Friday, December 23, 2011

||ಹದಿನಾರನೆಯ ಮತ್ತು ಹದಿನೇಳನೆಯ ಅಧ್ಯಾಯಗಳು||


||ಶ್ರೀ ಸಾಯಿ ಸಚ್ಚರಿತ್ರೆ||
||ಹದಿನಾರನೆಯ ಮತ್ತು ಹದಿನೇಳನೆಯ ಅಧ್ಯಾಯಗಳು||
||ಬ್ರಹ್ಮಜ್ಞಾನ||
ಶ್ರೀ ಗಣೇಶಾಯ ನಮಃ ಶ್ರೀ ಸರಸ್ವತಯೇ ನಮಃ
ಶ್ರೀ ವೆಂಕಟೇಶಾಯ ನಮಃ ಶ್ರೀ ಸಾಯಿನಾಥಾಯ ನಮಃ
ಶ್ರೀ ಸದ್ಗುರುಭ್ಯೋನ್ನಮಃ

ಈ ಅಧ್ಯಾಯಗಳಲ್ಲಿ ಹೇಮಾಡ್ ಪಂತ್, ದಿಢೀರ್ ಬ್ರಹ್ಮಜ್ಞಾನ ಪಡೆಯಲು ಬಂದ ಶ್ರೀಮಂತನೊಬ್ಬನ ಕಥೆ ಮತ್ತು ಇತರ ವಿಷಯಗಳನ್ನು ಹೇಳುತ್ತಾರೆ.

ಸಾಯಿ ದರ್ಬಾರು

ರಾಜಾಧಿರಾಜ, ಯೋಗಿರಾಜ ಚಕ್ರವರ್ತಿ, ಶ್ರೀ ಸಾಯಿನಾಥ ಮಹಾರಾಜ! ನಿಮ್ಮ ಚರಣಗಳಲ್ಲಿ ಅತ್ಯಂತ ಶ್ರದ್ಧಾ ಭಕ್ತಿ ಪೂರ್ವಕವಾದ ಸಾಷ್ಟಾಂಗ ನಮಸ್ಕಾರಗಳನ್ನು ಅರ್ಪಿಸುತ್ತೇವೆ. ಹುಲು ಮಾನವರಾದ ನಾವು, ನಿಮ್ಮ ಕೀರ್ತಿಯನ್ನು ಹೇಗೆ ತಾನೇ ವರ್ಣಿಸಬಲ್ಲೆವು? ಉನ್ನತವಾದ ಭಕ್ತರ ಹೃದಯ ಪೀಠಗಳಲ್ಲಿ ರಾರಾಜಿಸುತ್ತಿರುವ ನಿಮಗೆ, ಶ್ರದ್ಧಾ ಸಬೂರಿಗಳೆಂಬ ಇಬ್ಬರು ಸೇವಕರು, ಸುಗಂಧ ಪೂರಿತವಾದ ಬೀಸಣಿಗೆಗಳಿಂದ ಗಾಳಿ ಬೀಸುತ್ತಿದ್ದಾರೆ. ನಾಲ್ಕು ವೇದಗಳು, ಆರು ಶಾಸ್ತ್ರಗಳು, ಹದಿನೆಂಟು ಪುರಾಣಗಳು ನಿಮ್ಮ ಆಸ್ಥಾನ ಕವಿಗಳಾಗಿ ನಿಮ್ಮನ್ನು ಹೊಗಳುತ್ತಿರುವಾಗ, ಚಿನ್ಮಯವೆಂಬ ಬೆಳದಿಂಗಳಿನಲ್ಲಿ ಶೋಭಾಯಮಾನವಾಗಿ ಬೆಳಗುತ್ತಿದೆ ನಿಮ್ಮ ದರ್ಬಾರು. ವಿರಕ್ತಿ, ಭಕ್ತಿ, ಜ್ಞಾನ, ವೈರಾಗ್ಯ, ಶ್ರವಣ, ಮನನ, ಧ್ಯಾನ, ತ್ಯಾಗ, ಸಾಕ್ಷಾತ್ಕಾರಗಳೆಂಬ ಮಂತ್ರಿಗಳು ಏಕಾಗ್ರ ಚಿತ್ತದಿಂದ ಸರ್ವಕಾಲಗಳಲ್ಲಿಯೂ ನಿಮ್ಮ ಸೇವೆಯಲ್ಲಿ ನಿರತರಾಗಿದ್ದಾರೆ. ನಿಮ್ಮ ಸುಮಧುರ ಮಂಗಲವಾದ ಮಾತುಗಳು, ಉಪನಿಷತ್ತಿನ ಜೇನುಧಾರೆಯಂತೆ, ನಮ್ಮನ್ನು ಆನಂದ ಪರವಶರನ್ನಾಗಿ ಮಾಡುತ್ತಿವೆ. ಬ್ರಹ್ಮಜ್ಞಾನವೆಂಬ ಅತಿ ತೀಕ್ಷಣವಾದ ಅಲಗುಳ್ಳ ಕರವಾಳವೋ ಎಂಬಂತೆ ನಿಮ್ಮ ಕೈಗಳು, ಅರಿಷಡ್ವರ್ಗಗಳೆಂಬ ನಮ್ಮ ನ್ಯೂನತೆಗಳನ್ನು ಕಡಿದುರುಳಿಸುತ್ತಿವೆ. ಇದೇ ಕರವಾಳದಿಂದಲೇ, ನಮ್ಮನ್ನು ಜನನ ಮರಣಗಳೆಂಬ ಚಕ್ರಭ್ರಮಣೆಯಲ್ಲಿ ಸಿಕ್ಕಿಸಿ, ಬಂಧಿಸಿರುವ ಭವಸಾಗರದಿಂದ ಪಾರುಮಾಡು, ತಂದೆ ಸಾಯಿನಾಥ. ನಿಮ್ಮ ಅವತಾರ ಕಾರ್ಯವೇ ಭಕ್ತರ ಉದ್ಧಾರಕ್ಕಾಗಿಯಲ್ಲವೇ?

ಚೋಳ್ಕರನಿಗೆ ಬಾಬಾ ಕೊಟ್ಟ ಅನುಗ್ರಹವೆಂಬ ಉಡುಗೊರೆ, ಅವನು ಬಾಬಾರಿಗೆ ಕೊಟ್ಟ ಕಲ್ಲುಸಕ್ಕರೆ ಎಂಬ ಉಡುಗೊರೆಗಿಂತ, ಸಾವಿರಾರು ಪಾಲು ದೊಡ್ಡದು. ವಿಶ್ವಾಸ, ಅನುಕಂಪಗಳಿಂದ ತುಂಬಿದ ಬಾಬಾ ಆ ಸಣ್ಣ ಕಾಣಿಕೆಯನ್ನು ಅರ್ಪಿಸಿಕೊಂಡು ಅವನನ್ನು ಅನುಗ್ರಹಿಸಿದರು. ಅವರಿಗೆ ಶ್ರದ್ಧಾಭಕ್ತಿಗಳಿಂದ ನೀಡಿದ ಕಾಣಿಕೆ ಒಪ್ಪಿಗೆಯಾಗಿತ್ತೇ ವಿನಹ, ಡಂಭ ದರ್ಪಗಳಿಂದ ಕೂಡಿದ ಕಾಣಿಕೆಯಲ್ಲ. ಬಾಬಾ ಕಾಣಿಕೆಯನ್ನು ಒಪ್ಪಿಕೊಳ್ಳುವಾಗ, ಅದರ ಹಿಂದಿರುವ ಭಾವವನ್ನು ನೋಡುತ್ತಿದ್ದರೇ ಹೊರತು, ಅದು ಎಷ್ಟು ಮೌಲ್ಯದ್ದು ಎಂದು ಎಂದೂ ನೋಡಲಿಲ್ಲ. ಸಚ್ಚಿದಾನಂದ ರೂಪರಾದ ಅವರಿಗೆ ಬೇಕಾದ್ದು ಏನಿದೆ? ಲೌಕಿಕ ಶಿಷ್ಟಾಚಾರಗಳಿಗೆ ಅವರು ಅತೀತರಾಗಿದ್ದರು. ವಿನಯ, ವಿಧೇಯತೆ, ವಿಶ್ವಾಸಗಳು ಅವರಿಗೆ ಪ್ರಿಯವಾಗಿದ್ದವು. ಸದಾ ಕ್ಷಮಾದೃಷ್ಟಿಯಿಂದ ತನ್ನ ಭಕ್ತರನ್ನು ಕಾಣುತ್ತಿದ್ದ ಅಂತಹ ಸದ್ಗುರು ಲಭ್ಯವಾಗುವುದು ಬಹಳ ಅಪರೂಪ. ಅಸಾಧ್ಯವೇ ಎಂದರೂ ಉತ್ಪ್ರೇಕ್ಷೆಯಲ್ಲ. ಚಿಂತಾಮಣಿ, ಕಾಮಧೇನು, ಕಲ್ಪವೃಕ್ಷಗಳು ನಾವು ಕೇಳಿದ್ದನ್ನು ಮಾತ್ರ ಕೊಡುತ್ತವೆ. ಸದ್ಗುರುವನ್ನು ಇವಕ್ಕೆ ಹೋಲಿಸುವುದು ಅಷ್ಟೊಂದು ಸಮಂಜಸವೆಂದು ತೋರುವುದಿಲ್ಲ. ಏಕೆಂದರೆ ಸದ್ಗುರುವು ನಾವು ಕೇಳಿದುದರ ಜೊತೆಗೆ, ನಮ್ಮ ಒಳಿತಿಗೆ ತಾನು ಕೊಡಬೇಕೆಂದುಕೊಂಡದ್ದನ್ನೂ ಕೊಡುತ್ತಾನೆ. ಅವರ ಅನುಗ್ರಹದ ರೀತಿಗಳು ಊಹಾತೀತ. ಬ್ರಹ್ಮಜ್ಞಾನವನ್ನು ಪಡೆಯಲು ಬಂದ ಶ್ರೀಮಂತನನ್ನು ಅನುಗ್ರಹಿಸಿದಂತೆ!

ಗುಲ್ಜಾರ್ ಕಥೆ

ಬಾಬಾರ ಕೀರ್ತಿ ದೂರದೂರಗಳಿಗೆ ಹಬ್ಬುತ್ತಿದ್ದಂತೆ, ಮಾಲೇಗಾಂವ್‍ನ ಹತ್ತಿರ ವಾಸಿಸುತ್ತಿದ್ದ, ಗುಲ್ಜಾರ್ ಎನ್ನುವ ಒಬ್ಬ ವಿಶಿಷ್ಟ ಶ್ರೀಮಂತನ ಕಿವಿಗೂ ಬಿತ್ತು. ಅವನಿಗೆ ಹೊಲಗದ್ದೆಗಳು, ಧನಕನಕ ವಸ್ತುವಾಹನಗಳು, ಗೋಸಂಪತ್ತು ಎಲ್ಲವೂ ವಿಪುಲವಾಗಿದ್ದವು. ಆಳುಕಾಳುಗಳು ಬಹಳವಾಗಿತ್ತು. ತನಗೆ ಈ ಐಹಿಕ ಪ್ರಪಂಚದಲ್ಲಿ ಎಲ್ಲವೂ ಇದೆ. ಬೇಕಾದ್ದು ಬ್ರಹ್ಮಜ್ಞಾನ ಮಾತ್ರ. ಅದೊಂದನ್ನು ಪಡೆದರೆ ಎಲ್ಲವೂ ಸಿಕ್ಕಿದಂತಾಯಿತು. ಆದ್ದರಿಂದ, “ಬಾಬಾರನ್ನು ದರ್ಶನ ಮಾಡಿ ಅವರಿಂದ ಬ್ರಹ್ಮಜ್ಞಾನವನ್ನು ಪಡೆದುಕೊಂಡರೆ, ನಾನು ಪಡೆಯಬೇಕಾದ್ದು ಇನ್ನೇನೂ ಇರುವುದಿಲ್ಲ. ಬಾಬಾ ಬಹಳ ಉದಾರವಂತರು ಹಾಗೂ ದಯಾಮಯಿ. ಯಾರು ಏನು ಕೇಳಿದರೆ ಅದನ್ನು ಕೊಡುತ್ತಾರೆ” ಎಂದೆಲ್ಲಾ ಯೋಚನೆ ಮಾಡಿ ತನ್ನ ಆಪ್ತ ಸ್ನೇಹಿತನ ಹತ್ತಿರ ಎಲ್ಲವನ್ನೂ ಹೇಳಿದ. ಅವನನ್ನು ಬಹಳ ಆಳವಾಗಿ ತಿಳಿದಿದ್ದ ಆ ಸ್ನೇಹಿತ ಅವನಿಗೆ, "ಬ್ರಹ್ಮಜ್ಞಾನ ಎನ್ನುವುದು ಅಷ್ಟು ಸುಲಭವಾಗಿ ಸಿಕ್ಕುವುದಲ್ಲ. ಅದರಲ್ಲೂ ನಿನ್ನಂತಹ ಪರಮಲೋಭಿ, ಐಶ್ವರ್ಯ, ಹೆಂಡತಿ, ಮಕ್ಕಳು ಎಂದು ಅದರಲ್ಲೇ ಮುಳುಗಿದವನಿಗೆ ಅದು ಅಲಭ್ಯವೆಂದೇ ಹೇಳಬೇಕು" ಎಂದು ಹೇಳಿದ. ಗುಲ್ಜಾರ್ ಅವನ ಮಾತನ್ನು ಕೇಳದೆ, ಹೋಗಿ ಬರುವುದಕ್ಕೆ ಟಾಂಗಾ ಮಾತನಾಡಿಕೊಂಡು, ಶಿರಡಿಗೆ ಹೊರಟ. ಶಿರಡಿಗೆ ಹೋಗಿ, ಬಾಬಾರನ್ನು ಕಂಡು ಅವರಿಗೆ ನಮಸ್ಕರಿಸಿ, ಅವರ ಪಾದಗಳನ್ನು ಹಿಡಿದು, "ಬಾಬಾ ನೀವು ಬಹಳ ದಯಾಮಯಿ. ಕೇಳಿದವರಿಗೆ ಕೇಳಿದ್ದನ್ನು ಕೊಡುವ ಉದಾರಿ. ನಾನು ದೂರದೂರಿನಿಂದ ದಣಿದು ಬಂದಿದ್ದೇನೆ. ನೀವು ನನಗೆ ಬ್ರಹ್ಮಜ್ಞಾನವನ್ನು ಕೊಟ್ಟರೆ ಅದನ್ನು ಪಡೆದು ನಾನು ಸಂತೋಷವಾಗಿ ಹಿಂತಿರುಗುತ್ತೇನೆ" ಎಂದು ಬೇಡಿದ. ಬಾಬಾ ವಿನೋದದ ಮುಖಭಾವವನ್ನು ತೋರಿಸುತ್ತಾ, "ಅಯ್ಯಾ, ಆತುರಪಡಬೇಡ. ನಾನೂ ನಿನಗಾಗಿಯೇ ಕಾಯುತ್ತಿದ್ದೆ. ನನ್ನಲ್ಲಿಗೆ ಬರುವ ಜನರೆಲ್ಲಾ ಬರಿಯ ಲೌಕಿಕ ಆಸೆಗಳನ್ನಿಟ್ಟುಕೊಂಡು ಬರುತ್ತಾರೆ. ಸಿರಿಸಂಪತ್ತುಗಳು, ಸಂತಾನ, ರೋಗನಿವಾರಣೆ ಇಂತಹುವನ್ನು ಮಾತ್ರ ಬೇಡಲು ಬರುತ್ತಾರೆ. ಬ್ರಹ್ಮಜ್ಞಾನವನ್ನು ಬೇಡಿ ಬರುವವರು ಬಹಳ ಅಪರೂಪ. ನಾನು ನಿನಗೆ ಈ ಕೂಡಲೇ ಬ್ರಹ್ಮಜ್ಞಾನವನ್ನು ಕೊಡುತ್ತೇನೆ. ಬ್ರಹ್ಮನನ್ನು ಅವನ ಸಕಲ ವೈಭವಗಳೊಡನೆ ತೋರಿಸುತ್ತೇನೆ. ಆದರೆ ನನ್ನ ವ್ಯವಹಾರವೆಲ್ಲಾ ನಗದು. ಸಾಲದ ಮಾತಿಲ್ಲ" ಎಂದರು.

ಬಾಬಾ ಅವನನ್ನು ತಮ್ಮ ಮುಂದೆ ಕೂಡಿಸಿಕೊಂಡು ಆ ಮಾತು ಈ ಮಾತು ಆಡುತ್ತಾ ಅವನು ಕೇಳಿದ ಪ್ರಶ್ನೆಯನ್ನು ತಾತ್ಕಾಲಿತವಾಗಿ ಮರೆಯುವಂತೆ ಮಾಡುತ್ತಾ, ಒಬ್ಬ ಹುಡುಗನನ್ನು ಕರೆದು "ನಂದು ಮಾರವಾಡಿಯ ಹತ್ತಿರ ಹೋಗಿ ನನಗೆ ಬಹಳ ತುರ್ತಾಗಿ ಬೇಕು ಎಂದು ಹೇಳಿ ಐದು ರೂಪಾಯಿ ಸಾಲ ತೆಗೆದುಕೊಂಡು ಬಾ" ಎಂದು ಕಳುಹಿಸಿದರು. ಆ ಹುಡುಗ ಹೋಗಿ ವಾಪಸಾಗಿ ನಂದು ಮಾರವಾಡಿ ಮನೆಯಲ್ಲಿಲ್ಲ ಎಂದು ಹೇಳಿದ. ಮತ್ತೆ ಬಾಬಾ ಅವನನ್ನು ಕಿರಾಣಾ ಅಂಗಡಿಯವನ ಹತ್ತಿರಕ್ಕೆ ಕಳುಹಿಸಿದರು. ಆ ಹುಡುಗ ಮತ್ತೆ ಹಿಂತಿರುಗಿ ಅವನೂ ಇಲ್ಲ ಎಂದ. ಬಾಬಾ ಮತ್ತೆ ಇನ್ನೊಬ್ಬನ ಬಳಿಗೆ ಕಳುಹಿಸಿದರು. ಆಲ್ಲಿಂದಲೂ ಆ ಹುಡುಗ ಬರಿ ಕೈಯಲ್ಲಿ ಹಿಂತಿರುಗಿದ. ಹೀಗೆ ನಾಲ್ಕೈದು ಸಲವಾದರೂ ಆ ಹುಡುಗ ಬರಿ ಕೈಯಲ್ಲೇ ಹಿಂತಿರುಗಿದ.

ಬಾಬಾರಿಗೆ ನಿಜವಾಗಿಯೂ ಐದು ರೂಪಾಯಿ ಸಾಲ ಬೇಕಾಗಿತ್ತೆ ಎಂದರೆ, ಬೇಕಾಗಿರಲಿಲ್ಲ. ಹಾಗೂ ಬೇಕಾಗಿತ್ತು, ಎಂದರೆ ಮಸೀದಿಯಲ್ಲಿ ಕೂತಿದ್ದ ಜನರಲ್ಲಿ ಯಾರಾದರೊಬ್ಬರು ಕೊಡುತ್ತಿದ್ದರು. ಆ ಹುಡುಗನನ್ನು ಅಷ್ಟುಸಲ ಕಳುಹಿಸುವ ಪ್ರಮೇಯವೇ ಬರುತ್ತಿರಲಿಲ್ಲ. ಅದೂ ಅಲ್ಲದೆ ಸರ್ವಜ್ಞರಾದ ಅವರಿಗೆ, ನಂದೂ ಮಾರವಾಡಿ, ಇತರರು ಇಲ್ಲವೆಂದು ತಿಳಿದಿರಲಿಲ್ಲವೆ?

ಬಾಬಾ ಸರ್ವಜ್ಞರೇ! ಅವರಿಗೆ ನಂದೂ ಮಾರವಾಡಿ ಮತ್ತಿತರರು ಇಲ್ಲವೆಂದಷ್ಟೇ ಅಲ್ಲ, ಬ್ರಹ್ಮಜ್ಞಾನವನ್ನು ಪಡೆಯಲು ಬಂದ ಮಹಾಶಯನ ಹತ್ತಿರ ನೋಟುಗಳ ಕಂತೆ ಇತ್ತೆಂಬುದೂ ತಿಳಿದಿತ್ತು. ಬಾಬಾ ಆ ಮನುಷ್ಯನ ಪರೀಕ್ಷೆ ಮಾಡುತ್ತಿದ್ದರು. ಅವನು ನಡೆಯುತ್ತಿರುವುದೆಲ್ಲವನ್ನೂ ನೋಡುತ್ತಿದ್ದರೂ, ಅದಕ್ಕೂ ತನಗೂ ಯಾವ ಸಂಬಧವೂ ಇಲ್ಲದವನಂತೆ ನೋಡುತ್ತಿದ್ದನೇ ಹೊರತು ತಾನು ಅದರಲ್ಲಿ ಭಾಗಿಯಾಗಲಿಲ್ಲ. ಹಾಗೆ ಭಾಗಿಯಾಗಬೇಕೆಂಬ ಮನಸ್ಸಿದ್ದಿದ್ದರೆ, ಅವನು ತನ್ನ ಜೇಬಿನಿಂದ ಹಣವನ್ನು ತೆಗೆದು ಕೊಡಬಹುದಾಗಿತ್ತು. ಅಷ್ಟೇ ಅಲ್ಲ, ತನ್ನನ್ನು ಉಪೇಕ್ಷೆ ಮಾಡುತ್ತಿದ್ದಾರೆ ಎಂದು ಭಾವಿಸಿ ಬಾಬಾರನ್ನು ಮತ್ತೆ ಮತ್ತೆ ತನಗೆ ಬ್ರಹ್ಮಜ್ಞಾನವನ್ನು ಬೇಗ ಕೊಡಿ ಎಂದು ಒತ್ತಾಯಪಡಿಸುತ್ತಿದ್ದ. ಆಗ ಬಾಬಾ ಹೇಳಿದರು, "ಅಯ್ಯಾ, ನಾನು ಮಾಡುತ್ತಿರುವುದು ಏನೆಂದು ನೋಡಿದೆ ಅಲ್ಲವೇ? ನಿನಗೆ ಬ್ರಹ್ಮನನ್ನು ತೋರಿಸಲೆಂದೇ ನಾನು ಐದು ರೂಪಾಯಿ ಕೇಳಿದ್ದು. ಐದು ರೂಪಾಯಿ ಎಂದರೆ ನೋಟುಗಳಲ್ಲ. ಪಂಚಪ್ರಾಣಗಳು, ಪಂಚೇಂದ್ರಿಯಗಳು, ಮನಸ್ಸು, ಬುದ್ಧಿ, ಅಹಂಕಾರ ಎಂಬ ಐದನ್ನು ಕೊಡಬೇಕು. ಬ್ರಹ್ಮಜ್ಞಾನದ ದಾರಿ ಅಷ್ಟು ಸುಲಭವಲ್ಲ. ಅದು ಕತ್ತಿಯ ಅಲುಗಿನ ಮೇಲೆ ನಡೆದಂತೆ" ಎಂದು ಹೇಳಿ ಬಾಬಾ ಬ್ರಹ್ಮಜ್ಞಾನದ ಮೇಲೆ ಯಾರು ಅದಕ್ಕೆ ಅರ್ಹರು, ಅದನ್ನು ಪಡೆಯುವ ದಾರಿ ಯಾವುದು, ಇತ್ಯಾದಿ ವಿವರಗಳೊಡನೆ ಒಂದು ಅದ್ಭುತವಾದ ವ್ಯಾಖ್ಯಾನ ಮಾಡಿದರು. ವೇದ, ಉಪನಿಷತ್ತು, ಗೀತೆ, ಭಾಗವತಗಳಲ್ಲಿ ಈ ವಿಷಯವಾಗಿ ಹೇಳಿರುವ ವಿವರಗಳನ್ನೆಲ್ಲಾ ಭಟ್ಟಿ ಇಳಿಸಿ ಹೇಳಿದಂತೆ, ಮಸೀದಿಯಲ್ಲಿ ಕುಳಿತಿದ್ದವರಿಗೆಲ್ಲಾ ಸುಲಭವಾಗಿ ಅರ್ಥವಾಗುವಂತೆ, ಸರಳವಾದ ಭಾಷೆಯಲ್ಲಿ ಹೇಳಿದರು.

ಬ್ರಹ್ಮಜ್ಞಾನ

ಬ್ರಹ್ಮಜ್ಞಾನ ಅಥವಾ ಆತ್ಮಜ್ಞಾನ ಪಡೆಯಬೇಕಾದರೆ, ಅದಕ್ಕೆ ಇರಲೇಬೇಕಾದ ಕೆಲವು ಗುಣಗಳಿವೆ. ಅವುಗಳಿದ್ದವರು ಮಾತ್ರ ಬ್ರಹ್ಮಜ್ಞಾನವನ್ನು ಪಡೆಯಲು ಅರ್ಹರಾಗುತ್ತಾರೆ ಎಂದು ಹೇಳಿದ ಬಾಬಾ ಅವುಗಳನ್ನು ವಿಶದೀಕರಿಸಿದರು.

ಮೊದಲನೆಯದು: ಮುಮುಕ್ಷುವಾಗಿರಬೇಕು. ಮುಮುಕ್ಷು ಎಂದರೆ ತಾನು ಈ ಪ್ರಪಂಚದಿಂದ ಬಿಡುಗಡೆ ಹೊಂದಿ ಸ್ವತಂತ್ರನಾಗಬೇಕು, ಎನ್ನುವ ಉತ್ಕಟೇಚ್ಛೆ ಇರಬೇಕು. ಈ ಬಂಧನಗಳಿಂದ ಹೇಗೆ ಬಿಡಿಸಿಕೊಳ್ಳಬೇಕು ಎಂಬುದೊಂದೇ ಯೋಚನೆ ಅವನಲ್ಲಿ ತುಂಬಿರಬೇಕು. ಇನ್ನಾವುದರ ಕಡೆಯೂ ಅವನ ಲಕ್ಷ್ಯ ಹರಿಯಬಾರದು. ಹಾಗೆ ತನ್ನ ಮನಸ್ಸನ್ನು ಸ್ಥಿರಮಾಡಿ ತನ್ನ ಗುರಿಯತ್ತ ನಡೆಯಬೇಕು.

ಎರಡನೆಯದು: ವಿರಕ್ತನಾಗಿರಬೇಕು. ಅಂದರೆ ಎಲ್ಲದರಲ್ಲೂ ಅನಾಸಕ್ತಿಯುಳ್ಳವನಾಗಿರಬೇಕು. ಈ ಪ್ರಪಂಚದ ಮೇಲೆ ಅವನಿಗೆ ಸಂಪೂರ್ಣ ಜಿಗುಪ್ಸೆಯಿರಬೇಕು. ಕರ್ಮ ಫಲಾಪೇಕ್ಷಿ ಆಗಿರಬಾರದು.

ಮೂರನೆಯದು: ಅಂತರ್ಮುಖಿಯಾಗಿರಬೇಕು. ನಮ್ಮ ಇಂದ್ರಿಯಗಳೆಲ್ಲಾ ಬಾಹ್ಯವರ್ತಿಗಳು. ಕಣ್ಣು ನೋಡುತ್ತದೆ. ಕಿವಿ ಕೇಳುತ್ತದೆ. ನಾಲಗೆ ರುಚಿ ನೋಡುತ್ತದೆ. ಚರ್ಮ ಸ್ಪರ್ಶಾನುಭವ ಮಾಡುತ್ತದೆ. ಇವೆಲ್ಲವೂ ಬಾಹ್ಯ ಪ್ರಪಂಚದ ಕಾರ್ಯಗಳನ್ನು ಗುರುತಿಸುವಂತಹವು. ಆದರೆ ಬ್ರಹ್ಮಜ್ಞಾನವನ್ನು ಬಯಸುವವನು ಇವುಗಳೆಲ್ಲವನ್ನೂ ಅಂತರ್ಮುಖಿಗಳನ್ನಾಗಿ ಮಾಡಿಕೊಳ್ಳಬೇಕು. ಬಾಹ್ಯ ಪ್ರಪಂಚದ ಆಗುಹೋಗುಗಳೆಲ್ಲವೂ, ಯಾವ ರೀತಿಯಲ್ಲೂ, ಅವನನ್ನು ಬಾಧಿಸದಂತೆ ಮಾಡಿಕೊಳ್ಳಬೇಕು.

ನಾಲ್ಕನೆಯದು: ನಮ್ಮಿಂದ ತಿಳಿದೋ ತಿಳಿಯದೆಯೋ ಅನೇಕ ಪಾಪಗಳು ಆಗುತ್ತಿರುತ್ತವೆ. ಬ್ರಹ್ಮಜ್ಞಾನಿಯಾಗಬೇಕು ಎಂದುಕೊಳ್ಳುವವನು ಕಾಯಾ, ವಾಚಾ, ಮನಸಾ, ತ್ರಿಕರಣ ಶುದ್ಧನಾಗಬೇಕು. ಅವನು ಮನಸ್ಸನ್ನು ಸ್ವಾಧೀನದಲ್ಲಿಟ್ಟುಕೊಂಡು, ಶಾಂತನಾಗಿ, ಜಾಗೃತನಾಗಿ, ಸಮಾಧಾನ ಮನಸ್ಕನಾಗಿ ಇರಬೇಕು.

ಐದನೆಯದು: ಒಳ್ಳೆಯ ನಡತೆಯುಳ್ಳವನಾಗಿರಬೇಕು. ನೀತಿವಂತನಾಗಿರಬೇಕು. ಬರಿಯ ಕೆಟ್ಟದ್ದನ್ನು ಮಾಡುವುದು ನಿಲ್ಲಿಸಿದರೆ ಸಾಲದು. ಅದರ ಯೋಚನೆಯೂ ಬರಬಾರದು. ಒಳ್ಳೆಯದು ಮಾಡುವುದನ್ನೇ ನಿತ್ಯ ಪರಿಪಾಠವನ್ನಾಗಿ ಮಾಡಿಕೊಳ್ಳಬೇಕು. ಕಾಯಾ, ವಾಚಾ, ಮನಸಾ ಸತ್ಯವ್ರತನಾಗಿರಬೇಕು, ಬ್ರಹ್ಮಚಾರಿಯಾಗಿರಬೇಕು, ತಪೋನಿರತನಾಗಿರಬೇಕು.

ಆರನೆಯದು: ಪ್ರೇಯಸ್ಸಿನ ಕಡೆ ಮನಸ್ಸುಹೋಗುವುದನ್ನು ಬಿಡಿಸಿ, ಅದು ಶ್ರೇಯಸ್ಸಿನ ಕಡೆ ಹೋಗುವಂತೆ ಮಾಡಬೇಕು. ಪ್ರೇಯಸ್ಸು ಮಧುರವಾದದ್ದು. ಶ್ರೇಯಸ್ಸು ನಿಲುವನ್ನು ಹೆಚ್ಚಿಸುವುದು. ಇನ್ನೊಬ್ಬರ ಸಂತೋಷಕ್ಕಾಗಿ ಕಾರ್ಯಾಕಾರ್ಯ ಮಾಡುವುದು ಪ್ರೇಯಸ್ಸು. ಇನ್ನೊಬ್ಬರಿಗೆ ಅಸಂತೋಷವಾದರೂ, ಮಾಡಬೇಕಾದ್ದನ್ನು ಯಾವ ರೀತಿಯಲ್ಲಿ ಮಾಡಬೇಕೋ ಅದೇ ರೀತಿಯಲ್ಲಿ ಮಾಡುವುದು ಶ್ರೇಯಸ್ಸು. ಯಾವುದು ಶುಭಕರ, ಯಾವುದು ಅಶುಭಕರ ಎಂಬುದನ್ನು ಸರಿಯಾಗಿ ತಿಳಿದು ಯಾವಾಗಲೂ ಶುಭಕರವಾದದ್ದನ್ನೇ ಮಾಡಬೇಕು. ಇದೆಲ್ಲವೂ ಹೇಳುವುದು ಸುಲಭ. ಕಾರ್ಯತಃ ಮಾಡುವುದು ಅತಿ ಕಷ್ಟಸಾಧ್ಯವಾದದ್ದು. ಬ್ರಹ್ಮಜ್ಞಾನವನ್ನು ಪಡೆಯಬೇಕೆಂದುಕೊಂಡವನಿಗೆ ಈ ಆಯ್ಕೆ ಅತ್ಯವಶ್ಯಕ.

ಏಳನೆಯದು: ಮನಸ್ಸು ಇಂದ್ರಿಯಗಳ ನಿಗ್ರಹ. ಬಾಬಾ ಇದನ್ನು ಒಂದು ಬಹುಶೃತವಾದ ಉದಾಹರಣೆಯಿಂದ ವಿವರಿಸಿದರು. ಹೇಗೆ ನೋಡೋಣ:

ದೇಹ ಎನ್ನುವುದೊಂದು ರಥ. ಜೀವಾತ್ಮನೇ ರಥಿಕ. ಮನಸ್ಸು ಲಗಾಮು. ಬುದ್ಧಿ ಸಾರಥಿ. ಕಣ್ಣು, ಕಿವಿ, ಮೂಗು, ನಾಲಗೆ, ಚರ್ಮ ಎನ್ನುವ ಕರ್ಮೇಂದ್ರಿಯಗಳು ಕುದುರೆಗಳು. ಜ್ಞಾನೇಂದ್ರಿಯಗಳೇ - ದೃಶ್ಯ, ಶ್ರಾವ್ಯ, ಗಂಧ, ರುಚಿ, ಸ್ಪರ್ಶ - ದಾರಿಗಳು. ಸೇರಬೇಕಾದ ಗುರಿ - ಆತ್ಮಸಾಕ್ಷಾತ್ಕಾರ. ರಥವನ್ನು ನಡೆಸುವ ಸಾರಥಿ, ಲಗಾಮು ಕೈಯಲ್ಲಿ ಹಿಡಿದು, ಕುದುರೆಗಳನ್ನು ತನ್ನ ಅಂಕಿತದಲ್ಲಿ ಇರಿಸಿಕೊಂಡು ರಥ ನಡೆಸಿದರೆ, ರಥಿಕನನ್ನು ಗಮ್ಯಕ್ಕೆ ಸೇರಿಸುತ್ತಾನೆ. ಹಾಗಲ್ಲದೆ ಕುದುರೆಗಳು ತಮ್ಮಿಷ್ಟಬಂದಂತೆ ಹೋಗಲುಬಿಟ್ಟರೆ, ಅವು ಸರಿಯಾದ ದಾರಿಯಲ್ಲಿ ನಡೆಯದೆ ತಪ್ಪು ದಾರಿಯಲ್ಲಿ ನಡೆಯುತ್ತಾ, ಹಳ್ಳ ಕೊಳ್ಳಗಳಲ್ಲಿ ಬಿದ್ದು ರಥ, ರಥಿಕ, ಸಾರಥಿ, ಕುದುರೆಗಳು ಎಲ್ಲವೂ ನಾಶವಾಗಿ ಹೋಗುತ್ತವೆ.

ಆದರೆ ಇಲ್ಲಿ ಒಂದು ಸಮಸ್ಯೆ ಇದೆ. ಜೀವಾತ್ಮ ಅಕರ್ತ. ಅಕ್ರಿಯ. ತಾನು ಏನೂ ಮಾಡುವುದಿಲ್ಲ. ಹೊರಗೆ ನಿಂತು ಸಾಕ್ಷಿಯಾಗಿ ಎಲ್ಲವನ್ನೂ ನೋಡುತ್ತಿರುತ್ತಾನೆ. ಅವಿದ್ಯೆ, ಅಜ್ಞಾನದಿಂದ ಕೂಡಿ, ದೇಹೇಂದ್ರಿಯದ ಕರ್ಮಗಳನ್ನು ಆತ್ಮದ ಮೇಲೆ ಆರೋಪಿಸಿದಾಗ, ಆತ್ಮನೇ ಎಲ್ಲವನ್ನೂ ಮಾಡುತ್ತಿದ್ದಾನೆ ಎಂದು ತೋರುತ್ತದೆ. ದೇಹ ಅಕರ್ತನಾಗಿ ತೋರುತ್ತಾನೆ. ಹೀಗೆ ಒಬ್ಬರ ಸ್ವಭಾವವನ್ನು ಇನ್ನೊಬ್ಬರ ಮೇಲೆ ಹೊರಿಸುವುದನ್ನು “ಅನ್ಯೋನ್ಯ ಅಧ್ಯಾಸ” ಎನ್ನಲಾಗುತ್ತದೆ. ಎಂದರೆ, ದೇಹದ ಸ್ವಭಾವ ಆತ್ಮನಮೇಲೂ, ಆತ್ಮನ ಸ್ವಭಾವ ದೇಹದ ಮೇಲೂ ಹೊರಿಸಿದಂತಾಗಿ ಆತ್ಮನೇ ಎಲ್ಲವನ್ನೂ ಮಾಡುತ್ತಿದ್ದಾನೆ ಎಂಬ ಭಾವವುಂಟಾಗುತ್ತದೆ. ಆದರೆ ಆತ್ಮ, ನಿಜವಾಗಿಯೂ ಸಚ್ಚಿದಾನಂದ ಸ್ವರೂಪಿ. ಈ ಅನ್ಯೋನ್ಯ ಅಧ್ಯಾಸದಿಂದಾಗಿ ಪರಿಶುದ್ಧ, ಅಕರ್ತ, ಅಕ್ರಿಯ ಆತ್ಮನೇ ದೇಹಕ್ಕೆ ಸಂಬಂಧಿಸಿದ ಸಂಸಾರ ತಾಪತ್ರಯ, ಜನನ ಮರಣ ದುಃಖಗಳನ್ನು ಅನುಭವಿಸುತ್ತಾನೆ ಎಂಬ ಭ್ರಮೆ ಉಂಟಾಗುತ್ತದೆ. ಆತ್ಮಜ್ಞಾನದಿಂದ ಈ ಅಜ್ಞಾನವನ್ನು ನಾಶಗೊಳಿಸಿದಾಗ, ಈ ಭ್ರಮೆ ತೊಲಗಿ ಜೀವಾತ್ಮ ಪರಮಾತ್ಮರು ಇಬ್ಬರಲ್ಲ. ಒಬ್ಬರೇ ಎನ್ನುವ ಅರಿವು ಉಂಟಾಗುತ್ತದೆ. ಈ ಅರಿವನ್ನು ಪಡೆಯುವುದೇ ಗಮ್ಯವನ್ನು ಸೇರುವುದು ಎಂದರೆ.

ಯಾರು ಈ ಭಾವನೆಯನ್ನು ಸರಿಯಾಗಿ ಅರ್ಥಮಾಡಿಕೊಂಡಿಲ್ಲವೋ ಅವರು ಮನಸ್ಸನ್ನು ಹತೋಟಿಯಲ್ಲಿ ಇಟ್ಟುಕೊಳ್ಳಲಾರರು. ಎಂದರೆ ಇಂದ್ರಿಯಗಳ ಮೇಲೆ ಹತೋಟಿಯಿಲ್ಲದೆ, ಅವು ಹೋದ ದಾರಿಯಲ್ಲಿ ಬಿಟ್ಟಂತೆ ಆಯಿತು. ಅಂತಹ ರಥಿಕ ಗಮ್ಯವನ್ನು ಎಂದಿಗೂ ಸೇರಲಾರ. ಎಂದಿಗೂ ಈ ಜನನ ಮರಣ ಚಕ್ರಭ್ರಮಣೆಯಲ್ಲೇ ಸುತ್ತುತ್ತಿರುತ್ತಾನೆ. ಆತ್ಮ ಸಾಕ್ಷಾತ್ಕಾರ ಎನ್ನುವುದು ಮರೀಚಿಕೆಯಾಗುತ್ತದೆ. ಬ್ರಹ್ಮಜ್ಞಾನವನ್ನು ಪಡೆಯಬೇಕು ಎಂದುಕೊಂಡವನಿಗೆ ಇದು ಅತ್ಯಂತ ಮುಖ್ಯವಾದ ಗುಣವಾಗಿರಬೇಕು.

ಎಂಟನೆಯದು: ಕಲುಷಿತ ಮನಸ್ಸನ್ನು ಶುದ್ಧೀಕರಿಸಿಕೊಳ್ಳುವುದು. ಪರಿಶುದ್ಧ ಮನಸ್ಸಿಗೆ ಆಸೆ ಆಕಾಂಕ್ಷೆಗಳೇನೂ ಇರುವುದಿಲ್ಲ. ದುರಾಸೆ, ಅಹಂಕಾರ, ಇಂದ್ರಿಯ ವಸ್ತುಗಳಲ್ಲಿ ಆಸೆ, ಇವೆಲ್ಲಾ ಮನಸ್ಸಿನ ಕಲ್ಮಷಗಳು. ಕರ್ತವ್ಯದಲ್ಲಿ ನಿರತನಾದವನು ಎಲ್ಲೇ ಇರಲಿ, ತನ್ನ ಕರ್ಮವನ್ನು ಫಲಾಪೇಕ್ಷೆಯಿಲ್ಲದೆ ಮಾಡಬೇಕು. ಅಂತಹವನಿಗೆ ಮನಸ್ಸಿನ ಕಲ್ಮಷಗಳು ದೂರವಾಗಿ, ಮನಸ್ಸು ಶುದ್ಧವಾಗುತ್ತದೆ. ಮನಸ್ಸು ಶುದ್ಧವಾಗುವವರೆಗೂ, ಆತ್ಮಸಾಕ್ಷಾತ್ಕಾರ ಅಸಾಧ್ಯವಾಗುತ್ತದೆ. ಈ ದೇಹವೇ ನಾನು ಎಂದುಕೊಳ್ಳುವುದೇ ಆಧ್ಯಾತ್ಮಿಕ ಪುರೋಗತಿಯಲ್ಲಿ ಇರುವ ದೊಡ್ಡ ತೊಡರು. ಈ ಪ್ರಾಪಂಚಿಕ ಬಂಧನಗಳಿಗೆಲ್ಲ ಅದೇ ಕಾರಣ. ಈ ದೇಹವೇ ನಾನು ಎಂಬುವ ಯೋಚನೆ ನಿರ್ಮೂಲವಾಗಿ, ಮನಸ್ಸು ಶುದ್ಧವಾದ ಮೇಲೆ ವಿವೇಕ ವುಂಟಾಗುತ್ತದೆ. ವಿವೇಕದಿಂದ ವೈರಾಗ್ಯ. ವೈರಾಗ್ಯವೇ ನಮ್ಮನ್ನು ಆಧ್ಯಾತ್ಮಿಕ ದಾರಿಯಲ್ಲಿ ನಡೆಸುವ ದಾರಿಗೋಲು.

ಮೇಲೆ ಹೇಳಿದ ಎಂಟು ಗುಣಗಳನ್ನು ರೂಢಿಸಿಕೊಂಡರೂ, ಸಾಧಕನಿಗೆ ಗುರುವೊಬ್ಬನಿಲ್ಲದೆ ದುಸ್ಸಹ, ದುರ್ಗಮವಾದ ಆಧ್ಯಾತ್ಮದ ದಾರಿಯಲ್ಲಿ ಮುಂದುವರೆಯುವುದು ದುಸ್ಸಾಧ್ಯ. ಅದು ಬಹಳ ಎಡರು ತೊಡರುಗಳ, ಅಡ್ಡಿ ಅಡಚಣೆಗಳ ಹಾದಿ. ಯಾರು ಆ ದಾರಿಯಲ್ಲಿ ಆಗಲೇ ನಡೆದು ಸಫಲರಾಗಿದ್ದಾರೋ ಅವರು ಮಾತ್ರವೇ ಇನ್ನೊಬ್ಬರನ್ನು ಆ ದಾರಿಯಲ್ಲಿ ಸುಲಭವಾಗಿ ಕರೆದುಕೊಂಡು ಹೋಗಬಲ್ಲರು. ಆ ದಾರಿಯನ್ನು ತಿಳಿದವರೇ ಸದ್ಗುರುವು. ಆತ್ಮಸಾಕ್ಷಾತ್ಕಾರವನ್ನು ಪಡೆದ ಅವರು, ಸಾಧಕನಿಗೆ ಅದರ ಸಾಧ್ಯತೆ ಭಾಧ್ಯತೆಗಳನ್ನು ವಿವರಿಸಿ, ಅವನು ಮಾಡಬೇಕಾದ್ದೇನು ಎಂದು ಹೇಳಬಲ್ಲರು. ಅವರಲ್ಲದೆ ಈ ಜ್ಞಾನವನ್ನು ಇನ್ನಾರೂ ಕೊಡಲಾರರು. ಆಧ್ಯಾತ್ಮಿಕ ಜೀವನದ ಏಣಿಯನ್ನು ಮೆಟ್ಟಿಲು, ಮೆಟ್ಟಿಲಾಗಿ ಹತ್ತಿಸುತ್ತಾ ಸಾಧಕನನ್ನು ಅಂತಿಮಗುರಿಗೆ ತೆಗೆದುಕೊಂಡು ಹೋಗಬಲ್ಲವರು ಆ ಸದ್ಗುರುವೊಬ್ಬರೇ!

ಇಷ್ಟೆಲ್ಲಾ ಆದಮೇಲೂ ದೈವಕೃಪೆ ಎನ್ನುವುದೊಂದು ಇಲ್ಲದಿದ್ದರೆ, ಯಾವುದೂ ಸಾಧ್ಯವಾಗುವುದಿಲ್ಲ. ದೈವ ಕೃಪೆಯಿದ್ದರೆ, ಸಾಧಕನಿಗೆ ಜ್ಞಾನ, ವಿವೇಕಗಳು ಸುಲಭಸಾಧ್ಯವಾಗಿ ಅವು ಅವನನ್ನು ಈ ಸಂಸಾರ ಸಾಗರದಿಂದ ಪಾರುಮಾಡಿ ಪರಮಾತ್ಮನ ಬಳಿಗೆ ಕೊಂಡೊಯ್ಯುತ್ತವೆ. ಉಪನಿಷತ್ತು ಹೇಳುತ್ತದೆ, "ವೇದಗಳ ಪಠನ, ಮನನಗಳಿಂದ ಈ ಗುರಿಯನ್ನು ಮುಟ್ಟಲು ಸಾಧ್ಯವಿಲ್ಲ. ಬರಿಯ ಜ್ಞಾನದಿಂದಲೂ ಸಾಧ್ಯವಿಲ್ಲ. ಬಹುಶೃತದಿಂದಲೂ ಸಾಧ್ಯವಿಲ್ಲ. ಆತ್ಮ ತನ್ನನ್ನು ಯಾರಿಗೆ ತೋರಿಸಿಕೊಳ್ಳಬೇಕು ಎಂದುಕೊಳ್ಳುತ್ತದೆಯೋ, ಅವರಿಗೆ ಮಾತ್ರ ಅದು ಲಭ್ಯವಾಗುವುದು. ಅಂತಹವನಿಗೆ ಆತ್ಮ, ತನ್ನ ನಿಜರೂಪದಿಂದ ತಾನೇ ಕಾಣಿಸಿಕೊಳ್ಳುತ್ತದೆ."

ಯಾರು ಆತ್ಮನನ್ನು ಕಾಣಬೇಕು ಎಂದು ಹಂಬಲಿಸಿ, ಅದಕ್ಕಾಗಿ ನಿಜವಾದ ಕೃಷಿಮಾಡುತ್ತಾರೋ ಅಂತಹವರಿಗೆ ಮಾತ್ರವೇ ಆತ್ಮ ಕಾಣಿಸಿಕೊಳ್ಳುತ್ತದೆ. ಸ್ವಇಚ್ಛೆಯಿಂದ ಆತ್ಮನನ್ನು ಕಾಣಲು ಸಾಧ್ಯವೇ ಇಲ್ಲ.

ಬಾಬಾ ಈ ದೀರ್ಘ ಉಪನ್ಯಾಸವನ್ನು ಮುಗಿಸಿ, ಬ್ರಹ್ಮಜ್ಞಾನವನ್ನು ಪಡೆಯಲು ಬಂದವನ ಕಡೆ ತಿರುಗಿ, "ಈಗ ನಿನ್ನ ಜೇಬಿನಲ್ಲಿ ಐದು ರೂಪಾಯಿಗಳ ಐವತ್ತು ನೋಟುಗಳ ರೂಪದಲ್ಲಿ ಕುಳಿತಿರುವ ನಿನ್ನ ಬ್ರಹ್ಮಜ್ಞಾನವನ್ನು ಈಚೆಗೆ ತೆಗಿ" ಎಂದರು. ಅವನು ನೋಟಿನ ಕಟ್ಟನ್ನು ತೆಗೆದು ಎಣಿಸಿದಾಗ ಬಾಬಾ ಹೇಳಿದಂತೆಯೇ ಇತ್ತು. ಅವನು ಆಶ್ಚರ್ಯಪಟ್ಟು, ಬಾಬಾರ ಚರಣಗಳಲ್ಲಿ ಬಿದ್ದು ಅವರ ಕ್ಷಮೆ ಕೇಳಿದ.

ಆಗ ಬಾಬಾ ಹೇಳಿದರು, "ನಿನ್ನ ‘ಬ್ರಹ್ಮ’ ನನ್ನು ನಿನ್ನ ಜೇಬಿನಲ್ಲಿಡು. ಪರಬ್ರಹ್ಮನನ್ನು ಕಾಣ ಬೇಕೆಂದರೆ ಮೊದಲು ಆಸೆಗಳನ್ನು ತೊರೆಯಬೇಕು. ಆಸೆ ಇರುವವರೆಗೂ ಮೋಹಗಳು ಬಿಡುವುದಿಲ್ಲ. ಐಶ್ವರ್ಯ, ಹೆಂಡತಿ, ಮಕ್ಕಳು ಇವುಗಳಲ್ಲಿ ಮುಳುಗಿರುವವನಿಗೆ ಮೋಹ ಹೋಗುವುದಿಲ್ಲ. ನಿನ್ನ ಯೋಚನಾ ವಿಧಾನವೇ ಬೇರೆಯಾಗಬೇಕು. ನಿನ್ನ ಮನಸ್ಸು, ಆಸೆಗಳಿಲ್ಲದ ದಾರಿಗೆ ಬರಬೇಕು. ಆಸೆ ಹೋದರೆ, ಲೋಭ ಹೋಗುತ್ತದೆ. ಈ ಹಣದಾಸೆಯ ಸುಳಿಯಲ್ಲಿ ಸಿಕ್ಕಿಕೊಂಡವನಿಗೆ ಬ್ರಹ್ಮ ಹೇಗೆ ಕಾಣಿಸಿಕೊಳ್ಳುತ್ತಾನೆ? ದುರಾಸೆ - ಬ್ರಹ್ಮ ಎರಡೂ ಎರಡು ಧೃವಗಳು. ಅವೆರಡೂ ಒಟ್ಟಿಗೇ ಬರಲಾರವು. ದುರಾಸೆಯ ಮನುಷ್ಯನಿಗೆ ತೃಪ್ತಿ, ಧೃಢಮನಸ್ಸು, ಶಾಂತಿಗಳು ಎಂದೂ ಇರಲಾರವು. ಎಳ್ಳುಕಾಳಿನಷ್ಟು ಅಸೆಯಿದ್ದರೂ ಸಾಧನೆಗಳಾವುವೂ ಉಪಯೋಗಕ್ಕೆ ಬರುವುದಿಲ್ಲ. ಎಂತಹ ಸದ್ಗುರುವೂ, ದುರಾಸೆಯಿಂದ ಕೂಡಿದವನನ್ನು ಆತ್ಮ ಸಾಕ್ಷಾತ್ಕಾರದ ಕಡೆಗೆ ತರಲಾರರು. ಇಂದ್ರಿಯ ವಿಷಯಗಳಲ್ಲೇ ಮಗ್ನನಾಗಿ, ಅಹಂಕಾರಿಯಾದವನಿಗೆ ಯಾವ ಪ್ರಜ್ಞಾವಂತನೂ ಸಹಾಯಮಾಡಲಾರ. ಮನಸ್ಸು ಶುದ್ಧವಾಗಬೇಕು. ಇಂದ್ರಿಯ ವಿಷಯಗಳ ಯೋಚನೆ ಸಂಪೂರ್ಣವಾಗಿ ನಿಲ್ಲಬೇಕು. ಅವುಗಳಲ್ಲಿ ಆಸೆ ಲವಲೇಶವಾದರೂ ಇರಬಾರದು. ಇವುಗಳಾವುವನ್ನೂ ಮಾಡದೆ, ಆಧ್ಯಾತ್ಮಿಕ ಸಾಧನೆಗಳನ್ನು ಮಾಡುತ್ತೇನೆ ಎಂದರೆ ಅದು ಬರಿಯ ಬೂಟಾಟಿಕೆ ಆಗುತ್ತದೆ. ಆದ್ದರಿಂದ, ಯಾರಿಗೆ ಏನು ತಿಂದು ಅರಗಿಸಿಕೊಳ್ಳುವ ಶಕ್ತಿಯಿದೆಯೋ, ಅದನ್ನು ಮಾತ್ರ ಅವರು ತೆಗೆದುಕೊಳ್ಳಬೇಕು. ನನ್ನ ತುಂಬಿದ ಖಜಾನೆ ಯಾವಾಗಲೂ ತೆರೆದಿರುತ್ತದೆ. ಯಾರಿಗೆ ಏನು ಬೇಕೋ ಅವರಿಗೆ ಅದನ್ನು ಕೊಡಬಲ್ಲೆ. ಆದರೆ ಅದಕ್ಕೆ ಅವರು ಅರ್ಹರೋ, ಅಲ್ಲವೊ ಎಂಬುದನ್ನು ಮೊದಲು ನಾನು ತಿಳಿದುಕೊಳ್ಳಬೇಕು. ನನ್ನ ಮಾತುಗಳನ್ನು ಗಮನವಿಟ್ಟು ಕೇಳಿ. ನಾನು ಎಂದಿಗೂ ಸುಳ್ಳು ಹೇಳುವುದಿಲ್ಲ."

ಬಾಬಾ ಇದನ್ನು ಗುಲ್ಜಾರ್‌ಗೆ ಹೇಳಿದರೂ, ಅದು ಅಂದು ಮಸೀದಿಯಲ್ಲಿದ್ದವರಿಗೆಲ್ಲಾ ಆಧ್ಯಾತ್ಮಿಕ ವಿಷಯದ ರಸದೌತಣವಾಯಿತು. ವೇದ ಶಾಸ್ತ್ರ ಪುರಾಣಗಳಿಂದ ತೆಗೆದ ಆಧ್ಯಾತ್ಮಿಕ ಜ್ಞಾನಸಾರವಿದು. ಶತಮಾನಗಳಿಂದ ಬಂದಿರುವ ನಮ್ಮ ಹಿಂದೂ ಧರ್ಮದ ಸಾರ. ಇಂತಹ ಸರಳ ಭಾಷೆಯಲ್ಲಿ, ಸಾಮಾನ್ಯನಿಗೂ ಅರ್ಥವಾಗುವಂತೆ, ಇದಕ್ಕೆ ಮುಂಚೆ ಯಾವ ಗುರುವೂ ಹೇಳಿರಲಿಲ್ಲ. ನಮ್ಮ ಪೂರ್ವ ಸುಕೃತ ಪುಣ್ಯಫಲಗಳಿಂದಲೇ ಹೇಮಾಡ್ ಪಂತರು ಇದನ್ನು ಕ್ರೋಢೀಕರಿಸಿ ಔತಣದೂಟವನ್ನು ಮಾಡಿಸಿದ್ದಾರೆ. ಆತ್ಮದ ಮೇಲಿನ ಇಂತಹ ಪ್ರಬಂಧವನ್ನು ಓದಿದವರೆಲ್ಲರೂ ಆಧ್ಯಾತ್ಮಿಕ ಪ್ರಗತಿಯ ಕಡೆಗೆ ಹೆಜ್ಜೆ ಹಾಕುತ್ತಾರೆ. ಅಂತಹ ಉದಾರಿ, ವಿಶ್ವಾಸದ ಗಣಿಯಾದ ಆ ಸದ್ಗುರು ಸಾಯಿಬಾಬಾರ ಪಾದಪದ್ಮಗಳಲ್ಲಿ ತಲೆಯಿಟ್ಟು ನಮಸ್ಕಾರ ಮಾಡಿ ಅವರ ಅನುಗ್ರಹಕ್ಕೆ ಪಾತ್ರರಾಗಲು ಪ್ರಯತ್ನಿಸೋಣ.

ಬಾಬಾರ ವೈಶಿಷ್ಟ್ಯತೆ

ನಮ್ಮ ದೇಶದಲ್ಲಿ ಅನೇಕಾನೇಕರು ತಮ್ಮ ಮನೆ ಮಠಗಳನ್ನು ಬಿಟ್ಟು, ಒಂಟಿಯಾಗಿ, ಏಕಾಂತದಲ್ಲಿ ಕುಳಿತು, ತಪಸ್ಸು ಮಾಡಿ, ಎಣೆಯಿಲ್ಲದ ಕಷ್ಟಗಳನ್ನು ಎದುರಿಸಿ, ಎಲ್ಲವನ್ನೂ ತ್ಯಾಗಮಾಡಿ, ಅಪಾರವಾದ ಅಸಾಧಾರಣ ಜ್ಞಾನವನ್ನು ಸಂಪಾದಿಸಿ - ಸಂತರು, ಮಹಾತ್ಮರು, ಋಷಿಗಳು - ಎನ್ನಿಸಿಕೊಂಡಿದ್ದಾರೆ. ಆದರೆ ಅವರೆಲ್ಲರೂ ತಮ್ಮ ಒಬ್ಬರ ಉನ್ನತಿಗಾಗಿಯೇ, ಒಳಿತಿಗಾಗಿಯೇ ಇಷ್ಟೆಲ್ಲವನ್ನು ಮಾಡಿದ್ದು. ಬಾಬಾ ಒಬ್ಬರೇ ಈ ಲೌಕಿಕ ಪ್ರಪಂಚದ ಮಧ್ಯೆ ಇದ್ದುಕೊಂಡು, ತಮ್ಮ ಭಕ್ತರ ಒಳಿತಿಗಾಗಿ, ಉನ್ನತಿಗಾಗಿ ಶ್ರಮಿಸಿದವರು. ಅವರಿಗೆ ಹೆಂಡತಿ ಮಕ್ಕಳು, ಬಂಧು ಬಳಗ, ಮನೆ ಮಠ ಯಾವುದೂ ಇರಲಿಲ್ಲ. ನಿಜವೆಂದರೆ "ನನ್ನದು" ಎಂದು ಹೇಳಿಕೊಳ್ಳಬಹುದಾದಂತಹ ವಸ್ತು ಏನೂ ಇರಲಿಲ್ಲ. ಅವರ ಆಸ್ತಿ ಎಂದರೆ ಒಂದು ಸಟ್ಕಾ, ಒಂದು ಹುಕ್ಕಾ, ಒಂದು ಕಫ್ನಿ ಹಾಗೂ ತಲೆಗೆ ಸುತ್ತಿಕೊಂಡಿದ್ದ ಒಂದು ಚೂರು ಬಟ್ಟೆ, ಅಷ್ಟೇ! ಅವರ ಭಕ್ತರನ್ನು ಬಿಟ್ಟರೆ ಅವರದು ಎನ್ನುವುದು ಇನ್ನೇನೂ ಇರಲಿಲ್ಲ.

ಅವರು ಮನೆ ಮನೆಗೆ ಹೋಗಿ ಭಿಕ್ಷೆ ಬೇಡಿ ತರುತ್ತಿದ್ದರು. ಬೇವಿನ ಮರದ ಕೆಳಗೆ ವಾಸ. ಇಂತಹ ಮಹಾನುಭಾವ ಈ ಪ್ರಪಂಚದ ಮಧ್ಯದಲ್ಲಿಯೇ ಇರುತ್ತಾ, ತನ್ನ ಭಕ್ತರ ಯೋಗ, ಕ್ಷೇಮಗಳನ್ನು ನೋಡಿಕೊಳ್ಳುತ್ತಾ, ಅವರಿಗೆ ಸನ್ಮಾರ್ಗದ ಬೋಧನೆ ಮಾಡಿ, ಅವರನ್ನು ಕೈಹಿಡಿದು, ಋಜುಮಾರ್ಗದಲ್ಲಿ ನಡೆಸಿ ಪರಮಾನಂದದ ದಾರಿ ತೋರಿಸಿದರು. ಪರಮಾತ್ಮನನ್ನು ಪ್ರತ್ಯಕ್ಷೀಕರಿಸಿಕೊಂಡು, ಸಾಮಾನ್ಯ ಜನಗಳ ಮಧ್ಯೆ ಜೀವಿಸುತ್ತಾ, ಅಜ್ಞಾನಿಗಳ ಒಳಿತಿಗಾಗಿ ದುಡಿಯುವ ಸಂತರು ಬಹಳ ಅಪರೂಪ. ಹೇಮಾಡ್ ಪಂತ್ ಅತ್ಯಂತ ಆನಂದದಿಂದ ಹೇಳುತ್ತಾರೆ, " ಅಂತಹ ಸಂತರು ಹುಟ್ಟಿದ ದೇಶ ಧನ್ಯ. ಅವರ ತಂದೆತಾಯಿಗಳು ಧನ್ಯರು. ಇಂತಹ ವಿಶಿಷ್ಟ, ಲೋಕೋತ್ತರ, ಅಲೌಕಿಕ, ಅತ್ಯಮೂಲ್ಯ, ಶುದ್ಧ, ವಜ್ರ ಹುಟ್ಟಿದ ಪೀಳಿಗೆ ಪುಣ್ಯ ಪೀಳಿಗೆ."

ಇದರೊಂದಿಗೆ ದಿಢೀರ್ ಬ್ರಹ್ಮಜ್ಞಾನ ಪಡೆಯಲು ಬಂದ ಶ್ರೀಮಂತನ ಕಥೆ ಮತ್ತು ಇತರ ವಿಷಯಗಳನ್ನು ಕುರಿತು ಹೇಳುವ ಹದಿನಾರು ಮತ್ತು ಹದಿನೇಳನೆಯ ಅಧ್ಯಾಯಗಳು ಮುಗಿದವು. ಮುಂದಿನ ಅಧ್ಯಾಯದಲ್ಲಿ ಹೇಮಾಡ್ ಪಂತ್ ಬಾಬಾ ಹೇಗೆ ತಮ್ಮನ್ನು ಒಪ್ಪಿಕೊಂಡರು ಮತ್ತು ಅನುಗ್ರಹಿಸಿದರು ಇತ್ಯಾದಿ ವಿಷಯಗಳನ್ನು ಹೇಳುತ್ತಾರೆ.

||ಶ್ರೀ ಸದ್ಗುರು ಸಾಯಿನಾಥಾರ್ಪಣಮಸ್ತು||ಶುಭಂ ಭವತು||
||ಓಂ ಶಾಂತಿಃ ಶಾಂತಿಃ ಶಾಂತಿಃ||


No comments:

Post a Comment