Monday, December 12, 2011

||ಮೂರನೆಯ ಅಧ್ಯಾಯ||


||ಶ್ರೀ ಸಾಯಿ ಸಚ್ಚರಿತ್ರೆ||
||ಮೂರನೆಯ ಅಧ್ಯಾಯ||
||ಬಾಬಾರ ಅನುಮತಿ ಮತ್ತು ಆಶ್ವಾಸನೆ||
ಶ್ರೀ ಗಣೇಶಾಯ ನಮಃ ಶ್ರೀ ಸರಸ್ವತಯೇ ನಮಃ
ಶ್ರೀ ವೆಂಕಟೇಶಾಯ ನಮಃ ಶ್ರೀ ಸಾಯಿನಾಥಾಯ ನಮಃ
ಶ್ರೀ ಸದ್ಗುರುಭ್ಯೋನ್ನಮಃ

ಅಧ್ಯಾಯದಲ್ಲಿ, ಹೇಮಾಡ್ ಪಂತ್, ಬಾಬಾರ ಅನುಮತಿ ಮತ್ತು ಭರವಸೆ, ಭಕ್ತರಿಗೆ ಕೆಲಸ ಹಂಚಿಕೊಡುವುದು ಮತ್ತು ಇತರ ವಿಷಯಗಳನ್ನು ಹೇಳುತ್ತಾರೆ.

ಬಾಬಾರ ಅನುಮತಿ ಮತ್ತು ಭರವಸೆ

ಬಾಬಾರು ಹೇಮಾಡ್ ಪಂತರನ್ನು ಉತ್ತೇಜನಗೊಳಿಸುತ್ತ ಹೇಳಿದರು, "ನಿನ್ನ ಕೆಲಸವನ್ನು ಶ್ರದ್ಧೆಯಿಂದ ಮಾಡು. ಅಧೈರ್ಯ ಪಡಬೇಡ. ನನ್ನ ಚರಿತ್ರೆಯನ್ನೂ, ನನ್ನ ಲೀಲೆಗಳನ್ನೂ ಬರೆಯುವುದರಿಂದ ಅಜ್ಞಾನ ನಾಶವಾಗುತ್ತದೆ. ಭಕ್ತಿ ಮತ್ತು ಅರ್ಪಣಾಭಾವಪೂರ್ಣರಾಗಿ ನನ್ನ ಲೀಲೆಗಳನ್ನು ಕೇಳುವುದರಿಂದ ಪ್ರಾಪಂಚಿಕ ಬಂಧನಗಳು ಕಳೆದು ಹೋಗುತ್ತವೆ. ನನ್ನ ಲೀಲೆಗಳಲ್ಲಿ ಆಳವಾಗಿ ಮುಳುಗಿದವರಿಗೆ ವಿವೇಕ, ವಿವೇಚನೆ ಎಂಬ ಮುತ್ತುಗಳು ದೊರೆಯುತ್ತವೆ." ಇಂತಹ ಮಾತುಗಳನ್ನು ಸ್ವಯಂ ಬಾಬಾರ ಮುಖದಿಂದಲೇ ಕೇಳಿ ಹೇಮಾಡ್ ಪಂತ್ ಬಹಳ ಉತ್ತೇಜನಗೊಂಡು, ಸಮಾಧಾನ ಚಿತ್ತದಿಂದ, ಬಾಬಾಗೆ ಸಾಷ್ಟಾಂಗ ನಮಸ್ಕಾರ ಮಾಡಿ ಸಚ್ಚರಿತ್ರೆಯ ಬರವಣಿಗೆ ಆರಂಭಿಸಿದರು. ಇಷ್ಟಾದ ಮೇಲೆಯೇ ತಾನು ಮಾಡುವ ಕೆಲಸ ಯಶಸ್ವಿಯಾಗಿ ಮುಗಿಯುವುದು ಎಂಬ ಭರವಸೆ ಬಂತು. ಶ್ರೀ ಹರಿ ತನ್ನ ಲೀಲೆಗಳನ್ನು ತಾನು ಮಾತ್ರವೇ ಅರ್ಥಮಾಡಿಕೊಳ್ಳಬಲ್ಲ. ದೇವರು ಯಾವಾಗಲೂ ಭಕ್ತರ ಅಧೀನ. ಅವನು ಭಕ್ತರಿಂದ ಕೇಳುವುದು ಕೇವಲ ಪ್ರೀತಿ ಮತ್ತು ವಿಶ್ವಾಸ. ಡಾಂಭಿಕರಿಂದ ಅವನು ಯಾವಾಗಲೂ ದೂರವಿರುತ್ತಾನೆ.

ಭಕ್ತರಿಗೆ ಬಾಬಾ ತಮ್ಮ ಭರವಸೆಗಳ ಕುರಿತು ಶ್ಯಾಮಾಗೆ ಹೀಗೆ ಹೇಳಿದರು, "ನಿಮ್ಮ ಯೋಚನೆಗಳೆಲ್ಲ ನನ್ನ ಮೇಲಿರಲಿ. ನಾನು ನಿಮ್ಮನ್ನು ಎಲ್ಲ ಕಾಲಗಳಲ್ಲಿಯೂ ರಕ್ಷಿಸುತ್ತೇನೆ. ಯಾರು ನನ್ನ ನಾಮ ಜಪವನ್ನು ಪ್ರೀತಿಯಿಂದ ಮಾಡುತ್ತಾರೋ ಅವರ ಅಭೀಷ್ಟಗಳನ್ನೆಲ್ಲಾ ನಾನು ಪೂರಯಿಸುತ್ತೇನೆ. ಅದು ಅವರಲ್ಲಿ ನನ್ನಮೇಲಿನ ಪ್ರೀತಿಯನ್ನು ಹೆಚ್ಚಿಸುತ್ತದೆ. ನನ್ನ ಲೀಲೆಗಳನ್ನೂ, ಕಥೆಗಳನ್ನೂ ಹಾಡುವವರಿಗೆ ಪರಮಾನಂದ ದಯಪಾಲಿಸಿ ಆಶೀರ್ವದಿಸುತ್ತೇನೆ. ನನ್ನಲ್ಲಿ ಸಂಪೂರ್ಣ ಶರಣಾಗತರಾದವರಿಗೆ, ಪರಮಶಾಂತಿ ಸಮೃದ್ಧಿಗಳನ್ನು ಕೊಟ್ಟು ಕಾಪಾಡುತ್ತೇನೆ. ನನಗೆ ನಮಸ್ಕಾರಮಾಡಿದವರನ್ನೂ, ನನ್ನ ಭಕ್ತಿಗೀತೆಗಳನ್ನು ಹಾಡಿದವರನ್ನೂ ಉದ್ಧರಿಸುತ್ತೇನೆ. ಶ್ರದ್ಧಾ ಭಕ್ತಿಗಳಿಂದ ಸದಾ ನನ್ನ ಸ್ಮರಣೆ ಮಾಡುತ್ತಾ, ನನ್ನ ಚಿಂತೆಯಲ್ಲೇ ಇರುವವರು ಹೇಗೆ ತಾನೇ ಪ್ರಾಪಂಚಿಕ ವಿಷಯಗಳಲ್ಲಿ ಸಿಕ್ಕಿಹಾಕಿಕೊಳ್ಳುತ್ತಾರೆ? ನನ್ನ ಭಕ್ತರು ರೋಗ ರುಜಿನಗಳಿಂದ ಪೀಡಿತರಾಗುವುದಿಲ್ಲ. ಸಮಯಬಂದರೆ ಅವರನ್ನು ಸಾವಿನಿಂದಲೂ ಕಾಪಾಡುತ್ತೇನೆ. ನನ್ನನ್ನು ಸದಾ ಸ್ಮರಿಸುತ್ತಿರುವವರು ಯಾವಾಗಲೂ ಹಸನ್ಮುಖಿಗಳಾಗಿಯೇ ಇರುತ್ತಾರೆ. ನನ್ನ ವಿಷಯವನ್ನೇ ಕೇಳುತ್ತಾ, ಯೋಚಿಸುತ್ತಾ, ಧ್ಯಾನಿಸುತ್ತಾ, ಇರುವವರ ಪಾಪಗಳೆಲ್ಲಾ ನಾಶವಾಗಿ ಅವರಲ್ಲಿ ಶಾಂತಿ ಸಂತೋಷಗಳು ಯಾವಾಗಲೂ ತುಂಬಿರುತ್ತವೆ. ಸಮರ್ಪಣಾಭಾವದಿಂದ ಮಾಡಿದ ಒಂದೇ ಒಂದು ನಮಸ್ಕಾರ ನಿಮ್ಮ ಹಿಂದಿನ ಪಾಪಗಳನ್ನೆಲ್ಲಾ ತೊಳೆದುಹಾಕಿಬಿಡುತ್ತದೆ."

ಬಾಬಾ ತಮ್ಮ ಭಕ್ತರಿಗೆ ಬೇರೆಬೇರೆ ಕೆಲಸಗಳನ್ನು ಹಂಚುವುದು

ಬಾಬಾ ತಮ್ಮ ಭಕ್ತರು ಅನೇಕರಿಗೆ ಹಲವಾರು ಕಾರ್ಯಗಳನ್ನು ಹಂಚಿ, ಅವರು ತಮ್ಮ ಆಶಿಸ್ಸು ಪಡೆದುಕೊಳ್ಳುವಂತೆ ಮಾಡಿದರು. ಬೂಟಿಯವರ ಮೂಲಕ ದೇವಸ್ಥಾನ ನಿರ್ಮಿಸಿದರು. ದಾಸಗಣು ಭಕ್ತಿ ಗೀತೆಗಳನ್ನು ಹಾಡುವಂತೆ ಮಾಡಿದರು. ಶ್ಯಾಮಾರನ್ನು ತೀರ್ಥಯಾತ್ರೆಗಳಿಗೆ ಕಳುಹಿಸಿದರು. ಹೇಮಾಡ್ ಪಂತರನ್ನು ತನ್ನದೇ ಕಥೆಯನ್ನು ಬರೆಯುವಂತೆ ಮಾಡಿದರು. ಇವೆಲ್ಲವೂ ಗುರುಕೃಪೆಗೆ ದೃಷ್ಟಾಂತಗಳು. ಹೇಮಾಡ್ ಪಂತರಿಗೆ ಇಂತಹ ಕಷ್ಟಸಾಧ್ಯವಾದ ಕೆಲಸ ಮಾಡಲು ಧೈರ್ಯ ಬಂದದ್ದೇ ಅಂತಹ ಗುರು ಕೃಪೆಯಿಂದ. ಹೇಮಾಡ್ ಪಂತರ ಅಹಂಕಾರ ನಿರ್ನಾಮವಾಗಿ, ತನ್ನ ಭಕ್ತರ ಬಗ್ಗೆ, ತನ್ನ ಲೀಲೆಗಳ ಬಗ್ಗೆ ಬರೆಯಲು ಪ್ರೇರಣೆ ಕೊಟ್ಟಿದ್ದು ಕೂಡಾ ಬಾಬಾರೇ! ಶ್ರೀ ಸಾಯಿ ಸಚ್ಚರಿತ್ರೆಯನ್ನು ಬರೆದಿದ್ದು ಬಾಬಾರೇ ಎಂದರೆ ಅದೇನೂ ಉತ್ಪ್ರೇಕ್ಷೆಯಲ್ಲ. ಕೃತಯುಗದಲ್ಲಿ ಯಾವುದನ್ನು ತಪಸ್ಸಿನಿಂದ, ದ್ವಾಪರಯುಗದಲ್ಲಿ ಯಾವುದನ್ನು ಪೂಜಾರ್ಚನಗಳಿಂದ, ತ್ರೇತಾಯುಗದಲ್ಲಿ ಯಾವುದನ್ನು ಯಜ್ಞ ಯಾಗಾದಿಗಳಿಂದ ಸಾಧಿಸಬಹುದೋ, ಅದನ್ನು ಕಲಿಯುಗದಲ್ಲಿ ಕೇವಲ ನಿಶ್ಚಲವಾದ ಗುರುಭಕ್ತಿಯಿಂದಲೇ ಅವನ ಭಕ್ತಿಗೀತೆಗಳನ್ನು ಹಾಡುತ್ತಾ ಸಾಧಿಸಬಹುದು.

ಹೇಮಾಡ್ ಪಂತ್ ಯೋಚನಾ ಲಹರಿ ಹೀಗಿತ್ತು, "ನಾನೊಬ್ಬ ಅಸಮರ್ಥ. ಆರಂಭಿಸಿದ ಕಾರ್ಯವನ್ನು ಪೂರ್ತಿಗೊಳಿಸಲಾರೆ. ಆದರೆ ಬಾಬಾರ ಆಜ್ಞೆ. ಪ್ರಯತ್ನವನ್ನೂ ಮಾಡದಿದ್ದರೆ ಆಜ್ಞೋಲ್ಲಂಘನ ಮಾಡಿದಂತಾಗುತ್ತದೆ. ನನ್ನಂತಹ ಅಸಮರ್ಥ ಆಜ್ಞೆಯನ್ನು ಪಾಲಿಸಬೇಕೆಂದರೆ ಸಾಯಿ ತನ್ನ ಕೃಪಾಕಟಾಕ್ಷವನ್ನು ನನ್ನಮೇಲೆ ಹರಿಸಬೇಕು. ಆಗಲೇ ಬಹುಶಃ ನಾನು ಕಾರ್ಯವನ್ನು ಪೂರ್ತಿಗೊಳಿಸಬಹುದು. ಅಂದರೆ ಬಾಬಾ ಅವರೇ ಕಾರ್ಯವನ್ನು ನಿರ್ವಹಿಸಿ ಪೂರ್ತಿಗೊಳಿಸಬೇಕು."

ಮುಂದುವರಿದು ಹೇಮಾಡ್ ಪಂತ್ ತಾವು ಬದುಕಿರುವಷ್ಟು ಕಾಲವೂ ಬಾಬಾರ ಸೇವೆಯಲ್ಲೇ ಇರುವಂತೆ ಅವರನ್ನು ಪ್ರಾರ್ಥಿಸಿಕೊಳ್ಳುತ್ತಾ, ಹೀಗೆ ಯೋಚಿಸಿದರು, "ಬ್ರಾಹ್ಮಣನಾಗಿ ಹುಟ್ಟಿದ್ದರೂ, ಶ್ರುತಿ ಸ್ಮೃತಿಗಳನ್ನರಿಯದ ಮೂಢ. ಕೆಲಸಕ್ಕೆ ಬಾರದವ, ಅದರಿಂದಲೇ ಸಚ್ಚರಿತ್ರೆ ಬರೆಯಲು ಸಾಧ್ಯವಾಗದು. ಆದರೆ ನಾನೇಕೆ ಅಧೈರ್ಯ ಪಡಬೇಕು? ಕುರುಡನಿಗೆ ದಾರಿತೋರಲು ಆಸರೆಯಂತಿರುವ ಕೋಲಿನ ಹಾಗೆ ಬಾಬಾ ನನಗೆ ದಾರಿ ತೋರಿಸಲು ಇದ್ದಾರೆ. ದೇವರ ಕೃಪೆಯಿದ್ದರೆ ಮೂಕ ಮಾತಾಡಬಲ್ಲ. ಕುಂಟ ಪರ್ವತವನ್ನು ಹತ್ತಬಲ್ಲ. ಘನತರ ಕಾರ್ಯವನ್ನು ಪೂರ್ತಿಗೊಳಿಸಲು ಬಾಬಾ ನನಗೆ ಬೇಕಾದ ಸ್ಫೂರ್ತಿ, ವಿವೇಕ, ವಿಚಕ್ಷಣೆಗಳನ್ನು ದಯಪಾಲಿಸುತ್ತಾರೆ. ನಾನೊಂದು ಉಪಕರಣ. ಹಾರ್ಮೋನಿಯಂ ಆಗಲೀ, ಕೊಳಲೇ ಅಗಲಿ ಸುಶ್ರಾವ್ಯ ಸಂಗೀತ ಕೊಡುವುದು ಅದನ್ನು ಬಾರಿಸುವವನಿಂದಲೇ! ಸಾಗರದಲ್ಲಿ ಏಳುವ ಅಲೆಗಳು ಚಂದ್ರನಿಂದಲೇ ಉಂಟಾಗುವುದು." ಹಾಗೆಯೇ ಹೇಮಾಡ್ ಪಂತ್ ತನ್ನನ್ನು ಒಂದು ಉಪಕರಣವನ್ನಾಗಿ ಬಳಸಿಕೊಂಡು ಸಚ್ಚರಿತ್ರೆಯನ್ನು ಬರೆಯಿಸಬೇಕೆಂದು ಬಾಬಾರನ್ನು ಕೇಳಿಕೊಂಡರು.

ಸಾಯಿ ಕಥಾ ಶ್ರವಣ ಮುಕ್ತಿಗೆ ದಾರಿ

ಹಡಗನ್ನು ಸರಿಯಾದ ದಾರಿಯಲ್ಲಿ ನಡೆಸಲು ನಾವಿಕರಿಗೆ ಅನುಕೂಲವಾಗುವಂತೆ ದೀಪಗೃಹಗಳನ್ನು ನಿರ್ಮಿಸಿರುತ್ತಾರೆ. ಅದರಂತೆ ಅಗಾಧವಾದ ಸಂಸಾರ ಸಾಗರವನ್ನು ಸುಗಮವಾಗಿ ದಾಟಲು ಬಾಬಾರ ಕಥೆಗಳು ಸಹಾಯವಾಗುತ್ತವೆ. ಬಾಬಾರ ಕಥೆಗಳು, ಲೀಲೆಗಳು ಓದುವುದರಿಂದ, ಕೇಳುವುದರಿಂದ ನಮ್ಮ ದ್ವಂದ್ವ ಭಾವನೆಗಳೆಲ್ಲವೂ ನಾಶವಾಗುತ್ತವೆ. ವಿವೇಚನಾ ಶಕ್ತಿ ಬರುತ್ತದೆ. ನಮ್ಮ ಪಾಪಗಳೆಲ್ಲಾ ಕಳೆದು ಮುಕ್ತಿ ಮಾರ್ಗ ತೋರುತ್ತದೆ. ಕಲಿಯುಗದಲ್ಲಿ ಮುಕ್ತಿಗೆ ಬಹು ಸುಲಭವಾದ ಮಾರ್ಗ, ಸಂಕೀರ್ತನೆ. ಇದನ್ನು ಯಾರು ಬೇಕಾದರೂ ಅನುಸರಿಸಬಹುದು. ಗುರುಕಥೆಗಳನ್ನು ಕೇಳುವುದು ಇನ್ನೂ ಸುಲಭವಾದ ಮಾರ್ಗ. ಪುಣ್ಯವಂತರಿಗೆ ಮಾತ್ರ ಇದು ಸಾಧ್ಯ. ಯಜ್ಞ, ಯಾಗ, ತಪಸ್ಸು, ಅಧ್ಯಯನ ಇವು ದುರ್ಗಮವಾದ ಹಾದಿಗಳು. ಮನಸ್ಸಿಟ್ಟು ಕೇಳುವುದೊಂದನ್ನು ಬಿಟ್ಟರೆ ಕಥಾ ಶ್ರವಣಕ್ಕೆ ಬೇರೇನೂ ಬೇಕಾಗಿಲ್ಲ. ಮದ್ಯಪಾನ, ಸ್ವರ್ಣಚೌರ್ಯ, ಬ್ರಹ್ಮಹತ್ಯೆ, ಗುರುತಲ್ಪಗಮನ ಇವುಗಳಲ್ಲಿ ಯಾವುದೊಂದಾದರೂ ಅದು ಮಹಾಪಾಪ. ಮನಸ್ಸಿಟ್ಟು ಶ್ರದ್ಧಾ ಭಕ್ತಿಗಳಿಂದ ಶ್ರೀ ಸಾಯಿ ಸಚ್ಚರಿತ್ರೆಯನ್ನು ಓದಿದರೆ ಅಂತಹ ಮಹಾಪಾಪವೂ ಕಳೆದು ಮನಸ್ಸಿಗೆ ಶಾಂತಿ ದೊರೆಯುತ್ತದೆ. ಅಷ್ಟೇ ಅಲ್ಲ ಸಾಯಿಯ ಸಗುಣ ಮೂರ್ತಿ ನಮ್ಮ ಮನೋಪಟಲದಲ್ಲಿ ಅಚ್ಚೊತ್ತಿಹೋಗುತ್ತದೆ. ಮನಸ್ಸು ಅಚಂಚಲವಾಗಿ, ಅಕ್ಷೋಭವಾಗಿ, ಆತ್ಮಸಾಕ್ಷಾತ್ಕಾರದ ಕಡೆಗೆ ತಿರುಗುತ್ತದೆ. ಅದರಿಂದಲೇ ಹೇಮಾಡ್ ಪಂತರನ್ನು ಮುಂದಿಟ್ಟುಕೊಂಡು ಸಾಯಿಯೇ ಸಚ್ಚರಿತ್ರೆಯನ್ನು ಬರೆದರು.

ಬಾಬಾರ ಪ್ರೀತಿ ತಾಯಿಯ ಪ್ರೀತಿಯಂತೆ

ಮಗುವಿಗೆ ಏನಾದರೂ ಬೇಕಾದರೆ ಅದಕ್ಕೆ ಅಳುವುದೊಂದು ಬಿಟ್ಟು ಮತ್ತೇನೂ ತಿಳಿಯದು. ಆದರೆ ತಾಯಿ ಅದನ್ನು ತಿಳಿದು ಮಗುವಿಗೆ ಬೇಕಾದ್ದನ್ನು ಒದಗಿಸುತ್ತಾಳೆ. ಮಗುವಿಗೆ ಒಳ್ಳೊಳ್ಳೆಯ ಬಟ್ಟೆಗಳನ್ನು ತೊಡಿಸಿ ನೋಡಿ ಸಂತೋಷಪಡುತ್ತಾಳೆ. ಅದು ಬೆಳೆದು ದೊಡ್ಡದಾಗುವವರೆಗೂ ಅದರ ಬೇಕು ಬೇಡಗಳನ್ನು ತಾನೇ ನೋಡಿಕೊಳ್ಳುತ್ತಾಳೆ. ಸಾಯಿ ತನ್ನ ಭಕ್ತರನ್ನು ತಾಯಿಯ ರೀತಿಯಲ್ಲೆ ನೋಡಿಕೊಳ್ಳುತ್ತಾರೆ. ಅವರ ಪ್ರೀತಿ, ತಾಯಿಗೆ ಮಗುವಿನ ಮೇಲಿರುವ ಪ್ರೀತಿಯಂತೆ!

ಹೇಮಾಡ್ ಪಂತ್, ಸ್ವಂತ ಅನುಭವದಿಂದ, ಬಾಬಾ ಭಕ್ತರಲ್ಲಿ ತೋರಿಸಿದ ಮಾತೃ ವಿಶ್ವಾಸದ ಒಂದು ದೃಷ್ಟಾಂತವನ್ನು ಹೇಳುತ್ತಾರೆ. ಅವರು ೧೯೧೬ರಲ್ಲಿ ಸರ್ಕಾರಿ ನೌಕರಿಯಿಂದ ನಿವೃತ್ತರಾದಮೇಲೆ ಶಿರಡಿಗೆ ಹೋದರು. ಅಂದು ಗುರುಪೂರ್ಣಿಮೆ. ಗುರು ಪೂಜೆಗೆಂದು ಭಕ್ತರೆಲ್ಲಾ ಸೇರಿದ್ದಾರೆ. ಬಾಬಾರ ಭಕ್ತ, ಆಣ್ಣಾ ಚಿಂಚಣೀಕರರಿಗೆ ಅಣ್ಣಾ ಸಾಹೇಬರ ಬಗ್ಗೆ ಬಾಬಾರ ಹತ್ತಿರ ಮಾತನಾಡಬೇಕೆಂದು ಮನಸ್ಸಿಗೆ ಬಂತು. ಅವರು," ದೇವಾ, ಅಣ್ಣಾ ಸಾಹೇಬ್ ನಿವೃತ್ತರಾಗಿದ್ದಾರೆ. ಅವರ ಸಂಸಾರ ದೊಡ್ಡದು. ಅವರಿಗೆ ಬರುವ ಪೆನ್ಶನ್, ಸಂಸಾರ ನಿಭಾಯಿಸಲು ಸಾಕಾಗುವುದಿಲ್ಲ. ಅವರಿಗೆ ಬೇರೆ ಯಾವುದಾದರೂ ಕೆಲಸ ಸಿಕ್ಕುವಂತೆ ಮಾಡಿ" ಎಂದು ಹೇಳಿದರು. ಅದಕ್ಕೆ ಬಾಬಾ, " ಅವನಿಗೆ ಇನ್ನೊಂದು ಕೆಲಸ ಸಿಕ್ಕುತ್ತದೆ. ಅವನಿಗೆ ಅನ್ನಕ್ಕೆ ಎಂದೂ ಕೊರತೆಯಾಗುವುದಿಲ್ಲ. ಅವನು ಸತತವಾಗಿ ನನ್ನ ಆಸರೆಯೊಳಗೆ ಬಂದರೆ, ಅವನ ಕಷ್ಟಗಳೆಲ್ಲವೂ ತೀರಿಹೋಗುತ್ತವೆ. ಅವನು ಕೆಟ್ಟವರ ಸಹವಾಸ ಮಾಡದಿದ್ದರೆ ಸದಾ ಸುಖಿಯಾಗಿರುತ್ತಾನೆ" ಎಂದರು.

ಬಾಬಾರ ಬುದ್ಧಿವಾದ

ಬಾಬಾ ತಮ್ಮ ಮಾತು ಮುಂದುವರೆಸಿ ಹೀಗೆ ಹೇಳಿದರು. “ಋಣಾನುಬಂಧವಿಲ್ಲದೆ, ಯಾರೂ ಯಾರ ಬಳಿಗೂ ಬರುವುದಿಲ್ಲ. ನೀನು ನನ್ನ ಪೂಜೆ ಭಕ್ತಿಯಿಂದ ಮಾಡಿದರೆ, ದೇವರು ನಿನಗೆ ಅಕ್ಷಯಪಾತ್ರೆ ಕೊಡುತ್ತಾನೆ. ಶರೀರ ವಿನಾಶವಾಗುತ್ತದೆ. ಬ್ರಹ್ಮ ಮಾತ್ರ ಅವಿನಾಶಿ, ನಿತ್ಯ. ಬ್ರಹ್ಮನನ್ನು ಪೂಜೆಮಾಡಿ. ಅದುವೇ ನಿಜವಾದ ಗುರುಪೂಜೆ."

ರೋಹಿಲ್ಲಾ ಕಥೆ

ರೋಹಿಲ್ಲಾ ಬಾಬಾರ ಭಕ್ತ. ಎತ್ತರವಾದ ಮನುಷ್ಯ. ಬಲಿಷ್ಠವಾದ ಆಳು. ಉದ್ದನೆಯ ನಿಲುವಂಗಿ ತೊಡುತ್ತಿದ್ದ. ಬಾಬಾರ ಬೋಧೆಗಳಿಂದ ಆಕರ್ಷಿತನಾಗಿ ಬಾಬಾರ ಶಿಷ್ಯನಾಗಿದ್ದ. ಯಾರನ್ನೂ ಲೆಕ್ಕಿಸುತ್ತಿರಲಿಲ್ಲ. ಹಗಲೂ ರಾತ್ರಿ ಜೋರಾಗಿ ಖುರಾನು ಓದುತ್ತಿದ್ದ. ಇದು ಎಲ್ಲರ ಶಾಂತಿ ಭಂಗಕ್ಕೆ ಕಾರಣವಾಗಿತ್ತು. ಹಗಲಿನಲ್ಲಿ ಹೊಲಗಳಲ್ಲಿ ದುಡಿದು ಬಂದ ಶಿರಡಿಯ ಜನಕ್ಕೆ ರಾತ್ರಿ ನಿದ್ದೆ ಕೆಡುವಂತೆ ಮಾಡುತ್ತಿತ್ತು. ಸಾಯಿಬಾಬಾ ಅವನಿಗೆ ಯಾವ ವಿಷಯದಲ್ಲೂ ಛೀಮಾರಿ ಹಾಕುತ್ತಿರಲಿಲ್ಲ. ಇದರಿಂದ ಉತ್ತೇಜಿತನಾದ ಅವನು, ಶಿರಡಿಯ ಜನರೊಂದಿಗೆ ಜಗಳವಾಡುತ್ತಿದ್ದ. ಇವನ ರೀತಿ ನೀತಿಗಳನ್ನು ಬಹಳ ದಿನ ತಡೆದುಕೊಂಡ ಶಿರಡಿಯ ಜನ, ಕೊನೆಗೆ ಬಾಬಾರ ಹತ್ತಿರ ಹೋಗಿ ಅವನ ಕಿರಿಚಾಟವನ್ನು ನಿಲ್ಲಿಸುವಂತೆ ಕೇಳಿಕೊಂಡರು. ಆದರೆ ಅವರ ಇಚ್ಛೆಗೆ ವಿರುದ್ಧವಾಗಿ ಬಾಬಾ ಶಿರಡಿಯ ಜನರನ್ನೇ ತರಾಟೆಗೆ ತೆಗೆದುಕೊಂಡರು. "ರೋಹಿಲ್ಲಾನ ಸಂಗತಿ ನಿಮಗ್ಯಾಕೆ? ನಿಮ್ಮ ಕೆಲಸ ನೀವು ನೋಡಿಕೊಳ್ಳಿ. ಅವನ ಹೆಂಡತಿ ಗಯ್ಯಾಳಿ. ಅವಳು ಅವನಿಗೂ ನನಗೂ ಬಹಳ ತೊಂದರೆ ಕೊಡುತ್ತಿದ್ದಾಳೆ. ಅವನು ಜೋರಾಗಿ ಮಾಡುವ ಪ್ರಾರ್ಥನೆಯಿಂದ ಅವಳು ಅವನ ತಂಟೆಗೆ ಬರುವುದಿಲ್ಲ. ಸದ್ಯದಲ್ಲೇ ಅವಳು ಅವನನ್ನು ಬಿಟ್ಟು ಹೋಗುತ್ತಾಳೆ. ನಂತರ ನಿಮಗೆ ಶಾಂತಿ ದೊರೆಯುತ್ತದೆ" ಎಂದು ಹೇಳಿದರು. “ಬಾಬಾರೇ ಅವನ ಕಿರಿಚಾಟವನ್ನು ಸಹಿಸಿಕೊಂಡ ಮೇಲೆ, ನಾವಾದರೂ ಏನು ಮಾಡಬಲ್ಲೆವುಎಂದು ಜನರೂ ಸುಮ್ಮನಾದರು.

ನಿಜವೆಂದರೆ, ರೋಹಿಲ್ಲಾಗೆ ಯಾವ ಹೆಂಡತಿಯೂ ಇರಲಿಲ್ಲ. ಖುರಾನನ್ನು ಚೆನ್ನಾಗಿ ಬಲ್ಲ ಅವನು ಅದನ್ನು ಜೋರಾಗಿ ಓದುತ್ತಿದ್ದ. ಬಾಬಾಗೆ ಅವನ ಪ್ರಾರ್ಥನೆಗಳಿಂದ, ಅವನಮೇಲೆ ಪ್ರೀತಿ. ಬಾಬಾ ಹೇಳುತ್ತಿದ್ದರು, "ಅವನ ರೋಗಿಷ್ಠ ಮನಸ್ಸೇ ಅವನ ಹೆಂಡತಿ. ಅವನು ಖುರಾನು ಓದುತ್ತಿದ್ದರೆ ಅವಳು ಅವನನ್ನು ಹಿಂಸಿಸುವುದಿಲ್ಲ." ಅದರಿಂದಲೇ ಅವರು ಅವನನ್ನು ಬೈಯುತ್ತಿರಲಿಲ್ಲ.

ಬಾಬಾರ ಮನಮುಟ್ಟುವ ಉಪದೇಶಗಳು

ಒಂದುದಿನ ಮಧ್ಯಾಹ್ನ ಆರತಿಯಾದಮೇಲೆ, ಜನರೆಲ್ಲ ಮನೆಗೆ ಹಿಂತಿರುಗುವಾಗ, ಬಾಬಾ ಹೇಳಿದರು, "ನೆನಪಿಡಿ. ನೀವು ಎಲ್ಲಿಯೇ ಇರಿ. ಏನೇ ಮಾಡುತ್ತಿರಿ. ನನಗೆ ಅದು ತಿಳಿಯುತ್ತದೆ. ಎಲ್ಲೆಲ್ಲೂ ನಾನೇ ಇದ್ದೇನೆ. ನಾನು ನಿಮ್ಮೆಲ್ಲರಲ್ಲೂ ಇದ್ದೇನೆ. ನನ್ನಿಂದಲೇ ಸಕಲ ಜಗತ್ತು ನಡೆಯುವುದು. ನಾನೇ ಸೃಷ್ಟಿಕರ್ತ. ಪಾಲಿಸುವವನು. ಲಯಕರ್ತ. ನನ್ನನ್ನು ನಂಬಿ, ನನ್ನನ್ನೇ ಧ್ಯಾನಿಸುವವರಿಗೆ ಯಾವ ಕಷ್ಟಗಳೂ ಬರುವುದಿಲ್ಲ. ನನ್ನನ್ನು ಮರೆತವರನ್ನು ಮಾಯೆ ಮುಸುಕುತ್ತದೆ. ಪ್ರಪಂಚ ನನ್ನದೊಂದು ರೂಪವಷ್ಟೇ." ತಾವೇ ದೇವರೆಂದು ಬಾಬಾ ಹೀಗೆ ಸೂಚಿಸಿದರು.

ಸಂತರಿಗೂ, ಸದ್ಗುರುವಿಗೂ, ದೇವರಿಗೂ, ಏನೂ ವ್ಯತ್ಯಾಸವಿಲ್ಲ. ಸಾಯಿಯೇ ಸದ್ಗುರು. ಸಾಯಿ ಎಲ್ಲರಲ್ಲೂ ಇದ್ದಾರೆ. ಎಲ್ಲರೂ ಸಾಯಿಯಲ್ಲಿ ಇದ್ದಾರೆ. ಆತ ಅವತರಿಸಿದ್ದು ಲೋಕೋದ್ಧಾರಕ್ಕಾಗಿಯೇ! ಆತನಲ್ಲಿ, ಅಂದರೆ ಸದ್ಗುರುತತ್ತ್ವದಲ್ಲಿ, ಲೀನವಾಗಬೇಕೆಂದರೆ ಸದಾ ಸರ್ವದಾ ಗುರುವಿನ ಗುಣಗಾನ ಮಾಡುತ್ತಾ, ಆತನ ಸ್ತೋತ್ರಗಳನ್ನು ಹಾಡುತ್ತಾ, ಅತನ ಮಾತುಗಳನ್ನು ಕೇಳುತ್ತಾ, ಮನನಮಾಡುತ್ತಾ, ಆತನ ಸೇವೆಯಲ್ಲೇ ನಿರತರಾಗಿಹೋಗಬೇಕು. ಹೀಗೆ ನಿರತರಾದವರಿಗೆ ಸದಾಕಾಲವೂ ಸುಖ ಶಾಂತಿಗಳು ಅನುಭವವಾಗಿ, ಸದಾ ಜೊತೆಯಲ್ಲೇ ಇರುತ್ತವೆ. ಪರಿಯ ಉಪದೇಶವನ್ನು ಕೇಳಿದ ಹೇಮಾಡ್ ಪಂತ್ ತಮ್ಮ ಜೀವಿತಕಾಲವನ್ನೆಲ್ಲಾ ಬಾಬಾರ ಸೇವೆಯಲ್ಲೇ ಕಳೆಯಬೇಕೆಂದು ನಿರ್ಧರಿಸಿಕೊಂಡರು.

ಅತಿ ಸ್ವಲ್ಪ ಕಾಲದಲ್ಲೇ, ಬಾಬಾರು ಚಿಂಚಿಣೀಕರರಿಗೆ ಹೇಳಿದ್ದ ಮಾತುಗಳು ನಿಜವಾಗಿ, ಹೇಮಾಡ್ ಪಂತರಿಗೆ ಮತ್ತೊಂದು ಸರ್ಕಾರಿ ನೌಕರಿ ಸಿಕ್ಕಿದರೂ ಅದು ಬಹಳ ಕಾಲವಿರಲಿಲ್ಲ. ತದನಂತರ ಹೇಮಾಡ್ ಪಂತರು ಪೂರ್ಣ ಸ್ವತಂತ್ರರಾಗಿ ತಮ್ಮ ಶೇಷ ಜೀವನವನ್ನೆಲ್ಲಾ ಬಾಬಾರ ಸೇವೆಗೋಸ್ಕರವಾಗಿಯೇ ಮುಡುಪಾಗಿಟ್ಟರು.

ಎಲ್ಲಕ್ಕೂ ಅತೀತನಾಗಿ ಇರುವ ದೇವರಿಗೆ ಅನಂತ ರೂಪಗಳು. ಪ್ರಪಂಚ ಅವನ ಒಂದು ರೂಪವಷ್ಟೆ. ಅವನನ್ನು ಪೂಜಿಸಲು ಅನೇಕ ವಿಧಗಳಿದ್ದರೂ ಅದರಲ್ಲಿ ಬಹು ಮುಖ್ಯವಾದವು - ಏಳು. ಅವು ವಿಗ್ರಹ, ವೇದಿಕೆ, ಅಗ್ನಿ, ಸೂರ್ಯ, ನೀರು, ಬ್ರಾಹ್ಮಣ ಮತ್ತು ಗುರು. ಗುರುವನ್ನು ಪೂಜಿಸುವುದೇ ಅತ್ಯಂತ ಶ್ರೇಷ್ಠ. ಜಗದ್ಗುರುವಾದ ಕೃಷ್ಣ ಕೂಡಾ, ಸಾಂದೀಪನಿ ಗುರುಗಳನ್ನು ಆಶ್ರಯಿಸಿ ಉಪದೇಶ ಹೊಂದಿದ. ಅಂತಹ ಗುರುವಾದ ಬಾಬಾರ ಕಥೆಗಳನ್ನು ಕೇಳಿ, ಪುನೀತರಾಗಿ. ಅವು ಕಷ್ಟಗಳಿಗೆಲ್ಲಾ ಪರಿಹಾರದ ದಾರಿಯನ್ನು ತೋರಿಸುತ್ತವೆ. ಬಾಬಾರ ಬಳಿಗೆ ಹೇಮಾಡ್ ಪಂತ್ ಬಂದು ಸೇರಿದ್ದು ಒಂದು ನಿಘೂಢ ಘಟನೆ. ಅದೂ ಅವರ ಲೀಲೆಯೇ! ಹಾಗಾಗದೇ ಇದ್ದಿದ್ದರೆ ಸಚ್ಚರಿತ್ರೆಯೇ ಇರುತ್ತಿರಲಿಲ್ಲ. ಅಂತಹ ಸಚ್ಚರಿತ್ರೆಯನ್ನು ಓದುವವರೂ, ಅದರ ಮನನಮಾಡುವವರೂ, ಪುಣ್ಯವಂತರು! ವ್ರತಗಳು, ಉಪವಾಸಗಳು, ತೀರ್ಥಯಾತ್ರೆಗಳು ಅನವಶ್ಯಕ. ಸಚ್ಚರಿತ್ರೆಯ ಪಠನವೇ ಸಾಕು. ಎಲ್ಲಿಯೇ ಇರಿ, ಏನೇ ಮಾಡುತ್ತಿರಿ, ಸದಾಕಾಲ ಸಾಯಿ ಮನಸ್ಸಿನಲ್ಲಿ ಸ್ಥಿರವಾಗಿರಲಿ.

ಇದರೊಡನೆ ಸಾಯಿ ಬಾಬಾರ ಅನುಮತಿ ಮತ್ತು ಭರವಸೆ ಎನ್ನುವ ಮೂರನೆಯ ಅಧ್ಯಾಯ ಮುಗಿಯಿತು. ಮುಂದಿನ ಅಧ್ಯಾಯದಲ್ಲಿ ಹೇಮಾಡ್ ಪಂತ್ ಸಂತರ ಧ್ಯೇಯ, ಸಾಯಿ ಶಿರಡಿಯಲ್ಲಿ ಪ್ರತ್ಯಕ್ಷವಾದದ್ದು, ವಿಠಲನಂತೆ ಕಾಣಿಸಿಕೊಂಡದ್ದು, ದಾಸಗಣುವಿನ ಪ್ರಯಾಗಸ್ನಾನ ಇತ್ಯಾದಿ ವಿಷಯಗಳನ್ನು ಹೇಳುತ್ತಾರೆ.

||ಶ್ರೀ ಸದ್ಗುರು ಸಾಯಿನಾಥಾರ್ಪಣಮಸ್ತು||ಶುಭಂ ಭವತು||
||ಓಂ ಶಾಂತಿಃ ಶಾಂತಿಃ ಶಾಂತಿಃ||

No comments:

Post a Comment