||ಶ್ರೀ ಸಾಯಿ ಸಚ್ಚರಿತ್ರೆ||
||ಎಂಟನೆಯ ಅಧ್ಯಾಯ||||ಮನುಷ್ಯ ಜನ್ಮದ ಪ್ರಾಮುಖ್ಯತೆ||
ಶ್ರೀ ಗಣೇಶಾಯ ನಮಃ ಶ್ರೀ ಸರಸ್ವತಯೇ ನಮಃ
ಶ್ರೀ ವೆಂಕಟೇಶಾಯ ನಮಃ ಶ್ರೀ ಸಾಯಿನಾಥಾಯ ನಮಃ
ಶ್ರೀ ಸದ್ಗುರುಭ್ಯೋನ್ನಮಃ
ಶ್ರೀ ಸದ್ಗುರುಭ್ಯೋನ್ನಮಃ
ಈ ಅಧ್ಯಾಯದಲ್ಲಿ ಹೇಮಾಡ್ ಪಂತ್, ಮನುಷ್ಯ ಜನ್ಮದ ಪ್ರಾಮುಖ್ಯತೆ, ಸಾಯಿಬಾಬಾರ ಭಿಕ್ಷೆ, ಬಾಯಿಜಾಬಾಯಿ ಸೇವೆ, ಕುಶಾಲಚಂದರ ಮೇಲಿನ ಬಾಬಾರ ಪ್ರೀತಿ ಇತ್ಯಾದಿಗಳನ್ನು ಹೇಳುತ್ತಾರೆ.
ಮನುಷ್ಯ ಜನ್ಮದ ಪ್ರಾಮುಖ್ಯತೆ
ಭೂಮಿಗೆ ಮೇಲೆ ಸ್ವರ್ಗ, ಕೆಳಗೆ ನರಕ ಎಂದು ಮನುಷ್ಯನ ಅಚಲ ನಂಬಿಕೆ. ಈ ಭೂಮಿಯನ್ನು ದೇವರು ಕರ್ಮಭೂಮಿಯನ್ನಾಗಿ ಮಾಡಿ ಪುಣ್ಯ ಕಾರ್ಯಕ್ಕೆ ಫಲ ಸ್ವರ್ಗ, ಪಾಪ ಕಾರ್ಯಕ್ಕೆ ಫಲ ನರಕ ಎಂದು ಮಾಡಿದ್ದಾನೆ. ಸ್ವರ್ಗ, ನರಕ, ಈ ಭೂಮಿಯೂ ಸೇರಿದಂತೆ ವಿಶ್ವದಲ್ಲಿ ಕೋಟ್ಯಾನುಕೋಟಿ ಜೀವಿಗಳನ್ನು ಸೃಷ್ಟಿಸಿದ್ದಾನೆ. ಪುಣ್ಯ ಮಾಡಿದವರು ಸ್ವರ್ಗಕ್ಕೆ ಹೋಗಿ ಅವರ ಪುಣ್ಯಫಲ ತೀರುತ್ತಲೇ ಮತ್ತೆ ಭೂಮಿಗೆ ಹಿಂತಿರುಗಿ ಕರ್ಮಗಳಲ್ಲಿ ನಿರತನಾಗುತ್ತಾರೆ. ಹಾಗೆಯೇ ನರಕಕ್ಕೆ ಹೋದವರು ತಮ್ಮ ಪಾಪ ಫಲಗಳನ್ನು ಅನುಭವಿಸಿ ಮತ್ತೆ ಭೂಮಿಗೆ ಹಿಂತಿರುಗಿ ಕರ್ಮಗಳಲ್ಲಿ ನಿರತರಾಗುತ್ತಾರೆ. ಈ ಜೀವಿಗಳು ಸತತವಾಗಿ ಹೀಗೆ ಒಂದು ಕಡೆಯಿಂದ ಇನ್ನೊಂದು ಕಡೆಗೆ ಭ್ರಮಿಸುತ್ತಿರುತ್ತಾರೆ. ಆದರೆ ಮಾನವನಿಗೆ ಮಾತ್ರ, ಅವನು ಈ ಮಾನವಲೋಕದಲ್ಲಿ ಜೀವಿಸಿರುವಷ್ಟು ಕಾಲ ಬಹಳ ಮುಖ್ಯವಾದದ್ದು. ಏಕೆಂದರೆ ಇಲ್ಲಿ ಮಾತ್ರವೇ ಅವನು ಮುಕ್ತಿಮಾರ್ಗಕ್ಕೆ ಹೆಜ್ಜೆ ಹಾಕಬಲ್ಲ.
ಆಹಾರ, ನಿದ್ದೆ, ಭಯ, ಮೈಥುನ ಇವು ಮಾನವನೂ ಸೇರಿದಂತೆ ಸಕಲ ಪ್ರಾಣಿಗಳಿಗೂ ಸಾಮಾನ್ಯ. ಆದರೆ ಮನುಷ್ಯನಿಗೊಂದು ಪ್ರತ್ಯೇಕತೆ ಇದೆ. ಅದುವೇ ಜ್ಞಾನ. ಈ ಜ್ಞಾನ ಅವನನ್ನು ದೈವತ್ವಕ್ಕೇರಿಸಬಲ್ಲದು. ನಮ್ಮ ಜೀವನ ಪರಿಮಿತವಾದದ್ದು. ಎಂದಾದರೂ ಸಾವನ್ನಪ್ಪಲೇಬೇಕು. ಜೀವನ ಮರಣಗಳ ಮಧ್ಯಕಾಲವನ್ನು ಯಾವ ರೀತಿಯಲ್ಲಿ ನಡೆಸಬೇಕು ಎಂಬುದನ್ನು ಬುದ್ಧಿವಂತಿಕೆಯಿಂದ ತಿಳಿದುಕೊಳ್ಳಬೇಕು. ಅರ್ಧ ಆಯುಸ್ಸು ನಿದ್ದೆಯಲ್ಲಿ ಕಳೆಯುತ್ತದೆ. ಬಾಲ್ಯ ರೋಗರುಜಿನಗಳು ಎಂದು ಮತ್ತೆ ಇನ್ನಷ್ಟು ಕಾಲ ಕಳೆದುಹೋಗುತ್ತದೆ. ಉಳಿದಿರುವ ಕಾಲ ಸಂಸಾರವನ್ನು ಬೆಳೆಸಿ, ಕಾಪಾಡುವುದರಲ್ಲೇ ಕಳೆದುಹೋಗುತ್ತದೆ. ಹೀಗೆ ಕಾಲವೆಲ್ಲಾ ಕಳೆದುಹೋದರೆ ನಮಗೆ ನಮ್ಮ ಆತ್ಮೋದ್ಧಾರದ ಬಗ್ಗೆ ಯೋಚನೆ ಮಾಡಲು ಕಾಲವೆಲ್ಲಿ? ಇಂತಹ ಕಾಲವ್ಯಯವನ್ನು ತಪ್ಪಿಸಿ ನಮ್ಮನ್ನು ಸರಿಯಾದ ಮಾರ್ಗದಲ್ಲಿ ನಡೆಸುವಂತಹರೊಬ್ಬರು ಬೇಕು. ಅಂತಹವರನ್ನೇ ನಾವು ಸದ್ಗುರು ಎನ್ನುವುದು.
ದೇವರು ಮೊದಲು ಅನೇಕ ಜೀವಿಗಳನ್ನು ಸೃಷ್ಟಿಸಿದ. ಆದರೆ ಅವನಿಗೆ ತೃಪ್ತಿಯಾಗಲಿಲ್ಲ. ಏಕೆಂದರೆ ಅವು ಯಾವುವೂ ಅವನನ್ನು, ಅವನ ಸೃಷ್ಟಿ ಕಾರ್ಯವನ್ನು, ಅರ್ಥಮಾಡಿಕೊಳ್ಳಲು ಸಮರ್ಥವಾಗಿರಲಿಲ್ಲ. ಆದ್ದರಿಂದ ಅವನು ಮನುಷ್ಯನನ್ನು ಸೃಷ್ಟಿಸಿದ. ಅವನಿಗೆ ಜ್ಞಾನವನ್ನು ನೀಡಿ ತನ್ನನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯವನ್ನೂ ನೀಡಿದ. ಅದನ್ನು ಉಪಯೋಗಿಸಿಕೊಂಡು ನಾವು ನಮ್ಮ ಗಮ್ಯದ ಕಡೆಗೆ ಹೋಗುವ ರೀತಿಯನ್ನು ತಿಳಿಯಬೇಕು. ಇಂದ್ರಿಯಗಳನ್ನು ತೃಪ್ತಿಗೊಳಿಸುವುದಷ್ಟೇ ನಮ್ಮ ಗುರಿಯಲ್ಲ.
ಪಂಚಭೂತಾತ್ಮಕವಾದ ಈ ಮಾನವ ದೇಹ ಕ್ಷಯಿಸುವಂತಹುದು. ಪ್ರಾಣ ಹೋದಮೇಲೆ ಪಂಚಭೂತಗಳಲ್ಲಿ ಸೇರಿಹೋಗುತ್ತದೆ. ಜೀವಿಸಿದ್ದಾಗಲೂ ಮಲಮೂತ್ರಾದಿಗಳಿಂದ ತುಂಬಿ ರೋಗ ರುಜಿನಗಳಿಗೆ ಒಳಗಾಗಿರುವಂತಹುದು. ಹೀಗಿದ್ದರೂ ಈ ದೇಹದ ಮೂಲಕವೇ ಮನುಷ್ಯ ಆ ಪರಮಾತ್ಮನನ್ನು ಕಾಣಲು ಸಾಧ್ಯ. ಆದ್ದರಿಂದ ಈ ದೇಹವನ್ನು ಸರಿಯಾದ ರೀತಿಯಲ್ಲಿ ಕಾಪಾಡಿಕೊಳ್ಳಬೇಕು. ಅತಿನಿರ್ಲಕ್ಷ್ಯ, ಅತಿಲಕ್ಷ್ಯಗಳನ್ನು ಬಿಟ್ಟು ಜತನವಾಗಿ, ಸವಾರನೊಬ್ಬ ತನ್ನ ಕುದುರೆಯನ್ನು, ಗಮ್ಯ ಸ್ಥಾನವನ್ನು ಸೇರುವವರೆಗೆ ನೋಡಿಕೊಳ್ಳುವಂತೆ, ನೋಡಿಕೊಳ್ಳಬೇಕು. ಅನೇಕ ಜನ್ಮಗಳಲ್ಲಿ ಮಾಡಿದ ಪುಣ್ಯ ಕಾರ್ಯಗಳಿಂದ ಈ ಮಾನವ ದೇಹ ಬಂದಿದೆ. ಅದನ್ನು ಋಜುಮಾರ್ಗದಲ್ಲಿ, ಆತ್ಮೋದ್ಧಾರದ ಕಡೆಗೆ ನಡೆಸಿ ಜನನ ಮರಣಗಳ ಚಕ್ರದಿಂದ ಪಾರಾಗಬೇಕು. ಇದು ಮಾನವ ಜನ್ಮದಲ್ಲಿ ಮಾತ್ರ ಸಾಧ್ಯ. ಮುಂದಿನ ಜನ್ಮ ಎಲ್ಲೋ ಹೇಗೋ ತಿಳಿಯದು. ಆದ್ದರಿಂದ ಇಲ್ಲೇ ಈಗಲೇ ಆ ದಾರಿಯನ್ನು ಹುಡುಕಬೇಕು. ಅಂತಹ ದಾರಿಯನ್ನು ತೋರಿಸುವವನು ಸದ್ಗುರುವೊಬ್ಬನೇ! ಸದ್ಗುರುವೆಂದರೆ ಸಾಯಿಬಾಬಾರೊಬ್ಬರೇ!
ಗುರುವನ್ನು ತಿಳಿದುಕೊಳ್ಳಬೇಕು. ಅವನಲ್ಲಿ ಭಕ್ತಿ ಭಾವವನ್ನು ಬೆಳೆಸಿಕೊಳ್ಳಬೇಕು. ಗುರುವೂ ಪರಬ್ರಹ್ಮನೂ ಬೇರೆಯಲ್ಲ ಎಂಬುದನ್ನು ಅರಿತುಕೊಳ್ಳಬೇಕು. ಅಂತಹ ಗುರುವಿನಿಂದಲೇ ನಾವು ಮಾಯೆಯನ್ನು ದಾಟಲು ಸಾಧ್ಯ. ಧರ್ಮಾರ್ಥಕಾಮಮೋಕ್ಷಗಳನ್ನು ಪಡೆಯಲು ಸಾಧ್ಯ. ನಮಗೆ ಇದಕ್ಕೆ ಸರಿಯಾದ ಮಾರ್ಗ ತೋರಬಲ್ಲವನು ಆ ಗುರುವೊಬ್ಬನೇ! ಅಂತಹ ಗುರುವಿಗೆ ಕಾಯಾ, ವಾಚಾ, ಮನಸಾ ಶರಣಾಗತರಾಗಬೇಕು. ಆಗಲೇ ಈ ಜನ್ಮದ ಸಫಲತೆ.
ಬಾಬಾರವರನ್ನು ಸದ್ಗುರುವಾಗಿ ಹೊಂದಿದವರೇ ಪುಣ್ಯವಂತರು
ವೇದ ಶಾಸ್ತ್ರಪುರಾಣಗಳು, ವಾದ, ವಿವಾದ, ವಿಚಾರ, ಚರ್ಚೆಗಳು ನಮಗೆ ಮಾರ್ಗದರ್ಶಿಗಳಾಗಲಾರವು. ಕೋಟ್ಯಂತರ ನಕ್ಷತ್ರನಿಹಾರಿಕೆಗಳು ಒಬ್ಬ ಸೂರ್ಯನ ಸಮಕ್ಕೆ ನಿಲ್ಲಲಾರವು. ಅಂತಹುದು ಗುರುವಿನ ಶಕ್ತಿ ಪ್ರಾಮುಖ್ಯತೆ. ಸದ್ಗುರುಗಳಲ್ಲಿ ಸಾಯಿಯೇ ಪ್ರಥಮರು. ನಮ್ಮ ಅದೃಷ್ಟದಿಂದ ಅವರು ನಮಗೆ ಗುರುವಾಗಿ ದೊರೆತಿದ್ದಾರೆ. ಅವರು ದಯೆ, ಧರ್ಮಶ್ರದ್ಧೆ, ವಿನಯ, ವೈರಾಗ್ಯಗಳಿಂದ ಕೂಡಿದವರು. ಸಕಲ ಗುಣಾತೀತರು. ಬಡವ-ಬಲ್ಲಿದ, ಸುಖ-ದುಃಖಗಳೇ ಮುಂತಾದ ದ್ವಂದ್ವಗಳನ್ನು ಮೀರಿದವರು. ಆತ್ಮ ಸಾಕ್ಷಾತ್ಕಾರಮಾಡಿಕೊಂಡ ಅಂತಹ ಗುರುವಿಗೆ ಸಂಪೂರ್ಣ ಶರಣಾಗತರಾಗುವುದೇ ಆತ್ಮೋದ್ಧಾರಕ್ಕೆ ಮಾರ್ಗ.
ಬಾಬಾ ಭಿಕ್ಷಾಟನೆಯ ರೀತಿ
ಬಾಬಾರಿಗೆ ಭಿಕ್ಷೆಗೆ ಹೋಗುವುದಕ್ಕೆ ಯಾವ ನಿಯಮವೂ ಇರಲಿಲ್ಲ. ಕೆಲವು ದಿನ ಹಲವೇ ಮನೆಗಳಿಗೆ, ಮತ್ತೆ ಕೆಲವು ದಿನ ೧೨ ಗಂಟೆಯವರೆಗೂ ಭಿಕ್ಷೆ ಮಾಡುತ್ತಿದ್ದರು. ಎಡಭುಜದ ಮೇಲೆ ಒಂದು ಜೋಳಿಗೆಯನ್ನು ಹಾಕಿಕೊಂಡು, ತಗಡಿನ ಡಬ್ಬ ಒಂದನ್ನು ಹಿಡಿದು, ಪ್ರತಿದಿನವೂ ಭಿಕ್ಷೆಗೆ ಹೋಗುತ್ತಿದ್ದರು. ಭಿಕ್ಷಕ್ಕೆ ಹೋದ ಮನೆಯ ಮುಂದೆ ನಿಂತು "ಅಮ್ಮಾ, ರೊಟ್ಟಿ ಹಾಕು" ಎಂದು ಕೂಗುತ್ತಿದ್ದರು. ಅವರು ಯಾರ ಮನೆಯ ಮುಂದೆ ನಿಂತು ಭಿಕ್ಷೆ ಕೇಳುತ್ತಿದ್ದರೋ ಅವರು ನಿಜವಾಗಿಯೂ ಬಹಳ ಪುಣ್ಯವಂತರು. ಎಲ್ಲ ದ್ರವ್ಯ ಪದಾರ್ಥಗಳನ್ನು ಡಬ್ಬದಲ್ಲಿ, ಘನ ಪದಾರ್ಥಗಳನ್ನು ಜೋಳಿಯಲ್ಲಿ ಹಾಕಿಸಿಕೊಳ್ಳುತ್ತಿದ್ದರು. ಮಸೀದಿಗೆ ಬಂದು, ಹಾಗೆ ತಂದ ಭಿಕ್ಷೆಯನ್ನೆಲ್ಲಾ ಸೇರಿಸಿ ಒಂದು ಮಣ್ಣಿನ ತಟ್ಟೆಯಲ್ಲಿ ಹಾಕುತ್ತಿದ್ದರು. ಆ ಮಣ್ಣಿನ ತಟ್ಟೆಯಿಂದ ಯಾರು ಬೇಕಾದರೂ, ಏನು ಬೇಕಾದರೂ ತೆಗೆದುಕೊಳ್ಳಬಹುದಾಗಿತ್ತು. ಕಾಗೆ, ನಾಯಿ, ಬೆಕ್ಕುಗಳು ಬಂದು ಅದರಲ್ಲಿನ ಆಹಾರವನ್ನು ತೆಗೆದುಕೊಂಡು ಹೋಗುತ್ತಿದ್ದವು. ಮಸೀದಿಯ ಆವರಣವನ್ನು ತೊಳೆಯುವ ಕೆಲಸದಾಕೆ ಕೂಡಾ, ಕೆಲವು ರೊಟ್ಟಿಗಳನ್ನು ತೆಗೆದುಕೊಳ್ಳುತ್ತಿದ್ದಳು. ಬಾಬಾ ಯಾವತ್ತೂ, ಯಾರನ್ನೂ ತಡೆಯುತ್ತಿರಲಿಲ್ಲ. ಬಾಬಾರಿಗೆ ಆಹಾರದಲ್ಲಿ ರುಚಿ, ಪಕ್ವ, ವೈವಿಧ್ಯತೆಗಳ ಚಿಂತೆಯಿರಲಿಲ್ಲ.
ಮೊದಮೊದಲು ಬಾಬಾರನ್ನು ಶಿರಡಿಯ ಜನ ಹುಚ್ಚ ಫಕೀರನೆಂದೇ ತಿಳಿದಿದ್ದರು. ಮನೆಮನೆಗೆ ಹೋಗಿ ಭಿಕ್ಷೆ ಕೇಳುವವನನ್ನು ಇನ್ನೇನೆಂದು ತಾನೇ ತಿಳಿದಾರು? ಬರುಬರುತ್ತಾ ಆ ನಿಲುವು ಬದಲಾಯಿತು. ಬಾಬಾ ಕೇಳುತ್ತಿದ್ದುದು ಭಿಕ್ಷೆಯಲ್ಲ, ಭಿಕ್ಷೆ ನೀಡಿದವರ ಪಾಪಗಳು ಎಂಬುದನ್ನು ತಿಳಿದುಕೊಂಡರು. ಫಕೀರನಿಗೆ ಭಿಕ್ಷೆ ಕೊಟ್ಟವರು ಅವನಿಗೆ ಯಾವ ಉಪಕಾರವನ್ನೂ ಮಾಡಲಿಲ್ಲ. ತಾವು ಮಾಡಿದ ಪಾಪಗಳಿಂದ ತಮ್ಮನ್ನು ರಕ್ಷಿಸಿಕೊಂಡರು ಎಂಬುದು ಅರ್ಥವಾಯಿತು. ಬಾಬಾ ಮಹಾತ್ಮರೆಂದೂ ತಿಳಿದುಕೊಂಡರು.
"ಶ್ರೀಮಂತನಾಗಿರುವುದಕ್ಕಿಂತಲೂ ಫಕೀರನಾಗಿರುವುದೇ ಮೇಲು. ಬಡತನ ಮಿತ್ರ. ಸಿರಿತನ ಶತೃ. ಸಿರಿತನಕ್ಕಿಂತ ಬಡತನವೇ ಒಳ್ಳೆಯದು. ದೇವರು ಯಾವಾಗಲೂ ಬಡವರ ಸ್ನೇಹಿತ" ಎಂದು ಬಾಬಾ ಹೇಳುತ್ತಿದ್ದರು.
ಬಾಯಿಜಾಬಾಯಿಯ ಸೇವೆ
ತಾತ್ಯಾ ಕೋತೆ ಪಾಟೀಲ್ ಮತ್ತು ಅವರ ತಾಯಿ ಬಾಯಿಜಾಬಾಯಿ ಇಬ್ಬರೂ ಬಾಬಾರನ್ನು ದೇವರೆಂದೇ ನಂಬಿದ್ದರು. ಆಕೆ ಪ್ರತಿದಿನವೂ ರೊಟ್ಟಿ ಪಲ್ಯಗಳನ್ನು ಹೊತ್ತು ಹತ್ತಿರದ ಕಾಡೆಲ್ಲಾ ಅಲೆದು ಬಾಬಾರನ್ನು ಹುಡುಕುತ್ತಿದ್ದಳು. ಬಾಬಾ ಎಲ್ಲೋ ಕಾಡಿನ ಮೂಲೆಯಲ್ಲಿ ಧ್ಯಾನ ಮಾಡುತ್ತಾ ಕುಳಿತಿರುತ್ತಿದ್ದರು. ಆಕೆ ಅವರನ್ನು ಹುಡುಕಿ, ಎಲೆ ಹಾಕಿ ರೊಟ್ಟಿ ಪಲ್ಯಗಳನ್ನು ಬಡಿಸಿ ಬಲವಂತದಿಂದ ತಿನ್ನಿಸುತ್ತಿದ್ದಳು. ಬಾಬಾರಿಗೆ ಊಟ ಕೊಡದೆ ತಾನು ಎಂದೂ ಊಟ ಮಾಡುತ್ತಿರಲಿಲ್ಲ. ಕಾಡಿನ ದಾರಿ ಕಲ್ಲು ಮುಳ್ಳುಗಳಿಂದ ತುಂಬಿ ನಡೆಯಲು ದುರ್ಗಮವಾಗಿದ್ದರೂ, ಆಕೆ ಈ ನಿಯಮವನ್ನು ತಪ್ಪದೇ ಪಾಲಿಸುತ್ತಿದ್ದಳು. ಆ ಫಕೀರನ ಮೇಲೆ ಆಕೆಗೆ ಅಷ್ಟು ಪ್ರೀತಿಯಿತ್ತು! ಬಾಬಾ ಮಸೀದಿಗೆ ಬಂದು ನೆಲೆಯಾದಮೇಲೆ ಆಕೆಗೆ ಈ ಕಷ್ಟ ತಪ್ಪಿತು.
ಮೂವರ ಶಯನಶಾಲೆ
ತಾತ್ಯಾ, ಮಹಲ್ಸಾಪತಿ ಬಾಬಾರ ಜೊತೆಯಲ್ಲಿ ದಿನವೂ ಮಸೀದಿಯಲ್ಲಿ ಮಲಗುತ್ತಿದ್ದರು. ನಿಜವಾಗಿಯೂ ಅವರು ಬಹಳ ಅದೃಷ್ಟವಂತರು. ಅವರಿಗೆ ಬಾಬಾರಂತಹ ಮಹಾತ್ಮರ ಜೊತೆಯಲ್ಲಿ ಮಲಗುವ ಅವಕಾಶ ಸಿಕ್ಕಿತ್ತು. ಮೂವರೂ ಉತ್ತರ, ಪೂರ್ವ, ಪಶ್ಚಿಮ ದಿಕ್ಕುಗಳ ಕಡೆ ತಲೆಯಿಟ್ಟು ಕಾಲುಗಳು ಒಂದಕ್ಕೊಂದು ತಗಲುವಹಾಗೆ ಮಲಗಿ ರಾತ್ರಿಯೆಲ್ಲಾ ಮಾತನಾಡುತ್ತಾ ಕಳೆಯುತ್ತಿದ್ದರು. ಅವರಲ್ಲಿ ಯಾರಾದರೂ ನಿದ್ದೆಮಾಡಿದರೆ ಮಿಕ್ಕ ಇಬ್ಬರೂ ಅವರನ್ನು ತಟ್ಟಿ ಎಬ್ಬಿಸುತ್ತಿದ್ದರು. ಹಲವಾರು ಸಲ ಬಾಬಾ ಅವರ ಕಾಲುಗಳನ್ನು ಮೆತ್ತಗೆ ಹಿಸುಕುತ್ತಾ, ಬೆನ್ನನ್ನು ನೀವುತ್ತಾ ಅವರ ಸೇವೆ ಮಾಡುತ್ತಿದ್ದರು. ಹೀಗೆ ಒಬ್ಬರಿನ್ನೊಬ್ಬರ ಸಹವಾಸದಲ್ಲಿ ಅತ್ಯಂತ ಸಂತೋಷವಾಗಿರುತ್ತಿದ್ದರು. ಈ ರೀತಿ ತಾತ್ಯಾ ೧೪ ವರ್ಷಗಳ ಕಾಲ ಬಾಬಾ ಜೊತೆಯಲ್ಲಿ ಮಸೀದಿಯಲ್ಲಿ ಮಲಗುತ್ತಿದ್ದರು. ಅವರ ತಂದೆ ತೀರಿಕೊಂಡನಂತರ, ಸಂಸಾರದ ಭಾರ ತಲೆಯಮೇಲೆ ಬಿದ್ದುದರಿಂದ ಅವರು ಮನೆಯಲ್ಲೇ ಮಲಗಲಾರಂಭಿಸಿದರು. ಬಾಬಾರ ಅನುಗ್ರಹ ಅವರಮೇಲೆ ಯಾವಾಗಲೂ ಇತ್ತು.
ಕುಶಾಲ್ ಚಂದರ ಕಥೆ
ಚಂದ್ರಭಾನು ಸೇಠ್ ರಹತಾದ ಒಬ್ಬ ಶ್ರೀಮಂತರು. ಅವರೆಂದರೆ ಬಾಬಾಗೆ ಬಹಳ ಪ್ರೀತಿ. ಆತ ತೀರಿಕೊಂಡ ಮೇಲೆ ಆತನ ಸೋದರಳಿಯ ಕುಶಾಲ್ ಚಂದ್ ಬಾಬಾಗೆ ಹತ್ತಿರವಾದರು. ಬಾಬಾ ತಾತ್ಯಾನಷ್ಟೇ ಅವರನ್ನೂ ಪ್ರೀತಿಸುತ್ತಿದ್ದರು. ಬಾಬಾ ಆಗಾಗ ಟಾಂಗಾದಲ್ಲೋ, ಎತ್ತಿನಗಾಡಿಯಲ್ಲೋ ರಾಹತಾಕ್ಕೆ ಹೋಗುತ್ತಿದ್ದರು. ಆ ಊರಿನ ಜನ ಅವರನ್ನು ಹಳ್ಳಿಯ ಸರಹದ್ದಿನಿಂದ ತಾಳ ಮೇಳಗಳೊಡನೆ ಊರೊಳಕ್ಕೆ ಕರೆದುಕೊಂಡು ಹೋಗುತ್ತಿದ್ದರು. ಅಲ್ಲಿ ಕುಶಾಲ್ ಚಂದ್ ಬಂದು ಬಾಬಾರನ್ನು ತಮ್ಮ ಮನೆಗೆ ಕರೆದೊಯ್ಯುತ್ತಿದ್ದರು. ಬಾಬಾ ಅವರ ಮನೆಯಲ್ಲಿ ಊಟ ಮಾಡಿ, ಅಲ್ಲೇ ಮಾತನಾಡುತ್ತಾ ಕುಳಿತಿದ್ದು, ಸ್ವಲ್ಪ ಹೊತ್ತಾದ ಮೇಲೆ ಶಿರಡಿಗೆ ಹಿಂತಿರುಗುತ್ತಿದ್ದರು.
ಕಾಲಸೂಚಿ ಬಾಬಾ
ನೀಮಗಾಂವ್ಗೂ ರಾಹತಾಗೂ ಮಧ್ಯೆ ಶಿರಡಿ ಇದೆ. ಬಾಬಾ ಈ ಎರಡೂ ಊರುಗಳಿಂದ ಆಚೆ ಎಂದೂ ಹೋಗಿರಲಿಲ್ಲ. ಅವರು ರೈಲು ಬಂಡಿಯನ್ನೂ ನೋಡಿರಲಿಲ್ಲ. ಆದರೂ ಭಕ್ತರು ಶಿರಡಿ ಬಿಟ್ಟು ಹೊರಡುವಾಗ ಬಾಬಾ ಅವರಿಗೆ ರೈಲುಗಳ ಬರ-ಹೋಗುವ ಕಾಲಸೂಚಿಯಂತಿದ್ದರು. ಯಾರಾದರೂ ರೈಲು ಹಿಡಿಯಲು ಆತುರರಾಗಿದ್ದರೆ ಬಾಬಾ ಹೇಳುತ್ತಿದ್ದರು, "ಆತುರ ಪಡಬೇಡ. ಊಟ ಮಾಡಿ ಹೋಗು." ಅವರ ಮಾತು ಕೇಳಿ ಹಾಗೆ ಮಾಡಿದವರು ಸಂತೋಷವಾಗಿ ಊಟಮಾಡಿ, ರೈಲು ಬಂಡಿ ಹಿಡಿಯುತ್ತಿದ್ದರು. ಹಾಗೆ ಅವರ ಮಾತು ಕೇಳದೇ ಆತುರಪಟ್ಟು ಹೋದವರು, ನಿಲ್ದಾಣದಲ್ಲಿ ಊಟವಿಲ್ಲದೆ ಹಸಿದುಕೊಂಡು ರೈಲಿಗೆ ಕಾಯುತ್ತಾ ತಮ್ಮ ತಪ್ಪಿಗಾಗಿ ದುಃಖ ಪಡುತ್ತಿದ್ದರು.
ಇದರೊಡನೆ ಮನುಷ್ಯ ಜನ್ಮದ ಪ್ರಾಮುಖ್ಯತೆ ಇತ್ಯಾದಿ ವಿಷಯಗಳನ್ನು ಕುರಿತು ಹೇಳುವ ಎಂಟನೆಯ ಅಧ್ಯಾಯ ಮುಗಿಯಿತು. ಮುಂದಿನ ಅಧ್ಯಾಯದಲ್ಲಿ ಹೇಮಾಡ್ ಪಂತ್ ಬಾಬಾರ ಸಲಹೆಯ ಮಾತುಗಳನ್ನು ಪಾಲಿಸುವುದರ, ಪಾಲಿಸದೇ ಇರುವುದರ ಪರಿಣಾಮ, ಭಿಕ್ಷೆ ಮತ್ತು ಅದರ ಆವಶ್ಯಕತೆ, ತರ್ಖಡ್ ಸಂಸಾರ ಇತ್ಯಾದಿ ವಿಷಯಗಳ ಬಗ್ಗೆ ಹೇಳುತ್ತಾರೆ.
||ಶ್ರೀ ಸದ್ಗುರು ಸಾಯಿನಾಥಾರ್ಪಣಮಸ್ತು||ಶುಭಂ ಭವತು||
||ಓಂ ಶಾಂತಿಃ ಶಾಂತಿಃ ಶಾಂತಿಃ||
||ಓಂ ಶಾಂತಿಃ ಶಾಂತಿಃ ಶಾಂತಿಃ||
No comments:
Post a Comment