||ಶ್ರೀ ಸಾಯಿ ಸಚ್ಚರಿತ್ರೆ||
||ಇಪ್ಪತ್ತನೆಯ ಅಧ್ಯಾಯ||
||ಈಶಾವಾಸ್ಯೋಪನಿಷತ್||
ಶ್ರೀ ಗಣೇಶಾಯ ನಮಃ ಶ್ರೀ ಸರಸ್ವತಯೇ ನಮಃ
ಶ್ರೀ ವೆಂಕಟೇಶಾಯ ನಮಃ ಶ್ರೀ ಸಾಯಿನಾಥಾಯ ನಮಃ
ಶ್ರೀ ಸದ್ಗುರುಭ್ಯೋನ್ನಮಃ
||ಇಪ್ಪತ್ತನೆಯ ಅಧ್ಯಾಯ||
||ಈಶಾವಾಸ್ಯೋಪನಿಷತ್||
ಶ್ರೀ ಗಣೇಶಾಯ ನಮಃ ಶ್ರೀ ಸರಸ್ವತಯೇ ನಮಃ
ಶ್ರೀ ವೆಂಕಟೇಶಾಯ ನಮಃ ಶ್ರೀ ಸಾಯಿನಾಥಾಯ ನಮಃ
ಶ್ರೀ ಸದ್ಗುರುಭ್ಯೋನ್ನಮಃ
ಈ ಅಧ್ಯಾಯದಲ್ಲಿ ಹೇಮಾಡ್ ಪಂತ್, ಬಾಬಾ ದಾಸಗಣು ಅವರ ಈಶಾವಾಸ್ಯೋಪನಿಷತ್ತಿನ ತೊಡಕನ್ನು ಹೇಗೆ ಬಿಡಿಸಿದರು ಮತ್ತು ಇತರ ವಿಷಯಗಳನ್ನು ಹೇಳುತ್ತಾರೆ.
ಸದ್ಗುರು ಸಾಯಿ
ಬಾಬಾ ನಿರಾಕಾರ, ನಿರ್ಗುಣ, ರೂಪವಿಲ್ಲದ ಬ್ರಹ್ಮ. ತನ್ನ ಭಕ್ತರಿಗೋಸ್ಕರ ರೂಪತಾಳಿ ಮಾಯೆಯ ಸಹಾಯದಿಂದ ಈ ಜಗತ್ತೆಂಬ ನಾಟಕರಂಗದಲ್ಲಿ ನಟನಾಗಿ ಬಂದರು. ಅವರನ್ನು ನೋಡುವುದೇ ನಮಗೆ ಅತ್ಯಂತ ಆನಂದಕರ. ನೂರು ವರ್ಷಗಳ ಕೆಳಗೆ ಶಿರಡಿಯಲ್ಲಿ ಅವರೇನು ಮಾಡುತ್ತಿದ್ದರು ನೋಡಲು ಹೋಗೋಣ ಬನ್ನಿ.
ಮಧ್ಯಾನ್ಹದ ಆರತಿ ಮುಗಿದಿದೆ. ಬಾಬಾ ಈಚೆಗೆ ಬಂದು ಮಸೀದಿಯ ಪ್ರವೇಶ ದ್ವಾರದ ಹತ್ತಿರ, ಸ್ವಲ್ಪ ಬಾಗಿ ನಿಂತಿದ್ದಾರೆ. ಆರತಿಗೆ ಬಂದಿದ್ದ ಭಕ್ತರೆಲ್ಲಾ ಸಂತೋಷ ಭರಿತರಾಗಿ ಒಬ್ಬೊಬ್ಬರಾಗಿ ಹೊರಕ್ಕೆ ಬಂದು ಬಾಬಾರ ಚರಣಕಮಲಗಳಲ್ಲಿ ತಲೆಯಿಟ್ಟು ಅವರ ಎರಡೂ ಪಾದಗಳನ್ನು ಹಿಡಿದು ಗೌರವಾದರಗಳಿಂದ ನಮಸ್ಕಾರ ಮಾಡುತ್ತಿದ್ದಾರೆ. ಬಾಬಾರ ಕಣ್ಣುಗಳಲ್ಲಿ ಭಕ್ತರ ಮೇಲಿನ ಪ್ರೀತಿವಿಶ್ವಾಸಗಳು ಉಕ್ಕಿ ಹರಿಯುತ್ತಿರುವಂತೆ ಕಾಣಿಸುತ್ತಿದೆ. ಅವರು ಪ್ರತಿಯೊಬ್ಬರ ತಲೆಯಮೇಲೂ ಕೈಯಿಟ್ಟು, ನೇವರಿಸಿ, ಉದಿಪ್ರಸಾದ ಕೊಟ್ಟು ಆಶೀರ್ವದಿಸುತ್ತಿದ್ದಾರೆ. ಕೆಲವರಿಗೆ, "ಬಾಪೂ ಹೋಗು. ಹೋಗಿ ಊಟಮಾಡು" ಎಂದೂ, ಮತ್ತೊಬ್ಬರಿಗೆ, "ಅಮ್ಮಾ, ಮನೆಗೆ ಹೋಗು. ಹೋಗಿ ಸುಧಾರಿಸಿಕೋ" ಎಂದೂ, ಮತ್ತೆ ಕೆಲವರಿಗೆ, "ಬಾಪು, ಹೋಗಿ ಸಂತೋಷವಾಗಿ ಊಟಮಾಡು" ಎಂದೂ, ಒಬ್ಬೊಬ್ಬರನ್ನೂ ತನ್ನದೇ ಆದ ವಿಶಿಷ್ಟ ರೀತಿಯಲ್ಲಿ ವಿಶ್ವಾಸಪೂರಿತ ಮಾತುಗಳಿಂದ ಮಾತನಾಡಿಸಿ ಕಳುಹಿಸುತ್ತಿದ್ದಾರೆ. ಬಾಹ್ಯದಲ್ಲಿ ಅವರು ಒಬ್ಬೊಬ್ಬರನ್ನೂ ಬೇರೆಬೇರೆಯಾಗಿ ಕಂಡರೂ ಆಂತರ್ಯದಲ್ಲಿ ಅವರಿಗೆ ಎಲ್ಲರೂ ಒಂದೇ! ಯಾರಲ್ಲೂ ಅವರಿಗೆ ಮೋಹವಿಲ್ಲ. ಅದು ಅವರ ಹತ್ತಿರ ಸುಳಿಯುವುದೂ ಇಲ್ಲ. ತಾನು ಮಾಡುತ್ತಿರುವುದು ನಟನೆ ಮಾತ್ರವೇ ಎಂದು ತಿಳಿದ ಪಳಗಿದ ನಟನಂತೆ ಅವರು ನಟಿಸುತ್ತಿದ್ದಾರೆ.
ಉದಿಪ್ರಸಾದವನ್ನು ಕೊಡುತ್ತಾ ಹಾಗೆ ಬಾಗಿ ನಿಂತಿರುವ ಬಾಬಾರ ಆ ಚಿತ್ರವನ್ನು ಈಗ ಊಹಿಸಿಕೊಂಡರೆ ನಮ್ಮ ಹೃದಯಗಳು ನಮಗೇ ತಿಳಿಯದಂತೆ ಪರಮಾನಂದದಿಂದ ತುಂಬಿ ತುಳುಕಾಡುತ್ತವೆ. ಅಂತಹ ಆನಂದವನ್ನು ಕೊಡುವ ಬಾಬಾರ ದಿವ್ಯ ಚರಣಾರವಿಂದಗಳಲ್ಲಿ ನಮಸ್ಕರಿಸೋಣ. ಅವರ ಲೀಲೆಗಳನ್ನು ಮತ್ತೆ ಮತ್ತೆ ಮನಸ್ಸಿಗೆ ತಂದುಕೊಂಡು, ಧ್ಯಾನಿಸಿ, ನಮ್ಮ ಹೃದಯಾಂತರ್ಗತ ಮಾಡಿಕೊಂಡು ಆನಂದಭರಿತರಾಗೋಣ.
ಈಶಾವಾಸ್ಯೋಪನಿಷತ್
ಈ ಬಹು ಸುಂದರವಾದ ಉಪನಿಷತ್ತಿನ ಸಾರಾಂಶವೇನು ಎಂಬುದನ್ನು ನಾವು ಮೊದಲು ನೋಡೋಣ.
ಈಶಾವಾಸ್ಯೋಪನಿಷತ್ತು ಬಹಳ ಸಣ್ಣದು. ಕೇವಲ ಹದಿನೆಂಟು ಶ್ಲೋಕಗಳುಳ್ಳದ್ದು. ಆದರೆ ಇದರ ಮಹತ್ವ ದೊಡ್ಡದು. ಬಹುಶಃ ಉಪನಿಷತ್ತುಗಳಲ್ಲೇ ಬಹು ಕ್ಲಿಷ್ಟವಾದದ್ದು. ಸುಲಭವಾಗಿ ಅರ್ಥವಾಗದಂತಹುದು. ಬ್ರಹ್ಮನಿಷ್ಠನಾದ ಗುರುವಿನ ಪಾದದಡಿಯಲ್ಲಿ ಕೂತು ಅವರ ಸಹಾಯದಿಂದ ಆಳವಾಗಿ ಅಭ್ಯಾಸ ಮಾಡಿದರೆ ಅರ್ಥಮಾಡಿಕೊಳ್ಳಬಹುದು. ಈ ಉಪನಿಷತ್ತು ನಮಗೆ ವೈರಾಗ್ಯ, ರಾಗದ್ವೇಷರಹಿತ ಕರ್ಮಗಳಿಂದ ಬಂಧ ಮುಕ್ತಿ, ಆತ್ಮತತ್ತ್ವಜ್ಞಾನ, ಅದರಿಂದ ಉಂಟಾಗುವ ಫಲಗಳು, ಕರ್ಮ ಮುಕ್ತಿ ಇತ್ಯಾದಿ ಅನೇಕ ಜಟಿಲವಾದ ವಿಷಯಗಳನ್ನು ವಿವರಿಸುತ್ತದೆ. ಆತ್ಮ ಸಾಕ್ಷಾತ್ಕಾರವೆಂಬುದು ಇವುಗಳೆಲ್ಲದಕ್ಕಿಂತ ಭಿನ್ನ. ಇವುಗಳನ್ನು ಸಮನ್ವಯಿಸುವುದು ಬಹು ಕಷ್ಟಸಾಧ್ಯವಾದ ಕೆಲಸ.
ಇದನ್ನು ಮಂತ್ರೋಪನಿಷತ್ತು ಎಂದೂ ಕರೆಯುತ್ತಾರೆ. ಇದು ಶುಕ್ಲಯಜುರ್ವೇದ (ವಾಜಸನೇಯ ಸಂಹಿತೆ) ದಲ್ಲಿ ೪೦ನೆಯ ಅಧ್ಯಾಯ. ವೇದ ಸಂಹಿತೆಗಳಿಂದ ಕೂಡಿದ ಈ ಉಪನಿಷತ್ತನ್ನು ಮಿಕ್ಕೆಲ್ಲ ಉಪನಿಷತ್ತುಗಳಿಗಿಂತಲೂ ಉನ್ನತಮಟ್ಟದ್ದು ಎಂದು ಹೇಳುತ್ತಾರೆ. ಬೇರೆಯ ಉಪನಿಷತ್ತುಗಳೆಲ್ಲವೂ ಈ ಉಪನಿಷತ್ತಿನ ವ್ಯಾಖ್ಯಾನಗಳು ಎಂದು ಹೇಳುವವರೂ ಇದ್ದಾರೆ.
ಅತ್ತುತ್ತಮ ದಾರ್ಶನಿಕರಲ್ಲಿ ಒಬ್ಬರು ಎನ್ನಿಸಿಕೊಂಡಿರುವ ಪ್ರೊ. ಆರ್.ಡಿ. ರಾನಡೆ ಹೇಳುತ್ತಾರೆ "ಇದೊಂದು ಸಣ್ಣ ಉಪನಿಷತ್ತು. ಆದರೂ ಇದು ಅತಿವಿಶೇಷವಾದ, ಒಳಹೊಕ್ಕು ನೋಡುವಂತಹ ಸೂಕ್ಷ್ಮ ದೃಷ್ಟಿಯ ಅನೇಕ ಸೂಚನೆಗಳನ್ನು ನೀಡುತ್ತದೆ. ಕೇವಲ ೧೮ ಶ್ಲೋಕಗಳಲ್ಲಿ ಆತ್ಮದ ಬಗ್ಗೆ, ಅತಿಮಹತ್ವವಾದ ಆಧ್ಯಾತ್ಮಿಕ ವಿವರಗಳನ್ನು ಕೊಡುತ್ತದೆ. ಅರಿಷಡ್ವರ್ಗಗಳಿಂದ ವಿಚಲಿತನಾಗದ ಆದರ್ಶ ಜ್ಞಾನಿಯ ಗುಣಗಳನ್ನು ಹೇಳುತ್ತದೆ. ಕರ್ಮ ಯೋಗಗಳ ಸ್ಥೂಲ ನಿರೂಪಣೆಯನ್ನು ಮಾಡಿ, ಕೊನೆಯಲ್ಲಿ ಜ್ಞಾನ ಕರ್ಮಗಳ ಸಮನ್ವಯವನ್ನು ಹೇಳುತ್ತದೆ. ಉಪನಿಷತ್ತು ಇವೆರಡರ ಆವಶ್ಯಕತೆ, ಹಾಗೂ ಕೊನೆಯಲ್ಲಿ ಇವೆರಡನ್ನು ತೊಡೆದು ಹಾಕಿ ಮೇಲಿನ ಸ್ತರಕ್ಕೆ ಹೋಗುವುದನ್ನೂ ಹೇಳುತ್ತದೆ.
ದಾಸಗಣು ಇಂತಹ ಕಷ್ಟಸಾಧ್ಯವಾದ ಉಪನಿಷತ್ತನ್ನು, ‘ಈಶಾವಾಸ್ಯ ಭಾವಾರ್ಥ ಬೋಧಿನಿ’ ಎಂಬ ಹೆಸರಿನಲ್ಲಿ ಮರಾಠಿ ಭಾಷೆಗೆ ತರ್ಜುಮೆ ಮಾಡಲು ಪ್ರಯತ್ನಿಸುತ್ತಿದ್ದರು. ಉಪನಿಷತ್ತಿನ ಯಥಾರ್ಥವಾದ ಅರ್ಥವನ್ನು ತಮ್ಮ ಗ್ರಂಥದಲ್ಲಿ ತರಬೇಕೆಂಬುದು ಅವರ ಇಚ್ಛೆ. ಓವಿ ಛಂದಸ್ಸಿನಲ್ಲಿ ಒಂದೊಂದು ಶ್ಲೋಕವನ್ನು ಅನುವಾದಿಸಿದರು. ಆದರೂ, ಉಪನಿಷತ್ತಿನ ನಿಜವಾದ ಸಾರ ತಿಳಿಯಲಾರದ್ದರಿಂದ ಅವರಿಗೆ ತಾವು ಮಾಡಿದ ಕೆಲಸ, ಸಂತೋಷವನ್ನು ತರಲಿಲ್ಲ. ಹಲವಾರು ಪಂಡಿತರೊಡನೆ ಚರ್ಚೆಮಾಡಿದರೂ, ಅವರ ಸಂದೇಹಗಳು ತೀರಲಿಲ್ಲ. ಏನು ಮಾಡಬೇಕೋ ತೋಚದೆ ಇದ್ದರು.
ಸದ್ಗುರುವೊಬ್ಬನೇ ಸಮರ್ಥ
“ಈಶಾವಾಸ್ಯೋಪನಿಷತ್ತು ಆತ್ಮಸಾಕ್ಷಾತ್ಕಾರವನ್ನು ಕುರಿತು ಹೇಳುತ್ತದೆ. ನಮಗೆ ಈ ಜನನ ಮರಣ ಚಕ್ರಭ್ರಮಣೆಯಿಂದ ಮುಕ್ತಿ ಕೊಡುತ್ತದೆ ಎಂಬುದನ್ನು ನೋಡಿದರೆ, ನನ್ನ ಸಂದೇಹಗಳನ್ನು ತೀರಿಸಬಲ್ಲವರು, ಆತ್ಮಸಾಕ್ಷಾತ್ಕಾರ ಪಡೆದವರೇ ಆಗಿರಬೇಕು. ಬೇರೆ ಯಾರೂ ತೀರಿಸಲಾರರು. ಅಂತಹವರು ಸದ್ಗುರು ಸಾಯಿಬಾಬಾ ಒಬ್ಬರೇ” ಎಂಬ ನಿರ್ಧಾರಕ್ಕೆ ಬಂದರು. ಅನುಕೂಲ ಸಮಯ ನೋಡಿಕೊಂಡು, ಬಾಬಾರ ಚರಣಗಳಲ್ಲಿ ಬಿದ್ದು ತಮ್ಮ ಸಂದೇಹಗಳನ್ನು ಪರಿಹರಿಸಲು ಕೇಳಿಕೊಂಡರು. ಬಾಬಾ ಅವರನ್ನು ಆಶೀರ್ವದಿಸಿ, "ಚಿಂತೆ ಮಾಡಬೇಡ. ವಿಲೆಪಾರ್ಲೆಯ ಕಾಕಾ ಸಾಹೇಬ್ ದೀಕ್ಷಿತರ ಮನೆಯ ಕೆಲಸದಾಳು ನಿನ್ನ ಸಂದೇಹವನ್ನು ತೀರಿಸುತ್ತಾಳೆ" ಎಂದರು. ಅಲ್ಲಿದ್ದವರೆಲ್ಲಾ "ಬಾಬಾ ಪರಿಹಾಸ ಮಾಡುತ್ತಿದ್ದಾರೆ. ವಿದ್ಯೆಯ ಗಂಧವೇ ಇಲ್ಲದ ಕೆಲಸದಾಳು, ಉಪನಿಷತ್ತು ಎಂಬುದೊಂದಿದೆ ಎನ್ನುವುದನ್ನೂ ತಿಳಿಯದವಳು, ಉಪನಿಷತ್ತಿನ ಸಂದೇಹಗಳನ್ನು ತೀರಿಸಬಲ್ಲಳೇ?" ಎಂದು ನಕ್ಕರು. ಆದರೆ ದಾಸಗಣು ಮಾತ್ರ ಬಾಬಾರ ಮಾತುಗಳಲ್ಲಿ ಸಂಪೂರ್ಣ ನಂಬಿಕೆಯಿಂದ, ಅವರ ಮಾತು ಎಂದೂ ಸುಳ್ಳಾಗುವುದಿಲ್ಲ, ಅವರು ಹೇಳಿದ್ದು ಸತ್ಯವಾಗಲೇ ಬೇಕು, ಅವರದು ಬ್ರಹ್ಮವಾಣಿ. ಎಂಬ ಧೃಢನಂಬಿಕೆಯಿಂದ ವಿಲೆಪಾರ್ಲೆಗೆ ಹೋಗಲು ನಿರ್ಧರಿಸಿದರು.
ಕಾಕಾ ಸಾಹೇಬರ ಕೆಲಸದಾಳು
ಬಾಬಾರ ಮಾತುಗಳನ್ನು ಅನುಸರಿಸಿ, ದಾಸಗಣು ವಿಲೆಪಾರ್ಲೆಗೆ ಹೋಗಿ ಕಾಕಾ ಸಾಹೇಬರ ಮನೆಯಲ್ಲಿ ಇದ್ದರು. ಮಾರನೆಯ ದಿನ, ಅವರು ಪೂಜೆ ಮಾಡುತ್ತಿರುವ ಸಮಯದಲ್ಲಿ, ಬಹು ಸುಂದರವಾದ, ಸುಶ್ರಾವ್ಯವಾದ ಹಾಡೊಂದನ್ನು ಕೇಳಿದರು. ಒಂದು ಕೆಂಪು ಸೀರೆ, ಅದರ ಸೆರಗು, ಅಂಚು, ಅದರ ಮೇಲಿನ ಕುಸುರಿ ಕೆಲಸ, ಇವುಗಳನ್ನು ಕುರಿತು ಹೊಗಳುವ ಹಾಡು ಅದು. ಆ ಹಾಡು ಎಷ್ಟು ಆಪ್ಯಾಯಮಾನವಾಗಿತ್ತೆಂದರೆ, ದಾಸಗಣು ಹೊರಗೆ ಬಂದು ಹಾಡುತ್ತಿರುವವರು ಯಾರು ಎಂದು ನೋಡಿದರು. ಎಂಟೊಂಭತ್ತು ವಯಸ್ಸಿನ ಒಬ್ಬಳು ಹುಡುಗಿ. ಕಾಕಾರ ಮನೆಯ ಆಳಿನ ತಂಗಿ. ಹರಿದು ಹಳೆಯದಾದ ಬಟ್ಟೆಗಳನ್ನು ತೊಟ್ಟು, ಪಾತ್ರೆಗಳನ್ನು ತೊಳೆಯುತ್ತಾ ಹಾಡುತ್ತಿದ್ದಾಳೆ. ದಾಸಗಣು ಅವರಿಗೆ ಅವಳನ್ನು ನೋಡಿ ಕನಿಕರವಾಯಿತು. ಬಡತನದಲ್ಲಿದ್ದರೂ ಅವಳನ್ನು ಸಂತೋಷ ಬಿಟ್ಟಿರಲಿಲ್ಲ.
ಮಾರನೆಯ ದಿನ ರಾವ್ ಬಹಾದ್ದೂರ್ ಎಮ್. ಡಬ್ಲ್ಯೂ. ಪ್ರಧಾನ್ ದಾಸಗಣು ಅವರಿಗೆ ಪಂಚೆಯೊಂದನ್ನು ತಂದು ಕೊಟ್ಟರು. ದಾಸಗಣು, ಆ ಚಿಕ್ಕ ಹುಡುಗಿಗೆ ಒಂದು ಸೀರೆಯನ್ನು ತಂದುಕೊಡುವಂತೆ, ಅವರಲ್ಲಿ ಮನವಿ ಮಾಡಿಕೊಂಡರು. ಅದರಂತೆ ಪ್ರಧಾನ್ ಅವಳಿಗೆ ಒಂದು “ಚಿರ್ಡಿ” ಸೀರೆ ತಂದುಕೊಟ್ಟರು. ಅದನ್ನು ನೋಡಿದ ಆ ಹುಡುಗಿಗೆ ತಡೆಯಲಾರದಷ್ಟು ಸಂತೋಷವಾಯಿತು. ಮಾರನೆಯ ದಿನವೇ ಆ ಹೊಸ ಸೀರೆಯನ್ನುಟ್ಟು, ಅವಳು ಕೆಲಸಕ್ಕೆ ಬಂದಳು. ಕುಣಿದು, ಕುಪ್ಪಳಿಸಿ, ಓಡಿ, ಅಡ್ಡಾಡಿ, ನರ್ತಿಸಿ, ತನ್ನ ಸ್ನೇಹಿತರ ಜೊತೆಯಲ್ಲಿ ಆಟವಾಡಿ, ಅತ್ಯಂತ ಆನಂದದಿಂದ ದಿನವೆಲ್ಲ ಕಳೆದಳು. ಮಾರನೆಯ ದಿನ ಅವಳು ತನ್ನ ಹೊಸ ಸೀರೆಯನ್ನು ಮನೆಯಲ್ಲಿ ಇಟ್ಟು, ಹಳೆಯ ಹರಿದು ಹೋಗಿದ್ದ ಸೀರೆಯನ್ನೇ ಉಟ್ಟು ಕೆಲಸಕ್ಕೆ ಬಂದಳು. ಅಂದೂ ಕೂಡಾ, ಅವಳು ಹಾಡುತ್ತಾ, ಆಡುತ್ತ, ತಾನು ಹಿಂದಿನ ದಿನ ಹೊಸ ಸೀರೆಯನ್ನುಟ್ಟುಕೊಂಡು ಬಂದಾಗ ಹೇಗೆ ಸಂತೋಷದಿಂದ ಇದ್ದಳೋ, ಹಾಗೆಯೇ ಸಂತೋಷದಿಂದಿದ್ದಳು. ಅವಳ ಆನಂದವನ್ನು ಕಂಡ ದಾಸಗಣು, ಅವಳನ್ನು ಕನಿಕರದ ಬದಲು ಮೆಚ್ಚಿಕೊಂಡರು. ಅವಳು ಹೊಸಸೀರೆಯನ್ನು ಮನೆಯಲ್ಲಿಟ್ಟು, ಹರಿದ ಸೀರೆಯನ್ನೇ ಉಟ್ಟು ಬಂದಿದ್ದಾಳೆ. ಬಡತನದಿಂದಾಗಿ ಹಳೆಯ ಸೀರೆಯನ್ನೇ ಉಡಬೇಕಾಗಿ ಬಂದಿದೆ. ಆದರೂ, ಅವಳ ಸಂತೋಷಕ್ಕೆ ಧಕ್ಕೆಯಾಗಿಲ್ಲ. ಹೀಗೆ ಯೋಚಿಸುತ್ತಿದ್ದ ದಾಸಗಣೂಗೆ, ಥಟ್ಟನೆ ಮಿಂಚು ಹೊಳೆದಂತಾಯಿತು. ಅವಳನ್ನು ಹರಿದ ಬಟ್ಟೆಯಲ್ಲಿ ಆನಂದದಲ್ಲಿರುವಾಗ ನೋಡಿದ್ದರು. ಹೊಸ ಸೀರೆಯುಟ್ಟು ಬಂದಾಗ ಅವಳು ಆನಂದದಲ್ಲಿದ್ದುದನ್ನು ನೋಡಿದ್ದರು. ಮತ್ತೆ ಹಳೆಯ ಸೀರೆಯನ್ನುಟ್ಟು ಬಂದಾಗಲೂ ಅವಳ ಆನಂದ ಅವಳನ್ನು ಬಿಟ್ಟಿರಲಿಲ್ಲ.
ಅಂದರೆ, ಅವಳ ಉಡುಗೆ ಅವಳ ಮನಸ್ಸಿನ ಸ್ಥಿತಿಯನ್ನು ಯಾವ ರೀತಿಯಲ್ಲೂ ಬದಲಾಯಿಸಿರಲಿಲ್ಲ. ತನ್ನ ಮೈಮೇಲಿನ ಬಟ್ಟೆ, ಅವಳ ಭಾವನೆಗಳನ್ನು ಬದಲಾಯಿಸಿರಲಿಲ್ಲ. ಏನಾದರೂ, ದೇವರ ಇಚ್ಚೆಯಂತೆ ನಡೆಯುತ್ತದೆ, ಎಂದು ನಂಬಿರುವವರಂತೆ ಅವಳು, ಬದಲಾವಣೆಗಳಿಗೆ ಈಡಾಗದೆ, ತನ್ನ ಸಂತೋಷ ಸ್ಥಿತಿಯನ್ನು ಕಳೆದುಕೊಳ್ಳಲಿಲ್ಲ. ತಾನಾಗಿ, ಅವಳು ಯಾವ ಬದಲಾವಣೆಗಳನ್ನು ಕೇಳಲಿಲ್ಲ. ಅದಾಗಿ ಬಂದಾಗ, ಅದನ್ನು ಒಪ್ಪಿಕೊಂಡು ಮೊದಲಿನಂತೆಯೇ ಇದ್ದಳು. ಉಪನಿಷತ್ತಿನ ಮೊದಲನೆಯ ಶ್ಲೋಕ ಹೇಳುವುದೂ ಇದೇ!
“ಈ ಜಗತ್ತಿನಲ್ಲಿರುವ ಸ್ಥಾವರ, ಜಂಗಮಾತ್ಮಕವಾದವೆಲ್ಲವೂ ಈಶ್ವರನಿಂದ ಆವರಿಸಲ್ಪಟ್ಟಿದೆ. ಅದನ್ನು ತ್ಯಾಗದಿಂದ ಭುಜಿಸಬೇಕು. ಇನ್ನೊಬ್ಬರ ಧನಕ್ಕೆ ಆಸೆಪಡಬೇಡ”
ಇದು ಈಶಾವಸ್ಯೋಪನಿಷತ್ತಿನ ಮೊದಲನೆಯ ಶ್ಲೋಕದ ಅರ್ಥ.ಇದನ್ನು ಅರ್ಥಮಾಡಿಕೊಂಡ ಮೇಲೆ, ದಾಸಗಣು ಸಂದೇಹಗಳೆಲ್ಲವೂ ತೀರಿದವು. ಸದ್ಗುರುವು ತನಗೆ ಕೆಲಸದಾಳಿನಿಂದ ಮಾರ್ಗದರ್ಶನ ಮಾಡಿಸಿದರೆಂದು ಬಹಳ ಸಂತೋಷಗೊಂಡರು.
ಬಾಬಾರ ವಿಶಿಷ್ಟ ರೀತಿಯ ಶಿಕ್ಷಣಾ ಕ್ರಮವನ್ನು ಇಲ್ಲಿ ಮತ್ತೊಮ್ಮೆ ಕಾಣುತ್ತೇವೆ. ಬಾಬಾ ಎಂದೂ ಶಿರಡಿ ಬಿಟ್ಟು ಎಲ್ಲಿಗೂ ಹೋಗದಿದ್ದರೂ, ಭಕ್ತರನ್ನು ಬೇರೆ ಬೇರೆ ಸ್ಥಳಗಳಿಗೆ ಕಳುಹಿಸಿ, ಅವರಿಗೆ ತಾವು ಅವರಿಂದ ದೂರವಿಲ್ಲ ಎಂಬ ಅನುಭವವನ್ನು ಕೊಟ್ಟು, ಉಪದೇಶಮಾಡುತ್ತಿದ್ದರು. ಇಂತಹುದೇ ಕ್ರಮವನ್ನು ಅನುಸರಿಸಿ ಉಪದೇಶ ಕೊಡುತ್ತಾರೆ ಎಂದು ಹೇಳಲು ಸಾಧ್ಯವೇ ಇಲ್ಲ. ಯಾರಿಗೆ ಯಾವ ಕ್ರಮ ಸರಿಯೋ, ಅವರಿಗೆ ಅಂತಹ ಕ್ರಮವನ್ನು ಅನುಸರಿಸುತ್ತಿದ್ದರು. ದಾಸಗಣುವನ್ನು ವಿಲೆಪಾರ್ಲೆಗೆ ಕಳುಹಿಸಿ ಕೆಲಸದಾಳಿನಿಂದ ಮಾರ್ಗದರ್ಶನ ಮಾಡಿಸಿದರು. ಹಲವರು ಕೇಳಬಹುದು, "ಅಲ್ಲಿಗೆ ಕಳುಹಿಸುವುದರ ಬದಲು, ಅದನ್ನು ತಾವೇ ಶಿರಡಿಯಲ್ಲೇ ಹೇಳಬಹುದಾಗಿತ್ತಲ್ಲ?" ಎಂದು. ಅಂತಹವರಿಗೆ ಅರ್ಥವಾಗದೇ ಇರುವುದು ಇದು, "ಬಾಬಾ ದಾಸಗಣುಗೆ ಅದನ್ನು ಶಿರಡಿಯಲ್ಲಿ ಬರಿಯ ಮಾತುಗಳಲ್ಲಿ ಹೇಳಿದ್ದರೆ, ಅವರು ಅದನ್ನು ಕೇಳುತ್ತಿದ್ದರೇ ಹೊರತು ಅವರ ಮನಸ್ಸಿನಮೇಲೆ ಅದರ ಪರಿಣಾಮ ಆಗುತ್ತಿರಲಿಲ್ಲ. ಅವರು ಅನುಸರಿಸಿದ ಕ್ರಮದಿಂದ ದಾಸಗಣು ಯಾರೂ ಏನೂ ಹೇಳದೆ, ತಾವೇ ಅದನ್ನು ವಿಶ್ಲೇಷಿಸಿ ಅರ್ಥಮಾಡಿಕೊಳ್ಳುವ ಅವಕಾಶ ಸಿಕ್ಕಿತು. ಅದರಿಂದ ಅವರ ಮನಸ್ಸಿನಲ್ಲಿ ಅದು ಚೆನ್ನಾಗಿ ಊರಿತು”. ಭಕ್ತರು ತಮ್ಮ ಪ್ರಶ್ನೆಗೆ ತಾವೇ ಉತ್ತರ ಹುಡುಕುವಂತೆ ಮಾಡುವುದು ಬಾಬಾರ ಒಂದು ಕ್ರಮವಾಗಿತ್ತು.
ಈ ಉಪನಿಷತ್ತಿನ ನೀತಿಯೇನೆಂದರೆ, "ದೇವರು ಕೊಡುವುದೆಲ್ಲಾ ಒಳ್ಳೆಯದೇ. ತಾನೇ ಎಲ್ಲದರಲ್ಲೂ ಇರುತ್ತಾ, ಆ ದೇವರು ಒಳ್ಳೆಯದನ್ನೇ ದಯಪಾಲಿಸುತ್ತಾನೆ, ಎಂಬ ಧೃಢನಂಬಿಕೆಯಿಂದ ಬಂದದ್ದನ್ನು ತೃಪ್ತಿಯಾಗಿ ಅನುಭವಿಸು. ಇನ್ನೊಬ್ಬರ ಸ್ವತ್ತಿಗಾಗಿ ಆಸೆಪಡಬೇಡ. ನಿನ್ನ ಪಾಲಿಗೆ ಬಂದದ್ದು ಪರಮಾನ್ನವೆಂದು ಭಾವಿಸಿ, ಅನುಭವಿಸು. ಶಾಸ್ತ್ರಗಳಲ್ಲಿ ಹೇಳಿರುವ ರೀತಿಯಲ್ಲಿ ಮಾಡಬೇಕಾದ ಕರ್ಮಗಳನ್ನು ತಪ್ಪದೇ ಮಾಡುತ್ತಿರು. ಎಲ್ಲವೂ ಅವನ ಇಚ್ಛೆಯಂತೆಯೇ ನಡೆಯುತ್ತದೆ. ಅಕರ್ಮಿಯಾಗಬೇಡ. ಕರ್ಮ ಮಾಡುತ್ತಲೇ ನಿಷ್ಕರ್ಮಿಯಾಗಬೇಕು. ತನ್ನನ್ನು ಇತರರಲ್ಲೂ, ಇತರರನ್ನು ತನ್ನಲ್ಲೂ ಕಂಡುಕೊಳ್ಳುತ್ತಾ ಎಲ್ಲವೂ ಆತ್ಮವತ್ ಆದಾಗ, ಅಂತಹವನಿಗೆ ಮೋಹವೆಲ್ಲಿಯದು? ದುಃಖವೆಲ್ಲಿಯದು? ಆತ್ಮವತ್ ಎಲ್ಲರನ್ನೂ ಕಂಡಾಗ, ಸಹಜ ದುರ್ಗುಣಗಳೆಲ್ಲಾ ನಾಶವಾಗಿ ಹೋಗುವವು”.
ಇದರೊಂದಿಗೆ ಬಾಬಾ ದಾಸಗಣು ಅವರ ಈಶಾವಾಸ್ಯೋಪನಿಷತ್ತಿನ ತೊಡಕನ್ನು ಬಿಡಿಸಿದ್ದು ಮತ್ತು ಇತರ ವಿಷಯಗಳನ್ನು ಕುರಿತು ಹೇಳುವ ಇಪ್ಪತ್ತನೆಯ ಅಧ್ಯಾಯ ಮುಗಿಯಿತು. ಮುಂದಿನ ಅಧ್ಯಾಯದಲ್ಲಿ ಹೇಮಾಡ್ ಪಂತ್ ವಿ.ಹೆಚ್.ಥಾಕೂರ್, ಅನಂತರಾವ್ ಪಾಟಣಕರ್, ಪಂಡರಪುರದ ವಕೀಲ ಮತ್ತು ಇತ್ಯಾದಿ ವಿಷಯಗಳನ್ನು ಹೇಳುತ್ತಾರೆ.
||ಶ್ರೀ ಸದ್ಗುರು ಸಾಯಿನಾಥಾರ್ಪಣಮಸ್ತು||ಶುಭಂ ಭವತು||
||ಓಂ ಶಾಂತಿಃ ಶಾಂತಿಃ ಶಾಂತಿಃ||
||ಓಂ ಶಾಂತಿಃ ಶಾಂತಿಃ ಶಾಂತಿಃ||
No comments:
Post a Comment