||ಶ್ರೀ ಸಾಯಿ ಸಚ್ಚರಿತ್ರೆ||
||ಹನ್ನೊಂದನೆಯ ಅಧ್ಯಾಯ||
||ಸಗುಣ ಬ್ರಹ್ಮ ಸಾಯಿ||
ಶ್ರೀ ಗಣೇಶಾಯ ನಮಃ ಶ್ರೀ ಸರಸ್ವತಯೇ ನಮಃ
ಶ್ರೀ ವೆಂಕಟೇಶಾಯ ನಮಃ ಶ್ರೀ ಸಾಯಿನಾಥಾಯ ನಮಃ
ಶ್ರೀ ಸದ್ಗುರುಭ್ಯೋನ್ನಮಃ
||ಹನ್ನೊಂದನೆಯ ಅಧ್ಯಾಯ||
||ಸಗುಣ ಬ್ರಹ್ಮ ಸಾಯಿ||
ಶ್ರೀ ಗಣೇಶಾಯ ನಮಃ ಶ್ರೀ ಸರಸ್ವತಯೇ ನಮಃ
ಶ್ರೀ ವೆಂಕಟೇಶಾಯ ನಮಃ ಶ್ರೀ ಸಾಯಿನಾಥಾಯ ನಮಃ
ಶ್ರೀ ಸದ್ಗುರುಭ್ಯೋನ್ನಮಃ
ಈ ಅಧ್ಯಾಯದಲ್ಲಿ ಹೇಮಾಡ್ ಪಂತ್, ಸಗುಣ ಬ್ರಹ್ಮ ಸಾಯಿ, ಬಾಬಾರನ್ನು ಜನ ಹೇಗೆ ಅರ್ಚಿಸುತ್ತಿದ್ದರು, ಪಂಚಭೂತಗಳ ಮೇಲೆ ಬಾಬಾರ ನಿಯಂತ್ರಣ, ಇತ್ಯಾದಿಗಳನ್ನು ಹೇಳುತ್ತಾರೆ.
ಸಗುಣ ಬ್ರಹ್ಮ ಸಾಯಿ
ಮನಸ್ಸು ಯಾವಾಗ ಸಮಸ್ಯೆಗಳಲ್ಲಿ ಸಿಕ್ಕಿ, ಡೋಲಾಯ ಮಾನವಾಗುತ್ತದೋ, ಯಾವಾಗ ಈ ಪ್ರಪಂಚವೆಲ್ಲಾ ಅಂಧಕಾರಮಯವಾಗಿ ಕಾಣುತ್ತದೋ, ನಡೆಯುತ್ತಿರುವ ಮಾರ್ಗ ಅತಿ ದುರ್ಗಮ ವಾಗುತ್ತದೋ, ಏನು ಮಾಡಬೇಕೆಂದು ತಿಳಿಯದೆ ಹೋಗುತ್ತದೋ, ಆಗ ಬಾಬಾರ ಆಸರೆಗೆ ಹೋಗಿ, ಅವರಿಗೆ ಸಂಪೂರ್ಣ ಶರಣಾಗತರಾದರೆ, ಅವರು ಬೆಳಕನ್ನು ಕೊಟ್ಟು, ಯೋಗ್ಯ ಮಾರ್ಗವನ್ನು ತೋರಿಸುತ್ತಾರೆ. ಕದಡಿದ ಮನಸ್ಸು ಬಾಬಾರ ಪಾದಗಳನ್ನು ಸೇರಿ ಶಾಂತಿ ಸೌಖ್ಯಗಳನ್ನು ಪಡೆಯುತ್ತದೆ. ಆ ಸದ್ಗುರುವಿನ ಶಕ್ತಿ ಅಪರಿಮಿತ. ಮೃತ್ಯು ಮುಖದಿಂದಲೂ ಭಕ್ತರನ್ನು ಕಾಪಾಡಬಲ್ಲರು. ದೈವ ಸಂಪನ್ನರು. ಶ್ರದ್ಧಾ, ಭಕ್ತಿ, ವಿನಯ, ವಿಧೇಯತೆಗಳಿಂದ ಸೇವಿಸುವ ಭಕ್ತರನ್ನು ತಮ್ಮ ಸ್ತರಕ್ಕೆ ತೆಗೆದುಕೊಂಡುಹೋಗಬಲ್ಲವರು.
ಬ್ರಹ್ಮನನ್ನು ನಿರ್ಗುಣ ಅಥವಾ ಸಗುಣನಾಗಿ ಪೂಜಿಸಬಹುದು. ನಿರ್ಗುಣ ಬ್ರಹ್ಮನಿಗೆ ರೂಪವಿಲ್ಲ. ಆದ್ದರಿಂದ ಸಾಧನೆಯ ಮೊದಲಲ್ಲಿ ಅವನು ಮನಸ್ಸಿನ ಹಿಡಿತಕ್ಕೆ ಅಷ್ಟು ಸುಲಭವಾಗಿ ಸಿಕ್ಕುವುದಿಲ್ಲ. ಅವನನ್ನು ಸಗುಣ ರೂಪನಾಗಿ ಪೂಜಿಸುತ್ತ ಕ್ರಮ ಕ್ರಮವಾಗಿ ನಿರ್ಗುಣದ ಕಡೆಗೆ ನಮ್ಮ ಮನಸ್ಸನ್ನು ತೆಗೆದುಕೊಂಡು ಹೋಗಬೇಕು. ಯಾವ ರೀತಿಯಲ್ಲಿ ಪೂಜಿಸಿದರೂ ಗಮ್ಯ ಒಂದೇ. ರೂಪವಿರುವ ಸಗುಣದಿಂದ ಧ್ಯಾನ ಮಾಡುತ್ತಾ, ಮಾಡುತ್ತಾ ಹಂತ ಹಂತವಾಗಿ ರೂಪವಿಲ್ಲದ ನಿರ್ಗುಣದೆಡೆಗೆ ಹೋಗುವುದು ಸುಲಭ. ಆದರೆ ಇದಕ್ಕೆ ಆ ಪರಮಾತ್ಮನಲ್ಲಿ ಉತ್ಕಟವಾದ ಪ್ರೇಮ ಭಕ್ತಿಗಳನ್ನು ಬೆಳೆಸಿಕೊಳ್ಳಬೇಕು.
ದೇವರನ್ನು ವಿಗ್ರಹ, ಸ್ಥಂಡಿಲ, ಅಗ್ನಿ, ಬೆಳಕು, ಸೂರ್ಯ, ನೀರು ಹಾಗೂ ದ್ವಿಜ ಎನ್ನುವ ಏಳು ರೂಪಗಳಲ್ಲಿ ಪೂಜಿಸಿಕೊಳ್ಳಬಹುದು ಎನ್ನುತ್ತಾರೆ. ಸದ್ಗುರುವು ಈ ಎಲ್ಲಾ ರೂಪಗಳಿಗಿಂತ ಶ್ರೇಷ್ಠ. ಅವರನ್ನು ಪೂಜಿಸುವುದು, ಮಿಕ್ಕ ರೂಪಗಳನ್ನು ಪೂಜಿಸುವುದಕ್ಕಿಂತ ಬಹಳ ಸುಲಭ. ಜೊತೆಗೆ ಅವರೊಡನೆ ನಮ್ಮ ಅನ್ಯೋನ್ನತೆ ಇತರರೊಡನೆ ಇರುವುದಕ್ಕಿಂತ ಹೆಚ್ಚು. ನಮಗೆ ಅಂತಹ ಪ್ರೀತಿ ವಿಶ್ವಾಸಗಳಿಂದ ತುಂಬಿದ ಮಾನವಸ್ವರೂಪಿ ದೈವ, ಬಾಬಾ ಸಿಕ್ಕಿದ್ದಾರೆ. ಪ್ರೀತಿ, ಪ್ರೇಮ, ಕ್ಷಮೆ, ಮೃದು, ತೃಪ್ತಿ, ಸಹನಾ ರೂಪದ ಆ ದೈವವನ್ನು ಮನಸ್ಸಿನಲ್ಲಿ ತುಂಬಿಕೊಂಡು, ಆತನಿಗೆ ಮನಃಪೂರ್ವಕವಾಗಿ ನಮಸ್ಕಾರಮಾಡಿ, ಶ್ರದ್ಧೆ ನಂಬಿಕೆ ಎಂಬ ಆಸನವನ್ನು ಕೊಟ್ಟು, ಮನೋಕಾಮನೆಗಳಲ್ಲೆದರ ನಾಶ ಎಂಬ ಸಂಕಲ್ಪ ಮಾಡಿ, ಆತನನ್ನು ನಿಮ್ಮ ಧ್ಯಾನದಲ್ಲಿ ಕೂಡಿಸಿದರೆ ಆತ ನಿಮ್ಮೆಡೆಗೆ ತಪ್ಪದೇ ಬಂದೇ ಬರುತ್ತಾನೆ. ಇದು ಪ್ರತಿ ಕ್ಷಣ, ಪ್ರತಿದಿನ, ಹಗಲು ಇರುಳು ನಿಮ್ಮಲ್ಲಿ ನಡೆಯುತ್ತಿರಬೇಕಾದ ಕ್ರಿಯೆ. ಹೀಗೆ ಮುಂದುವರೆಯುತ್ತಾ ಹೋದರೆ, ಅವನ ಕೃಪೆಯಿಂದಲೇ ನಿರ್ಗುಣ ರೂಪನಾದ ಆ ಮನೋಹರ ಮೂರ್ತಿ ನಿಮ್ಮ ಮನೋಪಟಲಕ್ಕೆ ಗೋಚರಿಸುತ್ತಾನೆ. ಬಾಬಾ ಭಕ್ತರಿಗೆ ಅವರವರ ಸ್ತರಕ್ಕೆ ಸರಿಹೋಗುವಂತೆ ನಿರ್ಗುಣ ಬ್ರಹ್ಮನ ಉಪಾಸನೆಯನ್ನು ಹೇಳಿದರು. ತನ್ನ ಪ್ರೀತಿಪಾತ್ರರಾದ ಹಲವರನ್ನು ಶಿರಡಿಯಲ್ಲೇ ಇಟ್ಟುಕೊಂಡು, ತನಗೆ ದೂರವಾಗಿ ವಾಡಾದಲ್ಲಿ ಕುಳಿತು ಧ್ಯಾನಮಾಡುವಂತೆ ಹೇಳಿದರು. ಇನ್ನು ಕೆಲವರನ್ನು ಶಿರಡಿಯಿಂದ ಹೊರಗೆ ಕಳುಹಿಸಿ, ಅಲ್ಲಿ ಧ್ಯಾನ ಮುಂದುವರಿಸುವಂತೆ ಹೇಳಿದರು. ಮತ್ತೆ ಕೆಲವರಿಗೆ ವಾಡಾದಲ್ಲಿ ಕುಳಿತು, ಶಾಸ್ತ್ರಪುರಾಣಾದಿಗಳನ್ನು ಓದಿ ಮನನ ಮಾಡಿಕೊಳ್ಳುವಂತೆ ಹೇಳಿದರು. ಇಂತಹ ಅಭ್ಯಾಸಗಳು ಕಾಲಕ್ರಮೇಣ ಪಕ್ವವಾಗಿ, ಅವರ ಮನಸ್ಸು ಬಾಬಾರ ಮೇಲೇ ಕೇಂದ್ರೀಕೃತವಾಗುತ್ತಿತ್ತು. ಅಂತಹವರು ಏನೇ ಮಾಡುತ್ತಿದ್ದರೂ ಅವರ ಮನಸ್ಸು ಮಾತ್ರ ಬಾಬಾರ ಯೋಚನೆಯಲ್ಲೇ ಮಗ್ನವಾಗಿರುತ್ತಿತ್ತು. ಅನೇಕರು ಅವರನ್ನು ಅನೇಕ ವಿಧವಾದ ಹೆಸರುಗಳಿಂದ ಕರೆದರು. ಆದರೆ ನಮಗೆ ಬಾಬಾ ಪ್ರತ್ಯಕ್ಷದೇವರೇ! ಅವರೇ ಸಗುಣಬ್ರಹ್ಮಮೂರ್ತಿಯಾದ ಪರದೈವ.
ಗಂಗೆಯಂತಹ ನದಿಗಳು ತಮ್ಮ ಗಮ್ಯವಾದ ಸಮುದ್ರವನ್ನು ಸೇರುವ ದಾರಿಯಲ್ಲಿ, ದಣಿದವರಿಗೆ ತಂಪನ್ನುಣಿಸುತ್ತಾ, ಭೂಮಿಯ ತೃಷೆಯನ್ನು ತೀರಿಸುತ್ತಾ, ಸಸ್ಯ ಜೀವಿಗಳಿಗೆ ಪೋಷಣೆ ನೀಡುತ್ತಾ, ಕೊನೆಗೆ ತಮ್ಮ ಗುರಿಯನ್ನು ಮುಟ್ಟುತ್ತವೆ. ಅದರಂತೆ ಬಾಬಾರಂತಹ ಸಂತರು ಕೂಡಾ, ತಾವು ಜೀವಂತವಾಗಿರುವವರೆಗೂ ಅದೇರೀತಿಯಲ್ಲಿದ್ದು, ಸಮಾಧಿಯಾದಮೇಲೂ, ಅಂದರೆ ತಮ್ಮ ಅವತಾರ ಕಾರ್ಯ ಮುಗಿದಮೇಲೂ, ನಮಗೆ ಮಾರ್ಗದರ್ಶಕರಾಗೇ ಇರುತ್ತಾರೆ. ಅವರ ಕಥೆಗಳ ಪಠನ, ಶ್ರವಣ, ಮನನ ಮಾಡುತ್ತಾ ನಾವು ಅವರನ್ನು ಬೇಡಿಕೊಂಡರೆ ನಮ್ಮ ಗುರಿ ಮುಟ್ಟಲು ಅವರೇ ದಾರಿ ತೋರಿಸುತ್ತಾರೆ. ಉದ್ಧವನಿಗೆ ಶ್ರೀ ಕೃಷ್ಣ, "ಸಂತರು ನನ್ನ ಜೀವಂತಸ್ವರೂಪರು. ಅವರೇ ನನ್ನ ಆತ್ಮ. ನಾನು ಅವರಲ್ಲಿ ಯಾವಾಗಲೂ ಇರುತ್ತೇನೆ. ಅವರ ಮೂಲಕ ಭಕ್ತರ ಇಷ್ಟಾರ್ಥಗಳನ್ನು ನೆರವೇರಿಸುತ್ತೇನೆ" ಎಂದು ಹೇಳಿದ್ದಾನೆ.
ಉಪನಿಷತ್ತು ಹೇಳುತ್ತದೆ, "ಪರಮಾತ್ಮ ಪರಬ್ರಹ್ಮನೇ ಸಚ್ಚಿದಾನಂದ, ಪರಮಾನಂದ". ಸಚ್ಚಿದಾನಂದ ಸ್ವರೂಪನಾದ ಅಂತಹ ಪರಮಾತ್ಮ ಶಿರಡಿಯಲ್ಲಿ ನೆಲೆಸಿದ್ದಾನೆ. ಅವನ ಚರಣಗಳಲ್ಲಿ ಶಿರಸ್ಸಿಟ್ಟು ಭಕ್ತರು ಅಂತಹ ಆನಂದದ ಅನುಭವವನ್ನು ಪಡೆದರು.
ಈ ಪ್ರಪಂಚದ ಜಡ ಚೇತನಗಳಿಗೆಲ್ಲ ಆಸರೆಯಾದ ಆ ಬಾಬಾರಿಗೆ ನಾವು ಏನು ತಾನೆ ಕೊಡಲು ಸಾಧ್ಯ? ಭಕ್ತರಿಗೆ ಅವರವರು ಕೇಳಿದ ಸುಖ ಸಂತೋಷಗಳನ್ನು ಕೊಟ್ಟ ಬಾಬಾ, ತಮ್ಮ ಸ್ವಂತಕ್ಕೆಂದು ಯಾರನ್ನೂ ಎಂದೂ ಏನನ್ನೂ ಕೇಳಲಿಲ್ಲ. ಸಗುಣಮೂರ್ತಿಯಾಗಿದ್ದ ಅವರು ತ್ರಿಗುಣಾತೀತರಾಗಿದ್ದರು. ಅವರಿಗಿದ್ದ ಒಂದೇ ಒಂದು ಚಿಂತೆ ಎಂದರೆ ಅವರ ಭಕ್ತರು. ಅವರಿಗಾಗಿ ಏನನ್ನೂ ಮಾಡಲು ಸಿದ್ಧರಾಗಿದ್ದರು. ಭಕ್ತರಲ್ಲಿ ಅವರಿಗೆ ಎಷ್ಟು ಪ್ರೀತಿಯಿತ್ತೆಂದರೆ, ಭಕ್ತರು ತಮ ತಮಗೆ ಬೇಕಾದ ರೀತಿಯಲ್ಲಿ ತಮ್ಮನ್ನು ಪೂಜೆಮಾಡಿಕೊಳ್ಳಲು ಬಿಟ್ಟಿದ್ದರು. ಕೆಲವರು ಹಾಡಿದರು. ಕೆಲವರು ನರ್ತಿಸಿದರು. ಕೆಲವರು ವಾದ್ಯಗಳನ್ನು ನುಡಿಸಿದರು. ಮತ್ತೆ ಕೆಲವರು ಅವರಿಗೆ ಬೀಸಣಿಗೆಯಿಂದ ಗಾಳಿ ಹಾಕುತ್ತಿದ್ದರು. ಹಲವರು ಅವರ ಕೈ ಕಾಲು ತೊಳೆಯುತ್ತಿದ್ದರು. ಇನ್ನೂ ಹಲವರು ಅವರಿಗೆ ಚಂದನಾದಿಗಳನ್ನು ಹಚ್ಚುತ್ತಿದ್ದರು. ಇಷ್ಟೆಲ್ಲ ನಡೆಯುತ್ತಿದ್ದರೂ ಸರ್ವವ್ಯಾಪಿಯಾದ ಅವರು ಮಾತ್ರ ನಿಸ್ಸಂಗಿಗಳಾಗಿ ಕೂತಿರುತ್ತಿದ್ದರು. ಅಂತಹ ಬಾಬಾರ ಪಾದಗಳಲ್ಲಿ ನಮ್ಮ ಶಿರಸ್ಸನ್ನಿಟ್ಟು ಅವರ ಅನುಗ್ರಹವನ್ನು ಬೇಡಿಕೊಳ್ಳೋಣ.
ಡಾಕ್ಟರ್ ಪಂಡಿತ್ ಚಂದನವನ್ನು ಹಚ್ಚಿದ್ದು
ತಾತ್ಯಾಸಾಹೇಬ್ ನೂಲ್ಕರ್ ತಮ್ಮ ಸ್ನೇಹಿತ ಡಾ. ಪಂಡಿತ್ರನ್ನು ಬಾಬಾರ ದರ್ಶನಕ್ಕೆಂದು ಶಿರಡಿಗೆ ಕರೆತಂದರು. ದರ್ಶನವಾದಮೇಲೆ ಪಂಡಿತ್ ಅಲ್ಲೇ ಮಸೀದಿಯಲ್ಲಿ ಅಂಗಳದಲ್ಲಿ ಒಂದುಕಡೆ ಸ್ವಸ್ಥವಾಗಿ ಕೂತರು. ಬಾಬಾ ಅವರನ್ನು ಕರೆದು "ಹೋಗಿ ದಾದಾಭಟ್ ಕೇಳ್ಕರರನ್ನು ಕಾಣು" ಎಂದು ಹೇಳಿದರು. ಡಾಕ್ಟರ್ ಅದರಂತೆ ಹೋಗಿ ಕೇಳ್ಕರರನ್ನು ಭೇಟಿಮಾಡಿದರು. ಇಬ್ಬರೂ ಸ್ವಲ್ಪಹೊತ್ತು ಮಾತನಾಡಿ ನಂತರ ಬಾಬಾರನ್ನು ಕಾಣಲು ಹೋದರು. ಮಸೀದಿಯಲ್ಲಿ ದಾದಾಭಟ್, ಬಾಬಾರ ಪಾದಗಳಿಗೆ ಚಂದನವನ್ನು ಹಚ್ಚಿದರು. ಅದನ್ನು ಕಂಡ ಡಾಕ್ಟರ್, ತಾವೂ ಕೂಡಾ ಅತೀವ ಭಕ್ತಿಯಿಂದ ದಾದಾಭಟ್ ತಟ್ಟೆಯಲ್ಲಿದ್ದ ಚಂದನವನ್ನು ತೆಗೆದುಕೊಂಡು, ಬಾಬಾರ ಹಣೆಯಲ್ಲಿ ತ್ರಿಪುಂಡ್ರವನ್ನು ಹಚ್ಚಿದರು. ಬಾಬಾ ಮೌನವಾಗಿ ಡಾಕ್ಟರ್ ಹಾಗೆ ತ್ರಿಪುಂಡ್ರವನ್ನು ಹಚ್ಚುವುದಕ್ಕೆ ಬಿಟ್ಟರೇ ಹೊರತು, ಯಾವ ಆಕ್ಷೇಪಣೆಯನ್ನೂ ಮಾಡಲಿಲ್ಲ. ಇದನ್ನು ನೋಡಿದ ದಾದಾಭಟ್ಗೆ ಬಹಳ ಆಶ್ಚರ್ಯವಾಯಿತು. ಸುತ್ತಲಿದ್ದ ಜನರಿಗೆ ಆಘಾತವಾದಂತಾಯಿತು. ಏಕೆಂದರೆ ಬಾಬಾ ಎಂದೂ ಯಾರನ್ನೂ ಆ ರೀತಿಯಲ್ಲಿ ತಮ್ಮ ಹಣೆಗೆ ಚಂದನ ಹಚ್ಚಲು ಬಿಡುತ್ತಿರಲಿಲ್ಲ. ಬಾಬಾರು ಯಾವಾಗ ಕೋಪಮಾಡಿಕೊಂಡು ಡಾಕ್ಟರರನ್ನು ಹೊರಗಟ್ಟುತ್ತಾರೋ ಎಂದು ಕಾಯುತ್ತಿದ್ದರು. ಆದರೆ ಅಂತಹುದೇನೂ ನಡೆಯಲಿಲ್ಲ. ಅದಕ್ಕೆ ಬದಲಾಗಿ ಈ ಕಾರ್ಯದಿಂದ ಬಾಬಾ ಸಂತೋಷಗೊಂಡಂತೆ ಕಾಣಿಸಿತು. ಯಾರಿಗೂ ಇದರ ಮರ್ಮ ತಿಳಿಯಲಿಲ್ಲ.
ಸಾಯಂಕಾಲ ಬಾಬಾರನ್ನು ಕಾಣಲು ಬಂದಾಗ ದಾದಾಭಟ್ ಬಾಬಾರನ್ನು "ಬಾಬಾ, ಪಂಡಿತ್ ನಿಮ್ಮ ಹಣೆಗೆ ಚಂದನ ಹಚ್ಚಿದರೆ ನೀವು ಸುಮ್ಮನಿದ್ದಿರಿ. ನಾವು ಹಾಗೇನಾದರೂ ಮಾಡಿದರೆ ನೀವು ನಮ್ಮ ಮೇಲೆ ಕೂಗಾಡುತ್ತೀರಿ. ಅದೇಕೆ ಈ ಭೇದ?" ಎಂದು ಕೇಳಿದರು. ಅದಕ್ಕೆ ಬಾಬಾ ಶಾಂತವಾಗಿ "ಅವನ ಗುರು ರಘುನಾಥ ಮಹಾರಾಜ್ ಒಬ್ಬ ಬ್ರಾಹ್ಮಣ. ಧೋಪೇಶ್ವರದಲ್ಲಿರುವ ಅವರನ್ನು ಕಾಕಾ ಪುರಾಣಿಕ್ ಎಂದೂ ಕರೆಯುತ್ತಾರೆ. ನನ್ನಲ್ಲಿ ಅವರನ್ನು ಕಾಣುತ್ತಾ, ತಾನು ಹಿಂದುವಾಗಿದ್ದರೂ, ಮುಸ್ಲಿಮನಾದ ಬಾಬಾನನ್ನು ಪೂಜಿಸುವುದೇ ಬೇಡವೇ, ಎಂದು ಒಂದು ಕ್ಷಣ ಕೂಡ ಯೋಚನೆ ಮಾಡದೆ, ನನ್ನನ್ನು ಪಂಡಿತ್ ಅವರ ಪೂಜೆ ಹೇಗೆ ಮಾಡಿಕೊಳ್ಳುತ್ತಿದ್ದನೋ ಹಾಗೆ ಪೂಜಿಸಿಕೊಂಡ. ಅವನನ್ನು ನಾನು ಹೇಗೆತಾನೇ ತಡೆಯಲಿ?" ಎಂದು ಕೇಳಿದರು. ಬಾಬಾರ ಮಾತುಗಳಿಂದ ತೃಪ್ತನಾಗದ ದಾದಾಭಟ್ ಪಂಡಿತರನ್ನು ಕಂಡು, “ಬಾಬಾ ಹಣೆಗೆ ಚಂದನ ಏಕೆ ಹಚ್ಚಿದೆ” ಎಂದು ಕೇಳಿದರು. ಅದಕ್ಕೆ ಪಂಡಿತ್, "ಬಾಬಾರಲ್ಲಿ ನನ್ನ ಗುರುಗಳಾದ ಕಾಕಾ ಪುರಾಣಿಕರನ್ನು ಕಂಡೆ. ಬಾಬಾರೇ ನನ್ನ ಗುರುದೇವರು ಎಂದುಕೊಂಡು ಅವರ ಹಣೆಗೆ ನನ್ನ ಗುರುವಿಗೆ ತ್ರಿಪುಂಡ್ರವಿಡುವಂತೆ ಬಾಬಾರ ಹಣೆಯಲ್ಲೂ ತ್ರಿಪುಂಡ್ರವನ್ನಿಟ್ಟೆ" ಎಂದರು. ಅದನ್ನು ಕೇಳಿ ದಾದಾಭಟ್ ಆಶ್ಚರ್ಯದಿಂದ ಮೂಕರಾದರು.
ಭಕ್ತರು ತಮತಮಗೆ ಇಷ್ಟಬಂದಂತೆ ಪೂಜಿಸಿಕೊಳ್ಳಲು ಬಾಬಾ ಅನುಮತಿ ಕೊಟ್ಟಿದ್ದರು. ಆದರೂ ಕೆಲವು ಸಲ ಹಾಗೆ ಪೂಜೆಮಾಡಿಕೊಳ್ಳುವಾಗ ಅಕಾರಣವಾಗಿ ಉಗ್ರರಾಗಿ ಪೂಜಾ ಸಾಮಗ್ರಿಗಳನ್ನು ಎಸೆದಾಡಿ ಬಂದವರನ್ನು ಬೈದು ಹೊಡೆದು ಮಾಡುತ್ತಿದ್ದರು. ಆಗ ಅವರ ಕಣ್ಣುಗಳು ಕೆಂಪಾಗಿ ಕೈಕಾಲುಗಳನ್ನು ಜೋರಾಗಿ ಆಡಿಸುತ್ತಾ ಇರುವುದನ್ನು ನೋಡಿದರೆ ಅವರು ಉಗ್ರ ನರಸಿಂಹನಂತೆ ಕಾಣುತ್ತಿದ್ದರು. ಮತ್ತೆ ಕೆಲವೇ ಕ್ಷಣಗಳಲ್ಲಿ ಶಾಂತರಾಗಿ ಎಂದಿನಂತೆ ಮೃದುವಾಗಿ, ಕ್ಷಮಾವಂತರಾಗಿ, ದಯಾಪೂರ್ಣರಾಗಿ ಕಾಣುತ್ತಿದ್ದರು. ಭಕ್ತರನ್ನು ಕರೆದು ತಾವು ಕೋಪಗೊಂಡಿಲ್ಲವೆಂದು ಹೇಳಿ, "ಭಕ್ತರ ಸೇವಕನಾಗಿ ಅವರೊಡನೆ ನಾನು ಯಾವಾಗಲೂ ಇರುತ್ತೇನೆ. ಅವರು ಯಾವಾಗ ಎಲ್ಲಿಂದ ಕರೆದರೂ ನಾನು ಅವರ ಕರೆಗೆ ಓಗೊಡುತ್ತೇನೆ. ನನಗೆ ಬೇಕಾದ್ದು ಅವರ ಅಸೀಮ ಸತತ ಪೇಮ ಮಾತ್ರ. ಸಾಗರ ತನ್ನನ್ನು ಸೇರಲು ಬಂದ ನದಿಯನ್ನು ತಡೆದು ಹಿಂತಿರುಗಿಸುವತನಕ, ತಾಯಿ ತನ್ನ ಮಗುವನ್ನು ಪ್ರೇಮ ವಿಶ್ವಾಸಗಳಿಲ್ಲದೆ ಹೊರಗೆ ಹಾಕುವತನಕ ನಾನು ನಿಮ್ಮನ್ನು ರಕ್ಷಿಸುತ್ತಿರುತ್ತೇನೆ" ಎಂಬ ಭರವಸೆ ಕೊಟ್ಟರು.
ಹಾಜಿ ಸಿದ್ದಿಕಿ ಫಾಲ್ಕೆ ಕಥೆ
ಬಾಬಾ ಭಕ್ತರನ್ನು ಪ್ರೀತಿಸುತ್ತಿದ್ದುದೇನೋ ನಿಜವೇ. ಆದರೆ ಅವರ ಭಕ್ತರೆನಿಸಿಕೊಳ್ಳುವುದು ಅಷ್ಟು ಸುಲಭವಾಗಿರಲಿಲ್ಲ. ಅವರಿಗೆ ಅರಿವಿಲ್ಲದಂತೆ ಅವರನ್ನು ತಮ್ಮದೇ ಆದ ರೀತಿಯಲ್ಲಿ ಪರೀಕ್ಷಿಸಿ, ಒಪ್ಪಿಗೆಯಾದಮೇಲೆಯೇ ಅವರನ್ನು ಭಕ್ತರೆಂದು ಅಂಗೀಕರಿಸುತ್ತಿದ್ದರು. ಹಾಜಿ ಸಿದ್ದಿಕಿ ಫಾಲ್ಕೆಯದು ಅಂತಹ ಒಂದು ಕಥೆ.
ಫಾಲ್ಕೆ ಒಬ್ಬ ಮುಸ್ಲಿಮ್ ಹಾಜಿ. ಬಾಬಾರ ದರ್ಶನಮಾಡಿ ಅವರ ಅನುಗ್ರಹಕ್ಕೆ ಪಾತ್ರನಾಗಲು ಕಾತುರನಾಗಿ ಶಿರಡಿಗೆ ಬಂದ. ಆದರೆ ಬಾಬಾ ಅವನನ್ನು ಮಸೀದಿಯೊಳಕ್ಕೆ ಬರಲು ಬಿಡಲಿಲ್ಲ. ಅಂಗಳದಲ್ಲಿಯೇ ಕುಳಿತು ದರ್ಶನ ಮಾಡಿಕೊಳ್ಳಲು ಹೇಳಿದರು. ಬಾಬಾರ ಕರೆ ಬರುವುದೇನೋ ಎಂದು ಕಾಯುತ್ತಾ ಒಂಭತ್ತು ತಿಂಗಳು ಕಳೆಯಿತು. ಅಂತಹ ಕರೆ ಬರಲಿಲ್ಲ. ತುಂಬಾ ನೊಂದುಕೊಂಡು ಏನೂ ಮಾಡಲು ತೋಚದೆ ಕೂತಿದ್ದಾಗ, ಯಾರೋ ಒಬ್ಬರು ಬಾಬಾರ ಸನ್ನಿಹಿತ ಭಕ್ತ ಶ್ಯಾಮಾರ ಮೂಲಕ ಪ್ರಯತ್ನಮಾಡುವಂತೆ ಹೇಳಿದರು. ಆದರಂತೆ ಅವನು ಶ್ಯಾಮಾರನ್ನು ಭೇಟಿಮಾಡಿ ತನ್ನ ದುಃಖವನ್ನೆಲ್ಲ ಹೇಳಿಕೊಂಡು ಹೇಗಾದರೂ ಮಾಡಿ ತನಗೆ ಬಾಬಾರ ದರ್ಶನ, ಅನುಗ್ರಹ ದೊರೆಯುವಂತೆ ಮಾಡಿ ಎಂದು ಬೇಡಿಕೊಂಡ. ಸುಸಮಯವನ್ನು ಕಾಯುತ್ತಾ ಒಂದು ದಿನ ಶ್ಯಾಮಾ ಬಾಬಾರಿಗೆ "ದೇವಾ, ಇಲ್ಲಿಗೆ ಬಂದು ಬಹಳ ಜನ ನಿನ್ನ ಅನುಗ್ರಹಕ್ಕೆ ಪಾತ್ರರಾಗುತ್ತಾರೆ. ಆ ಹಾಜಿ ಮುದುಕನನ್ನೂ ನಿನ್ನ ಹತ್ತಿರ ಕರೆದು ಆವನನ್ನೂ ಅನುಗ್ರಹಿಸಬಾರದೇ?" ಎಂದು ಕೇಳಿದರು. ಅದಕ್ಕೆ ಸಾಯಿ, "ಶಾಮ್ಯಾ, ನೀನಿನ್ನೂ ಚಿಕ್ಕವನು. ಎಷ್ಟೋ ವಿಷಯಗಳು ನಿನಗೆ ತಿಳಿಯುವುದಿಲ್ಲ. ಫಕೀರ ಅವನನ್ನು ಒಳಗೆ ಬರಲು ಬಿಡುತ್ತಿಲ್ಲ. ಫಕೀರನ ಅನುಮತಿಯಿಲ್ಲದೆ ಮಸೀದಿಯೊಳಕ್ಕೆ ಯಾರೂ ಬರುವಂತಿಲ್ಲ. ನಾನೇನು ಮಾಡಲಿ? ಹೂಂ. ಹೋಗಲಿ. ನೀನು ಹೋಗಿ, ಅವನು ಭಾವಿಯ ಹತ್ತಿರ ಇರುವ ಕಾಲುದಾರಿಯಲ್ಲಿ ಬರುತ್ತಾನೇನೋ ಕೇಳಿಕೊಂಡು ಬಾ" ಎಂದರು. ಶ್ಯಾಮಾ ಹೋಗಿ ಫಾಲ್ಕೆಯನ್ನು ಕೇಳಿ ಬಂದು, ಬಾಬಾರಿಗೆ "ಬರುತ್ತೇನೆಂದು ಹೇಳಿದ" ಎಂದರು. ಮತ್ತೆ ಬಾಬಾ "ಅವನು ನನಗೆ ನಾಲ್ಕು ಕಂತುಗಳಲ್ಲಿ ನಲವತ್ತು ಸಾವಿರ ರೂಪಾಯಿ ಕೊಡುತ್ತಾನೇನೋ ಕೇಳಿ ಬಾ" ಎಂದರು. ಶ್ಯಾಮಾ ಹೋಗಿ ಹಿಂತಿರುಗಿ, "ನಲವತ್ತು ಸಾವಿರವೇತಕ್ಕೆ ನಾಲ್ಕು ಲಕ್ಷ ಕೊಡುತ್ತೇನೆಂದ" ಎಂದರು. ಅದಕ್ಕೆ ಬಾಬಾ, "ಹೋಗು. ಅವನಿಗೆ ಹೇಳು, ಈವತ್ತು ಮಸೀದಿಯಲ್ಲಿ ಮೇಕೆಯನ್ನು ವಧಿಸುತ್ತೇವೆ. ಅವನಿಗೆ ಅದರ ನಡುವಿನ ಮಾಂಸ ಬೇಕೋ ಅಥವಾ ಅಂಡಾಶಯ ಬೇಕೋ ಕೇಳಿ ಬಾ" ಎಂದರು. ಶ್ಯಾಮಾ ಮತ್ತೆ ಹೋಗಿ ಹಾಜಿಯನ್ನು ಕೇಳಿ, ಹಿಂತಿರುಗಿ, “ಅವನು, ಏನಾದರೂ ಸರಿ. ನಿಮ್ಮ ಮಣ್ಣಿನ ತಟ್ಟೆಯಲ್ಲಿನ ಒಂದು ಅಗುಳಾದರೂ ಸಾಕು ಎಂದ” ಎಂದು ಹೇಳಿದರು. ಅದನ್ನು ಕೇಳಿದ ಕೂಡಲೇ ಬಾಬಾ ಉಗ್ರರಾಗಿ, ಅಲ್ಲಿದ್ದ ಮಣ್ಣಿನ ತಟ್ಟೆಗಳನ್ನು ಎತ್ತಿ ಬಿಸುಟು, ನೇರವಾಗಿ ಹಾಜಿಯ ಹತ್ತಿರ ಹೋಗಿ, ಕಫ್ನಿಯ ತೋಳನ್ನು ಮೆಲೇರಿಸಿ, "ಹಾಜಿ ಎನ್ನುವ ಗರ್ವದಿಂದ ನೀನೊಬ್ಬ ದೊಡ್ಡಮನುಷ್ಯ ಎಂದು ನಟಿಸುತ್ತೀಯಾ? ಇದೇ ಏನು ನೀನು ಖುರಾನನ್ನು ಓದಿರುವ ರೀತಿ? ನಾನೇನೆಂದುಕೊಂಡಿದ್ದೀಯಾ? ನೀನು ನನ್ನನ್ನು ಅರಿತಿಲ್ಲ" ಎಂದೆಲ್ಲಾ ಘರ್ಜಿಸಿದರು. ಫಾಲ್ಕೆಗೆ ತನ್ನ ತಪ್ಪೇನು ಎಂದು ಅರ್ಥವಾಗದೆ ಮೂಕನಾಗಿ ನಿಂತ.
ಬಾಬಾ ಮಸೀದಿಗೆ ಹಿಂತಿರುಗಿದ ಕೆಲವೇ ಕ್ಷಣಗಳಲ್ಲಿ ಅವರ ಕೋಪ ಮಾಯವಾಯಿತು. ಶಾಂತರಾದ ಅವರು ಎರಡು ಬುಟ್ಟಿ ಮಾವಿನಹಣ್ಣನ್ನು ಕೊಂಡು ಫಾಲ್ಕೆಗೆ ಕಳುಹಿಸಿದರು. ಮತ್ತೆ ತಾವೇ ಅವನ ಬಳಿ ಹೋಗಿ ತಮ್ಮ ಜೇಬಿನಿಂದ ೫೫ ರೂಪಾಯಿಗಳನ್ನು ತೆಗೆದು ಅವನಿಗೆ ಕೊಟ್ಟರು. ಅಂದಿನಿಂದ ಅವನು ಬಾಬಾರ ಪ್ರೀತಿಗೆ ಪಾತ್ರನಾದ. ಫಾಲ್ಕೆ ಎಲ್ಲರಂತೆ ಮಸಿದಿಗೆ ತನ್ನಿಷ್ಟದಂತೆ ಬಂದು ಹೋಗುತ್ತಿದ್ದ. ಬಾಬಾ ಅವನನ್ನು ತಮ್ಮ ಜೊತೆಯಲ್ಲಿ ಊಟಕ್ಕೂ ಕರೆಯುತ್ತಿದ್ದರು.
ಬಾಬಾ ಕೋಪಗೊಳ್ಳುತ್ತಿದ್ದುದು, ಭಕ್ತರನ್ನು ತಿದ್ದುವುದಕ್ಕೆ ಉಪಯೋಗಿಸುತ್ತಿದ್ದ ಒಂದು ರೀತಿ. ಒಳಗೆ ಮಾತ್ರ ಅವರು ಯಾವಾಗಲೂ ಶಾಂತ, ಕ್ಷಮಾಮೂರ್ತಿಯೇ! ಅವರು ತೋರಿಸಿದ ಕೋಪ ಫಾಲ್ಕೆಯ ’ತಾನು ಹಾಜಿ’ ಎನ್ನುವ ಅಹಂಕಾರವನ್ನು ತೊಡೆದುಹಾಕುವುದಕ್ಕಾಗಿಯೇ! ಅಂತಹ ಕರುಣಾಳು ಬಾಬಾರ ಪಾದಗಳಿಗೆ ವಿನಯಪೂರಕ ನಮಸ್ಕಾರಗಳು.
ಬಾಬಾರ ಪಂಚಭೂತಗಳ ಮೇಲಿನ ನಿಯಂತ್ರಣ
ಶಿರಡಿಯಲ್ಲಿ ಮಳೆಗಾಲದ ಒಂದು ದಿನ, ಕಾರ್ಮೋಡಗಳು ತುಂಬಿಕೊಂಡು ಧಾರಾಕಾರ ಮಳೆ ಅರಂಭವಾಯಿತು. ನೀರು ಪ್ರವಾಹಗಳಾಗಿ ಹರಿಯಿತು. ಮಳೆ ನಿಲ್ಲುವ ಸೂಚನೆಗಳೂ ಕಾಣಲಿಲ್ಲ. ಶಿರಡಿಯೆಲ್ಲಾ ನೀರೇ ನೀರಾಗಿ ಹೋಯಿತು. ಜನರು, ಪ್ರಾಣಿಪಕ್ಷಿಗಳು ಎಲ್ಲರೂ ಖತಿಗೊಂಡರು. ಯಾರಿಗೂ ಎಲ್ಲಿಗೆ ಹೋಗಬೇಕು, ಏನು ಮಾಡಬೇಕು ಎಂದು ತೋಚದೆ ಎಲ್ಲರೂ ಮಸೀದಿಗೆ ಬಂದು ಸೇರಿದರು. ಅವರ ರಕ್ಷಣೆಗೆ ಯಾರೂ ಇರಲಿಲ್ಲ. ಬೇರೆ ದಾರಿ ಕಾಣದೆ ಅವರೆಲ್ಲಾ ಬಾಬಾರಿಗೆ ಮೊರೆಯಿಟ್ಟರು. ಬಾಬಾ ಅವರ ಪಾಡು ಕಂಡು, ಅನುಕಂಪದಿಂದ, ಮಸೀದಿಯ ಹೊರಗಡೆ ಬಂದು ಆಕಾಶದ ಕಡೆ ನೋಡುತ್ತಾ "ಶಾಂತವಾಗು. ನಿನ್ನ ಕೋಪವನ್ನು ಈ ಬಡವರ ಮೇಲೆ ತೋರಿಸಬೇಡ. ನಿಲ್ಲು. ನಿಲ್ಲು" ಎಂದು ಘರ್ಜಿಸಿದರು. ಸ್ವಲ್ಪವೇ ಹೊತ್ತಿನಲ್ಲಿ ಮೋಡಗಳೆಲ್ಲಾ ಚದುರಿಹೋಗಿ ಮಳೆ ನಿಂತಿತು. ಶಿರಡಿಯ ಜನರೆಲ್ಲಾ ಬಾಬಾರಿಗೆ ತಮ್ಮ ಕೃತಜ್ಞತೆಗಳನ್ನರ್ಪಿಸಿ ತಮ್ಮ ತಮ್ಮ ಸ್ಠಳಗಳಿಗೆ ಹಿಂತಿರುಗಿದರು.
ಇನ್ನೊಂದು ಸಲ ಮಧ್ಯಾಹ್ನದಲ್ಲಿ ಮಸೀದಿಯಲ್ಲಿ ಧುನಿ ಜಾಜ್ವಲ್ಯ ಮಾನವಾಗಿ ಉರಿಯುತ್ತಾ, ಜ್ವಾಲೆಗಳು ದೊಡ್ಡದಾಗುತ್ತಾ ಬಂದು ಮಸೀದಿಯ ತೊಲೆಯನ್ನು ಮುಟ್ಟುತ್ತವೇನೋ ಎನ್ನುವಂತಾಯಿತು. ಮಸೀದಿಯಲ್ಲಿದ್ದವರಿಗೆಲ್ಲಾ ಕಂಗಾಲಾಗಿ ಏನೂ ತೋಚದೇ ಹೋಯಿತು. ಬಾಬಾರಿಗೆ ಇದರ ಪರಿವೆಯೇ ಇದ್ದಂತೆ ಕಾಣಲಿಲ್ಲ. ಅವರಿಗೆ ಹೇಳುವುದಕ್ಕೆ ಯಾರಿಗೂ ಧೈರ್ಯವಿರಲಿಲ್ಲ. ಇದ್ದಕ್ಕಿದಂತೆ ಬಾಬಾ ಎಚ್ಚೆತ್ತು, ಅಲ್ಲಿನ ಪರಿಸ್ಥಿತಿಯನ್ನು ಕಂಡು ಸಟ್ಕಾ ತೆಗೆದುಕೊಂಡು ಪಕ್ಕದಲ್ಲಿದ್ದ ಕಂಬಕ್ಕೆ ಹೊಡೆಯುತ್ತಾ, "ಹೋಗು. ಹಿಂದಕ್ಕೆ ಹೋಗು. ಶಾಂತವಾಗು" ಎಂದು ಜೋರಾಗಿ ಕೂಗಿದರು. ಸಟ್ಕಾದ ಪ್ರತಿಯೊಂದು ಏಟಿಗೂ ಉರಿ ಕಡಮೆಯಾಗುತ್ತ ನಿಧಾನವಾಗಿ, ಧುನಿ ಮತ್ತೆ ಎಂದಿನಂತೆ ಶಾಂತವಾಗಿ ಉರಿಯಲಾರಂಭಿಸಿತು. ಸುತ್ತಲಿದ್ದವರೆಲ್ಲ ನಿಟ್ಟುಸಿರುಬಿಟ್ಟು ಮೊದಲಿನಂತಾದರು. ಬಗ್ಗಡದ ನೀರಿಗೆ ಹೂವು ಹಾಕಿ ಕುಡಿಯುವ ನೀರಿನ ಹಾಗೆ ಪರಿವರ್ತಿಸಿದ್ದನ್ನು ಈಗಾಗಲೇ ಓದಿದ್ದೇವೆ. ಇಂತಹ ಸರ್ವಶಕ್ತರಾದ ಪರಮಾತ್ಮ, ಬಾಬಾರಿಗೆ ಸಾಷ್ಟಾಂಗವೆಸಗಿ ಶರಣಾಗತರಾಗೋಣ.
ಇದರೊಂದಿಗೆ ಸಾಯಿ ಸಗುಣ ಬ್ರಹ್ಮ, ಇತ್ಯಾದಿ ವಿಷಯಗಳನ್ನು ಕುರಿತು ಹೇಳುವ ಹನ್ನೊಂದನೆಯ ಅಧ್ಯಾಯ ಮುಗಿಯಿತು. ಮುಂದಿನ ಅಧ್ಯಾಯದಲ್ಲಿ ಹೇಮಾಡ್ ಪಂತ್ ಸಾಯಿ ಲೀಲೆಗಳು, ಕಾಕಾಮಹಾಜನಿಯ ಅನುಭವಗಳು, ಶ್ರೀಮತಿ ನಿಮೋನ್ಕರ್ , ಮುಳೆ ಶಾಸ್ತ್ರಿ, ಇತ್ಯಾದಿ ವಿಷಯಗಳನ್ನು ಹೇಳುತ್ತಾರೆ.
||ಶ್ರೀ ಸದ್ಗುರು ಸಾಯಿನಾಥಾರ್ಪಣಮಸ್ತು||ಶುಭಂ ಭವತು||
||ಓಂ ಶಾಂತಿಃ ಶಾಂತಿಃ ಸಾಂತಿಃ||
||ಓಂ ಶಾಂತಿಃ ಶಾಂತಿಃ ಸಾಂತಿಃ||
No comments:
Post a Comment