||ಶ್ರೀ ಸಾಯಿ ಸಚ್ಚರಿತ್ರೆ||
||ಮೊದಲನೆಯ ಅಧ್ಯಾಯ||
||ಗೋಧಿ ಹಿಟ್ಟಿನ ಕಥೆ||
ಶ್ರೀ ಗಣೇಶಾಯ ನಮಃ ಶ್ರೀ ಸರಸ್ವತಯೇ ನಮಃ
ಶ್ರೀವೆಂಕಟೇಶಾಯನಮಃ ಶ್ರೀಸಾಯಿನಾಥಾಯನಮಃ
ಶ್ರೀಸದ್ಗುರುಭ್ಯೋನ್ನಮಃ
||ಮೊದಲನೆಯ ಅಧ್ಯಾಯ||
||ಗೋಧಿ ಹಿಟ್ಟಿನ ಕಥೆ||
ಶ್ರೀ ಗಣೇಶಾಯ ನಮಃ ಶ್ರೀ ಸರಸ್ವತಯೇ ನಮಃ
ಶ್ರೀವೆಂಕಟೇಶಾಯನಮಃ ಶ್ರೀಸಾಯಿನಾಥಾಯನಮಃ
ಶ್ರೀಸದ್ಗುರುಭ್ಯೋನ್ನಮಃ
ಈ ಅಧ್ಯಾಯದಲ್ಲಿ ಹೇಮಾಡ್ ಪಂತ್, ಪ್ರಾರ್ಥನೆಗಳಿಂದ ಆರಂಭ ಮಾಡಿ ಗೋಧಿ ಹಿಟ್ಟಿನ ಕಥೆ ಹೇಳಿದ್ದಾರೆ.
ಪ್ರಾರ್ಥನೆಗಳು
ಸಾಂಪ್ರದಾಯಿಕ ಪಧ್ಧತಿಯಂತೆ, ಗ್ರಂಥ ರಚನೆಯನ್ನು ಶ್ರೀ ಹೇಮಾಡ್ ಪಂತ್ ಪ್ರಾರ್ಥನೆಗಳಿಂದ ಪ್ರಾರಂಭ ಮಾಡಿದ್ದಾರೆ
ಗಣೇಶ: ಗ್ರಂಥ ರಚನೆಯ ಹಾದಿಯಲ್ಲಿ ಬರಬಹುದಾದಂತಹ ತೊಂದರೆಗಳನ್ನೆಲ್ಲಾ ನಿಗ್ರಹಿಸಿ ಗ್ರಂಥವನ್ನು ಫಲದಾಯಕವನ್ನಾಗಿ ಮಾಡು ಎಂದು ಪ್ರಾರ್ಥಿಸಿ, ಶ್ರೀ ಸಾಯಿಯೇ ಗಣೇಶ ಎಂದಿದ್ದಾರೆ.
ಸರಸ್ವತಿ: ವಿದ್ಯಾ ದೇವತೆ. ಈ ಗ್ರಂಥ ರಚನೆಗೆ ಸರಿಯಾದ ಪ್ರೇರಣೆ ಕೊಟ್ಟು ಫಲಪ್ರದಮಾಡು ಎಂದು ಕೇಳಿಕೊಳ್ಳುತ್ತಾ, ಸಾಯಿಯೇ ಸರಸ್ವತಿ ಎಂದೂ ಶ್ರೀ ಸಾಯಿ ತಮ್ಮ ಕಥೆಯನ್ನು ತಾವೇ ಹಾಡುತ್ತಿದ್ದಾರೆ ಎಂದೂ ಹೇಳುತ್ತಾರೆ
ಬ್ರಹ್ಮ, ವಿಷ್ಣು, ಮಹೇಶ್ವರ: ಸೃಷ್ಟಿ, ಪಾಲನೆ, ಸಂಹಾರ ಕರ್ತರಾದ ತ್ರಿಮೂರ್ತಿಗಳು ಶ್ರೀ ಸಾಯಿಗಿಂತ ಭಿನ್ನರಲ್ಲ. ಶ್ರೀ ಸಾಯಿ ಸದ್ಗುರುವೇ ನಮ್ಮನ್ನು ಈ ಸಂಸಾರ ಸಾಗರದಿಂದ ಪಾರುಮಾಡುವವರು ಎಂದು ಹೇಳುತ್ತಾರೆ
ನಾರಾಯಣ ಆದಿನಾಥ: ಕೊಂಕಣ ದೇಶದಲ್ಲಿ ಪ್ರತ್ಯಕ್ಷರಾದ ಇವರು ಹೇಮಾಡ್ ಪಂತ್ ಅವರ ವಂಶದ ಮೂಲಪುರುಷ.
ಸಂತರು ಮತ್ತು ಮಹಾಜ್ಞಾನಿಗಳು: ಭರದ್ವಾಜ (ಹೇಮಾದ್ ಪಂತರ ಗೋತ್ರ ಪ್ರವರ್ತಕ), ಯಾಜ್ಞ್ಯವಲ್ಕ್ಯ, ಭೃಗು, ಪರಾಶರ, ನಾರದ, ವೇದವ್ಯಾಸ, ಸನಕ, ಸನಂದನ, ಸನತ್ಕುಮಾರ, ಶುಕ, ಶೌನಕ, ವಿಶ್ವಾಮಿತ್ರ, ವಸಿಷ್ಠ, ವಾಲ್ಮೀಕಿ, ವಾಮದೇವ, ಜೈಮಿನಿ, ವೈಶಂಪಾಯನ, ನವಯೋಗೀಂದ್ರ, ಇತ್ಯಾದಿ ಋಷಿವರ್ಯರು, ಹಾಗೂ ನಿವೃತ್ತಿ, ಜ್ಞಾನದೇವ, ಸೋಪಾನ, ಮುಕ್ತಾಬಾಯಿ, ಜನಾರ್ದನ, ಏಕನಾಥ, ನಾಮದೇವ, ತುಕಾರಾಂ, ಕನ್ಹ, ನರಹರಿ ಇತ್ಯಾದಿ ಸಂತರು ಎಲ್ಲರನ್ನೂ ಪ್ರಾರ್ಥಿಸಿದ್ದಾರೆ.

ತನ್ನ ಬಂಧುಗಳು: ತಾತ ಸದಾಶಿವ, ತಂದೆ ರಘುನಾಥ, ಸಣ್ಣತನದಲ್ಲೇ ತನ್ನನ್ನು ಬಿಟ್ಟು ಅಗಲಿದ ತಾಯಿ, ತನ್ನನ್ನು ಬೆಳೆಸಿದ ಸೋದರತ್ತೆ ಮತ್ತು ಬಹು ಪ್ರೀತಿಯಿಂದ ನೋಡಿಕೊಂಡ ಅಣ್ಣ ಅವರನ್ನೂ ಪ್ರಾರ್ಥಿಸಿದ್ದಾರೆ.
ಪಾಠಕರು: ಪಾಠಕರು ಗ್ರಂಥವನ್ನು ಓದುವಾಗ ತಮ್ಮ ಪೂರ್ಣ ಅಚಂಚಲವಾದ ಗಮನವನ್ನು ಕೊಟ್ಟು ಓದುವಂತೆ ಹೇಳಿದ್ದಾರೆ.
ತನ್ನ ಗುರು ಶ್ರೀ ಸಾಯಿನಾಥರು: ಕೊನೆಯದಾಗಿ ಗುರು ಶ್ರೀ ಸಾಯಿನಾಥರು, ದತ್ತಾತ್ರೇಯ ಅವತಾರಿ, ತನ್ನ ಏಕಮಾತ್ರ ಆಶ್ರಯ, ಯಾರು ತಾನು ಅರಿತುಕೊಳ್ಳಬೇಕಾದ ಬ್ರಹ್ಮ ಮಾತ್ರ ಸತ್ಯ ಮಿಕ್ಕೆಲ್ಲವು ಅಸತ್ಯ- ಮಾಯೆ ಎಂದು ತೋರಿಸಿಕೊಡುತ್ತಾರೋ ಅವರನ್ನೂ ಪ್ರಾರ್ಥಿಸಿ, ಪರಾಶರ, ವ್ಯಾಸ, ಶಾಂಡಿಲ್ಯರು ಹೇಳಿರುವ ಭಕ್ತಿಯ ಅನೇಕ ರೀತಿಗಳನ್ನು ವಿವರಿಸಿ ಶ್ರೀ ಸಾಯಿಬಾಬಾರ ಕಥೆಗಳನ್ನು ಹೇಳಲು ಆರಂಭಿಸುತ್ತಾರೆ.
ನಮ್ಮ ನೇತ್ರಗಳು ಸಾಯಿಯನ್ನು ಕಾಣಲಿ. ನಾಸಿಕವು ಸಾಯಿ ಪಾದೋದಕವನ್ನು ಆಘ್ರಾಣಿಸಲಿ. ನಾಲಗೆ ಸಾಯಿ ಪಾದೋದಕದ ರುಚಿಯನ್ನು ಕಾಣಲಿ, ಕಿವಿಗಳು ಸಾಯಿ ಲೀಲಾಮೃತವನ್ನು ಕೇಳಲಿ. ಮನಸ್ಸು ಸಾಯಿ ಮೂರ್ತಿಯನ್ನು ಸದಾ ಧ್ಯಾನಿಸಲಿ. ಇದೊಂದೇ ಲೌಕಿಕ ಪ್ರಪಂಚದ ಬಂಧನಗಳಿಂದ ಮುಕ್ತರಾಗಲು ಇರುವ ದಾರಿ. ಓಂ ಸಾಯಿರಾಂ ಎಂಬುದೇ ನಮ್ಮ ಮಂತ್ರವಾಗಲಿ. ಅದೇ ನಮ್ಮ ನಿರಂತರ ಧ್ಯಾನವಾಗಲಿ. ಭಕ್ತರಿಗೋಸ್ಕರ ಆ ನಿರ್ಗುಣಬ್ರಹ್ಮನೇ ಸಾಯಿನಾಥನ ರೂಪದಲ್ಲಿ ಈ ಪ್ರಪಂಚಕ್ಕೆ ಬಂದಿದ್ದಾನೆ. ಸಾಯಿಗೆ ಪ್ರಣಾಮ ನಮ್ಮ ಕಷ್ಟಗಳೆಲ್ಲವನ್ನೂ ದೂರಮಾಡುತ್ತದೆ. ನಮ್ಮ ಎಲ್ಲಾ ದುಃಖಗಳನ್ನೂ ದೂರಮಾಡಿ ನಮಗೆ ಸದಾ ಆನಂದವನ್ನು ನೀಡಬಲ್ಲ ಕರುಣಾಮೂರ್ತಿ ಆ ಸಾಯಿಯೊಬ್ಬನೇ. ಆತನ ಸಗುಣ ಮೂರ್ತಿಯಲ್ಲಿ ನಿರಂತರ ದೃಷ್ಟಿಯನ್ನಿಟ್ಟು ಅವನ ಧ್ಯಾನ ಮಾಡುವುದಷ್ಟೇ ನಾವು ಮಾಡಬೇಕಾದುದು. ಸಾಯಿ ಮುಖದರ್ಶನ ಪರಮಾನಂದವನ್ನು ನೀಡುತ್ತದೆ. ಆತನ ದೃಷ್ಟಿ ನಮ್ಮ ಪಾಪಗಳನ್ನೆಲ್ಲಾ ತೊಳೆದುಹಾಕಿಬಿಡುತ್ತದೆ. ಸಾಯಿ ಪಾದೋದಕ ಗಂಗಾಜಲದಷ್ಟೇ ಪವಿತ್ರ. ಸಾಯಿ ನಾಮ ಜಪ ನಮ್ಮ ಓಲಾಡುವ ಮನಸ್ಸನ್ನು ಸ್ಥಿರಮಾಡಿ ಅದಕ್ಕೊಂದು ನೆಲೆ ನೀಡುತ್ತದೆ. ನಾನು ಕರ್ಮಕ್ಕೆ ಕಾರಣನಲ್ಲ. ಕರ್ಮಫಲಗಳನ್ನು ಅನುಭವಿಸುವವನೂ ಅಲ್ಲ ಎಂದು ತಿಳಿಯುವುದೇ ಬ್ರಹ್ಮಯೋಗ. ಕರ್ಮ ಫಲಾಪೇಕ್ಷೆಯಿಲ್ಲದೆ ಕರ್ಮ ಮಾಡಿ ಕರ್ಮಬಂಧಗಳಿಂದ ಬಿಡುಗಡೆ ಹೊಂದಿ ಆತ್ಮ ಸಾಕ್ಷಾತ್ಕಾರವನ್ನು ಸಾಧಿಸಲು ಇರುವ ದಾರಿ ಒಂದೇ - ಜ್ಞಾನ. ಕರ್ಮವನ್ನೆಲ್ಲಾ ದೇವರಿಗೊಪ್ಪಿಸಿ ಮನಸ್ಸನ್ನು ಪ್ರತ್ಯೇಕಿಸು ಎಂದು ಹೇಳುತ್ತದೆ ನಾರದ ಭಕ್ತಿ ಸೂತ್ರ. ಸದ್ಗುರುವಿನ ದಯೆಯಿದ್ದರೆ ಮಾತ್ರ ಇಂತಹ ಜ್ಞಾನಪಡೆದು ನಾವು ಈ ಸಂಸಾರಸಾಗರದ ಆಚಿನ ದಡವನ್ನು ಸೇರಲು ಸಾಧ್ಯ. ಬಾಬಾರೇ ಅಂತಹ ಸದ್ಗುರು.
ಗೋಧಿ ಹಿಟ್ಟನ್ನು ಹರಡುವುದು
ಶ್ರೀ ಗೊವಿಂದ ರಘುನಾಥ ದಾಭೋಲ್ಕರ್ (ಹೇಮಾಡ್ ಪಂತ್) ಅವರು ಮೊದಲಸಲ ಶಿರಡಿಗೆ ಭೇಟಿಕೊಟ್ಟಿದ್ದು ಡಿಸೆಂಬರ್ ೧೯೧೦ರಲ್ಲಿ. ಅವರು ಅಲ್ಲಿದ್ದಾಗ ಒಂದು ದಿನ ಬೆಳಗ್ಗೆ ಸಾಯಿಯನ್ನು ಕಾಣಲು ಮಸೀದಿಗೆ ಹೋದರು (ಬಾಬಾ ಮಸೀದಿಗೆ ದ್ವಾರಕಾಮಾಯಿ ಎಂದು ನಾಮಕರಣ ಮಾಡಿದ್ದರು). ಬಾಬಾ ಆಗ ಮುಖತೊಳೆದುಕೊಳ್ಳುತ್ತಿದ್ದರು. ಮುಖ ತೊಳೆದಾದಮೇಲೆ ಬಾಬಾ ಒಂದು ಗೋಣಿಚೀಲವನ್ನು ಹಾಸಿ ಅದರಮೇಲೆ ಒಂದು ಬೀಸುವಕಲ್ಲನ್ನು ಇಟ್ಟರು. ಅದರ ಮುಂದೆ ಕುಳಿತು, ಕಫ್ನಿಯ ತೋಳನ್ನು ಮೇಲಕ್ಕೇರಿಸಿ, ಗೋಧಿಯನ್ನು ಬೀಸಲು ಪ್ರಾರಂಭಿಸಿದರು. ಇದನ್ನು ಕಂಡ ಹೇಮಾಡ್ ಪಂತ್ ಮತ್ತು ಅಲ್ಲಿದ್ದ ಇತರರು ಆಶ್ಚರ್ಯಗೊಂಡರು. ಯಾರಿಗೂ ಬಾಬಾ ಗೋಧಿಯನ್ನು ಬೀಸುತ್ತಿರುವುದೇತಕ್ಕೆ ಎಂಬುದು ಅರ್ಥವಾಗಲಿಲ್ಲ. ಬಾಬಾ ಎಂದೂ ರೊಟ್ಟಿಯನ್ನು ಮಾಡಿಕೊಳ್ಳುತ್ತಿರಲಿಲ್ಲ ಅಥವಾ ಹಿಟ್ಟನ್ನು ಕೂಡಿಡುತ್ತಿರಲೂ ಇಲ್ಲ. ಅವರೆಲ್ಲರಿಗೂ ತಿಳಿದಂತೆ ಬಾಬಾ ತಾವು ತಂದ ಭಿಕ್ಷೆಯಿಂದ ಸ್ವಲ್ಪ ಮಾತ್ರ ತಿನ್ನುತ್ತಿದ್ದರು. ಆದರೂ ಅವರು ಯಾರಿಗೂ ಬಾಬಾರನ್ನು ಪ್ರಶ್ನೆ ಮಾಡುವ ಧೈರ್ಯವಿರಲಿಲ್ಲ. ಬಾಬಾ ಗೋಧಿಹಿಟ್ಟು ಬೀಸುತ್ತಿದ್ದಾರೆ ಎನ್ನುವ ವಿಷಯ ಶಿರಡಿಯಲ್ಲೆಲ್ಲಾ ಹರಡಿ ಏನಾದರೂ ವಿಶೇಷವಿರಬಹುದೆಂದು ಶಿರಡಿಯ ಜನರೆಲ್ಲರೂ ಮಸೀದಿಯಲ್ಲಿ ಗುಂಪು ಸೇರಿದರು.
ಅವರಲ್ಲಿ ನಾಲ್ಕು ಜನ ಹೆಂಗಸರು, ಬಾಬಾ ಕೋಪಮಾಡಿಕೊಳ್ಳಬಹುದು ಎಂದು ತಿಳಿದಿದ್ದರೂ ಅದನ್ನು ಲೆಕ್ಕಿಸದೆ, ಬಾಬಾರಿಂದ ಬಲವಂತವಾಗಿ ಬೀಸುವ ಕಲ್ಲನ್ನು ಎಳೆದುಕೊಂಡು, ಬಾಬಾ ಲೀಲೆಗಳನ್ನು ಹಾಡುತ್ತಾ, ತಾವೇ ಬೀಸಲು ಅರಂಭಿಸಿದರು. ಮೊದಲು ಕೋಪಗೊಂಡರೂ, ಬಾಬಾ ಅವರ ಪ್ರೀತಿ ವಿಶ್ವಾಸಗಳನ್ನು ಕಂಡು ನಗುತ್ತಾ ಕುಳಿತರು. ಬೀಸುತ್ತಾ ಆ ಹೆಂಗುಸರು ಈ ರೀತಿ ಯೋಚನೆ ಮಾಡಿದರು: "ಬಾಬಾ ರೊಟ್ಟಿಗಳನ್ನು ಮಾಡುವುದಿಲ್ಲ. ತಂದುಕೊಂಡ ಭಿಕ್ಷಾನ್ನವನ್ನು ಮಾತ್ರ ತಿನ್ನುತ್ತಾರೆ. ಅವರಿಗೆ ಹೆಂಡಿರು ಮಕ್ಕಳು ಯಾರೂ ಇಲ್ಲ. ಮತ್ತೆ ಈ ಹಿಟ್ಟು ಅವರಿಗೆ ಯಾತಕ್ಕೆ ಬೇಕು? ಬಹುಶಃ ಉದಾರಿಯಾದ ಅವರು ಇದನ್ನು ನಮಗೆ ಹಂಚಿಕೊಡುತ್ತಾರೆ." ಹೀಗೆಂದು ಯೋಚಿಸುತ್ತಾ ಗೋಧಿಯನ್ನೆಲ್ಲ ಬೀಸಿ ನಾಲ್ಕು ಭಾಗ ಮಾಡಿ ಒಬ್ಬೊಬ್ಬರು ಒಂದೊಂದು ಭಾಗ ತೆಗೆದುಕೊಂಡು ಹೊರಡಲು ಸಿದ್ಧವಾದರು. ಅಲ್ಲಿಯವರೆಗೂ ಎಲ್ಲವನ್ನೂ ನೋಡುತ್ತಾ ಸುಮ್ಮನೆ ಕುಳಿತಿದ್ದ ಬಾಬಾ, ಅವರು ಹಿಟ್ಟು ತೆಗೆದುಕೊಂಡು ಹೊರಡಲು ಸಿದ್ಧರಾದುದನ್ನು ಕಂಡು ಉಗ್ರರಾಗಿ, "ಇದೇನು ನಿಮ್ಮಪ್ಪನ ಆಸ್ತಿಯೆ ತೆಗೆದುಕೊಂಡು ಹೋಗುವುದಕ್ಕೆ? ಅಥವಾ ನಾನೇನಾದರೂ ನಿಮ್ಮಿಂದ ಸಾಲ ತೆಗೆದುಕೊಂಡಿದ್ದೇನೆಯೇ? ಬಿಟ್ಟಿ ಸಿಕ್ಕಿದೆಯೆಂದು ತೆಗೆದುಕೊಂಡು ಹೋಗುತ್ತಿದ್ದೀರಲ್ಲವೆ? ಆ ಹಿಟ್ಟನ್ನು ಈಗಿಂದೀಗಲೇ ತೆಗೆದುಕೊಂಡು ಹೋಗಿ ಶಿರಡಿಯ ಸರಹದ್ದಿನ ಪ್ರದೇಶದಲ್ಲಿ ಚೆಲ್ಲಿ ಬನ್ನಿ" ಎಂದು ಆರ್ಭಟಿಸಿದರು. ಆ ಹೆಂಗಸರು ತಾವು ಮಾಡಿದ ಕೆಲಸಕ್ಕೆ ನಾಚಿ, ಮರುಮಾತಿಲ್ಲದೆ, ಬಾಬಾ ಹೇಳಿದ ಹಾಗೆ ಹಿಟ್ಟನ್ನು ತೆಗೆದುಕೊಂಡು ಹೋಗಿ ಚೆಲ್ಲಿ ಬಂದರು.

ಇದನ್ನು ಕಂಡ ಹೇಮಾಡ್ ಪಂತ್ ಆಶ್ಚರ್ಯಪಟ್ಟು, ಕುತೂಹಲದಿಂದ ಹಳ್ಳಿಯವರನ್ನು ಬಾಬಾ ಹಾಗೇಕೆ ಮಾಡಿದರು ಎಂದು ಕೇಳಿದರು. ಅದಕ್ಕೆ ಅವರು "ಶಿರಡಿಯಲ್ಲಿ ಕಾಲರಾ ಬೇನೆ ಹರಡಿದೆ. ಬಾಬಾ ಬೀಸುತ್ತಿದ್ದದ್ದು ಗೋಧಿಯನ್ನಲ್ಲ. ಕಾಲರಾ ಕ್ರಿಮಿಗಳನ್ನು. ಅವನ್ನು ಪುಡಿಮಾಡಿ ಊರ ಹೊರಗೆ ಹಾಕಿ ಶಿರಡಿಯ ಜನರನ್ನು ಕಾಪಾಡಿದರು" ಎಂದು ಹೇಳಿದರು. ಪರಮಾಶ್ಚರ್ಯಗೊಂಡ ಹೇಮಾಡ್ ಪಂತರಿಗೆ, ಗೋಧಿಗೂ ಕಾಲರಾ ಕ್ರಿಮಿಗಳಿಗೂ ಏನು ಸಂಬಂಧ? ಗೋಧಿ ಹಿಟ್ಟು ಹೊರಗೆ ಚೆಲ್ಲಿದರೆ ಕಾಲರಾ ಹೇಗೆ ಹೋಗುತ್ತದೆ? ಎಂಬ ಅನೇಕ ಪ್ರಶ್ನೆಗಳು ಉಂಟಾದವು. ಹಲವು ದಿನಗಳ ನಂತರ ಕಾಲರಾ ಕಡಮೆಯಾಗಿ ಊರಿನವರು ಆರೋಗ್ಯವಾದುದನ್ನು ನೋಡಿ ಈ ಫಕೀರ ಸಾಮಾನ್ಯನಲ್ಲ ಎಂದು ನಿಶ್ಚಯಿಸಿಕೊಂಡರು.
ಬಾಬಾರವರ ಇಂತಹ ಅನೇಕ ಲೀಲೆಗಳನ್ನು ನೋಡಿದ ಹೇಮಾಡ್ ಪಂತ್, ಸಾಯಿ ಪ್ರೇರಣೆಯಿಂದ ಅವುಗಳನ್ನೆಲ್ಲಾ ಒಟ್ಟುಗೂಡಿಸಿ, ಪುಸ್ತಕ ರೂಪಕ್ಕೆ ತಂದು ಅದಕ್ಕೆ ಶ್ರೀ ಸಾಯಿ ಸಚ್ಚರಿತ್ರೆ ಎಂದು ಹೆಸರಿಟ್ಟರು.
ಗೋಧಿ ಬೀಸುವುದರ ಆಧ್ಯಾತ್ಮಿಕ ಅರ್ಥ
ಬಾಬಾ ಬೀಸುತ್ತಿದ್ದುದು ಬರಿಯ ಗೋಧಿಯನ್ನಲ್ಲ. ಶಿರಡಿಯಲ್ಲಿದ್ದ ೬೦ ವರ್ಷಗಳ ಕಾಲ ಅವರು ತಮ್ಮ ಭಕ್ತರ ಅಜ್ಞಾನ, ಕುರುಡುನಂಬಿಕೆಗಳು, ಪಾಪಗಳು ಎನ್ನುವ ಗೋಧಿಯನ್ನು ಬೀಸಿ ಹೊರಹಾಕುತ್ತಿದ್ದರು. ಗೋಧಿ ಬೀಸುವುದು ಎನ್ನುವುದು ಒಂದು ಸಾಂಕೇತಿಕ ಚರ್ಯೆ ಮಾತ್ರ. ಅದಕ್ಕೆ ಆಳವಾದ ಅಂತರಾರ್ಥ ಇನ್ನೊಂದಿದೆ. ಬೀಸುವ ಕಲ್ಲಿನ ಮೇಲಿನ ಕಲ್ಲು ಭಕ್ತಿಯನ್ನು ಸೂಚಿಸುತ್ತದೆ. ಅದರ ಮೇಲಿರುವ ಗೂಟ ಜ್ಞಾನಕ್ಕೆ ಸಂಕೇತ. ಅಚೇತನವಾಗಿರುವ ಕೆಳಗಿನಕಲ್ಲು ಕರ್ಮಗಳಿಗೆ ಸಂಕೇತ. ಮೇಲಿನ ಕಲ್ಲು ಸರಿಯಾದ ರೀತಿಯಲ್ಲಿ ಚಲಿಸಬೇಕಾದರೆ ಅದಕ್ಕೊಂದು ಆಸರೆ ಬೇಕು. ಕೆಳಗಿನ ಕಲ್ಲಿನ ಮಧ್ಯೆ ಇರುವ ಅಚ್ಚುಗಂಬವೇ ಈ ಆಸರೆ. ಇದು ಸದ್ಗುರುವಿಗೆ ಸಂಕೇತ. ಕಾಳುಗಳು ಮನುಷ್ಯರಿಗೆ ಸಂಕೇತ. ಎರಡು ಕಲ್ಲುಗಳ ಮಧ್ಯೆ ಸಿಕ್ಕಿಕೊಂಡು ಕರ್ಮಬಂಧಗಳಿಂದ ಆಚೆ ಬರಲಾಗದೆ ಒದ್ದಾಡುತ್ತಿರುವ ಮನುಷ್ಯ ಸದ್ಗುರುವೆಂಬ ಅಚ್ಚುಗಂಬದ ಆಸರೆಯಿಂದ ಜ್ಞಾನವೆಂಬ ಗೂಟವನ್ನು ಹಿಡಿದು ಭಕ್ತಿಯೆಂಬ ಕಲ್ಲನ್ನು ತಿರುಗಿಸಿದರೆ ಕರ್ಮಗಳೆಲ್ಲಾ ಸವೆದು ಹೋಗುತ್ತವೆ. ಮೇಲಿನ ಕಲ್ಲಿನಲ್ಲಿರುವ ಕಿಂಡಿಯಲ್ಲಿ ಗೋಧಿಯ ಕಾಳುಗಳನ್ನು ಹಾಕಿ ಬೀಸಿದಾಗ ಕೆಲವು ಕಾಳುಗಳು ಮಾತ್ರ ಅಚ್ಚುಗಂಬದ ಬಳಿಯೆ ಸಿಕ್ಕಿಹಾಕಿಕೊಂಡು ಬಿಡುತ್ತವೆ. ಆದರೆ ಬಹಳಷ್ಟು ಕಾಳುಗಳು ಕಲ್ಲಿನ ಪರಿಧಿಗೆ ಹೋಗಿ ಅಲ್ಲಿ ಹಿಟ್ಟಾಗಿ ಕೆಳಗೆ ಬಿದ್ದು ಹೋಗುತ್ತವೆ. ಹಾಗೆ ಹಿಟ್ಟಾಗಿ ಬಿದ್ದ ಕಾಳುಗಳೇ ಜನನ ಮರಣ ಚಕ್ರದಲ್ಲಿ ಬಿದ್ದು, ಹುಟ್ಟು ಸಾವುಗಳ ಮಧ್ಯೆ ಒದ್ದಾಡುವ ಮನುಷ್ಯರು. ಅಚ್ಚುಗಂಬದ ಬಳಿಯ ಕಾಳುಗಳೇ ಸದ್ಗುರುವನ್ನಾಶ್ರಯಿಸಿ ಮೋಕ್ಷಮಾರ್ಗದ ದಾರಿಯನ್ನು ತುಳಿಯುವವರು. ಮೋಕ್ಷಕ್ಕೆ ಸರಿಯಾದ ದಾರಿಯನ್ನು ತೋರುವವನೇ ಸದ್ಗುರು. ಈ ಲೀಲೆಯು ಹೇಮಾಡ್ ಪಂತರಿಗೆ, ಸದ್ಗುರುವನ್ನಾಶ್ರಯಿಸಿ ಮೋಕ್ಷಮಾರ್ಗವನ್ನು ಅನುಸರಿಸು, ಎಂದು ಬಾಬಾ ಹೇಳಿದ ಒಂದು ರೀತಿ.
ಇದನ್ನು ಅರ್ಥಮಾಡಿಕೊಂಡ ಹೇಮಾಡ್ ಪಂತ್ ಬಾಬಾರ ಆಶ್ರಯ ಪಡೆದಮೇಲೆಯೇ ಶ್ರೀ ಸಾಯಿ ಸಚ್ಚರಿತ್ರೆಯನ್ನು ಬರೆಯಲು ಸಾಧ್ಯವಾಯಿತು. ತಾನು ಕಂಡ ಅನೇಕ ಲೀಲೆಗಳನ್ನು ಎಲ್ಲರೊಡನೆ ಹಂಚಿಕೊಂಡು, ತಾನು ಅನುಭವಿಸಿದ ಸದ್ಗುರು ಆಶ್ರಯವನ್ನು ಎಲ್ಲರೂ ಪಡೆದು, ಎಲ್ಲರೂ ಮೋಕ್ಷ ಮಾರ್ಗದಲ್ಲಿ ನಡೆಯಿರಿ ಎಂದು ಹೇಳುವುದೇ ಶ್ರೀ ಸಾಯಿ ಸಚ್ಚರಿತ್ರೆಯ ಉದ್ದೇಶ. ಇದಕ್ಕೆ ಬಾಬಾರವರ ಪೂರ್ಣ ಸಮ್ಮತಿಯೂ ಇದ್ದುದರಿಂದಲೇ ಅದು ಸಾಧ್ಯವಾಯಿತು.
ಇದರೊಡನೆ ಗೋಧಿಹಿಟ್ಟಿನ ಕಥೆ ಎಂಬುವ ಮೊದಲನೆಯ ಅಧ್ಯಾಯ ಮುಗಿಯಿತು. ಮುಂದಿನ ಅಧ್ಯಾಯದಲ್ಲಿ ಹೇಮಾಡ್ ಪಂತ್ ಶ್ರೀ ಸಾಯಿ ಸಚ್ಚರಿತ್ರೆ ಬರೆಯುವ ಉದ್ದೇಶ, ಹೇಮಾಡ್ ಪಂತ್ ಎನ್ನುವ ಬಿರುದು ಬಂದ ಬಗೆ, ಸದ್ಗುರುವಿನ ಅವಶ್ಯಕತೆ ಇತ್ಯಾದಿ ವಿಷಯಗಳನ್ನು ಹೇಳುತ್ತಾರೆ
||ಶ್ರೀ ಸದ್ಗುರು ಸಾಯಿನಾಥಾರ್ಪಣಮಸ್ತು||ಶುಭಂ ಭವತು||
||ಓಂ ಶಾಂತಿಃ ಶಾಂತಿಃ ಶಾಂತಿಃ||
||ಓಂ ಶಾಂತಿಃ ಶಾಂತಿಃ ಶಾಂತಿಃ||
No comments:
Post a Comment