Saturday, December 31, 2011

||ಇಪ್ಪತ್ತಾರನೆಯ ಅಧ್ಯಾಯ||


||ಶ್ರೀ ಸಾಯಿ ಸಚ್ಚರಿತ್ರೆ||
||ಇಪ್ಪತ್ತಾರನೆಯ ಅಧ್ಯಾಯ||
||ಹೋಸ ಜೀವನದ ಆಶ್ವಾಸನೆ||
ಶ್ರೀ ಗಣೇಶಾಯ ನಮಃ ಶ್ರೀ ಸರಸ್ವತಯೇ ನಮಃ
ಶ್ರೀ ವೆಂಕಟೇಶಾಯ ನಮಃ ಶ್ರೀ ಸಾಯಿನಾಥಾಯ ನಮಃ
ಶ್ರೀ ಸದ್ಗುರುಭ್ಯೋನ್ನಮಃ

ಅಧ್ಯಾಯದಲ್ಲಿ ಹೇಮಾಡ್ ಪಂತ್, ಭಕ್ತ ಪಂತ, ಹರಿಶ್ಚಂದ್ರ ಪಿತಳೆ, ಗೋಪಾಲ ಅಂಬಾಡೇಕರ್, ಮತ್ತು ಇತರ ವಿಷಯಗಳನ್ನು ಹೇಳುತ್ತಾರೆ.

ಮಾಯೆಯ ಆಟ

ಮಾಯೆಯ ಸಹಾಯದಿಂದ ದೇವರು ಪ್ರಪಂಚವನ್ನು ಸೃಷ್ಟಿಸಿದ್ದಾನೆ. ಮಾಯೆಯ ಆಟ ಎಲ್ಲ ಕಾಲದಲ್ಲೂ, ಪ್ರಪಂಚದಲ್ಲಿ ಎಲ್ಲೆಲ್ಲೂ ತುಂಬಿಕೊಂಡಿದೆ. ಮಸುಕು ಬೆಳಕಿನಲ್ಲಿ ಹಗ್ಗ ಹಾವಿನಂತೆ ಕಾಣುತ್ತದೆ. ಬೆಳಕು ಸ್ಪಷ್ಟವಾದ ಕೂಡಲೆ ಅದು ಹಗ್ಗವೆಂದು ತಿಳಿಯುತ್ತದೆ. ಇಂತಹ ಸ್ಪಷ್ಟ ಬೆಳಕು, ಎಂದರೆ ಜ್ಞಾನ, ಕೊಡ ಬಲ್ಲವನು ಸದ್ಗುರುವೊಬ್ಬನೇ! ವಿಷಯೇಂದ್ರಿಯ ವಸ್ತುಗಳು ನಿತ್ಯಗಳು ಎಂಬ ಅಜ್ಞಾನದಿಂದ ಕೂಡಿದ ನಾವು ಅವುಗಳನ್ನು ಬಯಸಿ ಅವನ್ನು ಹೊಂದಲು ಒದ್ದಾಡುತ್ತೇವೆ. ಕಾಲ ಕಳೆಯುತ್ತಾ ಬಂದಂತೆ ಅವು ನಿತ್ಯಗಳಲ್ಲ, ಸ್ವಲ್ಪ ಕಾಲವಿದ್ದು ಹೋಗುವಂತಹವು ಎಂಬುದು ಅರ್ಥವಾಗುತ್ತದೆ. ರಸನೇಂದ್ರಿಯ ತೃಪ್ತಿಗಾಗಿ ನಾವು ತಿನ್ನುವ ತಿನುಬಾಂಡಾರಗಳು ರುಚಿಯಾಗಿರುವುದು ನಾಲಗೆಯ ಮೇಲಿದ್ದಷ್ಟು ಕಾಲ ಮಾತ್ರ. ದೃಗಿಂದ್ರಿಯ ವಸ್ತುಗಳಾದ ಸೌಂದರ್ಯ ಮುಂತಾದವುಗಳು ಕೇವಲ ತೋರಿಕೆಗೆ ಮಾತ್ರವೇ! ಹಾಗೆಯೇ ಇತರ ಇಂದ್ರಿಯ ವಸ್ತುಗಳೂ ಕೂಡಾ. ಎಲ್ಲ ವಿಷಯೇಂದ್ರಿಯಗಳ ವಸ್ತುಗಳು ಹಾಗೆ ತೋರುವುದು ಸ್ವಲ್ಪಕಾಲ ಮಾತ್ರವೇ! ಅವೆಲ್ಲವೂ ಅನಿತ್ಯಗಳು. ಆದರೆ ಕಾಲದಿಂದ ಬದಲಾಗದ ವಸ್ತುವೊಂದಿದೆ. ಅದೇ ಆತ್ಮ! ಆತ್ಮಸಾಕ್ಷಾತ್ಕಾರದ ಕಡೆಗೆ ಕರೆದುಕೊಂಡು ಹೋಗಬಲ್ಲವನು ಸದ್ಗುರುವೊಬ್ಬನೇ! ಅಂತಹ ಸದ್ಗುರು ನಮ್ಮ ಸಾಯಿಬಾಬಾ. ಅವರು ಅವತರಿಸಿರುವುದೇ, ಕೈಹಿಡಿದು ನಮ್ಮನ್ನು ಋಜುಮಾರ್ಗದಲ್ಲಿ ನಡೆಸಿ, ನಮ್ಮನ್ನು ಸಾಕ್ಷಾತ್ಕಾರದ ಗುರಿ ಮುಟ್ಟಿಸಲೆಂದು. ಅದಕ್ಕೆ, ಅವರು ನಮ್ಮ ಸಹಕಾರವನ್ನು ಕೇಳುತ್ತಾರೆ. ಅಕುಂಠಿತ ಶ್ರದ್ಧಾ ಭಕ್ತಿಗಳಿಂದ, ನಾವು ಅವರಲ್ಲಿ ಶರಣಾಗತರಾಗುವುದೇ ಅದು. ನಾವು ಸಹಕರಿಸದಿದ್ದರೂ, ಅವರೇನೂ ನಮ್ಮ ಕೈಬಿಡುವುದಿಲ್ಲ. ನಮ್ಮನ್ನು ಅಡ್ಡಹಾದಿ ಹಿಡಿಯದಂತೆ, ನಮ್ಮ ಮೇಲೆ ಕಣ್ಣಿಟ್ಟು ನೋಡುತ್ತಾ, ಸಮಯಬಂದಾಗ ನಮ್ಮನ್ನು ಮತ್ತೆ ಸರಿಯಾದ ದಾರಿಗೆ ಎಳೆದು ತರುತ್ತಾರೆ. ನಮ್ಮ ಸಹಕಾರವಿಲ್ಲದಿದ್ದಾಗ, ನಮಗೆ ಸಾಕ್ಷಾತ್ಕಾರ ಆಗಲು ಬಹಳ ಕಾಲವಾಗುತ್ತದೆ. ಅವರ ನಾಮವನ್ನು ತಪ್ಪಿಯಾದರೂ ಒಂದುಸಲ ನೆನಸಿದರೆ ಸಾಕು, ಅವರು ನಮ್ಮ ಕೈಹಿಡಿದು ಮಾರ್ಗದರ್ಶಿಯಾಗುತ್ತಾರೆ. ನಮಗೆ ದೊರೆತಿರುವ ಅಂತಹ ಅನರ್ಘ್ಯ ರತ್ನವನ್ನು ದೂರಮಾಡದೆ, ದಯೆ ಅನುಕಂಪಗಳಿಂದ ತುಂಬಿದ ಕರುಣಾಮೂರ್ತಿಯ ಚರಣಾರವಿಂದಗಳಲ್ಲಿ ನಮಸ್ಕರಿಸಿ ಅವರ ಕೃಪೆಗೆ ಪಾತ್ರರಾಗೋಣ.

ಮಾನಸ ಪೂಜೆ

ಹಾಗೆ ಸಂಪೂರ್ಣ ಶರಣಾಗತರಾಗುವುದು ಹೇಗೆ ಎಂಬ ರೀತಿಯೊಂದನ್ನು ಹೇಮಾಡ್ ಪಂತ್ ನಮಗೆ ತೋರಿಸಿಕೊಟ್ಟಿದ್ದಾರೆ. ಬಾಬಾರ ಸಗುಣ ಮೂರ್ತಿಯನ್ನು ನಿಮ್ಮ ಮನೋ ಚಕ್ಷುಗಳ ಮುಂದೆ ನಿಲ್ಲಿಸಿ. ಬಾಬಾ ತಮ್ಮ ಬಲಗಾಲನ್ನು ಎಡಗಾಲ ಮೇಲಿಟ್ಟು ಗಾಂಭೀರ್ಯದ ಮೂರ್ತಿಯಾಗಿ ಕುಳಿತಿದ್ದಾರೆ. ಎಡಗೈ ಬಲಗಾಲ ಪಾದದ ಮೇಲಿದೆ. ಬಲಗೈ ಅಭಯ ಮುದ್ರೆಯನ್ನು ತೋರಿಸುತ್ತಿದೆ. ನಮ್ಮನ್ನು ನಾವೇ ಮರೆಯುವಂತೆ ಮಾಡುವ ಮುಖ, ಮುಗುಳ್ನಗೆಯನ್ನು ಸೂಸುತ್ತಿದೆ. ಕರುಣಾ ಮೂರ್ತಿಯಾದ ಅವರ ನೇತ್ರಗಳು ನಮ್ಮತ್ತಲೇ ದೃಷ್ಟಿ ಬೀರುತ್ತಿವೆ. ಅವರು ನಮಗಾಗಿಯೇ ಎದುರುನೋಡುತ್ತಾ ಕುಳಿತಿರುವಂತಿದೆ. ಅಂತಹ ದೇವತಾ ಮೂರ್ತಿಯನ್ನು ಕಂಡ ನಮ್ಮ ಮನಸ್ಸು ತುಂಬಿಹೋಗಿ, ಕಣ್ಣುಗಳು ಸುಖೋಷ್ಣವಾದ ಆನಂದಬಾಷ್ಪಗಳನ್ನು ಸುರಿಸುತ್ತಿವೆ. ಸುಖೋಷ್ಣ ಆನಂದಬಾಷ್ಪಗಳಿಂದ ಬಾಬಾರ ಚರಣಗಳನ್ನು ತೊಳೆಯೋಣ. ಅಕುಂಠಿತ ಪ್ರೇಮವೆಂಬ ಚಂದನವನ್ನು, ಅವರ ಕೈಕಾಲು ಮುಖಗಳಿಗೆ ಲೇಪಿಸೋಣ. ಅಚಂಚಲ ಶ್ರದ್ಧೆಯೆಂಬ ವಸ್ತ್ರದಿಂದ ಅವರನ್ನು ಆಚ್ಛಾದಿಸೋಣ. ಅಷ್ಟ ಸಾತ್ವಿಕ ಭಾವಗಳೆಂಬ ಅರವಿಂದಗಳನ್ನು ಅವರಿಗೆ ಅರ್ಪಿಸೋಣ. ಏಕಾಗ್ರ ಮನಸ್ಸೆಂಬ ಫಲವನ್ನು ಅವರಿಗೆ ಸಮರ್ಪಿಸೋಣ. ನಿಶ್ಚಲ ಭಕ್ತಿಯೆಂಬ ಸೊಂಟಪಟ್ಟಿಯನ್ನು ಅವರಿಗೆ ಸುತ್ತೋಣ. ಬಹುಶಃ ನಮ್ಮ ಅಲಂಕರಣಗಳಿಂದ ಬಾಬಾ ಆಯಾಸಪಟ್ಟರೇನೋ? ಅದಕ್ಕೆ ಮಯೂರಪುಚ್ಚ ಪಂಖದಿಂದ ಹಿತವಾಗಿ ಗಾಳಿ ಹಾಕೋಣ. ಇದೆಲ್ಲಾ ಆದಮೇಲೆ, ಅವರನ್ನು ಗಂಧಾಕ್ಷತೆಗಳಿಂದ ಪೂಜೆಮಾಡಿ ಪುಷ್ಪ, ಧೂಪ, ದೀಪ, ನೈವೇದ್ಯಗಳನ್ನು ಅರ್ಪಿಸಿ, ಆರತಿ ಮಾಡಿ ನಮಸ್ಕಾರಮಾಡೋಣ. ಹಾಗೆ ನಮಸ್ಕರಿಸಿ ಅವರನ್ನು ಪ್ರಾರ್ಥಿಸಿಕೊಳ್ಳೋಣ, "ಬಾಬಾ, ನಮ್ಮ ಮನಸ್ಸನ್ನು ಅಂತರ್ಮುಖಿಯನ್ನಾಗಿ ಮಾಡು. ನಿತ್ಯಾನಿತ್ಯ ಬೇಧವನ್ನು ಕಾಣುವ ದೃಷ್ಟಿಯನ್ನು ನೀಡು. ಅನಿತ್ಯ ಪ್ರಪಂಚಕ್ಕೆ ಕಟ್ಟಿಹಾಕಿರುವ ಮೋಹವೆಂಬ ಶೃಂಖಲೆಗಳಿಂದ ನಮ್ಮನ್ನು ಬಿಡಿಸು. ಕಾಯಾ, ವಾಚಾ, ಮನಸಾ ನಾವು ನಿನಗೆ ಶರಣಾಗಿದ್ದೇವೆ. ಹಾಗೆ ಶರಣಾಗತರಾಗಿರುವ ನಮ್ಮನ್ನು ನಿನಗೆ ಇಷ್ಟಬಂದ ರೀತಿಯಲ್ಲಿ ಉಪಯೋಗಿಸು. ನಿನ್ನ ಚರಣಾರವಿಂದಗಳಲ್ಲಿ ನಮಗೆ ಆಸರೆ ಕೊಟ್ಟು ಆತ್ಮಸಾಕ್ಷಾತ್ಕಾರದ ಹಾದಿಯಲ್ಲಿ, ನಮ್ಮ ಕೈಹಿಡಿದು ನಡೆಸಿ ನಮ್ಮನ್ನು ಗುರಿ ಮುಟ್ಟಿಸು."

ಭಕ್ತ ಪಂತರ ಕಥೆ

ಬೇರೊಬ್ಬ ಗುರುವಿನ ಶಿಷ್ಯರಾದ ಪಂತ್ ಎನ್ನುವ ಭಕ್ತನೊಬ್ಬನಿಗೆ, ಶಿರಡಿಗೆ ಬಂದು, ಬಾಬಾರನ್ನು ಕಾಣುವ ಇಚ್ಚೆಯೇನೂ ಇರಲಿಲ್ಲ. ಆದರೆ ವಿಧಿಯನ್ನು ಮೀರುವವರಾರು? ಅವರು ಬಿಬಿಸಿಐ (ಬೋಂಬೆ ಬರೋಡಾ ಮತ್ತು ಸೆಂಟ್ರಲ್ ಇಂಡಿಯ) ರೈಲಿನಲ್ಲಿ ತಮ್ಮ ಬಂಧು ಬಳಗಗಳೊಡನೆ ಪ್ರಯಾಣ ಮಾಡುತ್ತಿದ್ದರು. ಶಿರಡಿಗೆ ಹೊರಟಿದ್ದ ಅವರೆಲ್ಲ, ಪಂತರನ್ನೂ ತಮ್ಮ ಜೊತೆ ಶಿರಡಿಗೆ ಬರುವಂತೆ ಒತ್ತಾಯಮಾಡಿದರು. ಇಲ್ಲ ಎನ್ನಲಾಗದೆ ಅವರು ಒಪ್ಪಿಕೊಂಡರು. ಅವರೆಲ್ಲರೂ ಬೊಂಬಾಯಿಯಲ್ಲಿ ಇಳಿದರು. ಪಂತರು ವೀರಾರ್ವರೆಗೂ ಹೋಗಿ ತಮ್ಮ ಗುರುವನ್ನು ಕಂಡು, ಅವರ ಅನುಜ್ಞೆಯನ್ನು ಪಡೆದು ಮತ್ತೆ ತಮ್ಮ ಸಹ ಪ್ರಯಾಣಿಕರನ್ನು ಸೇರಿದರು. ತಾನು ಗುರುವಿನ ಅನುಜ್ಞೆ ಪಡೆದಿದ್ದರೂ, ಪಂತರಿಗೆ ಶಿರಡಿಗೆ ಹೋಗುವುದು ಅಷ್ಟು ಸರಿತೋರಲಿಲ್ಲ. ಇನ್ನೊಬ್ಬ ಗುರುವಿನ ಬಳಿಗೆ ಹೋಗುವುದು, ತನ್ನ ಗುರುವಿಗೆ ಅವಮಾನ ಮಾಡಿದಂತೆ ಎಂದು ಅವರ ಮನಸ್ಸಿನ ಅಳುಕು. ಹೇಗೋ ಅಂತೂ ಇತರರೊಡನೆ ಪಂತರು ಶಿರಡಿ ಸೇರಿದರು. ಬಾಬಾ ದರ್ಶನಕ್ಕೆ ಮಸೀದಿಗೆ ಹೋದಾಗ, ಅಲ್ಲಿ ಜನ ಗುಮ್ಮಿಗೂಡಿದ್ದರು. ಇದ್ದಕ್ಕಿದ್ದಹಾಗೆ ಪಂತರು ಅಲ್ಲಿ ಮೂರ್ಛೆ ಬಂದು ಕೆಳಗೆ ಬಿದ್ದರು. ಎಲ್ಲರೂ ಹೆದರಿಕೊಂಡು, ಅವರನ್ನು ಎಬ್ಬಿಸಲು ಪ್ರಯತ್ನಮಾಡಿದರು. ಬಾಬಾರ ಅನುಗ್ರಹದಿಂದ ಸ್ವಲ್ಪ ನೀರು ಚುಮುಕಿಸಿದ ಮೇಲೆ ಅವರಿಗೆ ಎಚ್ಚರಿಕೆಯಾಯಿತು. ನಿದ್ದೆಯಿಂದೆದ್ದಂತೆ ಎದ್ದು ಕುಳಿತರು. ಮತ್ತೊಬ್ಬ ಗುರುವಿನ ಶಿಷ್ಯರೆಂದು ಅರಿತ ಬಾಬಾ ಅವರಿಗೆ ಧೈರ್ಯ ಹೇಳಿ, ಅವರ ಗುರುವಿನಲ್ಲಿ ತಾವೂ ನಂಬಿಕೆಯನ್ನು ತೋರಿಸುವಂತೆ, "ಏನಾದರೂ ಆಗಲಿ. ನಿನ್ನ ಆಸರೆಯನ್ನೇ ಹಿಡಿದುಕೋ. ಅದನ್ನು ಬಿಡಬೇಡ. ಶ್ರದ್ಧಾಭಕ್ತಿಪೂರ್ವಕವಾಗಿ ಅವರನ್ನೇ ನಂಬಿಕೋ" ಎಂದು ಪಂತರಿಗೆ ಹೇಳಿದರು. ಬಾಬಾ ಏನು ಹೇಳಿದರು ಎಂಬುದು ಬೇರೆಯವರಿಗೆ ಅರ್ಥವಾಗದಿದ್ದರೂ, ಅದೇನು ಎಂಬುದರ ಅಂತರಾರ್ಥವನ್ನು ಅರಿತ ಪಂತರಿಗೆ ತಮ್ಮ ಗುರುವು ನೆನಪಿಗೆ ಬಂದರು. ಬಾಬಾ ಅವರ ಮನಸ್ಸಿನ ಆತಂಕವನ್ನು ಕಳೆದಿದ್ದರು. ಬಾಬಾರ ಕರುಣೆಯನ್ನು ಪಂತರು ತಮ್ಮ ಜೀವನ ಪರ್ಯಂತ ಮರೆಯಲಿಲ್ಲ.

ಹರಿಶ್ಚಂದ್ರ ಪಿತಳೆಯ ಕಥೆ

ದಾಸಗಣು ಕೀರ್ತನೆಗಳನ್ನು ಮಾಡುತ್ತಿದ್ದುದನ್ನೂ, ಪ್ರತಿಯೊಂದು ಕೀರ್ತನೆಯಲ್ಲೂ ಬಾಬಾರ ಲೀಲೆಗಳನ್ನು ವರ್ಣಿಸುತ್ತಿದ್ದುದನ್ನೂ ಈಗಾಗಲೇ ನೋಡಿದ್ದೇವೆ. ಅವರು ಕೀರ್ತನೆಗಳನ್ನು ಎಷ್ಟು ಚೆನ್ನಾಗಿ ಹೇಳುತ್ತಿದ್ದರೆಂದರೆ, ಶ್ರೋತೃಗಳು ಮುಗ್ಧರಾಗಿ ಕೇಳುತ್ತಾ, ಅದರಲ್ಲೇ ಮಗ್ನರಾಗಿಹೋಗುತ್ತಿದ್ದರು. ಕೆಲವರಿಗಂತೂ ಅದು ಅವರ ಹೃದಯ ಮುಟ್ಟಿ, ಅದರಿಂದ ಪ್ರಭಾವಿತರಾಗಿ, ಅವರು ಮನಸ್ಸಿನಲ್ಲೇ ಬಾಬಾರಿಗೆ ನಮಸ್ಕರಿಸುತ್ತಿದ್ದರು. ಚೋಳ್ಕರನಂತಹ ಕೆಲವರು, ಇನ್ನೂ ಒಂದು ಹೆಜ್ಜೆ ಮುಂದಿಟ್ಟು, ಶಿರಡಿಗೆ ಹೋಗಿ ಬಾಬಾರ ಭಕ್ತರಾದರು. ಹರಿಶ್ಚಂದ್ರ ಪಿತಳೆ, ದಾಸಗಣೂರ ಕೀರ್ತನೆಗಳನ್ನು ಬಹಳವಾಗಿ ಮೆಚ್ಚಿಕೊಂಡಿದ್ದ, ಇನ್ನೊಬ್ಬ ಶ್ರೋತೃ. ಪಿತಳೆಯ ಮಗನಿಗೆ ಮೂರ್ಛೆ ರೋಗ ಇತ್ತು. ಅದು ಯಾವ ರೀತಿಯ ಚಿಕಿತ್ಸೆಗೂ ಬಗ್ಗಿರಲಿಲ್ಲ. ಬೇರೆ ದಾರಿಯೇ ಇಲ್ಲ ಎಂದಾಗಲೇ ನಮಗೆ ದೇವರ ನೆನಪು ಬರುವುದು. ಪಿತಳೆಗೂ ಇದೇ ರೀತಿಯಾಯಿತು. ದಾಸಗಣು ಕೀರ್ತನೆಗಳಲ್ಲಿ ಬಾಬಾರ ಲೀಲೆಗಳನ್ನು ಕೇಳಿದ ಅವರಿಗೆ, ಆಸೆಯ ಎಳೆಯೊಂದು ಸಿಕ್ಕಿದಂತಾಯಿತು. ಬಾಬಾರನ್ನು ದರ್ಶಿಸಬೇಕೆಂದು ನಿರ್ಧರಿಸಿ, ಬಾಬಾರಿಗೆ ಹಣ್ಣು ಕಾಣಿಕೆ ಎಲ್ಲವನ್ನೂ ಅಣಿಮಾಡಿಕೊಂಡು, ಪ್ರಯಾಣಕ್ಕೆ ಬೇಕಾದ ಸಿದ್ಧತೆಗಳನ್ನೆಲ್ಲಾ ಮಾಡಿಕೊಂಡು, ಹೆಂಡತಿ ಮಕ್ಕಳೊಡನೆ ಶಿರಡಿ ಸೇರಿದರು.

ಶಿರಡಿಯಲ್ಲಿ, ಮಸೀದಿಗೆ ಹೋಗಿ ಬಾಬಾರಿಗೆ ನಮಸ್ಕಾರಮಾಡಿ, ತಮ್ಮ ಮಗನನ್ನು ಅವರ ಪಾದಗಳಲ್ಲಿಟ್ಟರು. ಬಾಬಾ ಹುಡುಗನನ್ನು ಒಂದುಸಲ ನೋಡಿದರು. ತಕ್ಷಣವೇ, ಹುಡುಗ ಕಣ್ಣು ಮೇಲಕ್ಕೆ ಮಾಡಿ ಪ್ರಜ್ಞೆತಪ್ಪಿ ಕೆಳಕ್ಕೆ ಬಿದ್ದುಬಿಟ್ಟ. ಬಾಯಿಂದ ನೊರೆ ಬರಲು ಆರಂಭವಾಯಿತು. ಮೈಯೆಲ್ಲಾ ಬೆವರಿತು. ಅವನನ್ನು ನೋಡಿದರೆ ಕೊನೆಯುಸಿರು ಬಿಟ್ಟನೇನೋ, ಎಂಬಂತೆ ಕಾಣಿಸಿತು. ಹುಡುಗನನ್ನು ಸ್ಥಿತಿಯಲ್ಲಿ ನೋಡಿದ ಅವನ ತಂದೆತಾಯಿಗಳು ಅವನು ಸತ್ತುಹೋದನೇನೋ, ಎಂದು ಗಾಬರಿಯಾದರು. ಮುಂಚೆಯೂ ಅವನಿಗೆ ರೀತಿ ಆಗುತ್ತಿತ್ತು, ಆದರೆ, ಇಷ್ಟು ತೀವ್ರವಾಗಿರಲಿಲ್ಲ. ತಾಯಿ ಪರಮದುಃಖಿತಳಾಗಿ ಕಣ್ಣೀರು ಸುರಿಸುತ್ತಾ ಗೋಳಾಡಲು ಪ್ರಾರಂಭಿಸಿದಳು. ಬಿಸಿಲಿನಿಂದ ತಪ್ಪಿಸಿಕೊಳ್ಳಲು ಮರದ ನೆರಳಿಗೆ ಹೋದರೆ ಮರವೇ ಮೇಲೆ ಬಿದ್ದಂತೆ ಎಂದು ಹೇಳಿಕೊಂಡು ದೊಡ್ಡದಾಗಿ ಅಳಲಾರಂಭಿಸಿದಳು. ಅವಳ ದುಃಖಾತಿರೇಕವನ್ನು ಕಂಡ ಬಾಬಾ, "ಅಮ್ಮಾ ಅಳಬೇಡ. ಸಹನೆಯಿಂದಿರು. ಇನ್ನೊಂದು ಅರ್ಧ ಗಂಟೆಯಲ್ಲಿ ನಿನ್ನ ಮಗನಿಗೆ ಎಲ್ಲವೂ ಸರಿಹೋಗುತ್ತದೆ. ಅವನನ್ನು ವಾಡಾಗೆ ಕರೆದುಕೊಂಡು ಹೋಗಿ ಮಲಗಿಸಿ" ಎಂದರು. ಅವರು ಹೇಳಿದಂತೆ ಮಾಡಿದ ಅರ್ಧ ಗಂಟೆಯಲ್ಲೇ, ಹುಡುಗ ನಿದ್ದೆಯಿಂದ ಎಚ್ಚರಗೊಂಡವನಂತೆ ಎದ್ದ. ಆರೋಗ್ಯವಂತನಾಗಿದ್ದ. ಅದನ್ನು ನೋಡಿದ ಪಿತಳೆ, ಅವನ ಹೆಂಡತಿ ಎಲ್ಲರಿಗೂ ಅತ್ಯಂತ ಸಂತೋಷವಾಯಿತು. ಅವರ ಸಂದೇಹಗಳೆಲ್ಲಾ ತೀರಿದವು.

ನಂತರ ಪಿತಳೆ ಮಸೀದಿಗೆ ಹೋಗಿ, ಬಾಬಾರ ಪಾದಗಳಿಗೆ ನಮಸ್ಕರಿಸಿ ಅವರ ಪಾದಗಳನ್ನು ನೀವುತ್ತಾ ಕುಳಿತರು. ಪಿತಳೆಯ ಮನಸ್ಸು ಬಾಬಾರಲ್ಲಿ ಕೃತಜ್ಞತೆಯಿಂದ ತುಂಬಿಹೋಗಿತ್ತು. ಆಗ ಬಾಬಾ ಹೇಳಿದರು, "ಈಗ ಮನಸ್ಸು ಶಾಂತವಾಯಿತೆ? ಯಾರಿಗೆ ಶ್ರದ್ಧೆ ಸಹನೆಗಳಿವೆಯೋ ಅವರನ್ನು ಶ್ರೀಹರಿ ಕಾಪಾಡುತ್ತಾನೆ." ಪಿತಳೆ ಶ್ರೀಮಂತರು. ಮಸೀದಿಯಲ್ಲಿ ಎಲ್ಲರಿಗೂ ಸಿಹಿ ಹಂಚಿ, ಬಾಬಾರಿಗೆ ಹಣ್ಣಿನ ಬುಟ್ಟಿಗಳು, ಬೀಡಾ ಎಲ್ಲವನ್ನೂ ಕೊಟ್ಟರು. ಆತನ ಹೆಂಡತಿ ಸರಳವಾದ ಹೆಂಗಸು. ದೈವ ಭೀರು. ಪ್ರೇಮಮಯಿ. ಆಕೆ ಮಸೀದಿಯಲ್ಲಿ ಕಂಬಕ್ಕೆ ಒರಗಿಕೊಂಡು ಕೂತು, ತದೇಕ ದೃಷ್ಟಿಯಿಂದ ಬಾಬಾರನ್ನೇ ನೋಡುತ್ತಾ, ಆನಂದ ಬಾಷ್ಪಗಳನ್ನು ಸುರಿಸುತ್ತಿದ್ದಳು. ಆಕೆಯ ದೃಷ್ಟಿಯಲ್ಲಿ ಬಾಬಾರನ್ನು ಬಿಟ್ಟರೆ ಬೇರೆ ಏನೂ ಇರಲಿಲ್ಲ. ಅಂತಹ ಭಕ್ತಿಯನ್ನು ಕಂಡರೆ ದೇವರಿಗೆ ಬಹಳ ಪ್ರೀತಿ. ಆಕೆಯನ್ನು ಹಾಗೆ ನೋಡಿದ ಬಾಬಾ, ತಾವೂ ಆಕೆಯನ್ನು ಅದೇ ರೀತಿಯಲ್ಲಿ ಕಂಡರು. ಮತ್ತೆ ನಾಲ್ಕಾರು ದಿನ ಶಿರಡಿಯಲ್ಲೇ ಕಳೆದು, ಪಿತಳೆ ಸಂಸಾರ ಹಿಂತಿರುಗಲು ಅಣಿಯಾಗಿ, ಮಸೀದಿಗೆ ಹೋಗಿ ಬಾಬಾರ ಆಪ್ಪಣೆ ಬೇಡಿದರು. ಉದಿಪ್ರಸಾದವನ್ನು ಪಡೆದು, ಇನ್ನೇನು ಹೊರಡಬೇಕು ಎಂದಿರುವಾಗ ಬಾಬಾ ಪಿತಳೆಯನ್ನು ಕರೆದು, "ಇದಕ್ಕೆ ಮುಂಚೆ ನಿನಗೆ ಎರಡು ರೂಪಾಯಿ ಕೊಟ್ಟಿದ್ದೇನೆ. ಮೂರು ರೂಪಾಯಿಯನ್ನೂ ತೆಗೆದುಕೋ. ನಿನ್ನ ಪೂಜಾ ಗೃಹದಲ್ಲಿಟ್ಟು ಪೂಜೆ ಮಾಡು" ಎಂದರು. ಪಿತಳೆ ಅದನ್ನು ತೆಗೆದುಕೊಂಡು, ಬಾಬಾರಿಗೆ ಮತ್ತೆ ನಮಸ್ಕಾರಮಾಡಿ ಸದಾ ನಮ್ಮನ್ನು ಹೀಗೇ ರಕ್ಷಿಸುತ್ತಿರಿ, ಎಂದು ಬೇಡಿಕೊಂಡು ಅಲ್ಲಿಂದ ಹೊರಟರು.

ಮಸೀದಿಯಿಂದ ಹೊರಕ್ಕೆ ಬಂದಮೇಲೆ ಪಿತಳೆಯ ಮನಸ್ಸು ಯೋಚನೆಯಲ್ಲಿ ಬಿತ್ತು. “ನಾನು ಶಿರಡಿಗೆ ಬರುತ್ತಿರುವುದು ಇದೇ ಮೊದಲನೆಯ ಸಲ. ಬಾಬಾರನ್ನು ಕಾಣುತ್ತಿರುವುದೂ ಮೊದಲನೆಯ ಸಲ. ಬಾಬಾ ಇದಕ್ಕೆ ಮೊದಲು ನಾನು ನಿನಗೆ ಎರಡು ರೂಪಾಯಿ ಕೊಟ್ಟಿದ್ದೇನೆ ಎಂದು ಹೇಳಿದುದರ ಅರ್ಥವೇನು?” ಎನ್ನುವ ಯೋಚನೆಯಲ್ಲೇ ಪ್ರಯಾಣ ಮುಗಿಯಿತು. ಮನೆಗೆ ಹೋದ ತಕ್ಷಣವೇ ತಮ್ಮ ವಯಸ್ಸಾದ ತಾಯಿಯನ್ನು ಕಂಡು, ಅವರಿಗೆ ಶಿರಡಿಯಲ್ಲಿ ನಡೆದಿದ್ದನ್ನೆಲ್ಲಾ ವಿವರವಾಗಿ ಹೇಳಿದರು. ಬಾಬಾ ತನಗೆ ಮುಂದೆ ಎರಡು ರೂಪಾಯಿ ಕೊಟ್ಟಿದ್ದೇನೆ ಎಂದು ಹೇಳಿದ್ದನ್ನೂ ತಿಳಿಸಿ, ನನಗೆ ಅದು ಹೇಗೆ ಎಂಬುದು ಇನ್ನೂ ಅರ್ಥವಾಗಿಲ್ಲ, ಎಂದೂ ಹೇಳಿದರು. ಆಕೆಗೂ ಅದೇನು ಎಂಬುದು ಮೊದಲು ಅರ್ಥವಾಗಲಿಲ್ಲ. ಒಂದೆರಡು ದಿನಗಳಾದ ಮೇಲೆ ಆಕೆಗೆ ಅದೇನು ಎಂದು ನೆನಪಿಗೆ ಬಂದು, ಮಗನನ್ನು ಕರೆದು, "ನೀನು ಈಗ ನಿನ್ನ ಮಗನನ್ನು ಕರೆದುಕೊಂಡು ಶಿರಡಿಗೆ ಹೋದಂತೆ, ನಿನ್ನ ತಂದೆ ಬಹಳ ಹಿಂದೆ ನಿನ್ನನ್ನು ಅಕ್ಕಲಕೋಟೆಗೆ ಮಹಾರಾಜರ ದರ್ಶನಕ್ಕೆ ಕರೆದುಕೊಂಡು ಹೋಗಿದ್ದರು. ಮಹಾರಾಜರೂ ಸಂಪೂರ್ಣ ಯೋಗಿ. ದಯಾಮೂರ್ತಿ. ನಿನ್ನ ತಂದೆ ಸಾತ್ವಿಕ ಭಕ್ತಿಪೂರ್ಣರು. ಅದರಿಂದಲೇ ಅವರನ್ನು ಮಹಾರಾಜರು ಅಂಗೀಕರಿಸಿದ್ದರು. ಅವರು ನಿನ್ನ ತಂದೆಯವರಿಗೆ ಎರಡು ರೂಪಾಯಿ ಕೊಟ್ಟು, ಅದನ್ನು ಪೂಜಾಮಂದಿರದಲ್ಲಿಟ್ಟು ಪೂಜೆಮಾಡಿಕೊಳ್ಳುವಂತೆ ಹೇಳಿದ್ದರು. ನಿಮ್ಮ ತಂದೆ ತಾವು ಬದುಕಿರುವವರೆಗೂ ಅದನ್ನು ಪೂಜಾಗೃಹದಲ್ಲಿಟ್ಟು ಪೂಜೆಮಾಡುತ್ತಿದ್ದರು. ಅವರು ಹೋದಮೇಲೆ ಪೂಜೆಪುನಸ್ಕಾರಗಳೆಲ್ಲ ನಿಂತುಹೋದವು. ರೂಪಾಯಿ ಬಿಲ್ಲೆಗಳೂ ಕಳೆದುಹೋದವು. ನೀನು ಬಹಳ ಅದೃಷ್ಟವಂತ. ಬಾಬಾ ರೂಪದಲ್ಲಿ ಮತ್ತೆ ಅಕ್ಕಲಕೋಟೆಯ ಮಹಾರಾಜರೇ, ನೀನು ಮಾಡಬೇಕಾದ ಕರ್ತವ್ಯವನ್ನು ನಿನ್ನ ನೆನಪಿಗೆ ತಂದುಕೊಟ್ಟಿದ್ದಾರೆ. ಪೂಜೆಪುನಸ್ಕಾರಗಳನ್ನು ಮತ್ತೆ ಆರಂಭಿಸು. ದುಷ್ಟಶಕ್ತಿಗಳ ನಿವಾರಣೆಯಾಗುತ್ತದೆ. ನಿನ್ನ ಸಂದೇಹಗಳು, ದುಷ್ಟ ಯೊಚನೆಗಳನ್ನೆಲ್ಲಾ ಬಿಟ್ಟು, ನಿನ್ನ ಕರ್ತವ್ಯವನ್ನು ಮಾಡು. ಸಂತರಲ್ಲಿ ಭಕ್ತಿ, ಶ್ರದ್ಧೆಗಳನ್ನು ಬೆಳೆಸಿಕೋ. ಹಿಂದಿನಿಂದ ಬಂದಿರುವ ನಿನ್ನ ಕುಲದೇವತೆಗಳ ಜೊತೆಗೆ ರೂಪಾಯಿಗಳನ್ನೂ ಇಟ್ಟು ದಿನವೂ ಪೂಜೆ ಮಾಡು. ಶಿರಡಿಯ ಸಾಯಿ ಸಮರ್ಥ ನಿನ್ನಲ್ಲಿ ಮತ್ತೆ ಭಕ್ತಿಬೀಜವನ್ನು ಹಾಕಿದ್ದಾರೆ. ಅದನ್ನು ಜತನವಾಗಿ ಬೆಳೆಸಿ ಅದರಿಂದ ಲಾಭಪಡೆ" ಎಂದು ಹೇಳಿದರು. ಆಕೆಯ ಮಾತುಗಳು ಆತನಿಗೆ ಅಮೃತದಂತೆ ತಂಪೆರೆದು, ತಡಮಾಡದೆ ಆಕೆ ಹೇಳಿದಂತೆ ಮಾಡಲುಪಕ್ರಮಿಸಿದರು. ಬಾಬಾ ತನ್ನನ್ನು ಇಷ್ಟುದಿನ ತಮ್ಮ ತೆಕ್ಕೆಯೊಳಗಿಟ್ಟುಕೊಂಡು ಕಾಪಾಡಿ, ತನ್ನ ಮಗನ ನೆವದಲ್ಲಿ ಶಿರಡಿಗೆ ಬರಮಾಡಿಕೊಂಡು ಆಶೀರ್ವದಿಸಿದರು ಎಂದು ಬಹಳ ಸಂತಸಪಟ್ಟರು. ಅಂದಿನಿಂದ ಮಹಾತ್ಮನಿಗೆ ಶರಣಾಗಿ ಅವರ ಅನನ್ಯ ಭಕ್ತರಾದರು.

ಗೋಪಾಲ ಅಂಬಾಡೇಕರ್ ಕಥೆ

ಪೂನಾದ ಗೋಪಾಲ ನಾರಾಯಣ ಅಂಬಾಡೇಕರ್, ಥಾಣಾ ಜಿಲ್ಲೆಯ ಅಬ್ಕಾರಿ ಇಲಾಖೆಯಲ್ಲಿ ಹತ್ತು ವರ್ಷ ಕೆಲಸ ಮಾಡಿದರು. ನಿವೃತ್ತರಾದಮೇಲೆ ಬೇರೆ ಕೆಲಸಗಳಿಗಾಗಿ ಪ್ರಯತ್ನ ಮಾಡಿದರೂ ಸಫಲವಾಗಲಿಲ್ಲ. ಒಂದಾದಮೇಲೊಂದು ಕಷ್ಟಗಳಿಗೀಡಾಗಿ, ಆತನಿಗೆ ಮನಸ್ವಾಸ್ಥ್ಯ ಕೆಟ್ಟುಹೋಯಿತು. ಇದೇ ರೀತಿಯಲ್ಲಿ ಏಳು ವರ್ಷ ಕಳೆಯಿತು. ಆತ ಬಾಬಾರಲ್ಲಿ ಅತ್ಯಂತ ಭಕ್ತಿಯನ್ನಿಟ್ಟಿದ್ದರಿಂದ, ಪ್ರತಿ ವರ್ಷ ತಪ್ಪದೆ ಶಿರಡಿಗೆ ಹೋಗಿ ಬಾಬಾರ ದರ್ಶನ ಮಾಡಿ ಬರುತ್ತಿದ್ದರು. ಹೋದಾಗಲೆಲ್ಲಾ ಬಾಬಾರಲ್ಲಿ ತನ್ನ ಕಷ್ಟ ಪರಿಸ್ಥಿತಿಯನ್ನು ಹೇಳಿಕೊಳ್ಳುತ್ತಿದ್ದರು. ೧೯೧೬ರಲ್ಲಿ ಆತನ ಪರಿಸ್ಥಿತಿ ಬಹಳ ಕೆಟ್ಟು ಹೋಗಿ, ಬಾಬಾ ಸನ್ನಿಧಿಯಲ್ಲಿ ಪ್ರಾಣ ಬಿಡುವುದೆಂದು ನಿಶ್ಚಯಿಸಿ, ತಮ್ಮ ಹೆಂಡತಿಯೊಡನೆ ಶಿರಡಿಗೆ ಹೋಗಿ ಎರಡು ತಿಂಗಳು ಕಳೆದರು. ಅದಾದಮೇಲೆ ಒಂದುದಿನ ರಾತ್ರಿ ದೀಕ್ಷಿತ್ ವಾಡಾ ಹತ್ತಿರದಲ್ಲಿದ್ದ ಭಾವಿಯಲ್ಲಿ ಬಿದ್ದು ಸಾಯಬೇಕೆಂದು ನಿರ್ಧರಿಸಿಕೊಂಡು, ವಾಡಾದ ಮುಂದೆ ಎತ್ತಿನ ಬಂಡಿಯೊಂದರಲ್ಲಿ ಕುಳಿತಿದ್ದರು. ಆದರೆ ಮನುಷ್ಯ ಯೋಚಿಸುವುದೊಂದು ದೇವರು ಮಾಡುವುದು ಇನ್ನೊಂದು. ರಾತ್ರಿಯಲ್ಲೂ, ಹತ್ತಿರದ ಉಪಹಾರಗೃಹದ ಮಾಲೀಕ ಸಗುಣ ಮೇರು ನಾಯಕ್ ಅಲ್ಲಿಗೆ ಬಂದರು. ಮಾತುಕಥೆಯಾಡುತ್ತಾ ಅವರು ಅಂಬಾಡೇಕರರನ್ನು, "ನೀನು ಅಕ್ಕಲಕೋಟ್ ಮಹಾರಾಜರ ಚರಿತ್ರೆಯನ್ನು ಓದಿದ್ದೀಯಾ? ಅದು ಎಲ್ಲರೂ ಓದಬೇಕಾದಂತಹ ಪುಸ್ತಕ" ಎಂದು ಹೇಳುತ್ತಾ ತಮ್ಮ ಕೈಲಿದ್ದ ಪುಸ್ತಕವನ್ನು ಅವರಿಗೆ ಕೊಟ್ಟು ಹೊರಟು ಹೋದರು. ಪುಸ್ತಕ ಅಂಬಾಡೇಕರರ ಜೀವನವನ್ನೇ ಬದಲಾಯಿಸಿತು. ಅವರು ವಾಡಾಕ್ಕೆ ಹಿಂತಿರುಗಿ ಪುಸ್ತಕವನ್ನು ಓದಲು ತೆರೆದರು. ತೆರೆದ ಪುಟದಲ್ಲಿ ಕಂಡ ಕಥೆ:

ಅಕ್ಕಲಕೋಟ್ ಮಹಾರಾಜರಿಗೆ ಅನೇಕ ಭಕ್ತರಿದ್ದರು. ಅವರಲ್ಲೊಬ್ಬ, ವಾಸಿಯಾಗದ ಖಾಯಿಲೆಯೊಂದರಿಂದ ಬಹಳ ನರಳುತ್ತಿದ್ದ. ನೋವು, ದುಃಖ ಅಸಹನೀಯವಾಗಿ ಅವನು ಆತ್ಮಹತ್ಯೆ ಮಾಡಿಕೊಳ್ಳಲು ನಿಶ್ಚಯಿಸಿ, ರಾತ್ರಿ ಯಾರೂ ಇಲ್ಲದ ಸಮಯ ನೋಡಿಕೊಂಡು, ಭಾವಿಯೊಳಕ್ಕೆ ಹಾರಿದ. ಯಾರೂ ಇಲ್ಲವೆಂದುಕೊಂಡವನಿಗೆ, ರಾತ್ರಿಯಲ್ಲೂ ಯಾರೋ ಒಬ್ಬರು ಬಂದು ಅವನನ್ನು ಭಾವಿಯಿಂದ ಈಚೆಗೆ ತೆಗೆದರು. ಕಣ್ಣುಬಿಟ್ಟಾಗ ಅವನು ಕಂಡದ್ದು, ಎದುರುಗಡೆ ನಿಂತಿದ್ದ ಅಕ್ಕಲಕೋಟ್ ಮಹಾರಾಜರನ್ನು. "ಪೂರ್ವಜನ್ಮಕೃತ ಫಲಗಳನ್ನು ಪೂರ್ಣವಾಗಿ ಅನುಭವಿಸಿ ಕಳೆಯಬೇಕು. ಹೀಗೆ ಸಾಯುವುದರಿಂದ, ಪೂರ್ಣವಾಗದೆ ಅದು ಬಾಕಿ ಉಳಿಯುತ್ತದೆ. ಅದನ್ನು ಅನುಭವಿಸಲು, ಮತ್ತೊಂದು ಜನ್ಮ ತಾಳಬೇಕು. ಹೇಗಾದರೂ ಅದನ್ನು ಪೂರ್ಣವಾಗಿ ಅನುಭವಿಸಿಯೇ ತೀರಿಸಬೇಕು. ಇದರಿಂದ ನೀನು ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಆದ್ದರಿಂದ ಈಗ ಹೀಗೆ ಸಾಯುವ ಬದಲು, ಇನ್ನೂ ಸ್ವಲ್ಪಕಾಲ ನೋವನ್ನು ಅನುಭವಿಸಿ ನಿನ್ನ ಕರ್ಮಫಲಗಳನ್ನು ತೀರಿಸಿಕೊಳ್ಳಬಾರದೇಕೆ? ದೇವರು ನಿಶ್ಚಯಿಸಿರುವತನಕ ಬದುಕು. ಹೀಗೆ ಪ್ರಾಣ ಕಳೆದುಕೊಳ್ಳಬೇಡ" ಎಂದು ಬುದ್ಧಿ ಹೇಳಿದರು.

ಕಥೆಯನ್ನು ಓದಿ ಅಂಬಾಡೇಕರರಿಗೆ ಆಶ್ಚರ್ಯವಾಯಿತು. ಸಕಾಲೀಕವಾದ ಅದು ತನಗೇ ಅನ್ವಯಿಸಿದಂತೆ ಕಂಡರು. ಪ್ರಸಂಗವೇ ಆಗದಿದ್ದರೆ, ತಾನು ಬಹುಶಃ ಹೊತ್ತಿಗೆ ಪ್ರಪಂಚದಲ್ಲೇ ಇರುತ್ತಿರಲಿಲ್ಲ. ರಾತ್ರಿಹೊತ್ತು ಯಾರೂ ಬರುವುದಿಲ್ಲ ಎಂಬ ನಂಬಿಕೆಯಿಂದ ತಾನು ಆತ್ಮಹತ್ಯೆ ಮಾಡಿಕೊಳ್ಳಲು ಬಂದರೆ, ಬಾಬಾ ಸಗುಣ ಮೇರು ನಾಯಕನ ರೂಪದಲ್ಲಿ ಬಂದು ತನ್ನನ್ನು ರಕ್ಷಿಸಿದರು. ಅಂಬಾಡೇಕರರಿಗೆ ಬಾಬಾರ ಸರ್ವವ್ಯಾಪಕತ್ವ, ಸರ್ವಜ್ಞತ್ವ, ಅವರಿಗೆ ಭಕ್ತರ ಮೇಲೆ ಇರುವ ಅನುಕಂಪ ಎಲ್ಲವೂ ಚೆನ್ನಾಗಿ ಅರ್ಥವಾಯಿತು. ಬಾಬಾರಲ್ಲಿ ಅವರಿಗೆ ಶ್ರದ್ಧಾಭಕ್ತಿಗಳು ಇನ್ನೂ ವೃದ್ಧಿಯಾಗಿ ಧೃಢವಾಯಿತು. ಅವರ ತಂದೆ ಅಕ್ಕಲಕೋಟ್ ಮಹಾರಾಜರ ಭಕ್ತರಾಗಿದ್ದರು. ಅಂಬಾಡೇಕರ್ ತಂದೆಯನ್ನನುಸರಿಸಿ ಅದನ್ನು ಮುಂದುವರೆಸುವಂತೆ ಬಾಬಾ ಮಾಡಿದರು. ಮಾರನೇ ದಿನ ಅವರಿಗೆ ಬಾಬಾರ ಆಶೀರ್ವಾದ ದೊರೆತು, ಅವರು ಬದಲಾದ ಮನುಷ್ಯರಾದರು. ಜ್ಯೋತಿಶ್ಶಾಸ್ತ್ರವನ್ನು ಓದಿ ಅದರಲ್ಲಿ ಪರಿಣತರಾಗಿ, ಸಾಕಷ್ಟು ಸಂಪಾದನೆ ಮಾಡುತ್ತಾ, ತಮ್ಮ ಶೇಷಜೀವನದಲ್ಲಿ ಸೌಖ್ಯವನ್ನು ಕಂಡುಕೊಂಡರು.

ಅಂತಹ ಕರುಣಾಮೂರ್ತಿ, ಸದ್ಗುರು ಸಾಯಿನಾಥ ಮಹಾರಾಜರಿಗೆ ಜೈಕಾರವನ್ನು ಹೇಳಿ ನಮ್ಮನ್ನು ಅನವರತ ಕಾಪಾಡುತ್ತಿರು ಎಂದು ಬೇಡಿಕೊಳ್ಳೋಣ.

ಇದರೊಂದಿಗೆ ಭಕ್ತ ಪಂತ, ಹರಿಶ್ಚಂದ್ರ ಪಿತಳೆ, ಗೋಪಾಲ ಅಂಬಾಡೇಕರ್, ಮತ್ತು ಇತರ ವಿಷಯಗಳನ್ನು ಕುರಿತು ಹೇಳುವ ಇಪ್ಪತ್ತಾರನೆಯ ಅಧ್ಯಾಯ ಮುಗಿಯಿತು. ಮುಂದಿನ ಅಧ್ಯಾಯದಲ್ಲಿ ಹೇಮಾಡ್ ಪಂತ್, ಭಾಗವತ, ವಿಷ್ಣು ಸಹಸ್ರನಾಮ, ಗೀತಾ ರಹಸ್ಯ ಮತ್ತು ಇತರ ವಿಷಯಗಳನ್ನು ಹೇಳುತ್ತಾರೆ.

||ಶ್ರೀ ಸದ್ಗುರು ಸಾಯಿನಾಥಾರ್ಪಣಮಸ್ತು||ಶುಭಂ ಭವತು||
||ಓಂ ಶಾಂತಿಃ ಶಾಂತಿಃ ಶಾಂತಿಃ||


Friday, December 30, 2011

||ಇಪ್ಪತ್ತೈದನೆಯ ಅಧ್ಯಾಯ||


||ಶ್ರೀ ಸಾಯಿ ಸಚ್ಚರಿತ್ರೆ||
||ಇಪ್ಪತ್ತೈದನೆಯ ಅಧ್ಯಾಯ||
||ಆಮ್ರಲೀಲೆ||
ಶ್ರೀ ಗಣೇಶಾಯ ನಮಃ ಶ್ರೀ ಸರಸ್ವತಯೇ ನಮಃ
ಶ್ರೀ ವೆಂಕಟೇಶಾಯ ನಮಃ ಶ್ರೀ ಸಾಯಿನಾಥಾಯ ನಮಃ
ಶ್ರೀ ಸದ್ಗುರುಭ್ಯೋನ್ನಮಃ

ಈ ಅಧ್ಯಾಯದಲ್ಲಿ ಹೇಮಾಡ್ ಪಂತ್, ಅಹಮದ್ ನಗರದ ದಾಮೂ ಅಣ್ಣಾ ಕಾಸಾರ್, ಮಾವಿನ ಹಣ್ಣಿನ ಲೀಲೆ ಮತ್ತು ಇತರ ವಿಷಯಗಳನ್ನು ಹೇಳುತ್ತಾರೆ

ಸದ್ಗುರು ಸಾಯಿಬಾಬಾ

ದಯಾ ಸ್ವರೂಪಿ, ಸದಾ ಸರ್ವದಾ ಭಕ್ತರ ಒಳಿತನ್ನೇ ಇಚ್ಚಿಸುವ ಶುಭಂಕರ, ಕರುಣಾ ಮೂರ್ತಿ, ಸಾಯಿ ಬಾಬಾ ದೇವರ ಅವತಾರವೇ! ಪೂರ್ಣ ಪರಬ್ರಹ್ಮ. ದಯಾನಿಧಿ. ಇಂತಹ ಅವತಾರ ಪುರುಷನಿಗೆ ಸಾಷ್ಟಾಂಗ ನಮಸ್ಕಾರ ಮಾಡಿ, ಅವರ ಅನುಗ್ರಹಕ್ಕೆ ಪಾತ್ರರಾಗೋಣ. ಶ್ರೀ ಸಚ್ಚಿದಾನಂದ ಸದ್ಗುರು ಸಾಯಿ ನಾಥ ಮಹಾರಾಜರಿಗೆ ಜಯವಾಗಲಿ. ಈ ಸಚ್ಚರಿತ್ರೆಯಲ್ಲಿ ಬಹಳಷ್ಟು ಸಲ ಈಗಾಗಲೇ ನೋಡಿದಂತೆ, ಭಕ್ತರ ಅಂತಿಮ ಆಸರೆ ಆ ಸಾಯಿಬಾಬಾರೇ! ದಯೆ, ಕರುಣೆ, ಅನುಕಂಪ, ಪ್ರೀತಿ ವಿಶ್ವಾಸಗಳಿಂದ ತುಂಬಿದವರು. ಅವರ ಅನುಗ್ರಹಕ್ಕೆ ಪಾತ್ರರಾಗಬೇಕಾದರೆ, ನಮ್ಮಲ್ಲಿ ಶ್ರದ್ಧಾಭಕ್ತಿಗಳು ಅನನ್ಯವಾಗಿ ಅನವರತವಾಗಿ ಇರಬೇಕು. ಬಾಬಾ ಲೀಲೆಗಳನ್ನು ಬರೆಯಬೇಕೆಂಬ ಕೋರಿಕೆ ಮನಸ್ಸಿಗೆ ಬಂದಕೂಡಲೇ, ಅದು ಭಕ್ತರ ಅನುಕೂಲಕ್ಕಾಗಿ ಎಂಬುದನ್ನು ಅರಿತ ಬಾಬಾ, ಆ ಕೋರಿಕೆಯನ್ನು ತೀರಿಸಿ, ಹೇಮಾಡ್ ಪಂತರಿಗೆ ಧೈರ್ಯಸ್ಥೈರ್ಯಗಳನ್ನು ನೀಡಿ, ಅವರ ಕೈಯಲ್ಲಿ ಸಚ್ಚರಿತ್ರೆ ಬರೆಸಿದರು. ಅವರಿಂದ ಪ್ರೇರಿತರಾದ ಹೇಮಾಡ್ ಪಂತರ ಲೇಖನಿಯಿಂದ ಸುಲಲಿತವಾಗಿ ಶಬ್ದಗಳು ಪುಂಖಾನುಪುಂಖವಾಗಿ ಹೊರಟು ಈ ಅಮೃತಭಾಂಡಾರ ಈಚೆಗೆ ಬಂತು. ಯಾರು ಎಷ್ಟು ಬೇಕಾದರೂ ಈ ಭಾಂಡಾರದಿಂದ ತಮಗೆ ಇಷ್ಟಬಂದಂತೆ ತೆಗೆದುಕೊಳ್ಳಬಹುದು. ಅದು ಯಾವಾಗಲೂ ತುಂಬಿಯೇ ಇರುತ್ತದೆ.

ಅಂತಹ ಲೀಲಾಮಾನುಷರೂಪಿ ಸಚ್ಚಿದಾನಂದ ಸದ್ಗುರು ಸಾಯಿಬಾಬಾ ತನ್ನಲ್ಲಿ ಶರಣಾಗತರಾದ ಭಕ್ತರನ್ನು ತನ್ನ ತೆಕ್ಕೆಯಲ್ಲಿಟ್ಟುಕೊಂಡು ಹೇಗೆ ಕಾಪಾಡಿದರು ಎಂಬುದನ್ನು ನೋಡೋಣ.

ದಾಮೂ ಅಣ್ಣಾ ಕಥೆ

ದಾಮೂ ಅಣ್ಣಾರ ಪೂರ್ತಿ ಹೆಸರು ದಾಮೋದರ ಸಾವಲರಾಮ ರಾಸ್ನೆ ಕಾಸಾರ್ ಎಂದು. ಅಹಮದ್ ನಗರಕ್ಕೆ ಸೇರಿದವರು. ನಂತರ ಪೂನಾಗೆ ಹೋಗಿ ಅಲ್ಲಿ ನೆಲೆಸಿದರು. ಅಧ್ಯಾಯ ಆರರಲ್ಲಿ, ಅವರ ಪರಿಚಯ ನಮಗೆ ಈಗಾಗಲೇ ಆಗಿದೆ. ರಾಮನವಮಿಯ ಸಂದರ್ಭದಲ್ಲಿ ಅವರು ಶಿರಡಿಗೆ ಹೋಗಿ ಬಾಬಾರ ನಿಷ್ಠಾವಂತ ಭಕ್ತರಾದರು. ಅವರಿಗೆ ಮೂರು ಮದುವೆಯಾದರೂ ಮಕ್ಕಳಾಗಲಿಲ್ಲ. ಬಾಬಾರ ಆಶೀರ್ವಾದದಿಂದ ಒಬ್ಬ ಮಗ ಹುಟ್ಟಿದ. ೧೮೯೭ರಿಂದ ಅವರು ಪ್ರತಿ ವರ್ಷ ರಾಮನವಮಿಯ ಅಂಗವಾಗಿ ನಡೆಯುವ ಝಾಂಡಾ ಉತ್ಸವಕ್ಕೆ, ಒಂದು ಅಲಂಕಾರಭರಿತ ಝಂಡಾ ಕೊಡುತ್ತಿದ್ದರು. ಅಂದು ಅವರು ಅನ್ನದಾನದ ವ್ಯವಸ್ಥೆಯನ್ನೂ ಮಾಡುತ್ತಿದ್ದರು.

ಒಂದುಸಲ ಅವರ ಸ್ನೇಹಿತನೊಬ್ಬ, ಹತ್ತಿಯ ದಲಾಲಿ ವ್ಯಾಪಾರದಲ್ಲಿ ಭಾಗಸ್ವಾಮಿಯಾಗಬೇಕೆಂದೂ, ಅದರಲ್ಲಿ ಎರಡು ಲಕ್ಷಗಳ ಲಾಭ ಇದೆಯೆಂದೂ ಕಾಗದ ಬರೆದ. ಯಾವುದೇ ರೀತಿಯಲ್ಲೂ ನಷ್ಟ ಆಗಲಾರದು, ಇದೊಂದು ಒಳ್ಳೆಯ ಅವಕಾಶ, ಕಳೆದುಕೊಳ್ಳಬಾರದು, ಎಂದೂ ಅದರಲ್ಲಿ ಹೇಳಿದ್ದ. ಆದರೆ, ಹೂಡಿಕೆ ಹಣ ಬಹಳವಾಗಿದ್ದುದರಿಂದ, ದಾಮೂ ಅಣ್ಣಾ ಯಾವ ನಿರ್ಧಾರಕ್ಕೂ ಬರಲಾಗದೆ, ತಾನು ಬಾಬಾರ ಭಕ್ತನಾದದ್ದರಿಂದ, ಅವರ ಸಲಹೆ ಪಡೆದು ಅದರಂತೆ ನಡೆಯಬೇಕೆಂದು ನಿರ್ಧರಿಸಿಕೊಂಡರು. ಅದರಂತೆ, ಶ್ಯಾಮಾರಿಗೆ ಒಂದು ದೀರ್ಘ ಪತ್ರ ಬರೆದು, ಬಾಬಾರ ಸಲಹೆಯನ್ನು ಕೇಳಿ ತಿಳಿಸುವಂತೆ ಕೇಳಿಕೊಂಡರು. ಶ್ಯಾಮಾ ಆ ಕಾಗದವನ್ನು ಓದಿ, ಕಾಗದದೊಡನೆ ಮಸೀದಿಗೆ ಹೋದರು. ಬಾಬಾ ಅವರನ್ನು, "ಶ್ಯಾಮ್ಯಾ, ಬಾ, ಏನು ಸಮಾಚಾರ? ಕಾಗದದಲ್ಲಿ ಬರೆದಿರುವುದೇನು?" ಎಂದು ಕೇಳಿದರು. ಶ್ಯಾಮಾ ದಾಮೂ ಅಣ್ಣಾ ಯಾವುದೋ ವ್ಯವಹಾರದ ಬಗ್ಗೆ ನಿಮ್ಮ ಸಲಹೆ ಕೇಳಿ ಬರೆದಿದ್ದಾರೆ ಎಂದರು. ಅದಕ್ಕೆ ಬಾಬಾ ಹೇಳಿದರು, "ಅವನಿಗೆ ದೇವರು ಕೊಟ್ಟಿರುವದರಲ್ಲಿ ತೃಪ್ತಿಯಿಲ್ಲ. ಆಕಾಶಕ್ಕೆ ಏಣಿ ಹಾಕಬೇಕೆಂದಿದ್ದಾನೆ. ಹುಂ, ಇರಲಿ. ಓದು, ಅವನೇನು ಬರೆದಿದ್ದಾನೋ ನೋಡೋಣ." ಶ್ಯಾಮಾ ಚಕಿತರಾಗಿ, "ಹೌದು. ಕಾಗದವೂ ನೀವು ಹೇಳಿದ್ದನ್ನೇ ಹೇಳುತ್ತದೆ. ದೇವಾ, ಇಲ್ಲಿ ನೀವು ಶಾಂತ ಮನಸ್ಕರಾಗಿ ಕುಳಿತು, ಬೇರೆಲ್ಲೋ ಭಕ್ತರ ಮನಸ್ಸಿನಲ್ಲಿ ಆಂದೋಳನ ಎಬ್ಬಿಸಿ, ಅವರನ್ನು ಇಲ್ಲಿಗೆ ಎಳೆದು ತರುತ್ತೀರಿ" ಎಂದರು. ಅದಕ್ಕೆ ಬಾಬಾ, "ಶ್ಯಾಮ್ಯಾ, ದಯವಿಟ್ಟು ಕಾಗದ ಓದು. ನಾನೊಬ್ಬ ಮುದುಕ. ಏನೋ ಬಾಯಿಗೆ ಬಂದದ್ದು ಮಾತನಾಡುತ್ತೇನೆ. ನನ್ನ ಮಾತನ್ನು ಯಾರು ಕೇಳುತ್ತಾರೆ" ಎಂದರು.

ಶ್ಯಾಮಾ ಕಾಗದ ಓದಿದಮೇಲೆ, ಬಾಬಾ ಕಳಕಳಿಯಿಂದ ಹೇಳಿದರು, "ಸೇಠ್ ಹುಚ್ಚನಾಗಿದ್ದಾನೆ. ಮನೆಯಲ್ಲಿ ಅವನಿಗೆ ಯಾವುದಕ್ಕೂ ಕೊರತೆಯಿಲ್ಲ. ‘ಇರುವುದರಲ್ಲಿ ತೃಪ್ತಿಯಿಂದ ಇರು. ಲಕ್ಷಗಳಿಗೋಸ್ಕರ ಒದ್ದಾಡಬೇಡ. ಆತುರಪಡಬೇಡ’ ಎಂದು ಅವನಿಗೆ ಬರೆ" ಎಂದರು. ಬಾಬಾ ಹೇಳಿದ್ದನ್ನು ಶ್ಯಾಮ ಕಾಗದದ ಮೂಲಕ ದಾಮೂ ಅಣ್ಣಾಗೆ ತಿಳಿಸಿದರು. ಕಾಗದವನ್ನು ಓದಿದ ದಾಮೂ ಅಣ್ಣಾ ನಿರಾಶೆಯಿಂದ, ತಾನು ಗಳಿಸಬೇಕೆಂದಿದ್ದ ಎರಡು ಲಕ್ಷ ರೂಪಾಯಿ ಯೋಚನೆ ತಲೆಕೆಳಗಾಯಿತು, ಎಂದು ದುಃಖಪಟ್ಟರು. ಮತ್ತೆ ಯೋಚನೆ ಮಾಡಿ, ಶ್ಯಾಮಾ ಕಾಗದದಲ್ಲಿ ಸೂಚಿಸಿದ್ದಂತೆ, ತಾವೇ ಶಿರಡಿಗೆ ಹೋಗಿ ಬಾಬಾರನ್ನು ಕಂಡು ನೇರವಾಗಿ ಮಾತನಾಡಬೇಕೆಂದು ನಿಶ್ಚಯಿಸಿದರು. ತಕ್ಷಣವೇ ಶಿರಡಿಗೆ ಹೋಗಿ ಬಾಬಾರನ್ನು ಕಂಡು ಅವರಿಗೆ ನಮಸ್ಕಾರಮಾಡಿ ಪಾದಗಳನ್ನು ನೀವುತ್ತಾ ಕುಳಿತರು.

ಅವರಿಗೆ ಬಾಬಾರ ಹತ್ತಿರ ನೇರವಾಗಿ ಮಾತನಾಡುವ ಧೈರ್ಯವಿರಲಿಲ್ಲ. ಅದರ ಬದಲು ಅವರು ಮನಸ್ಸಿನಲ್ಲೇ, "ಬಾಬಾ ನೀವು ನನ್ನ ಈ ವ್ಯವಹಾರಕ್ಕೆ ಒಪ್ಪಿಗೆ ಕೊಟ್ಟರೆ, ಅದರಲ್ಲಿ ಬರುವ ಲಾಭದಲ್ಲಿ ನಿಮಗೂ ಪಾಲು ಕೊಡುತ್ತೇನೆ" ಎಂದು ಹೇಳಿಕೊಂಡರು. ಬಾಬಾ ಸರ್ವಜ್ಞರಲ್ಲವೇ? ಇತರರ ಮನಸ್ಸನ್ನು ಓದಬಲ್ಲ ಅವರು, ದಾಮೂ ಅಣ್ಣಾ ತನ್ನ ಯೋಚನೆಯನ್ನು ಮುಗಿಸುತ್ತಿದ್ದ ಹಾಗೇ, ಅವರಿಗೆ ಹೇಳಿದರು, "ದಾಮ್ಯಾ, ನಾನು ಈ ಪ್ರಾಪಂಚಿಕ ವ್ಯವಹಾರಗಳಲ್ಲಿ ಕೈಹಾಕಲು ಇಷ್ಟಪಡುವುದಿಲ್ಲ." ಅವರ ಮಾತನ್ನು ಅರ್ಥಮಾಡಿಕೊಂಡ ದಾಮೂ ಅಣ್ಣಾ, ಆ ವ್ಯವಹಾರದ ಯೋಚನೆಯನ್ನೇ ಕೈಬಿಟ್ಟರು.

ಧಾನ್ಯ ವ್ಯವಹಾರ

ಇನ್ನೊಮ್ಮೆ ದಾಮೂ ಅಣ್ಣಾ ಧಾನ್ಯಗಳ ವ್ಯವಹಾರ ಮಾಡಬೇಕೆಂದುಕೊಂಡರು. ಬಾಬಾ ಅವರ ಯೋಚನೆಯನ್ನು ತಿಳಿದು, ಅವರಿಗೆ ಹೇಳಿದರು, "ನೀನು ರೂಪಾಯಿಗೆ ಐದು ಸೇರಿನಂತೆ ಕೊಂಡು ಏಳು ಸೇರಿನಂತೆ ಮಾರಬೇಕಾಗುತ್ತದೆ." ಅದರಿಂದ, ದಾಮೂ ಅಣ್ಣಾ ಅ ವ್ಯವಹಾರವನ್ನೂ ಕೈಬಿಟ್ಟರು. ಮೊದ ಮೊದಲು ಧಾನ್ಯಗಳ ಬೆಲೆ ಹೆಚ್ಚಾಗಿದ್ದು, ಲಾಭವೂ ಚೆನ್ನಾಗಿಯೇ ಇದ್ದು, ಬಾಬಾರ ಮಾತುಗಳು ಸುಳ್ಳಾಗುತ್ತವೆಯೇನೋ ಎಂಬಂತೆಯೇ ಇತ್ತು. ಸ್ವಲ್ಪಕಾಲದ ನಂತರ ಅತಿವೃಷ್ಟಿಯಾಗಿ, ಧಾನ್ಯಗಳ ಬೆಲೆಗಳು ಕುಸಿದವು. ಧಾನ್ಯ ಕೂಡಿಸಿಟ್ಟವರಿಗೆಲ್ಲಾ ಅಪಾರವಾದ ನಷ್ಟವಾಯಿತು. ಮುಂಚಿನ ಹತ್ತಿಯ ವ್ಯವಹಾರದಲ್ಲೂ, ಇನ್ನೊಬ್ಬರೊಡನೆ ವ್ಯವಹಾರ ಕುದುರಿಕೊಂಡಿಸಿದ್ದ ದಾಮೂ ಅಣ್ಣಾ ಸ್ನೇಹಿತನೂ, ಬಹಳ ನಷ್ಟಕ್ಕೀಡಾದನು. ಇದನ್ನು ನೋಡಿದ ದಾಮೂ ಅಣ್ಣಾರಿಗೆ, ಬಾಬಾರಲ್ಲಿ ಶ್ರದ್ಧಾ ಭಕ್ತಿಗಳು ಅಪಾರವಾಗಿ ವೃದ್ಧಿಯಾದವು.

ಆಮ್ರ ಲೀಲೆ

ರಾಳೆ ಎಂಬುವ ಮಾಮಲತದಾರರೊಬ್ಬರು ಗೋವಾದಿಂದ ಒಳ್ಳೆಯ ೩೦೦ ಮಾವಿನ ಹಣ್ಣುಗಳನ್ನು ಬಾಬಾರಿಗೆಂದು, ಶ್ಯಾಮಾ ಹೆಸರಿನಲ್ಲಿ ಕಳುಹಿಸಿದ್ದರು. ಶ್ಯಾಮ ಕೋಪರಗಾಂವ್‍ನಿಂದ ಆ ಹಣ್ಣುಗಳನ್ನು ತಂದು ಬಾಬಾರಿಗೆ ಅರ್ಪಿಸಿದರು. ಬಾಬಾ ಪ್ಯಾಕೆಟ್ ಬಿಚ್ಚಿ ಹಣ್ಣುಗಳನ್ನು ಈಚೆಗೆ ತೆಗೆದು, ಅದರಲ್ಲಿ ನಾಲ್ಕು ಹಣ್ಣುಗಳನ್ನು ಮಾತ್ರ ಇಟ್ಟುಕೊಂಡು, "ಈ ಹಣ್ಣುಗಳು ಇಲ್ಲೇ ಇರಲಿ. ಅವು ದಾಮ್ಯಾನಿಗೆ" ಎಂದು ಹೇಳಿ, ಮಿಕ್ಕದ್ದನ್ನು ಎಲ್ಲರಿಗೂ ಹಂಚಲು ಶ್ಯಾಮಾರಿಗೆ ಹೇಳಿದರು. ದಾಮೂ ಅಣ್ಣಾಗೆ ಮೂರುಜನ ಹೆಂಡತಿಯರಿದ್ದರೂ ಮಕ್ಕಳಾಗಿರಲಿಲ್ಲ. ಅನೇಕ ಜ್ಯೋತಿಷ್ಕರನ್ನು ಕೇಳಿದರೂ, ಗ್ರಹಗತಿಗಳು ಸರಿಯಿಲ್ಲದಿರುವುದರಿಂದ ಅವರಿಗೆ ಮಕ್ಕಳಾಗುವ ಯೋಗವಿಲ್ಲ, ಎಂದು ಎಲ್ಲರೂ ಹೇಳಿದ್ದರು. ಸಂತಾನಕ್ಕಾಗಿ ಅವರ ಮನಸ್ಸು ತುಡಿಯುತ್ತಿತ್ತು. ಆದರೂ ಆತ ಅದನ್ನು ಹೊರಗೆ ತೋರಿಸಿಕೊಳ್ಳುತ್ತಿರಲಿಲ್ಲ. ಬಾಬಾರನ್ನೂ ಆತ ಸಂತಾನಕ್ಕೋಸ್ಕರ ಬೇಡಲಿಲ್ಲ. ಮಾವಿನ ಹಣ್ಣುಗಳು ಬಂದ ದಿನ, ದಾಮೂ ಅಣ್ಣಾ ಬಾಬಾರ ದರ್ಶನಕ್ಕೆ ಮಸೀದಿಗೆ ಹೋದರು. ಎಂದಿನಂತೆ ನಮಸ್ಕಾರ ಮಾಡಿ ಪಾದ ಸೇವೆ ಮಾಡುತ್ತಾ ಕುಳಿತರು. ಬಾಬಾ ಅವರ ಕಡೆ ಪ್ರೀತಿಯಿಂದ ನೋಡುತ್ತಾ, "ಎಲ್ಲರೂ ಈ ಮಾವಿನ ಹಣ್ಣುಗಳನ್ನು ತಮಗೆ ಕೊಡಲು ಕೇಳುತ್ತಿದ್ದಾರೆ. ಆದರೆ ಅವು ದಾಮ್ಯಾನಿಗೆ ಸೇರಿದ್ದು. ಅವು ಯಾರಿಗೆ ಸೇರಿದ್ದೋ ಅವರೇ ಅವನ್ನು ತಿಂದು ಸಾಯಲಿ" ಎಂದರು. ಅದನ್ನು ಕೇಳಿದ ದಾಮೂ ಅಣ್ಣಾಗೆ ಆಘಾತವಾಯಿತು. ಬಾಬಾ ತನ್ನನ್ನು ಅಂತಹ ಪರೀಕ್ಷೆಗೆ ಒಡ್ಡುತ್ತಾರೆಂದು ಆತ ಎಂದೂ ಯೋಚಿಸಿರಲಿಲ್ಲ. ಆಗ ಹತ್ತಿರದಲ್ಲೇ ಕುಳಿತಿದ್ದ ಮಹಲ್ಸಾಪತಿ, ಸಾವು ಎಂದರೆ ಅದು ಅವನ ಅಹಂಕಾರದ ಸಾವೇ ಹೊರತು ಅವನ ದೇಹದ ಸಾವಲ್ಲ ಎಂದು ವಿಶದೀಕರಿಸಿದರು. ಬಾಬಾರ ಬಳಿ ಕುಳಿತಾಗ ಆಗುವ ಅಹಂಕಾರದ ಸಾವು ಬಹಳ ಒಳ್ಳೆಯದೇ ಎಂದೂ ಹೇಳಿದರು. ಈ ಸಾಂತ್ವನದ ಮಾತುಗಳನ್ನು ಕೇಳಿದ ದಾಮೂ ಅಣ್ಣಾ, ಹಣ್ಣುಗಳನ್ನು ತೆಗೆದು ತಿನ್ನಲು ಹೊರಟರು. ಅಷ್ಟರಲ್ಲಿ ಬಾಬಾ ಅವರನ್ನು ತಡೆದು, "ಅವನ್ನು ನೀನು ತಿನ್ನಬೇಡ. ನಿನ್ನ ಚಿಕ್ಕ ಹೆಂಡತಿಗೆ ಕೊಡು. ಈ ಆಮ್ರಲೀಲೆ ಅವಳಿಗೆ ನಾಲ್ಕು ಗಂಡು, ನಾಲ್ಕು ಹೆಣ್ಣು ಮಕ್ಕಳನ್ನು ಕೊಡುತ್ತದೆ" ಎಂದು ಹೇಳಿದರು. ಬಾಬಾ ಹೇಳಿದಂತೆ ಮಾಡಿದ ದಾಮೂ ಅಣ್ಣಾಗೆ, ಕಾಲಾನುಕ್ರಮದಲ್ಲಿ ಬಾಬಾ ಹೇಳಿದಂತೆ ಮಕ್ಕಳಾದವು. ಜ್ಯೋತಿಷ್ಕರ ಮಾತುಗಳು ಸುಳ್ಳಾದವು.

ದಾಮೂ ಅಣ್ಣಾ ಶ್ರೀ ಬಿ.ವಿ. ನರಸಿಂಹ ಸ್ವಾಮಿಯವರ ಭೇಟಿಯಲ್ಲಿ ಹೀಗೆ ಹೇಳಿದ್ದಾರೆ:

“ಒಂದುಸಲ ನಾನು ಅವರ ಪಾದಗಳ ಬಳಿ ಕುಳಿತಿದ್ದಾಗ ನನ್ನ ಮನಸ್ಸಿನಲ್ಲಿ ಎರಡು ಪ್ರಶ್ನೆಗಳೆದ್ದವು.

೧. ಇಷ್ಟೊಂದು ಜನ ಇಲ್ಲಿ ಸೇರಿದ್ದಾರೆ. ಅವರೆಲ್ಲರೂ ಬಾಬಾರಿಂದ ಲಾಭ ಪಡೆಯುತ್ತಾರೇನು?

ಅದಕ್ಕೆ ಬಾಬಾ, "ಅಲ್ಲಿರುವ ಮಾವಿನ ಮರವನ್ನು ನೋಡು. ಅದರಲ್ಲಿ ಹೇಗೆ ಹೂವುಗಳು ತುಂಬಿವೆ. ಆ ಹೂವುಗಳೆಲ್ಲಾ ಹಣ್ಣುಗಳಾದರೆ ಎಷ್ಟು ಚೆನ್ನ ಅಲ್ಲವೇ? ಆದರೆ ಅದು ಹಾಗಾಗುವುದೇನು? ಬಹಳಷ್ಟು ಹೂವುಗಳು ಉದುರಿಹೋಗುತ್ತವೆ. ಕೆಲವು ಮಾತ್ರವೇ ಉಳಿದು ಹಣ್ಣಾಗುತ್ತವೆ" ಎಂದು ಹೇಳಿದರು.

೨. ಇದು ನನ್ನ ಸ್ವಂತ ವಿಷಯವಾಗಿ ಕೇಳಿದ ಪ್ರಶ್ನೆ - ಅಕಸ್ಮಾತ್ ಬಾಬಾ ಇಲ್ಲದೇ ಹೋದರೆ ನನ್ನ ಗತಿಯೇನು? ನಾನೇನು ಮಾಡಬೇಕು?

ಅದಕ್ಕೆ ಬಾಬಾ ಹೇಳಿದರು, " ನೀನು ಎಲ್ಲಿ ಯಾವಾಗ ನೆನಸಿಕೊಂಡರೆ, ಆಗ ಅಲ್ಲಿ ನಾನು ನಿನ್ನ ಜೊತೆಯಲ್ಲಿ ಇರುತ್ತೇನೆ." ಆ ಮಾತನ್ನು ಅವರು ಸಮಾಧಿಯಾಗುವವರೆಗೂ ನಿಲ್ಲಿಸಿಕೊಂಡರು. ಸಮಾಧಿಯಾದ ಮೇಲೂ, ಅದನ್ನು ನಿಲ್ಲಿಸಿಕೊಂಡಿದ್ದಾರೆ. ಈಗಲೂ ನನ್ನೊಡನೆ ಇರುತ್ತಾ, ನನಗೆ ಮಾರ್ಗದರ್ಶಿಯಾಗಿದ್ದಾರೆ. ೧೯೧೦-೧೯೧೧ರಲ್ಲಿ ನನ್ನ ಸಹೋದರರೆಲ್ಲಾ ನನ್ನಿಂದ ಬೇರೆ ಹೋದಾಗ, ನನ್ನ ಸಹೋದರಿ ಸತ್ತುಹೋದಾಗ, ನನ್ನ ಮನೆಯಲ್ಲಿ ಕಳ್ಳತನವಾಗಿ ಪೋಲೀಸ್ ತನಿಖೆಯಾದಾಗ, ನನ್ನ ಮನಸ್ಸು ಬಹಳ ಆಂದೋಳನಕ್ಕೀಡಾಗಿತ್ತು.

ಮನಸ್ಸು ಬಹಳ ದುಃಖದಿಂದ ತುಂಬಿ, ನನಗೆ ಜೀವನವೇ ಸಾಕೆನಿಸಿತ್ತು. ಆಗ ಬಾಬಾರ ಬಳಿಗೆ ಹೋದಾಗ, ಅವರು ನನಗೆ ಉಪದೇಶ ಕೊಟ್ಟು, ಸಾಂತ್ವನದ ಮಾತುಗಳನ್ನು ಹೇಳಿ, ನನಗೆ ಅಪ್ಪಾ ಕುಲಕರ್ಣಿ ಮನೆಯಲ್ಲಿ ಹೋಳಿಗೆ ಊಟ ಮಾಡಿಸಿದರು. ಅದಾದಮೇಲೆ, ನನ್ನ ಮನೆಯಲ್ಲಿ ಕಳ್ಳತನವಾಯಿತು. ಮುವ್ವತ್ತು ವರ್ಷಗಳಿಂದ ನನ್ನ ಸ್ನೇಹಿತನಾಗಿದ್ದವನೊಬ್ಬ, ನನ್ನ ಹೆಂಡತಿಯ ಆಭರಣಗಳನ್ನು, ಅವಳ ಮೂಗು ಬಟ್ಟೂ ಸೇರಿದಂತೆ, ಕದ್ದುಕೊಂಡು ಹೋದ. ನಾನು ಬಾಬಾ ಫೋಟೋ ಮುಂದೆ ನಿಂತು ಅತ್ತುಕೊಂಡೆ. ಮರುದಿನವೇ ಆ ಸ್ನೇಹಿತ ಕದ್ದುಕೊಂಡುಹೋಗಿದ್ದ ಆಭರಣಗಳನ್ನೆಲ್ಲಾ ವಾಪಸ್ಸು ತಂದುಕೊಟ್ಟು, ಕ್ಷಮೆ ಬೇಡಿದ.”

ಬಾಬಾರ ಭರವಸೆಗಳು

ಬಾಬಾ ಮನುಷ್ಯ ರೂಪದಲ್ಲಿದ್ದಾಗ ಅವರ ಮಾತುಗಳು ಎಷ್ಟು ಪರಿಣಾಮಕಾರಿಯಾಗಿದ್ದವೋ, ಈಗಲೂ ಅಷ್ಟೇ ಪರಿಣಾಮಕಾರಿಯಾಗಿವೆ. ಅವರು ಹೇಳಿದ ಮಾತುಗಳು, "ನನ್ನನ್ನು ನಂಬಿ. ನಾನು ನಿಮ್ಮೆದುರಿಗಿರದಿದ್ದರೂ, ನನ್ನ ಸಮಾಧಿಯಲ್ಲಿರುವ ಮೂಳೆಗಳು ನಿಮ್ಮೊಂದಿಗೆ ಮಾತನಾಡುತ್ತವೆ. ನಾನು ಮಾತ್ರವಲ್ಲ, ನನ್ನ ಸಮಾಧಿಯೂ ನನ್ನಲ್ಲಿ ಶರಣುಬಂದವರನ್ನು ಮಾತನಾಡಿಸುತ್ತದೆ. ನಾನು ನಿಮ್ಮೊಡನೆ ಇಲ್ಲವೆಂದು ಚಿಂತೆಮಾಡಬೇಡಿ. ನನ್ನ ಮೂಳೆಗಳು ನಿಮಗೆ ರಕ್ಷಣೆ ಕೊಡುತ್ತವೆ. ನನ್ನನ್ನು ನಂಬಿ ನನ್ನನ್ನು ಯಾವಾಗಲೂ ನೆನಸುತ್ತಿರಿ. ನಿಮಗೆ ಅದು ಲಾಭದಾಯಕವಾಗುವುದು."

ಪ್ರಾರ್ಥನೆ

ಸಾಯಿ ಸದ್ಗುರು, ಭಕ್ತರ ಕಾಮಧೇನು, ಕಲ್ಪವೃಕ್ಷ, ನಮ್ಮ ಪ್ರಾರ್ಥನಾ ಮೊರೆಯನ್ನು ಕೇಳು. ನಿನ್ನ ಪಾದಾರವಿಂದಗಳನ್ನು, ನಾವು ಎಂದೂ ಮರೆಯದಂತೆ ಮಾಡು. ನಮ್ಮನ್ನು ಈ ಜನನ ಮರಣ ಚಕ್ರಭ್ರಮಣೆಯಿಂದ ಬಿಡಿಸು. ನಮ್ಮ ಇಂದ್ರಿಯಗಳು ಹೊರಗೆ ಹೋಗುವುದನ್ನು ತಪ್ಪಿಸಿ, ಒಳಕ್ಕೆ ತಿರುಗುವಂತೆ ಮಾಡು. ಹೆಂಡತಿ, ಮಕ್ಕಳು, ಸ್ನೇಹಿತರು ಯಾರೂ ನಮ್ಮ ಅಂತ್ಯಕಾಲದಲ್ಲಿ ಸಹಾಯಕ್ಕೆ ಬರಲಾರರು. ನೀನೊಬ್ಬನೇ ನಮಗೆ ಭುಕ್ತಿ, ಮುಕ್ತಿ, ಆನಂದಗಳನ್ನು ನೀಡಬಲ್ಲವನು. ನಮ್ಮ ಬಾಯಿ ಸದಾ ನಿನ್ನ ನಾಮವನ್ನು ಹೇಳುತ್ತಿರಲಿ. ನಾಲಗೆ ಸದಾ ನಿನ್ನ ನಾಮಾಮೃತದ ರುಚಿಯನ್ನು ಚಪ್ಪರಿಸುತ್ತಿರಲಿ. ಕಣ್ಣುಗಳು ಸದಾ ನಿನ್ನ ಸಗುಣ ರೂಪವನ್ನು ಕಾಣುತ್ತಿರಲಿ. ನಮ್ಮನ್ನು ಯೋಚನಾರಹಿತರನ್ನಾಗಿಸು. ಅಹಂಕಾರವನ್ನು ತೊಡೆದುಹಾಕಿ, ದೇಹಾಭಿಮಾನವನ್ನು ಬಿಡಿಸಿ, ನಮ್ಮನ್ನು ನಿನ್ನಲ್ಲಿ ಸೇರಿಸಿಕೋ. ನಿನ್ನ ನಾಮ ಒಂದನ್ನು ಬಿಟ್ಟು, ನಮಗೆ ಇನ್ನೇನೂ ನೆನಪಿನಲ್ಲಿರದಂತೆ ಮಾಡು. ನಮ್ಮ ಮನಸ್ಸಿನ ಚಂಚಲತೆಯನ್ನು ಹೊಡೆದೋಡಿಸಿ, ಶಾಂತ, ಅಚಂಚಲವನ್ನಾಗಿ ಮಾಡು. ಅಜ್ಞಾನವೆಂಬ ಅಂಧಕಾರದಿಂದ ನಮ್ಮನ್ನು ಜ್ಞಾನವೆಂಬ ಜ್ಯೋತಿಯ ಕಡೆಗೆ ಕೈಹಿಡಿದು ನಡೆಸು. ನಿನ್ನ ಲೀಲಾಮೃತವೆಂಬ ಅಮೃತವನ್ನು ನಮಗೆ ಕುಡಿಸಿ, ನಮ್ಮ ತಮೋನಿದ್ರೆ ಕಳೆಯುವಂತೆ ಮಾಡು. ನಮ್ಮ ಜನ್ಮಜನ್ಮಾಂತರದ ಪಾಪಗಳನ್ನು ಕ್ಷಮಿಸಿ, ನಮ್ಮ ಮೇಲೆ ನಿನ್ನ ಅನುಗ್ರಹ ಸದಾ ಇರುವಂತೆ ಮಾಡು. ನಮ್ಮನ್ನು ಎಲ್ಲವಿಧದಲ್ಲೂ ಕಾಪಾಡು. ತಂದೆ ಸಾಯಿನಾಥಾ ಕಾಪಾಡು. ಕಾಪಾಡು. ಕಾಪಾಡು.

ಇದರೊಂದಿಗೆ ಅಹಮದ್ ನಗರದ ದಾಮೂ ಅಣ್ಣಾ ಕಾಸಾರ್, ಮಾವಿನ ಹಣ್ಣಿನ ಲೀಲೆ ಮತ್ತು ಇತರ ವಿಷಯಗಳನ್ನು ಕುರಿತು ಹೇಳುವ ಇಪ್ಪತ್ತೈದನೆಯ ಅಧ್ಯಾಯ ಮುಗಿಯಿತು. ಮುಂದಿನ ಅಧ್ಯಾಯದಲ್ಲಿ ಹೇಮಾಡ್ ಪಂತ್, ಭಕ್ತ ಪಂತ್, ಹರಿಶ್ಚಂದ್ರ ಪಿತಳೆ, ಗೋಪಾಲ್ ಅಂಬಾಡೇಕರ್, ಇತ್ಯಾದಿ ವಿಷಯಗಳನ್ನು ಹೇಳುತ್ತಾರೆ

||ಶ್ರೀ ಸದ್ಗುರು ಸಾಯಿನಾಥಾರ್ಪಣಮಸ್ತು||ಶುಭಂ ಭವತು||
||ಓಂ ಶಾಂತಿಃ ಶಾಂತಿಃ ಶಾಂತಿಃ||


Thursday, December 29, 2011

||ಇಪ್ಪತ್ತನಾಲ್ಕನೆಯ ಅಧ್ಯಾಯ||


||ಶ್ರೀ ಸಾಯಿ ಸಚ್ಚರಿತ್ರೆ||
||ಇಪ್ಪತ್ತನಾಲ್ಕನೆಯ ಅಧ್ಯಾಯ||
||ಬಾಬಾರ ವಿನೋದ ಲೀಲೆಗಳು||
ಶ್ರೀ ಗಣೇಶಾಯ ನಮಃ ಶ್ರೀ ಸರಸ್ವತಯೇ ನಮಃ
ಶ್ರೀ ವೆಂಕಟೇಶಾಯ ನಮಃ ಶ್ರೀ ಸಾಯಿನಾಥಾಯ ನಮಃ
ಶ್ರೀ ಸದ್ಗುರುಭ್ಯೋನ್ನಮಃ

ಅಧ್ಯಾಯದಲ್ಲಿ ಹೇಮಾಡ್ ಪಂತ್, ಬಾಬಾರ ಬುದ್ಧಿಮತ್ತೆ ಹಾಗೂ ಅವರ ಹಾಸ್ಯಪ್ರಜ್ಞೆ ಮತ್ತು ಇತರ ವಿಷಯಗಳನ್ನು ಹೇಳುತ್ತಾರೆ.

ಬಾಬಾರ ಹಾಸ್ಯಪ್ರಜ್ಞೆ

ಹಾಸ್ಯವೆಂದರೆ ಎಲ್ಲರಿಗೂ ಬಹಳ ಇಷ್ಟವೇ! ಆದರೆ ಯಾರೂ ತಾವೇ ಹಾಸ್ಯಕ್ಕೆ ಗುರಿಯಾಗಲು ಇಷ್ಟಪಡುವುದಿಲ್ಲ. ಆದರೆ ಬಾಬಾ ಹಾಸ್ಯೋಕ್ತಿಗಳನ್ನು ಹೇಳಿದರೆ ಅದು ಬೇರೆ ರೀತಿಯಲ್ಲೇ ಇರುತ್ತಿತ್ತು. ಅವರು ಹಾಸ್ಯೋಕ್ತಿಗಳನ್ನು ಹೇಳುವ ರೀತಿ ವಿಶಿಷ್ಟವಾದದ್ದು. ಕೈಕಾಲು ಆಡಿಸುತ್ತಾ, ಮುಖ ಭಾವಗಳನ್ನು ತೋರಿಸುತ್ತಾ ಅವರು ಹೇಳಿದ ಹಾಸ್ಯೋಕ್ತಿಗಳು ಯಾರಿಗೂ ನೋವನ್ನುಂಟು ಮಾಡುತ್ತಿರಲಿಲ್ಲ. ಅದರ ಬದಲು ಅದು ಶಿಕ್ಷಣೋಕ್ತಿಯಂತಿರುತ್ತಿತ್ತು. ಭಕ್ತರು ಹಾಸ್ಯೋಕ್ತಿಗಳ ಹಿಂದಿನ ಭಾವವನ್ನು ಅರ್ಥಮಾಡಿಕೊಂಡು, ತಮ್ಮ ಅವಗುಣಗಳನ್ನು ತಿದ್ದಿಕೊಳ್ಳಲು ಪ್ರಯತ್ನಮಾಡುತ್ತಿದ್ದರು. ತನ್ನ ಭಕ್ತರ ಒಳಿತಿಗಾಗಿ ಬಾಬಾ ಉಪಯೋಗಿಸುತ್ತಿದ್ದ ರೀತಿಯೊಂದಿದು.

ಅವರ ಕಥೆಗಳನ್ನು, ಲೀಲೆಗಳನ್ನು ಕೇಳುವುದು, ಓದುವುದು, ಅವನ್ನು ಅರ್ಥಮಾಡಿಕೊಂಡು ಮನನ ಮಾಡಿಕೊಳ್ಳುವುದು, ಆತ್ಮ ಸಾಕ್ಷಾತ್ಕಾರದ ದಾರಿಯಲ್ಲಿ ನಾವು ಇಡುವ ದಿಟ್ಟ ಹೆಜ್ಜೆಗಳು. ಅವರೊಡನೆಯೇ ಬದುಕಿ, ಅವರ ಸೇವೆಯಲ್ಲೇ ಜೀವನ ಸವೆಸಿದ ಶ್ಯಾಮಾ, ಹೇಮಾಡ್ ಪಂತ್, ಮಹಲ್ಸಾಪತಿಗಳ ಹಾಗೆ ನಾವು ಅದೃಷ್ಟಶಾಲಿಗಳಾಗದೇ ಇರಬಹುದು. ಆದರೆ ಅವರ ಲೀಲೆಗಳನ್ನು ಕಣ್ಣಿಗೆ ಕಟ್ಟುವಂತೆ ವಿವರಿಸುವ ಶ್ರೀ ಸಾಯಿ ಸಚ್ಚರಿತ್ರೆಯಂತಹ ಲೀಲಾಮೃತವನ್ನು ಪಡೆದಿರುವ ನಾವೂ ಧನ್ಯರೇ! ಅಂತಹ ಲೀಲೆಗಳನ್ನು ನಮ್ಮ ಅಂತಶ್ಚಕ್ಷುವಿಗೆ ತಂದುಕೊಂಡು, ಅವುಗಳಲ್ಲೇ ಲೀನರಾಗಿ, ತನ್ನ ಭಕ್ತರಿಗೆ, ಅವರು ಕೇಳಿದ್ದನ್ನೆಲ್ಲಾ ಕೊಟ್ಟು, ಅವರ ಒಳಿತಿಗೆ ತಾನು ಕೊಡಬೇಕೆಂದಿರುವುದನ್ನು ಅವರೇ ಕೇಳುವವರೆಗೂ ಜೋಪಾನಮಾಡಿದ, ದೇವ ದೇವನನ್ನು ಪೂಜೆಮಾಡೋಣ. ದೇವದೇವ, ದಯಾಸಾಗರ, ಪ್ರೇಮಮೂರ್ತಿ, ಸಾಯಿಬಾಬಾರ ಪಾದತಲದಲ್ಲಿ ಶಿರಸ್ಸಿಟ್ಟು ನಮಸ್ಕರಿಸಿ, ಆತನ ಅನುಗ್ರಹವನ್ನು ಬೇಡಿಕೊಳ್ಳೋಣ.

ಕಡಲೆ ಕಾಳಿನ ಲೀಲೆ

ಪ್ರತಿ ಭಾನುವಾರ ಶಿರಡಿಯಲ್ಲಿ ಸಂತೆ ಇರುತ್ತಿತ್ತು. ಸಂತೆಯಾದದ್ದರಿಂದ ಸುತ್ತಮುತ್ತಲ ಹಳ್ಳಿಯವರೂ ಬಂದು ಸೇರಿ, ಕೊಳ್ಳುವ, ಮಾರುವ ಜನರಿಂದ ಶಿರಡಿ ತುಂಬಿರುತ್ತಿತ್ತು. ಮಸೀದಿಯಂತೂ, ಮಧ್ಯಾಹ್ನ ಜನರಿಂದ ಕಿಕ್ಕಿರಿಯುತ್ತಿತ್ತು. ಅಂತಹ ಒಂದು ಭಾನುವಾರ, ಹೇಮಾಡ್ ಪಂತ್ ಬಾಬಾರ ಚರಣಗಳನ್ನು ಹರಿನಾಮೋಚ್ಚಾರಣೆ ಮಾಡುತ್ತಾ, ಮೃದುವಾಗಿ ನೀವುತ್ತಾ ಕುಳಿತಿದ್ದರು. ಶ್ಯಾಮಾ ಬಾಬಾರ ಎಡಗಡೆಯಲ್ಲಿ, ವಾಮನ ರಾವ್ ಬಾಬಾರ ಬಲಗಡೆಯಲ್ಲಿ ಕುಳಿತಿದ್ದರು. ಬಾಪೂಸಾಹೇಬ್ ಬೂಟಿ, ಕಾಕಾಸಾಹೇಬ್ ದೀಕ್ಷಿತ್ ಮುಂತಾದವರೂ ಅಲ್ಲಿ ಸೇರಿದ್ದರು. ಹೇಮಾಡ್ ಪಂತರ ಕಡೆಯೇ ನೋಡುತ್ತಾ, ಇದ್ದಕಿದ್ದಹಾಗೇ ಶ್ಯಾಮ ಜೋರಾಗಿ ನಕ್ಕು, "ನೋಡು ನಿನ್ನ ಕೋಟಿಗೆ ಕಾಳುಗಳು ಅಂಟಿಕೊಂಡಿವೆ" ಎಂದು ಹೇಳುತ್ತಾ, ಹೇಮಾಡ್ ಪಂತ್ ಕೋಟಿನ ತೋಳನ್ನು ಮುಟ್ಟಿದರು. ಏನೆಂದು ನೋಡಲು, ಹೇಮಾಡ್ ಪಂತ್ ತಮ್ಮ ಎಡಕೈಯನ್ನು ಮುಂದಕ್ಕೆ ಝಾಡಿಸಿದರು. ಆಶ್ಚರ್ಯವೋ ಎಂಬಂತೆ ಹಲವಾರು ಕಾಳುಗಳು, ೨೫ ಇರಬಹುದು, ಕೆಳಕ್ಕೆ ಬಿದ್ದವು. ಅಲ್ಲಿದ್ದವರು ಅದನ್ನೆಲ್ಲ ಆರಿಸಿಕೊಂಡರು. ಇದೊಂದು ಚರ್ಚೆಯ ವಿಷಯವಾಯಿತು. ಹೇಮಾಡ್ ಪಂತರ ಕೋಟಿನ ತೋಳಿನಲ್ಲಿ ಕಾಳುಗಳು ಸೇರಿಕೊಂಡು, ಅಲ್ಲಿ ಅಷ್ಟುಹೊತ್ತು ಹೇಗೆ ಕುಳಿತಿದ್ದವು ಎಂದು ಜನ ಆಶ್ಚರ್ಯಪಟ್ಟರು. ಹೇಮಾಡ್ ಪಂತರಿಗೂ ಅದರ ತಲೆಬುಡವೇ ಅರ್ಥವಾಗಲಿಲ್ಲ. ಪ್ರತಿಯೊಬ್ಬರೂ ತಮತಮಗೆ ತೋಚಿದಂತೆ ಹೇಳುತ್ತಿದ್ದರು. ಆದರೆ ಯಾರಿಗೂ "ಇದು ಹೀಗೇ" ಎಂದು ಹೇಳಲು ಸಾಧ್ಯವಾಗಲಿಲ್ಲ. ಆಗ ಬಾಬಾ ಹಾಸ್ಯವಾಗಿ, "ಇಂದು ಸಂತೆ. ಕಡಲೆ ಕಾಳು ಕೊಂಡು, ತಿನ್ನುತ್ತಾ ಬಂದಿದ್ದಾನೆ. ಕಾಳುಗಳೇ ಅದಕ್ಕೆ ಸಾಕ್ಷಿ. ಇವನಿಗೆ ತಾನೊಬ್ಬನೇ ತಿನ್ನುವ ಕೆಟ್ಟ ಅಭ್ಯಾಸವೊಂದಿದೆ. ನನಗೆ ಗೊತ್ತು" ಎಂದರು. ಹೇಮಾಡ್ ಪಂತರು ಆಪಾದನೆಯಿಂದ ಕುಗ್ಗಿಹೋದರು. ತಮ್ಮನ್ನು ಸಮರ್ಥಿಸಿಕೊಳ್ಳುತ್ತಾ, "ಬಾಬಾ, ನಾನು ಯಾವಾಗಲೂ ಒಬ್ಬನೇ ತಿನ್ನುವುದಿಲ್ಲ. ಕೆಟ್ಟ ಗುಣವನ್ನು ನನ್ನ ಮೇಲೆ ಏಕೆ ಆರೋಪಿಸುತ್ತಿದ್ದೀರಿ? ನಾನು ಇದುವರೆಗೂ ಶಿರಡಿಯ ಸಂತೆಗೆ ಹೋಗಿಲ್ಲ. ಇಂದೂ ಹೋಗಿಲ್ಲ. ಹಾಗಿದ್ದಾಗ, ಕಡಲೆ ಕಾಳು ಕೊಳ್ಳುವುದಾದರೂ ಹೇಗೆ? ತಿನ್ನುವುದಾದರೂ ಹೇಗೆ? ನಾನು ಒಂಟಿಯಾಗಿ ಏನನ್ನೂ ತಿನ್ನುವುದಿಲ್ಲ. ತಿನ್ನುವಾಗಲೆಲ್ಲಾ ನನ್ನ ಜೊತೆಯಲ್ಲಿದ್ದವರಿಗೆ ಕೊಟ್ಟೇ ತಿನ್ನುತ್ತೇನೆ" ಎಂದರು. ಬಾಬಾ ಮತ್ತೆ ಅವರನ್ನು ಕೆಣಕುತ್ತಾ, "ನಿನ್ನ ಜೊತೆಯಲ್ಲಿ ಯಾರಾದರೂ ಇದ್ದರೆ ಕೊಡುತ್ತೀಯೆ. ಯಾರೂ ಇಲ್ಲದಿದ್ದರೆ ಏನು ಮಾಡುತ್ತೀಯೆ? ತಿನ್ನುವ ಮೊದಲು ನನ್ನನ್ನು ನೆನಸಿಕೊಳ್ಳುತ್ತೀಯಾ? ನಾನು ಯಾವಾಗಲೂ ನಿನ್ನ ಜೊತೆಯಲ್ಲೇ ಇರುತ್ತೇನಲ್ಲವೇ? ನನಗೆ ಕೊಟ್ಟು ಆಮೇಲೆ ನೀನು ತಿನ್ನುತ್ತೀಯಾ?" ಎಂದರು.

ನೀತಿ

ಇದರಿಂದ ಬಾಬಾ ನಮಗೆ ಕೊಡುವ ಬುದ್ಧಿವಾದ-ನೀವು ಏನನ್ನೇ ತಿನ್ನಿ. ಆದರೆ ಅದನ್ನು ತಿನ್ನುವುದಕ್ಕೆ ಮುಂಚೆ ನನಗೆ ಅರ್ಪಿಸಿ ತಿನ್ನಿ. ಇಲ್ಲಿ, ತಿನ್ನುವುದು ಎಂದರೆ ಬರಿಯ ತಿನುಭಂಡಾರಗಳಿಗೆ ಮಾತ್ರ ಸೀಮಿತವಲ್ಲ. ತಿನ್ನುವುದು ಎಂದರೆ ಇಂದ್ರಿಯ ಪ್ರಿಯಾರ್ಥವಾಗಿ ಮಾಡುವ ಎಲ್ಲವೂ ಎಂದರ್ಥ. ಹಾಗೆ ಮಾಡುವಾಗ ಅದನ್ನು ಬಾಬಾರಿಗೆ ಅರ್ಪಿಸಿ, ಆಮೇಲೆ ಮಾಡಿ. ಇಂದ್ರಿಯಗಳು ಉಪಭೋಗಿಸುವ ಮುಂಚೆ, ಅದನ್ನು ಬಾಬಾರಿಗೆ ಅರ್ಪಣೆ ಮಾಡಿದರೆ, . ಅರ್ಪಣೆಗೆ ಅರ್ಹವೇ? . ಉಪಭೋಗಿಸಲು ಅರ್ಹವೇ? ಎಂಬ ಯೋಚನೆ ಬರುತ್ತದೆ. ಬಾಬಾರಿಗೆ ಕೊಡಲು ಅರ್ಹವಲ್ಲದ್ದು, ನಮಗೂ ಅರ್ಹವಲ್ಲ ಎಂಬುದು ಖಚಿತವಾಗುತ್ತದೆ. ಹಾಗೆ ನಿಧಾನವಾಗಿ ಅಹಿತವಾದದ್ದನ್ನೆಲ್ಲಾ ವರ್ಜಿಸುತ್ತಾ, ಬರಿಯ ಹಿತವಾದದ್ದನ್ನು ಮಾತ್ರ ಮಾಡುವ, ತಿನ್ನುವ ಅಭ್ಯಾಸವಾಗುತ್ತದೆ. ಅದರಿಂದ ನಮ್ಮ ಮನಸ್ಸು ಶುದ್ಧವಾಗುತ್ತದೆ. ಶುದ್ಧವಾದ ಮನಸ್ಸು ದುರ್ಗುಣಗಳನ್ನು ಬಿಟ್ಟು, ಸುಗುಣಗಳನ್ನೇ ಹಿಡಿಯುತ್ತದೆ. ನೈತಿಕ ಬಲ ವೃದ್ಧಿಯಾಗಿ, ಅದನ್ನು ಬೆಳೆಸಿಕೊಳ್ಳಲು ಅವಕಾಶಮಾಡಿಕೊಟ್ಟ ಬಾಬಾರಲ್ಲಿ, ನಮ್ಮ ಶ್ರದ್ಧಾ ಭಕ್ತಿಗಳು ಬೆಳೆಯುತ್ತವೆ. ಅವಗುಣಗಳೆಲ್ಲಾ ಒಂದೊಂದಾಗಿ ಬಿಟ್ಟುಹೋಗುತ್ತಾ, ನಾವು ಹೋಗಬೇಕಾದ ಆತ್ಮಸಾಕ್ಷಾತ್ಕಾರದ ಹಾದಿ, ಸುಗಮವಾಗುತ್ತಾ ಬರುತ್ತದೆ. ಗುರುವಿಗೆ ಸನ್ನಿಹಿತರಾಗುತ್ತಾ ಹೋಗುತ್ತೇವೆ. ಆಗ ಗುರು-ದೈವ ಎಂಬ ಭಿನ್ನತೆ ಕಳೆದು, ತೃಪ್ತಿ ಆನಂದಗಳು ನಮ್ಮದಾಗುತ್ತವೆ. ಮನೋಭಾವವನ್ನೇ ಉಪನಿಷತ್ತಿನಲ್ಲಿ ಹೀಗೆ ಹೇಳಿದ್ದಾರೆ, "ಯಾವಾಗ ಪಂಚ ಜ್ಞಾನೇಂದ್ರಿಯಗಳು ಮನಸ್ಸಿನೊಡನೆ ಶಾಂತವಾಗಿರುತ್ತದೋ, ಆಗ ಬುದ್ಧಿಯೂ ಅಚಂಚಲವಾಗುತ್ತದೆ. ಅಂತಹ ಸ್ಥಿತಿಯನ್ನು ಪರಮಗತಿ ಎನ್ನುತ್ತಾರೆ."

ಒಟ್ಟಿನಲ್ಲಿ ಹೇಳುವುದಾದರೆ, ನಾವು ಇಂದ್ರಿಯ ಪ್ರಿಯಾರ್ಥವಾಗಿ ಮಾಡುವ ಯಾವುದೇ ಕೆಲಸವಾದರೂ, ಅದನ್ನು ಬಾಬಾರಿಗೆ ಅರ್ಪಿಸಿ ಮಾಡಬೇಕು. ನಮ್ಮ ಮನಸ್ಸಿಗೆ ರೀತಿಯ ಶಿಕ್ಷಣ ಕೊಟ್ಟರೆ, ಅದು ನಮಗೆ ಸದಾ ಬಾಬಾರ ನೆನಪನ್ನು ಕೊಡುತ್ತದೆ. ಇದರಿಂದ ಬಾಬಾರನ್ನು ಕುರಿತ ನಮ್ಮ ಧ್ಯಾನವೂ, ವೃದ್ಧಿ ಆಗುತ್ತದೆ. ಬಾಬಾರ ಸಗುಣ ಮೂರ್ತಿ, ನಮ್ಮ ಕಣ್ಣ ಮುಂದೆ ಸದಾ ನಿಲ್ಲುತ್ತದೆ. ಅವರ ಮೂರ್ತಿಯನ್ನು ನೋಡುತ್ತಾ, ಅದನ್ನೇ ಧ್ಯಾನಿಸುತ್ತಾ ಹೋದಂತೆಲ್ಲಾ, ನಮಗೆ ಪ್ರಪಂಚದ ಅರಿವು ಕಡಮೆಯಾಗುತ್ತಾ ಹೋಗುತ್ತದೆ. ಅಂತಹ ಅರಿವು ಕಡಮೆಯಾಗುತ್ತಾ, ಆಗುತ್ತಾ, ಶಾಂತಿ ಆನಂದಗಳೇ ನಮ್ಮ ತವರಾಗುತ್ತವೆ.

ಸುದಾಮನ ಕಥೆ

ಮೇಲಿನ ಕಥೆಯನ್ನು ಹೇಳುವಾಗ ಹೇಮಾಡ್ ಪಂತರಿಗೆ ಇದೇ ನೀತಿ, ಎಂದರೆ ಇಂದ್ರಿಯಾರ್ಥವಾಗಿ ಮಾಡುವ ಯಾವುದೇ ಕೆಲಸವಾಗಲಿ ಮೊದಲು ದೇವರಿಗೆ ಅರ್ಪಿಸಿ ನಂತರ ಮಾಡು, ಎಂಬುವ ನೀತಿಯನ್ನು ಹೇಳುವ ಸುದಾಮನ ಕಥೆ ನೆನಪಿಗೆ ಬಂದು, ಅದನ್ನು ನಿರೂಪಿಸಿದ್ದಾರೆ.

ಕೃಷ್ಣ, ಅಣ್ಣ ಬಲರಾಮನೊಂದಿಗೆ ಸಾಂದೀಪನಿ ಗುರುಗಳ ಗುರುಕುಲದಲ್ಲಿದ್ದಾಗ ನಡೆದ ಪ್ರಸಂಗವಿದು. ಸುದಾಮ ಅವರ ಸಹಪಾಠಿ. ಒಂದುದಿನ ಗುರುಪತ್ನಿ ಕೃಷ್ಣ ಬಲರಾಮರನ್ನು ಸೌದೆ ತರಲು ಕಾಡಿಗೆ ಕಳುಹಿಸಿ, ಸ್ವಲ್ಪ ಹೊತ್ತಾದ ಮೇಲೆ ಸುದಾಮನ ಕೈಯ್ಯಲ್ಲಿ ಮೂವರಿಗೂ ಆಗುವಷ್ಟು ಕಡಲೆ ಕಾಳು ಕೊಟ್ಟು ಕಳುಹಿಸಿದರು. ಸುದಾಮ ಅವರನ್ನು ಕಾಡಿನಲ್ಲಿ ಭೇಟಿ ಮಾಡಿದಾಗ, ಕೃಷ್ಣ, "ನನಗೆ ಬಾಯಾರಿಕೆಯಾಗಿದೆ. ಸ್ವಲ್ಪ ನೀರು ತೆಗೆದುಕೊಂಡು ಬಾ" ಎಂದು ಸುದಾಮನಿಗೆ ಹೇಳಿದ. ಅದಕ್ಕೆ ಸುದಾಮ, "ಬರಿಯ ಹೊಟ್ಟೆಯಲ್ಲಿ ನೀರು ಕುಡಿಯಬಾರದು. ಸ್ವಲ್ಪ ಸುಧಾರಿಸಿಕೋ" ಎಂದು ಹೇಳಿದ. ಅವರಿಬ್ಬರೂ ಒಂದು ಮರದ ಕೆಳಗೆ ಕುಳಿತರು. ದಣಿವಿನಿಂದ ಕೃಷ್ಣ, ಸುದಾಮನ ತೊಡೆಯಮೇಲೆ ಮಲಗಿ ನಿದ್ದೆ ಹೋದ. ಅವನು ನಿದ್ರೆಮಾಡುತ್ತಿದ್ದಾನೆಂದುಕೊಂಡ ಸುದಾಮ, ಕಡಲೆ ಕಾಳು ತೆಗೆದು ತಿನ್ನಲು ಆರಂಭಿಸಿದ. ನಿದ್ರೆಮಾಡುವವನಂತೆ ನಟಿಸುತ್ತಾ ಕೃಷ್ಣ ಸುದಾಮನನ್ನು ಕೇಳಿದ, "ಅಣ್ಣಾ, ಏನು ತಿನ್ನುತ್ತಿದ್ದೀಯೆ?" ಅದಕ್ಕೆ ಸುದಾಮ, "ತಿನ್ನುವುದಕ್ಕೇನಿದೆ? ಚಳಿಯಿಂದ ನಡುಗುತ್ತಿದ್ದೇನೆ. ವಿಷ್ಣುಸಹಸ್ರನಾಮ ಹೇಳುವುದಕ್ಕೂ ಆಗದೇ ಹೋಗುತ್ತಿದೆ"ಎಂದ. ಕೃಷ್ಣ, "ಹಾಗೋ. ಸರಿ ಬಿಡು. ಇನ್ನೊಬ್ಬರಿಗೆ ಸೇರಿದ್ದನ್ನು ತಿನ್ನುತ್ತಿರುವ ಒಬ್ಬನ ಕನಸೊಂದನ್ನು ನಾನು ಕಂಡೆ. ಅವನನ್ನು ಕೇಳಿದಾಗ ಅವನು ಏನು ಮಣ್ಣು ತಿನ್ನಲೇ? ಎಂದ. ಮೊದಲು ಕೇಳಿದವನುಅದು ಹಾಗೇ ಆಗಲಿಎಂದ. ಅಣ್ಣಾ, ಅದೊಂದು ಕನಸು ಅಷ್ಟೇ. ನನಗೆ ಕೊಡದೆ ನೀನು ಏನೂ ತಿನ್ನುವುದಿಲ್ಲವೆಂದು ನನಗೆ ಗೊತ್ತಿದೆ" ಎಂದ. ಕೃಷ್ಣನ ಸರ್ವಜ್ಞತ್ವದ ಬಗ್ಗೆ ಸುದಾಮನಿಗೆ ಸ್ವಲ್ಪಮಾತ್ರ ತಿಳಿದಿದ್ದರೂ, ಅವನು ರೀತಿ ನಡೆದುಕೊಳ್ಳುತ್ತಿರಲಿಲ್ಲ. ಕೃಷ್ಣನ ಅತಿ ಸನ್ನಿಹಿತ ಸ್ನೇಹಿತನಾಗಿದ್ದರೂ, ತನ್ನ ಜೀವಮಾನವನ್ನೆಲ್ಲಾ ಅವನು ಕಡುಬಡತನದಲ್ಲೇ ಕಳೆಯಬೇಕಾಯಿತು. ನಂತರ, ಅವನ ಹೆಂಡತಿಯ ಸ್ವಂತ ಶ್ರಮದಿಂದ ಸಂಪಾದಿಸಿದ ಒಂದು ಹಿಡಿ ಅವಲಕ್ಕಿಯನ್ನು ಸುದಾಮ, ಕೃಷ್ಣನಿಗೆ ಅರ್ಪಿಸಿದ. ಕೃಷ್ಣ ಸ್ವರ್ಣನಗರವನ್ನೇ ಉದಾರವಾಗಿ ಕರುಣಿಸಿದ. ಇದು ಬಾಬಾ ಹೇಳಿದ ನೀತಿ, ನಾವು ಯಾವುದೇ ವಸ್ತುವನ್ನಾದರೂ ಉಪಯೋಗಿಸುವ ಮೊದಲು ಅದನ್ನು ದೇವರಿಗೆ ಅರ್ಪಿಸಿದ ಮೇಲೆ ಉಪಭೋಗಿಸಬೇಕು ಎಂಬುದಕ್ಕೆ ಸರಿಯಾಗಿ ತಾಳೆಯಾಗುತ್ತದೆ.

ಅಣ್ಣಾ ಚಿಂಚಿಣೀಕರ್ ಮತ್ತು ಮೌಸೀಬಾಯಿ

ಇಬ್ಬರ ಮಧ್ಯೆ ಹುಟ್ಟಿದ ಜಗಳದಲ್ಲಿ, ಬಾಬಾ ಶಾಂತಿದೂತನಂತೆ ಪ್ರವರ್ತಿಸಿ ಜಗಳವನ್ನು ಪರಿಹರಿಸಿದ, ಇನ್ನೊಂದು ಹಾಸ್ಯ ಪ್ರಸಂಗವನ್ನು ಹೇಮಾಡ್ ಪಂತ್ ಹೇಳುತ್ತಾರೆ. ದಾಮೋದರ್ ಘನಶ್ಯಾಮ್ ಬಾಬರೆ ಅಥವ ಅಣ್ಣಾ ಸಾಹೇಬ್ ಚಿಂಚಿಣೀಕರ್ ಒಬ್ಬ ದಿಟ್ಟನಾದ ಸೀದಾ ಸಾದಾ ಮನುಷ್ಯ. ಬಾಬಾರನ್ನು ಬಿಟ್ಟು ಇನ್ನು ಯಾರನ್ನೂ ಲಕ್ಷ್ಯಕ್ಕೆ ತರುತ್ತಿರಲಿಲ್ಲ. ನೇರವಾಗಿ ಮಾತನಾಡುವವರು. ಹೊರಗೆ ಆತ ಅಷ್ಟು ಒರಟಾಗಿ ಕಂಡರೂ, ಒಳಗೆ ಬಹಳ ಸಾಧು ಸ್ವಭಾವದವರು. ಅದರಿಂದಲೇ ಅವರು ಬಾಬಾರಿಗೆ ಸನ್ನಿಹಿತರಾಗಿದ್ದರು.

ವೇಣುಬಾಯಿ ಕೌಜಲಗಿ ಒಬ್ಬ ವಯಸ್ಸಾದ ಹೆಂಗಸು. ವಿಧವೆ. ಬಾಬಾರಲ್ಲಿ ಆತಿಶಯ ಪ್ರೀತಿಯಿದ್ದಾಕೆ. ಸಹೃದಯಿ. ಬಾಬಾ ಆಕೆಯನ್ನು ಮಾಯಿ ಎಂದು ಕರೆಯುತ್ತಿದ್ದರು. ಮಿಕ್ಕವರು ಆಕೆಯನ್ನು ಮೌಸಿಬಾಯಿ ಎನ್ನುತ್ತಿದ್ದರು. ಆಕೆ ಬಾಬಾರಿಗೆ ತನ್ನದೇ ಆದ ರೀತಿಯಲ್ಲಿ ಸೇವೆ ಮಾಡುತ್ತಿದ್ದಳು.

ಒಂದುದಿನ ಬಾಬಾ ಮಸೀದಿಯಲ್ಲಿ, ಕಟಕಟೆ ಮೇಲೆ ಎಡ ಕೈಯ್ಯೂರಿ ಕುಳಿತಿದ್ದರು. ಬಾಬಾರ ಹಿಂದೆ ನಿಂತು ಅಣ್ಣಾ ಅವರ ಎಡಕೈ ನೀವುತ್ತಿದ್ದರು. ಹಾಗೆ ನೀವುವಾಗ ಅವರ ತಲೆ ಅತ್ತಿತ್ತ ಆಡುತ್ತಿತ್ತು. ಮೌಸೀಬಾಯಿ ಬಾಬಾರ ಬಲಗಡೆ ಕುಳಿತು, ತನ್ನ ಎರಡೂ ಕೈಗಳನ್ನು ಬಾಬಾರ ಸೊಂಟದ ಸುತ್ತಲೂ ಸುತ್ತಿ, ಸೊಂಟ ನೀವುತ್ತಿದ್ದರು. ಹಾಗೆ ನೀವುವಾಗ, ಆಕೆಯ ತಲೆಯೂ ಹಾಗೆ ಹೀಗೆ ಆಡುತ್ತಿತ್ತು. ಹೀಗೆ ಇಬ್ಬರೂ ತಮ್ಮ ತಮ್ಮ ಸೇವೆ ಮಾಡುತ್ತಿದ್ದಾಗ, ಒಂದುಸಲ ಅಕಸ್ಮಾತ್ತಾಗಿ ಅವರಿಬ್ಬರ ತಲೆಗಳೂ ಬಹಳ ಹತ್ತಿರ ಬಂದವು. ಹಾಸ್ಯಪ್ರವೃತ್ತಿಯ ಹೆಂಗಸಾದ್ದರಿಂದ ಆಕೆ, "ತಲೆ ಬೆಳ್ಳಗಾದರೂ ಇನ್ನೂ ಅಣ್ಣಾ ತನ್ನ ಚೇಷ್ಟೆಗಳನ್ನು ಬಿಟ್ಟಿಲ್ಲ. ನನಗೆ ಮುತ್ತಿಡಲು ಪ್ರಯತ್ನಿಸುತ್ತಿದ್ದಾನೆ" ಎಂದಳು. ತನ್ನನ್ನು ತನ್ನ ಗುರುವಿನ ಎದುರು, ಯಾರೂ ಅಪಹಾಸ್ಯ ಮಾಡುವುದು, ಅಣ್ಣಾ ಸಾಹೇಬರಿಗೆ ಇಷ್ಟವಾಗಲಿಲ್ಲ. ಅದಕ್ಕೆ ಅವರು ಬಹಳ ಕೋಪಗೊಂಡು ಜೋರಾಗಿ ಹೇಳಿದರು, "ನಾನೇನು ಮೂರ್ಖನೆ, ನಿನಗೆ ಮುತ್ತಿಡಲು. ನನ್ನೊಡನೆ ಜಗಳವಾಡಲು ಕಾಲು ಕೆರೆಯುತ್ತಿದ್ದೀಯೆ." ಇದೇ ರೀತಿ ವಾಗ್ವಾದ ಸ್ವಲ್ಪ ಹೊತ್ತು ಮುಂದುವರೆಯಿತು. ಅಲ್ಲಿದ್ದವರೆಲ್ಲಾ ಹಾಸ್ಯದಿಂದ ಸಂತೋಷಗೊಂಡವರಾಗಿ, ಇಬ್ಬರನ್ನೂ ಉತ್ತೇಜಿಸುತ್ತಿದ್ದರು. ಅಷ್ಟರಲ್ಲಿ ಇಬ್ಬರನ್ನೂ ಸಮಾಧಾನಮಾಡುವಂತೆ ಬಾಬಾ, ಅತ್ಯಂತ ಮಧುರವಾಗಿ ಮಾತನಾಡುತ್ತಾ, "ಅಣ್ಣಾ, ನೀವೇಕೆ ಜಗಳ ಆಡುತ್ತಿದ್ದೀರಿ? ಮಗ ತಾಯಿಯನ್ನು ಮುತ್ತಿಟ್ಟುಕೊಳ್ಳುವುದರಲ್ಲಿ ತಪ್ಪೇನಿದೆ?" ಎಂದು ಕೇಳಿದರು. ಮಾತನ್ನು ಕೇಳಿ ಅವರಿಬ್ಬರ ಜೊತೆ ಅಲ್ಲಿದ್ದವರೆಲ್ಲ ಬಾಬಾರ ಹಾಸ್ಯವನ್ನು ಕಂಡು ಕೇಳಿ ನಕ್ಕು ಆನಂದಿಸಿದರು.

ಭಕ್ತರ ಮೇಲಿನ ಬಾಬಾರ ವಿಶ್ವಾಸದ ಅವಲಂಬನೆ

ಇನ್ನೊಂದುಸಲ ಮೌಸಿಬಾಯಿ ಬಾಬಾರ ಹೊಟ್ಟೆಯನ್ನು ಹಿಟ್ಟಿನಮುದ್ದೆಯೋ ಎಂಬಂತೆ ತನ್ನ ಶಕ್ತಿಯನ್ನೆಲ್ಲಾ ಉಪಯೋಗಿಸಿ ಮರ್ದಿಸುತ್ತಿದ್ದರು. ಅದೆಷ್ಟು ಜೋರಾಗಿ ಮರ್ದಿಸುತ್ತಿದ್ದರೆಂದರೆ, ಅಲ್ಲಿದ್ದವರೆಲ್ಲಾ ಬಾಬಾರ ಹೊಟ್ಟೆಯಲ್ಲಿರುವುದೆಲ್ಲಾ ಕಿತ್ತು ಹೊರಕ್ಕೆ ಬರುವುದೇನೋ ಎಂದು ಭಯಪಟ್ಟರು. ಅವರಲ್ಲಿ ಒಬ್ಬ, ಶಾಂತಾರಾಮ ಬಲವಂತ ನಾಚ್ನೆ ಎನ್ನುವ, ಬಾಬಾರಿಗೆ ಬಹು ಹತ್ತಿರವಾಗಿದ್ದ ಭಕ್ತ, ಧೈರ್ಯಮಾಡಿ, "ಮಾಯಿ. ಹುಶಾರು. ನೀವು ಮಾಡುತ್ತಿರುವುದನ್ನು ಸ್ವಲ್ಪ ಮೆತ್ತಗೆ ಮಾಡಿ. ಇಲ್ಲದಿದ್ದರೆ ಬಾಬಾರ ಹೊಟ್ಟೆಯಲ್ಲಿನ ಕರುಳು ಕಿತ್ತು ಬರಬಹುದು" ಎಂದ. ಅವನಿನ್ನೂ ಹೇಳಿ ಮುಗಿಸುತ್ತಿದ್ದ ಹಾಗೇ, ಬಾಬಾ ತಟಕ್ಕನೆ ಎದ್ದು, ಸಟ್ಕಾ ತೆಗೆದುಕೊಂಡು ಅಲ್ಲಿದ್ದ ಒಂದು ಕಂಭದ ಹತ್ತಿರ ಹೋದರು. ಉಗ್ರರಾದ ಅವರ ಕಣ್ಣುಗಳು ಕೆಂಪಗೆ ಉರಿಯುತ್ತಿದ್ದವು. ಸಟ್ಕಾದ ಒಂದು ಕೊನೆಯನ್ನು ತಮ್ಮ ಹೊಟ್ಟೆಯ ಮೇಲಿಟ್ಟುಕೊಂಡರು. ಇನ್ನೊಂದು ಕೊನೆಯನ್ನು, ಕಂಭದ ಮೇಲಿಟ್ಟರು. ಹೊಟ್ಟೆಯನ್ನು ಕಂಭದ ಕಡೆಗೆ ತಳ್ಳಲು ಆರಂಬಿಸಿದರು. ಸಾಕಷ್ಟು ಉದ್ದವಿದ್ದ ಸಟ್ಕಾ ಬಾಬಾರ ಹೊಟ್ಟೆಯೊಳಕ್ಕೆ ತೂರಿ ಹೋಗುವುದೇನೋ, ಎಂದು ಎಲ್ಲರೂ ಆತಂಕ ಪಡುವಂತಾಯಿತು. ಇನ್ನೇನು ಅನಾಹುತವೋ ಎಂದು ಎಲ್ಲರೂ ಅಂದುಕೊಳ್ಳುವಷ್ಟರಲ್ಲಿ, ಬಾಬಾ ಶಾಂತರಾಗಿ, ಸಟ್ಕಾದೊಡನೆ ತಮ್ಮ ಜಾಗಕ್ಕೆ ಹಿಂತಿರುಗಿದರು.

ಬಾಬಾ ತಮ್ಮ ಭಕ್ತರನ್ನು ಅವರವರ ಇಷ್ಟದಂತೆ ಸೇವೆ ಮಾಡಿಕೊಳ್ಳಲು ಬಿಟ್ಟಿದ್ದರು. ಬೇರೆಯವರು ಯಾರೂ ಅದರಲ್ಲಿ ತಲೆಹಾಕುವುದು ಅವರಿಗೆ ಇಷ್ಟವಿರಲಿಲ್ಲ. ಮೌಸಿಬಾಯಿ ಸೇವೆ ಮಾಡುತ್ತಿದ್ದಾಗ, ಅದು ಹೇಗೆ ಮಾಡಬೇಕೆಂದು ಬೇರೆಯವರು ಆಕೆಗೆ ಹೇಳುವುದು, ಬಾಬಾರಿಗೆ ಇಷ್ಟವಾಗಲಿಲ್ಲ. ಹಾಗೆ ಹೇಳಿದವರಿಗೆ, ತಮ್ಮ ಹೊಟ್ಟೆ ಅಷ್ಟೊಂದು ಪೊಳ್ಳಲ್ಲ ಎಂದು ತೋರಿಸುವುದಕ್ಕೋ ಎಂಬಂತೆ ಹಾಗೆ ಮಾಡಿದರು. ಭಕ್ತನೇನೋ ಬಾಬಾರ ಒಳ್ಳೆಯದಕ್ಕೆ ಮೌಸಿಬಾಯಿಗೆ ಹಾಗೆ ಹೇಳಿದ. ಬಾಬಾರಿಗೆ ಅದು ಸರಿತೋರಲಿಲ್ಲ. ಬಾಬಾರೊಬ್ಬರೇ ಭಕ್ತರ ಸೇವೆಯ ಬೆಲೆ ಕಟ್ಟಬಲ್ಲವರು. ಘಟನೆಯಾದ ಮೇಲೆ ಯಾರೂ ಮತ್ತೆ ಅಂತಹ ಸಾಹಸಕ್ಕೆ ಕೈಹಾಕಲು ಹೋಗಲಿಲ್ಲ.

ಇದರೊಂದಿಗೆ ಬಾಬಾರ ಬುದ್ಧಿಮತ್ತೆ ಹಾಗೂ ಅವರ ಹಾಸ್ಯಪ್ರಜ್ಞೆ ಮತ್ತು ಇತರ ವಿಷಯಗಳನ್ನು ಕುರಿತು ಹೇಳುವ ಇಪ್ಪತ್ತನಾಲ್ಕನೆಯ ಅಧ್ಯಾಯ ಮುಗಿಯಿತು. ಮುಂದಿನ ಅಧ್ಯಾಯದಲ್ಲಿ ಹೇಮಾಡ್ ಪಂತ್ ದಾಮೂ ಅಣ್ಣಾ ಕಾಸಾರ್, ಮಾವಿನ ಹಣ್ಣಿನ ಲೀಲೆ ಇತ್ಯಾದಿ ವಿಷಯಗಳನ್ನು ಹೇಳುತ್ತಾರೆ.

||ಶ್ರೀ ಸದ್ಗುರು ಸಾಯಿನಾಥಾರ್ಪಣಮಸ್ತು||ಶುಭಂ ಭವತು||
||ಓಂ ಶಾಂತಿಃ ಶಾಂತಿಃ ಶಾಂತಿಃ||


Wednesday, December 28, 2011

||ಇಪ್ಪತ್ತಮೂರನೆಯ ಅಧ್ಯಾಯ||


||ಶ್ರೀ ಸಾಯಿ ಸಚ್ಚರಿತ್ರೆ||
||ಇಪ್ಪತ್ತಮೂರನೆಯ ಅಧ್ಯಾಯ||
||ಗುರುಭಕ್ತಿ ದರ್ಶನ||
ಶ್ರೀ ಗಣೇಶಾಯ ನಮಃ ಶ್ರೀ ಸರಸ್ವತಯೇ ನಮಃ
ಶ್ರೀ ವೆಂಕಟೇಶಾಯ ನಮಃ ಶ್ರೀ ಸಾಯಿನಾಥಾಯ ನಮಃ
ಶ್ರೀ ಸದ್ಗುರುಭ್ಯೋನ್ನಮಃ

ಅಧ್ಯಾಯದಲ್ಲಿ ಹೇಮಾಡ್ ಪಂತ್, ಯೋಗ ಮತ್ತು ಈರುಳ್ಳಿ, ಶ್ಯಾಮಾರನ್ನು ರಕ್ಷಿಸಿದ್ದು ಮತ್ತು ಇತರ ವಿಷಯಗಳನ್ನು ಹೇಳುತ್ತಾರೆ.

ಜೀವಾತ್ಮ

ಜೀವಾತ್ಮ ತ್ರಿಗುಣಾತೀತ. ಆದರೆ ಮಾಯೆಯಿಂದ ಆವರಿಸಲ್ಪಟ್ಟವನಾಗಿ, ಅವನು ತನ್ನ ನಿಜರೂಪವಾದ ಅಸ್ತಿತ್ವ, ಜ್ಞಾನ, ಆನಂದಗಳನ್ನು ಮರೆತು ತಾನೇ ಕರ್ತ, ಭೋಕ್ತೃ ಎಂದುಕೊಂಡು, ಜೀವನ್ಮರಣ ಚಕ್ರದಲ್ಲಿ ಸಿಕ್ಕಿಬೀಳುತ್ತಾನೆ. ಜನನ ಮರಣಗಳ ಮಧ್ಯೆ ಹೇಳಬಾರದ ಕಷ್ಟಗಳನ್ನು ಅನುಭವಿಸಿ, ಅದರಿಂದ ಈಚೆಗೆ ಬರುವುದು ಹೇಗೆ ಎಂದು ತಿಳಿಯದೆ ಒದ್ದಾಡುತ್ತಾನೆ. ಗುರುವಿನ ದಯಾಕಟಾಕ್ಷವೆಂಬ ಕಿರಣಗಳು ಅವನನ್ನು ತಾಕುತ್ತಲೇ, ಅವನ ಅಂಧಕಾರ ನಾಶವಾಗುತ್ತದೆ. ಗುರುವಿಗೆ ಶರಣಾಗತನಾಗಿ, ಮಾಯೆಯ ಆವರಣವನ್ನು ಕತ್ತರಿಸಿ, ಈಚೆಗೆ ಬರಬಲ್ಲವನಾಗುತ್ತಾನೆ. ಹಾಗೆ ನಮ್ಮನ್ನು ಅಂಧಕಾರದಿಂದ ಪಾರುಮಾಡಿ, ಮೋಕ್ಷದ ದಾರಿ ತೋರಿಸಿ, ಕಡೆಗೆ ತನ್ನಲ್ಲೇ ಲಯಮಾಡಿಕೊಳ್ಳಬಲ್ಲವನು ಸದ್ಗುರು ಒಬ್ಬನೇ. ಅಂತಹ ಸದ್ಗುರುವೇ ನಮ್ಮ ಸಾಯಿಬಾಬಾ. ತಲೆಮಾರಿನಿಂದ ತಲೆಮಾರುಗಳು ಬಾಬಾ ದೇವರೆಂದೇ ನಂಬಿದರೂ, ಬಾಬಾ ಮಾತ್ರ ಎಂದೂ ತಾನು ದೇವರು ಎಂದು ನೇರವಾಗಿ ಹೇಳಿಕೊಳ್ಳಲಿಲ್ಲ. ಅವರು ಯಾವಾಗಲೂ "ನಾನು ದೇವರ ಸೇವಕ. ಅಲ್ಲಾನೇ ಮಾಲಿಕ್" ಎಂದೇ ಹೇಳುತ್ತಿದ್ದರು. ಅವರು ಯಾರನ್ನೂ ಅನುಕರಿಸಲು ಅಥವಾ ಮೀರಿಸಲು ಎಂದೂ ಪ್ರಯತ್ನ ಮಾಡಲಿಲ್ಲ. ಬೇರೆಯವರನ್ನು ತನ್ನ ಕೆಲಸ ಮಾಡುವಂತೆ ಹೇಳಲಿಲ್ಲ. "ಎಲ್ಲರಲ್ಲೂ ದೇವರಿದ್ದಾನೆ. ಅದರಿಂದ ಎಲ್ಲರನ್ನೂ ಗೌರವದಿಂದ ಕಾಣಬೇಕು," ಎಂಬುದನ್ನು ತಾನು ಧೃಢವಾಗಿ ನಂಬಿ, ಅದನ್ನೇ ಎಲ್ಲರಿಗೂ ಉಪದೇಶ ಮಾಡಿದರು. ಅವರು ಎಂದೂ ಯಾರನ್ನೂ ಅಗೌರವದಿಂದ ಕಾಣಲಿಲ್ಲ. ಅವಹೇಳನಕ್ಕೆ ಗುರಿಪಡಿಸಲಿಲ್ಲ. ವಿನಯವೇ ಅವರ ಪ್ರಮುಖ ಗುಣವಾಗಿತ್ತು. ಅದನ್ನೇ ಅವರು ಇತರರಿಗೂ ಉಪದೇಶಿಸಿದರು. ನಮ್ಮಂತಹ ಅಜ್ಞಾನಿ, ಬಂಧರ ಉದ್ಧಾರಕ್ಕಾಗಿಯೇ ಬಾಬಾರಂತಹ ಸಂತರ ಅವತಾರ. ಬಹುಶಃ ಹಿಂದಿನ ಜನ್ಮಗಳಲ್ಲಿ ನಾವು ಮಾಡಿರಬಹುದಾಗಿದ್ದ ದೇವರ ಪೂಜೆಗಳೇ ನಮ್ಮನ್ನು ಇಂತಹ ಸಂತರ ಸಂಗಕ್ಕೆ ಸೇರಿಸಿದೆ. ಅವರ ಲೀಲೆಗಳನ್ನು ಕೇಳಿ, ಮನನ ಮಾಡಿಕೊಳ್ಳುವಂತಹ ಅವಕಾಶವನ್ನು ಕಲ್ಪಿಸಿದೆ. ಅಂದಿನ ಶಿರಡಿಯ ಪುಣ್ಯವಂತರಂತೆ ನಾವು ಈಗ ಬಾಬಾರನ್ನು ಸಶರೀರರಾಗಿ ಕಾಣಲು ಸಾಧ್ಯವಿಲ್ಲ. ಆದರೆ ಹಿಂದಿನವರು ನಮಗೆ ವಿಪುಲವಾದ ಸಾಯಿಸಚ್ಚರಿತ್ರೆಯಂತಹ ಅಕ್ಷಯ, ಅಮೂಲ್ಯ ಲೀಲಾ ಖಜಾನೆಯನ್ನು ಬಿಟ್ಟು ಹೋಗಿದ್ದಾರೆ. ಇದು ಖಾಲಿಯಾಗುವ ಖಜಾನೆಯಲ್ಲ. ಈಗಲೂ ಅವರ ಲೀಲೆಗಳಿಂದ ಅದು ತುಂಬುತ್ತಲೇ ಇದೆ. ತುಂಬುತ್ತಲೇ ಇರುತ್ತದೆ. ಎಂದಿಗೂ ಖಜಾನೆ ಬರಿದಾಗುವುದೇ ಇಲ್ಲ. ಅಂತಹ ಲೀಲಾ ಮಾನುಷರೂಪಿಯಾದ ಬಾಬಾರ ಚರಣಾರವಿಂದಗಳಲ್ಲಿ ನಮಸ್ಕರಿಸಿ, ಅವರ ಸಚ್ಚರಿತ್ರೆಯೆಂಬ ಸಾಗರದಿಂದ ಒಂದೆರಡು ಮುತ್ತುಗಳನ್ನು ಆರಿಸಿ ನೋಡೋಣ.

ಯೋಗ ಮತ್ತು ಈರುಳ್ಳಿ

ನಾನಾ ಸಾಹೇಬ್ ಚಾಂದೋರ್ಕರರಿಗೆ ರಾಮಬಾಬಾ ಎಂಬ ಸ್ನೇಹಿತರೊಬ್ಬರಿದ್ದರು. ಅವರು ಯೋಗ ಶಾಸ್ತ್ರ ನಿಪುಣರು. ಪತಂಜಲಿ ಯೋಗಶಾಸ್ತ್ರವನ್ನು ಓದಿ ಅರಗಿಸಿಕೊಂಡವರು. ಯೋಗದ ಬಗ್ಗೆ ಅಪಾರವಾದ ಜ್ಞಾನವುಳ್ಳವರು. ಆದರೆ ಅವರಿಗಿದ್ದಿದ್ದೆಲ್ಲವೂ ಒಣ ಪಾಂಡಿತ್ಯವೇ! ಕ್ರಿಯಾಶೀಲ ಜ್ಞಾನವಲ್ಲ. ಸಮಾಧಿ ಸ್ಥಿತಿಯಲ್ಲಿ ಅವರು ಒಂದು ನಿಮಿಷ ಕೂಡಾ ಇರಲು ಅಸಮರ್ಥರಾಗಿದ್ದರು. ಬಾಬಾರ ಹೆಸರು ಕೀರ್ತಿಗಳನ್ನು ಕೇಳಿದ ಅವರು, ತಮಗೆ ಸಮಾಧಿಸ್ಥಿತಿಯಲ್ಲಿ ಹೆಚ್ಚು ಹೊತ್ತು ಇರಲು ಏನಾದರೂ ಸಹಾಯವಾಗಬಹುದೋ ಏನೋ ಎಂಬ ಆಸೆಯಿಂದ, ಚಾಂದೋರ್ಕರರನ್ನು ಬಾಬಾರ ಬಳಿಗೆ ಕರೆದುಕೊಂಡು ಹೋಗುವಂತೆ ಕೇಳಿದರು.

ಫೆಬ್ರುವರಿ ೧೯೧೪ರಲ್ಲಿ ಅವರಿಬ್ಬರೂ ಜೊತೆಯಾಗಿ ಶಿರಡಿಗೆ ಹೋಗಿ ಬಾಬಾರ ದರ್ಶನಕ್ಕೆ ಮಸೀದಿಗೆ ಹೋದರು. ಸಮಯದಲ್ಲಿ ಬಾಬಾ ಒಂದು ಒಣ ರೊಟ್ಟಿಯನ್ನು, ಈರುಳ್ಳಿಯ ಜೊತೆ ಸೇರಿಸಿ ತಿನ್ನುತ್ತಿದ್ದರು. ಬಡವರು ತಿನ್ನುವ ರೀತಿ ಇದು. ರಾಮಬಾಬಾ ಅದನ್ನು ಕಂಡಕೂಡಲೇ, "ಒಣ ರೊಟ್ಟಿಯನ್ನು ಈರುಳ್ಳಿಯ ಜೊತೆ ತಿನ್ನುವ ಮನುಷ್ಯ ಸಮಾಧಿಯ ಬಗ್ಗೆ ನನಗೇನು ಸಹಾಯ ಮಾಡ ಬಲ್ಲ?" ಎಂದುಕೊಂಡರು. ರಾಮಬಾಬಾಗೆ, ಸಾಯಿಬಾಬಾ ಹೊರನೋಟಕ್ಕೆ ಕೂಡಾ ಸಮಂಜಸವಾಗಿ ಕಾಣಲಿಲ್ಲ. ಸರ್ವಜ್ಞರಾದ ಬಾಬಾ ಮನುಷ್ಯನ ಮನಸ್ಸಿನಲ್ಲಿ ನಡೆಯುತ್ತಿರುವುದನ್ನು ಗ್ರಹಿಸಿ, ಚಾಂದೋರ್ಕರರಿಗೆ, "ಯಾರು ಈರುಳ್ಳಿಯನ್ನು ಜೀರ್ಣಿಸಿಕೊಳ್ಳಬಲ್ಲರೋ ಅವರು ಮಾತ್ರ ಅದನ್ನು ತಿನ್ನಬೇಕು ಎಂದು ನಿನ್ನ ಸ್ನೇಹಿತನಿಗೆ ಹೇಳು" ಎಂದರು. ರಾಮಬಾಬಾ ತಕ್ಷಣವೇ ತನ್ನ ತಪ್ಪನ್ನು ಅರಿತುಕೊಂಡು ಬಾಬಾರ ಬಾಹ್ಯ ರೂಪಕ್ಕೂ, ಅವರ ಆಂತರ್ಯಕ್ಕೂ ಇರುವ ವ್ಯತ್ಯಾಸವನ್ನು ಕಂಡುಕೊಂಡರು. ಬಾಬಾರ ಪಾದಗಳಲ್ಲಿ ಬಿದ್ದು ಅವರಿಗೆ ಶರಣಾಗತರಾಗಿ, ತೆರೆದ ಮನಸ್ಸಿನಿಂದ ತಾವು ಬಂದಿದ್ದ ವಿಷಯವಾಗಿ ಪ್ರಶ್ನೆಗಳನ್ನು ಕೇಳಿ, ಸಮಾಧಾನಕರವಾದ ಉತ್ತರಗಳನ್ನು ಪಡೆದು, ಬಾಬಾರ ಆಶೀರ್ವಾದ ಹೊಂದಿ ಹಿಂತಿರುಗಿದರು.

ಶ್ಯಾಮಾರ ಕಥೆ

ಹೇಮಾದ್ ಪಂತರು ಕಥೆಯನ್ನು ಒಂದು ಸುಂದರ ಹೋಲಿಕೆಯೊಡನೆ ಆರಂಭಿಸಿದ್ದಾರೆ. ಜೀವಾತ್ಮ ಮತ್ತು ಗಿಣಿ ಇಬ್ಬರೂ ಪಂಜರದಲ್ಲಿ ಬಂದಿಗಳು. ಒಬ್ಬರು ದೇಹವೆಂಬ ಪಂಜರದಲ್ಲಿ, ಇನ್ನೊಬ್ಬರು ಲೋಹದ ಪಂಜರದಲ್ಲಿ. ಇಬ್ಬರೂ ತಾವಿರುವ ಜಾಗವೇ ಪ್ರಶಸ್ತವೆಂದೂ, ಹೊರಗೆ ಎಲ್ಲವೂ ಅಂಧಕಾರಮಯ, ನಮಗೇನೂ ತಿಳಿಯುವುದಿಲ್ಲ ಎಂದು ಕೊಳ್ಳುತ್ತಾರೆ. ಸಕಲವೂ ತಮ್ಮ ಪಂಜರವೇ ಎಂದು ಅವರಿಬ್ಬರ ತಿಳಿವಳಿಕೆ. ತಮ್ಮ ಪೂರ್ವಜನ್ಮ ಪುಣ್ಯ ಫಲದಿಂದ, ದೈವಕೃಪೆಯಿಂದ ಗುರುವು ಬಂದು ಅವರ ಪಂಜರವನ್ನು ತೆರೆದಿಟ್ಟು, ಅವರ ಅಜ್ಞಾನಾಂಧಕಾರವನ್ನು ತೊಲಗಿಸಿದಾಗ ಹೊರಗಿನ ಪ್ರಪಂಚ ಎಷ್ಟು ಸುಂದರವಾಗಿದೆ ಎಂದು ಅರಿಯಬಲ್ಲರು. ಸಂಕುಚಿತ ದೃಷ್ಟಿಯನ್ನು ಕಳೆದುಕೊಂಡು, ಹೊರಗೆ ಕಾಣುತ್ತಿರುವ ಹೊಸ ಪ್ರಪಂಚ ತಾವು ಇದುವರೆಗೆ ಕಾಣುತ್ತಿದ್ದ ಸಂಕುಚಿತ ಪ್ರಪಂಚಕ್ಕಿಂತ ಎಷ್ಟು ಅಗಾಧ, ಎಷ್ಟು ಸುಂದರ ಎಂಬುದು ಅರ್ಥವಾಗುತ್ತದೆ.

ಒಮ್ಮೆ, ಶ್ಯಾಮಾ (ಮಾಧವರಾವ್ ದೇಶಪಾಂಡೆ) ತಮ್ಮ ಮನೆಯಲ್ಲಿದ್ದಾಗ, ಹಾವೊಂದು ಅವರ ಕಿರುಬೆರಳನ್ನು ಕಚ್ಚಿತು. ವಿಷಪೂರಿತ ಹಾವಾದ್ದರಿಂದ ವಿಷ ಹರಡಲಾರಂಭಿಸಿತು. ತಡೆಯಲಾರದ ನೋವಿನಿಂದ ಒದ್ದಾಡುತ್ತಿದ್ದ ಶ್ಯಾಮಾ, ತಮ್ಮ ಅಂತ್ಯಕಾಲ ಬಂತೆಂದೇ ತಿಳಿದರು. ಅವರ ಸ್ನೇಹಿತರು ಅವರನ್ನು ಇಂತಹ ಹಾವಿನ ಕಡಿತಕ್ಕೆ ಚಿಕಿತ್ಸೆಯ ವ್ಯವಸ್ಥೆ ಇರುವ ವಿರೋಬಾ ದೇವಾಲಯಕ್ಕೆ ಕರೆದುಕೊಂಡು ಹೋಗಬೇಕು ಎಂದುಕೊಂಡರು. ಆದರೆ, ಶ್ಯಾಮಾ ತಮ್ಮ ಅಂತ್ಯಕಾಲದಲ್ಲಿ, ತಮ್ಮ ಆರಾಧ್ಯ ದೈವವಾದ ಬಾಬಾರನ್ನು ಕೊನೆಯಸಲ ದರ್ಶನಮಾಡಬೇಕೆಂದು, ತಮ್ಮ ಶಕ್ತಿಯೆಲ್ಲಾ ಸೇರಿಸಿ ಮಸೀದಿಗೆ ಓಡಿದರು. ಇನ್ನೇನು ಮೆಟ್ಟಿಲು ಹತ್ತಬೇಕು ಎನ್ನುವಷ್ಟರಲ್ಲಿ ಒಳಗಡೆಯಿಂದ ಬಾಬಾ ಘರ್ಜಿಸಿದರು, "ಹೇ ಭಾತುರ್ದ್ಯಾ (ಪೂಜಾರಿ)! ಹತ್ತಬೇಡ. ಹತ್ತಲು ನಿನಗೆಷ್ಟು ಧೈರ್ಯ?". ಮತ್ತೊಂದು ಸಲ ಇನ್ನೂ ಜೋರಾಗಿ, ಆರ್ಭಟಿಸಿದರು, "ಇಳಿ. ಹೊರಟುಹೋಗು, ಹೋಗು." ಬಾಬಾರ ಮುಖ ಕೋಪದಿಂದ ಕೆಂಪಗಾಗಿ ಹೋಗಿತ್ತು.

ಇದನ್ನು ಕೇಳಿದ ಶ್ಯಾಮಾ ಏನೂ ಅರ್ಥವಾಗದೆ, ಅಧೀರರಾಗಿ, ನಿರಾಶೆಯಿಂದ ಏನೂ ಮಾಡಲೂ ತೋಚದೆ, ಅಲ್ಲೇ ನಿಂತುಬಿಟ್ಟರು. ಬಾಬಾರನ್ನು ತನ್ನ ಪ್ರಾಣಕ್ಕಿಂತಲೂ ಹೆಚ್ಚೆಂದುಕೊಂಡ ಶ್ಯಾಮಾ, ಮಸೀದಿಯೇ ತನ್ನ ಮನೆ ಎಂದು ಭಾವಿಸಿದ್ದರು. "ಬಾಬಾರೇ ತನ್ನನ್ನು ಮನೆ ಬಿಟ್ಟು ಓಡಿಸಿದರೆ, ಇನ್ನೆಲ್ಲಿಗೆ ಹೋಗಬೇಕು? ಬಾಬಾರೇ ಬೇಡವೆಂದ ಮೇಲೆ ತಾನು ಪ್ರಾಣದಿಂದಿದ್ದು ಪ್ರಯೋಜನವೇನು? ಹಾಗೆ ಪ್ರಾಣ ಹೋಗುವುದಾದರೆ, ಅದು ಬಾಬಾರ ಚರಣಗಳಲ್ಲಿಯೇ ಹೋಗಲಿ" ಎಂದುಕೊಳ್ಳುತ್ತಾ ಅವರು ಮಸೀದಿಯ ಒಳಕ್ಕೆ ಹೋಗಿ ಬಾಬಾರ ಪಾದಗಳಲ್ಲಿ ಕುಳಿತರು. ವೇಳೆಗೆ ಬಾಬಾ ಶಾಂತರಾಗಿ, ಶ್ಯಾಮಾರ ತಲೆಯಮೇಲೆ ಕೈಯಿಟ್ಟು, ಮೃದುವಾಗಿ ನೇವರಿಸುತ್ತಾ, "ಹೆದರಬೇಡ ಮಗು. ಚಿಂತೆಮಾಡಬೇಡ. ನಿನಗೇನೂ ಆಗುವುದಿಲ್ಲ. ಅಲ್ಲಾಮಾಲೀಕ್, ನಿನಗೆ ಒಳ್ಳೆಯದು ಮಾಡುತ್ತಾನೆ. ಮನೆಗೆ ಹೋಗಿ ಶಾಂತವಾಗಿ ಕುಳಿತುಕೋ. ಆಚೆ ಎಲ್ಲೂ ಹೋಗಬೇಡ. ನನ್ನನ್ನು ನಂಬು. ಧೈರ್ಯದಿಂದಿರು. ತಳಮಳಗೊಳ್ಳಬೇಡ" ಎಂದರು. ಸಾಂತ್ವನದ ಮಾತುಗಳನ್ನು ಕೇಳಿ, ಮನಸ್ಸಿನ ಕಳವಳವನ್ನು ಕಳೆದುಕೊಂಡು ಶ್ಯಾಮಾ ಮನೆ ಸೇರಿದರು.

ಶ್ಯಾಮಾ ಮಸೀದಿಯಿಂದ ಹೊರಗೆ ಹೋಗುತ್ತಲೇ, ಬಾಬಾ ತಾತ್ಯಾ ಪಾಟೀಲರನ್ನು ಕರೆದು, "ಶಾಮಾ ಜೊತೆಯಲ್ಲಿ, ಅವನ ಮನೆಗೆ ಹೋಗು. ಶಾಮಾ ತನಗಿಷ್ಟವಾದದ್ದು ಏನನ್ನಾದರೂ ತಿನ್ನಲಿ. ಮನೆಯೊಳಗೇ ಓಡಾಡಿಕೊಂಡು ಇರಲಿ. ಆದರೆ, ಯಾವುದೇ ಕಾರಣಕ್ಕಾಗಿಯೂ, ಅವನು ಮಲಗಿ ನಿದ್ರೆಮಾಡದಂತೆ ನೋಡಿಕೋ" ಎಂದರು. ಮುಸ್ಸಂಜೆಯಾಗುತ್ತಿದ್ದಂತೆ ಕಾಕಾನನ್ನು ಕರೆದು, "ಶ್ಯಾಮಾನಿಗೆ ತೂಕಡಿಕೆ ಬಂದರೂ, ಅವನು ಮಲಗಿಕೊಳ್ಳದೇ ಇರುವಂತೆ ನೋಡಿಕೋ" ಎಂದು ಹೇಳಿ ಕಳುಹಿಸಿದರು. ಅಂತಹ ಚಿಕಿತ್ಸೆ, ರಕ್ಷಣೆಗಳಿಂದ ಶ್ಯಾಮಾ ಅನತಿಕಾಲದಲ್ಲಿಯೇ ಚೇತರಿಸಿಕೊಂಡು, ಆರೋಗ್ಯವಂತರಾದರು. ಮತ್ತೆ ತನ್ನ ದೈವ, ಬಾಬಾರ ಸೇವೆಗೆ ಸಿದ್ಧರಾಗಿ ಬಂದರು.

ದೇವರೇ ಅಷ್ಟು ಆಸ್ಥೆಯಿಂದ ರಕ್ಷಣೆ ಕೊಟ್ಟು, ನೋಡಿಕೊಂಡ ಶ್ಯಾಮಾ ಪುಣ್ಯಾತ್ಮನಲ್ಲದೆ ಮತ್ತಿನ್ನೇನು? ಬಾಬಾರಲ್ಲಿ ಅಷ್ಟು ಉದ್ವೇಗ ಹುಟ್ಟಿಸಿ, ಅವರ ಕೋಪಕ್ಕೊಳಗಾದ ಹಾವು ಇನ್ನೆಷ್ಟು ಪುಣ್ಯ ಮಾಡಿತ್ತೋ? ಬಾಬಾ ಅಪರಿಮಿತ ಪ್ರೇಮ ವಿಶ್ವಾಸಗಳಿಂದ ತನ್ನ ಭಕ್ತರನ್ನು ಕಾಪಾಡುತ್ತಾರೆ ಎನ್ನುವುದಕ್ಕೆ ಇದಕ್ಕಿಂತ ಇನ್ನೇನು ಪುರಾವೆ ಬೇಕು? ಬರಿಯ ಮಾತುಗಳಿಂದಲೇ ಪ್ರಭಾವಿತವಾಗಿ, ಸರ್ಪದ ವಿಷದ ತೀವ್ರತೆಯೂ ಇಳಿದುಹೋಯಿತೆಂದರೆ, ಅದು ಅವರ ಅಪಾರ ಶಕ್ತಿಯ ಸೂಚನೆಯಷ್ಟೇ! ಸರ್ಪಕ್ಕೆ ಬಾಬಾರ ಅತಿ ಸನ್ನಿಹಿತ ಭಕ್ತನನ್ನು ಕಚ್ಚುವ ಧಾರ್ಷ್ಟ್ಯವಾದರೂ ಹೇಗೆ ಬಂತು? ನಾವು ಬಾಬಾರಿಗೆ ಅಂತಹ ಸನ್ನಿಹಿತ ಭಕ್ತರಾಗಲು ಸಾಧ್ಯವೇ? ನಾವು ಅವರನ್ನೇ ಅನುಗ್ರಹಿಸಲು ಕೇಳಿಕೊಳ್ಳಬೇಕು. ಬಾಬಾ ಅದನ್ನು ಅಪರಿಮಿತವಾಗಿ ಕೊಡಲು ಯಾವಾಗಲೂ ಸಿದ್ಧರಾಗಿದ್ದಾರೆ. ಆದರೆ ಮೊದಲು, ಅದಕ್ಕೆ ನಾವು ಅರ್ಹರಾಗಬೇಕು. ಅಂತಹ ಅರ್ಹತೆ ಪಡೆಯಲು ಬೇಕಾದ ಕೃಷಿಯನ್ನು ಈಗಲಿಂದಲೇ ಮಾಡೋಣ.

ಕಾಲರಾ ಮಹಾಮಾರಿ

ಅನಾರೋಗ್ಯಕರ ಪರಿಸರ ಇರುತ್ತಿದ್ದುದರಿಂದ, ಅಂದಿನ ಕಾಲದ ಹಳ್ಳಿಗಳಲ್ಲಿ ಕಾಲರಾದಂತಹ ಜಾಡ್ಯಗಳು ಹರಡುವುದು ಸಾಮಾನ್ಯವಾಗಿತ್ತು. ಶಿರಡಿಯೂ ಅದಕ್ಕೆ ಹೊರತಾಗಿರಲಿಲ್ಲ. ಶಿರಡಿಯಲ್ಲಿ ಕಾಲರಾ ಹರಡಿದಾಗ ಅಲ್ಲಿನ ಜನಕ್ಕೆ ಅದನ್ನು ನಿಯಂತ್ರಿಸಲು ಏನುಮಾಡಬೇಕೋ ತಿಳಿಯದೆ, ಪಂಚಾಯತಿಯ ಸಭೆ ಕರೆದು ಎರಡು ನಿಬಂಧನೆಗಳನ್ನು ಜಾರಿಮಾಡಿದರು. ಮೊದಲನೆಯದು: ಯಾವುದೇ ಸೌದೆ ಬಂಡಿಯನ್ನೂ ಊರೊಳಕ್ಕೆ ಬಿಡಕೂಡದು. ಎರಡನೆಯದು: ಎಂತಹುದೇ ಪ್ರಾಣಿವಧೆ ಮಾಡಕೂಡದು. ನಿಬಂಧನೆಗಳನ್ನು ಮೀರಿದವರಿಗೆ ಪಂಚಾಯತಿಯವರು ವಿಧಿಸಿದ ಶುಲ್ಕವನ್ನು ದಂಡವಾಗಿ ತೆರಬೇಕಾಗಿತ್ತು. ನಿಬಂಧನೆಗಳಿಗೆ ಯಾವುದೇ ಆಧಾರವೂ ಇರಲಿಲ್ಲ. ಅದೊಂದು ಕಾಲಾರಾ ಹರಡುವಿಕೆಯನ್ನು ತಡೆಯಬೇಕೆಂದು ತಾವೇ ಮಾಡಿಕೊಂಡಿದ್ದ ಸರಳವಾದ ನಿಬಂಧನೆಗಳು. ನಿಬಂಧನೆಗಳು, ದಂಡ, ಎಲ್ಲವೂ ಬರಿಯ ಬೂಟಾಟಿಕೆ ಎಂದು ಬಾಬಾರಿಗೆ ಗೊತ್ತು. ಅವರು ಅದಕ್ಕೆ ಬೆಲೆ ಕೊಡಲಿಲ್ಲ.

ನಿಬಂಧನೆಗಳು ಜಾರಿಯಲ್ಲಿರುವಾಗ ಒಂದು ಸೌದೆಗಾಡಿ ಶಿರಡಿಗೆ ಬಂತು. ಜನರಿಗೆ ಸೌದೆಯ ಅವಶ್ಯಕತೆ ಬಹಳವಾಗಿತ್ತು. ಆದರೂ ನಿಬಂಧನೆಗಳಿಗೆ ಹೆದರಿ, ಯಾರೂ ಅದನ್ನು ಒಳಗೆ ಬಿಡಲಿಲ್ಲ. ಗಲಾಟೆಯನ್ನು ಕೇಳಿದ ಬಾಬಾ ತಾವೇ ಸ್ವತಃ ಹೋಗಿ ಗಾಡಿಯನ್ನು ಊರೊಳಕ್ಕೆ ಕರೆದುಕೊಂಡು ಬಂದು, ಸೌದೆಯನ್ನೆಲ್ಲಾ ಮಸೀದಿಯಲ್ಲಿ ಹಾಕಿಸಿ, ಗಾಡಿಯವನಿಗೆ ಹಣ ಕೊಟ್ಟು ಕಳುಹಿಸಿದರು. ಬಾಬಾರ ಕಾರ್ಯವನ್ನು ಬೇಡವೆಂದು ಹೇಳಲು, ಯಾರಿಗೂ ಧೈರ್ಯವಾಗಲಿಲ್ಲ. ಬಾಬಾ ಅಗ್ನಿಹೋತ್ರಿಯಂತೆ ಹಗಲೂ ರಾತ್ರಿ ಧುನಿಯನ್ನು ಉರಿಸುತ್ತಿದ್ದರು. ಅದಕ್ಕೆ ಅವರಿಗೆ ಕಟ್ಟಿಗೆಯ ಅವಶ್ಯಕತೆ ಯಾವಾಗಲೂ ಇರುತ್ತಿತ್ತು. ಪಂಚಭೂತಗಳನ್ನು ಅಧೀನದಲ್ಲಿಟ್ಟುಕೊಂಡಿರುವವರಿಗೆ, ತನ್ನ ಸಟ್ಕಾದ ಒಂದು ಹೊಡೆತದಿಂದ ಬೆಂಕಿಯನ್ನು ತರಿಸಬಲ್ಲವರಿಗೆ ಕಟ್ಟಿಗೆಯ ಅವಶ್ಯಕತೆಯಾದರೂ ಏನು? ಆದರೂ ಅವರು ಕಟ್ಟಿಗೆಯನ್ನು ಕೂಡಿಡುತ್ತಿದ್ದರು. ಜನರಿಗೆ ಕಟ್ಟಿಗೆಯ ಅವಶ್ಯಕತೆ ಇದ್ದರೂ, ನಿಬಂಧನೆಗಳಿಂದ ಅವರು ಕಟ್ಟಿಗೆ ತರಲಾರದೆ, ಮಸೀದಿಯ ಬಾಗಿಲು ಸದಾ ತೆರೆದೇ ಇರುವುದರಿಂದ, ಯಾರಾದರೂ ಒಳಗೆ ಬಂದು ತೆಗೆದುಕೊಂಡು ಹೋಗಲಿ, ಎಂದು ಬಾಬಾ ಕಟ್ಟಿಗೆ ತೆಗೆದುಕೊಂಡು ಹೋಗಲು ಯಾರನ್ನೂ ಅಡ್ಡಿಮಾಡುತ್ತಿರಲಿಲ್ಲ.

ಬಡೇ ಬಾಬಾರ ಕಥೆ

ಬಡೇ ಬಾಬಾರ ಪೂರ್ತಿ ಹೆಸರು, ಪೀರ್ ಮೊಹಮ್ಮದ್ ಯಾಸೀನ್ ಮಿಯ ಎಂದು. ಅವರನ್ನು ಫಕೀರ್ ಬಾಬಾ ಎಂದೂ ಕರೆಯುತ್ತಿದ್ದರು. ತಮ್ಮದೇ ಎಂದು ಹೇಳಿಕೊಳ್ಳಲು ಯಾವ ಊರೂ ಇರಲಿಲ್ಲ. ಯಾವಾಗಲೂ ಸುತ್ತುತ್ತಿದ್ದರು. ೧೯೦೯ರಲ್ಲಿ ಶಿರಡಿಗೆ ಬಂದರು. ಶಿರಡಿಗೆ ಬರುವ ಮೊದಲು, ಅವರು ಔರಂಗಾಬಾದಿನಲ್ಲಿ ಇದ್ದರೆಂದು ಹೇಳುತ್ತಾರೆ. ಅಲ್ಲೇ, ಬಾಬಾ ಅವರನ್ನು ಖುರಾನನ್ನು ಓದಲು ಹೇಳಿದರು. ಹಾಗೆ ಅವರಿಗೆ ಅಧ್ಯಾತ್ಮಿಕ ದಾರಿಯನ್ನು ಬಾಬಾ ತೋರಿಸಿದರು. ಸ್ವಲ್ಪಕಾಲ ಶಿರಡಿಯಲ್ಲಿದ್ದು ನಂತರ ಬಡೇ ಬಾಬಾ ನೀಮ್‍ಗಾಂವ್‍ಗೆ ಹೋದರು. ದಿನವೂ ಬೆಳಗ್ಗೆ, ಶಿರಡಿಗೆ ಬಂದು ಊಟದ ಸಮಯದವರೆಗೂ ಶಿರಡಿಯಲ್ಲಿ ಇರುತ್ತಿದ್ದರು. ಅವರನ್ನು ಬಾಬಾ ಬಹಳವಾಗಿ ಗೌರವಿಸುತ್ತಿದ್ದರು. ಬಡೇಬಾಬಾ ಶಿರಡಿಯಲ್ಲಿರುವವರೆಗೂ ಬಾಬಾ ಅವರನ್ನು ಬಿಟ್ಟು ಊಟಮಾಡುತ್ತಿರಲಿಲ್ಲ. ಬಡೇಬಾಬಾ ಹುಕ್ಕಾ ಸೇದಿದ ನಂತರವೇ ಬಾಬಾ ಅದನ್ನು ತೆಗೆದುಕೊಳ್ಳುತ್ತಿದ್ದರು. ಅತಿಥಿಯನ್ನು ದೇವರಂತೆ ಕಾಣಬೇಕೆಂಬುದು ನಮ್ಮ ನಂಬಿಕೆ. ಅದರಂತೆ ಬಾಬಾ ಅವರನ್ನು ಯಾವಾಗಲೂ ಅತಿಥಿಯಂತೆ ಕಾಣುತ್ತಿದ್ದರು. ಬಾಬಾ ಪ್ರತಿದಿನ ಬಡೇಬಾಬಾರಿಗೆ ೫೦ ರೂಪಾಯಿಗಳನ್ನು ಕೊಡುತ್ತಿದ್ದರು. ಬಡೇಬಾಬಾ ಶಿರಡಿಯಿಂದ ಹೊರಡುವಾಗ, ಬಾಬಾ ಅವರ ಜೊತೆ ಹತ್ತುಹೆಜ್ಜೆ ಹಾಕಿ ಅವರನ್ನು ಬೀಳ್ಕೊಟ್ಟು ಬರುತ್ತಿದ್ದರು.

ಗುರುಭಕ್ತಿಯ ಪರೀಕ್ಷೆ

ಕಾಲರಾ ನಿಬಂಧನೆಗಳು ಶಿರಡಿಯಲ್ಲಿ ಜಾರಿಯಲ್ಲಿದ್ದಾಗ ಯಾರೋ ಒಬ್ಬರು ಒಂದು ಮೇಕೆಯನ್ನು ಮಸೀದಿಗೆ ಕರೆತಂದರು. ಬಡೇಬಾಬಾ ಆಗ ಅಲ್ಲೇ ಇದ್ದರು. ಸಾಯಿಬಾಬಾ ಅವರನ್ನು ಕರೆದು, ಮೇಕೆಯನ್ನು ಒಂದೇ ಏಟಿಗೆ ಹೊಡೆದು ಕೊಲ್ಲುವಂತೆ ಹೇಳಿದರು. ಕಾರಣವಿಲ್ಲದೆ ಏಕೆ ಕೊಲ್ಲಬೇಕೆಂದು ಬಡೇಬಾಬಾ ಅವರ ಆಜ್ಞೆಯನ್ನು ನಿರ್ದಾಕ್ಷಿಣ್ಯವಾಗಿ ನಿರಾಕರಿಸಿದರು. ನಂತರ ಶ್ಯಾಮಾರಿಗೆ ಅದನ್ನು ಕೊಲ್ಲುವಂತೆ ಬಾಬಾ ಹೇಳಿದರು. ಅವರು ರಾಧಾಕೃಷ್ಣಮಾಯಿಯ ಮನೆಗೆ ಹೋಗಿ, ಒಂದು ಕಡಿಗತ್ತಿಯನ್ನು ತಂದು ಬಾಬಾ ಪದತಲದಲ್ಲಿಟ್ಟರು. ಕಡಿಗತ್ತಿ ಏತಕ್ಕೆ ಎಂಬುದನ್ನು ತಿಳಿದ ರಾಧಾಕೃಷ್ಣಮಾಯಿ ಕೂಡಲೇ ಅದನ್ನು ಹಿಂತಿರುಗಿಸಲು ಹೇಳಿದರು. ಶ್ಯಾಮಾ ಇನ್ನೊಂದು ಕತ್ತಿ ತರುತ್ತೇನೆಂದು ಹೇಳಿ, ಹೋದವರು ಹಿಂತಿರುಗಲೇ ಇಲ್ಲ. ಮತ್ತೆ ಬಾಬಾ, ಕಾಕಾ ಸಾಹೇಬ್ ದೀಕ್ಷಿತರನ್ನು ಕರೆದು, ಕತ್ತಿ ತಂದು ಮೇಕೆಯ ತಲೆ ಕಡಿಯುವಂತೆ ಹೇಳಿದರು. ಕಾಕಾ ಹೋಗಿ ಕತ್ತಿ ತಂದು, ಮೇಕೆಯನ್ನು ಕೊಲ್ಲಲು ಸಿದ್ಧರಾದರು. ದೀಕ್ಷಿತ್ ಸಂಪ್ರದಾಯ ನಿಷ್ಠರಾದ ಬ್ರಾಹ್ಮಣ ಮನೆತನದಲ್ಲಿ ಹುಟ್ಟಿದವರು. ತಾವಾಗಿಯೇ ಒಂದು ಇರುವೆಯನ್ನೂ ಸಾಯಿಸಿದವರಲ್ಲ. ಮೇಕೆಯ ಕತ್ತು ಹೇಗೆ ಕತ್ತರಿಸುತ್ತಾರೆ ಎಂಬುದನ್ನು ಕಂಡವರೂ ಅಲ್ಲ. ಅವರಿಗೆ ಬಾಬಾ ಆಜ್ಞೆಯನ್ನು ಪರಿಪಾಲಿಸುವುದಷ್ಟೇ ಗೊತ್ತಿತ್ತು. ಅಲ್ಲಿ ನೆರೆದಿದ್ದವರೆಲ್ಲರೂ ಬಡೇಬಾಬಾರೇ ಬಾಬಾರ ಆಜ್ಞೆಯನ್ನು ನಿರಾಕರಿಸಿದಾಗ, ಬಡ ಬ್ರಾಹ್ಮಣ ಅದಕ್ಕೆ ಹೇಗೆ ತಯಾರಾಗಿ ನಿಂತಿದ್ದಾನೆ ಎಂದು ಆಶ್ಚರ್ಯಪಟ್ಟರು. ಮಧ್ಯೆ ಕಾಕಾ ಪಂಚೆ ಎತ್ತಿಕಟ್ಟಿ ಕತ್ತಿಯನ್ನು ಮೇಲಕ್ಕೆತ್ತಿ ಹಿಡಿದು, ಮೇಕೆಯನ್ನು ಹೊಡೆಯಲು ಸಿದ್ದರಾದರು. ಅಷ್ಟರಲ್ಲಿ ಬಾಬಾ, "ನಿಲ್ಲಿಸು, ನೀನೆಷ್ಟು ಕಟುಕನಯ್ಯಾ! ಬ್ರಾಹ್ಮಣನಾಗಿ ಮೇಕೆಯನ್ನು ಕೊಲ್ಲಲು ಹೊರಟಿದ್ದೀಯಾ?" ಎಂದು ಗಟ್ಟಿಯಾಗಿ ಕೇಳಿದರು. ಬಾಬಾರ ಆಜ್ಞೆಯನ್ನು ಪಾಲಿಸಿ, ಕತ್ತಿಯನ್ನು ಕೆಳಕ್ಕಿಟ್ಟು, ಕಾಕಾ ಕೈಜೋಡಿಸಿ ಹೇಳಿದರು, "ದೇವಾ, ನಿಮ್ಮ ಮಾತೇ ನಮಗೆ ಕಾನೂನು. ಆಜ್ಞೆ. ನಮಗೆ ಬೇರೆ ಯಾವ ವಿಧಿಯೂ ತಿಳಿಯದು. ನೀವು ಹೇಳಿದ ಮಾತು ಕೇಳಿ, ಅದನ್ನು ನೆನಪಿಟ್ಟು, ಮನನಮಾಡಿ ಅದರಂತೆ ನಡೆಯುವುದೇ ನಮ್ಮ ಕೆಲಸ. ಅದು ಏನು? ಯಾಕೆ? ಸರಿಯೋ, ತಪ್ಪೋ, ನಮಗೆ ತಿಳಿಯದು. ಅದರ ವಿಶ್ಲೇಷಣೆಯೂ ನಮಗೆ ಬೇಡ. ಗುರುವಿನ ಆಜ್ಞೆಯನ್ನು ಚಾಚೂತಪ್ಪದೇ ನಡೆಸುವುದೇ ನಮ್ಮ ಕರ್ತವ್ಯ. ಅದೇ ನಮ್ಮ ಧರ್ಮ" ಎಂದರು. ನಂತರ ಬಾಬಾ ಅದನ್ನು ತಾನೇ ಕೊಲ್ಲುತ್ತೇನೆಂದು ಹೇಳಿ ಅದನ್ನು ತಾಕಿಯಾಕ್ಕೆ ಕರೆದುಕೊಂಡು ಹೋಗಲು ಹೇಳಿದರು. ಮೇಕೆ ತಾಕಿಯಾಕ್ಕೆ ಹೋಗುವ ದಾರಿಯಲ್ಲೇ ಸತ್ತುಹೋಯಿತು.

ಮೇಲಿನ ಘಟನೆಯಿಂದ ಪ್ರೇರಿತರಾದ ಹೇಮಾಡ್ ಪಂತ್, ಶಿಷ್ಯರನ್ನು ಮೂರು ವಿಧವಾಗಿ ವಿಂಗಡಿಸಬಹುದೆನ್ನುತ್ತಾರೆ:

. ಉತ್ತಮ
. ಮಧ್ಯಮ
. ಸಾಮಾನ್ಯ

ಉತ್ತಮ ಶಿಷ್ಯರು ಗುರುವು ಹೇಳಬಹುದಾದ್ದನ್ನು ಮೊದಲೇ ಊಹಿಸಿ, ಮಾಡಬೇಕಾದ್ದನ್ನು ಮಾಡುತ್ತಾರೆ. ಮಧ್ಯಮರು, ಮಾಡಬೇಕಾದ್ದನ್ನು ಗುರುವು ಹೇಳಿದಮೇಲೆ, ಮಾಡುತ್ತಾರೆ. ಸಾಮಾನ್ಯರು, ಮಾಡಬೇಕಾದ್ದನ್ನು ಗುರು ಹೇಳಿದಮೇಲೂ ಮಾಡದೆ, ತಡವಾಗಿ ತಪ್ಪು ತಪ್ಪಾಗಿ ಮಾಡುತ್ತಾರೆ.

ಸಂಪೂರ್ಣ ನಂಬಿಕೆಯಿಟ್ಟು, ಸಹನೆಯಿಂದ ಕೂಡಿದ ಶ್ರದ್ಧಾ ಭಕ್ತಿಗಳೊಡನೆ ಅರ್ಪಣಾಭಾವದಲ್ಲಿ ಗುರುವನ್ನು ಹಿಂಬಾಲಿಸುವ ಶಿಷ್ಯನಿಗೆ, ಆಧ್ಯಾತ್ಮಿಕ ಗುರಿ ಎನ್ನುವುದು ಅಸಾಧ್ಯವಾಗಲಾರದು. ಶಿಷ್ಯ ಮುಂದಿನ ಶಿಕ್ಷಣಕ್ಕೆ ಅರ್ಹನಾದಾಗ ಗುರುವೇ ಅವನ ಕೈಹಿಡಿದು ಸರಿಯಾದ ಮಾರ್ಗದಲ್ಲಿ ನಡೆಸಿ ಗುರಿಮುಟ್ಟಿಸುತ್ತಾನೆ.

ಇದರೊಂದಿಗೆ ಯೋಗ ಮತ್ತು ಈರುಳ್ಳಿ, ಶ್ಯಾಮಾರನ್ನು ರಕ್ಷಿಸಿದ್ದು ಮತ್ತು ಇತರ ವಿಷಯಗಳನ್ನು ಕುರಿತು ಹೇಳುವ ಇಪ್ಪತ್ತಮೂರನೆಯ ಅಧ್ಯಾಯ ಮುಗಿಯಿತು. ಮುಂದಿನ ಅಧ್ಯಾಯದಲ್ಲಿ ಹೇಮಾಡ್ ಪಂತ್ ಬಾಬಾರ ಬುದ್ಧಿಮತ್ತೆ ಮತ್ತು ಹಾಸ್ಯ ಇತ್ಯಾದಿ ವಿಷಯಗಳನ್ನು ಹೇಳುತ್ತಾರೆ

||ಶ್ರೀ ಸದ್ಗುರು ಸಾಯಿನಾಥಾರ್ಪಣಮಸ್ತು||ಶುಭಂ ಭವತು||
||ಓಂ ಶಾಂತಿಃ ಶಾಂತಿಃ ಶಾಂತಿಃ||