||ಶ್ರೀ ಸಾಯಿ ಸಚ್ಚರಿತ್ರೆ||
||ಏಳನೆಯ ಅಧ್ಯಾಯ||
|| ಅಪೂರ್ವ ಅವತಾರ||
ಶ್ರೀ ಗಣೇಶಾಯ ನಮಃ ಶ್ರೀ ಸರಸ್ವತಯೇ ನಮಃ
ಶ್ರೀವೆಂಕಟೇಶಾಯ ನಮಃ ಶ್ರೀಸಾಯಿನಾಥಾಯ ನಮಃ
ಶ್ರೀಸದ್ಗುರುಭ್ಯೋನ್ನಮಃ
||ಏಳನೆಯ ಅಧ್ಯಾಯ||
|| ಅಪೂರ್ವ ಅವತಾರ||
ಶ್ರೀ ಗಣೇಶಾಯ ನಮಃ ಶ್ರೀ ಸರಸ್ವತಯೇ ನಮಃ
ಶ್ರೀವೆಂಕಟೇಶಾಯ ನಮಃ ಶ್ರೀಸಾಯಿನಾಥಾಯ ನಮಃ
ಶ್ರೀಸದ್ಗುರುಭ್ಯೋನ್ನಮಃ
ಈ ಅಧ್ಯಾಯದಲ್ಲಿ ಹೇಮಾಡ್ ಪಂತ್, ಬಾಬಾರ ಅಪೂರ್ವ ಅವತಾರ, ಬಾಬಾ ಹಿಂದುವೋ ಮುಸ್ಲಿಮರೋ ಎಂಬುದರ ವಿಮರ್ಶೆ, ಬಾಬಾರ ಯೋಗಶಕ್ತಿ/ಅಭ್ಯಾಸ, ಮತ್ತು ಇತರ ವಿಷಯಗಳನ್ನು ಹೇಳುತ್ತಾರೆ.
ಅಪೂರ್ವ ಅವತಾರ
ಬಾಬಾರ ಅವತಾರ ಅಪೂರ್ವವಷ್ಟೇ ಅಲ್ಲ, ಗೂಢವಾದದ್ದೂ ಕೂಡಾ. ಅವರನ್ನು ಯಾರು ಹೇಗೆ ಭಾವಿಸಿದರೋ ಅವರಿಗೆ ಹಾಗೆ ಕಾಣುತ್ತಿದ್ದರು. ಮುಸ್ಲಿಮರಂತೆ ಭಾವಿಸಿದರೆ ಮುಸ್ಲಿಮರಂತೆ ಕಂಡರು. ಹಿಂದೂ ಎಂದು ಭಾವಿಸಿದರೆ ಹಿಂದೂವಾಗಿ ಕಾಣಿಸಿದರು. ಆದರೆ ಅವರು ಹಿಂದುವೋ ಮುಸ್ಲಿಮ್ಮೋ ಯಾರಿಗೂ ಗೊತ್ತಿರಲಿಲ್ಲ. ಬಾಬಾ ರಾಮ ಜನ್ಮೋತ್ಸವದಲ್ಲಿ ಪಾಲುಗೊಂಡು ಹರಿಕಥೆ ನಡೆಸುತ್ತಿದ್ದರು. ಗೋಕುಲಾಷ್ಟಮಿಯ ದಿನ ಗೋಪಾಲಕಾಲಾ ಉತ್ಸವದಲ್ಲಿ ಉತ್ಸಾಹದಿಂದ ಭಾಗವಹಿಸುತ್ತಿದ್ದರು. ಈದ್ ದಿವಸ ಮುಸ್ಲಿಮರು ಮಸೀದಿಯಲ್ಲಿ ನಮಾಜ಼್ ಮಾಡಲು ಒಪ್ಪಿಕೊಂಡಿದ್ದರು. ಮುಸ್ಲಿಮರ ಚಂದನೋತ್ಸವದಲ್ಲಿ ಸ್ವತಃ ಭಾಗವಹಿಸುತ್ತಿದ್ದರು. ಒಂದುಸಲ ಮೊಹರ್ರಂ ಹಬ್ಬದ ಸಂದರ್ಭದಲ್ಲಿ ತಾಬೂತು ಕಟ್ಟಿ ೪ ದಿನ ಅದನ್ನು ಮಸೀದಿಯಲ್ಲಿ ಇಡಲು ಒಪ್ಪಿದ್ದರು.
ಮುಸ್ಲಿಮರೋ ಎಂದರೆ ಅವರು ಕಿವಿ ಚುಚ್ಚಿಸಿಕೊಂಡಿದ್ದರು. ಹಿಂದೂಗಳೋ ಎಂದರೆ ಅವರು ಸುಂತಿ ಮಾಡಿಸುವದನ್ನು ಅನುಮೋದಿಸಿದ್ದರು. ಅವರು ವಾಸಮಾಡುತ್ತಿದ್ದುದು ಮಸೀದಿಯಲ್ಲಿ. ಹಿಂದೂಗಳಂತೆ ಯಾವಾಗಲೂ ಪವಿತ್ರ ಧುನಿ ಉರಿಸುತ್ತಿದ್ದರು. ಬೀಸುವಕಲ್ಲಿನಲ್ಲಿ ಧಾನ್ಯ ಬೀಸುತ್ತಿದ್ದರು. ಶಂಖ ಊದುವುದು, ಅಗ್ನಿಯಲ್ಲಿ ಹೋಮ ಮಾಡುವುದು ಎಲ್ಲ ಮಸೀದಿಯಲ್ಲಿ ನಡೆಯುತ್ತಿತ್ತು. ಎಲ್ಲದಕ್ಕಿಂತ ಹೆಚ್ಚಾಗಿ ಭಕ್ತರು ಅವರ ಪಾದ ತೊಳೆದು ಪಾದೋದಕವನ್ನು ಸೇವಿಸಲು ಅನುಮತಿ ಕೊಟ್ಟಿದ್ದರು. ಅವರನ್ನು ಹಿಂದೂಗಳು ಮುಸ್ಲಿಮರು ಇಬ್ಬರೂ ಅವರವರ ರೀತಿಯಲ್ಲಿ ಪೂಜಿಸುತ್ತಿದ್ದರು. ಅವರನ್ನು ಅವರ ಮತ ಯಾವುದು ಎಂದು ಪ್ರಶ್ನಿಸಲು ಹೋದವರು ಅವರನ್ನು ನೋಡುತ್ತಲೇ ಅವರ ಭವ್ಯಾಕೃತಿಗೆ ಮರುಳಾಗಿ, ಕೇಳಲು ಬಂದ ಪ್ರಶ್ನೆಯನ್ನೇ ಮರೆತುಬಿಡುತ್ತಿದ್ದರು. ಇಂತಹ ದ್ವಂದ್ವ ರೂಪೀ ಬಾಬಾರನ್ನು ಅವರು ಹಿಂದುವೋ ಮುಸ್ಲಿಮೋ ಖಚಿತವಾಗಿ ಹೇಳಲು ಯಾರಿಗೂ ಸಾಧ್ಯವಿರಲಿಲ್ಲ.
ಮುಸ್ಲಿಮರೋ ಎಂದರೆ ಅವರು ಕಿವಿ ಚುಚ್ಚಿಸಿಕೊಂಡಿದ್ದರು. ಹಿಂದೂಗಳೋ ಎಂದರೆ ಅವರು ಸುಂತಿ ಮಾಡಿಸುವದನ್ನು ಅನುಮೋದಿಸಿದ್ದರು. ಅವರು ವಾಸಮಾಡುತ್ತಿದ್ದುದು ಮಸೀದಿಯಲ್ಲಿ. ಹಿಂದೂಗಳಂತೆ ಯಾವಾಗಲೂ ಪವಿತ್ರ ಧುನಿ ಉರಿಸುತ್ತಿದ್ದರು. ಬೀಸುವಕಲ್ಲಿನಲ್ಲಿ ಧಾನ್ಯ ಬೀಸುತ್ತಿದ್ದರು. ಶಂಖ ಊದುವುದು, ಅಗ್ನಿಯಲ್ಲಿ ಹೋಮ ಮಾಡುವುದು ಎಲ್ಲ ಮಸೀದಿಯಲ್ಲಿ ನಡೆಯುತ್ತಿತ್ತು. ಎಲ್ಲದಕ್ಕಿಂತ ಹೆಚ್ಚಾಗಿ ಭಕ್ತರು ಅವರ ಪಾದ ತೊಳೆದು ಪಾದೋದಕವನ್ನು ಸೇವಿಸಲು ಅನುಮತಿ ಕೊಟ್ಟಿದ್ದರು. ಅವರನ್ನು ಹಿಂದೂಗಳು ಮುಸ್ಲಿಮರು ಇಬ್ಬರೂ ಅವರವರ ರೀತಿಯಲ್ಲಿ ಪೂಜಿಸುತ್ತಿದ್ದರು. ಅವರನ್ನು ಅವರ ಮತ ಯಾವುದು ಎಂದು ಪ್ರಶ್ನಿಸಲು ಹೋದವರು ಅವರನ್ನು ನೋಡುತ್ತಲೇ ಅವರ ಭವ್ಯಾಕೃತಿಗೆ ಮರುಳಾಗಿ, ಕೇಳಲು ಬಂದ ಪ್ರಶ್ನೆಯನ್ನೇ ಮರೆತುಬಿಡುತ್ತಿದ್ದರು. ಇಂತಹ ದ್ವಂದ್ವ ರೂಪೀ ಬಾಬಾರನ್ನು ಅವರು ಹಿಂದುವೋ ಮುಸ್ಲಿಮೋ ಖಚಿತವಾಗಿ ಹೇಳಲು ಯಾರಿಗೂ ಸಾಧ್ಯವಿರಲಿಲ್ಲ.
ಕೆಲವರು ಅವರು ಹುಟ್ಟಿದ್ದು ಮುಸ್ಲಿಮ್ ಮನೆತನದಲ್ಲಿ ಎನ್ನುತ್ತಿದ್ದರು. ಇನ್ನು ಕೆಲವರು ಅವರು ಸದ್ಬ್ರಾಹ್ಮಣ ಮನೆತನಕ್ಕೆ ಸೇರಿದವರು ಎನ್ನುತ್ತಿದ್ದರು. ಆದರೆ ಇಬ್ಬರಿಗೂ ನಿಜ ಯಾವುದು ಎಂದು ಗೊತ್ತಿರಲಿಲ್ಲ. ಬಾಬಾರಿಗೆ ಎಲ್ಲ ಮತಗಳೂ, ಎಲ್ಲ ಜಾತಿಗಳೂ ಒಂದೇ ಆಗಿತ್ತು. ಮುಸ್ಲಿಮರ ಜೊತೆ ಕೂತು ಮಾಂಸದೂಟ ಮಾಡುತ್ತಿದ್ದರು. ಅವರು ಊಟಮಾಡುತ್ತಿದ್ದಾಗ ನಾಯಿಗಳು ಬಂದು ತಟ್ಟೆಗೆ ಬಾಯಿ ಹಾಕಿದರೆ ಅವರು ಅವನ್ನು ಓಡಿಸುತ್ತಿರಲಿಲ್ಲ. ಮಸೀದಿಯಲ್ಲಿ ಬೃಂದಾವನ ಇಟ್ಟಿದ್ದರು. ಭಕ್ತರು ರಥವೊಂದನ್ನು ತಂದಿಟ್ಟಿದ್ದರು. ಸದಾಕಾಲವೂ ಅಲ್ಲಾ ಮಾಲೀಕ್ ಎಂದು ಹೇಳುತ್ತಿದ್ದರು. ಬಡವ-ಶ್ರೀಮಂತ, ವಿದ್ಯಾವಂತ-ವಿದ್ಯೆ ಇಲ್ಲದವನು ಎಲ್ಲರೂ ಅವರಿಗೆ ಒಂದೇ. ತನಗೆ ಭಕ್ತರ ಅಂತರಂಗ ತಿಳಿದಿದ್ದರೂ ಅದನ್ನು ತನ್ನಲ್ಲೇ ಇಟ್ಟುಕೊಂಡಿದ್ದರೇ ಹೊರತು ಬೇರೆಯವರಿಗೆ ಹೇಳುತ್ತಿರಲಿಲ್ಲ. ತಾನು ಪರಮಜ್ಞಾನಿಯಾಗಿದ್ದರೂ ಏನೂ ತಿಳಿಯದ ಸಾಮಾನ್ಯ ಮನುಷ್ಯನಂತೆ ಕಾಣಿಸಿಕೊಳ್ಳುತ್ತಿದ್ದರು. ಅವರು ಎಂದೂ ತನ್ನ ಘನತೆಯನ್ನು ತಾನೇ ಹಾಡಿ ಹೊಗಳಿಕೊಳ್ಳುತ್ತಿರಲಿಲ್ಲ. ಅವರು ಮನುಷ್ಯನಂತೆ ಕಂಡರೂ ಜನರು ಅವರನ್ನು ದೇವರೆಂದೇ ತಿಳಿದರು. ಶಿರಡಿಯ ಜನ ತಮ್ಮೆಲ್ಲರ ಪೂರ್ವಜನ್ಮ ಸುಕೃತದಿಂದಲೇ ದೇವರು ತಮ್ಮೊಡನೆ ಇರಲು ಬಾಬಾ ರೂಪಿಯಾಗಿ ಬಂದಿದ್ದಾನೆ ಎಂದೇ ನಂಬಿದ್ದರು. ಅವರನ್ನು ಗುರುವೆಂದು ನಂಬಿ, ಅವರ ಪಾದಗಳಲ್ಲಿ ತಲೆಯಿಟ್ಟವರಿಗೆ ಸುಖ ಶಾಂತಿಗಳನ್ನು ನೀಡಿ ಅಶೀರ್ವದಿಸುತ್ತಿದ್ದರು.
ಕಮೀಷನರ್ ಮುಂದೆ ಪ್ರಮಾಣ
ಒಂದುಸಲ ಆಭರಣಗಳನ್ನು ಕದ್ದ ಕಳ್ಳನೊಬ್ಬನನ್ನು ಧೂಲಿಯಾದ ನ್ಯಾಯಾಸ್ಥಾನಕ್ಕೆ ಕರೆತಂದರು. ಅವನ್ನು ತಾನು ಕದಿಯಲಿಲ್ಲವೆಂದೂ ಬಾಬಾ ತನಗೆ ಕೊಟ್ಟರೆಂದೂ ಹೇಳಿದ. ನ್ಯಾಯಾಸ್ಥಾನದಲ್ಲಿ ಸಾಕ್ಷ್ಯ ಕೊಡಲು ಹಾಜರಾಗುವಂತೆ ಬಾಬಾರಿಗೆ ಆದೇಶ ಕಳುಹಿಸಿದರು. ಬಾಬಾ ಅದನ್ನು ಧುನಿಯಲ್ಲಿ ಹಾಕಿಬಿಟ್ಟರು. ಮತ್ತೆ ಅವರಿಗೆ ವಾರಂಟ್ ಕಳುಹಿಸಿದರು. ಅದನ್ನು ತಂದು ತೋರಿಸಿದರೆ ಅವರು ಅದನ್ನೂ ಹರಿದು ಹಾಕಿದರು. ಅದನ್ನು ತಂದವನಿಗೆ ಏನು ಮಾಡಬೇಕೆಂದು ತೋಚಲಿಲ್ಲ. ಅಲ್ಲಿದ್ದ ದಾಸಗಣು, ಅವನಿಗೆ ಅಹಮದ್ ನಗರದಲ್ಲಿ ಕಲೆಕ್ಟರ್ ನಾನಾಸಾಹೇಬ್ ಚಾಂದೋರ್ಕರರನ್ನು ಕಾಣುವಂತೆ ಹೇಳಿದರು. ನಾನಾಸಾಹೇಬರ ಸಲಹೆಯಂತೆ ಶಿರಡಿಯ ಜನ, "ಬಾಬಾರು ನಮ್ಮ ದೇವರು. ಅವರನ್ನು ನ್ಯಾಯಾಲಯಕ್ಕೆ ಬರುವಂತೆ ಆಜ್ಞೆ ಮಾಡುವುದು ಅಪಚಾರ, ಅಗೌರವ. ಆದ್ದರಿಂದ ಶಿರಡಿಗೇ ಒಬ್ಬ ಕಮೀಷನರರನ್ನು ಕಳುಹಿಸಿ ಬೇಕಾದ ಹೇಳಿಕೆಗಳನ್ನು ಅವರಿಂದ ಪಡೆಯಬಹುದು" ಎಂಬ ಒಂದು ಮನವಿಯನ್ನು ಬರೆದರು. ಆ ಮನವಿಯನ್ನು ಮನ್ನಿಸಿ ನ್ಯಾಯಾಸ್ಥಾನ ಶಿರಡಿಗೆ ನಾನಾ ಜೋಷಿ ಎಂಬೊಬ್ಬರನ್ನು ಕಮೀಷನರಾಗಿ ಕಳುಹಿಸಿದರು.
ದ್ವಾರಕಾಮಾಯಿಯ ಮುಂದೆ ಎಲ್ಲರೂ ಕುಳಿತುಕೊಳ್ಳಲು ಅನುಕೂಲವಾಗುವಂತೆ ಏರ್ಪಾಡುಮಾಡಿದರು.
ಕಮೀಷನರ್ ಬಂದು ಕೆಳಗಿನಂತೆ ಬಾಬಾರನ್ನು ಪ್ರಶ್ನೆಮಾಡಿದರು.
ಕಮೀಷನರು: ನಿಮ್ಮ ಹೆಸರೇನು?
ಬಾಬಾ: ಇವರೆಲ್ಲರು ನನ್ನನ್ನು ಸಾಯಿಬಾಬಾ ಎನ್ನುತ್ತಾರೆ.
ಕ: ನಿಮ್ಮ ತಂದೆಯ ಹೆಸರೇನು?
ಬಾಬಾ: ಅದೇ, ಸಾಯಿಬಾಬಾ
ಕ: ನಿಮ್ಮ ಗುರುವಿನ ಹೆಸರೇನು?
ಬಾಬಾ: ವೆಂಕೂಸಾ
ಕ: ನಿಮ್ಮ ಮತ?
ಬಾಬಾ: ಕಬೀರರ ಮತ
ಕ: ನಿಮ್ಮ ಜಾತಿ?
ಬಾಬಾ: ದೈವ ಜಾತಿ
ಕ: ನಿಮ್ಮ ವಯಸ್ಸು?
ಬಾಬಾ: ಲಕ್ಷಾಂತರ ವರ್ಷಗಳು.
ಕ: ನೀವು ಸುಳ್ಳು ಹೇಳುತ್ತಿಲ್ಲವೆಂದು ಪ್ರಮಾಣ ಮಾಡಿ
ಬಾಬಾ: ನಾನು ಹಿಂದೆಂದೂ ಸುಳ್ಳು ಹೇಳಿಲ್ಲ. ಇನ್ನು ಮುಂದೆಯೂ ಹೇಳುವುದಿಲ್ಲ.
ಕ: ಈ ಆರೋಪಿಯನ್ನು ಬಲ್ಲಿರಾ?
ಬಾಬಾ: ನನಗೆ ತಿಳಿಯದೇ ಇರುವವರು ಯಾರೂ ಇಲ್ಲ.
ಕ: ಇವನು ನಿಮ್ಮ ಭಕ್ತನೆಂದೂ, ನಿಮಗೆ ಇವನು ಗೊತ್ತು ಎಂದೂ ಹೇಳುತ್ತಿದ್ದಾನೆ.
ಬಾಬಾ: ಅವನು ಹಾಗೆ ಹೇಳಿದ್ದರೆ ಅದು ನಿಜ. ಎಲ್ಲರೂ ನನ್ನವರೇ.
ಕ: ನೀವು ಈ ಆಭರಣಗಳನ್ನು ಇವನಿಗೆ ಕೊಟ್ಟಿರಾ?
ಬಾಬಾ: ಈ ಪ್ರಪಂಚದಲ್ಲಿ ಯಾರಿಗೆ ಏನು ಬೇಕೋ ಅದನ್ನೆಲ್ಲಾ ನನ್ನಿಂದಲೇ ಪಡೆಯುತ್ತಾರೆ.
ಕ: ಯಾವ ಅಧಿಕಾರದಿಂದ ಅವನ್ನು ಅವನಿಗೆ ಕೊಟ್ಟಿರಿ?
ಬಾಬಾ: ಈ ಪ್ರಪಂಚದಲ್ಲಿರುವುದೆಲ್ಲವೂ ನನ್ನದೇ.
ಕ: ಇದೊಂದು ಗುರುತರವಾದ ಅಪರಾಧ. ಈ ಅಪರಾಧಿ ಇವೆಲ್ಲ ನೀವೇ ಕೊಟ್ಟಿದ್ದು ಎಂದು ಹೇಳುತ್ತಿದ್ದಾನೆ.
ಬಾಬಾ: ಇದೇನು ಹುಚ್ಚಾಟ? ಇದಕ್ಕೂ ನನಗೂ ಯಾವ ಸಂಬಂಧವೂ ಇಲ್ಲ.
ಇದರಿಂದ ಕಮೀಷನರ್ ಏನೂ ಮಾಡಲಾಗದೆ ಹಳ್ಳಿಯ ದಿನಚರಿಯ ಆಧಾರದಿಂದ ಅಪರಾಧಿ ಶಿರಡಿಗೆ ಬಂದೇ ಇರಲಿಲ್ಲವೆಂದೂ, ಬಾಬಾ ಎಂದೂ ಶಿರಡಿಯನ್ನು ಬಿಟ್ಟು ಹೊರಗೆ ಹೋಗಿಲ್ಲವೆಂದೂ ತೀರ್ಮಾನಿಸಿ, ಆದ್ದರಿಂದ ಅಪರಾಧಿ ಹೇಳುತ್ತಿರುವುದು ನಿಜವಲ್ಲ ಎಂದು ರಿಪೋರ್ಟ್ ಕಳುಹಿಸಿದರು. ಆ ಕಳ್ಳನಿಗೆ ನಂತರ ಶಿಕ್ಷೆಯಾಯಿತು. (ಇದರಿಂದ ಬಾಬಾ ತಾವು ದೇವರೆಂದೇ ಹೇಳಿದರು ಎಂದು ಶ್ರೀ ನರಸಿಂಹ ಸ್ವಾಮಿಯವರು ತಮ್ಮ “ಭಕ್ತರ ಅನುಭವಗಳು” ಎಂಬ ಪುಸ್ತಕದಲ್ಲಿ ಬರೆದಿದ್ದಾರೆ.)
ಬಾಬಾರ ಪದ್ಧತಿಗಳು ಮತ್ತು ಚಿಕಿತ್ಸೆ
ಬಾಬಾ ಭಕ್ತರಿಂದ ತೆಗೆದುಕೊಂಡ ದಕ್ಷಿಣೆಯನ್ನು ಬಡವರು, ಭಿಕ್ಷುಕರು ಮತ್ತಿತರಿಗೆ ಅಂದಂದೇ ಹಂಚಿಬಿಡುತ್ತಿದ್ದರು. ಕೈಹಾಕಿ ಎಷ್ಟು ಸಿಕ್ಕಿದರೆ ಅಷ್ಟು ಕೊಡುತ್ತಿದ್ದರು. ಕೆಲವರಿಗೆ ೧ ರೂ, ಕೆಲವರಿಗೆ ೫ ರೂ, ಮತ್ತೆ ಕೆಲವರಿಗೆ ೧೦, ೨೦, ೫೦ ರೂ ಗಳವರೆಗೆ ಕೊಡುತ್ತಿದ್ದರು. ಆದರೆ ಅವರು ಕೊಡುತ್ತಿದ್ದ ಮೊತ್ತ ಪ್ರತಿದಿನವೂ ಒಂದೇ ಆಗಿರುತ್ತಿತ್ತು. ಧುನಿಗೆ ಕಟ್ಟಿಗೆಗೋಸ್ಕರ ಮತ್ತು ತಂಬಾಕು ಕೊಳ್ಳಲು ಸ್ವಲ್ಪ ಹಣ ಉಪಯೋಗಿಸಿಕೊಳ್ಳುತ್ತಿದ್ದರು. ಅವರಿಂದ ಹಣ ಪಡೆದವರು ಹಾಗೆ ಕೊಟ್ಟ ಹಣವನ್ನು ಒಳ್ಳೆಯ ಕಾರ್ಯಗಳಿಗೋಸ್ಕರವೇ ಉಪಯೋಗಿಸುತ್ತಿದ್ದರು. ಬಾಬಾ ಕೆಲವುಸಲ ದಕ್ಷಿಣೆಯ ಹಣವನ್ನೇ ಖರ್ಚುಮಾಡಿ ಗಣಪತಿ, ಶನಿ, ಶಂಕರ-ಪಾರ್ವತಿ, ಮಾರುತಿ ಮುಂತಾದ ದೇವಸ್ಥಾನಗಳನ್ನು ತಾತ್ಯಾ ಕೈಲಿ ದುರಸ್ತಿ ಮಾಡಿಸಿದ್ದರು.
ಬಾಬಾರ ದರ್ಶನಕ್ಕೆ ಬಂದವರಲ್ಲಿ ಅನೇಕ ರೋಗಿಗಳು ನಿರೋಗಿಗಳಾದರು. ಕೆಟ್ಟವರು ಗುಣವಂತರಾದರು. ಇಂತಹ ಅನೇಕ ಅದ್ಭುತಗಳ ವಿಷಯ ಕರ್ಣಾಕರ್ಣಿಕೆಯಾಗಿ ಹರಡಿ, ಶಿರಡಿಗೆ ಜನ ದೂರದೂರಗಳಿಂದ ಬರಲಾರಂಭಿಸಿದರು.
ಬಾಬಾ ಯಾವಾಗಲೂ ಬಿಳಿಯಬಟ್ಟೆಯನ್ನೇ ಹಾಕಿಕೊಳ್ಳುತ್ತಿದ್ದರು. ತಲೆಯಮೇಲೆ ಶಿರೋವಸ್ತ್ರ, ಉದ್ದ ತೋಳಿನ ಅಂಗಿ (ಕಫ್ನಿ), ಒಂದು ತುಂಡು ಪಂಚೆ ಇದಿಷ್ಟೇ ಅವರ ದಿರಸು. ಸ್ನಾನವಾದ ಮೇಲೆ ಅವರು ಧುನಿಯ ಹತ್ತಿರ ಕುಳಿತುಕೊಳ್ಳುತ್ತಿದ್ದರು. ಅನೇಕ ಸಲ ಅವರು ದಿನಗಟ್ಟಳೆ ಸ್ನಾನವನ್ನೇ ಮಾಡುತ್ತಿರಲಿಲ್ಲ. ಕೇಳಿದರೆ ಈಗ ತಾನೇ ಗಂಗೆಯಲ್ಲಿ ಮಿಂದು ಬಂದೆ ಎಂದು ಹೇಳುತ್ತಿದ್ದರು.
ಅವರು ಮೊದಮೊದಲು ಔಷಧಗಳನ್ನು ಕೊಟ್ಟು ರೋಗಗಳನ್ನು ಗುಣಪಡಿಸುತ್ತಿದ್ದರು. ಒಂದು ಸಲ ಒಬ್ಬನಿಗೆ ಕಣ್ಣು ಊದಿಕೊಂಡು ಕೆಂಪಾಗಿತ್ತು. ಊರಿನಲ್ಲಿ ಯಾವ ವೈದ್ಯನೂ ಇಲ್ಲದಿದ್ದುದರಿಂದ ಅವನನ್ನು ಬಾಬಾರ ಬಳಿ ಕರೆತಂದರು. ಬಾಬಾ ಬೀಬಾ ಕಾಯಿಯ ಬೀಜಗಳನ್ನು ಪುಡಿಮಾಡಿ ಕಣ್ಣಿಗೆ ಹಾಕಿ ಕಟ್ಟು ಕಟ್ಟಿದರು. ಮಾರನೆಯದಿನ ಕಟ್ಟು ಬಿಚ್ಚಿ ನೀರಿನಲ್ಲಿ ಕಣ್ಣು ಚೆನ್ನಾಗಿ ತೊಳೆದರು. ಅವನ ಕಣ್ಣಿನ ಬೇನೆಯೆಲ್ಲಾ ವಾಸಿಯಾಗಿ ಕಣ್ಣು ಸರಿಹೋಯಿತು. ಬೇರೆ ವೈದ್ಯರಾಗಿದ್ದರೆ ಕರ್ಪೂರ, ಹಸುವಿನ ಹಾಲು ಮುಂತಾದುವನ್ನು ಉಪಯೋಗಿಸಿ ವೈದ್ಯ ಮಾಡುತ್ತಿದ್ದರು. ಆದರೆ ಬಾಬಾರ ಚಿಕಿತ್ಸೆಯ ರೀತಿಯೇ ವಿಚಿತ್ರ. ಹೀಗೆ ಅಸಂಪ್ರದಾಯ ವೈದ್ಯವನ್ನು ಮಾಡಿ ಬಾಬಾ ಅನೇಕ ರೋಗಗಳನ್ನು ಗುಣಪಡಿಸಿದ್ದರು. ಒಂದುಸಲ ರೋಗಿಯೊಬ್ಬನಿಗೆ ಔಷಧ ಕೊಟ್ಟು ಕೆಲವು ನಿಯಮಗಳನ್ನು ತಪ್ಪದೇ ಪಾಲಿಸಬೇಕೆಂದು ಹೇಳಿದರು. ಆದರೆ ಆ ರೋಗಿ ನಿಯಮಗಳನ್ನು ಪಾಲಿಸದೇ ರೋಗ ಉಲ್ಬಣವಾಗಿ ಸತ್ತುಹೋದ. ಅಂದಿನಿಂದ ಬಾಬಾ ಔಷಧಗಳನ್ನು ಕೊಡುವುದನ್ನು ನಿಲ್ಲಿಸಿ ಬರಿಯ ಉದಿಯನ್ನೇ ಎಲ್ಲದಕ್ಕೂ ಔಷಧವಾಗಿ ಕೊಡುತ್ತಿದ್ದರು.
ಬಾಬಾರ ಯೋಗಾಭ್ಯಾಸಗಳು
ಬಾಬಾ ಶಿರಡಿಗೆ ಬರುವ ವೇಳೆಗಾಗಲೇ ಯೋಗಪೂರ್ಣರಾಗಿದ್ದರು. ಅವರ ಯೋಗ ಶಕ್ತಿ ಹೇಗಿತ್ತು ಎಂಬುದನ್ನು ಕೆಳಗಿನ ಎರಡು ಉದಾಹರಣೆಗಳು ತೋರಿಸುತ್ತವೆ.
೧. ಧೌತಿ - ೩" ಅಗಲ, ೨೨ ೧/೨ " ಉದ್ದ ಇರುವ ಬಟ್ಟೆಯೊಂದನ್ನು ನುಂಗಿ ಹೊಟ್ಟೆಯಲ್ಲಿ ಸ್ವಲ್ಪ ಹೊತ್ತು ಬಿಟ್ಟಿದ್ದು ನಂತರ ಹೊರಕ್ಕೆ ತೆಗೆಯುವುದನ್ನು ಧೌತಿ ಕ್ರಿಯೆ ಎನ್ನುತ್ತಾರೆ. ಆದರೆ ಬಾಬಾರ ಧೌತಿ ಕ್ರಿಯೆಯೇ ವಿಚಿತ್ರವಾಗಿತ್ತು. ಲೆಂಡಿಯ ಹತ್ತಿರ ಯಾರಿಗೂ ಕಾಣದ ಹಾಗೆ ಹೋಗಿ, ತಮ್ಮ ಹೊಟ್ಟೆಯಿಂದ ಕರುಳನ್ನು ತೆಗೆದು, ಅದನ್ನು ಚೆನ್ನಾಗಿ ತೊಳೆದು, ಒಣಗಿಸಿ ಮತ್ತೆ ಹೊಟ್ಟೆಯೊಳಕ್ಕೆ ಸೇರಿಸುತ್ತಿದ್ದರು. ಇಂತಹ ಅದ್ಭುತ ಧೌತಿಕ್ರಿಯೆಯನ್ನು ಕಣ್ಣಾರೆ ನೋಡಿದವರು ಆಶ್ಚರ್ಯಪಟ್ಟು ಬಾಬಾ ಯೋಗಸಿದ್ಧರು ಎಂದು ಹೇಳುತ್ತಿದ್ದರು.
೨. ಖಂಡ ಯೋಗ - ಇದೊಂದು ಅಸದೃಶ ಯೋಗಕ್ರಿಯೆ. ದೇಹದ ಅಂಗಗಳನ್ನು ಬೇರೆ ಬೇರೆ ಮಾಡಿ ತೆಗೆದಿಟ್ಟು, ಒರೆಸಿ, ಒಣಗಿಸಿ ಮತ್ತೆ ದೇಹಕ್ಕೆ ಜೋಡಿಸುವುದನ್ನು ಖಂಡ ಯೋಗ ಎನ್ನುತ್ತಾರೆ. ಇದನ್ನು ಬಾಬಾ ಅಗಾಗ ಮಾಡುತ್ತಿದ್ದರು. ಒಂದುಸಲ ಅವರು ಹೀಗೆ ಖಂಡಯೋಗ ನಿರತರಾಗಿದ್ದಾಗ ಒಬ್ಬರು ಅದನ್ನು ನೋಡಿ, ಬಾಬಾರನ್ನು ಯಾರೋ ಕೊಲೆಮಾಡಿದ್ದಾರೆ ಎಂದು ಹೆದರಿ ದುಃಖಿತರಾದರು. ಅವರು ಇದನ್ನು ಯಾರಿಗೂ ಹೇಳುವಹಾಗಿರಲಿಲ್ಲ. ಏಕೆಂದರೆ ಜನ ಅವರನ್ನೇ ಕೊಲೆಗಾರ ಎಂದು ಶಂಕಿಸಬಹುದು. ರಾತ್ರಿಯೆಲ್ಲ ನಿದ್ದೆಯಿಲ್ಲದೆ ಒದ್ದಾಡಿದರು. ಮತ್ತೆ ಬೆಳಗ್ಗೆ ಮಸೀದಿಗೆ ಹೋಗಿ ನೋಡಿದರೆ ಬಾಬಾ ಎಂದಿನಂತೆ ಭಕ್ತರ ಜೊತೆಯಲ್ಲಿ ಕೂತು ಮಾತನಾಡುತ್ತಿದ್ದಾರೆ. ಆ ಮನುಷ್ಯನಿಗೆ ಸಂತೋಷಾಶ್ಚರ್ಯಗಳಿಂದ ಮಾತೇ ಹೊರಡಲಿಲ್ಲ.
ಆದರೆ ಬಾಬಾ ಈ ಸಿದ್ಧಿಗಳನ್ನು ತಮ್ಮ ಸ್ವಂತಕ್ಕಾಗಿ ಎಂದೂ ಉಪಯೋಗಿಸಲಿಲ್ಲ. ಭಕ್ತರಿಗೆ ಏನಾದರೂ ಸಹಾಯ ಮಾಡಬೇಕಾದಾಗ ಮಾತ್ರ, ಅದೂ ಅತಿ ಅವಶ್ಯವೆಂದರೆ ಮಾತ್ರ, ಈ ಸಿದ್ಧಿಗಳ ಉಪಯೋಗಮಾಡುತ್ತಿದ್ದರು. ತಮ್ಮ ಕೈ ಸುಟ್ಟಾಗಲೂ ಅವರು ವೈದ್ಯಕೀಯ ಸಹಾಯವನ್ನೂ ಬೇಡವೆಂದು, ಗಾಯ ತಾನೇ ಒಣಗಿಹೋಗಲು ಬಿಟ್ಟರು. ಭಕ್ತರ ಹೇಳತೀರದ ನೋವನ್ನು ಅವರು ತಮ್ಮ ಮೇಲೇ ತೆಗೆದುಕೊಂಡು ಭಕ್ತರ ನೋವನ್ನು ನಿವಾರಿಸುತ್ತಿದ್ದರು.
ಕಮ್ಮಾರನ ಮಗುವನ್ನು ರಕ್ಷಿಸಿದ್ದು
ಒಂದುಸಲ ಬಾಬಾ ಧುನಿಯ ಹತ್ತಿರ ಕುಳಿತಿದ್ದವರು, ಇದ್ದಕಿದ್ದಂತೆ ಧುನಿಯೊಳಕ್ಕೆ ಕೈಯಿಟ್ಟು ಏನನ್ನೋ ಹೊರಕ್ಕೆ ತೆಗೆದಂತೆ ಮಾಡಿದರು. ಧುನಿ ಜೋರಾಗಿ ಉರಿಯುತ್ತಿದ್ದು ಅವರ ಕೈ ಸುಟ್ಟುಹೋಯಿತು. ನೋಡುತ್ತಿದ್ದವರಿಗೆಲ್ಲ ಆಘಾತವಾಯಿತು. ಹತ್ತಿರವೇ ಇದ್ದ ಶ್ಯಾಮಾ ಬಾಬಾರನ್ನು ಹಿಂದಕ್ಕೆ ಹಿಡಿದೆಳೆದರು. ಆದರೂ ಬಾಬಾರ ಕೈ ಸುಟ್ಟುಹೋಗಿತ್ತು. ಶ್ಯಾಮಾ ಆರ್ತರಾಗಿ "ಹೀಗೇಕೆ ಮಾಡಿದಿರಿ, ಬಾಬಾ?" ಏಂದು ಕೇಳಿದರು. ಅದಕ್ಕೆ ಬಾಬಾ ಎಚ್ಚರಗೊಂಡು, "ಕಮ್ಮಾರನ ಹೆಂಡತಿ, ಮಗುವನ್ನು ತೊಡೆಯಮೇಲಿಟ್ಟುಕೊಂಡು ತಿದಿ ಒತ್ತುತ್ತಿದ್ದಳು. ಅವಳ ಗಂಡ ಕರೆದಿದ್ದರಿಂದ, ತಕ್ಷಣವೆ ಎದ್ದಳು. ಆಗ ಆ ಮಗು ಎದುರಿಗಿದ್ದ ಕುಲುಮೆಯೊಳಕ್ಕೆ ಬೀಳುವುದರಲ್ಲಿತ್ತು. ನಾನು ಕೈಯಿಟ್ಟು ಆ ಮಗುವನ್ನು ಈಚೆಗೆ ಎಳೆದೆ. ನನ್ನ ಕೈ ಸುಟ್ಟರೇನಂತೆ, ಮಗು ಉಳಿಯಿತಲ್ಲ. ಅದೇ ಸಾಕು" ಎಂದರು. ಎಲ್ಲೋ ದೂರದಲ್ಲಿದ್ದ ಒಬ್ಬ ಭಕ್ತನ ಮಗುವನ್ನು ಉಳಿಸಲು ಬಾಬಾ ತಮ್ಮ ಕೈಯನ್ನೇ ಧುನಿಯಲ್ಲಿಟ್ಟರು. ಇದು ಅವರ ಕರುಣಾಮಯ, ದಯಾಹೃದಯ ಹಾಗೂ ಅವರ ಸರ್ವವ್ಯಾಪಕತ್ವವನ್ನು ತೋರಿಸುವ ಒಂದು ಸಣ್ಣ ದೃಷ್ಟಾಂತ.
ಬಾಬಾರ ಕೈ ಸುಟ್ಟ ವಿಷಯವನ್ನು ಶ್ಯಾಮ ನಾನಾಸಾಹೇಬ್ ಚಾಂದೋರ್ಕರರಿಗೆ ತಿಳಿಸಿದರು. ಅವರು ತಕ್ಷಣವೇ ಒಬ್ಬ ವೈದ್ಯತಜ್ಞ ಡಾ. ಪರಮಾನಂದ ಎಂಬುವವರನ್ನು ತಕ್ಕ ಔಷಧಿಗಳೊಂದಿಗೆ ಕರೆದುಕೊಂಡು ಬಂದರು. ಬಾಬಾರನ್ನು “ಕೈತೋರಿಸಿ, ಅದಕ್ಕೆ ಡಾಕ್ಟರ್ ತಕ್ಕ ಚಿಕಿತ್ಸೆ ಮಾಡಲಿ” ಎಂದು ಎಷ್ಟು ಕೇಳಿಕೊಂಡರೂ ಬಾಬಾ ಅದಕ್ಕೆ ಒಪ್ಪಲೇಯಿಲ್ಲ. "ಅಲ್ಲಾ ಮಾಲೀಕ್ ನನ್ನ ವೈದ್ಯ, ಅವನೇ ಎಲ್ಲಾ ನೋಡಿಕೊಳ್ಳುತ್ತಾನೆ" ಎಂದುಬಿಟ್ಟರು. ತಮ್ಮ ಭಕ್ತ, ಕುಷ್ಠು ರೋಗಿ, ಭಾಗೋಜಿ ಶಿಂಧೆ ದಿನವೂ ಸುಟ್ಟ ಜಾಗವನ್ನು ನೀವಿ ಅದಕ್ಕೆ ತುಪ್ಪ ಹಚ್ಚಿ ಅದರ ಮೇಲೆ ಕಟ್ಟು ಕಟ್ಟುತ್ತಿದ್ದ. ಭಾಗೋಜಿ ಹಾಗೆ ಮಾಡಲು ಬಿಟ್ಟರೇ ಹೊರತು ಡಾಕ್ಟರ್ ಕೈ ನೋಡಲು ಬಿಡಲೇ ಇಲ್ಲ. ಈ ನೆವದಲ್ಲಿ ಡಾ. ಪರಮಾನಂದರಿಗೆ ಬಾಬಾರ ದರ್ಶನ ದೊರೆಯಿತೇ ಹೊರತು ಅವರಿಗೆ ಬಾಬಾರ ಚಿಕಿತ್ಸಾ ಸೇವಾ ಭಾಗ್ಯ ದೊರೆಯಲಿಲ್ಲ.
ಭಾಗೋಜಿ ನಿಜವಾಗಿಯೂ ಅದೃಷ್ಟವಂತನೆಂದೇ ಹೇಳಬೇಕು. ಏಕೆಂದರೆ ಕೈ ಪೂರ್ತಿ ವಾಸಿಯಾದ ಮೇಲೂ, ಬಹುಶಃ ಭಾಗೋಜಿಯನ್ನು ಅಶೀರ್ವದಿಸಿ ಅವನ ಪಾಪಕ್ಷಾಳನವಾಗುವಂತೆಮಾಡಲು, ಈ ನೆವದಲ್ಲಿ ಅವನನ್ನು ತಮ್ಮ ಕೊನೆಯ ದಿನಗಳವರೆಗೂ ಈ ಚಿಕಿತ್ಸೆ ಮುಂದುವರೆಸುವಂತೆ ಮಾಡಿದರು.
ಖಾಪರ್ಡೆ ಮಗನ ಪ್ಲೇಗ್ ನಿವಾರಣೆ
ಅಮರಾವತಿಯ ದಾದಾಸಾಹೇಬ್ ಖಾಪರ್ಡೆ, ಹೆಂಡತಿ ಮಗನೊಡನೆ ಶಿರಡಿಗೆ ಬಂದು ಕೆಲವುಕಾಲ ಇದ್ದರು. ಅವರಲ್ಲಿದ್ದಾಗ ಶಿರಡಿಯಲ್ಲಿ ಪ್ಲೇಗ್ ಕಾಣಿಸಿಕೊಂಡಿತು. ಖಾಪರ್ಡೆಯ ಮಗನಿಗೂ ಪ್ಲೇಗ್ ತಾಕಿತು. ಹುಡುಗನ ತಾಯಿ ಹೆದರಿ ಕಣ್ಣೀರಿಟ್ಟು ಅಮರಾವತಿಗೆ ಹಿಂತಿರುಗಬೇಕೆಂದುಕೊಂಡಳು. ಬಾಬಾ ಲೆಂಡಿಯಿಂದ ಮಸೀದಿಗೆ ಹಿಂತಿರುಗುತ್ತಿದ್ದಾಗ, ಅವರನ್ನು ಕಂಡು, ಕಣ್ಣೀರಿಟ್ಟುಕೊಂಡು ಹಿಂತಿರುಗಲು ಅನುಮತಿ ಬೇಡಿದಳು. ಆಗ ಬಾಬಾ ತಮ್ಮ ಕಫ್ನಿಯನ್ನು ಸೊಂಟದವರೆಗೂ ಮೇಲಕ್ಕೆತ್ತಿ, ಅಲ್ಲಿದ್ದ ನಾಲಕ್ಕು ಮೊಟ್ಟೆಯ ಗಾತ್ರದ ಪ್ಲೇಗ್ ಗಡ್ಡೆಗಳನ್ನು ತೋರಿಸಿ, "ಆಕಾಶದಲ್ಲಿ ಮೋಡ ಮುಚ್ಚಿದೆ. ಮಳೆ ನಿಂತ ಮೇಲೆ ಆಕಾಶ ನಿರ್ಮಲವಾಗುತ್ತದೆ. ಅದಕ್ಕೇಕೆ ಇಷ್ಟು ಯೋಚಿಸಬೇಕು? ಇಲ್ಲಿ ನೋಡು. ನಿನ್ನ ಮಗನಿಗೋಸ್ಕರ, ನಾನು ನಿನ್ನ ನೋವನ್ನೆಲ್ಲಾ ತೆಗೆದುಕೊಂಡಿದ್ದೇನೆ. ನಿನ್ನ ನೋವೆಲ್ಲಾ ನನ್ನದೇ" ಎಂದರು. ಇದನ್ನು ಕಂಡು ಅಲ್ಲಿದ್ದ ಜನರೆಲ್ಲಾ ನಿಬ್ಬೆರಗಾದರು.
ಮಹಾತ್ಮರು ತಮ್ಮ ಭಕ್ತರ ನೋವು ದುಃಖಗಳನ್ನು ತಾವೇ ಭರಿಸಿ ಅವರ ನೋವು ಪರಿಹಾರವಾಗುವಂತೆ ಮಾಡುತ್ತಾರೆ. ಅದರಿಂದ ಅವರಿಗೆ ಯಾವ ಲಾಭವೂ ಇಲ್ಲ. ಅದು ಭಕ್ತರ ಮೇಲಿನ ಪ್ರೀತಿ. ಭಕ್ತರು ಅವರ ಮಕ್ಕಳಂತೆ. ಭಕ್ತರಿಗೋಸ್ಕರ ಅವರು ಏನು ಮಾಡಲೂ ಹಿಂತೆಗೆಯುವುದಿಲ್ಲ. ಹಾಗೆ ಅವರ ನೋವುಗಳನ್ನು ತೀರಿಸಿ ಅವರನ್ನು ತಮ್ಮ ದಾರಿಗೆ ಕ್ರಮಕ್ರಮವಾಗಿ ಎಳೆದುಕೊಳ್ಳುತ್ತಾರೆ. ಇದೇ ಅವರ ಅವತಾರದ ಕಾರ್ಯ.
ಬಾಬಾರ ಪಂಡರಪುರಯಾತ್ರೆ
ಬಾಬಾರ ಪರಮ ಭಕ್ತ, ಖಾಂದೇಶ್‍ನ ನಂದುರಬಾರ್‌ನಲ್ಲಿ ಮಾಮಲತದಾರರಾಗಿದ್ದ ನಾನಾಸಾಹೇಬ್ ಚಾಂದೋರ್ಕರರಿಗೆ, ಪಂಡರಪುರಕ್ಕೆ ವರ್ಗವಾಯಿತು. ತಕ್ಷಣವೇ ಕೆಲಸಕ್ಕೆ ಹಾಜರಾಗಬೇಕಾಗಿತ್ತು. ಅವರು ಮೊದಲು ಶಿರಡಿಗೆ ಹೋಗಿ, ಬಾಬಾರ ದರ್ಶನ ಮಾಡಿ ಅವರ ಆಶೀರ್ವಾದ ಪಡೆದು ಪಂಡರಪುರಕ್ಕೆ ಹೋಗಬೇಕೆಂದುಕೊಂಡರು.
ಸಮಯಾನುಕೂಲ ಇಲ್ಲದುದರಿಂದ ಅವರು ಯಾರಿಗೂ ಈ ವಿಷಯ ತಿಳಿಸಲಾಗಲಿಲ್ಲ. ಆದರೆ ಸರ್ವಜ್ಞರಾದ ಬಾಬಾರಿಂದ ಏನನ್ನು ತಾನೇ ಮುಚ್ಚಿಡಲು ಸಾಧ್ಯ? ಅವರಿನ್ನೂ ಶಿರಡಿಯ ಹತ್ತಿರಕ್ಕೆ ಬರುತ್ತಿದ್ದಹಾಗೇ, ಮಸೀದಿಯಲ್ಲಿ ಭಕ್ತರೊಡನೆ ಕುಳಿತಿದ್ದ ಬಾಬಾ ಅಕಾರಣವಾಗಿ "ಪಂಡರಪುರದ ಬಾಗಿಲು ತೆರೆದಿದೆ. ನಾವು ಭಜನೆ ಮಾಡೋಣ" ಎಂದು,
"ನಾನು ಪಂಡರಪುರಕ್ಕೆ ಹೋಗುತ್ತೇನೆ, ಹೋಗುತ್ತೇನೆ.
ಅಲ್ಲೇ ಇರುತ್ತೇನೆ ಇರುತ್ತೇನೆ. ನಾನಲ್ಲಿಯೇ ಇರುತ್ತೇನೆ.
ನನ್ನ ಪ್ರಭುವಿನ ಮನೆಯಲ್ಲಿ ಇರುತ್ತೇನೆ"
ಎಂದು ಭಜನೆ ಮಾಡಲು ಆರಂಬಿಸಿದರು. ಸ್ವಲ್ಪಹೊತ್ತಿನಲ್ಲೇ ನಾನಾಸಾಹೇಬ್ ಶಿರಡಿ ಸೇರಿ, ನೇರವಾಗಿ ಬಾಬಾರ ದರ್ಶನಕ್ಕೆ ಬಂದರು. ಬಾಬಾರಿಗೆ ನಮಸ್ಕಾರಮಾಡಿ ಬಾಬಾರನ್ನು ತಮ್ಮೊಡನೆ ಪಂಡರಪುರಕ್ಕೆ ಬರಲು ಕೇಳಿಕೊಂಡರು. ಅಲ್ಲಿದ್ದ ಭಕ್ತರು, "ನೀವು ಅವರನ್ನು ಕೇಳಬೇಕಾದ ಅವಶ್ಯಕತೆಯೇ ಇಲ್ಲ. ನೀವು ಕೇಳುವುದಕ್ಕೆ ಮುಂಚೆಯೇ ಬಾಬಾ, 'ಪಂಡರಪುರಕ್ಕೆ ಹೋಗೋಣ' ಎಂದು ಭಜನೆ ಮಾಡುತ್ತಿದ್ದರು" ಎಂದು ಹೇಳಿದರು. ನಾನಾಸಾಹೇಬ್ ತಮ್ಮ ಆಸೆ ನೆರವೇರಿತು ಎಂದು ಅತೀವ ಸಂತೋಷದಿಂದ ತುಂಬಿಹೋದರು.
ಇದರೊಡನೆ ಬಾಬಾರ ಅಪೂರ್ವ ಅವತಾರ ಇತ್ಯಾದಿ ವಿಷಯಗಳನ್ನು ಕುರಿತು ಹೇಳುವ ಏಳನೆಯ ಅಧ್ಯಾಯ ಮುಗಿಯಿತು. ಮುಂದಿನ ಅಧ್ಯಾಯದಲ್ಲಿ ಹೇಮಾಡ್ ಪಂತ್ ಮನುಷ್ಯ ಜನ್ಮದ ಪ್ರಾಮುಖ್ಯತೆ, ಬಾಬಾರ ಭಿಕ್ಷೆ, ಬಾಯಿಜಾಬಾಯಿಯ ಸೇವೆ, ಕುಶಾಲಚಂದರ ಮೇಲೆ ಬಾಬಾರ ಪ್ರೀತಿ ಇತ್ಯಾದಿ ವಿಷಯಗಳನ್ನು ಹೇಳುತ್ತಾರೆ.
||ಶ್ರೀ ಸದ್ಗುರು ಸಾಯಿನಾಥಾರ್ಪಣಮಸ್ತು||ಶುಭಂ ಭವತು||
||ಓಂ ಶಾಂತಿಃ ಶಾಂತಿಃ ಶಾಂತಿಃ||
||ಓಂ ಶಾಂತಿಃ ಶಾಂತಿಃ ಶಾಂತಿಃ||
No comments:
Post a Comment