||ಶ್ರೀ ಸಾಯಿ ಸಚ್ಚರಿತ್ರೆ||
||ಆರನೆಯ ಅಧ್ಯಾಯ||
||ಶ್ರೀರಾಮನವಮಿ ಉತ್ಸವಗಳು||
ಶ್ರೀ ಗಣೇಶಾಯ ನಮಃ ಶ್ರೀ ಸರಸ್ವತಯೇ ನಮಃ
ಶ್ರೀವೆಂಕಟೇಶಾಯ ನಮಃ ಶ್ರೀಸಾಯಿನಾಥಾಯ ನಮಃ
ಶ್ರೀಸದ್ಗುರುಭ್ಯೋನ್ನಮಃ
||ಆರನೆಯ ಅಧ್ಯಾಯ||
||ಶ್ರೀರಾಮನವಮಿ ಉತ್ಸವಗಳು||
ಶ್ರೀ ಗಣೇಶಾಯ ನಮಃ ಶ್ರೀ ಸರಸ್ವತಯೇ ನಮಃ
ಶ್ರೀವೆಂಕಟೇಶಾಯ ನಮಃ ಶ್ರೀಸಾಯಿನಾಥಾಯ ನಮಃ
ಶ್ರೀಸದ್ಗುರುಭ್ಯೋನ್ನಮಃ
ಈ ಅಧ್ಯಾಯದಲ್ಲಿ ಹೇಮಾಡ್ ಪಂತ್,ರಾಮನವಮಿ ಉತ್ಸವ, ಮಸೀದಿಯ ಪುನರೋದ್ಧಾರ ಮತ್ತು ಇತರ ವಿಷಯಗಳನ್ನು ಹೇಳುತ್ತಾರೆ.
ಸದ್ಗುರು ಸಾಯಿಬಾಬಾ
ಪ್ರಾಪಂಚಿಕವೋ ಪಾರಮಾರ್ಥಿಕವೋ ಯಾವುದೇ ಆಗಿರಲಿ ನಮ್ಮನ್ನು ಸರಿಯಾದ ದಾರಿಯಲ್ಲಿ ನಡೆಸಿ ಸಂಸಾರ ಸಾಗರವನ್ನು ದಾಟಿಸಬಲ್ಲವನು ಆ ಸದ್ಗುರುವೊಬ್ಬನೇ! ಅವನನ್ನು ನಂಬಿದರೆ ನಮ್ಮನ್ನು ಗುರಿಮುಟ್ಟಿಸುತ್ತಾನೆ. ಸದ್ಗುರುವಿನ ನೆನಪು ಬರುತ್ತಲೇ ಸಾಯಿಬಾಬಾರೇ ಕಣ್ಣುಮುಂದೆ ಬರುತ್ತಾರೆ. ಅವರು ಯಾವಾಗಲೂ ಎಲ್ಲೆಲ್ಲೂ ನಮ್ಮ ಜೊತೆಯಲ್ಲೇ ಇದ್ದಂತೆ ಭಾಸವಾಗುತ್ತದೆ. ನಮ್ಮ ಮುಂದೆ ನಿಂತು, ಹಣೆಗೆ ಅತ್ಯಂತ ಪ್ರೀತಿ ವಿಶ್ವಾಸಗಳಿಂದ ಉದಿ ಹಚ್ಚುತ್ತಿರುವಂತೆ ತೋರುತ್ತದೆ. ಅವರು ನಮ್ಮ ತಲೆಯಮೇಲೆ ಕೈಯಿಟ್ಟು ನೇವರಿಸಿದಾಗ ನಮ್ಮ ಕಣ್ಣು ತುಂಬಿಬಂದು, ಏನೋ ಹೇಳಲಾರದಂತಹ ಒಂದು ಸುಖಾನುಭವ ಮನಸ್ಸನ್ನು ತುಂಬುತ್ತದೆ. ನಮ್ಮ ಇರುವಿಕೆಯೇ ಮರೆತುಹೋಗಿ ನಾವು ಕಾಲ ದೇಶಗಳನ್ನು ಮೀರಿ ಎಲ್ಲಿಯೋ ಬೇರೆ ಹೋದಂತಿರುತ್ತದೆ. ನಾವು ಅವರಲ್ಲೇ ಲೀನರಾಗಿ ಹೋಗುತ್ತೇವೆ. ಭಾವನೆಗಳು, ಉದ್ವೇಗಗಳು, ಅಹಂಕಾರ ಎಲ್ಲ ತುಂಬಿದ ಈ ನಾನು ಎನ್ನುವ ದೇಹ ಕರಗಿಹೋಗಿ ಅವರೊಳಗೆ ಸೇರಿದಂತಾಗುತ್ತದೆ. ಅವರ ಸ್ಪರ್ಶ ಅಷ್ಟು ಪರಿಣಾಮಕಾರಿ. ಅನಭವಿಸಬೇಕೇ ಹೊರತು ಅದನ್ನು ಮಾತುಗಳಲ್ಲಿ ವಿವರಿಸಲು ಸಾಧ್ಯವಿಲ್ಲ.
ಬಾಬಾರ ಧೀರ ಗಂಭೀರ ವ್ಯಕ್ತಿತ್ವ, ಅವರ "ನಾನಿಲ್ಲಿದ್ದೇನೆ. ನಿನ್ನನ್ನು ನೋಡಿಕೊಳ್ಳುವ ಭಾರ ನನ್ನದು" ಎಂದು ಹೇಳುವ ದೃಷ್ಟಿ ನಮ್ಮನ್ನು ಆನಂದ ಸಾಗರದಲ್ಲಿ ಮುಳುಗಿಸಿಬಿಡುತ್ತದೆ. ಆನಂದ ಪರವಶರಾಗಿ ನಮ್ಮಲ್ಲಿ ಭಕ್ತಿ ಭಾವ ಉಕ್ಕಿ ಬರುತ್ತದೆ. ಅವರು ರಾಮನಂತೆ, ಕೃಷ್ಣನಂತೆ ಕಂಡು ನಮ್ಮ ಮನಸ್ಸನ್ನು ಅವರಲ್ಲಿಯೇ ಇಡುವಂತೆ ಮಾಡುತ್ತದೆ. ನಮ್ಮ ದಿನದಿನದ ಮಾತುಕಥೆಗಳಲ್ಲಿಯೂ ಅವರನ್ನು ಉದಾಹರಿಸುವಂತೆ ಮಾಡುತ್ತದೆ.
"ಇದು ಆ ಸದ್ಗುರುವಿನ ಅನುಗ್ರಹದ ಪರಿಣಾಮ. ನಾನೇ ಕೂತು ಬರೆಯಲು ಆರಂಭಿಸಿದರೆ ಒಂದಕ್ಷರವೂ ನೆನಪಿಗೆ ಬರುವುದಿಲ್ಲ. ಆದರೆ ಅವರು ನನ್ನನ್ನು ಪ್ರೇರೇಪಿಸಿದಾಗ, ಅಂತ್ಯವಿಲ್ಲದ ಹೊಳೆಯಂತೆ ಲೇಖನಿ ಓಡುತ್ತದೆ" ಎನ್ನುತ್ತಾರೆ ಹೇಮಾಡ್ ಪಂತ್. ನಮ್ಮಲ್ಲಿ ಅಹಂಕಾರ ತಲೆಯೆತ್ತಿದಾಗ ಅವರು ಅದನ್ನು ಮೆಟ್ಟಿ ನಮ್ಮನ್ನು ನೇರವಾದ ಮಾರ್ಗಕ್ಕೆ ತರುತ್ತಾರೆ. ಅವರಿಗೆ ಅನನ್ಯ ಶರಣರಾಗಿ ಅವರ ಪಾದಗಳಲ್ಲಿ ತಲೆಯಿಟ್ಟೊಡನೆ ನಮ್ಮ ಅರಿವಿಲ್ಲದೆಯೇ ನಾಲ್ಕು ಪುರುಷಾರ್ಥಗಳೂ ನಮ್ಮದಾಗುತ್ತವೆ. ಬಾಬಾ ತಮ್ಮ ಭಕ್ತರಿಗೆ ಹೇಳುತ್ತಿದ್ದರು, "ನಿಮಗೆ ಮೋಕ್ಷ ಮಾರ್ಗದಲ್ಲಿ ಹೆಜ್ಜೆಯಿಡುವ ಆಸೆ ಇದ್ದರೆ ನನ್ನನ್ನು ಸಂಪೂರ್ಣವಾಗಿ ನಂಬಿಕೊಳ್ಳಿ. ಮಾರ್ಗ ಎಷ್ಟೇ ದುರ್ಗಮವಾಗಿರಲಿ ನಿಮ್ಮನ್ನು ಗುರಿಮುಟ್ಟಿಸುವುದು ನನ್ನ ಜವಾಬ್ದಾರಿ." ಸದ್ಗುರುವಿನ ದಯೆಯಿದ್ದರೆ ಮಾತ್ರ ನಾವು ಎಂತಹ ಕಷ್ಟವಾದ ದಾರಿಯಲ್ಲೂ ಧೈರ್ಯವಾಗಿ ಕಾಲಿಟ್ಟು ಗುರಿ ತಲುಪಬಹುದು.
ಬಾಬಾರ ಭರವಸೆ
ಭಗವದ್ಗೀತೆಯಲ್ಲಿ ಕೃಷ್ಣ ಹೀಗೆ ಹೇಳಿದ್ದಾನೆ:
ಅನನ್ಯಾಶ್ಚಿಂತಯಂತೋ ಮಾಂ ಯೇ ಜನಃ ಪರ್ಯುಪಾಸತೇ
ತೇಷಾಂ ನಿತ್ಯಾಭಿಯುಕ್ತಾನಾಂ ಯೋಗಕ್ಷೇಮಮ್ ವಹಾಮ್ಯಹಮ್
ತೇಷಾಂ ನಿತ್ಯಾಭಿಯುಕ್ತಾನಾಂ ಯೋಗಕ್ಷೇಮಮ್ ವಹಾಮ್ಯಹಮ್
ಅಧ್ಯಾಯ ೯;ಶ್ಲೋಕ ೨೨
ಯಾರು ಅನನ್ಯವಾಗಿ ಯಾವಾಗಲೂ ನನ್ನನ್ನೇ ಕುರಿತು ಚಿಂತಿಸುತ್ತಾ, ನನ್ನನ್ನು ಪೂಜಿಸುತ್ತಾ ಇರುತ್ತಾರೋ ಅವರ ದಿನನಿತ್ಯದ ಯೋಗಕ್ಷೇಮಗಳನ್ನು ನಾನೇ ನೋಡಿಕೊಳ್ಳುತ್ತೇನೆ.
ಇದನ್ನೇ ಬಾಬಾ ಯಾವಾಗಲೂ ಹೇಳುತ್ತಿದ್ದರು, "ನನ್ನ ಭಕ್ತರಿಗೆ ಎಂದೂ ಅನ್ನ ವಸ್ತ್ರಗಳಿಗೆ ಕೊರತೆಯಿರುವುದಿಲ್ಲ. ಅವುಗಳಿಗಾಗಿ ಹೆಚ್ಚು ಕಷ್ಟಪಡಬೇಡಿ. ನನ್ನನ್ನು ನಂಬಿ, ನನ್ನಲ್ಲೇ ಮನಸ್ಸಿಟ್ಟು, ಭಕ್ತಿಯಿಂದ ನನ್ನನ್ನು ಪೂಜಿಸುವವರನ್ನು, ಸದಾ ಕಾಪಾಡುವುದು ನನ್ನ ಭಾರ."
ಹೆಸರು, ಕೀರ್ತಿ, ಪ್ರತಿಷ್ಠೆಗಳ ಹಿಂದೆ ಬೀಳದೆ, ಲೌಕಿಕ ಬೇಡಿಕೆಗಳನ್ನು ಅವರ ಮುಂದೆ ಇಡದೆ, "ಹೇ ದಯಾಮೂರ್ತಿ, ಕರುಣಾಸಾಗರ, ನಿನ್ನ ಕೃಪಾಕಟಾಕ್ಷವನ್ನು ನನ್ನೆಡೆಗೆ ಹರಿಸು" ಎಂದು ಭಕ್ತಿಪೂರ್ವಕವಾಗಿ ಬೇಡಿದರೆ ಅವರು ಖಂಡಿತವಾಗಿ ಅನುಗ್ರಹಿಸುತ್ತಾರೆ. ಸಾಯಿ ಸಚ್ಚರಿತ್ರೆಯನ್ನು ಸದಾ ಪಠನ ಮಾಡುತ್ತಾ ಇದ್ದರೆ, ಅವರಲ್ಲಿ ಭಕ್ತಿ ನಂಬಿಕೆಗಳು ಹೆಚ್ಚಿ ಶಾಂತಿ ಸಮಾಧಾನಗಳು ದೊರೆಯುತ್ತವೆ.
ಶಿರಡಿಯಲ್ಲಿ ಶ್ರೀರಾಮನವಮಿ ಉತ್ಸವಗಳು
ಗೋಪಾಲರಾವ್ ಗುಂಡು ಕೋಪರಗಾಂವ್ನಲ್ಲಿ ಸರ್ಕಲ್ ಇನ್ಸ್ಪೆಕ್ಟರ್. ಬಾಬಾರ ಅವಿಚ್ಛಿನ್ನ ಭಕ್ತ. ಬಾಬಾ ನಾಮ ಸ್ಮರಣೆ, ಸದಾಕಾಲದಲ್ಲಿಯೂ ಅವರ ಬಾಯಲ್ಲಿ ನುಡಿಯುತ್ತಿತ್ತು. ಅವರಿಗೆ ಮೂರುಸಲ ಮದುವೆಯಾದರೂ ಮಕ್ಕಳಾಗಲಿಲ್ಲ. ಬಾಬಾರ ಅಶೀರ್ವಾದದಿಂದ, ಮಗ ಹುಟ್ಟಿದ ಆ ಸಂತೋಷದಲ್ಲಿ ಅವರಿಗೆ ಶಿರಡಿಯಲ್ಲಿ ಒಂದು ಉರುಸ್ ನಡೆಸಬೇಕೆಂಬ ಯೋಚನೆ ಬಂತು. ಇದು ನಡೆದದ್ದು ೧೮೯೭ರಲ್ಲಿ. ಅವರು ತಾತ್ಯಾ ಪಾಟೀಲ್, ದಾದಾ ಕೋತೆ ಪಾಟೀಲ್, ಮಾಧವರಾವ್ ದೇಶಪಾಂಡೆ ಮುಂತಾದವರೊಡನೆ ಈ ವಿಷಯ ಕುರಿತು ಚರ್ಚಿಸಿದರು. ಈ ಸಲಹೆ ಅವರಿಗೂ ಒಪ್ಪಿಗೆಯಾಯಿತು. ಬಾಬಾರ ಅನುಮತಿಯನ್ನೂ ಪಡೆದರು. ಆದರೆ ಇಂತಹದೊಂದು ಉತ್ಸವವನ್ನು ನಡೆಸಲು ಜಿಲ್ಲೆಯ ಕಲೆಕ್ಟರ್ ಅವರ ಅನುಮತಿಯನ್ನೂ ಪಡೆಯಬೇಕು. ಅದಕ್ಕಾಗಿ ಕಲೆಕ್ಟರಿಗೆ ದರಖಾಸ್ತು ಮಾಡಿದರು. ಶಿರಡಿಯ ಕುಲಕರ್ಣಿ ಅದಕ್ಕೆ ವಿರುದ್ಧವಾಗಿ ಬರೆದುದರಿಂದ ಅನುಮತಿ ದೊರೆಯಲಿಲ್ಲ. ಬಾಬಾರ ಆಶೀರ್ವಾದದಿಂದ ಮತ್ತೆ ಪ್ರಯತ್ನಮಾಡಿದಾಗ ಅನುಮತಿ ದೊರೆಯಿತು. ಈ ಉತ್ಸವವನ್ನು ಶ್ರೀರಾಮನವಮಿಯ ದಿನ ನಡೆಸಬೇಕೆಂದು ನಿಶ್ಚಯಿಸಿದರು.
ಇಂತಹ ಉತ್ಸವ ನಡೆಸಲು ಶಿರಡಿಯಲ್ಲಿ ಅನೇಕ ಅನಾನುಕೂಲಗಳಿದ್ದವು. ಮೊದಲನೆಯದು ಕುಡಿಯಲು ಯೋಗ್ಯವಾದ ನೀರಿನದು. ಶಿರಡಿಯಲ್ಲಿ ಇದ್ದದ್ದು ಎರಡು ಭಾವಿಗಳು. ಒಂದು ಬತ್ತಿಹೋಗಿತ್ತು. ಇನ್ನೊಂದರ ನೀರು ಕುಡಿಯಲು ಯೋಗ್ಯವಾಗಿರಲಿಲ್ಲ. ಆ ಭಾವಿಯಲ್ಲಿ ಬಾಬಾ ಕೆಲವು ಹೂವುಗಳನ್ನು ಹಾಕಿ ಅದರ ನೀರು ಕುಡಿಯಲು ಯೋಗ್ಯವಾಗುವಂತೆ ಮಾಡಿದರು. ಆದರೂ ಆ ನೀರು ಸಾಕಾಗುತ್ತಿರಲಿಲ್ಲವಾದದ್ದರಿಂದ ತಾತ್ಯಾ ಪಾಟೀಲ್ ಬೇರೆ ಕಡೆಗಳಿಂದ ನೀರು ತರಿಸಲು ಏರ್ಪಾಡುಮಾಡಿದರು. ಇತರ ಅನಾನುಕೂಲಗಳನ್ನೂ ಸರಿಪಡಿಸಿ ಉತ್ಸವವನ್ನು ಆರಂಭಿಸಲು ಅಣಿಯಾದರು.
ಉತ್ಸವಗಳಲ್ಲಿ ಮುಖ್ಯವಾದದ್ದು ಅಂಗಡಿಮುಂಗಟ್ಟುಗಳು. ಮಕ್ಕಳ ಆಟದ ಸಾಮಾನುಗಳು, ಮನೆಗೆ ಬೇಕಾಗುವ ಪಾತ್ರೆಪಡಗಗಳು, ತಿಂಡಿಪದಾರ್ಥಗಳು, ಇನ್ನೂ ಅನೇಕ ಪದಾರ್ಥಗಳನ್ನು ಮಾರುವ ಅಂಗಡಿಗಳು, ದೊಡ್ಡವರು ಸಣ್ಣವರು ಎಲ್ಲರಿಗೂ ನಕ್ಕು ನಲಿದಾಡಲು ಮನೋರಂಜನೆ, ಎಲ್ಲಕ್ಕೂ ಅಣಿಮಾಡಿದರು. ಇದರ ಉತ್ಸುವಾರಿಯೆಲ್ಲಾ ತಾತ್ಯಾ ಪಾಟೀಲ್ ನೋಡಿಕೊಂಡರು. ಕುಸ್ತಿ ಅಖಾಡಗಳೂ ತಯಾರಾದವು. ಉತ್ಸವಕ್ಕೆ ಬೇಕಾದ ಬ್ಯಾಂಡು ಬಜಂತ್ರಿ ಸಿದ್ಧವಾಯಿತು. ಉತ್ಸವದಲ್ಲಿ ಎರಡು ಝಂಡಾಗಳನ್ನು ಮೆರವಣಿಗೆಯಲ್ಲಿ ತಂದು ಮಸೀದಿಯ ಎರಡು ಮೂಲೆಗಳಲ್ಲಿ ನೆಡಬೇಕು. ದಾಮೂ ಅಣ್ಣಾ ಕಾಸಾರ್ ಒಂದು ಝಂಡಾ ಕೊಡಲು ಒಪ್ಪಿಕೊಂಡರು. ಅವರೂ, ಗೋಪಾಲ ರಾವ್ ಗುಂಡು ಅವರಂತೆ ಸಂತಾನಹೀನರಾಗಿದ್ದು ಬಾಬಾರ ಅಶೀರ್ವಾದದಿಂದ ಮಗ ಹುಟ್ಟಿದ್ದ. ಅದಕ್ಕೇ ಸಂತೋಷದಿಂದ ಒಪ್ಪಿದರು. ನಾನಾಸಾಹೇಬ್ ನಿಮೋನ್ಕರರನ್ನು ಇನ್ನೊಂದು ಝಂಡಾ ಕೊಡುವಂತೆ ಒಪ್ಪಿಸಿದರು.
ಈ ರೀತಿ ಎಲ್ಲಾ ತಯಾರಿಗಳೂ ಆದಮೇಲೆ ಝಂಡಾಗಳನ್ನು ಮೆರವಣಿಗೆಯಲ್ಲಿ, ದ್ವಾರಕಾಮಾಯಿಗೆ ತಂದು ಅಲ್ಲಿ ಎರಡು ಮೂಲೆಗಳಲ್ಲಿ ನೆಟ್ಟರು. ಹಾಗೆ ಶ್ರೀರಾಮನವಮಿಯ ದಿವಸ ಶಿರಡಿಯಲ್ಲಿ ಈ ಝಂಡಾ ಉತ್ಸವ ಆರಂಭವಾಯಿತು.
೧೮೯೭ರಲ್ಲಿ ಆರಂಭವಾದ ಈ ಝಂಡಾ ಉತ್ಸವ ಬರುಬರುತ್ತಾ ಪ್ರಾಮುಖ್ಯತೆಯನ್ನು ಪಡೆಯಿತು. ೧೯೧೨ರಲ್ಲಿ ಕೃಷ್ಣ ಜೋಗೇಶ್ವರ್ ಭೀಷ್ಮ ಶ್ರೀರಾಮನವಮಿಯ ದಿನವೇ ಈ ಉತ್ಸವ ನಡೆಯುವುದನ್ನು ಗಮನಿಸಿ, ಉತ್ಸವದ ಜೊತೆಗೆ ಶ್ರೀರಾಮ ಜನ್ಮೋತ್ಸವವನ್ನೂ ಏಕೆ ಮಾಡಬಾರದು ಎಂದು ಯೋಚಿಸಿದರು. ಇದನ್ನು ಮಿಕ್ಕವರಿಗೂ ಹೇಳಿದಾಗ ಅವರೆಲ್ಲರಿಗೂ ಇದು ಸರಿ ಎನ್ನಿಸಿ ಎಲ್ಲರೂ ಒಪ್ಪಿದರು. ಆ ದಿನ ಹರಿಕಥೆಯನ್ನು ನಡೆಸುವುದು ರೂಢಿ. ಆದರೆ ಹರಿಕಥೆಯನ್ನು ಹೇಳುವ ಹರಿದಾಸರು ಸಿಕ್ಕುವುದು ಬಹಳ ಕಷ್ಟ. ಏನು ಮಾಡಬೇಕೆಂದು ಯೋಚಿಸಿ, ಕೊನೆಗೆ ಭೀಷ್ಮರೇ ಕಥೆಯನ್ನು ಹೇಳಬೇಕೆಂದೂ, ಕಾಕಾ ಮಹಾಜನಿ ಹಾರ್ಮೋನಿಯಂ ನುಡಿಸಬೇಕೆಂದೂ ನಿಶ್ಚಯಿಸಿದರು. ರಾಧಾಕೃಷ್ಣ ಮಾಯಿ ಶುಂಠಿ ಪ್ರಸಾದ ಮಾಡಲು ಒಪ್ಪಿದರು. ಇಷ್ಟೆಲ್ಲಾ ಆದಮೇಲೆ ಬಾಬಾರ ಅನುಮತಿ ಪಡೆಯಲು ಹೋದರು. ಬಾಬಾ ಕಾಕಾ ಮಹಾಜನಿಯನ್ನು "ವಾಡಾದಲ್ಲಿ ಏನು ನಡೆಯುತ್ತಿದೆ?" ಎಂದು ಕೇಳಿದರು. ಕಾಕಾ ಅವರಿಗೆ ಏನು ಹೇಳಬೇಕೆಂದು ತೋಚಲಿಲ್ಲ. ಬಾಬಾ ಭೀಷ್ಮರನ್ನೂ ಕೇಳಿದರು. ಅಷ್ಟರಲ್ಲಿ, ಕಾಕಾ ಚೇತರಿಸಿಕೊಂಡು, "ಝಂಡಾ ಉತ್ಸವದ ಜೊತೆಗೆ ಶ್ರೀ ರಾಮ ಜನ್ಮೋತ್ಸವವನ್ನೂ ಮಾಡಬೇಕೆಂದು ಎಲ್ಲರೂ ಇಚ್ಛಿಸಿರುವುದರಿಂದ, ನಿಮ್ಮ ಅನುಮತಿ ಕೇಳಲು ಬಂದಿದ್ದೇವೆ" ಎಂದರು. ಬಾಬಾ ಸಂತೋಷದಿಂದ ತಮ್ಮ ಅನುಮತಿ ಕೊಟ್ಟರು. ಅನುಮತಿ ದೊರೆತಮೇಲೆ ತ್ವರೆಯಿಂದ ಮಿಕ್ಕೆಲ್ಲವನ್ನೂ ಸಿದ್ಧಪಡಿಸಿಕೊಂಡು ಜನ್ಮೋತ್ಸವಸಮಾರಂಭಕ್ಕೆ ಅಣಿಯಾದರು.
ಮಾರನೆಯ ದಿನ ಮಸೀದಿಯನ್ನು ಹೂವುಗಳಿಂದ ಶೃಂಗರಿಸಿದರು. ರಾಧಾಕೃಷ್ಣ ಮಾಯಿ ಕೊಟ್ಟ ತೊಟ್ಟಿಲೊಂದನ್ನು ಅಲಂಕರಿಸಿ ಮಸೀದಿಯಲ್ಲಿ ಇಟ್ಟರು. ಹೀಗೆ ಎಲ್ಲ ವ್ಯವಸ್ಥೆಗಳನ್ನೂ ಮಾಡಿಕೊಂಡು, ಒಂದು ಮಹತ್ತರವಾದ ಉತ್ಸವವನ್ನು ನಡೆಸಲು ಸನ್ನದ್ಧರಾದರು. ಮಹಾಜನಿ ಹಾರ್ಮೋನಿಯಂ ನುಡಿಸಲು, ಭೀಷ್ಮ ಕಥೆ ಹೇಳಲು ಸಿದ್ಧರಾದರು. ಕಥೆ ಕೇಳಲು ಜನ ಬಂದು ಕೂಡಿದರು. ಆಗ ಮಸೀದಿಗೆ ಬಂದ ಬಾಬಾ ಮಹಾಜನಿಯನ್ನು ಕರೆದರು. ಏನಾಗಿದೆಯೋ ಎಂಬ ಕಾತುರತೆಯಿಂದ ಬಾಬಾರ ಬಳಿಗೆ ಹೋದಾಗ ಅವರು, "ಈ ತೊಟ್ಟಿಲು ಇಲ್ಲಿ ಏಕೆ ಇಟ್ಟಿದ್ದೀರಿ? ಇದೆಲ್ಲಾ ಏನು?" ಎಂದು ಪ್ರಶ್ನಿಸಿದರು. ಕಾಕಾ, "ಆದು ಕೀರ್ತನೆಯ ಅಂಗವಾಗಿ ಅಲ್ಲಿ ಇಡಲಾಗಿದೆ" ಎಂದು ಹೇಳಿದರು. ಅದನ್ನು ಕೇಳಿ ಬಾಬಾ ಸಂತೋಷದಿಂದ ನಿಂಬಾರ(ಗೂಡಿ)ದಿಂದ ಒಂದು ಹಾರ ತೆಗೆದು ಕಾಕಾರ ಕೊರಳಿಗೆ ಹಾಕಿ, ಇನ್ನೊಂದು ಹಾರ ಭೀಷ್ಮರಿಗೆ ಹಾಕಲು ಕಳುಹಿಸಿದರು. ಎಲ್ಲರೂ ಸಮಾಧಾನದ ನಿಟ್ಟುಸಿರು ಬಿಟ್ಟು ಕಥೆ ಕೇಳಲು ಕೂತರು. ಕಥೆ ಆರಂಭವಾಯಿತು. ಬಹಳ ಚೆನ್ನಾಗಿ ನಡೆದ ಕಥೆಯನ್ನು ಕೇಳಿದ ಜನ ಬಹಳ ಸಂತೋಷದಿಂದ “ಜೈ ಶ್ರೀರಾಮ” ಎಂದು ಜೈಕಾರ ಮಾಡುತ್ತಾ, ಉತ್ಸವ ಮುಗಿದ ಗುರುತಾಗಿ, ಒಬ್ಬರಿನ್ನೊಬ್ಬರಮೇಲೆ ಗುಲಾಲು ಎರಚಾಡಿದರು.
ಅಷ್ಟರಲ್ಲಿ ಅವರಿಗೆ ಒಂದು ಘರ್ಜನೆ ಕೇಳಿಸಿತು. ಎಲ್ಲರೂ ದಿಗ್ಭ್ರಾಂತರಾಗಿ ನೋಡಿದರೆ ಬಾಬಾ ಕೂಗಾಡುತ್ತಾ ಓಡಾಡುತ್ತಿದ್ದರು. ಏನಾಯಿತೆಂದು ತಿಳಿಯದೆ ಜನ ಓಡತೊಡಗಿದರು. ಬಾಬಾರಿಗೆ ಸನ್ನಿಹಿತರಾದವರು ಅವರ ಬಳಿಗೆ ಹೋಗಿ ಅವರ ಕಣ್ಣಿನಲ್ಲಿ ಗುಲಾಲು ಬಿದ್ದಿತೆಂದು ಕಂಡುಕೊಂಡರು. ಆದರೆ ಬಾಬಾರಿಗೆ ಅದೊಂದು ನೆವ ಅಷ್ಟೆ. ರಾವಣನ ಸಂಹಾರಕ್ಕೆ ಅಂದು ರಾಮನ ಜನನವಾಯಿತೆಂದು ತಿಳಿಸುವುದಕ್ಕೆ ಆ ರೀತಿ ಮಾಡಿದರು ಎಂದು ಎಲ್ಲರೂ ಭಾವಿಸಿದರು. ಆ ಕೋಪದಲ್ಲಿ ಬಾಬಾ ಎಲ್ಲಿ ತೊಟ್ಟಿಲನ್ನು ಮುರಿದುಹಾಕುವರೋ ಎಂಬ ಭಯದಿಂದ ಕಾಕಾ ತೊಟ್ಟಿಲನ್ನು ಬಿಚ್ಚಲು ಹೋದರು. ಬಾಬಾ ಅವರನ್ನು ಬಿಡಲಿಲ್ಲ. ಸ್ವಲ್ಪ ಹೊತ್ತಾದ ಮೇಲೆ ಬಾಬಾ ಶಾಂತರಾದರು. ಬಾಬಾ, “ಇನ್ನೂ ಉತ್ಸವ ಮುಗಿದಿಲ್ಲ. ಗೋಪಾಲ ಕಾಲಾ ಉತ್ಸವವೂ ಆದಮೇಲೆ ಬಿಚ್ಚಬಹುದು” ಎಂದರು.
ಈ ರೀತಿ ರಾಮ ಜನ್ಮೋತ್ಸವ ಹಾಗೂ ಉರುಸ್, ಉತ್ಸವ ಎರಡೂ ಒಂದೇದಿನ ಅಪರಿಮಿತ ಉತ್ಸಾಹದಿಂದ ಅದ್ಧೂರಿಯಾಗಿ ನಡೆಯಿತು. ಬಾಬಾರಿಗೆ ಬಹಳ ಪ್ರಿಯವಾದ ಅನ್ನದಾನ ಕಾರ್ಯಕ್ರಮವೂ ದೊಡ್ಡದಾಗಿ ನಡೆಯಿತು. ಭಕ್ತರೆಲ್ಲರೂ ಎಲ್ಲ ಕಾರ್ಯಕ್ರಮಗಳಲ್ಲೂ ಉತ್ಸಾಹದಿಂದ ಭಾಗವಹಿಸಿದ್ದರು.
ಚಂದನೋತ್ಸವ
ಅಮೀರ್ ಶಕ್ಕರ್ ದಲಾಲ್ ಎಂಬುವ ಭಕ್ತರೊಬ್ಬರು ರಾಮನವಮಿಯ ಜೊತೆಗೆ ಮತ್ತೊಂದು ಮೆರವಣಿಗೆಯನ್ನೂ ಆರಂಭಿಸಿದರು. ಮುಸ್ಲಿಮ್ ಸಂತರ ಗೌರವಾರ್ಥವಾಗಿ ಮಾಡುವ ಈ ಉತ್ಸವದಲ್ಲಿ, ಚಂದನವನ್ನು ಒಂದು ತಟ್ಟೆಯಲ್ಲಿಟ್ಟು, ತಲೆಯಮೇಲೆ ಹೊತ್ತುಕೊಂಡು, ಧೂಪದೊಡನೆ ಮಸೀದಿಯಿಂದ ಆದನ್ನು ಮೆರವಣಿಗೆಯಲ್ಲಿ ತೆಗೆದುಕೊಂಡು ಊರೆಲ್ಲಾ ಸುತ್ತಿ ಮತ್ತೆ ಮಸೀದಿಗೆ ತಂದು, ಆ ಚಂದನವನ್ನು ಮಸೀದಿಯ ಗೋಡೆಗಳಿಗೆ ಹಚ್ಚುತ್ತಾರೆ. ಈ ಮೆರವಣಿಗೆಯನ್ನು ಮೊದಲ ಮೂರು ವರ್ಷ ಅಮೀರ್ ಶಕ್ಕರ್ ನಡೆಸಿದರು. ಆಮೇಲೆ ಅವರ ಹೆಂಡತಿ ಮುಂದುವರೆಸಿದರು.
ಹೀಗೆ ಶಿರಡಿಯಲ್ಲಿ ಒಂದೇ ದಿನ, ಬೆಳಗ್ಗೆ ರಾಮಜನ್ಮೋತ್ಸವ ಸಂಜೆ ಚಂದನೋತ್ಸವ, ಯಾವುದೇ ಅಡೆತಡೆಯಿಲ್ಲದೆ, ಯಾವುದೇ ಗಲಾಟೆಗಳಿಲ್ಲದೆ ನಡೆಯಲು ಮೊದಲಾಯಿತು. ಇಂದಿಗೂ ಹಾಗೇ ನಡೆಯುತ್ತಿದೆ.
೧೯೧೩ರ ನಂತರ ರಾಮನವಮಿ ಉತ್ಸವಗಳು
ಬರುಬರುತ್ತಾ ೧೯೧೩ರ ವೇಳೆಗೆ ರಾಮನವಮಿ, ಒಂದು ದಿನದ ಕಾರ್ಯಕ್ರಮದಿಂದ ಒಂಭತ್ತು ದಿನಗಳ ಕಾರ್ಯಕ್ರಮವಾಗಿ, ಚೈತ್ರ ಶುದ್ಧ ಪ್ರತಿಪತ್ಯೆಯಿಂದ ನವಮಿಯವರೆಗೂ ನಡೆಯಲು ಆರಂಭವಾಯಿತು. ರಾಧಾಕೃಷ್ಣ ಮಾಯಿ ರಾಮನಾಮ ಸಪ್ತಾಹವನ್ನು ಆರಂಭಿಸಿದರು. ಭಕ್ತರೆಲ್ಲರೂ ಎಲ್ಲ ಕಾರ್ಯಕ್ರಮಗಳಲ್ಲೂ ತಪ್ಪದೇ ಭಾಗವಹಿಸುತ್ತಿದ್ದರು. ವರ್ಷ ವರ್ಷವೂ ಕೀರ್ತನಕಾರರನ್ನು ಹುಡುಕಿ ತರುವುದು ಕಷ್ಟಸಾಧ್ಯವಾದ ಕೆಲಸ. ಕಾಕಾ ಮಹಾಜನಿ ಅವರು ಆ ವರ್ಷ ತಮ್ಮ ಮಿತ್ರ ನವಕಾಲೀನ ತುಕಾರಾಂ ಎಂದು ಪ್ರಸಿದ್ಧವಾದ ಬಾಲಾ ಬುವಾ ಮಾಲಿಯವರನ್ನು ಒಪ್ಪಿಸಿ, ಕೀರ್ತನೆ ನಡೆಸಿದರು. ಅದರ ಮುಂದಿನ ವರ್ಷ, ಬಾಲಾ ಬುವಾ ಸುತಾರ್ ಅವರ ಊರಿನಲ್ಲಿ ಪ್ಲೇಗ್ ಜಾಡ್ಯ ಹಬ್ಬಿದುದರಿಂದ, ಕಥೆ ಮಾಡಲಾಗದೆ ಶಿರಡಿಗೆ ಬಂದು, ಬಾಬಾರ ಒಪ್ಪಿಗೆ ಪಡೆದು ಕೀರ್ತನೆ ಮಾಡಿದರು. ಸಭಿಕರಿಗೆ ಅವರ ಕೀರ್ತನೆ ಕೇಳಿ ಬಹಳ ಸಂತೋಷವಾಯಿತು. ಬಾಬಾ ಅವರಿಗೆ ೧೫೦ ರೂಪಾಯಿ ಸಂಭಾವನೆ ಕೊಟ್ಟರು. ಇದು ಅವರು ತಮ್ಮ ಊರಿನಲ್ಲಿ ಪಡೆಯುತ್ತಿದ್ದ ಸಂಭಾವನೆಗಿಂತ ೫ ಪಟ್ಟು ಹೆಚ್ಚಾಗಿತ್ತು.
ಅದಾದನಂತರ ಬಾಬಾ ಕೀರ್ತನೆ ಹೇಳುವ ಕಾರ್ಯಕ್ರಮದ ಜವಾಬ್ದಾರಿ ದಾಸಗಣೂ ಅವರಿಗೆ ವಹಿಸಿದರು. ಇದರಿಂದಾಗಿ ಪ್ರತಿವರ್ಷ ಕೀರ್ತನಕಾರರನ್ನು ಹುಡುಕುವ ಕಷ್ಟ ತಪ್ಪಿತು. ದಾಸಗಣು ತಾವಿರುವವರೆಗೂ ಈ ಕಾರ್ಯಕ್ರಮವನ್ನು ತಪ್ಪದೇ ನಡೆಸಿಕೊಡುತ್ತಿದ್ದರು.
ಹೀಗೆ ಪ್ರತಿ ವರ್ಷವೂ ಎಲ್ಲ ಕಾರ್ಯಕ್ರಮಗಳು ಉತ್ಸಾಹದಿಂದ ತುಂಬಿ, ಅದ್ಧೂರಿಯಾಗಿ ನಡೆಯುತ್ತಿದ್ದವು. ಬಾಬಾರ ಅನುಗ್ರಹದಿಂದ ಹಿಂದೂಗಳೂ ಮುಸ್ಲಿಮರೂ ಕೂಡಿಯೇ ಉತ್ಸವಗಳನ್ನು ನಡೆಸಿದರೂ ಯಾವುದೇ ಗಲಾಟೆಗಳಾಗಲೀ, ರೋಗರುಜಿನಗಳಾಗಲೀ ಇರುತ್ತಿರಲಿಲ್ಲ. ಅನ್ನದಾನ ಕಾರ್ಯಕ್ರಮವೂ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿತ್ತು. ದಿನವೆಲ್ಲ ಅಲ್ಲಿ ಸಾಯಿ ಜೈಕಾರಗಳು ತುಂಬಿರುತ್ತಿದ್ದವು. ರಾಧಾಕೃಷ್ಣ ಮಾಯಿಯ ಶ್ರಮದಿಂದ ಶಿರಡಿ ಒಂದು ಸಂಸ್ಥಾನವಾಗಿ ಮಾರ್ಪಾಡಾಯಿತು.
ತಮ್ಮ ಸುತ್ತಲೂ ಇಷ್ಟೆಲ್ಲಾ ನಡೆಯುತ್ತಿದ್ದರೂ, ಬಾಬಾ ಮಾತ್ರ ತಾವು ಇದೆಲ್ಲವನ್ನೂ ತಟಸ್ಥರಾಗಿ ನೋಡುತ್ತಿದ್ದರೇ ವಿನಹ, ಅದರಲ್ಲಿ ಯಾವ ಆಸ್ಥೆಯನ್ನೂ ತೋರುತ್ತಿರಲಿಲ್ಲ.
ಮಸೀದಿಯ ಪುನರುದ್ಧಾರ
ಗೋಪಾಲ್ ರಾವ್ ಗುಂಡು ಅವರಿಗೆ ಮಸೀದಿಯ ಪುನರುದ್ಧಾರ ಮಾಡಬೇಕೆಂಬ ಯೋಚನೆ ಬಂತು. ಅದಕ್ಕಾಗಿ ಹಾಸುಗಲ್ಲುಗಳನ್ನು ತರಿಸಬೇಕೆಂದು ಕೊಂಡಿದ್ದರು. ಆದರೆ ಬಾಬಾ ಮಸೀದಿಯ ಪುನರುದ್ಧಾರಕ್ಕೆ ಒಪ್ಪಿಕೊಳ್ಳಲಿಲ್ಲ. ಮಹಲ್ಸಾಪತಿ, ಮತ್ತೆ ಮತ್ತೆ ಕೇಳಿಕೊಂಡದ್ದರಿಂದ ಬಾಬಾ ಕಡೆಗೆ ಸಮ್ಮತಿಸಿದರು. ಬಾಬಾ ಚಾವಡಿಯಲ್ಲಿ ಮಲಗಿದಾಗ, ಒಂದೇ ರಾತ್ರಿಯಲ್ಲಿ ಮಸೀದಿಯ ನೆಲವನ್ನೆಲ್ಲ ದುರಸ್ತಿ ಮಾಡಿ ಹಾಸುಗಲ್ಲುಗಳನ್ನು ಹಾಕಿದರು.
ಭಕ್ತರು ಕುಳಿತುಕೊಳ್ಳುವ ಜಾಗ ಬಹಳ ಇಕ್ಕಟ್ಟಾಗಿದ್ದುದರಿಂದ ಅದನ್ನು ವಿಸ್ತರಿಸಿ ಮೇಲೆ ಚಾವಣಿ ಹಾಕಬೇಕೆಂದು ದೀಕ್ಷಿತ್ ಯೋಚಿಸಿದರು. ಅದಕ್ಕಾಗಿ ಕಬ್ಬಿಣದ ಕಂಭಗಳನ್ನು ತರಿಸಿ ಕೆಲಸ ಪ್ರಾರಂಭಮಾಡಿದರು. ಆದರೆ, ನೆಟ್ಟಿದ್ದ ಕಂಭಗಳನ್ನು ಕಿತ್ತುಹಾಕಿ ಬಾಬಾ ತಮ್ಮ ಅಸಮ್ಮತಿಯನ್ನು ತೋರಿದರು. ಒಂದುಸಲ ಕಂಭ ಕೀಳುತ್ತಿದ್ದಾಗ, ತಾತ್ಯಾ ಪಾಟೀಲರನ್ನು ಒಂದು ಕೈಯಲ್ಲಿ ಹಿಡಿದುಕೊಂಡು ಅವರ ಪೇಟಾ ಕಿತ್ತು ಅದಕ್ಕೆ ಬೆಂಕಿ ಹಚ್ಚಿ, ಹಳ್ಳದೊಳಕ್ಕೆ ಹಾಕಿದರು. ಆಗ ಬಾಬಾ ಕಣ್ಣುಗಳು ಅಗ್ನಿಜ್ವಾಲೆಯಂತೆ ಉರಿಯುತ್ತಿದ್ದವು. ಯಾರಿಗೂ ಅವರ ಹತ್ತಿರ ಹೋಗಲು ಧೈರ್ಯವಾಗಲಿಲ್ಲ. ತಮ್ಮ ಜೇಬಿನಿಂದ ಒಂದು ರೂಪಾಯಿ ತೆಗೆದು ಹಳ್ಳದೊಳಕ್ಕೆ ಬಿಸಾಡಿದರು. ತಾತ್ಯಾ ಭಯದಿಂದ ನಡುಗುತ್ತಿದ್ದರು. ಅವರನ್ನು ಬಿಡಿಸಿಕೊಳ್ಳಲು ಯಾರೂ ಮುಂದೆ ಬರಲಿಲ್ಲ. ಕೊನೆಗೆ ಭಾಗೋಜಿ ಶಿಂಧೆ ಬಾಬಾರ ಹತ್ತಿರ ಹೋದಾಗ, ಬಾಬಾ ಅವನನ್ನು ಹೊಡೆದರು. ಶ್ಯಾಮಾಗೂ ಅದೇ ಗತಿಯಾಯಿತು. ಸ್ವಲ್ಪ ಹೊತ್ತಾದ ಮೇಲೆ ಬಾಬಾ ತಾವೇ ಶಾಂತರಾಗಿ, ಹೊಸದೊಂದು ಜರತಾರಿ ಪೇಟಾ ತರಿಸಿ ತಾವೇ ತಮ್ಮ ಕೈಯಿಂದ ತಾತ್ಯಾಗೆ ಹಾಕಿದರು. ಈ ವಿಚಿತ್ರ ನಡತೆಯನ್ನು ಕಂಡ ಎಲ್ಲರೂ ಆಶ್ಚರ್ಯಪಟ್ಟರು. ಬಾಬಾ ಏಕೆ ಹೀಗೆ ಮಾಡಿದರು ಎಂದು ಯಾರಿಗೂ ಅರ್ಥವಾಗಲಿಲ್ಲ. ಬಹುಶಃ ತಾತ್ಯಾರನ್ನು ಯಾವುದೋ ಆತಂಕದಿಂದ ಕಾಪಾಡಲು ಹೀಗೆ ಮಾಡಿರಬಹುದೇನೋ!
ಹೇಮಾಡ್ ಪಂತ್ ಹೇಳುತ್ತಾರೆ, "ಇಂತಹ ಅನೇಕ ಘಟನೆಗಳು ನಡೆದಿವೆ. ಯಾವುದನ್ನು ಬರೆಯಬೇಕೋ ಯಾವುದನ್ನು ಬಿಡಬೇಕೋ ತಿಳಿಯುವುದಿಲ್ಲ. ಯಾವುದನ್ನು ಬರೆಯಲು ಬಾಬಾ ಪ್ರೇರಣೆ ಕೊಡುತ್ತಾರೋ ಅದನ್ನು ಮಾತ್ರ ನಾನು ಬರೆಯುತ್ತೇನೆ."
ಇದರೊಡನೆ ರಾಮನವಮಿ ಉತ್ಸವ ಇತ್ಯಾದಿ ವಿಷಯಗಳನ್ನು ಕುರಿತ ಆರನೆಯ ಅಧ್ಯಾಯ ಮುಗಿಯಿತು. ಮುಂದಿನ ಅಧ್ಯಾಯದಲ್ಲಿ ಹೇಮಾಡ್ ಪಂತ್ ಬಾಬಾ ಹಿಂದುವೋ ಮುಸ್ಲಿಮರೋ, ಬಾಬಾರ ಯೋಗಾಭ್ಯಾಸ ಇತ್ಯಾದಿ ವಿಷಯಗಳನ್ನು ಹೇಳುತ್ತಾರೆ.
||ಶ್ರೀ ಸದ್ಗುರು ಸಾಯಿನಾಥಾರ್ಪಣಮಸ್ತು||ಶುಭಂ ಭವತು||
||ಓಂ ಶಾಂತಿಃ ಶಾಂತಿಃ ಶಾಂತಿಃ||
||ಓಂ ಶಾಂತಿಃ ಶಾಂತಿಃ ಶಾಂತಿಃ||
No comments:
Post a Comment