||ಶ್ರೀ ಸಾಯಿ ಸಚ್ಚರಿತ್ರೆ||
||ಇಪ್ಪತ್ತಮೂರನೆಯ ಅಧ್ಯಾಯ||
||ಗುರುಭಕ್ತಿ ದರ್ಶನ||
ಶ್ರೀ ಗಣೇಶಾಯ ನಮಃ ಶ್ರೀ ಸರಸ್ವತಯೇ ನಮಃ
ಶ್ರೀ ವೆಂಕಟೇಶಾಯ ನಮಃ ಶ್ರೀ ಸಾಯಿನಾಥಾಯ ನಮಃ
ಶ್ರೀ ಸದ್ಗುರುಭ್ಯೋನ್ನಮಃ
||ಇಪ್ಪತ್ತಮೂರನೆಯ ಅಧ್ಯಾಯ||
||ಗುರುಭಕ್ತಿ ದರ್ಶನ||
ಶ್ರೀ ಗಣೇಶಾಯ ನಮಃ ಶ್ರೀ ಸರಸ್ವತಯೇ ನಮಃ
ಶ್ರೀ ವೆಂಕಟೇಶಾಯ ನಮಃ ಶ್ರೀ ಸಾಯಿನಾಥಾಯ ನಮಃ
ಶ್ರೀ ಸದ್ಗುರುಭ್ಯೋನ್ನಮಃ
ಈ ಅಧ್ಯಾಯದಲ್ಲಿ ಹೇಮಾಡ್ ಪಂತ್, ಯೋಗ ಮತ್ತು ಈರುಳ್ಳಿ, ಶ್ಯಾಮಾರನ್ನು ರಕ್ಷಿಸಿದ್ದು ಮತ್ತು ಇತರ ವಿಷಯಗಳನ್ನು ಹೇಳುತ್ತಾರೆ.
ಜೀವಾತ್ಮ
ಜೀವಾತ್ಮ ತ್ರಿಗುಣಾತೀತ. ಆದರೆ ಮಾಯೆಯಿಂದ ಆವರಿಸಲ್ಪಟ್ಟವನಾಗಿ, ಅವನು ತನ್ನ ನಿಜರೂಪವಾದ ಅಸ್ತಿತ್ವ, ಜ್ಞಾನ, ಆನಂದಗಳನ್ನು ಮರೆತು ತಾನೇ ಕರ್ತ, ಭೋಕ್ತೃ ಎಂದುಕೊಂಡು, ಈ ಜೀವನ್ಮರಣ ಚಕ್ರದಲ್ಲಿ ಸಿಕ್ಕಿಬೀಳುತ್ತಾನೆ. ಜನನ ಮರಣಗಳ ಮಧ್ಯೆ ಹೇಳಬಾರದ ಕಷ್ಟಗಳನ್ನು ಅನುಭವಿಸಿ, ಅದರಿಂದ ಈಚೆಗೆ ಬರುವುದು ಹೇಗೆ ಎಂದು ತಿಳಿಯದೆ ಒದ್ದಾಡುತ್ತಾನೆ. ಗುರುವಿನ ದಯಾಕಟಾಕ್ಷವೆಂಬ ಕಿರಣಗಳು ಅವನನ್ನು ತಾಕುತ್ತಲೇ, ಅವನ ಅಂಧಕಾರ ನಾಶವಾಗುತ್ತದೆ. ಗುರುವಿಗೆ ಶರಣಾಗತನಾಗಿ, ಈ ಮಾಯೆಯ ಆವರಣವನ್ನು ಕತ್ತರಿಸಿ, ಈಚೆಗೆ ಬರಬಲ್ಲವನಾಗುತ್ತಾನೆ. ಹಾಗೆ ನಮ್ಮನ್ನು ಅಂಧಕಾರದಿಂದ ಪಾರುಮಾಡಿ, ಮೋಕ್ಷದ ದಾರಿ ತೋರಿಸಿ, ಕಡೆಗೆ ತನ್ನಲ್ಲೇ ಲಯಮಾಡಿಕೊಳ್ಳಬಲ್ಲವನು ಸದ್ಗುರು ಒಬ್ಬನೇ. ಅಂತಹ ಸದ್ಗುರುವೇ ನಮ್ಮ ಸಾಯಿಬಾಬಾ. ತಲೆಮಾರಿನಿಂದ ತಲೆಮಾರುಗಳು ಬಾಬಾ ದೇವರೆಂದೇ ನಂಬಿದರೂ, ಬಾಬಾ ಮಾತ್ರ ಎಂದೂ ತಾನು ದೇವರು ಎಂದು ನೇರವಾಗಿ ಹೇಳಿಕೊಳ್ಳಲಿಲ್ಲ. ಅವರು ಯಾವಾಗಲೂ "ನಾನು ದೇವರ ಸೇವಕ. ಅಲ್ಲಾನೇ ಮಾಲಿಕ್" ಎಂದೇ ಹೇಳುತ್ತಿದ್ದರು. ಅವರು ಯಾರನ್ನೂ ಅನುಕರಿಸಲು ಅಥವಾ ಮೀರಿಸಲು ಎಂದೂ ಪ್ರಯತ್ನ ಮಾಡಲಿಲ್ಲ. ಬೇರೆಯವರನ್ನು ತನ್ನ ಕೆಲಸ ಮಾಡುವಂತೆ ಹೇಳಲಿಲ್ಲ. "ಎಲ್ಲರಲ್ಲೂ ದೇವರಿದ್ದಾನೆ. ಅದರಿಂದ ಎಲ್ಲರನ್ನೂ ಗೌರವದಿಂದ ಕಾಣಬೇಕು," ಎಂಬುದನ್ನು ತಾನು ಧೃಢವಾಗಿ ನಂಬಿ, ಅದನ್ನೇ ಎಲ್ಲರಿಗೂ ಉಪದೇಶ ಮಾಡಿದರು. ಅವರು ಎಂದೂ ಯಾರನ್ನೂ ಅಗೌರವದಿಂದ ಕಾಣಲಿಲ್ಲ. ಅವಹೇಳನಕ್ಕೆ ಗುರಿಪಡಿಸಲಿಲ್ಲ. ವಿನಯವೇ ಅವರ ಪ್ರಮುಖ ಗುಣವಾಗಿತ್ತು. ಅದನ್ನೇ ಅವರು ಇತರರಿಗೂ ಉಪದೇಶಿಸಿದರು. ನಮ್ಮಂತಹ ಅಜ್ಞಾನಿ, ಬಂಧರ ಉದ್ಧಾರಕ್ಕಾಗಿಯೇ ಬಾಬಾರಂತಹ ಸಂತರ ಅವತಾರ. ಬಹುಶಃ ಹಿಂದಿನ ಜನ್ಮಗಳಲ್ಲಿ ನಾವು ಮಾಡಿರಬಹುದಾಗಿದ್ದ ದೇವರ ಪೂಜೆಗಳೇ ನಮ್ಮನ್ನು ಇಂತಹ ಸಂತರ ಸಂಗಕ್ಕೆ ಸೇರಿಸಿದೆ. ಅವರ ಲೀಲೆಗಳನ್ನು ಕೇಳಿ, ಮನನ ಮಾಡಿಕೊಳ್ಳುವಂತಹ ಅವಕಾಶವನ್ನು ಕಲ್ಪಿಸಿದೆ. ಅಂದಿನ ಶಿರಡಿಯ ಪುಣ್ಯವಂತರಂತೆ ನಾವು ಈಗ ಬಾಬಾರನ್ನು ಸಶರೀರರಾಗಿ ಕಾಣಲು ಸಾಧ್ಯವಿಲ್ಲ. ಆದರೆ ಆ ಹಿಂದಿನವರು ನಮಗೆ ವಿಪುಲವಾದ ಸಾಯಿಸಚ್ಚರಿತ್ರೆಯಂತಹ ಅಕ್ಷಯ, ಅಮೂಲ್ಯ ಲೀಲಾ ಖಜಾನೆಯನ್ನು ಬಿಟ್ಟು ಹೋಗಿದ್ದಾರೆ. ಇದು ಖಾಲಿಯಾಗುವ ಖಜಾನೆಯಲ್ಲ. ಈಗಲೂ ಅವರ ಲೀಲೆಗಳಿಂದ ಅದು ತುಂಬುತ್ತಲೇ ಇದೆ. ತುಂಬುತ್ತಲೇ ಇರುತ್ತದೆ. ಎಂದಿಗೂ ಆ ಖಜಾನೆ ಬರಿದಾಗುವುದೇ ಇಲ್ಲ. ಅಂತಹ ಲೀಲಾ ಮಾನುಷರೂಪಿಯಾದ ಬಾಬಾರ ಚರಣಾರವಿಂದಗಳಲ್ಲಿ ನಮಸ್ಕರಿಸಿ, ಅವರ ಸಚ್ಚರಿತ್ರೆಯೆಂಬ ಸಾಗರದಿಂದ ಒಂದೆರಡು ಮುತ್ತುಗಳನ್ನು ಆರಿಸಿ ನೋಡೋಣ.
ಯೋಗ ಮತ್ತು ಈರುಳ್ಳಿ
ನಾನಾ ಸಾಹೇಬ್ ಚಾಂದೋರ್ಕರರಿಗೆ ರಾಮಬಾಬಾ ಎಂಬ ಸ್ನೇಹಿತರೊಬ್ಬರಿದ್ದರು. ಅವರು ಯೋಗ ಶಾಸ್ತ್ರ ನಿಪುಣರು. ಪತಂಜಲಿ ಯೋಗಶಾಸ್ತ್ರವನ್ನು ಓದಿ ಅರಗಿಸಿಕೊಂಡವರು. ಯೋಗದ ಬಗ್ಗೆ ಅಪಾರವಾದ ಜ್ಞಾನವುಳ್ಳವರು. ಆದರೆ ಅವರಿಗಿದ್ದಿದ್ದೆಲ್ಲವೂ ಒಣ ಪಾಂಡಿತ್ಯವೇ! ಕ್ರಿಯಾಶೀಲ ಜ್ಞಾನವಲ್ಲ. ಸಮಾಧಿ ಸ್ಥಿತಿಯಲ್ಲಿ ಅವರು ಒಂದು ನಿಮಿಷ ಕೂಡಾ ಇರಲು ಅಸಮರ್ಥರಾಗಿದ್ದರು. ಬಾಬಾರ ಹೆಸರು ಕೀರ್ತಿಗಳನ್ನು ಕೇಳಿದ ಅವರು, ತಮಗೆ ಸಮಾಧಿಸ್ಥಿತಿಯಲ್ಲಿ ಹೆಚ್ಚು ಹೊತ್ತು ಇರಲು ಏನಾದರೂ ಸಹಾಯವಾಗಬಹುದೋ ಏನೋ ಎಂಬ ಆಸೆಯಿಂದ, ಚಾಂದೋರ್ಕರರನ್ನು ಬಾಬಾರ ಬಳಿಗೆ ಕರೆದುಕೊಂಡು ಹೋಗುವಂತೆ ಕೇಳಿದರು.
ಫೆಬ್ರುವರಿ ೧೯೧೪ರಲ್ಲಿ ಅವರಿಬ್ಬರೂ ಜೊತೆಯಾಗಿ ಶಿರಡಿಗೆ ಹೋಗಿ ಬಾಬಾರ ದರ್ಶನಕ್ಕೆ ಮಸೀದಿಗೆ ಹೋದರು. ಆ ಸಮಯದಲ್ಲಿ ಬಾಬಾ ಒಂದು ಒಣ ರೊಟ್ಟಿಯನ್ನು, ಈರುಳ್ಳಿಯ ಜೊತೆ ಸೇರಿಸಿ ತಿನ್ನುತ್ತಿದ್ದರು. ಬಡವರು ತಿನ್ನುವ ರೀತಿ ಇದು. ರಾಮಬಾಬಾ ಅದನ್ನು ಕಂಡಕೂಡಲೇ, "ಒಣ ರೊಟ್ಟಿಯನ್ನು ಈರುಳ್ಳಿಯ ಜೊತೆ ತಿನ್ನುವ ಈ ಮನುಷ್ಯ ಸಮಾಧಿಯ ಬಗ್ಗೆ ನನಗೇನು ಸಹಾಯ ಮಾಡ ಬಲ್ಲ?" ಎಂದುಕೊಂಡರು. ರಾಮಬಾಬಾಗೆ, ಸಾಯಿಬಾಬಾ ಹೊರನೋಟಕ್ಕೆ ಕೂಡಾ ಸಮಂಜಸವಾಗಿ ಕಾಣಲಿಲ್ಲ. ಸರ್ವಜ್ಞರಾದ ಬಾಬಾ ಆ ಮನುಷ್ಯನ ಮನಸ್ಸಿನಲ್ಲಿ ನಡೆಯುತ್ತಿರುವುದನ್ನು ಗ್ರಹಿಸಿ, ಚಾಂದೋರ್ಕರರಿಗೆ, "ಯಾರು ಈರುಳ್ಳಿಯನ್ನು ಜೀರ್ಣಿಸಿಕೊಳ್ಳಬಲ್ಲರೋ ಅವರು ಮಾತ್ರ ಅದನ್ನು ತಿನ್ನಬೇಕು ಎಂದು ನಿನ್ನ ಸ್ನೇಹಿತನಿಗೆ ಹೇಳು" ಎಂದರು. ರಾಮಬಾಬಾ ತಕ್ಷಣವೇ ತನ್ನ ತಪ್ಪನ್ನು ಅರಿತುಕೊಂಡು ಬಾಬಾರ ಬಾಹ್ಯ ರೂಪಕ್ಕೂ, ಅವರ ಆಂತರ್ಯಕ್ಕೂ ಇರುವ ವ್ಯತ್ಯಾಸವನ್ನು ಕಂಡುಕೊಂಡರು. ಬಾಬಾರ ಪಾದಗಳಲ್ಲಿ ಬಿದ್ದು ಅವರಿಗೆ ಶರಣಾಗತರಾಗಿ, ತೆರೆದ ಮನಸ್ಸಿನಿಂದ ತಾವು ಬಂದಿದ್ದ ವಿಷಯವಾಗಿ ಪ್ರಶ್ನೆಗಳನ್ನು ಕೇಳಿ, ಸಮಾಧಾನಕರವಾದ ಉತ್ತರಗಳನ್ನು ಪಡೆದು, ಬಾಬಾರ ಆಶೀರ್ವಾದ ಹೊಂದಿ ಹಿಂತಿರುಗಿದರು.
ಶ್ಯಾಮಾರ ಕಥೆ
ಹೇಮಾದ್ ಪಂತರು ಈ ಕಥೆಯನ್ನು ಒಂದು ಸುಂದರ ಹೋಲಿಕೆಯೊಡನೆ ಆರಂಭಿಸಿದ್ದಾರೆ. ಜೀವಾತ್ಮ ಮತ್ತು ಗಿಣಿ ಇಬ್ಬರೂ ಪಂಜರದಲ್ಲಿ ಬಂದಿಗಳು. ಒಬ್ಬರು ದೇಹವೆಂಬ ಪಂಜರದಲ್ಲಿ, ಇನ್ನೊಬ್ಬರು ಲೋಹದ ಪಂಜರದಲ್ಲಿ. ಇಬ್ಬರೂ ತಾವಿರುವ ಜಾಗವೇ ಪ್ರಶಸ್ತವೆಂದೂ, ಹೊರಗೆ ಎಲ್ಲವೂ ಅಂಧಕಾರಮಯ, ನಮಗೇನೂ ತಿಳಿಯುವುದಿಲ್ಲ ಎಂದು ಕೊಳ್ಳುತ್ತಾರೆ. ಸಕಲವೂ ತಮ್ಮ ಪಂಜರವೇ ಎಂದು ಅವರಿಬ್ಬರ ತಿಳಿವಳಿಕೆ. ತಮ್ಮ ಪೂರ್ವಜನ್ಮ ಪುಣ್ಯ ಫಲದಿಂದ, ದೈವಕೃಪೆಯಿಂದ ಗುರುವು ಬಂದು ಅವರ ಪಂಜರವನ್ನು ತೆರೆದಿಟ್ಟು, ಅವರ ಅಜ್ಞಾನಾಂಧಕಾರವನ್ನು ತೊಲಗಿಸಿದಾಗ ಹೊರಗಿನ ಪ್ರಪಂಚ ಎಷ್ಟು ಸುಂದರವಾಗಿದೆ ಎಂದು ಅರಿಯಬಲ್ಲರು. ಸಂಕುಚಿತ ದೃಷ್ಟಿಯನ್ನು ಕಳೆದುಕೊಂಡು, ಹೊರಗೆ ಕಾಣುತ್ತಿರುವ ಹೊಸ ಪ್ರಪಂಚ ತಾವು ಇದುವರೆಗೆ ಕಾಣುತ್ತಿದ್ದ ಸಂಕುಚಿತ ಪ್ರಪಂಚಕ್ಕಿಂತ ಎಷ್ಟು ಅಗಾಧ, ಎಷ್ಟು ಸುಂದರ ಎಂಬುದು ಅರ್ಥವಾಗುತ್ತದೆ.
ಒಮ್ಮೆ, ಶ್ಯಾಮಾ (ಮಾಧವರಾವ್ ದೇಶಪಾಂಡೆ) ತಮ್ಮ ಮನೆಯಲ್ಲಿದ್ದಾಗ, ಹಾವೊಂದು ಅವರ ಕಿರುಬೆರಳನ್ನು ಕಚ್ಚಿತು. ವಿಷಪೂರಿತ ಹಾವಾದ್ದರಿಂದ ವಿಷ ಹರಡಲಾರಂಭಿಸಿತು. ತಡೆಯಲಾರದ ನೋವಿನಿಂದ ಒದ್ದಾಡುತ್ತಿದ್ದ ಶ್ಯಾಮಾ, ತಮ್ಮ ಅಂತ್ಯಕಾಲ ಬಂತೆಂದೇ ತಿಳಿದರು. ಅವರ ಸ್ನೇಹಿತರು ಅವರನ್ನು ಇಂತಹ ಹಾವಿನ ಕಡಿತಕ್ಕೆ ಚಿಕಿತ್ಸೆಯ ವ್ಯವಸ್ಥೆ ಇರುವ ವಿರೋಬಾ ದೇವಾಲಯಕ್ಕೆ ಕರೆದುಕೊಂಡು ಹೋಗಬೇಕು ಎಂದುಕೊಂಡರು. ಆದರೆ, ಶ್ಯಾಮಾ ತಮ್ಮ ಅಂತ್ಯಕಾಲದಲ್ಲಿ, ತಮ್ಮ ಆರಾಧ್ಯ ದೈವವಾದ ಬಾಬಾರನ್ನು ಕೊನೆಯಸಲ ದರ್ಶನಮಾಡಬೇಕೆಂದು, ತಮ್ಮ ಶಕ್ತಿಯೆಲ್ಲಾ ಸೇರಿಸಿ ಮಸೀದಿಗೆ ಓಡಿದರು. ಇನ್ನೇನು ಮೆಟ್ಟಿಲು ಹತ್ತಬೇಕು ಎನ್ನುವಷ್ಟರಲ್ಲಿ ಒಳಗಡೆಯಿಂದ ಬಾಬಾ ಘರ್ಜಿಸಿದರು, "ಹೇ ಭಾತುರ್ದ್ಯಾ (ಪೂಜಾರಿ)! ಹತ್ತಬೇಡ. ಹತ್ತಲು ನಿನಗೆಷ್ಟು ಧೈರ್ಯ?". ಮತ್ತೊಂದು ಸಲ ಇನ್ನೂ ಜೋರಾಗಿ, ಆರ್ಭಟಿಸಿದರು, "ಇಳಿ. ಹೊರಟುಹೋಗು, ಹೋಗು." ಬಾಬಾರ ಮುಖ ಕೋಪದಿಂದ ಕೆಂಪಗಾಗಿ ಹೋಗಿತ್ತು.
ಇದನ್ನು ಕೇಳಿದ ಶ್ಯಾಮಾ ಏನೂ ಅರ್ಥವಾಗದೆ, ಅಧೀರರಾಗಿ, ನಿರಾಶೆಯಿಂದ ಏನೂ ಮಾಡಲೂ ತೋಚದೆ, ಅಲ್ಲೇ ನಿಂತುಬಿಟ್ಟರು. ಬಾಬಾರನ್ನು ತನ್ನ ಪ್ರಾಣಕ್ಕಿಂತಲೂ ಹೆಚ್ಚೆಂದುಕೊಂಡ ಶ್ಯಾಮಾ, ಮಸೀದಿಯೇ ತನ್ನ ಮನೆ ಎಂದು ಭಾವಿಸಿದ್ದರು. "ಬಾಬಾರೇ ತನ್ನನ್ನು ಮನೆ ಬಿಟ್ಟು ಓಡಿಸಿದರೆ, ಇನ್ನೆಲ್ಲಿಗೆ ಹೋಗಬೇಕು? ಬಾಬಾರೇ ಬೇಡವೆಂದ ಮೇಲೆ ತಾನು ಪ್ರಾಣದಿಂದಿದ್ದು ಪ್ರಯೋಜನವೇನು? ಹಾಗೆ ಪ್ರಾಣ ಹೋಗುವುದಾದರೆ, ಅದು ಬಾಬಾರ ಚರಣಗಳಲ್ಲಿಯೇ ಹೋಗಲಿ" ಎಂದುಕೊಳ್ಳುತ್ತಾ ಅವರು ಮಸೀದಿಯ ಒಳಕ್ಕೆ ಹೋಗಿ ಬಾಬಾರ ಪಾದಗಳಲ್ಲಿ ಕುಳಿತರು. ಆ ವೇಳೆಗೆ ಬಾಬಾ ಶಾಂತರಾಗಿ, ಶ್ಯಾಮಾರ ತಲೆಯಮೇಲೆ ಕೈಯಿಟ್ಟು, ಮೃದುವಾಗಿ ನೇವರಿಸುತ್ತಾ, "ಹೆದರಬೇಡ ಮಗು. ಚಿಂತೆಮಾಡಬೇಡ. ನಿನಗೇನೂ ಆಗುವುದಿಲ್ಲ. ಅಲ್ಲಾಮಾಲೀಕ್, ನಿನಗೆ ಒಳ್ಳೆಯದು ಮಾಡುತ್ತಾನೆ. ಮನೆಗೆ ಹೋಗಿ ಶಾಂತವಾಗಿ ಕುಳಿತುಕೋ. ಆಚೆ ಎಲ್ಲೂ ಹೋಗಬೇಡ. ನನ್ನನ್ನು ನಂಬು. ಧೈರ್ಯದಿಂದಿರು. ತಳಮಳಗೊಳ್ಳಬೇಡ" ಎಂದರು. ಆ ಸಾಂತ್ವನದ ಮಾತುಗಳನ್ನು ಕೇಳಿ, ಮನಸ್ಸಿನ ಕಳವಳವನ್ನು ಕಳೆದುಕೊಂಡು ಶ್ಯಾಮಾ ಮನೆ ಸೇರಿದರು.
ಶ್ಯಾಮಾ ಮಸೀದಿಯಿಂದ ಹೊರಗೆ ಹೋಗುತ್ತಲೇ, ಬಾಬಾ ತಾತ್ಯಾ ಪಾಟೀಲರನ್ನು ಕರೆದು, "ಶಾಮಾ ಜೊತೆಯಲ್ಲಿ, ಅವನ ಮನೆಗೆ ಹೋಗು. ಶಾಮಾ ತನಗಿಷ್ಟವಾದದ್ದು ಏನನ್ನಾದರೂ ತಿನ್ನಲಿ. ಮನೆಯೊಳಗೇ ಓಡಾಡಿಕೊಂಡು ಇರಲಿ. ಆದರೆ, ಯಾವುದೇ ಕಾರಣಕ್ಕಾಗಿಯೂ, ಅವನು ಮಲಗಿ ನಿದ್ರೆಮಾಡದಂತೆ ನೋಡಿಕೋ" ಎಂದರು. ಮುಸ್ಸಂಜೆಯಾಗುತ್ತಿದ್ದಂತೆ ಕಾಕಾನನ್ನು ಕರೆದು, "ಶ್ಯಾಮಾನಿಗೆ ತೂಕಡಿಕೆ ಬಂದರೂ, ಅವನು ಮಲಗಿಕೊಳ್ಳದೇ ಇರುವಂತೆ ನೋಡಿಕೋ" ಎಂದು ಹೇಳಿ ಕಳುಹಿಸಿದರು. ಅಂತಹ ಚಿಕಿತ್ಸೆ, ರಕ್ಷಣೆಗಳಿಂದ ಶ್ಯಾಮಾ ಅನತಿಕಾಲದಲ್ಲಿಯೇ ಚೇತರಿಸಿಕೊಂಡು, ಆರೋಗ್ಯವಂತರಾದರು. ಮತ್ತೆ ತನ್ನ ದೈವ, ಬಾಬಾರ ಸೇವೆಗೆ ಸಿದ್ಧರಾಗಿ ಬಂದರು.
ಆ ದೇವರೇ ಅಷ್ಟು ಆಸ್ಥೆಯಿಂದ ರಕ್ಷಣೆ ಕೊಟ್ಟು, ನೋಡಿಕೊಂಡ ಶ್ಯಾಮಾ ಪುಣ್ಯಾತ್ಮನಲ್ಲದೆ ಮತ್ತಿನ್ನೇನು? ಬಾಬಾರಲ್ಲಿ ಅಷ್ಟು ಉದ್ವೇಗ ಹುಟ್ಟಿಸಿ, ಅವರ ಕೋಪಕ್ಕೊಳಗಾದ ಆ ಹಾವು ಇನ್ನೆಷ್ಟು ಪುಣ್ಯ ಮಾಡಿತ್ತೋ? ಬಾಬಾ ಅಪರಿಮಿತ ಪ್ರೇಮ ವಿಶ್ವಾಸಗಳಿಂದ ತನ್ನ ಭಕ್ತರನ್ನು ಕಾಪಾಡುತ್ತಾರೆ ಎನ್ನುವುದಕ್ಕೆ ಇದಕ್ಕಿಂತ ಇನ್ನೇನು ಪುರಾವೆ ಬೇಕು? ಬರಿಯ ಮಾತುಗಳಿಂದಲೇ ಪ್ರಭಾವಿತವಾಗಿ, ಆ ಸರ್ಪದ ವಿಷದ ತೀವ್ರತೆಯೂ ಇಳಿದುಹೋಯಿತೆಂದರೆ, ಅದು ಅವರ ಅಪಾರ ಶಕ್ತಿಯ ಸೂಚನೆಯಷ್ಟೇ! ಆ ಸರ್ಪಕ್ಕೆ ಬಾಬಾರ ಅತಿ ಸನ್ನಿಹಿತ ಭಕ್ತನನ್ನು ಕಚ್ಚುವ ಧಾರ್ಷ್ಟ್ಯವಾದರೂ ಹೇಗೆ ಬಂತು? ನಾವು ಬಾಬಾರಿಗೆ ಅಂತಹ ಸನ್ನಿಹಿತ ಭಕ್ತರಾಗಲು ಸಾಧ್ಯವೇ? ನಾವು ಅವರನ್ನೇ ಅನುಗ್ರಹಿಸಲು ಕೇಳಿಕೊಳ್ಳಬೇಕು. ಬಾಬಾ ಅದನ್ನು ಅಪರಿಮಿತವಾಗಿ ಕೊಡಲು ಯಾವಾಗಲೂ ಸಿದ್ಧರಾಗಿದ್ದಾರೆ. ಆದರೆ ಮೊದಲು, ಅದಕ್ಕೆ ನಾವು ಅರ್ಹರಾಗಬೇಕು. ಅಂತಹ ಅರ್ಹತೆ ಪಡೆಯಲು ಬೇಕಾದ ಕೃಷಿಯನ್ನು ಈಗಲಿಂದಲೇ ಮಾಡೋಣ.
ಕಾಲರಾ ಮಹಾಮಾರಿ
ಅನಾರೋಗ್ಯಕರ ಪರಿಸರ ಇರುತ್ತಿದ್ದುದರಿಂದ, ಅಂದಿನ ಕಾಲದ ಹಳ್ಳಿಗಳಲ್ಲಿ ಕಾಲರಾದಂತಹ ಜಾಡ್ಯಗಳು ಹರಡುವುದು ಸಾಮಾನ್ಯವಾಗಿತ್ತು. ಶಿರಡಿಯೂ ಅದಕ್ಕೆ ಹೊರತಾಗಿರಲಿಲ್ಲ. ಶಿರಡಿಯಲ್ಲಿ ಕಾಲರಾ ಹರಡಿದಾಗ ಅಲ್ಲಿನ ಜನಕ್ಕೆ ಅದನ್ನು ನಿಯಂತ್ರಿಸಲು ಏನುಮಾಡಬೇಕೋ ತಿಳಿಯದೆ, ಪಂಚಾಯತಿಯ ಸಭೆ ಕರೆದು ಎರಡು ನಿಬಂಧನೆಗಳನ್ನು ಜಾರಿಮಾಡಿದರು. ಮೊದಲನೆಯದು: ಯಾವುದೇ ಸೌದೆ ಬಂಡಿಯನ್ನೂ ಊರೊಳಕ್ಕೆ ಬಿಡಕೂಡದು. ಎರಡನೆಯದು: ಎಂತಹುದೇ ಪ್ರಾಣಿವಧೆ ಮಾಡಕೂಡದು. ನಿಬಂಧನೆಗಳನ್ನು ಮೀರಿದವರಿಗೆ ಪಂಚಾಯತಿಯವರು ವಿಧಿಸಿದ ಶುಲ್ಕವನ್ನು ದಂಡವಾಗಿ ತೆರಬೇಕಾಗಿತ್ತು. ಈ ನಿಬಂಧನೆಗಳಿಗೆ ಯಾವುದೇ ಆಧಾರವೂ ಇರಲಿಲ್ಲ. ಅದೊಂದು ಕಾಲಾರಾ ಹರಡುವಿಕೆಯನ್ನು ತಡೆಯಬೇಕೆಂದು ತಾವೇ ಮಾಡಿಕೊಂಡಿದ್ದ ಸರಳವಾದ ನಿಬಂಧನೆಗಳು. ಈ ನಿಬಂಧನೆಗಳು, ದಂಡ, ಎಲ್ಲವೂ ಬರಿಯ ಬೂಟಾಟಿಕೆ ಎಂದು ಬಾಬಾರಿಗೆ ಗೊತ್ತು. ಅವರು ಅದಕ್ಕೆ ಬೆಲೆ ಕೊಡಲಿಲ್ಲ.
ಈ ನಿಬಂಧನೆಗಳು ಜಾರಿಯಲ್ಲಿರುವಾಗ ಒಂದು ಸೌದೆಗಾಡಿ ಶಿರಡಿಗೆ ಬಂತು. ಜನರಿಗೆ ಸೌದೆಯ ಅವಶ್ಯಕತೆ ಬಹಳವಾಗಿತ್ತು. ಆದರೂ ನಿಬಂಧನೆಗಳಿಗೆ ಹೆದರಿ, ಯಾರೂ ಅದನ್ನು ಒಳಗೆ ಬಿಡಲಿಲ್ಲ. ಈ ಗಲಾಟೆಯನ್ನು ಕೇಳಿದ ಬಾಬಾ ತಾವೇ ಸ್ವತಃ ಹೋಗಿ ಆ ಗಾಡಿಯನ್ನು ಊರೊಳಕ್ಕೆ ಕರೆದುಕೊಂಡು ಬಂದು, ಸೌದೆಯನ್ನೆಲ್ಲಾ ಮಸೀದಿಯಲ್ಲಿ ಹಾಕಿಸಿ, ಗಾಡಿಯವನಿಗೆ ಹಣ ಕೊಟ್ಟು ಕಳುಹಿಸಿದರು. ಬಾಬಾರ ಈ ಕಾರ್ಯವನ್ನು ಬೇಡವೆಂದು ಹೇಳಲು, ಯಾರಿಗೂ ಧೈರ್ಯವಾಗಲಿಲ್ಲ. ಬಾಬಾ ಅಗ್ನಿಹೋತ್ರಿಯಂತೆ ಹಗಲೂ ರಾತ್ರಿ ಧುನಿಯನ್ನು ಉರಿಸುತ್ತಿದ್ದರು. ಅದಕ್ಕೆ ಅವರಿಗೆ ಕಟ್ಟಿಗೆಯ ಅವಶ್ಯಕತೆ ಯಾವಾಗಲೂ ಇರುತ್ತಿತ್ತು. ಪಂಚಭೂತಗಳನ್ನು ಅಧೀನದಲ್ಲಿಟ್ಟುಕೊಂಡಿರುವವರಿಗೆ, ತನ್ನ ಸಟ್ಕಾದ ಒಂದು ಹೊಡೆತದಿಂದ ಬೆಂಕಿಯನ್ನು ತರಿಸಬಲ್ಲವರಿಗೆ ಕಟ್ಟಿಗೆಯ ಅವಶ್ಯಕತೆಯಾದರೂ ಏನು? ಆದರೂ ಅವರು ಕಟ್ಟಿಗೆಯನ್ನು ಕೂಡಿಡುತ್ತಿದ್ದರು. ಜನರಿಗೆ ಕಟ್ಟಿಗೆಯ ಅವಶ್ಯಕತೆ ಇದ್ದರೂ, ನಿಬಂಧನೆಗಳಿಂದ ಅವರು ಕಟ್ಟಿಗೆ ತರಲಾರದೆ, ಮಸೀದಿಯ ಬಾಗಿಲು ಸದಾ ತೆರೆದೇ ಇರುವುದರಿಂದ, ಯಾರಾದರೂ ಒಳಗೆ ಬಂದು ತೆಗೆದುಕೊಂಡು ಹೋಗಲಿ, ಎಂದು ಬಾಬಾ ಕಟ್ಟಿಗೆ ತೆಗೆದುಕೊಂಡು ಹೋಗಲು ಯಾರನ್ನೂ ಅಡ್ಡಿಮಾಡುತ್ತಿರಲಿಲ್ಲ.
ಬಡೇ ಬಾಬಾರ ಕಥೆ
ಬಡೇ ಬಾಬಾರ ಪೂರ್ತಿ ಹೆಸರು, ಪೀರ್ ಮೊಹಮ್ಮದ್ ಯಾಸೀನ್ ಮಿಯ ಎಂದು. ಅವರನ್ನು ಫಕೀರ್ ಬಾಬಾ ಎಂದೂ ಕರೆಯುತ್ತಿದ್ದರು. ತಮ್ಮದೇ ಎಂದು ಹೇಳಿಕೊಳ್ಳಲು ಯಾವ ಊರೂ ಇರಲಿಲ್ಲ. ಯಾವಾಗಲೂ ಸುತ್ತುತ್ತಿದ್ದರು. ೧೯೦೯ರಲ್ಲಿ ಶಿರಡಿಗೆ ಬಂದರು. ಶಿರಡಿಗೆ ಬರುವ ಮೊದಲು, ಅವರು ಔರಂಗಾಬಾದಿನಲ್ಲಿ ಇದ್ದರೆಂದು ಹೇಳುತ್ತಾರೆ. ಅಲ್ಲೇ, ಬಾಬಾ ಅವರನ್ನು ಖುರಾನನ್ನು ಓದಲು ಹೇಳಿದರು. ಹಾಗೆ ಅವರಿಗೆ ಅಧ್ಯಾತ್ಮಿಕ ದಾರಿಯನ್ನು ಬಾಬಾ ತೋರಿಸಿದರು. ಸ್ವಲ್ಪಕಾಲ ಶಿರಡಿಯಲ್ಲಿದ್ದು ನಂತರ ಬಡೇ ಬಾಬಾ ನೀಮ್‍ಗಾಂವ್‍ಗೆ ಹೋದರು. ದಿನವೂ ಬೆಳಗ್ಗೆ, ಶಿರಡಿಗೆ ಬಂದು ಊಟದ ಸಮಯದವರೆಗೂ ಶಿರಡಿಯಲ್ಲಿ ಇರುತ್ತಿದ್ದರು. ಅವರನ್ನು ಬಾಬಾ ಬಹಳವಾಗಿ ಗೌರವಿಸುತ್ತಿದ್ದರು. ಬಡೇಬಾಬಾ ಶಿರಡಿಯಲ್ಲಿರುವವರೆಗೂ ಬಾಬಾ ಅವರನ್ನು ಬಿಟ್ಟು ಊಟಮಾಡುತ್ತಿರಲಿಲ್ಲ. ಬಡೇಬಾಬಾ ಹುಕ್ಕಾ ಸೇದಿದ ನಂತರವೇ ಬಾಬಾ ಅದನ್ನು ತೆಗೆದುಕೊಳ್ಳುತ್ತಿದ್ದರು. ಅತಿಥಿಯನ್ನು ದೇವರಂತೆ ಕಾಣಬೇಕೆಂಬುದು ನಮ್ಮ ನಂಬಿಕೆ. ಅದರಂತೆ ಬಾಬಾ ಅವರನ್ನು ಯಾವಾಗಲೂ ಅತಿಥಿಯಂತೆ ಕಾಣುತ್ತಿದ್ದರು. ಬಾಬಾ ಪ್ರತಿದಿನ ಬಡೇಬಾಬಾರಿಗೆ ೫೦ ರೂಪಾಯಿಗಳನ್ನು ಕೊಡುತ್ತಿದ್ದರು. ಬಡೇಬಾಬಾ ಶಿರಡಿಯಿಂದ ಹೊರಡುವಾಗ, ಬಾಬಾ ಅವರ ಜೊತೆ ಹತ್ತುಹೆಜ್ಜೆ ಹಾಕಿ ಅವರನ್ನು ಬೀಳ್ಕೊಟ್ಟು ಬರುತ್ತಿದ್ದರು.
ಗುರುಭಕ್ತಿಯ ಪರೀಕ್ಷೆ
ಕಾಲರಾ ನಿಬಂಧನೆಗಳು ಶಿರಡಿಯಲ್ಲಿ ಜಾರಿಯಲ್ಲಿದ್ದಾಗ ಯಾರೋ ಒಬ್ಬರು ಒಂದು ಮೇಕೆಯನ್ನು ಮಸೀದಿಗೆ ಕರೆತಂದರು. ಬಡೇಬಾಬಾ ಆಗ ಅಲ್ಲೇ ಇದ್ದರು. ಸಾಯಿಬಾಬಾ ಅವರನ್ನು ಕರೆದು, ಆ ಮೇಕೆಯನ್ನು ಒಂದೇ ಏಟಿಗೆ ಹೊಡೆದು ಕೊಲ್ಲುವಂತೆ ಹೇಳಿದರು. ಕಾರಣವಿಲ್ಲದೆ ಏಕೆ ಕೊಲ್ಲಬೇಕೆಂದು ಬಡೇಬಾಬಾ ಅವರ ಆಜ್ಞೆಯನ್ನು ನಿರ್ದಾಕ್ಷಿಣ್ಯವಾಗಿ ನಿರಾಕರಿಸಿದರು. ನಂತರ ಶ್ಯಾಮಾರಿಗೆ ಅದನ್ನು ಕೊಲ್ಲುವಂತೆ ಬಾಬಾ ಹೇಳಿದರು. ಅವರು ರಾಧಾಕೃಷ್ಣಮಾಯಿಯ ಮನೆಗೆ ಹೋಗಿ, ಒಂದು ಕಡಿಗತ್ತಿಯನ್ನು ತಂದು ಬಾಬಾ ಪದತಲದಲ್ಲಿಟ್ಟರು. ಕಡಿಗತ್ತಿ ಏತಕ್ಕೆ ಎಂಬುದನ್ನು ತಿಳಿದ ರಾಧಾಕೃಷ್ಣಮಾಯಿ ಕೂಡಲೇ ಅದನ್ನು ಹಿಂತಿರುಗಿಸಲು ಹೇಳಿದರು. ಶ್ಯಾಮಾ ಇನ್ನೊಂದು ಕತ್ತಿ ತರುತ್ತೇನೆಂದು ಹೇಳಿ, ಹೋದವರು ಹಿಂತಿರುಗಲೇ ಇಲ್ಲ. ಮತ್ತೆ ಬಾಬಾ, ಕಾಕಾ ಸಾಹೇಬ್ ದೀಕ್ಷಿತರನ್ನು ಕರೆದು, ಕತ್ತಿ ತಂದು ಆ ಮೇಕೆಯ ತಲೆ ಕಡಿಯುವಂತೆ ಹೇಳಿದರು. ಕಾಕಾ ಹೋಗಿ ಕತ್ತಿ ತಂದು, ಮೇಕೆಯನ್ನು ಕೊಲ್ಲಲು ಸಿದ್ಧರಾದರು. ದೀಕ್ಷಿತ್ ಸಂಪ್ರದಾಯ ನಿಷ್ಠರಾದ ಬ್ರಾಹ್ಮಣ ಮನೆತನದಲ್ಲಿ ಹುಟ್ಟಿದವರು. ತಾವಾಗಿಯೇ ಒಂದು ಇರುವೆಯನ್ನೂ ಸಾಯಿಸಿದವರಲ್ಲ. ಮೇಕೆಯ ಕತ್ತು ಹೇಗೆ ಕತ್ತರಿಸುತ್ತಾರೆ ಎಂಬುದನ್ನು ಕಂಡವರೂ ಅಲ್ಲ. ಅವರಿಗೆ ಬಾಬಾ ಆಜ್ಞೆಯನ್ನು ಪರಿಪಾಲಿಸುವುದಷ್ಟೇ ಗೊತ್ತಿತ್ತು. ಅಲ್ಲಿ ನೆರೆದಿದ್ದವರೆಲ್ಲರೂ ಬಡೇಬಾಬಾರೇ ಬಾಬಾರ ಆಜ್ಞೆಯನ್ನು ನಿರಾಕರಿಸಿದಾಗ, ಈ ಬಡ ಬ್ರಾಹ್ಮಣ ಅದಕ್ಕೆ ಹೇಗೆ ತಯಾರಾಗಿ ನಿಂತಿದ್ದಾನೆ ಎಂದು ಆಶ್ಚರ್ಯಪಟ್ಟರು. ಈ ಮಧ್ಯೆ ಕಾಕಾ ಪಂಚೆ ಎತ್ತಿಕಟ್ಟಿ ಕತ್ತಿಯನ್ನು ಮೇಲಕ್ಕೆತ್ತಿ ಹಿಡಿದು, ಮೇಕೆಯನ್ನು ಹೊಡೆಯಲು ಸಿದ್ದರಾದರು. ಅಷ್ಟರಲ್ಲಿ ಬಾಬಾ, "ನಿಲ್ಲಿಸು, ನೀನೆಷ್ಟು ಕಟುಕನಯ್ಯಾ! ಬ್ರಾಹ್ಮಣನಾಗಿ ಮೇಕೆಯನ್ನು ಕೊಲ್ಲಲು ಹೊರಟಿದ್ದೀಯಾ?" ಎಂದು ಗಟ್ಟಿಯಾಗಿ ಕೇಳಿದರು. ಬಾಬಾರ ಆಜ್ಞೆಯನ್ನು ಪಾಲಿಸಿ, ಕತ್ತಿಯನ್ನು ಕೆಳಕ್ಕಿಟ್ಟು, ಕಾಕಾ ಕೈಜೋಡಿಸಿ ಹೇಳಿದರು, "ದೇವಾ, ನಿಮ್ಮ ಮಾತೇ ನಮಗೆ ಕಾನೂನು. ಆಜ್ಞೆ. ನಮಗೆ ಬೇರೆ ಯಾವ ವಿಧಿಯೂ ತಿಳಿಯದು. ನೀವು ಹೇಳಿದ ಮಾತು ಕೇಳಿ, ಅದನ್ನು ನೆನಪಿಟ್ಟು, ಮನನಮಾಡಿ ಅದರಂತೆ ನಡೆಯುವುದೇ ನಮ್ಮ ಕೆಲಸ. ಅದು ಏನು? ಯಾಕೆ? ಸರಿಯೋ, ತಪ್ಪೋ, ನಮಗೆ ತಿಳಿಯದು. ಅದರ ವಿಶ್ಲೇಷಣೆಯೂ ನಮಗೆ ಬೇಡ. ಗುರುವಿನ ಆಜ್ಞೆಯನ್ನು ಚಾಚೂತಪ್ಪದೇ ನಡೆಸುವುದೇ ನಮ್ಮ ಕರ್ತವ್ಯ. ಅದೇ ನಮ್ಮ ಧರ್ಮ" ಎಂದರು. ನಂತರ ಬಾಬಾ ಅದನ್ನು ತಾನೇ ಕೊಲ್ಲುತ್ತೇನೆಂದು ಹೇಳಿ ಅದನ್ನು ತಾಕಿಯಾಕ್ಕೆ ಕರೆದುಕೊಂಡು ಹೋಗಲು ಹೇಳಿದರು. ಆ ಮೇಕೆ ತಾಕಿಯಾಕ್ಕೆ ಹೋಗುವ ದಾರಿಯಲ್ಲೇ ಸತ್ತುಹೋಯಿತು.
ಮೇಲಿನ ಘಟನೆಯಿಂದ ಪ್ರೇರಿತರಾದ ಹೇಮಾಡ್ ಪಂತ್, ಶಿಷ್ಯರನ್ನು ಮೂರು ವಿಧವಾಗಿ ವಿಂಗಡಿಸಬಹುದೆನ್ನುತ್ತಾರೆ:
೧. ಉತ್ತಮ
೨. ಮಧ್ಯಮ
೩. ಸಾಮಾನ್ಯ
ಉತ್ತಮ ಶಿಷ್ಯರು ಗುರುವು ಹೇಳಬಹುದಾದ್ದನ್ನು ಮೊದಲೇ ಊಹಿಸಿ, ಮಾಡಬೇಕಾದ್ದನ್ನು ಮಾಡುತ್ತಾರೆ. ಮಧ್ಯಮರು, ಮಾಡಬೇಕಾದ್ದನ್ನು ಗುರುವು ಹೇಳಿದಮೇಲೆ, ಮಾಡುತ್ತಾರೆ. ಸಾಮಾನ್ಯರು, ಮಾಡಬೇಕಾದ್ದನ್ನು ಗುರು ಹೇಳಿದಮೇಲೂ ಮಾಡದೆ, ತಡವಾಗಿ ತಪ್ಪು ತಪ್ಪಾಗಿ ಮಾಡುತ್ತಾರೆ.
ಸಂಪೂರ್ಣ ನಂಬಿಕೆಯಿಟ್ಟು, ಸಹನೆಯಿಂದ ಕೂಡಿದ ಶ್ರದ್ಧಾ ಭಕ್ತಿಗಳೊಡನೆ ಅರ್ಪಣಾಭಾವದಲ್ಲಿ ಗುರುವನ್ನು ಹಿಂಬಾಲಿಸುವ ಶಿಷ್ಯನಿಗೆ, ಆಧ್ಯಾತ್ಮಿಕ ಗುರಿ ಎನ್ನುವುದು ಅಸಾಧ್ಯವಾಗಲಾರದು. ಶಿಷ್ಯ ಮುಂದಿನ ಶಿಕ್ಷಣಕ್ಕೆ ಅರ್ಹನಾದಾಗ ಗುರುವೇ ಅವನ ಕೈಹಿಡಿದು ಸರಿಯಾದ ಮಾರ್ಗದಲ್ಲಿ ನಡೆಸಿ ಗುರಿಮುಟ್ಟಿಸುತ್ತಾನೆ.
ಇದರೊಂದಿಗೆ ಯೋಗ ಮತ್ತು ಈರುಳ್ಳಿ, ಶ್ಯಾಮಾರನ್ನು ರಕ್ಷಿಸಿದ್ದು ಮತ್ತು ಇತರ ವಿಷಯಗಳನ್ನು ಕುರಿತು ಹೇಳುವ ಇಪ್ಪತ್ತಮೂರನೆಯ ಅಧ್ಯಾಯ ಮುಗಿಯಿತು. ಮುಂದಿನ ಅಧ್ಯಾಯದಲ್ಲಿ ಹೇಮಾಡ್ ಪಂತ್ ಬಾಬಾರ ಬುದ್ಧಿಮತ್ತೆ ಮತ್ತು ಹಾಸ್ಯ ಇತ್ಯಾದಿ ವಿಷಯಗಳನ್ನು ಹೇಳುತ್ತಾರೆ
||ಶ್ರೀ ಸದ್ಗುರು ಸಾಯಿನಾಥಾರ್ಪಣಮಸ್ತು||ಶುಭಂ ಭವತು||
||ಓಂ ಶಾಂತಿಃ ಶಾಂತಿಃ ಶಾಂತಿಃ||
||ಓಂ ಶಾಂತಿಃ ಶಾಂತಿಃ ಶಾಂತಿಃ||
No comments:
Post a Comment