Friday, December 9, 2011

||ಎರಡನೆಯ ಅಧ್ಯಾಯ||


||ಶ್ರೀ ಸಾಯಿ ಸಚ್ಚರಿತ್ರೆ||
||ಎರಡನೆಯ ಅಧ್ಯಾಯ||
||ಗ್ರಂಥರಚನೆಯ ಉದ್ದೇಶ||
ಶ್ರೀ ಗಣೇಶಾಯ ನಮಃ ಶ್ರೀ ಸರಸ್ವತಯೇ ನಮಃ
ಶ್ರೀ ವೆಂಕಟೇಶಾಯ ನಮಃ ಶ್ರೀ ಸಾಯಿನಾಥಾಯ ನಮಃ
ಶ್ರೀ ಸದ್ಗುರುಭ್ಯೋನ್ನಮಃ

ಅಧ್ಯಾಯದಲ್ಲಿ ಹೇಮಾಡ್ ಪಂತರು, ತಾವು ಗ್ರಂಥ ರಚನೆ ಮಾಡಲು ಕಾರಣಗಳು, ಯಾರು ಇದನ್ನು ಓದಲು ಅರ್ಹರು, ಮತ್ತು ಇತರ ವಿಷಯಗಳನ್ನು ಹೇಳುತ್ತಾರೆ.

ಗ್ರಂಥರಚನೆಯ ಉದ್ದೇಶ

ಹಿಂದಿನ ಅಧ್ಯಾಯದಲ್ಲಿ ಹೇಮಾಡ್ ಪಂತ್, ಬಾಬಾ ಗೋಧಿಹಿಟ್ಟನ್ನು ಹಳ್ಳಿಯ ಸುತ್ತಲೂ ಚೆಲ್ಲಿ ಹೇಗೆ ಕಾಲರಾ ವ್ಯಾಧಿಯನ್ನು ಹೊರಗಟ್ಟಿದರು ಎಂಬುದನ್ನೂ, ಶಿರಡಿಯ ಜನರು ಅದರ ಅಂತರಾರ್ಥವೇನು ಎಂದು ಹೇಳಿದ್ದನ್ನೂ ವಿವರಿಸಿದ್ದಾರೆ. ಶಿರಡಿಯ ಜನ ಅವರಿಗೆ ಬಾಬಾರ ಇನ್ನೂ ಅನೇಕ ಇಂತಹ ಲೀಲೆಗಳನ್ನೂ ಹೇಳಿದರು. ಅದನ್ನೆಲ್ಲಾ ಕೇಳಿದ ಹೇಮಾಡ್ ಪಂತ್ ಬಹಳ ಉಲ್ಲಾಸಗೊಂಡು , ಲೀಲೆಗಳನ್ನೆಲ್ಲ ಬರೆದು ಗ್ರಂಥಸ್ಥ ಮಾಡಿದರೆ, ಅದು ಓದಿದವರಿಗೆ ಕುತೂಹಲ ಹುಟ್ಟಿಸುವುದು ಮಾತ್ರವೇ ಅಲ್ಲ, ಬೋಧಪ್ರದವಾಗಿಯೂ ಇರುತ್ತದೆ ಎಂದು ಯೋಚಿಸಿ ಅದನ್ನು ಗ್ರಂಥಸ್ಥ ಮಾಡಲು ನಿರ್ಧರಿಸಿದರು. ಬಾಬಾರ ಚರಿತ್ರೆಯನ್ನು ಓದುವುದರಿಂದಲೂ, ಕೇಳುವುದರಿಂದಲೂ ಪಾಪ ಪರಿಹಾರವಾಗಿ ಶಾಂತಿ ಸಾಮರಸ್ಯಗಳು ನೆಲೆಯೂರಲು ಅನುಕೂಲವಾಗುತ್ತದೆ ಎಂದೂ ಯೋಚಿಸಿದರು. ಆದರೆ ಮಹಾತ್ಮರ, ಸಂತರ ಜೀವನ ಚರಿತ್ರೆ ಬರೆಯುವುದು ಅಷ್ಟು ಸುಲಭಸಾಧ್ಯವಲ್ಲ. ಅವರ ಜೀವನದಲ್ಲಿ ಒಂದು ಅನುಕ್ರಮತೆ ಇರುವುದಿಲ್ಲ. ಸುಲಭವಾಗಿ ಅರ್ಥಮಾಡಿಕೊಳ್ಳಲೂ ಸಾಧ್ಯವಲ್ಲ. ಸಾಮಾನ್ಯ ಜನರಿಗೆ ಸಂತರ ಜೀವನವನ್ನು ನಿರ್ದಿಷ್ಟ ರೀತಿಯಲ್ಲಿ ಅರ್ಥಮಾಡಿಕೊಳ್ಳುವ ಹಾಗೆ ಯಾರು ಬರೆಯಬಲ್ಲರೋ ಅಂತಹವರು ನಿಜವಾಗಿಯೂ ಪುಣ್ಯಶಾಲಿಗಳೇ. ಸದಾ ಸಂತರ ಕಥೆಗಳನ್ನು ಕೇಳುತ್ತಾ, ಮನನಮಾಡುತ್ತ ಇರುವುದರಿಂದಲೇ ಅವರು ಪುಣ್ಯಶಾಲಿಗಳಿಗಳಾಗಿ ಇಂತಹ ಕಾರ್ಯವನ್ನು ಕೈಗೊಳ್ಳಬಲ್ಲರು.

ಇದನ್ನು ತಿಳಿದ ಹೇಮಾಡ್ ಪಂತರಿಗೆ ತಾನು ಮಾಡಬೇಕೆಂದುಕೊಂಡಿರುವ ಕಾರ್ಯ ಅಷ್ಟು ಸುಲಭವಲ್ಲ ಎನ್ನುವುದು ಅರಿವಾಯಿತು. ತಾನು ಅದಕ್ಕೆ ಅರ್ಹನೂ ಅಲ್ಲ ಎನ್ನಿಸಿತು. "ನನ್ನ ಸ್ನೇಹಿತರೊಡನೆ ಇಷ್ಟು ದಿನಗಳಿಂದ ಇದ್ದರೂ, ಅವರ ವಿಷಯ ಬರೆಯ ಬೇಕೆಂದರೆ, ನನಗೆ ಅವರ ಬಗ್ಗೆ ಏನೂ ತಿಳಿದಿಲ್ಲ. ಹಾಗಿರುವಾಗ ಅವತಾರ ಪುರುಷನ ಬಗ್ಗೆ ನಾನು ಹೇಗೆ ತಾನೇ ಬರೆಯಬಲ್ಲೆ? ನನ್ನ ಬಗ್ಗೆಯೇ ನನಗೆ ತಿಳಿಯದು ಎಂದಮೇಲೆ, ಇತರರಿಗೆ ಒಬ್ಬ ಮಹಾತ್ಮನ ಬಗ್ಗೆ ಅರ್ಥವಾಗುವಂತೆ ಹೇಗೆ ತಿಳಿಸುವುದು? ನಾಲ್ಕು ವೇದಗಳೂ ವರ್ಣಿಸಲಾರದೇ ಹೋದ ದೇವಸ್ವರೂಪನನ್ನು ಸಾಮಾನ್ಯನಾದ ನಾನು ತಾನೇ ಹೇಗೆ ವರ್ಣಿಸಬಲ್ಲೆ? ಮಹಾತ್ಮರನ್ನು ಇತರ ಮಹಾತ್ಮರು ಮಾತ್ರವೇ ವರ್ಣಿಸಬಲ್ಲರು. ಅವರ ಮಾತುಗಳ ಅಂತರಾರ್ಥವನ್ನು ತಿಳಿದು ಹೇಳಬಲ್ಲರು. ಬಹುಶಃ ಸಪ್ತಸಾಗರಗಳ ನೀರನ್ನು ಅಳೆಯಬಹುದೇನೋ, ಆಕಾಶವನ್ನು ಸುತ್ತಿ ಕಟ್ಟಿಡಬಹುದೇನೋ, ಆದರೆ ಸಾಯಿಬಾಬಾರ ಜೀವನದ ಅರ್ಥ, ಉದ್ದಿಶ್ಯಗಳನ್ನು ವಿವರಿಸಲು ಸಾಧ್ಯವಾಗುವುದಿಲ್ಲ. ಅವರ ಒಂದೇ ಒಂದು ಲೀಲೆಯನ್ನೂ ಕೂಡಾ ಸರಿಯಾದ ರೀತಿಯಲ್ಲಿ ವಿವರಿಸಲು ಸಾಧ್ಯವಾಗುವುದಿಲ್ಲ. ಆದರೂ ಸಾಯಿಬಾಬಾರ ಅಪಾರವಾದ ಅನುಗ್ರಹವೇ ನನ್ನನ್ನು ಬರವಣಿಗೆಗೆ ಪ್ರೇರೇಪಿಸಿದೆ. ಹೇ ಕರುಣಾಮಯಿ ಬಾಬಾ, ಅನುಗ್ರಹಿಸು. ನನ್ನನ್ನು ಅಶೀರ್ವದಿಸು, ಮಾಡಬೇಕೆಂದಿರುವ ಕಷ್ಟಸಾಧ್ಯವಾದ ಕೆಲಸ ಜಯಪ್ರದವಾಗಿ ಮುಗಿಯುವಂತೆ ಮಾಡು. ನನ್ನನ್ನು ನಗೆಪಾಟಲಿಗೆ ಈಡುಮಾಡಬೇಡ.

ಅಗ್ರಸಾಲಿಗೆ ಸೇರಿದ, ಮಹಾರಾಷ್ಟ್ರದ ಮೊಟ್ಟಮೊದಲನೆಯ ಕವಿ ಮತ್ತು ಯೋಗೀಶ್ವರ - ಜ್ಞಾನೇಶ್ವರ ಮಹರಾಜ್ - ಮಹಾತ್ಮರ ಜೀವನ ಚರಿತ್ರೆಯನ್ನು ಬರೆಯತಕ್ಕಂತಹವರು ದೇವರಿಗೆ ಪ್ರಿಯವಾದವರು ಎಂದು ಹೇಳಿದ್ದಾರೆ. ಅಂತಹ ದೇವರೇ ನನ್ನನ್ನು ಬಾಬಾರ ಜೀವನ ಚರಿತ್ರೆಯನ್ನು ಬರೆಯಲು ಪ್ರೇರೇಪಿಸಿರುವುದು. ರೂಪದಲ್ಲಿ ಬಂದಿರುವ ದೇವರೇ ಕಾರ್ಯ ಸಫಲವಾಗುವಂತೆ ನೋಡಿಕೊಳ್ಳುತ್ತಾನೆ. ನನಗೇಕೆ ಅದರ ಚಿಂತೆ? ತನ್ನಿಂದ ಪ್ರೇರೇಪಿಸಲ್ಪಟ್ಟ ಭಕ್ತರು ತಾವು ಮಾಡಬೇಕೆಂದುಕೊಂಡ ಒಳ್ಳೆಯ ಕೆಲಸವನ್ನು ತನ್ನದೇ ಆದ ವಿಚಿತ್ರ ರೀತಿಯಲ್ಲಿ ದೇವರೇ ಮಾಡಿಸಿಕೊಳ್ಳುತ್ತಾನೆ. ಭಕ್ತರು ಅವನ ಕೈಯಲ್ಲಿನ ಒಂದು ಉಪಕರಣವಷ್ಟೇ! ಬಾಬಾರು ತಮ್ಮ ಜೀವನ ಚರಿತ್ರೆಯೆಂಬ ಗ್ರಂಥ ರಚನೆಯ ಕೆಲಸಕ್ಕೆ ನನ್ನನ್ನು ಆರಿಸಿಕೊಂಡಿದ್ದಾರೆ. ಕೆಲಸ ಸುಗಮವಾಗಿ ಮುಗಿಯುವಂತೆ ನೋಡಿಕೊಳ್ಳುವುದೂ ಅವರ ಜವಾಬ್ದಾರಿಯೇ! ೧೭೭೮ರಲ್ಲಿ ಮಹೀಪತಿಯವರು ಸಂತರ ಕಥೆಗಳನ್ನು ಬರೆಯಬೇಕೆಂದುಕೊಂಡಾಗ, ಸಂತರೇ ಅವರಿಗೆ ಸರಿಯಾದ ಪ್ರೇರಣೆ ಕೊಟ್ಟು, ತಮ್ಮ ಕಥೆಗಳನ್ನು ಬರೆಯಿಸಿಕೊಂಡರು. ಮಹೀಪತಿ – “ಭಕ್ತ ವಿಜಯ”, “ಸಂತ ವಿಜಯ”, “ಭಕ್ತ ಲೀಲಾಮೃತ”, “ಸಂತ ಲೀಲಾಮೃತ” - ಎನ್ನುವ ನಾಲ್ಕು ಪುಸ್ತಕಗಳನ್ನು ಬರೆದಿದ್ದಾರೆ. ಹಾಗೆಯೇ ದಾಸಗಣೂ ಮಹಾರಾಜ್ ೧೮೭೮ರಲ್ಲಿಭಕ್ತ ಲೀಲಾಮೃತಮತ್ತುಸಂತ ಲೀಲಾಮೃತಎಂಬ ಎರಡು ಇತ್ತೀಚಿನ ಸಂತರ ಜೀವನ ಚರಿತ್ರೆಗಳನ್ನು ಕುರಿತು ಬರೆದಿದ್ದಾರೆ.

ಸಂತ ಲೀಲಾಮೃತದಲ್ಲಿ ದಾಸಗಣು ಮಹಾರಾಜ್ ಬಹು ಸುಂದರವಾಗಿ ೩೧, ೩೨, ೩೩ ಮತ್ತು ೩೪ನೆಯ ಅಧ್ಯಾಯಗಳಲ್ಲಿ ಸಾಯಿಬಾಬಾರ ಜೀವನ ಚರಿತ್ರೆಯನ್ನು ಕುರಿತು ಬರೆದಿದ್ದಾರೆ. “ಸಂತ ಕಥಾಮೃತದಲ್ಲಿಯೂ ೫೭ನೆಯ ಅಧ್ಯಾಯದಲ್ಲಿ ಬಾಬಾರ ಬಗ್ಗೆ ದಾಸಗಣು ಬರೆದಿದ್ದಾರೆ. ಅಷ್ಟೇ ಅಲ್ಲದೆ ಅವರು ಬಾಬಾರನ್ನು ಕುರಿತು ಅನೇಕ ಸುಂದರ ಪದ್ಯಗಳನ್ನೂ ಕವಿತೆಗಳನ್ನೂ ಬರೆದಿದ್ದಾರೆ. ಸಾಯಿಬಾಬಾರ ಜೀವನದ ಬಗ್ಗೆ ಸಾಯಿಲೀಲಾಪತ್ರಿಕೆಯ ಸಂಪುಟ ೧೭ ಸಂಚಿಕೆ ೧೧, ೧೨ ರಲ್ಲಿಯೂ ಬರೆಯಲ್ಪಟ್ಟಿದೆ. ಬಾಂದ್ರಾದ ಶ್ರಿ ರಘುನಾಥ ತೆಂಡೂಲ್ಕರ್ ಮತ್ತು ಶ್ರೀಮತಿ ಸಾವಿತ್ರಿಬಾಯಿ ತೆಂಡೂಲ್ಕರ್ ಅವರುಶ್ರೀ ಸಾಯಿಬಾಬಾ ಭಜನಮಾಲಾಎಂಬ ಪುಸ್ತಕದಲ್ಲಿ ಬಾಬಾರ ಕುರಿತು ಅಮೋಘವಾಗಿ ಬರೆದಿದ್ದಾರೆ. ಅಮೀದಾಸ್ ಭವಾನಿ ಮೆಹತ ಎಂಬುವವರು ಗುಜರಾತಿ ಭಾಷೆಯಲ್ಲಿಯೂ ಬಾಬಾ ಕುರಿತ ಅನೇಕ ಕಥೆಗಳನ್ನು ಬರೆದಿದ್ದಾರೆ. ಶಿರಡಿಯ ದಕ್ಷಿಣ ಭಿಕ್ಷಾ ಸಂಸ್ಥೆ ಬಾಬಾರ ಕುರಿತ ಅನೇಕ ಕಥೆಗಳನ್ನು ತಮ್ಮದೇ ಆದ ಸಾಯಿನಾಥ ಪ್ರಭಾ ಎಂಬ ಪತ್ರಿಕೆಯಲ್ಲಿ ಪ್ರಕಟಿಸಿದ್ದಾರೆ.

ಬಾಬಾರ ಬಗ್ಗೆ ಇಷ್ಟೊಂದು ವಿಫುಲವಾದ ಸಾಹಿತ್ಯ ಇರುವಾಗ ಈಗ ಇನ್ನೊಂದು ಏಕೆ ಎಂದು ಯಾರಾದರೂ ಕೇಳಬಹುದು. ಅದಕ್ಕೆ ಉತ್ತರ ಇಷ್ಟೇ. ಬಾಬಾರ ಜೀವನ ಚರಿತ್ರೆ ಎನ್ನುವುದು ಒಂದು ವಿಶಾಲವಾದ ಆಳವಾದ ಸಾಗರ. ಅದರಲ್ಲಿ ಯಾರು ಬೇಕಾದರೂ ಮುಳುಗಿ ತಮಗೆ ಬೇಕಾದ ಮುತ್ತು ರತ್ನಗಳನ್ನು ಆರಿಸಿಕೊಳ್ಳಬಹುದು. ಕಷ್ಟ ಕಾರ್ಪಣ್ಯಗಳಿಂದ ದುಃಖಿತರಾಗಿರುವವರಿಗೆಲ್ಲಾ ಕಥೆಗಳು ಎಂಬ ಮುತ್ತು ರತ್ನಗಳು ಸುಖ ಸಂತೋಷಗಳನ್ನು ನೀಡುತ್ತವೆ. ಅಷ್ಟೇ ಅಲ್ಲ, ಅವು ವೇದೋಪನಿಷತ್ತುಗಳಂತೆ ಜ್ಞಾನ, ಬುದ್ಧಿ, ವಿವೇಕಗಳನ್ನೂ ನೀಡಬಲ್ಲವು. ಶ್ರದ್ಧಾ ಭಕ್ತಿಗಳಿಂದ ಕಥೆಗಳನ್ನು ಓದಿ, ಕೇಳಿ, ಮನನಮಾಡಿ ಭಕ್ತರು ತಮ್ಮ ಅಭೀಷ್ಟಗಳನ್ನು ನೆರವೇರಿಸಿಕೊಳ್ಳಬಹುದು. ಮೋಕ್ಷಮಾರ್ಗಕ್ಕೆ ಹೋಗಲು ಇದೊಂದು ಸುಲಭ ಸಾಧನ."

ರೀತಿಯಲ್ಲಿ ಆಲೋಚಿಸಿ ಹೇಮಾಡ್ ಪಂತ್ ಬಾಬಾರ ಲೀಲೆಗಳನ್ನೆಲ್ಲಾ ಶೇಖರಿಸಿ, ಪುಸ್ತಕ ರೂಪದಲ್ಲಿ ತರಲು ನಿರ್ಧರಿಸಿದರು. “ಇದೇ ನಾನು ನನ್ನ ಸದ್ಗುರುವಿಗೆ ಮಾಡಬಹುದಾದ ಸೇವೆ. ಗ್ರಂಥ ಬಾಬಾರನ್ನು ಕಣ್ಣಾರೆ ಕಾಣಲಾಗದ ಭಕ್ತರಿಗೆ ಅತೀವ ಆನಂದ ಕೊಡುತ್ತದೆಇಂತಹ ಅಮೂಲ್ಯ ಯೋಚನೆಗಳೊಡನೆ ಹೇಮಾಡ್ ಪಂತ್, ತಮ್ಮ ಅಹಂಕಾರವನ್ನೆಲ್ಲಾ ಬಾಬಾರ ಪಾದಗಳಲ್ಲಿ ಅರ್ಪಿಸಿ, ಇದು ಬಾಬಾರ ಕೆಲಸ ಅವರೇ ಇದನ್ನು ಸಫಲಗೊಳಿಸಿಕೊಳ್ಳುತ್ತಾರೆ ಎಂಬ ಧೃಡ ಮನಸ್ಸಿನಿಂದ, ಸಚ್ಚರಿತ್ರೆಯನ್ನು ಬರೆಯಲು ಆರಂಭಿಸಿದರು. ತಮ್ಮ ಷಷ್ಟ್ಯಬ್ಧಿಯ ನಂತರ ತಮ್ಮ ಜೀವನವನ್ನೆಲ್ಲಾ ಬಾಬಾರ ಸೇವೆಗೆಂದೇ ಮುಡಿಪಾಗಿಟ್ಟರು.

ಶ್ರೀ ಸಾಯಿ ಸಚ್ಚರಿತ್ರೆ ಬರೆಯಲು ಬಾಬಾರ ಅನುಮತಿ

ಹೇಮಾಡ್ ಪಂತರಿಗೆ ಶ್ರೀ ಸಾಯಿ ಸಚ್ಚರಿತ್ರೆ ಬರೆಯಲು ತಾನೇ ಬಾಬಾರ ಅನುಮತಿ ಪಡೆಯಲು ಸಾಕಷ್ಟು ಧೈರ್ಯವಿರಲಿಲ್ಲ. ಶ್ಯಾಮಾರನ್ನು ತನ್ನ ಪರವಾಗಿ ಬಾಬಾರ ಅನುಮತಿ ಕೇಳಿ ಎಂದರು. ಶ್ಯಾಮಾ, ಬಾಬಾರ ಬಳಿಗೆ ಹೋಗಿ, "ದೇವಾ, ಅಣ್ಣಾಸಾಹೇಬ್ ನೀನು ಒಪ್ಪಿದರೆ ಮಾತ್ರ ನಿನ್ನ ಚರಿತ್ರೆಯನ್ನು ಬರೆಯಬೇಕೆಂದು ಕೊಂಡಿದ್ದಾರೆ. ಫಕೀರನ ಕಥೆಯನ್ನು ಬರೆಯುವುದು ಒಂದು ನಗೆಚಾಟಿಕೆಯ ಮಾತು ಎನ್ನಬೇಡ. ನೀನು ಒಪ್ಪಿದರೆ ಮಾತ್ರ ಆತ ಬರೆಯಬಲ್ಲ. ಅದು ಆತ ಬರೆಯುವುದಲ್ಲ. ನೀನೇ ಆತನಲ್ಲಿದ್ದುಕೊಂಡು, ನಿನ್ನ ಭಕ್ತರ ಸಲುವಾಗಿ ಪುಸ್ತಕ ಬರೆಯಬೇಕು. ನಿನ್ನ ಒಪ್ಪಿಗೆ, ಅಪ್ಪಣೆಯಿಲ್ಲದೆ ಏನನ್ನೂ ಮಾಡಲಾಗುವುದಿಲ್ಲ" ಎಂದರು. ಭಕ್ತರ ಸಲುವಾಗಿ ಮಾಡಿದ ಇಂತಹ ಬೇಡಿಕೆಯನ್ನು ಕೇಳಿ ಬಾಬಾ ಮನಕರಗಿ, ಹೇಮಾಡ್ ಪಂತರನ್ನು ಬಳಿಗೆ ಕರೆದು ಉದಿ ಕೊಟ್ಟು, ತನ್ನ ಅಭಯಹಸ್ತವನ್ನು ಅವರ ತಲೆಯಮೇಲಿಟ್ಟು, ಆಶೀರ್ವದಿಸಿ, ಹೀಗೆ ಹೇಳಿದರು: "ಅವನು ತನ್ನ ಅಹಂಕಾರವನ್ನೆಲ್ಲ ನನ್ನ ಪಾದಗಳಲ್ಲಿಟ್ಟು, ಅವನಲ್ಲಿ ಅಹಂಕಾರದ ಲವಲೇಶವೂ ಇಲ್ಲದಾಗ ನಾನು ಅವನಲ್ಲಿ ಹೊಕ್ಕು ನನ್ನ ಚರಿತ್ರೆಯನ್ನು ನಾನೇ ಬರೆಯುತ್ತೇನೆ. ನನ್ನ ಕಥೆಯನ್ನು ನಾನೇ ಬರೆದು ನನ್ನ ಭಕ್ತರ ಆಸೆ ಆಕಾಂಕ್ಷೆಗಳನ್ನು ಈಡೇರಿಸುತ್ತೇನೆ. ನನ್ನ ಕಥೆಗಳು ಬೋಧೆಗಳನ್ನು ಕೇಳಿದಾಗ ಅವರಿಗೆ ನನ್ನಲ್ಲಿ ನಂಬಿಕೆ ಹೆಚ್ಚಾಗುತ್ತದೆ. ಅವನು ಇಂತಹ ಕಥೆಗಳನ್ನೂ, ಅನುಭವಗಳನ್ನೂ ಶೇಖರಿಸಿ ಟಿಪ್ಪಣಿ ಮಾಡಲಿ. ಅದರಲ್ಲಿ ಅವನ ಸ್ವಂತಿಕೆಯೇನೂ ಇರಕೂಡದು. ಬೇರೆಯವರ ಅನುಭವಗಳಿಗೆ ತನ್ನ ವೈರುಧ್ಯವನ್ನು ತೋರಿಸಬೇಕಾಗಿಲ್ಲ. ಅವುಗಳ ಆಗು ಹೋಗುಗಳ ಬಗ್ಗೆಯೂ ಯಾವುದೇ ವಾದ ವಿವಾದಗಳು ಇರಕೂಡದು. ಅದು ನನ್ನ ಕಥೆಯ ಸರಳ ವ್ಯಾಖ್ಯೆಯಾಗಿರಬೇಕಷ್ಟೆ."

ಬಾಬಾ "ವಾದ" ಎಂಬ ಪದವನ್ನು ವಿಶೇಷವಾಗಿ ಹೇಳಿದ್ದು ಏಕೆಂದರೆ ಇದಕ್ಕೆ ಮುಂಚೆ ಗೋವಿಂದ ರಘುನಾಥ ದಾಭೋಲ್ಕರ್ ಒಂದು ವಾದದಲ್ಲಿ ಭಾಗವಹಿಸಿ ಹೇಮಾಡ್ ಪಂತ್ ಎಂಬ ಬಿರುದು ಪಡೆದಿದ್ದರು.

ಹೇಮಾಡ್ ಪಂತ್ ಶಿರಡಿಯ ಮೊದಲ ದರ್ಶನ

ಅಣ್ಣಾ ಸಾಹೇಬ್ ದಾಭೋಲಕರ್ ದೊಡ್ಡ ವಾಚಾಳಿ. ಇತರರಬಗ್ಗೆ ಚುಚ್ಚಿ ಮಾತನಾಡಿ ನೋವುಂಟುಮಾಡುವುದು ಅವರಿಗೆ ಸಹಜವಾಗಿತ್ತು. ಬಹಳ ವಾದ ಪ್ರಿಯ. ಬಾಬಾರನ್ನು ಕಾಣಲು ಹೋಗುವುದಕ್ಕೆ ಮುಂಚೆ ದಾಭೋಲ್ಕರರಿಗೆ ಬಾಬಾರ ಇಬ್ಬರು ಭಕ್ತರ ನಿಕಟ ಪರಿಚಯವಿತ್ತು. ಅವರು ಹರಿ ಸೀತಾರಾಮ್ ದೀಕ್ಷಿತ್ ಮತ್ತು ನಾನಾ ಸಾಹೇಬ್ ಚಾಂದೋರ್ಕರ್ ಎಂದು ಕರೆಯಲ್ಪಡುತ್ತಿದ್ದ ನಾರಾಯಣ ಗೋವಿಂದ ಚಾಂದೋರ್ಕರ್. ಕಾಕಾ ಸಾಹೇಬ್ ದೀಕ್ಷಿತ್ ಎಂದೂ ಕರೆಯಲ್ಪಡುತ್ತಿದ್ದ ಹರಿ ಸೀತಾರಾಮ್ ದೀಕ್ಷಿತರು ಮತ್ತು ದಾಭೋಲ್ಕರ್ ಒಂದು ಒಪ್ಪಂದಕ್ಕೆ ಬಂದಿದ್ದರು. ಅದೇನೆಂದರೆ, ತಮ್ಮಲ್ಲಿ ಯಾರೊಬ್ಬರಾದರೂ ಸರಿಯೇ ಯಾರಾದರೂ ಸಂತರನ್ನೋ ದೇವಾಂಶಸಂಭೂತರನ್ನೋ ಭೇಟಿಮಾಡಿದರೆ ಅವರನ್ನು ಇನ್ನೊಬ್ಬರಿಗೂ ಭೇಟಿಮಾಡಿಸಬೇಕು ಎಂದು. ಹರಿ ಸೀತಾರಾಮ್ ದೀಕ್ಷಿತರಿಗೆ ನಾನಾಸಾಹೇಬ್ ಚಾಂದೋರ್ಕರ್ ಅವರ ಪರಿಚಯ ಇದಕ್ಕೂ ಮುಂಚೆಯೇ ಆಗಿ, ಅವರ ಮೂಲಕ ಬಾಬಾರ ಪರಿಚಯವೂ ಆಗಿತ್ತು. ಅವರು ಬಾಬಾರನ್ನು ಕಂಡ ಕೂಡಲೇ ಅವರ ಭಕ್ತರಾಗಿಹೋಗಿದ್ದರು. ಅವರಿಬ್ಬರೂ ದಾಭೋಲ್ಕರರನ್ನು ಶಿರಡಿಗೆ ಹೋಗಿ ಬಾಬಾರ ದರ್ಶನ ಮಾಡುವಂತೆ ಸಲಹೆ ಕೊಟ್ಟರು. ಅವರ ಸಲಹೆಯಂತೆ ಶಿರಡಿಗೆ ಹೋಗಬೇಕೆಂದುಕೊಂಡಿದ್ದಾಗ ಲೋನಾವಳದಲ್ಲಿನ ಅವರ ಸ್ನೇಹಿತನ ಮಗನಿಗೆ ತೀವ್ರವಾದ ಜ್ವರ ಬಂದು ಯಾವ ಚಿಕಿತ್ಸೆಗೂ ಜ್ವರ ನಿಲ್ಲಲಿಲ್ಲ. ಕೊನೆಯದಾಗಿ ಅವರು ತಮ್ಮ ಗುರುಗಳನ್ನು ಕರೆಸಿ ಮಗನ ಪಕ್ಕದಲ್ಲಿ ಕೂಡಿಸಿ ಸಾಂತ್ವನ ಕೊಡುವಂತೆ ಏರ್ಪಾಡುಮಾಡಿದರು. ಅದೂ ಸಫಲವಾಗದೆ, ಹುಡುಗ ಸತ್ತುಹೋದ. ಇದನ್ನು ಕಣ್ಣಾರೆ ನೋಡಿದ ದಾಭೋಲ್ಕರ್ಗೆ ಗುರುವಿನ ಬಗ್ಗೆ ಸಂದೇಹಗಳುಂಟಾಗಿ, ಶಿರಡಿಯ ಪ್ರಯಾಣ ಮುಂದೂಡಿಹೋಯಿತು. ತನ್ನ ಸ್ನೇಹಿತನ ಮಗನನ್ನು ಕಾಪಾಡಲಾರದ ಗುರುವು ಏಕಾದರೂ ಬೇಕು? ಗುರುವು ಏನೂ ಮಾಡಲಾಗದಿದ್ದರೆ ಅಂತಹವರನ್ನು ಕಾಣಲು ಹೋಗಬೇಕಾದರೂ ಏಕೆ? ಇಂತಹ ಯೋಚನೆಗಳಿಂದ ಕೂಡಿದ ದಾಭೋಲ್ಕರ್ ತಮ್ಮ ಪ್ರಯಾಣವನ್ನು ಮುಂದೂಡಿದರು. ಆದರೂ ವಿಧಿ. ಆಗಬೇಕಾದದ್ದು ಆಗಿಯೇ ತೀರಬೇಕು. ನಾವು ಎಷ್ಟೇ ಪ್ರಯತ್ನಿಸಿದರೂ ಆದನ್ನು ತಪ್ಪಿಸಲಾಗುವುದಿಲ್ಲ.

ನಾನಾ ಚಾಂದೋರ್ಕರ್, ಡೆಪ್ಯುಟಿ ಕಲೆಕ್ಟರ್, ಸರ್ಕಾರದ ಉನ್ನತೋದ್ಯೋಗಿ. ಒಂದುಸಲ ಕೆಲಸದಮೇಲೆ ಬಾಸೀನ್ಗೆ ಹೋಗಬೇಕಾಗಿಬಂತು. ದಾದರ್ಗೆ ಬಂದು ರೈಲುಬಂಡಿಗಾಗಿ ಕಾಯುತ್ತಿದ್ದರು. ಅಷ್ಟರಲ್ಲಿ ಸ್ಥಳೀಯ ರೈಲು ಬಂದದ್ದರಿಂದ ಅದರಲ್ಲಿ ಬಾಂದ್ರಾಗೆ ಬಂದು ದಾಭೋಲ್ಕರರನ್ನು ಭೇಟಿಮಾಡಿ, ಅವರು ಶಿರಡಿಗೆ ಹೋಗದಿದ್ದುದಕ್ಕೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ದಾಭೋಲ್ಕರ್ ಆಗ ತಾವು ತಮ್ಮ ಸ್ನೇಹಿತನ ಮನೆಯಲ್ಲಿ ಕಂಡದ್ದನ್ನೆಲ್ಲಾ ಹೇಳಿ ತಮಗೆ ಗುರುವಿನ ಬಗ್ಗೆ ಬಂದ ಸಂದೇಹಗಳನ್ನೆಲ್ಲ ವಿವರಿಸಿದರು. ನಾನಾಸಾಹೇಬ್ ತಮ್ಮ ಅನೇಕ ಅನುಭವಗಳನ್ನು ವಿವರವಾಗಿ ಹೇಳಿ ದಾಭೋಲ್ಕರ್ ಅವ ಮನವೊಪ್ಪಿಸಿ ಅವರಿಂದ ಶಿರಡಿಗೆ ಹೋಗುವ ವಾಗ್ದಾನ ಪಡೆದರು.

ಹಾಗೆ ಮಾತು ಕೊಟ್ಟಿದ್ದರಿಂದ, ದಾಭೋಲ್ಕರ್ ಅಂದಿನ ರಾತ್ರಿಯೇ ಶಿರಡಿಗೆ ಹೋಗುವ ನಿರ್ಧಾರ ಮಾಡಿ, ದಾದರ್ಗೆ ಹೋಗಿ ಮನ್ಮಾಡ್ ರೈಲ್ ಹಿಡಿಯಲು ಬಾಂದ್ರಾ ಸ್ಟೇಶನ್ಗೆ ಬಂದು ರೈಲು ಹತ್ತಿದರು. ಆಗ ಬಾಬಾ ಒಂದು ಚಮತ್ಕಾರ ತೋರಿಸಿದರು. ರೈಲು ಹೊರಡುವುದಕ್ಕೆ ಮುಂಚೆ ಒಬ್ಬ ಮುಸ್ಲಿಮ್ ರೈಲೊಳಕ್ಕೆ ಬಂದು, ದಾಭೋಲ್ಕರರನ್ನುಎಲ್ಲಿಗೆ ಪ್ರಯಾಣ?” ಎಂದು ಕೇಳಿದ. “ಮನ್ಮಾಡ್ಗೆಎಂದು ಹೇಳಿದರು. ಅವನು, “ದಾದರ್ನಲ್ಲಿ ಮನ್ಮಾಡ್ ರೈಲು ನಿಲ್ಲುವುದಿಲ್ಲ. ನೇರವಾಗಿ ಬೋರಿ ಬಂದರ್ಗೆ ಹೋಗಿ, ಅಲ್ಲಿ ಮನ್ಮಾಡ್ ರೈಲು ಹಿಡಿಯಿರಿಎಂದು ಹೇಳಿ ಹೊರಟುಹೋದ. ವಿಷಯ ಆಗ ದಾಭೋಲ್ಕರ್ಗೆ ತಿಳಿಯದೇ ಹೋಗಿದ್ದರೆ ಅವರು ಮರುದಿನ ಶಿರಡಿ ಸೇರಲಾಗುತ್ತಿರಲಿಲ್ಲ, ಗುರುವಿನ ಬಗ್ಗೆ ಇದ್ದ ಸಂದೇಹಗಳೂ ತೀರುತ್ತಿರಲಿಲ್ಲ. ವಿಧಿ ಹಾಗಾಗಲು ಬಿಡದೆ ಅವರನ್ನು ಮರುದಿನ ಬೆಳಗ್ಗೆ ಸುಮಾರು ೧೦ ಘಂಟೆಯ ವೇಳೆಗೆ ಶಿರಡಿ ಸೇರಿಸಿತು. ಅಲ್ಲಿ ಭಾವೂಸಾಹೇಬ್ ದೀಕ್ಷಿತ್ ಅವರಿಗಾಗಿ ಕಾದಿದ್ದರು. ಇದು ನಡೆದದ್ದು ೧೯೧೦ರಲ್ಲಿ.

ಬಾಬಾರ ದರ್ಶನಕ್ಕೆ ಆತುರರಾಗಿದ್ದ ದಾಭೋಲ್ಕರ್ ಸಾಠೆವಾಡ ಸೇರಿದರು. ಅದೇ ಹೊತ್ತಿಗೆ ತಾತ್ಯಾ ಸಾಹೇಬ್ ನೂಲ್ಕರ್ ಮಸೀದಿಯಿಂದ ಬಂದು, "ಬಾಬಾ ಈಗ ಮೂಲೆಯ ಹತ್ತಿರ ಬಂದಿದ್ದಾರೆ. ಈಗಲೇ ಹೋಗಿ ಅವರ ದರ್ಶನ ಮಾಡಿಕೊಳ್ಳಿ" ಎಂದರು. ದಾಭೋಲ್ಕರ್ ದಡಬಡನೆ ಹೋಗಿ ಬಾಬಾರವರ ಪಾದಗಳಲ್ಲಿ ತಲೆಯಿಟ್ಟರು. ಬಾಬಾರ ಪಾದ ಸ್ಪರ್ಶ ದಾಭೋಲ್ಕರ್ಗೆ ವಿದ್ಯುತ್ ಸಂಚಾರವಾದಂತಾಯಿತು. ಇದಕ್ಕೆ ಮುಂಚೆ ಅವರಿಗೆ ತಮ್ಮ ಜೀವಮಾನದಲ್ಲೇ ಇಂತಹ ಅನುಭವ ಯಾವಾಗಲೂ ಆಗಿರಲಿಲ್ಲ. ಅನುಭವ ಅವರನ್ನು ಬೇರೆಯೇ ಒಂದು ಸ್ತರಕ್ಕೇರಿಸಿತು. ಆತ ಅನುಭವಿಸಿದ ಆನಂದ, ನಾನಾಸಾಹೇಬ್ ವಿವರಿಸಿದ್ದಕ್ಕಿಂತಲೂ ಹೆಚ್ಚಿನದಾಗಿತ್ತು. ಅದನ್ನು ದಾಭೋಲ್ಕರ್ ಹೇಳಿದ್ದು ಹೀಗೆ: "ಬಾಬಾರನ್ನು ಕಂಡಕೂಡಲೇ ನಮ್ಮ ಯೋಚನೆಗಳೆಲ್ಲ ಪರಿವರ್ತನವಾಗಿ ಹೋಗುತ್ತವೆ. ಹಿಂದಿನ ಕರ್ಮಗಳೆಲ್ಲ ಹಿಂಜರಿದು, ಪ್ರಾಪಂಚಿಕ ವ್ಯವಹಾರಗಳೆಲ್ಲಾ ಕ್ರಮವಾಗಿ ಹಾಗೆಯೇ ಕರಗಿ ಹೋಗಿ, ನಿಧಾನವಾಗಿ, ನಿಶ್ಚಿತವಾಗಿ, ಪ್ರಪಂಚವೆಲ್ಲಾ ಬಾಬಾರಿಂದಲೇ ತುಂಬಿಹೋಗಿರುವಂತೆ ತೋರುತ್ತದೆ." ದಾಭೋಲ್ಕರ್ ಅಂತಹ ಅನಂತ ಮೂರ್ತಿಯಲ್ಲಿ ಕರಗಿಹೋದರು. ಅವರ ದೇಹದ ಒಂದೊಂದು ಕಣವೂ ಆನಂದದಿಂದ ತುಂಬಿಹೋಯಿತು. ಅವರ ಮನಸ್ಸು ತನಗೆ ಅಂತಹ ಅನುಭವ ತಂದುಕೊಟ್ಟವರನ್ನು ನೆನೆದು ಅವರಿಗೆ ಕೃತಜ್ಞತಾಭಾವದಿಂದ ನಮಸ್ಕಾರಗಳನ್ನು ಅರ್ಪಿಸಿತು.

ಹೇಮಾಡ್ ಪಂತ್ ಎನ್ನುವ ಬಿರುದು

ದಾಭೋಲ್ಕರ್ ಶಿರಡಿಯಲ್ಲಿ ಕಾಲಿಟ್ಟ ಮೊದಲನೆಯ ದಿನವೇ ಅವರಿಗೂ ಬಾಳಾಸಾಹೇಬ್ ಭಾಟೆ ಅವರಿಗೂ ಗುರುವನ್ನು ಕುರಿತಂತೆ ವಾದವುಂಟಾಯಿತು. ತನ್ನ ಸ್ವಾತಂತ್ರ್ಯವನ್ನು ಬಿಟ್ಟು ಪರರನ್ನು ಆರಾಧಿಸುವುದು ಏಕೆ ಎಂದು ದಾಭೋಲ್ಕರ್ ಧಿಕ್ಕರಿಸಿ ಮಾತನಾಡಿದರು. "ಮಲಗಿ ನಿದ್ರೆ ಮಾಡಿದರೆ ಗುರುವೇ ಎಲ್ಲವನ್ನೂ ಮಾಡುತ್ತಾನೇನು? ಎಲ್ಲವನ್ನೂ ನಾವೇ ಮಾಡಬೇಕಾಗಿರುವಾಗ ಗುರುವಿನ ಅವಶ್ಯಕತೆಯಾದರೂ ಏನು?" ಎನ್ನುವುದು ದಾಭೋಲ್ಕರ್ ವಾದ. ಆದರೆ ಭಾಟೆ ಅದಕ್ಕೆ ವಿರುದ್ಧವಾಗಿ, ವಿಧಿ ಮತ್ತು ದೈವದ ಬಗ್ಗೆ ಹೇಳಿ, "ನಿನ್ನ ಚಾಕಚಕ್ಯತೆಯನ್ನು ಕಟ್ಟಿಡು. ನಿನ್ನ ಜಂಭ ಅಹಂಕಾರಗಳಿಂದ ಪ್ರಯೋಜನವಿಲ್ಲ. ಆಗಬೇಕಾದ್ದು ಆಗಿಯೇ ತೀರುತ್ತದೆ" ಎಂದರು. ಹೀಗೆ ವಾದ ಬಹಳಕಾಲ ನಡೆದರೂ, ಎಲ್ಲ ವಾದಗಳಂತೆ ಇದೂ ಕೂಡಾ ಯಾವ ನಿರ್ಧಾರಕ್ಕೂ ಬರದೆ, ಮುಗಿಯಿತು. ಇಬ್ಬರೂ ಆಯಾಸದಿಂದ ವಾದ ನಿಲ್ಲಿಸಿ ಸುಮ್ಮನಾದರು.

ನಂತರ ಎಲ್ಲರೂ ಸೇರಿ ಮಸೀದಿಗೆ ಹೋದಾಗ ಬಾಬಾ ಕಾಕಾಸಾಹೇಬರನ್ನು, "ವಾಡಾದಲ್ಲಿ ಏನು ನಡೆಯಿತು? ಯಾವುದರ ಬಗ್ಗೆ ವಾದ? ಹೇಮಾಡ್ ಪಂತ್ ಏನನ್ನುತ್ತಾನೆ?" ಎನ್ನುತ್ತಾ ದಾಭೋಲ್ಕರ್ ಕಡೆ ತಿರುಗಿ ಕೇಳಿದರು. ಅದನ್ನು ಕೇಳಿ, “ಮಸೀದಿ ವಾಡಾದಿಂದ ಸಾಕಷ್ಟು ದೂರದಲ್ಲಿದ್ದರೂ, ಬಾಬಾರು ಸರ್ವಜ್ಞರಲ್ಲದಿದ್ದರೆ, ನಮ್ಮ ವಾದದ ಬಗ್ಗೆ ಹೇಗೆ ತಿಳಿಯುತ್ತಿತ್ತು?” ಎಂದು ಎಲ್ಲರೂ ಆಶ್ಚರ್ಯಪಟ್ಟರು.

ಹೇಮಾಡ್ ಪಂತ್ ಎಂಬ ಬಿರುದಿನ ಪ್ರಾಮುಖ್ಯತೆ

ದಾಭೋಲ್ಕರ್ ತಾನು ಮಾಡಿದ ವಾದದಿಂದಲೆ ಬಾಬಾ ತನ್ನನ್ನು ಹೇಮಾಡ್ ಪಂತ್ ಎಂದು ಕರೆದಿರಬೇಕು ಎಂದು ಯೋಚಿಸಿದರು. ಹೇಮಾಡ್ ಪಂತ್ ಎನ್ನುವುದು ಹೆಸರಾಂತ ಹೇಮಾದ್ರಿ ಪಂತ್ ಎನ್ನುವ ಹೆಸರಿನ ಅಪಭ್ರಂಶ. ಹೇಮಾದ್ರಿ ಪಂತ್ ದೇವಗಿರಿಯ ಯಾದವ ಕುಲದ ಮಹಾರಾಜರು ಮಹಾದೇವ ಮತ್ತು ರಾಮದೇವ ಎಂಬುವರಿಗೆ ಮಂತ್ರಿಯಾಗಿದ್ದವರು. ವಿದ್ಯಾವಂತ. ದೊಡ್ಡ ರಾಜಕೀಯ ಮುತ್ಸದ್ದಿ. ಧಾರಾಳಿ. ಮೋಡಿ ಲಿಪಿಯನ್ನು ಕಂಡುಹಿಡಿದವರು. “ಚತುರ್ದಶ ಚಿಂತಾಮಣಿಮತ್ತುರಾಜ ಪ್ರಶಸ್ತಿಎಂಬ ಎರಡು ಪುಸ್ತಕಗಳ ರಚಯಿತ. ಶ್ರೀವತ್ಸ ಗೋತ್ರಕ್ಕೆ ಸೇರಿದವರು. ಸಂತ್ ಜ್ಞಾನೇಶ್ವರ ಮತ್ತು ನಾಮದೇವರ ಸಮಕಾಲೀನರು. ಹೊಸರೀತಿಯ ಜಮಾ ಖರ್ಚಿನ ರೀತಿಯನ್ನು ಕಂಡುಹಿಡಿದವರು. ಅಂತಹ ವ್ಯಕ್ತಿಯೊಡನೆ, ತನ್ನನ್ನು ಯಾವುದೇ ರೀತಿಯಲ್ಲೂ ಹೋಲಿಸಲಾಗುವುದಿಲ್ಲ, ಎಂಬುದು ದಾಭೋಲ್ಕರ್ ಮನವರಿಕೆಯಾಯಿತು. ಬಾಬಾ ತನ್ನನ್ನು ರೀತಿಯಲ್ಲಿ ವ್ಯಂಗ್ಯವಾಗಿ ಹೇಮಾಡ್ ಪಂತ್ ಎಂದು ಹೆಸರಿಸಿದ್ದು ತನ್ನ ಅಹಂಕಾರವನ್ನು ಕಳೆಯಲೆಂದೇ ಎಂದು ಅವರಿಗೆ ಮನದಟ್ಟಾಯಿತು. ಇದರಿಂದ ಅಹಂಕಾರ, ವಾದಗಳಿಗೆ ಎಡೆ ಮಾಡಿಕೊಡುತ್ತದೆ ಎಂಬುದು ದಾಭೋಲ್ಕರ್ಗೆ ಮನವರಿಕೆಯಾಯಿತು.

ಬಾಬಾ ಅವರನ್ನು ಹಾಗೆ ವ್ಯಂಗ್ಯವಾಗಿ ಹೆಸರಿಸಿದರೂ ಭವಿಷ್ಯತ್ತಿನಲ್ಲಿ ಅದು ಎಷ್ಟು ನಿಜವಾಯಿತು ಎಂದರೆ ಹೇಮಾಡ್ ಪಂತ್ ಸಾಯಿ ಸಂಸ್ಥಾನವನ್ನು ದಕ್ಷತೆಯಿಂದ ಚತುರತೆಯಿಂದ ನಿರ್ವಹಿಸಿದರು. ಲೆಕ್ಕಪತ್ರಗಳನ್ನು ಅಚ್ಚುಕಟ್ಟಾಗಿ ಯಾವುದೇ ಆಕ್ಷೇಪಣೆಗಳೂ ಬರದಂತೆ ಇಟ್ಟಿದ್ದರು. ಎಲ್ಲಕ್ಕಿಂತ ಹೆಚ್ಚಾಗಿ ಜ್ಞಾನ, ಭಕ್ತಿ, ಆತ್ಮನಿವೇದನ, ಆತ್ಮಸಾಕ್ಷಾತ್ಕಾರ ಮುಂತಾದ ಜಟಿಲ ವಿಷಯಗಳನ್ನೊಳಗೊಂಡ ಶ್ರೀ ಸಾಯಿ ಸಚ್ಚರಿತ್ರೆಯನ್ನು ಬರೆಯಲು ಕಾರಣೀಭೂತರಾದರು. ಇದೆಲ್ಲಕ್ಕಿಂತ ಮಿಗಿಲಾಗಿ, ಶ್ರೀ ರಾಮ, ಶ್ರೀ ಕೃಷ್ಣರು ತಮ್ಮ ತಮ್ಮ ಗುರುಗಳಿಗೆ ಶರಣಾಗತರಾಗಿದ್ದಂತೆ, ತಮ್ಮ ಸದ್ಗುರುವಾದ ಸಾಯಿ ಮಹಾರಾಜರಿಗೆ ಸಂಪೂರ್ಣ ಶರಣಾಗತರಾಗಿ, ಗುರುವನ್ನು ಧೃಡವಾಗಿ ನಂಬಿ, ಗುರುವಿನ ಬಗ್ಗೆ ತಮ್ಮ ಮನಸಿನಲ್ಲಿದ್ದ ಸಂದೇಹಗಳನ್ನೆಲ್ಲ ಪರಿಹರಿಸಿಕೊಂಡರು. ಶ್ರದ್ಧೆ ಸಹನೆಗಳಿಲ್ಲದೆ ಆತ್ಮ ಸಾಕ್ಷಾತ್ಕಾರ ಅಸಾಧ್ಯ ಎಂದು ಕಂಡುಕೊಂಡರು. ಬಾಬಾರ ಪಾಠ ಹೇಳುವ ವಿಚಿತ್ರ ರೀತಿ ಇದೇ!

ಇದರೊಡನೆ ಗ್ರಂಥ ರಚನೆಯ ಉದ್ದಿಶ್ಯ ಎಂಬುವ ಎರಡನೆಯ ಅಧ್ಯಾಯ ಮುಗಿಯಿತು. ಮುಂದಿನ ಅಧ್ಯಾಯದಲ್ಲಿ ಹೇಮಾಡ್ ಪಂತ್ ಬಾಬಾರ ಅನುಮತಿ ಮತ್ತು ಭರವಸೆ, ಭಕ್ತರಿಗೆ ಕೆಲಸಗಳ ಹಂಚಿಕೆ, ಮುಂತಾದ ವಿಷಯಗಳನ್ನು ಹೇಳುತ್ತಾರೆ.

||ಶ್ರೀ ಸದ್ಗುರು ಸಾಯಿನಾಥಾರ್ಪಣಮಸ್ತು||ಶುಭಂ ಭವತು||
||ಓಂ ಶಾಂತಿಃ ಶಾಂತಿಃ ಶಾಂತಿಃ||


No comments:

Post a Comment