||ಶ್ರೀ ಸಾಯಿ ಸಚ್ಚರಿತ್ರೆ||
||ಹದಿನಾಲ್ಕನೆಯ ಅಧ್ಯಾಯ||
||ರತನಜೀ ಮತ್ತು ದಕ್ಷಿಣೆಯ ಮೀಮಾಂಸೆ||
ಶ್ರೀ ಗಣೇಶಾಯ ನಮಃ ಶ್ರೀ ಸರಸ್ವತಯೇ ನಮಃ
ಶ್ರೀ ವೆಂಕಟೇಶಾಯ ನಮಃ ಶ್ರೀ ಸಾಯಿನಾಥಾಯ ನಮಃ
ಶ್ರೀ ಸದ್ಗುರುಭ್ಯೋನ್ನಮಃ
||ಹದಿನಾಲ್ಕನೆಯ ಅಧ್ಯಾಯ||
||ರತನಜೀ ಮತ್ತು ದಕ್ಷಿಣೆಯ ಮೀಮಾಂಸೆ||
ಶ್ರೀ ಗಣೇಶಾಯ ನಮಃ ಶ್ರೀ ಸರಸ್ವತಯೇ ನಮಃ
ಶ್ರೀ ವೆಂಕಟೇಶಾಯ ನಮಃ ಶ್ರೀ ಸಾಯಿನಾಥಾಯ ನಮಃ
ಶ್ರೀ ಸದ್ಗುರುಭ್ಯೋನ್ನಮಃ
ಈ ಅಧ್ಯಾಯದಲ್ಲಿ ಹೇಮಾಡ್ ಪಂತ್, ಸಂತರ ಜೀವನ, ರತನ್‍ಜೀ ಕಥೆ, ದಕ್ಷಿಣೆಯ ಮೀಮಾಂಸೆ, ಮತ್ತು ಇತರ ವಿಷಯಗಳನ್ನು ಹೇಳುತ್ತಾರೆ.
ಸಂತರ ಜೀವನ
ಸಂತರ, ಮಹಾತ್ಮರ ಕಥೆಗಳು ಕೇಳಲು ಬಹು ಇಂಪು. ಮಧುರ. ಕಿವಿಗಳಿಗೆ ದೈವೀ ಸಂಗೀತದಂತೆ. ಅವರು ಏನೇ ಮಾಡಲಿ, ಏನೇ ಹೇಳಲಿ, ಎಲ್ಲವೂ ನಮಗೆ ಸುಖಕರವಾದವು. ಸಂತೋಷ ತರುವಂತಹವು. ಅದರಲ್ಲೂ ಬಾಬಾರ ಕಥೆಗಳು ಲೀಲೆಗಳು ಮತ್ತೆ ಮತ್ತೆ ಕೇಳಬೇಕು ಎನ್ನಿಸುವಂತಹವು. ಅವುಗಳನ್ನು ಕೇಳುತ್ತಾ ಹೋದರೆ ಅವು ನಮ್ಮ ಕಣ್ಣ ಮುಂದೆ ನಡೆಯುತ್ತಿರುವಂತೆ ಅನುಭವವಾಗುತ್ತದೆ. ಬಾಬಾ ಯಾವಾಗ ಏನು ಹೇಳ ಬೇಕೆಂದುಕೊಂಡರೂ ಬಹಳ ಸರಳವಾಗಿ ಸುಲಭವಾಗಿ ಅರ್ಥವಾಗುವಂತೆ ಹೇಳುತ್ತಿದ್ದರು. ಜಟಿಲವಾದ ಭಾಷೆಯನ್ನು ಉಪಯೋಗಿಸುತ್ತಿರಲಿಲ್ಲ. ಅನೇಕ ಸಲ ಅವರು ಸಣ್ಣ ಸಣ್ಣ ನೀತಿಕಥೆಗಳ ಮೂಲಕ ಹೇಳಬೇಕಾದ್ದನ್ನು ತಿಳಿಸುತ್ತಿದ್ದರು. ನಾವು ಅದನ್ನು ಸರಿಯಾಗಿ ಅರ್ಥಮಾಡಿಕೊಂಡು ಅದರಂತೆ ನಡೆಯಬೇಕೆಂಬುದು ಅವರ ಇಚ್ಛೆ.
ನಮ್ಮ ಪೂರ್ವ ಜನ್ಮದ ಸುಕೃತ ಫಲಗಳಿಂದಲೇ ನಮಗೆ ಈ ಮಾನವ ಜನ್ಮ ದೊರೆತಿರುವುದು. ಅಂತಹ ಮಾನವ ಜನ್ಮವನ್ನು ಬರಿಯ ಇಂದ್ರಿಯ ಸುಖಗಳಿಗೋಸ್ಕರವೇ ವ್ಯರ್ಥಮಾಡಬಾರದು. ಮುಕ್ತಿ ಮಾರ್ಗದ ಕಡೆ ಹೆಜ್ಜೆಯಿಟ್ಟು ಭಕ್ತಿಭಾವವನ್ನು ರೂಢಿಸಿಕೊಂಡು ಹಂತ ಹಂತವಾಗಿ ಮೇಲಕ್ಕೆ ಹೋಗಲು ಪ್ರಯತ್ನಮಾಡಬೇಕು. ನಮ್ಮ ಗುರಿ ಸಾರೂಪ್ಯ, ಸಾಲೋಕ್ಯ, ಸಾಮೀಪ್ಯ, ಸಾಯುಜ್ಯಗಳನ್ನು ಕ್ರಮಕ್ರಮವಾಗಿ ಪಡೆಯುವುದು. ಸಾಯುಜ್ಯವೆಂದರೆ ಪರಮಾತ್ಮನಲ್ಲಿ ಲೀನವಾಗಿಹೋಗಿ ಈ ಜನನ ಮರಣ ಚಕ್ರದಿಂದ ಬಿಡುಗಡೆ ಹೊಂದುವುದು. ಮಾನವ ಜನ್ಮ ಬಿಟ್ಟರೆ, ಇದು ಬೇರೆ ಯಾವ ಜನ್ಮದಲ್ಲೂ ಸಾಧ್ಯವಿಲ್ಲ. ನಮ್ಮ ಜೀವನ ಕಾಲ ಪರಿಮಿತವಾದುದು. ಮೃತ್ಯು ನಮ್ಮ ಬೆನ್ನ ಹಿಂದೆಯೇ ಇದೆ ಎಂಬುದನ್ನು ಮರೆಯದೆ, ಪ್ರಾಪಂಚಿಕ ಆಸೆಗಳಿಂದ ನಮ್ಮ ಆಯುಸ್ಸನ್ನು ನಷ್ಟಮಾಡಿಕೊಳ್ಳದೆ, ಆತ್ಮ ಸಾಕ್ಷಾತ್ಕಾರದ ಕಡೆಗೆ ಮನಸ್ಸನ್ನು ತಿರುಗಿಸಬೇಕು. ಆದರೆ ಈ ಮಾರ್ಗ ಅಷ್ಟು ಸುಲಭವಲ್ಲ.
ಅದನ್ನು ಸುಲಭ ಸಾಧ್ಯ ಮಾಡಿಕೊಳ್ಳಲು ಒಂದು ಮಾರ್ಗವಿದೆ. ಅದು ಬಾಬಾರಂತಹ ಸದ್ಗುರುವನ್ನು ಆಶ್ರಯಿಸುವುದು. ಅವರನ್ನು ಸಗುಣ ರೂಪದಲ್ಲಿ ನೋಡಲಾಗದೇ ಹೋದರೂ, ಅವರ ಕಥೆಗಳು, ಲೀಲೆಗಳನ್ನು ಓದುತ್ತಾ, ಕೇಳುತ್ತಾ, ಮನನ ಮಾಡುತ್ತಾ, ಅವುಗಳನ್ನು ಅಧಿಷ್ಠಾನಕ್ಕೆ ತರಲು ಸತತ ಪ್ರಯತ್ನ ಮಾಡುತ್ತಿರಬೇಕು. ಅಂತಹ ಸಾಧಕರಿಗೆ ಸಂತರು ತಾವೇ ಕಾಣಿಸಿಕೊಂಡು ಅವರ ಮನೋಪಟಲದಲ್ಲಿ ಶಾಶ್ವತವಾಗಿ ನಿಲ್ಲುತ್ತಾರೆ. ಹಾಗೆ ನಿಂತು, ನಮ್ಮ ಅಭ್ಯಾಸ ಮುಂದುವರಿದಂತೆಲ್ಲಾ ನಮ್ಮನ್ನು ಋಜುಮಾರ್ಗದಲ್ಲಿ ನಡೆಸಿಕೊಂಡು ಹೋಗುತ್ತಾ ಕೊನೆಗೆ ನಮ್ಮ ಅಂತಿಮ ಗುರಿಯಾದ ಪರಮಾತ್ಮನಲ್ಲಿ ಸೇರಿಸುತ್ತಾರೆ.
ರತನ್ಜೀ ವಾಡಿಯಾ
ರತನ್‍ಜೀ ಶಾಪೂರ್‌ಜೀ ವಾಡಿಯಾ ನಾಂದೇಡ್‍ನ ಒಬ್ಬ ಶ್ರೀಮಂತರು. ಪಾರ್ಸಿ ಮತಸ್ಥ. ಮಿಲ್ ಕಂಟ್ರಾಕ್ಟರ್. ವ್ಯಾಪಾರಸ್ಥ. ಅಪಾರವಾದ ಧನ ಧಾನ್ಯ ಗೋ ಸಂಪತ್ತುಳ್ಳವರು. ಕುದುರೆ ಬಂಡಿಗಳಿದ್ದವರು. ಒಟ್ಟಿನಲ್ಲಿ ಆಗರ್ಭ ಶ್ರೀಮಂತ. ಇಷ್ಟೆಲ್ಲಾ ಇದ್ದರೂ, ಬಹಳ ಒಳ್ಳೆಯ ನಡತೆಯುಳ್ಳವರು. ಅವರ ಬಳಿಗೆ ಯಾರು ಕೈಯೊಡ್ಡಿ ಹೋದರೂ, ಅವರು ಬರಿಯ ಕೈಯಲ್ಲಿ ಹಿಂತಿರುಗುತ್ತಿರಲಿಲ್ಲ. ಅತಿಥಿ ಅಭ್ಯಾಗತರನ್ನು ಆದರಿಸುವುದರಲ್ಲಿ ಅವರದು ಎತ್ತಿದ ಕೈ. ಆತನ ಸ್ನೇಹಿತರು, ಆತನ ಬಗ್ಗೆ ಬಹಳ ಒಳ್ಳೆಯ ಅಭಿಪ್ರಾಯವನ್ನು ಹೊಂದಿದ್ದರು. ದೈವ ಭೀರು. ಆದರೂ, ಅವರಿಗೆ ದೈವ ಕೃಪೆ, ಸಂತಾನರೂಪದಲ್ಲಿ, ಇರಲಿಲ್ಲ. ಬಾಹ್ಯದಲ್ಲಿ ರತನ್‍ಜೀ ಅತ್ಯಂತ ಸುಖಿ. ಆದರೆ ಆಂತರ್ಯದಲ್ಲಿ ಅತ್ಯಂತ ದುಃಖಿ. ತನಗೆ ಸಂತಾನ ಭಾಗ್ಯವಿಲ್ಲವೆಂಬ ದುಃಖ ಅವರನ್ನು ಕಿತ್ತು ತಿನ್ನುತ್ತಿತ್ತು. ಭಕ್ತಿಯಿಲ್ಲದೆ ದೇವರನಾಮ ಹಾಡಿದಂತೆ, ಪಕ್ಕವಾದ್ಯಗಳಿಲ್ಲದ ಸಂಗೀತದಂತೆ, ಯಜ್ಞೋಪವೀತಲ್ಲದ ಬ್ರಾಹ್ಮಣನಂತೆ, ಹಾರವಿಲ್ಲದ ಆಭರಣಗಳಂತೆ, ಪಶ್ಚಾತ್ತಾಪವಿಲ್ಲದ ತೀರ್ಥಯಾತ್ರೆಗಳಂತೆ, ಗಂಡು ಸಂತತಿಯಿಲ್ಲದ ಮನುಷ್ಯನ ಜೀವನ ವ್ಯರ್ಥ. ರತನ್‍ಜೀಗೆ ರಾತ್ರಿ ಹಗಲು ಇದೇ ಚಿಂತೆಯಾಗಿ ಜೀವನದಲ್ಲಿ ಸ್ವಾರಸ್ಯವೇ ಇರಲಿಲ್ಲ. ಆದರೂ ಅವರು ಹೊರಗೆ ಮಾತ್ರ ಸುಖ ಸಂತೋಷಗಳಿಂದ ತುಂಬಿರುವವರಂತೆ ಕಾಣಿಸಿಕೊಳ್ಳುತ್ತಿದ್ದರು.
ರತನ್‍ಜೀಗೆ ದಾಸಗಣು ಮಹಾರಾಜರಲ್ಲಿ ಬಹಳ ಗೌರವ. ಅವರನ್ನು ಕಲೆತಾಗ ಅವರಲ್ಲಿ ತಮ್ಮ ಹೃದಯವನ್ನು ತುಂಬಿದ್ದ ದುಃಖವನ್ನೆಲ್ಲಾ ಹೇಳಿಕೊಂಡರು. ತಮಗೆ ಗಂಡು ಸಂತಾನವೆಂಬ ದೈವ ಕೃಪೆ ಎಂದಿಗಾದರೂ ಆಗುವುದೋ ಇಲ್ಲವೋ ಎಂಬ ಸಂಕಟವನ್ನು ಅವರಲ್ಲಿ ತೋಡಿಕೊಂಡರು. ದಾಸಗಣೂ ಇದರಿಂದ ಬಹಳ ಅನುಕಂಪಿತರಾಗಿ ರತನ್‍ಜೀಗೆ, "ತಕ್ಷಣವೇ ಶಿರಡಿಗೆ ಹೊರಡು. ಹೋಗಿ ಬಾಬಾರ ಚರಣಗಳಲ್ಲಿ ಬಿದ್ದು ಅವರನ್ನು ಬೇಡಿಕೋ. ಯಾರಾದರೂ ನಿನಗೆ ಸಹಾಯ ಮಾಡಬಹುದಾದರೆ, ಅವರು ಬಾಬಾ ಮಾತ್ರವೇ! ಅವರು ಭೂಮಿಯಮೇಲಿರುವ ಜೀವಂತ ದೇವರು. ಅವರು ಅವತಾರವೆತ್ತಿರುವುದು ಭಕ್ತರ ಸಲುವಾಗಿಯೇ! ದಯಾಮಯ. ಕರುಣಾ ಹೃದಯಿ. ಚಿಂತೆಮಾಡದೆ ಮೊದಲು ಶಿರಡಿಗೆ ಹೊರಡು" ಎಂದು ಹೇಳಿದರು. ರತನ್‍ಜೀ ದಾಸಗಣು ಅವರಲ್ಲಿ ಇಟ್ಟಿರುವ ಅಚಲ ನಂಬಿಕೆಯೇ ಅವರನ್ನು ಅಂದಿನ ರಾತ್ರಿಯೇ ಶಿರಡಿಗೆ ಹೋಗಲು ಪ್ರೇರೇಪಿಸಿತು.
ಶಿರಡಿಗೆ ಹೋಗಿ, ರತನ್‍ಜೀ ಬಾಬಾರ ದರ್ಶನ ಮಾಡಿ, ಅವರ ಪಕ್ಕದಲ್ಲಿ ಕುಳಿತು, ತಾವು ತೆಗೆದುಕೊಂಡು ಹೋಗಿದ್ದ ಹೂವಿನ ಹಾರ ಅವರ ಕೊರಳಲ್ಲಿ ಹಾಕಿ, ಹಣ್ಣುಗಳ ಬುಟ್ಟಿಯನ್ನು ಅವರಿಗೆ ಅರ್ಪಿಸಿದರು. ಭಕ್ತಿ ಗೌರವಗಳಿಂದ ಅವರಿಗೆ ನಮಸ್ಕಾರಮಾಡಿ, "ಬಾಬಾ, ನೀವು ಅನೇಕಾನೇಕ ಭಕ್ತರ ಕಷ್ಟಗಳನ್ನು ಪರಿಹರಿಸಿದ್ದೀರಿ. ಯಾರಿಗೆ ಏನು ತೊಂದರೆಯಾದರೂ ಅವರು ನಿಮ್ಮ ಬಳಿಗೆ ಓಡಿ ಬರುತ್ತಾರೆ. ನೀವು ಯಾರನ್ನೂ ನಿರಾಸೆಗೊಳಿಸಿಲ್ಲ. ಮೃತ್ಯುಮುಖದಿಂದಲೂ ಜನರನ್ನು ಪಾರುಮಾಡಿದ್ದೀರಿ. ಗುಣವಾಗದ ವ್ಯಾಧಿಗಳನ್ನು ಗುಣಪಡಿಸಿದ್ದೀರಿ. ನಾನೂ ಅಂತಹ ಆಸೆ ಇಟ್ಟುಕೊಂಡು ಬಂದಿದ್ದೇನೆ. ನನ್ನನ್ನು ಅಶೀರ್ವದಿಸಿ. ದೇವರು ನನಗೆ ಈ ಪ್ರಪಂಚದಲ್ಲಿ ಎಲ್ಲವನ್ನೂ ಕೊಟ್ಟಿದ್ದಾನೆ. ಮಗನನ್ನು ಮಾತ್ರ ಕೊಡಲಿಲ್ಲ. ಗಂಡು ಸಂತಾನವಿಲ್ಲದೆ ಜೀವನ ನಿರರ್ಥಕವೆನಿಸುತ್ತಿದೆ. ನಿಸ್ಸಾರವಾಗಿದೆ. ದಯೆಯಿಟ್ಟು ನನ್ನಮೇಲೆ ಕರುಣೆ ತೋರಿಸಿ" ಎಂದು ಕಳಕಳಿಯಿಂದ ಬೇಡಿಕೊಳುತ್ತಾ, ಬಾಬಾರ ಪಾದಗಳನ್ನು ಗಟ್ಟಿಯಾಗಿ ಹಿಡಿದು ಕಣ್ಣೀರಿಟ್ಟರು.
ಬಾಬಾ ಅವನ ಮೇಲೆ ದಯಾದೃಷ್ಟಿಯನ್ನು ತೋರುತ್ತಾ, ಪ್ರೀತಿಯಿಂದ, "ನೀನೇ ಬಂದೆಯಾ, ಒಳ್ಳೆಯದೇ ಆಯಿತು. ನಾನೂ, ನಿನ್ನ ಬಗ್ಗೆಯೇ ಯೋಚನೆ ಮಾಡುತ್ತಿದ್ದೆ. ನಿನ್ನ ಸಂಕಟಗಳೆಲ್ಲಾ ದೂರವಾದವು. ಚಿಂತೆಮಾಡಬೇಡ. ಅದೆಲ್ಲಾ ಸರಿ, ನನ್ನ ದಕ್ಷಿಣೆಯನ್ನು ತಂದಿದ್ದೀಯಾ?" ಎಂದು ಕೇಳಿದರು. ರತನ್‍ಜೀ ಅತ್ಯಂತ ಭಕ್ತಿಯಿಂದ, "ಬಾಬಾ, ನೀವು ಆಜ್ಞೆ ಮಾಡಬೇಕಷ್ಟೆ. ನೀವು ಕೇಳಿದಷ್ಟು ದಕ್ಷಿಣೆ ಕೊಡಲು ಸಿದ್ಧನಾಗಿ ಬಂದಿದ್ದೇನೆ" ಎಂದರು. ಅದಕ್ಕೆ ಬಾಬಾ, "ಯೋಚಿಸಬೇಡ. ನನಗೆ ಬೇಕಾದ್ದು ಬಹಳವೇನಲ್ಲ. ಐದು ರೂಪಾಯಿ ಕೊಡು, ಅಷ್ಟೇ. ಅದರಲ್ಲೂ, ಈಗಾಗಲೇ ನನಗೆ ಮೂರು ರೂಪಾಯಿ ಹದಿನಾಲ್ಕು ಆಣೆ ಸಂದಾಯವಾಗಿದೆ. ಮಿಕ್ಕಿದ್ದನ್ನು ಕೊಟ್ಟರೆ ಸಾಕು" ಎಂದರು. ಇದನ್ನು ಕೇಳಿದ ರತನ್‍ಜೀ ಮನಸ್ಸು ಗೊಂದಲದಲ್ಲಿ ಬಿತ್ತು, "ನಾನು ಶಿರಡಿಗೆ ಬರುತ್ತಿರುವುದು ಇದೇ ಮೊದಲನೆಯ ಸಲ. ಇದಕ್ಕೆ ಮುಂಚೆ ಬಾಬಾರನ್ನು ಎಲ್ಲೂ ನೋಡಿಲ್ಲ. ಅವರಿಗೆ ನಾನು ಯಾವಾಗ, ಎಲ್ಲಿ ದಕ್ಷಿಣೆ ಕೊಟ್ಟಿದ್ದೇನೆ?” ಎಂದು ಯೋಚನೆ ಮಾಡುತ್ತಾ, ಏನೂ ಹೇಳದೆ, ಬಾಬಾ ಕೇಳಿದ ಮಿಕ್ಕ ಒಂದು ರೂಪಾಯಿ ಎರಡು ಆಣೆ ದಕ್ಷಿಣೆಯನ್ನು ಅರ್ಪಿಸಿದರು. ಬಾಬಾ ಅವರಿಗೆ ಉದಿ ಪ್ರಸಾದ ಕೊಟ್ಟು, ತಲೆಯಮೇಲೆ ಕೈಯಿಟ್ಟು, "ಅಲ್ಲಾ ದೊಡ್ಡವನು. ನಿನ್ನ ಆಸೆ ತೀರಿಸುತ್ತಾನೆ. ಹೋಗಿ ಬಾ"ಎಂದು ಅಶೀರ್ವದಿಸಿದರು.
ನಾಂದೇಡ್‍ಗೆ ಹಿಂತಿರುಗಿದಮೇಲೂ ರತನ್‍ಜೀಗೆ ಬಾಬಾರ ಮಾತುಗಳೇ ತಲೆಯಲ್ಲಿ ತುಂಬಿಕೊಂಡಿತ್ತು. ಹೇಗೆ ಹೇಗೆ ಯೋಚಿಸಿದರೂ ತಾನು ಯಾವಾಗ ಅವರಿಗೆ ದಕ್ಷಿಣೆ ಕೊಟ್ಟಿದ್ದು ಎಂಬುದು ಅರ್ಥವಾಗಲೇ ಇಲ್ಲ. ದಾಸಗಣು ಮಹಾರಾಜರನ್ನು ಕಂಡು ತಮ್ಮ ಶಿರಡಿಯ ಯಾತ್ರೆ, ಬಾಬಾರ ದರ್ಶನ, ಅವರ ಆಶೀರ್ವಾದ, ಅವರು ದಕ್ಷಿಣೆ ಕೇಳಿದ್ದು ಎಲ್ಲವನ್ನೂ ವಿಶದವಾಗಿ ಹೇಳಿ, ತಮ್ಮ ಸಂದೇಹವನ್ನೂ ಹೇಳಿದರು, "ಬಾಬಾ ನನ್ನನ್ನು ಮೊದಲು ಐದು ರೂಪಾಯಿ ದಕ್ಷಿಣೆ ಕೇಳಿ, ಅದರಲ್ಲಿ ನನಗೆ ಮೂರು ರೂಪಾಯಿ ಹದಿನಾಲ್ಕು ಆಣೆ ಈಗಾಗಲೇ ಸಂದಾಯವಾಗಿದೆ. ಮಿಕ್ಕ ಒಂದು ರೂಪಾಯಿ ಎರಡು ಆಣೆ ಮಾತ್ರ ಕೊಡು” ಎಂದಿದ್ದನ್ನೂ ಹೇಳಿ, “ನಾನು ಇದಕ್ಕೆ ಮುಂಚೆ ಶಿರಡಿಗೆ ಎಂದೂ ಹೋಗಿಲ್ಲ. ಬಾಬಾರನ್ನು ಭೇಟಿ ಮಾಡಿಯೂ ಇಲ್ಲ. ಅವರಿಗೆ ನಾನು ದಕ್ಷಿಣೆ ಕೊಟ್ಟಿರಲು ಹೇಗೆ ಸಾಧ್ಯ?" ಎಂದು ಕೇಳಿದರು. ದಾಸಗಣುವಿಗೂ ಇದು ಸಮಸ್ಯೆಯೇ ಆಯಿತು. ಸ್ವಲ್ಪ ಯೋಚನೆ ಮಾಡಿದ ಮೇಲೆ ಆತನಿಗೆ ರತನ್‍ಜೀ ಶಿರಡಿಗೆ ಹೊರಡುವುದಕ್ಕೆ ಮುಂಚೆ ಒಬ್ಬ ಮೌಲ್ವಿ ಸಾಹೇಬರಿಗೆ ಸತ್ಕಾರ ಮಾಡಿದ್ದು ನೆನಪಿಗೆ ಬಂತು.
ಒಂದು ದಿನ ರತನ್‍ಜೀ ತಮ್ಮ ಸ್ನೇಹಿತರೊಂದಿಗೆ ಮನೆಯಲ್ಲಿ ಕೂತು ಮಾತನಾಡುತ್ತಿದ್ದಾಗ, ಒಬ್ಬರು ಮಹಾತ್ಮರು ಅಲ್ಲಿಗೆ ಬಂದರು. ಅವರು ಹಮಾಲಿಯ ಕೆಲಸ ಮಾಡುತ್ತಾ ಗೋದಾವರಿಯ ತಟದಲ್ಲಿ ಓಡಾಡಿಕೊಂಡಿದ್ದ ಮೌಲ್ವಿ ಸಾಹೇಬರು. ಆತನನ್ನು “ಪೋರ್ಟರ್ ಸಂತ” ಎಂದು ಎಲ್ಲರೂ ಕರೆಯುತ್ತಿದ್ದರು. ರತನ್‍ಜೀ ಅವರನ್ನು ಗೌರವಾದರಗಳಿಂದ ನೋಡುತ್ತಿದ್ದರು. ಆತನ ಮುಖದ ಮೇಲೆ ದೈವಿಕ ವರ್ಚಸ್ಸು ಕಾಣುತ್ತಿತ್ತು. ಆತ ಬಂದಾಗ ಎಲ್ಲರೂ ಎದ್ದು ಅವರನ್ನು ಬರಮಾಡಿಕೊಂಡು, ಗೌರವ ತೋರಿಸಿ, ಆಸನದಲ್ಲಿ ಕೂಡಿಸಿ, ಊಟೋಪಚಾರಗಳೊಡನೆ ಅತಿಥಿ ಸತ್ಕಾರ ಮಾಡಿದರು. ಸತ್ಕಾರವಾದ ಮೇಲೆ ರತನ್‍ಜೀ ಆತನಿಗೆ ಹಾರ ಹಾಕಿ, ತೆಂಗಿನಕಾಯೊಂದನ್ನು ಅರ್ಪಿಸಿದರು. ಇದನ್ನು ನೆನಪಿಗೆ ತಂದುಕೊಂಡು ದಾಸಗಣು ರತನ್‍ಜೀಗೆ ತಿಳಿಸಿದರು. ನಂತರದಲ್ಲಿ ಅಂದಿನ ಅತಿಥಿಸತ್ಕಾರಕ್ಕೆ ಖರ್ಚಾಗಿದ್ದ ಮೊತ್ತವನ್ನು ಕೂಡಿಸಿ ನೋಡಿದರೆ ಅದು ಸರಿಯಾಗಿ ಮೂರು ರೂಪಾಯಿ ಹದಿನಾಲ್ಕು ಆಣೆಗಳಾಗಿತ್ತು. ಅದು ಬಾಬಾ ಹೇಳಿದ ಮೊತ್ತಕ್ಕೆ ತಾಳೆ ಆಗಿತ್ತು. ಪೈಸಾ ಜಾಸ್ತಿಯಿಲ್ಲ. ಪೈಸಾ ಕಡಮೆಯಿಲ್ಲ. ರತನ್‍ಜೀಗೆ ಹೇಳಲಾರದಷ್ಟು ಆನಂದ ಆಶ್ಚರ್ಯಗಳು ಒಟ್ಟಿಗೇ ಆಗಿ ಬಾಬಾರ ಮೇಲಿನ ಭಕ್ತಿ ಸ್ಥಿರವಾಯಿತು.
ಕಾಲಾನಂತರದಲ್ಲಿ, ರತನ್‍ಜೀಗೆ ಗಂಡು ಸಂತಾನ ಆಯಿತು. ಅಪಾರ ಸಂತೋಷದಿಂದ ಅವರು ಬಾಬಾರಿಗೆ ವಂದನೆಗಳನ್ನು ಅರ್ಪಿಸಿದರು. ಅವರಿಗೆ ಒಟ್ಟು ಹನ್ನೆರಡೂ ಮಕ್ಕಳಾದರೂ ಕೊನೆಗೆ ಉಳಿದದ್ದು ನಾಲ್ಕು ಮಾತ್ರವೇ ಎಂದು ಹೇಳುತ್ತಾರೆ.
ಬಾಬಾ ಶಿರಡಿಯಲ್ಲೇ ಇದ್ದರೂ, ಎಲ್ಲೆಲ್ಲಿ ಏನೇನು ನಡೆಯುತ್ತಿದೆ ಎಂಬುದೆಲ್ಲ ಅವರ ಅವಗಾಹನೆಗೆ ಬರುತ್ತದೆ ಎಂಬುದು ಇದರಿಂದ ಅರ್ಥವಾಗುತ್ತದೆ. ದೇಶ, ಕಾಲ, ಭೂತ, ಭವಿಷ್ಯತ್, ವರ್ತಮಾನಗಳೆಲ್ಲವೂ ಅವರಿಗೆ ಅವಗತ. ಅವು ಯಾವುವೂ ಅವರಿಗೆ ತಡೆಗಳಲ್ಲ. ಅದಕ್ಕೆಲ್ಲಾ ಅವರು ಅತೀತರು. ಅವರು ನಮ್ಮೆಲ್ಲರಲ್ಲೂ ಇದ್ದಾರೆ. ಇಲ್ಲದಿದ್ದರೆ ನಾಂದೇಡ್‍ನಲ್ಲಿ ನಡೆದ ಮೌಲ್ವಿ ಸಾಹೇಬರ ಸತ್ಕಾರಕೂಟದ ವಿಷಯ, ಅದಕ್ಕೆ ಇಷ್ಟೇ ಖರ್ಚಾಯಿತು ಎಂದು ಹೇಗೆ ತಿಳಿಯುತ್ತದೆ? ಇದಕ್ಕೆ ಮೌಲ್ವಿ ಸಾಹೇಬರಲ್ಲಿ ತಮ್ಮನ್ನು ಗುರುತಿಸಿಕೊಂಡು, ತಾವಿಬ್ಬರೂ ಒಂದೇ ಎನ್ನುವುದನ್ನು ಪರೋಕ್ಷವಾಗಿ ಹೇಳಿದರು ಎಂದರ್ಥ.
ಇದರಿಂದ ಕಲಿಯಬೇಕಾದ ನೀತಿ ಪಾಠವೂ ಒಂದಿದೆ, "ನನ್ನ ಭಕ್ತರು ಎಲ್ಲೇ ಇರಲಿ. ಅವರನ್ನು ನೋಡಿಕೊಳ್ಳುವುದು ನನ್ನ ಜವಾಬ್ದಾರಿ. ಅವರಿಗೆ ಏನು ಒಳ್ಳೆಯದೋ ಅದನ್ನು ಕೊಡುವುದೂ ನನ್ನ ಭಾರ. ಸತ್ಸಂಗಗಳಿಗೆ ಮಾಡುವ ಖರ್ಚೆಲ್ಲವೂ ನನಗೇ ಸೇರುತ್ತದೆ" ಎಂದು ಹೇಳುವ ರೀತಿಯಿದು. ಎಲ್ಲ ಸಂತರೂ, ಮಹಾತ್ಮರೂ ಒಬ್ಬರೇ ಆದದ್ದರಿಂದ ಎಲ್ಲಿ ಯಾರಿಗೆ ಪೂಜೆ ಪುರಸ್ಕಾರಗಳಿಗೆ ಖರ್ಚು ಮಾಡಿದರೂ ಅದು ಬಾಬಾಗೇ ಸೇರುತ್ತದೆ.
ರಾವ್ ಬಹಾದೂರ್ ವಿನಾಯಕ ಸಾಠೆಗೂ ಸಂತಾನವಿರಲಿಲ್ಲ. ಆತನ ಮೊದಲನೆಯ ಹೆಂಡತಿ ತೀರಿಕೊಂಡಾಗ ಆತನಿಗೆ ಮಕ್ಕಳಿರಲಿಲ್ಲ. ಗಂಡು ಮಗ ಇಲ್ಲದ್ದರಿಂದ ಆತನಿಗೆ ಚಿಂತೆಯಾಗಿತ್ತು. ಬಾಬಾ ಅವರನ್ನು ಮರು ಮದುವೆ ಮಾಡಿಕೊಳ್ಳಲು ಹೇಳಿದರು. ಅವರ ಸಲಹೆಯಂತೆ ಮದುವೆ ಮಾಡಿಕೊಂಡಮೇಲೆ ಅವರಿಗೆ ಮೊದಲನೆಯ ಎರಡು ಮಕ್ಕಳೂ ಹೆಣ್ಣು ಆಯಿತು. ಅದರಿಂದ ಆತನಿಗೆ ನಿರಾಸೆಯಾಯಿತು. ಆದರೆ ಮೂರನೆಯ ಮಗು ಗಂಡಾಗಿ ಆತನಿಗೆ ಸಂತೋಷವಾಯಿತು. ಬಾಬಾರ ಮಾತು ಸತ್ಯವಾಯಿತು.
ದಕ್ಷಿಣೆಯ ಮೀಮಾಂಸೆ
ಮೊದಲಲ್ಲಿ ಬಾಬಾ ಯಾರಿಂದಲೂ ಏನನ್ನೂ ತೆಗೆದುಕೊಳ್ಳುತ್ತಿರಲಿಲ್ಲ. ಉರಿದು ಬಿದ್ದಿದ್ದ ಬೆಂಕಿ ಕಡ್ಡಿಗಳನ್ನು ಆರಿಸಿ, ಜೇಬಿನಲ್ಲಿ ಇಟ್ಟುಕೊಳ್ಳುತ್ತಿದ್ದರು. ಯಾರನ್ನೂ ಏನೂ ಕೇಳುತ್ತಿರಲಿಲ್ಲ. ಅವರಾಗಿಯೇ ಯಾರಾದರು ಒಂದು ಪೈಸೆ ಕೊಟ್ಟರೆ, ಅದನ್ನು ತೆಗೆದುಕೊಳ್ಳುತ್ತಿದ್ದರು. ಮಸೀದಿಯಲ್ಲಿ ದೀಪಗಳನ್ನು ಹಚ್ಚುವುದಕ್ಕೆ ಅಥವಾ ಹುಕ್ಕಾಗೆ ಬೇಕಾದ ಹೊಗೆಸೊಪ್ಪು ಕೊಳ್ಳಲು ಅದನ್ನು ಉಪಯೋಗಿಸುತ್ತಿದ್ದರು. ಅವರಿಗೆ ಹೊಗೆಸೊಪ್ಪು ಬಹಳ ಇಷ್ಟ. ಭಕ್ತರು ಸಂತರನ್ನು, ಮಹಾತ್ಮರನ್ನು ಕಾಣಲು ಹೋಗುವಾಗ ಬರಿಯ ಕೈಯಲ್ಲಿ ಹೋಗಬಾರದೆಂಬ ನಿಯಮದಿಂದ ಬಾಬಾಗೆ ತಾಮ್ರದ ಕಾಸುಗಳನ್ನು ಕೊಡುತ್ತಿದ್ದರು. ಯಾರಾದರೂ ಒಂದು ಪೈಸೆಗಿಂತ ಜಾಸ್ತಿ ಕೊಟ್ಟರೆ ಅದನ್ನು ಅವರು ಹಿಂತಿರುಗಿಸುತ್ತಿದ್ದರು. ಅವರ ಕೀರ್ತಿ ನಾಲ್ಕೂ ಕಡೆಗಳಲ್ಲಿ ಹಬ್ಬಿ, ಭಕ್ತರು ತಂಡ ತಂಡವಾಗಿ ಬರಲು ಆರಂಭಿಸಿದಮೇಲೆ, ಬಾಬಾ ದಕ್ಷಿಣೆ ಸ್ವೀಕರಿಸಲು ಪ್ರಾರಂಭಿಸಿದರು. ಇಲ್ಲೊಂದು ಪ್ರಶ್ನೆ ಏಳಬಹುದು. ಬಾಬಾ ಫಕೀರರು. ಎಲ್ಲದರಲ್ಲೂ ವೈರಾಗ್ಯವಿದ್ದವರು, ಅಂತಹವರು ದಕ್ಷಿಣೆ ಏಕೆ ಕೇಳಬೇಕು? ಅದು ಅವರು ಹಣಕ್ಕೆ ಇನ್ನೂ ಅಂಟಿಕೊಂಡಿದ್ದಾರೆಂದು ತೋರಿಸುತ್ತದೆಯಲ್ಲವೆ?
ಈ ಪ್ರಶ್ನೆಗೆ ಹಲವಾರು ಉತ್ತರಗಳನ್ನು ಕೊಡಬಹುದು. ಬಹಳ ಸರಳವಾದ ಉತ್ತರವೆಂದರೆ ಬಾಬಾ ಹಾಗೆ ತೆಗೆದುಕೊಂಡ ಹಣವನ್ನು ತಮ್ಮ ಸ್ವಂತಕ್ಕಾಗಿ ಎಂದೂ ಉಪಯೋಗಿಸಲಿಲ್ಲ. ತೆಗೆದುಕೊಂಡ ಹಣವನ್ನೆಲ್ಲಾ ಬಡವರು, ಭಿಕ್ಷುಕರು ಇವರಿಗೆ ಹಂಚಿಬಿಡುತ್ತಿದ್ದರು. ಶಾಸ್ತ್ರಗಳಲ್ಲಿ ಹೇಳಿರುವ ಪ್ರಕಾರ ಯಾವ ಪೂಜೆಯೂ ದಕ್ಷಿಣೆ (ಸುವರ್ಣ ವರಹ) ಸಮರ್ಪಣೆಯಾಗದೆ ಪೂರ್ತಿಯಾಗುವುದಿಲ್ಲ. ಆದರೆ ಎಲ್ಲರಿಗೂ ಸುವರ್ಣ ಕೊಡಲು ಸಾಧ್ಯವಿಲ್ಲ. ಶ್ರದ್ಧಾ ಭಕ್ತಿಗಳಿಂದ ಇನ್ನೇನನ್ನು ಕೊಟ್ಟರೂ ಅದು ಸುವರ್ಣ ಕೊಟ್ಟಂತೆಯೇ ಆಗುತ್ತದೆ. ಆದ್ದರಿಂದ ಸಾಮಾನ್ಯ ಜನ ತಾಮ್ರದ ಕಾಸುಗಳನ್ನು ಕೊಡುತ್ತಿದ್ದರು. ದೇವರ ದರ್ಶನಕ್ಕೆ ಹೋಗುವಾಗ ಬರಿಗೈಯಲ್ಲಿ ಹೋಗಬಾರದು ಎಂದು ಶಾಸ್ತ್ರ. ಸಂತರೂ ದೇವರೇ ಎಂದಮೇಲೆ ಅವರನ್ನು ಕಾಣಲು ಹೋದಾಗ ಕೂಡಾ ಬರಿಗೈಯಲ್ಲಿ ಹೋಗಕೂಡದು. ಏನಾದರೂ ದಕ್ಷಿಣೆಯ ರೂಪದಲ್ಲಿ ತೆಗೆದುಕೊಂಡು ಹೋಗಬೇಕು. ವೇದ ಶಾಸ್ತ್ರಗಳಲ್ಲಿ ದೇವರು, ರಾಜ, ಸಂತರು, ಹಿರಿಯರು, ಗುರುಗಳು ಇವರುಗಳನ್ನು ನೋಡಲು ಹೋಗುವಾಗ ಬರಿಗೈಯಲ್ಲಿ ಹೋಗದೆ ಏನಾದರೂ, ಎಷ್ಟಾದರೂ ದಕ್ಷಿಣೆಯಂತೆ ಕೊಡಬೇಕು ಎಂದು ಹೇಳಿದೆ.
ಭಕ್ತರಿಗೆ ಔದಾರ್ಯದ ಪ್ರಾಮುಖ್ಯತೆಯನ್ನು ತಿಳಿಸಲು, ಹಣದ ವ್ಯಾಮೋಹ ಬಿಡಿಸಿ, ಅವರ ಮನಶ್ಶುದ್ಧಿ ಮಾಡಲು, ಬಾಬಾ ಭಕ್ತರನ್ನು ದಕ್ಷಿಣೆ ಕೇಳುತ್ತಿದ್ದರು. ತನ್ನ ಸ್ವಂತ ಖರ್ಚಿಗೋಸ್ಕರ ಮಾತ್ರ ಅಲ್ಲವೇ ಅಲ್ಲ. ಅವರಿಗೆ ಸ್ವಂತಕ್ಕೋಸ್ಕರ ಹಣ ಎಂದೂ ಬೇಕಾಗಿರಲಿಲ್ಲ. ಬಾಬಾ ಹೀಗೆ ಹೇಳುತ್ತಿದ್ದರು, "ಈ ಪ್ರಪಂಚದಲ್ಲಿ ಎಲ್ಲರಿಗೂ, ಯಾರಾದರೂ ಒಬ್ಬರು ತನ್ನವರು ಎಂಬುವವರಿದ್ದಾರೆ. ನನಗೆ ಯಾರೂ ಇಲ್ಲ. ಅಲ್ಲಾ ಮಾತ್ರವೇ ನನ್ನವನು. ನನಗೆ ಯಾರಾದರೂ ಏನನ್ನಾದರೂ ಕೊಟ್ಟರೆ ಅವರಿಗೆ ಅದರ ನೂರರಷ್ಟು ಹಿಂತಿರುಗಿ ಕೊಡುತ್ತೇನೆ.” ಈ ಭರವಸೆಯ ಮಾತೂ, ಭಕ್ತರನ್ನು ದಕ್ಷಿಣೆ ಕೊಡುವಂತೆ ಪ್ರೇರೇಪಿಸುತ್ತಿತ್ತು. ಇದಕ್ಕೊಂದು ದೃಷ್ಟಾಂತ ಗಣಪತ ರಾವ್ ಬೋದಾಸ್. ಆತ ಸಿನಿನಟ. ಅವನನ್ನು ಬಾಬಾ ಮತ್ತೆ ಮತ್ತೆ ಹಣ ಕೇಳಿದರು. ಕಟ್ಟಕಡೆಗೆ, ಆತ ಬಾಬಾ ಮುಂದೆ ತನ್ನ ಹಣದ ಚೀಲವನ್ನೇ ಬೋರಲು ಹಾಕಿದರು. ಅದರಿಂದ, ಜೀವನ ಪರ್ಯಂತ ಹಣಕ್ಕಾಗಿ ಆತ ತವಕಪಡಲಿಲ್ಲ. ಹಣ ಬೇಕಾದಾಗ ಹೇಗೋ ಎಲ್ಲಿಂದಲೋ ಬರುತ್ತಿತ್ತು.
ದಕ್ಷಿಣೆ ಎಂದರೆ ಹಣವೇ ಆಗಬೇಕಿಲ್ಲ. ಬೇರೆಯ ರೀತಿಯಲ್ಲೂ ದಕ್ಷಿಣೆ ಕೊಡಬಹುದು. ಈ ಕೆಳಗಿನ ಘಟನೆಗಳು ಇದನ್ನು ತೋರಿಸುತ್ತವೆ.
ಒಂದುಸಲ, ಪ್ರೊಫೆಸರ್ ಜಿ.ಜಿ. ನಾರ್ಕೆ ಬಾಬಾರ ದರ್ಶನಕ್ಕಾಗಿ ಹೋದರು. ಬಾಬಾ ಅವರನ್ನು ದಕ್ಷಿಣೆ ಕೇಳಿದರು. ಅವರು ತನ್ನ ಹತ್ತಿರ ಹಣವಿಲ್ಲವೆಂದರು. ಅದಕೆ ಬಾಬಾ, "ನಿನ್ನ ಹತ್ತಿರ ಹಣವಿಲ್ಲವೆಂದು ನನಗೆ ಗೊತ್ತು. ಈಗ ನೀನು ಓದುತ್ತಿರುವ ಯೋಗ ವಾಸಿಷ್ಠದಿಂದ ದಕ್ಷಿಣೆ ಕೊಡು" ಎಂದರು. ಇಲ್ಲಿ ದಕ್ಷಿಣೆ ಎಂದರೆ, ತಾನು ಓದಿದ್ದನ್ನು ಸರಿಯಾಗಿ ಅರ್ಥಮಾಡಿಕೊಂಡು, ಅದನ್ನು ಆಚರಣೆಯಲ್ಲಿಡು ಎನ್ನುವ ಅರ್ಥದಲ್ಲಿ ಬಾಬಾ ಹೇಳಿದ್ದು. ನಾರ್ಕೆ ಅದನ್ನು ಅರ್ಥಮಾಡಿಕೊಂಡು ಅದರಂತೆ ನಡೆದುಕೊಂಡರು.
ಇನ್ನೊಂದುಸಲ ಬಾಬಾ ಶ್ರೀಮತಿ ತರ್ಖಡರನ್ನು ಆರು ರೂಪಾಯಿ ದಕ್ಷಿಣೆ ಕೇಳಿದರು. ಆಕೆ ಬಾಬಾರ ಅತ್ಯಂತ ಪ್ರೀತಿಪಾತ್ರಳಾದ ಭಕ್ತಳು. ಯಾವಾಗ ಬಾಬಾರನ್ನು ನೋಡಲು ಬಂದರೂ, ಏನಾದರೂ ತರುತ್ತಿದ್ದರು. ಆದರೆ ಆಕೆಯ ಹತ್ತಿರ ಆ ಸಮಯದಲ್ಲಿ ಹಣವಿರಲಿಲ್ಲ. ಇದರಿಂದ ಆಕೆಗೆ ಬಹಳ ದುಃಖವಾಯಿತು. ಏನು ಮಾಡಬೇಕೆಂದು ತೋಚದೆ ಹೋಯಿತು. ಹತ್ತಿರವೇ ಇದ್ದ ಆಕೆಯ ಗಂಡ ಆಕೆಗೆ, "ಬಾಬಾ ನಿನ್ನನ್ನು ಕೇಳಿದ್ದು ಹಣವಲ್ಲ. ನಿನ್ನ ಅರಿಷಡ್ವರ್ಗಗಳನ್ನು ಅವರಿಗೆ ಒಪ್ಪಿಸು ಎಂದು" ಎಂದರು. ಅದನ್ನು ಕೇಳಿದ ಬಾಬಾ, “ಅವನು ಸರಿಯಾಗಿ ಹೇಳುತ್ತಾ ಇದ್ದಾನೆ” ಎಂದು ಸಮರ್ಥಿಸಿದರು.
ದಯಾರ್ದ್ರಹೃದಯಿ, ಪ್ರೀತಿವಿಶ್ವಾಸಗಳಿಂದ ತುಂಬಿದ ಬಾಬಾ ತನ್ನ ಭಕ್ತರಿಂದ ದಕ್ಷಿಣೆ ಕೇಳುತ್ತಿದ್ದುದು ಅವರ ಒಳ್ಳೆಯದಕ್ಕಾಗಿಯೇ! ಅವರಿಗೆ ಬಡವ, ಬಲ್ಲಿದ ಎಂಬ ಬೇಧವಿರಲಿಲ್ಲ. ಶ್ರೀಮಂತ ಭಕ್ತರನ್ನೂ, ಅತಿ ಬಡವರ ಮನೆಗಳಿಗೆ ಭಿಕ್ಷೆ ಕೇಳಲು ಕಳುಹಿಸುತ್ತಿದ್ದರು. ಅದು ಅವರಿಗೆ ನಮ್ರತೆಯ ಪಾಠವನ್ನು ಕಲಿಸುವ ರೀತಿಯಾಗಿತ್ತು. ಪ್ರತಿದಿನ ನೂರಾರು ರೂಪಾಯಿ ದಕ್ಷಿಣೆ ಕೂಡಿದರೂ, ಆ ದಕ್ಷಿಣೆಯನ್ನೆಲ್ಲ ಬಾಬಾ ಆಯಾ ದಿನವೇ ಬಡವರು, ಭಿಕ್ಷುಕರು ಮುಂತಾದವರಿಗೆ ಹಂಚಿಬಿಡುತ್ತಿದ್ದರು. ಮಾರನೆಯ ದಿನ ಎಂದಿನಂತೆ ಬಡ ಫಕೀರರಾಗೇ ಇರುತ್ತಿದ್ದರು. ಅವರ ಸಮಾಧಿಯಾದಾಗ ಅವರ ಬಳಿ ಕೇವಲ ಕೆಲವೇ ರೂಪಾಯಿಗಳು ಇದ್ದವಂತೆ! ತ್ಯಾಗ, ವಿನಯ, ನಮ್ರತೆಗಳನ್ನು ಕಲಿಸಲು ದಕ್ಷಿಣೆ ಕೇಳುತ್ತಿದ್ದರೇ ಹೊರತು, ತಮ್ಮ ಸ್ವಂತ ಸುಖಕ್ಕಾಗಿ ಎಂದೂ ಅವರು ಹಣ ಕೇಳಳಿಲ್ಲ.
ದಕ್ಷಿಣೆಯ ಮೇಲೆ ಬಿ.ವಿ. ದೇವ್ ಅವರ ಹೆಚ್ಚಿನ ಮಾಹಿತಿ
ಶ್ರೀ ಸಾಯಿ ಲೀಲಾ ಸಂಪುಟ ೭ ಪುಟ ೬-೨೬ರಲ್ಲಿ ಬಿ ವಿ ದೇವ್, ನಿವೃತ್ತ ಮಾಮಾಲತದಾರ್, ಹೀಗೆ ಬರೆದಿದ್ದಾರೆ, "ಬಾಬಾ ಎಲ್ಲರಿಂದಲೂ ದಕ್ಷಿಣೆ ಕೇಳುತ್ತಿರಲಿಲ್ಲ. ಕೆಲವರು ಕೇಳದೆಯೇ ದಕ್ಷಿಣೆ ಕೊಟ್ಟರೆ ಅವರು ಕೆಲವು ಸಲ ತೆಗೆದುಕೊಳ್ಳುತ್ತಿದ್ದರು. ಮತ್ತೆ ಕೆಲವು ಸಲ ಅದನ್ನು ಅದನ್ನು ನಿರಾಕರಿಸುತ್ತಿದ್ದರು. ಕೆಲವರನ್ನು ತಾವೇ ಕೇಳುತಿದ್ದರು. ಕೊಡದಿದ್ದರೆ ಅವರು ಏನೂ ಅನ್ನುತ್ತಿರಲಿಲ್ಲ. ಬಾಬಾ ಕೇಳಲಿ ಆಮೇಲೆ ಕೊಡೋಣ ಎಂದುಕೊಂಡವರನ್ನು ಅವರು ಕೇಳುತ್ತಲೇ ಇರಲಿಲ್ಲ. ಇಷ್ಟವಿಲ್ಲದೆ ಬಲವಂತಕ್ಕೋಸ್ಕರ ಯಾರಾದರೂ ದಕ್ಷಿಣೆ ಕೊಟ್ಟರೆ ಅವರು ಅದನ್ನು ಮುಟ್ಟದೆ ಅಲ್ಲಿಂದ ತೆಗೆದುಕೊಂಡು ಹೋಗುವಂತೆ ಆಜ್ಞೆ ಮಾಡುತ್ತಿದ್ದರು. ಯಾರಿಗೆ ಎಷ್ಟು ಕೊಡಬೇಕೆಂಬ ಇಚ್ಛೆ ಇದೆಯೋ ಅವರನ್ನು ಅಷ್ಟು ಮಾತ್ರವೇ ಕೇಳುತ್ತಿದ್ದರು. ಶ್ರೀಮಂತರು ಅತಿಬಡವರು ಇವರಿಂದ ದಕ್ಷಿಣೆ ಕೇಳುತ್ತಿರಲಿಲ್ಲ.
ದಕ್ಷಿಣೆ ಕೇಳಿದಾಗ ಕೊಡದಿದ್ದರೆ, ಬಾಬಾ ಅಂತಹವರ ಮೇಲೆ ಕೋಪಮಾಡಿಕೊಳ್ಳುತ್ತಿರಲಿಲ್ಲ. ಯಾರಾದರೂ ಶಿರಡಿಗೆ ಬರುವವರ ಕೈಯಲ್ಲಿ ಬಾಬಾರಿಗೆ ಕೊಡುವಂತೆ ದಕ್ಷಿಣೆ ಕಳುಹಿಸಿದಾಗ, ತಂದವರು ಅದನ್ನು ಕೊಡಲು ಮರೆತರೆ, ಅವರಿಗೆ ಅದರ ನೆನಪು ಮಾಡಿಕೊಟ್ಟು, ತೆಗೆದುಕೊಳ್ಳುತ್ತಿದ್ದರು. ಕೆಲವುಸಲ ಕೊಟ್ಟ ದಕ್ಷಿಣೆಯಲ್ಲಿ ಸ್ವಲ್ಪ ಭಾಗವನ್ನು ಹಿಂತಿರುಗಿಸಿ, ಅದನ್ನು ಜತನವಾಗಿ ಕಾಪಾಡಲು, ಇಲ್ಲವೇ ಪೂಜಾ ಮಂದಿರದಲ್ಲಿಟ್ಟು ಪೂಜೆ ಮಾಡಿಕೊಳ್ಳುವಂತೆ, ಹೇಳುತ್ತಿದ್ದರು. ಅದರಿಂದ ಭಕ್ತರ ಪುರೋ ಭಿವೃದ್ಧಿಯಾಗುತ್ತಿತ್ತು. ಯಾರಾದರೂ ತಾವಂದುಕೊಂಡದ್ದಕ್ಕಿಂತ ಹೆಚ್ಚು ದಕ್ಷಿಣೆ ಕೊಟ್ಟರೆ ಹೆಚ್ಚಾದ ಮೊತ್ತವನ್ನು ಹಿಂತಿರುಗಿಸುತ್ತಿದ್ದರು. ಹಾಗೆಯೇ ಯಾರಾದರೂ ತಾವಂದುಕೊಂಡದ್ದಕ್ಕಿಂತ ಕಡಮೆ ಕೊಟ್ಟರೆ ಅವರನ್ನು ಮತ್ತೆ ಕೇಳಿ ಕಡಮೆಯಾದ ಮೊತ್ತ ಕೊಡುವಂತೆ ಕೇಳುತ್ತಿದ್ದರು. ಹಾಗೆ ಕೇಳಿದಾಗ ಅವರಲ್ಲಿ ಹಣವಿಲ್ಲದಿದ್ದರೆ, ಸಾಲ ಮಾಡಿ ಕೊಡುವಂತೆ ಹೇಳುತ್ತಿದ್ದರು. ಕೆಲವರಿಂದ ದಿನಕ್ಕೆ ನಾಲ್ಕು ಐದು ಸಲ ದಕ್ಷಿಣೆ ಕೇಳುತ್ತಿದ್ದರು.
ಹಾಗೆ ದಿನವೂ ಬಂದ ದಕ್ಷಿಣೆಯ ಹಣವನ್ನು ಅವರು ಸ್ವಂತಕ್ಕೆಂದು ಯಾವಾಗಲೂ ಇಟ್ಟುಕೊಳ್ಳಲಿಲ್ಲ. ಧುನಿಗೆ ಕಟ್ಟಿಗೆಗೋಸ್ಕರ, ಹುಕ್ಕಾಗೆ ಹೊಗೆಸೊಪ್ಪು ಕೊಳ್ಳಲು ಸ್ವಲ್ಪ ಹಣ ಬಿಟ್ಟರೆ, ಮಿಕ್ಕದ್ದೆಲ್ಲ ಅವರು ಹಲವಾರು ಜನರಿಗೆ ಬೇರೆ ಬೇರೆ ಮೊತ್ತದಂತೆ ದಾನ ಮಾಡಿಬಿಡುತ್ತಿದ್ದರು. ಶಿರಡಿ ಸಂಸ್ಥಾನದ ಸಾಮಾನು ಸರಂಜಾಮುಗಳೆಲ್ಲಾ ಬಾಬಾರ ಶ್ರೀಮಂತ ಭಕ್ತರು, ರಾಧಾಕೃಷ್ಣಮಾಯಿಯವರ ಸಲಹೆಯಂತೆ, ಸಂಸ್ಥಾನಕ್ಕೆ ದಾನವಾಗಿ ಅರ್ಪಿಸಿದ್ದು. ಬಾಬಾರಿಗೆ ಈ ಸಾಮಾನು ಸರಂಜಾಮುಗಳಲ್ಲಿ ಆಸ್ಥೆ ಇರಲಿಲ್ಲ. ಯಾರಾದರೂ ದುಬಾರಿಯಾದ ಸಾಮಾನುಗಳನ್ನು ತಂದರೆ ಅವರಮೇಲೆ ಕೋಪಗೊಂಡು ಬೈಯುತ್ತಿದ್ದರು. ಒಂದುಸಲ ಅವರು ನಾನಾ ಸಾಹೇಬ್ ಚಾಂದೋರ್ಕರ್ ಅವರಿಗೆ, " ನನ್ನ ಆಸ್ತಿಯೆಲ್ಲಾ ಒಂದು ಕೌಪೀನ, ಒಂದು ಚೂರು ಬಟ್ಟೆ, ಒಂದು ಕಫ್ನಿ, ಒಂದು ತಗಡಿನ ಡಬ್ಬ, ಅಷ್ಟೇ. ಭಕ್ತರೆನ್ನಿಸಿಕೊಂಡವರು ಈ ಕೆಲಸಕ್ಕೆ ಬಾರದ ದುಬಾರಿಯಾದ ಸಾಮಾನುಗಳನ್ನು ತಂದುಹಾಕಿ ನನಗೆ ತೊಂದರೆ ಕೊಡುತ್ತಾರೆ" ಎಂದು ಹೇಳಿದರು.
ದಕ್ಷಿಣೆ ಎನ್ನುವುದು ಭಕ್ತರ ಆಧ್ಯಾತ್ಮಿಕ ಅಭಿವೃದ್ಧಿಯನ್ನು ಅಳೆಯಲು ಬಾಬಾ ಇಟ್ಟಿದ್ದ ಎರಡು ಅಳತೆಗೋಲುಗಳಲ್ಲಿ ಒಂದು. ಇನ್ನೊಂದು ರಾಧಾಕೃಷ್ಣ ಮಾಯಿ. ಆಕೆಯಿದ್ದ ಮನೆಯನ್ನು ಬಾಬಾ "ಪಾಠಶಾಲೆ" ಎಂದು ಕರೆಯುತ್ತಿದ್ದರು. ಆಧ್ಯಾತ್ಮಿಕ ಪುರೋಭಿವೃದ್ಧಿಗೆ ಮುಖ್ಯವಾಗಿ ಎರಡು ಅಡ್ಡಗಳಿವೆ - ಐಶ್ವರ್ಯ ಮತ್ತು ಹೆಣ್ಣು. ಬಾಬಾ ತಮ್ಮ ಭಕ್ತರಿಗೆ ಅಗಾಗ ಈ ಎರಡೂ ಪರೀಕ್ಷೆಗಳನ್ನು ಒಡ್ಡುತ್ತಿದ್ದರು. ದಕ್ಷಿಣೆಯ ರೂಪದಲ್ಲಿ ಹಣ ಕೇಳುತ್ತಿದ್ದರು. ಅದಾದ ಮೇಲೆ ಅವರನ್ನು ಪಾಠಶಾಲೆಗೆ ಕಳುಹಿಸುತ್ತಿದ್ದರು. ರಾಧಾಕೃಷ್ಣ ಮಾಯಿ ಸುಂದರ ಯೌವನವತಿ. ವಿಧವೆ. ಆಕೆ ದೂರದ ಊರುಗಳಿಂದ ಬಂದ ಭಕ್ತರಿಗೆ ತನ್ನ ಮನೆಯಲ್ಲಿ ಊಟದ ವ್ಯವಸ್ಥೆ ಮಾಡುತ್ತಿದ್ದಳು. ತನ್ನ ಚೈತನ್ಯವನ್ನೆಲ್ಲಾ ಬಾಬಾರ ಸೇವೆಗೆ ಮುಡುಪಾಗಿಟ್ಟಿದ್ದಳು. ಅವಳ ಸೇವೆಗೆ ಸಂತುಷ್ಟರಾಗಿದ್ದ ಬಾಬಾ, ಅವಳ ಅರಿವಿಲ್ಲದಂತೆಯೇ ಆಕೆಗೆ ಹಲವು ಶಕ್ತಿಗಳನ್ನು ನೀಡಿದ್ದರು. ತನ್ನ ಎದುರು ಕೂತವರ ಯೋಚನಾ ಲಹರಿಗಳನ್ನು ಓದಬಲ್ಲವಳಾಗಿದ್ದಳು. ತನ್ನ ಸೌಂದರ್ಯವನ್ನು ಕಂಡು ಆಕರ್ಷಿತರಾದವರಿಗೆ, ಎಚ್ಚರಿಕೆ ಕೊಡುತ್ತಿದ್ದಳು. ಏನಾದರೂ ನೆವದಿಂದ ಬಾಬಾ ಭಕ್ತರನ್ನು ಪರೀಕ್ಷಿಸಲು ಅವಳ ಮನೆಗೆ ಕಳುಹಿಸುತ್ತಿದ್ದರು. ಈ ಎರಡೂ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ಭಕ್ತರ ಆಧ್ಯಾತ್ಮಿಕ ಅಭಿವೃದ್ಧಿ, ಕ್ಷಮಾಶೀಲ ದಯಾಪೂರ್ಣ ಬಾಬಾರ ಅನುಗ್ರಹದಿಂದ ತೀವ್ರಗತಿಯಲ್ಲಿ ಮುಂದುವರೆಯುತ್ತಿತ್ತು.
ಬಿ.ವಿ. ದೇವ್ ಗೀತೆ ಉಪನಿಷತ್ತುಗಳಿಂದಲೂ ಉದಹರಿಸಿ, “ಪುಣ್ಯ ಕ್ಷೇತ್ರಗಳಲ್ಲಿ ಸಂತರಿಗೆ, ಮಹಾತ್ಮರಿಗೆ ಕೊಟ್ಟ ದಕ್ಷಿಣೆ ಕೊಟ್ಟವರ ಅಭಿವೃದ್ಧಿಗೆ ಕಾರಣವಾಗುತ್ತದೆ. ಶಿರಡಿ ನಮಗೆ ಅಂತಹ ಪುಣ್ಯ ಕ್ಷೇತ್ರ. ಶ್ರೀ ಸಾಯಿ ಬಾಬಾ ಅಲ್ಲಿ ನೆಲಸಿರುವ ನಮ್ಮ ದೇವರು. ಅವರಿಗೆ ತಮ್ಮ ಸರ್ವಸ್ವವನ್ನೂ ಅರ್ಪಿಸಿ ಮತ್ತೊಮ್ಮೆ ಅವರ ಚರಣಗಳಿಗೆ ನಮಸ್ಕರಿಸಿ ಅವರ ಅಪಾರ ಕರುಣೆ ನಮ್ಮ ಮೇಲೆ ಸದಾ ಹರಿಯುತ್ತಿರಲಿ” ಎಂದು ಬೇಡಿಕೊಳ್ಳುತ್ತ, ತಮ್ಮ ದಕ್ಷಿಣೆಯ ಮೇಲಿನ ಹೆಚ್ಚಿನ ಮಾಹಿತಿಯನ್ನು ಮುಗಿಸಿದ್ದಾರೆ.
ಇದರೊಂದಿಗೆ ಸಂತರ ಜೀವನ, ರತನ್‍ಜೀ ಕಥೆ, ದಕ್ಷಿಣೆಯ ಮೀಮಾಂಸೆ ಮತ್ತು ಇತರ ವಿಷಯಗಳನ್ನು ಕುರಿತು ಹೇಳುವ ಹದಿನಾಲ್ಕನೆಯ ಅಧ್ಯಾಯ ಮುಗಿಯಿತು. ಮುಂದಿನ ಅಧ್ಯಾಯದಲ್ಲಿ ಹೇಮಾಡ್ ಪಂತ್ ನಾರದೀಯ ಕೀರ್ತನಾ ಪದ್ಧತಿ, ಚೋಳ್ಕರರ ಸಕ್ಕರೆಯಿಲ್ಲದ ಚಹ ಕಥೆ, ಎರಡು ಹಲ್ಲಿಗಳ ಕಥೆ ಇತ್ಯಾದಿ ವಿಷಯಗಳನ್ನು ಹೇಳುತ್ತಾರೆ.
||ಶ್ರೀ ಸದ್ಗುರು ಸಾಯಿನಾಥಾರ್ಪಣಮಸ್ತು||ಶುಭಂ ಭವತು||
||ಓಂ ಶಾಂತಿಃ ಶಾಂತಿಃ ಶಾಂತಿಃ||
||ಓಂ ಶಾಂತಿಃ ಶಾಂತಿಃ ಶಾಂತಿಃ||
No comments:
Post a Comment