Thursday, December 29, 2011

||ಇಪ್ಪತ್ತನಾಲ್ಕನೆಯ ಅಧ್ಯಾಯ||


||ಶ್ರೀ ಸಾಯಿ ಸಚ್ಚರಿತ್ರೆ||
||ಇಪ್ಪತ್ತನಾಲ್ಕನೆಯ ಅಧ್ಯಾಯ||
||ಬಾಬಾರ ವಿನೋದ ಲೀಲೆಗಳು||
ಶ್ರೀ ಗಣೇಶಾಯ ನಮಃ ಶ್ರೀ ಸರಸ್ವತಯೇ ನಮಃ
ಶ್ರೀ ವೆಂಕಟೇಶಾಯ ನಮಃ ಶ್ರೀ ಸಾಯಿನಾಥಾಯ ನಮಃ
ಶ್ರೀ ಸದ್ಗುರುಭ್ಯೋನ್ನಮಃ

ಅಧ್ಯಾಯದಲ್ಲಿ ಹೇಮಾಡ್ ಪಂತ್, ಬಾಬಾರ ಬುದ್ಧಿಮತ್ತೆ ಹಾಗೂ ಅವರ ಹಾಸ್ಯಪ್ರಜ್ಞೆ ಮತ್ತು ಇತರ ವಿಷಯಗಳನ್ನು ಹೇಳುತ್ತಾರೆ.

ಬಾಬಾರ ಹಾಸ್ಯಪ್ರಜ್ಞೆ

ಹಾಸ್ಯವೆಂದರೆ ಎಲ್ಲರಿಗೂ ಬಹಳ ಇಷ್ಟವೇ! ಆದರೆ ಯಾರೂ ತಾವೇ ಹಾಸ್ಯಕ್ಕೆ ಗುರಿಯಾಗಲು ಇಷ್ಟಪಡುವುದಿಲ್ಲ. ಆದರೆ ಬಾಬಾ ಹಾಸ್ಯೋಕ್ತಿಗಳನ್ನು ಹೇಳಿದರೆ ಅದು ಬೇರೆ ರೀತಿಯಲ್ಲೇ ಇರುತ್ತಿತ್ತು. ಅವರು ಹಾಸ್ಯೋಕ್ತಿಗಳನ್ನು ಹೇಳುವ ರೀತಿ ವಿಶಿಷ್ಟವಾದದ್ದು. ಕೈಕಾಲು ಆಡಿಸುತ್ತಾ, ಮುಖ ಭಾವಗಳನ್ನು ತೋರಿಸುತ್ತಾ ಅವರು ಹೇಳಿದ ಹಾಸ್ಯೋಕ್ತಿಗಳು ಯಾರಿಗೂ ನೋವನ್ನುಂಟು ಮಾಡುತ್ತಿರಲಿಲ್ಲ. ಅದರ ಬದಲು ಅದು ಶಿಕ್ಷಣೋಕ್ತಿಯಂತಿರುತ್ತಿತ್ತು. ಭಕ್ತರು ಹಾಸ್ಯೋಕ್ತಿಗಳ ಹಿಂದಿನ ಭಾವವನ್ನು ಅರ್ಥಮಾಡಿಕೊಂಡು, ತಮ್ಮ ಅವಗುಣಗಳನ್ನು ತಿದ್ದಿಕೊಳ್ಳಲು ಪ್ರಯತ್ನಮಾಡುತ್ತಿದ್ದರು. ತನ್ನ ಭಕ್ತರ ಒಳಿತಿಗಾಗಿ ಬಾಬಾ ಉಪಯೋಗಿಸುತ್ತಿದ್ದ ರೀತಿಯೊಂದಿದು.

ಅವರ ಕಥೆಗಳನ್ನು, ಲೀಲೆಗಳನ್ನು ಕೇಳುವುದು, ಓದುವುದು, ಅವನ್ನು ಅರ್ಥಮಾಡಿಕೊಂಡು ಮನನ ಮಾಡಿಕೊಳ್ಳುವುದು, ಆತ್ಮ ಸಾಕ್ಷಾತ್ಕಾರದ ದಾರಿಯಲ್ಲಿ ನಾವು ಇಡುವ ದಿಟ್ಟ ಹೆಜ್ಜೆಗಳು. ಅವರೊಡನೆಯೇ ಬದುಕಿ, ಅವರ ಸೇವೆಯಲ್ಲೇ ಜೀವನ ಸವೆಸಿದ ಶ್ಯಾಮಾ, ಹೇಮಾಡ್ ಪಂತ್, ಮಹಲ್ಸಾಪತಿಗಳ ಹಾಗೆ ನಾವು ಅದೃಷ್ಟಶಾಲಿಗಳಾಗದೇ ಇರಬಹುದು. ಆದರೆ ಅವರ ಲೀಲೆಗಳನ್ನು ಕಣ್ಣಿಗೆ ಕಟ್ಟುವಂತೆ ವಿವರಿಸುವ ಶ್ರೀ ಸಾಯಿ ಸಚ್ಚರಿತ್ರೆಯಂತಹ ಲೀಲಾಮೃತವನ್ನು ಪಡೆದಿರುವ ನಾವೂ ಧನ್ಯರೇ! ಅಂತಹ ಲೀಲೆಗಳನ್ನು ನಮ್ಮ ಅಂತಶ್ಚಕ್ಷುವಿಗೆ ತಂದುಕೊಂಡು, ಅವುಗಳಲ್ಲೇ ಲೀನರಾಗಿ, ತನ್ನ ಭಕ್ತರಿಗೆ, ಅವರು ಕೇಳಿದ್ದನ್ನೆಲ್ಲಾ ಕೊಟ್ಟು, ಅವರ ಒಳಿತಿಗೆ ತಾನು ಕೊಡಬೇಕೆಂದಿರುವುದನ್ನು ಅವರೇ ಕೇಳುವವರೆಗೂ ಜೋಪಾನಮಾಡಿದ, ದೇವ ದೇವನನ್ನು ಪೂಜೆಮಾಡೋಣ. ದೇವದೇವ, ದಯಾಸಾಗರ, ಪ್ರೇಮಮೂರ್ತಿ, ಸಾಯಿಬಾಬಾರ ಪಾದತಲದಲ್ಲಿ ಶಿರಸ್ಸಿಟ್ಟು ನಮಸ್ಕರಿಸಿ, ಆತನ ಅನುಗ್ರಹವನ್ನು ಬೇಡಿಕೊಳ್ಳೋಣ.

ಕಡಲೆ ಕಾಳಿನ ಲೀಲೆ

ಪ್ರತಿ ಭಾನುವಾರ ಶಿರಡಿಯಲ್ಲಿ ಸಂತೆ ಇರುತ್ತಿತ್ತು. ಸಂತೆಯಾದದ್ದರಿಂದ ಸುತ್ತಮುತ್ತಲ ಹಳ್ಳಿಯವರೂ ಬಂದು ಸೇರಿ, ಕೊಳ್ಳುವ, ಮಾರುವ ಜನರಿಂದ ಶಿರಡಿ ತುಂಬಿರುತ್ತಿತ್ತು. ಮಸೀದಿಯಂತೂ, ಮಧ್ಯಾಹ್ನ ಜನರಿಂದ ಕಿಕ್ಕಿರಿಯುತ್ತಿತ್ತು. ಅಂತಹ ಒಂದು ಭಾನುವಾರ, ಹೇಮಾಡ್ ಪಂತ್ ಬಾಬಾರ ಚರಣಗಳನ್ನು ಹರಿನಾಮೋಚ್ಚಾರಣೆ ಮಾಡುತ್ತಾ, ಮೃದುವಾಗಿ ನೀವುತ್ತಾ ಕುಳಿತಿದ್ದರು. ಶ್ಯಾಮಾ ಬಾಬಾರ ಎಡಗಡೆಯಲ್ಲಿ, ವಾಮನ ರಾವ್ ಬಾಬಾರ ಬಲಗಡೆಯಲ್ಲಿ ಕುಳಿತಿದ್ದರು. ಬಾಪೂಸಾಹೇಬ್ ಬೂಟಿ, ಕಾಕಾಸಾಹೇಬ್ ದೀಕ್ಷಿತ್ ಮುಂತಾದವರೂ ಅಲ್ಲಿ ಸೇರಿದ್ದರು. ಹೇಮಾಡ್ ಪಂತರ ಕಡೆಯೇ ನೋಡುತ್ತಾ, ಇದ್ದಕಿದ್ದಹಾಗೇ ಶ್ಯಾಮ ಜೋರಾಗಿ ನಕ್ಕು, "ನೋಡು ನಿನ್ನ ಕೋಟಿಗೆ ಕಾಳುಗಳು ಅಂಟಿಕೊಂಡಿವೆ" ಎಂದು ಹೇಳುತ್ತಾ, ಹೇಮಾಡ್ ಪಂತ್ ಕೋಟಿನ ತೋಳನ್ನು ಮುಟ್ಟಿದರು. ಏನೆಂದು ನೋಡಲು, ಹೇಮಾಡ್ ಪಂತ್ ತಮ್ಮ ಎಡಕೈಯನ್ನು ಮುಂದಕ್ಕೆ ಝಾಡಿಸಿದರು. ಆಶ್ಚರ್ಯವೋ ಎಂಬಂತೆ ಹಲವಾರು ಕಾಳುಗಳು, ೨೫ ಇರಬಹುದು, ಕೆಳಕ್ಕೆ ಬಿದ್ದವು. ಅಲ್ಲಿದ್ದವರು ಅದನ್ನೆಲ್ಲ ಆರಿಸಿಕೊಂಡರು. ಇದೊಂದು ಚರ್ಚೆಯ ವಿಷಯವಾಯಿತು. ಹೇಮಾಡ್ ಪಂತರ ಕೋಟಿನ ತೋಳಿನಲ್ಲಿ ಕಾಳುಗಳು ಸೇರಿಕೊಂಡು, ಅಲ್ಲಿ ಅಷ್ಟುಹೊತ್ತು ಹೇಗೆ ಕುಳಿತಿದ್ದವು ಎಂದು ಜನ ಆಶ್ಚರ್ಯಪಟ್ಟರು. ಹೇಮಾಡ್ ಪಂತರಿಗೂ ಅದರ ತಲೆಬುಡವೇ ಅರ್ಥವಾಗಲಿಲ್ಲ. ಪ್ರತಿಯೊಬ್ಬರೂ ತಮತಮಗೆ ತೋಚಿದಂತೆ ಹೇಳುತ್ತಿದ್ದರು. ಆದರೆ ಯಾರಿಗೂ "ಇದು ಹೀಗೇ" ಎಂದು ಹೇಳಲು ಸಾಧ್ಯವಾಗಲಿಲ್ಲ. ಆಗ ಬಾಬಾ ಹಾಸ್ಯವಾಗಿ, "ಇಂದು ಸಂತೆ. ಕಡಲೆ ಕಾಳು ಕೊಂಡು, ತಿನ್ನುತ್ತಾ ಬಂದಿದ್ದಾನೆ. ಕಾಳುಗಳೇ ಅದಕ್ಕೆ ಸಾಕ್ಷಿ. ಇವನಿಗೆ ತಾನೊಬ್ಬನೇ ತಿನ್ನುವ ಕೆಟ್ಟ ಅಭ್ಯಾಸವೊಂದಿದೆ. ನನಗೆ ಗೊತ್ತು" ಎಂದರು. ಹೇಮಾಡ್ ಪಂತರು ಆಪಾದನೆಯಿಂದ ಕುಗ್ಗಿಹೋದರು. ತಮ್ಮನ್ನು ಸಮರ್ಥಿಸಿಕೊಳ್ಳುತ್ತಾ, "ಬಾಬಾ, ನಾನು ಯಾವಾಗಲೂ ಒಬ್ಬನೇ ತಿನ್ನುವುದಿಲ್ಲ. ಕೆಟ್ಟ ಗುಣವನ್ನು ನನ್ನ ಮೇಲೆ ಏಕೆ ಆರೋಪಿಸುತ್ತಿದ್ದೀರಿ? ನಾನು ಇದುವರೆಗೂ ಶಿರಡಿಯ ಸಂತೆಗೆ ಹೋಗಿಲ್ಲ. ಇಂದೂ ಹೋಗಿಲ್ಲ. ಹಾಗಿದ್ದಾಗ, ಕಡಲೆ ಕಾಳು ಕೊಳ್ಳುವುದಾದರೂ ಹೇಗೆ? ತಿನ್ನುವುದಾದರೂ ಹೇಗೆ? ನಾನು ಒಂಟಿಯಾಗಿ ಏನನ್ನೂ ತಿನ್ನುವುದಿಲ್ಲ. ತಿನ್ನುವಾಗಲೆಲ್ಲಾ ನನ್ನ ಜೊತೆಯಲ್ಲಿದ್ದವರಿಗೆ ಕೊಟ್ಟೇ ತಿನ್ನುತ್ತೇನೆ" ಎಂದರು. ಬಾಬಾ ಮತ್ತೆ ಅವರನ್ನು ಕೆಣಕುತ್ತಾ, "ನಿನ್ನ ಜೊತೆಯಲ್ಲಿ ಯಾರಾದರೂ ಇದ್ದರೆ ಕೊಡುತ್ತೀಯೆ. ಯಾರೂ ಇಲ್ಲದಿದ್ದರೆ ಏನು ಮಾಡುತ್ತೀಯೆ? ತಿನ್ನುವ ಮೊದಲು ನನ್ನನ್ನು ನೆನಸಿಕೊಳ್ಳುತ್ತೀಯಾ? ನಾನು ಯಾವಾಗಲೂ ನಿನ್ನ ಜೊತೆಯಲ್ಲೇ ಇರುತ್ತೇನಲ್ಲವೇ? ನನಗೆ ಕೊಟ್ಟು ಆಮೇಲೆ ನೀನು ತಿನ್ನುತ್ತೀಯಾ?" ಎಂದರು.

ನೀತಿ

ಇದರಿಂದ ಬಾಬಾ ನಮಗೆ ಕೊಡುವ ಬುದ್ಧಿವಾದ-ನೀವು ಏನನ್ನೇ ತಿನ್ನಿ. ಆದರೆ ಅದನ್ನು ತಿನ್ನುವುದಕ್ಕೆ ಮುಂಚೆ ನನಗೆ ಅರ್ಪಿಸಿ ತಿನ್ನಿ. ಇಲ್ಲಿ, ತಿನ್ನುವುದು ಎಂದರೆ ಬರಿಯ ತಿನುಭಂಡಾರಗಳಿಗೆ ಮಾತ್ರ ಸೀಮಿತವಲ್ಲ. ತಿನ್ನುವುದು ಎಂದರೆ ಇಂದ್ರಿಯ ಪ್ರಿಯಾರ್ಥವಾಗಿ ಮಾಡುವ ಎಲ್ಲವೂ ಎಂದರ್ಥ. ಹಾಗೆ ಮಾಡುವಾಗ ಅದನ್ನು ಬಾಬಾರಿಗೆ ಅರ್ಪಿಸಿ, ಆಮೇಲೆ ಮಾಡಿ. ಇಂದ್ರಿಯಗಳು ಉಪಭೋಗಿಸುವ ಮುಂಚೆ, ಅದನ್ನು ಬಾಬಾರಿಗೆ ಅರ್ಪಣೆ ಮಾಡಿದರೆ, . ಅರ್ಪಣೆಗೆ ಅರ್ಹವೇ? . ಉಪಭೋಗಿಸಲು ಅರ್ಹವೇ? ಎಂಬ ಯೋಚನೆ ಬರುತ್ತದೆ. ಬಾಬಾರಿಗೆ ಕೊಡಲು ಅರ್ಹವಲ್ಲದ್ದು, ನಮಗೂ ಅರ್ಹವಲ್ಲ ಎಂಬುದು ಖಚಿತವಾಗುತ್ತದೆ. ಹಾಗೆ ನಿಧಾನವಾಗಿ ಅಹಿತವಾದದ್ದನ್ನೆಲ್ಲಾ ವರ್ಜಿಸುತ್ತಾ, ಬರಿಯ ಹಿತವಾದದ್ದನ್ನು ಮಾತ್ರ ಮಾಡುವ, ತಿನ್ನುವ ಅಭ್ಯಾಸವಾಗುತ್ತದೆ. ಅದರಿಂದ ನಮ್ಮ ಮನಸ್ಸು ಶುದ್ಧವಾಗುತ್ತದೆ. ಶುದ್ಧವಾದ ಮನಸ್ಸು ದುರ್ಗುಣಗಳನ್ನು ಬಿಟ್ಟು, ಸುಗುಣಗಳನ್ನೇ ಹಿಡಿಯುತ್ತದೆ. ನೈತಿಕ ಬಲ ವೃದ್ಧಿಯಾಗಿ, ಅದನ್ನು ಬೆಳೆಸಿಕೊಳ್ಳಲು ಅವಕಾಶಮಾಡಿಕೊಟ್ಟ ಬಾಬಾರಲ್ಲಿ, ನಮ್ಮ ಶ್ರದ್ಧಾ ಭಕ್ತಿಗಳು ಬೆಳೆಯುತ್ತವೆ. ಅವಗುಣಗಳೆಲ್ಲಾ ಒಂದೊಂದಾಗಿ ಬಿಟ್ಟುಹೋಗುತ್ತಾ, ನಾವು ಹೋಗಬೇಕಾದ ಆತ್ಮಸಾಕ್ಷಾತ್ಕಾರದ ಹಾದಿ, ಸುಗಮವಾಗುತ್ತಾ ಬರುತ್ತದೆ. ಗುರುವಿಗೆ ಸನ್ನಿಹಿತರಾಗುತ್ತಾ ಹೋಗುತ್ತೇವೆ. ಆಗ ಗುರು-ದೈವ ಎಂಬ ಭಿನ್ನತೆ ಕಳೆದು, ತೃಪ್ತಿ ಆನಂದಗಳು ನಮ್ಮದಾಗುತ್ತವೆ. ಮನೋಭಾವವನ್ನೇ ಉಪನಿಷತ್ತಿನಲ್ಲಿ ಹೀಗೆ ಹೇಳಿದ್ದಾರೆ, "ಯಾವಾಗ ಪಂಚ ಜ್ಞಾನೇಂದ್ರಿಯಗಳು ಮನಸ್ಸಿನೊಡನೆ ಶಾಂತವಾಗಿರುತ್ತದೋ, ಆಗ ಬುದ್ಧಿಯೂ ಅಚಂಚಲವಾಗುತ್ತದೆ. ಅಂತಹ ಸ್ಥಿತಿಯನ್ನು ಪರಮಗತಿ ಎನ್ನುತ್ತಾರೆ."

ಒಟ್ಟಿನಲ್ಲಿ ಹೇಳುವುದಾದರೆ, ನಾವು ಇಂದ್ರಿಯ ಪ್ರಿಯಾರ್ಥವಾಗಿ ಮಾಡುವ ಯಾವುದೇ ಕೆಲಸವಾದರೂ, ಅದನ್ನು ಬಾಬಾರಿಗೆ ಅರ್ಪಿಸಿ ಮಾಡಬೇಕು. ನಮ್ಮ ಮನಸ್ಸಿಗೆ ರೀತಿಯ ಶಿಕ್ಷಣ ಕೊಟ್ಟರೆ, ಅದು ನಮಗೆ ಸದಾ ಬಾಬಾರ ನೆನಪನ್ನು ಕೊಡುತ್ತದೆ. ಇದರಿಂದ ಬಾಬಾರನ್ನು ಕುರಿತ ನಮ್ಮ ಧ್ಯಾನವೂ, ವೃದ್ಧಿ ಆಗುತ್ತದೆ. ಬಾಬಾರ ಸಗುಣ ಮೂರ್ತಿ, ನಮ್ಮ ಕಣ್ಣ ಮುಂದೆ ಸದಾ ನಿಲ್ಲುತ್ತದೆ. ಅವರ ಮೂರ್ತಿಯನ್ನು ನೋಡುತ್ತಾ, ಅದನ್ನೇ ಧ್ಯಾನಿಸುತ್ತಾ ಹೋದಂತೆಲ್ಲಾ, ನಮಗೆ ಪ್ರಪಂಚದ ಅರಿವು ಕಡಮೆಯಾಗುತ್ತಾ ಹೋಗುತ್ತದೆ. ಅಂತಹ ಅರಿವು ಕಡಮೆಯಾಗುತ್ತಾ, ಆಗುತ್ತಾ, ಶಾಂತಿ ಆನಂದಗಳೇ ನಮ್ಮ ತವರಾಗುತ್ತವೆ.

ಸುದಾಮನ ಕಥೆ

ಮೇಲಿನ ಕಥೆಯನ್ನು ಹೇಳುವಾಗ ಹೇಮಾಡ್ ಪಂತರಿಗೆ ಇದೇ ನೀತಿ, ಎಂದರೆ ಇಂದ್ರಿಯಾರ್ಥವಾಗಿ ಮಾಡುವ ಯಾವುದೇ ಕೆಲಸವಾಗಲಿ ಮೊದಲು ದೇವರಿಗೆ ಅರ್ಪಿಸಿ ನಂತರ ಮಾಡು, ಎಂಬುವ ನೀತಿಯನ್ನು ಹೇಳುವ ಸುದಾಮನ ಕಥೆ ನೆನಪಿಗೆ ಬಂದು, ಅದನ್ನು ನಿರೂಪಿಸಿದ್ದಾರೆ.

ಕೃಷ್ಣ, ಅಣ್ಣ ಬಲರಾಮನೊಂದಿಗೆ ಸಾಂದೀಪನಿ ಗುರುಗಳ ಗುರುಕುಲದಲ್ಲಿದ್ದಾಗ ನಡೆದ ಪ್ರಸಂಗವಿದು. ಸುದಾಮ ಅವರ ಸಹಪಾಠಿ. ಒಂದುದಿನ ಗುರುಪತ್ನಿ ಕೃಷ್ಣ ಬಲರಾಮರನ್ನು ಸೌದೆ ತರಲು ಕಾಡಿಗೆ ಕಳುಹಿಸಿ, ಸ್ವಲ್ಪ ಹೊತ್ತಾದ ಮೇಲೆ ಸುದಾಮನ ಕೈಯ್ಯಲ್ಲಿ ಮೂವರಿಗೂ ಆಗುವಷ್ಟು ಕಡಲೆ ಕಾಳು ಕೊಟ್ಟು ಕಳುಹಿಸಿದರು. ಸುದಾಮ ಅವರನ್ನು ಕಾಡಿನಲ್ಲಿ ಭೇಟಿ ಮಾಡಿದಾಗ, ಕೃಷ್ಣ, "ನನಗೆ ಬಾಯಾರಿಕೆಯಾಗಿದೆ. ಸ್ವಲ್ಪ ನೀರು ತೆಗೆದುಕೊಂಡು ಬಾ" ಎಂದು ಸುದಾಮನಿಗೆ ಹೇಳಿದ. ಅದಕ್ಕೆ ಸುದಾಮ, "ಬರಿಯ ಹೊಟ್ಟೆಯಲ್ಲಿ ನೀರು ಕುಡಿಯಬಾರದು. ಸ್ವಲ್ಪ ಸುಧಾರಿಸಿಕೋ" ಎಂದು ಹೇಳಿದ. ಅವರಿಬ್ಬರೂ ಒಂದು ಮರದ ಕೆಳಗೆ ಕುಳಿತರು. ದಣಿವಿನಿಂದ ಕೃಷ್ಣ, ಸುದಾಮನ ತೊಡೆಯಮೇಲೆ ಮಲಗಿ ನಿದ್ದೆ ಹೋದ. ಅವನು ನಿದ್ರೆಮಾಡುತ್ತಿದ್ದಾನೆಂದುಕೊಂಡ ಸುದಾಮ, ಕಡಲೆ ಕಾಳು ತೆಗೆದು ತಿನ್ನಲು ಆರಂಭಿಸಿದ. ನಿದ್ರೆಮಾಡುವವನಂತೆ ನಟಿಸುತ್ತಾ ಕೃಷ್ಣ ಸುದಾಮನನ್ನು ಕೇಳಿದ, "ಅಣ್ಣಾ, ಏನು ತಿನ್ನುತ್ತಿದ್ದೀಯೆ?" ಅದಕ್ಕೆ ಸುದಾಮ, "ತಿನ್ನುವುದಕ್ಕೇನಿದೆ? ಚಳಿಯಿಂದ ನಡುಗುತ್ತಿದ್ದೇನೆ. ವಿಷ್ಣುಸಹಸ್ರನಾಮ ಹೇಳುವುದಕ್ಕೂ ಆಗದೇ ಹೋಗುತ್ತಿದೆ"ಎಂದ. ಕೃಷ್ಣ, "ಹಾಗೋ. ಸರಿ ಬಿಡು. ಇನ್ನೊಬ್ಬರಿಗೆ ಸೇರಿದ್ದನ್ನು ತಿನ್ನುತ್ತಿರುವ ಒಬ್ಬನ ಕನಸೊಂದನ್ನು ನಾನು ಕಂಡೆ. ಅವನನ್ನು ಕೇಳಿದಾಗ ಅವನು ಏನು ಮಣ್ಣು ತಿನ್ನಲೇ? ಎಂದ. ಮೊದಲು ಕೇಳಿದವನುಅದು ಹಾಗೇ ಆಗಲಿಎಂದ. ಅಣ್ಣಾ, ಅದೊಂದು ಕನಸು ಅಷ್ಟೇ. ನನಗೆ ಕೊಡದೆ ನೀನು ಏನೂ ತಿನ್ನುವುದಿಲ್ಲವೆಂದು ನನಗೆ ಗೊತ್ತಿದೆ" ಎಂದ. ಕೃಷ್ಣನ ಸರ್ವಜ್ಞತ್ವದ ಬಗ್ಗೆ ಸುದಾಮನಿಗೆ ಸ್ವಲ್ಪಮಾತ್ರ ತಿಳಿದಿದ್ದರೂ, ಅವನು ರೀತಿ ನಡೆದುಕೊಳ್ಳುತ್ತಿರಲಿಲ್ಲ. ಕೃಷ್ಣನ ಅತಿ ಸನ್ನಿಹಿತ ಸ್ನೇಹಿತನಾಗಿದ್ದರೂ, ತನ್ನ ಜೀವಮಾನವನ್ನೆಲ್ಲಾ ಅವನು ಕಡುಬಡತನದಲ್ಲೇ ಕಳೆಯಬೇಕಾಯಿತು. ನಂತರ, ಅವನ ಹೆಂಡತಿಯ ಸ್ವಂತ ಶ್ರಮದಿಂದ ಸಂಪಾದಿಸಿದ ಒಂದು ಹಿಡಿ ಅವಲಕ್ಕಿಯನ್ನು ಸುದಾಮ, ಕೃಷ್ಣನಿಗೆ ಅರ್ಪಿಸಿದ. ಕೃಷ್ಣ ಸ್ವರ್ಣನಗರವನ್ನೇ ಉದಾರವಾಗಿ ಕರುಣಿಸಿದ. ಇದು ಬಾಬಾ ಹೇಳಿದ ನೀತಿ, ನಾವು ಯಾವುದೇ ವಸ್ತುವನ್ನಾದರೂ ಉಪಯೋಗಿಸುವ ಮೊದಲು ಅದನ್ನು ದೇವರಿಗೆ ಅರ್ಪಿಸಿದ ಮೇಲೆ ಉಪಭೋಗಿಸಬೇಕು ಎಂಬುದಕ್ಕೆ ಸರಿಯಾಗಿ ತಾಳೆಯಾಗುತ್ತದೆ.

ಅಣ್ಣಾ ಚಿಂಚಿಣೀಕರ್ ಮತ್ತು ಮೌಸೀಬಾಯಿ

ಇಬ್ಬರ ಮಧ್ಯೆ ಹುಟ್ಟಿದ ಜಗಳದಲ್ಲಿ, ಬಾಬಾ ಶಾಂತಿದೂತನಂತೆ ಪ್ರವರ್ತಿಸಿ ಜಗಳವನ್ನು ಪರಿಹರಿಸಿದ, ಇನ್ನೊಂದು ಹಾಸ್ಯ ಪ್ರಸಂಗವನ್ನು ಹೇಮಾಡ್ ಪಂತ್ ಹೇಳುತ್ತಾರೆ. ದಾಮೋದರ್ ಘನಶ್ಯಾಮ್ ಬಾಬರೆ ಅಥವ ಅಣ್ಣಾ ಸಾಹೇಬ್ ಚಿಂಚಿಣೀಕರ್ ಒಬ್ಬ ದಿಟ್ಟನಾದ ಸೀದಾ ಸಾದಾ ಮನುಷ್ಯ. ಬಾಬಾರನ್ನು ಬಿಟ್ಟು ಇನ್ನು ಯಾರನ್ನೂ ಲಕ್ಷ್ಯಕ್ಕೆ ತರುತ್ತಿರಲಿಲ್ಲ. ನೇರವಾಗಿ ಮಾತನಾಡುವವರು. ಹೊರಗೆ ಆತ ಅಷ್ಟು ಒರಟಾಗಿ ಕಂಡರೂ, ಒಳಗೆ ಬಹಳ ಸಾಧು ಸ್ವಭಾವದವರು. ಅದರಿಂದಲೇ ಅವರು ಬಾಬಾರಿಗೆ ಸನ್ನಿಹಿತರಾಗಿದ್ದರು.

ವೇಣುಬಾಯಿ ಕೌಜಲಗಿ ಒಬ್ಬ ವಯಸ್ಸಾದ ಹೆಂಗಸು. ವಿಧವೆ. ಬಾಬಾರಲ್ಲಿ ಆತಿಶಯ ಪ್ರೀತಿಯಿದ್ದಾಕೆ. ಸಹೃದಯಿ. ಬಾಬಾ ಆಕೆಯನ್ನು ಮಾಯಿ ಎಂದು ಕರೆಯುತ್ತಿದ್ದರು. ಮಿಕ್ಕವರು ಆಕೆಯನ್ನು ಮೌಸಿಬಾಯಿ ಎನ್ನುತ್ತಿದ್ದರು. ಆಕೆ ಬಾಬಾರಿಗೆ ತನ್ನದೇ ಆದ ರೀತಿಯಲ್ಲಿ ಸೇವೆ ಮಾಡುತ್ತಿದ್ದಳು.

ಒಂದುದಿನ ಬಾಬಾ ಮಸೀದಿಯಲ್ಲಿ, ಕಟಕಟೆ ಮೇಲೆ ಎಡ ಕೈಯ್ಯೂರಿ ಕುಳಿತಿದ್ದರು. ಬಾಬಾರ ಹಿಂದೆ ನಿಂತು ಅಣ್ಣಾ ಅವರ ಎಡಕೈ ನೀವುತ್ತಿದ್ದರು. ಹಾಗೆ ನೀವುವಾಗ ಅವರ ತಲೆ ಅತ್ತಿತ್ತ ಆಡುತ್ತಿತ್ತು. ಮೌಸೀಬಾಯಿ ಬಾಬಾರ ಬಲಗಡೆ ಕುಳಿತು, ತನ್ನ ಎರಡೂ ಕೈಗಳನ್ನು ಬಾಬಾರ ಸೊಂಟದ ಸುತ್ತಲೂ ಸುತ್ತಿ, ಸೊಂಟ ನೀವುತ್ತಿದ್ದರು. ಹಾಗೆ ನೀವುವಾಗ, ಆಕೆಯ ತಲೆಯೂ ಹಾಗೆ ಹೀಗೆ ಆಡುತ್ತಿತ್ತು. ಹೀಗೆ ಇಬ್ಬರೂ ತಮ್ಮ ತಮ್ಮ ಸೇವೆ ಮಾಡುತ್ತಿದ್ದಾಗ, ಒಂದುಸಲ ಅಕಸ್ಮಾತ್ತಾಗಿ ಅವರಿಬ್ಬರ ತಲೆಗಳೂ ಬಹಳ ಹತ್ತಿರ ಬಂದವು. ಹಾಸ್ಯಪ್ರವೃತ್ತಿಯ ಹೆಂಗಸಾದ್ದರಿಂದ ಆಕೆ, "ತಲೆ ಬೆಳ್ಳಗಾದರೂ ಇನ್ನೂ ಅಣ್ಣಾ ತನ್ನ ಚೇಷ್ಟೆಗಳನ್ನು ಬಿಟ್ಟಿಲ್ಲ. ನನಗೆ ಮುತ್ತಿಡಲು ಪ್ರಯತ್ನಿಸುತ್ತಿದ್ದಾನೆ" ಎಂದಳು. ತನ್ನನ್ನು ತನ್ನ ಗುರುವಿನ ಎದುರು, ಯಾರೂ ಅಪಹಾಸ್ಯ ಮಾಡುವುದು, ಅಣ್ಣಾ ಸಾಹೇಬರಿಗೆ ಇಷ್ಟವಾಗಲಿಲ್ಲ. ಅದಕ್ಕೆ ಅವರು ಬಹಳ ಕೋಪಗೊಂಡು ಜೋರಾಗಿ ಹೇಳಿದರು, "ನಾನೇನು ಮೂರ್ಖನೆ, ನಿನಗೆ ಮುತ್ತಿಡಲು. ನನ್ನೊಡನೆ ಜಗಳವಾಡಲು ಕಾಲು ಕೆರೆಯುತ್ತಿದ್ದೀಯೆ." ಇದೇ ರೀತಿ ವಾಗ್ವಾದ ಸ್ವಲ್ಪ ಹೊತ್ತು ಮುಂದುವರೆಯಿತು. ಅಲ್ಲಿದ್ದವರೆಲ್ಲಾ ಹಾಸ್ಯದಿಂದ ಸಂತೋಷಗೊಂಡವರಾಗಿ, ಇಬ್ಬರನ್ನೂ ಉತ್ತೇಜಿಸುತ್ತಿದ್ದರು. ಅಷ್ಟರಲ್ಲಿ ಇಬ್ಬರನ್ನೂ ಸಮಾಧಾನಮಾಡುವಂತೆ ಬಾಬಾ, ಅತ್ಯಂತ ಮಧುರವಾಗಿ ಮಾತನಾಡುತ್ತಾ, "ಅಣ್ಣಾ, ನೀವೇಕೆ ಜಗಳ ಆಡುತ್ತಿದ್ದೀರಿ? ಮಗ ತಾಯಿಯನ್ನು ಮುತ್ತಿಟ್ಟುಕೊಳ್ಳುವುದರಲ್ಲಿ ತಪ್ಪೇನಿದೆ?" ಎಂದು ಕೇಳಿದರು. ಮಾತನ್ನು ಕೇಳಿ ಅವರಿಬ್ಬರ ಜೊತೆ ಅಲ್ಲಿದ್ದವರೆಲ್ಲ ಬಾಬಾರ ಹಾಸ್ಯವನ್ನು ಕಂಡು ಕೇಳಿ ನಕ್ಕು ಆನಂದಿಸಿದರು.

ಭಕ್ತರ ಮೇಲಿನ ಬಾಬಾರ ವಿಶ್ವಾಸದ ಅವಲಂಬನೆ

ಇನ್ನೊಂದುಸಲ ಮೌಸಿಬಾಯಿ ಬಾಬಾರ ಹೊಟ್ಟೆಯನ್ನು ಹಿಟ್ಟಿನಮುದ್ದೆಯೋ ಎಂಬಂತೆ ತನ್ನ ಶಕ್ತಿಯನ್ನೆಲ್ಲಾ ಉಪಯೋಗಿಸಿ ಮರ್ದಿಸುತ್ತಿದ್ದರು. ಅದೆಷ್ಟು ಜೋರಾಗಿ ಮರ್ದಿಸುತ್ತಿದ್ದರೆಂದರೆ, ಅಲ್ಲಿದ್ದವರೆಲ್ಲಾ ಬಾಬಾರ ಹೊಟ್ಟೆಯಲ್ಲಿರುವುದೆಲ್ಲಾ ಕಿತ್ತು ಹೊರಕ್ಕೆ ಬರುವುದೇನೋ ಎಂದು ಭಯಪಟ್ಟರು. ಅವರಲ್ಲಿ ಒಬ್ಬ, ಶಾಂತಾರಾಮ ಬಲವಂತ ನಾಚ್ನೆ ಎನ್ನುವ, ಬಾಬಾರಿಗೆ ಬಹು ಹತ್ತಿರವಾಗಿದ್ದ ಭಕ್ತ, ಧೈರ್ಯಮಾಡಿ, "ಮಾಯಿ. ಹುಶಾರು. ನೀವು ಮಾಡುತ್ತಿರುವುದನ್ನು ಸ್ವಲ್ಪ ಮೆತ್ತಗೆ ಮಾಡಿ. ಇಲ್ಲದಿದ್ದರೆ ಬಾಬಾರ ಹೊಟ್ಟೆಯಲ್ಲಿನ ಕರುಳು ಕಿತ್ತು ಬರಬಹುದು" ಎಂದ. ಅವನಿನ್ನೂ ಹೇಳಿ ಮುಗಿಸುತ್ತಿದ್ದ ಹಾಗೇ, ಬಾಬಾ ತಟಕ್ಕನೆ ಎದ್ದು, ಸಟ್ಕಾ ತೆಗೆದುಕೊಂಡು ಅಲ್ಲಿದ್ದ ಒಂದು ಕಂಭದ ಹತ್ತಿರ ಹೋದರು. ಉಗ್ರರಾದ ಅವರ ಕಣ್ಣುಗಳು ಕೆಂಪಗೆ ಉರಿಯುತ್ತಿದ್ದವು. ಸಟ್ಕಾದ ಒಂದು ಕೊನೆಯನ್ನು ತಮ್ಮ ಹೊಟ್ಟೆಯ ಮೇಲಿಟ್ಟುಕೊಂಡರು. ಇನ್ನೊಂದು ಕೊನೆಯನ್ನು, ಕಂಭದ ಮೇಲಿಟ್ಟರು. ಹೊಟ್ಟೆಯನ್ನು ಕಂಭದ ಕಡೆಗೆ ತಳ್ಳಲು ಆರಂಬಿಸಿದರು. ಸಾಕಷ್ಟು ಉದ್ದವಿದ್ದ ಸಟ್ಕಾ ಬಾಬಾರ ಹೊಟ್ಟೆಯೊಳಕ್ಕೆ ತೂರಿ ಹೋಗುವುದೇನೋ, ಎಂದು ಎಲ್ಲರೂ ಆತಂಕ ಪಡುವಂತಾಯಿತು. ಇನ್ನೇನು ಅನಾಹುತವೋ ಎಂದು ಎಲ್ಲರೂ ಅಂದುಕೊಳ್ಳುವಷ್ಟರಲ್ಲಿ, ಬಾಬಾ ಶಾಂತರಾಗಿ, ಸಟ್ಕಾದೊಡನೆ ತಮ್ಮ ಜಾಗಕ್ಕೆ ಹಿಂತಿರುಗಿದರು.

ಬಾಬಾ ತಮ್ಮ ಭಕ್ತರನ್ನು ಅವರವರ ಇಷ್ಟದಂತೆ ಸೇವೆ ಮಾಡಿಕೊಳ್ಳಲು ಬಿಟ್ಟಿದ್ದರು. ಬೇರೆಯವರು ಯಾರೂ ಅದರಲ್ಲಿ ತಲೆಹಾಕುವುದು ಅವರಿಗೆ ಇಷ್ಟವಿರಲಿಲ್ಲ. ಮೌಸಿಬಾಯಿ ಸೇವೆ ಮಾಡುತ್ತಿದ್ದಾಗ, ಅದು ಹೇಗೆ ಮಾಡಬೇಕೆಂದು ಬೇರೆಯವರು ಆಕೆಗೆ ಹೇಳುವುದು, ಬಾಬಾರಿಗೆ ಇಷ್ಟವಾಗಲಿಲ್ಲ. ಹಾಗೆ ಹೇಳಿದವರಿಗೆ, ತಮ್ಮ ಹೊಟ್ಟೆ ಅಷ್ಟೊಂದು ಪೊಳ್ಳಲ್ಲ ಎಂದು ತೋರಿಸುವುದಕ್ಕೋ ಎಂಬಂತೆ ಹಾಗೆ ಮಾಡಿದರು. ಭಕ್ತನೇನೋ ಬಾಬಾರ ಒಳ್ಳೆಯದಕ್ಕೆ ಮೌಸಿಬಾಯಿಗೆ ಹಾಗೆ ಹೇಳಿದ. ಬಾಬಾರಿಗೆ ಅದು ಸರಿತೋರಲಿಲ್ಲ. ಬಾಬಾರೊಬ್ಬರೇ ಭಕ್ತರ ಸೇವೆಯ ಬೆಲೆ ಕಟ್ಟಬಲ್ಲವರು. ಘಟನೆಯಾದ ಮೇಲೆ ಯಾರೂ ಮತ್ತೆ ಅಂತಹ ಸಾಹಸಕ್ಕೆ ಕೈಹಾಕಲು ಹೋಗಲಿಲ್ಲ.

ಇದರೊಂದಿಗೆ ಬಾಬಾರ ಬುದ್ಧಿಮತ್ತೆ ಹಾಗೂ ಅವರ ಹಾಸ್ಯಪ್ರಜ್ಞೆ ಮತ್ತು ಇತರ ವಿಷಯಗಳನ್ನು ಕುರಿತು ಹೇಳುವ ಇಪ್ಪತ್ತನಾಲ್ಕನೆಯ ಅಧ್ಯಾಯ ಮುಗಿಯಿತು. ಮುಂದಿನ ಅಧ್ಯಾಯದಲ್ಲಿ ಹೇಮಾಡ್ ಪಂತ್ ದಾಮೂ ಅಣ್ಣಾ ಕಾಸಾರ್, ಮಾವಿನ ಹಣ್ಣಿನ ಲೀಲೆ ಇತ್ಯಾದಿ ವಿಷಯಗಳನ್ನು ಹೇಳುತ್ತಾರೆ.

||ಶ್ರೀ ಸದ್ಗುರು ಸಾಯಿನಾಥಾರ್ಪಣಮಸ್ತು||ಶುಭಂ ಭವತು||
||ಓಂ ಶಾಂತಿಃ ಶಾಂತಿಃ ಶಾಂತಿಃ||


No comments:

Post a Comment