||ಶ್ರೀ ಸಾಯಿ ಸಚ್ಚರಿತ್ರೆ||
||ಹತ್ತನೆಯ ಅಧ್ಯಾಯ||
||ಬಾಬಾರ ಜೀವನ ರೀತಿ||
ಶ್ರೀ ಗಣೇಶಾಯ ನಮಃ ಶ್ರೀ ಸರಸ್ವತಯೇ ನಮಃ
ಶ್ರೀವೆಂಕಟೇಶಾಯ ನಮಃ ಶ್ರೀಸಾಯಿನಾಥಾಯ ನಮಃ
ಶ್ರೀಸದ್ಗುರುಭ್ಯೋನ್ನಮಃ
||ಹತ್ತನೆಯ ಅಧ್ಯಾಯ||
||ಬಾಬಾರ ಜೀವನ ರೀತಿ||
ಶ್ರೀ ಗಣೇಶಾಯ ನಮಃ ಶ್ರೀ ಸರಸ್ವತಯೇ ನಮಃ
ಶ್ರೀವೆಂಕಟೇಶಾಯ ನಮಃ ಶ್ರೀಸಾಯಿನಾಥಾಯ ನಮಃ
ಶ್ರೀಸದ್ಗುರುಭ್ಯೋನ್ನಮಃ
ಈ ಅಧ್ಯಾಯದಲ್ಲಿ ಹೇಮಾಡ್ ಪಂತ್, ಬಾಬಾರ ಜೀವನ ರೀತಿ, ಅವರ ಉಪದೇಶಗಳು, ಚಮತ್ಕಾರಗಳು ಇತ್ಯಾದಿಗಳನ್ನು ಹೇಳುತ್ತಾರೆ.
ಬಾಬಾರನ್ನು ಪ್ರೀತಿಯಿಂದ ಮನನ ಮಾಡಿ
ಬಾಬಾ, ಅವರ ಭಕ್ತರಿಗೆ ಅಂತ್ಯವಿಲ್ಲದ ನದಿ. ತಮಗೆ ಅದರಿಂದ ನೋವು ಉಂಟಾಗುತ್ತದೆಯೆಂದು ತಿಳಿದಿದ್ದರೂ, ತಮ್ಮ ಭಕ್ತರಿಗೋಸ್ಕರ ಅವರು ಏನನ್ನೂ ಮಾಡಲು ಸದಾ ಸಿದ್ಧ. ಭಕ್ತರಿಗೆ ಒಳಿತು ಮಾಡುವವರು ಯಾರಾದರೂ ಇದ್ದಾರೆ ಎಂದರೆ ಅದು ಬಾಬಾರೆ! ಎಲ್ಲಿ, ಯಾರು, ಯಾವಾಗ ಕರೆದರೂ ಅವರು ಪ್ರತಿಸ್ಪಂದಿಸುತ್ತಿದ್ದರು. ಎಲ್ಲರಿಗೂ ಬೇಕಾದುದ್ದನ್ನು ಕೊಡುತ್ತಿರುವ ಅಂತಹವರಿಗೆ ನಾವು ಕೊಡತಕ್ಕದ್ದಾದರೂ ಏನು? ನಾವು ಮಾಡಬೇಕದದ್ದು ಇಷ್ಟೇ. ನಮ್ಮ ಹೃದಯದಲ್ಲಿ ಅವರಿಗೋಸ್ಕರ ಪ್ರೀತಿ ವಿಶ್ವಾಸಗಳು ಉಕ್ಕಿ ಹರಿಯಬೇಕು. ನಮ್ಮ ದೇಹದ ಕಣಕಣವೂ ಅವರಿಗಾಗಿ ಮಿಡಿಯಬೇಕು. ಅದಕ್ಕಾಗಿ ನಾವು ಕೊಡಬೇಕಾದ ಪಣವೇನಿಲ್ಲ.
ನಮ್ಮ ಒಳ್ಳೆಯದಕ್ಕೆ, ಭವಿಷ್ಯತ್ತನ್ನು ತಾರುಮಾರು ಮಾಡಬಲ್ಲ ವ್ಯಕ್ತಿ ಆ ಸದ್ಗುರುವೊಬ್ಬನೇ! ನಮ್ಮ ಗಮ್ಯಸ್ಥಾನ ಆತನೇ! ಆತನನ್ನು ನಂಬಿ, ಆತನ ಸೇವೆಯಲ್ಲಿ ನಿರತರಾದರೆ ಆತನು ನಮ್ಮನ್ನು ಈ ಪ್ರಾಪಂಚಿಕ ಬಂಧಗಳಿಂದ ಪಾರುಮಾಡುತ್ತಾನೆ. ನ್ಯಾಯಸಂಹಿತೆಗಳು, ವಿಚಾರ ವಾದಗಳು ನಮ್ಮನ್ನು ಈ ಜೀವನ ಝಂಝಾಟದಿಂದ ಬಿಡಿಸಲಾರವು. ನಮಗೆ ಆ ಸದ್ಗುರುವಿನಲ್ಲಿ ಅವಿಚ್ಛಿನ್ನವಾಗಿ ಇರಬೇಕಾದ್ದು ನಿಷ್ಠೆ ಮತ್ತು ಸೇವೆ. ನದಿಯನ್ನು ದಾಟಲು ದೋಣಿಯಲ್ಲಿ ಕುಳಿತಾಗ ಅಂಬಿಗನಲ್ಲಿ ಹೇಗೆ ನಂಬಿಕೆ ಇಡುತ್ತೇವೋ, ಹಾಗೆ ಸದ್ಗುರುವು ನಮ್ಮನ್ನು ಈ ಸಂಸಾರಸಾಗರದಿಂದ ಪಾರುಗಾಣಿಸುತ್ತಾನೆ ಎಂಬ ಧೃಢ ನಂಬಿಕೆ ಹಾಗೂ ಶ್ರದ್ಧೆ ಇರಬೇಕು. ಸದ್ಗುರುವೇ, ಅನಂತವಾದ ಜ್ಞಾನವನ್ನು ಸರಳಗೊಳಿಸಿ, ನಮಗೆ ಅರ್ಥವಾಗುವ ಹಾಗೆ ಉಣಿಸಬಲ್ಲವನು. ಅಂತಹ ಸದ್ಗುರುವಾದ ಬಾಬಾರನ್ನು ಕುರಿತು ಸತತವಾಗಿ ಚಿಂತಿಸುತ್ತ, ಅವರ ಕಥೆಗಳನ್ನು ಶ್ರದ್ಧಾ ಭಕ್ತಿಗಳಿಂದ ಕೇಳುತ್ತಾ, ಮನನಮಾಡುತ್ತಾ, ಅವರೊಡನೆ ಸದಾ ಮಾನಸಿಕವಾಗಿ ಜೊತೆಯಾಗಿರಬೇಕು.
ಬಾಬಾ ಮಲಗುತ್ತಿದ್ದ ರೀತಿ
ನಾನಾಸಾಹೇಬ್ ಡೇಂಗ್ಲೆ ೪ ಮೊಳ ಉದ್ದ ೧ ಮೊಳ ಅಗಲ ಇರುವ ಒಂದು ಮರದ ಹಲಗೆಯನ್ನು ತಂದಿದ್ದರು. ಬಾಬಾ ಅದರಮೇಲೆ ಮಲಗಬೇಕೆಂಬುದು ಅವರ ಇಚ್ಛೆ. ಬಾಬಾ ಹರಿದ ತುಂಡು ಬಟ್ಟೆಗಳನ್ನು ಹಗ್ಗದಂತೆ ಹೊಸೆದು, ಆ ಹಲಗೆಯನ್ನು ಮಸೀದಿಯ ದೂಲದಿಂದ ತೂಗುಹಾಕಿ, ಉಯ್ಯಾಲೆಯಂತೆ ಮಾಡಿ ಅದರಮೇಲೆ ಮಲಗುತ್ತಿದ್ದರು. ಹಲಗೆಯ ಭಾರವನ್ನೇ ತಾಳಲಾರದೋ ಎಂಬಂತೆ ತೋರುತ್ತಿದ್ದ ಆ ಹಗ್ಗ, ಹಲಗೆಯ ಜೊತೆಗೆ ಬಾಬಾರ ಭಾರವನ್ನೂ ಹೇಗೆ ಹೊರುತ್ತಿತ್ತು ಎಂದು ಎಲ್ಲರೂ ಆಶ್ಚರ್ಯಪಡುತ್ತಿದ್ದರು. ಬಾಬಾ ಅದರ ಮೇಲೆ ಹೇಗೆ ಹತ್ತುತ್ತಿದ್ದರು ಹೇಗೆ ಇಳಿಯುತ್ತಿದ್ದರು ಎಂಬುದೇ ತಿಳಿಯುತ್ತಿರಲಿಲ್ಲ. ಈ ಚಮತ್ಕಾರವನ್ನು ನೋಡಲು ಜನ ಗುಮ್ಮಿಗೂಡಿದರು. ಅದನ್ನು ಕಂಡ ಬಾಬಾ ಬೇಸರಿಸಿ ಆ ಮರದ ಹಲಗೆಯನ್ನು ಕಿತ್ತು ತುಂಡುಮಾಡಿ ಬಿಸಾಡಿದರು. ಅಣಿಮಾದಿ ಅಷ್ಟಸಿದ್ದಿಗಳನ್ನು ಸಾಧಿಸಿದ್ದ ಬಾಬಾರಿಗೆ ಇದೇನೂ ವಿಶೇಷವಾಗಿರಲಿಲ್ಲ.
ಸಾಯಿ ಸಗುಣ ಬ್ರಹ್ಮ
ಸಾಯಿಬಾಬಾ ಹಿಂದುವೋ ಮುಸ್ಲಿಮ್ಮೋ ಎಂಬುದು ಹೇಗೆ ಸಮಸ್ಯಾತ್ಮಕವಾಗಿತ್ತೋ ಹಾಗೇ ಅವರ ಇರುವಿಕೆಯೂ ಒಗಟಿನಂತಿತ್ತು. ಅವರು ಈ ಮಾನುಷ ದೇಹದಲ್ಲಿ ಬಂಧಿತರಾದವರಂತೆ ಕಂಡರೂ, ಎಲ್ಲರಲ್ಲೂ ಅವರು ಉಪಸ್ಥಿತರಾಗಿದ್ದರು. ಹೊರಗೆ ತನ್ನ ಭಕ್ತರ ಸಲುವಾಗಿ ಪ್ರಾಪಂಚಿಕನಂತೆ ಕಂಡರೂ, ಆಂತರ್ಯದಲ್ಲಿ ನಿರಾಸಕ್ತರಾಗಿದ್ದರು. ಹೊರಗಡೆ ಅಶಾಂತಿಯಿಂದ ಇರುವಂತೆ ಕಂಡರೂ, ಒಳಗೆ ಸಂಪೂರ್ಣ ಶಾಂತಿಯಿಂದಿದ್ದರು. ಹೊರಗೆ ಉನ್ಮತ್ತನಂತೆ ಕಂಡರೂ, ಅವರು ಒಳಗೆ ದೇವರೇ ಆಗಿದ್ದರು. ಕೆಲವು ಸಲ ಜನರನ್ನು ತಬ್ಬಿಕೊಂಡು ಆದರಿಸಿದರೆ, ಮತ್ತೆ ಕೆಲವು ಸಲ ಅವರಮೇಲೆ ಕೋಪಮಾಡಿಕೊಂದು ಕಲ್ಲೆಸೆಯುತ್ತಿದ್ದರು. ತಾನಿದ್ದ ಜಾಗ ಬಿಟ್ಟು ಕದಲದಿದ್ದರೂ, ಅವರು ಸರ್ವವ್ಯಾಪಿ ಸರ್ವಜ್ಞರಾಗಿದ್ದರು. ಸಾಮಾನ್ಯ ಭಿಕ್ಷುಕನಂತೆ ಕಾಣುತ್ತಿದ್ದರೂ, ಅವರು ಅಸಮಾನ ಜ್ಞಾನದ ಆಗರವೇ ಆಗಿದ್ದರು. ಯಾವಾಗಲೂ ‘ಅಲ್ಲಾ ಮಾಲೀಕ್’ ಎಂದು ಉಚ್ಚರಿಸುತ್ತಾ ಕೈಯಲ್ಲೊಂದು ಸಟ್ಕಾ ಹಿಡಿದು, ಶಾಂತ ದಾಂತರಾದ ಅವರು ತಮ್ಮ ಎಲ್ಲ ಭಕ್ತರನ್ನು ಒಂದೇ ರೀತಿಯಲ್ಲಿ ನೋಡುತ್ತಿದ್ದರು. ತಿಳಿದವರು ಅವರನ್ನು ಸಗುಣ ಬ್ರಹ್ಮ ಎಂದರು. ಏನೂ ತಿಳಿಯದ ಕೆಲವು ನತದೃಷ್ಟರು, ಅವರನ್ನು ಹುಚ್ಚ ಫಕೀರ ಎಂದರು.
ಬಾಬಾರ ಜನ್ಮ
ಕೆಲವರು ಅವರನ್ನು ಮುಸ್ಲಿಂ ಕುಟುಂಬದಲ್ಲಿ ಹುಟ್ಟಿದರೆಂದೂ, ಇನ್ನು ಕೆಲವರು, ಅವರು ಭಾರದ್ವಾಜ ಗೋತ್ರಕ್ಕೆ ಸೇರಿದ ಬ್ರಾಹ್ಮಣ ದಂಪತಿಗಳಿಗೆ ಹುಟ್ಟಿದರೆಂದೂ, ಹೇಳುತ್ತಿದ್ದರು. ಆದರೆ ಅವರು ನಿಜವಾಗಿ ಹಿಂದುವೋ ಮುಸ್ಲಿಮ್ಮೋ ಯಾರಿಗೂ ತಿಳಿದಿರಲಿಲ್ಲ. ಬಾಬಾ ಅವರು ತಮ್ಮ ಜನ್ಮ ರಹಸ್ಯವನ್ನು ಕುರಿತು ಎಂದೂ ಯಾರಿಗೂ ಹೇಳಲಿಲ್ಲ. ಬಹುಶಃ ಅವರು ಶಿರಡಿಯಲ್ಲಿ ನೆಲೆಗೊಂಡಿದ್ದ ಕಾಲವನ್ನು ಹಿಡಿದು ಅವರು ಹುಟ್ಟಿದ ವರ್ಷವನ್ನು ಊಹಿಸಬಹುದು. ಬಾಬಾ ಮಹಾಸಮಾಧಿಯಾಗಿದ್ದು ೧೯೧೮ರಲ್ಲಿ. ಅವರು ಶಿರಡಿಯಲ್ಲಿ ಸುಮಾರು ೬೦ ವರ್ಷಗಳ ಕಾಲ ನೆಲೆಸಿದ್ದರು. ಮೊದಲನೆಯ ಸಲ ಅವರು ಶಿರಡಿಯಲ್ಲಿ ಕಾಣಿಸಿಕೊಂಡಾಗ, ಅವರಿಗೆ ಸುಮಾರು ೧೬ ವರ್ಷ ವಯಸ್ಸಾಗಿತ್ತು. ಆಮೇಲೆ ಅವರು ೪ ವರ್ಷ ಕಾಣೆಯಾಗಿ, ಚಾಂದ್ ಪಾಟೀಲ್ ಜೊತೆಯಲ್ಲಿ ಶಿರಡಿಗೆ ಬಂದಾಗ, ಅವರಿಗೆ ಸುಮಾರು ೨೦ ವರ್ಷ ವಯಸ್ಸಾಗಿತ್ತು. ಅಂದರೆ ಅವರು ಸುಮಾರು ೮೦ ವರ್ಷ ಕಾಲ ಜೀವಿಸಿದ್ದರು. ಆದರಂತೆ ಅವರು ಬಹುಶಃ ೧೮೩೮ರಲ್ಲಿ ಜನಿಸಿರಬಹುದು. ಕಾಲವನ್ನೇ ತನ್ನ ಹದ್ದುಬಸ್ತಿನಲ್ಲಿ ಇಟ್ಟುಕೊಂಡಿರುವವರ ಜನನ ಕಾಲವನ್ನು ಹೇಗೆ ತಾನೇ ತಿಳಿಯಲು ಸಾಧ್ಯ?
ಬಾಬಾರ ಉಪದೇಶಗಳು
೧೬೦೮-೧೬೮೧ರ ಮಧ್ಯಕಾಲದಲ್ಲಿ ನಮ್ಮ ದೇಶ ಮುಸ್ಲಿಮರ ಆಳ್ವಿಕೆಗೆ ಒಳಪಟ್ಟಿತ್ತು. ಆ ಕಾಲದಲ್ಲಿ ಸಂತ ರಾಮದಾಸರು, ಶಿವಾಜಿಯನ್ನು ಮುಂದಿಟ್ಟುಕೊಂಡು ಹಿಂದೂ ಧರ್ಮದ ಉದ್ಧಾರಕ್ಕೆ ಕೃಷಿ ಮಾಡಿದರು. ಅದರಿಂದ ಬ್ರಾಹ್ಮಣರು, ಗೋವುಗಳೂ, ಪುನಃ ಧೈರ್ಯದಿಂದ ಜೀವಿಸುವಂತಾಯಿತು. ಎರಡು ಶತಮಾನಗಳ ನಂತರ, ಮತ್ತೆ ಈ ಎರಡೂ ಮತಗಳ ಮಧ್ಯೆ ಸಾಮರಸ್ಯ ಕಳೆದು, ಇಬ್ಬರಿಗೂ ಅಗಾಗ ಜಗಳ ಕದನಗಳು ಆಗುತ್ತಿದ್ದವು. ಈ ಪ್ರಕ್ಷುಬ್ಧ ಪರಿಸ್ಥಿತಿಯಲ್ಲಿ ಬಾಬಾರ ಅವತಾರವಾಯಿತು. ಇಬ್ಬರನ್ನೂ ಒಂದುಗೂಡಿಸಲು ಬಾಬಾ ಅವರಿಬ್ಬರಿಗೂ, "ರಾಮ ರಹೀಮ ಇಬ್ಬರೂ ಒಂದೇ! ಯಾವ ರೀತಿಯ ವ್ಯತ್ಯಾಸವೂ ಇಲ್ಲ. ಹೀಗಿರುವಾಗ, ರಾಮನ ಭಕ್ತರೂ ರಹೀಮನ ಭಕ್ತರೂ ಏಕೆ ಹೊಡೆದಾಡಬೇಕು? ಇಬ್ಬರೂ ಒಟ್ಟಿಗೇ ಸೇರಿ ದೇಶೋದ್ಧಾರಕ್ಕೆ ಕೆಲಸ ಮಾಡಿ. ಇದು ಇಬ್ಬರಿಗೂ ಒಳಿತನ್ನು ಮಾಡುತ್ತದೆ. ದೇಶದಲ್ಲಿ ಶಾಂತಿ ಸಮೃದ್ಧಿಗಳು ಉಂಟಾಗುತ್ತವೆ. ಇನ್ನೊಬ್ಬರಿಗಾಗಿ ಹೊಡೆದಾಡುವುದಕ್ಕಿಂತ, ಒಟ್ಟು ಸೇರಿ ನಿಮ್ಮೆಲ್ಲರ ಒಳಿತಿಗೆ ಹೊಡೆದಾಡಿ. ಯಾರನ್ನೂ ನೋಯಿಸಬೇಡಿ. ಆದಷ್ಟೂ ಇತರರಿಗೆ ಉಪಕಾರ ಮಾಡಿ. ಜ್ಞಾನ ವೈರಾಗ್ಯ ತಪಸ್ಸು ತ್ಯಾಗಗಳು ನಿಮ್ಮನ್ನು ದೇವರಲ್ಲಿಗೆ ಕೊಂಡೊಯ್ಯುತ್ತವೆ. ಅವನೇ ಎಲ್ಲರನ್ನೂ ಕಾಪಾಡುವವನು" ಎಂದು ಹೇಳುತ್ತಿದ್ದರು. ಬಾಬಾ ಅಂದು ಹೇಳಿದ ಮಾತು ಇಂದಿಗೂ ಎಂದಿಗೂ ಪ್ರಸ್ತುತ.
ಸದ್ಗುರು ಸಾಯಿಬಾಬಾ
ಗುರುವಿನ ವೇಷ ಹಾಕಿದವರೆಲ್ಲಾ ಗುರುಗಳಲ್ಲ. ಬಹಳಷ್ಟು ಜನ ಗುರುಗಳಂತೆ ನಟನೆ ಮಾಡುವವರೇ! ಮಂತ್ರೋಪದೇಶ ಮಾಡುತ್ತೇವೆಂದು ಹಣ ಸಂಪಾದನೆಯನ್ನೇ ಗುರಿಯಾಗಿಟ್ಟುಕೊಂಡು, ತಂಬೂರಿ ಮೀಟುತ್ತಾ, ಮನೆಯಿಂದ ಮನೆಗೆ, ದೇವರ ನಾಮಗಳನ್ನು ಹೇಳುತ್ತಾ ಓಡಾಡುತ್ತಾ, ತಾವು ನಾಸ್ತಿಕರಾಗಿದ್ದುಕೊಂಡು, ಬೇರೆಯವರಿಗೆ ಆಸ್ತಿಕರಾಗಿರಲು ಬೋಧನೆ ಮಾಡುತ್ತಿರುತ್ತಾರೆ. ಇಂತಹವರು ತಮ್ಮ ಭಕ್ತರನ್ನು ಆತ್ಮೋದ್ಧಾರದ ಕಡೆಗೆ ಹೇಗೆ ತಾನೇ ತೆಗೆದುಕೊಂಡುಹೊಗಬಲ್ಲರು? ಅವರು ಅವರ ವೇಷ ಭೂಷಣಗಳೆಲ್ಲಾ ಮೋಸವೇ!
ಗುರುಗಳಲ್ಲಿ ಎರಡು ವಿಧ. ನಿಯತ ಮತ್ತು ಅನಿಯತ. ನಿಯತ ಗುರುಗಳು ಭಕ್ತರ ದೈತಭಾವವನ್ನು ತೊಲಗಿಸಿ, ಅದ್ವೈತದ ಕಡೆಗೆ ಕರೆದುಕೊಂಡು ಹೋಗಿ “ತತ್ತ್ವಮಸಿ” ಎಂಬುದನ್ನು ಧೃಢಪಡಿಸುತ್ತಾರೆ. ಮತಬೋಧನೆ ಎಲ್ಲರಿಗೂ ಅನ್ವಯಿಸುವಂತೆ ಹೇಳುತ್ತಾರೆ. ಅನಿಯತ ಗುರುಗಳು ತಮ್ಮ ಒಬ್ಬೊಬ್ಬ ಭಕ್ತರ ವಾಂಛೆಗಳನ್ನು ಅರಿತುಕೊಂಡು, ಅದಕ್ಕೆ ತಕ್ಕಂತೆ ಉಪದೇಶ ಮಾಡಿ ಅವರು ಮೋಕ್ಷಮಾರ್ಗದ ಕಡೆಗೆ ಹೋಗುವಂತೆ ಮಾಡುತ್ತಾರೆ. ಅನೇಕರು ಗುರುಗಳೆನ್ನಿಸಿಕೊಂಡು ಸರ್ವೇ ಸಾಮಾನ್ಯವಾದ ಮಾತುಗಳನ್ನು ಹೇಳಿ ಜನರನ್ನು ಮೋಸಮಾಡುತ್ತಿರುತ್ತಾರೆ. ನಮ್ಮ ನ್ಯೂನತೆಗಳನ್ನು ತೋರಿಸಿ, ನಮಗೇನುಬೇಕು ಎಂಬುದನ್ನು ಗುರುತಿಸಿ, ನಮ್ಮನ್ನು ತಿದ್ದಿ, ನೇರವಾದ ದಾರಿಯಲ್ಲಿ ಕರೆದುಕೊಂಡು ಹೋಗುವ ಗುರುಗಳು ಬಹಳ ಅಪರೂಪ. ಅಂತಹವರನ್ನೇ ನಾವು ಸದ್ಗುರು ಎನ್ನುವುದು. ಅಂತಹ ಸದ್ಗುರುಗಳಲ್ಲಿ, ಸಾಯಿಬಾಬಾ ಪ್ರಥಮ ಶ್ರೇಣಿಗೆ ಸೇರಿದವರು. ತಮ್ಮ ದರ್ಶನಕ್ಕೆಂದು ಬಂದವರ ಭೂತ, ಭವಿಷ್ಯತ್, ವರ್ತಮಾನಗಳನ್ನು ಬಾಬಾ ಕೇಳದಯೇ ಅವರಿಗೆ ಸ್ಪಷ್ಟವಾಗಿ ಹೇಳಿ, ಅವರನ್ನು ತಮ್ಮೆಡೆಗೆ ಸೆಳೆದುಕೊಂಡು, ಅವರವರ ಗುರಿಮುಟ್ಟಲು ಸರಿಯಾದ ದಾರಿಯಲ್ಲಿ ನಡೆಸುತ್ತಿದ್ದರು. ಬಾಬಾರಿಗೆ ಯಾರೂ ಶತೃಗಳಲ್ಲ. ಯಾರೂ ಮಿತ್ರರಲ್ಲ. ಯಾರಲ್ಲೂ ಪಕ್ಷಪಾತವಿರಲಿಲ್ಲ. ಎಲ್ಲರಲ್ಲೂ ದೈವತ್ವವನ್ನು ಕಾಣುತ್ತಿದ್ದ ಅವರಿಗೆ ಎಲ್ಲರೂ ಒಂದೇ! ತನಗೆ ಅತೀವ ನೋವುಂಟು ಮಾಡಿದವರಲ್ಲೂ ಅವರು ಹಗೆ ತೋರಿಸಲಿಲ್ಲ. ಅಂತಹವರನ್ನು ಇನ್ನೂ ಹೆಚ್ಚಿನ ಅನುಕಂಪದಿಂದ ಅನುಗ್ರಹಿಸಿದರು. ಮಾನುಷ ರೂಪವನ್ನು ತಾಳಿದ್ದರೂ ಅವರು ದೇಹಭಾವನೆಗಳಿಗೆ ಕಟ್ಟುಬಿದ್ದಿರಲಿಲ್ಲ. ಅಂತಹ ಭಾವನೆಗಳಿಂದ ದೂರವಿದ್ದರು. ಅವರು ಮಾಡುತ್ತಿದ್ದ ಯಾವುದೇ ಕಾರ್ಯಗಳಿಗೂ ಅವರ ದೇಹ ಅಡಚಣೆಯಾಗಿರಲಿಲ್ಲ.
ಶಿರಡಿಯ ಜನರಿಗೆ ಬಾಬಾ ಜೀವಂತ ದೇವರು. ಅವರಿಗೆ ಬೇರೆ ಯಾವ ದೈವವೂ ಇರಲಿಲ್ಲ. ನಿಜವಾಗಿಯೂ ಆ ಜನರು ಅತ್ಯಂತ ಪುಣ್ಯವಂತರು. ಏಕೆಂದರೆ ಅವರು ಬಾಬಾರ ದೃಷ್ಟಿಯಿಂದ ದೂರವಿದ್ದಾಗಲೂ ಸದಾಕಾಲ, ತಿನ್ನುತ್ತಿದ್ದಾಗ, ಕೆಲಸಮಾಡುತ್ತಿದ್ದಾಗ, ನಿದ್ದೆಮಾಡುವಾಗಲೂ ಕೂಡ ಬಾಬಾರ ಚಿಂತನೆಯನ್ನೇ ಮಾಡುತ್ತಾ ಎಲ್ಲ ಕಾರ್ಯಗಳನ್ನೂ ಮಾಡುತ್ತಿದ್ದರು. ಅವರ ಪ್ರೀತಿ ಅಸದಳವಾಗಿತ್ತು. ತಮ್ಮಮೇಲೆ ಇದ್ದದ್ದಕ್ಕಿಂತ ಹೆಚ್ಚು ಪ್ರೀತಿ ಬಾಬಾರ ಮೇಲಿತ್ತು. ಶಿರಡಿಯ ಹೆಂಗಸರು, ಅವಿದ್ಯಾವಂತರಾಗಿದ್ದರೂ, ಅವರ ಪ್ರೀತಿ ಎಷ್ಟಿತ್ತೆಂದರೆ, ಬಾಬಾರ ಮೇಲೆ ಹಾಡುಗಳನ್ನು ಕಟ್ಟಿ, ಲಾವಣಿಗಳನ್ನು ರಚಿಸಿ ಅವನ್ನು ಸುಶ್ರಾವ್ಯವಾಗಿ ಹಾಡುತ್ತಿದ್ದರು. ಅಂತಹ ರಚನೆಗಳು ಹೃದಯಾಂತರಾಳದಿಂದ ಸ್ಫೂರ್ತಿಗೊಂಡವು. ಆ ಜನಪದ ಗೀತೆಗಳನ್ನೆಲ್ಲ ಕ್ರೋಢೀಕರಿಸಿ ಇಟ್ಟರೆ, ಎಲ್ಲ ಕಾಲದವರಿಗೂ ಅದೊಂದು ಅಮೂಲ್ಯ ಕಾಣಿಕೆಯಾಗುತ್ತದೆ.
ಸರ್ವವ್ಯಾಪಿ ಬಾಬಾ
ದೇವರು ಷಡ್ಗುಣಗಳಿಂದ - ಕೀರ್ತಿ, ಐಶ್ವರ್ಯ, ವೈರಾಗ್ಯ, ಜ್ಞಾನ, ವೈಭವ ಮತ್ತು ಉದಾರತೆ - ಪರಿಪೂರ್ಣನಾದವನು ಎನ್ನುತ್ತಾರೆ. ಬಾಬಾರಲ್ಲಿ ಈ ಆರು ಗುಣಗಳೂ ಇದ್ದವು. ತಮ್ಮ ಭಕ್ತರಿಗೋಸ್ಕರವಾಗಿಯೇ ಭೂಮಿಗೆ ಇಳಿದು ಬಂದ ಆ ದೇವರು ಬಾಬಾ. ತಾವಾಗಿಯೇ ಬಾಬಾರು ಏನು ಕೊಡಬೇಕೆಂದುಕೊಂಡಿದ್ದರೋ ಅದನ್ನು ಭಕ್ತರೇ ಕೇಳುವವರೆಗೂ ಬಾಬಾ ಭಕ್ತರ ಇಷ್ಟಾರ್ಥಗಳನ್ನೆಲ್ಲಾ ತೀರಿಸುತ್ತೇನೆ ಎನ್ನುವ ಭರವಸೆ ನೀಡಿದ್ದರು. ಅವರ ವಿನಯ ಯಾವ ಮಟ್ಟದಲ್ಲಿತ್ತೆಂದರೆ, "ನಾನು ನಿಮ್ಮ ಸೇವಕರ ಸೇವಕ. ನಾನೇ ನಿಮಗೆ ಋಣಿಯಾಗಿದ್ದೇನೆ. ನಿಮ್ಮ ದರ್ಶನ ಮಾಡಲು ಬಂದಿದ್ದೇನೆ. ನಿಮ್ಮ ಮಲದಲ್ಲಿ ಕ್ರಿಮಿಯಾಗಿ ಹುಟ್ಟಿದರೂ ಅದು ನನ್ನ ಅದೃಷ್ಟ ಎಂದು ಭಾವಿಸುತ್ತೇನೆ" ಎಂದು ಅವರು ಹೇಳುತ್ತಿದ್ದರು. ಎಷ್ಟೊಂದು ವಿನಯ!! ಈ ಮಾತುಗಳನ್ನು ಇಲ್ಲಿ ಬರೆದಿರುವುದು ಅವರ ಹಿರಿತನವನ್ನು ತೋರುವುದಕ್ಕೇ ಹೊರತು ಬೇರೆ ಯಾವ ಉದ್ದೇಶದಿಂದಲೂ ಅಲ್ಲ. ಅವರು ಸಂಪೂರ್ಣತೆ ಮತ್ತು ಸದಸದ್ವಿವೇಕಗಳು ಮೂರ್ತಿವೆತ್ತಿ ಬಂದಂತೆ ಇದ್ದರು.
ನಾನಾವಳಿಯ ಕಥೆ
ಶಿರಡಿಯಲ್ಲಿ ಶಂಕರ್ ನಾರಾಯಣ್ ವೈದ್ಯ ಎಂಬ ಒಬ್ಬ ವಿಚಿತ್ರ ವ್ಯಕ್ತಿ ಇದ್ದ. ಅವನನ್ನು “ನಾನಾವಳಿ” ಎಂದೂ ಕರೆಯುತ್ತಿದ್ದರು. ಶೀಘ್ರ ಕೋಪಿ. ಅಕಾರಣವಾಗಿ ಜನರೊಡನೆ ಜಗಳವಾಡುತ್ತಿದ್ದ. ಬಾಬಾರ ಸೇವೆ ಮಾಡುತ್ತಿದ್ದ. ಒಂದು ದಿನ ಬಾಬಾ ತಮ್ಮ ಶಿಲಾಸನದ ಮೇಲೆ ಕುಳಿತಿದ್ದಾಗ, ಅವನು ಬಂದು ಬಾಬಾರನ್ನು, "ಏಳಿ. ಆಲ್ಲಿ ನಾನು ಕುಳಿತುಕೊಳ್ಳಬೇಕು" ಎಂದ. ಬಾಬಾ ಮರುಮಾತಾಡದೆ ಎದ್ದು ತಮ್ಮ ಜಾಗವನ್ನು ಬಿಟ್ಟುಕೊಟ್ಟರು, ಅವನು ಸ್ವಲ್ಪ ಹೊತ್ತು ಅಲ್ಲಿ ಕುಳಿತಿದ್ದು, ಎದ್ದು ಬಾಬಾರಿಗೆ ನಮಸ್ಕಾರಮಾಡಿ ಹೊರಟು ಹೋದ. ಇಷ್ಟೆಲ್ಲಾ ಆದರೂ ಬಾಬಾ ಮಾತ್ರ ಯಾವ ಪ್ರತಿಕ್ರಿಯೆಯನ್ನೂ ತೋರಿಸಲಿಲ್ಲ. ಬಾಬಾರನ್ನು, ತಾಯಿಗಿಂತ ಹೆಚ್ಚಾಗಿ, ಮಗುವನ್ನು ನೋಡಿಕೊಂಡಂತೆ ನೋಡಿಕೊಳ್ಳುತ್ತಿದ್ದ ನಾನಾವಳಿ, ಬಾಬಾ ಸಮಾಧಿಯಾದ ೧೩ನೆಯದಿನ ಈ ಪ್ರಪಂಚ ಬಿಟ್ಟು ತೆರಳಿದ. ನಾನಾವಳಿಯ ಸಮಾಧಿ ಲೆಂಡಿ ತೋಟದಲ್ಲಿದೆ.
ಮಹಾತ್ಮರ ಪುಣ್ಯ ಕಥೆಗಳನ್ನು ಕೇಳುವುದು, ಅಂತಹವರ ಸಹವಾಸ ಮಾಡುವುದು ಮೋಕ್ಷಮಾರ್ಗಕ್ಕೆ ಬಹು ಹತ್ತಿರವಾದ ದಾರಿ. ಅದರಲ್ಲೂ ಬಾಬಾರ ಕಥೆಗಳು ಅತ್ಯಂತ ಮಧುರವಾದವು. ಶಿರಡಿಯೆಂಬ ಮನೋಹರ ಸರೋವರದ ಮಧ್ಯದಲ್ಲಿ ಕಂಗೊಳಿಸುತ್ತಿರುವ ಸುಗಂಧಪೂರಿತ ಕಮಲ ಬಾಬಾ. ಭಕ್ತರೆಂಬ ಭೃಂಗಗಳು ನಾನಾಕಡೆಗಳಿಂದ ಬಂದು ಆ ಕಮಲದ ಕಥೆಯೆಂಬ ರಸವನ್ನು ಆಸ್ವಾದನೆಮಾಡಿ ಅನುಗ್ರಹಿಸಲ್ಪಟ್ಟರು. ಸನಿಹಕ್ಕೆ ಬಂದ ಅದೃಷ್ಟವಂತ ಭಕ್ತರೆಲ್ಲ ಆ ರಸವನ್ನು ಕುಡಿದು ಆನಂದದಲ್ಲಿ ಮುಳುಗಿಹೋಗುತ್ತಿದ್ದರು.
ಕಫ್ನಿ ತೊಟ್ಟು, ಗೋಣೀಚೀಲದ ಆಸನದಮೇಲೆ ಕುಳಿತು, ಬಾಬಾ ತಮ್ಮೆದುರು ಕುಳಿತು ಭಕ್ತರು ಹೇಳಿಕೊಳ್ಳುತ್ತಿದ್ದ ಅವರ ಸುಖದುಃಖಗಳನ್ನು ಅಮನಸ್ಕರಾಗಿ ಕೇಳಿಸಿಕೊಳ್ಳುತ್ತಿದ್ದರು. ಅವರು ಯಾರಿಗೂ ದೀರ್ಘ ಭಾಷಣಗಳನ್ನು ಕೊಡಲಿಲ್ಲ. ಕ್ಲಿಷ್ಟ ಆಸನಗಳನ್ನು ಮಾಡಿ ಎಂದು ಹೇಳಲಿಲ್ಲ. ಯಂತ್ರ, ಮಂತ್ರ, ತಂತ್ರಗಳು, ನಾಮೋಪದೇಶಗಳನ್ನು ಮಾಡಲಿಲ್ಲ. “ನಿಮ್ಮ ಅತಿಬುದ್ಧಿವಂತಿಕೆಯನ್ನು ಬಿಟ್ಟು ಸರಳ ಜೀವನ ನಡೆಸುತ್ತಾ ಯಾವಾಗಲೂ "ಸಾಯಿ" ಎಂಬ ನಾಮ ಸ್ಮರಣೆ ಮಾಡುತ್ತಿರಿ. ಅದೇ ನಿಮ್ಮನ್ನು ಮುಕ್ತರನ್ನಾಗಿ ಮಾಡುತ್ತದೆ” ಎಂದು ಮಾತ್ರ ಹೇಳುತ್ತಿದ್ದರು.
ಮನಸ್ಸಿಗೆ ಯೋಚನೆ ಮಾಡುವುದು ಒಂದೇ ಕೆಲಸ. ಆಟಿಕೆಯನ್ನು ಕೊಟ್ಟರೆ ಮಗು ಅದರೊಡನೆ ಆಟವಾಡುತ್ತದೆ. ಯಾವ ಆಟಿಕೆಯನ್ನು ಕೊಟ್ಟರೆ ಆ ಅಟಿಕೆಯೊಡನೆ ಆಟವಾಡುತ್ತದೆ. ಆಟಿಕೆಯನ್ನು ಬದಲಾಯಿಸಿದರೆ ಅದು ಬದಲಾದ ಆಟವನ್ನು ಆಡುತ್ತದೆ, ಹಾಗೆ ಮನಸ್ಸಿಗೆ ಇಂದ್ರಿಯ ವಿಷಯಗಳನ್ನು ಕೊಟ್ಟರೆ ಅದು ಅದನ್ನು ಕುರಿತ ಯೋಚನೆಯನ್ನೇ ಮಾಡುತ್ತದೆ. ಅದರ ಬದಲು ಗುರುವಿನ ವಿಷಯ ಕೊಟ್ಟರೆ ಆಗ ಗುರುವನ್ನು ಕುರಿತೇ ಚಿಂತಿಸುತ್ತದೆ. ಬಾಬಾರ ಕಥೆಗಳ ಆಹಾರ ಮನಸ್ಸಿಗೆ ತಿನ್ನಿಸಿ. ಆಗ ಅದು ಬಾಬಾರನ್ನೇ ಚಿಂತಿಸುತ್ತಾ ಅವರಲ್ಲಿ ಒಂದಾಗಿ ಹೋಗುತ್ತದೆ. ಬಾಬಾರ ಕಥೆಗಳನ್ನು ಕೇಳುವುದು, ಪ್ರಾಣಾಯಾಮ, ಅಷ್ಟಾಂಗ ಯೋಗ ಮುಂತಾದುವೆಲ್ಲಕ್ಕಿಂತ ಬಹು ಸುಲಭ ಸಾಧ್ಯವಾದ ಕಾರ್ಯ. ಬಾಬಾರ ಕಥೆಗಳು ನಮ್ಮನ್ನು ಈ ಪ್ರಾಪಂಚಿಕ ವಿಷಯಗಳಿಂದ ದೂರಮಾಡಿ ಸತ್ಯ ಮಾರ್ಗಕ್ಕೆ ತೆಗೆದುಕೊಂಡು ಹೋಗಬಲ್ಲವು. ಈ ಕಾರ್ಯಕ್ಕೆ ಕುಲ, ಮತ, ಜಾತಿಗಳ ನಿರ್ಬಂಧ ಏನೂ ಇಲ್ಲ. ಯಾರು ಬೇಕಾದರೂ ಮಾಡಬಹುದಾದ ಕಾರ್ಯ. ಶ್ರದ್ಧೆ, ಭಕ್ತಿಗಳಿರಬೇಕಷ್ಟೆ.
ಅಷ್ಟು ಸುಲಭ ಎನ್ನುವುದಾದರೆ ಏಕೆ ಎಲ್ಲರೂ ಮಾಡುವುದಿಲ್ಲ ಎಂದು ಕೇಳಿದರೆ, ಅದಕ್ಕೆ ಉತ್ತರ ಬಹು ಸುಲಭ. ಪೂರ್ವ ಜನ್ಮದ ಕರ್ಮಗಳು ನಮ್ಮನ್ನು ಹಿಂಬಾಲಿಸುತ್ತಿರುವಾಗ, ಅವನ್ನು ಕಳೆದುಕೊಳ್ಳಲು ದೈವ ಕೃಪೆ ಬೇಕು. ಬರಿಯ ಪಾಪಗಳನ್ನೇ ಮಾಡಿರುವವರಿಗೆ ದೈವ ಕೃಪೆ ಇರುವುದಿಲ್ಲ. ಅಂತಹ ಮನಸ್ಸಿಗೆ ಗುರುವಿನ ಹೆಸರು ರುಚಿಸುವುದಿಲ್ಲ. ಮನಸ್ಸನ್ನು ಆ ಕಾರ್ಯದಲ್ಲಿ ನೆಲೆಸುವಂತೆ ಮಾಡಲು ಬೇಕಾದ ಕೃಷಿ ಅಗಾಧ. ಬಾಬಾರ ಕಥೆಗಳನ್ನು ಕೇಳುವುದೇ ಅಂತಹ ಕೃಷಿ. ಆದರೆ ಇಂತಹ ಕೃಷಿ ವ್ಯರ್ಥವೇನಲ್ಲ. ಅದನ್ನು ಬಿಡದೆ ಮಾಡಿದರೆ ಹಂತ ಹಂತವಾಗಿ ಮೇಲಕ್ಕೇರುತ್ತಾ, ಕೊನೆಗೆ ಮುಟ್ಟಬೇಕಾದ ಗುರಿಯನ್ನು ಮುಟ್ಟುತ್ತದೆ. ಕಥೆಗಳನ್ನು ಕೇಳುತ್ತಾ, ಕೇಳುತ್ತಾ ಅವರಲ್ಲಿ ಶ್ರದ್ಧೆ ನಂಬಿಕೆಗಳು ಹೆಚ್ಚಿ, ಮನಸ್ಸು ಅವರನ್ನೇ ಚಿಂತಿಸಲು ಆರಂಭಮಾಡುತ್ತದೆ. ಯುಕ್ತವಾದ ಕಾಲದಲ್ಲಿ, ಬಾಬಾ ನಮ್ಮನ್ನು ತನ್ನ ತೆಕ್ಕೆಯಲ್ಲಿ ತೆಗೆದುಕೊಂಡು ಆದರಿಸುತ್ತಾರೆ.
ಮಹಾತ್ಮರ ಕಥೆಗಳನ್ನು ಕೇಳುವುದು ಎಂದರೆ ಅವರ ಸಂಗದಲ್ಲಿದ್ದಂತೆಯೇ. ನಮ್ಮ ಅದೃಷ್ಟದಿಂದಲೇ ಅಂತಹ ಸತ್ಸಂಗ ದೊರೆಯಬೇಕು. ಸತ್ಸಂಗ ನಮ್ಮನ್ನು ಈ ಪ್ರಾಪಂಚಿಕ ಬಂಧಗಳಿಂದ ಪಾರುಮಾಡುತ್ತದೆ. ಅಹಂಕಾರ, ದೇಹ, ಬುದ್ಧಿಗಳನ್ನು ತರಿದು, ಈ ಜನನ ಮರಣ ಚಕ್ರದಿಂದ ಬಿಡಿಸಿ ನಮ್ಮನ್ನು ಆನಂದ ಸಾಮ್ರಾಜ್ಯಕ್ಕೆ ಕರೆದುಕೊಂಡು ಹೋಗುತ್ತದೆ. ಮಹಾತ್ಮರ ನಾಮೋಚ್ಛಾರಣೆಯೇ ನಮ್ಮನ್ನು ಈ ಸಂಸಾರ ಸಾಗರದಿಂದ ಪಾರುಮಾಡುತ್ತದೆ. ಜನರನ್ನು ಋಜುಮಾರ್ಗದಲ್ಲಿ ನಡೆಸುವುದಕ್ಕೇ ಮಹಾತ್ಮರ ಅವತಾರ. ಅಜ್ಞಾನ ಕೂಪದಲ್ಲಿ ಬಿದ್ದಿರುವ ಜನರನ್ನು ಮೇಲೆತ್ತಿ ಅವರಿಗೆ ಶಾಂತಿ, ಆನಂದಕೊಟ್ಟು ಅವರನ್ನು ಮೋಕ್ಷಮಾರ್ಗದ ಕಡೆಗೆ ನಡೆಸುವುದೇ ಅವರ ಅವತಾರ ಕಾರ್ಯ.
ತಮ್ಮ ಪಾಪಗಳನ್ನು ಕಳೆದುಕೊಳ್ಳಲು ಜನ ಗಂಗೆ ಯಮುನೆಯಂತಹ ನದಿಗಳಲ್ಲಿ ಸ್ನಾನ ಮಾಡುತ್ತಾರೆ. ಅಂತಹ ಪಾಪಹಾರಕ ನದಿಗಳೂ ಮಹಾತ್ಮರ ಪಾದ ಸ್ಪರ್ಶವನ್ನು ಆಶಿಸುತ್ತವೆ. ಅಂತಹುದು ಮಹಾತ್ಮರ ಮಾಹಾತ್ಮ್ಯೆ. ನಮ್ಮ ಪೂರ್ವ ಜನ್ಮ ಸುಕೃತದಿಂದ ನಮಗೆ ಬಾಬಾರಂತಹ ಗುರುವು ದೊರೆತಿದ್ದಾರೆ. ಅವರ ಪಾದಸ್ಪರ್ಶ ಮಾಡಿ, ಅವರ ಅನುಗ್ರಹ ಪಡೆದು, ನಮ್ಮ ಪಾಪಗಳನ್ನೆಲ್ಲ ಕಳೆದುಕೊಂಡು ಶುದ್ಧ ಮನಸ್ಕರಾಗೋಣ.
ಆ ದಿವ್ಯ ಭವ್ಯ ಆಕೃತಿ, ಬಾಬಾ, ಮಸೀದಿಯ ಬಾಗಿಲಲ್ಲಿ ನಿಂತು ಭಕ್ತರಿಗೆ ಉದಿ ಹಂಚುತ್ತಿರುವ ದೃಶ್ಯವನ್ನು ಮನನ ಮಾಡುತ್ತಾ, ಹೇಮಾಡ್ ಪಂತ್, ಅವರಿಗೆ ಸಾಷ್ಟಾಂಗ ನಮಸ್ಕಾರ ಮಾಡಿ ಈ ಅಧ್ಯಾಯವನ್ನು ಮುಗಿಸಿದ್ದಾರೆ.
ಇದರೊಂದಿಗೆ ಬಾಬಾರ ಜೀವನ ರೀತಿ ಇತ್ಯಾದಿ ವಿಷಯಗಳನ್ನು ಕುರಿತು ಹೇಳುವ ಹತ್ತನೆಯ ಅಧ್ಯಾಯ ಮುಗಿಯಿತು. ಮುಂದಿನ ಅಧ್ಯಾಯದಲ್ಲಿ ಹೇಮಾಡ್ ಪಂತ್ ಸಗುಣಬ್ರಹ್ಮ ಸಾಯಿಯನ್ನು ಹೇಗೆ ಅರ್ಚಿಸುವುದು, ಪಂಚಭೂತಗಳಲ್ಲಿ ಬಾಬಾರಿಗಿದ್ದ ನಿಯಂತ್ರಣಶಕ್ತಿ ಇತ್ಯಾದಿ ವಿಷಯಗಳನ್ನು ಕುರಿತು ಹೇಳುತ್ತಾರೆ.
||ಶ್ರೀ ಸದ್ಗುರು ಸಾಯಿನಾಥಾರ್ಪಣಮಸ್ತು||ಶುಭಂ ಭವತು||
||ಓಂ ಶಾಂತಿಃ ಶಾಂತಿಃ ಸಾಂತಿಃ||
||ಓಂ ಶಾಂತಿಃ ಶಾಂತಿಃ ಸಾಂತಿಃ||
No comments:
Post a Comment