||ಶ್ರೀ ಸಾಯಿ ಸಚ್ಚರಿತ್ರೆ||
||ಹದಿಮೂರನೆಯ ಅಧ್ಯಾಯ||
||ಇನ್ನೂ ಕೆಲವು ಸಾಯಿ ಲೀಲೆಗಳು||
||ಹದಿಮೂರನೆಯ ಅಧ್ಯಾಯ||
||ಇನ್ನೂ ಕೆಲವು ಸಾಯಿ ಲೀಲೆಗಳು||
ಶ್ರೀ ಗಣೇಶಾಯ ನಮಃ ಶ್ರೀ ಸರಸ್ವತಯೇ ನಮಃ
ಶ್ರೀ ವೆಂಕಟೇಶಾಯ ನಮಃ ಶ್ರೀ ಸಾಯಿನಾಥಾಯ ನಮಃ
ಶ್ರೀ ಸದ್ಗುರುಭ್ಯೋನ್ನಮಃ
ಈ ಅಧ್ಯಾಯದಲ್ಲಿ ಹೇಮಾಡ್ ಪಂತ್, ಬಾಬಾರ ಮತ್ತಷ್ಟು ಲೀಲೆಗಳು, ಭೀಮಾಜಿ ಪಾಟೀಲ್, ಬಾಲಾ ಶಿಂಪಿ, ಬಾಪೂ ಸಾಹೇಬ್ ಬೂಟಿ, ಕಾಕಾ ಮಹಾಜನಿ ಅವರ ಅನುಭವಗಳು ಮತ್ತು ಇತರ ವಿಷಯಗಳನ್ನು ಹೇಳುತ್ತಾರೆ.
ಮಾಯೆಯ ಶಕ್ತಿ
ಬಾಬಾರು ಯಾವಾಗ ಮಾತಾಡಿದರೂ, ಕ್ಲುಪ್ತವಾಗಿ, ಅರ್ಥಗರ್ಭಿತವಾದ ಪದಗಳನ್ನು ಉಪಯೋಗಿಸಿ ಮಾತನಾಡುತ್ತಿದ್ದರೇ ಹೊರತು, ವ್ಯರ್ಥವಾದ ಪದಗಳನ್ನು ಹೇಳುತ್ತಿರಲಿಲ್ಲ. ಯಾರಿಗಾಗಿ ಹೇಳುತ್ತಿದ್ದರೋ ಅವರಿಗೆ ಮಾತ್ರ ಅದು ಅರ್ಥವಾಗುತ್ತಿತ್ತು. ಬೇರೆಯವರಿಗೆ ಅರ್ಥವಾಗುತ್ತಿರಲಿಲ್ಲ. ಯಾರಿಗೂ ನೋವುಂಟಾಗುವಂತೆ ಮಾತನಾಡುತ್ತಿರಲಿಲ್ಲ. ಅವರ ಮಾತಿನ ಧಾಟಿ, ಹೇಳುವ ರೀತಿ ಯಾವಾಗಲೂ ತಾಯಿ ತನ್ನ ಮಕ್ಕಳಲ್ಲಿ ಪ್ರೀತಿ, ವಿಶ್ವಾಸಗಳಿಂದ ತುಂಬಿ ಹೇಳುವ ಹಾಗೆ ತೋರುತ್ತಿತ್ತು. ಬಾಬಾರಿಗೆ ತನ್ನ ಭಕ್ತರೇ ಎಲ್ಲಾ! ಬೇರೇನೂ ಇರಲಿಲ್ಲ.
ಲೌಕಿಕ ಪ್ರಪಂಚದ ಮೋಹಗಳಿಂದ ದೂರವಿದ್ದ, ಆತ್ಮತೃಪ್ತರಾದ ಅವರು ಹೇಳುತ್ತಿದ್ದರು, "ಮಾಯೆ ನನ್ನನ್ನು ಸದಾ ಕಾಡುತ್ತಿರುತ್ತಾಳೆ. ನನ್ನನ್ನು ನಾನೇ ಮರೆಯಬಹುದೇನೋ! ಆದರೆ ಮಾಯೆಯನ್ನು ಮರೆಯಲಾರೆ. ಅವಳು ಯಾವಾಗಲೂ ನನ್ನ ಹಿಂದೆಯೇ ಇರುತ್ತಾಳೆ. ನಾನು ಫಕೀರನಾದರೂ, ನನಗೆ ಹೆಂಡತಿ ಮಕ್ಕಳು ಮನೆ ಮಠ ಏನೂ ಇಲ್ಲದಿದ್ದರೂ, ಅವಳು ಮಾತ್ರ ನನ್ನನ್ನು ಬಿಡುವುದಿಲ್ಲ. ಬ್ರಹ್ಮಾದಿಗಳಿಗೇ ಅವಳ ಕಾಟ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ, ಎಂದಮೇಲೆ ನನ್ನಂತಹ ಫಕೀರನ ಗತಿಯೇನು? ಯಾರು ಆ ಭಗವಂತನಲ್ಲಿ ಕಾಯಾ ವಾಚಾ ಮನಸಾ ಶರಣಾಗತರಾಗಿ ಸದಾ ಅವನ ನಾಮಸ್ಮರಣೆಯಲ್ಲಿ ಲೀನರಾಗುತ್ತಾರೋ, ಅವರು ಮಾತ್ರ ಅವಳ ಕಾಟದಿಂದ ತಪ್ಪಿಸಿಕೊಳ್ಳಬಲ್ಲರು. ಮಾಯೆಯ ಶಕ್ತಿ ಅಪಾರವಾದುದು. ನಮ್ಮಂತಹ ಪಾಮರರು ಅವಳ ಮಾಯಾಶಕ್ತಿಯಿಂದ ಪಾರಾಗಲು ಇರುವ ದಾರಿಯೊಂದೇ. ಅದು ಸದಾಕಾಲ ಭಗವನ್ನಾಮ ಸ್ಮರಣೆ." ಅಂತಹ ಭಗವಂತ ಬಾಬಾರನ್ನು ನಾವು ಶರಣು ಹೋಗೋಣ. ಅವರ ನಾಮ ಸ್ಮರಣೆಯಲ್ಲಿ ಸದಾ ನಿರತರಾಗೋಣ.
ತಮ್ಮ ಭಕ್ತರ ಹಿತಕ್ಕಾಗಿ ಬಾಬಾ, "ಯಾರು ಪುಣ್ಯವಂತರೋ, ಯಾರು ಪುಣ್ಯಕಾರ್ಯಗಳಿಂದ ತಮ್ಮ ಪಾಪಗಳನ್ನು ನಾಶ ಮಾಡಿಕೊಂಡಿದ್ದಾರೋ, ಅವರು ಮಾತ್ರ, ನನ್ನನ್ನು ಪೂಜಿಸಕೊಳ್ಳಬಲ್ಲರು. ನೀವು ಸಾಯಿ, ಸಾಯಿ ಎಂದು ಪರಮನಂಬಿಕೆಯಿಂದ ಸದಾಕಾಲ ಉಚ್ಚರಿಸುತ್ತಿದ್ದರೆ, ನಿಮ್ಮನ್ನು ಈ ಸಂಸಾರದಿಂದ ಪಾರುಮಾಡುವ ಜವಾಬ್ದಾರಿ ನನ್ನದು. ಆ ನಾಮೋಚ್ಚಾರಣೆ ಯಾವಾಗಲೂ ನಿಮ್ಮ ನೆರವಿಗೆ ಬರುತ್ತದೆ. ನನ್ನನ್ನು ತೃಪ್ತಿಗೊಳಿಸಲು ಷೋಡಶೋಪಚಾರ ಪೂಜೆಗಳ ಅವಶ್ಯಕತೆಯಿಲ್ಲ. ಭಕ್ತಿ, ಶ್ರದ್ಧೆ, ಪ್ರೇಮಗಳು ಎಲ್ಲಿವೆಯೋ ಅಲ್ಲಿ ನಾನು ನೆಲಸಿರುತ್ತೇನೆ" ಎಂದು ಸದಾ ಹೇಳುತ್ತಿದ್ದರು. ಇದನ್ನು ಸ್ಪಷ್ಟೀಕರಿಸುವ ಕೆಲವು ಕಥೆಗಳನ್ನು ನೋಡೋಣ.
ಭೀಮಾಜಿ ಪಾಟೀಲ್ ಕಥೆ
ನಾವು ಮಾಡಿದ ಕರ್ಮಗಳ ಫಲವನ್ನು ಅನುಭವಿಸಬೇಕೇ ಹೊರತು, ಅದರಿಂದ ಬಿಡಿಸಿಕೊಳ್ಳಲು ಸಾಧ್ಯವಿಲ್ಲ. ಸುಕರ್ಮಕ್ಕೆ ಸುಫಲ. ದುಷ್ಕರ್ಮಕ್ಕೆ ದುಷ್ಫಲ. ಹಿಂದಿನ ಜನ್ಮಗಳಲ್ಲಿ ಮಾಡಿದ ಕರ್ಮ ಫಲ, ಈ ಜನ್ಮದಲ್ಲಿ ಅನುಭವಿಸಬೇಕು. ಇದು ನಾವು ಮಾಯೆಯ ಹಿಡಿತದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂಬುದರ ಅಂತರಾರ್ಥ. ಇದನ್ನು ಸರಿಯಾಗಿ ತಿಳಿದುಕೊಂಡು, ನಮ್ಮ ನಡವಳಿಕೆಯನ್ನು ಈ ಜನ್ಮದಲ್ಲಾದರೂ ತಿದ್ದಿಕೊಂಡರೆ ಈ ಸಂಸಾರ ಚಕ್ರ ಭ್ರಮಣೆಯಿಂದ ಕ್ರಮಕ್ರಮವಾಗಿ ಹೊರಬೀಳಬಹುದು.
ಭೀಮಾಜಿ ಪಾಟೀಲ್, ಜುನ್ನರ ತಾಲೂಕಿನ ನಾರಾಯಣಗಾಂವ್ ನಿವಾಸಿ. ಒಳ್ಳೆಯ ಮನುಷ್ಯ. ಅಥಿತಿಸತ್ಕಾರದಲ್ಲಿ ಎತ್ತಿದ ಕೈ. ಅವರಲ್ಲಿಗೆ ಯಾರೇ ಹೋದರೂ, ಅವರನ್ನು ಚೆನ್ನಾಗಿ ಸತ್ಕರಿಸುತ್ತಿದ್ದರು. ಕಾಲಕ್ರಮೇಣ ಅವರ ಪುಣ್ಯಫಲಗಳು ಕ್ಷೀಣಿಸುತ್ತಾ ಬಂದು, ಅವರ ದುಷ್ಕರ್ಮ ಫಲಗಳು ಆರಂಭವಾದವು. ಮೊದಮೊದಲು ಸ್ವಲ್ಪ ಅನಾರೋಗ್ಯದಿಂದ ಬಳಲುತ್ತಿದ್ದವರು, ಯಾವ ಚಿಕಿತ್ಸೆಯೂ ಫಲವಾಗದೆ, ಬರುಬರುತ್ತಾ ಅದು ಕ್ಷಯರೋಗಕ್ಕೆ ತಿರುಗಿತು. ಅಂದಿನ ದಿನಗಳಲ್ಲಿ ಕ್ಷಯರೋಗಕ್ಕೆ ಸರಿಯಾದ ಯಾವ ಚಿಕಿತ್ಸೆಯೂ ಇರಲಿಲ್ಲ. ಇನ್ನು ತಾನು ಉಳಿಯುವುದಿಲ್ಲ ಎಂದು ಖಚಿತವಾದಾಗ, ನಾರಾಯಣ ನೀನೇ ನನಗೆ ಗತಿ ಎಂದು ದೇವರನ್ನು ಪ್ರಾರ್ಥಿಸಿದರು. ಸಂತೋಷದಲ್ಲಿದ್ದಾಗ ನಮಗೆ ದೇವರು ನೆನಪಿಗೆ ಬರುವುದಿಲ್ಲ. ಕಷ್ಟಗಳು ಬಂದಾಗಲೇ ಅವನ ನೆನಪು ಬರುವುದು. ದೈವ ಪ್ರೇರಣೆಯೋ ಎಂಬಂತೆ ಅವರಿಗೆ ನಾನಾ ಸಾಹೇಬ್ ಚಾಂದೋರ್ಕರರ ನೆನಪು ಬಂತು. ಅವರಿಗೆ ದೀರ್ಘವಾದ ಪತ್ರ ಬರೆದು, ಅದರಲ್ಲಿ ತಮಗೆ ಬಂದಿರುವ ರೋಗ, ತಾನು ಪ್ರಸ್ತುತ ಇರುವ ಪರಿಸ್ಥಿತಿಗಳನ್ನು ವಿಶದವಾಗಿ ತಿಳಿಸಿ, ಅವರನ್ನು ಸಾಯುವ ಮುಂಚೆ ಒಂದುಸಲ ಕಾಣಬೇಕೆಂಬ ಇಚ್ಛೆಯನ್ನು ವ್ಯಕ್ತಪಡಿಸಿದರು. ನಾನಾ ಸಾಹೇಬ್ ಆ ಪತ್ರವನ್ನು ಓದಿ ಬಹು ದುಃಖಪಟ್ಟು, ತಕ್ಷಣವೇ ಶಿರಡಿಗೆ ಹೋಗಿ ಬಾಬಾರ ದರ್ಶನಮಾಡಬೇಕೆಂದೂ, ಅವರೊಬ್ಬರೇ ಅವರನ್ನು ಕಾಪಾಡಲು ಶಕ್ತರೆಂದೂ ತಿಳಿಸಿದರು. ಭೀಮಾಜಿ ಪಾಟೀಲ್ ಕೂಡಲೇ ಶಿರಡಿಗೆ ಹೊರಟರು. ಅವರು ಶಿರಡಿ ಸೇರುವ ವೇಳೆಗೆ ನಾನಾ ಸಾಹೇಬರೂ ಅಲ್ಲಿಗೆ ಬಂದರು. ನಡೆಯಲಾಗದಿದ್ದ ಪಾಟೀಲರನ್ನು ಹೊತ್ತುಕೊಂಡು, ಬಾಬಾರ ಸಮ್ಮುಖಕ್ಕೆ ಮಸೀದಿಗೆ ಕರೆತಂದರು. ಶ್ಯಾಮಾ ಕೂಡಾ ಆಗ ಅಲ್ಲೇ ಇದ್ದರು. ಪಾಟೀಲರನ್ನು ಕಂಡ ಕೂಡಲೇ ಬಾಬಾ, "ಈ ರೋಗ ಹಿಂದಿನ ಜನ್ಮಗಳ ಕರ್ಮಫಲ. ಇದರಲ್ಲಿ ತಲೆಹಾಕಲು ನನಗೆ ಇಷ್ಟವಿಲ್ಲ" ಎಂದು ಸ್ಪಷ್ಟವಾಗಿ ಹೇಳಿದರು. ಪಾಟೀಲರಿಗೆ ಹೃದಯಘಾತವಾದಂತಾಯಿತು. ಕಣ್ಣೀರು ಧಾರಾಕಾರವಾಗಿ ಸುರಿಸುತ್ತಾ, ಬಾಬಾರಲ್ಲಿ ಮೊರೆಯಿಟ್ಟುಕೊಂಡರು, "ಬಾಬಾ ನೀವೇ ಕೊನೆಯ ಆಸರೆ ಎಂದು ನಾನು ನಿಮ್ಮಲ್ಲಿಗೆ ಬಂದಿದ್ದೇನೆ. ನೀವು ಸಹಾಯಮಾಡದಿದ್ದರೆ, ನನಗೆ ಸಾವೇ ಗತಿ" ಎಂದು ಅತ್ತರು. ಇತರರೂ ಅವರ ಪರವಾಗಿ ಮಾತನಾಡಿದಮೇಲೆ, ಬಾಬಾ ಕರುಣೆಯಿಂದ ಹೇಳಿದರು, "ಹೆದರಬೇಡ. ಈ ದ್ವಾರಕಾಮಾಯಿಯಲ್ಲಿ ನೀನು ಕಾಲಿಟ್ಟಾಗಲೇ, ನಿನ್ನ ದುಃಖಗಳೆಲ್ಲಾ ದೂರವಾದವು. ಇಲ್ಲಿನ ಫಕೀರ ಬಹಳ ದಯಾವಂತ. ಅವನು ನಿನ್ನ ರೋಗವನ್ನು ಗುಣಪಡಿಸುತ್ತಾನೆ. ಅವನು ಎಲ್ಲರನ್ನೂ ಪ್ರೀತಿ ಕರುಣೆಗಳಿಂದ ಕಾಪಾಡುತ್ತಾನೆ."
ಬಾಬಾರ ಬಳಿಗೆ ಬರುವುದಕ್ಕಿಂತ ಮುಂಚೆ ಪಾಟೀಲರು, ಪ್ರತಿ ಐದು ನಿಮಿಷಗಳಿಗೊಮ್ಮೆ ರಕ್ತ ವಾಂತಿ ಮಾಡಿಕೊಳ್ಳುತ್ತಿದ್ದರು. ಬಾಬಾ ಹೇಳಿದ ಮಾತುಗಳನ್ನು ಕೇಳುತ್ತಲೇ ಪಾಟೀಲರು ಗುಣಮುಖರಾದಂತೆ ಕಂಡು, ರಕ್ತ ವಾಂತಿ ನಿಂತುಹೋಯಿತು. ಬಾಬಾರ ದರ್ಶನವೇ ಅವರಿಗೆ ಹೊಸ ಶಕ್ತಿಯನ್ನು ನೀಡಿದಂತಾಯಿತು. ಯಾರ ಸಹಾಯವೂ ಇಲ್ಲದೆ ತಾವೇ ಎದ್ದು ನಿಂತು ನಡೆಯಬಹುದಾದರು.
ಅವರನ್ನು ಭೀಮಾಬಾಯಿಯ ಮನೆಯಲ್ಲಿ ತಂಗುವಂತೆ ಬಾಬಾ ಹೇಳಿದರು. ಆ ಮನೆ ಅವರ ಆರೋಗ್ಯಕ್ಕೆ ಅಷ್ಟು ಅನುಕೂಲವಾದದ್ದಲ್ಲ. ನೆಲ ಎಡ್ಡುದಿಡ್ಡಾಗಿ ಹಸಿಹಸಿಯಾಗಿತ್ತು. ಬಾಬಾರ ಆಣತಿಯನ್ನು ಪಾಲಿಸಲೇಬೇಕೆಂಬ ನಿರ್ಧಾರದಿಂದ ಪಾಟೀಲ್ ಆ ನೆಲದಮೇಲೆ ಒಂದು ಗೋಣಿಚೀಲ ಹಾಸಿಕೊಂಡು ಮಲಗಿದರು. ಹಾಗೆ ಮಲಗಿದ್ದಾಗ, ಅವರಿಗೆ ಬಾಬಾ ಎರಡುಸಲ ಕನಸಿನಲ್ಲಿ ಕಾಣಿಸಿಕೊಂಡು ಅವರ ರೋಗವನ್ನು ಗುಣಪಡಿಸಿದರು.
ಮೊದಲನೆಯ ಕನಸಿನಲ್ಲಿ ಪಾಟೀಲ್ ಒಬ್ಬ ಹುಡುಗನಾಗಿದ್ದರು. ಅವರು ಕವಿತೆಯೊಂದನ್ನು ಸರಿಯಾಗಿ ಹೇಳಲಿಲ್ಲವೆಂದು ಅವರ ಉಪಾಧ್ಯಾಯರು ಅವರನ್ನು ಕೋಲಿನಿಂದ ಹೊಡೆದರು. ಆ ಹೊಡೆತಗಳು ಅವರಿಗೆ ಅತೀವ ನೋವನ್ನುಂಟುಮಾಡಿತು. ಎರಡನೆಯ ಕನಸಿನಲ್ಲಿ ಯಾರೋ ಅವರ ಎದೆಯ ಮೇಲೆ ಕುಳಿತು ಒಂದು ಕಲ್ಲುಗುಂಡನ್ನು ಎದೆಯಮೇಲಿಟ್ಟು ಉರುಳಿಸುತ್ತಿದ್ದರು. ಅದು ಅವರಿಗೆ ಅತಿ ಹೆಚ್ಚಿನ ನೋವು ಕೊಟ್ಟಿತು.
ಈ ಎರಡೂ ನೋವುಗಳನ್ನು ಅನುಭವಿಸಿದ ಪಾಟೀಲರಿಗೆ, ಸ್ವಲ್ಪ ಕಾಲದಲ್ಲೇ ಕ್ಷಯದಿಂದ ಬಿಡುಗಡೆಯಾಯಿತು. ಕನಸಿನಲ್ಲಿ ಅನುಭವಿಸಿದ ನೋವು ಆ ರೀತಿಯಲ್ಲಿ ತಮಗೆ ಕನಸು ಮನಸಿನಲ್ಲೂ ಎಣಿಸದ ಆನಂದವನ್ನು ತಂದುಕೊಡುತ್ತದೆಂದು ಅವರು ಭಾವಿಸಿರಲಿಲ್ಲ. ಅಶ್ರುಪೂರ್ಣರಾಗಿ ಅವರು ಬಾಬಾರ ಚರಣಗಳಲ್ಲಿ ತಲೆಯಿಟ್ಟು, ಅವರ ಪಾದಗಳನ್ನು ಕಣ್ಣೀರಿನಲ್ಲಿ ತೊಳೆದರು. ಬಾಬಾರ ಆಶೀರ್ವಾದ ಪಡೆದು ತಮ್ಮ ಊರಿಗೆ ಹಿಂತಿರುಗಿದರು. ಕೃತಜ್ಞತಾಪೂರ್ಣರಾದ ಅವರು ಶಿರಡಿಗೆ ಆಗಾಗ ಬಂದು ಬಾಬಾರ ದರ್ಶನಮಾಡಿಕೊಂಡು ಹೋಗುತ್ತಿದ್ದರು. ಇಷ್ಟೆಲ್ಲಾ ಆದರೂ, ಬಾಬಾ ಅವರಿಂದ ಕೃತಜ್ಞತೆ, ಶ್ರದ್ಧಾ ಭಕ್ತಿಗಳನ್ನು ಬಿಟ್ಟು ಮತ್ತೇನನ್ನೂ ಅಪೇಕ್ಷಿಸಲಿಲ್ಲ.
ಸಾಮಾನ್ಯವಾಗಿ ನಮ್ಮಲ್ಲಿ ಅನೇಕರಿಗೆ ಪಕ್ಷಕ್ಕೊಂದು ಸಲ ಅಥವ ತಿಂಗಳಿಗೊಂದು ಸಲ ಸತ್ಯನಾರಾಯಣವ್ರತ ಮಾಡುವ ಪರಿಪಾಠವಿದೆ. ಆದರೆ ಭೀಮಾಜಿ ಪಾಟೀಲ್ ಶ್ರೀ ಸಾಯಿ ಸತ್ಯವ್ರತ ಎಂಬ ಹೋಸ ವ್ರತವನ್ನು ಆರಂಭಿಸಿದರು. ಪ್ರತಿ ಗುರುವಾರ ಮನೆಯಲ್ಲಿ ಶ್ರೀ ಸಾಯಿ ಸತ್ಯ ವ್ರತವನ್ನು ಮಾಡಿ, ದಾಸಗಣು ಬರೆದಿದ್ದ ಲೀಲಾಮೃತದಲ್ಲಿನ ಮೂರು ಅಧ್ಯಾಯಗಳನ್ನು ಪೂಜೆಯಾದ ನಂತರ ಓದಿ, ವ್ರತ ಪೂರ್ಣಗೊಳಿಸುತ್ತಿದ್ದರು.
ಬಾಲ ಗಣಪತ್ ಶಿಂಪಿ ಕಥೆ
ಬಾಬಾರ ಅಸೀಮ ಭಕ್ತ ರಾದ ಬಾಲ ಗಣಪತ್ ಶಿಂಪಿಗೆ ಒಂದುಸಲ ಜ್ವರ ಬಂದು, ಯಾವ ಚಿಕಿತ್ಸೆಗೂ ತಗ್ಗದೆ, ಕಾಲಕ್ರಮೇಣ ಮಲೇರಿಯ ರೋಗವಾಗಿ ಪರಿಣಮಿಸಿತು. ಅದಕ್ಕೂ ಎಲ್ಲ ತರಹೆಯ ಚಿಕಿತ್ಸೆಗಳೂ ಆದವು. ಯಾವುದರಿಂದಲೂ ಪ್ರಯೋಜನವಾಗಲಿಲ್ಲ. ಕೊನೆಯ ಆಸರೆ ಎಂದು ದ್ವಾರಕಾಮಾಯಿಗೆ ಹೋಗಿ ಬಾಬಾರ ಚರಣಗಳಲ್ಲಿ ಬಿದ್ದು ತನ್ನನ್ನು ಕಾಪಾಡಬೇಕು ಎಂದು ಬೇಡಿಕೊಂಡರು. ಬಾಬಾರ ಚಿಕಿತ್ಸೆಯ ರೀತಿಯೇ ಬೇರೆ. ಅವರು ಶಿಂಪಿಗೆ, "ಲಕ್ಷ್ಮಿ ದೇವಸ್ಥಾನದ ಮುಂದೆ ಕರಿಯ ನಾಯಿಗೆ ಮೊಸರನ್ನ ಕೊಡು" ಎಂದು ಹೇಳಿದರು. ಇದನ್ನು ಮಾಡುವುದಾದರೂ ಹೇಗೆ ಎಂದು ಯೋಚಿಸುತ್ತಾ, ಅವರು ಮನೆಗೆ ಹೋಗಿ ನೋಡಿದರು. ಅನ್ನ ಮೊಸರು ಇತ್ತು. ಅವೆರಡನ್ನೂ ಕಲಸಿ ಲಕ್ಷ್ಮಿ ದೇವಸ್ಥಾನಕ್ಕೆ ಹೋಗುತ್ತಿದ್ದ ಹಾಗೆಯೇ ಕರಿಯ ನಾಯಿಯೊಂದು ಬಾಲ ಅಲ್ಲಾಡಿಸುತ್ತಾ ಅಲ್ಲಿಗೆ ಬಂತು. ಅದಕ್ಕೆ ಆ ಮೊಸರನ್ನವನ್ನು ಕೊಟ್ಟರು. ಆ ನಾಯಿ ಅದನ್ನು ತಿಂದು ಕೃತಜ್ಞತಾಭಾವದಿಂದ ಒಂದುಸಲ ಅವರಕಡೆ ನೋಡಿ ಹೊರಟುಹೋಯಿತು. ಆ ನಾಯಿ ಅನ್ನ ತಿನ್ನುತ್ತಿದ್ದ ಹಾಗೆಯೇ, ಶಿಂಪಿಯ ಜ್ವರ ಕಡಮೆಯಾಗುತ್ತಾ ಬಂದು ನಾಲ್ಕೈದು ದಿನಗಳಲ್ಲಿ ಸಂಪೂರ್ಣ ವಾಸಿಯಾಯಿತು.
ಬಾಪೂ ಸಾಹೇಬ್ ಬೂಟಿ ಕಥೆ
ಬೂಟಿ ಒಂದುಸಲ ವಾಂತಿ ಬೇಧಿಗಳಿಂದ ನರಳುತ್ತಿದ್ದರು. ಅದರಿಂದ ಬಹಳ ನಿಶ್ಶಕ್ತರಾಗಿ, ಏಳಲೂ, ಓಡಾಡಲೂ ಸಾಧ್ಯವಾಗುತ್ತಿರಲಿಲ್ಲ. ಬಾಬಾರ ದರ್ಶನಕ್ಕೆ ಹೋಗಲೂ ಸಾಧ್ಯವಾಗದೆ ಹೋಯಿತು. ಅದನ್ನು ತಿಳಿದ ಬಾಬಾ ಅವರನ್ನು ಮಸೀದಿಗೆ ಕರೆದು ತರಲು ಹೇಳಿದರು. ಬೂಟಿ ಬಂದಾಗ ಬಾಬಾ ಅವರನ್ನು ತಮ್ಮ ಮುಂದೆ ಕೂಡಿಸಿಕೊಂಡು , "ಹುಷಾರ್! ಇನ್ನು ಯಾವ ರೀತಿಯ ಬೇಧಿಗಳು ಇಲ್ಲ" ಎಂದು ಘಟ್ಟಿಯಾಗಿ ಕೂಗಿ ಹೇಳಿದರು. ತಮ್ಮ ತೋರು ಬೆರಳು ತೋರಿಸುತ್ತಾ, "ವಾಂತಿಗಳೂ ನಿಲ್ಲಬೇಕು" ಎಂದರು. ಬಾಬಾರ ಮಾತುಗಳಲ್ಲಿ ಎಂತಹ ವಿಶಿಷ್ಟ ಶಕ್ತಿ ಇತ್ತೆಂದರೆ ಆ ಎರಡೂ ಖಾಯಿಲೆಗಳು ಆ ಕ್ಷಣದಿಂದ ನಿಂತು ಹೋದವು. ಬೂಟಿ ಆರೋಗ್ಯವಂತರಾದರು. ಅವರಲ್ಲಿ ಖಾಯಿಲೆಯ ಲವಲೇಶವೂ ಉಳಿಯಲಿಲ್ಲ.
ಮತ್ತೊಂದು ಸಲ ಬೂಟಿ ಕಾಲರಾಗೆ ತುತ್ತಾಗಿ, ಅತೀವ ಬಾಯಾರಿಕೆಯಿಂದ ನರಳುತ್ತಿದ್ದರು. ಡಾಕ್ಟರ್ ಪಿಳ್ಳೆ ಎಲ್ಲ ತರಹೆಯ ಔಷಧಗಳನ್ನೂ ಕೊಟ್ಟು ನೋಡಿದರು. ಯಾವುದೂ ಉಪಯೋಗವಾಗಲಿಲ್ಲ. ಕೊನೆಗೆ ಬೂಟಿ, ಬಾಬಾರ ಹತ್ತಿರ ಹೋಗಿ ಏನಾದರೂ ಮಾಡಿ ಈ ನರಳುವಿಕೆಯಿಂದ ನನ್ನನ್ನು ಬಿಡಿಸಿ ಎಂದು ಕೇಳಿಕೊಂಡರು. ಬಾಬಾ ಒಂದು ವಿಶೇಷ ರೀತಿಯ ಔಷಧ ಹೇಳಿದರು, "ಬಾದಾಮಿ, ಅಕ್ರೋಟ್, ಪಿಸ್ತಾ ಎಲ್ಲವನ್ನೂ ಚೆನ್ನಾಗಿ ಅರೆದು ಅದನ್ನು ಬಿಸಿ ಹಾಲಿಗೆ ಸೇರಿಸಿ ಸಕ್ಕರೆ ಕಲಸಿ ಕುಡಿ." ಅದನ್ನು ಮಾಡಿ ಒಂದು ಲೋಟ ಹಾಲು ಕುಡಿಯುತ್ತಲೇ ಬೂಟಿಗೆ ತೀರದ ಬಾಯಾರಿಕೆ ಹಾಗೂ ಕಾಲರಾ ಎರಡೂ ಒಟ್ಟಿಗೇ ಮಾಯವಾಯಿತು. ಡಾಕ್ಟರ್ ಪಿಳ್ಳೆಗೆ ಇದು ತಿಳಿದಾಗ ಆಘಾತವಾದಂತಾಯಿತು. ಬಾಬಾ ಹೇಳಿದ ಔಷಧ ಕಾಲಾರಾಗೆ ಬಹಳ ಅಪಾಯಕಾರಿ!
ಬಾಬಾರ ವಿಶಿಷ್ಟ ಶಕ್ತಿ ಇಂತಹ ರೋಗಗಳನ್ನು ಗುಣಪಡಿಸುತ್ತಿತ್ತೇ ಹೊರತು ಅವರು ಕೊಡುತ್ತಿದ್ದ ಔಷಧಗಳಲ್ಲ. ಇದೇ ಔಷಧವನ್ನು ಬೇರೆ ವೈದ್ಯರಾರಾದರೂ ಕೊಟ್ಟಿದ್ದರೆ, ರೋಗಿ ತಪ್ಪದೇ ಪರಮಪದವನ್ನು ಸೇರಿರುತ್ತಿದ್ದ. ಸಂತರು, ಮಹಾತ್ಮರು ತಮ್ಮ ಶಕ್ತಿ ಪ್ರದರ್ಶನಮಾಡುವುದರಲ್ಲಿ ಅತಿಜಿಪುಣರು. ಆದರೆ ಬಾಬಾರಿಗೆ ತಮ್ಮ ಭಕ್ತರಲ್ಲಿ ಎಷ್ಟು ಪ್ರೀತಿ ಅನುಕಂಪಗಳಿತ್ತೆಂದರೆ, ಯಾವುದನ್ನೂ ಲಕ್ಷಿಸದೆ, ಭಕ್ತರಿಗೆ ಒಳ್ಳೆಯದನ್ನು ಮಾಡುವುದೇ ಅವರ ಧ್ಯೇಯವಾಗಿತ್ತು. ಅವರಿಗೆ ಭಕ್ತರು ಮೊದಲು. ಮಿಕ್ಕೆಲ್ಲವೂ ಆಮೇಲೆ. ಅಂತಹ ಅನುಕಂಪ ಮೂರ್ತಿ, ವಿಶ್ವಾಸರೂಪಿ, ಬಾಬಾರರಿಗೆ ಶರಣಾಗತರಾಗಿ ನಮಸ್ಕರಿಸೋಣ.
ಆಲಂದಿ ಸ್ವಾಮಿ ಕಥೆ
ಆಲಂದಿಯಿಂದ ಸ್ವಾಮಿಯೊಬ್ಬರು ಒಂದುಸಲ ಬಾಬಾರ ದರ್ಶನಕ್ಕೆ ಬಂದರು. ಅವರು ದುಸ್ಸಹವಾದ ಕಿವಿನೋವಿನಿಂದ ನರಳುತ್ತಿದ್ದರು. ಶಿರಡಿಗೆ ಬರುವುದಕ್ಕೆ ಮುಂಚೆ, ಅವರಿಗೆ ಶಸ್ತ್ರ ಚಿಕಿತ್ಸೆಯೂ ಆಗಿತ್ತು. ಅದರಿಂದಲೂ ಏನೂ ಉಪಯೋಗವಾಗದೆ, ರಾತ್ರಿವೇಳೆ ನಿದ್ದೆಯೂ ಸರಿಯಾಗಿ ಬರುತ್ತಿರಲಿಲ್ಲ. ಆ ಸ್ವಾಮಿ ಬಾಬಾರ ಬಳಿಗೆ ಬಂದಾಗ, ಅಲ್ಲಿದ್ದ ಶ್ಯಾಮಾ ಸ್ವಾಮಿಯ ಕಿವಿನೋವು ಕಡಮೆಯಾಗುವಂತೆ ಏನಾದರೂ ಮಾಡಬೇಕೆಂದು ಬಾಬಾರನ್ನು ಕೇಳಿಕೊಂಡರು. ಅದಕ್ಕೆ ಬಾಬಾ "ಅಲ್ಲಾ ಒಳ್ಳೆಯದು ಮಾಡುತ್ತಾನೆ" ಎಂದರು. ಶಿರಡಿಯನ್ನು ಬಿಡುವುದಕ್ಕೆ ಮುಂಚೆ ಸ್ವಾಮಿಗೆ ಸ್ವಲ್ಪ ಹಾಯೆಂದೆನಿಸಿತು. ಪೂನಾಕ್ಕೆ ಹೋದಮೇಲೆ ಕಿವಿಯನೋವು ಕಡಮೆಯಾದರೂ, ಊತ ಇನ್ನೂ ಹಾಗೇ ಇದೆಯೆಂದು ಕಾಗದ ಬರೆದರು. ಬಾವು ತೋರಿಸಲು ಬೊಂಬಾಯಲ್ಲಿ ವೈದ್ಯರ ಹತ್ತಿರ ಹೋದಾಗ, ವೈದ್ಯರು ಇನ್ನು ಯಾವ ಚಿಕಿತ್ಸೆಯ ಅಗತ್ಯವೂ ಇಲ್ಲವೆಂದೂ ಕೆಲವು ದಿನಗಳಲ್ಲಿ ಬಾವು ಇಳಿದುಹೋಗುವುದೆಂದೂ ಹೇಳಿದರು. ಬಾಬಾರ ಮಾತಿನ ಶಕ್ತಿ ಅಂತಹುದು!
ಕಾಕಾ ಮಹಾಜನಿ ಕಥೆ
ಕಾಕಾ ಮಹಾಜನಿ ಬಾಬಾರ ಅಂತರಂಗ ಭಕ್ತರಲ್ಲೊಬ್ಬರು. ಶಿರಡಿಯಲ್ಲಿದ್ದಾಗ ಒಂದುಸಲ ಅವರಿಗೆ ವಿರೇಚನವಾಗಿ, ಯಾವ ಚಿಕಿತ್ಸೆಗೂ ಬಗ್ಗದೆ ಹೋಯಿತು. ವಾರ ಕಳೆದರೂ ಕಡಮೆಯಾಗಲಿಲ್ಲ. ಅವರು ಬಾಬಾರಿಗೆ ಹೇಳಲೂ ಇಲ್ಲ, ಅವರ ಸಹಾಯವನ್ನು ಕೇಳಲೂ ಇಲ್ಲ. ಬಾಬಾರಿಗೆ ಹೇಗಿದ್ದರೂ ಈ ವಿಷಯ ತಿಳಿದೇ ಇರುತ್ತದೆ, ಅವರೇ ಚಿಕಿತ್ಸೆ ಮಾಡುತ್ತಾರೆ ಎಂದು ಸುಮ್ಮನಿದ್ದುಬಿಟ್ಟರು. ಮಹಾಜನಿ ಎಂತಹ ಸೇವಾ ನಿರತನೆಂದರೆ, ಈ ಖಾಯಿಲೆ ಬಾಬಾರ ಸೇವೆಗೆ ಅಡ್ಡಬರಬಾರದು ಎಂಬುದಷ್ಟೇ ಆತನ ಚಿಂತೆ. ಅದಕ್ಕಾಗಿ ಒಂದು ಚೊಂಬು ನೀರು ಮಸೀದಿಯ ಮೂಲೆಯಲ್ಲಿಟ್ಟು ಅವಶ್ಯವಾದಾಗ ಅದನ್ನು ಉಪಯೋಗಿಸಿಕೊಳ್ಳುತ್ತಾ ಆರತಿಗಳಲ್ಲಿ ಭಾಗವಹಿಸುತ್ತಿದ್ದರು.
ಅದೇ ಸಮಯದಲ್ಲಿ, ಬಾಬಾ ಮಸೀದಿಯ ಅಂಗಳದ ಮರಮ್ಮತ್ತು ಮಾಡಲು ಒಪ್ಪಿ, ಲೆಂಡಿಯಿಂದ ಹಿಂತಿರುಗಿದಮೇಲೆ ಕಾರ್ಯಾರಂಭ ಮಾಡಬಹುದೆಂದು ಹೇಳಿದ್ದರು. ಅಂದು ಕೋಪರಗಾಂವ್ನಿಂದ, ಬೊಂಬಾಯಿಂದ ಹಲವಾರು ಭಕ್ತರು ಬಂದು ಸೇರಿದ್ದರು. ಆಂಧೇರಿಯಿಂದ ಪಾಟೀಲ್ ಕೂಡಾ ಬಂದಿದ್ದರು. ಅಂಗಳದಲ್ಲಿ ಕೆಲಸಗಾರರು ಅಂಗಳವನ್ನು ಅಗೆದು ಸಮಮಾಡುವ ಕೆಲಸ ಪ್ರಾರಂಭಿಸಿದ್ದರು. ಮಹಾಜನಿ ಬಾಬಾರ ಪಾದಗಳನ್ನು ಒತ್ತುತ್ತಾ ಕುಳಿತಿದ್ದರು. ಇದ್ದಕ್ಕಿದ್ದಂತೆ ಬಾಬಾ ಕೋಪಗೊಂಡು, ಎದ್ದು ಕಿರಿಚಾಡಲು ಪ್ರಾರಂಭಿಸಿದರು. ಅಲ್ಲಿದ್ದವರೆಲ್ಲಾ ಬಾಬಾರ ಈ ಉಗ್ರ ರೂಪವನ್ನು ನೋಡಿ ಹೆದರಿ ದಿಕ್ಕಾಪಾಲಾಗಿ ತಮ್ಮ ಸಾಮಾನುಗಳನ್ನು ಎಲ್ಲೆಂದರಲ್ಲೇ ಬಿಟ್ಟು, ಓಡಲು ಮೊದಲಿಟ್ಟರು. ಮಹಾಜನಿ ಕೂಡಾ ಓಡಿಹೋಗಲು ಯತ್ನಿಸಿದರು. ಬಾಬಾ ಕೂಡಲೇ ಅವರನ್ನು ಹಿಡಿದು ಕೂಡಿಸಿ, ಯಾರೋ ಅಲ್ಲಿ ಬಿಟ್ಟು ಹೋಗಿದ್ದ ಕಡಲೆಕಾಯಿ ಪೊಟ್ಟಣವನ್ನು ತೆಗೆದುಕೊಂಡು ಅದರಲ್ಲಿದ್ದ ಕಾಯಿ ಬಿಡಿಸಿ, ಬೀಜ ತೆಗೆದು, ಹೊಟ್ಟು ತೆಗೆದು ಹಾಕಿ ಮಹಾಜನಿಗೆ ತಿನ್ನಲು ಕೊಟ್ಟರು. ಅವರ ಜೊತೆಗೆ ತಾವೂ ಸ್ವಲ್ಪ ತಿಂದರು. ಈ ಮಧ್ಯೆ ಕೂಗಾಟ ಕಿರಿಚಾಟ ಮಾತ್ರ ನಡೆಯುತ್ತಲೇ ಇತ್ತು. ಹೀಗೆ ಕಡಲೆಕಾಯಿ ತಿನ್ನುವುದು, ಕೂಗಾಡುವುದು ಸ್ವಲ್ಪ ಕಾಲ ನಡೆಯಿತು. ಪೊಟ್ಟಣದಲ್ಲಿದ್ದ ಕಾಯೆಲ್ಲಾ ಮುಗಿದಮೇಲೆ ಬಾಬಾ ತಮಗೆ ಬಾಯಾರಿಕೆಯಾಗಿದೆ ಎಂದು ಮಹಾಜನಿಗೆ ನೀರುತರಲು ಹೇಳಿದರು. ಮಹಾಜನಿ ತಂದ ನೀರನ್ನು ತಾವು ಸ್ವಲ್ಪ ಕುಡಿದು ಮಹಾಜನಿಯನ್ನೂ ಕುಡಿಯಲು ಹೇಳಿದರು. ನೀರು ಕುಡಿದಾದಮೇಲೆ ಮಹಾಜನಿಗೆ, "ಈಗ ನಿನ್ನ ವಿರೇಚನವೆಲ್ಲಾ ನಿಂತುಹೋಯಿತು. ಹೋಗಿ ಅಲ್ಲಿ ನಡೆಯುತ್ತಿರುವ ಕೆಲಸದ ಪರಭಾರೆ ಮಾಡು" ಎಂದರು. ಬಾಬಾ ನಗುತ್ತಿರುವುದನ್ನು ಕಂಡು ಓಡಿಹೊಗಿದ್ದ ಜನರೆಲ್ಲ ಮತ್ತೆ ಅಂಗಳದಲ್ಲಿ ಸೇರಿದರು. ಕೆಲಸ ಮುಂದುವರೆಯಿತು. ಮಹಾಜನಿ ಯಾವ ಬಾಧೆಯೂ ಇಲ್ಲದೆ ಮತ್ತೆ ಎಂದಿನಂತಾದರು. ಕಡಲೆಕಾಯಿ ವಿರೇಚನವನ್ನು ಹೆಚ್ಚಿಸುತ್ತದೆ, ಅದಕ್ಕೆ ಔಷಧವಲ್ಲ ಎಂದು ಸಾಮಾನ್ಯರಿಗೂ ಗೊತ್ತು. ನಿಜವಾದ ಔಷಧ ಬಾಬಾರ ಪ್ರೀತಿ ಮತ್ತು ಅವರ ಅಂತಶ್ಶಕ್ತಿ.
ದತ್ತೋಪಂತ್ ಕಥೆ
ಹಾರ್ದಾ ನಿವಾಸಿ ದತ್ತೋಪಂತ್, ೧೪ ವರ್ಷಗಳಿಂದ ಹೊಟ್ಟೆನೋವಿನಿಂದ ನರಳುತ್ತಿದ್ದರು. ಯಾವುದೇ ವೈದ್ಯ ಚಿಕಿತ್ಸೆಯೂ ನೋವು ಕಡಮೆಮಾಡಲಿಲ್ಲ. ತನ್ನ ಹಣೆಬರಹ ಎಂದು ಸುಮ್ಮನಾಗಿಬಿಟ್ಟರು. ಆಗ ಯಾರೊ ಒಬ್ಬರು ಬಾಬಾರ ವಿಷಯ ಮಾತನಾಡುವುದನ್ನು ಕೇಳಿ, ತಾನೂ ಶಿರಡಿಗೆ ಹೋಗಿ ಬಾಬಾರ ಚರಣಗಳಲ್ಲಿ ಬಿದ್ದು, "ಬಾಬಾ ಈ ಹೊಟ್ಟೆ ನೋವು ೧೪ ವರ್ಷಗಳಿಂದ ನನ್ನನ್ನು ಬಹಳವಾಗಿ ಬಾಧಿಸುತ್ತಿದೆ. ಇನ್ನು ಇದನ್ನು ತಡೆಯಲಾರೆ. ನನಗೆ ತಿಳಿದಿರುವಂತೆ ನಾನು ಯಾರಿಗೂ ದ್ರೋಹ ಮಾಡಿಲ್ಲ. ತೊಂದರೆ ಕೊಟ್ಟಿಲ್ಲ. ತಾಯಿತಂದೆಗಳನ್ನು ಕಡೆಗಣಿಸಿಲ್ಲ. ನನ್ನ ಹಿಂದಿನ ಜನ್ಮಗಳಲ್ಲಿ ಯಾವ ದುಷ್ಕೃತ್ಯಗಳನ್ನು ಮಾಡಿದ್ದೆನೋ ಅದರ ಫಲವನ್ನು ಅನುಭವಿಸುತ್ತಿದ್ದೇನೆ. ನನ್ನ ಮೇಲೆ ದಯೆ ತೋರಿಸಿ. ನೀವೇ ನನಗೆ ಕೊನೆಯ ಆಸರೆ. ನೀವು ನನ್ನ ಕೈ ಬಿಟ್ಟರೆ ನನಗೆ ಸಾಯುವುದೊಂದೇ ಗತಿ" ಎಂದು ಬೇಡಿಕೊಂಡರು. ಬಾಬಾ ಕನಿಕರದಿಂದ ಅವರಿಗೆ ಉದಿ ಕೊಟ್ಟು, ತಲೆಯಮೇಲೆ ಕೈಯಿಟ್ಟು ನೇವರಿಸುತ್ತಾ ಅಶಿರ್ವದಿಸಿ, ಶಿರಡಿಯಲ್ಲಿ ನಾಲ್ಕು ದಿನ ಇರುವಂತೆ ಹೇಳಿದರು. ಕ್ರಮಕ್ರಮವಾಗಿ ನೋವು ಕಡಮೆಯಾಗುತ್ತಾ ಬಂದು ಕೊನೆಗೆ ಪೂರ್ತಿಯಾಗಿ ವಾಸಿಯಾಯಿತು. ಮತ್ತೆ ಎಂದೂ ಅವರಿಗೆ ಹೊಟ್ಟೆನೋವು ಬರಲಿಲ್ಲ.
ಕಾಕಾ ಮಹಾಜನಿಯ ಹಿರಿಯಣ್ಣ ಗಂಗಾಧರ ಪಂತ್ ಕೂಡಾ ಬಹಳಕಾಲದಿಂದ ಹೊಟ್ಟೆನೋವಿನಿಂದ ಬಾಧಿತರಾಗಿದ್ದರು. ಬಾಬಾರ ಕೀರ್ತಿಯನ್ನು ಕೇಳಿ ಶಿರಡಿಗೆ ಬಂದು, ಬಾಬಾ ಚರಣಗಳಲ್ಲಿ ತಲೆಯಿಟ್ಟು ತಮ್ಮ ನೋವನ್ನು ಪರಿಹರಿಸುವಂತೆ ಬೇಡಿಕೊಂಡರು. ದಯಾಪೂರಿತರಾಗಿ ಬಾಬಾ ಅವರ ಹೊಟ್ಟೆಯಮೇಲೆ ಕೈಯಿಟ್ಟು "ಇಲ್ಲಿ ನೋಯುತ್ತಿದೆಯೇ? ಅಲ್ಲಾ ಒಳ್ಳೆಯದು ಮಾಡುತ್ತಾನೆ" ಎಂದು ಹೇಳಿದರು. ಅಂದಿನಿಂದ ಅವರ ಹೊಟ್ಟೆನೋವು ಮಾಯವಾಗಿಹೋಯಿತು. ಮತ್ತೆ ಎಂದೂ ಬರಲಿಲ್ಲ.
ನಾನಾ ಸಾಹೇಬ್ ಚಾಂದೋರ್ಕರ್ ಕೂಡಾ ಹೊಟ್ಟೆನೋವಿನಿಂದ ಬಾಧೆಪಟ್ಟರು. ಅವರಿಗೆ ಚುಚ್ಚುಮದ್ದು ಕೊಟ್ಟರೂ ಕಡಮೆಯಾಗಲಿಲ್ಲ. ಕೊನೆಗೆ ಬಾಬಾರ ಬಳಿ ಹೋದರು. ಬಾಬಾ ಬರ್ಫಿ ತಿನ್ನುವಂತೆ ಹೇಳಿದರು. ಅಸೀಮ ಭಕ್ತ ಚಾಂದೋರ್ಕರ್ ನಂಬಿಕೆಯಿಟ್ಟು ಬರ್ಫಿ ತಿಂದಕೂಡಲೇ ನೋವು ನಿಂತುಹೋಯಿತು.
ಈ ಎಲ್ಲ ಬಾಧೆಗಳ ನಿವಾರಣೆ ಬಾಬಾ ಕೊಟ್ಟ ಔಷಧಗಳಿಂದಲ್ಲ. ಅವರ ಭಕ್ತಪ್ರೀತಿ, ದೈವದೊಲುಮೆಗಳೇ ಕಾರಣ. ಶ್ಯಾಮಾ ಈ ಪಾಠವನ್ನು ಕಲಿಯಲು ಕಷ್ಟಾನುಭಾವಿಯಾಗಬೇಕಾಗಿ ಬಂತು. ಒಂದುಸಲ ಆತನಿಗೆ ಮೂಲವ್ಯಾಧಿ ಆಯಿತು. ಬಾಬಾ ಸೋನಾಮುಖಿ ಕಷಾಯ ಕುಡಿಯಲು ಹೇಳಿದರು. ಕಷಾಯ ಕುಡಿದಮೇಲೆ ರೋಗ ನಿವಾರಣೆ ಆಯಿತು. ಮತ್ತೆ ಎರಡು ವರ್ಷಗಳ ನಂತರ ಅದು ಕಾಣಿಸಿಕೊಂಡಾಗ ಬಾಬಾರನ್ನು ಕೇಳದೆ ಅವರೇ ಸೋನಾಮುಖಿ ಕಷಾಯಮಾಡಿ ಕುಡಿದರು. ರೋಗ ಉಲ್ಬಣವಾಗಿ ಬಹಳ ಕಷ್ಟಪಟ್ಟು, ಬಾಬಾರ ಬಳಿಗೆ ಹೋದಾಗ ಅವರ ಪ್ರೀತಿಯಿಂದ ರೋಗ ಗುಣವಾಯಿತು. ಶ್ಯಾಮಾ ಇದರಿಂದ ಪಾಠ ಕಲಿತರು ಎಂದು ಬೇರೆ ಹೇಳಬೇಕಾಗಿಲ್ಲ.
ಇದರೊಂದಿಗೆ ಸಾಯಿ ಲೀಲೆಗಳು, ಭೀಮಾಜಿ ಪಾಟೀಲ್, ಬಾಲಾ ಶಿಂಪಿ ಇತ್ಯಾದಿ ವಿಷಯಗಳನ್ನು ಕುರಿತು ಹೇಳುವ ಹದಿಮೂರನೆಯ ಅಧ್ಯಾಯ ಮುಗಿಯಿತು. ಮುಂದಿನ ಅಧ್ಯಾಯದಲ್ಲಿ ಹೇಮಾಡ್ ಪಂತ್ ನಾಂದೇಡಿನ ರತನ್ಜೀ ವಾಡಿಯಾ, ಸಂತ ಮೌಲ್ವಿ ಸಾಹೇಬ್, ದಕ್ಷಿಣೆಯ ಮೀಮಾಂಸೆ, ಮತ್ತು ಇತರ ವಿಷಯಗಳನ್ನು ಹೇಳುತ್ತಾರೆ.
||ಶ್ರೀ ಸದ್ಗುರು ಸಾಯಿನಾಥಾರ್ಪಣಮಸ್ತು||ಶುಭಂ ಭವತು||
||ಓಂ ಶಾಂತಿಃ ಶಾಂತಿಃ ಶಾಂತಿಃ||
||ಓಂ ಶಾಂತಿಃ ಶಾಂತಿಃ ಶಾಂತಿಃ||
No comments:
Post a Comment