||ಶ್ರೀ ಸಾಯಿ ಸಚ್ಚರಿತ್ರೆ||
||ಒಂಭತ್ತನೆಯ ಅಧ್ಯಾಯ||
||ಷಿರ್ಡಿಯಾತ್ರೆ ಮತ್ತು ಇತರ ಕಥೆಗಳು||
ಶ್ರೀ ಗಣೇಶಾಯ ನಮಃ ಶ್ರೀ ಸರಸ್ವತಯೇ ನಮಃ
ಶ್ರೀ ವೆಂಕಟೇಶಾಯ ನಮಃ ಶ್ರೀ ಸಾಯಿನಾಥಾಯ ನಮಃ
ಶ್ರೀ ಸದ್ಗುರುಭ್ಯೋನ್ನಮಃ
||ಒಂಭತ್ತನೆಯ ಅಧ್ಯಾಯ||
||ಷಿರ್ಡಿಯಾತ್ರೆ ಮತ್ತು ಇತರ ಕಥೆಗಳು||
ಶ್ರೀ ಗಣೇಶಾಯ ನಮಃ ಶ್ರೀ ಸರಸ್ವತಯೇ ನಮಃ
ಶ್ರೀ ವೆಂಕಟೇಶಾಯ ನಮಃ ಶ್ರೀ ಸಾಯಿನಾಥಾಯ ನಮಃ
ಶ್ರೀ ಸದ್ಗುರುಭ್ಯೋನ್ನಮಃ
ಈ ಅಧ್ಯಾಯದಲ್ಲಿ ಹೇಮಾಡ್ ಪಂತ್, ಬಾಬಾರ ಸಲಹೆಗಳನ್ನು ಪಾಲಿಸುವುದರ, ಪಾಲಿಸದೇ ಇರುವುದರ ಪರಿಣಾಮ, ಭಿಕ್ಷೆ ಮತ್ತು ಅದರ ಅವಶ್ಯಕತೆ, ತರ್ಖಡ್ ಸಂಸಾರ ಮತ್ತು ಇತರ ವಿಷಯಗಳನ್ನು ಹೇಳುತ್ತಾರೆ.
ಬಾಬಾರ ಸಲಹಾ ಪಾಲನೆ, ಅದರ ಪ್ರಾಮುಖ್ಯತೆ
ಬಾಬಾ ಶಿರಡಿಯಲ್ಲಿ ೬೦ ವರ್ಷಗಳಿಗಿಂತಲು ಹೆಚ್ಚಾಗಿ ನೆಲೆಸಿದ್ದರು. ಅವರ ಇರುವಿಕೆಯಿಂದ ವಿಶೇಷತೆಯನ್ನು ಪಡೆದ ಶಿರಡಿ, ಭಕ್ತರಿಗೆ ಒಂದು ಯಾತ್ರಾ ಸ್ಥಳವಾಯಿತು. ಅದರ ಇನ್ನೊಂದು ವೈಶಿಷ್ಟ್ಯವೆಂದರೆ ಶಿರಡಿಗೆ ಬರುವುದೂ, ಅಲ್ಲಿಂದ ಹೋಗುವುದೂ ಬಾಬಾರ ಅನುಮತಿಯಿಲ್ಲದೆ ಸಾಧ್ಯವಿರಲಿಲ್ಲ. ಬಾಬಾ ಇಚ್ಛಿಸಿದರೆ ಮಾತ್ರ ಶಿರಡಿಯ ಪ್ರಯಾಣ ಸಾಧ್ಯವಾಗುತ್ತಿತ್ತು. ಬಾಬಾರ ಅನುಮತಿಯಿಲ್ಲದೆ ಶಿರಡಿಯನ್ನು ಬಿಟ್ಟರೆ ಅವರು ತಮ್ಮನ್ನು ತಾವೇ ಕಷ್ಟಗಳಳಿಗೆ ಗುರಿಮಾಡಿಕೊಂಡಹಾಗೆ. ಹಲವಾರು ಜನರಿಗೆ ಇದರ ಅನುಭವ ಆಗಿದೆ, ಆಗುತ್ತಿದೆ.
ತಾತ್ಯಾ ಕೋತೆ ಪಾಟೀಲ್ ಒಂದುಸಲ ಕೋಪರಗಾಂವ್ ಸಂತೆಗೆ ಹೋಗಲು ಆತುರಾತುರವಾಗಿ ಬಾಬಾರ ಅನುಮತಿ ಪಡೆಯಲು ಬಂದರು. ಬಾಬಾ "ಆತುರವೇಕೆ? ಆಮೇಲೆ ಹೋದರಾಯಿತು" ಎಂದರು. ತಾತ್ಯಾ ಅವರ ಮಾತನ್ನು ಕೇಳದೇ ಹೊರಡುವುದರಲ್ಲಿದ್ದಾಗ, ಬಾಬಾ, "ಹೋಗಲಿ. ಜೊತೆಗೆ ಶ್ಯಾಮಾರನ್ನಾದರೂ ಕರೆದುಕೊಂಡು ಹೋಗು" ಎಂದರು. ತಾತ್ಯಾ ಆ ಮಾತನ್ನೂ ಲಕ್ಷಿಸದೆ ಕೋಪರಗಾಂವ್ಗೆ ಟಾಂಗಾದಲ್ಲಿ ಹೊರಟರು. ಎರಡು ಕುದುರೆಗಳಲ್ಲಿ ಒಂದು ಬಹಳ ಚುರುಕಾಗಿತ್ತು. ಮೊದಮೊದಲು ಸಲೀಸಾಗಿ ಓಡುತ್ತಿದ್ದ ಆ ಕುದುರೆ ಸಾವೂಲ್ ಭಾವಿ ದಾಟುತ್ತಲೂ ಎಡವಿ ಮುಗ್ಗರಿಸಿ ಬಿತ್ತು. ಬಾಬಾರ ಆಶೀರ್ವಾದದಿಂದ ತಾತ್ಯಾಗೆ ಏನೂ ಪೆಟ್ಟು ತಾಕಲಿಲ್ಲ. ಆದರೆ ಆ ತಕ್ಷಣವೇ ಆತನಿಗೆ ಬಾಬಾರ ಸಲಹೆ ನೆನಪಾಯಿತು. ಇನ್ನೊಂದುಸಲ ಬಾಬಾರ ಸಲಹೆಯನ್ನುಪೇಕ್ಷಿಸಿ ಟಾಂಗಾನಲ್ಲಿ ಕೊಲಹಾರ್ಗೆ ಹೊರಟಾಗಲೂ ಅಪಘಾತಕ್ಕೀಡಾದರು. ಆಗಲೂ ಬಾಬಾರ ಆಶೀರ್ವಾದವೇ ಅವರನ್ನು ಕಾಪಾಡಿತು.
ಯೂರೋಪಿಯನ್ ಒಬ್ಬನ ಕಥೆ
ನಾನಾಸಾಹೇಬ್ ಚಾಂದೋರ್ಕರರಿಂದ ಪರಿಚಯ ಪತ್ರ ಪಡೆದು ಒಬ್ಬ ಯೂರೋಪಿಯನ್ ಗೃಹಸ್ಥ ಬೊಂಬಾಯಿಂದ ಶಿರಡಿಗೆ ಬಾಬಾರ ದರ್ಶನಕ್ಕೆ ಬಂದ. ಗುಡಾರವೊಂದನ್ನು ಹಾಕಿ ಅದರಲ್ಲಿ ಉಳಿದ. ಬಾಬಾರ ದರ್ಶನ ಮಾಡಿ ಅವರ ಪಾದ ಮುಟ್ಟಿ, ಕೈಗೆ ಮುತ್ತಿಡಬೇಕೆಂದು ಅವನ ಆಸೆ. ಆದರೆ ಅವನನ್ನು ಮಸೀದಿಯ ಅಂಗಳದಲ್ಲಿ ಕೂತು ದರ್ಶನ ಮಾಡಿಕೊಳ್ಳಬೇಕೆಂದು ಬಾಬಾ ಆಜ್ಞಾಪಿಸಿದರು. ಮೂರುಸಲ ಪ್ರಯತ್ನಿಸಿದರೂ, ಬಾಬಾ ಅವನನ್ನು ಹತ್ತಿರಕ್ಕೆ ಬರಗೊಡಲಿಲ್ಲ. ನಿರಾಶೆಯಿಂದ ಶಿರಡಿ ಬಿಟ್ಟು ಹೊರಡುವ ಯೋಚನೆ ಮಾಡಿದ. ಬಾಬಾರ ಅನುಮತಿ ಕೇಳಿದಾಗ ಅವರು, "ಆತುರ ಬೇಡ. ನಾಳೆ ಹೋಗಬಹುದು" ಎಂದರು. ಅವನಿಗೆ ಅಲ್ಲಿದ್ದವರೆಲ್ಲಾ ಬಾಬಾರ ಮಾತನ್ನು ಅಲ್ಲಗಳೆಯಬೇಡವೆಂದು ಹೇಳಿದರು. ಅದನ್ನು ಕೇಳದೆ ಅವನು ಅಂದೇ ಶಿರಡಿ ಬಿಟ್ಟು ಹೊರಟ. ಮೊದಮೊದಲು ಗಾಡಿ ಸುಗಮವಾಗಿ ಓಡುತ್ತಿದ್ದರೂ ಸಾವೂಲ್ ದಾಟುತ್ತಿರುವಾಗ, ಹಠಾತ್ತಾಗಿ ಒಂದು ಸೈಕಲ್ ಅಡ್ಡ ಬಂದು, ಕುದುರೆ ಹೆದರಿ ಟಾಂಗಾ ತಲೆಕೆಳಗಾಯಿತು. ಆ ಗೃಹಸ್ಥ ಗಾಡಿಯ ಜೊತೆಗೆ ಸ್ವಲ್ಪ ದೂರ ಎಳೆಯಲ್ಪಟ್ಟ. ಸುಮಾರಾಗಿ ಗಾಯಗೊಂಡ ಅವನನ್ನು ಕೋಪರಗಾಂವ್ ಆಸ್ಪತ್ರೆಗೆ ಸೇರಿಸಬೇಕಾಯಿತು. ಬಾಬಾರ ಮಾತನ್ನು ಅಲ್ಲಗಳೆದುದರಿಂದ ಅವನಿಗೆ ಆ ಕಡೆ ಬೊಂಬಾಯಿಯೂ ಇಲ್ಲ ಈ ಕಡೆ ಶಿರಡಿಯೂ ಇಲ್ಲ ಎಂದಾಯಿತು.
ಭಿಕ್ಷೆಯ ಅವಶ್ಯಕತೆ
ಬಾಬಾ ದೊಡ್ಡ ಸಂತರು, ಅವರನ್ನು ದೇವರು ಎನ್ನುತ್ತಾರೆ, ಅವರು ಭಕ್ತರ ಆಸೆಗಳನ್ನು ತೀರಿಸುತ್ತಾರೆ ಎಂದೆಲ್ಲ ಹೇಳುವುದಾದರೆ ಅವರೇಕೆ ಭಿಕ್ಷೆ ಬೇಡಬೇಕಾಗಿತ್ತು? ಎಂಬ ಪ್ರಶ್ನೆ ಉಂಟಾಗುವುದು ಸಹಜ. ಇದಕ್ಕೆ ಉತ್ತರ ಈ ರೀತಿಯಲ್ಲಿ ಹೇಳಬಹುದು. ಭಿಕ್ಷೆ ಎತ್ತಲು ಯಾರು ಅರ್ಹರು? ನಮ್ಮ ಶಾಸ್ತ್ರಗಳ ಪ್ರಕಾರ ಎಲ್ಲವನ್ನೂ ಬಿಟ್ಟು ವಿರಾಗಿ, ಸನ್ಯಾಸಿಗಳಾಗಿ ಜೀವಿಸುವವರು ತಾವೇ ಅನ್ನ ಮಾಡಿಕೊಳ್ಳುವುದಿಲ್ಲ. ಅಂತಹವರು ಭಿಕ್ಷಾರ್ಹರು. ಸಂಸಾರಿಗಳಾದವರಿಗೆ, ಅಂತಹ ಸನ್ಯಾಸಿಗಳಿಗೆ ಆಹಾರವನ್ನು ನೀಡುವ ಜವಾಬ್ದಾರಿಯಿದೆ. ಬಾಬಾ ಅಂತಹ ಸನ್ಯಾಸಿ. ಆದರಿಂದ ಅವರು ಭಿಕ್ಷೆ ಬೇಡಲು ಅರ್ಹರು.
ನಾವು ಪ್ರತಿದಿನ ಆಹಾರ ತಯಾರಿಸುವಾಗ ೫ ತರಹೆಯ ಪಾಪಗಳು ಆಗುತ್ತವೆ - ಕುಟ್ಟುವುದು (ಕುಂಡಣಿ), ಅರೆಯುವುದು (ಪೇಷಣಿ), ಪಾತ್ರೆ ಪಡಗಗಳನ್ನು ತೊಳೆಯುವುದು (ಉದಕುಂಭಿ), ಗುಡಿಸುವುದು (ಮಾರ್ಜನಿ), ಒಲೆ ಹೊತ್ತಿಸಿ ಉರಿಸುವುದು (ಚಿಲ್ಲಿ). ಈ ಕಾರ್ಯಗಳನ್ನು ಮಾಡುವಾಗ ತಿಳಿದೋ ತಿಳಿಯದೆಯೋ ಹಲವಾರು ಕ್ರಿಮಿ ಕೀಟಗಳ ಸಾವಿಗೆ ಕಾರಣಕರ್ತರಾಗುತ್ತೇವೆ. ಅವುಗಳನ್ನು ಕೊಂದ ಪಾಪ ನಮಗೆ ಬರುತ್ತದೆ. ಈ ಪಾಪಗಳ ಪರಿಹಾರಕ್ಕೆ ೫ ಯಜ್ಞಗಳನ್ನು ಹೇಳಲಾಗಿದೆ. ಅವು ಶಾಸ್ತ್ರ ಪುರಾಣಾದಿಗಳ ಓದುವಿಕೆ (ಬ್ರಹ್ಮ ಯಜ್ಞ), ಜಪ, ತಪ, ಪೂಜೆ ಮುಂತಾದುವನ್ನು ಶ್ರದ್ಧೆಯಿಂದ ಮಾಡುವುದು (ದೇವ ಯಜ್ಞ), ಪಿತೃಗಳ ಪೂಜೆ ಮಾಡುವುದು (ಪಿತೃ ಯಜ್ಞ), ಭೂತಾದಿಗಳ ಪ್ರೀತ್ಯರ್ಥ ಮಾಡಬೇಕಾದ ಕಾರ್ಯಗಳು (ಭೂತ ಯಜ್ಞ), ಅತಿಥಿಗಳಾಗಿ ಬಂದವರಿಗೆ ಊಟೋಪಚಾರಗಳನ್ನು ಮಾಡುವುದು (ಅತಿಥಿ ಯಜ್ಞ). ಈ ಯಜ್ಞಗಳ ಆಚರಣೆಯಿಂದ ಸಂಸಾರಿಯಾದವನು ತನ್ನ ಪಾಪ ಪರಿಹಾರ ಮಾಡಿಕೊಳ್ಳುತ್ತಾನೆ.
ಶಿರಡಿಯ ಜನ ಬಾಬಾರಿಗೆ ಭಿಕ್ಷೆ ನೀಡುವುದರ ಮೂಲಕ ತಮ್ಮ ಈ ಎಲ್ಲ ಪಾಪಗಳನ್ನು ಹರಿಸಿಕೊಳ್ಳುತ್ತಿದ್ದರು. ಬಾಬಾ ಯಾರಿಂದಲೂ ಏನನ್ನೂ ಅಪೇಕ್ಷಿಸುತ್ತಿರಲಿಲ್ಲ. ಯಾರು ಏನು ಕೊಟ್ಟರೆ ಅದನ್ನು ಸ್ವೀಕರಿಸಿ ಅವರನ್ನು ಆಶೀರ್ವದಿಸುತ್ತಿದ್ದರು.
ಬಾಬಾಸಾಹೇಬ್ ತರ್ಖಡರ ಕಥೆ
ರಾಮಚಂದ್ರ ಆತ್ಮಾರಾಮ್ ತರ್ಖಡ್ (ಇವರನ್ನು ಬಾಬಾಸಾಹೇಬ್ ತರ್ಖಡ್ ಎಂದೂ ಕರೆಯುತ್ತಿದ್ದರು) ಪ್ರಾರ್ಥನಾ ಸಮಾಜಕ್ಕೆ ಸೇರಿದವರು. ವಿಗ್ರಹ ಪೂಜೆ ಒಪ್ಪುತ್ತಿರಲಿಲ್ಲ. ಆತನ ಹೆಂಡತಿ, ಸತ್ಯಭಾಮಾ ಬಾಯಿ ಮತ್ತು ಮಗ ಜ್ಯೋತೀಂದ್ರ, ಬಾಬಾರ ಪರಮ ಭಕ್ತರು. ಜ್ಯೋತೀಂದ್ರ ಮನೆಯಲ್ಲಿ ಒಂದು ಮಂದಿರ ಮಾಡಿ, ಬಾಬಾ ಚಿತ್ರಪಟವನ್ನು ಅದರಲ್ಲಿಟ್ಟು ದಿನವೂ ಮೂರುಸಲ ಆ ಪಟಕ್ಕೆ ಪೂಜೆ ಮಾಡುತ್ತಿದ್ದ. ಬಾಬಾರಿಗೆ ನೈವೇದ್ಯ ಆದ ಹೊರತೂ ತಾನು ಏನನ್ನೂ ತಿನ್ನುತ್ತಿರಲಿಲ್ಲ.
ಒಂದುಸಲ, ತರ್ಖಡರ ಹೆಂಡತಿ ಸತ್ಯಭಾಮಾ ಬಾಯಿ, ಶಿರಡಿಗೆ ಹೋಗಬೇಕೆಂದುಕೊಂಡರು. ತರ್ಖಡರು ಆಕೆಯ ಜೊತೆಯಲ್ಲಿ ಹೋಗಲು ಸಾಧ್ಯವಿಲ್ಲದುದರಿಂದ, ಅವರು ಮಗನನ್ನು ಜೊತೆಯಲ್ಲಿ ಹೋಗುವಂತೆ ಹೇಳಿದರು. ಆದರೆ ಅವನು, ತಾನು ಹೊರಟರೆ ಬಾಬಾ ಪೂಜೆ ನಿಂತುಹೋಗುತ್ತದೆ, ತಂದೆ ಪ್ರಾರ್ಥನಾ ಸಮಾಜಕ್ಕೆ ಸೇರಿದವರಾದ್ದರಿಂದ ಪೂಜೆ ಮಾಡುವುದಿಲ್ಲ ಎಂದು, ಹೋಗಲು ಒಪ್ಪಲಿಲ್ಲ. ಅವನು ಮಾಡುತ್ತಿದ್ದ ರೀತಿಯಲ್ಲಿಯೇ, ತಾವು ದಿನವೂ ಪೂಜೆ ಮಾಡುತ್ತೇನೆಂದು ತರ್ಖಡ್ ವಾಗ್ದಾನ ಮಾಡಿದಮೇಲೆ, ಅವನು ಶಿರಡಿಗೆ ಹೋಗಲು ಒಪ್ಪಿಕೊಂಡ. ತಾಯಿ ಮಗ ಇಬ್ಬರೂ ಶುಕ್ರವಾರ ರಾತ್ರಿ ಶಿರಡಿಗೆ ಹೊರಟರು.
ಮಗನಿಗೆ ಮಾತುಕೊಟ್ಟಂತೆ ಶನಿವಾರ ಬೆಳಗ್ಗೆ, ತರ್ಖಡ್ ಬೇಗ ಎದ್ದು ಸ್ನಾನಮಾಡಿ ತನ್ನ ಮಗ ಮಾಡುತ್ತಿದ್ದಂತೆಯೇ ಬಾಬಾ ಪೂಜೆ ಮಾಡಿ ಕಲ್ಲು ಸಕ್ಕರೆ ನೈವೇದ್ಯ ಮಾಡಿ ಬಾಬಾರಲ್ಲಿ, "ಬಾಬಾ, ನನ್ನ ಮಗ ಮಾಡುತ್ತಿದ್ದಂತೆ ನಿನ್ನ ಪೂಜೆ ಮಾಡಿದ್ದೇನೆ. ಅದು ಬರಿಯ ಆಡಂಬರದ ಪೂಜೆ ಆಗದಿರುವಂತೆ ನನ್ನನ್ನು ಅನುಗ್ರಹಿಸು" ಎಂದು ವಿನಂತಿ ಮಾಡಿಕೊಂಡರು. ಊಟಕ್ಕೆ ಮುಂಚೆ ನೈವೇದ್ಯ ವಿನಿಯೋಗವಾಯಿತು.
ಇದೇ ರೀತಿ ಸೋಮವಾರದವರೆಗೂ ಯಾವುದೇ ಅಡಚಣೆಗಳಿಲ್ಲದೆ ಪೂಜೆ ನಡೆಯಿತು. ಮಂಗಳವಾರ ಊಟಕ್ಕೆ ಕೂತಾಗ ನೈವೇದ್ಯ ಕಾಣಲಿಲ್ಲ. ಸೇವಕನನ್ನು ಕೇಳಿದರೆ, “ಈವತ್ತು ಬೆಳಗ್ಗೆ ನೀವು ನೈವೇದ್ಯ ಇಡಲಿಲ್ಲ” ಎಂದ. ತರ್ಖಡ್ಗೆ ವಿಪರೀತ ಪಶ್ಚಾತ್ತಾಪವಾಯಿತು. ಬಾಬಾರ ಚಿತ್ರಪಟದ ಮುಂದೆ ಕಾಲೂರಿ, "ಬಾಬಾ, ನನ್ನ ಈ ತಪ್ಪನ್ನು ಕ್ಷಮಿಸು. ನನ್ನ ಅರಿಕೆಯಂತೆ ಪೂಜೆ ಮಾಡದೆ ಮರೆಯುವಂತೆ ನೀನೇ ಮಾಡಿದೆ" ಎಂಬ ತಪ್ಪೊಪ್ಪಿಗೆ ನೀಡಿ, ನಡೆದದ್ದನ್ನೆಲ್ಲಾ ವಿವರಿಸಿ, ಶಿರಡಿಯಲ್ಲಿದ್ದ ಮಗನಿಗೆ ತನ್ನ ಪರವಾಗಿ ಬಾಬಾರ ಕ್ಷಮೆ, ಕೇಳಿಕೊಳ್ಳುವಂತೆ ಒಂದು ಕಾಗದ ಬರೆದರು. ಅದೇ ಸಮಯದಲ್ಲಿ ಶಿರಡಿಯಲ್ಲಿ ಮಧ್ಯಾಹ್ನದ ಆರತಿ ಆರಂಭವಾಗುವುದರಲ್ಲಿತ್ತು. ಶ್ರೀಮತಿ ತರ್ಖಡ್ ಹಾಗೂ ಅವರ ಮಗ ಆರತಿಗೆ ಹೋಗಿದ್ದರು. ಆಗ ಬಾಬಾ ಆಕೆಯನ್ನು ಕರೆದು, "ಎಂದಿನಂತೆ ಇಂದೂ ಬಾಂದ್ರಾದಲ್ಲಿ ನಿಮ್ಮ ಮನೆಗೆ ಹೋಗಿದ್ದೆ. ಬಾಗಿಲು ಮುಚ್ಚಿತ್ತು. ಆದರೂ ಹೇಗೋ ಮಾಡಿ ಒಳಕ್ಕೆ ಹೋಗಿ ತಿನ್ನುವುದಕ್ಕೆ ಏನಾದರೂ ಸಿಕ್ಕುವುದೇನೋ ಎಂದು ನೋಡಿದೆ. ಏನೂ ಸಿಕ್ಕಲಿಲ್ಲ. ಹಸಿವಿನಿಂದ ಹಿಂತಿರುಗಿದೆ" ಎಂದು ಹೇಳಿದರು. ಬಾಬಾ ಹೇಳುತ್ತಿರುವುದೇನು ಎಂದು ಆಕೆಗೆ ಅರ್ಥವಾಗಲಿಲ್ಲ. ಆದರೆ ಆಕೆಯ ಮಗನಿಗೆ ಮನೆಯಲ್ಲಿ ಏನೋ ಅಚಾತುರ್ಯವಾಗಿದೆಯೆಂದು ಅರ್ಥವಾಯಿತು. ಕೂಡಲೆ ಬಾಬಾರನ್ನು ಮನೆಗೆ ಹಿಂತಿರುಗಲು ಅನುಮತಿ ಬೇಡಿದ. ಬಾಬಾ "ಬೇಡ. ಇಲ್ಲೇ ಪೂಜೆ ಮಾಡಿಕೋ" ಎಂದರು. ತಕ್ಷಣವೆ ಆ ಹುಡುಗ ಶಿರಡಿಯಲ್ಲಿ ನಡೆದುದನ್ನೆಲ್ಲಾ ವಿವರಿಸಿ, ತಂದೆಗೆ ಒಂದು ಕಾಗದ ಬರೆದು, ಪೂಜೆಯಲ್ಲಿ ಯಾವುದೇ ವಿಧವಾದ ಅಚಾತುರ್ಯವಾಗದಂತೆ ನೋಡಿಕೊಳ್ಳಲು ಕೇಳಿಕೊಂಡ.
ಇಬ್ಬರ ಕಾಗದಗಳೂ ಮಾರನೆಯ ದಿನ ಅವರವರ ಕೈಸೇರಿತು. ಯಾರಿಗೂ ಬಾಬಾರಿಂದ ಏನನ್ನೂ ಮುಚ್ಚಿಡಲು ಸಾಧ್ಯವಿಲ್ಲ. ಅವರು ಯಾವಾಗಲೂ ಭಕ್ತರ ನಡೆಗಳನ್ನು ಗಮನಿಸುತ್ತಲೇ ಇರುತ್ತಾರೆ ಎಂದು ಅರ್ಥವಾಯಿತು.
ಬಾಬಾರಿಗೆ ಶ್ರೀಮತಿ ತರ್ಖಡ್ ಅವರ ಊಟ
ಶಿರಡಿಯಲ್ಲಿದ್ದಾಗ ಶ್ರೀಮತಿ ತರ್ಖಡ್, ಅವರ ಸ್ನೇಹಿತರ ಮನೆಯಲ್ಲಿದ್ದರು. ಒಂದುಸಲ ಅವರು ಊಟಕ್ಕೆ ಕೂತು ಇನ್ನೇನು ಊಟ ಆರಂಭಿಸಬೇಕೆಂದುಕೊಂಡಾಗ, ಹಸಿದ ನಾಯಿಯೊಂದು ಅಲ್ಲಿಗೆ ಬಂತು. ಶ್ರೀಮತಿ ತರ್ಖಡ್ ಆ ನಾಯಿಗೆ ಒಂದು ರೊಟ್ಟಿ ಕೊಟ್ಟರು. ನಾಯಿ ರೊಟ್ಟಿ ತಿಂದು ಹೋಗುತ್ತಿದ್ದಹಾಗೆಯೇ, ಮೈಯೆಲ್ಲಾ ಕೊಚ್ಚೆಯಾಗಿದ್ದ ಹಂದಿಯೊಂದು, ಬಂತು. ಅದಕ್ಕೂ ಆಕೆ ಒಂದು ರೊಟ್ಟಿ ಕೊಟ್ಟರು. ಹಂದಿ ಅದನ್ನು ತಿಂದುಕೊಂಡು ಹೋಯಿತು. ಊಟವಾದಮೇಲೆ ಆಕೆಗೆ ಈ ವಿಷಯ ಪೂರ್ತಿಯಾಗಿ ಮರೆತುಹೋಯಿತು.
ಎಂದಿನಂತೆ ಆಕೆ ಬಾಬಾರನ್ನು ಕಾಣಲು ಮಸೀದಿಗೆ ಹೋದಾಗ, ಬಾಬಾ ಬಹು ಪ್ರೀತಿ ವಿಶ್ವಾಸಗಳಿಂದ, "ಅಮ್ಮಾ, ಈ ದಿನ ನೀನು ನನಗೆ ಹೊಟ್ಟೆತುಂಬಾ ಊಟ ಕೊಟ್ಟೆ. ನನ್ನ ಹಸಿವು ಪೂರ್ತಿ ಇಂಗಿತು. ಇದನ್ನೇ ಯಾವಾಗಲೂ ಅಭ್ಯಾಸ ಮಾಡಿಕೋ. ಇದರಿಂದ ಒಳ್ಳೆಯದಾಗುತ್ತದೆ. ಹಸಿದವರಿಗೆ ಮೊದಲು ಊಟ ಕೊಟ್ಟು, ನೀನು ಆಮೇಲೆ ಊಟ ಮಾಡು. ಅದರಿಂದ ಯಾವಾಗಲೂ ಅನುಗ್ರಹಿಸಲ್ಪಡುತ್ತೀಯೆ" ಎಂದು ಹೇಳಿದರು. ಇದರ ಹಿಂದು ಮುಂದು ಏನೂ ಅರ್ಥವಾಗದೆ ಆಕೆ, " ಬಾಬಾ, ನೀವು ಹೇಳುವುದೇನೂ ಅರ್ಥವಾಗುತ್ತಿಲ್ಲ. ನಾನು ನಿಮಗೆ ಯಾವಾಗ ಊಟ ಕೊಟ್ಟೆ? ಸಗುಣ ಮೇರೂ ನಾಯಕರ ಹೋಟೆಲಿನಲ್ಲಿ ನಾನೇ ಹಣಕೊಟ್ಟು ಊಟ ಮಾಡುತ್ತಿದ್ದೇನೆ. ಅಡಿಗೆ ಮಾಡಿದ್ದು ಯಾವಾಗ, ನಿಮಗೆ ಊಟ ಮಾಡಿಸಿದ್ದು ಯಾವಾಗ, ನನಗೊಂದೂ ಅರ್ಥವಾಗುತ್ತಿಲ್ಲ" ಎಂದರು. ಬಾಬಾ, ಅತಿಶಯ ಪ್ರೇಮದಿಂದ, ಆಕೆಗೆ ಹೇಳಿದರು, "ಇಂದು ನೀನು ಕೊಟ್ಟ ರುಚಿಯಾದ ರೊಟ್ಟಿಗಳಿಂದ, ನನಗೆ ಬಹಳ ಸಂತೋಷವಾಯಿತು. ನೀನು ನಾಯಿಗೂ ಹಂದಿಗೂ ತೋರಿದ ಅನುಕಂಪದಿಂದ ನನಗೆ ಅತೀವ ತೃಪ್ತಿ ಸಂತೋಷಗಳಾದವು. ನನ್ನಲ್ಲಿರುವ ಆತ್ಮವೂ ಅವುಗಳಲ್ಲಿರುವ ಆತ್ಮವೂ ಒಂದೇ ಎಂದು ತಿಳಿದುಕೋ. ನಾನೇ ಅನೇಕ ರೂಪಗಳನ್ನು ವಹಿಸುತ್ತೇನೆ. ಯಾರು ನನ್ನನ್ನು ಎಲ್ಲ ರೂಪಗಳಲ್ಲೂ ಬೇಧವಿಲ್ಲದೆ ನೋಡುತ್ತಾರೋ ಅವರು ನನ್ನ ಅತ್ಯಂತ ಪ್ರೀತಿಪಾತ್ರರು. ನಾನು ಬೇರೆ ನೀನು ಬೇರೆ ಎಂಬ ದ್ವೈತ ಭಾವವನ್ನು ಬಿಟ್ಟು, ನನ್ನನ್ನು ಎಲ್ಲಾ ರೂಪಗಳಲ್ಲಿಯೂ ಪೂಜಿಸು. ಅದು ನನಗೆ ಬಹಳ ಸಂತಸ ನೀಡುತ್ತದೆ." ಬಾಬಾರ ಈ ಅರ್ಥಪೂರ್ಣ ಮಾತುಗಳನ್ನು ಕೇಳಿದ ಶ್ರೀಮತಿ ತರ್ಖಡ್ಗೆ ಕಣ್ಣು ತುಂಬಿ ಬಂತು. ಬಾಬಾರ ಪೂರ್ಣ ಅನುಗ್ರಹ ತನ್ನಮೇಲೆ ಇದೆಯೆಂದು ಆಕೆಗೆ ಅರ್ಥವಾಯಿತು.
ಶ್ರೀಮತಿ ತರ್ಖಡರ ಬದನೆಕಾಯಿ ಕಥೆ
ಬಾಂದ್ರಾದ ರಘುವೀರ ಭಾಸ್ಕರ ಪುರಂದರೆ ದಂಪತಿಗಳು ಬಾಬಾರ ಭಕ್ತರು. ಅವರು ಒಂದುಸಲ ಶಿರಡಿಗೆ ಹೊರಟಾಗ, ಶ್ರಿಮತಿ ತರ್ಖಡ್ ಆ ದಂಪತಿಗಳಿಗೆ ಎರಡು ಬದನೆಕಾಯಿ ಕೊಟ್ಟು, ಒಂದರಿಂದ ಬದನೆಕಾಯಿ ಪಲ್ಯ, ಇನ್ನೊಂದರಿಂದ ಬದನೆಕಾಯಿ ಮೊಸರು ಬಜ್ಜಿ ಮಾಡಿ, ತಮ್ಮ ಪರವಾಗಿ ಬಾಬಾರಿಗೆ ಅರ್ಪಿಸಲು ಹೇಳಿದರು. ಶಿರಡಿ ಸೇರಿದ ಮೇಲೆ ಒಂದು ದಿನ ಅವರು ಮೊಸರು ಬಜ್ಜಿ ಮಾಡಿ, ಮಧ್ಯಾಹ್ನದ ಆರತಿ ವೇಳೆಗೆ ಮಸೀದಿಗೆ ಹೋಗಿ ಬಾಬಾರಿಗೆ ಅರ್ಪಿಸಿದರು. ಬಾಬಾ ಅದನ್ನು ತಿಂದು ಬಹಳ ಸಂತೋಷಪಟ್ಟು, “ಬದನೆಕಾಯಿ ಪಲ್ಯವಿದ್ದಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು” ಎಂದರು. ಶ್ರೀಮತಿ ರಾಧಾಕೃಷ್ಣ ಮಾಯಿಗೆ ಪಲ್ಯ ತರಲು ಹೇಳಿದರು. ಆದರೆ ಅದು ಬದನೆಕಾಯಿ ಕಾಲವಲ್ಲದ್ದರಿಂದ, ಆಕೆಗೆ ಏನು ಮಾಡಬೇಕೋ ತೋಚದೆ ಮೊಸರು ಬಜ್ಜಿ ತಂದವರು ಯಾರು ಎಂದು ವಿಚಾರಿಸಿ, ಶ್ರೀಮತಿ ಪುರಂದರೆ ಎಂದು ತಿಳಿದು ಆಕೆಯನ್ನು, “ಪಲ್ಯ ಮಾಡಿದ್ದೀರಾ” ಎಂದು ಕೇಳಿದರು. ಆಗ ಆಕೆ, ಶ್ರೀಮತಿ ತರ್ಖಡ್ ಎರಡು ಬದನೆಕಾಯಿ ಕೊಟ್ಟು, ಒಂದರಿಂದ ಪಲ್ಯ ಇನ್ನೊಂದರಿಂದ ಬಜ್ಜಿ ಮಾಡಿ ಕೊಡಲು ತಮಗೆ ಹೇಳಿದ್ದನ್ನು ತಿಳಿಸಿದರು. ಬಾಬಾರಿಗೆ ಬದನೆಕಾಯಿ ಪ್ರಿಯ. ಅದರಿಂದ ತಾವು ಅಂದು ಬಜ್ಜಿ ಮಾಡಿ ಕಳುಹಿಸಿದ್ದನ್ನು, ಮಾರನೆಯ ದಿನ ಪಲ್ಯ ಮಾಡಬೇಕೆಂದುಕೊಂಡಿದ್ದನ್ನೂ ತಿಳಿಸಿದರು. ಇದನ್ನು ಕೇಳಿ ಎಲ್ಲರೂ ಆಶ್ಚರ್ಯಪಟ್ಟರು. ಬಾಬಾ ಹೇಗೆ ತನ್ನ ಭಕ್ತರನ್ನು ಎಚ್ಚರದಿಂದ ನೋಡಿಕೊಳ್ಳುತ್ತಿದ್ದರು ಎಂಬುದಕ್ಕೆ ಇದು ಇನ್ನೊಂದು ದೃಷ್ಟಾಂತ.
ಶ್ರೀಮತಿ ತರ್ಖಡ್ ಅವರ ಪೇಢಾ ಕಥೆ
೧೯೧೫ರಲ್ಲಿ ಗೋವಿಂದ ಬಲರಾಮ್ ಮಾನ್ಕರ್, ತನ್ನ ತಂದೆಯ ಶ್ರಾದ್ಧ ಮಾಡಲು ಶಿರಡಿಗೆ ಹೊರಟರು. ಹೊರಡುವ ಮುಂಚೆ ಶ್ರೀಮತಿ ತರ್ಖಡರನ್ನು ಕಂಡರು. ಆಕೆ ಬಾಬಾರಿಗೆ ಏನಾದರೂ ಕಳುಹಿಸಬೇಕೆಂದುಕೊಂಡರು. ಅಂತಹ ಯಾವ ಪದಾರ್ಥವೂ ಮನೆಯಲ್ಲಿ ಕಾಣಲಿಲ್ಲ. ನೈವೇದ್ಯವಾಗಿದ್ದ ಪೇಢಾ ಮಾತ್ರ ಇತ್ತು. ಅಲ್ಲದೆ ಮಾನ್ಕರ್ ಸೂತಕದಲ್ಲಿದ್ದುದರಿಂದ, ಅವರ ಕೈಯಲ್ಲಿ ಕಳುಹಿಸಿದ ಪದಾರ್ಥ ಬಾಬಾ ಮುಟ್ಟುತ್ತಾರೋ ಇಲ್ಲವೋ ಎಂಬ ಸಂದೇಹವೂ ಬಂದಿತು. ಆದರೂ, ಬಾಬಾರಲ್ಲಿ ಆಕೆಯ ಭಕ್ತಿ ಮಿಕ್ಕೆಲ್ಲ ಭಾವನೆಗಳಿಗಿಂತಲೂ ಹೆಚ್ಚಾಗಿ, ಆಕೆ ಮಾನ್ಕರ್ ಕೈಯಲ್ಲಿ ಆ ಪೇಢಾ ಕಳುಹಿಸಿದರು. ಮಾನ್ಕರ್ ಶಿರಡಿಗೆ ಹೋಗಿ ಬಾಬಾ ದರ್ಶನ ಮಾಡಿದರು. ಪೇಢಾ ತೆಗೆದುಕೊಂಡು ಹೋಗಲು ಮರೆತರು. ಮತ್ತೆ ಮಧ್ಯಾಹ್ನ ಹೋದಾಗಲೂ ಮರೆತರು. ಬಾಬಾ ಮಾನ್ಕರರನ್ನು “ನನಗೋಸ್ಕರ ಏನಾದರೂ ತಂದಿದ್ದೀರಾ” ಎಂದು ಕೇಳಿದರು. “ಏನೂ ಇಲ್ಲ” ಎಂದು ಮಾನ್ಕರ್ ಹೇಳಿದರು. ಮತ್ತೆರಡು ಸಲ ಕೇಳಿದಾಗಲೂ ಅದೇ ಉತ್ತರ ಬಂತು. ಆಗ ಬಾಬಾ "ಬಾಂದ್ರಾದಿಂದ ಹೊರಟಾಗ ಮಾಯಿ ನನಗೋಸ್ಕರ ಏನೂ ಕೊಡಲಿಲ್ಲವೇ?" ಎಂದು ನೇರವಾಗಿ ಕೇಳಿದರು. ತಕ್ಷಣವೇ ಮಾನ್ಕರ್ಗೆ ಎಲ್ಲವೂ ನೆನಪಿಗೆ ಬಂದು, ನಾಚಿಕೆಪಟ್ಟು ವಾಡಾಕ್ಕೆ ಹೋಗಿ, ಪೇಢಾ ತಂದು ಬಾಬಾಗೆ ಕೊಟ್ಟರು. ಕೊಟ್ಟ ಕೂಡಲೇ ಬಾಬಾ ಅದನ್ನು ಬಹಳ ಸಂತೋಷದಿಂದ ಬಾಯಲ್ಲಿ ಹಾಕಿಕೊಂಡರು. ಹಾಗೆ ಬಾಬಾ ಸಮಾಜದ ಕಟ್ಟಳೆಗಳನ್ನು ಲೆಕ್ಕಿಸದೆ ಶ್ರೀಮತಿ ತರ್ಖಡರ ಭಕ್ತಿ ವಿಶ್ವಾಸಗಳನ್ನು ಒಪ್ಪಿಕೊಂಡರು.
ಈ ಅಧ್ಯಾಯದಲ್ಲಿ ಬಾಬಾ "ಎಲ್ಲರಲ್ಲೂ ನನ್ನನ್ನು ಕಾಣು" ಎಂಬ ನೀತಿಯನ್ನು ಬೋಧಿಸಿದರು. ಹೇಳಿದ, ಹೇಳದ ಅನೇಕ ದೃಷ್ಟಾಂತಗಳಿಂದ ಬಾಬಾ ಎಲ್ಲ ಜೀವಿಗಳಲ್ಲೂ ಯಾವುದೇ ರೀತಿಯ ಬೇಧಗಳನ್ನೂ ಮಾಡದೆ ದೇವರನ್ನು ಕಾಣು ಎಂಬ ಪಾಠ ಕಲಿಸಿದರು.
ಇದರೊಡನೆ ಶಿರಡಿಯಾತ್ರೆಯ ಪ್ರಾಮುಖ್ಯತೆ ಇತ್ಯಾದಿ ವಿಷಯಗಳನ್ನು ಕುರಿತು ಹೇಳುವ ಒಂಭತ್ತನೆಯ ಅಧ್ಯಾಯ ಮುಗಿಯಿತು. ಮುಂದಿನ ಅಧ್ಯಾಯದಲ್ಲಿ ಹೇಮಾಡ್ ಪಂತ್ ಸಾಯಿಬಾಬಾರ ಜೀವನ ರೀತಿ, ಅವರ ಉಪದೇಶಗಳು, ಚಮತ್ಕಾರಗಳು ಇತ್ಯಾದಿ ವಿಷಯಗಳನ್ನು ಹೇಳುತ್ತಾರೆ.
||ಶ್ರೀ ಸಾಯಿನಾಥಾರ್ಪಣಮಸ್ತು||ಶುಭಂ ಭವತು||
||ಓಂ ಶಾಂತಿಃ ಶಾಂತಿಃ ಶಾಂತಿಃ||
||ಓಂ ಶಾಂತಿಃ ಶಾಂತಿಃ ಶಾಂತಿಃ||
No comments:
Post a Comment