Monday, December 12, 2011

||ನಾಲ್ಕನೆಯ ಅಧ್ಯಾಯ||


||ಶ್ರೀ ಸಾಯಿ ಸಚ್ಚರಿತ್ರೆ||
||ನಾಲ್ಕನೆಯ ಅಧ್ಯಾಯ||
||
ಸಾಯಿಬಾಬಾರ ಷಿರ್ಡಿ ಆಗಮನ||
ಶ್ರೀ ಗಣೇಶಾಯ ನಮಃ ಶ್ರೀ ಸರಸ್ವತಯೇ ನಮಃ
ಶ್ರೀವೆಂಕಟೇಶಾಯ ನಮಃ ಶ್ರೀಸಾಯಿನಾಥಾಯ ನಮಃ
ಶ್ರೀಸದ್ಗುರುಭ್ಯೋನ್ನಮಃ


ಅಧ್ಯಾಯದಲ್ಲಿ ಹೇಮಾಡ್ ಪಂತ್ ಸಂತರ ಧ್ಯೇಯ, ಸಾಯಿ ಶಿರಡಿಯಲ್ಲಿ ಪ್ರತ್ಯಕ್ಷವಾದದ್ದು, ವಿಠಲನಂತೆ ಕಾಣಿಸಿಕೊಂಡದ್ದು, ದಾಸಗಣು ಪ್ರಯಾಗಸ್ನಾನ ಮತ್ತು ಇತರ ವಿಷಯಗಳನ್ನು ಹೇಳುತ್ತಾರೆ.

ಸಂತರ ಧ್ಯೇಯ

ಸಂತರ, ಋಷಿಗಳ ಜೀವನ ಚರಿತ್ರೆಗಳು ಕೇಳುವವರ ಮನಸ್ಸನ್ನು ಪರವಶಗೊಳಿಸಿ ಕರ್ಣಾನಂದ ಮಾಡುವುದಷ್ಟೇ ಆಲ್ಲ, ಕದಡಿದ ಮನಸ್ಸಿಗೆ ಸಾಂತ್ವನ ನೀಡುವಂತಹವು ಕೂಡ. ಅಂತಹ ಚರಿತ್ರೆಗಳಲ್ಲೆಲ್ಲಾ ಶ್ರೀ ಸಾಯಿ ಸಚ್ಚರಿತ್ರೆ ಅಮೃತದಂತಹುದು. ಸಾಯಿ ಭಕ್ತರು ಈ ಅಮೃತವನ್ನು ಕುಡಿದು ವಿವಶರಾಗಿಹೋಗುತ್ತಾರೆ.

ಸಂತರು, ಋಷಿಗಳು ದಿನದಿನವೂ ಹುಟ್ಟುವಂತಹರಲ್ಲ. ಅವರು ಹುಟ್ಟುವುದು ಧರ್ಮೋದ್ಧಾರಕ್ಕಾಗಿಯೇ. ಧರ್ಮ ಪತಿತವಾಗಿ ಅಧರ್ಮ ತಲೆಯೆತ್ತಿ ನಿಂತಾಗ ಧರ್ಮಸ್ಥಾಪನೆಗೋಸ್ಕರ ದೇವರೇ ಸಂತರ ರೂಪದಲ್ಲಿ ಅವತಾರ ತಾಳುತ್ತಾನೆ. ಧರ್ಮವನ್ನು ಆಚರಿಸುವವರು ಕಷ್ಟ ನಷ್ಟಗಳಿಗೊಳಗಾದಾಗ, ಜನರು ಐಶ್ವರ್ಯ, ಹೆಂಡತಿ, ಮಕ್ಕಳೇ ಜೀವನೋದ್ದೇಶ ಎಂದುಕೊಂಡಾಗ, ಮತಾಚಾರಗಳನ್ನು ಬಿಟ್ಟು, ತಾವೇ ಅತ್ಯಂತ ಮೇಧಾವಂತರು ಎಂದು ಭಾವಿಸಿದಾಗ, ಧರ್ಮದ ಹೆಸರಿನಲ್ಲಿ ಅನ್ಯಾಯಗಳು ಹೆಚ್ಚಾದಾಗ, ಅಧರ್ಮವೇ ಪ್ರಧಾನವಾಗಿ, ಧರ್ಮಕ್ಕೆ ಚ್ಯುತಿ ಬರುತ್ತದೆ. ಧರ್ಮವನ್ನು ಮತ್ತೆ ಅದರ ಉನ್ನತ ಸ್ಥಾಯಿಗೆ ತರಲು, ಅಧರ್ಮವನ್ನು ತುಳಿದುಹಾಕಲು, ದೇವರೇ ಮತ್ತೆ ಮತ್ತೆ ಅವತರಿಸುತ್ತಾನೆ. ಸಂತರು, ಸತ್ಪುರುಷರು, ಅವಧೂತರು ಧರ್ಮವನ್ನು ಶಾಶ್ವತಗೊಳಿಸಲು ಅವತರಿಸಿ ಬರುವ ದೇವರೇ! ಜನಬಾಹುಳ್ಯಕ್ಕೆ ಸಾಂತ್ವನ ಕೊಟ್ಟು, ಧರ್ಮ ಸ್ಥಾಪನೆ ಮಾಡಿ, ತಮ್ಮ ಅವತಾರ ಕಾರ್ಯ ಮುಗಿಸಿ ಮತ್ತೆ ತಮ್ಮ ಧಾಮಕ್ಕೆ ಹಿಂತಿರುಗುತ್ತಾರೆ.

ಸಾಯಿಬಾಬಾರು ಅಂತಹ ಸದ್ಗುರು. ಅವರು ದೇವರ ಅಪರಾವತಾರ. ವೇದಗಳು ಶಾಸ್ತ್ರಗಳು ಅವರನ್ನು ವರ್ಣಿಸಲಾರವು. ಆ ಸದ್ಗುರುವಿಗೆ ಕಾಯಾ, ವಾಚಾ, ಮನಸಾ ಯಾರು ಶರಣಾಗುತ್ತಾರೋ ಅವರಿಗೆ ಆತ ಶಾಶ್ವತ ಆನಂದ ದಯಪಾಲಿಸುತ್ತಾನೆ. ಆತನ ಚರ್ಯೆಗಳನ್ನು ಯಾರೂ ವಿವರಿಸಲು ಸಾಧ್ಯವಿಲ್ಲ. ಮಾತುಗಳು ಹೇಳಲಾರದ್ದನ್ನು ಮೌನವೇ ಹೇಳುತ್ತದೆ. ಸದ್ಗುರುವಿನ ಪ್ರೇರಣೆಯಿಂದಲೇ ಭಕ್ತರು ಅವರ ವಿಚಿತ್ರ ಚರ್ಯೆಗಳನ್ನು ಅರ್ಥಮಾಡಿಕೊಳ್ಳಬಲ್ಲರು. ಕಣ್ಣು ನೋಡಬಲ್ಲದು. ಕಿವಿ ಕೇಳಬಲ್ಲದು. ಆದರೆ ಕಣ್ಣು ಕೇಳಲಾರದು. ಕಿವಿ ನೋಡಲಾರದು. ಹಾಗೆ ಸದ್ಗುರುವಿನ ಬಳಿ ಹೋದ ಒಬ್ಬೊಬ್ಬನಿಗೂ ಆಗುವ ಅನುಭವ ಅವನದೇ ಹೊರತು ಇನ್ನೊಬ್ಬನಿಗೆ ಅದು ತಿಳಿಯುವುದಿಲ್ಲ.

ಸಂತರು ತಾವು ವ್ಯಕ್ತವಾಗುವ ಸ್ಥಳವನ್ನು ತಾವೇ ಆರಿಸಿಕೊಳ್ಳುತ್ತಾರೆ. ಆ ಸ್ಥಳಗಳು ಅವರಿಂದ ಪ್ರಭಾವಿತವಾಗಿ ಭಕ್ತರಿಗೆ ಆಕರ್ಷಿತವಾಗುತ್ತವೆ. ನರಸೋಬಾವಾಡಿ, ಗಾಣಗಾಪುರ, ಔದುಂಬರ, ಭಿಲ್ಲವಾಡಿ, ಅಂತಹ ಕೆಲವು ಪುಣ್ಯಸ್ಥಳಗಳು. ಬಾಬಾ ಉಪಸ್ಥಿತರಾಗಿದ್ದುದರಿಂದಲೇ ಶಿರಡಿ ಪವಿತ್ರ ಸ್ಥಳವಾಯಿತು. ಈ ಅತ್ಯಂತ ಪುಣ್ಯಸ್ಥಳವಾದ ಶಿರಡಿ, ಅಹಮದ್ ನಗರ ಜಿಲ್ಲೆಯ ಕೋಪರ‍್ಗಾಂವ್ ತಾಲ್ಲೂಕಿನ ನೀಮ್‍ಗಾಂವ್‍ಗೆ ೩ ಕಿ.ಮೀ. ದೂರದಲ್ಲಿದೆ. ದಾಮಾಜಿ ಅವರಿಂದ ಮಂಗಳವಾಡ, ಸಮರ್ಥ ರಾಮದಾಸರಿಂದ ಸಜ್ಜನಗಢ, ನರಸಿಂಹ ಸರಸ್ವತಿಯವರಿಂದ ನರಸೋಬಾವಾಡಿ ಪವಿತ್ರವಾದಂತೆ, ಶಿರಡಿ ತನ್ನ ವಿಶೇಷತೆಯನ್ನು ಬಾಬಾರ ಉಪಸ್ಥಿತಿಯಿಂದಲೇ ಪಡೆಯಿತು.

ಸಾಯಿಬಾಬಾ ಸರ್ವತ್ರ ಪ್ರೀತಿಯನ್ನು ಹರಡುವುದಕ್ಕಾಗಿ ಶಿರಡಿಯನ್ನು ಆರಿಸಿಕೊಂಡರು. ಆತ ಪರಮ ಉದಾರಿ. ಬಡವ, ಬಲ್ಲಿದ ಎಂಬ ಭೇದವಿರಲಿಲ್ಲ. ಸುಖ ದುಃಖಗಳಿಗೆ ಅತೀತರಾದವರು. ತಾವು ಎಲ್ಲರಲ್ಲಿದ್ದರೂ ಯಾರಿಗೂ ಸೇರಿದವರಲ್ಲ. ಆತನ ಮನಸ್ಸು ಸದಾಕಾಲದಲ್ಲಿಯೂ "ಅಲ್ಲಾ ಮಾಲೀಕ್" ಎನ್ನುವುದರಲ್ಲೇ ನಿರತವಾಗಿರುತ್ತಿತ್ತು. ಪ್ರಾಪಂಚಿಕ ವ್ಯವಹಾರಗಳಲ್ಲಿ ಇದ್ದಹಾಗೆ ಕಾಣಿಸಿಕೊಂಡರೂ ಸದಾ ಸಮಾಧಿಸ್ಥಿತಿಯಲ್ಲೇ ಇರುತ್ತಿದ್ದರು. ತನ್ನ ಭಕ್ತರ ರಕ್ಷಣೆಯಲ್ಲಿ ಸದಾಕಾಲದಲ್ಲಿಯೂ ಗಾಢವಾದ ಆಸಕ್ತಿಯಿದ್ದವರು. ತನ್ನಲ್ಲಿ ಶರಣಾಗತರಾದವರನ್ನು ಪ್ರಾಪಂಚಿಕ ಬಂಧನಗಳಿಂದ ಬಿಡಿಸುವುದೇ ಅವರು ಶಿರಡಿಯಲ್ಲಿ ನೆಲೆಸಿದುದರ ಉದ್ದೇಶ.

ಬಾಬಾರ ಭಕ್ತರಿಗೆ ಶಿರಡಿಯೇ ಪಂಡರಪುರ, ಬದರಿ, ಕೇದಾರ, ಕಾಶಿ, ರಾಮೇಶ್ವರ, ನಾಸಿಕ್, ಪುರಿಜಗನ್ನಾಥ, ಗೋಕರ್ಣ ಎಲ್ಲವೂ. ಸಾಯಿಯ ದರ್ಶನವೇ ಅವರ ಅಂತಿಮ ಗುರಿ. ಅವರು ಬಾಬಾರ ಪಾದಗಳಲ್ಲಿ ಸಂಗಮವನ್ನು ಕಂಡರು. ಅವರಿಗೆ ಬಾಬಾರ ಸಾಂತ್ವನದ ಮಾತುಗಳು ಅಮೃತವರ್ಷ. ಅವರಿಗೆ ಬಾಬಾರೇ ಶ್ರೀ ರಾಮ, ಶ್ರೀ ಕೃಷ್ಣ. ಸರ್ವವ್ಯಾಪಿಯಾದರೂ ಬಾಬಾರಿಗೆ ಶಿರಡಿಯೇ ಕೇಂದ್ರ. ಬಾಬಾ ಕೊಟ್ಟ ಉದಿ ಬರಿಯ ಬೂದಿಯಲ್ಲ. ಪವಿತ್ರ ವಿಭೂತಿ. ಏಕನಾಥರು ಪೈಠಾನವನ್ನೂ, ಜ್ಞಾನದೇವರು ಆಳಂದಿಯನ್ನೂ, ಕೀರ್ತಿಗೊಳಿಸಿದಂತೆ ಬಾಬಾರವರು ಶಿರಡಿಯನ್ನು ಕೀರ್ತಿಗೊಳಿಸಿದರು. ಬಾಬಾ ಆತ್ಮಜ್ಞಾನಿಯಾಗಿದ್ದರೂ ಹೊರಗೆ ಏನೂ ತಿಳಿಯದ ಸಾಮಾನ್ಯ ಮನುಷ್ಯನಂತೆ ಕಾಣಿಸಿಕೊಳ್ಳುತ್ತಿದ್ದರು. ಈಗ ಅವರನ್ನು ಪ್ರತ್ಯಕ್ಷ ದರ್ಶನ ಮಾಡಲಾಗದಂತಹ ನಮಗೆ ಅವರ ಸಮಾಧಿ ದರ್ಶನವೇ ಪರಮ ಪಾವನ.

ಬಾಬಾರವರ ಬಳಿ ಬರುವವರೆಲ್ಲಾ, ಮೊದಮೊದಲು ತಮ್ಮ ತಮ್ಮ ಪ್ರಾಪಂಚಿಕ ಕಷ್ಟಗಳ ನಿವಾರಣೆಗಾಗಿಯೇ ಬರುವವರು. ಅದರಲ್ಲಿ ಅವರಿಗೆ ಸಮಾಧಾನ ಸಿಕ್ಕಿದ ಮೇಲೆ ಅವರನ್ನು ಬಾಬಾ ಪಾರಮಾರ್ಥಿಕದ ಕಡೆಗೆ ತಿರುಗಿಸುತ್ತಾರೆ. ಬಾಬಾರೇ ಅವರಿಗೆ ದಾರಿತೋರಿಸಿ ಅವರನ್ನು ಗುರಿಮುಟ್ಟಿಸುತ್ತಾರೆ. ಜಾತಿ, ಕುಲ, ಮತ, ಲಿಂಗ ಭೇದವಿಲ್ಲದೆ ಆಧ್ಯಾತ್ಮಿಕ ಆಸರೆ ಕೊಡುವುದೇ ಬಾಬಾರ ಅವತಾರದ ಆದ್ಯ ಕರ್ತವ್ಯ. ಅವರ ಕೀರ್ತಿ ದೂರದೂರಗಳಿಗೂ ಹಬ್ಬಿ ಜನ ಎಲ್ಲ ಕಡೆಗಳಿಂದಲೂ ಮನಶ್ಶಾಂತಿಯನ್ನು ಪಡೆಯಲು ಶಿರಡಿಗೆ ಬಂದರು. ಪಂಡರಿಯಲ್ಲಿ ವಿಠಲ ರುಕ್ಮಾಬಾಯಿಯವರ ದರ್ಶನದಿಂದ ಪಡೆಯುವ ಆನಂದವನ್ನು, ಶಿರಡಿಯಲ್ಲಿ ಬಾಬಾರ ದರ್ಶನದಿಂದ ಪಡೆದರು. ಇದು ಉತ್ಪ್ರೇಕ್ಷೆಯಲ್ಲ. ಕೆಳಗಿನ ಉದಾಹರಣೆಗಳು ಅದನ್ನು ತೋರಿಸುತ್ತವೆ.

ಗೌಳಿಬುವಾರ ಕಥೆ

ವಾರ್ಕರಿ ಪಂಥಕ್ಕೆ ಸೇರಿದ ಗೌಳಿಬುವಾ, ವಿಠಲ ಭಕ್ತರು. ವಾರ್ಕರಿಪಂಥದವರು ೬೦೦ ವರ್ಷಗಳ ಪರಂಪರೆಯನ್ನು ಪಾಲಿಸುತ್ತ ವರ್ಷಕ್ಕೆರಡು ಸಲವಾದರೂ ಆಳಂದಿಯಿಂದ ಪಂಡರಪುರಕ್ಕೆ ಪಾದಯಾತ್ರೆ ಮಾಡುತ್ತಾರೆ. ಗೌಳಿಬುವಾಗೆ ೯೫ ವರ್ಷ ವಯಸ್ಸು. ಅವರು ಚಾತುರ್ಮಾಸ್ಯವನ್ನು ಗಂಗಾ ತೀರದಲ್ಲಿ ಕಳೆಯುತ್ತಿದ್ದರು. ಅವರ ಬಳಿ ಒಬ್ಬ ಶಿಷ್ಯ, ಸಾಮಾನುಗಳನ್ನು ಹೊರುವುದಕ್ಕೆ ಒಂದು ಕತ್ತೆ ಇರುತ್ತಿತ್ತು. ಪ್ರತಿ ವರ್ಷವೂ, ಪಂಡರಪುರ ಯಾತ್ರೆಯಲ್ಲಿ ಅವರು ಶಿರಡಿಗೆ ಬಂದು, ಬಾಬಾರ ದರ್ಶನ ಮಾಡುತ್ತಿದ್ದರು. ಬಾಬಾರ ಬಗ್ಗೆ ಅವರು ಹೀಗೆ ಹೇಳುತ್ತಿದ್ದರು, "ಅವರು ಪಂಡರಿನಾಥನ ಅವತಾರವೇ! ಅನಾಥರ, ಬಡವರ ಬಂಧು. ರೇಶ್ಮೆ ಜರತಾರಿಗಳನ್ನು ಉಟ್ಟವರೇ ಮಹಾತ್ಮರಾಗುವುದಿಲ್ಲ. ಬಾಬಾರೊಬ್ಬರೇ ಪಂಡರಿನಾಥನ ಅವತಾರ! ಭಕ್ತರೇ ಇದನ್ನು ತಮ್ಮ ಅನುಭವಗಳಿಂದ ತಿಳಿದುಕೊಳ್ಳುತ್ತಾರೆ."

ದಾಸಗಣು ಮತ್ತು ಕಾಕಾ ಸಾಹೇಬ್ ದೀಕ್ಷಿತರಿಗೆ ಬಾಬಾ ಪಂಡರಿನಾಥನಂತೆ ಕಾಣಿಸಿಕೊಳ್ಳುವುದು

ಸದಾ ಕಾಲವೂ "ಅಲ್ಲಾ ಮಾಲೀಕ್" ಎಂದು ಉಚ್ಚರಿಸುವ ಬಾಬಾ ಒಂದುದಿನ ದಾಸಗಣುವಿಗೆ ನಾಮ ಸಪ್ತಾಹ ಮಾಡುವಂತೆ ಹೇಳಿದರು. ಸಪ್ತಾಹದ ಕೊನೆಯಲ್ಲಿ ಪಂಡರಿನಾಥನ ದರ್ಶನವಾಗುತ್ತದೆ ಎಂಬ ಭರವಸೆ ಕೊಟ್ಟರೆ ಮಾತ್ರ ಮಾಡುತ್ತೇನೆಂದರು, ದಾಸಗಣು. ಬಾಬಾ ಅದಕ್ಕೆ, "ಭಕ್ತಿ ಶ್ರದ್ಧೆಗಳಿಂದ ಸಪ್ತಾಹ ಮಾಡಿದರೆ ಖಂಡಿತವಾಗಿಯೂ ವಿಠಲ ಕಾಣಿಸಿಕೊಳ್ಳುತ್ತಾನೆ. ಒಮ್ಮನಸ್ಸಿನಿಂದ ನೋಡಿದರೆ ಪಂಡರಪುರ, ದ್ವಾರಕೆ ಎಲ್ಲವೂ ಇಲ್ಲಿಯೇ ಇವೆ. ವಿಠಲ ಇನ್ನೆಲ್ಲೋ ಇಲ್ಲ. ಪ್ರೀತಿಯ ಕರೆಗೆ ಇಲ್ಲಿಯೇ ಓಗೊಡುತ್ತಾನೆ" ಎಂದರು. ಸಪ್ತಾಹದ ಕೊನೆಯ ದಿನ ದಾಸಗಣುವಿಗೆ ವಿಠಲನ ದರ್ಶನವಾಯಿತು.

ಕಾಕಾ ಸಾಹೇಬ್ ದೀಕ್ಷಿತರಿಗೂ ಒಂದು ದಿನ ಬೆಳಗ್ಗೆ ಧ್ಯಾನಮಗ್ನರಾಗಿದ್ದಾಗ ವಿಠಲನ ದರ್ಶನವಾಯಿತು. ನಂತರ ಅವರು ಬಾಬಾರನ್ನು ಕಾಣಲು ಹೋದಾಗ ಬಾಬಾ, "ವಿಠಲಪಾಟೀಲ ಬಂದಿದ್ದ ಅಲ್ಲವೇ? ಅವನನ್ನು ಭದ್ರವಾಗಿ ಹಿಡಿದುಕೋ. ಬಿಡಬೇಡ. ಬಿಟ್ಟರೆ ಓಡಿಹೋಗುತ್ತಾನೆ" ಎಂದರು. ಅಂದು ಮಧ್ಯಾಹ್ನ ಯಾರೋ ವಿಠಲನ ಚಿತ್ರಗಳನ್ನು ಮಾರಾಟ ಮಾಡಲು ತಂದರು. ಆ ಚಿತ್ರಗಳು ಬೆಳಗ್ಗೆ ಕಾಕಾ ಸಾಹೇಬ್ ಧ್ಯಾನದಲ್ಲಿ ಕಂಡ ವಿಠಲನಂತೆಯೇ ಇತ್ತು. ಅದನ್ನು ನೋಡಿ ಕಾಕಾಸಾಹೇಬ್ ಆಶ್ಚರ್ಯಪಟ್ಟು ಒಂದು ಚಿತ್ರ ಕೊಂಡು ಪೂಜಾ ಮಂದಿರದಲ್ಲಿ ಇಟ್ಟರು.

ಭಗವಂತರಾವ್ ಅವರ ಕಥೆ

ಭಗವಂತರಾವ್ ಅವರ ತಂದೆ ಕ್ಷೀರಸಾಗರ್ ವಿಠಲನ ಭಕ್ತರು. ಪ್ರತಿದಿನ ವಿಠಲನ ಪೂಜೆ ನೈವೇದ್ಯಗಳನ್ನು ತಪ್ಪಿಸುತ್ತಿರಲಿಲ್ಲ. ಪ್ರತಿ ವರ್ಷ ಕ್ಷೀರಸಾಗರ್, ಪಂಡರಿ ಯಾತ್ರೆಯನ್ನೂ ತಪ್ಪದೇ ಮಾಡುತ್ತಿದ್ದರು. ಅವರು ನಿಧನರಾದ ಮೇಲೆ ಭಗವಂತರಾವ್ ಪೂಜೆ, ನೈವೇದ್ಯ, ಯಾತ್ರೆಗಳನ್ನು ನಿಲ್ಲಿಸಿಬಿಟ್ಟರು. ಆತ ಶಿರಡಿಗೆ ಬಂದಾಗ ಬಾಬಾ ಹೇಳಿದರು, "ಅವನು ನನ್ನ ಭಕ್ತನ ಮಗ. ನನ್ನನ್ನೂ ವಿಠಲನನ್ನೂ ಉಪವಾಸವಿಟ್ಟಿದ್ದಾನೆ. ಅದಕ್ಕೇ ಅವನನ್ನು ಇಲ್ಲಿಗೆ ಕರೆಯಿಸಿದ್ದೇನೆ. ಅವನು ಮತ್ತೆ ಪೂಜೆ ನೈವೇದ್ಯಗಳನ್ನು ಆರಂಭಿಸುವಂತೆ ಮಾಡುತ್ತೇನೆ."

ದಾಸಗಣು ಕಥೆ

ಒಂದು ಸಲ ಮಹಾಶಿವರಾತ್ರಿಯ ದಿನ ಗಣಪತ ದತ್ತಾತ್ತ್ರೇಯ ಸಹಸ್ರಬುದ್ಧೆ (ದಾಸಗಣು ಎಂದು ಬಾಬಾ ಅವನನ್ನು ಪ್ರೀತಿಯಿಂದ ಕರೆಯುವುದು) ಪ್ರಯಾಗದಲ್ಲಿ ಸ್ನಾನ ಮಾಡಿ ಬರಬೇಕೆಂಬ ಇಚ್ಛೆಯಿಂದ ಬಾಬಾರ ಅನುಮತಿ ಕೇಳಿದರು. ಆಗ ಬಾಬಾ, "ಧೃಢವಾದ ನಂಬಿಕೆಯಿದ್ದರೆ, ಆ ಗಂಗಾ ಯಮುನೆಯರು ಇಲ್ಲೇ ಪ್ರತ್ಯಕ್ಷವಾಗುತ್ತಾರೆ. ಪ್ರಯಾಗಕ್ಕೆ ಹೋಗಬೇಕಾದ ಅವಶ್ಯಕತೆ ಇಲ್ಲ." ಎಂದರು. ದಾಸಗಣು ಭಯಭಕ್ತಿಗಳಿಂದ ಅವರ ಪಾದಗಳಿಗೆ ನಮಸ್ಕಾರ ಮಾಡಿದರು. ಅವರ ಮಸ್ತಕ ಬಾಬಾರ ಪಾದಗಳನ್ನು ಮುಟ್ಟುತ್ತಲೇ, ಪಾದಗಳ ಹೆಬ್ಬೆರಳುಗಳಿಂದ ಗಂಗಾ ಯಮುನೆಯರು ಹರಿಯಲು ಆರಂಭಿಸಿದರು. ಈ ಅದ್ಭುತ ಲೀಲೆಯಿಂದ ಆಶ್ಚರ್ಯಗೊಂಡ ದಾಸಗಣು, ಬಾಬಾರ ಲೀಲೆಗಳನ್ನು ಕುರಿತು ಈ ರೀತಿ ಹಾಡತೊಡಗಿದರು.

"ಸದ್ಗುರು ಬಾಬಾ! ನಿನ್ನ ಶಕ್ತಿ ಅಪ್ರಮೇಯವಾದುದು. ಅದ್ಭುತವಾದದ್ದು. ನಿನ್ನ ಲೀಲೆಗಳು ಸಂಸಾರವೆಂಬ ಸಾಗರದಿಂದ ನಮ್ಮನ್ನು ದಾಟಿಸುವ ನೌಕೆ. ಗಂಗಾ ಯಮುನೆಗಳು ನಿನ್ನ ಪಾದತಲದಲ್ಲಿ ಹರಿಯುವಂತೆ ಮಾಡಿದೆ. ನೀನೇ ಬ್ರಹ್ಮ ವಿಷ್ಣು ಮಹೇಶ್ವರರ ಸಂಗಮ. ಕೆಲವು ಸಲ ಬ್ರಹ್ಮನಂತೆ ಉಪದೇಶ ಕೊಡುತ್ತೀಯೆ. ಇನ್ನು ಕೆಲವು ಸಲ ರುದ್ರನಂತೆ ಉಗ್ರನಾಗುತ್ತೀಯೆ. ಮತ್ತೊಂದು ಸಲ ಬಾಲ ಕೃಷ್ಣನಂತೆ ಲೀಲೆಗಳನ್ನು ತೋರಿಸುತ್ತೀಯೆ. ನಿನ್ನನ್ನು ಜನರು ಹಾಡಿ ಹೊಗಳುತ್ತಾರೆ. ನಿನ್ನನ್ನು ಮುಸ್ಲಿಮ್ ಎನ್ನೋಣ ಎಂದರೆ ಗಂಧದ ಮೇಲೆ ಪ್ರೇಮ. ಹಿಂದು ಎನ್ನೋಣವೇ ಎಂದರೆ ಮಸೀದಿಯಲ್ಲಿ ಸದಾ ನಿನ್ನ ಸುಖದಾಮ. ಶ್ರೀಮಂತನೋ ಎಂದರೆ ಭಿಕ್ಷೆ ಎತ್ತುತ್ತೀಯೆ. ಬಡವ ಎನ್ನೋಣವೆಂದರೆ ಔದಾರ್ಯದಲ್ಲಿ ಕುಬೇರನನ್ನೂ ಮೀರಿಸುತ್ತೀಯೆ. ಉದಿ ಪ್ರಸಾದವನ್ನು ಕೊಡಲು, ಸದಾ ಧುನಿಯನ್ನು ಉರಿಸುತ್ತೀಯೆ. ನಿನಗೆ ಆರತಿ ಎತ್ತುತ್ತಾರೆ. ಗಾಳಿ ಬೀಸುತ್ತಾರೆ. ಆರತಿ ನಡೆಯುವಾಗ, ನೀನು ಪ್ರಚಂಡ ಸೂರ್ಯನಂತೆ ಬೆಳಗುತ್ತೀಯೆ. ಧುನಿಯ ಬಳಿ ಕುಳಿತಾಗ ಶಿವನಂತೆ ತೋರುತ್ತೀಯೆ. ನಿನ್ನ ಸಮಕ್ಷಮದಲ್ಲಿ ಇರುವಾಗ ತ್ರಿಮೂರ್ತಿಗಳ ಜೊತೆ ಇರುವ ಅನುಭವವಾಗುತ್ತದೆ." ಈ ರೀತಿಯಲ್ಲಿ ಬಾಬಾರನ್ನು ಸ್ತುತಿಸಿ ದಾಸಗಣು, “ನನ್ನ ಮನಸ್ಸು ಸದಾಕಾಲ ನಿನ್ನಲ್ಲಿ ನೆಲಸಿರುವಂತೆ ಅನುಗ್ರಹಿಸು” ಎಂದು ಪ್ರಾರ್ಥಿಸಿದರು.

ಸಾಯಿ ಬಾಬಾ ಶಿರಡಿಯಲ್ಲಿ ಮೊದಲನೆಯ ಸಲ ಪ್ರತ್ಯಕ್ಷವಾದದ್ದು

ಜನರು ಗಂಗೆಯಲ್ಲಿ ಮಿಂದು ಪಾಪಗಳನ್ನು ತೊಳೆದುಕೊಳ್ಳುತ್ತಾರೆ. ಆದರೆ ತಾನು ಪಡೆದುಕೊಂಡ ಜನರ ಪಾಪಗಳೆಲ್ಲಾ ತೊಳೆದುಹೋಗಲೆಂದು ಗಂಗೆಯು, ಸಂತರ ಪಾದಗಳು ಸದಾ ತನ್ನಲ್ಲಿರುವಂತೆ ಆಸೆಪಡುತ್ತಾಳೆ. ಅಂತಹ ಸಂತರು ಭೂಮಿಗೆ ಬರುವುದು ಲೋಕೋದ್ಧಾರಕ್ಕಾಗಿಯೇ. ಇಂತಹ ಸಂತರ ಜನ್ಮರಹಸ್ಯಗಳು ಯಾರಿಗೂ ತಿಳಿಯದು. ನಾಮದೇವರು ಗೋಮಾಯಿಗೆ ಭೀಮರತಿ ನದಿಯಲ್ಲಿ ಕಾಣಿಸಿ ಕೊಂಡರು. ಕಬೀರರು ತಮಾಲ್‍ಗೆ ಭಾಗೀರಥಿ ನದಿಯಲ್ಲಿ ಕಾಣಿಸಿದರು. ಅಂತೆಯೇ ಬಾಬಾರೂ ಕೂಡಾ ಬೇವಿನ ಮರದ ಕೆಳಗೆ ೧೬ ವರ್ಷದ ಬಾಲಕನಾಗಿ ಮೊದಲು ಕಾಣಿಸಿಕೊಂಡರು. ಆಗಲೇ ಆತನ ವರ್ಚಸ್ಸು ಎಷ್ಟಿತ್ತೆಂದರೆ ಜನರೆಲ್ಲಾ ಅವರನ್ನು ಬ್ರಹ್ಮಜ್ಞಾನಿಯೆಂದೇ ಭಾವಿಸಿದರು. ಅವರನ್ನು ಬೇವಿನ ಮರದ ಕೆಳಗೆ ಕಂಡ ನಾನಾ ಚೋಪ್ದಾರರ ತಾಯಿ ಹೀಗೆ ಹೇಳಿದರು, "ಈ ಸುಂದರ ಬಾಲಕ ಬೇವಿನ ಮರದ ಕೆಳಗೆ ಯೋಗಾಸೀನನಾಗಿ ಕುಳಿತಿದ್ದ. ಗಾಳಿ ಮಳೆಗೆ ಹೆದರದೆ ಯಾವಾಗಲೂ ಧ್ಯಾನಮಗ್ನನಾಗಿರುತ್ತಿದ್ದ. ಹಳ್ಳಿಯವರಿಗೆ ಅವನನ್ನು ಕಂಡಕೂಡಲೇ ಅವನಮೇಲೆ ಪ್ರೀತಿಯುಂಟಾಯಿತು. ಅವನು ಯಾರ ಜೊತೆಯೂ ಸೇರುತ್ತಿರಲಿಲ್ಲ. ಅವನು ಎಲ್ಲಿಯವನು, ಹೇಗೆ ಇಲ್ಲಿಗೆ ಬಂದ, ಯಾರ ಮಗ ಇತ್ಯಾದಿ ವಿವರಗಳು ಯಾರಿಗೂ ತಿಳಿದಿಲ್ಲ."

ಗುರುಸ್ಠಾನ

ಒಂದು ದಿನ ಖಂಡೋಬಾ ದೇವರು ಒಬ್ಬನ ಮೈಮೇಲೆ ಬಂದಾಗ ಅವನನ್ನು ಜನರು ಈ ಹುಡುಗ ಯಾರು, ಎಲ್ಲಿಂದ ಬಂದ ಎಂದು ಕೇಳಿದಾಗ ದೇವರು, ಹತ್ತಿರದ ಬೇವಿನ ಮರದ ಕೆಳಗೆ ಒಂದು ಸ್ಥಳ ತೋರಿಸಿ, "ಅಲ್ಲಿ ಅಗೆಯಿರಿ. ನಿಮಗೆ ಅವನ ವಿವರಗಳು ದೊರೆಯುತ್ತವೆ" ಎಂದು ಹೇಳಿದ. ಹಳ್ಳಿಗರು ಅಲ್ಲಿ ಅಗೆದಾಗ ಒಂದು ವರಸೆ ಇಟ್ಟಿಗೆ, ಅದರ ಕೆಳಗೆ ಕಲ್ಲು ಚಪ್ಪಡಿ ಕಾಣಿಸಿತು. ಚಪ್ಪಡಿಯನ್ನು ಜರುಗಿಸಿ ನೋಡಿದಾಗ ಒಳಗೊಂದು ಗುಹೆ. ಅಲ್ಲೊಂದು ಪೀಠ. ಅದರಮೇಲೆ ನಾಲ್ಕು ದೀಪಗಳು ಉರಿಯುತ್ತಿವೆ. ಖಂಡೋಬಾ "ಈ ಹುಡುಗ ಇಲ್ಲಿ ೧೨ ವರ್ಷ ತಪಸ್ಸು ಮಾಡಿದ" ಎಂದು ಹೇಳಿದ. ಇದರ ವಿಷಯವಾಗಿ ಆ ಹುಡುಗನನ್ನು ಕೇಳಿದರೆ ಅವನು, "ಇದು ನನ್ನ ಗುರುಸ್ಥಾನ. ಅದನ್ನು ಮತ್ತೆ ಹಾಗೆಯೇ ಮುಚ್ಚಿ ಜೋಪಾನಮಾಡಿ, ಅಲ್ಲಿ ಪೂಜೆ ಮಾಡಿಕೊಳ್ಳಿ" ಎಂದ. ಅಂದಿನಿಂದ ಶಿರಡಿಯ ಜನ ಅದನ್ನು ಗುರುಸ್ಠಾನವೆಂದು ತಿಳಿದು ಅಲ್ಲಿ ಪೂಜಿಸತೊಡಗಿದರು. ನಂತರ ಬಾಬಾ ಹೇಳಿದರು, "ಯಾರು ಈ ಜಾಗವನ್ನು ಶುಭ್ರ ಮಾಡಿ ಗುರುವಾರ ಶುಕ್ರವಾರಗಳಲ್ಲಿ ಧೂಪವನ್ನು ಹಚ್ಚುತ್ತಾರೋ ಅವರನ್ನು ಶ್ರೀ ಹರಿ ಅನುಗ್ರಹಿಸುತ್ತಾನೆ."

ಶಿರಡಿಯಲ್ಲಿನ ಮೂರು ವಾಡಾಗಳು

ಹರಿ ವಿನಾಯಕ ಸಾಠೆ ಎನ್ನುವ ಬಾಬಾ ಭಕ್ತರು ಬೇವಿನ ಮರದ ಕೆಳಗಿನ ಜಾಗವನ್ನೆಲ್ಲ ಕೊಂಡು ೧೯೦೮ರಲ್ಲಿ, ಶಿರಡಿಗೆ ಬರುವ ಭಕ್ತರು ಇಳಿದುಕೊಳ್ಳಲು ಅನುಕೂಲವಾಗುವಹಾಗೆ, ಒಂದು ಕಟ್ಟಡ ಕಟ್ಟಿದರು. ಅದೇ ಸಾಠೇವಾಡಾ.

ಕಾಕಾ ಸಾಹೇಬ್ ದೀಕ್ಷಿತ್ ಲಂಡನ್‍ಗೆ ಹೋಗಿದ್ದಾಗ ಅಪಘಾತದಲ್ಲಿ ಅವರ ಕಾಲಿಗೆ ಪೆಟ್ಟಾಗಿ ಕಾಲು ಕುಂಟಾಯಿತು. ಅದರಿಂದ ನಡೆಯುವುದು ಕಷ್ಟವಾಯಿತು. “ಬಾಬಾರ ಬಳಿಗೆ ಹೋದರೆ ನಿನ್ನ ಕಷ್ಟ ಹೋಗಲಾಡಿಸುತ್ತಾರೆ”, ಎಂದು ನಾನಾಸಾಹೇಬ್ ಚಾಂದೋರ್ಕರ್ ಅವರಿಗೆ ಹೇಳಿದರು. ಆದರೆ ೨.೧೧.೧೯೦೯ರಲ್ಲಿ ದೀಕ್ಷಿತ್ ಬಾಬಾರ ದರ್ಶನಮಾಡಿದಾಗ ತನ್ನ ಕಾಲಿಗಿಂತ ತನ್ನ ಚಂಚಲ ಮನಸ್ಸನ್ನು ಸರಿಪಡಿಸುವಂತೆ ಕೇಳಿಕೊಂಡರು. ಅದಾದಮೇಲೆ ಬಾಬಾರಿಂದ ಆಕರ್ಷಿತರಾದ ಅವರು ಶಿರಡಿಯಲ್ಲೇ ನೆಲೆಸಲು ನಿಶ್ಚಯಿಸಿ, ಬಾಬಾರ ಅನುಮತಿಯಿಂದ ೧೦.೧೨.೧೯೧೦ರಲ್ಲಿ ಒಂದು ವಾಡಾ ಕಟ್ಟಲು ನಿರ್ಧರಿಸಿ ಅದಕ್ಕೆ ಅಡಿಪಾಯ ಹಾಕಿದರು. ಅಂದೇ ಶಿರಡಿಯಲ್ಲಿ ಶೇಜಾರತಿ ಪ್ರಾರಂಭವಾಯಿತು. ೧೯೧೧ರಲ್ಲಿ ದೀಕ್ಷಿತ್ ವಾಡಾ ಪೂರ್ತಿಯಾಗಿ, ರಾಮನವಮಿಯ ದಿನ ಅನಾವರಣ ಮಾಡಿದರು.

ಅದಾದನಂತರ ನಾಗಪುರದ ಶ್ರೀಮಂತ, ಬೂಟಿ, ಬಾಬಾ ಕಷ್ಟಪಟ್ಟು ಬೆಳೆಸಿದ್ದ ತೋಟವಿದ್ದ ಜಾಗವನ್ನು ಕೊಂಡು, ಅಲ್ಲಿ ಬಹಳ ಖರ್ಚು ಮಾಡಿ ಒಂದು ಕಲ್ಲಿನ ಕಟ್ಟಡ ಕಟ್ಟಿಸಿದರು. ಬಾಬಾರ ಸಮಾಧಿ ಅಲ್ಲೇ ಆದುದರಿಂದ ಆ ಹಣ ಒಳ್ಳೆಯ ಕಾರ್ಯಕ್ಕೆ ಉಪಯೋಗವಾದಂತಾಯಿತು.

ಹೀಗೆ ಶಿರಡಿಯಲ್ಲಿ ಮೂರು ವಾಡಾಗಳು ಹುಟ್ಟಿಕೊಂಡವು.

ಇದರೊಡನೆ ಸಂತರ ಧ್ಯೇಯ, ಸಾಯಿಬಾಬಾ ಶಿರಡಿಯಲ್ಲಿ ಪ್ರತ್ಯಕ್ಷ ಎಂಬ ನಾಲ್ಕನೆಯ ಅಧ್ಯಾಯ ಮುಗಿಯಿತು. ಮುಂದಿನ ಅಧ್ಯಾಯದಲ್ಲಿ ಹೇಮಾಡ್ ಪಂತ್ ಶಿರಡಿಯಿಂದ ಬಾಬಾ ತಾತ್ಕಾಲಿಕವಾಗಿ ಕಾಣದೇಹೋಗುವುದು, ಮತ್ತೆ ಮದುವೆಯ ದಿಬ್ಬಣದೊಂದಿಗೆ ಬರುವಿಕೆ, ತಂಬೋಳಿಯೊಡನೆ ಕುಸ್ತಿ, ಮಸೀದಿಯಲ್ಲಿ ವಾಸ ಇತ್ಯಾದಿ ವಿಷಯಗಳನ್ನು ಹೇಳುತ್ತಾರೆ.

||ಶ್ರೀ ಸದ್ಗುರು ಸಾಯಿನಾಥಾರ್ಪಣಮಸ್ತು||ಶುಭಂ ಭವತು||
||ಓಂ ಶಾಂತಿಃ ಶಾಂತಿಃ ಶಾಂತಿಃ||


No comments:

Post a Comment