||ಶ್ರೀ ಸಾಯಿ ಸಚ್ಚರಿತ್ರೆ||
||ಇಪ್ಪತ್ತೈದನೆಯ ಅಧ್ಯಾಯ||
||ಆಮ್ರಲೀಲೆ||
ಶ್ರೀ ಗಣೇಶಾಯ ನಮಃ ಶ್ರೀ ಸರಸ್ವತಯೇ ನಮಃ
ಶ್ರೀ ವೆಂಕಟೇಶಾಯ ನಮಃ ಶ್ರೀ ಸಾಯಿನಾಥಾಯ ನಮಃ
ಶ್ರೀ ಸದ್ಗುರುಭ್ಯೋನ್ನಮಃ
||ಇಪ್ಪತ್ತೈದನೆಯ ಅಧ್ಯಾಯ||
||ಆಮ್ರಲೀಲೆ||
ಶ್ರೀ ಗಣೇಶಾಯ ನಮಃ ಶ್ರೀ ಸರಸ್ವತಯೇ ನಮಃ
ಶ್ರೀ ವೆಂಕಟೇಶಾಯ ನಮಃ ಶ್ರೀ ಸಾಯಿನಾಥಾಯ ನಮಃ
ಶ್ರೀ ಸದ್ಗುರುಭ್ಯೋನ್ನಮಃ
ಈ ಅಧ್ಯಾಯದಲ್ಲಿ ಹೇಮಾಡ್ ಪಂತ್, ಅಹಮದ್ ನಗರದ ದಾಮೂ ಅಣ್ಣಾ ಕಾಸಾರ್, ಮಾವಿನ ಹಣ್ಣಿನ ಲೀಲೆ ಮತ್ತು ಇತರ ವಿಷಯಗಳನ್ನು ಹೇಳುತ್ತಾರೆ
ಸದ್ಗುರು ಸಾಯಿಬಾಬಾ
ದಯಾ ಸ್ವರೂಪಿ, ಸದಾ ಸರ್ವದಾ ಭಕ್ತರ ಒಳಿತನ್ನೇ ಇಚ್ಚಿಸುವ ಶುಭಂಕರ, ಕರುಣಾ ಮೂರ್ತಿ, ಸಾಯಿ ಬಾಬಾ ದೇವರ ಅವತಾರವೇ! ಪೂರ್ಣ ಪರಬ್ರಹ್ಮ. ದಯಾನಿಧಿ. ಇಂತಹ ಅವತಾರ ಪುರುಷನಿಗೆ ಸಾಷ್ಟಾಂಗ ನಮಸ್ಕಾರ ಮಾಡಿ, ಅವರ ಅನುಗ್ರಹಕ್ಕೆ ಪಾತ್ರರಾಗೋಣ. ಶ್ರೀ ಸಚ್ಚಿದಾನಂದ ಸದ್ಗುರು ಸಾಯಿ ನಾಥ ಮಹಾರಾಜರಿಗೆ ಜಯವಾಗಲಿ. ಈ ಸಚ್ಚರಿತ್ರೆಯಲ್ಲಿ ಬಹಳಷ್ಟು ಸಲ ಈಗಾಗಲೇ ನೋಡಿದಂತೆ, ಭಕ್ತರ ಅಂತಿಮ ಆಸರೆ ಆ ಸಾಯಿಬಾಬಾರೇ! ದಯೆ, ಕರುಣೆ, ಅನುಕಂಪ, ಪ್ರೀತಿ ವಿಶ್ವಾಸಗಳಿಂದ ತುಂಬಿದವರು. ಅವರ ಅನುಗ್ರಹಕ್ಕೆ ಪಾತ್ರರಾಗಬೇಕಾದರೆ, ನಮ್ಮಲ್ಲಿ ಶ್ರದ್ಧಾಭಕ್ತಿಗಳು ಅನನ್ಯವಾಗಿ ಅನವರತವಾಗಿ ಇರಬೇಕು. ಬಾಬಾ ಲೀಲೆಗಳನ್ನು ಬರೆಯಬೇಕೆಂಬ ಕೋರಿಕೆ ಮನಸ್ಸಿಗೆ ಬಂದಕೂಡಲೇ, ಅದು ಭಕ್ತರ ಅನುಕೂಲಕ್ಕಾಗಿ ಎಂಬುದನ್ನು ಅರಿತ ಬಾಬಾ, ಆ ಕೋರಿಕೆಯನ್ನು ತೀರಿಸಿ, ಹೇಮಾಡ್ ಪಂತರಿಗೆ ಧೈರ್ಯಸ್ಥೈರ್ಯಗಳನ್ನು ನೀಡಿ, ಅವರ ಕೈಯಲ್ಲಿ ಸಚ್ಚರಿತ್ರೆ ಬರೆಸಿದರು. ಅವರಿಂದ ಪ್ರೇರಿತರಾದ ಹೇಮಾಡ್ ಪಂತರ ಲೇಖನಿಯಿಂದ ಸುಲಲಿತವಾಗಿ ಶಬ್ದಗಳು ಪುಂಖಾನುಪುಂಖವಾಗಿ ಹೊರಟು ಈ ಅಮೃತಭಾಂಡಾರ ಈಚೆಗೆ ಬಂತು. ಯಾರು ಎಷ್ಟು ಬೇಕಾದರೂ ಈ ಭಾಂಡಾರದಿಂದ ತಮಗೆ ಇಷ್ಟಬಂದಂತೆ ತೆಗೆದುಕೊಳ್ಳಬಹುದು. ಅದು ಯಾವಾಗಲೂ ತುಂಬಿಯೇ ಇರುತ್ತದೆ.
ಅಂತಹ ಲೀಲಾಮಾನುಷರೂಪಿ ಸಚ್ಚಿದಾನಂದ ಸದ್ಗುರು ಸಾಯಿಬಾಬಾ ತನ್ನಲ್ಲಿ ಶರಣಾಗತರಾದ ಭಕ್ತರನ್ನು ತನ್ನ ತೆಕ್ಕೆಯಲ್ಲಿಟ್ಟುಕೊಂಡು ಹೇಗೆ ಕಾಪಾಡಿದರು ಎಂಬುದನ್ನು ನೋಡೋಣ.
ದಾಮೂ ಅಣ್ಣಾ ಕಥೆ
ದಾಮೂ ಅಣ್ಣಾರ ಪೂರ್ತಿ ಹೆಸರು ದಾಮೋದರ ಸಾವಲರಾಮ ರಾಸ್ನೆ ಕಾಸಾರ್ ಎಂದು. ಅಹಮದ್ ನಗರಕ್ಕೆ ಸೇರಿದವರು. ನಂತರ ಪೂನಾಗೆ ಹೋಗಿ ಅಲ್ಲಿ ನೆಲೆಸಿದರು. ಅಧ್ಯಾಯ ಆರರಲ್ಲಿ, ಅವರ ಪರಿಚಯ ನಮಗೆ ಈಗಾಗಲೇ ಆಗಿದೆ. ರಾಮನವಮಿಯ ಸಂದರ್ಭದಲ್ಲಿ ಅವರು ಶಿರಡಿಗೆ ಹೋಗಿ ಬಾಬಾರ ನಿಷ್ಠಾವಂತ ಭಕ್ತರಾದರು. ಅವರಿಗೆ ಮೂರು ಮದುವೆಯಾದರೂ ಮಕ್ಕಳಾಗಲಿಲ್ಲ. ಬಾಬಾರ ಆಶೀರ್ವಾದದಿಂದ ಒಬ್ಬ ಮಗ ಹುಟ್ಟಿದ. ೧೮೯೭ರಿಂದ ಅವರು ಪ್ರತಿ ವರ್ಷ ರಾಮನವಮಿಯ ಅಂಗವಾಗಿ ನಡೆಯುವ ಝಾಂಡಾ ಉತ್ಸವಕ್ಕೆ, ಒಂದು ಅಲಂಕಾರಭರಿತ ಝಂಡಾ ಕೊಡುತ್ತಿದ್ದರು. ಅಂದು ಅವರು ಅನ್ನದಾನದ ವ್ಯವಸ್ಥೆಯನ್ನೂ ಮಾಡುತ್ತಿದ್ದರು.
ಒಂದುಸಲ ಅವರ ಸ್ನೇಹಿತನೊಬ್ಬ, ಹತ್ತಿಯ ದಲಾಲಿ ವ್ಯಾಪಾರದಲ್ಲಿ ಭಾಗಸ್ವಾಮಿಯಾಗಬೇಕೆಂದೂ, ಅದರಲ್ಲಿ ಎರಡು ಲಕ್ಷಗಳ ಲಾಭ ಇದೆಯೆಂದೂ ಕಾಗದ ಬರೆದ. ಯಾವುದೇ ರೀತಿಯಲ್ಲೂ ನಷ್ಟ ಆಗಲಾರದು, ಇದೊಂದು ಒಳ್ಳೆಯ ಅವಕಾಶ, ಕಳೆದುಕೊಳ್ಳಬಾರದು, ಎಂದೂ ಅದರಲ್ಲಿ ಹೇಳಿದ್ದ. ಆದರೆ, ಹೂಡಿಕೆ ಹಣ ಬಹಳವಾಗಿದ್ದುದರಿಂದ, ದಾಮೂ ಅಣ್ಣಾ ಯಾವ ನಿರ್ಧಾರಕ್ಕೂ ಬರಲಾಗದೆ, ತಾನು ಬಾಬಾರ ಭಕ್ತನಾದದ್ದರಿಂದ, ಅವರ ಸಲಹೆ ಪಡೆದು ಅದರಂತೆ ನಡೆಯಬೇಕೆಂದು ನಿರ್ಧರಿಸಿಕೊಂಡರು. ಅದರಂತೆ, ಶ್ಯಾಮಾರಿಗೆ ಒಂದು ದೀರ್ಘ ಪತ್ರ ಬರೆದು, ಬಾಬಾರ ಸಲಹೆಯನ್ನು ಕೇಳಿ ತಿಳಿಸುವಂತೆ ಕೇಳಿಕೊಂಡರು. ಶ್ಯಾಮಾ ಆ ಕಾಗದವನ್ನು ಓದಿ, ಕಾಗದದೊಡನೆ ಮಸೀದಿಗೆ ಹೋದರು. ಬಾಬಾ ಅವರನ್ನು, "ಶ್ಯಾಮ್ಯಾ, ಬಾ, ಏನು ಸಮಾಚಾರ? ಕಾಗದದಲ್ಲಿ ಬರೆದಿರುವುದೇನು?" ಎಂದು ಕೇಳಿದರು. ಶ್ಯಾಮಾ ದಾಮೂ ಅಣ್ಣಾ ಯಾವುದೋ ವ್ಯವಹಾರದ ಬಗ್ಗೆ ನಿಮ್ಮ ಸಲಹೆ ಕೇಳಿ ಬರೆದಿದ್ದಾರೆ ಎಂದರು. ಅದಕ್ಕೆ ಬಾಬಾ ಹೇಳಿದರು, "ಅವನಿಗೆ ದೇವರು ಕೊಟ್ಟಿರುವದರಲ್ಲಿ ತೃಪ್ತಿಯಿಲ್ಲ. ಆಕಾಶಕ್ಕೆ ಏಣಿ ಹಾಕಬೇಕೆಂದಿದ್ದಾನೆ. ಹುಂ, ಇರಲಿ. ಓದು, ಅವನೇನು ಬರೆದಿದ್ದಾನೋ ನೋಡೋಣ." ಶ್ಯಾಮಾ ಚಕಿತರಾಗಿ, "ಹೌದು. ಕಾಗದವೂ ನೀವು ಹೇಳಿದ್ದನ್ನೇ ಹೇಳುತ್ತದೆ. ದೇವಾ, ಇಲ್ಲಿ ನೀವು ಶಾಂತ ಮನಸ್ಕರಾಗಿ ಕುಳಿತು, ಬೇರೆಲ್ಲೋ ಭಕ್ತರ ಮನಸ್ಸಿನಲ್ಲಿ ಆಂದೋಳನ ಎಬ್ಬಿಸಿ, ಅವರನ್ನು ಇಲ್ಲಿಗೆ ಎಳೆದು ತರುತ್ತೀರಿ" ಎಂದರು. ಅದಕ್ಕೆ ಬಾಬಾ, "ಶ್ಯಾಮ್ಯಾ, ದಯವಿಟ್ಟು ಕಾಗದ ಓದು. ನಾನೊಬ್ಬ ಮುದುಕ. ಏನೋ ಬಾಯಿಗೆ ಬಂದದ್ದು ಮಾತನಾಡುತ್ತೇನೆ. ನನ್ನ ಮಾತನ್ನು ಯಾರು ಕೇಳುತ್ತಾರೆ" ಎಂದರು.
ಶ್ಯಾಮಾ ಕಾಗದ ಓದಿದಮೇಲೆ, ಬಾಬಾ ಕಳಕಳಿಯಿಂದ ಹೇಳಿದರು, "ಸೇಠ್ ಹುಚ್ಚನಾಗಿದ್ದಾನೆ. ಮನೆಯಲ್ಲಿ ಅವನಿಗೆ ಯಾವುದಕ್ಕೂ ಕೊರತೆಯಿಲ್ಲ. ‘ಇರುವುದರಲ್ಲಿ ತೃಪ್ತಿಯಿಂದ ಇರು. ಲಕ್ಷಗಳಿಗೋಸ್ಕರ ಒದ್ದಾಡಬೇಡ. ಆತುರಪಡಬೇಡ’ ಎಂದು ಅವನಿಗೆ ಬರೆ" ಎಂದರು. ಬಾಬಾ ಹೇಳಿದ್ದನ್ನು ಶ್ಯಾಮ ಕಾಗದದ ಮೂಲಕ ದಾಮೂ ಅಣ್ಣಾಗೆ ತಿಳಿಸಿದರು. ಕಾಗದವನ್ನು ಓದಿದ ದಾಮೂ ಅಣ್ಣಾ ನಿರಾಶೆಯಿಂದ, ತಾನು ಗಳಿಸಬೇಕೆಂದಿದ್ದ ಎರಡು ಲಕ್ಷ ರೂಪಾಯಿ ಯೋಚನೆ ತಲೆಕೆಳಗಾಯಿತು, ಎಂದು ದುಃಖಪಟ್ಟರು. ಮತ್ತೆ ಯೋಚನೆ ಮಾಡಿ, ಶ್ಯಾಮಾ ಕಾಗದದಲ್ಲಿ ಸೂಚಿಸಿದ್ದಂತೆ, ತಾವೇ ಶಿರಡಿಗೆ ಹೋಗಿ ಬಾಬಾರನ್ನು ಕಂಡು ನೇರವಾಗಿ ಮಾತನಾಡಬೇಕೆಂದು ನಿಶ್ಚಯಿಸಿದರು. ತಕ್ಷಣವೇ ಶಿರಡಿಗೆ ಹೋಗಿ ಬಾಬಾರನ್ನು ಕಂಡು ಅವರಿಗೆ ನಮಸ್ಕಾರಮಾಡಿ ಪಾದಗಳನ್ನು ನೀವುತ್ತಾ ಕುಳಿತರು.
ಅವರಿಗೆ ಬಾಬಾರ ಹತ್ತಿರ ನೇರವಾಗಿ ಮಾತನಾಡುವ ಧೈರ್ಯವಿರಲಿಲ್ಲ. ಅದರ ಬದಲು ಅವರು ಮನಸ್ಸಿನಲ್ಲೇ, "ಬಾಬಾ ನೀವು ನನ್ನ ಈ ವ್ಯವಹಾರಕ್ಕೆ ಒಪ್ಪಿಗೆ ಕೊಟ್ಟರೆ, ಅದರಲ್ಲಿ ಬರುವ ಲಾಭದಲ್ಲಿ ನಿಮಗೂ ಪಾಲು ಕೊಡುತ್ತೇನೆ" ಎಂದು ಹೇಳಿಕೊಂಡರು. ಬಾಬಾ ಸರ್ವಜ್ಞರಲ್ಲವೇ? ಇತರರ ಮನಸ್ಸನ್ನು ಓದಬಲ್ಲ ಅವರು, ದಾಮೂ ಅಣ್ಣಾ ತನ್ನ ಯೋಚನೆಯನ್ನು ಮುಗಿಸುತ್ತಿದ್ದ ಹಾಗೇ, ಅವರಿಗೆ ಹೇಳಿದರು, "ದಾಮ್ಯಾ, ನಾನು ಈ ಪ್ರಾಪಂಚಿಕ ವ್ಯವಹಾರಗಳಲ್ಲಿ ಕೈಹಾಕಲು ಇಷ್ಟಪಡುವುದಿಲ್ಲ." ಅವರ ಮಾತನ್ನು ಅರ್ಥಮಾಡಿಕೊಂಡ ದಾಮೂ ಅಣ್ಣಾ, ಆ ವ್ಯವಹಾರದ ಯೋಚನೆಯನ್ನೇ ಕೈಬಿಟ್ಟರು.
ಧಾನ್ಯ ವ್ಯವಹಾರ
ಇನ್ನೊಮ್ಮೆ ದಾಮೂ ಅಣ್ಣಾ ಧಾನ್ಯಗಳ ವ್ಯವಹಾರ ಮಾಡಬೇಕೆಂದುಕೊಂಡರು. ಬಾಬಾ ಅವರ ಯೋಚನೆಯನ್ನು ತಿಳಿದು, ಅವರಿಗೆ ಹೇಳಿದರು, "ನೀನು ರೂಪಾಯಿಗೆ ಐದು ಸೇರಿನಂತೆ ಕೊಂಡು ಏಳು ಸೇರಿನಂತೆ ಮಾರಬೇಕಾಗುತ್ತದೆ." ಅದರಿಂದ, ದಾಮೂ ಅಣ್ಣಾ ಅ ವ್ಯವಹಾರವನ್ನೂ ಕೈಬಿಟ್ಟರು. ಮೊದ ಮೊದಲು ಧಾನ್ಯಗಳ ಬೆಲೆ ಹೆಚ್ಚಾಗಿದ್ದು, ಲಾಭವೂ ಚೆನ್ನಾಗಿಯೇ ಇದ್ದು, ಬಾಬಾರ ಮಾತುಗಳು ಸುಳ್ಳಾಗುತ್ತವೆಯೇನೋ ಎಂಬಂತೆಯೇ ಇತ್ತು. ಸ್ವಲ್ಪಕಾಲದ ನಂತರ ಅತಿವೃಷ್ಟಿಯಾಗಿ, ಧಾನ್ಯಗಳ ಬೆಲೆಗಳು ಕುಸಿದವು. ಧಾನ್ಯ ಕೂಡಿಸಿಟ್ಟವರಿಗೆಲ್ಲಾ ಅಪಾರವಾದ ನಷ್ಟವಾಯಿತು. ಮುಂಚಿನ ಹತ್ತಿಯ ವ್ಯವಹಾರದಲ್ಲೂ, ಇನ್ನೊಬ್ಬರೊಡನೆ ವ್ಯವಹಾರ ಕುದುರಿಕೊಂಡಿಸಿದ್ದ ದಾಮೂ ಅಣ್ಣಾ ಸ್ನೇಹಿತನೂ, ಬಹಳ ನಷ್ಟಕ್ಕೀಡಾದನು. ಇದನ್ನು ನೋಡಿದ ದಾಮೂ ಅಣ್ಣಾರಿಗೆ, ಬಾಬಾರಲ್ಲಿ ಶ್ರದ್ಧಾ ಭಕ್ತಿಗಳು ಅಪಾರವಾಗಿ ವೃದ್ಧಿಯಾದವು.
ಆಮ್ರ ಲೀಲೆ
ರಾಳೆ ಎಂಬುವ ಮಾಮಲತದಾರರೊಬ್ಬರು ಗೋವಾದಿಂದ ಒಳ್ಳೆಯ ೩೦೦ ಮಾವಿನ ಹಣ್ಣುಗಳನ್ನು ಬಾಬಾರಿಗೆಂದು, ಶ್ಯಾಮಾ ಹೆಸರಿನಲ್ಲಿ ಕಳುಹಿಸಿದ್ದರು. ಶ್ಯಾಮ ಕೋಪರಗಾಂವ್‍ನಿಂದ ಆ ಹಣ್ಣುಗಳನ್ನು ತಂದು ಬಾಬಾರಿಗೆ ಅರ್ಪಿಸಿದರು. ಬಾಬಾ ಪ್ಯಾಕೆಟ್ ಬಿಚ್ಚಿ ಹಣ್ಣುಗಳನ್ನು ಈಚೆಗೆ ತೆಗೆದು, ಅದರಲ್ಲಿ ನಾಲ್ಕು ಹಣ್ಣುಗಳನ್ನು ಮಾತ್ರ ಇಟ್ಟುಕೊಂಡು, "ಈ ಹಣ್ಣುಗಳು ಇಲ್ಲೇ ಇರಲಿ. ಅವು ದಾಮ್ಯಾನಿಗೆ" ಎಂದು ಹೇಳಿ, ಮಿಕ್ಕದ್ದನ್ನು ಎಲ್ಲರಿಗೂ ಹಂಚಲು ಶ್ಯಾಮಾರಿಗೆ ಹೇಳಿದರು. ದಾಮೂ ಅಣ್ಣಾಗೆ ಮೂರುಜನ ಹೆಂಡತಿಯರಿದ್ದರೂ ಮಕ್ಕಳಾಗಿರಲಿಲ್ಲ. ಅನೇಕ ಜ್ಯೋತಿಷ್ಕರನ್ನು ಕೇಳಿದರೂ, ಗ್ರಹಗತಿಗಳು ಸರಿಯಿಲ್ಲದಿರುವುದರಿಂದ ಅವರಿಗೆ ಮಕ್ಕಳಾಗುವ ಯೋಗವಿಲ್ಲ, ಎಂದು ಎಲ್ಲರೂ ಹೇಳಿದ್ದರು. ಸಂತಾನಕ್ಕಾಗಿ ಅವರ ಮನಸ್ಸು ತುಡಿಯುತ್ತಿತ್ತು. ಆದರೂ ಆತ ಅದನ್ನು ಹೊರಗೆ ತೋರಿಸಿಕೊಳ್ಳುತ್ತಿರಲಿಲ್ಲ. ಬಾಬಾರನ್ನೂ ಆತ ಸಂತಾನಕ್ಕೋಸ್ಕರ ಬೇಡಲಿಲ್ಲ. ಮಾವಿನ ಹಣ್ಣುಗಳು ಬಂದ ದಿನ, ದಾಮೂ ಅಣ್ಣಾ ಬಾಬಾರ ದರ್ಶನಕ್ಕೆ ಮಸೀದಿಗೆ ಹೋದರು. ಎಂದಿನಂತೆ ನಮಸ್ಕಾರ ಮಾಡಿ ಪಾದ ಸೇವೆ ಮಾಡುತ್ತಾ ಕುಳಿತರು. ಬಾಬಾ ಅವರ ಕಡೆ ಪ್ರೀತಿಯಿಂದ ನೋಡುತ್ತಾ, "ಎಲ್ಲರೂ ಈ ಮಾವಿನ ಹಣ್ಣುಗಳನ್ನು ತಮಗೆ ಕೊಡಲು ಕೇಳುತ್ತಿದ್ದಾರೆ. ಆದರೆ ಅವು ದಾಮ್ಯಾನಿಗೆ ಸೇರಿದ್ದು. ಅವು ಯಾರಿಗೆ ಸೇರಿದ್ದೋ ಅವರೇ ಅವನ್ನು ತಿಂದು ಸಾಯಲಿ" ಎಂದರು. ಅದನ್ನು ಕೇಳಿದ ದಾಮೂ ಅಣ್ಣಾಗೆ ಆಘಾತವಾಯಿತು. ಬಾಬಾ ತನ್ನನ್ನು ಅಂತಹ ಪರೀಕ್ಷೆಗೆ ಒಡ್ಡುತ್ತಾರೆಂದು ಆತ ಎಂದೂ ಯೋಚಿಸಿರಲಿಲ್ಲ. ಆಗ ಹತ್ತಿರದಲ್ಲೇ ಕುಳಿತಿದ್ದ ಮಹಲ್ಸಾಪತಿ, ಸಾವು ಎಂದರೆ ಅದು ಅವನ ಅಹಂಕಾರದ ಸಾವೇ ಹೊರತು ಅವನ ದೇಹದ ಸಾವಲ್ಲ ಎಂದು ವಿಶದೀಕರಿಸಿದರು. ಬಾಬಾರ ಬಳಿ ಕುಳಿತಾಗ ಆಗುವ ಅಹಂಕಾರದ ಸಾವು ಬಹಳ ಒಳ್ಳೆಯದೇ ಎಂದೂ ಹೇಳಿದರು. ಈ ಸಾಂತ್ವನದ ಮಾತುಗಳನ್ನು ಕೇಳಿದ ದಾಮೂ ಅಣ್ಣಾ, ಹಣ್ಣುಗಳನ್ನು ತೆಗೆದು ತಿನ್ನಲು ಹೊರಟರು. ಅಷ್ಟರಲ್ಲಿ ಬಾಬಾ ಅವರನ್ನು ತಡೆದು, "ಅವನ್ನು ನೀನು ತಿನ್ನಬೇಡ. ನಿನ್ನ ಚಿಕ್ಕ ಹೆಂಡತಿಗೆ ಕೊಡು. ಈ ಆಮ್ರಲೀಲೆ ಅವಳಿಗೆ ನಾಲ್ಕು ಗಂಡು, ನಾಲ್ಕು ಹೆಣ್ಣು ಮಕ್ಕಳನ್ನು ಕೊಡುತ್ತದೆ" ಎಂದು ಹೇಳಿದರು. ಬಾಬಾ ಹೇಳಿದಂತೆ ಮಾಡಿದ ದಾಮೂ ಅಣ್ಣಾಗೆ, ಕಾಲಾನುಕ್ರಮದಲ್ಲಿ ಬಾಬಾ ಹೇಳಿದಂತೆ ಮಕ್ಕಳಾದವು. ಜ್ಯೋತಿಷ್ಕರ ಮಾತುಗಳು ಸುಳ್ಳಾದವು.
ದಾಮೂ ಅಣ್ಣಾ ಶ್ರೀ ಬಿ.ವಿ. ನರಸಿಂಹ ಸ್ವಾಮಿಯವರ ಭೇಟಿಯಲ್ಲಿ ಹೀಗೆ ಹೇಳಿದ್ದಾರೆ:
“ಒಂದುಸಲ ನಾನು ಅವರ ಪಾದಗಳ ಬಳಿ ಕುಳಿತಿದ್ದಾಗ ನನ್ನ ಮನಸ್ಸಿನಲ್ಲಿ ಎರಡು ಪ್ರಶ್ನೆಗಳೆದ್ದವು.
೧. ಇಷ್ಟೊಂದು ಜನ ಇಲ್ಲಿ ಸೇರಿದ್ದಾರೆ. ಅವರೆಲ್ಲರೂ ಬಾಬಾರಿಂದ ಲಾಭ ಪಡೆಯುತ್ತಾರೇನು?
ಅದಕ್ಕೆ ಬಾಬಾ, "ಅಲ್ಲಿರುವ ಮಾವಿನ ಮರವನ್ನು ನೋಡು. ಅದರಲ್ಲಿ ಹೇಗೆ ಹೂವುಗಳು ತುಂಬಿವೆ. ಆ ಹೂವುಗಳೆಲ್ಲಾ ಹಣ್ಣುಗಳಾದರೆ ಎಷ್ಟು ಚೆನ್ನ ಅಲ್ಲವೇ? ಆದರೆ ಅದು ಹಾಗಾಗುವುದೇನು? ಬಹಳಷ್ಟು ಹೂವುಗಳು ಉದುರಿಹೋಗುತ್ತವೆ. ಕೆಲವು ಮಾತ್ರವೇ ಉಳಿದು ಹಣ್ಣಾಗುತ್ತವೆ" ಎಂದು ಹೇಳಿದರು.
೨. ಇದು ನನ್ನ ಸ್ವಂತ ವಿಷಯವಾಗಿ ಕೇಳಿದ ಪ್ರಶ್ನೆ - ಅಕಸ್ಮಾತ್ ಬಾಬಾ ಇಲ್ಲದೇ ಹೋದರೆ ನನ್ನ ಗತಿಯೇನು? ನಾನೇನು ಮಾಡಬೇಕು?
ಅದಕ್ಕೆ ಬಾಬಾ ಹೇಳಿದರು, " ನೀನು ಎಲ್ಲಿ ಯಾವಾಗ ನೆನಸಿಕೊಂಡರೆ, ಆಗ ಅಲ್ಲಿ ನಾನು ನಿನ್ನ ಜೊತೆಯಲ್ಲಿ ಇರುತ್ತೇನೆ." ಆ ಮಾತನ್ನು ಅವರು ಸಮಾಧಿಯಾಗುವವರೆಗೂ ನಿಲ್ಲಿಸಿಕೊಂಡರು. ಸಮಾಧಿಯಾದ ಮೇಲೂ, ಅದನ್ನು ನಿಲ್ಲಿಸಿಕೊಂಡಿದ್ದಾರೆ. ಈಗಲೂ ನನ್ನೊಡನೆ ಇರುತ್ತಾ, ನನಗೆ ಮಾರ್ಗದರ್ಶಿಯಾಗಿದ್ದಾರೆ. ೧೯೧೦-೧೯೧೧ರಲ್ಲಿ ನನ್ನ ಸಹೋದರರೆಲ್ಲಾ ನನ್ನಿಂದ ಬೇರೆ ಹೋದಾಗ, ನನ್ನ ಸಹೋದರಿ ಸತ್ತುಹೋದಾಗ, ನನ್ನ ಮನೆಯಲ್ಲಿ ಕಳ್ಳತನವಾಗಿ ಪೋಲೀಸ್ ತನಿಖೆಯಾದಾಗ, ನನ್ನ ಮನಸ್ಸು ಬಹಳ ಆಂದೋಳನಕ್ಕೀಡಾಗಿತ್ತು.
ಮನಸ್ಸು ಬಹಳ ದುಃಖದಿಂದ ತುಂಬಿ, ನನಗೆ ಜೀವನವೇ ಸಾಕೆನಿಸಿತ್ತು. ಆಗ ಬಾಬಾರ ಬಳಿಗೆ ಹೋದಾಗ, ಅವರು ನನಗೆ ಉಪದೇಶ ಕೊಟ್ಟು, ಸಾಂತ್ವನದ ಮಾತುಗಳನ್ನು ಹೇಳಿ, ನನಗೆ ಅಪ್ಪಾ ಕುಲಕರ್ಣಿ ಮನೆಯಲ್ಲಿ ಹೋಳಿಗೆ ಊಟ ಮಾಡಿಸಿದರು. ಅದಾದಮೇಲೆ, ನನ್ನ ಮನೆಯಲ್ಲಿ ಕಳ್ಳತನವಾಯಿತು. ಮುವ್ವತ್ತು ವರ್ಷಗಳಿಂದ ನನ್ನ ಸ್ನೇಹಿತನಾಗಿದ್ದವನೊಬ್ಬ, ನನ್ನ ಹೆಂಡತಿಯ ಆಭರಣಗಳನ್ನು, ಅವಳ ಮೂಗು ಬಟ್ಟೂ ಸೇರಿದಂತೆ, ಕದ್ದುಕೊಂಡು ಹೋದ. ನಾನು ಬಾಬಾ ಫೋಟೋ ಮುಂದೆ ನಿಂತು ಅತ್ತುಕೊಂಡೆ. ಮರುದಿನವೇ ಆ ಸ್ನೇಹಿತ ಕದ್ದುಕೊಂಡುಹೋಗಿದ್ದ ಆಭರಣಗಳನ್ನೆಲ್ಲಾ ವಾಪಸ್ಸು ತಂದುಕೊಟ್ಟು, ಕ್ಷಮೆ ಬೇಡಿದ.”
ಬಾಬಾರ ಭರವಸೆಗಳು
ಬಾಬಾ ಮನುಷ್ಯ ರೂಪದಲ್ಲಿದ್ದಾಗ ಅವರ ಮಾತುಗಳು ಎಷ್ಟು ಪರಿಣಾಮಕಾರಿಯಾಗಿದ್ದವೋ, ಈಗಲೂ ಅಷ್ಟೇ ಪರಿಣಾಮಕಾರಿಯಾಗಿವೆ. ಅವರು ಹೇಳಿದ ಮಾತುಗಳು, "ನನ್ನನ್ನು ನಂಬಿ. ನಾನು ನಿಮ್ಮೆದುರಿಗಿರದಿದ್ದರೂ, ನನ್ನ ಸಮಾಧಿಯಲ್ಲಿರುವ ಮೂಳೆಗಳು ನಿಮ್ಮೊಂದಿಗೆ ಮಾತನಾಡುತ್ತವೆ. ನಾನು ಮಾತ್ರವಲ್ಲ, ನನ್ನ ಸಮಾಧಿಯೂ ನನ್ನಲ್ಲಿ ಶರಣುಬಂದವರನ್ನು ಮಾತನಾಡಿಸುತ್ತದೆ. ನಾನು ನಿಮ್ಮೊಡನೆ ಇಲ್ಲವೆಂದು ಚಿಂತೆಮಾಡಬೇಡಿ. ನನ್ನ ಮೂಳೆಗಳು ನಿಮಗೆ ರಕ್ಷಣೆ ಕೊಡುತ್ತವೆ. ನನ್ನನ್ನು ನಂಬಿ ನನ್ನನ್ನು ಯಾವಾಗಲೂ ನೆನಸುತ್ತಿರಿ. ನಿಮಗೆ ಅದು ಲಾಭದಾಯಕವಾಗುವುದು."
ಪ್ರಾರ್ಥನೆ
ಸಾಯಿ ಸದ್ಗುರು, ಭಕ್ತರ ಕಾಮಧೇನು, ಕಲ್ಪವೃಕ್ಷ, ನಮ್ಮ ಪ್ರಾರ್ಥನಾ ಮೊರೆಯನ್ನು ಕೇಳು. ನಿನ್ನ ಪಾದಾರವಿಂದಗಳನ್ನು, ನಾವು ಎಂದೂ ಮರೆಯದಂತೆ ಮಾಡು. ನಮ್ಮನ್ನು ಈ ಜನನ ಮರಣ ಚಕ್ರಭ್ರಮಣೆಯಿಂದ ಬಿಡಿಸು. ನಮ್ಮ ಇಂದ್ರಿಯಗಳು ಹೊರಗೆ ಹೋಗುವುದನ್ನು ತಪ್ಪಿಸಿ, ಒಳಕ್ಕೆ ತಿರುಗುವಂತೆ ಮಾಡು. ಹೆಂಡತಿ, ಮಕ್ಕಳು, ಸ್ನೇಹಿತರು ಯಾರೂ ನಮ್ಮ ಅಂತ್ಯಕಾಲದಲ್ಲಿ ಸಹಾಯಕ್ಕೆ ಬರಲಾರರು. ನೀನೊಬ್ಬನೇ ನಮಗೆ ಭುಕ್ತಿ, ಮುಕ್ತಿ, ಆನಂದಗಳನ್ನು ನೀಡಬಲ್ಲವನು. ನಮ್ಮ ಬಾಯಿ ಸದಾ ನಿನ್ನ ನಾಮವನ್ನು ಹೇಳುತ್ತಿರಲಿ. ನಾಲಗೆ ಸದಾ ನಿನ್ನ ನಾಮಾಮೃತದ ರುಚಿಯನ್ನು ಚಪ್ಪರಿಸುತ್ತಿರಲಿ. ಕಣ್ಣುಗಳು ಸದಾ ನಿನ್ನ ಸಗುಣ ರೂಪವನ್ನು ಕಾಣುತ್ತಿರಲಿ. ನಮ್ಮನ್ನು ಯೋಚನಾರಹಿತರನ್ನಾಗಿಸು. ಅಹಂಕಾರವನ್ನು ತೊಡೆದುಹಾಕಿ, ದೇಹಾಭಿಮಾನವನ್ನು ಬಿಡಿಸಿ, ನಮ್ಮನ್ನು ನಿನ್ನಲ್ಲಿ ಸೇರಿಸಿಕೋ. ನಿನ್ನ ನಾಮ ಒಂದನ್ನು ಬಿಟ್ಟು, ನಮಗೆ ಇನ್ನೇನೂ ನೆನಪಿನಲ್ಲಿರದಂತೆ ಮಾಡು. ನಮ್ಮ ಮನಸ್ಸಿನ ಚಂಚಲತೆಯನ್ನು ಹೊಡೆದೋಡಿಸಿ, ಶಾಂತ, ಅಚಂಚಲವನ್ನಾಗಿ ಮಾಡು. ಅಜ್ಞಾನವೆಂಬ ಅಂಧಕಾರದಿಂದ ನಮ್ಮನ್ನು ಜ್ಞಾನವೆಂಬ ಜ್ಯೋತಿಯ ಕಡೆಗೆ ಕೈಹಿಡಿದು ನಡೆಸು. ನಿನ್ನ ಲೀಲಾಮೃತವೆಂಬ ಅಮೃತವನ್ನು ನಮಗೆ ಕುಡಿಸಿ, ನಮ್ಮ ತಮೋನಿದ್ರೆ ಕಳೆಯುವಂತೆ ಮಾಡು. ನಮ್ಮ ಜನ್ಮಜನ್ಮಾಂತರದ ಪಾಪಗಳನ್ನು ಕ್ಷಮಿಸಿ, ನಮ್ಮ ಮೇಲೆ ನಿನ್ನ ಅನುಗ್ರಹ ಸದಾ ಇರುವಂತೆ ಮಾಡು. ನಮ್ಮನ್ನು ಎಲ್ಲವಿಧದಲ್ಲೂ ಕಾಪಾಡು. ತಂದೆ ಸಾಯಿನಾಥಾ ಕಾಪಾಡು. ಕಾಪಾಡು. ಕಾಪಾಡು.
ಇದರೊಂದಿಗೆ ಅಹಮದ್ ನಗರದ ದಾಮೂ ಅಣ್ಣಾ ಕಾಸಾರ್, ಮಾವಿನ ಹಣ್ಣಿನ ಲೀಲೆ ಮತ್ತು ಇತರ ವಿಷಯಗಳನ್ನು ಕುರಿತು ಹೇಳುವ ಇಪ್ಪತ್ತೈದನೆಯ ಅಧ್ಯಾಯ ಮುಗಿಯಿತು. ಮುಂದಿನ ಅಧ್ಯಾಯದಲ್ಲಿ ಹೇಮಾಡ್ ಪಂತ್, ಭಕ್ತ ಪಂತ್, ಹರಿಶ್ಚಂದ್ರ ಪಿತಳೆ, ಗೋಪಾಲ್ ಅಂಬಾಡೇಕರ್, ಇತ್ಯಾದಿ ವಿಷಯಗಳನ್ನು ಹೇಳುತ್ತಾರೆ
||ಶ್ರೀ ಸದ್ಗುರು ಸಾಯಿನಾಥಾರ್ಪಣಮಸ್ತು||ಶುಭಂ ಭವತು||
||ಓಂ ಶಾಂತಿಃ ಶಾಂತಿಃ ಶಾಂತಿಃ||
||ಓಂ ಶಾಂತಿಃ ಶಾಂತಿಃ ಶಾಂತಿಃ||
No comments:
Post a Comment