||ಶ್ರೀ ಸಾಯಿ ಸಚ್ಚರಿತ್ರೆ||
||ಹನ್ನೆರಡನೆಯ ಅಧ್ಯಾಯ||
||ಸಾಯಿ ಲೀಲೆಗಳು||
ಶ್ರೀ ಗಣೇಶಾಯ ನಮಃ ಶ್ರೀ ಸರಸ್ವತಯೇ ನಮಃ
ಶ್ರೀವೆಂಕಟೇಶಾಯ ನಮಃ ಶ್ರೀಸಾಯಿನಾಥಾಯ ನಮಃ
ಶ್ರೀಸದ್ಗುರುಭ್ಯೋನ್ನಮಃ
||ಹನ್ನೆರಡನೆಯ ಅಧ್ಯಾಯ||
||ಸಾಯಿ ಲೀಲೆಗಳು||
ಶ್ರೀ ಗಣೇಶಾಯ ನಮಃ ಶ್ರೀ ಸರಸ್ವತಯೇ ನಮಃ
ಶ್ರೀವೆಂಕಟೇಶಾಯ ನಮಃ ಶ್ರೀಸಾಯಿನಾಥಾಯ ನಮಃ
ಶ್ರೀಸದ್ಗುರುಭ್ಯೋನ್ನಮಃ
ಈ ಅಧ್ಯಾಯದಲ್ಲಿ ಹೇಮಾಡ್ ಪಂತ್, ಸಂತರ ಜೀವಿತೋದ್ದೇಶ, ಕಾಕಾಮಹಾಜನಿ, ಶ್ರೀಮತಿ ನಿಮೋನ್ಕರ್, ಮುಳೆ ಶಾಸ್ತ್ರಿ ಅವರ ಅನುಭವಗಳು ಮತ್ತು ಇತರ ವಿಷಯಗಳನ್ನು ಹೇಳುತ್ತಾರೆ.
ಸಂತರ ಜೀವಿತೋದ್ದೇಶ
ಅಧರ್ಮ ತಲೆಯೆತ್ತಿ ಧರ್ಮಗ್ಲಾನಿಯಾದಾಗ, ಪರಮಾತ್ಮ ಭೂಮಿಯಮೇಲೆ ಅವತರಿಸುತ್ತಾನೆ. ಜನರು ಪೂಜೆ ಪುನಸ್ಕಾರಗಳನ್ನು ಬಿಟ್ಟು, ದೇವತಾ ಕಾರ್ಯಗಳನ್ನು ಕಡೆಗಣಿಸಿ, ಹೆಂಡತಿ ಮಕ್ಕಳೇ ಜೀವನದ ಪರಮೋದ್ದೇಶ ಎಂದು ಯಾವಾಗ ನಂಬಿ ಅದರಂತೆ ನಡೆಯುತ್ತಾರೋ, ಆವಾಗಲೇ ಅಧರ್ಮದ ಆರಂಭ. ಇಂತಹ ಅಧರ್ಮದ ಏಳಿಗೆಯನ್ನು ತಡೆದು, ಪುನಃ ಧರ್ಮವನ್ನು ಪ್ರತಿಷ್ಠಾಪಿಸಲು, ದೇವರು ವಿವಿಧ ರೂಪಗಳಲ್ಲಿ ಇಳೆಗೆ ಇಳಿದು ಬರುತ್ತಾನೆ. ಶ್ರೀ ಕೃಷ್ಣನೂ ಇದೇ ಮಾತನ್ನು ಭಗವದ್ಗೀತೆಯಲ್ಲಿ ಹೇಳಿದ್ದಾನೆ, "ಶಿಷ್ಟ ಪರಿಪಾಲನೆಗಾಗಿ, ದುಷ್ಟ ವಿನಾಶಕ್ಕಾಗಿ ನಾನು ಯುಗ ಯುಗದಲ್ಲೂ ಧರ್ಮ ಸಂಸ್ಥಾಪನೆಗೋಸ್ಕರ ಅವತರಿಸುತ್ತಿರುತ್ತೇನೆ."
ಸಂತರು ದೇವದೂತರು
ಸಂತರು ಅಧರ್ಮವಿನಾಶಕ್ಕಾಗಿ ಬರುವುದಿಲ್ಲ. ಅದು ಸಂತರ ಕೆಲಸವಲ್ಲ. ಅವರ ಅವತಾರ ಉದ್ದೇಶವೇ ಬೇರೆ. ಅಧರ್ಮದಲ್ಲಿ ನಿರತರಾಗಿ, ಕೆಟ್ಟ ದಾರಿಯನ್ನು ತುಳಿಯುತ್ತಿರುವ ಜನರನ್ನು ಧರ್ಮಮಾರ್ಗಕ್ಕೆ ತರುವ ಪ್ರಯತ್ನ ಶೀಲರು, ಸಂತರು. ಯಾವಾಗ ಆ ಕಾರ್ಯವನ್ನು ಮಾಡಲು ಸಂತರಿಗೆ ಅಸಾಧ್ಯವಾಗುತ್ತದೋ, ಆಗ ದೇವರು ಅವತಾರಮಾಡಿ ಧರ್ಮಸ್ಥಾಪನೆ ಮಾಡುತ್ತಾನೆ. ಒಳ್ಳೆಯವರು ಕೆಟ್ಟವರು ಎಂಬ ಭೇದ ಅವರಿಗಿಲ್ಲ. ಒಳ್ಳೆಯವರನ್ನು ಮತ್ತಷ್ಟು ಧರ್ಮಪ್ರವರ್ತಕರನ್ನಾಗಿ ಮಾಡುವುದು, ಕೆಟ್ಟವರನ್ನು ಧರ್ಮಮಾರ್ಗಕ್ಕೆ ತರುವುದು, ಅವರ ಜೀವಿತೋದ್ದೇಶ. ಅದಕ್ಕಾಗಿಯೇ ಅವರ ಶ್ರಮವೆಲ್ಲಾ. ಸೂರ್ಯನು ಅಂಧಕಾರವನ್ನು ಹೇಗೆ ಓಡಿಸುತ್ತಾನೋ, ಹಾಗೆಯೇ ಜ್ಞಾನ ನಿಧಿಗಳಾದ ಸಂತರು ಭಕ್ತರ ಅಜ್ಞಾನಾನಾಂಧಕಾರವನ್ನು ತೊಲಗಿಸಿ ಅವರನ್ನು ಋಜುಮಾರ್ಗದಲ್ಲಿ ನಡೆಸುತ್ತಾರೆ.
ಅಂತಹ ಸಂತರ ಸಮೂಹದಲ್ಲಿ, ಬಾಬಾರು ಹೊಳೆಯುತ್ತಿರುವ ವಜ್ರ. ತನ್ನ ಭಕ್ತರನ್ನು ಸಲಹಲು ಭೂಮಿಗಿಳಿದು ಬಂದರು ಬಾಬಾ. ಜ್ಞಾನ ಪರಿಪೂರ್ಣ, ದೈವಪ್ರಭೆಯಿಂದ ಕೂಡಿದವರು ಬಾಬಾ. ಪ್ರೇಮಪೂರ್ಣ ದಯಾಸಾಗರ, ಅಕ್ರೋಧಿ, ವಿನಯದ ಮೂರ್ತಿ, ಸದಾತೃಪ್ತ, ಅನುಕಂಪ ತುಂಬಿದವರು ಬಾಬಾ. ತಮ್ಮದೆಲ್ಲವನ್ನೂ ಭಕ್ತರಿಗಾಗಿ ಮೀಸಲಿಟ್ಟರು. ಅದು ಆಗ, ಅವರು ಜೀವಂತರಾಗಿದ್ದಾಗ, ಎಷ್ಟು ನಿಜವಾಗಿತ್ತೋ ಈಗಲೂ ಅಷ್ಟೇ ನಿಜ. ಇಷ್ಟಾದರೂ, ಅವರ ಇಚ್ಛೆಯಿಲ್ಲದೆ ಯಾರೂ ಅವರನ್ನು ಕಾಣಲಾಗುತ್ತಿರಲಿಲ್ಲ. ತನಗಿಷ್ಟವಿಲ್ಲದಿದ್ದರೆ ಭಕ್ತರ ಹೃದಯಾಂತರಾಳದ ಕೂಗೂ ಅವರಿಗೆ ಕೇಳುತ್ತಿರಲಿಲ್ಲ. ಬಾಬಾ ಯಾರನ್ನಾದರೂ ನೆನಸಿಕೊಳ್ಳಲೂ ಕೂಡಾ, ಸಮಯ ಪಕ್ವವಾಗುವವರೆಗೂ ಕಾಯಬೇಕಾಗುತ್ತಿತ್ತು. ಕೆಲವರು ಬಾಬಾರ ದರ್ಶನಕ್ಕಾಗಿ ತಮ್ಮ ಜೀವನವೆಲ್ಲಾ ಕಾದರೂ ಅವರಿಗೆ ಬಾಬಾರ ದರ್ಶನ ಆಗಲೇ ಇಲ್ಲ. ಕೆಲವರು ನತದೃಷ್ಟರನ್ನು ಬಾಬಾ ಶಿರಡಿಗೂ ಬರಗೊಡಲಿಲ್ಲ. ಅಂತಹ ಅದೃಷ್ಟಹೀನರೆಲ್ಲ ಈಗ ಸಾಯಿ ಸಚ್ಚರಿತ್ರೆಯನ್ನು ಓದಿ ತಮ್ಮ ಆಸೆಯನ್ನು ತೀರಿಸಿಕೊಳ್ಳಬೇಕಷ್ಟೆ. ಬಾಬಾರ ಇಷ್ಟ, ಅನುಮತಿಯಿಲ್ಲದೆ ಯಾರೂ ಹೇಗೆ ಶಿರಡಿಗೆ ಬರಲಾಗುತ್ತಿರಲಿಲ್ಲವೋ, ಹಾಗೇ ಶಿರಡಿಗೆ ಬಂದಮೇಲೆ ಅಲ್ಲಿಂದ ಹೊರಡಲೂ, ಬಾಬಾರ ಅನುಮತಿಯಿಲ್ಲದೆ ಹೊರಡುವ ಹಾಗಿರಲಿಲ್ಲ. ಅವರನ್ನು ಕಾಣುವುದು, ಅವರ ಜೊತೆಯಲ್ಲಿರುವುದು, ಎಲ್ಲವೂ ಕೂಡ ಬಾಬಾರ ಅನುಮತಿಯಿಂದಲೇ ನಡೆಯುತ್ತಿತ್ತು.
ಕಾಕಾಮಹಾಜನಿಯ ಕಥೆ
ಕಾಕಾ ಮಹಾಜನಿ ಬಾಬಾರ ಅಂತರಂಗ ಭಕ್ತರಲ್ಲೊಬ್ಬರು. ಒಂದು ಸಲ ಅವರು ಬೊಂಬಾಯಿಂದ ಶಿರಡಿಗೆ ಬಂದರು. ಶಿರಡಿಯಲ್ಲಿ ಒಂದು ವಾರ ಇದ್ದು ಕೃಷ್ಣಜನ್ಮಾಷ್ಟಮಿ ಸಮಾರಂಭಗಳಲ್ಲಿ ಭಾಗವಹಿಸಬೇಕೆಂದು ಅವರ ಇಚ್ಛೆ. ಜನ್ಮಾಷ್ಟಮಿಯ ದಿನ, ಶಿರಡಿಯ ಜನ ಚಾವಡಿಯನ್ನು ತಳಿರು ತೋರಣಗಳಿಂದ ಅಲಂಕರಿಸಿ, ಶೋಭಾಯಮಾನವಾಗಿ ಮಾಡುತ್ತಿದ್ದರು. ಅಲಂಕರಿಸಿದ ಉಯ್ಯಾಲೆಗಳಲ್ಲಿ ಬಾಲಕೃಷ್ಣನನ್ನು ಮಲಗಿಸಿ, ಕೃಷ್ಣ ಪ್ರಧಾನವಾದ ಹಾಡುಗಳನ್ನು ಹೇಳುತ್ತಾ ಉಯ್ಯಾಲೆ ಸುತ್ತಲೂ ನರ್ತಿಸುತ್ತಾ ಆಡುತ್ತಿದ್ದರು. ಬಾಬಾ ಮಾತ್ರ, ಇದನ್ನೆಲ್ಲಾ ಸಾಕ್ಷಿಯಾಗಿ ಕೂತು ನೋಡುತ್ತಿದ್ದರು. ಇಂತಹ ಸಮಾರಂಭದಲ್ಲಿ ಭಾಗವಹಿಸಬೇಕೆಂಬ ಇಚ್ಛೆಯಿಂದ ಕಾಕಾ ಮಹಾಜನಿ ಬಂದಿದ್ದರು.
ಶಿರಡಿಗೆ ಬಂದಕೂಡಲೇ ಅವರು ಬಾಬಾರ ದರ್ಶನಕ್ಕೆ ಹೋದರು. ಮಹಾಜನಿಯನ್ನು ಕಂಡಕೂಡಲೇ ಬಾಬಾ "ಇಲ್ಲಿಂದ ಎಂದು ಹೊರಡುತ್ತೀಯೆ?" ಎಂದು ಕೇಳಿದರು. ಮಹಾಜನಿ ಸಖೇದಾಶ್ಚರ್ಯಗಳಿಂದ, "ನೀವು ಯಾವಾಗ ಹೊರಡು ಎಂದರೆ ಆವಾಗ" ಎಂದುತ್ತರಕೊಟ್ಟರು. ಮರುಕ್ಷಣವೇ ಬಾಬಾ "ನಾಳೆಯೇ ಹೊರಡು" ಎಂದು ಅಪ್ಪಣೆ ಕೊಟ್ಟರು. ಮಾರನೆಯ ದಿನ ಬೆಳಗ್ಗೆಯೇ ಮಹಾಜನಿ, ಶಿರಡಿಯಿಂದ ಹೊರಟು ಬೊಂಬಾಯಿ ಸೇರಿದರು. ಕಛೇರಿಗೆ ಹೋದಾಗ ಅವರಿಗೆ ಆಶ್ಚರ್ಯ ಕಾದಿತ್ತು. ಆತನ ಯಜಮಾನ ಮಹಾಜನಿಗೋಸ್ಕರ ಕಾತುರದಿಂದ ಎದುರುನೋಡುತ್ತಿದ್ದರು. ತಕ್ಷಣವೇ ಹಿಂತಿರುಗಿ ಬರುವಂತೆ ಮಹಾಜನಿಗೆ ಒಂದು ಕಾಗದ ಕೂಡಾ ಬರೆದು ಶಿರಡಿಗೆ ಕಳುಹಿಸಿದ್ದರು. ಕಛೇರಿಯ ಮುಖ್ಯಸ್ಥ ಖಾಯಿಲೆಯಿಂದಾಗಿ ಬಂದಿರಲಿಲ್ಲವಾಗಿ ಮಹಾಜನಿಯ ಇರುವಿಕೆ ಬಹಳ ಅಗತ್ಯವಾಗಿತ್ತು. ಹಿಂತಿರುಗಿ ಬಂದ ಆ ಕಾಗದ ಮಹಾಜನಿಯ ಕೈ ಸೇರಿತು.
ಭಕ್ತರು ತಮಗೆ ಇಷ್ಟಬಂದಂತೆ ಶಿರಡಿಯಲ್ಲಿರಬೇಕೆಂದುಕೊಂಡರೆ, ಬಾಬಾರ ಅನುಮತಿಯಿಲ್ಲದೆ ಹಾಗೆ ಸಾಧ್ಯವಾಗುತ್ತಿರಲಿಲ್ಲ ಎಂಬುದಕ್ಕೆ ಇದು ಒಂದು ನಿದರ್ಶನ.
ಭಾವೂ ಸಾಹೇಬ್ ಧುಮಾಲರ ವಾಪಸು ಪ್ರಯಾಣ
ಭಾವೂ ಸಾಹೇಬ್ ಧುಮಾಲ್ ನಾಸಿಕದ ನಿವಾಸಿ. ಒಂದು ಸಲ ಅವರು ಕೆಲಸದಮೇಲೆ ನಿಫಾಡಕ್ಕೆ ಹೋಗಬೇಕಾಯಿತು. ಹೋಗುವ ದಾರಿಯಲ್ಲಿ ಶಿರಡಿ ಇದ್ದುದರಿಂದ, ಬಾಬಾರ ದರ್ಶನ ಮಾಡಿಕೊಂಡು ಹೋಗಲು ಶಿರಡಿಗೆ ಬಂದರು. ದರ್ಶನ ಮಾಡಿ, ಹೊರಡಲು ಅನುಮತಿ ಕೇಳಿದಾಗ, ಬಾಬಾ “ಅಗಲಿ ನೋಡೋಣ” ಎಂದು ಹೇಳುತ್ತಾ, ಒಂದು ವಾರದವರೆವಿಗೂ ತಳ್ಳಿ, ಆಮೇಲೆ ಹೊರಡಲು ಅನುಮತಿ ಕೊಟ್ಟರು. ಒಂದು ಮೊಕದ್ದಮೆಯ ವಿಷಯವಾಗಿ, ಧುಮಾಲರು ನಿಫಾಡದ ನ್ಯಾಯಾಸ್ಥಾನದಲ್ಲಿ ಹಾಜರಾಗಬೇಕಾಗಿತ್ತು. ವಾರ ತಡವಾದದ್ದರಿಂದ ಅವರು ಅತಿ ಕಾತುರರಾಗಿ ನ್ಯಾಯಾಸ್ಥಾನಕ್ಕೆ ಹೋದರು. ಆದರೆ ಅಲ್ಲಿ ಅವರಿಗೆ ತಿಳಿದದ್ದು ಅವರ ಮೊಕದ್ದಮೆ, ನ್ಯಾಯಾಧಿಪತಿಗೆ ಖಾಯಿಲೆಯಾದದ್ದರಿಂದ, ಒಂದು ವಾರ ಮುಂದೂಡಲ್ಪಟ್ಟಿತ್ತು ಎಂದು. ಇವರು ನ್ಯಾಯಾಸ್ಥಾನಕ್ಕೆ ಹೋದ ದಿನವೇ ಅವರ ಮೊಕದ್ದಮೆ ಮತ್ತೆ ವಿಚಾರಣೆಗೆ ಬಂದಿತ್ತು. ಅದೇ ಮೊಕದ್ದಮೆ ಹಲವಾರು ತಿಂಗಳುಗಳ ಕಾಲ ನಡೆದು, ಕೊನೆಗೆ ಬಾಬಾರ ಅಶೀರ್ವಾದದಿಂದ, ಧುಮಾಲ್ ವಿಜಯಿಯಾದರು.
ಭಕ್ತರು ತಾವೇ ಶಿರಡಿಬಿಟ್ಟು ಹೋಗಬೇಕೆಂದುಕೊಂಡರೂ, ಬಾಬಾರ ಅನುಮತಿಯಿಲ್ಲದೆ ಹೇಗೆ ಸಾಧ್ಯವಾಗುತ್ತಿರಲಿಲ್ಲ, ಎಂಬುದಕ್ಕೆ ಇದು ಒಂದು ನಿದರ್ಶನ. ಆದರೆ ಬಾಬಾ ಹಾಗೆ ಮಾಡುತ್ತಿದ್ದುದು ಭಕ್ತರ ಒಳ್ಳೆಯದಕ್ಕಾಗಿಯೇ! ಬಾಬಾ ತಮ್ಮ ಭಕ್ತರನ್ನು ಹೇಗೆ ನೋಡಿಕೊಳ್ಳುತ್ತಿದ್ದರು ಎಂಬುದು ತಿಳಿಯಲಸಾಧ್ಯ!
ಶ್ರೀಮತಿ ನಿಮೋನ್ಕರರ ಕಥೆ
ನಾನಾ ಸಾಹೇಬ್ ನಿಮೋಂಕರ್ ಬಾಬಾರ ಇನ್ನೊಬ್ಬರು ಸನ್ನಿಹಿತ ಭಕ್ತರು. ಅವರು ನಿಮೋನ್ ಗ್ರಾಮದ ಜಮೀನ್ದಾರರು. ಅಲ್ಲಿಯ ಗೌರವ ನ್ಯಾಯಾಧೀಶರೂ ಕೂಡಾ. ಅವರು ಶ್ಯಾಮಾರ ತಂದೆಯ ಅಣ್ಣಂದಿರು. ವಯಸ್ಸಾದವರು. ಒಂದುಸಲ, ತಮ್ಮ ಹೆಂಡತಿಯೊಡನೆ ಬಾಬಾರ ದರ್ಶನಕ್ಕೆ ಶಿರಡಿಗೆ ಬಂದರು. ದಂಪತಿಗಳಿಬ್ಬರೂ ಬೆಳಗ್ಗೆಯಿಂದ ಸಂಜೆಯವರೆಗೂ ಬಾಬಾರ ಸೇವೆಯಲ್ಲಿ ಕಾಲ ಕಳೆಯುತ್ತಿದ್ದರು. ಹಾಗೆ ಅವರು ಶಿರಡಿಯಲ್ಲಿದ್ದಾಗ ಬೇಲಾಪುರದಲ್ಲಿ ಅವರ ಮಗನಿಗೆ ಖಾಯಿಲೆಯಾಗಿದೆಯೆಂದು ತಿಳಿಯಿತು. ಶ್ರೀಮತಿ ನಿಮೋಂಕರ್ ಬೇಲಾಪುರಕ್ಕೆ ಹೋಗಿ ಮಗನನ್ನು ನೋಡಿಕೊಂಡು, ನಾಲ್ಕು ದಿನವಿದ್ದು ಬರಬೇಕೆಂದುಕೊಂಡರು. ಆದರೆ ಆಕೆಯ ಗಂಡ, ತನ್ನಿಂದ ಆಕೆ ಬಹಳ ದಿನ ದೂರವಿರಬಾರದು ಎಂದು, ಮಗನನ್ನು ನೋಡಿದ ಮರುದಿನವೇ ಹಿಂತಿರುಗಿ ಬರಲು ಹೇಳಿದರು. ಆಕೆಗೆ ಏನು ಮಾಡಬೇಕೋ ತೋಚಲಿಲ್ಲ. ತನ್ನ ಗಂಡ ಬಾಬಾರ ಜೊತೆಯಲ್ಲಿ ಮಾತನಾಡುತ್ತಿರುವ ಸಮಯದಲ್ಲಿ ಆಕೆ ಹೋಗಿ ಬಾಬಾರಿಗೆ ನಮಸ್ಕಾರಮಾಡಿ, ಹೊರಡಲು ಅನುಮತಿ ಕೇಳಿದರು. ಬಾಬಾ, "ಹೋಗು ತಾಯಿ. ಹೋಗಿ ಮಗನನ್ನು ನೋಡಿ, ನಾಲ್ಕು ದಿನ ಇದ್ದು, ಎಲ್ಲರನ್ನೂ ನೋಡಿಕೊಂಡು ಬಾ" ಎಂದು ಹೇಳಿದರು. ಆಕೆಗೆ ಆ ಮಾತುಗಳು ಸುಶ್ರಾವ್ಯವಾದ ಸಂಗೀತದಂತೆ ಕೇಳಿಸಿತು. ಬಾಬಾ ನಿಮೋಂಕರರ ಅಜ್ಞೆಗೆ ತಡೆ ಹಾಕಿದಂತಾಯಿತು.
ಮುಳೆ ಶಾಸ್ತ್ರಿ ತನ್ನ ಗುರುವನ್ನು ಕಂಡುಕೊಂಡದ್ದು
ಮುಳೆ ಶಾಸ್ತ್ರಿ ನಾಸಿಕದ ಆಚಾರವಂತ ಬ್ರಾಹ್ಮಣರು. ಅಗ್ನಿಹೋತ್ರಿ. ಷಟ್ಶಾಸ್ತ್ರಗಳನ್ನು ಓದಿದವರು. ಜ್ಯೋತಿಷ್ಯ, ಹಸ್ತಸಾಮುದ್ರಿಕಗಳಲ್ಲಿ ಪರಿಣತರು. ಸ್ನೇಹಿತ ಬಾಪೂ ಸಾಹೇಬ್ ಬೂಟಿಯನ್ನು ಕಾಣಲು ಶಿರಡಿಗೆ ಬಂದರು. ತನ್ನ ಕೆಲಸ ಆದಮೇಲೆ ಬೂಟಿ ಜೊತೆಯಲ್ಲಿ ಬಾಬಾರ ದರ್ಶನಕ್ಕೆ ಹೋದರು. ಆಗ ಬಾಬಾ ಹಣ್ಣುಗಳನ್ನು ಕೊಂಡು ಮಸೀದಿಯಲ್ಲಿದ್ದವರಿಗೆಲ್ಲಾ ಹಂಚುತ್ತಿದ್ದರು. ಅವರು ಮೆದುವಾಗಿ ಒತ್ತಿ, ಒತ್ತಿ ಕೊಟ್ಟ ಮಾವಿನಹಣ್ಣನ್ನು ಬಾಯಲ್ಲಿಟ್ಟರೆ ರಸವೆಲ್ಲಾ ಬಾಯೊಳಕ್ಕೆ ಹೋಗಿ, ಬರಿಯ ಸಿಪ್ಪೆ ಓಟೆ ಮಾತ್ರ ಉಳಿಯುತ್ತಿತ್ತು. ಬಾಳೆಹಣ್ಣು ಸುಲಿದು, ಸಿಪ್ಪೆ ತಾವಿಟ್ಟುಕೊಂಡು ಹಣ್ಣು ಭಕ್ತರಿಗೆ ಕೊಡುತ್ತಿದ್ದರು.
ಮುಳೆ ಶಾಸ್ತ್ರಿ ಹಸ್ತಸಾಮುದ್ರಿಕದಲ್ಲಿ ನಿಪುಣರಾದ್ದರಿಂದ, ಬಾಬಾರ ಹಸ್ತ ಪಾದಗಳನ್ನು ನೋಡಬೇಕೆಂದುಕೊಂಡರು. ಅವತಾರಪುರುಷರ ಪಾದಗಳಲ್ಲಿ ಧ್ವಜ, ಇಂದ್ರಾಯುಧ ಮುಂತಾದ ಚಿಹ್ನೆಗಳಿರುತ್ತವೆ, ಎಂದು ಕೇಳಿದ್ದ ಅವರು ಆ ಚಿಹ್ನೆಗಳನ್ನು ನೋಡಲು ಕಾತುರರಾಗಿದ್ದರು. ಬಾಬಾರು ಅವತಾರಪುರುಷರೇ! ಶಾಸ್ತ್ರಿ ಬಾಬಾರನ್ನು ಪರೀಕ್ಷಿಸಲು ತಮ್ಮ ಹಸ್ತವನ್ನು ನೀಡಬೇಕೆಂದು ಪ್ರಾರ್ಥಿಸಿಕೊಂಡರು. ಬಾಬಾ ಅವರು ಹೇಳಿದ್ದು ತಮಗೆ ಕೇಳಿಸಲೇ ಇಲ್ಲವೇನೋ ಎಂಬಂತೆ ನಾಲ್ಕು ಬಾಳೆಹಣ್ಣುಗಳನ್ನು ಸುಮ್ಮನೆ ಅವರ ಕೈಯಲ್ಲಿಟ್ಟರು. ಶಾಸ್ತ್ರಿಗೆ ನಿರಾಶೆಯಾದರೂ, ಏನೂ ಹೇಳದೆ ಎಲ್ಲರ ಜೊತೆಯಲ್ಲಿ ವಾಡಾಗೆ ಹಿಂತಿರುಗಿದರು. ವಾಡಾಕ್ಕೆ ಬಂದು ಶಾಸ್ತ್ರಿ ಸ್ನಾನ ಮಾಡಿ, ಮಡಿ ಉಟ್ಟು ತನ್ನ ಎಂದಿನ ಅಗ್ನಿಹೋತ್ರ ಕಾರ್ಯಕ್ರಮ ಆರಂಭಿಸಿದರು. ಅಲ್ಲಿ ಬಾಬಾ ಲೆಂಡಿಗೆ ಹೋಗುತ್ತಾ, "ಕಾಷಾಯ ರಂಗು ತನ್ನಿ. ಈವತ್ತು ಕಾಷಾಯ ವಸ್ತ್ರಗಳನ್ನು ಧರಿಸೋಣ" ಎಂದರು. ಅವರು ಹೇಳಿದ್ದು ಯಾರಿಗೂ ಅರ್ಥವಾಗಲಿಲ್ಲ.
ಬಾಬಾ ಲೆಂಡಿಯಿಂದ ಹಿಂತಿರುಗುವವೇಳೆಗೆ, ಮಧ್ಯಾಹ್ನದ ಆರತಿ ಸಮಯವಾಗಿತ್ತು. ವಾಡಾದಲ್ಲಿ ಬೂಟಿ, ಶಾಸ್ತ್ರಿಯನ್ನು ಆರತಿಗೆ ಬರುತ್ತೀರಾ ಎಂದು ಕೇಳಿದರು. ಆದರೆ ಶಾಸ್ತ್ರಿ ತಾನು ಮಧ್ಯಾಹ್ನದ ಮೇಲೆ ಬಾಬಾ ದರ್ಶನ ಮಾಡುವುದಾಗಿ ಹೇಳಿದರು. ಮಸೀದಿಯಲ್ಲಿ ಪೂಜಾದಿಗಳಾದಮೇಲೆ ಆರತಿ ಆರಂಭವಾಗುವುದರಲ್ಲಿತ್ತು. ಅಷ್ಟರಲ್ಲಿ ಬಾಬಾ, "ಆ ನಾಸಿಕದ ಬ್ರಾಹ್ಮಣನಿಂದ ದಕ್ಷಿಣೆ ತೆಗೆದುಕೊಂಡು ಬಾ" ಎಂದು ಬೂಟಿಗೆ ಹೇಳಿದರು. ಅವರ ಆಜ್ಞೆಯಂತೆ ಬೂಟಿ ತಾವೇ ಸ್ವತಃ ವಾಡಾಕ್ಕೆ ಹೋಗಿ ಮುಳೆ ಶಾಸ್ತ್ರಿಯನ್ನು ಕಂಡು ಬಾಬಾ ಆಜ್ಞೆಯನ್ನು ತಿಳಿಸಿದರು. ಶಾಸ್ತ್ರಿಗೆ ಕಕ್ಕಾಬಿಕ್ಕಿಯಾಯಿತು. ಬಾಬಾ ಮಹಾತ್ಮರಾದರೂ, ಅವರು ಮುಸ್ಲಿಮ್ ಎನ್ನುವ ಭಾವನೆ ಅವರಲ್ಲಿದ್ದುದರಿಂದ, "ನಾನು ಅಗ್ನಿಹೋತ್ರಿ ಬ್ರಾಹ್ಮಣ. ನಾನೇಕೆ ಅವರಿಗೆ ದಕ್ಷಿಣೆ ಕೊಡಬೇಕು? ಬಾಬಾ ದೊಡ್ಡ ಸಂತರೇ ಇರಬಹುದು. ಆದರೆ ನಾನು ಅವರ ಆಶ್ರಿತನಲ್ಲ" ಎಂದುಕೊಂಡರೂ, "ತನ್ನಿಂದ ದಕ್ಷಿಣೆ ತರಲು ಬೂಟಿಯಂತಹ ಶ್ರೀಮಂತರೇ ಬಾಬಾರಿಂದ ಕಳಿಸಲ್ಪಟ್ಟಿದ್ದಾರೆ. ದಕ್ಷಿಣೆ ಕೊಡದಿರಲು ಹೇಗೆ ಸಾಧ್ಯ?" ಎಂದೆಲ್ಲಾ ಯೋಚನೆ ಮಾಡುತ್ತಾ, ಮುಳೆ ಶಾಸ್ತ್ರಿ ತಾನೇ ಸ್ವತಃ ಬೂಟಿ ಜೊತೆಯಲ್ಲಿ ಮಸೀದಿಗೆ ಹೋಗಿ ಇರುವ ವಿಷಯವನ್ನು ಸರಿಯಾಗಿ ತಿಳಿದುಕೊಳ್ಳೋಣ ಎಂದು, ಮಾಡುತ್ತಿದ್ದ ಅಗ್ನಿಹೋತ್ರವನ್ನು ಅಷ್ಟಕ್ಕೇ ಬಿಟ್ಟು, ಉಟ್ಟ ಬಟ್ಟೆಗಳಲ್ಲೇ ಬೂಟಿಯೊಡನೆ ಮಸೀದಿಗೆ ಹೊರಟರು.
ಮಸೀದಿಗೆ ಬಂದಮೇಲೆ ತಾನಿನ್ನೂ ಮಡಿ ಬಟ್ಟೆಗಳಲ್ಲೇ ಇರುವುದು, ಅವರ ಗಮನಕ್ಕೆ ಬಂತು. ಮಡಿಯಲ್ಲಿ ಮಸೀದಿಯೊಳಕ್ಕೆ ಹೋಗುವುದು ಹೇಗೆ ಎಂದುಕೊಂಡು, ಸ್ವಲ್ಪ ದೂರದಲ್ಲೇ ನಿಂತು ಕೈ ಜೋಡಿಸಿ, ಬಾಬಾರ ಪಾದಗಳಿಗೆ ಹೂಗಳನ್ನು ಎಸೆದರು. ಕ್ಷಣಕಾಲ ಕಣ್ಣು ಮುಚ್ಚಿ ಮತ್ತೆ ಕಣ್ಣು ತೆರೆದು ನೋಡಿದರೆ, ಅಲ್ಲಿ ಬಾಬಾ ಕಾಣಲಿಲ್ಲ. ಅವರ ಜಾಗದಲ್ಲಿ ತನ್ನ ಗುರುವಾದ ಘೋಲಪ್ ಸ್ವಾಮಿ ಕಾಷಾಯ ವಸ್ತ್ರ ಧರಿಸಿ ಕೂತಿದ್ದಾರೆ. ಶಾಸ್ತ್ರಿ ತಮ್ಮ ಕಣ್ಣನ್ನು ತಾವೇ ನಂಬದಾದರು. ಸಮಾಧಿ ಹೊಂದಿದ್ದ ತನ್ನ ಗುರು ಹೇಗೆ ತಾನೇ ಇಲ್ಲಿ ಈಗ ಬರಬಲ್ಲರು? ತಾನೇನು ಕನಸು ಕಾಣುತ್ತಿಲ್ಲವಷ್ಟೆ? ಎಂದುಕೊಂಡರೆ ತಾವು ಎಚ್ಚರವಾಗಿಯೇ ಇದ್ದಾರೆ. ಸ್ವಲ್ಪಕಾಲ ಹಾಗೇ ನಿಂತುಕೊಂಡಿದ್ದು ತನ್ನ ಸಂದೇಹ ಸಂಶಯಗಳನ್ನೆಲ್ಲಾ ಹೊರದೂಡಿ, ಓಡಿ ಹೋಗಿ ತನ್ನ ಗುರುವಿನ ಪಾದಗಳಲ್ಲಿ ತಲೆಯಿಟ್ಟು ನಮಸ್ಕಾರಮಾಡಿ, ಕಣ್ಣುಮುಚ್ಚಿಕೊಂಡೇ ಎದ್ದು ತನ್ನ ಗುರುವಿನ ಸ್ತೋತ್ರ ಹೇಳಲು ಆರಂಭಿಸಿದರು. ಸುತ್ತಲಿದ್ದವರೆಲ್ಲರೂ ಆರತಿಯ ಹಾಡುಗಳನ್ನು ಹಾಡುತ್ತಿದ್ದರು. ಆರತಿಯಾದ ಮೇಲೆ ಹಾಗೇ ಕಣ್ಣು ಮುಚ್ಚಿ, ಮತ್ತೆ ತನ್ನ ಗುರುವಿನ ಪಾದಗಳಿಗೆ ನಮಸ್ಕಾರಮಾಡಿ ಎದ್ದರು. ಆಗ ಅವರು ಕಂಡದ್ದೇನು? ತನ್ನ ಗುರುಗಳನ್ನಲ್ಲ. ಬಾಬಾ ಅಲ್ಲಿ ಕೂತು ಮುಗುಳು ನಗೆ ನಗುತ್ತಾ ಕೈಚಾಚಿ, ಅವರನ್ನು ದಕ್ಷಿಣೆ ಕೇಳುತ್ತಿದ್ದಾರೆ. ಆ ಅನುಗ್ರಹ ಮೂರ್ತಿ ಸರ್ವಶಕ್ತಿಸ್ವರೂಪಿಯ ದರ್ಶನಾನುಭವ ಮಾಡುತ್ತಾ ಶಾಸ್ತ್ರಿಯ ಕಣ್ಣು ತುಂಬಿ ಮನಸ್ಸು ಉದ್ವೇಗಗೊಂಡಿತು. ಧಾರಾಕಾರವಾಗಿ ಕಣ್ಣೀರು ಸುರಿಸುತ್ತಾ ಶಾಸ್ತ್ರಿ ಬಾಬಾರ ಪಾದಗಳಲ್ಲಿ ಬಿದ್ದು ಯಾವ ಸಂಕೋಚ ಸಂದೇಹ ಸಂಶಯಗಳೂ ಇಲ್ಲದೆ ಮನಃಪೂರ್ವಕವಾಗಿ ದಕ್ಷಿಣೆ ನೀಡಿದರು. ತಾನು ತನ್ನ ಗುರು ಘೋಲಪ್ ಸ್ವಾಮಿಯವರನ್ನು ಬಾಬಾರ ಜಾಗದಲ್ಲಿ ಕಂಡಮೇಲೆ ತನಗೆ ಗುರುಗಳ ಬಗ್ಗೆ ಇದ್ದ ಸಂದೇಹಗಳೆಲ್ಲ ಕಳೆದವು ಎಂದು ಮನಸಾರ ಒಪ್ಪಿಕೊಂಡರು.
ಅಲ್ಲಿದ್ದ ಜನರಿಗೆ ಇದೆಲ್ಲವನ್ನೂ ಕಂಡಮೇಲೆ, ಬಾಬಾ ಲೆಂಡಿಗೆ ಹೋಗುತ್ತಾ ಕಾಷಾಯ ವಸ್ತ್ರಗಳನ್ನು ಧರಿಸೋಣ ಎಂದು ಏಕೆ ಹೇಳಿದರು ಎಂಬುದು ಅರ್ಥವಾಯಿತು. ಇಂತಹ ಲೀಲೆಯನ್ನು ಕಂಡ ಆ ಜನವೇ ಪುಣ್ಯವಂತರು. ಅಂತಹ ಲೀಲಾಮಾನುಷ ರೂಪಿಯಾದ ಬಾಬಾರಿಗೆ ಮತ್ತೊಮ್ಮೆ ಶಿರಸಾ ಮನಸಾ ನಮಸ್ಕರಿಸೋಣ.
ಡಾಕ್ಟರ್ ಕಥೆ
ಬಾಬಾರ ಭಕ್ತ ಸಮೂಹದಲ್ಲಿ ಒಬ್ಬ ಮಾಮಲತಗಾರ ಶಿರಡಿಗೆ ಹೋಗಿ ಬಾಬಾರ ದರ್ಶನ ಮಾಡಿಕೊಂಡು ಬರಬೇಕೆಂದುಕೊಂಡರು. ಅವರು ತಮ್ಮ ಡಾಕ್ಟರ್ ಸ್ನೇಹಿತರನ್ನು ಜೊತೆಯಲ್ಲಿ ಬರುವಂತೆ ಕೇಳಿದರು. ಆದರೆ ಆ ಡಾಕ್ಟರಿಗೆ ಒಬ್ಬ ಮಹಮ್ಮದೀಯನಿಗೆ ತಲೆಬಾಗಲು ಇಷ್ಟವಿರಲಿಲ್ಲ. ಆದ್ದರಿಂದ ಬರುವುದಿಲ್ಲ ಎಂದರು. ಮಾಮಲತದಾರ್, "ನಿಮ್ಮನ್ನು ನಮಸ್ಕಾರಮಾಡುವಂತೆ ಯಾರೂ ಬಲವಂತ ಮಾಡುವುದಿಲ್ಲ. ನನಗೆ ಜೊತೆಯಾಗಿ ಬನ್ನಿ" ಎಂದು ಅವರನ್ನು ಒಪ್ಪಿಸಿ, ಇಬ್ಬರೂ ಶಿರಡಿಗೆ ಹೊರಟರು. ಡಾಕ್ಟರ್ ವಾಡಾದಲ್ಲಿ ಎಲ್ಲರಿಗೂ ತನ್ನ ನಿಯಮ ಏನು ಎಂಬುದನ್ನು ಅರಿವುಮಾಡಿಕೊಟ್ಟು ತನ್ನನ್ನು ನಮಸ್ಕಾರಮಾಡಲು ಬಲವಂತ ಮಾಡಬಾರದೆಂದು ಕೇಳಿಕೊಂಡರು. ಸ್ವಲ್ಪ ಹೊತ್ತಾದ ಮೇಲೆ ಸ್ನೇಹಿತರಿಬ್ಬರೂ ಬಾಬಾರ ದರ್ಶನ ಮಾಡಲು ಮಸೀದಿಗೆ ಹೋದರು. ಇನ್ನೂ ಮಸೀದಿಯೊಳಕ್ಕೆ ಕಾಲಿಡುತ್ತಿದ್ದಂತೆಯೇ ಡಾಕ್ಟರ್ ಓಡಿಹೋಗಿ ಬಾಬಾರ ಪಾದಗಳಲ್ಲಿ ಬಿದ್ದರು. ಮಾಮಲತದಾರ ಹಾಗೂ ಸುತ್ತಮುತ್ತಲಿದ್ದವರೆಲ್ಲರೂ ಬೆರಗಾಗಿ ಏನು ನಡೆಯುತ್ತಿದೆ ಎಂಬುದನ್ನು ಊಹಿಸಲಾರದೇ ಹೋದರು. ಡಾಕ್ಟರ್ ಎದ್ದು ಬಂದ ಮೇಲೆ ಅವರನ್ನು ಎಲ್ಲರೂ ಬಾಬಾರ ಪಾದಗಳಲ್ಲಿ ಬಿದ್ದದ್ದು ಏಕೆ ಎಂದು ಕೇಳಿದರು. ಆತ ತಾನು ತನ್ನ ಆರಾಧ್ಯ ದೈವವಾದ ಶ್ರೀ ರಾಮ ಮೂರ್ತಿಯನ್ನು ಎದುರಿಗೆ ನೋಡಿದೆ. ಅದಕ್ಕೇ, ನಾನು ಶ್ರೀ ರಾಮನ ಪಾದಗಳಿಗೆ ನಮಸ್ಕಾರ ಮಾಡಿದೆ ಎಂದರು. ಮತ್ತೆ ಹಿಂತಿರುಗಿ ನೋಡಿದರೆ ಅಲ್ಲಿ ಅವರಿಗೆ ಬಾಬಾ ಕೃಪಾ ದೃಷ್ಟಿಯಿಂದ ನೋಡುತ್ತಾ, ನಗುತ್ತಾ ಕುಳಿತಿರುವುದು ಕಾಣಿಸಿತು. ಅವರಿಗೆ ಆಶ್ಚರ್ಯವಾಗಿ ಹೀಗೆ ಉದ್ಗಾರ ಮಾಡಿದರು: "ಇವರು ಮುಸ್ಲಿಮ್ ಆಗಿರಲು ಹೇಗೆ ಸಾಧ್ಯ? ಈತ ಪರಿಪೂರ್ಣ ಯೋಗ ಸಂಪನ್ನರೇ!" ಆಗ ಬಾಬಾ, "ಹುಚ್ಚಪ್ಪಾ, ಶ್ರೀ ರಾಮ ಎಲ್ಲಿಲ್ಲ? ಶ್ರದ್ಧಾ ಭಕ್ತಿಗಳಿಂದ ಕರೆದರೆ ಎಲ್ಲ ಕಡೆಯಲ್ಲೂ ಕಾಣಿಸಿಕೊಳ್ಳುತ್ತಾನೆ" ಎಂದರು.
ಮಾರನೆಯ ದಿನ ಡಾಕ್ಟರ್ ತನ್ನನ್ನು ತಾನೇ ಒಂದು ಪರೀಕ್ಷೆಗೆ ಗುರಿಪಡಿಸಿಕೊಂಡರು. "ಬಾಬಾ ಅವರಾಗಿಯೇ ನನ್ನನ್ನು ಕರೆಯುವವರೆಗೂ ನಾನು ಮಸೀದಿಗೆ ಹೋಗುವುದಿಲ್ಲ. ಅಲ್ಲಿಯವರೆಗೂ ಉಪವಾಸವಿರುತ್ತೇನೆ" ಎಂದು ವಾಡಾದಲ್ಲೇ ಕುಳಿತರು. ಹಾಗೆ ಮೂರುದಿನ ಕಳೆಯಿತು. ನಾಲ್ಕನೆಯ ದಿನ ಅವರ ಬಹಳ ಹಳೆಯ ಸ್ನೇಹಿತನೊಬ್ಬ ಅವರನ್ನು ಕಾಣಲು ಶಿರಡಿಗೆ ಬಂದ. ಅವನನ್ನು ಕಾಣುತ್ತಲೇ ಡಾಕ್ಟರಿಗೆ ಬಹಳ ಸಂತೋಷವಾಗಿ, ಅವನ ಜೊತೆಯಲ್ಲಿ ಮಾತನಾಡುತ್ತಾ ಬಾಬಾರ ದರ್ಶನಕ್ಕೆ ಮಸೀದಿಗೆ ಬಂದರು. ಇಬ್ಬರೂ ಬಾಬಾರ ಪಾದಗಳಿಗೆ ನಮಸ್ಕಾರ ಮಾಡಿದರು. ಆಗ ಬಾಬಾ ಡಾಕ್ಟರರನ್ನು ಕುರಿತು, "ನೀನು ಇಲ್ಲಿಗೆ ಹೇಗೆ ಬಂದೆ? ನಿನ್ನನ್ನು ಕರೆಯಲು ಯಾರಾದರೂ ಬಂದಿದ್ದರೆ?" ಎಂದು ಕೇಳಿದರು. ಅದನ್ನು ಕೇಳಿ, ಡಾಕ್ಟರ್ ಭಾವ ಪರವಶರಾಗಿಹೋದರು. ಅದೇ ದಿನ ರಾತ್ರಿ, ಮತ್ತೆ ಬಾಬಾ ಕನಸಿನಲ್ಲಿ ಕಾಣಿಸಿಕೊಂಡು, ಅವರನ್ನು ಅನುಗ್ರಹಿಸಿದರು. ಅದು ಆ ಡಾಕ್ಟರಿಗೆ ಆದ ಆ ರೀತಿಯ ಮೊದಲನೆಯ ಅನುಭವ. ಆತ ಬಾಬಾ ಅನುಮತಿ ಪಡೆದು, ತನ್ನ ಊರಿಗೆ ಹೋದಮೇಲೂ ೧೫ ದಿನಗಳವರೆಗೆ ಆ ಅನುಭವ ಆತನಲ್ಲಿ ಹಾಗೇ ಇತ್ತು. ಇದರಿಂದ ಅವರ ಬಾಬಾರಲ್ಲಿನ ಭಕ್ತಿ ಸ್ಥಿರವಾಯಿತು.
ಇದರಿಂದ ಕಲಿಯಬೇಕಾದ ಪಾಠವೆಂದರೆ, ನಾವು ಯಾರನ್ನು ನಮ್ಮ ಗುರು ಎಂದು ನಂಬುತ್ತೇವೆಯೋ ಅವರಲ್ಲಿ ಪೂರ್ಣ ಶ್ರದ್ಧೆಯಿಂದ ನಂಬಿಕೆಯಿಡಬೇಕು. ಅವರ ಪ್ರೀತಿವಿಶ್ವಾಸಗಳನ್ನು ಪಡೆದುಕೊಳ್ಳಬೇಕು. ಆಗ ಆ ಗುರುವು ತನ್ನ ಶಿಷ್ಯನ ನ್ಯೂನತೆಗಳನ್ನು ತಿಳಿದುಕೊಂಡು, ಅವನ್ನು ತಿದ್ದಿ, ಅವನನ್ನು ನೇರವಾದ ಮಾರ್ಗದಲ್ಲಿ ನಡೆಸುತ್ತಾರೆ. ಇಂತಹ ಸರಿ ಮಾರ್ಗಗಳನ್ನೆಲ್ಲ ಬಾಬಾ ತಿಳಿದಿದ್ದರಾದದ್ದರಿಂದಲೇ ಅವರು ಯಾರಿಗೂ ವಾಚಾ ಉಪದೇಶಗಳನ್ನು ಕೊಡಲಿಲ್ಲ. ಆದರೆ ಒಬ್ಬೊಬ್ಬರಿಗೂ, ಅವರವರಿಗೆ ಅರ್ಥವಾಗುವಂತಹ ಲೀಲೆಗಳಿಂದ, ಅದನ್ನು ತೋರಿಸಿಕೊಡುತ್ತಿದ್ದರು. ಅಂತಹ ಕಾರ್ಯರೂಪಿ ಗುರುವಾದ ಬಾಬಾಗೆ ಮತ್ತೆ ಮತ್ತೆ ನಮಸ್ಕರಿಸಿ ಅನುಗ್ರಹೀತರಾಗೋಣ.
ಇದರೊಂದಿಗೆ ಸಂತರ ಜೀವಿತೋದ್ದೇಶ ಇತ್ಯಾದಿ ವಿಷಯಗಳನ್ನು ಕುರಿತು ಹೇಳುವ ಹನ್ನೆರಡನೆಯ ಅಧ್ಯಾಯ ಮುಗಿಯಿತು. ಮುಂದಿನ ಅಧ್ಯಾಯದಲ್ಲಿ ಹೇಮಾಡ್ ಪಂತ್ ಬಾಬಾರ ಮತ್ತಷ್ಟು ಲೀಲೆಗಳು, ಭೀಮಾಜಿ ಪಾಟೀಲ್, ಬಾಲಾ ಶಿಂಪೆ, ಬಾಪೂ ಸಾಹೇಬ್ ಬೂಟಿ, ಕಾಕಾ ಮಹಾಜನಿ ಅವರ ಅನುಭವಗಳು ಇತ್ಯಾದಿ ವಿಷಯಗಳನ್ನು ಹೇಳುತ್ತಾರೆ.
||ಶ್ರೀ ಸದ್ಗುರು ಸಾಯಿನಾಥಾರ್ಪಣಮಸ್ತು||ಶುಭಂ ಭವತು||
||ಓಂ ಶಾಂತಿಃ ಶಾಂತಿಃ ಶಾಂತಿಃ||
||ಓಂ ಶಾಂತಿಃ ಶಾಂತಿಃ ಶಾಂತಿಃ||
No comments:
Post a Comment