Monday, December 12, 2011

||ಐದನೆಯ ಅಧ್ಯಾಯ||


||ಶ್ರೀ ಸಾಯಿ ಸಚ್ಚರಿತ್ರೆ||
||
ಐದನೆಯ ಅಧ್ಯಾಯ||
||ಸಾಯಿಬಾಬಾರ ಷಿರ್ಡಿ ಪುನಃಪ್ರವೇಶ||
ಶ್ರೀ ಗಣೇಶಾಯ ನಮಃ ಶ್ರೀ ಸರಸ್ವತಯೇ ನಮಃ
ಶ್ರೀವೆಂಕಟೇಶಾಯ ನಮಃ ಶ್ರೀಸಾಯಿನಾಥಾಯ ನಮಃ
ಶ್ರೀಸದ್ಗುರುಭ್ಯೋನ್ನಮಃ

ಈ ಅಧ್ಯಾಯದಲ್ಲಿ ಹೇಮಾಡ್ ಪಂತ್, ಚಾಂದ್ ಪಾಟೀಲರ ಕಥೆ, ಶಿರಡಿಯಲ್ಲಿ ಇತರ ಸಾಧುಗಳು ಮತ್ತು ಇತರ ವಿಷಯಗಳನ್ನು ಹೇಳುತ್ತಾರೆ.

ಚಾಂದ್ ಪಾಟೀಲರ ಕಥೆ

ಔರಂಗಾಬಾದ್ ಜಿಲ್ಲೆಯ ಧೂಪಖೇಡ್ ಹಳ್ಳಿಯ ಮುಖ್ಯಸ್ಥ, ಚಾಂದ್ ಪಾಟೀಲ್‍ರ ಕುದುರೆ ಕಳೆದುಹೋಗಿ, ಎರಡು ತಿಂಗಳಿಂದ ಎಷ್ಟು ಹುಡುಕಿದರೂ ಸಿಗಲಿಲ್ಲ. ಔರಂಗಾಬಾದಿಗೆ ೯ ಮೈಲಿ ದೂರದಲ್ಲಿರುವ ಸಿಂಧೂನ್ ಬಂಧೂನ್ ಹಳ್ಳಿಗಳ ಮಧ್ಯೆ ಇರುವ ಕಾಡಿನಲ್ಲಿ ಕುದುರೆಯನ್ನು ಹುಡುಕುತ್ತಾ ಬಂದ ಅವರಿಗೆ, ಸ್ವಲ್ಪ ದೂರದಲ್ಲಿ ಮಾವಿನ ಮರದ ಕೆಳಗೆ ಕುಳಿತಿದ್ದ ಒಬ್ಬ ಫಕೀರ ಕಾಣಿಸಿದ. ಆ ಫಕೀರ ತಲೆಯಮೇಲೊಂದು ಬಟ್ಟೆ ಸುತ್ತಿಕೊಂಡು, ಉದ್ದನೆಯ ತೋಳಿನ ಅಂಗಿ ಹಾಕಿಕೊಂಡು, ಕಂಕುಳಲ್ಲಿ ಸಟ್ಕಾ ಇಟ್ಟುಕೊಂಡು, ಹುಕ್ಕಾ ತಯಾರಿಯಲ್ಲಿದ್ದ. ಆ ಫಕೀರ, ಮ್ಲಾನಮುಖನಾಗಿದ್ದ ಪಾಟೀಲರನ್ನು "ಚಾಂದ್ ಭಾಯ್" ಎಂದು ಹೆಸರಿಟ್ಟು ಕರೆದು "ಬಾ ಕುಳಿತುಕೋ. ಹುಕ್ಕಾ ಸೇದು" ಎಂದ. ಚಾಂದ್ ಪಾಟೀಲ್ ಹುಕ್ಕಾ ತೆಗೆದುಕೊಂಡು ತಂಬಾಕು ಪುಡಿಮಾಡಿ ಅದರಲ್ಲಿ ತುಂಬಿ ಹೇಳಿದರು. "ಇದರಲ್ಲಿ ತಂಬಾಕು ತುಂಬಿಯಾಯಿತು. ಆದರೇನು, ಹೊತ್ತಿಸಲು ಬೆಂಕಿ ಇಲ್ಲವಲ್ಲ. ನನ್ನ ಚಕಮುಕಿ ಕಲ್ಲನ್ನು ಮನೆಯಲ್ಲೇ ಮರೆತು ಬಂದಿದ್ದೇನೆ." ಫಕೀರ ದೊಡ್ಡದಾಗಿ ನಕ್ಕು, "ಬೆಂಕಿ ಏಕಿಲ್ಲ? ನೋಡು" ಎನ್ನುತ್ತಾ ಸಟ್ಕಾವನ್ನು ನೆಲದ ಮೇಲೆ ಒಂದುಸಲ ಹೊಡೆದ. ತಕ್ಷಣವೇ ಅಲ್ಲಿ ಬೆಂಕಿ ಕಾಣಿಸಿಕೊಂಡಿತು. ಮತ್ತೆ ಇನ್ನೊಂದು ಸಲ ಸಟ್ಕಾ ಹೊಡೆದಾಗ, ನೀರು ಕಾಣಿಸಿಕೊಂಡಿತು. ಫಕೀರ ಬಟ್ಟೆ ನೆನೆಸಿ ಹುಕ್ಕಾಗೆ ಸುತ್ತಿ, ಒಂದು ಕಡ್ಡಿಯಿಂದ ಹುಕ್ಕಾ ಹೊತ್ತಿಸಿದ. ಚೆನ್ನಾಗಿ ಹೊತ್ತಿಕೊಂಡ ಹುಕ್ಕಾ ತಾನು ಮೊದಲು ಸೇದಿ, ನಂತರ ಚಾಂದ್ ಪಾಟೀಲ್‍ಗೆ ಕೊಟ್ಟು ಸೇದಲು ಹೇಳಿದ. ಫಕೀರನ ಈ ಕಾರ್ಯವನ್ನು ನೋಡಿ ಆಶ್ಚರ್ಯದಿಂದ ಚಾಂದ್ ಪಾಟೀಲ್ ಮೂಕರಾದರು! ಆಗ ಅವರ ಬಳಿ ಇದ್ದ ಜೀನು ಕುರಿತು ಫಕೀರ ಕೇಳಿದ. ಪಾಟೀಲ್ ತನ್ನ ಕುದುರೆ ಕಳೆದು ಹೋದದ್ದು, ಎಷ್ಟು ಹುಡುಕಿದರೂ ಸಿಕ್ಕದೇ ಹೋದದ್ದು ಎಲ್ಲಾ ಹೇಳಿದರು. ಫಕೀರ, "ಅದಕ್ಕಾಗಿ ಅಷ್ಟೊಂದು ಚಿಂತೆಯೆ? ಅಲ್ಲಿ ಹೋಗಿ ಆ ಪೊದೆಗಳ ಹಿಂದೆ ನೋಡು. ಅಲ್ಲಿ ನಿನ್ನ ಕುದುರೆ ಹುಲ್ಲು ಮೇಯುತ್ತಾ ನಿಂತಿದೆ" ಎಂದು ಹೇಳಿದ. ಚಾಂದ್ ಪಾಟೀಲ್ ಫಕೀರ ಹೇಳಿದಲ್ಲಿಗೆ ಹೋಗಿ ನೋಡಿದರೆ, ತನ್ನ ಕುದುರೆ ಅಲ್ಲಿ ಹಾಯಾಗಿ ಹುಲ್ಲು ಮೇಯುತ್ತಾ ನಿಂತಿದೆ! ಪರಮಾಶ್ಚರ್ಯಪಟ್ಟ ಪಾಟೀಲ್, ಈ ಫಕೀರ ಸಾಮಾನ್ಯನಲ್ಲ. ದೊಡ್ಡ ಔಲಿಯಾನೇ ಆಗಿರಬೇಕು, ಎಂದು ಯೋಚಿಸುತ್ತಾ ಕುದುರೆಯನ್ನು ಕರೆದುಕೊಂಡು ಫಕೀರನಿದ್ದೆಡೆಗ ಬಂದು, ಫಕೀರನ ಪಾದಗಳಲ್ಲಿ ತಲೆಯಿಟ್ಟು, ಫಕೀರನನ್ನು ತನ್ನ ಜೊತೆಯಲ್ಲಿ ಧೂಪಖೇಡ್‍ಗೆ ಬರಲು ಆಹ್ವಾನ ನೀಡಿದರು. ಫಕೀರ ನಂತರ ಬರುತ್ತೇನೆಂದು ಮಾತುಕೊಟ್ಟು ಮಾರನೆಯ ದಿನ ಅಲ್ಲಿಗೆ ಹೋಗಿ ಪಾಟೀಲರ ಆತಿಥ್ಯವನ್ನು ಸ್ವೀಕರಿಸಿದ.

ಪಾಟೀಲರ ಹೆಂಡತಿಯ ತಮ್ಮನ ಮಗನಿಗೆ ಶಿರಡಿಯ ಹೆಣ್ಣು ಕೊಟ್ಟು ಮದುವೆ ನಿಶ್ಚಯವಾಗಿತ್ತು. ಮದುವೆಯ ದಿಬ್ಬಣ ಧೂಪಖೇಡದಿಂದ ಶಿರಡಿಗೆ ಹೊರಡುವುದಿತ್ತು. ಪಾಟೀಲರು ಫಕೀರನನ್ನು ತಮ್ಮ ಜೊತೆಯಲ್ಲಿ ಬರುವಂತೆ ಆಹ್ವಾನ ನೀಡಿದರು. ಫಕೀರ ಅವರ ಜೊತೆಯಲ್ಲಿ ಶಿರಡಿಗೆ ಹೊರಟ. ಶಿರಡಿಯಲ್ಲಿ ದಿಬ್ಬಣ ಖಂಡೋಬಾ ದೇವಸ್ಥಾನದ ಬಳಿ ಬೀಡು ಬಿಟ್ಟಿತು. ಫಕೀರ ಗಾಡಿಯಿಂದ ಇಳಿದು ದೇವಸ್ಥಾನದ ಕಡೆಗೆ ಹೆಜ್ಜೆ ಹಾಕಿದ. ಅದೇ ಸಮಯಕ್ಕೆ ಗುಡಿಯ ಪೂಜಾರಿ ಮಹಲ್ಸಾಪತಿ ಗುಡಿಯಿಂದ ಹೊರಕ್ಕೆ ಬಂದು, ಯುವ ಫಕೀರನೊಬ್ಬನು ಗುಡಿಯ ಕಡೆ ಬರುತ್ತಿರುವುದನ್ನು ನೋಡಿದನು. ತನ್ನ ಕಡೆ ಬರುತ್ತಿದ್ದ ಯುವ ಫಕೀರನನ್ನು ಕಂಡು ಮಹಲ್ಸಪತಿ "ಯಾ ಸಾಯಿ" (ಮರಾಠಿ ಭಾಷೆಯಲ್ಲಿ "ಬಾ ಸಾಯಿ") ಎಂದು ಆಹ್ವಾನಿಸಿ, ಗುಡಿಯ ಹತ್ತಿರವಿದ್ದ ಅರಗಿನ ಮೇಲೆ ಕುಳಿತುಕೊಳ್ಳಲು ಹೇಳಿದ. ಫಕೀರನು ಅಲ್ಲಿ ಕುಳಿತುಕೊಂಡು, ತನ್ನ ಸುತ್ತುಮುತ್ತಲಿನ ಪ್ರಕೃತಿಯ ಸೊಬಗನ್ನು ಆಸ್ವಾದಿಸುತ್ತಿದ್ದ. ಸ್ವಲ್ಪ ಸಮಯದ ಮೇಲೆ ಫಕೀರನು ಮಹಲ್ಸಪತಿಯೊಡನೆ, "ಈ ಖಂಡೋಬಾ ಗುಡಿಯು ಎಷ್ಟು ಏಕಾಂತವಾಗಿ, ಪ್ರಶಾಂತವಾಗಿದೆಯಲ್ಲವೇ! ಫಕೀರರಿರಲು ಬಹಳ ಪ್ರಶಸ್ತವಾದ ಸ್ಥಳ" ಎಂದ. ಮಹಲ್ಸಪತಿಯು ಫಕೀರನೊಂದಿಗೆ, "ಓ ಸಾಯಿ! ಇದು ಹಿಂದುಗಳ ದೇವಸ್ಥಾನ. ನೀನು ಮುಸ್ಲಿಮನಂತೆ ಕಾಣುತ್ತಿರುವೆ. ಈ ಸ್ಥಳ ನಿನಗೆ ಯೋಗ್ಯವಲ್ಲ. ಮಸೀದೆಯಾಗಲಿ, ತಕಿಯಾ ಆಗಲಿ ನಿನಗೆ ವಾಸಿಸಲು ಸರಿಯಾದ ಸ್ಥಳಗಳು" ಎಂದು ತಿಳಿಸಿದ. ಫಕೀರನಿಗೆ ಮಹಲ್ಸಪತಿಯ ಮಾತುಕೇಳಿ ಬಹಳ ಆಶ್ಚರ್ಯವಾಯಿತು. ಆಗ ಫಕೀರ ಹೇಳಿದ, "ಹಿಂದು ಮುಸ್ಲಿಮ್ ಎನ್ನುವುದು ಬರಿಯ ಪದಗಳಷ್ಟೇ. ಒಬ್ಬನೇ ದೇವರು ಇವರಿಬ್ಬರನ್ನೂ ಸೃಷ್ಟಿಮಾಡಿದ್ದಾನೆ. ಇದೇ ಸತ್ಯವೆಂದು ತಿಳಿ. ದೇವಸ್ಥಾನಗಳೂ, ಮಸೀದಿಗಳೂ ದೇವರು ಕಟ್ಟಿಸಿದ್ದಲ್ಲ. ನಮ್ಮೆಲ್ಲರಿಗೂ ಒಬ್ಬನೇ ಆದ ದೇವರನ್ನು ಕಾಣು. ಅವನೇ ಅಲ್ಲಾ-ಇಲಾಹಿ. ಅವನೇ ಶೇಷಶಾಯಿಯಾದ ವಿಷ್ಣು. ಅವನೇ ನಿನ್ನ ಖಂಡೋಬ. ಅವನಲ್ಲದೆ ಬೇರೆ ಯಾರೂ ಇಲ್ಲ. ನಿಜವಾದ ಖಂಡೋಬಾ ಯಾರು ಎಂಬುದನ್ನು ತಿಳಿದುಕೋ. ಯಾರಿಗೆ ಸತ್ಯ ತಿಳಿದಿದೆಯೋ ಅವರು ಭೇದವನ್ನು ಗಣಿಸುವುದಿಲ್ಲ. ಆದರೂ ನಿನ್ನ ಮಾತಿಗೆ ನಾನು ಬೆಲೆಕೊಟ್ಟು ನಿನ್ನ ಖಂಡೋಬಾನನ್ನು ದೂರದಿಂದಲೆ ನೋಡಿ ಹೋಗುತ್ತೇನೆ. ಅದಕ್ಕೆ ನಿನ್ನ ಅಡ್ಡಿಯೇನೂ ಇಲ್ಲವಲ್ಲ?" ಅವನ ಮಾತುಗಳನ್ನು ಕೇಳಿದ ಮಹಲ್ಸಾಪತಿ ಚಕಿತನಾಗಿ, ಆ ಫಕೀರನ ಮತಸಾಮರಸ್ಯ, ಅಲೌಕಿಕ ಜ್ಞಾನ, ವೈರಾಗ್ಯ, ಮಮತೆಗಳಿಂದ ಆಕರ್ಷಿತನಾಗಿ ಫಕೀರನ ಪಾದಗಳಲ್ಲಿ ಬಿದ್ದು ನಮಸ್ಕಾರಮಾಡಿ ಹೇಳಿದ, "ನೀವು ನಿಜವಾದ ಜ್ಞಾನ ಸ್ವರೂಪರು. ನನ್ನ ಪೂರ್ವಜನ್ಮದ ಸುಕೃತವೇ ನಿಮ್ಮನ್ನು ಇಲ್ಲಿಗೆ ಕರೆತಂದಿದೆ. ಬನ್ನಿ ಸಾಯಿ. ಇಲ್ಲೇ ನಮ್ಮ ಶಿರಡಿಯಲ್ಲೇ ನೆಲೆಸಿ." ಅದಕ್ಕೆ ಒಪ್ಪಿದ ಫಕೀರ ಮಹಲ್ಸಾಪತಿಯ ಜೊತೆ ಹಳ್ಳಿಗೆ ಬಂದ. ಸಾಯಿ ಎಂದು ಮಹಲ್ಸಾಪತಿ ಕರೆದ ಹೆಸರೇ ಆ ಫಕೀರನಿಗೆ ಶಾಶ್ವತವಾಯಿತು. ಅಂದಿನಿಂದ ಎಲ್ಲರು ಪಕೀರನನ್ನು "ಸಾಯಿ", "ಸಾಯಿಬಾಬಾ" ಎಂದೇ ಕರೆಯತೊಡಗಿದರು. ಇದು ಆದದ್ದು ೧೮೫೮ರಲ್ಲಿ. ಹಾಗೆ ಶಿರಡಿಗೆ ಬಂದ ಸಾಯಿಬಾಬಾ, ಅಲ್ಲಿನ ಮಸೀದಿಯನ್ನು ತಮ್ಮ ವಾಸಸ್ಠಾನ ಮಾಡಿಕೊಂಡು, ಮುಸ್ಲಿಂರ ಪ್ರಾರ್ಥನಾಸ್ಥಳವಾದ ಮಸೀದಿಗೆ "ದ್ವಾರಕಮಾಯಿ" ಎಂಬ ಹಿಂದು ಹೆಸರಿಟ್ಟು, ತಮ್ಮ ಸಮಾಧಿಯವರೆಗೂ ಅಲ್ಲೇ ಸ್ಥಿರರಾದರು.

‘ಸಾಯಿ’ ಎಂದರೆ ದೇವರು ಎಂದೇ ಅರ್ಥ. ‘ಸಾಯಿ’ ಎಂಬ ಪದವನ್ನು ಕಬೀರರು ದೇವರು ಎನ್ನುವ ಅರ್ಥದಲ್ಲಿ ಉಪಯೋಗಿಸಿದ್ದಾರೆ. ಗೋರಖನಾಥರು ತಮ್ಮ ಬರಹಗಳಲ್ಲಿ ‘ಸಾಯಿ’ ಎಂಬುವ ಪದವನ್ನು ಮಹಾವಿಷ್ಣು ಎಂಬ ಅರ್ಥದಲ್ಲಿ ಉಪಯೋಗಿಸಿದ್ದಾರೆ.

ಶಿರಡಿಯಲ್ಲಿನ ಇತರ ಸಾಧುಗಳು

ಬಾಬಾ ಶಿರಡಿಗೆ ಬರುವುದಕ್ಕೆ ಮುಂಚೆಯೇ ಅಲ್ಲಿ ಇಬ್ಬರು ಸಾಧುಗಳು ಇದ್ದರು. ಬಾಬಾ ಮಸೀದಿಗೆ ಬಂದಾಗ ದೇವಿದಾಸ್ ಎನ್ನುವ ಸಾಧು ಮಸೀದಿಯಲ್ಲಿ ವಾಸಿಸುತ್ತಿದ್ದರು. ಬಾಬಾರು ಅಲ್ಲಿಗೆ ಬಂದು ಸೇರಿದಮೇಲೆ ಇನ್ನೊಬ್ಬ ಸಾಧು, ಜಾನಕೀದಾಸ್ ಎನ್ನುವವರೂ ಅಲ್ಲಿಗೆ ಬಂದರು. ಇವರು ಮೂವರಿಗೂ ಒಂದೇರೀತಿಯ ಆಧ್ಯಾತ್ಮ ಭಾವನೆಗಳು ಇದ್ದಿದ್ದರಿಂದ ಅವರಲ್ಲಿ ಆಧ್ಯಾತ್ಮದ ಬಗ್ಗೆ ಚರ್ಚೆಗಳು ನಡೆಯುತ್ತಿತ್ತು.

ಯುವಕನಾಗಿದ್ದಾಗ ಬಾಬಾ ಕೂದಲು ಕತ್ತರಿಸದೆ, ನೀಳವಾಗಿ ಬಿಟ್ಟು, ಜಟ್ಟಿಯಂತೆ ದಿರಸು ಹಾಕುತ್ತಿದ್ದರು. ಅವರು ರಾಹತಾಗೆ ಹೋದಾಗಲೆಲ್ಲ ಚಂಡು ಮತ್ತಿತರ ಹೂವುಗಳನ್ನು ತಂದು ಬೇವಿನ ಮರದ ಕೆಳಗಿನ ಜಾಗದಲ್ಲಿ ನೆಟ್ಟು ಬೆಳೆಸಿದರು. ವಾಮನ ತಾತ್ಯಾ ದಿನವೂ ಅವರಿಗೆ ಎರಡು ಹಸಿ ಮಡಕೆಗಳನ್ನು ಕೊಡುತ್ತಿದ್ದ. ಬಾಬಾ ಅವುಗಳಲ್ಲಿ ದೂರದ ಭಾವಿಯಿಂದ ನೀರು ತಂದು ಹಾಕಿ, ಆ ಗಿಡಗಳನ್ನು ಬೆಳೆಸಿ ಒಂದು ತೋಟ ಮಾಡಿದರು. ದಿನವೂ ನೀರು ಹಾಕಿದ ಮೇಲೆ ಆ ಮಡಕೆಗಳನ್ನು ಬೇವಿನ ಮರದ ಕೆಳಗೆ ಇಡುತ್ತಿದ್ದರು. ಅವು ಹಸಿಯಾಗಿದ್ದುದರಿಂದ ಒಡೆದು ಹೋಗುತ್ತಿದ್ದವು. ವಾಮನ ತಾತ್ಯಾ ಮಾರನೆಯ ದಿನ ಇನ್ನೆರಡು ಮಡಕೆಗಳನ್ನು ಕೊಡುತ್ತಿದ್ದ. ಬಾಬಾ ಹೀಗೆ ಮೂರು ವರ್ಷ ಕಷ್ಟಪಟ್ಟು ಒಂದು ಸುಂದರವಾದ ತೋಟವನ್ನು ಮಾಡಿದರು. ಈಗಿನ ಸಮಾಧಿ ಮಂದಿರ ಆ ತೋಟವಿದ್ದ ಜಾಗದಲ್ಲಿಯೇ ಕಟ್ಟಲಾಗಿದೆ.

ಗಂಗಾಘೀರ್ ಎನ್ನುವ ಸಾಧು ಪುಣತಾಂಬೆಯಿಂದ ಅಗಾಗ ಶಿರಡಿಗೆ ಬರುತ್ತಿದ್ದರು. ಅವರು ಮಡಕೆಯಲ್ಲಿ ನೀರು ಹೊರುತ್ತಿದ್ದ ಸಾಯಿಯನ್ನು ನೋಡಿ, "ಈಗ ಈತ ಹೀಗೆ ಮಡಕೆಯಲ್ಲಿ ನೀರು ಹೊರುತ್ತಿದ್ದಾನೆ. ಆದರೆ ಈತ ಸಾಮಾನ್ಯನಲ್ಲ. ಶಿರಡಿಯ ಅದೃಷ್ಟವೇ ಇವನನ್ನು ಇಲ್ಲಿಗೆ ಕರೆತಂದಿದೆ" ಎಂದು ನುಡಿದರು.

ಅಕ್ಕಲ್ಕೋಟ್ ಮಹಾರಾಜರ ಶಿಷ್ಯರೂ, ಯಾವಲಾ ಮಠದ ಅಧಿಪತಿಯೂ ಆದ ಆನಂದಸ್ವಾಮಿಯವರು ಯುವಕ ಬಾಬಾನನ್ನು ಕಂಡು ಹೀಗೆ ಭವಿಷ್ಯವನ್ನು ನುಡಿದರು, "ಈ ಯುವಕ ಈಗ ಹೀಗೆ ನೀರು ಹೊರುವವನಂತೆ ಕಾಣಿಸಿದರೂ ಇವನು ನಿಮಗೆ ಒಂದು ಅಮೂಲ್ಯ ಆಸ್ತಿ. ಇವನು ಭವಿಷ್ಯತ್ತಿನಲ್ಲಿ ಅನೇಕ ಅಸಾಮಾನ್ಯ ಲೀಲೆಗಳನ್ನು ತೋರುತ್ತಾನೆ."

ಭಾಯಿ ಕೃಷ್ಣಾಜಿ ಅವರಿಂದ ಪಾದುಕಾ ಸ್ಠಾಪನೆ

ಭಾಯಿ ಕೃಷ್ಣಾಜಿ ಅಕ್ಕಲ್ಕೋಟ್ ಮಹಾರಾಜರ ಭಕ್ತರು. ಮನೆಯಲ್ಲಿ ಮಹಾರಾಜರ ಫೋಟೋ ಇಟ್ಟು ದಿನವೂ ಅದನ್ನು ಪೂಜಿಸುತ್ತಿದ್ದರು. ಒಂದು ಸಲ ಅಕ್ಕಲ್ಕೋಟ್‍ಗೆ ಹೋಗಿ ಮಹಾರಾಜರ ಪಾದುಕೆಗಳ ದರ್ಶನಮಾಡಿಕೊಂಡು ಬರಬೇಕೆಂದುಕೊಂಡರು. ಅಂದು ರಾತ್ರಿ ಮಹಾರಾಜರು ಕನಸಿನಲ್ಲಿ ಕಾಣಿಸಿಕೊಂಡು, "ನಾನು ಈಗ ಶಿರಡಿಯಲ್ಲಿ ಇದ್ದೇನೆ. ಅಲ್ಲಿಗೆ ಬಂದು ನೋಡು" ಎಂದು ಹೇಳಿದರು. ಅದರಂತೆ, ಆತ ಶಿರಡಿಗೆ ಹೋಗಿ ಬಾಬಾರ ದರ್ಶನ ಮಾಡಿ, ಅಲ್ಲಿಯೇ ಆರು ತಿಂಗಳಿದ್ದು ಅವರ ವಿಶೇಷವಾದ ಅನುಗ್ರಹವನ್ನು ಪಡೆದರು. ಆ ಸಂದರ್ಭದ ನೆನಪಿಗಾಗಿ ಒಂದು ಜೊತೆ ಪಾದುಕೆಗಳನ್ನು ಮಾಡಿಸಿ ಅದನ್ನು ಬೇವಿನ ಮರದ ಕೆಳಗೆ ಸ್ಥಾಪಿಸಿದರು. ಪ್ರತಿಷ್ಠಾಪನಾ ಕಾರ್ಯಕ್ರಮವು ದಾದಾ ಕೇಲ್ಕರ್ ಮತ್ತು ಉಪಾಸನೀ ಬಾಬಾ ಅವರಿಂದ ೧೯೧೨ರಲ್ಲಿ ಶ್ರಾವಣ ಶುದ್ಧ ಹುಣ್ಣಿಮೆಯ ದಿನ ನಡೆಯಿತು. ಇದಕ್ಕೆ ಬೇಕಾದ ಏರ್ಪಾಡುಗಳನ್ನೆಲ್ಲಾ ಸಗುಣ ಮೇರು ನಾಯಕ್ ಮಾಡಿದ್ದರು.

ಸಾಯಿಲೀಲಾದ ೧೧ನೆಯ ಸಂಪುಟದಲ್ಲಿ ಬರೆದಿರುವಂತೆ ಪಾದುಕಾ ಪ್ರತಿಷ್ಠಾಪನೆ ಈ ರೀತಿ ಇದೆ.

“೧೯೧೨ರಲ್ಲಿ ಡಾ. ರಾಮರಾವ್ ಕೊಠಾರೆ, ತಮ್ಮ ಕಾಂಪೌಂಡರ್ ಜೊತೆಗೆ ಶಿರಡಿಗೆ ಬಾಬಾರ ದರ್ಶನಕ್ಕೆ ಬಂದರು. ಭಾಯಿ ಕೃಷ್ಣಾಜಿ ಆಲಿಬಾಗ್‍ಕರ್ ಕೂಡಾ ಅವರೊಡನೆ ಬಂದಿದ್ದರು. ಶಿರಡಿಯಲ್ಲಿ ಕಾಂಪೌಂಡರ್, ಭಾಯಿ ಕೃಷ್ಣಾಜಿ, ಗೋವಿಂದ್ ಕಮಲಾಕರ್ ದೀಕ್ಷಿತ್ ಹಾಗೂ ಸಗುಣಮೇರು ನಿಕಟ ಸ್ನೇಹಿತರಾದರು. ಎಲ್ಲರೂ ಬಾಬಾರು ಶಿರಡಿಯಲ್ಲಿ ಮೊದಲು ಪ್ರತ್ಯಕ್ಷವಾದ ಅವಸರದ ನೆನಪಿಗಾಗಿ ಬಾಬಾರ ಪಾದುಕೆಗಳನ್ನು ಬೇವಿನ ಮರದ ಕೆಳಗೆ ಪ್ರತಿಷ್ಠಾಪಿಸಬೇಕೆಂದುಕೊಂಡರು. ಡಾ. ಕೊಠಾರೆಯವರಿಗೆ ಹೇಳಿದರೆ, ಅವರು ಬಾಬಾರ ಪಾದುಕೆಗಳನ್ನು ಒಳ್ಳೆಯ ಶಿಲೆಯಲ್ಲಿ ಕೆತ್ತಿಸಿಕೊಡುತ್ತಾರೆಂದು ಕಾಂಪೌಂಡರ್ ಹೇಳಿದರು. ಹೇಳಿದ ತಕ್ಷಣವೇ, ಡಾಕ್ಟರ್ ಒಂದು ಸ್ಥೂಲ ಚಿತ್ರವನ್ನು ತಯಾರಿಸಿ ಪಾದುಕೆಗಳನ್ನು ಕೆತ್ತಿಸಲು ಉದ್ಯುಕ್ತರಾದರು. ಉಪಾಸನೀ ಬಾಬಾ ಅದರಲ್ಲಿ ಒಂದು ಕಮಲ, ಶಂಖ, ಚಕ್ರಗಳನ್ನು ಕೆತ್ತಿಸುವಂತೆ ಸಲಹೆ ಕೊಟ್ಟು, ಬಾಬಾರ ಯೋಗಶಕ್ತಿಯನ್ನೂ, ಬೇವಿನ ಮರದ ಹಿರಿಮೆಯನ್ನೂ ವಿವರಿಸುವ ಈ ಕೆಳಗಿನ ಶ್ಲೋಕವನ್ನೂ ಅದರಲ್ಲಿ ಸೇರಿಸುವಂತೆ ಹೇಳಿದರು.

ಸದಾನಿಂಬ ವೃಕ್ಷಸ್ಯ ಮೂಲಾಧಿವಾಸಾತ್
ಸುಧಾಸ್ರಾವಿಣಂ ತಿಕ್ತಮಪ್ಯಪ್ರಿಯಂತಂ
ತರುಂ ಕಲ್ಪವೃಕ್ಷಾಧಿಕಂ ಸಾಧಯಂತಂ
ನಮಾಮೀಶ್ವರಮ್ ಸದ್ಗುರುಂ ಸಾಯಿನಾಥಂ

ಸದಾ ಬೇವಿನ ಮರದ ಕೆಳಗೆ ಕೂತು, ಅದರ ಸಹಜ ಭಾವ, ಅಪ್ರಿಯವಾದ ಕಹಿಯೇ ಆಗಿದ್ದರೂ, ಅದನ್ನು ಅಮೃತತುಲ್ಯವಾಗಿಸಿ, ಆ ಮರವನ್ನು ಕಲ್ಪವೃಕ್ಷಕ್ಕಿಂತಲೂ ಅಧಿಕವನ್ನಾಗಿ ಮಾಡಿದೆ. ಅಂತಹ ಸದ್ಗುರುವಾದ ನಿನಗೆ ನಾನು ನಮಸ್ಕರಿಸುತ್ತೇನೆ.

ಉಪಾಸನೀ ಬಾಬಾರ ಸಲಹೆಯನ್ನು ಅಳವಡಿಸಿ ಅಮೃತಶಿಲೆಯಲ್ಲಿ ಪಾದುಕೆಗಳನ್ನು ಕೆತ್ತಿಸಿ ಅದನ್ನು ಶಿರಡಿಗೆ ತಂದರು. ಬಾಬಾ ಅದನ್ನು ಶ್ರಾವಣ ಹುಣ್ಣಿಮೆಯ ದಿನ ಪ್ರತಿಷ್ಠಾಪಿಸಬೇಕೆಂದು ಹೇಳಿದರು. ಪೂರ್ಣಿಮೆಯ ದಿನ ಗೋವಿಂದ್ ಕಮಲಾಕರ್ ದೀಕ್ಷಿತ್ ಆ ಪಾದುಕೆಗಳನ್ನು ತಲೆಯಮೇಲೆ ಹೊತ್ತುಕೊಂಡು ಖಂಡೋಬಾ ದೇವಸ್ಥಾನದಿಂದ ಮೆರವಣಿಗೆಯಲ್ಲಿ ದ್ವಾರಕಾಮಾಯಿಗೆ ತಂದರು. ಬಾಬಾ ಅವನ್ನು ಮುಟ್ಟಿ, "ಇವು ಭಗವಂತನ ಪಾದುಕೆಗಳು. ಬೇವಿನ ಮರದ ಕೆಳಗೆ ಪ್ರತಿಷ್ಠಾಪಿಸಿ, ವಿಶೇಷ ಭಕ್ತಿಯಿಂದ ಪೂಜೆಮಾಡಬೇಕು" ಎಂದು ಹೇಳಿದರು. ಹಿಂದಿನ ದಿನ ಬೊಂಬಾಯಿನ ಸೇಟ್ ಪಾಸ್ತಾ ೨೫ ರೂಪಾಯಿಗಳನ್ನು ಬಾಬಾರಿಗೆ ಕಳುಹಿಸಿದ್ದರು. ಅದನ್ನು ಬಾಬಾ ಪ್ರತಿಷ್ಠಾಪನಾ ಖರ್ಚಿಗೆಂದು ಕೊಟ್ಟರು. ಒಟ್ಟು ಖರ್ಚು ೧೦೦ ರೂಪಾಯಿ ಆಯಿತು. ೭೫ ರೂಪಾಯಿಗಳನ್ನು ಚಂದಾ ಮೂಲಕ ಶೇಖರಿಸಿದರು. ಭಕ್ತ ಸಗುಣ ಹಾಗೂ ಜಖಾಡೆ ದಿನವೂ ಅಲ್ಲಿ ದೀಪ ಹಚ್ಚಿ ಪಾದುಕೆಗಳ ಪೂಜೆ ಮಾಡುತ್ತಿದ್ದರು. ಭಾಯಿ ಕೃಷ್ಣಾಜಿ ಅವರು ಪಾದುಕಾ ಪ್ರತಿಷ್ಠಾಪನೆಗೆಂದು ಬಂದವರು, ಸಮಾರಂಭ ಮುಗಿದಮೇಲೆ ಅಕ್ಕಲ್ಕೋಟ್‍ಗೆ ಹೋಗಲು ಬಾಬಾರ ಅನುಮತಿ ಬೇಡಿದರು. ಆಗ ಬಾಬಾ, "ಈಗ ಅಕ್ಕಲ್ಕೋಟ್‍ನಲ್ಲಿ ಏನಿದೆ? ಅಕ್ಕಲ್ಕೋಟ್ ಮಹಾರಾಜ ಇಲ್ಲೇ ಇದ್ದಾನೆ. ಅವನೇ ನಾನು" ಎಂದರು. ಅಂತಹ ಭರವಸೆಯನ್ನು ಪಡೆದ ಭಾಯಿ ಕೃಷ್ಣಾಜಿ ಅಂದಿನಿಂದ ಅಕ್ಕಲ್ಕೋಟ್‍ಗೆ ಹೋಗುವುದನ್ನು ನಿಲ್ಲಿಸಿದರು. ಅದಾದಮೇಲೆ ಅವರು ಬಹಳ ಸಲ ಶಿರಡಿಯನ್ನು ಸಂದರ್ಶಿಸಿದರು. ( ಈ ವಿಷಯ ಹೇಮಾದ್ ಪಂತ್‍ಗೆ ತಿಳಿದಿರಲಿಲ್ಲವೆಂದು ಕಾಣುತ್ತದೆ. ಅದಕ್ಕೇ ಅವರು ಇದನ್ನು ಸಚ್ಚರಿತ್ರೆಯಲ್ಲಿ ಸೇರಿಸಿಲ್ಲ.)

ಪಹಿಲ್ವಾನ್ ಮೊಹಿಯುದ್ದೀನ್ ತಂಬೋಳಿಯೊಂದಿಗೆ ಕುಸ್ತಿ

ಮೊಹಿಯುದ್ದೀನ್ ತಂಬೋಳಿ ಒಬ್ಬ ಕುಸ್ತಿ ಪಟು. ಶಿರಡಿಯಲ್ಲಿ ಎಲೆ, ಅಡಿಕೆ, ಹೊಗೆಸೊಪ್ಪು ಮಾರಿಕೊಂಡು ಜೀವನ ಮಾಡುತ್ತಿದ್ದ. ಒಂದುಸಲ ಅವನಿಗೂ ಬಾಬಾರಿಗೂ ಯಾವುದೋ ವಿಷಯದಲ್ಲಿ ವಾದವಾಯಿತು. ವಾದ ಕೊನೆಗೊಳ್ಳಲಿಲ್ಲ. ಬಾಬಾ ತಮ್ಮ ವಿಶಿಷ್ಟ ಶಕ್ತಿಗಳನ್ನು ಇಂತಹ ಅನವಸರದ ಕಾರ್ಯಗಳಿಗೆ ಉಪಯೋಗಿಸುತ್ತಿರಲಿಲ್ಲ. ಹಾಗಾಗಿ ಇಬ್ಬರೂ ಕುಸ್ತಿ ಮಾಡಬೇಕೆಂದು ನಿಶ್ಚಯಿಸಿಕೊಂಡರು. ಬಾಬಾ ಆ ಪಹಿಲ್ವಾನನ ಮುಂದೆ ನಿಲ್ಲಲಾಗದೆ ಕುಸ್ತಿಯಲ್ಲಿ ಸೋತುಹೋದರು. ಅಂದಿನಿಂದ ಬಾಬಾ ಪಹಿಲ್ವಾನನ ದಿರಸು ಬಿಟ್ಟು ಕೌಪೀನ, ಒಂದು ಉದ್ದ ತೋಳಿನ ಅಂಗಿ ಮತ್ತು ತಲೆಯಮೇಲೊಂದು ಶಿರೋವಸ್ತ್ರ ಧರಿಸಲು ಮೊದಲುಮಾಡಿದರು. ಗೋಣೀಚೀಲವೊಂದು ಅವರ ಆಸನವಾಯಿತು. ಅವರು, “ಮಹಾರಾಜನೆಂಬ ಬಿರುದಿಗಿಂತ ಫಕೀರನೆಂಬ ಬಿರುದು ದೊಡ್ಡದು. ಸಿರಿತನಕ್ಕಿಂತ ಬಡತನವೇ ಮೇಲು. ಅಲ್ಲಾ ಬಡವರವನು. ಅವನು ಯಾವಾಗಲೂ ಬಡವರ ಬಂಧು” ಎಂದು ಹೇಳುತ್ತಿದ್ದರು. ಗಂಗಾಘೀರ್ ಕೂಡಾ ಕುಸ್ತಿಯಲ್ಲಿ ಆಸಕ್ತಿಯಿದ್ದವನು. ಒಂದುಸಲ ಕುಸ್ತಿಮಾಡುತ್ತಿರುವಾಗ, ಕಾರಣವಿಲ್ಲದೆ, ಆಸಕ್ತಿ ಹೋಯಿತು. ಆ ಸಮಯದಲ್ಲೇ ಸಾಧುವೊಬ್ಬರು, “ಕುಸ್ತಿ ಮಾಡುವುದಾದರೆ ಆ ದೇವರೊಡನೆ ಮಾಡಬೇಕು. ಆಗ ಈ ಶರೀರ ಹೋದರೂ ಪರವಾಗಿಲ್ಲ.” ಎಂದು ಹೇಳಿದ್ದು ಕೇಳಿಸಿತು. ಅದನ್ನು ಕೇಳಿದ ಅವನಿಗೆ ಈ ಪ್ರಪಂಚದಲ್ಲಿ ವಿರಕ್ತಿ ಹುಟ್ಟಿ, ಆತ್ಮಸಾಕ್ಷಾತ್ಕಾರದ ಕಡೆಗೆ ಹೆಜ್ಜೆಯಿಟ್ಟು, ಪುಣತಾಂಬೆಯಲ್ಲಿ ಮಠವೊಂದನ್ನು ಕಟ್ಟಿಕೊಂಡು ಶಿಷ್ಯರೊಡನೆ ನೆಲೆಯಾದನು.

ನಾನಾ ಸಾಹೇಬ್ ಡೇಂಗ್ಲೆಗೆ ಸಂತಾನ ಕೊಡುವುದು

ಸಾಮಾನ್ಯವಾಗಿ ಬಾಬಾ ಯಾರೊಡನೆಯೂ ತಾವೇ ಮಾತನಾಡುತ್ತಿರಲಿಲ್ಲ. ಯಾರಾದರೂ ಏನಾದರೂ ಕೇಳಿದರೆ, ಉತ್ತರ ಕೊಡುತ್ತಿದ್ದರು. ಯಾವಾಗಲೂ ಬೇವಿನ ಮರದ ಕೆಳಗೆ ಅಥವಾ ಜಾಲಿ ಮರದ ಕೆಳಗೆ ಇಲ್ಲವೇ ಹತ್ತಿರದ ನಾಲೆಯ ದಂಡೆಯಲ್ಲಿ ಕುಳಿತಿರುತ್ತಿದ್ದರು. ಯಾವಾಗಲಾದರೊಮ್ಮೆ ಸ್ವಲ್ಪ ದೂರದಲ್ಲಿದ್ದ ನೀಮ್‍ಗಾಂವ್‍ಗೆ ಹೋಗುತ್ತಿದ್ದರು. ಅಲ್ಲಿ ಅವರು ಜಾಗೀರದಾರ್ ತ್ರಯಾಂಬಕ್ ಡೇಂಗ್ಲೆಯ ಮನೆಗೆ ಹೋಗಿ ಮಾತನಾಡುತ್ತಾ ದಿನವೆಲ್ಲಾ ಅಲ್ಲಿ ಕಳೆಯುತ್ತಿದ್ದರು. ನಾನಾಸಾಹೇಬ್ ಡೇಂಗ್ಲೆ, ತ್ರಯಾಂಬಕ್ ಡೇಂಗ್ಲೆಯ ಸಹೋದರ. ಎರಡು ಮದುವೆ ಮಾಡಿಕೊಂಡರೂ ಅವನಿಗೆ ಸಂತಾನವಾಗಲಿಲ್ಲ. ಅಣ್ಣನ ಸಲಹೆಯಂತೆ ನಾನಾಸಾಹೇಬ್ ಬಾಬಾರನ್ನು ದರ್ಶಿಸಿದ. ಬಾಬಾ ಆಶೀರ್ವಾದದಿಂದ ಅವನಿಗೆ ಒಬ್ಬ ಮಗ ಹುಟ್ಟಿದ. ಈ ಘಟನೆ ಆದಮೇಲೆ ಬಹಳ ಜನ ಬಾಬಾರ ದರ್ಶನಕ್ಕೆಂದು ಬರಲಾರಂಭಿಸಿದರು. ಸಾಯಿ ಕೀರ್ತಿ ದೂರದ ಅಹಮದ್ ನಗರಕ್ಕೂ ಹಬ್ಬಿತು.

ನಾನಾಸಾಹೇಬ್ ಚಾಂದೋರ್ಕರ್ ಅಹಮದ್ ನಗರದ ಸರ್ಕಾರಿ ವಲಯಗಳಲ್ಲಿ ಸಾಕಷ್ಟು ಪ್ರಭಾವವಿದ್ದವರು. ಜಿಲ್ಲೆಯ ಕಾರ್ಯದರ್ಶಿ ಚಿದಂಬರ ಕೇಶವ, ನಾನಾ ಸಾಹೇಬರನ್ನು ಸಪರಿವಾರರಾಗಿ ಬಾಬಾರ ದರ್ಶನಕ್ಕೆ ಶಿರಡಿಗೆ ಬರುವಂತೆ ಆಹ್ವಾನಿಸಿದರು. ಬಾಬಾ ದರ್ಶನವಾದಮೇಲೆ ಚಾಂದೋರ್ಕರ್ ಬಾಬಾರಿಂದ ಪ್ರಭಾವಿತರಾಗಿ ಅವರ ಸನ್ನಿಹಿತ ಭಕ್ತರಾದರು. ಹಾಗೆ ಯಾರು ಯಾರು ಅವರ ದರ್ಶನಕ್ಕೆ ಬಂದರೋ ಅವರೆಲ್ಲ ಬಾಬಾರ ಭಕ್ತರಾದರು. ಭಕ್ತರಾದವರಲ್ಲಿ ಬಡವರು, ಬಲ್ಲಿದರು, ವಿದ್ಯಾವಂತರು, ವಿದ್ಯೆಯ ಗಂಧವೂ ಇಲ್ಲದವರು ಎಲ್ಲ ತರಹೆಯ ಜನ ಇದ್ದರು. ಇಷ್ಟು ಜನರ ಮಧ್ಯೆ ಇದ್ದರೂ ತಾವು ಮಾತ್ರ ಯಾವುದರಲ್ಲೂ ಆಸಕ್ತಿಯಿಲ್ಲದವರಂತೆ, ಬಾಬಾ ಏಕಾಂಗಿಯಾಗಿ ಇರುತ್ತಿದ್ದರು. ಬೆಳಗಿನಹೊತ್ತೆಲ್ಲಾ ಭಕ್ತರೊಡನೆ ಕಳೆದು, ರಾತ್ರಿ ಪಾಳುಬಿದ್ದ ಮಸೀದಿಯಲ್ಲಿ ಮಲಗುತ್ತಿದ್ದರು.

ಬಾಬಾರ ದಿನಚರಿ, ಹಾಡುವುದು, ನಾಟ್ಯಮಾಡುವುದು ಇತ್ಯಾದಿ

ಮಸೀದಿಗೆ ಬರುವ ಮೊದಲು ಬಾಬಾ ತಾಕಿಯಾದಲ್ಲಿ ಬಹಳ ದಿನಗಳಿದ್ದರು. ಅವರ ಹತ್ತಿರ ಒಂದು ಹುಕ್ಕಾ, ತಂಬಾಕು, ಸಟ್ಕಾ ಬಿಟ್ಟು ಇನ್ನೇನೂ ಇರಲಿಲ್ಲ. ಅವರಿಗೆ ಹುಕ್ಕಾ ಸೇದುವುದು ಎಂದರೆ ಬಹಳ ಇಷ್ಟ. ತಾಕಿಯಾದಲ್ಲಿರುವಾಗ ಬಾಬಾ ಆಗಾಗ ಕಾಲಿಗೆ ಗೆಜ್ಜೆ ಕಟ್ಟಿ ಲಯಬದ್ಧವಾಗಿ ನಾಟ್ಯ ಮಾಡುತ್ತಿದ್ದರು. ಅವರ ಹಾಡನ್ನು ಕೇಳಿದವರು, ಬಾಬಾ ಬಹಳ ಸುಶ್ರಾವ್ಯವಾಗಿ ಹಾಡುತ್ತಿದ್ದರೆಂದು ಹೇಳುತ್ತಿದ್ದರು. ಅವರು ಯಾವಾಗಲೂ ತಮ್ಮ ತಲೆಗೆ ಒಂದು ಬಿಳಿಯ ಬಟ್ಟೆ ಸುತ್ತಿ ಅದಕ್ಕೆ ಕೊನೆಯಲ್ಲಿ ಒಂದು ಗಂಟು ಹಾಕಿ ಅದು ಎಡಕ್ಕೆ ಬರುವಂತೆ ಕಟ್ಟುತ್ತಿದ್ದರು. ದಿನಗಟ್ಟಲೆ ಸ್ನಾನವಿಲ್ಲದೆ ಇರುತ್ತಿದ್ದರು. ವಾರಗಟ್ಟಲೆ ಬಟ್ಟೆ ಬದಲಾಯಿಸುತ್ತಿರಲಿಲ್ಲ. ಯಾವಾಗಲೂ ಕಾಲಿಗೆ ಪಾದರಕ್ಷೆ ಹಾಕುತ್ತಿರಲಿಲ್ಲ. ಬರಿಗಾಲಿನಲ್ಲೇ ನಡೆಯುತ್ತಿದ್ದರು. ಹಾಸಿಗೆ ದಿಂಬು ಯಾವುದೂ ಇರಲಿಲ್ಲ. ಒಂದು ಗೋಣೀ ಚೀಲದಮೇಲೆ ಕುಳಿತುಕೊಳ್ಳುತ್ತಿದ್ದರು. ಹಲವುಸಲ ಮೈ ಕಾಯಿಸಿಕೊಳ್ಳಲು, ಧುನಿಯ ಮುಂದೆ ಕೂಡುತ್ತಿದ್ದರು. ದಕ್ಷಿಣಕ್ಕೆ ಮುಖಮಾಡಿ ಕೂಡುತ್ತಿದ್ದರು. ಅವರ ಬಾಯಲ್ಲಿ ಸತತವಾಗಿ ಅಲ್ಲಾ ಮಾಲೀಕ್ ಎಂಬುದು ನುಡಿಯುತ್ತಿತ್ತು. ಹೊರಗೆ ಪ್ರಾಪಂಚಿಕ ವ್ಯವಹಾರಗಳಲ್ಲಿ ತುಂಬಿಕೊಂಡವರಂತೆ ಕಾಣಿಸಿದರೂ, ಅವರು ಒಳಗೆ ಜಾಗೃತರಾಗಿಯೆ ಇರುತ್ತಿದ್ದರು. ಅಹಂಕಾರ ಆಸೆಗಳನ್ನೆಲ್ಲಾ ತ್ಯಾಗಮಾಡಿದ್ದರು.

ಮಸೀದಿಯ ಜಾಗವನ್ನೆಲ್ಲಾ ಸೇರಿಸಿದರೆ ಅದು ಬಹುಶಃ ಎರಡು ಕೊಠಡಿಗಳಷ್ಟಾಗುತ್ತಿತ್ತು. ಅದರಲ್ಲಿಯೇ ಬಾಬಾರ ಚಟುವಟಿಕೆಗಳೆಲ್ಲ ನಡೆಯುತ್ತಿದ್ದವು. ಅದು ಮಣ್ಣಿನ ನೆಲ. ಹಳ್ಳಕೊಳ್ಳಗಳಿಂದ ತುಂಬಿ ಅಸಮವಾಗಿತ್ತು. ಬಾಬಾ ಅದರಮೇಲೆಯೇ ಮಲಗುತ್ತಿದ್ದರು. ಮೊದಮೊದಲು ಜನ ಅವರ ಬಳಿಗೆ ಬರಲು ಹೆದರುತ್ತಿದ್ದರೂ, ಆಮೇಲಾಮೇಲೆ ಅವರನ್ನು ಏಕಾಂತವಾಗಿರಲು ಬಿಡದೆ ಅವರ ಸುತ್ತಲೂ ತುಂಬಿರುತ್ತಿದ್ದರು. ಹಾಗೆ ಜನ ಬರಲಾರಂಭಿಸಿದ ಮೇಲೆ ಅವರೆಲ್ಲಾ ಸೇರಿ ಮಸೀದಿಯ ನೆಲವನ್ನು ಒಂದು ರಾತ್ರಿಯಲ್ಲಿ ಸಮತಲ ಮಾಡಿದರು.

ನೀರಿನಿಂದ ದೀಪಗಳನ್ನು ಬೆಳಗಿಸಿದ್ದು

ಶಿರಡಿ ಆಗಿನಕಾಲದಲ್ಲಿ ಎಲ್ಲೋ ಮೂಲೆಯಲ್ಲಿದ್ದ ಒಂದು ಸಣ್ಣ ಹಳ್ಳಿ. ಬಹುತೇಕ ಬಡ ರೈತಾಪಿ ಜನರಿಂದ ಕೂಡಿತ್ತು. ಕೆಲವೇ ಕೆಲವು ದಿನಸಿ ಅಂಗಡಿಗಳಿದ್ದವು. ಬಾಬಾರಿಗೆ ದೀಪಗಳನ್ನು ಹಚ್ಚಿಡುವುದೆಂದರೆ ಬಹಳ ಪ್ರೀತಿ. ಹಳೆಯ ಬಟ್ಟೆ ಚೂರುಗಳನ್ನು ಬತ್ತಿಯ ತರಹೆ ಸುತ್ತಿ ಹಣತೆಯಲ್ಲಿಟ್ಟು, ದಿನವೂ ಶಿರಡಿಯಲ್ಲಿನ ಅಂಗಡಿಗಳಿಗೆ ಹೋಗಿ ಅಲ್ಲಿಂದ ಎಣ್ಣೆ ಬೇಡಿ ತಂದು ದೀಪ ಹಚ್ಚುತ್ತಿದ್ದರು. ದಿನವೂ ಹೀಗೆ ಎಣ್ಣೆ ಬೇಡುವುದು ಅಂಗಡಿಯವರಿಗೆ ಇಷ್ಟವಾಗಲಿಲ್ಲ. ಎಲ್ಲರೂ ಒಂದಾಗಿ ಒಂದು ದಿನ ಬಾಬಾ ಎಣ್ಣೆ ಬೇಡಲು ಬಂದಾಗ, ಅವರಿಗೆ ಎಣ್ಣೆ ಇಲ್ಲವೆಂದು ಸುಳ್ಳು ಹೇಳಿ ವಾಪಸು ಕಳುಹಿಸಿಬಿಟ್ಟರು. ಬಾಬಾ ಇದರಿಂದ ವಿಚಲಿತರಾಗದೆ ಮಸೀದಿಗೆ ಹಿಂತಿರುಗಿ, ದೀಪಗಳನ್ನು ಹಚ್ಚಲು ಸಿದ್ಧವಾದರು. ಈ ವಿಷಯವನ್ನು ತಿಳಿದ ವಣಿಕರು, ಹಳ್ಳಿಯವರು ಎಣ್ಣೆಯಿಲ್ಲದೆ ಇವರು ಹೇಗೆ ದೀಪಗಳನ್ನು ಹಚ್ಚುತ್ತಾರೆ? ಏನು ಮಾಡುತ್ತಾರೋ ನೋಡೋಣ ಎಂದು ಕುತೂಹಲದಿಂದ ಅಲ್ಲಿ ಬಂದು ಸೇರಿದರು. ಬಾಬಾ ಮಸೀದಿಯ ಸುತ್ತಲೂ ಹಣತೆಗಳನ್ನಿಟ್ಟು ಅದರಲ್ಲಿ ಬತ್ತಿಗಳನ್ನಿಟ್ಟರು. ಆಮೇಲೆ ತಾವು ದಿನವೂ ಎಣ್ಣೆ ತರುವ ಡಬ್ಬವನ್ನು ತೆಗೆದುಕೊಂಡು ಅದರಲ್ಲಿ ನೀರನ್ನು ಸುರಿದು, ಸ್ವಲ್ಪ ಕುಡಿದು ಮತ್ತೆ ಆ ಕುಡಿದ ನೀರನ್ನು ಡಬ್ಬದೊಳಕ್ಕೆ ಉಗಿದುಬಿಟ್ಟರು. ಆ ನೀರನ್ನು ಹಣತೆಗಳಲ್ಲಿ ಸುರಿದು ಬತ್ತಿ ಹಚ್ಚಿದರು. ವಿಚಿತ್ರವೋ ಎಂಬಂತೆ ಹಾಗೆ ಬೆಳಗಿಸಿದ ಹಣತೆಗಳು ರಾತ್ರಿಯೆಲ್ಲಾ ಜಾಜ್ವಲ್ಯಮಾನವಾಗಿ ಬೆಳಗಿದವು. ಇದನ್ನು ಕಂಡ ಜನರೆಲ್ಲಾ ಆಶ್ಚರ್ಯಪಟ್ಟು, ವಣಿಕರೊಡನೆ ಬಂದು ಬಾಬಾರ ಪಾದಗಳಲ್ಲಿ ಬಿದ್ದು ಕ್ಷಮಾಪಣೆ ಬೇಡಿದರು. ಎಣ್ಣೆ ಇದ್ದರೂ ಇಲ್ಲವೆಂದು ಸುಳ್ಳು ಹೇಳಿದ ಆ ವಣಿಕರನ್ನು ಬಾಬಾ ಕ್ಷಮಿಸಿ, "ಇನ್ನು ಮುಂದೆ ಹೀಗೆ ಸುಳ್ಳು ಹೇಳಬೇಡಿ. ಯಾವಾಗಲೂ ಸತ್ಯವನ್ನೇ ನುಡಿಯಿರಿ. ಸತ್ಯವನ್ನು ನುಡಿದರೆ ದೇವರು ನಿಮ್ಮನ್ನು ಮೆಚ್ಚುತ್ತಾನೆ" ಎಂದು ಎಚ್ಚರ ಕೊಟ್ಟು ಕಳುಹಿಸಿದರು. ಬಾಬಾರಿಗೆ ಮಿತ್ರರೂ ಇಲ್ಲ. ಶತೃಗಳೂ ಇಲ್ಲ. ಅವರಿಗೆ ಎಲ್ಲರೂ ಒಂದೇ!

ಜವಹರ್ ಆಲಿ ಕಥೆ

ಮೊಹಿಯುದ್ದೀನ್ ಜೊತೆ ಬಾಬಾರ ಕುಸ್ತಿ ಆದ ೫ ವರ್ಷಗಳ ನಂತರ ಜವಾಹರ್ ಆಲಿ ಎಂಬ ಫಕೀರ ತನ್ನ ಶಿಷ್ಯರೊಡನೆ ರಾಹತಾಗೆ ಬಂದು, ವೀರಭದ್ರಸ್ವಾಮಿ ಗುಡಿಯ ಮುಂದೆ ಠಿಕಾಣಿ ಹೂಡಿದ. ಅಲ್ಲಿ ಅನೇಕ ಮರಾಠಿಗರಿದ್ದರು. ಅವರಲ್ಲಿ ಒಬ್ಬ, ಭಾಗು ಸಾದಾಫಲ್ ಎಂಬುವನು ಆಲಿಯ ಸೇವಕನಾದ. ಆಲಿ ಬಹು ಸುಂದರವಾದ ರೀತಿಯಲ್ಲಿ ಖುರಾನನ್ನು ಹಾಡುತ್ತಿದ್ದ. ರಾಹತಾದಲ್ಲಿನ ಭಕ್ತರು ಅವನನ್ನು ಗೌರವಾದರಗಳಿಂದ ಕಾಣುತ್ತಿದ್ದರು. ಆಲಿ ತಾನು ಇದ್ದ ಜಾಗದಲ್ಲಿ ಒಂದು ಈದ್ಗಾ ಕಟ್ಟಬೇಕೆಂದು ಕೆಲಸ ಆರಂಭಿಸಿದ. ಈದ್ಗಾ ಎನ್ನುವುದು ಮುಸ್ಲಿಮರು ಪ್ರಾರ್ಥನೆ ಮಾಡಿಕೊಳ್ಳಲು ಉಪಯೋಗಿಸುವ ಒಂದು ಗೋಡೆ. ಆದರೆ, ಅಲ್ಲಿಯ ಜನ ಅವನು ವೀರಭದ್ರಸ್ವಾಮಿಯ ಗುಡಿಯನ್ನು ಅಪವಿತ್ರಗೊಳಿಸುತ್ತಿದ್ದಾನೆ, ಎಂದು ಕಟ್ಟುವ ಕೆಲಸವನ್ನು ನಿಲ್ಲಿಸಿ ಆಲಿಯನ್ನು ರಾಹತಾದಿಂದ ಹೊರಗಟ್ಟಿದರು. ಆಲಿ ಶಿರಡಿಗೆ ಬಂದು ಬಾಬಾರ ಜೊತೆ ಮಸೀದಿಯಲ್ಲಿ ವಾಸಮಾಡತೊಡಗಿದ. ಆಲಿ ಮೃದುಭಾಷಿ. ಬಹುಬೇಗ ಶಿರಡಿಯ ಜನರನ್ನು ಆಕರ್ಷಿಸಿ ಅವರ ಗೌರವಕ್ಕೆ ಪಾತ್ರನಾದ. ಸ್ವಲ್ಪ ದಿನಗಳ ಮೇಲೆ ಬಾಬಾ ತನ್ನ ಶಿಷ್ಯ ಎಂದು ಹೇಳತೊಡಗಿದ, ಆಲಿ. ಬಾಬಾ ಅದನ್ನು ವಿರೋಧಿಸಲಿಲ್ಲ. ಸ್ವಲ್ಪ ಕಾಲಾನಂತರ ಆಲಿ, ಬಾಬಾರನ್ನು ಕರೆದುಕೊಂಡು ಮತ್ತೆ ರಾಹತಾಗೆ ಹೋಗಿ ಅಲ್ಲಿ ನೆಲೆಯೂರಿದ. ಈ ಗುರುವಿಗೆ ತನ್ನ ಶಿಷ್ಯನ ಮಹಿಮೆಯೇನು ಎನ್ನುವುದು ತಿಳಿದಿರಲಿಲ್ಲ. ಆದರೆ ಶಿಷ್ಯನಿಗೆ ಈ ಗುರುವು ಎಂತಹವನೆಂದು ಚೆನ್ನಾಗಿ ತಿಳಿದಿತ್ತು. ಆದರೂ ಬಾಬಾ ಅವನನ್ನು ಯಾವುದೇ ರೀತಿಯಲ್ಲೂ ಅವಹೇಳನ ಮಾಡಲಿಲ್ಲ. ಬದಲಾಗಿ ಅವನು ಹೇಳಿದ ಕೆಲಸಗಳನ್ನೆಲ್ಲ ಒಪ್ಪವಾಗಿ ಮಾಡುತ್ತಿದ್ದರು. ಆಗಾಗ ಶಿರಡಿಗೆ ಬಂದು ಹೋಗಿ ಮಾಡುತ್ತಿದ್ದರು.

ಶಿರಡಿಯಲ್ಲಿನ ಬಾಬಾರ ಭಕ್ತರು ಅವರ ಅಗಲಿಕೆಯನ್ನು ತಾಳಲಾರದೆ ಅವರು ಹಿಂತಿರುಗುವುದಿಲ್ಲವೇನೋ ಎಂದು ನಿರಾಶರಾಗಿ, ಹೇಗಾದರೂ ಮಾಡಿ ಬಾಬಾರನ್ನು ಒಪ್ಪಿಸಿ ಹಿಂದಕ್ಕೆ ಕರೆತರಬೇಕೆಂದು ನಿಶ್ಚಯಿಸಿಕೊಂಡರು. ಆ ನಿಶ್ಚಯದಿಂದ ಅವರೆಲ್ಲಾ ರಾಹತಾಗೆ ಹೋಗಿ, ಬಾಬಾರನ್ನು ಕಂಡು ಶಿರಡಿಗೆ ಹಿಂತಿರುಗಬೇಕೆಂದು ಒತ್ತಾಯಮಾಡಿದರು. ಅದಕ್ಕೆ ಬಾಬಾ, "ಈ ಫಕೀರ ಬಹು ಕೋಪಿಷ್ಠ. ನಿಮ್ಮನ್ನು ಇಲ್ಲಿ ಕಂಡರೆ ಉರಿದೇಳುತ್ತಾನೆ. ಅವನು ಬರುವುದಕ್ಕೆ ಮುಂಚೆಯೇ ಇಲ್ಲಿಂದ ಹೊರಟುಹೋಗಿ” ಎಂದು ಹೇಳಿದರು. ಅಷ್ಟರಲ್ಲಿ ಆಲಿ ಅಲ್ಲಿಗೆ ಬಂದು, “ನೀವು ಇಲ್ಲಿಗೆ ಬಂದಿರುವುದೇತಕ್ಕೆಂದು ನನಗೆ ಗೊತ್ತು. ಬಾಬಾನನ್ನು ನಾನು ನಿಮ್ಮ ಜೊತೆಯಲ್ಲಿ ಕಳುಹಿಸುವುದಿಲ್ಲ. ಹೊರಟುಹೋಗಿ" ಎಂದು ಕೂಗಾಡಿದ. ಭಕ್ತರು ಬಹಳ ಬೇಡಿಕೊಂಡದ್ದರಿಂದ, ತನ್ನನ್ನೂ ಬಾಬಾ ಜೊತೆಯಲ್ಲಿ ಕರೆದುಕೊಂಡುಹೋದರೆ ಮಾತ್ರ ಆಗಬಹುದು ಎಂದ. ಅದಕ್ಕೆ ಒಪ್ಪಿ ಭಕ್ತರು ಇಬ್ಬರನ್ನೂ ಶಿರಡಿಗೆ ಕರೆದುಕೊಂಡುಹೋದರು.

ಶಿರಡಿಯಲ್ಲಿ ದೇವಿದಾಸ್ ಎಂಬ ಸಾಧುವೊಬ್ಬರು ಮಾರುತಿ ದೇವಸ್ಥಾನದಲ್ಲಿ ವಾಸಮಾಡುತ್ತಿದ್ದರು. ತಿಳಿವಳಿಕೆಯುಳ್ಳ ಮನುಷ್ಯ. ಬಾಬಾ ಶಿರಡಿಗೆ ಬರುವುದಕ್ಕೆ ಬಹಳ ಮುಂಚೆಯೇ, ಸಣ್ಣ ಹುಡುಗನಾಗಿ ಆತ ಶಿರಡಿಗೆ ಬಂದು ನೆಲೆಸಿದ್ದರು. ತಾತ್ಯಾ, ಬಾಪಾ ಪಾಟೀಲ್ ಮತ್ತು ಕಾಶಿನಾಥ್ ಅವರ ಶಿಷ್ಯರಾಗಿದ್ದರು. ಆಗಾಗ ಅಪ್ಪ ಭಿಲ್ಲು, ಮಹಲ್ಸಾಪತಿ ಆತನನ್ನು ಕಾಣಲು ಬರುತ್ತಿದ್ದರು. ಕಾಶಿನಾಥ ಆತನಿಗೆ ಅವಶ್ಯವಾದ ಸಾಮಾನುಗಳನ್ನು ಪೂರಯಿಸುತ್ತಿದ್ದ. ಬಾಬಾರನ್ನು ಆಲಿ ತನ್ನ ವಶ ಮಾಡಿಕೊಂಡಿದ್ದಾನೆಂದು ಅವರೆಲ್ಲರು ಯೋಚಿಸಿ ದೇವಿದಾಸ್ ಮತ್ತು ಆಲಿ ಇಬ್ಬರ ಮಧ್ಯೆ ಆಧ್ಯಾತ್ಮಿಕ ಚರ್ಚೆ ಏರ್ಪಡಿಸಿದರು. ಅದರಲ್ಲಿ ಆಲಿ ಸೋತು, ಶಿರಡಿ ಬಿಟ್ಟು ಹೊರಟು ಹೋದ. ಬಿಜಾಪುರಕ್ಕೆ ಹೋಗಿ ಅಲ್ಲಿದ್ದು, ಬಹಳ ವರ್ಷಗಳಾದಮೇಲೆ ಶಿರಡಿಗೆ ಬಂದು ಬಾಬಾರ ಕಾಲಿಗೆ ಬಿದ್ದು ಕ್ಷಮಾಪಣೆ ಬೇಡಿದ. ತನ್ನ ತಪ್ಪನ್ನು ಅರಿತುಕೊಂದು ಕಾಲಿಗೆ ಬಿದ್ದ ಅವನನ್ನು ಬಾಬಾ ಕ್ಷಮಿಸಿ ಹಿಂದಿನಂತೆ ಗೌರವಿಸಿದರು. ಇದರಿಂದ ಶಿಷ್ಯನಾದವನು ತನ್ನ ಗುರುವಿನಲ್ಲಿ ಹೇಗೆ ನಡೆದುಕೊಳ್ಳಬೇಕೆಂಬ ರೀತಿಯನ್ನು ಬಾಬಾ ತೋರಿಸಿಕೊಟ್ಟರು. ಶಿಷ್ಯ ತಾನು ತನ್ನದು ಎಂಬುವ ಮಮಕಾರ ಅಹಂಕಾರಗಳನ್ನು ಬಿಟ್ಟು ಗುರುವಿಗೆ ಸಂಪೂರ್ಣ ಶರಣಾಗತನಾದಾಗ, ಗುರುವು ಅವನಿಗೆ ಮೋಕ್ಷಮಾರ್ಗವನ್ನು ತೋರಿಸುತ್ತಾರೆ. ಗುರು ಶಿಷ್ಯರಲ್ಲಿ ಏನೂ ಭೇದವಿಲ್ಲ. ಒಬ್ಬರಿಗೆ ಇನ್ನೊಬ್ಬರು ಪೂರಕ.

ಜವಾಹರ್ ಆಲಿ ಕಥೆಯನ್ನು ಹೇಮಾಡ್ ಪಂತ್ ಮಹಲ್ಸಾಪತಿಯಿಂದ ಕೇಳಿ ಅದನ್ನು ಸಚ್ಚರಿತ್ರೆಯಲ್ಲಿ ಅಳವಡಿಸಿದರು.

ಇದರೊಡನೆ ಸಾಯಿ ಮತ್ತೆ ಶಿರಡಿಯಲ್ಲಿ ಕಾಣಿಸಿಕೊಳ್ಳುವುದು ಇತ್ಯಾದಿ ವಿಷಯಗಳನ್ನು ಕುರಿತು ಹೇಳುವ ಐದನೆಯ ಅಧ್ಯಾಯ ಮುಗಿಯಿತು. ಮುಂದಿನ ಅಧ್ಯಾಯದಲ್ಲಿ ಹೇಮಾಡ್ ಪಂತ್ ಬಾಬಾರ ಸ್ಪರ್ಶಾನುಭವ, ರಾಮನವಮಿ ಉತ್ಸವ, ಮಸೀದಿಯ ಪುನರುದ್ಧಾರ ಇತ್ಯಾದಿ ವಿಷಯಗಳನ್ನು ಹೇಳುತ್ತಾರೆ.

||ಶ್ರೀ ಸದ್ಗುರು ಸಾಯಿನಾಥಾರ್ಪಣಮಸ್ತು||ಶುಭಂ ಭವತು||
||ಓಂ ಶಾಂತಿಃ ಶಾಂತಿಃ ಶಾಂತಿಃ||


No comments:

Post a Comment