪೂರ್ಣವಾಗುವುವು. ನೀನು ಸಂತೋಷದಿಂದ ಇರುತ್ತೀಯೆ" ಎಂದು ಹೇಳಿದರು.
ಭಾವನಾವಶರಾಗಿ, ಹೇಮಾಡ್ ಪಂತ್ ಕಣ್ಣೀರು ಸುರಿಸುತ್ತಾ, "ಬಾಬಾ, ಎಲ್ಲ ಕಾಲದಲ್ಲೂ ನನ್ನನ್ನು ಇದೇ ರೀತಿಯಲ್ಲಿ ಅನುಗ್ರಹಿಸುತ್ತಾ, ಆಶೀರ್ವದಿಸುತ್ತಾ, ರಕ್ಷಿಸಿ" ಎಂದು ಬೇಡಿಕೊಂಡರು. ಬಾಬಾ ಅವರಿಗೆ ಭರವಸೆ ನೀಡಿ, "ಈ ಕಥೆಯನ್ನು ನೆನಪಿನಲ್ಲಿಟ್ಟುಕೊಂಡು, ಮನನ ಮಾಡುತ್ತಾ, ಅದನ್ನು ನಿನ್ನ ಜೀವನದಲ್ಲಿ ಅಳವಡಿಸಿಕೋ. ಆಗ ನೀನು ಸದಾ ಆ ಪರಮಾತ್ಮನನ್ನು ನೆನಸುತ್ತ ಅವನ ಧ್ಯಾನದಲ್ಲೇ ಇರುವಂತಾಗುತ್ತದೆ. ಅವನು ನಿನ್ನ ಕಣ್ಣಿಗೆ ಕಾಣಿಸಿಕೊಳ್ಳುತ್ತಾನೆ" ಎಂದರು.
ಆಗ ದೊರೆತ ಆ ಕಲ್ಲುಸಕ್ಕರೆಯನ್ನು, ಅಮೃತವನ್ನು, ಹೇಮಾಡ್ ಪಂತ್ ನಮಗೆಲ್ಲ ಶ್ರೀ ಸಾಯಿ ಸಚ್ಚರಿತ್ರೆಯ ರೂಪದಲ್ಲಿ ಹಂಚಿದ್ದಾರೆ. ಆ ಅಮೃತವನ್ನು ನಾವು ಮನಸಾರ ಕುಡಿದು, ಬಾಬಾರ ಅಮೃತ ತುಲ್ಯ ಬೋಧೆಗಳನ್ನು ಪಾಲಿಸುತ್ತಾ, ಈ ಕಥೆಯನ್ನು ಮತ್ತೆ ಮತ್ತೆ ಮನನ ಮಾಡಿಕೊಳ್ಳುತ್ತಾ, ಮೈಗೂಡಿಸಿಕೊಂಡು, ಅದರಂತೆ ನಡೆಯಲು ಪ್ರಯತ್ನಮಾಡೋಣ. ಅಂತಹ ದಿವ್ಯಪ್ರೇಮಿ ಸದ್ಗುರು ಸಾಯಿಬಾಬಾರ ಪಾದಕಮಲಗಳಲ್ಲಿ ತಲೆಯಿಟ್ಟು ನಮಸ್ಕಾರಮಾಡಿ ಪುನೀತರಾಗೋಣ.
ನಮ್ಮ ನಡವಳಿಕೆಯ ಬಗ್ಗೆ ಬಾಬಾರ ಬುದ್ಧಿಮಾತು
ನಮ್ಮ ಒಳ್ಳೆಯ ನಡತೆಯ ಬಗ್ಗೆ ಬಾಬಾ ಹೀಗೆ ಹೇಳಿದ್ದಾರೆ: "ಯಾರೂ ಯಾರಬಳಿಗೂ ಸಂಬಂಧವಿಲ್ಲದೆ ಹೋಗುವುದಿಲ್ಲ. ಯಾರಾದರೂ ನಿಮ್ಮ ಬಳಿಗೆ ಬಂದರೆ ಅವರನ್ನು ಕರೆದು, ಕೂಡಿಸಿ, ಸತ್ಕರಿಸಿ. ಕೆಟ್ಟ ಮಾತನ್ನಾಡಿ ಓಡಿಸಬೇಡಿ. ಬಾಯಾರಿದವರಿಗೆ ನೀರನ್ನು ಕೊಡಿ. ಹಸಿದವರಿಗೆ ಅನ್ನವನ್ನು ನೀಡಿ. ಬಟ್ಟೆಯಿಲ್ಲದವರಿಗೆ ಬಟ್ಟೆ ದಾನ ಮಾಡಿ. ಸುಸ್ತಾಗಿ ಬಂದವರಿಗೆ ಸುಧಾರಿಸಿಕೊಳ್ಳಲು ನಿಮ್ಮ ಅಂಗಳದಲ್ಲಿ ಜಾಗ ಕೊಡಿ. ಇದರಿಂದ ದೇವರು ಸಂತುಷ್ಟನಾಗುತ್ತಾನೆ. ಹಣ ಬೇಡಿ ಯಾರಾದರೂ ಬಂದರೆ, ನಿಮಗೆ ಹಣ ಕೊಡಲು ಇಷ್ಟವಿಲ್ಲದಿದ್ದರೆ, ಕೊಡಬೇಡಿ. ಆದರೆ, ಅವರನ್ನು ದುರ್ಭಾಷೆಗಳಿಂದ ನೋಯಿಸಬೇಡಿ. ಬೇರೆಯವರು ಹೇಳಿದ ದುಷ್ಟ ಮಾತುಗಳಿಗೆ ಪ್ರತಿಕ್ರಿಯೆ ತೋರಿಸಬೇಡಿ. ಮೌನವಾಗಿ ಸಹಿಸಿಕೊಳ್ಳಿ. ಅದರಿಂದ ನಿಮ್ಮ ಮನಸ್ಸಿಗೇ ಸಮಾಧಾನವಾಗುತ್ತದೆ. ನಿಮಗೆ ಕೆಟ್ಟ ಮಾತುಗಳನ್ನು ಕೇಳಲು ಇಷ್ಟವಿಲ್ಲದಿದ್ದರೆ, ಆ ಜಾಗವನ್ನು ಬಿಟ್ಟು ಹೋಗಿ. ಮಾತಿಗೆ ಮಾತು ಸೇರಿಸಬೇಡಿ. ನಿಮ್ಮ ಜಾಗದಲ್ಲಿ ನಿಂತು ನಡೆಯುವುದನ್ನೆಲ್ಲಾ ಸುಮ್ಮನೆ ನೋಡುತ್ತಿರಿ. ಅನವಶ್ಯಕವಾಗಿ ಯಾವುದರಲ್ಲೂ ತಲೆಹಾಕಬೇಡಿ. ನಮ್ಮಿಬ್ಬರ ಮಧ್ಯೆ ಇರುವ ಬೇಧಭಾವನೆಗಳೆಂಬ ಗೋಡೆಯನ್ನು ಹೊಡೆದುಹಾಕಿ. ಆಗ ನಮ್ಮಿಬ್ಬರನ್ನೂ ಕೂಡಿಸುವ ದಾರಿ ಸುಗಮವಾಗುತ್ತದೆ. ನೀನು ನಾನು ಎಂಬ ಬೇಧಭಾವವೆಂಬ ಅಡ್ಡಗೋಡೆ ಗುರುಶಿಷ್ಯರನ್ನು ಬೇರೆ ಮಾಡಿರುತ್ತದೆ. ಆ ಅಡ್ಡಗೋಡೆಯನ್ನು ತೊಡೆದುಹಾಕಿದರೆ ಇಬ್ಬರೂ ಅನ್ಯೋನ್ಯವಾಗುತ್ತಾರೆ. "ಅಲ್ಲಾ ಮಾಲಿಕ್". ಅವನೇ ಎಲ್ಲದಕ್ಕೂ ಯಜಮಾನಿ. ಅಪ್ರಮೇಯ, ಅತಿವಿಚಿತ್ರ, ಗ್ರಹಿಸಲಾರದವು ಆತನ ರೀತಿನೀತಿಗಳು. ತನ್ನ ಇಚ್ಛೆಯನ್ನು ಯಾವ ರೀತಿಯಲ್ಲಿ ನಡೆಸಿಕೊಳ್ಳಬೇಕೆಂಬುದು ಅವನಿಗೆ ಗೊತ್ತು. ನಾವು ಸರಿಯಾದ ದಾರಿಯಲ್ಲಿ ಯಾವ ರೀತಿಯಲ್ಲಿ ನಡೆದುಕೊಳ್ಳಬೇಕೆಂಬುದನ್ನು ತೋರಿಸಿಕೊಟ್ಟು ನಮ್ಮ ಒಳ್ಳೆಯ ವಾಂಛೆಗಳನ್ನೆಲ್ಲಾ ತೀರಿಸುತ್ತಾನೆ. ಋಣಾನುಬಂಧವೇ ನಮ್ಮಿಬ್ಬರನ್ನೂ ಕೂಡಿಸಿರುವುದು. ಒಬ್ಬರನ್ನೊಬ್ಬರು ಪ್ರೀತಿಯಿಂದ ಕಾಣುತ್ತಾ, ಸ್ನೇಹಭಾವದಿಂದ ನೋಡುತ್ತಾ ಒಟ್ಟಿಗೇ ಸುಖ ಸಂತೋಷಗಳಿಂದ ಬಾಳೋಣ. ಯಾರು ತನ್ನ ಜೀವನದ ಅಂತಿಮಗುರಿಯನ್ನು ಸರಿಯಾದ ದಾರಿಯಲ್ಲಿ ನಡೆದು ಸೇರುತ್ತಾನೋ ಅವನು ಪರಮಾನಂದಭರಿತನಾಗುತ್ತಾನೆ. ಮಿಕ್ಕವರು ಉಸಿರಿರುವ ತನಕ ಬದುಕಿರುವ ಪಶುಸಮಾನರು."
ಒಳ್ಳೆಯ ಯೋಚನೆಗಳಿಗೆ ಉತ್ತೇಜನ
"ರಾತ್ರಿ ಮಲಗುವುದಕ್ಕೆ ಮುಂಚೆ ಮನಸ್ಸಿನಲ್ಲಿ ಒಂದು ಸುಸಂಕಲ್ಪವನ್ನು ಮಾಡಿಕೊಂಡು ಮಲಗಿದರೆ, ಬೆಳಗ್ಗೆ ಏಳುತ್ತಿದ್ದಹಾಗೇ, ಆ ಸುಸಂಕಲ್ಪವೇ ಮನಸ್ಸಿನಲ್ಲಿ ಮೂಡಿ ಬರುತ್ತದೆ. ಅದನ್ನೇ ದಿನವೆಲ್ಲಾ ರೂಢಿಸಿಕೊಂಡು ಹೋದರೆ, ಮನಸ್ಸು ಬುದ್ಧಿಗಳು ಪ್ರಶಾಂತವಾಗಿರುತ್ತವೆ" ಎಂದು ತಿಳಿದವರು ಹೇಳಿದ್ದಾರೆ. ಇದನ್ನು ಪ್ರಯೋಗ ಮಾಡಲು ಹೇಮಾಡ್ ಪಂತ್ ನಿರ್ಧರಿಸಿದರು. ಅಂದು ಬುಧವಾರ. ರಾತ್ರಿ ಮಲಗುವುದಕ್ಕೆ ಮುಂಚೆ, "ನಾಳೆ ಗುರುವಾರ. ಒಳ್ಳೆಯ ದಿನ. ಶಿರಡಿ ಒಂದು ಪವಿತ್ರ ಸ್ಥಳ. ನಾನು ನಾಳೆಯ ದಿನವೆಲ್ಲಾ ರಾಮನಾಮ ಸಂಕೀರ್ತನೆಯಲ್ಲಿ ಕಳೆಯುವೆ" ಎಂದು ಸಂಕಲ್ಪವನ್ನು ಮಾಡಿ ಮಲಗಿದರು. ಬೆಳಗ್ಗೆ ಏಳುತ್ತಿದ್ದಹಾಗೆಯೇ ರಾಮನಾಮ ಸ್ಫುರಣೆಯಾಯಿತು. ಅದರಿಂದ ಅವರಿಗೆ ಸಂತೋಷವಾಯಿತು. ಬೆಳಗಿನ ಕಾರ್ಯಕ್ರಮಗಳನ್ನೆಲ್ಲಾ ಮುಗಿಸಿ ಹೂಗಳನ್ನು ತೆಗೆದುಕೊಂಡು ಬಾಬಾರ ದರ್ಶನಕ್ಕೆ ಮಸೀದಿಗೆ ಹೊರಟರು. ದಾರಿಯಲ್ಲಿ ಅವರಿಗೆ ಒಂದು ಸುಶ್ರಾವ್ಯವಾದ ಹಾಡು ಕೇಳಿಸಿತು. ಅದು, ಬಾಬಾ ಮುಂದೆ ಕೂತು ಔರಂಗಾಬಾದಕರ್ ಹಾಡುತ್ತಿದ್ದ ಏಕನಾಥರ ಹಾಡು. ಅದು ಹೀಗಿದೆ:
ಗುರು ಕೃಪಾಂಜನ ಪಾಯೋ ಮೇರೆ ಭಾಯಿ| ರಾಮ ಬಿನ ಕುಚ್ ಮಾನತ್ ನಾಹೀ|
ಅಂದರ್ ರಾಮ ಬಾಹರ ರಾಮ| ಸಪನೇಮೆ ದೇಖತ್ ಸೀತಾರಾಮ|
ಜಾಗತ್ ರಾಮ ಸೋವತ್ ರಾಮ| ಜಹಾ ದೇಖೋ ವಹಾ ಪೂರಣ್ ರಾಮ|
ಏಕ ಜನಾರ್ದನ ಅನುಭವ ಅನೇಕ| ಜಹಾ ದೇಖೆ ವಹಾ ರಾಮಸರೀಖಾ|
ಅಂದರ್ ರಾಮ ಬಾಹರ ರಾಮ| ಸಪನೇಮೆ ದೇಖತ್ ಸೀತಾರಾಮ|
ಜಾಗತ್ ರಾಮ ಸೋವತ್ ರಾಮ| ಜಹಾ ದೇಖೋ ವಹಾ ಪೂರಣ್ ರಾಮ|
ಏಕ ಜನಾರ್ದನ ಅನುಭವ ಅನೇಕ| ಜಹಾ ದೇಖೆ ವಹಾ ರಾಮಸರೀಖಾ|
"ಗುರುಕೃಪಾಂಜನ ನನಗಿಂದು ದೊರಕಿತು" ಎಂದು ಹೇಳುತ್ತಾ, ಏಕನಾಥರು ರಾಮನನ್ನು ಅಲ್ಲಿ, ಇಲ್ಲಿ, ಎಲ್ಲೆಲ್ಲೂ, ಜಾಗ್ರತನಾಗಿದ್ದಾಗ, ಮಲಗಿನಿದ್ರಿಸುತ್ತಿದ್ದಾಗ, ನೋಡುತ್ತಾ ಇದ್ದರು. ಏಕೆಂದರೆ ಅವರಿಗೆ ರಾಮ ಕೃಪೆ ಎಂಬ ಅಂಜನ ದೊರಕಿ, ಅದನ್ನು ಕಣ್ಣಿಗೆ ಹಚ್ಚಿಕೊಂಡಿದ್ದರು. ಅಂತಹ ರಾಮ ಕೃಪಾಂಜನವನ್ನು ದೊರಕಿಸಿಕೊಂಡು ಮುಕ್ತರಾಗೋಣ.
ಈ ಹಾಡನ್ನು ಕೇಳಿದ ಹೇಮಾಡ್ ಪಂತರಿಗೆ ಅತೀವ ಸಂತೋಷವಾಯಿತು. ನೂರಾರು ಹಾಡುಗಳಿದ್ದರೂ ಅಂದು, ಆಗ, ಅಲ್ಲಿ, ಔರಂಗಾಬಾದಕರ್ ಆ ಹಾಡನ್ನೇ ಹಾಡಲು ಕಾರಣವೇನು? ಬಾಬಾರ ಇಚ್ಚೆಯಂತೆಯೇ ಅದು ಆಗಿದ್ದು. ಹೇಮಾಡ್ ಪಂತರ ರಾಮನಾಮ ಸ್ಫುರಣೆ ಎಂಬ ಸುಸಂಕಲ್ಪಕ್ಕೆ ಉತ್ತೇಜನ ಕೊಟ್ಟು ಅದು ವೃದ್ಧಿಯಾಗುವಂತೆ ಮಾಡಲು ಬಾಬಾ ತೋರಿಸಿದ ಲೀಲೆ.
ಬಾಬಾರಲ್ಲಿ ಶ್ರದ್ಧಾಭಕ್ತಿಗಳಿಂದ ಸಂಪೂರ್ಣ ಶರಣಾಗತರಾದರೆ ಸಾಕು, ಅವರು ತಮ್ಮದೇ ಆದ ರೀತಿಯಲ್ಲಿ ನಾವು ಸುಸಂಕಲ್ಪದಿಂದ ಮಾಡಿದ ಕಾರ್ಯಗಳಿಗೆ ಬೇಕಾದ ಸಹಾಯ, ಸಹಕಾರಗಳನ್ನು ನೀಡುತ್ತಾರೆ.
ಉಪದೇಶಗಳ ವಿವಿಧ ರೀತಿ
ಬಾಬಾರ ಭಕ್ತನೊಬ್ಬ ಸಹಚರರೊಡನೆ ಕೂತು ಮಾತನಾಡುತ್ತಾ, ತನ್ನ ಸಹೋದರನ ಒಳ್ಳೆಯ ಗುಣಗಳನ್ನು ಹೇಳುವುದನ್ನು ಬಿಟ್ಟು, ಅವನ ಕೆಟ್ಟ ಗುಣಗಳನ್ನು ಹೇಳಿ, ಅವನ ಬಗ್ಗೆ ಅವಾಚ್ಯ ಮಾತುಗಳನ್ನಾಡುತ್ತಿದ್ದ. ಅದೂ, ತನ್ನ ಸಹೋದರ ಅಲ್ಲಿ ಇಲ್ಲದ ವೇಳೆಯಲ್ಲಿ. ಅವನ ಸಹಚರರು ಸ್ವಲ್ಪಹೊತ್ತು ಅವನ ಮಾತುಗಳನ್ನು ಕೇಳಿ ಖುಷಿಪಟ್ಟರು. ಆದರೆ, ಅದೇ ಮಾತುಗಳು ಮತ್ತೆ ಮತ್ತೆ ಹೇಳುತ್ತಿದುದರಿಂದ, ಅವರಿಗೆ ಬೇಸರವಾಗಿ ಎದ್ದುಹೋದರು. ಯಾರನ್ನೇ ಆಗಲಿ ನಾಲ್ಕು ಜನರ ಮುಂದೆ ಅವಹೇಳನಮಾಡಬಾರದು. ಅದು ಅವರ ಬಗ್ಗೆ ಕೆಟ್ಟ ಭಾವನೆ ಉಂಟುಮಾಡಿ, ಅವರಲ್ಲಿ ದ್ವೇಷ ಹುಟ್ಟುವಂತೆ ಮಾಡುತ್ತದೆ. ಇದನ್ನು ಸಂತರು ಕಾಣುವ ರೀತಿಯೇ ಬೇರೆ.
ಸಾಮಾನ್ಯವಾಗಿ ಕೊಳೆ ತೊಳೆಯಲು ನೀರು, ಸಾಬೂನು, ಇತ್ಯಾದಿಗಳನ್ನು ಉಪಯೋಗಿಸುತ್ತಾರೆ. ಆದರೆ ಈ ತರಹೆಯ ಅಪವಾದ ಹರಡುವವರು, ಕೊಳೆಯನ್ನು ತೊಳೆಯುವ ರೀತಿಯೇ ಬೇರೆ. ಅವರು ತಮ್ಮ ನಾಲಗೆಯನ್ನು ಉಪಯೋಗಿಸುತ್ತಾರೆ. ನಿಜವೆಂದರೆ, ಅವನು ಯಾರನ್ನು ಬೈಯುತ್ತಿದ್ದಾನೋ, ಅವನ ಸೇವೆಯನ್ನೇ ಮಾಡಿದಂತಾಗುತ್ತದೆ. ಬಾಬಾ ಇದನ್ನು ಹೇಳುತ್ತಿದ್ದ ರೀತಿಯೇ ಬೇರೆ. ಮೇಲೆ ಹೇಳಿದ ಭಕ್ತ, ಸಹೋದರನ ಬಗ್ಗೆ ಏನು ಹೇಳುತ್ತಿದ್ದಾನೆ ಎಂದು ತಿಳಿದ ಬಾಬಾ, ಅವನನ್ನು ಲೆಂಡಿಯ ಹತ್ತಿರ ಸಂಧಿಸಿದಾಗ, ಅವನಿಗೆ ಅಲ್ಲಿ ಕೊಳೆಯನ್ನು ತಿನ್ನುತ್ತಿದ್ದ ಒಂದು ಹಂದಿಯನ್ನು ತೋರಿಸಿ, "ನೋಡು. ಆ ಹಂದಿ ಕೊಳೆಯನ್ನು ಎಷ್ಟು ಆನಂದದಿಂದ ತಿನ್ನುತ್ತಿದೆ. ನೀನೂ ಅದರಂತೆಯೇ ಮಾಡುತ್ತಿದ್ದೀಯೆ. ಅದಕ್ಕೂ ನಿನಗೂ ವ್ಯತ್ಯಾಸವೇನು? ಅನೇಕ ಜನ್ಮಗಳ ಪುಣ್ಯ ಫಲದಿಂದ ಈ ಮಾನವ ಜನ್ಮ ದೊರೆತಿದೆ. ಅದನ್ನು ಇನ್ನೊಬ್ಬರ ಒಳಿತಿಗಾಗಿ ಉಪಯೋಗಿಸು. ನಿನ್ನ ಅಣ್ಣನನ್ನು ಬೈದು, ನಿನಗೆ ಆಗಬೇಕಾದದ್ದಾದರೂ ಏನಿದೆ? ನಿನ್ನ ಈ ಜೀವನವನ್ನು ಹಾಳು ಮಾಡಿಕೊಳ್ಳಬೇಡ" ಎಂದು ಹೇಳಿದರು. ಆ ಮನುಷ್ಯ ಇದರಿಂದ ಪಾಠ ಕಲಿತು, ಒಳ್ಳೆಯವನಾದ ಎಂದು ಬೇರೆ ಹೇಳಬೇಕಾಗಿಲ್ಲ. "ಪುಣ್ಯಫಲದಿಂದ ದೊರೆತ ಈ ಮಾನವ ಜನ್ಮವನ್ನು ಯಾವಾಗಲೂ ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಳ್ಳಬೇಕು, ವೃಥಾ ಹಾಳುಮಾಡಬಾರದು" ಎಂದು ಬಾಬಾ ಹೇಳುತ್ತಿದ್ದರು. ಅವರ ಮಾತುಗಳನ್ನು ನಾವು ಮನಸ್ಸಿನಲ್ಲಿಟ್ಟು, ಅದರಂತೆ ನಡೆದರೆ ಅತ್ಮ ಸಾಕ್ಷಾತ್ಕಾರದ ದಾರಿಯಲ್ಲಿ ಹೆಜ್ಜೆ ಇಟ್ಟಿದ್ದೇವೆ, ಎಂದರ್ಥ. ಈ ದಾರಿಯಲ್ಲಿ ನಾವು ಗಮ್ಯ ಸೇರಲು ಬಹಳ ಕಷ್ಟ ಪಡಬೇಕಾದರೂ ಅವರ ಕೃಪೆಯಿಂದ ಅದು ಸಾಧ್ಯವಾಗುತ್ತದೆ.
ಬಾಬಾ ಸರ್ವಜ್ಞ, ಸರ್ವವ್ಯಾಪಿ, ಸರ್ವಶಕ್ತ. ಈ ಭೂಮ್ಯಾಕಾಶಗಳನ್ನು ಆವರಿಸಿದವರು. ಭೂತ, ಭವಿಷ್ಯ, ವರ್ತಮಾನಗಳನ್ನರಿತವರು. ದೇಶ ಕಾಲಾತೀತರು. ಶ್ರದ್ಧಾ ಭಕ್ತಿಗಳಿಂದ ಅವರಲ್ಲಿ ಸಂಪೂರ್ಣವಾಗಿ ಶರಣಾಗತರಾದವರು, ಸಕ್ಕರೆಯಲ್ಲಿನ ಸಿಹಿಯಂತೆ, ಸಾಗರದಲ್ಲಿನ ಅಲೆಯಂತೆ. ದೃಷ್ಟಿಯಲ್ಲಿನ ಹೊಳಪಿನಂತೆ ಅವರಲ್ಲಿ ಒಂದಾಗಿ ಹೋಗುತ್ತಾರೆ. ಋಜುಮಾರ್ಗದಲ್ಲಿ ನಡೆಯುವವರು ಈ ಜನನ ಮರಣ ಚಕ್ರಭ್ರಮಣೆಯಿಂದ ಪಾರಾಗುತ್ತಾರೆ. ಕಾಯಾ, ವಾಚಾ, ಮನಸಾ ಮತ್ತೊಬ್ಬರಿಗೆ ಅನ್ಯಾಯವೆಸಗದೆ, ಪ್ರಶಾಂತ ಮನಸ್ಸಿನಿಂದ ಕೂಡಿ, ಬೇರೆಯವರಿಗೆ ಒಳ್ಳೆಯದನ್ನು ಮಾಡುವುದರಲ್ಲೇ ನಿರತರಾಗಿರಬೇಕು. ಕೆಟ್ಟದ್ದರ ಯೋಚನೆಯನ್ನೂ ಮಾಡಬಾರದು. ಬಾಬಾರಲ್ಲಿ ಶರಣಾಗಿ ಎಲ್ಲವೂ ಅವರಿಂದಲೇ ನಡೆಯುತ್ತದೆ ಎನ್ನುವ ಮಾತಿನಲ್ಲಿ ನಂಬಿಕೆಯಿಟ್ಟು ಮಾಡುವುದೆಲ್ಲವನ್ನೂ ಅವರಿಗೇ ಒಪ್ಪಿಸಬೇಕು. ಈ ರೀತಿಯಲ್ಲಿ ನಡೆದುಕೊಳ್ಳುತ್ತಾ, ಸದಾ ಅವರ ಕಥೆಗಳನ್ನು, ಲೀಲೆಗಳನ್ನು, ಉಪದೇಶಗಳನ್ನು ಓದುತ್ತಾ, ಮನನ ಮಾಡುತ್ತ ಅವರನ್ನೇ ಕುರಿತು ಯೋಚಿಸುತ್ತಾ ಇರುವವರು ಅವರನ್ನೇ ಸೇರುವುದರಲ್ಲಿ ಸಂದೇಹವೇ ಇಲ್ಲ.
ಕೆಲಸಕ್ಕೆ ತಕ್ಕ ಫಲ
ರಾಧಾಕೃಷ್ನ್ಣ ಮಾಯಿ ಒಂದುಸಲ ಮಲೇರಿಯಾ ರೋಗದಿಂದ ಮಲಗಿದ್ದರು. ಒಂದು ದಿನ ಬಾಬಾ ಆಕೆಯ ಮನೆಯ ಪಕ್ಕದಲ್ಲಿ ಹೋಗುತ್ತಿದ್ದವರು ಯಾವ ಕಾರಣವೂ ಇಲ್ಲದೆ ಒಂದು ಏಣಿಯನ್ನು ತರಲು ಹೇಳಿದರು. ಅದನ್ನು ತಂದವರು, ಬಾಬಾ ಹೇಳಿದ ಕಡೆಯಲ್ಲಿ ಅದನ್ನು ಒರಗಿಸಿಟ್ಟರು. ಬಾಬಾ ಅದನ್ನು ಹತ್ತಿ ವಾಮನ ಗೋಂಡ್ಕರ್ ಮನೆಯ ಮೇಲೆ ಹೋಗಿ, ಅಲ್ಲಿಂದ ರಾಧಾಕೃಷ್ಣ ಮಾಯಿ ಮನೆಯ ಚಾವಣಿ ದಾಟಿ, ಇನ್ನೊಂದು ಪಕ್ಕದಿಂದ ಇಳಿದರು. ಬಾಬಾ ಏಕೆ ಹಾಗೆ ಮಾಡಿದರು ಎಂದು ಯಾರಿಗೂ ಅರ್ಥವಾಗಲಿಲ್ಲ. ಬಹುಶಃ ಆಕೆಯ ಮಲೇರಿಯಾ ರೋಗವನ್ನು ಹೊರಗಟ್ಟಲು ಹಾಗೆ ಮಾಡಿರಬಹುದೆಂದು ಊಹಿಸಿದರು. ಬಾಬಾ ಏಣಿಯಿಂದ ಇಳಿದ ಕೂಡಲೇ ಏಣಿ ತಂದವನಿಗೆ ಎರಡು ರೂಪಾಯಿ ಕೊಟ್ಟರು. ಯಾರೂ ಸಾಮಾನ್ಯವಾಗಿ ಬಾಬಾರು ಮಾಡಿದ್ದನ್ನು ಪ್ರಶ್ನಿಸುವ ಧೈರ್ಯ ಮಾಡುವುದಿಲ್ಲ. ಆದರು ಒಬ್ಬ ಬಾಬಾರನ್ನು, “ಅಷ್ಟು ಸಣ್ಣ ಕೆಲಸಕ್ಕೆ ಅವನಿಗೆ ಏಕೆ ಅಷ್ಟು ಹಣ ಕೊಟ್ಟಿರಿ” ಎಂದು ಪ್ರಶ್ನಿಸಿದ. ಅದಕ್ಕೆ ಬಾಬಾ, "ಇನ್ನೊಬ್ಬರಿಂದ ಯಾವಾಗಲೂ ಬಿಟ್ಟಿ ಕೆಲಸ ಮಾಡಿಸಿಕೊಳ್ಳಬಾರದು. ಕೆಲಸಗಾರನಿಗೆ ತಕ್ಕ ಮಜೂರಿಯನ್ನು ಉದಾರವಾಗಿ ಕೊಡಬೇಕು" ಎಂದು ಹೇಳಿದರು. ಬಾಬಾರ ಈ ವಿವೇಕ ಯುಕ್ತ ವರ್ತನೆಯನ್ನು ಎಲ್ಲರೂ ಪಾಲಿಸಿದರೆ, ಕೆಲಸಗಾರರು ಒಳ್ಳೆಯಕೆಲಸ ಮಾಡುವುದಷ್ಟೇ ಅಲ್ಲ, ಕೆಲಸಗಾರರಿಗೂ ಯಾಜಮಾನ್ಯದವರಿಗೂ ಯಾವುದೇ ರೀತಿಯ ವೈಮನಸ್ಯಗಳು ಇರುವುದಿಲ್ಲ. ಇಬ್ಬರಿಗೂ ಲಾಭದಾಯಕವಾಗಿರುತ್ತದೆ.
ಇದರೊಂದಿಗೆ ಹೇಮಾಡ್ ಪಂತ್ ಬಾಬಾ ತಮ್ಮನ್ನು ಹೇಗೆ ಒಪ್ಪಿಕೊಂಡರು, ಅನುಗ್ರಹಿಸಿದರು ಮತ್ತು ಇತರ ವಿಷಯಗಳನ್ನು ಕುರಿತು ಹೇಳುವ ಹದಿನೆಂಟು ಮತ್ತು ಹತ್ತೊಂಬತ್ತನೆಯ ಅಧ್ಯಾಯಗಳು ಮುಗಿದವು. ಮುಂದಿನ ಅಧ್ಯಾಯದಲ್ಲಿ ಹೇಮಾಡ್ ಪಂತ್ ದಾಸಗಣು ಅವರ ತೊಡಕನ್ನು ಬಾಬಾ ಹೇಗೆ ನಿವಾರಿಸಿದರು ಇತ್ಯಾದಿ ವಿಷಯಗಳನ್ನು ಹೇಳುತ್ತಾರೆ
||ಶ್ರೀ ಸದ್ಗುರು ಸಾಯಿನಾಥಾರ್ಪಣಮಸ್ತು||ಶುಭಂ ಭವತು||
||ಓಂ ಶಾಂತಿಃ ಶಾಂತಿಃ ಶಾಂತಿಃ||
||ಓಂ ಶಾಂತಿಃ ಶಾಂತಿಃ ಶಾಂತಿಃ||
No comments:
Post a Comment