Thursday, December 22, 2011

||ಹದಿನೈದನೆಯ ಅಧ್ಯಾಯ||


||ಶ್ರೀ ಸಾಯಿ ಸಚ್ಚರಿತ್ರೆ||
||ಹದಿನೈದನೆಯ ಅಧ್ಯಾಯ||
||ಸಕ್ಕರೆಯಿಲ್ಲದ ಚಹ ಮತ್ತು ಹಲ್ಲಿಗಳ ಕಥೆ||
ಶ್ರೀ ಗಣೇಶಾಯ ನಮಃ ಶ್ರೀ ಸರಸ್ವತಯೇ ನಮಃ
ಶ್ರೀ ವೆಂಕಟೇಶಾಯ ನಮಃ ಶ್ರೀ ಸಾಯಿನಾಥಾಯ ನಮಃ
ಶ್ರೀ ಸದ್ಗುರುಭ್ಯೋನ್ನಮಃ

ಈ ಅಧ್ಯಾಯದಲ್ಲಿ ಹೇಮಾಡ್ ಪಂತ್, ನಾರದೀಯ ಕೀರ್ತನಾ ಪದ್ಧತಿ, ಚೋಳ್ಕರರ ಸಕ್ಕರೆಯಿಲ್ಲದ ಚಹ, ಎರಡು ಹಲ್ಲಿಗಳ ಕಥೆ ಮತ್ತು ಇತರ ವಿಷಯಗಳನ್ನು ಹೇಳುತ್ತಾರೆ.

ನಾರದೀಯ ಕೀರ್ತನಾ ಪದ್ಧತಿ

ನಮ್ಮ ಪೂರ್ವಾರ್ಜಿತ ಸುಕೃತಪುಣ್ಯಫಲಗಳಿಂದಲೇ ನಾವು ಶ್ರೀ ಸಾಯಿ ಬಾಬಾರ ದರ್ಶನ ಪಡೆಯಲು ಅರ್ಹರಾದೆವು. ಅವರ ದರ್ಶನವೇ ನಮ್ಮನ್ನು ಆಧ್ಯಾತ್ಮಿಕ ಪುರೋಭಿವೃದ್ಧಿಯ ದಾರಿಯಲ್ಲಿ ಕರೆದುಕೊಂಡು ಹೋಗುತ್ತದೆ. ದಯಾಹೃದಯಿ, ಕ್ಷಮಾಶೀಲ ಬಾಬಾ, ಭಕ್ತರಿಗೋಸ್ಕರ ಯಾವಾಗಲೂ ಪ್ರೀತಿ ವಿಶ್ವಾಸಗಳಿಂದ ತುಂಬಿರುತ್ತಿದ್ದರು. ಯಾರು ಅವರ ಲೀಲೆಗಳನ್ನು, ಕಥೆಗಳನ್ನು ಕೇಳುತ್ತಾರೋ, ಓದುತ್ತಾರೋ ಅವರಿಗೆ ಬಾಬಾ ದರ್ಶನ ಸುಲಭಸಾಧ್ಯ.

ಇಂತಹ ಕಥೆಗಳನ್ನು ಕೇಳಲು ಅನುಕೂಲವಾಗುವಂತೆ ಕೀರ್ತನಾ ಸಭೆಗಳನ್ನು ಏರ್ಪಡಿಸುತ್ತಿದ್ದರು. ಕೀರ್ತನಕಾರರು ನಮ್ಮ ಪುರಾಣಗಳಿಂದ ಆಯ್ದ ಕಥೆಗಳನ್ನು ಗದ್ಯ ಪದ್ಯ ರೂಪದಲ್ಲಿ ತಕ್ಕ ಪಕ್ಕ ವಾದ್ಯಗಳೊಡನೆ ವಿವರಿಸುತ್ತಾ, ಸುಶ್ರಾವ್ಯವಾಗಿ ಹಾಡುತ್ತಾ, ಉಪಕಥೆಗಳು, ಆಧ್ಯಾತ್ಮಿಕ ವಿಚಾರಗಳನ್ನು ಹೇಳುತ್ತಾ, ಶ್ರೋತೃಗಳಿಗೆ ಆನಂದವನ್ನು ಉಂಟುಮಾಡುತ್ತಾರೆ. ಸಾಮಾನ್ಯವಾಗಿ ರಾತ್ರಿ ಹೊತ್ತಾದನಂತರ ಆರಂಭವಾಗುವ ಈ ಕೀರ್ತನೆಗಳು ಬೆಳಗಿನ ಜಾವದವರೆಗೂ ನಡೆಯುವುದುಂಟು. ಈ ಕೀರ್ತನಾ ವಿಧಾನಕ್ಕೆ ಪುರಾಣೋಕ್ತ ನಾರದ ಮಹರ್ಷಿಗಳು ಮೂಲ ಪುರುಷರು. ಅವರು ಒಂದು ಪಂಚೆಯುಟ್ಟು, ಒಂದು ಕೈಯಲ್ಲಿ ತಾಳ, ಇನ್ನೊಂದು ಕೈಯಲ್ಲಿ ತಂಬೂರಿ ಹಿಡಿದು, ಕೊರಳಲ್ಲಿ ರುದ್ರಾಕ್ಷಮಾಲೆ, ಹೂವಿನ ಹಾರ ಹಾಕಿಕೊಂಡು, ನೀಳವಾದ ಕೂದಲನ್ನು ಶಿಖೆಯಂತೆ ಸುತ್ತಿ, ಪರಮಾತ್ಮನ ಲೀಲಾವಿನೋದಗಳನ್ನು ಹಾಡುತ್ತಾ, ಲೋಕ ಲೋಕಗಳನ್ನೂ ಸುತ್ತುತ್ತಿದ್ದರು.

ಆದರೆ ಬರುಬರುತ್ತಾ, ಈ ಸರಳ ಉಡುಗೆ ಬದಲಾಗಿ ಚಿತ್ತಾಕರ್ಷಕ ದಿರಸುಗಳನ್ನು ಧರಿಸಿ, ಕೀರ್ತನೆಗಳನ್ನು ಹೇಳುವ ಅಭ್ಯಾಸ ಮೊದಲಾಯಿತು. ಕೆಲವರಂತೂ ಮಹಾರಾಜರಂತೆ ಪೋಷಾಕು ಧರಿಸಿ ಕೀರ್ತನೆ ಮಾಡಲಾರಂಭಿಸಿದರು. ದಾಸಗಣು ಕೂಡಾ ಈ ರೀತಿಯ ಪೋಷಾಕು ಹಾಕಿಕೊಂಡು ಕೀರ್ತನೆ ಮಾಡುತ್ತಿದ್ದರು.

ಬಾಬಾ ಶಿರಡಿಯಲ್ಲಿ ರಾಮೋತ್ಸವದ ದಿನ ಕೀರ್ತನೆ ಮಾಡುವ ಜವಾಬ್ದಾರಿಯನ್ನು ದಾಸಗಣೂಗೆ ವಹಿಸಿದಮೇಲೆ, ಒಂದುಸಲ, ಮೇಲೆ ಹೇಳಿದ ರೀತಿಯಲ್ಲಿ ಪೋಷಾಕು ಧರಿಸಿ ಕೀರ್ತನೆ ಮಾಡುವುದಕ್ಕೆ ಮುಂಚೆ, ಬಾಬಾರ ಆಶೀರ್ವಾದ ಪಡೆಯಲು ಹೋದರು. ಬಾಬಾ ಅವರನ್ನು ನಗೆ ತರುವ ಅಂತಹ ಪೋಷಾಕಿನಲ್ಲಿ ನೋಡುತ್ತಲೇ, "ಏನಯ್ಯಾ ಮದುವೆ ಗಂಡೇ, ಈ ಪೋಷಾಕು ಧರಿಸಿ ಹೋಗುತ್ತಿರುವುದಾದರೂ ಎಲ್ಲಿಗೆ?" ಎಂದು ಕೇಳಿದರು. ದಾಸಗಣು, "ಕೀರ್ತನೆ ಮಾಡುವುದಕ್ಕೆ" ಎಂದರು. ಅದನ್ನು ಕೇಳಿದ ಬಾಬಾ ನಗುತ್ತಾ, "ಕೀರ್ತನೆ ಹೇಳುವುದಕ್ಕೆ ಈ ಕೋಟು, ಪೇಟಾ, ಇವೆಲ್ಲಾ ಏತಕ್ಕೆ? ಮೊದಲು ಅವನ್ನೆಲ್ಲಾ ಬಿಚ್ಚಿ ಸರಳವಾಗಿ ಒಂದು ಪಂಚೆ ಉಟ್ಟು ಕೀರ್ತನೆ ಮಾಡು" ಎಂದರು. ಕೂಡಲೇ ದಾಸಗಣು ಅವನ್ನೆಲ್ಲಾ ತೆಗೆದುಹಾಕಿ, ಒಂದು ಪಂಚೆಯುಟ್ಟು, ಕೈಯಲ್ಲಿ ಒಂದು ಚಿಪಳಿ ಹಿಡಿದು, ಕೊರಳಲ್ಲಿ ಒಂದು ಹಾರ ಹಾಕಿಕೊಂಡು ತಯಾರಾದರು. ತಂಬೂರಿಯಿರಲಿಲ್ಲ. ಆದರೆ ಬಾಬಾ ಹೇಳಿದಂತೆ ಆ ಭಗವಂತನ ಕೀರ್ತಿ ಪ್ರತಿಷ್ಠೆಗಳನ್ನು ಹಾಡುವುದು ಮುಖ್ಯವೇ ಹೊರತು, ವೇಷ ಭೂಷಣಗಳಲ್ಲ.

ಚೋಳ್ಕರರ ಸಕ್ಕರೆಯಿಲ್ಲದ ಚಹ

ಮೊದಮೊದಲು ಬಾಬಾರ ಕೀರ್ತಿ ಅಷ್ಟೊಂದು ಹರಡಿರಲಿಲ್ಲ. ಪೂನಾ ಅಹಮದ್ ನಗರಗಳಲ್ಲಿ ಮಾತ್ರ ಜನರಿಗೆ ಬಾಬಾರ ಬಗ್ಗೆ ತಿಳಿದಿತ್ತು. ನಾನಾಸಾಹೇಬ್ ಚಾಂದೋರ್ಕರ್ ಮತ್ತು ದಾಸಗಣು ಇಬ್ಬರೂ ಮುಖ್ಯವಾಗಿ ಕೊಂಕಣ ದೇಶದಲ್ಲಿ ಅವರ ಕೀರ್ತಿ ಹಬ್ಬಲು ಕಾರಣರಾದರು. ಚಾಂದೋರ್ಕರ್ ಅವಕಾಶ ದೊರೆತಾಗಲೆಲ್ಲಾ ಬಾಬಾರನ್ನು ಕುರಿತು ಎಲ್ಲರಿಗೂ ತಿಳಿಯ ಹೇಳುತ್ತಿದ್ದರು. ದಾಸಗಣು ತಮ್ಮ ಕೀರ್ತನೆಗಳಿಂದ ಬಾಬಾರ ಕೀರ್ತಿ ಎಲ್ಲ ಕಡೆಗೂ ಪಸರಿಸುವಂತೆ ಮಾಡಿದರು. ತಾವು ಎಲ್ಲೇ ಕೀರ್ತನೆ ಮಾಡಲಿ, ದಾಸಗಣು ತಪ್ಪದೆ ಬಾಬಾರ ಲೀಲೆಗಳನ್ನು, ಕಥೆಗಳನ್ನೂ ಹೇಳುತ್ತಿದ್ದರು. ಆಗಿನ ಕಾಲದಲ್ಲಿ ಈ ಕೀರ್ತನೆಗಳು ಜನರಿಗೆ ಬೋಧಪ್ರದವಾಗಿಯೂ, ಮನೋರಂಜಕವಾಗಿಯೂ ಇರುತ್ತಿದ್ದವು. ಅದರಿಂದ ಜನ ಹೆಚ್ಚಾಗಿ ಸೇರುತ್ತಿದ್ದರು. ಕೆಲವರು ಅದರಲ್ಲಿನ ಆಧ್ಯಾತ್ಮಿಕ ವಿಷಯಗಳಿಗಾಗಿ ಬರುತ್ತಿದ್ದರು. ಕೆಲವರು ಕೀರ್ತನಕಾರರು ಹೇಳುವ ಸಂಗೀತವನ್ನು ಕೇಳಲು ಬರುತ್ತಿದ್ದರು. ಕೆಲವರು ಅದರಲ್ಲಿನ ಉಪಕಥೆಗಳು, ಇನ್ನು ಕೆಲವರು, ಕೀರ್ತನಕಾರರು ಹೇಳುವ ಹಾಸ್ಯ ಕೇಳಲು, ಮತ್ತೂ ಕೆಲವರು ಸುಮ್ಮನೆ ಕಾಲ ಕಳೆಯಲು ಹೀಗೆ ನಾನಾ ಕಾರಣಗಳಿಂದ ಜನ ಸೇರುತ್ತಿದ್ದರು. ಆದರೆ ಅದರಲ್ಲಿನ ನೀತಿಯನ್ನು ಅರ್ಥಮಾಡಿಕೊಂಡು, ಅದನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಋಜುಮಾರ್ಗದಲ್ಲಿ ನಡೆಯಬೇಕೆಂಬ ಮನಸ್ಸಿನಿಂದ ಬರುತ್ತಿದ್ದವರು ಬಹಳ ಕಡಮೆ.

ದಾಸಗಣು ಒಬ್ಬ ಅತಿಶ್ರೇಷ್ಠ ಕೀರ್ತನಕಾರರಾಗಿದ್ದರು. ಆತನಿಗೆ ಕೀರ್ತನೆ ಹೇಳುವ ಕಲೆ ಸಿದ್ಧಿಸಿತ್ತು. ಅವರ ಕೀರ್ತನೆಗಳು ಜನರನ್ನು ಮಂತ್ರಮುಗ್ಧರನ್ನಾಗಿ ಮಾಡುತ್ತಿದ್ದವು. ಅದರಿಂದ ಅವರ ಕೀರ್ತನೆಗಳಿಗೆ ಜನ ಬಹುಸಂಖ್ಯೆಯಲ್ಲಿ ಸೇರುತ್ತಿದ್ದರು. ಅವರು ಹೇಳುವ ಕೀರ್ತನೆಗಳಲ್ಲಿ ಬಾಬಾರ ವಿಷಯ ಯಾವಾಗಲೂ ಬಹಳ ಮುಖ್ಯವಾಗಿರುತ್ತಿತ್ತು. ಅದನ್ನು ಕೇಳುವ ಜನರಿಗೆ ಮೈಯಲ್ಲಿ ವಿದ್ಯುತ್ ಸಂಚಾರವಾದಂತಾಗಿ ಮೂಕರಾಗಿ ಹೋಗುತ್ತಿದ್ದರು. ಅಂತಹ ಒಂದು ಕೀರ್ತನಾ ಸಭೆಯಲ್ಲಿ ಚೋಳ್ಕರ್ ಒಬ್ಬ ಉತ್ಸಾಹಿ ಕೇಳುಗ.

ಒಂದುಸಲ, ದಾಸಗಣು ಥಾಣೆಯ ಕೌಪೀನೇಶ್ವರ ದೇವಾಲಯದಲ್ಲಿ ಬಾಬಾರ ಮಹಿಮೆಯನ್ನು ಕುರಿತು ಹೇಳುತ್ತಿದ್ದರು. ಚೋಳ್ಕರ್ ಅದನ್ನು ಏಕಾಗ್ರ ಮನಸ್ಸಿನಿಂದ ಕೇಳುತ್ತಿದ್ದರು. ಸಿವಿಲ್ ನ್ಯಾಯಾಸ್ಥಾನದಲ್ಲಿ ಚೋಳ್ಕರ್ ಒಬ್ಬ ಹಂಗಾಮಿ ಕಾರಕೂನ. ಆತನಿಗೆ ಇಲಾಖೆಯ ಪರೀಕ್ಷೆ ಪಾಸಾದರೆ ಮಾತ್ರ ನೌಕರಿ ಖಾಯಂ ಆಗುವುದು. ಈಗಾಗಲೇ ಒಂದುಸಲ ಪರೀಕ್ಷೆಯಲ್ಲಿ ಅನುತ್ತೀರ್ಣನಾಗಿದ್ದ. ಹಣದ ಕೊರತೆಯಿಂದ ತನ್ನ ದೊಡ್ಡ ಸಂಸಾರವನ್ನು ನಡೆಸಲು ಅಸಮರ್ಥನಾಗಿದ್ದ. ದಾಸಗಣು ಕೀರ್ತನೆ ಹೇಳಿದ್ದು ಎಷ್ಟು ಪರಿಣಾಮಕಾರಿಯಾಗಿತ್ತೆಂದರೆ, ಕೂತಲ್ಲಿಯೇ ಚೋಳ್ಕರ್, ಒಂದು ಹರಕೆ ಮಾಡಿಕೊಂಡ, "ತಾನು ಈ ವರ್ಷ ಪರೀಕ್ಷೆಯಲ್ಲಿ ಪಾಸಾಗಿ, ತನ್ನ ಕೆಲಸ ಖಾಯಂ ಆದರೆ, ಶಿರಡಿಗೆ ಬಂದು ನಿಮ್ಮ ದರ್ಶನ ಮಾಡಿ ಕಲ್ಲುಸಕ್ಕರೆ ಹಂಚುತ್ತೇನೆ" ಎಂದು.

ಬಾಬಾರ ಅನುಗ್ರಹವೋ ಎಂಬಂತೆ ಅವನು ಪರೀಕ್ಷೆಯಲ್ಲಿ ಪಾಸಾದ. ಕೆಲಸ ಖಾಯಂ ಆಯಿತು. ಶಿರಡಿಗೆ ಹೋಗಿ, ಆದಷ್ಟು ಬೇಗ ಹರಕೆಯನ್ನು ತೀರಿಸ ಬೇಕೆಂದು ಕೊಂಡರೂ, ಹಣದ ಅಡಚಣೆಯಿಂದಾಗಿ, ಅದು ಬೇಗ ಆಗುವ ಸಾಧ್ಯತೆಗಳು ಕಾಣಲಿಲ್ಲ. ಕೆಲಸ ಖಾಯಂ ಆದ ತಕ್ಷಣ ಹರಕೆಯನ್ನು ತೀರಿಸಲಾಗದಿದ್ದುದಕ್ಕಾಗಿ, ಚೋಲ್ಕರ್ ತನ್ನನ್ನು ತಾನು ಶಿಕ್ಷಿಸಿಕೊಳ್ಳಲು ನಿರ್ಧರಿಸಿಕೊಂಡ. ಹರಕೆಯು ತೀರುವವರೆವಿಗೆ, ಸಕ್ಕರೆಯಿಂದ ಮಾಡಿದ ಯಾವ ಪದಾರ್ಥವನ್ನೂ ತೆಗೆದು ಕೊಳ್ಳಲು ನಿರಾಕರಿಸಿದ. ಕಡೆಗೆ, ತಾನು ಕುಡಿಯುವ ಚಹಾದಲ್ಲೂ, ಸಕ್ಕರೆ ಹಾಕಿ ಕೊಳ್ಳದೆ ಕುಡಿಯಲಾರಂಭಿಸಿದ. ಸ್ವಲ್ಪಕಾಲದಲ್ಲೇ, ಶಿರಡಿಗೆ ಹೋಗಲು ಬೇಕಾದ ಹಣವನ್ನು ಕೂಡಿಹಾಕಿದ.

ಸಾಕಷ್ಟು ಹಣ ಜಮಾ ಆದಕೂಡಲೇ, ಸಂಸಾರದೊಂದಿಗೆ ಶಿರಡಿಗೆ ಹೋಗಿ, ಬಾಬಾರ ದರ್ಶನ, ಪಾದಾಭಿವಂದನ ಮಾಡಿಕೊಂಡು, ತೆಂಗಿನಕಾಯೊಂದನ್ನು ಸಮರ್ಪಿಸಿ, ನಂತರ ತನ್ನ ಹರಕೆಯಂತೆ ಎಲ್ಲರಿಗೂ ಕಲ್ಲುಸಕ್ಕರೆ ಹಂಚಿದ. ಬಾಬಾರ ದರ್ಶನವಾದದ್ದು ತನ್ನ ಅದೃಷ್ಟವೆಂದೂ, ಅವರ ಅನುಗ್ರಹದಿಂದಲೇ ತನ್ನ ಆಸೆಗಳು ಪೂರೈಸಿದ್ದು ಎಂದು ಬಿನ್ನವಿಸಿಕೊಂಡ. ಬಾಪೂ ಸಾಹೇಬ್ ಜೋಗ್ ಅವರ ಜೊತೆಯಲ್ಲಿ ಬಾಬಾರನ್ನು ಕಾಣಲು ಹೋಗಿದ್ದ ಅವನು ಮಸೀದಿಯಿಂದ ಹೊರಡುವುದರಲ್ಲಿದ್ದಾಗ, ಜೋಗ್ ಅವರಿಗೆ ಬಾಬಾ, "ನಿನ್ನ ಅತಿಥಿಗೆ ಚಹಾದಲ್ಲಿ ಹೆಚ್ಚಾಗಿ ಸಕ್ಕರೆ ಹಾಕಿ ಕೊಡು" ಎಂದರು. ಜೋಗರಿಗೆ ಬಾಬಾ ಏನು ಹೇಳುತ್ತಿದ್ದಾರೆ ಎಂಬುದು ಅರ್ಥವಾಗಲಿಲ್ಲ. ಆದರೆ ಅದನ್ನು ಅರ್ಥಮಾಡಿಕೊಂಡ ಚೋಳ್ಕರ್ ದಿಗ್ಭ್ರಮೆಗೊಂಡು, ಪುಳಕಿತನಾಗಿ, ಅವನ ಶ್ರದ್ಧೆ ದ್ವಿಗುಣವಾಗಿ, ಕಣ್ಣಿರು ಸುರಿಸುತ್ತಾ ಬಾಬಾರ ಚರಣಗಳಲ್ಲಿ ಮತ್ತೆ ತಲೆಯಿಟ್ಟು ಅಭಿವಂದನೆ ಮಾಡಿ, "ಬಾಬಾ, ಇದೇ ರೀತಿಯಲ್ಲಿ ನಮ್ಮನ್ನು ಯಾವಾಗಲೂ ಕಾಪಾಡುತ್ತಿರಿ" ಎಂದು ಬೇಡಿಕೊಂಡ. ಬಾಬಾ ಸರ್ವಜ್ಞರೆಂದೂ, ತನ್ನ ಹರಕೆಯ ವಿಷಯ ಅವರಿಗೆ ವಿವರವಾಗಿ ತಿಳಿದಿತ್ತೆಂದೂ, ಅರ್ಥಮಾಡಿಕೊಂಡ. ನಂತರ ಜೋಗರಿಗೆ ತಾನು ಹರಕೆ ಮಾಡಿಕೊಂಡದ್ದು, ಹಣ ಉಳಿತಾಯ ಮಾಡಿ ಶಿರಡಿಗೆ ಬಂದು ತನ್ನ ಹರಕೆ ಪೂರ್ತಿ ಮಾಡಿದ್ದು ಎಲ್ಲವನ್ನೂ ವಿವರವಾಗಿ ಹೇಳಿದ.

ಬಾಬಾ ಅನೇಕಸಲ ಹೀಗೆ ಹೇಳುತ್ತಿದ್ದರು, "ನನ್ನನ್ನು ಕೇಳಿ. ನಿಮಗೆ ಬೇಕಾದ್ದನ್ನು ಕೊಡುತ್ತೇನೆ. ನನ್ನನ್ನು ಕರೆಯಿರಿ. ನಿಮ್ಮ ಕರೆಗೆ ಓಗೊಡುತ್ತೇನೆ. ನಿಮ್ಮ ಹೃದಯ ಕವಾಟಗಳನ್ನು ತೆರೆದಿಡಿ. ನಾನು ಒಳಕ್ಕೆ ಬರುತ್ತೇನೆ, ಬಂದಮೇಲೆ ಜೀವನಪರ್ಯಂತ ನೀವೆಲ್ಲಿದ್ದರೂ ನಿಮ್ಮ ಜೊತೆಯಲ್ಲೇ ಇರುತ್ತೇನೆ. ನಾನು ಇಲ್ಲೇ ಇದ್ದರೂ, ನೀವು ಸಪ್ತಸಮುದ್ರಗಳ ಆಚೆ ಇದ್ದರೂ, ನೀವು ಎಲ್ಲಿ ಯಾವಾಗ ಏನು ಮಾಡುತ್ತಿದ್ದೀರಿ ಎಂಬುದೆಲ್ಲಾ ನನಗೆ ತಿಳಿಯುತ್ತದೆ. ನನ್ನನ್ನು ಪೂಜಿಸಿದವರನ್ನು ನಾನು ಸದಾ ರಕ್ಷಿಸುತ್ತೇನೆ. ಪುಣ್ಯವಂತರು ಮಾತ್ರ ನನ್ನಲ್ಲಿ ಪ್ರೀತಿ ವಿಶ್ವಾಸಗಳನ್ನು ತೋರುತ್ತಾರೆ."

ಇಂತಹ ಪರಮಪುರುಷ ಬಾಬಾರನ್ನು ಆಹ್ವಾನಿಸಲು ನಮ್ಮ ಹೃದಯಕವಾಟಗಳನ್ನು ಬಿಚ್ಚಿಡೋಣ. ಅವರು ನಿಶ್ಚಯವಾಗಿ ಬಂದೇ ಬರುತ್ತಾರೆ. ಬಂದಾಗ ಅವರಿಗೆ ಕಾಯಾ, ವಾಚಾ, ಮನಸಾ ಶರಣಾಗತರಾಗೋಣ. ಅವರ ಚರಣಾರವಿಂದಗಳಲ್ಲಿ ಬಿದ್ದು ಅವರ ರಕ್ಷೆ ಕೇಳಿಕೊಳ್ಳೋಣ.

ಎರಡು ಹಲ್ಲಿಗಳ ಕಥೆ

ಸಾಮಾನ್ಯವಾಗಿ, ಹಲ್ಲಿ ಲೊಚಗುಟ್ಟಿದ್ದನ್ನು ಕೇಳಿದರೆ, ಅಥವ ಮೈಮೇಲೆ ಬಿದ್ದರೆ, ಅಶುಭ ಸೂಚಕ ಎಂದು ನಮ್ಮಲ್ಲಿ ನಂಬಿಕೆ. ಕಾಂಚೀಪುರ ಮುಂತಾದ ಊರುಗಳಿಗೆ ಹೋಗಿ ಆ ಅಶುಭವನ್ನು ಕಳೆದುಕೊಳ್ಳುತ್ತಾರೆ. ಹಾಗೆ ಹೋಗಲಾರದವರು, ಹೋಗಿಬಂದವರ ಪಾದಸ್ಪರ್ಶ ಮಾಡಿಕೊಳ್ಳುವುದೂ ಉಂಟು.

ಒಂದುಸಲ ಮಸೀದಿಯಲ್ಲಿ ಬಾಬಾರ ಬಳಿ ಕುಳಿತಿದ್ದ ಭಕ್ತನೊಬ್ಬ ಹಲ್ಲಿ ಲೊಚಗುಟ್ಟಿದ್ದನ್ನು ಕೇಳಿ, ಅದು ಶುಭವೇ ಅಶುಭವೇ ಎಂದು ಬಾಬಾರನ್ನು ಕೇಳಿದ. ಅದಕ್ಕೆ ಬಾಬಾ ನಿಧಾನವಾಗಿ, "ಆ ಹಲ್ಲಿ ತನ್ನ ಸಹೋದರಿ ಔರಂಗಾಬಾದಿನಿಂದ ಇಂದು ಬರುತ್ತಿದ್ದಾಳೆ ಎಂದು ಸಂತೋಷದಿಂದ ಹೇಳಿಕೊಳ್ಳುತ್ತಿದೆ" ಎಂದರು. ಬಾಬಾ ಏನು ಹೇಳುತ್ತಿದ್ದಾರೆ ಎಂಬುದು ಯಾರಿಗೂ ಅರ್ಥವಾಗಲಿಲ್ಲ. ಎಲ್ಲರೂ ಸುಮ್ಮನಾದರು.

ಸ್ವಲ್ಪ ಹೊತ್ತಿನ ಮೇಲೆ ಕುದುರೆ ಸವಾರನೊಬ್ಬ ಔರಂಗಾಬಾದಿನಿಂದ ಮತ್ತೆಲ್ಲಿಗೋ ಹೋಗುತ್ತಿದ್ದವನು ಆಯಾಸ ಪರಿಹಾರಕ್ಕಾಗಿ ಶಿರಡಿಯಲ್ಲಿ ಇಳಿದು. ಕುದುರೆಯನ್ನು ಕಟ್ಟಿಹಾಕಿ, ಅದಕ್ಕೆ ಹುರುಳಿ ಕೊಡಲು ಚೀಲವನ್ನು ಎತ್ತಿ ಕೆಳಗೆ ಹಾಕಿದ. ಅದರಿಂದ ಒಂದು ಹಲ್ಲಿ ಈಚೆಗೆ ಬಂದು, ಎಲ್ಲರೂ ನೋಡುತ್ತಿದಂತೆಯೇ ಸರಸರನೆ ಹತ್ತಿರದ ಗೋಡೆಯ ಮೇಲೆ ಹತ್ತಿ ಆಗಲೇ ಅಲ್ಲಿದ್ದ ಹಲ್ಲಿಯನ್ನು ಸೇರಲು ಹೋಯಿತು. ಬಾಬಾ ಪ್ರಶ್ನೆ ಕೇಳಿದವನನ್ನು, ಆ ಹಲ್ಲಿ ಎಲ್ಲಿಗೆ ಹೋಗುತ್ತಿದೆ ಎಂದು ಎಚ್ಚರದಿಂದ ನೋಡಲು ಹೇಳಿದರು. ಬಂದ ಹಲ್ಲಿ ನೇರವಾಗಿ ತನ್ನ ಸಹೋದರಿಯ ಹತ್ತಿರಕ್ಕೇ ಹೋಯಿತು. ಇಬ್ಬರೂ ಒಬ್ಬರನ್ನೊಬ್ಬರು ಅಪ್ಪಿ, ಆಡಿ, ನಾಟ್ಯಮಾಡಿ ಮುದ್ದಾಡಿಕೊಂಡವು. ಆ ಎರಡು ಹಲ್ಲಿಗಳೂ ಬಹಳ ದಿನಗಳ ಮೇಲೆ ಒಬ್ಬರನ್ನೊಬ್ಬರು ಕಾಣುತ್ತಿರುವುದು ಸ್ಪಷ್ಟವಾಗಿತ್ತು. ಇದನ್ನು ನೋಡಿದವರೆಲ್ಲರೂ ಆಶ್ಚರ್ಯದಿಂದ ಮೂಕರಾದರು.

ಇದರಿಂದ ಹಲವಾರು ಪ್ರಶ್ನೆಗಳು ಏಳುತ್ತವೆ. ಹಲ್ಲಿ ಲೊಚಗುಟ್ಟಿದ್ದೇಕೆ? ಆ ಮನುಷ್ಯ ಬಾಬಾರನ್ನು ಏಕೆ ಆ ಪ್ರಶ್ನೆ ಕೇಳಿದ? ಬಾಬಾ ಇನ್ನೊಂದು ಹಲ್ಲಿ ಔರಂಗಾಬಾದಿನಿಂದಲೇ ಬರುತ್ತದೆ ಎಂದು ಹೇಗೆ ಹೇಳಿದರು? ಕುದುರೆ ಸವಾರ ಶಿರಡಿಯಲ್ಲೇ ಆಯಾಸ ಪರಿಹಾರಕ್ಕೆ ನಿಲ್ಲಬೇಕಾಗಿತ್ತೇ? ಬಾಬಾರಿಗೆ ಪ್ರಾಣಿಗಳ ಭಾಷೆಯೂ ತಿಳಿದಿತ್ತೇ? ಬಾಬಾ ಹೇಳಿದ ಭವಿಷ್ಯ ಹೇಗೆ ನಿಜವಾಯಿತು? ಇತ್ಯಾದಿ ಅನೇಕ ಪ್ರಶ್ನೆಗಳು ಹುಟ್ಟುತ್ತವೆ. ಅವೆಲ್ಲಕ್ಕೂ ಒಂದೇ ಉತ್ತರ. ಔರಂಗಾಬಾದಿನಿಂದ ಒಂದು ಹಲ್ಲಿ ಹೊರಟಿದ್ದು - ಭೂತ ಕಾಲದಲ್ಲಿ ನಡೆದ ಘಟನೆ. ಹಲ್ಲಿ ಸಹೊದರಿಯರು ಕಲೆತದ್ದು - ಭವಿಷ್ಯ ಕಾಲದಲ್ಲಿ. ಭಕ್ತನು ಬಾಬಾರನ್ನು ಪ್ರಶ್ನೆ ಕೇಳಿದ್ದು - ವರ್ತಮಾನ ಕಾಲದಲ್ಲಿ. ಹೀಗೆ ಬಾಬಾರಿಗೆ ಭೂತ, ಭವಿಷ್ಯ ಮತ್ತು ವರ್ತಮಾನ ಕಾಲಗಳ ಜ್ಙಾನವಿದ್ದುದು ಈ ಹಲ್ಲಿಗಳ ಘಟನೆಯಿಂದ ತಿಳಿಯುತ್ತದೆ. ಕಾಕತಾಳೀಯವಾಗಿ ಕಂಡರೂ, ಅದೊಂದು ಅಘಟಿತ ಘಟನೆ. ಬಾಬಾ ಅಘಟಿತಘಟಿತ ಶಕ್ತರು. ಭೂತ, ಭವಿಷ್ಯತ್, ವರ್ತಮಾನಗಳನ್ನು ಬಲ್ಲ ಬಾಬಾರ ಸರ್ವಜ್ಞತ್ವವನ್ನು ತೋರಿಸುವ ಇನ್ನೊಂದು ದೃಷ್ಟಾಂತ.

ಬಾಬಾರ ಕಥೆಗಳನ್ನು ಕೇಳಿದಂತೆಲ್ಲಾ ಅವರು ನಮ್ಮಲ್ಲಿ ತೋರುವ ಪ್ರೀತಿ, ವಿಶ್ವಾಸ, ಅನುಕಂಪ, ದಯೆ, ವ್ಯಾಪಕತ್ವ ಇವುಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಬಹುದು. ಹೀಗೆ ಅವರನ್ನು ಅರ್ಥಮಾಡಿಕೊಂಡು, ಅವರ ಬಗ್ಗೆಯೇ ಯೋಚಿಸುತ್ತಾ, ಅವರನ್ನು ನಮ್ಮ ಮನಸ್ಸಿನಲ್ಲಿ ತುಂಬಿಕೊಂಡರೆ, ನಮ್ಮ ಲೌಕಿಕ ಆಸೆ ಆಕಾಂಕ್ಷೆಗಳು ಕಡಮೆಯಾಗುತ್ತಾ, ಆತ್ಮ ಸಾಕ್ಷಾತ್ಕಾರದ ಕಡೆ ಹೆಜ್ಜೆಯನ್ನಿಡಲು ಸಾಧ್ಯವಾಗುತ್ತದೆ. ಹಾಗೆ ಬಾಬಾರಿಗೆ ಶರಣಾಗತರಾದ ಹೇಮಾಡ್ ಪಂತ್ ಬಾಬಾರನ್ನು ಬಿಟ್ಟು ಕ್ಷಣ ಕಾಲವಾದರೂ ಇರಲಾರದೇ ಹೋದರು.

ಯಾರು ದಿನವೂ ಈ ಅಧ್ಯಾಯವನ್ನು ಶ್ರದ್ಧಾ ಭಕ್ತಿಗಳಿಂದ ಓದಿ, ಅರ್ಥಮಾಡಿಕೊಂಡು, ಮನನ ಮಾಡಿಕೊಳ್ಳುತ್ತಾ ಇರುತ್ತಾರೋ ಅವರು ಬಾಬಾರ ಅನುಗ್ರಹಕ್ಕೆ ಪಾತ್ರರಾಗಿ ತಮ್ಮ ಕಷ್ಟಕಾರ್ಪಣ್ಯಗಳನ್ನು ಕಳೆದುಕೊಂಡು ಸುಖಿಗಳಾಗುತ್ತಾರೆ.

ಇದರೊಂದಿಗೆ ಚೋಳ್ಕರರ ಚಹಾ ಕಥೆ, ಎರಡು ಹಲ್ಲಿಗಳ ಕಥೆ ಮತ್ತು ಇತರ ವಿಷಯಗಳನ್ನು ಕುರಿತು ಹೇಳುವ ಹದಿನೈದನೆಯ ಅಧ್ಯಾಯ ಮುಗಿಯಿತು. ಮುಂದಿನ ಅಧ್ಯಾಯದಲ್ಲಿ ಹೇಮಾಡ್ ಪಂತ್ ಬ್ರಹ್ಮಜ್ಞಾನವನ್ನು ಪಡೆಯಲು ಬಂದ ಶ್ರೀಮಂತನೊಬ್ಬನ ಕಥೆ ಇತ್ಯಾದಿ ವಿಷಯಗಳನ್ನು ಹೇಳುತ್ತಾರೆ.

||ಶ್ರೀ ಸದ್ಗುರು ಸಾಯಿನಾಥಾರ್ಪಣಮಸ್ತು||ಶುಭಂ ಭವತು||
||ಓಂ ಶಾಂತಿಃ ಶಾಂತಿಃ ಶಾಂತಿಃ||


No comments:

Post a Comment